“ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ”
“ನೀವು ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ.”—1 ಕೊರಿಂ. 9:24.
1, 2. (ಎ) ಇಬ್ರಿಯ ಕ್ರೈಸ್ತರನ್ನು ಹುರಿದುಂಬಿಸಲು ಪೌಲ ಯಾವ ದೃಷ್ಟಾಂತ ಬಳಸಿದನು? (ಬಿ) ದೇವರ ಸೇವಕರಿಗೆ ಯಾವ ಬುದ್ಧಿವಾದ ನೀಡಲಾಗಿದೆ?
ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದಲ್ಲಿ ಕ್ರೈಸ್ತರನ್ನು ಹುರಿದುಂಬಿಸಲು ಕಣ್ಣಿಗೆಕಟ್ಟುವ ಒಂದು ದೃಷ್ಟಾಂತವನ್ನು ಬಳಸಿದನು. ಆ ಕ್ರೈಸ್ತರನ್ನು ಓಟಗಾರರಿಗೆ ಹೋಲಿಸಿದನು. ಕ್ರೈಸ್ತ ಓಟದಲ್ಲಿ ಅವರು ಮಾತ್ರವಲ್ಲ ಅವರ ಸುತ್ತಲು “ಸಾಕ್ಷಿಗಳ . . . ದೊಡ್ಡ ಮೇಘ” ಇರುವುದಾಗಿ ಹೇಳಿದನು. ಈ ‘ಸಾಕ್ಷಿಗಳು’ ಈಗಾಗಲೇ ತಮ್ಮ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ನಂಬಿಗಸ್ತರಾಗಿದ್ದರು. ಆ ಹಿರಿಯ ಓಟಗಾರರು ತೋರಿಸಿದ ನಂಬಿಕೆ, ಅವಿರತ ಶ್ರಮ, ಇತ್ಯಾದಿಯನ್ನು ಇಬ್ರಿಯ ಕ್ರೈಸ್ತರು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಓಟವನ್ನು ಅರ್ಧಕ್ಕೆ ನಿಲ್ಲಿಸದೆ ಮತ್ತಷ್ಟು ವೇಗದಿಂದ ಓಡುವಂತೆ ಸ್ಫೂರ್ತಿ ನೀಡಲಿತ್ತು.
2 ಮೇಘದಂತಿದ್ದ ಆ ಸಾಕ್ಷಿಗಳಲ್ಲಿ ಕೆಲವರ ಜೀವನ ರೀತಿಯ ಕುರಿತು ನಾವು ಕಳೆದ ಲೇಖನದಲ್ಲಿ ಓದಿದ್ದೆವು. ದೇವರಲ್ಲಿ ಅವರಿಟ್ಟಿದ್ದ ಅಚಲ ನಂಬಿಕೆ ಜೀವನದ ಕೊನೆ ವರೆಗೂ ನಿಷ್ಠಾವಂತರಾಗಿರುವಂತೆ ಅವರಿಗೆ ನೆರವಾಯಿತು. ಅವರು ತಮ್ಮ ಓಟವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದರು. ವಿಜೇತರಾದ ಅವರ ಸಾಧನೆಯಿಂದ ನಾವು ಪಾಠ ಕಲಿಯಸಾಧ್ಯವಿದೆ. ಆ ಲೇಖನದಲ್ಲಿ ನಾವು ಕಲಿತಂತೆ ದೇವರ ಸೇವಕರೆಲ್ಲರಿಗೂ ಪೌಲ ಈ ಬುದ್ಧಿವಾದ ನೀಡಿದನು: “ನಾವು ಸಹ ಎಲ್ಲ ಭಾರವನ್ನೂ ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ ತೆಗೆದುಹಾಕಿ . . . ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ.”—ಇಬ್ರಿ. 12:1, 2.
3. ಗ್ರೀಕ್ ಸ್ಪರ್ಧಾಳುಗಳ ಓಟದ ರೀತಿಯನ್ನು ಸೂಚಿಸುತ್ತಾ ಪೌಲ ಹೇಳಿದ ಮಾತಿನಿಂದ ಕ್ರೈಸ್ತರು ಏನನ್ನು ಕಲಿಯಬಹುದು?
3 ನಾವು “ಎಲ್ಲ ಭಾರವನ್ನೂ” ತೆಗೆದುಹಾಕಿ ಓಡಬೇಕೆಂದು ಪೌಲ ಹೇಳಿದ್ದೇಕೆ? ಅಂದಿನ ಕ್ರೈಸ್ತರ ಕುರಿತು ತಿಳಿಸುವ ಒಂದು ಗ್ರಂಥ (ಆರಂಭದ ಕ್ರೈಸ್ತರ ಹಿನ್ನೆಲೆ) ಆ ದಿನಗಳಲ್ಲಿನ ಓಟದ ಸ್ಪರ್ಧಿಗಳ ಕುರಿತು ಏನನ್ನುತ್ತದೆಂದು ಗಮನಿಸಿ. “ಗ್ರೀಕರು ಕಠಿಣ ವ್ಯಾಯಾಮ ಮಾಡುತ್ತಿದ್ದರು ಮತ್ತು ನಗ್ನರಾಗಿ ಸ್ಪರ್ಧಿಸುತ್ತಿದ್ದರು.”a ತಮ್ಮ ವೇಗ ಸ್ವಲ್ಪವೂ ಕಡಿಮೆಯಾಗಬಾರದು, ಯಾವುದೂ ಅಡಚಣೆಯಾಗಬಾರದು ಎಂಬ ಕಾರಣಕ್ಕಾಗಿ ಹೀಗೆ ವಸ್ತ್ರವಿಲ್ಲದೆ ಓಡುತ್ತಿದ್ದರು. ನಗ್ನರಾಗಿ ಸ್ಪರ್ಧಿಸುತ್ತಿದ್ದ ವಿಷಯ ನಮಗೆ ಇಷ್ಟವಾಗದಿರಬಹುದು. ಆದರೆ ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬ ಛಲ ಗುರಿ ಆ ಓಟಗಾರರಲ್ಲಿತ್ತು. ಪೌಲನ ಮಾತಿನ ಅರ್ಥವೂ ಅದೇ. ಜೀವವೆಂಬ ಬಹುಮಾನ ಗೆಲ್ಲಲು ಓಡುವ ಕ್ರೈಸ್ತರು ಬದುಕಿನಲ್ಲಿ ಎದುರಾಗುವ ಸಕಲ ರೀತಿಯ ಅಡ್ಡಿತಡೆಗಳನ್ನು ತೆಗೆದುಹಾಕಿ ಗುರಿ ತಲಪಬೇಕೆಂದು ಅವನು ಹೇಳುತ್ತಿದ್ದನು. ಅಂದಿನ ಕ್ರೈಸ್ತರಿಗೆ ಇದೊಂದು ಸೂಕ್ತ ಬುದ್ಧಿವಾದವಾಗಿತ್ತು. ಇಂದು ನಮಗೂ ಅಷ್ಟೇ. ಹಾಗಾದರೆ ಕ್ರೈಸ್ತ ಓಟದಲ್ಲಿ ನಮ್ಮನ್ನು ಬಳಲಿಸಬಹುದಾದ “ಭಾರ” ಯಾವುದಾಗಿದೆ?
ಎಲ್ಲ ಭಾರವನ್ನು ತೆಗೆದುಹಾಕಿ
4. ನೋಹನ ಕಾಲದ ಜನರು ಯಾವ ವಿಷಯಗಳಲ್ಲಿ ತಲ್ಲೀನರಾಗಿದ್ದರು?
4 ಪೌಲನ ಸಲಹೆ “ಎಲ್ಲ ಭಾರವನ್ನೂ . . . ತೆಗೆದುಹಾಕಿ” ಎಂದಾಗಿತ್ತು. ಓಟದಲ್ಲಿ ನಮ್ಮ ಗಮನಭಂಗಪಡಿಸುವ ಹಾಗೂ ಗುರಿ ಮುಟ್ಟುವುದನ್ನು ಅಡ್ಡಿಮಾಡುವ ಪ್ರತಿಯೊಂದು ವಿಷಯ ಈ ಭಾರವಾಗಿದೆ. ಅಂಥ ಭಾರಗಳು ಯಾವುವು? ಯೇಸು ನೋಹನ ದಿನಗಳ ಕುರಿತು ಹೇಳಿದ ಮಾತಿನಿಂದ ನಾವು ಅವುಗಳನ್ನು ಗುರುತಿಸಬಹುದು. ನೋಹನನ್ನು ಪೌಲನು ಮೇಘದಂತಿರುವ ಸಾಕ್ಷಿಗಳ ಪಟ್ಟಿಯಲ್ಲಿ ಹೆಸರಿಸಿದನು. ಯೇಸು ಹೇಳಿದ್ದು: “ನೋಹನ ದಿನಗಳಲ್ಲಿ ನಡೆದಂತೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು.” (ಲೂಕ 17:26) ಇಲ್ಲಿ ಯೇಸು ಕೇವಲ ಬರಲಿರುವ ನಾಶನದ ಬಗ್ಗೆ ತಿಳಿಸಲಿಲ್ಲ. ಜನರ ಜೀವನ ರೀತಿಗೆ ಗಮನಸೆಳೆದನು. (ಮತ್ತಾಯ 24:37-39 ಓದಿ.) ನೋಹನ ಕಾಲದಲ್ಲಿದ್ದ ಬಹುತೇಕ ಜನರು ದೇವರಲ್ಲಿ ನಂಬಿಕೆಯಿಡದೆ ಭಕ್ತಿಮಾರ್ಗ ತೊರೆದಿದ್ದರು. ಏಕೆ? ಏಕೆಂದರೆ ಊಟಮಾಡುವುದು, ಕುಡಿಯುವುದು, ಮದುವೆ ಮುಂತಾದ ವಿಷಯಗಳಲ್ಲೇ ತಲ್ಲೀನರಾಗಿದ್ದರು. ಇವು ಬದುಕಿನ ಸಾಮಾನ್ಯ ವಿಷಯಗಳಾಗಿದ್ದವು. ಆದರೆ, ದೇವರ ಸಂದೇಶಕ್ಕೆ ಗಮನ ಕೊಡುವುದಕ್ಕಿಂತ ಇವೇ ಅವರಿಗೆ ಬದುಕಿನಲ್ಲಿ ಪ್ರಮುಖವಾಗಿಬಿಟ್ಟಿದ್ದವು. “ಅವರು ಲಕ್ಷ್ಯಕೊಡಲೇ ಇಲ್ಲ” ಎಂದು ಯೇಸು ತಿಳಿಸಿದನು.
5. ಕ್ರೈಸ್ತ ಓಟವನ್ನು ಪೂರ್ಣಗೊಳಿಸಲು ನಾವೇನು ಮಾಡಬೇಕು?
5 ನೋಹ ಮತ್ತವನ ಕುಟುಂಬದವರಂತೆ ನಮಗೂ ಪ್ರತಿದಿನ ಮಾಡಲು ಅನೇಕ ಕಾರ್ಯಗಳಿವೆ. ದುಡಿಯಬೇಕು, ನಮ್ಮನ್ನೂ ಕುಟುಂಬವನ್ನೂ ಪೋಷಿಸಬೇಕು ಇತ್ಯಾದಿ. ನಮ್ಮ ಬಹುಪಾಲು ಸಮಯ, ಶಕ್ತಿ, ಸಂಪತ್ತು ಇಂಥ ವಿಷಯಗಳಿಗೆ ವ್ಯಯವಾಗುತ್ತವೆ. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಂತೂ ಬದುಕಿನ ಅಗತ್ಯಗಳನ್ನು ಪೂರೈಸುವುದೇ ದೊಡ್ಡ ಚಿಂತೆಯಾಗಿರುತ್ತದೆ. ಮಾತ್ರವಲ್ಲ, ದೇವರ ಸೇವೆಗೆ ನಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ನಮಗೆ ಇತರ ಆಧ್ಯಾತ್ಮಿಕ ಜವಾಬ್ದಾರಿಗಳೂ ಇವೆ. ಸುವಾರ್ತೆ ಸಾರಬೇಕು, ಕೂಟಗಳಿಗೆ ತಯಾರಿ ಮಾಡಬೇಕು, ಹಾಜರಾಗಬೇಕು, ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆಯಿಂದ ಆಧ್ಯಾತ್ಮಿಕ ಬಲ ಪಡೆಯಬೇಕು. ನೋಹನಿಗೂ ಈ ರೀತಿ ದೇವರ ಸೇವೆಯಲ್ಲಿ ಮಾಡಲು ಅನೇಕ ವಿಷಯಗಳಿದ್ದವು. ಮತ್ತವನು “ದೇವರು ಅಪ್ಪಣೆಕೊಟ್ಟ ಪ್ರಕಾರವೇ” ಮಾಡಿದನು. (ಆದಿ. 6:22) ದೇವರು ಅಪ್ಪಣೆಕೊಟ್ಟಿರುವ ಎಲ್ಲವನ್ನೂ ಮಾಡುತ್ತಾ ಕ್ರೈಸ್ತ ಓಟವನ್ನು ಪೂರ್ಣಗೊಳಿಸಬೇಕಾದರೆ ನಮ್ಮ ಭಾರವನ್ನು ಆದಷ್ಟು ಹಗುರಗೊಳಿಸಬೇಕು. ಅನಾವಶ್ಯಕ ವಿಷಯಗಳನ್ನು ಕಳಚಿಹಾಕಬೇಕು.
6, 7. ಯೇಸುವಿನ ಯಾವ ಬುದ್ಧಿವಾದವನ್ನು ನಾವು ಸದಾ ಮನಸ್ಸಿನಲ್ಲಿಡಬೇಕು?
6 “ಎಲ್ಲ ಭಾರವನ್ನೂ” ತೆಗೆದುಹಾಕಿ ಎಂದು ಪೌಲ ಹೇಳಿದ್ದರ ಅರ್ಥವೇನಾಗಿತ್ತು? ನಮಗಿರುವ ಎಲ್ಲ ಜವಾಬ್ದಾರಿಗಳನ್ನು ಕಡೆಗಣಿಸಬೇಕೆಂದು ಅವನು ಹೇಳುತ್ತಿರಲಿಲ್ಲ. ಕೆಲವೊಂದು ಜವಾಬ್ದಾರಿಯನ್ನು ಪೂರೈಸುವುದು ಅತ್ಯಾವಶ್ಯಕ. ಆದರೆ ಈ ಅತ್ಯಾವಶ್ಯಕ ವಿಷಯಗಳ ಬಗ್ಗೆ ಯೇಸು ಏನು ಹೇಳಿದನೆಂದು ಗಮನಿಸಿ. “ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. ಏಕೆಂದರೆ ಅನ್ಯಜನಾಂಗಗಳವರು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಾರೆ. ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.” (ಮತ್ತಾ. 6:31, 32) ಯೇಸುವಿನ ಮಾತಿನ ತಿರುಳು ಅರ್ಥವಾಯ್ತಾ? ದಿನನಿತ್ಯದ ಸಾಮಾನ್ಯ ವಿಷಯಗಳಾದ ಊಟ, ಬಟ್ಟೆ ಮುಂತಾದವುಗಳೇ ನಮ್ಮ ಜೀವನದಲ್ಲಿ ಪ್ರಮುಖ ವಿಷಯಗಳಾಗಿಬಿಟ್ಟರೆ ಅವೇ ನಮಗೆ ಭಾರವಾಗಬಲ್ಲವು. ಕ್ರೈಸ್ತ ಓಟದಲ್ಲಿ ಮುಗ್ಗರಿಸಿ ಬೀಳುವಂತೆ ಅವು ಮಾಡಬಲ್ಲವು.
7 ಯೇಸು ಹೇಳಿದ ಈ ವಿಷಯವನ್ನು ಮನಸ್ಸಿನಲ್ಲಿಡಿ: “ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.” ನಮ್ಮ ಪ್ರೀತಿಯ ತಂದೆಯಾದ ಯೆಹೋವ ದೇವರು ನಮಗೆ ಬೇಕಾದದ್ದನ್ನು ಖಂಡಿತ ಒದಗಿಸುವನೆಂದು ಇದು ಸೂಚಿಸುತ್ತದೆ. ನಿಜ, ನಾವು ನೆನಸುವುದೆಲ್ಲ ನಮಗೆ ಸಿಗುತ್ತದೆಂದು ಹೇಳಸಾಧ್ಯವಿಲ್ಲ. ಆದರೆ, ಅಗತ್ಯ ವಿಷಯಗಳ ಬಗ್ಗೆ ಚಿಂತೆ ಮಾಡಬೇಡಿ ಎಂದು ಯೇಸು ಹೇಳಿದ್ದಾನೆ. ಹಾಗಿಲ್ಲದಿದ್ದರೆ ನಾವು ಸಹ ಅನ್ಯಜನಾಂಗದವರಂತೆ ಆಗಿಬಿಡುತ್ತೇವೆ. ಅವರು ಅಗತ್ಯ ವಿಷಯಗಳನ್ನು “ತವಕದಿಂದ” ಬೆನ್ನಟ್ಟುತ್ತಾರೆ. ಈ ರೀತಿ ಅಗತ್ಯ ವಿಷಯಗಳ ಬಗ್ಗೆ ಅತಿಯಾಗಿ ಚಿಂತಿಸುವುದು ಏಕೆ ಅಪಾಯಕಾರಿ? ಏಕೆಂದರೆ, “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ ಮತ್ತು ಆ ದಿನವು ಥಟ್ಟನೆ ಉರ್ಲಿನಂತೆ ನಿಮ್ಮ ಮೇಲೆ ಎರಗಿ ಬರದಿರುವಂತೆ ನಿಮಗೆ ಗಮನಕೊಟ್ಟುಕೊಳ್ಳಿರಿ” ಎಂದು ಯೇಸು ಎಚ್ಚರಿಸಿದ್ದಾನೆ.—ಲೂಕ 21:34, 35.
8. “ಎಲ್ಲ ಭಾರವನ್ನೂ” ತೆಗೆದುಹಾಕಿ ಓಡುವುದು ಇಂದು ಪ್ರಾಮುಖ್ಯವಾಗಿದೆ ಏಕೆ?
8 ಓಟದ ಮುಕ್ತಾಯ ಘಟ್ಟ ಕಣ್ಣಳತೆ ದೂರದಲ್ಲೇ ಇದೆ. ಗುರಿ ತಲಪಲು ಇನ್ನೇನು ಕೆಲವೇ ಹೆಜ್ಜೆಗಳ ಅಂತರವಿರುವಾಗ ಅನಾವಶ್ಯಕ ವಿಷಯಗಳ ಭಾರವನ್ನು ಮೈಮೇಲೆ ಎಳೆದುಕೊಂಡು ಕುಸಿದರೆ ಎಂಥ ವಿಪರ್ಯಾಸ! ಹಾಗಾದರೆ, ಅಪೊಸ್ತಲ ಪೌಲನ ಈ ಬುದ್ಧಿಮಾತನ್ನು ಪಾಲಿಸುವುದು ವಿವೇಕತನ: “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ.” (1 ತಿಮೊ. 6:6) ಹೌದು, ಪೌಲನ ಮಾತುಗಳನ್ನು ಪಾಲಿಸುವಲ್ಲಿ ಬಹುಮಾನವನ್ನು ಬಗಲಿಗೇರಿಸುವುದು ಸುಲಭ.
“ಸುಲಭವಾಗಿ ಸುತ್ತಿಕೊಳ್ಳುವ ಪಾಪ”
9, 10. (ಎ) “ಸುಲಭವಾಗಿ ಸುತ್ತಿಕೊಳ್ಳುವ ಪಾಪ” ಏನನ್ನು ಸೂಚಿಸುತ್ತದೆ? (ಬಿ) ಒಬ್ಬ ಕ್ರೈಸ್ತನು ತನ್ನ ನಂಬಿಕೆಯನ್ನು ಹೇಗೆ ಕಳೆದುಕೊಳ್ಳುತ್ತಾನೆ?
9 ನಾವು ಭಾರವನ್ನು ತೆಗೆದು ಹಾಕುವುದರೊಂದಿಗೆ ಬೇರೊಂದು ವಿಷಯವನ್ನೂ ಮಾಡಬೇಕೆಂದು ಪೌಲ ತಿಳಿಸಿದನು. “ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ ತೆಗೆದುಹಾಕಿ” ಎಂದು ಅವನು ಹೇಳಿದನು. “ಸುಲಭವಾಗಿ ಸುತ್ತಿಕೊಳ್ಳುವ” ಎಂದು ಭಾಷಾಂತರವಾಗಿರುವ ಗ್ರೀಕ್ ಪದ ಬೈಬಲಿನಲ್ಲಿ ಇದೊಂದೇ ವಚನದಲ್ಲಿ ಮಾತ್ರ ಕಂಡುಬರುತ್ತದೆ. ಪ್ರಾಚೀನ ಕಾಲದ ಓಟಗಾರರು ಪಂದ್ಯದಲ್ಲಿ ಭಾಗವಹಿಸುವಾಗ ತಮ್ಮ ಕಾಲಿಗೆ ಸುತ್ತಿಕೊಂಡು ಅಡಚಣೆಯೊಡ್ಡುವ ವಸ್ತ್ರಗಳನ್ನು ಧರಿಸುತ್ತಿರಲಿಲ್ಲ ಎಂದು ಆಲ್ಬರ್ಟ್ ಬಾರ್ನ್ಸ್ ಎಂಬ ಬೈಬಲ್ ಪಂಡಿತರು ತಿಳಿಸುತ್ತಾರೆ. ಮಾತ್ರವಲ್ಲ, ಕ್ರೈಸ್ತರು ಸಹ ಅದೇ ರೀತಿ ಮುಗ್ಗರಿಸುವಂತೆ ಮಾಡುವ ಸಕಲ ವಿಷಯಗಳಿಂದ ದೂರವಿರಬೇಕು ಎಂದವರು ಹೇಳುತ್ತಾರೆ. ಕ್ರೈಸ್ತರು ಎಚ್ಚರಿಕೆಯಿಂದ ಇರಬೇಕು. ಯಾವುದೇ ವಿಷಯ ನಮ್ಮನ್ನು ಸುತ್ತಿಕೊಂಡು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವಂತೆ ಅನುಮತಿಸಬಾರದು. ಒಬ್ಬ ಕ್ರೈಸ್ತನು ತನ್ನ ನಂಬಿಕೆಯನ್ನು ಕಳೆದುಕೊಳ್ಳುವುದಾದರೂ ಹೇಗೆ?
10 ಕ್ರೈಸ್ತನೊಬ್ಬನು ತನ್ನ ನಂಬಿಕೆಯನ್ನು ದಿನಬೆಳಗಾಗುವುದರೊಳಗೆ ಕಳೆದುಕೊಳ್ಳುವುದಿಲ್ಲ. ಕ್ರಮೇಣ ಕಳೆದುಕೊಳ್ಳುತ್ತಾನಷ್ಟೆ. ಕೆಲವೊಮ್ಮೆ ಅದರ ಅರಿವು ಸಹ ಅವನಿಗಿರುವುದಿಲ್ಲ. ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಪೌಲ ‘ನಂಬಿಕೆಯಿಂದ ದೂರ ತೇಲಿಹೋಗುವ’ ಮತ್ತು ‘ಅಪನಂಬಿಕೆಯುಳ್ಳ ಕೆಟ್ಟ ಹೃದಯವನ್ನು ಬೆಳೆಸಿಕೊಳ್ಳುವ’ ಅಪಾಯದ ಕುರಿತು ಎಚ್ಚರಿಸಿದ್ದನು. (ಇಬ್ರಿ. 2:1; 3:12) ಓಟಗಾರನ ಕಾಲಿಗೆ ಅವನ ವಸ್ತ್ರ ಸುತ್ತಿಕೊಳ್ಳುವುದಾದರೆ ಮುಗ್ಗರಿಸಿ ಬೀಳುವ ಸಂಭವ ಜಾಸ್ತಿ. ಪಂದ್ಯಕ್ಕಿಳಿಯುವಾಗ ಅಸಡ್ಡೆಯಿಂದ ಆ ರೀತಿಯ ವಸ್ತ್ರ ಧರಿಸಿದರಂತೂ ಅಪಾಯ ಖಂಡಿತ. ಈ ಅಪಾಯವನ್ನು ಒಬ್ಬನು ಅಸಡ್ಡೆ ಮಾಡುತ್ತಾನೆಂದರೆ ಅದಕ್ಕೆ ಕಾರಣ ಏನಾಗಿರಬಹುದು? ತಾತ್ಸಾರ ಮನೋಭಾವ ಅಥವಾ ಅತಿಯಾದ ಆತ್ಮವಿಶ್ವಾಸ ಇರಬಹುದು. ಇಲ್ಲವೆ ಯಾವುದಾದರೂ ವಿಷಯ ಅವನ ಗಮನವನ್ನು ಬೇರೆಡೆಗೆ ಸೆಳೆದಿರಬಹುದು. ಪೌಲನು ನೀಡಿದ ಬುದ್ಧಿವಾದದಿಂದ ನಾವು ಯಾವ ಪಾಠ ಕಲಿಯಬಹುದು ಎಂದು ನೋಡೋಣ.
11. ಯಾವ ವಿಷಯಗಳು ನಾವು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಬಲ್ಲವು?
11 ಒಬ್ಬನು ನಂಬಿಕೆಯನ್ನು ಕಳೆದುಕೊಂಡಿದ್ದಾನೆಂದರೆ, ಅದು ಜೀವನದಲ್ಲಿ ಅವನು ಮಾಡಿರುವ ಆಯ್ಕೆಗಳ ಪರಿಣಾಮವಾಗಿದೆ ಎನ್ನುವುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸುಲಭವಾಗಿ ಸುತ್ತಿಕೊಳ್ಳುವ ಪಾಪದ ಕುರಿತು ಇನ್ನೊಬ್ಬ ವಿದ್ವಾಂಸರು ವಿವರಣೆ ನೀಡಿದ್ದಾರೆ. ನಮ್ಮ ಸನ್ನಿವೇಶ, ಸಹವಾಸ ಮತ್ತು ದುರಿಚ್ಛೆಗಳು ನಮ್ಮ ಮೇಲೆ ಗಾಢ ಪರಿಣಾಮ ಬೀರುವವೆಂದು ಅವರು ಹೇಳಿದರು. ಈ ವಿಷಯಗಳು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸಬಲ್ಲವು ಇಲ್ಲವೆ ಸಾಯಿಸಿಬಿಡಬಲ್ಲವು.—ಮತ್ತಾ. 13:3-9.
12. ನಾವು ನಂಬಿಕೆ ಕಳೆದುಕೊಳ್ಳದೆ ಇರಬೇಕಾದರೆ ಯಾವ ಎಚ್ಚರಿಕೆಯನ್ನು ಸದಾ ಮನಸ್ಸಿನಲ್ಲಿಡಬೇಕು?
12 ನಾವು ನೋಡುವ, ಆಲಿಸುವ ವಿಷಯಗಳ ಬಗ್ಗೆ ಅಂದರೆ ನಮ್ಮ ಹೃದಮನಗಳು ಯಾವುದರಲ್ಲಿ ನೆಟ್ಟಿವೆ ಎನ್ನುವುದರ ಬಗ್ಗೆ ಸದಾ ಜಾಗ್ರತೆವಹಿಸುವಂತೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗ ಪದೇ ಪದೇ ಎಚ್ಚರಿಸುತ್ತಾ ಇದೆ. ಯಾವಾಗಲೂ ಹಣ ಅಂತಸ್ತೆಂದು ಯೋಚಿಸುತ್ತಾ ಇರುವುದರಲ್ಲಿನ ಅಪಾಯದ ಬಗ್ಗೆ ಸಹ ಎಚ್ಚರಿಸಿದೆ. ಮನರಂಜನಾ ಕ್ಷೇತ್ರದ ಥಳಕು ಪಳಕು ವಿಷಯಗಳಿಗೆ ಇಲ್ಲವೇ ಮಾರುಕಟ್ಟೆಗೆ ಬರುವ ನವನವೀನ ವಸ್ತುಗಳಿಗೆ ಮಾರುಹೋಗುವುದಾದರೆ ನಮ್ಮ ಓಟದ ದಿಕ್ಕು ಬದಲಾಗಿಬಿಡಬಹುದು. ಈ ಕುರಿತು ನಮಗೆ ನೀಡಲ್ಪಡುವ ಸಲಹೆ ಅತಿಯಾಯಿತು ಅಥವಾ ಅದು ನನಗಲ್ಲ ಬೇರೆಯವರಿಗೆ ಅನ್ವಯವಾಗುತ್ತದೆ, ನಾನೇನು ಅಂಥ ಅಪಾಯಗಳಿಗೆ ಬಲಿಯಾಗುವುದಿಲ್ಲ ಎಂದು ಭಾವಿಸುವುದಾದರೆ ನಿಜವಾಗಿಯೂ ನಾವು ತಪ್ಪುಮಾಡುತ್ತಿದ್ದೇವೆ. ಲೋಕದ ಆಶೆ, ಆಲೋಚನೆಗಳನ್ನು ಸೈತಾನ ನಯವಾಗಿ ಬಳಸಿ ನಮ್ಮ ಕಾಲಿಗೆ ಸುತ್ತಿಕೊಳ್ಳುವಂತೆ ಮಾಡುತ್ತಾನೆ. ನಾವು ಗುರಿಮುಟ್ಟುವುದು ಅವನಿಗೆ ಇಷ್ಟವಿಲ್ಲ. ತಾತ್ಸಾರ ಮನೋಭಾವ, ಅತಿಯಾದ ಆತ್ಮವಿಶ್ವಾಸ ಅಥವಾ ಗಮನಭಂಗವಾಗುವಂತೆ ಮಾಡುವ ಪ್ರಪಂಚದ ಸೆಳೆತಗಳಿಂದಾಗಿ ಕೆಲವರು ನಂಬಿಕೆ ಕಳೆದುಕೊಂಡಿದ್ದಾರೆ. ಆ ರೀತಿ ನಮಗೇನಾದರೂ ಆಗುವಲ್ಲಿ, ಸದಾಕಾಲ ಜೀವಿಸುವ ವರದಾನವೇ ನಮ್ಮ ಕೈತಪ್ಪಿ ಹೋಗುತ್ತದೆ.—1 ಯೋಹಾ. 2:15-17.
13. ಹಾನಿಕರ ಪ್ರಭಾವಕ್ಕೆ ತುತ್ತಾಗದಿರಲು ನಾವು ಏನು ಮಾಡಬೇಕು?
13 ಪ್ರತಿದಿನ, ಈ ಪ್ರಪಂಚದ ಜನರು ತಮ್ಮ ಆಲೋಚನೆ, ಆಕಾಂಕ್ಷೆ, ಗುರಿಗಳನ್ನೇ ನಮ್ಮ ತಲೆಯಲ್ಲೂ ತುರುಕಿಸಲು ಪ್ರಯತ್ನಿಸುತ್ತಾರೆ. ಅವರು ಬದುಕಿನಲ್ಲಿ ಯಾವುದಕ್ಕೆ ಮಹತ್ವ ನೀಡುತ್ತಾರೋ ಅದಕ್ಕೆ ನಾವೂ ಮಹತ್ವ ನೀಡಬೇಕು, ಅವರು ಮಾಡುವುದನ್ನೇ ನಾವೂ ಮಾಡಬೇಕು ಎಂದು ಭಾವಿಸುತ್ತಾರೆ. (ಎಫೆಸ 2:1, 2 ಓದಿ.) ಹಾಗಿದ್ದರೂ ಅವರ ಪ್ರಭಾವಕ್ಕೆ ಒಳಗಾಗುವುದು ಬಿಡುವುದು ನಮ್ಮ ಕೈಯಲ್ಲಿದೆ. ಮೇಲಿನ ವಚನದಲ್ಲಿ ಪೌಲ ತಿಳಿಸಿರುವ “ವಾಯುಮಂಡಲ” ಉಸಿರುಗಟ್ಟಿಸುವಂಥದ್ದು, ವಿಷಾನಿಲ ತುಂಬಿರುವಂಥದ್ದು. ಅದನ್ನು ಶ್ವಾಸಿಸದಂತೆ ನಾವು ಸದಾ ಜಾಗ್ರತೆವಹಿಸಿ ಓಟದಲ್ಲಿ ಸೋಲದಂತೆ ನೋಡಿಕೊಳ್ಳಬೇಕು. ಪಥದಿಂದ ಸ್ವಲ್ಪವೂ ಸರಿಯದೆ ಗುರಿಯತ್ತ ಓಡಲು ನಮಗೆ ಯಾವುದು ನೆರವಾಗುವುದು? ಯೇಸುವಿನ ಅನುಪಮ ಮಾದರಿಯಿಂದ ದೃಷ್ಟಿ ಕೀಳದಿರುವುದು. (ಇಬ್ರಿ. 12:2) ನಮಗೆ ಪೌಲನ ಮಾದರಿ ಸಹ ಇದೆ. ಅವನೊಬ್ಬ ಶ್ರೇಷ್ಠ ಓಟಗಾರನಾಗಿದ್ದನು ಮತ್ತು ತನ್ನನ್ನು ಅನುಕರಿಸುವಂತೆ ಕ್ರೈಸ್ತರನ್ನು ಹುರಿದುಂಬಿಸಿದನು.—1 ಕೊರಿಂ. 11:1; ಫಿಲಿ. 3:14.
“ಬಹುಮಾನವನ್ನು” ಪಡೆಯಬಹುದು—ಹೇಗೆ?
14. ಓಟವನ್ನು ಪೂರ್ಣಗೊಳಿಸುವುದು ಪೌಲನಿಗೆ ಎಷ್ಟು ಮುಖ್ಯವಾಗಿತ್ತು?
14 ಪೌಲನಿಗೆ ತನ್ನ ಓಟವನ್ನು ಪೂರ್ಣಗೊಳಿಸುವುದು ಎಷ್ಟು ಮುಖ್ಯವಾಗಿತ್ತು? ಎಫೆಸದ ಹಿರಿಯರೊಂದಿಗೆ ಅವನಾಡಿದ ಕೊನೆಯ ಮಾತುಗಳನ್ನು ಗಮನಿಸಿ: “ನಾನು ನನ್ನ ಪ್ರಾಣವನ್ನು ಯಾವುದೇ ರೀತಿಯಲ್ಲಿ ಅಮೂಲ್ಯವೆಂದು ಎಣಿಸುವುದಿಲ್ಲ; ನಾನು ನನ್ನ ಓಟವನ್ನೂ . . . ಕರ್ತನಾದ ಯೇಸುವಿನಿಂದ ನಾನು ಪಡೆದ ಶುಶ್ರೂಷೆಯನ್ನೂ ಪೂರ್ಣಗೊಳಿಸುವುದೇ ನನ್ನ ಅಪೇಕ್ಷೆ.” (ಅ. ಕಾ. 20:24.) ಓಟವನ್ನು ಪೂರ್ಣಗೊಳಿಸಲಿಕ್ಕಾಗಿ ಪೌಲ ಎಲ್ಲವನ್ನೂ, ತನ್ನ ಪ್ರಾಣವನ್ನು ಸಹ ತ್ಯಾಗಮಾಡಲು ಸಿದ್ಧನಿದ್ದನು. ಸುವಾರ್ತೆ ಸಾರಲು ಅವನು ಬಹಳ ಶ್ರಮ ಹಾಕಿದ್ದನು. ತಾನು ಓಟವನ್ನು ಅರ್ಧಕ್ಕೆ ನಿಲ್ಲಿಸುವುದಾದರೆ ತನ್ನ ಆ ಶ್ರಮವೆಲ್ಲ ವ್ಯರ್ಥ ಎಂದು ಅವನು ಹೇಳಿದನು. ತನಗೆ ಈಗಾಗಲೇ ಬಹುಮಾನ ದಕ್ಕಿದೆಯೆಂದು ಅವನು ಭಾವಿಸಲಿಲ್ಲ. ಓಟವನ್ನು ಪೂರ್ಣಗೊಳಿಸಲು ಸರ್ವ ಪ್ರಯತ್ನ ಮಾಡಿದನು. (ಫಿಲಿಪ್ಪಿ 3:12-14 ಓದಿ.) ಬದುಕಿನ ಕೊನೆಯಲ್ಲಷ್ಟೇ ಅವನು, “ನಾನು ಉತ್ತಮ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕೊನೆಗಾಣಿಸಿದ್ದೇನೆ, ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ” ಎಂದು ಹೇಳಿದನು.—2 ತಿಮೊ. 4:7.
15. ತನ್ನ ಜೊತೆ ಓಟಗಾರರಿಗೆ ಪೌಲನು ಏನೆಂದು ಪ್ರೋತ್ಸಾಹಿಸಿದನು?
15 ಪೌಲನಿಗೆ, ತನ್ನ ಕ್ರೈಸ್ತ ಸಹೋದರರು ಸಹ ತಮ್ಮ ಓಟದಲ್ಲಿ ಮುಗ್ಗರಿಸದೆ ಅದನ್ನು ಪೂರ್ಣಗೊಳಿಸಬೇಕೆಂಬ ಉತ್ಕಟ ಆಸೆಯಿತ್ತು. ಉದಾಹರಣೆಗೆ, ಜೀವದ ಬಹುಮಾನ ಪಡೆಯಲಿಕ್ಕಾಗಿ ಶ್ರಮಿಸುವಂತೆ ಫಿಲಿಪ್ಪಿಯಲ್ಲಿದ್ದ ಕ್ರೈಸ್ತರನ್ನು ಅವನು ಹುರಿದುಂಬಿಸಿದನು. ಅವರು “ಜೀವದ ವಾಕ್ಯವನ್ನು ಬಿಗಿಯಾಗಿ” ಹಿಡಿದುಕೊಳ್ಳಬೇಕಿತ್ತು. ಏಕೆಂಬ ಕಾರಣವನ್ನೂ ಅವನು ನೀಡಿದನು. “ನಾನು ಓಡಿದ್ದು ಅಥವಾ ಪ್ರಯಾಸಪಟ್ಟದ್ದು ವ್ಯರ್ಥವಾಗಲಿಲ್ಲ ಎಂದು ಕ್ರಿಸ್ತನ ದಿನದಲ್ಲಿ ಅತ್ಯಾನಂದಪಡಲು ನನಗೆ ಕಾರಣವಿರುವುದು” ಎಂದು ಪೌಲ ಹೇಳಿದನು. (ಫಿಲಿ. 2:16) ಅದೇ ರೀತಿ ಕೊರಿಂಥದವರನ್ನು ಪ್ರೋತ್ಸಾಹಿಸುತ್ತಾ, “ನೀವು ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ” ಎಂದು ಹೇಳಿದನು.—1 ಕೊರಿಂ. 9:24.
16. ನಾವೇಕೆ ಬಹುಮಾನವನ್ನು ಸದಾ ಮನಸ್ಸಿನಲ್ಲಿಡಬೇಕು?
16 ಮ್ಯಾರತನ್ನಂಥ ಸುದೀರ್ಘ ಓಟದಲ್ಲಿ ಮೊದಮೊದಲಿಗೆ ಮುಕ್ತಾಯ ಘಟ್ಟ ಕಾಣಿಸುವುದಿಲ್ಲ. ಹಾಗಿದ್ದರೂ ಓಟಗಾರರು ತಮ್ಮ ಮನಸ್ಸಿನಲ್ಲಿ ಗುರಿಯನ್ನು ಹಚ್ಚಹಸುರಾಗಿಟ್ಟು ಛಲದಿಂದ ಓಡುತ್ತಿರುತ್ತಾರೆ. ಮುಕ್ತಾಯ ಘಟ್ಟ ಹತ್ತಿರವಾದಂತೆ ಗುರಿಮುಟ್ಟುವ ಅವರ ತೀವ್ರಾಪೇಕ್ಷೆಯೂ ಹೆಚ್ಚುತ್ತದೆ. ಕ್ರೈಸ್ತ ಓಟ ಸಹ ಅದೇ ರೀತಿಯದ್ದಾಗಿದೆ. ಪಡೆಯಲಿರುವ ಬಹುಮಾನ ಸದಾ ನಮ್ಮ ಮನಸ್ಸಿನಲ್ಲಿರಬೇಕು. ಗುರಿಮುಟ್ಟಿ ಬಹುಮಾನ ಗೆಲ್ಲಲು ಇದು ನೆರವಾಗುವುದು.
17. ಬಹುಮಾನದ ಮೇಲೆ ದೃಷ್ಟಿನೆಡಲು ನಂಬಿಕೆ ಹೇಗೆ ಸಹಾಯಮಾಡುತ್ತದೆ?
17 “ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯೂ ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ” ಎಂದು ಪೌಲ ಬರೆದನು. (ಇಬ್ರಿ. 11:1) ಅಬ್ರಹಾಮ ಮತ್ತು ಸಾರ ಜೀವನದ ಸುಖಸವಲತ್ತುಗಳನ್ನು ಬಿಟ್ಟು “ದೇಶದಲ್ಲಿ ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ” ಆಗಿ ಬದುಕಿದರು. ಹಾಗೆ ಮಾಡಲು ಅವರಿಗೆ ಸಹಾಯಮಾಡಿದ್ದು ಯಾವುದು? ಅವರು “[ದೇವರ] ವಾಗ್ದಾನದ ನೆರವೇರಿಕೆಯನ್ನು . . . ದೂರದಿಂದಲೇ ನೋಡಿ ಸ್ವಾಗತಿಸಿದರು.” ಮೋಶೆ “ತಾತ್ಕಾಲಿಕ ಸುಖಾನುಭವ,” “ಈಜಿಪ್ಟ್ ದೇಶದ ನಿಕ್ಷೇಪ,” ಇವುಗಳನ್ನು ಮನಸಾರೆ ನಿರಾಕರಿಸಿದನು. ಆ ರೀತಿ ಮಾಡಲು ಅವನಿಗೆ ನಂಬಿಕೆ, ಬಲ ದೊರೆತದ್ದು ಹೇಗೆ? “ಅವನು ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು” ಎಂದು ಬೈಬಲ್ ತಿಳಿಸುತ್ತದೆ. (ಇಬ್ರಿ. 11:8-13, 24-26) ಪೌಲ ಇವರೆಲ್ಲರ ಬಗ್ಗೆ ವಿವರಣೆ ನೀಡಿದಾಗ “ನಂಬಿಕೆಯಿಂದಲೇ” ಎಂಬ ಪದವನ್ನು ಬಳಸಿದ್ದು ಸೂಕ್ತವಾಗಿದೆ. ಅವರಲ್ಲಿ ನಂಬಿಕೆ ಇದ್ದದರಿಂದಲೇ ತಮಗೆದುರಾದ ಕಷ್ಟಸಂಕಟಗಳ ಮೇಲೆ ದೃಷ್ಟಿಯಿಡದೆ ದೇವರು ನೀಡುತ್ತಿದ್ದ ನೆರವಿನ ಮೇಲೆ ಹಾಗೂ ಮುಂದೆ ನೀಡಲಿದ್ದ ಆಶೀರ್ವಾದಗಳ ಮೇಲೆ ದೃಷ್ಟಿನೆಟ್ಟಿದ್ದರು.
18. ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನು ಕಿತ್ತುಹಾಕಲು ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?
18 ಇಬ್ರಿಯ 11ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರ ಉದಾಹರಣೆಗಳ ಕುರಿತು ಧ್ಯಾನಿಸುವ ಮೂಲಕ ಹಾಗೂ ಅವರನ್ನು ಅನುಕರಿಸುವ ಮೂಲಕ ನಮ್ಮ ನಂಬಿಕೆಯನ್ನು ಹೆಚ್ಚಿಸಬಹುದು. ಮಾತ್ರವಲ್ಲ “ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ” ತೆಗೆದುಹಾಕಬಹುದು. (ಇಬ್ರಿ. 12:1) ಅಷ್ಟೇ ಅಲ್ಲ, ನಂಬಿಕೆಯನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಹೋದರ ಸಹೋದರಿಯರೊಂದಿಗೆ ಕೂಡಿಬರುವ ಮೂಲಕ ಪರಸ್ಪರ ಹಿತಚಿಂತನೆ ತೋರಿಸುವೆವು. ಹೀಗೆ “ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ.”—ಇಬ್ರಿ. 10:24.
19. ಮುಂದೆ ಸಿಗಲಿರುವ ಬಹುಮಾನದ ಮೇಲೆ ದೃಷ್ಟಿನೆಡುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ?
19 ಓಟದ ಮುಕ್ತಾಯ ಘಟ್ಟದಲ್ಲಿ ನಾವಿದ್ದೇವೆ. ಗುರಿ ನಮ್ಮ ಕಣ್ಣೆದುರೇ ಇದೆ. ನಾವು ಸಹ ಅಚಲ ನಂಬಿಕೆಯಿಂದ ಹಾಗೂ ಯೆಹೋವ ದೇವರ ನೆರವಿನಿಂದ “ಎಲ್ಲ ಭಾರವನ್ನೂ ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ” ತೆಗೆದುಹಾಕಲು ಸಾಧ್ಯವಿದೆ. ಹೌದು ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಬಲ್ಲೆವು. ಕೊನೆಯಲ್ಲಿ ಸಿಗುವುದು ಅಂತಿಂಥ ಬಹುಮಾನವಲ್ಲ, ನಮ್ಮ ಪ್ರೀತಿಯ ದೇವರಾದ ಯೆಹೋವನು ವಾಗ್ದಾನಿಸಿರುವ ನಿತ್ಯನಿರಂತರ ಆಶೀರ್ವಾದ!
[ಪಾದಟಿಪ್ಪಣಿ]
a ಪ್ರಾಚೀನ ಕಾಲದ ಯೆಹೂದಿಗಳಿಗೆ ಇದು ಆಘಾತದ ವಿಷಯವಾಗಿತ್ತು. 2ನೇ ಮಕ್ಕಬಿಯರು ಪುಸ್ತಕ ಹೇಳುವ ಪ್ರಕಾರ, ಧರ್ಮಭ್ರಷ್ಟ ಪ್ರಧಾನ ಯಾಜಕನಾಗಿದ್ದ ಯಾಸೋನನು ಗ್ರೀಕರ ವ್ಯಾಯಾಮ ಶಾಲೆಯಂಥ ಒಂದು ವ್ಯಾಯಾಮ ಶಾಲೆಯನ್ನು ಯೆರೂಸಲೇಮಿನಲ್ಲಿ ಕಟ್ಟುವ ಪ್ರಸ್ತಾಪವೆತ್ತಿದಾಗ ಹೆಚ್ಚಿನ ಯೆಹೂದಿಗಳು ವಿರೋಧ ವ್ಯಕ್ತಪಡಿಸಿದರು.—2 ಮಕ್ಕಬಿಯರು 4:7-17.
ನೆನಪಿದೆಯೇ?
• ಎಲ್ಲ ಭಾರವನ್ನು ಹೇಗೆ ತೆಗೆದುಹಾಕಬಲ್ಲಿರಿ?
• ಯಾವ ಕಾರಣದಿಂದ ಕ್ರೈಸ್ತನೊಬ್ಬನು ನಂಬಿಕೆಯನ್ನು ಕಳೆದುಕೊಳ್ಳಬಹುದು?
• ನಮ್ಮ ದೃಷ್ಟಿ ಬಹುಮಾನದ ಮೇಲೆ ನೆಟ್ಟಿರಬೇಕು ಏಕೆ?
[ಪುಟ 23ರಲ್ಲಿರುವ ಚಿತ್ರ]
“ಸುಲಭವಾಗಿ ಸುತ್ತಿಕೊಳ್ಳುವ ಪಾಪ” ಯಾವುದು? ಹೇಗೆ ನಮ್ಮನ್ನು ಸುತ್ತಿಕೊಳ್ಳುತ್ತದೆ?