“ನಮಗೂ ಪ್ರಾರ್ಥನೆ ಮಾಡುವದನ್ನು ಕಲಿಸು”
“ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ—ಸ್ವಾಮೀ. . .ನಮಗೂ ಪ್ರಾರ್ಥನೆ ಮಾಡುವದನ್ನು ಕಲಿಸು ಎಂದು ಕೇಳಿದನು.”—ಲೂಕ 11:1.
1-3. (ಎ) ಯೇಸುವಿನ ಶಿಷ್ಯರು ಪ್ರಾರ್ಥನೆಯ ಮಾಹಿತಿಯನ್ನು ಅವಶ್ಯಪಟ್ಟದ್ದೇಕೆ? (ಬಿ) ಪ್ರಾರ್ಥನೆಯ ಕುರಿತು ಯಾವ ಪ್ರಶ್ನೆಗಳೇಳುತ್ತವೆ?
ಕೆಲವರಿಗೆ ಉತ್ತಮವಾದ ಹಾಡಿನ ವರವಿದೆ. ಇತರರಿಗೆ ಸಂಗೀತಗಾರರಾಗುವ ಸ್ವಾಭಾವಿಕ ಪ್ರವೃತ್ತಿಯಿದೆ. ಆದರೆ ಅತ್ಯುತ್ತಮ ಸಾಮರ್ಥ್ಯ ಪಡೆಯಬೇಕಾದರೆ ಇಂಥ ಹಾಡುಗಾರರಿಗೂ ಸಂಗೀತಗಾರರಿಗೂ ಶಿಕ್ಷಣದ ಅಗತ್ಯವಿದೆ. ಪ್ರಾರ್ಥನೆಯ ವಿಷಯದಲ್ಲಿಯೂ ಹೀಗೆಯೇ. ದೇವರು ನಮ್ಮ ಪ್ರಾರ್ಥನೆಯನ್ನು ಕೇಳಬೇಕಾದರೆ ತಮಗೆ ಮಾಹಿತಿ ಅಗತ್ಯವೆಂದು ಯೇಸುಕ್ರಿಸ್ತನ ಶಿಷ್ಯರಿಗೆ ಮಂದಟ್ಟಾಗಿತ್ತು.
2 ಯೇಸು 12 ಮಂದಿ ಅಪೊಸ್ತಲರನ್ನು ಆರಿಸುವ ಮೊದಲು ಇಡೀ ರಾತ್ರಿ ಪ್ರಾರ್ಥನೆ ಮಾಡಿದಂತೆಯೆ ಅವನು ಸಾಮಾನ್ಯವಾಗಿ ಖಾಸಗಿಯಾಗಿ ತನ್ನ ತಂದೆಯನ್ನು ಸಮೀಪಿಸಿದನು. (ಲೂಕ 6:12-16) ಶಿಷ್ಯರೂ ಖಾಸಗಿಯಾಗಿ ಪ್ರಾರ್ಥಿಸುವಂತೆ ಅವನು ಪ್ರೋತ್ಸಾಹಿಸಿದರೂ ಅವನು ಬಹಿರಂಗವಾಗಿ ಪ್ರಾರ್ಥಿಸುವುದನ್ನು ಅವರು ಕೇಳಿ, ಮನುಷ್ಯರು ನೋಡುವಂತೆ ಪ್ರಾರ್ಥಿಸುವ ಧಾರ್ಮಿಕ ಕಪಟಿಗಳಂತೆ ಅವನಿಲ್ಲವೆಂದು ಗಮನಿಸಿದರು. (ಮತ್ತಾಯ 6:5, 6) ಆದುದರಿಂದ ಪ್ರಾರ್ಥನೆಯ ಕುರಿತ ಪ್ರೌಢ ಮಾಹಿತಿಯನ್ನು ತಿಳಿಯಲು ಶಿಷ್ಯರು ಅಪೇಕ್ಷಿಸಿದ್ದು ನ್ಯಾಯಸಮ್ಮತ. ನಾವು ಓದುವುದು:“ಆತನು ಒಂದಾನೊಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಮುಗಿಸಿದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ—ಸ್ವಾಮೀ, ನಮಗೂ ಪ್ರಾರ್ಥನೆ ಮಾಡುವದನ್ನು ಕಲಿಸು ಎಂದು ಕೇಳಿದನು.”—ಲೂಕ 11:1.
3 ಯೇಸುವಿನ ಪ್ರತ್ಯುತ್ತರವೇನಾಗಿತ್ತು? ಅವನ ಮಾದರಿಯಿಂದ ನಾವೇನು ಕಲಿಯಬಲ್ಲೆವು? ಮತ್ತು ಪ್ರಾರ್ಥನೆಯ ಕುರಿತ ಅವನ ಶಿಕ್ಷಣದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
ನಮಗಿರುವ ಪಾಠಗಳು
4. ನಾವು “ಎಡೆಬಿಡದೆ ಪ್ರಾರ್ಥಿಸ” ಬೇಕೇಕೆ, ಮತ್ತು ಹಾಗೆ ಮಾಡುವುದರ ಅರ್ಥವೇನು?
4 ಪ್ರಾರ್ಥನೆಯ ಪುರುಷನಾದ ಯೇಸುವಿನ ಮಾತು ಮತ್ತು ಮಾದರಿಗಳಿಂದ ನಾವು ಬಹಳಷ್ಟು ಕಲಿಯಬಲ್ಲೆವು. ದೇವರ ಪರಿಪೂರ್ಣ ಪುತ್ರನಿಗೆ ಕ್ರಮದ ಪ್ರಾರ್ಥನೆ ಅಗತ್ಯವಾಗಿದ್ದರೆ ಅವನ ಅಪೂರ್ಣ ಶಿಷ್ಯರಿಗೆ ಮಾರ್ಗದರ್ಶನೆ, ದುಃಖೋಪಶಮನ ಮತ್ತು ಆತ್ಮಿಕ ಪೋಷಣೆಗಾಗಿ ದೇವರ ಕಡೆಗೆ ಮುಂದುವರಿಯುತ್ತಾ ನೋಡುವ ಅಗತ್ಯತೆ ಹೆಚ್ಚಿನದ್ದಾಗಿರುವುದು ಎಂಬುದೇ ಒಂದು ಪಾಠ. ಆದುದರಿಂದಲೇ ನಾವು “ಎಡೆಬಿಡದೆ ಪ್ರಾರ್ಥನೆ” ಮಾಡಬೇಕು.(1 ಥೆಸಲೊನೀಕ 5:17) ನಾವು ಸದಾ ಪದಶಃ ಮೊಣಕಾಲೂರುತ್ತಿರಬೇಕೆಂದು ಇದರ ಅರ್ಥವಲವ್ಲೆಂಬುದು ನಿಶ್ಚಯ. ಬದಲಿಗೆ ನಮಗೆ ಸತತ ಪ್ರಾರ್ಥನಾಪೂರ್ವಕ ಮನೋಭಾವವಿರಬೇಕು. ನಾವು ಒಳನೋಟವುಳ್ಳವರಾಗಿ ವರ್ತಿಸುವಂತೆಯೂ ದೇವರ ಒಪ್ಪಿಗೆ ನಮಗೆ ಯಾವಾಗಲೂ ಇರುವಂತೆಯೂ ನಾವು ನಮ್ಮ ಜೀವನದ ಸಕಲ ಇಲಾಖೆಗಳಲ್ಲಿ ಮಾರ್ಗದರ್ಶನಕ್ಕಾಗಿ ಆತನನ್ನು ನೋಡಬೇಕು.—ಜ್ಞಾನೋಕ್ತಿ 15:24.
5. ಪ್ರಾರ್ಥನೆಗೆ ಮೀಸಲಾಗಿರುವ ಸಮಯವನ್ನು ಯಾವುದು ಆಕ್ರಮಿಸಬಹುದು, ಮತ್ತು ನಾವು ಇದರ ವಿಷಯ ಏನು ಮಾಡಬೇಕು?
5 ಈ “ಕಡೇ ದಿವಸಗಳಲ್ಲಿ” ನಾವು ಪ್ರಾರ್ಥನೆಯಲ್ಲಿ ಕಳೆಯಬೇಕಾದ ಸಮಯವನ್ನು ಅನೇಕ ಸಂಗತಿಗಳು ಆಕ್ರಮಿಸಬಲ್ಲವು. (2 ತಿಮೊಥಿ 3:1) ಆದರೆ ಗೃಹಕೃತ್ಯದ ಚಿಂತೆ, ವ್ಯವಹಾರ ಮನೋಭಾರ, ಇತ್ಯಾದಿಗಳು ಸ್ವರ್ಗೀಯ ತಂದೆಗೆ ನಾವು ಮಾಡುವ ನಿಯತಕಾಲಿಕ ಪ್ರಾರ್ಥನೆಗೆ ಅಡ್ಡಿ ಮಾಡುವಲ್ಲಿ ಈ ಜೀವನದ ಚಿಂತೆಗಳಿಂದ ನಾವು ಜಗ್ಗಿಸಲ್ಪಡುತ್ತೇವೆ. ಇಂಥ ಸ್ಥಿತಿಗತಿಯನ್ನು ವಿಳಂಬಿಸದೆ ತಿದ್ದಬೇಕು. ಏಕೆಂದರೆ ಪ್ರಾರ್ಥನೆಗೆ ತಪ್ಪುವುದು ವಿಶ್ವಾಸನಷ್ಟಕ್ಕೆ ನಡೆಸುತ್ತದೆ. ನಾವು ಒಂದೇ ಐಹಿಕ ಜವಾಬ್ದಾರಿಗಳನ್ನು ಕಡಮೆ ಮಾಡಬೇಕು ಇಲ್ಲವೆ ಜೀವನಚಿಂತೆಗಳನ್ನು, ನಮ್ಮ ಹೃದಯವನ್ನು ಮಾರ್ಗದರ್ಶನಕ್ಕಾಗಿ ದೇವರ ಕಡೆಗೆ ಹೆಚ್ಚು ಶೃದ್ಧಾಪೂರ್ವಕವಾಗಿ ಮತ್ತು ಪುನರಾವೃತ್ತಿಸುತ್ತಾ ಸಮೀಕರಿಸಬೇಕು. ನಾವು “ಪ್ರಾರ್ಥನೆಯ ಸಂಬಂಧದಲ್ಲಿ ಎಚ್ಚರ”ವಾಗಿರಬೇಕು.—1 ಪೇತ್ರ 4:7, NW.
6. ನಾವು ಈಗ ಯಾವ ಪ್ರಾರ್ಥನೆಯನ್ನು ಅಧ್ಯಯನಿಸುವೆವು, ಮತ್ತು ಯಾವ ಉದ್ದೇಶದಿಂದ?
6 ಮಾದರಿ ಪ್ರಾರ್ಥನೆ ಎಂದು ಕರೆಯಲಾಗಿರುವ ಪ್ರಾರ್ಥನೆಯಲ್ಲಿ ಯೇಸು ತನ್ನ ಶಿಷ್ಯರಿಗೆ, ಇಂಥಿಂಥದನ್ನೇ ಹೇಳಬೇಕೆಂದಲ್ಲ, ಹೇಗೆ ಪ್ರಾರ್ಥಿಸಬೇಕೆಂದು ಕಲಿಸಿದನು. ಲೂಕನ ವೃತ್ತಾಂತ ಮತ್ತಾಯನ ವೃತ್ತಾಂತಕ್ಕಿಂತ, ಪ್ರತ್ಯೇಕ ಸಂದರ್ಭಗಳ ಕಾರಣ ತುಸು ಭಿನ್ನವಾಗಿದೆ. ಯೇಸುವಿನ ಹಿಂಬಾಲಕರೂ ಯೆಹೋವನ ಸಾಕ್ಷಿಗಳೂ ಆದ ನಾವು ನಮ್ಮ ಪ್ರಾರ್ಥನೆಗಳಲ್ಲಿರಬೇಕಾದ ಲಕ್ಷಣಗಳ ನಮೂನೆಯಾಗಿ ಈ ಪ್ರಾರ್ಥನೆಯನ್ನು ಅಧ್ಯಯನಿಸೋಣ.
ನಮ್ಮ ತಂದೆ ಮತ್ತು ಆತನ ನಾಮ
7. “ನಮ್ಮ ತಂದೆಯೇ” ಎಂದು ಯೆಹೋವನನ್ನು ಸಂಬೋಧಿಸುವ ಸುಯೋಗ ಯಾರಿಗಿದೆ?
7 “ಪರಲೋಕದಲ್ಲಿರುವ ನಮ್ಮ ತಂದೆಯೇ.” (ಮತ್ತಾಯ 6:9; ಲೂಕ 11:2) ಯೆಹೋವನು ಮಾನವನ ಸೃಷ್ಟಿಕರ್ತನಾಗಿ ಸ್ವರ್ಗದಲ್ಲಿ ಜೀವಿಸುವುದರಿಂದ, “ಪರಲೋಕದಲ್ಲಿರುವ ನಮ್ಮ ತಂದೆಯೇ” ಎಂದು ಆತನನ್ನು ಸಂಬೋಧಿಸುವುದು ಯೋಗ್ಯ.(1 ಅರಸು 8:49; ಅಪೊಸ್ತಲರ ಕೃತ್ಯ 17:24, 28) “ನಮ್ಮ” ಎಂಬ ಪದದ ಉಪಯೋಗವು ಇತರರಿಗೂ ದೇವರೊಂದಿಗೆ ಆಪ್ತ ಸಂಬಂಧವಿದೆಯೆಂದು ಒಪ್ಪಿಕೊಳ್ಳುತ್ತದೆ. ಆದರೆ ಆತನನ್ನು ತಂದೆಯೆಂದು ಕರೆಯುವ ಆಪ್ತ ಸುಯೋಗ ಯಾರಿಗಿದೆ? ಆತನ ಆರಾಧಕ ಕುಟುಂಬದಲ್ಲಿರುವ ಸಮರ್ಪಿತ, ದೀಕ್ಷಾಸ್ನಾನಿತ ವ್ಯಕ್ತಿಗಳಿಗೆ ಮಾತ್ರ. ಯೆಹೋವನನ್ನು “ನಮ್ಮ ತಂದೆ” ಎಂದು ಕರೆಯುವುದು ನಮಗೆ ದೇವರಲ್ಲಿ ನಂಬಿಕೆಯಿದೆ ಎಂದೂ ಆತನೊಂದಿಗೆ ರಾಜಿಯಾಗುವ ಒಂದೇ ಆಧಾರ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪೂರ್ತಿ ಅಂಗೀಕಾರವೆಂಬುದನ್ನು ನಾವು ಗ್ರಹಿಸುತ್ತೇವೆಂದೂ ಸೂಚಿಸುತ್ತದೆ.—ಇಬ್ರಿಯ 4:14-16, 11:6.
8. ಯೆಹೋವನಿಗೆ ಪ್ರಾರ್ಥನೆಯಲ್ಲಿ ಸಮಯ ಕಳೆಯಲು ನಾವೇಕೆ ಹಾತೊರೆಯಬೇಕು?
8 ನಾವು ನಮ್ಮ ಸ್ವರ್ಗೀಯ ಪಿತನಿಗೆ ಎಷ್ಟೊಂದು ನಿಕಟವಿರಬೇಕು! ತಂದೆಯ ಬಳಿಗೆ ಹೋಗಲು ದಣಿಯದ ಮಕ್ಕಳಂತೆ ನಾವು ದೇವರೊಂದಿಗೆ ಸಮಯ ಕಳೆಯಲು ಹಾತೊರೆಯಬೇಕು. ಆತನ ಆತ್ಮಿಕ ಮತ್ತು ಲೌಕಿಕ ಆಶೀರ್ವಾದಗಳಿಗೆ ಆಳವಾದ ಕೃತಜ್ಞತೆಯು ಆತನ ಒಳ್ಳೇತನಕ್ಕೆ ನಾವು ಆಭಾರಿಗಳಾಗುವಂತೆ ನಮ್ಮನ್ನು ಪ್ರೇರೇಪಿಸಬೇಕು. ಆತನು ನಮ್ಮನ್ನು ಎತ್ತಿ ಹಿಡಿಯುವನೆಂಬ ಭರವಸೆಯಿಂದ ನಮ್ಮನ್ನು ಜಗ್ಗಿಸುವ ಹೊರೆಗಳನ್ನು ಆತನ ಬಳಿಗೆ ಕೊಂಡೊಯ್ಯುವಂತೆ ನಾವು ನಡೆಸಲ್ಪಡಬೇಕು. (ಕೀರ್ತನೆ 55:22) ನಾವು ನಂಬಿಗಸ್ತರಾಗಿರುವಲ್ಲಿ ಆತನು ನಮ್ಮ ಪರಾಮರಿಕೆ ಮಾಡುವುದರಿಂದ ಅಂತಿಮವಾಗಿ ಸಕಲವೂ ಸಾರ್ಥಕವಾಗುವುದೆಂಬ ಖಾತರಿ ನಮಗಿರಬಲ್ಲದು.—1 ಪೇತ್ರ 5:6, 7.
9. ದೇವರ ನಾಮದ ಪವಿತ್ರೀಕರಣಕ್ಕೆ ಮಾಡುವ ಪ್ರಾರ್ಥನೆಯು ಯಾವುದಕ್ಕೆ ಮಾಡುವ ಬಿನ್ನಹವಾಗಿದೆ?
9 “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:9; ಲೂಕ 11:2) “ನಾಮ” ಎಂಬ ಪದ ಹಲವು ಸಲ ವ್ಯಕ್ತಿಯನ್ನೇ ಸೂಚಿಸುವುದುಂಟು, ಮತ್ತು “ಪರಿಶುದ್ಧ ಮಾಡು” ಎಂಬುದರ ಅರ್ಥ “ಪವಿತ್ರ ಮಾಡು, ಬೇರೆಯಾಗಿಡು ಯಾ ಪೂಜ್ಯ ಮಾಡು” ಎಂದಾಗಿದೆ. (ಪ್ರಕಟನೆ 3:4 ಹೋಲಿಸಿ.) ಕಾರ್ಯತಃ, ದೇವರ ನಾಮದ ಪವಿತ್ರೀಕರಣಕ್ಕೆ ಮಾಡುವ ಪ್ರಾರ್ಥನೆಯು ದೇವರು ತನ್ನನ್ನು ಪವಿತ್ರೀಕರಿಸಿಕೊಳ್ಳಲು ಕ್ರಮ ಕೈಕೊಳ್ಳಬೇಕೆಂಬ ಬಿನ್ನಹವಾಗಿದೆ. ಹೇಗೆ? ತನ್ನ ಹೆಸರಿನ ಮೇಲೆ ರಾಶಿ ಹಾಕಿರುವ ಕಳಂಕವನ್ನೆಲ್ಲ ನಿರ್ಮೂಲ ಮಾಡಿಯೇ. (ಕೀರ್ತನೆ 135:13) ಈ ದೃಷ್ಟಿಯಿಂದ, ದೇವರು ದುಷ್ಟತ್ವವನ್ನು ತೊಲಗಿಸಿ ತನ್ನನ್ನು ವರ್ಧಿಸಿಕೊಂಡು ರಾಷ್ಟ್ರಗಳು ತಾನೇ ಯೆಹೋವನು ಎಂದು ತಿಳಿಯುವಂತೆ ಮಾಡುವನು. (ಯೆಹೆಜ್ಕೇಲ 36:23; 38:23) ನಾವು ಆ ದಿನವನ್ನು ನೋಡಲು ಹಾತೊರೆದು ಯೆಹೋವನ ಸಾರ್ವಭೌಮತೆಯನ್ನು ನಿಜವಾಗಿಯೂ ಗಣ್ಯ ಮಾಡುವುದಾದರೆ ನಾವು ಸದಾ ಆತನನ್ನು “ನಿನ್ನ ನಾಮವು ಪರಿಶುದ್ಧವೆಂದೆಣಿಸಲ್ಪಡಲಿ” ಎಂಬ ಮಾತುಗಳಲ್ಲಿ ಅಡಕವಾಗಿರುವ ಪೂಜ್ಯ ಮನೋಭಾವದಿಂದ ಸಮೀಪಿಸುವೆವು.
ದೇವರ ರಾಜ್ಯ ಮತ್ತು ಆತನ ಚಿತ್ತ
10. ದೇವರ ರಾಜ್ಯ ಬರಲಿ ಎಂದು ನಾವು ಪ್ರಾರ್ಥಿಸುವಾಗ ಅರ್ಥವೇನು?
10 “ನಿನ್ನ ರಾಜ್ಯವು ಬರಲಿ” (ಮತ್ತಾಯ 6:10; ಲೂಕ 11:2) ಇಲ್ಲಿ ಹೇಳಲ್ಪಟ್ಟಿರುವ ರಾಜ್ಯವೆಂದರೆ ಯೇಸು ಕ್ರಿಸ್ತನ ಮತ್ತು ಅವನ ಜೊತೆಗಿರುವ “ಭಕ್ತ ಜನರ” ಕೈಯಲ್ಲಿರುವ ಸ್ವರ್ಗೀಯ ಮೆಸ್ಸೀಯನ ಸರಕಾರದ ಮೂಲಕ ವ್ಯಕ್ತವಾಗುವ ಯೆಹೋವನ ಸಾರ್ವಭೌಮ ಪ್ರಭುತ್ವವೇ. (ದಾನಿಯೇಲ 7:13, 14, 18, 27; ಯೆಶಾಯ 9:6, 7; 11:1-5) “ಬರಲಿ” ಎಂದು ಪ್ರಾರ್ಥಿಸುವುದರ ಅರ್ಥವೇನು? ದೈವಿಕ ಪ್ರಭುತ್ವದ ಭೂವಿರೋಧಿಗಳ ಎದುರಾಗಿ ದೇವರ ರಾಜ್ಯ ಬರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರ್ಥ. ಆ ರಾಜ್ಯ ಬಂದು ‘ಭೂರಾಜ್ಯಗಳನ್ನೆಲ್ಲ ಜಜ್ಜಿ ಅಂತ್ಯಗೊಳಿಸಿದ ಬಳಿಕ’ ಅದು ಭೂಮಿಯನ್ನು ಭೂವ್ಯಾಪಕವಾಗಿ ಪ್ರಮೋದವನವಾಗಿ ರೂಪಾಂತರಿಸುವುದು.—ದಾನಿಯೇಲ 2:44; ಲೂಕ 23:43.
11. ಯೆಹೋವನ ಚಿತ್ತ ವಿಶ್ವದಲ್ಲೆಲ್ಲ ನಡೆಯುವಂತೆ ನಾವು ಹಾತೊರೆಯುವುದಾದರೆ ಏನು ಮಾಡುವೆವು?
11 “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ. (ಮತ್ತಾಯ 6:10) ದೇವರು ಭೂಮಿಯ ಕಡೆಗಿರುವ, ಶತ್ರುಗಳ ನಾಶ ಸೇರಿರುವ, ತನ್ನ ಉದ್ದೇಶವನ್ನು ನೆರವೇರಿಸುವಂತೆ ಇದೊಂದು ವಿಜ್ಞಾಪನೆಯಾಗಿದೆ. (ಕೀರ್ತನೆ 83:9-18; 135:6-10) ವಾಸ್ತವವಾಗಿ, ವಿಶ್ವದಲ್ಲೆಲ್ಲ ದೈವಿಕ ಚಿತ್ತ ನಡೆಯುವಂತೆ ನಾವು ಹಾರೈಸುತ್ತೇವೆಂದು ಇದು ಸೂಚಿಸುತ್ತದೆ. ಇದು ನಮ್ಮ ಹೃದಯದಲ್ಲಿರುವುದಾದರೆ ನಾವು ಯಾವಾಗಲೂ ಯೆಹೋವನ ಚಿತ್ತವನ್ನು ನಮಗೆ ಸಾಮರ್ಥ್ಯವಿರುವಷ್ಟು ಮಾಡುವೆವು. ದೇವರ ಚಿತ್ತ ಭೂಮಿಯಲ್ಲಿ ಆಗುವಂತೆ ನಾವೇ ಶ್ರದ್ಧಾಪೂರ್ವಕವಾಗಿ ಪ್ರಯತ್ನ ಪಡದಿರುವಲ್ಲಿ ಪ್ರಾಮಾಣಿಕತೆಯಿಂದ ಇಂಥ ವಿಜ್ಞಾಪನೆಯನ್ನು ಮಾಡಶಕ್ತರಾಗೆವು. ನಾವು ಈ ರೀತಿ ಪ್ರಾರ್ಥಿಸುವುದಾದರೆ ಆ ಚಿತ್ತಕ್ಕೆ ವ್ಯತಿರಿಕ್ತವಾಗಿ ಅಂದರೆ, ಉದಾಹರಣೆಗೆ, ಅವಿಶ್ವಾಸಿಯೊಂದಿಗೆ ಪ್ರಣಯ ವ್ಯವಹಾರ ಮಾಡುತ್ತಾ ಯಾ ಐಹಿಕ ಮಾರ್ಗಗಳನ್ನು ಆಯ್ದುಕೊಳ್ಳುತ್ತಾ ಇರುವುದಿಲ್ಲವೆಂಬುದನ್ನು ಖಚಿತ ಮಾಡಿಕೊಳ್ಳಬೇಕು.(1 ಕೊರಿಂಥ 7:39; 1 ಯೋಹಾನ 2:15-17) ಇದಕ್ಕೆ ಬದಲು, ‘ಈ ವಿಷಯದಲ್ಲಿ ಯೆಹೋವನ ಚಿತ್ತವೇನು?’ ಎಂಬ ಆಲೋಚನೆ ಸದಾ ನಮ್ಮ ಮನಸ್ಸಿನಲ್ಲಿರಬೇಕು. ಹೌದು, ನಾವು ದೇವರನ್ನು ಹೃತ್ಪೂರ್ವಕವಾಗಿ ಪ್ರೀತಿಸುವುದಾದರೆ ಜೀವನದ ಸಕಲ ವಿಚಾರಗಳಲ್ಲಿ ಆತನ ಮಾರ್ಗದರ್ಶನವನ್ನು ಹುಡುಕುವೆವು.—ಮತ್ತಾಯ 22:37.
ನಮ್ಮ ದೈನಂದಿನ ರೊಟ್ಟಿ
12. ‘ದೈನಂದಿನ ರೊಟ್ಟಿ’ಯನ್ನು ಮಾತ್ರ ನಾವು ಕೇಳುವಾಗ ನಮ್ಮ ಮೇಲೆ ಯಾವ ಸುಪರಿಣಾಮವಾಗುತ್ತದೆ?
12 “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.” (ಮತ್ತಾಯ 6:11) ಲೂಕನ ವೃತ್ತಾಂತ ಹೇಳುವುದು:“ನಮ್ಮ ದಿನದ ರೊಟ್ಟಿಯನ್ನು ಆ ದಿನದ ಆವಶ್ಯಕತೆಗನುಸಾರವಾಗಿ ದಯಪಾಲಿಸು.” (ಲೂಕ 11:3, NW) ‘ಈ ಹೊತ್ತಿಗೆ’ ಬೇಕಾಗುವ ಆಹಾರವನ್ನು ಒದಗಿಸಲು ದೇವರನ್ನು ಕೇಳಿಕೊಳ್ಳುವುದು, ನಮ್ಮ ದೈನಂದಿನ ಪರಾಮರಿಕೆ ಮಾಡುವ ಸಾಮರ್ಥ್ಯ ದೇವರಲ್ಲಿದೆ ಎಂಬ ನಂಬಿಕೆಯನ್ನು ಬೆಳೆಸುತ್ತದೆ. ಇಸ್ರಾಯೇಲ್ಯರು ಮನ್ನವನ್ನು ವಾರಕ್ಕೆ ಬೇಕಾಗುವಷಾಗ್ಟಲಿ, ಅದಕ್ಕಿಂತ ಹೆಚ್ಚಾಗಲಿ ಕೂಡಿಸದೆ “ಆಯಾ ದಿನಕ್ಕೆ ಬೇಕಾದಷ್ಟು” ಮಾತ್ರ ಕೂಡಿಸಬೇಕಾಗಿತ್ತು. (ವಿಮೋಚನಕಾಂಡ 16:4) ಇದೊಂದು ರಸಭಕ್ಷ್ಯ ಮತ್ತು ಹೇರಳವಾದ ಆಹಾರಕ್ಕಾಗಿ ಮಾಡುವ ಪ್ರಾರ್ಥನೆಯಲ್ಲ. ದೈನಂದಿನ ಆವಶ್ಯಕತೆಗಳೇಳುವಾಗ ಬೇಕಾಗುವ ಆಹಾರಕ್ಕಾಗಿ ಮಾಡುವ ಪ್ರಾರ್ಥನೆ. ಕೇವಲ ದಿನಕ್ಕೆ ಬೇಕಾಗುವ ಆಹಾರಕ್ಕಾಗಿ ಕೇಳಿಕೊಳ್ಳುವುದು ನಾವು ದುರಾಶೆಯುಳ್ಳವರಾಗದಂತೆ ಸಹಾಯ ಮಾಡುತ್ತದೆ.—1 ಕೊರಿಂಥ 6:9, 10.
13. (ಎ) ವಿಶಾಲಾರ್ಥದಲ್ಲಿ, ದಿನದ ರೊಟ್ಟಿಗಾಗಿ ಕೇಳುವುದರ ಅರ್ಥವೇನು? (ಬಿ) ನಾವು ಶ್ರಮಪಟ್ಟು ಕೆಲಸಮಾಡಿದರೂ ಮತ್ತು ಹೆಚ್ಚುಕಡಮೆ ಬದುಕಿ ಉಳಿಯಲು ಸಾಕಷ್ಟು ಮಾತ್ರ ನಮಗಿದ್ದರೂ ನಮ್ಮ ಮನೋಭಾವ ಏನಾಗಿರಬೇಕು?
13 ವಿಶಾಲಾರ್ಥದಲ್ಲಿ, ದಿನದ ರೊಟ್ಟಿಗಾಗಿ ಮಾಡುವ ಬಿನ್ನಹ, ನಾವು ಸ್ವತಂತ್ರರಲ್ಲವೆಂದೂ ಅನ್ನ, ಪಾನ, ಬಟ್ಟೆ, ಮತಿತ್ತರ ಆವಶ್ಯಕತೆಗಳಿಗಾಗಿ ನಾವು ಸದಾ ದೇವರನ್ನೇ ನೋಡುತ್ತೇವೆಂದೂ ಸೂಚಿಸುತ್ತದೆ. ಸಮರ್ಪಿತ ಆರಾಧಕರ ಕುಟುಂಬವಾಗಿರುವ ನಾವು ನಮ್ಮ ತಂದೆಯಲ್ಲಿ ಭರವಸವಿಡುತ್ತೇವಾದರೂ ಆತನು ನಮಗೆ ಅದ್ಭುತ ವಿಷಯಗಳನ್ನೊದಗಿಸುವಂತೆ ನಾವು ಸುಮ್ಮನೆ ಕೂತು ಕಾಯುವುದಿಲ್ಲ. ಆಹಾರ ಮತಿತ್ತರ ಆವಶ್ಯಕತೆಗಳನ್ನು ಪಡೆಯಲು ನಾವು ಕೆಲಸ ಮಾಡಿ ನಮಗೆ ಸಾಮರ್ಥ್ಯವಿರುವುದನ್ನೆಲ್ಲ ಮಾಡುತ್ತೇವೆ. ಆದರೂ ನಾವು ಪ್ರಾರ್ಥನೆಯಲ್ಲಿ ದೇವರಿಗೆ ಉಪಕಾರ ಹೇಳುತ್ತೇವೆ. ಏಕೆಂದರೆ ಈ ಒದಗಿಸುವಿಕೆಗಳ ಹಿಂಭಾಗದಲ್ಲಿ ನಾವು ನಮ್ಮ ಸ್ವರ್ಗೀಯ ಪಿತನ ಪ್ರೀತಿ, ವಿವೇಕ ಮತ್ತು ಶಕ್ತಿಯನ್ನು ನೋಡುತ್ತೇವೆ.(ಅಪೊಸ್ತಲರ ಕೃತ್ಯ 14:15-17; ಲೂಕ 22:19 ಹೋಲಿಸಿ.) ನಮ್ಮ ಕಾರ್ಯಶ್ರದ್ಧೆ ನಾವು ಸಮೃದ್ಧರಾಗುವಂತೆ ಮಾಡಬಹುದು. ಆದರೆ ನಾವು ಶ್ರಮಪಟ್ಟು ಕೆಲಸ ಮಾಡಿದರೂ ನಮಗೆ ಕೇವಲ ಬದುಕಿ ಉಳಿಯಲು ಸಾಕಷ್ಟೇ ಇರುವಲ್ಲಿ ಸಹ ನಾವು ಕೃತಜ್ಞರೂ ತೃಪ್ತರೂ ಆಗಿರೋಣ. (ಫಿಲಿಪ್ಪಿ 4:12; 1 ತಿಮೊಥಿ 6:6-8) ವಾಸ್ತವವೇನಂದರೆ, ಸಾಮಾನ್ಯ ಊಟ, ಉಡುಪುಗಳಿರುವ ದೇವಭಕ್ತಿಯ ವ್ಯಕ್ತಿ ಲೌಕಿಕ ಸಮೃದ್ಧಿಯಿರುವ ಕೆಲವರಿಗಿಂತ ಎಷ್ಟೋ ಹೆಚ್ಚು ಸಂತುಷ್ಟನಾಗಿರಬಹುದು. ಆದುದಗಿಂದ ನಮ್ಮ ನಿಯಂತ್ರಣಕ್ಕೆ ಮೀರುವ ಸ್ಥಿತಿಗತಿಗಳ ಕಾರಣ ನಮಗೆ ಕೊಂಚವೇ ಇರುವುದಾದರೂ ನಾವು ಕುಗ್ಗಿದ ಹೃದಯವುಳ್ಳವರಾಗಿರದೆ ಇರೋಣ. ಆಗಲೂ ನಾವು ಆತ್ಮಿಕವಾಗಿ ಧನಿಕರಾಗಿರಬಲ್ಲೆವು. ಹೌದು, ಯಾರಿಗೆ ನಮ್ಮ ಸ್ತುತಿ ಮತ್ತು ಉಪಕಾರಗಳು ಪ್ರಾರ್ಥನೆಯ ರೂಪದಲ್ಲಿ ಮೇಲೇರುತ್ತವೆಯೊ ಆ ಯೆಹೋವನ ಕಡೆಗೆ ನಮಗಿರುವ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯಲ್ಲಿ ನಾವು ದರಿದ್ರರಾಗಿರುವ ಅವಶ್ಯವಿಲ್ಲ.
ನಮ್ಮ ಸಾಲಗಳನ್ನು ಕ್ಷಮಿಸುವುದು
14. ಯಾವ ಸಾಲಗಳಿಗೆ ನಾವು ಕ್ಷಮೆ ಕೇಳುತ್ತೇವೆ, ಮತ್ತು ದೇವರು ಅವುಗಳಿಗೆ ಏನು ಅನ್ವಯಿಸುತ್ತಾನೆ?
14 “ನಾವು ನಮ್ಮ ಸಾಲಗಾರರನ್ನು ಕ್ಷಮಿಸಿರುವಂತೆ ನಮ್ಮ ಸಾಲಗಳನ್ನು ಕ್ಷಮಿಸು.” (ಮತ್ತಾಯ 6:12, NW) ಈ ಸಾಲಗಳು ಪಾಪಗಳೆಂದು ಲೂಕನ ವೃತ್ತಾಂತ ತೋರಿಸುತ್ತದೆ. (ಲೂಕ 11:4) ನಮ್ಮ ತಂದೆಯ ಪರಿಪೂರ್ಣ ಚಿತ್ತಾನುಸಾರ ಸಕಲ ವಿಷಯಗಳನ್ನು ಮಾಡುವುದರಿಂದ ಪಿತ್ರಾರ್ಜಿತ ಪಾಪ ನಮ್ಮನ್ನು ತಡೆಹಿಡಿಯುತ್ತದೆ. ಆದುದರಿಂದ ಒಂದು ಅರ್ಥದಲ್ಲಿ ನಮ್ಮ ನ್ಯೂನತೆಗಳು, ನಾವು ‘ಆತ್ಮದಿಂದ ಜೀವಿಸಲು ಮತ್ತು ನಡೆದಾಡಲು ತೊಡಗಿದಂದಿನಿಂದ ದೇವರಿಗೆ ಸಲ್ಲಿಸಲಿಕ್ಕಿರುವ ಸಾಲಗಳು ಅಥವಾ ಹಂಗುಗಳಾಗಿವೆ. (ಗಲಾತ್ಯ 5:16-25; ರೋಮಾಪುರ 7:21-25 ಹೋಲಿಸಿ.) ನಮಗೆ ಈ ಸಾಲಗಳಿರುವುದು ನಾವು ಅಪೂರ್ಣರಾಗಿರುವುದರಿಂದ ಮತ್ತು ದೇವರ ಮಟ್ಟಕ್ಕೆ ಈಗ ಪೂರ್ತಿಯಾಗಿ ಹೊಂದಿಕೊಳ್ಳ ಸಾಧ್ಯವಿಲ್ಲದೆ ಇರುವುದರಿಂದ. ಮತ್ತು ನಮಗೆ ಪ್ರಾರ್ಥನಾ ಸುಯೋಗವಿರುವುದು ಈ ಪಾಪಗಳ ಕ್ಷಮೆಗಾಗಿಯೇ. ಸಂತೋಷ್ತದ ವಿಷಯವನೇಂದರೆ, ದೇವರು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಬೆಲೆಯನ್ನು ಅನ್ವಯಿಸುತ್ತಾ ಈ ಸಾಲಗಳನ್ನು ಯಾ ಪಾಪಗಳನ್ನು ಕ್ಷಮಿಸಬಲ್ಲನು.—ರೋಮಾಪುರ 5:8; 6:23.
15. ಅವಶ್ಯವಿರುವ ಶಿಕ್ಷೆಯ ಸಂಬಂಧದಲ್ಲಿ ನಮ್ಮ ಮನೋಭಾವ ಹೇಗಿರಬೇಕು?
15 ನಮ್ಮ ಸಾಲ ಯಾ ಪಾಪಗಳನ್ನು ದೇವರು ಕ್ಷಮಿಸಬೇಕೆಂದು ನಿರೀಕ್ಷಿಸುವಲ್ಲಿ ನಾವು ಪಶ್ಚಾತ್ತಾಪಪಡಬೇಕು ಮತ್ತು ಶಿಕ್ಷೆಯನ್ನು ಅಂಗೀಕರಿಸಲು ಬಯಸಬೇಕು. (ಜ್ಞಾನೋಕ್ತಿ 28:13; ಅಪೊಸ್ತಲರ ಕೃತ್ಯ 3:19) ಯೆಹೋವನು ನಮ್ಮನ್ನು ಪ್ರೀತಿಸುವುದರಿಂದ ಆತನು ನಮಗೆ ವೈಯಕ್ತಿಕವಾಗಿ ಬೇಕಾದ ಶಿಕ್ಷೆಯನ್ನು ನಾವು ನಮ್ಮ ಬಲಹೀನತೆಗಳನ್ನು ತಿದ್ದುವ ಕಾರಣದಿಂದ ಕೊಡುತ್ತಾನೆ.(ಜ್ಞಾನೋಕ್ತಿ 6:23; ಇಬ್ರಿಯ 12:4-6) ನಂಬಿಕೆ ಮತ್ತು ಜ್ಞಾನದ ವೃದ್ಧಿಯ ಕಾರಣ ದೇವರ ನಿಯಮ ಮತ್ತು ಸೂತ್ರಗಳಿಗೆ ನಮ್ಮ ಹೃದಯ ಎಷ್ಟು ಪೂರ್ತಿಯಾಗಿ ಹೊಂದಿಕೆಯಿಂದಿದೆಯೆಂದರೆ ನಾವು ಇಚ್ಫಾಪೂರ್ವಕವಾಗಿ ಪಾಪ ಮಾಡುವುದಿಲ್ಲವೆಂದು ಕಂಡುಕೊಳ್ಳುವಾಗ ಸಂತುಷ್ಟರೆಂಬುದು ನಿಶ್ಚಯ. ಆದರೆ ನಮ್ಮ ತಪ್ಪಿನಲ್ಲಿ ಉದ್ದೇಶಪೂರ್ವಕ ಮನೋಭಾವವಿದೆಯೆಂದು ನಾವು ತಿಳಿಯುವಲ್ಲಿ ಏನು ಮಾಡಬೇಕು? ಆಗ ನಮಗೆ ತೀರಾ ನೋವಿನ ಆನುಭವವಾಗಿ ನಾವು ಶ್ರದ್ಧಾಪೂರ್ವಕವಾಗಿ ಕ್ಷಮೆಗಾಗಿ ಪ್ರಾರ್ಥಿಸಬೇಕು.(ಇಬ್ರಿಯ 10:26-31) ನಮಗೆ ದೊರೆತಿರುವ ಸಲಹೆಯನ್ನು ಅನ್ವಯಿಸಿಕೊಳ್ಳುತ್ತ ನಾವು ನಮ್ಮ ದಾರಿಯನ್ನು ತಿದ್ದಬೇಕು.
16. ಪಾಪಗಳನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಾ ಹೋಗುವುದು ಏಕೆ ಪ್ರಯೋಜನಕರ?
16 ದೇವರು ನಮ್ಮ ಪಾಪಗಳನ್ನು ಕ್ಷಮಿಸುವಂತೆ ಕ್ರಮವಾಗಿ ಕೇಳಿಕೊಳ್ಳುವುದು ಪ್ರಯೋಜನಕರ. ಇದು ನಮ್ಮ ಪಾಪಗಳನ್ನು ನಮ್ಮ ಮುಂದಿಡುವುದರಿಂದ ನಮ್ಮನ್ನು ನಮ್ರರಾಗಿ ಮಾಡಬೇಕು. (ಕೀರ್ತನೆ 51:3, 4, 7) ನಮ್ಮ ಸ್ವರ್ಗದ ತಂದೆ “ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ” ಮಾಡುವ ಅಗತ್ಯವಿದೆ. (1 ಯೋಹಾನ 1:8, 9) ಇದಲ್ಲದೆ, ಪ್ರಾರ್ಥನೆಗಳಲ್ಲಿ ನಮ್ಮ ಪಾಪಗಳನ್ನು ಹೇಳುವುದು ನಾವು ಅವುಗಳ ವಿರುದ್ಧ ಕಠಿಣ ಹೋರಾಟ ನಡೆಸುವಂತೆ ಸಹಾಯ ಮಾಡುತ್ತದೆ. ಹೀಗೆ, ನಾವು ಪ್ರಾಯಶ್ಚಿತ್ತ ಯಜ್ಞದ ಮತ್ತು ಯೇಸುವಿನ ಸುರಿಸಲ್ಪಟ್ಟ ರಕ್ತದ ಆವಶ್ಯಕತೆಯನ್ನು ಸದಾ ಜ್ಞಾಪಿಸಿಕೊಳ್ಳುವಂತೆಯೂ ಆಗುತ್ತದೆ.—1 ಯೋಹಾನ 2:1, 2; ಪ್ರಕಟನೆ 7:9, 14)
17. ಕ್ಷಮೆಗಾಗಿ ಪ್ರಾರ್ಥನೆ ಇತರರೊಂದಿಗಿನ ಸಂಬಂಧದಲ್ಲಿ ನಮಗೆ ಹೇಗೆ ಸಹಾಯ ಮಾಡುತ್ತದೆ?
17 ಕ್ಷಮೆಗಾಗಿ ಪ್ರಾರ್ಥಿಸುವುದು ನಾವು ಚಿಕ್ಕ,ದೊಡ್ಡ ವಿಷಯಗಳಲ್ಲಿ ನಮಗೆ ಸಾಲಗಾರರಾಗುವವರ ಕಡೆಗೆ ಕರುಣೆ, ಕನಿಕರ ಮತ್ತು ಉದಾರಭಾವವನ್ನು ತೋರಿಸುವಂತೆಯೂ ಸಹಾಯ ಮಾಡುತ್ತದೆ. ಲೂಕನ ವೃತ್ತಾಂತ ಹೇಳುವುದು:“ನಮಗೆ ತಪ್ಪು [ಸಾಲ, NW] ಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುತ್ತೇವಾದುದರಿಂದ ನಮ್ಮ ಪಾಪಗಳನ್ನು ಕ್ಷಮಿಸು.” (ಲೂಕ 11:4) ವಾಸ್ತವವೇನಂದರೆ, ನಾವು “ನಮ್ಮ ಸಾಲಗಾರರನ್ನು” ಅಂದರೆ ನಮಗೆ ತಪ್ಪು ಮಾಡಿರುವವರನ್ನು ‘ಕ್ಷಮಿಸಿರುವುದಾದರೆ’ ಮಾತ್ರ ನಾವು ದೇವರಿಂದ ಕ್ಷಮಾಪಣೆ ಪಡೆಯಬಹುದು. (ಮತ್ತಾಯ 6:12; ಮಾರ್ಕ 11:25) ಯೇಸು ಕೂಡಿಸಿ ಹೇಳಿದ್ದು:“ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನು ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” (ಮತ್ತಾಯ 6:14, 15) ಪಾಪಕ್ಷಮೆಗಾಗಿ ನಾವು ಮಾಡುವ ಪಾರ್ಥನೆಯು ನಾವು ಇತರರೊಂದಿಗೆ ತಾಳಿಕೊಂಡು ನಡೆದು ಅವರನ್ನು ಕ್ಷಮಿಸುವಂತೆ ನಮ್ಮನ್ನು ಪ್ರಚೋದಿಸಬೇಕು. ಅಪೊಸ್ತಲ ಪೌಲನು ಬರೆದುದು:“ಯೆಹೋವನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊಸ್ಸೆ 3:13, NW; ಎಫೆಸ 4:32.
ಶೋಧನೆ ಮತ್ತು ಕೆಡುಕನು
18. ನಮ್ಮ ಶೋಧನೆ ಮತ್ತು ಪರೀಕ್ಷೆಗಳಿಗೆ ನಾವು ದೇವರ ಮೇಲೆ ಏಕೆ ತಪ್ಪು ಹೊರಿಸಲೇ ಬಾರದು?
18 “ನಮ್ಮನ್ನು ಶೋಧನೆಯೊಳಗೆ ತರಬೇಡ.” (ಮತ್ತಾಯ 6:13, NW; ಲೂಕ 11:4) ನಾವು ಪಾಪ ಮಾಡುವಂತೆ ಯೆಹೋವನು ನಮ್ಮನ್ನು ಶೋಧಿಸುತ್ತಾನೆಂದು ಈ ಮಾತುಗಳ ಅರ್ಥವಲ್ಲ. ಶಾಸ್ತ್ರವು ಹಲವು ವೇಳೆ ದೇವರು ಕೇವಲ ಅನುಮತಿಸುವ ವಿಷಯಗಳನ್ನು ದೇವರು ಮಾಡುತ್ತಾನೆ ಯಾ ಆಗಿಸುತ್ತಾನೆ ಎಂದು ಹೇಳುತ್ತದೆ. (ರೂತ 1:20, 21; ಪ್ರಸಂಗಿ 11:5 ಹೋಲಿಸಿ.) ಆದರೆ “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋಬ 1:13) ಆದುದರಿಂದ ನಮ್ಮ ಸ್ವರ್ಗೀಯ ತಂದೆಯು ಕೆಟ್ಟ ಶೋಧನೆ ಮತ್ತು ಪರೀಕ್ಷೆಗಳಿಗೆ ಕಾರಣನೆಂದು ನಾವೆಂದಿಗೂ ತಪ್ಪು ಹೊರಿಸದಿರೋಣ. ದೇವರ ವಿರುದ್ಧ ಪಾಪಮಾಡುವಂತೆ ನಮ್ಮನ್ನು ನಡಿಸುವವನು ಶೋಧಕನಾದ ಸೈತಾನನೇ.—ಮತ್ತಾಯ 4:3; 1 ಥೆಸಲೊನೀಕ 3:5.
19. ಶೋಧನೆಯ ಸಂಬಂಧದಲ್ಲಿ ನಾವು ಹೇಗೆ ಪ್ರಾರ್ಥಿಸಬಹುದು?
19 “ನಮ್ಮನ್ನು ಶೋಧನೆಯೊಳಗೆ ತರಬೇಡ” ಎಂಬ ಬಿನ್ನಹದ ಮೂಲಕ ನಾವು ಕಾರ್ಯತಃ ಯೆಹೋವನೊಡನೆ, ಶೋಧನೆಗೊಳಪಟ್ಟಾಗ ಯಾ ಆತನಿಗೆ ಅವಿಧೇಯರಾಗಲು ಒತ್ತಡಕ್ಕೊಳಗಾಗುವಾಗ ಅದಕ್ಕೆ ಬಲಿಬೀಳಲು ಬಿಡಬೇಡ ಎಂದು ಕೇಳಿಕೊಳ್ಳುತ್ತೇವೆ. ನಮಗೆ ತೀರಾ ಕಠಿಣವಾದ ಯಾವ ಶೋಧನೆಯೂ ಬರದಂತೆ ನಮ್ಮ ಹೆಜ್ಜೆಗಳನ್ನು ನಡಿಸು ಎಂದು ನಾವು ನಮ್ಮ ತಂದೆಯನ್ನು ಯಾಚಿಸಬಲ್ಲೆವು. ಈ ಸಂಬಂಧದಲ್ಲಿ ಪೌಲನು ಬರೆದುದು:“ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ನಮಗೆ ಸಹಿಸಸಾಧ್ಯವಿರುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ನಾವು ಪರೀಕ್ಷಿಸಲ್ಪಡದಂತೆ ಮತ್ತು ತೀರಾ ಸಂಕಟ ಬರುವಾಗ ತಪ್ಪಿಸುವ ಮಾರ್ಗದಲ್ಲಿ ಯೆಹೋವನು ನಡಿಸುವಂತೆ ನಾವು ಪ್ರಾರ್ಥಿಸಬಲ್ಲೆವು. ಶೋಧನೆಯು ಪಿಶಾಚನಿಂದಲೂ ನಮ್ಮ ಪಾಪದ ಶರೀರದಿಂದಲೂ ಇತರರ ಬಲಹೀನತೆಗಳಿಂದಲೂ ಬರುತ್ತವೆ. ಆದರೆ ನಮ್ಮ ಪ್ರೀತಿಯ ಪಿತನು ನಾವು ಅದರಲ್ಲಿ ಮುಳುಗಿ ಹೋಗದಂತೆ ನಡಿಸಬಲ್ಲನು.
20. “ಕೆಡುಕ”ನಿಂದ ವಿಮೋಚನೆಗೆ ಏಕೆ ಪ್ರಾರ್ಥಿಸಬೇಕು?
20 “ಆದರೆ ಕೆಡುಕನಿಂದ ನಮ್ಮನ್ನು ವಿಮೋಚಿಸು.” (ಮತ್ತಾಯ 6:13, NW) “ಕೆಡುಕ”ನಾದ ಸೈತಾನನು ನಮ್ಮನ್ನು ಸೋಲಿಸುವುದನ್ನು ದೇವರು ನಿಶ್ಚಯವಾಗಿಯೂ ತಡೆಯಬಲ್ಲನು. (2 ಪೇತ್ರ 2:9) ಮತ್ತು ಪಿಶಾಚನಿಂದ ತಪ್ಪಿಸಿಕೊಳ್ಳುವ ವಿಚಾರದಲ್ಲಿ ಇಂದಿನಷ್ಟು ಅತ್ಯಾವಶ್ಯಕತೆ ಹಿಂದೆಂದೂ ಇದ್ದಿರುವುದಿಲ್ಲ. ಏಕೆಂದರೆ, ‘ಕೊಂಚ ಸಮಯವಿದೆಯೆಂದು ತಿಳಿದಿರುವ ಅವನು ಮಹಾ ರೌದ್ರವುಳ್ಳವನಾಗಿದ್ದಾನೆ. (ಪ್ರಕಟನೆ 12:12) ನಾವು ಸೈತಾನನ ತಂತ್ರೋಪಾಯಗಳ ಕುರಿತು ಬುದ್ಧಿಗೇಡಿಗಳಾಗಿರುವುದಿಲ್ಲ ಮತ್ತು ಅವನೂ ನಮ್ಮ ಬಲಹೀನತೆಗಳನ್ನು ತಿಳಿಯದವನಲ್ಲ. ಈ ಕಾರಣದಿಂದ ಈ ಸಿಂಹಸದೃಶ ವಿರೋಧಿಯ ಕೈಗಳಿಂದ ಯೆಹೋವನು ನಮ್ಮನ್ನು ರಕ್ಷಿಸುವಂತೆ ನಾವು ಪ್ರಾರ್ಥಿಸುವುದು ಅಗತ್ಯ. (2 ಕೊರಿಂಥ 2:11; 1 ಪೇತ್ರ 5:8, 9; ಕೀರ್ತನೆ 141:8, 9, ಹೋಲಿಸಿ. ದೃಷ್ಟಾಂತಕ್ಕೆ, ವಿವಾಹದ ಅಭಿರುಚಿ ನಮಗಿರುವಲ್ಲಿ, ಲೌಕಿಕ ಸಂಬಂಧವನ್ನು ನಾವು ಬೆಳೆಸಿ ವ್ಯಭಿಚಾರಕ್ಕೆ ಅಥವಾ ಅವಿಶ್ವಾಸಿಯನ್ನು ವಿವಾಹವಾಗಿ ದೇವರಿಗೆ ಅವಿಧೇಯರಾಗುವ ಸೈತಾನನ ತಂತ್ರ ಮತ್ತು ಶೋಧನೆಗಳಿಂದ ಯೆಹೋವನು ನಮ್ಮನ್ನು ವಿಮೋಚಿಸುವಂತೆ ನಾವು ಕೇಳಿಕೊಳ್ಳಬಹುದು.(ಧರ್ಮೋಪದೇಶಕಾಂಡ 7:3, 4; 1 ಕೊರಿಂಥ 7:39) ನಾವು ಐಶ್ವರ್ಯಕ್ಕಾಗಿ ಹಾತೊರೆಯುತ್ತೇವೆಯೇ? ಹಾಗಿರುವಲ್ಲಿ ಜೂಜಾಡುವ ಅಥವಾ ಮೋಸ ಮಾಡುವ ಶೋಧನೆಯನ್ನು ತಡೆಯಲು ಪ್ರಾರ್ಥನೆ ಬೇಕಾಗಬಹುದು. ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ಹಾಳುಗೆಡವಲು ತೀರಾ ಬಯಸುವ ಸೈತಾನನು ತನ್ನ ಶೋಧನಾ ಆಯುಧ ಭಂಡಾರದಿಂದ ಯಾವ ಆಯುಧವನ್ನೂ ಉಪಯೋಗಿಸುವನು. ಆದುದರಿಂದ ನೀತಿವಂತರನ್ನು ಶೋಧನೆಗೆ ಎಂದಿಗೂ ತ್ಯಜಿಸದ ಮತ್ತು ಕೆಡುಕನಿಂದ ವಿಮೋಚನೆಯನ್ನು ಒದಗಿಸುವ ನಮ್ಮ ಸ್ವರ್ಗೀಯ ಪಿತನಿಗೆ ನಾವು ಮುಂದುವರಿಯುತ್ತಾ ಪ್ರಾರ್ಥಿಸುವಂತಾಗಲಿ.
ಪ್ರಾರ್ಥನೆಯು ನಂಬಿಕೆ ಮತ್ತು ನಿರೀಕ್ಷೆಯನ್ನು ಬೆಳೆಸುತ್ತದೆ
21. ರಾಜ್ಯಕ್ಕಾಗಿ ಪ್ರಾರ್ಥಿಸುವುದರಿಂದ ನಮಗೆ ಹೇಗೆ ಪ್ರಯೋಜನ ದೊರಕಿದೆ?
21 ಕೆಡುಕನಿಂದ ನಮ್ಮನ್ನು ವಿಮೋಚಿಸುವ ನಮ್ಮ ಸ್ವರ್ಗೀಯ ತಂದೆಯು ನಮ್ಮನ್ನು ಹೇರಳವಾಗಿ ಆಶೀರ್ವದಿಸಲು ಸಂತೋಷಿಸುತ್ತಾನೆ. ಆದರೂ, ಇಷ್ಟೊಂದು ದೀರ್ಘಕಾಲ ತನ್ನ ಪ್ರಿಯಜನರು “ನಿನ್ನ ರಾಜ್ಯವು ಬರಲಿ” ಎಂದು ಬೇಡುವಂತೆ ಏಕೆ ಬಿಟ್ಟಿದ್ದಾನೆ? ವರ್ಷಾಂತರಗಳಲ್ಲಿ ಈ ರೀತಿ ಮಾಡಿರುವ ಪ್ರಾರ್ಥನೆಯು ರಾಜ್ಯದ ಕಡೆಗೆ ನಮಗಿರುವ ಬಯಕೆ ಮತ್ತು ಗಣ್ಯತೆಯನ್ನು ವೃದ್ಧಿಸಿದೆ. ಇಂಥ ಪ್ರಾರ್ಥನೆಯು, ಇಂಥ ಧರ್ಮಶೀಲ ಸರಕಾರವು ನಮಗೆಷ್ಟು ಹೆಚ್ಚು ಅಗತ್ಯವೆಂಬುದನ್ನು ಜ್ಞಾಪಕ ಹುಟ್ಟಿಸುತ್ತದೆ. ಇದು ರಾಜ್ಯಪ್ರಭುತ್ವದ ಕೆಳಗೆ ಜೀವದ ನಿರೀಕ್ಷೆಯನ್ನೂ ನಮ್ಮ ಮುಂದಿಡುತ್ತದೆ.—ಪ್ರಕಟನೆ 21:1-5.
22. ಸ್ವರ್ಗೀಯ ತಂದೆಯಾದ ಯೆಹೋವನಿಗೆ ಮಾಡುವ ಪ್ರಾರ್ಥನೆಯ ಕಡೆಗೆ ನಮ್ಮ ಮುಂದುವರಿಯುವ ಮನೋಭಾವ ಯಾವುದಾಗಿರಬೇಕು?
22 ಪ್ರಾರ್ಥನೆಯು ನಿರ್ವಿವಾದವಾಗಿ ಯೆಹೋವನಲ್ಲಿ ನಂಬಿಕೆಯನ್ನು ಬೆಳೆಸುತ್ತದೆ. ಆತನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುವಾಗ ಆತನೊಂದಿಗೆ ನಮಗಿರುವ ಸಂಬಂಧ ಬಲಗೊಳ್ಳುತ್ತದೆ. ಆದುದರಿಂದ ಸ್ತುತಿ, ಉಪಕಾರ ಮತ್ತು ಯಾಚನೆಗಳೊಂದಿಗೆ ಆತನ ಬಳಿಗೆ ಹೋಗುವುದರಲ್ಲಿ ನಾವು ದಣಿಯದಿರೋಣ. ಮತ್ತು ಹಿಂಬಾಲಕರ, “ಸ್ವಾಮೀ. . . ನಮಗೂ ಪ್ರಾರ್ಥನೆ ಮಾಡುವದನ್ನು ಕಲಿಸು” ಎಂಬ ಬಿನ್ನಹಕ್ಕೆ ಯೇಸುವಿನ ಸಹಾಯಕರವಾದ ಉತ್ತರಕ್ಕೂ ನಾವು ಕೃತಜ್ಞರಾಗಿರುವಂತಾಗಲಿ. (w90 5/15)
ನೆನಪಿದೆಯೆ?
▫ ಪ್ರಾರ್ಥನಾಪುರುಷನಾದ ಯೇಸುವಿನ ಮಾತು ಮತ್ತು ಮಾದರಿಯಿಂದ ನಾವು ಯಾವ ಪಾಠ ಕಲಿಯಬಲ್ಲೆವು?
▫ ನಮ್ಮ ಸ್ವರ್ಗೀಯ ತಂದೆ ಮತ್ತು ಆತನ ನಾಮದ ಸಂಬಂಧದಲ್ಲಿ ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು?
▫ ದೇವರ ರಾಜ್ಯ ಬರಲಿ ಮತ್ತು ಆತನ ಚಿತ್ತ ಭೂಮಿಯಲ್ಲಿ ನೆರವೇರಲಿ ಎಂದು ಪ್ರಾರ್ಥಿಸುವಾಗ ನಾವು ಯಾವುದಕ್ಕಾಗಿ ವಿಜ್ಞಾಪಿಸುತ್ತೇವೆ?
▫ ನಮ್ಮ ದೈನಂದಿನ ರೊಟ್ಟಿಗಾಗಿ ಪ್ರಾರ್ಥಿಸುವಾಗ ಯಾವುದಕ್ಕಾಗಿ ಕೇಳುತ್ತೇವೆ?
▫ ನಮ್ಮ ಸಾಲಗಳ ಕ್ಷಮೆಗಾಗಿ ಪ್ರಾರ್ಥಿಸುವುದೆಂದರೇನು?
▫ ಶೋಧನೆ ಮತ್ತು ಕೆಡುಕನಾದ ಸೈತಾನನಿಂದ ವಿಮೋಚನೆಗಾಗಿ ಪ್ರಾರ್ಥಿಸುವುದು ಮಹತ್ವದ್ದೇಕೆ?
[ಪುಟ 17 ರಲ್ಲಿರುವ ಚಿತ್ರ]
ಪ್ರಾರ್ಥಿಸಲು ಕಲಿಸಬೇಕೆಂದು ಯೇಸುವಿನ ಹಿಂಬಾಲಕರು ಕೇಳಿಕೊಂಡರು. ಅವನ ಪ್ರಾರ್ಥನಾ ಮಾಹಿತಿಯಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದೆಂದು ನೀವು ಬಲ್ಲಿರಾ?