ಭದ್ರವಾದ ಭವಿಷ್ಯತ್ತಿರುವ ಯುವ ಜನರು
“ಯಾವುದೇ [ಬಲಾತ್ಕಾರಸಂಭೋಗದ ವಿದ್ಯಮಾನ]ವು ಇರಸಾಧ್ಯವಿರುವಷ್ಟು ಭೀಕರವೂ ಹೇವರಿಕೆ ಬರಿಸುವಂತಹದ್ದೂ”—ಇತ್ತೀಚೆಗೆ ನಡೆದ ಒಂದು ವಿಚಾರಣೆಯ ಮೇಲ್ವಿಚಾರಣೆ ಮಾಡುತ್ತಿದ್ದ ನ್ಯಾಯಾಧೀಶನು, ಆ ಪಾತಕವನ್ನು ವರ್ಣಿಸಿದ್ದು ಈ ಮೇಲಿನಂತಿತ್ತು. 14ರಿಂದ 18 ಪ್ರಾಯದ ವರೆಗಿನ ಎಂಟು ಮಂದಿ ಹದಿವಯಸ್ಕರ ಒಂದು ಗುಂಪು, ಲಂಡನಿನ ಒಳನಗರದ ಕ್ಷೇತ್ರದಲ್ಲಿ ಒಬ್ಬ ಸ್ತ್ರೀ ಪ್ರವಾಸಿಯನ್ನು ದಾರಿಯಲ್ಲಿ ಹೊಂಚುಹಾಕಿ ತಡೆದು, ಪುನರಾವರ್ತಿತ ಲೈಂಗಿಕ ದುರಾಕ್ರಮಣಗಳಿಗೆ ಅವಳನ್ನು ಒಳಪಡಿಸಿ, ತನಗೆ ಈಜು ಬರುವುದಿಲ್ಲವೆಂದು ಅವಳು ಹೇಳಿದರೂ, ತದನಂತರ ಸಮೀಪದಲ್ಲಿದ್ದ ನಾಲೆಯಲ್ಲಿ ಅವಳನ್ನು ತಳ್ಳಿಬಿಟ್ಟಿತು. ತನ್ನ ಮಗನು ಏನು ಮಾಡಿದ್ದನೆಂಬುದನ್ನು ತಾನು ಟಿವಿ ವರದಿಯಲ್ಲಿ ನೋಡಿದಾಗ, ತನಗೆ ಶಾರೀರಿಕವಾಗಿ ಅಸ್ವಸ್ಥಳಾದಂತಹ ಅನಿಸಿಕೆಯಾಯಿತು ಹಾಗೂ ನರಕುಸಿತವಾಗುವುದರಲ್ಲಿತ್ತೆಂದು, ಆ ಹದಿವಯಸ್ಕರಲ್ಲಿ ಒಬ್ಬನ ತಾಯಿಯು ಅರ್ಥಪೂರ್ಣವಾಗಿಯೇ ಉದ್ಗರಿಸಿದಳು.
ದುಃಖಕರವಾಗಿ, ಈ ಘಟನೆಯು ಇಂದು ಸಮಾಜದಲ್ಲಿ ಏನು ಸಂಭವಿಸುತ್ತಿದೆಯೋ ಅದನ್ನು ಪ್ರತಿಬಿಂಬಿಸುತ್ತದೆ. ಪಾಶವೀಯತೆಯು—ಅಪರಾಧಿ ಚಟುವಟಿಕೆಯಲ್ಲಾಗಲಿ, ಮನೆಯ ಕಲಹದಲ್ಲಾಗಲಿ, ಬಾಲ್ಕನರು, ಮಧ್ಯ ಮತ್ತು ಪಶ್ಚಿಮ ಆಫ್ರಿಕ, ಮತ್ತು ಬೇರೆಕಡೆಗಳಲ್ಲಿನ ಕುಲಸಂಬಂಧವಾದ ಹೊಡೆದಾಟಗಳಲ್ಲಾಗಲಿ—ರೂಢಿಯದ್ದಾಗಿ ಪರಿಣಮಿಸಿದೆ. ಅಂತಹ ಪರಿಸ್ಥಿತಿಗಳ ಮಧ್ಯೆ ಯುವ ಜನರು ಬೆಳೆಯುತ್ತಾರೆ, ಅಥವಾ ಅನೇಕವೇಳೆ ಅವರು ಅವುಗಳ ಕುರಿತು ಕೇಳಿಸಿಕೊಳ್ಳುತ್ತಾರೆ. ಆದುದರಿಂದ, ಅನೇಕರು ಒರಟಾದ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ, “ಮಮತೆ”ಯನ್ನು ತೋರಿಸುವುದಿಲ್ಲ, ಮತ್ತು “ದಮೆಯಿಲ್ಲದವ”ರಾಗಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.—2 ತಿಮೊಥೆಯ 3:3.
“ಉಗ್ರತೆ”
ಕ್ರೈಸ್ತ ಅಪೊಸ್ತಲ ಪೌಲನು ತನ್ನ ಜೊತೆ ಹಿರಿಯನಾದ ತಿಮೊಥೆಯನಿಗೆ ತನ್ನ ಎರಡನೆಯ ಪತ್ರವನ್ನು ಬರೆದಾಗ, ಅಧಿಕಾರದಲ್ಲಿದ್ದ ಲೋಕ ಶಕ್ತಿಯು ರೋಮ್ ಆಗಿತ್ತು. ಪೀಡನೆ ಹಾಗೂ ಕ್ರೌರ್ಯಗಳು ರೋಮನ್ ಯುದ್ಧರಂಗಗಳಲ್ಲಿ ವ್ಯಾಪಕವಾಗಿ ವಾಡಿಕೆಯಲ್ಲಿದ್ದವು. ಆದರೂ, ಭವಿಷ್ಯತ್ತಿನಲ್ಲಿ ಸಮಯಗಳು “ನಿಭಾಯಿಸಲು ಕಷ್ಟಕರ”ವಾಗಿರುವವೆಂದು ಪೌಲನು ಎಚ್ಚರಿಕೆ ನೀಡಿದನು. (2 ತಿಮೊಥೆಯ 3:1, NW) ಆಸಕ್ತಿಕರವಾಗಿ, ಈ ಸಮಯಗಳನ್ನು “ಕಠಿನ”ವಾದವುಗಳೆಂದು ವರ್ಣಿಸುವ ಗ್ರೀಕ್ ಶಬ್ದವು, ಅವು “ಉಗ್ರತೆ”ಯುಳ್ಳವುಗಳಾಗಿರುವುದರ ಅಭಿಪ್ರಾಯವನ್ನು ಒಳಗೂಡಿಸುತ್ತದೆ. ಯೇಸುವಿನ ಸಮಯದಲ್ಲಿನ ಕ್ರೌರ್ಯಗಳಲ್ಲಿ ಕೆಲವಕ್ಕೆ ಯಾವುದು ಕಾರಣವಾಗಿತ್ತು ಎಂಬುದನ್ನು, 30 ವರ್ಷಗಳಿಗೆ ಮುಂಚೆ ಅವನ ಭೂಶುಶ್ರೂಷೆಯ ಸಮಯದಲ್ಲಿ ನಡೆದ ಒಂದು ಘಟನೆಯು ತೋರಿಸುತ್ತದೆ.
ಯೇಸು ದೋಣಿಯ ಮೂಲಕ ಆಗ ತಾನೇ ಗಲಿಲಾಯ ಸಮುದ್ರದ ಪೂರ್ವ ದಡದ ಬಳಿ ಆಗಮಿಸಿದ್ದನು. ಅವನು ದಡದ ಮೇಲೆ ಹೆಜ್ಜೆಯಿಟ್ಟಾಗ, ಇಬ್ಬರು ಪುರುಷರು ಅವನೆದುರಿಗೆ ಬಂದರು. ಅವರ ಒರಟಾದ ತೋರಿಕೆ ಹಾಗೂ ಕೂಗಾಟವು, ಅವರಲ್ಲಿ ಏನೋ ಅತಿರೇಕವಾದ ದೋಷವಿದೆ ಎಂಬುದನ್ನು ಸ್ಪಷ್ಟಪಡಿಸಿತು. ಅವರು “ಬಹು ಉಗ್ರರಾಗಿ”ದ್ದು, ವಾಸ್ತವದಲ್ಲಿ, ದೆವ್ವಹಿಡಿದವರಾಗಿದ್ದರು.a ಅವರು ಏನನ್ನು ಕೂಗಿಹೇಳುತ್ತಿದ್ದರೋ ಅದು, ಅವರ ಹಿಂಸಾತ್ಮಕ ಕೃತ್ಯಗಳನ್ನು ನಿಯಂತ್ರಿಸುತ್ತಿದ್ದ ದುಷ್ಟಾತ್ಮಗಳಿಂದ ಹೊರಬಂದದ್ದಾಗಿತ್ತು. “ದೇವರ ಮಗನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವದಕ್ಕಿಂತ ಮುಂಚೆ ನಮ್ಮನ್ನು ಕಾಡುವದಕ್ಕೆ ಇಲ್ಲಿಗೆ ಬಂದಿಯಾ” ಎಂದು ಆ ಪುರುಷರು ಕೂಗಿದರು. ದೆವ್ವಗಳ ಮೇಲೆ ತನ್ನ ನ್ಯಾಯತೀರ್ಪನ್ನು ವಿಧಿಸಲಿಕ್ಕಾಗಿ ದೇವರು ಈಗಾಗಲೇ ಒಂದು ಸಮಯವನ್ನು ನಿಗದಿಪಡಿಸಿದ್ದನೆಂಬುದು, ಈ ಇಬ್ಬರು ವ್ಯಕ್ತಿಗಳನ್ನು ಹೊಕ್ಕಿದ್ದ ದುಷ್ಟಾತ್ಮಗಳಿಗೆ ಚೆನ್ನಾಗಿ ತಿಳಿದಿತ್ತು. ಇದು ಅವುಗಳ ನಿತ್ಯ ನಾಶನವನ್ನು ಅರ್ಥೈಸಲಿತ್ತು. ಆದರೆ ಆ ಸಮಯದ ವರೆಗೆ ಅವು ತಮ್ಮ ಅತಿಮಾನುಷ ಸಾಮರ್ಥ್ಯಗಳನ್ನು, ಉಗ್ರವಾದ ಹಿಂಸಾಚಾರವನ್ನು ಉದ್ರೇಕಿಸಲಿಕ್ಕಾಗಿ ಉಪಯೋಗಿಸಲಿದ್ದವು. ಆ ದೆವ್ವಗಳನ್ನು ಬಿಡಿಸುವ ಯೇಸುವಿನ ಅದ್ಭುತಕರ ಕೃತ್ಯವು ಮಾತ್ರವೇ ಆ ಇಬ್ಬರು ಪುರುಷರಿಗೆ ಉಪಶಮನವನ್ನು ತಂದಿತು.—ಮತ್ತಾಯ 8:28-32; ಯೂದ 6.
ಇಂದು, ಯುವಪ್ರಾಯದವರನ್ನೂ ಒಳಗೊಂಡು, ಜನರು ಹುಚ್ಚಾದ ರೀತಿಯಲ್ಲಿ ವರ್ತಿಸುವಾಗ, ನಾವು ಆ ಘಟನೆಯನ್ನು ಜ್ಞಾಪಿಸಿಕೊಳ್ಳುವುದು ಒಳಿತಾಗಿರುವುದು. ಏಕೆ? ಏಕೆಂದರೆ, ಈ 20ನೆಯ ಶತಮಾನದಲ್ಲಿ, ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆ ಪುಸ್ತಕವು ವಿವರಿಸುವಂತೆ, ನಾವು ಸಾಪೇಕ್ಷ ಅಪಾಯವನ್ನು ಎದುರಿಸುತ್ತೇವೆ: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:12) ಸೈತಾನನಿಗಾಗಿರುವ ಈ ಅಪಮಾನದೊಂದಿಗೆ “ಮಹಾ ರೌದ್ರ”ವು ಜೊತೆಗೂಡಿದೆ, ಏಕೆಂದರೆ ತನಗಿರುವ ಕಾಲವು ಸ್ವಲ್ಪವೆಂಬುದು ಅವನಿಗೆ ತಿಳಿದಿದೆ ಎಂಬುದನ್ನು ದಯವಿಟ್ಟು ಗಮನಿಸಿ.
ಆಕ್ರಮಣದ ಕೆಳಗೆ
ಈ ಪತ್ರಿಕೆಯ ಪುಟಗಳಲ್ಲಿ ಅನೇಕವೇಳೆ ತಿಳಿಸಲ್ಪಟ್ಟಿರುವಂತೆ, 1914ರಲ್ಲಿ, ಸ್ವರ್ಗದಲ್ಲಿ ದೇವರ ರಾಜ್ಯದ ಅರಸನೋಪಾದಿ ಕ್ರಿಸ್ತ ಯೇಸುವಿನ ಸಿಂಹಾಸನಾರೋಹಣವಾಯಿತು. ಆ ಕೂಡಲೆ ಯೇಸು ದೇವರ ಪ್ರಮುಖ ವೈರಿಯಾದ ಸೈತಾನನ ವಿರುದ್ಧ ಕ್ರಿಯೆಗೈದನು. ಹೀಗೆ, ಪಿಶಾಚನೂ ಅವನ ದೆವ್ವಗಳೂ ಸ್ವರ್ಗದಿಂದ ದೊಬ್ಬಲ್ಪಟ್ಟಿವೆ, ಮತ್ತು ಈಗ ಅವು ಈ ಭೂಮಿಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತವೆ. (ಪ್ರಕಟನೆ 12:7-9) ತನ್ನ ಪ್ರಭಾವದ ಕ್ಷೇತ್ರವು ಬಹಳವಾಗಿ ನಿರ್ಬಂಧಿಸಲ್ಪಟ್ಟಿರುವುದರಿಂದ, ಸೈತಾನನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಯಾರು ಅವನಿಗೆ ಸುಲಭವಾಗಿ ತುತ್ತಾಗುತ್ತಾರೆ? ಜೀವನದಲ್ಲಿ ಹಾಗೂ ಮಾನವ ಸಂಬಂಧಗಳಲ್ಲಿ ಅನುಭವದ ಕೊರತೆಯುಳ್ಳವರು ವಿಶೇಷವಾಗಿ ಅವನಿಗೆ ಬಲಿಯಾಗುತ್ತಾರೆಂಬುದು ಅರ್ಥಗರ್ಭಿತವಾಗಿರುವುದಿಲ್ಲವೊ? ಹೀಗೆ ಯುವ ಜನರು ಇಂದು ಪಿಶಾಚನ ಗುರಿಹಲಗೆಗಳಾಗಿ ಪರಿಣಮಿಸಿದ್ದಾರೆ. ಹೆಚ್ಚಾಗಿ ತಮ್ಮ ಸಂಗೀತ ಹಾಗೂ ಬಿಡುವಿನ ಸಮಯದ ಬೆನ್ನಟ್ಟುವಿಕೆಗಳ ಮೂಲಕ, ಅವರು ಈ ಅದೃಶ್ಯ ಕುತಂತ್ರಿಯಾದ ಪಿಶಾಚನಿಂದ ಸುಲಭವಾಗಿಯೇ ನಿಯಂತ್ರಿಸಲ್ಪಡುತ್ತಾರೆ.—ಎಫೆಸ 6:11, 12.
ಯುವ ಜನರು ಯಶಸ್ವಿಹೊಂದಲು ಪ್ರಯತ್ನಿಸುವಾಗಲೂ, ಅವರು ಅಡ್ಡಿಪಡಿಸಲ್ಪಡುತ್ತಾರೆ. IIನೆಯ ಲೋಕ ಯುದ್ಧದ ಅಂತ್ಯದಂದಿನಿಂದ, ಈ ಹಿಂದೆ ಯುದ್ಧಗಳನ್ನು ಅನುಭವಿಸಿದ ಅನೇಕ ದೇಶಗಳಲ್ಲಿನ ಜನರು, ತಮ್ಮ ಕುಟುಂಬಗಳಿಗೆ ಸಂಪತ್ಸಮೃದ್ಧ ಜೀವನ ಶೈಲಿಯನ್ನು ಒದಗಿಸುವ ಮೂಲಕ ನಷ್ಟಭರ್ತಿಮಾಡಲು ಪ್ರಯತ್ನಿಸಿವೆ. ಭೌತಿಕ ಸ್ವತ್ತುಗಳು, ಅನಿರ್ಬಂಧಿತ ಬಿಡುವು, ಮತ್ತು ಮನೋರಂಜನೆಗಳು ಪ್ರಮುಖ ಗುರಿಗಳಾಗಿ ಪರಿಣಮಿಸಿವೆ. ಇದರ ಪರಿಣಾಮವಾಗಿ, ಅನೇಕರು ಕಷ್ಟಾನುಭವಿಸಿದ್ದಾರೆ. “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. . . . ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ” ಎಂದು ಪೌಲನು ತಿಮೊಥೆಯನಿಗೆ ಎಚ್ಚರಿಸಿದನು. (1 ತಿಮೊಥೆಯ 6:9, 10) ಒಟ್ಟಿನಲ್ಲಿ, ಇಂದಿನ ಪ್ರಾಪಂಚಿಕ ಸಮಾಜದ ಜನರು, ಆರ್ಥಿಕ, ಹಣಕಾಸಿನ, ಮತ್ತು ಭಾವನಾತ್ಮಕ ವೇದನೆಗಳಿಂದ ತೀವ್ರವಾಗಿ ಇರಿಯಲ್ಪಟ್ಟಿರುವುದನ್ನು ನಾವು ಕಂಡುಕೊಳ್ಳುತ್ತೇವೆ. ದೇವರ ಮುಖ್ಯಶತ್ರುವಿನ ಈ ತಂತ್ರಕ್ಕೆ ಬಲಿಯಾದವರ ನಡುವೆ ಅನೇಕ ಯುವ ಜನರೂ ಸೇರಿದ್ದಾರೆ.
ಆದರೂ, ಸಂತೋಷಕರವಾಗಿ, ಶುಭ ವಾರ್ತೆಯಿದೆ. ಮತ್ತು ಅದು ಯಾರ ಮುಂದೆ ಒಂದು ಭದ್ರವಾದ ಭವಿಷ್ಯತ್ತು ಇದೆಯೋ ಆ ಯುವ ಜನರಿಗೆ ಸಂಬಂಧಿಸಿದ್ದಾಗಿದೆ. ಇದು ಹೇಗೆ ಸಾಧ್ಯ?
ಹುಡುಕಿರಿ, ನಿಮಗೆ ಸಿಕ್ಕುವುದು
ಅನೇಕ ಯುವ ಜನರಿಗೆ ಅತ್ಯುಚ್ಚ ಆದರ್ಶಗಳಿರುತ್ತವೆ. ವಯಸ್ಕರ ನಡುವೆ ಸಾಮಾನ್ಯವಾಗಿರುವ ಅವನತಿಹೊಂದುತ್ತಿರುವ ಮಟ್ಟಗಳನ್ನು ಅವರು ತಿರಸ್ಕರಿಸುತ್ತಾರೆ. ಅವರು ಅನ್ಯಾಯವನ್ನು ಮತ್ತು ಅಧಿಕಾರ ತೃಷೆಯುಳ್ಳ ರಾಜಕಾರಣಿಗಳು ಹಾಗೂ ವ್ಯಾಪಾರಿಗಳ ನಿರ್ದಯ ಮನೋಭಾವವನ್ನು ನೋಡಿ ಹಿಮ್ಮೆಟ್ಟುತ್ತಾರೆ. ನೀವು ಯುವಪ್ರಾಯದವರಾಗಿರುವಲ್ಲಿ, ನಿಮಗೂ ಇದೇ ರೀತಿಯ ಅನಿಸಿಕೆಯಾಗಬಹುದು.
ತನ್ನ ಹದಿಪ್ರಾಯದ ಕೊನೆಯ ಹಂತದಲ್ಲಿರುವ ಯೌವನಸ್ಥನಾದ ಸೆಡ್ರಿಕ್ನನ್ನು ಪರಿಗಣಿಸಿರಿ. ಅವನ ಅನುಭವವು ಅಪೂರ್ವವಾದದ್ದೇನಲ್ಲ.b ಮಗುವಾಗಿದ್ದಾಗ, ಅವನಿಗೆ ಅನೇಕ ಭಯಗಳಿದ್ದವು. ಅದರಲ್ಲಿ ಮರಣದ ಭಯವೂ ಒಳಗೂಡಿತ್ತು. ಜೀವಿತಕ್ಕೆ ಯಾವ ಉದ್ದೇಶವಿದೆ ಎಂದು ಅವನು ಕುತೂಹಲಪಟ್ಟನು. ಅವನು 15 ವರ್ಷ ಪ್ರಾಯದವನಾಗುವ ವರೆಗೆ ತನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳದಿರುವಾಗ, ಇತರ ಆದರ್ಶವಾದಿ ಯುವ ಜನರ ಸಹವಾಸದಲ್ಲಿ ಜೀವಿತದ ಅರ್ಥವನ್ನು ಅವಲೋಕಿಸಲು ಅವನು ತನ್ನನ್ನು ಒಪ್ಪಿಸಿಕೊಂಡನು. “ನಾವು ಮತ್ತುಬರಿಸುವ ಮಂದದ್ರವ (ಡೋಪ್)ವನ್ನು ಸೇದಿದೆವು ಮತ್ತು ಅನೇಕ ತಾಸುಗಳ ವರೆಗೆ ಮಾತಾಡುತ್ತಾ ಕುಳಿತುಕೊಂಡೆವು. . . . ಪ್ರತಿಯೊಬ್ಬರೂ ನಮ್ಮಂತೆಯೇ ಆಲೋಚಿಸಿದ್ದರೆಂದು ನಾವು ನಂಬಿದೆವಾದರೂ, ಯಾರಲ್ಲಿಯೂ ಉತ್ತರಗಳಿರಲಿಲ್ಲ” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ.
ಅನೇಕ ಯುವ ಜನರಂತೆ ಸೆಡ್ರಿಕ್, ಉದ್ರೇಕಕ್ಕಾಗಿ ಹಂಬಲಿಸಿದನು. ಕೇವಲ ಅಮಲೌಷಧಗಳನ್ನು ಸೇವಿಸುವುದು ಅವನನ್ನು ತೃಪ್ತಿಪಡಿಸಲಿಲ್ಲ. ಬೇಗನೆ ಅವನು ಕಳ್ಳತನಮಾಡುವುದರಲ್ಲಿ ಹಾಗೂ ಅಮಲೌಷಧಗಳನ್ನು ವಿಕ್ರಯಿಸುವುದರಲ್ಲಿ ಒಳಗೂಡಿದನು. ಆದರೂ ಅವನು ಹೊಸ ಪಂಥಾಹ್ವಾನಗಳನ್ನು ಆಶ್ರಯಿಸಿದನು. ಅವನು ನಿರ್ದಿಷ್ಟವಾದ ಐಟಮ್ಗಾಗಿ ಆರ್ಡರ್ ಮಾಡಿರುವವರಿಗೆ, ಕಳ್ಳತನಮಾಡಿ ಒದಗಿಸಲು ಪ್ರಾರಂಭಿಸಿದನು. “ಇದನ್ನು ಮಾಡುವುದರಲ್ಲಿ ನಾನು ಆನಂದಿಸಿದೆ” ಎಂದು ಅವನು ಒಪ್ಪಿಕೊಳ್ಳುತ್ತಾನೆ. “ಆದರೆ ನಾನು ಸಾಮಾನ್ಯ ಮನುಷ್ಯನಿಂದ ಎಂದೂ ಏನನ್ನೂ ಕದಿಯುತ್ತಿರಲಿಲ್ಲ. ನಾನು ಕಾರೊಂದನ್ನು ಕದ್ದಿರುವಲ್ಲಿ, ನಾನು ಅದನ್ನು ಒಳ್ಳೆಯ ಸ್ಥಿತಿಯಲ್ಲಿ ಬಿಟ್ಟುಬಿಡುತ್ತಿದ್ದೆ. ನಾನು ಒಂದು ವ್ಯಾಪಾರಕ್ಕೆ ಕನ್ನಹಾಕುತ್ತಿದ್ದಲ್ಲಿ, ವಿಮೆಯಿಂದ ಅವನ್ನು ಸರಿಪಡಿಸಸಾಧ್ಯವಿದೆಯೆಂದು ನನಗೆ ಗೊತ್ತಿರುವಲ್ಲಿ ಮಾತ್ರ ನಾನು ಹಾಗೆ ಮಾಡಿದೆ. ಇದು ನಾನು ಮಾಡಿದ್ದನ್ನು ಸಮರ್ಥಿಸುವಂತೆ ನನಗೆ ಸಹಾಯ ಮಾಡಿತು.” ನೀವು ನಿರೀಕ್ಷಿಸಬಹುದಾಗಿರುವಂತೆ, ಸೆಡ್ರಿಕ್ ಅಂತಿಮವಾಗಿ ಸೆರೆಮನೆಗೆ ಸೇರಿದನು.
ಸೆಡ್ರಿಕ್ ಜ್ಞಾಪಿಸಿಕೊಳ್ಳುವುದು: “ಒಬ್ಬ ಜೊತೆ ಸೆರೆವಾಸಿಯಾದ ಮಾರ್ಕ್, ನನ್ನೊಂದಿಗೆ ಮಾತಾಡಿದನು. ನನ್ನ ತೋಳಿನ ಮೇಲ್ಭಾಗದಲ್ಲಿ ನನಗೆ ದೊಡ್ಡ ಶಿಲುಬೆಯ ಹಚ್ಚೆ ಗುರುತು ಹಾಕಲ್ಪಟ್ಟಿರುವುದನ್ನು ಗಮನಿಸಿ, ನಾನು ಅದನ್ನು ಏಕೆ ಹಾಕಿಸಿಕೊಂಡಿದ್ದೇನೆಂದು ಅವನು ನನ್ನನ್ನು ಕೇಳಿದನು. ಅದು ನನಗೆ ಧಾರ್ಮಿಕವಾಗಿ ಪ್ರಮುಖವಾದದ್ದಾಗಿರಬಹುದೆಂದು ಅವನು ಅಭಿಪ್ರಯಿಸಿದನು.” ಕೆಲವು ವಾರಗಳ ಬಳಿಕ, ಮಾರ್ಕ್ ನನಗೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಒಂದು ಪ್ರತಿಯನ್ನು ಕೊಟ್ಟನು.c “‘ನೀವು ಸದಾ ಜೀವಿಸಬಲ್ಲಿರಿ’—ಆ ಕೆಲವೇ ಮಾತುಗಳು ನನ್ನನ್ನು ತತ್ಕ್ಷಣವೇ ಪ್ರಭಾವಿಸಿದವು. ನಾವು ಯಾವಾಗಲೂ ಮಾತಾಡಿದ್ದದ್ದು ಅದರ ಕುರಿತಾಗಿಯೇ ಆಗಿತ್ತಾದರೂ, ನಾವು ಅದರ ಕುರಿತಾದ ಸತ್ಯತೆಯನ್ನು ಕಂಡುಹಿಡಿಯಲು ಎಂದೂ ಶಕ್ತರಾಗಿರಲಿಲ್ಲ.” ಸೆರೆಮನೆಯನ್ನು ಸಂದರ್ಶಿಸಿದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಅನೇಕ ಚರ್ಚೆಗಳನ್ನು ನಡೆಸಿದ ಬಳಿಕ, ತಾನು ಯಾವುದಕ್ಕಾಗಿ ಹಂಬಲಿಸಿದೆನೋ ಅದನ್ನು ಸಾಧಿಸಸಾಧ್ಯವಿದೆ, ಆದರೆ ಕೇವಲ ದೇವರ ಮಾರ್ಗದಿಂದಲೇ ಎಂಬುದನ್ನು ಸೆಡ್ರಿಕ್ ಸ್ಪಷ್ಟವಾಗಿ ಗ್ರಹಿಸಿದನು.
“ನಾನು ನನ್ನ ಹಿಂದಿನ ಮಿತ್ರರೊಂದಿಗೆ ಸಹವಾಸಿಸುವುದನ್ನು ನಿಲ್ಲಿಸಿದ ಕೂಡಲೆ, ನಾನು ತ್ವರಿತಗತಿಯಲ್ಲಿ ಪ್ರಗತಿಯನ್ನು ಮಾಡಿದೆ” ಎಂದು ಸೆಡ್ರಿಕ್ ಹೇಳುತ್ತಾನೆ. ಅವನ ತಿಳುವಳಿಕೆ ಹಾಗೂ ನಿಜ ಸಂತೋಷವನ್ನು ಅರ್ಥಮಾಡಿಕೊಳ್ಳುವುದರಲ್ಲಿನ ಅವನ ಪ್ರಗತಿಯು ಸುಲಭವಾಗಿರಲಿಲ್ಲ. “ನಾನು ಇನ್ನೂ ಹೆಚ್ಚು ಪ್ರಗತಿಯನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. . . . ನಾನು ಯೋಚಿಸುವ ರೀತಿಯ ಕುರಿತಾಗಿ ನಾನು ಎಚ್ಚರವಾಗಿರಬೇಕು” ಎಂದು ಅವನು ಹೇಳುತ್ತಾನೆ. ಹೌದು, ಉದ್ರೇಕದ ಮೇಲೆ ಕೇಂದ್ರೀಕರಿಸುವಂತಹ ಕಾರ್ಯಚಟುವಟಿಕೆಗಳಲ್ಲಿ ಪ್ರವೃತ್ತನಾಗುವ ಮೂಲಕ ಮಾತ್ರವೇ ತನ್ನ ಗುರಿಗಳನ್ನು ಸಾಧಿಸಸಾಧ್ಯವಿದೆಯೆಂದು ಆಲೋಚಿಸುತ್ತಾ, ಆದರ್ಶವಾದಿಯಾಗಿರುವುದು ಅವನನ್ನು ಪಿಶಾಚನ ಪಾಶದೊಳಗೆ ಮುನ್ನಡಿಸಿತೆಂಬುದನ್ನು ಸೆಡ್ರಿಕ್ ಈಗ ಅರ್ಥಮಾಡಿಕೊಳ್ಳುತ್ತಾನೆ.
ಸಂತೋಷಕರವಾಗಿ, ಸೆಡ್ರಿಕ್ ಸೆರೆಮನೆಯಿಂದ ಹೊರಬಂದು ಬಹಳ ಸಮಯವಾಗಿದೆ, ಮತ್ತು ತಾವು ಏನನ್ನು ಹುಡುಕುತ್ತಿದ್ದರೋ ಅದನ್ನು ಕಂಡುಕೊಂಡಿರುವ ಇತರರೊಂದಿಗೆ ಅವನು ಕ್ರಮವಾದ ಸಾಹಚರ್ಯದಲ್ಲಿ ಆನಂದಿಸುತ್ತಾನೆ. ಈಗ ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದು, ಭೂಮಿಯ ಮೇಲಿನ ಪ್ರಮೋದವನದಲ್ಲಿ ಜೀವಿಸುವ ಅವರ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾನೆ. ಸೈತಾನಸಂಬಂಧಿತ ಪ್ರಭಾವವು ಅದರ ಎಲ್ಲ ಸೋಗಿನೊಂದಿಗೆ ಕೊನೆಗೊಳ್ಳುವುದನ್ನು ಸಹ ಅವನು ಎದುರುನೋಡುತ್ತಾನೆ.
ನಿಶ್ಚಯವಾಗಿಯೂ, ಸೆಡ್ರಿಕ್ನಂತಹ ಯುವ ಜನರಿಗೆ ಮಾತ್ರವೇ ಒಂದು ಭದ್ರವಾದ ಭವಿಷ್ಯತ್ತು ಇರುವುದಿಲ್ಲ; ಇತರರು ದೈವಿಕ ಹೆತ್ತವರಿಂದ ಬೆಳೆಸಲ್ಪಟ್ಟಿದ್ದಾರೆ, ಅವರು ತಮ್ಮ ಮಕ್ಕಳ ಮನಸ್ಸಿನಲ್ಲಿ ಬೈಬಲ್ ಸತ್ಯದ ಪ್ರೀತಿಯನ್ನು ತುಂಬಿದ್ದಾರೆ.
ದೈವಿಕ ತರಬೇತಿಯು ಲಾಭಾಂಶಗಳನ್ನು ತರುತ್ತದೆ
“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು” ಎಂದು, ಪುರಾತನ ಕಾಲದ ವಿವೇಕಿ ಅರಸನಾದ ಸೊಲೊಮೋನನು ಬರೆದನು. (ಜ್ಞಾನೋಕ್ತಿ 22:6) ಬೈಬಲ್ ಮಟ್ಟಗಳನ್ನು ಅನುಸರಿಸುವ ಆಯ್ಕೆಮಾಡಿರುವ ಸಂಪೂರ್ಣ ಮನಸ್ಸಿನ ಅನೇಕ ಯುವ ಜನರ ವಿದ್ಯಮಾನದಲ್ಲಿ ಇದು ಸತ್ಯವಾಗಿ ಪರಿಣಮಿಸಿದೆ.
ಶೀಲ, ಗಾರ್ಡನ್, ಮತ್ತು ಸೆರ ಇದನ್ನು ಮಾಡಿದರು. ರಾಜ್ಯ ಸುವಾರ್ತೆಯನ್ನು ಸಾರುವ ಮೂಲಕ, ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡುವ’ ಕ್ರಿಸ್ತನ ಆಜ್ಞೆಗೆ ವಿಧೇಯತೆ ತೋರಿಸುವುದರ ಮೇಲೆ ಅವರ ಹೆತ್ತವರು ಹೆಚ್ಚು ಪ್ರಮುಖತೆಯನ್ನು ನೀಡಿದ್ದನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. (ಮತ್ತಾಯ 24:14; 28:19, 20) “ಯಾವುದೇ ನಿರ್ಧಾರಗಳನ್ನು ಮಾಡಬೇಕಾಗಿರುತ್ತಿದ್ದಲ್ಲಿ, ತಾಯಿಯವರು ಹಾಗೂ ನಾನು, ‘ಇದು ಸಾಕ್ಷಿಕಾರ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ?’ ಎಂದು ಪರಸ್ಪರ ಹೇಳಿಕೊಳ್ಳುವುದು ವಾಡಿಕೆಯಾಗಿತ್ತು” ಎಂದು ಶೀಲ ಜ್ಞಾಪಿಸಿಕೊಳ್ಳುತ್ತಾಳೆ. “ಈ ಪರ್ಯಾಲೋಚನೆಯ ಫಲಿತಾಂಶವಾಗಿ ನಾವು ಅನೇಕ ಕಾರ್ಯಯೋಜನೆಗಳನ್ನು ಕೈಬಿಟ್ಟೆವು” ಎಂದು ಅವಳು ಒಪ್ಪಿಕೊಳ್ಳುತ್ತಾ, ಕೂಡಿಸಿ ಹೇಳಿದ್ದು, “ಆದರೆ ಎಂತಹ ಆಶೀರ್ವಾದಗಳು ನಮಗೆ ದೊರಕಿದವು!” ಸುವಾರ್ತೆಯೊಂದಿಗೆ ಜನರ ಮನೆಗಳನ್ನು ಸಂದರ್ಶಿಸುತ್ತಾ ಕಳೆದ ದೀರ್ಘ ದಿನಗಳ ಅಂತ್ಯಭಾಗದಲ್ಲಿಯೂ, ಶೀಲ ಹಾಗೂ ಅವಳ ತಾಯಿ, ಹಾಡುತ್ತಾ ಪ್ರಯಾಸದಿಂದ ನಡೆಯುತ್ತಾ ಮನೆಗೆ ಹಿಂದಿರುಗುತ್ತಿದ್ದರು. “ನನಗೆ ಸಂಪೂರ್ಣ ಆನಂದವಾಗುತ್ತಿತ್ತು. . . . ಈಗಲೂ ಅದರ ಅನುಭವ ನನಗಾಗುತ್ತದೆ” ಎಂದು ಅವಳು ಹೇಳುತ್ತಾಳೆ.
ಆನಂದಭರಿತವಾದ ಅನೇಕ ಶನಿವಾರ ಸಾಯಂಕಾಲಗಳನ್ನು ಗಾರ್ಡನ್ ಜ್ಞಾಪಿಸಿಕೊಳ್ಳುತ್ತಾನೆ. “ಸಭೆಯ ಹಿರಿಯರ ಮನೆಗಳಿಗೆ ನನ್ನನ್ನು ಆಮಂತ್ರಿಸಲಾಗುತ್ತಿತ್ತು. ಅಲ್ಲಿ ನಾವು ಪ್ರಯೋಜನದಾಯಕವಾದ ಬೈಬಲ್ ಕ್ವಿಸ್ಗಳು ಮತ್ತು ಚರ್ಚೆಗಳನ್ನು ನಡೆಸುತ್ತಿದ್ದೆವು. ಬೈಬಲಿನಿಂದ ವಚನಗಳನ್ನು ಬಾಯಿಪಾಠಮಾಡುವಂತೆ, ಶಾಸ್ತ್ರೀಯ ವಿಷಯಗಳ ಕುರಿತು ನಿರರ್ಗಳವಾಗಿ ಮಾತಾಡುವಂತೆ, ಸಾರುವಿಕೆಯ ಒಂದು ಅನುಭವವನ್ನು ಹೇಳುವಂತೆ, ಮತ್ತು ರಾಜ್ಯ ಕಾರ್ಯವು ವಿಸ್ತರಿಸುತ್ತಿರುವ ವಿಧವನ್ನು ಕಲಿಯುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗುತ್ತಿತ್ತು. . . . ಈ ಎಲ್ಲ ವಿಷಯಗಳು, ಒಂದು ಒಳ್ಳೆಯ ಅಸ್ತಿವಾರವನ್ನು ಹಾಕುವಂತೆ ಹಾಗೂ ಯೆಹೋವ ದೇವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನನಗೆ ಸಹಾಯ ಮಾಡಿದವು” ಎಂದು ಗಾರ್ಡನ್ ಜ್ಞಾಪಿಸಿಕೊಳ್ಳುತ್ತಾನೆ.
ಸಂದರ್ಶಿಸುತ್ತಿದ್ದ ಸಾಕ್ಷಿಗಳೊಂದಿಗೆ ಕಳೆದ ಸಾಯಂಕಾಲಗಳ ಕುರಿತು ಸೆರಳಿಗೆ ಸವಿನೆನಪುಗಳಿವೆ. “ನಾವು ಒಟ್ಟುಗೂಡಿ ಊಟಮಾಡುತ್ತಿದ್ದೆವು. ಅನಂತರ ನಮ್ಮ ಸಂದರ್ಶನವನ್ನು ಮುಗಿಸಲಿಕ್ಕಾಗಿ, ನಾವು ಪಿಯಾನೊ ನುಡಿಸಿದೆವು, ಇದರೊಂದಿಗೆ ದೇವರ ರಾಜ್ಯದ ಕುರಿತಾದ ಸಂಗೀತಗಳನ್ನು ಹಾಡುವವರೂ ಜೊತೆಗೂಡುತ್ತಿದ್ದರು. ನಿಜವಾಗಿಯೂ ಸಂಗೀತವು ಬಹಳ ಮಟ್ಟಿಗೆ ನಮಗೆ ಸಹಾಯ ಮಾಡಿತು—ವಿಶೇಷವಾಗಿ ನಮ್ಮ ಶಾಲಾ ವರ್ಷಗಳ ಸಮಯದಲ್ಲಿ. ಏಕೆಂದರೆ ಒಂದು ಕುಟುಂಬದೋಪಾದಿ ನಾವು ಕೆಲಸಗಳನ್ನು ಒಟ್ಟುಗೂಡಿ ಮಾಡುವಂತೆ ಇದು ನಮ್ಮನ್ನು ಅನುಮತಿಸಿತು.”
ಯೆಹೋವನನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುವ ಎಲ್ಲ ಯುವ ಜನರಿಗೆ, ಆದರ್ಶಪ್ರಾಯವಾದ ಕುಟುಂಬ ಸನ್ನಿವೇಶಗಳಿರುವುದಿಲ್ಲವೆಂಬುದು ನಿಶ್ಚಯ. ಆದರೂ, ಸಭೆಯಲ್ಲಿರುವ ಇತರ ಸಾಕ್ಷಿ ಕುಟುಂಬಗಳೊಂದಿಗಿನ ನಿಕಟ ಸಹವಾಸವು, ಅವರಿಗೆ ಭದ್ರತೆ ಮತ್ತು ತಮಗೆ ಬಂಧುಬಳಗದವರಿದ್ದಾರೆ ಎಂಬ ಅನಿಸಿಕೆಯನ್ನು ಕೊಡುತ್ತದೆ.
ಭವಿಷ್ಯತ್ತಿಗಾಗಿ ಒಂದು ಭದ್ರವಾದ ಅಸ್ತಿವಾರವನ್ನು ಕೂಡಿಸಿಟ್ಟುಕೊಳ್ಳಿರಿ
ಇಂದು ಯುವ ಜನರಿಗೆ ಒಂದು ಆಯ್ಕೆಯಿದೆ. ಯೇಸುವಿನಿಂದ ಮುಂತಿಳಿಸಲ್ಪಟ್ಟ ಬರಲಿರುವ “ಮಹಾ ಸಂಕಟ”ದಲ್ಲಿ (NW), ಈ ದುಷ್ಟ ಲೋಕವು ರಭಸದಿಂದ ನಾಶನದ ಕಡೆಗೆ ಧಾವಿಸುವಾಗ, ಅದರೊಂದಿಗೆ ಅವರು ಮುಂದುವರಿಯಸಾಧ್ಯವಿದೆ. ಅಥವಾ ಪ್ರೇರಿತ ಕೀರ್ತನೆಗಾರನಾದ ಆಸಾಫನು ಹಾಡಿದಂತೆ, ಅವರು “ನನ್ನಲ್ಲಿಯೇ [ದೇವರಲ್ಲಿಯೇ] ಭರವಸವಿಟ್ಟು ನನ್ನ [ಆತನ] ಆಜ್ಞೆಗಳನ್ನು ಕೈಕೊ”ಳ್ಳಸಾಧ್ಯವಿದೆ. ದೇವರಿಗೆ ವಿಧೇಯತೆಯು, “ಮೊಂಡರೂ ಅವಿಧೇಯರೂ ಚಪಲಚಿತ್ತರೂ ದೇವದ್ರೋಹಿಗಳೂ” ಆಗುವುದರಿಂದ ಅವರನ್ನು ತಡೆಯುವುದು.—ಮತ್ತಾಯ 24:21; ಕೀರ್ತನೆ 78:6-8.
ಲೋಕವ್ಯಾಪಕವಿರುವ ಯೆಹೋವನ ಸಾಕ್ಷಿಗಳ 80,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ, ನೀವು ಶ್ಲಾಘಿಸಸಾಧ್ಯವಿರುವಂತಹ ಅನೇಕ ಯುವ ಜನರನ್ನು ನೀವು ಕಂಡುಕೊಳ್ಳುವಿರಿ. “ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟು”ಕೊಳ್ಳುವಂತೆ ಪೌಲನು ಯುವ ತಿಮೊಥೆಯನಿಗೆ ಕೊಟ್ಟ ಬುದ್ಧಿವಾದಕ್ಕೆ ಅವರು ಲಕ್ಷ್ಯಕೊಟ್ಟಿದ್ದಾರೆ. ಇದರ ಫಲಿತಾಂಶವಾಗಿ, ಈಗ ಅವರು “ವಾಸ್ತವವಾದ ಜೀವನದ ಮೇಲೆ ಬಲವಾದ ಹಿಡಿತವನ್ನು” (NW) ಹೊಂದಿದ್ದಾರೆ. (1 ತಿಮೊಥೆಯ 6:18, 19) ಈ ನಿಜ ಕ್ರೈಸ್ತರ ಕೂಟಗಳಿಗೆ ಹಾಜರಾಗುವ ಮೂಲಕ, ಇವರ ಕುರಿತು ಇನ್ನೂ ಹೆಚ್ಚಿನ ವಿಷಯವನ್ನು ಕಂಡುಕೊಳ್ಳಿರಿ. ಆಗ ನಿಮಗೂ ಒಂದು ಭದ್ರವಾದ ಭವಿಷ್ಯತ್ತಿನ ನಿರೀಕ್ಷೆಯಿರಬಲ್ಲದು.
[ಅಧ್ಯಯನ ಪ್ರಶ್ನೆಗಳು]
a ಮತ್ತಾಯ 8:28 ಮತ್ತು 2 ತಿಮೊಥೆಯ 3:1ರಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಶಬ್ದವನ್ನೇ “ಉಗ್ರ”ವು ಭಾಷಾಂತರಿಸುತ್ತದೆ.
b ಹೆಸರುಗಳು ಬದಲಾಯಿಸಲ್ಪಟ್ಟಿವೆ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 7 ರಲ್ಲಿರುವ ಚಿತ್ರ]
ಯೇಸು ವಾಸಿಮಾಡಿದ ಆ “ಬಹು ಉಗ್ರರಾಗಿ”ದ್ದ ಪುರುಷರ ಹಿಂದೆ, ದುಷ್ಟಾತ್ಮಗಳು ಇದ್ದವು
[ಪುಟ 8 ರಲ್ಲಿರುವ ಚಿತ್ರ]
“ಭವಿಷ್ಯತ್ತಿಗಾಗಿ ಒಂದು ಒಳ್ಳೆಯ ಅಸ್ತಿವಾರವನ್ನು” ಕಟ್ಟುವುದು