ಅಧ್ಯಾಯ 50
ಹಿಂಸೆಯನ್ನು ಎದುರಿಸಲು ಸಿದ್ಧತೆ
ಸಾರುವ ಕೆಲಸವನ್ನು ನಡಿಸುವ ವಿಧಾನಗಳನ್ನು ತನ್ನ ಅಪೊಸ್ತಲರಿಗೆ ಉಪದೇಶಿಸಿದ ನಂತರ, ಯೇಸುವು ವಿರೋಧಿಗಳ ಕುರಿತು ಅವರನ್ನು ಎಚ್ಚರಿಸುತ್ತಾನೆ. ಅವನನ್ನುವದು: “ನೋಡಿರಿ ! ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. . . . ಇದಲ್ಲದೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ. ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು.”
ಅವನ ಹಿಂಬಾಲಕರು ಕಠಿಣತಮ ಹಿಂಸೆಯನ್ನು ಎದುರಿಸುವುದಾದರೂ, ಯೇಸು ಅವರಿಗೆ ಪುನಃ ಆಶ್ವಾಸನೆಕೊಟ್ಟದ್ದು: “ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ. ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು. ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರವಾಗಿ ಮಾತಾಡುವದು.”
ಯೇಸುವು ಮುಂದುವರಿಸಿದ್ದು: “ಇದಲ್ಲದೆ ಅಣ್ಣನು ತಮ್ಮನನ್ನು, ತಂದೆಯು ಮಗನನ್ನು ಮರಣಕ್ಕೆ ಒಪ್ಪಿಸುವರು; ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು.” ಅವನು ಕೂಡಿಸಿದ್ದು: “ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.”
ಸಾರುವದು ಅತೀ ಪ್ರಾಮುಖ್ಯವಾದದ್ದು, ಆದ್ದರಿಂದ ಆ ಕೆಲಸವನ್ನು ನಡಿಸಲು ಸ್ವತಂತ್ರರಾಗಿರಲು ಸಾಧ್ಯವಾಗುವಂತೆ ಸ್ವಂತ ವಿವೇಚನೆಯನ್ನುಪಯೋಗಿಸುವ ಅಗತ್ಯವನ್ನು ಯೇಸು ಒತ್ತಿಹೇಳುತ್ತಾನೆ. “ಒಂದು ಊರಲ್ಲಿ ನಿಮ್ಮನ್ನು ಹಿಂಸೆ ಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ” ಎಂದು ಅವನನ್ನುತ್ತಾನೆ. “ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ಯ ಜನರ ಊರುಗಳ ಸಂಚಾರವನ್ನು ತೀರಿಸಿರುವದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಈ ಉಪದೇಶವನ್ನು, ಎಚ್ಚರಿಕೆಯನ್ನು ಮತ್ತು ಪ್ರೋತ್ಸಾಹವನ್ನು ತನ್ನ ಹನ್ನೆರಡು ಅಪೊಸ್ತಲರಿಗೆ ಯೇಸು ಕೊಟ್ಟನೆಂಬದು ಸತ್ಯ. ಆದರೆ ಇದು ಅವನ ಮರಣ ಮತ್ತು ಪುನರುತ್ಥಾನದ ನಂತರ ಲೋಕವ್ಯಾಪಕ ಸಾರುವಿಕೆಯಲ್ಲಿ ಭಾಗವಹಿಸುವವರಿಗೂ ಕೊಡಲ್ಪಟ್ಟಿತ್ತೆಂದು ಅರ್ಥವಾಗುತ್ತದೆ. ಅವನು, ತನ್ನ ಶಿಷ್ಯರನ್ನು ‘ಎಲ್ಲರೂ ಹಗೆಮಾಡುವರು’ ಎಂಬ ಮಾತಿನಿಂದ, ಯಾರ ಬಳಿಗೆ ಸಾರಲು ಅಪೊಸ್ತಲರನ್ನು ಕಳುಹಿಸಿದನೋ, ಕೇವಲ ಆ ಇಸ್ರಾಯೇಲ್ಯರಿಂದ ಮಾತ್ರವಲ್ಲ ಎಂದು ತೋರಿಸಲ್ಪಟ್ಟಿದೆ. ಇನ್ನೂ ಹೆಚ್ಚಾಗಿ, ಅವರನ್ನು ಕೊಂಚ ಸಾರುವ ಕ್ರಿಯೆಯಲ್ಲಿ ಯೇಸು ಕಳುಹಿಸಿದಾಗ, ಅಪೊಸ್ತಲರನ್ನು ಅರಸುಗಳ ಮತ್ತು ಅಧಿಪತಿಗಳ ಮುಂದಕ್ಕೆ ತೆಗೆದುಕೊಂಡು ಹೋಗಲಿಲ್ಲವೆಂದು ರುಜುವಾತುಗಳು ತೋರಿಸುತ್ತವೆ. ಅಷ್ಟಲ್ಲದೇ, ಕುಟುಂಬ ಸದಸ್ಯರಿಂದ ವಿಶ್ವಾಸಿಗಳು ಆಗ ಮರಣಕ್ಕೆ ಒಪ್ಪಿಸಲ್ಪಟ್ಟಿರಲಿಲ್ಲ.
“ಮನುಷ್ಯಕುಮಾರನು ಬರುವಷ್ಟರಲ್ಲಿ” ಅವನ ಶಿಷ್ಯರು ಸಾರುವ ಸಂಚಾರವನ್ನು ತೀರಿಸುವದಿಲ್ಲವೆಂದು ಹೇಳುವಾಗ, ಅರ್ಮಗೆದ್ದೋನಿನಲ್ಲಿ ಯೆಹೋವನ ಹತಿಸುವ ಅಧಿಕಾರಿಯಾಗಿ ಮಹಿಮಾಭರಿತ ಅರಸ ಯೇಸು ಕ್ರಿಸ್ತನು ಬರುವ ಮೊದಲು, ದೇವರ ಸ್ಥಾಪಿತ ರಾಜ್ಯದ ಕುರಿತಾದ ಸಾರುವಿಕೆಯಿಂದ ಅವನ ಶಿಷ್ಯರು ಇಡೀ ನಿವಾಸಿತ ಭೂಮಿಯ ಸಂಚಾರವನ್ನು ತೀರಿಸುವದಿಲ್ಲವೆಂದು ಯೇಸು ಪ್ರವಾದನಾ ರೂಪದಲ್ಲಿ ನಮಗನ್ನುತ್ತಾನೆ.
ಅವನ ಸಾರುವ ಉಪದೇಶಗಳನ್ನು ಮುಂದುವರಿಸುತ್ತಾ ಯೇಸುವಂದದ್ದು: “ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಧಣಿಗಿಂತ ಆಳು ದೊಡ್ಡವನಲ್ಲ.” ದೇವರ ರಾಜ್ಯವನ್ನು ಸಾರಿದಕ್ಕಾಗಿ ಅವನಂತೆಯೇ ಯೇಸುವಿನ ಶಿಷ್ಯರು ತದ್ರೀತಿಯ ಕೆಟ್ಟ ಉಪಚಾರ ಮತ್ತು ಹಿಂಸೆಯನ್ನು ನಿರೀಕ್ಷಿಸತಕ್ಕದ್ದು. ಆದರೂ ಅವನು ಎಚ್ಚರಿಸುವುದು: “ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲಲ್ಲಾರದವರಿಗೆ ಹೆದರಬೇಡಿರಿ. ಆತ್ಮ ದೇಹ ಎರಡನ್ನೂ ಕೂಡ ಗೆಹೆನ್ನಾದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.”
ಈ ವಿಷಯದಲ್ಲಿ ಯೇಸು ಒಂದು ಮಾದರಿಯನ್ನಿಟ್ಟನು. ಎಲ್ಲಾ ಶಕ್ತಿಯಿದ್ದಾತನಾತ ಯೆಹೋವ ದೇವರಿಗೆ ತನ್ನ ನಿಷ್ಠೆಯಲ್ಲಿ ಒಪ್ಪಂದ ಮಾಡುವ ಬದಲಾಗಿ ಅವನು ಮರಣವನ್ನು ಕೂಡ ನಿರ್ಭೀತಿಯಿಂದ ತಾಳಿಕೊಂಡನು. ಹೌದು, ಒಬ್ಬನ “ಆತ್ಮ” (ಇಲ್ಲಿ, ಬದುಕುವ ಆತ್ಮವಾದ ಒಬ್ಬನ ಭಾವೀ ಪ್ರತೀಕ್ಷೆಗಳು ಎಂದರ್ಥ)ವನ್ನು ನಾಶಮಾಡಲು ಯೆಹೋವನಿಗೆ ಸಾಧ್ಯವಿದೆ ಅಥವಾ, ಬದಲಾಗಿ ನಿತ್ಯಜೀವದಲ್ಲಿ ಆನಂದಿಸಲು ವ್ಯಕ್ತಿಯೊಬ್ಬನನ್ನು ಪುನರುತ್ಥಾನ ಮಾಡಲು ಕೂಡ ಸಾಧ್ಯವಿದೆ. ಎಂಥಾ ಪ್ರೀತಿಯ, ಕನಿಕರದ ಸ್ವರ್ಗೀಯ ತಂದೆ ಯೆಹೋವನಾಗಿರುತ್ತಾನೆ!
ಅವರೆಡೆಗೆ ಯೆಹೋವನಿಗಿರುವ ಪ್ರೀತಿಯ ಲಕ್ಷ್ಯವನ್ನು ಎತ್ತಿತೋರಿಸುವ ಉದಾಹರಣೆಯೊಂದಿಗೆ ಯೇಸು ತನ್ನ ಶಿಷ್ಯರನ್ನು ಹುರಿದುಂಬಿಸುತ್ತಾನೆ. “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ” ಎಂದು ಅವನು ಪ್ರಶ್ನಿಸುತ್ತಾನೆ. “ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹಾ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ. ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.”
ತನ್ನ ಶಿಷ್ಯರು ಸಾರಬೇಕೆಂದು ಯೇಸು ನಿಯೋಗಿಸಿದ ರಾಜ್ಯ ಸಂದೇಶವು ಮನೆಗಳನ್ನು ವಿಭಾಗಿಸುತ್ತದೆ, ಯಾಕಂದರೆ ಮನೆಯ ಕೆಲವು ಸದಸ್ಯರು ಅದನ್ನು ಸ್ವೀಕರಿಸುವರು, ಇತರರು ನಿರಾಕರಿಸುವರು. “ಭೂಲೋಕದ ಮೇಲೆ ಸಮಾಧಾನವನ್ನು ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ” ಎಂದವನು ವಿವರಿಸುತ್ತಾನೆ. “ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು.” ಆದಕಾರಣ, ಕುಟುಂಬದ ಸದಸ್ಯನೊಬ್ಬನಿಗೆ ಬೈಬಲಿನ ಸತ್ಯವನ್ನು ಸ್ವೀಕರಿಸಲು ಧೈರ್ಯಬೇಕು. “ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ” ಎಂದು ಯೇಸು ಅವಲೋಕಿಸುತ್ತಾನೆ.
ತನ್ನ ಉಪದೇಶವನ್ನು ಸಮಾಪ್ತಿಗೊಳಿಸುತ್ತಾ, ತನ್ನ ಶಿಷ್ಯರನ್ನು ಸೇರಿಸಿಕೊಳ್ಳುವವನು ತನ್ನನ್ನು ಸೇರಿಸಿಕೊಳ್ಳುತ್ತಾನೆಂದು ಯೇಸು ವಿವರಿಸುತ್ತಾನೆ. “ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಮತ್ತಾಯ 10:16-42.
▪ ತನ್ನ ಶಿಷ್ಯರಿಗೆ ಯೇಸು ಯಾವ ಎಚ್ಚರಿಕೆಯನ್ನು ನೀಡಿದನು?
▪ ಅವರಿಗೆ ಯಾವ ಉತ್ತೇಜನೆ ಮತ್ತು ಸಂತೈಸುವಿಕೆ ಅವನು ಕೊಟ್ಟನು?
▪ ಆಧುನಿಕ ದಿನದ ಕ್ರೈಸ್ತರಿಗೂ ಯೇಸುವಿನ ಉಪದೇಶಗಳು ಅನ್ವಯಿಸುವುದು ಏಕೆ?
▪ ಯಾವ ರೀತಿಯಲ್ಲಿ ಯೇಸುವಿನ ಶಿಷ್ಯನೊಬ್ಬನು ತನ್ನ ಗುರುವಿಗಿಂತ ದೊಡ್ಡವನಲ್ಲ?