ಫಿಲಿಪ್ಪಿಯವರಿಗೆ ಬರೆದ ಪತ್ರ
3 ಕೊನೇದಾಗಿ ನನ್ನ ಸಹೋದರರೇ, ಪ್ರಭುವಿನ ಶಿಷ್ಯರಾದ ನೀವು ಯಾವಾಗ್ಲೂ ಖುಷಿಯಾಗಿರಿ.+ ನಿಮಗೆ ಮೊದ್ಲು ಬರೆದಿದ್ದನ್ನೇ ಮತ್ತೆ ಬರೆಯೋಕೆ ನನಗೇನೂ ಕಷ್ಟ ಆಗಲ್ಲ. ನಿಮ್ಮ ಒಳ್ಳೇದಕ್ಕೇ* ಅದನ್ನ ಬರೀತಾ ಇದ್ದೀನಿ.
2 ನಾಯಿಗಳ ತರ ನಡ್ಕೊಳ್ಳೋ ಜನ್ರಿಂದ ಹುಷಾರಾಗಿರಿ. ಹಾನಿ ಮಾಡುವವ್ರ ಬಗ್ಗೆ ಎಚ್ಚರವಾಗಿರಿ. ಸುನ್ನತಿ ಮಾಡಿಸ್ಲೇಬೇಕಂತ* ಹೇಳುವವ್ರ ಬಗ್ಗೆ ಜಾಗ್ರತೆಯಿಂದ ಇರಿ.+ 3 ಯಾಕಂದ್ರೆ ನಾವು ಮಾಡ್ಕೊಂಡಿರೋದೇ ನಿಜವಾದ ಸುನ್ನತಿ.+ ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಾವು ದೇವರ ಸೇವೆ ಮಾಡ್ತಿದ್ದೀವಿ. ಕ್ರಿಸ್ತ ಯೇಸು ಮಾಡಿದ ವಿಷ್ಯಕ್ಕಾಗಿ ಹೆಮ್ಮೆ ಪಡ್ತೀವಿ.+ ಜನ್ರು ಭರವಸೆ ಇಡೋ ವಿಷ್ಯಗಳ ಮೇಲೆ ನಾವು ಭರವಸೆ ಇಟ್ಟಿಲ್ಲ. 4 ಅಂಥ ವಿಷ್ಯಗಳ ಮೇಲೆ ಭರವಸೆ ಇಡೋಕೆ ಬೇರೆಲ್ರಿಗಿಂತ ನನಗೆ ತುಂಬ ಕಾರಣ ಇದೆ.
ಹಾಗೆ ಭರವಸೆ ಇಡೋಕೆ ತನಗೂ ಕಾರಣ ಇದೆ ಅಂತ ಯಾರಾದ್ರೂ ನೆನಸಿದ್ರೆ ಅವನಿಗಿಂತ ಜಾಸ್ತಿ ಕಾರಣ ನನಗಿದೆ. 5 ಹುಟ್ಟಿ ಎಂಟ್ನೇ ದಿನಕ್ಕೆ ನನಗೆ ಸುನ್ನತಿ ಆಯ್ತು.+ ನಾನು ಇಸ್ರಾಯೇಲ್ ಜನಾಂಗಕ್ಕೆ ಸೇರಿದವನು. ಬೆನ್ಯಾಮೀನ್ ಕುಲದವನು. ಇಬ್ರಿಯರಿಗೆ ಹುಟ್ಟಿದ ಇಬ್ರಿಯ.+ ನಿಯಮ ಪುಸ್ತಕದ ಪ್ರಕಾರ ಒಬ್ಬ ಫರಿಸಾಯ.+ 6 ತುಂಬ ಹುರುಪು ಇದ್ದಿದ್ರಿಂದ ನಾನು ಸಭೆಗೆ ಹಿಂಸೆ ಕೊಟ್ಟೆ.+ ನಿಯಮ ಪುಸ್ತಕದ ಪ್ರಕಾರನೇ ನಡೆದು ನಾನು ತಪ್ಪಿಲ್ಲದವನು ಅಂತ ತೋರಿಸ್ಕೊಟ್ಟೆ. 7 ಆದ್ರೆ ಯಾವುದನ್ನ ನಾನು ತುಂಬ ಮುಖ್ಯ ಅಂತ ಅಂದ್ಕೊಂಡ್ನೋ ಅವೆಲ್ಲ ಈಗ ಕ್ರಿಸ್ತನಿಂದಾಗಿ ಪ್ರಯೋಜನಕ್ಕೆ ಬರಲ್ಲ ಅಂತ ಹೇಳ್ತೀನಿ.*+ 8 ಅಷ್ಟೇ ಅಲ್ಲ, ನನ್ನ ಪ್ರಭು ಕ್ರಿಸ್ತ ಯೇಸುವಿನ ಬಗ್ಗೆ ಇರೋ ಬೆಲೆಕಟ್ಟಲಾಗದ ಜ್ಞಾನದ ಮುಂದೆ ಆ ಎಲ್ಲ ವಿಷ್ಯಗಳು ಏನೇನೂ ಅಲ್ಲ ಅಂತ ನೆನಸ್ತೀನಿ. ಆತನಿಗಾಗಿ ನಾನು ಎಲ್ಲವನ್ನ ಬಿಟ್ಟುಬಿಟ್ಟೆ. ಅದನ್ನೆಲ್ಲ ಕಸದ ತರ ನೋಡ್ತೀನಿ. ಕ್ರಿಸ್ತನ ಮೆಚ್ಚುಗೆ ಪಡಿಯೋಕೆ 9 ಮತ್ತು ಆತನ ಜೊತೆ ಒಂದಾಗಿ ಇರೋಕೆ ಹಾಗೆ ನೆನಸ್ತೀನಿ. ನಿಯಮ ಪುಸ್ತಕ ಪಾಲಿಸಿದ್ರಿಂದ ನಾನು ನೀತಿವಂತ ಅಂತ ಹೇಳ್ತಿಲ್ಲ. ಬದಲಾಗಿ ಕ್ರಿಸ್ತನಲ್ಲಿ+ ನಂಬಿಕೆ ಇಟ್ಟಿದ್ರಿಂದ ದೇವರ ದೃಷ್ಟಿಯಲ್ಲಿ ನಾನು ನೀತಿವಂತನಾಗಿದ್ದೀನಿ.+ 10 ನನ್ನ ಗುರಿ ಏನಂದ್ರೆ ಕ್ರಿಸ್ತನ ಬಗ್ಗೆ, ಆತನು ಮತ್ತೆ ಜೀವ ಪಡ್ಕೊಂಡ ಶಕ್ತಿ ಬಗ್ಗೆ ತಿಳ್ಕೊಬೇಕು,+ ಕ್ರಿಸ್ತನ ತರ ಕಷ್ಟ ಅನುಭವಿಸಬೇಕು,+ ಆತನ ಹಾಗೆ ನಾನೂ ಸಾಯೋಕೆ ಸಿದ್ಧನಾಗಿ ಇರಬೇಕು,+ 11 ಮೊದ್ಲು ಜೀವ ಪಡ್ಕೊಳ್ಳುವವ್ರಲ್ಲಿ ನಾನೂ ಹೇಗಾದ್ರೂ ಇರಬೇಕು ಅನ್ನೋದೇ.+
12 ನಾನು ಇನ್ನೂ ಆ ಬಹುಮಾನ ಪಡಿದಿಲ್ಲ, ಪರಿಪೂರ್ಣನಾಗ್ಲೂ ಇಲ್ಲ. ಆದ್ರೆ ಯಾವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನ ಆರಿಸ್ಕೊಂಡಿದ್ದಾನೋ ಅದನ್ನ ಪೂರ್ತಿಯಾಗಿ ಮಾಡೋಕೆ+ ನನ್ನಿಂದ ಆಗೋದನ್ನೆಲ್ಲ ಮಾಡ್ತಿದ್ದೀನಿ.+ 13 ಸಹೋದರರೇ, ನನಗೆ ಆ ಬಹುಮಾನ ಈಗಾಗ್ಲೇ ಸಿಕ್ಕಿದೆ ಅಂತ ನೆನಸ್ತಿಲ್ಲ. ಆದ್ರೆ ಒಂದು ಮಾತ್ರ ನಿಜ, ನಾನು ಹಿಂದಿನದ್ದನ್ನ ಮರೆತು+ ನನ್ನ ಮುಂದೆ ಇಟ್ಟಿರೋ ವಿಷ್ಯಗಳನ್ನ ಹಿಡಿಯೋಕೆ ಓಡ್ತಿದ್ದೀನಿ.+ 14 ಆ ಬಹುಮಾನ ಪಡಿಯೋಕೆ ನಾನು ತುಂಬ ಶ್ರಮ ಹಾಕ್ತಿದ್ದೀನಿ.+ ದೇವರು ಕ್ರಿಸ್ತ ಯೇಸುವಿನ ಮೂಲಕ ಕರೆದವ್ರಿಗೆ ಕೊಡೋ ಸ್ವರ್ಗದ ಜೀವನನೇ+ ಆ ಬಹುಮಾನ. 15 ನಮ್ಮಲ್ಲಿ ಚೆನ್ನಾಗಿ ಯೋಚ್ನೆ ಮಾಡುವವ್ರಿಗೆಲ್ಲ+ ಇದೇ ಮನೋಭಾವ ಇರಬೇಕು. ಬೇರೆ ಮನೋಭಾವ ಇದ್ರೆ ಸರಿಯಾದ ಮನೋಭಾವ ಯಾವುದು ಅಂತ ದೇವರು ನಿಮಗೆ ತಿಳಿಸ್ತಾನೆ. 16 ಆದ್ರೂ ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.
17 ಸಹೋದರರೇ, ನೀವೆಲ್ಲ ನನ್ನನ್ನ ಅನುಕರಿಸೋಕೆ ಪ್ರಯತ್ನಿಸಿ.+ ನಾವು ನಿಮಗಾಗಿ ಇಟ್ಟ ಮಾದರಿಯನ್ನ ಯಾರೆಲ್ಲ ಅನುಕರಿಸ್ತಿದ್ದಾರೋ ಅವ್ರಿಗೆ ಗಮನಕೊಡಿ. 18 ಕ್ರಿಸ್ತನು ಹಿಂಸಾ ಕಂಬದ* ಮೇಲೆ ಸತ್ತದ್ದನ್ನ ಕೀಳಾಗಿ ನೋಡುವವರು* ತುಂಬ ಜನ ಇದ್ದಾರೆ. ಅವ್ರ ಬಗ್ಗೆ ತುಂಬ ಸಲ ಹೇಳಿದ್ನಲ್ಲಾ, ಆದ್ರೆ ಈಗ ಅಳ್ತಾ ಹೇಳ್ತೀನಿ ಕೇಳಿ: 19 ನಾಶನೇ ಅವ್ರ ಕೊನೆ. ದೇಹದ ಆಸೆನೇ* ಅವ್ರ ದೇವರು. ನಾಚಿಕೆಗೆಟ್ಟ ಕೆಲಸ ಮಾಡೋದೇ ಅವ್ರಿಗೆ ಹೆಮ್ಮೆ. ಲೋಕದ ವಿಷ್ಯಗಳೇ ಅವ್ರ ತಲೆಯಲ್ಲಿ ತುಂಬಿದೆ.+ 20 ಆದ್ರೆ ನಾವು ಸ್ವರ್ಗದ+ ಪ್ರಜೆಗಳು.+ ಸ್ವರ್ಗದಲ್ಲಿರೋ ನಮ್ಮ ರಕ್ಷಕನಾದ ಪ್ರಭು ಯೇಸು ಕ್ರಿಸ್ತನಿಗಾಗಿ ನಾವು ಕುತೂಹಲದಿಂದ ಕಾಯ್ತಾ ಇದ್ದೀವಿ.+ 21 ಆತನು ನಮ್ಮ ದುರ್ಬಲ ದೇಹವನ್ನ ಮಹಾ ಶಕ್ತಿಯಿಂದ ತುಂಬಿಸಿ ಮಹಿಮೆ ಇರೋ ತನ್ನ ದೇಹದ ತರ ಬದಲಾಯಿಸ್ತಾನೆ.+ ಅದೇ ಶಕ್ತಿಯಿಂದ ಎಲ್ಲವನ್ನ ತನ್ನ ನಿಯಂತ್ರಣಕ್ಕೆ ತರ್ತಾನೆ.+