ವಾಕ್ಯದ ಪ್ರಕಾರ ನಡಿಯುವವರಾಗಿರಿ, ಅದನ್ನು ಕೇಳುವವರು ಮಾತ್ರವೇ ಅಲ್ಲ
“ನನ್ನನ್ನು ಸ್ವಾಮೀ, ಸ್ವಾಮೀ, ಅನ್ನುವವರೆಲ್ಲರು ಪರಲೋಕ ರಾಜ್ಯವನ್ನು ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕ ರಾಜ್ಯಕ್ಕೆ ಸೇರುವನು.”—ಮತ್ತಾಯ 7:21.
1. ಯೇಸುವಿನ ಹಿಂಬಾಲಕರು ಏನು ಮಾಡುವುದನ್ನು ಮುಂದುವರಿಸುತ್ತಾ ಇರಬೇಕು?
ಬೇಡಿಕೊಳ್ಳುತ್ತಾ ಇರ್ರಿ. ಹುಡುಕುತ್ತಾ ಇರ್ರಿ. ತಟ್ಟುತ್ತಾ ಇರ್ರಿ. ಎಡೆಬಿಡದೆ ಪ್ರಾರ್ಥಿಸುತ್ತಾ, ಅಧ್ಯಯನ ಮಾಡುತ್ತಾ, ಪರ್ವತ ಪ್ರಸಂಗದಲ್ಲಿ ದಾಖಲೆಯಾದ ಯೇಸುವಿನ ಹೇಳಿಕೆಗಳನ್ನು ನಡಿಸುತ್ತಾ ಇರ್ರಿ. ನೀವು ಭೂಮಿಗೆ ಉಪ್ಪಾಗಿದ್ದೀರಿ ಎಂದು ಯೇಸು ತನ್ನ ಹಿಂಬಾಲಕರಿಗೆ ಹೇಳುತ್ತಾನೆ, ಉಪ್ಪಿನಿಂದ ಕೂಡಿದ ಜೀವರಕ್ಷಕ ಸಂದೇಶವನ್ನು ಅವರು ಸಪ್ಪೆಯಾಗುವಂತೆ ಬಿಡಬಾರದು, ಅದು ತನ್ನ ರುಚಿಯನ್ನು ಅಥವಾ ರಕ್ಷಕಶಕ್ತಿಯನ್ನು ಕಳಕೊಳ್ಳುವಂತೆ ಬಿಡಬಾರದು. ಅವರು ಲೋಕಕ್ಕೆ ಬೆಳಕಾಗಿದ್ದಾರೆ, ತಾವು ಹೇಳುವವರು ಮಾತ್ರವೇ ಅಲ್ಲ ಮಾಡುವವರೂ ಆಗಿರುವ ಮಾಲಕ ಯೆಹೋವ ದೇವರ ಮತ್ತು ಯೇಸುಕ್ರಿಸ್ತನ ಬೆಳಕನ್ನು ಅವರು ಪ್ರತಿಬಿಂಬಿಸುತ್ತಾರೆ. ಅವರ ಜ್ಞಾನೋದಯದ ಮಾತುಗಳು ಹೇಗೋ ಹಾಗೆ ಅವರ ಸತ್ಕಾರ್ಯಗಳು ಸಹಾ ಪ್ರಕಾಶಿಸುತ್ತವೆ—ಮತ್ತು ಬಹಳಷ್ಟನ್ನು ನುಡಿಯುವ ಆದರೆ ಕೊಂಚವನ್ನೇ ನಡಿಸುವ ಧಾರ್ಮಿಕ ಮತ್ತು ರಾಜಕೀಯ ಮಖಂಡರ ಡಾಂಭಿಕ ಕಪಟತನಕ್ಕೆ ರೂಢಿಯಾಗಿರುವ ಈ ಲೋಕದಲ್ಲಿ, ಅವರ ಸತ್ಕಾರ್ಯಗಳು ಇನ್ನಷ್ಟು ಗಟ್ಟಿಯಾಗಿ ಕೇಳಿಬರಲೂ ಬಹುದು.—ಮತ್ತಾಯ 5:13-16.
2. ಯಾಕೋಬನು ಯಾವ ಬುದ್ಧಿವಾದವನ್ನು ಕೊಟ್ಟನು, ಆದರೆ ಕೆಲವರು ತಪ್ಪಾಗಿ ಯಾವ ಆರಾಮದ ನಿಲುವನ್ನು ತಕ್ಕೊಳ್ಳುತ್ತಾರೆ?
2 ಯಾಕೋಬನು ಬುದ್ಧಿಹೇಳಿದ್ದು: “ವಾಕ್ಯದ ಪ್ರಕಾರ ನಡಿಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ.” (ಯಾಕೋಬ 1:22) ‘ಒಮ್ಮೆ ರಕ್ಷಣೆಯಾದರೆ ಯಾವಾಗಲೂ ರಕ್ಷಣೆ’ ಎಂಬ ಬೋಧನೆಯಿಂದ ಅನೇಕರು ತಮ್ಮನ್ನು ಮೋಸಗೊಳಿಸುತ್ತಾರೆ, ತಾವೀಗ ನಿವೃತ್ತರಾಗಿ ಅಪೇಕ್ಷಿತ ಸ್ವರ್ಗೀಯ ಬಹುಮಾನಕ್ಕಾಗಿ ಕಾಯಬಹುದೋ ಎಂಬಂತೆ. ಅದು ಒಂದು ಸುಳ್ಳು ಬೋಧನೆ ಮತ್ತು ಟೊಳ್ಳಾದ ನಿರೀಕ್ಷೆ. “ಕಡೇವರೆಗೆ ತಾಳುವವನು, ಯೇಸುವಂದದ್ದು, “ರಕ್ಷಣೆ ಹೊಂದುವನು.” (ಮತ್ತಾಯ 24:13) ನಿತ್ಯಜೀವವನ್ನು ಪಡೆಯಬೇಕಾದರೆ, “ಸಾಯುವ ತನಕವೂ ನಂಬಿಗಸ್ತ”ರಾಗಿರಲೇ ಬೇಕು.—ಪ್ರಕಟನೆ 2:10; ಇಬ್ರಿಯ 6:4-6; 10:26, 27.
3. ಪರ್ವತ ಪ್ರಸಂಗದಲ್ಲಿ ಯೇಸು ತೀರ್ಪು ಮಾಡುವ ವಿಷಯವಾಗಿ ಅನಂತರ ಯಾವ ಉಪದೇಶಕೊಟ್ಟನು?
3 ಯೇಸು ತನ್ನ ಪರ್ವತ ಪ್ರಸಂಗವನ್ನು ಮುಂದರಿಸಿದಷ್ಟಕ್ಕೆ, ಕ್ರೈಸ್ತರು ಪ್ರಯಾಸಪಟ್ಟು ಪಾಲಿಸಬೇಕಾಗಿದ್ದ ಹೇಳಿಕೆಗಳು ಹೆಚ್ಚುತ್ತಾ ಹೋದವು. ಅತಿ ಸುಲಭವೆಂದು ಕಾಣುವ ಒಂದು ಹೇಳಿಕೆ ಇಲ್ಲಿದೆ, ಆದರೆ ಅದು ತೆಗೆದು ಹಾಕಲು ಅತ್ಯಂತ ಕಷ್ಟವಾದ ಒಂದು ಸ್ವಭಾವವನ್ನು ಖಂಡಿಸುತ್ತದೆ. “ತೀರ್ಪು ಮಾಡಬೇಡಿರಿ; ಆಗ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡಿದ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು. ನೀವು ಅಳೆಯುವ ಅಳತೆಯಿಂದಲೇ ನಿಮಗೆ ಅಳೆಯುವರು. ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದು ಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.”—ಮತ್ತಾಯ 7:1-5.
4. ಲೂಕನ ದಾಖಲೆಯು ಯಾವ ಅಧಿಕ ಉಪದೇಶವನ್ನು ಕೊಟ್ಟಿದೆ, ಮತ್ತು ಅದರ ಅನ್ವಯದ ಫಲಿತಾಂಶವು ಏನು?
4 ಪರ್ವತ ಪ್ರಸಂಗದ ಲೂಕನ ದಾಖಲೆಯಲ್ಲಿ, ಇತರರಲ್ಲಿ ತಪ್ಪನ್ನು ಹುಡುಕಲು ಪ್ರಯತ್ನಿಸಬಾರದೆಂದು ಯೇಸು ತನ್ನನ್ನು ಆಲೈಸುತ್ತಿದ್ದವರಿಗೆ ಹೇಳಿದನು. ಬದಲಾಗಿ, “ಬಿಡಿಸುತ್ತಾ” ಇರಬೇಕಿತ್ತು, ಅಂದರೆ ತಮ್ಮ ನೆರೆಯವರ ಕುಂದುಕೊರತೆಗಳನ್ನು ಅವರು ಕ್ಷಮಿಸುತ್ತಾ ಇರಬೇಕಿತ್ತು. ಇದು ಯೇಸುವಂದಂತೆ, ಬೇರೆಯವರನ್ನು ಸಹಾ ಅಂಥಾದ್ದೇ ಪ್ರತಿಕ್ರಿಯೆಯನ್ನು ತೋರಿಸುವಂತೆ ನಡಿಸುವದು: “ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು, ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.”—ಲೂಕ 6:37, 38.
5. ನಮ್ಮಲ್ಲಿರುವ ತಪ್ಪುಗಳಿಗಿಂತ ಇತರರ ತಪ್ಪುಗಳನ್ನು ಕಾಣುವದು ನಮಗೆ ಅಷ್ಟು ಸುಲಭವೇಕೆ?
5 ಸಾ.ಶ.ಒಂದನೆಯ ಶತಮಾನದಲ್ಲಿ, ಬಾಯಿಮಾತಿನ ಸಂಪ್ರದಾಯಗಳ ಕಾರಣ, ಸಾಮಾನ್ಯವಾಗಿ ಫರಿಸಾಯರು ಇತರರನ್ನು ಕಟುವಾಗಿ ತೀರ್ಪು ಮಾಡುತ್ತಿದ್ದರು. ಯೇಸುವಿಗೆ ಕಿವಿಗೊಡುತ್ತಿದ್ದ ಯಾವನಿಗಾದರೂ ಆ ಹವ್ಯಾಸವು ಇದ್ದಲ್ಲಿ, ಅದನ್ನು ನಿಲ್ಲಿಸಬೇಕಿತ್ತು. ನಮ್ಮ ಕಣ್ಣಲ್ಲಿರುವ ತೊಲೆಗಿಂತ ಇತರರ ಕಣ್ಣಲ್ಲಿರುವ ರವೆಯನ್ನು ಕಾಣುವದೆಷ್ಟೋ ಸುಲಭ—ಮತ್ತು ನಮ್ಮ ಸ್ವಪ್ರತಿಷ್ಠೆಗೆ ಬಹಳಷ್ಟು ಹೆಚ್ಚಳ! ಒಬ್ಬ ಮನುಷ್ಯನು ಹೇಳಿದಂತೆ, “ಇತರರನ್ನು ಠೀಕಿಸುವದು ನನಗೆ ಬಲು ಇಷ್ಟ ಯಾಕೆಂದರೆ ಆಗ ನನಗೆಷ್ಟೊ ಹಾಯೆನಿಸುತ್ತದೆ.” ಇತರರನ್ನು ಖಂಡಿಸುವ ಹವ್ಯಾಸವು, ನಾವು ಅಡಗಿಸ ಬಯಸುವ ನಮ್ಮ ಸ್ವಂತ ತಪ್ಪುಗಳಿಗಾಗಿ ಸಮಕಾರಕವೆಂದು ತೋರುವ ಶ್ರೇಷ್ಟತೆಯನ್ನು ನಮಗೆ ಕೊಡಬಹುದು. ಆದರೆ ತಿದ್ದುಪಾಟಿನ ಅವಶ್ಯವಿದ್ದರೆ, ಅದನ್ನು ದೀನಭಾವದಿಂದ ಕೊಡಬೇಕು. ತಿದ್ದುಪಾಟನ್ನು ಕೊಡುವವನು ಸದಾ ತನ್ನ ಸ್ವಂತ ಕುಂದುಕೊರತೆಗಳ ಪ್ರಜ್ಞೆಯುಳ್ಳವನಾಗಿರಬೇಕು.—ಗಲಾತ್ಯ 6:1.
ತೀರ್ಪು ಮಾಡುವ ಮುಂಚೆ, ತಿಳುಕೊಳ್ಳ ಪ್ರಯತ್ನಿಸಿರಿ
6. ನಮ್ಮ ತೀರ್ಪುಗಳು, ಅವಶ್ಯವಿದ್ದಾಗ, ಯಾವದರ ಆಧಾರದಲ್ಲಿ ನೀಡಲ್ಪಡಬೇಕು, ಮತ್ತು ಕಟು ಠೀಕೆಯನ್ನು ಮಾಡದಂತೆ ನಾವು ಯಾವುದರ ಸಹಾಯವನ್ನು ಕೋರಬೇಕು?
6 ಯೇಸು ಲೋಕಕ್ಕೆ ತೀರ್ಪು ಮಾಡಲು ಬರಲಿಲ್ಲ, ರಕ್ಷಿಸಲು ಬಂದನು. ಆತನು ಮಾಡಿದ ಯಾವ ತೀರ್ಪಾದರೂ ಅವನ ಸ್ವಂತದಲ್ಲ, ದೇವರು ಅವನಿಗೆ ಮಾತಾಡಲು ಕೊಟ್ಟ ವಾಕ್ಯದ ಮೇಲೆಯೇ ಅದು ಆಧರಿಸಿತ್ತು. (ಯೋಹಾನ 12:47-50) ನಾವು ಮಾಡುವ ಯಾವದೇ ತೀರ್ಪು ಸಹಾ ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿರಬೇಕು. ತೀರ್ಪುಗಾರರಾಗಿ ವರ್ತಿಸುವ ಮಾನುಷ ಸ್ವಭಾವವನ್ನು ನಾವು ತೊಡೆದು ಹಾಕಬೇಕು. ಹಾಗೆ ಮಾಡುವಂತೆ ನಾವು ಯೆಹೋವನ ಸಹಾಯಕ್ಕಾಗಿ ಎಡೆಬಿಡದೆ ಪ್ರಾರ್ಥಿಸಬೇಕು. “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು. ತಟ್ಟಿರಿ, ನಿಮಗೆ ತೆರೆಯುವದು. ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು.” (ಮತ್ತಾಯ 7:7, 8) ಯೇಸು ಕೂಡ ಅಂದದ್ದು: “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯ ತೀರಿಸುತ್ತೇನೆ. ಮತ್ತು ನನ್ನ ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.”—ಯೋಹಾನ 5:30.
7. ಸುವರ್ಣ ನಿಯಮವನ್ನು ಅನ್ವಯಿಸುವುದರಲ್ಲಿ ಸಹಾಯಕ್ಕಾಗಿ ಯಾವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು?
7 ಜನರಿಗೆ ತೀರ್ಪು ಮಾಡುವ ಹವ್ಯಾಸವನ್ನಲ್ಲ, ನಮ್ಮನ್ನು ಅವರ ಸ್ಥಳದಲ್ಲಿ ಹಾಕುವ ಮೂಲಕ ಅವರನ್ನು ತಿಳುಕೊಳ್ಳಲು ಪ್ರಯತ್ನಿಸುವ ಗುಣವನ್ನು ನಾವು ಬೆಳಿಸಿಕೊಳ್ಳಬೇಕು—ಇದೇನೂ ಸುಲಭವಲ್ಲ, ಆದರೆ ಯೇಸು ಅನಂತರ ತಿಳಿಸಿದ ಸುವರ್ಣ ನಿಯಮವನ್ನು ನಾವು ಪಾಲಿಸುವವರಾದರೆ, ಹಾಗೆ ಮಾಡುವದು ಆವಶ್ಯಕ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತಾರೋ ಅದನ್ನೇ ನೀವು ಅವರಿಗೆ ಮಾಡಿರಿ. ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.” (ಮತ್ತಾಯ 7:12) ಆದ್ದರಿಂದ ಯೇಸುವಿನ ಹಿಂಬಾಲಕರು ಇತರರ ಮಾನಸಿಕ, ಭಾವನಾತ್ಮಕ ಮತ್ತು ಆತ್ಮಿಕ ಸ್ಥಿತಿಗತಿಯ ಕುರಿತು ಸೂಕ್ಷವೇದನೆ ಮತ್ತು ವಿವೇಚನೆಯುಳ್ಳವರಾಗಬೇಕು. ಇತರರ ಅಗತ್ಯತೆಗಳನ್ನು ಗ್ರಹಿಸುವವರೂ ತಿಳುಕೊಂಡವರೂ ಆಗಿದ್ದು, ಅವರಿಗೆ ಸಹಾಯ ಮಾಡುವದರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಬೇಕು. (ಫಿಲಿಪ್ಪಿ 2:2-4) ವರ್ಷಗಳ ನಂತರ ಪೌಲನು ಬರೆದದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬದರಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಕವಾಗಿದೆ.”—ಗಲಾತ್ಯ 5:14.
8. ಯಾವ ಎರಡು ದಾರಿಗಳನ್ನು ಯೇಸು ಚರ್ಚಿಸಿದ್ದನು, ಮತ್ತು ಅದರಲ್ಲೊಂದನ್ನು ಬಹುಸಂಖ್ಯಾತ ಜನರು ಆರಿಸಿಕೊಳ್ಳುವದೇಕೆ?
8 “ಇಕ್ಕಟ್ಟಾದ ಬಾಗಲಿಂದ ಒಳಗೆ ಹೋಗಿರಿ” ಎನ್ನುತ್ತಾನೆ ಯೇಸು ಅನಂತರ, “ಯಾಕಂದರೆ ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹುಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಆ ದಿನಗಳಲ್ಲಿ ಅನೇಕರು ನಾಶನಕ್ಕೆ ಹೋಗುವ ಮಾರ್ಗವನ್ನು ಆರಿಸಿಕೊಂಡರು ಮತ್ತು ಅನೇಕರು ಇನ್ನೂ ಆರಿಸಿಕೊಳ್ಳುತ್ತಾರೆ. ಅಗಲವಾದ ದಾರಿಯು ಜನರಿಗೆ ತಮ್ಮಿಷ್ಟದ ಪ್ರಕಾರ ಯೋಚಿಸುವಂತೆ ಮತ್ತು ತಮ್ಮಿಷ್ಟದ ಪ್ರಕಾರ ಜೀವಿಸುವಂತೆ ಅನುಮತಿ ಕೊಡುತ್ತದೆ. ಯಾವ ನಿಯಮಗಳೂ ಇಲ್ಲ, ಯಾವ ಕಟ್ಟುಪಾಡುಗಳಿಲ್ಲ, ಆರಾಮದ ಜೀವನ-ಶೈಲಿ, ಪ್ರತಿಯೊಂದೂ ನಿರಾಯಾಸಕರ. “ಇಕ್ಕಟ್ಟಾದ ಬಾಗಲಿನಿಂದ ಒಳಗೆ ಹೋಗಲು ಹೆಣಗಾಡುವದು” ಇದು ಯಾವುದೂ ಅವರಿಗೆ ಬೇಡ.—ಲೂಕ 13:24.
9. ಇಕ್ಕಟ್ಟಾದ ದಾರಿಯಲ್ಲಿ ಹೋಗುವದಕ್ಕೆ ಏನು ಅವಶ್ಯವಿದೆ ಮತ್ತು ಅದರಲ್ಲಿ ನಡಿಯುವವರಿಗೆ ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟಿದ್ದಾನೆ?
9 ಆದರೆ ನಿತ್ಯಜೀವದ ಕಡೆಗೆ ತೆರೆಯುವಂಥ ದಾರಿಯು ಇಕ್ಕಟ್ಟಾದ ದಾರಿ ಮಾತ್ರ. ಆತ್ಮ ಸಂಯಮದ ಅವಶ್ಯವಿರುವ ಮಾರ್ಗವು ಅದು. ನಿಮ್ಮ ಹೇತುಗಳನ್ನು ಪರಿಶೋಧಿಸುವ ಶಿಸ್ತನ್ನು ಅದು ಅವಶ್ಯಪಡಿಸೀತು ಮತ್ತು ನಿಮ್ಮ ಸಮರ್ಪಣೆಯ ಉತ್ಸಾಹವನ್ನು ಪರೀಕ್ಷಿಸೀತು. ಹಿಂಸೆಗಳು ಬರುವಾಗ, ದಾರಿಯು ಕಷ್ಟಕರವಾಗುತ್ತದೆ ಮತ್ತು ತಾಳ್ಮೆಯು ಅಗತ್ಯ. ಈ ದಾರಿಯಲ್ಲಿ ನಡೆಯುವರಿಗೆ ಯೇಸು ಎಚ್ಚರಿಕೆ ನೀಡಿದ್ದು: “ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀ ವೇಶ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.” (ಮತ್ತಾಯ 7:15) ಈ ವರ್ಣನೆಯು ಫರಿಸಾಯರನ್ನು ಸರಿಯಾಗಿ ಒಪ್ಪುತ್ತಿತ್ತು. (ಮತ್ತಾಯ 23:27, 28) ಅವರು “ಮೋಶೆಯ ಪೀಠದಲ್ಲಿ ಕೂತುಕೊಳ್ಳುತ್ತಾ” ದೇವರ ಪರವಾಗಿ ಮಾತಾಡುವವರೆಂದು ವಾದಿಸಿದರೂ, ಅನುಸರಿಸಿದ್ದು ಮನುಷ್ಯರ ಸಂಪ್ರದಾಯಗಳನ್ನು ಮಾತ್ರವೆ.—ಮತ್ತಾಯ 23:2.
ಫರಿಸಾಯರು “ಪರಲೋಕ ರಾಜ್ಯದ ಬಾಗಲನ್ನು ಮುಚ್ಚಿದ” ವಿಧ
10. ಯಾವ ವಿಶಿಷ್ಟ ವಿಧಾನದಲ್ಲಿ ಶಾಸ್ತ್ರಿಗಳು ಮತ್ತು ಫರಿಸಾಯರು ‘ಪರಲೋಕರಾಜ್ಯದ ಬಾಗಲನ್ನು ಜನರ ಎದುರಿಗೆ ಮುಚ್ಚಿ’ ಬಿಟ್ಟಿದ್ದರು?
10 ಅದಲ್ಲದೆ ಯೆಹೂದಿ ವೈದಿಕರು, ಇಕ್ಕಟ್ಟಾದ ಬಾಗಲಿಂದ ಒಳಗೆ ಹೋಗಲು ಹುಡುಕುವವರನ್ನು ತಡೆಯಲೂ ಪ್ರಯತ್ನಿಸುತ್ತಿದ್ದರು. “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕ ರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ. ನೀವಂತೂ ಒಳಗೆ ಹೋಗುವದಿಲ್ಲ, ಒಳಕ್ಕೆ ಹೋಗಬೇಕೆಂದಿರುವವರನ್ನೂ ಹೋಗಗೊಡಿಸುವದಿಲ್ಲ.” (ಮತ್ತಾಯ 23:13) ಫರಿಸಾಯರ ವಿಧಾನವು ಯೇಸು ಎಚ್ಚರಿಸಿದ್ದ ಪ್ರಕಾರವೇ ಇತ್ತು. ಅವರು “ಮನುಷ್ಯಕುಮಾರನ ನಿಮಿತ್ತವಾಗಿ [ಆತನ ಶಿಷ್ಯರ] ಹೆಸರನ್ನು ಕೆಟ್ಟದೆಂದು ತೆಗೆದು ಹಾಕುತ್ತಿದ್ದರು.” (ಲೂಕ 6:22) ಹುಟ್ಟು ಕುರುಡನಾಗಿದ್ದ ಮತ್ತು ಯೇಸುವಿನಿಂದ ವಾಸಿಮಾಡಲ್ಪಟ್ಟ ಒಬ್ಬ ಮನುಷ್ಯನು ಯೇಸುವನ್ನು ಮೆಸ್ಸೀಯನೆಂದು ನಂಬಿದ ಕಾರಣ, ಸಭಾಮಂದಿರದಿಂದ ಅವನನ್ನು ಅವರು ಬಹಿಷ್ಕರಿಸಿದರು. ಅವನ ಹೆತ್ತವರು ಸಹ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ ಯಾಕಂದರೆ ತಮಗೆ ಸಭಾಮಂದಿರದಿಂದ ಬಹಿಷ್ಕಾರವಾದೀತೆಂದು ಅವರು ಹೆದರಿದ್ದರು. ಅದೇ ಕಾರಣಕ್ಕಾಗಿ, ಯೇಸುವನ್ನು ಮೆಸ್ಸೀಯನೆಂದು ನಂಬಿದ ಬೇರೆಯವರು ಕೂಡಾ ಅದನ್ನು ಬಹಿರಂಗವಾಗಿ ಅರಿಕೆಮಾಡಲು ಅಂಜಿದ್ದರು.—ಯೋಹಾನ 9:22, 34; 12:42; 16:2.
11. ಕ್ರೈಸ್ತ ಪ್ರಪಂಚದ ವೈದಿಕರು ಯಾವ ಗುರುತಿಸುವ ಫಲವನ್ನು ಉತ್ಪಾದಿಸುತ್ತಾರೆ?
11 “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ” ಎಂದನು ಯೇಸು. “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು.” (ಮತ್ತಾಯ 7:16-20) ಅದೇ ಸೂತ್ರವು ಇಂದು ಕೂಡ ಅನ್ವಯಿಸುತ್ತದೆ. ಕ್ರೈಸ್ತ ಪ್ರಪಂಚದ ಅನೇಕ ವೈದಿಕರು ಹೇಳುವದೊಂದು, ಮಾಡುವದು ಇನ್ನೊಂದು. ಬೈಬಲನ್ನು ಕಲಿಸುತ್ತೇವೆಂದು ಹೇಳುತ್ತಾರಾದರೂ, ತ್ರಯೈಕ್ಯ ಮತ್ತು ನರಕಾಗ್ನಿಯಂಥ ದೇವದೂಷಕ ಬೋಧನೆಗಳನ್ನು ಅವರು ಕಲಿಸುತ್ತಾರೆ. ಇತರರಾದರೊ ವಿಮೋಚನಾ ಈಡನ್ನು ಅಲ್ಲಗಳೆಯುತ್ತಾರೆ, ಸೃಷ್ಟಿಕ್ರಿಯೆಯ ಬದಲಿಗೆ ವಿಕಾಸವಾದವನ್ನು ಕಲಿಸುತ್ತಾರೆ ಮತ್ತು ಗಾನಗೋಷ್ಟಿ ತತ್ವಜ್ಞಾನವನ್ನು ಸಾರುತ್ತಾ ಕಿವಿ-ಖುಷಿ ಮಾಡುತ್ತಾರೆ. ಫರಿಸಾಯರಂತೆ, ಇಂದಿನ ಅನೇಕ ವೈದಿಕರೂ ಹಣದಾಸೆಯವರಾಗಿದ್ದು ತಮ್ಮ ಮಂದೆಯಿಂದ ಮಿಲ್ಯಾಂತರ ಡಾಲರುಗಳನ್ನು ಸುಲಿಯುತ್ತಾರೆ. (ಲೂಕ 16:14) ಯೇಸುವನ್ನು “ಸ್ವಾಮೀ, ಸ್ವಾಮೀ,” ಎಂದು ಅವರೆಲ್ಲರೂ ಕೂಗಿ ಕರೆಯುತ್ತಾರೆ, ಆದರೆ ಅವರಿಗೆ ಆತನ ಪ್ರತಿಕ್ರಿಯೆ: “ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ.”—ಮತ್ತಾಯ 7:21-23.
12. ಒಮ್ಮೆ ಇಕ್ಕಟ್ಟಾದ ಮಾರ್ಗದಲ್ಲಿ ನಡೆಯತ್ತಿದ್ದ ಕೆಲವರು ಅದನ್ನು ನಿಲ್ಲಿಸಿಬಿಟ್ಟಿರುವದೇಕೆ, ಯಾವ ಫಲಿತಾಂಶದೊಂದಿಗೆ?
12 ಒಮ್ಮೆ ಇಕ್ಕಟ್ಟಾದ ದಾರಿಯಲ್ಲಿ ನಡೆದಿದ್ದ ಕೆಲವರು, ಇಂದು ಹಾಗೆ ನಡೆಯುವದನ್ನು ನಿಲ್ಲಿಸಿದ್ದಾರೆ. ತಾವು ಯೆಹೋವನನ್ನು ಪ್ರೀತಿಸುತ್ತೇವೆಂದು ಅವರು ಹೇಳುತ್ತಾರೆ, ಆದರೆ ಆತನ ಸಾರುವ ಆಜ್ಞೆಯನ್ನು ಅವರು ಪಾಲಿಸುವದಿಲ್ಲ. ಯೇಸುವನ್ನು ಪ್ರೀತಿಸುತ್ತೇವೆಂದು ಹೇಳುತ್ತಾರೆ ಆದರೆ ಆತನ ಕುರಿಗಳನ್ನು ಉಣಿಸುವದಿಲ್ಲ. (ಮತ್ತಾಯ 24:14; 28:19, 20; ಯೋಹಾನ 21:15-17; 1 ಯೋಹಾನ 5:3) ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವವರೊಂದಿಗೆ ಇಜ್ಜೋಡಾಗಲು ಅವರು ಬಯಸುವದಿಲ್ಲ. ಇಕ್ಕಟ್ಟಾದ ದಾರಿಯು ಅವರಿಗೆ ತೀರಾ ಹೆಚ್ಚು ಬಿಕ್ಕಟ್ಟಾಗಿ ಕಂಡುಬಂದಿದೆ. ಒಳ್ಳೇದನ್ನು ಮಾಡುವದರಲ್ಲಿ ಅವರು ಬೇಸತ್ತು ಹೋಗಿರುವರು, “ಅವರು ನಮ್ಮನ್ನು ಬಿಟ್ಟು ಹೊರಟು ಹೋದರು, ಆದರೆ ಅವರು ನಮ್ಮವರಾಗಿರಲಿಲ್ಲ. ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೀ ಇರುತ್ತಿದ್ದರು.” (1 ಯೋಹಾನ 2:19) ಅವರು ಕತ್ತಲೆಗೆ ಹಿಂತಿರುಗಿ ಹೋದರು, ಮತ್ತು “ಆ ಕತ್ತಲು ಎಷ್ಟೆನ್ನಬೇಕು!” (ಮತ್ತಾಯ 6:23) ಅವರು ಯೇಸುವಿನ ವಿನಂತಿಯನ್ನು ದುರ್ಲಕ್ಷಿಸಿದರು: “ಪ್ರಿಯರಾದ ಮಕ್ಕಳೇ, ನಾವು ಬರೀ ಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಿಬರಬೇಕು.”—1 ಯೋಹಾನ 3:18.
13, 14. ಆತನ ಹೇಳಿಕೆಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸುವ ಕುರಿತಾಗಿ ಯೇಸು ಯಾವ ದೃಷ್ಟಾಂತವನ್ನು ಕೊಟ್ಟನು ಮತ್ತು ಪಲೆಸ್ತೀನದಲ್ಲಿ ಜೀವಿಸುತ್ತಿದ್ದವರಿಗೆ ಅದು ಅತಿ ತಕ್ಕದ್ದಾಗಿತ್ತೇಕೆ?
13 ಯೇಸು ತನ್ನ ಪರ್ವತ ಪ್ರಸಂಗವನ್ನು ಒಂದು ನಾಟಕೀಯ ದೃಷ್ಟಾಂತದೊಂದಿಗೆ ಕೊನೆಗೊಳಿಸಿದನು: “ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡಿಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು. ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡೆದವು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದದ್ದರಿಂದ ಅದು ಬೀಳಲಿಲ್ಲ.”—ಮತ್ತಾಯ 7:24, 25.
14 ಪಲೆಸ್ತೀನದಲ್ಲಿ ಬಿರುಮಳೆ ಬಂದಾಗ ನೀರು ನುಗ್ಗಿ ಹರಿದು ಒಣ ಹಳ್ಳಗಳನ್ನು ತುಂಬುವುದರಿಂದ ವಿನಾಶಕರ ನೆರೆಯನ್ನು ಥಟ್ಟನೆ ಉಕ್ಕುವಂತೆ ಮಾಡುತ್ತದೆ. ಮನೆಗಳು ಉಳಿಯಬೇಕಾದರೆ, ಗಟ್ಟಿಯಾದ ಬಂಡೆಯ ಮೇಲೆ ಅಸ್ತಿವಾರ ಹಾಕುವ ಅವಶ್ಯವಿತ್ತು. ಆ ಮನುಷ್ಯನು “ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರ ಹಾಕಿದನು” ಎಂದು ಲೂಕನ ದಾಖಲೆಯು ತೋರಿಸುತ್ತದೆ. (ಲೂಕ 6:48) ಅದು ಪ್ರಯಾಸದ ಕೆಲಸ, ಆದರೆ ಬಿರುಮಳೆಯಲ್ಲಿ ಅದಕ್ಕೆ ಪ್ರತಿಫಲವಿದೆ. ಹೀಗೆ ಯೇಸುವಿನ ಹೇಳಿಕೆಗಳ ಮೇಲೆ ಕ್ರೈಸ್ತ ಗುಣಗಳನ್ನು ಕಟ್ಟುವುದಾದರೆ, ಪ್ರತಿಕೂಲ ಪರಿಸ್ಥಿತಿಗಳೆಂಬ ನೆರೆಯು ಥಟ್ಟನೆ ಉಕ್ಕುವಾಗ ಅವು ಫಲಕಾರಿ ಆಗಬಲ್ಲವು.
15. ಯೇಸುವಿನ ಉಪದೇಶವನ್ನು ಪಾಲಿಸುವ ಬದಲಿಗೆ ಸಂಪ್ರದಾಯಗಳನ್ನು ಅನುಸರಿಸುವವರಿಗೆ ಬರುವ ಫಲಿತಾಂಶವೇನು?
15 ಇನ್ನೊಂದು ಮನೆಯು ಉಸುಬಿನ ಮೇಲೆ ಕಟ್ಟಲ್ಪಟ್ಟಿತ್ತು: “ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.” “ಸ್ವಾಮೀ, ಸ್ವಾಮೀ,” ಎಂದು ಹೇಳಿಕೊಂಡರೂ ಯೇಸುವಿನ ಮಾತುಗಳನ್ನು ನಡಿಸಲು ತಪ್ಪುವವರಿಗೆ ಅದೇ ರೀತಿ ಇರುವದು.—ಮತ್ತಾಯ 7:26, 27.
“ಅವರ ಶಾಸ್ತ್ರಿಗಳಂತೆ ಅಲ್ಲ”
16. ಪರ್ವತ ಪ್ರಸಂಗವನ್ನು ಆಲೈಸುತ್ತಿದ್ದ ಜನರ ಮೇಲೆ ಆದ ಪ್ರಭಾವವೇನು?
16 ಪರ್ವತ ಪ್ರಸಂಗದ ಪ್ರಭಾವವು ಎಷ್ಟಾಗಿತ್ತು? “ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯ ಪಟ್ಟವು. ಯಾಕಂದರೆ ಅವನು ಅವರ ಶಾಸ್ತ್ರಿಗಳಂತೆ ಉಪದೇಶಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶ ಮಾಡುತ್ತಿದ್ದನು.” (ಮತ್ತಾಯ 7:28, 29) ತಾವು ಹಿಂದೆಂದೂ ಗಮನಿಸದಿದ್ದಂಥ ಒಂದು ಅಧಿಕಾರದಿಂದ ಮಾತಾಡಿದ ಆತನಿಂದ ಅವರು ಆಳವಾಗಿ ಪ್ರಭಾವಿಸಲ್ಪಟ್ಟರು.
17. ತಮ್ಮ ಬೋಧನೆಗೆ ಪ್ರಾಮಾಣ್ಯವನ್ನು ಕೊಡಲು ಶಾಸ್ತ್ರಿಗಳಿಗೆ ಏನು ಮಾಡಬೇಕಿತ್ತು, ಮತ್ತು ಉಲ್ಲೇಖನೆ ಮಾಡಿದ್ದ ಮೃತ ಜ್ಞಾನಿಗಳ ಕುರಿತು ಅವರೇನು ವಾದಿಸಿದ್ದರು?
17 ಯಾವ ಶಾಸ್ತ್ರಿಯಾದರೂ ತನ್ನ ಸ್ವಂತ ಅಧಿಕಾರದಿಂದ ಎಂದೂ ಮಾತಾಡಿರಲಿಲ್ಲ, ಎಂದು ಈ ಚಾರಿತ್ರಿಕ ದಾಖಲೆಯು ತೋರಿಸುತ್ತದೆ: “ಶಾಸ್ತ್ರಿಗಳು ತಮ್ಮ ಬೋಧನೆಗಳಿಗೆ ಪುಷ್ಟಿಯನ್ನು ಎರವಲಾಗಿ ತಂದದ್ದು ಸಂಪ್ರದಾಯಗಳಿಂದ ಮತ್ತು ಅವುಗಳ ಜನಕರಿಂದ: ಮತ್ತು ಯಾವನೇ ಶಾಸ್ತ್ರಿಯ ಯಾವುದೇ ಪ್ರಸಂಗಕ್ಕೆ, ಬೇರೆ [ಉದ್ಧರಣೆಯ] ಹೊರತು ಯಾವ ಅಧಿಕಾರ ಅಥವಾ ಮೌಲ್ಯವಿರಲಿಲ್ಲ. . . ರಬ್ಬೀಗಳಿಗೆ ಒಂದು ಸಂಪ್ರದಾಯವಿದೆ. . . . ಅಥವಾ ಜ್ಞಾನಿ ಪುರುಷರು ಹೀಗನ್ನುತ್ತಾರೆ; ತದ್ರೀತಿಯ ಕೆಲವು ಹೇಳಿಕೆಗಳು ಅಷ್ಟೆ. ಮಹಾ ಹಿಲೇಲ್ಲನು ಸರಿಯಾಗಿ ಕಲಿಸಿದನು, ಒಂದು ನಿರ್ದಿಷ್ಠ ವಿಷಯಕ್ಕೆ ಇದ್ದ ಸಂಪ್ರದಾಯದಂತೆಯೇ; ‘ಆದರೆ ಅವನು ಆ ವಿಷಯದ ಕುರಿತು ದಿನವಿಡೀ ಉಪನ್ಯಾಸವಿತ್ತರೂ, . . . ಶಿಮಾಯ ಮತ್ತು ಅಬ್ತಾಲಿಯನ್ (ಹಿಲೇಲ್ಲಗಿಂತ ಹಿಂದಿನ ಅಧಿಕಾರಿಗಳು) ಹಾಗಂದದನ್ನು ನಾನು ಕೇಳಿದೆ ಎಂದು ಹೇಳುವ ತನಕ ಅವರು ಅವನ ಬೋಧನೆಯನ್ನು ಸ್ವೀಕರಿಸಲಿಲ್ಲ.’” (ಎ ಕಾಮೆಂಟ್ರಿ ಆನ್ ದ ನ್ಯೂ ಟೆಸ್ಟಮೆಂಟ್ ಫ್ರಮ್ ತಾಲ್ಮುಡ್ ಅಂಡ್ ಹಿಬ್ರೈಕ, ಬೈ ಜೋನ್ ಲೈಟ್ಫೂಟ್) ಬಹಳ ಕಾಲದ ಹಿಂದೆ ಸತ್ತಿದ್ದ ಜ್ಞಾನಿಗಳ ಕುರಿತೂ ಫರಿಸಾಯರು ಹೇಳುವದು: “ನೀತಿವಂತರ ತುಟಿಗಳು, ಒಬ್ಬನು ಅವರ ಹೆಸರಿನಲ್ಲಿ ನಿಯಮದ ಬೋಧನೆಯನ್ನು ಪಠಿಸುವಾಗ—ಸಮಾಧಿಯಲ್ಲಿ ಅವರ ತುಟಿಗಳು ಅವರೊಂದಿಗೆ ಮೆಲುನುಡಿಯುತ್ತವೆ.”—ತೋರಾ—ಫ್ರಮ್ ಸ್ಕ್ರೋಲ್ ಟು ಸಿಂಬಲ್ ಇನ್ ಫಾರ್ಮೆಟಿವ್ ಜುಡೈಸಂ.
18. (ಎ) ಶಾಸ್ತ್ರಿಗಳ ಬೋಧನೆ ಮತ್ತು ಯೇಸುವಿನ ಕಲಿಸುವಿಕೆಯ ನಡುವೆ ಯಾವ ವ್ಯತ್ಯಾಸವಿತ್ತು? (ಬಿ) ಯೇಸುವಿನ ಬೋಧನೆಯು ಅಷ್ಟು ಮಹತ್ತಾಗಿದ್ದದ್ದು ಯಾವ ರೀತಿಯಲ್ಲಿ?
18 ಶಾಸ್ತ್ರಿಗಳು ಮೃತ ಪುರುಷರನ್ನು ಅಧಿಕಾರಯುಕ್ತವಾಗಿ ಉಲ್ಲೇಖಿಸಿದರು; ಯೇಸುವಾದರೋ ಜೀವಸ್ವರೂಪನಾದ ದೇವರ ಅಧಿಕಾರ ಪಡೆದವನಾಗಿ ಮಾತಾಡಿದನು. (ಯೋಹಾನ 12:49, 50; 14:10) ರಬ್ಬೀಗಳು ಮುಚ್ಚಿದ ಕೊಳದಿಂದ ಹಳಸು ನೀರನ್ನು ಸೇದುತ್ತಿದ್ದರು; ಯೇಸುವು ತಿಳಿನೀರಿನ ಬುಗ್ಗೆಯನ್ನು ಚಿಮ್ಮಿಸಿ ಒಂದು ಅಂತರ್ಯದ ದಾಹವನ್ನು ತಣಿಸಿದನು. ರಾತ್ರಿಯಿಡೀ ಪ್ರಾರ್ಥನೆ ಮತ್ತು ಪರ್ಯಾಲೋಚನೆಯಲ್ಲಿ ಕಳೆಯುತ್ತಿದ್ದನು ಮತ್ತು ಅವನು ಮಾತಾಡಿದಾಗ, ಅವರು ಹಿಂದೆಂದೂ ಅನುಭವಿಸದೆ ಇದ್ದ ರೀತಿಯಲ್ಲಿ ಜನರ ಅಂತರ್ಯವನ್ನು ಸ್ವರ್ಶಿಸಿದನು. ಅವನು ಎಂಥ ಒಂದು ಬಲದಿಂದ, ಅಧಿಕಾರದಿಂದ ಮಾತಾಡಿದ್ದನೆಂದರೆ ಅವರು ಅದನ್ನು ಸ್ವತಾ ಅನುಭವಿಸಿದರು, ಮತ್ತು ಫರಿಸಾಯರು, ಶಾಸ್ತ್ರಿಗಳು ಮತ್ತು ಸದ್ದುಕಾಯರು ಸಹಾ ಕೊನೆಗೆ ಆತನಿಗೆ ಎದುರಾಡಲು ಹೆದರಿದ್ದರು. (ಮತ್ತಾಯ 22:46. ಮಾರ್ಕ 12:34. ಲೂಕ 20:40) ಹಿಂದೆಂದೂ ಒಬ್ಬ ಮನುಷ್ಯನು ಹೀಗೆ ಮಾತಾಡಿದ್ದಿಲ್ಲ! ಪ್ರಸಂಗದ ಕೊನೆಯಲ್ಲಿ, ಜನರ ಗುಂಪುಗಳು ಅವನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟು ಹೊರಟುಹೋದವು.
19. ಯೆಹೋವನ ಸಾಕ್ಷಿಗಳಿಂದ ಇಂದು ಉಪಯೋಗಿಸಲ್ಪಡುವ ಕೆಲವು ಶಿಕ್ಷಣಾ ವಿಧಾನಗಳು ಯೇಸು ಪರ್ವತ ಪ್ರಸಂಗದಲ್ಲಿ ಉಪಯೋಗಿಸಿದ್ದಕ್ಕೆ ಸಮಾನವಾಗಿವೆ ಹೇಗೆ?
19 ಇಂದಿನ ಕುರಿತೇನು? ಮನೆ-ಮನೆಯ ಸುವಾರ್ತಿಕರೋಪಾದಿ ಯೆಹೋವನ ಸಾಕ್ಷಿಗಳು ತದ್ರೀತಿಯ ವಿಧಾನವನ್ನು ಉಪಯೋಗಿಸುತ್ತಾರೆ. ಒಬ್ಬ ಮನೆಯವನು ನಿಮಗೆ ಹೀಗನ್ನುತ್ತಾನೆ: “ಭೂಮಿಯು ಸುಟ್ಟುಹೋಗಲಿದೆ ಎಂದು ನನ್ನ ಚರ್ಚು ಹೇಳುತ್ತದೆ.” ನಿಮ್ಮ ಪ್ರತ್ಯುತ್ತರ: “ನಿಮ್ಮ ಸ್ವಂತ ಕಿಂಗ್ಜೇಮ್ಸ್ ಬೈಬಲ್, ‘ಭೂಮಿಯಾದರೊ ಶಾಶ್ವತವಾಗಿ ನಿಲ್ಲುವದು’ ಎಂದು ಪ್ರಸಂಗಿ 1:4ರಲ್ಲಿ ಹೇಳುತ್ತದೆ.” ವ್ಯಕ್ತಿಗೆ ಆಶ್ಚರ್ಯವಾಗುತ್ತದೆ. “ಅದು ನನ್ನ ಬೈಬಲಿನಲ್ಲಿತ್ತೆಂದು ನನಗೆ ಗೊತ್ತೇ ಇರಲಿಲ್ಲ.” ಇನ್ನೊಬ್ಬನು ಹೇಳುವದು: “ಪಾಪಿಗಳು ನರಕಾಗ್ನಿಯಲ್ಲಿ ಸುಡಲ್ಪಡುವರೆಂದು ನಾನು ಯಾವಾಗಲೂ ಕೇಳಿದ್ದೇನೆ.” “ಆದರೆ ನಿಮ್ಮ ಸ್ವಂತ ಬೈಬಲು ರೋಮಾಪುರ 6:23ರಲ್ಲಿ, ‘ಪಾಪವು ಕೊಡುವ ಸಂಬಳ ಮರಣ’ ಎನ್ನುತ್ತದಲ್ಲಾ.” ಅಥವಾ, ತ್ರಯೈಕತ್ವದ ಕುರಿತು: “ಯೇಸು ಮತ್ತು ಅವನ ತಂದೆ ಸರಿಸಮಾನರು ಎಂದು ನನ್ನ ಪಾದ್ರಿ ಹೇಳುತ್ತಾರೆ.” “ಆದರೆ ಯೋಹಾನ 14:28ರಲ್ಲಿ ಯೇಸು “ನನ್ನ ತಂದೆ ನನಗಿಂತ ದೊಡ್ಡವನು” ಎಂದು ಹೇಳಿರುವದನ್ನು ಬೈಬಲು ತಿಳಿಸುತ್ತದೆ.” ಇನ್ನೊಬ್ಬ ವ್ಯಕ್ತಿ ನಿಮಗನ್ನುವದು: “ದೇವರ ರಾಜ್ಯ ನಮ್ಮೊಳಗೇ ಇದೆ ಎಂದು ಹೇಳುವದನ್ನು ಕೇಳಿದ್ದೇನೆ.” ನಿಮ್ಮ ಪ್ರತಿಕ್ರಿಯೆ: “ನಿಮ್ಮ ಬೈಬಲು ದಾನಿಯೇಲ 2:44ರಲ್ಲಿ ಹೇಳುವದು: ‘ಆ ರಾಜರ ಕಾಲದಲ್ಲಿ ಪರಲೋಕದ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು. . . ಅದು ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು.’ ಹೀಗಿರಲಾಗಿ, ಅದು ನಿಮ್ಮೊಳಗೆ ಇರುವದು ಹೇಗೆ?”
20. (ಎ) ಸಾಕ್ಷಿಗಳು ಕಲಿಸುವ ರೀತಿ ಮತ್ತು ಕ್ರೈಸ್ತ ಪ್ರಪಂಚದ ವೈದಿಕರು ಕಲಿಸುವ ವಿಧಾನದ ನಡುವೆ ಯಾವ ಪ್ರತಿವಿರುದ್ಧತೆಯಿದೆ? (ಬಿ) ಯಾವದಕ್ಕೆ ಇದೀಗ ಸಮಯವಾಗಿದೆ?
20 ದೇವರಿಂದ ಬಂದ ಅಧಿಕಾರ ಸಹಿತವಾಗಿ ಯೇಸು ಮಾತಾಡಿದನು. ಯೆಹೋವನ ಸಾಕ್ಷಿಗಳೂ ದೇವರ ವಾಕ್ಯದ ಅಧಿಕಾರದೊಂದಿಗೆ ಮಾತಾಡುತ್ತಾರೆ. ಕ್ರೈಸ್ತ ಪ್ರಪಂಚದ ವೈದಿಕರಾದರೋ ಬೋಧಿಸುವದು ಬೆಬಿಲೋನ್ ಮತ್ತು ಈಜಿಪ್ಟಿನಿಂದ ವರ್ಗಾಯಿಸಲ್ಪಟ್ಟ ಬೋಧನೆಗಳಿಂದ ಭ್ರಷ್ಟಗೊಂಡ ಧಾರ್ಮಿಕ ಸಂಪ್ರದಾಯಗಳನ್ನೇ. ಪ್ರಾಮಾಣಿಕ ಜನರು ತಮ್ಮ ನಂಬಿಕೆಗಳ ತಪ್ಪನ್ನು ಬೈಬಲು ಸಿದ್ಧಮಾಡಿಕೊಡುವದನ್ನು ಕಾಣುವಾಗ ಅಚ್ಚರಿಗೊಳ್ಳುತ್ತಾರೆ ಮತ್ತು ‘ಅದು ನನ್ನ ಬೈಬಲಲ್ಲಿತ್ತೆಂದು ನನಗೆ ಗೊತ್ತೇ ಇರಲಿಲ್ಲ’ ಎಂದು ಉದ್ಗರಿಸುತ್ತಾರೆ. ಹೌದು, ಅದು ಬೈಬಲಿನಲ್ಲಿದೆ. ಆದುದರಿಂದ, ತಮ್ಮ ಆತ್ಮಿಕ ಅವಶ್ಯಕತೆಗಳ ಪ್ರಜ್ಞೆ ಇರುವ ಎಲ್ಲರೂ ಯೇಸುವಿನ ಪರ್ವತ ಪ್ರಸಂಗದ ಆ ಉಪದೇಶಕ್ಕೆ ಕಿವಿಗೊಡುವ ಮತ್ತು ಆ ಮೂಲಕ ಬಂಡೆಯ ದೃಢ ಅಸ್ತಿವಾರದ ಮೇಲೆ ಕಟ್ಟುವಂಥ ಸಮಯವು ಈಗಲೇ ಆಗಿರುತ್ತದೆ. (w90 10/1)
ಪುನರ್ವಿಮರ್ಶೆ ಪ್ರಶ್ನೆಗಳು
◻ ತೀರ್ಪನ್ನು ಮಾಡುವ ಬದಲಿಗೆ, ನಾವೇನನ್ನು ಮಾಡ ಪ್ರಯತ್ನಿಸ ಬೇಕು ಮತ್ತು ಏಕೆ?
◻ ಇಂದು ಅಷ್ಟು ಜನರು ಅಗಲವಾದ ದಾರಿಯನ್ನು ಆರಿಸಿಕೊಳ್ಳುವದೇಕೆ?
◻ ಯೇಸುವಿನ ಕಲಿಸುವಿಕೆಯು ಶಾಸ್ತ್ರಿಗಳ ಕಲಿಸುವಿಕೆಗಿಂತ ಅಷ್ಟು ಬೇರೆಯಾಗಿದ್ದದ್ದೇಕೆ?
◻ ಪರ್ವತ ಪ್ರಸಂಗವನ್ನು ಆಲೈಸಿದವರ ಮೇಲೆ ಅದರ ಪ್ರಭಾವವೇನಾಗಿತ್ತು?