“ನನ್ನಿಂದ ಕಲಿತುಕೊಳ್ಳಿರಿ”
“ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ ಮತ್ತು ನನ್ನಿಂದ ಕಲಿತುಕೊಳ್ಳಿರಿ, ಏಕೆಂದರೆ ನಾನು ಮೃದುಸ್ವಭಾವದವನೂ ದೀನ ಮನಸ್ಸುಳ್ಳವನೂ ಆಗಿದ್ದೇನೆ, ಮತ್ತು ನೀವು ನಿಮ್ಮ ಆತ್ಮಗಳಿಗೆ ಚೈತನ್ಯವನ್ನು ಕಂಡುಕೊಳ್ಳುವಿರಿ.”—ಮತ್ತಾಯ 11:29, NW.
1. ಯೇಸುವಿನಿಂದ ಕಲಿಯುವುದು ಹಿತಕರವಾದದ್ದೂ ಸಂಪದ್ಭರಿತವಾದದ್ದೂ ಆಗಿರಸಾಧ್ಯವಿದೆ ಏಕೆ?
ಯೇಸು ಕ್ರಿಸ್ತನು ಯಾವಾಗಲೂ ಯೋಗ್ಯವಾದ ವಿಷಯಗಳ ಕುರಿತಾಗಿಯೇ ಆಲೋಚಿಸಿದನು, ಕಲಿಸಿದನು ಮತ್ತು ಅವುಗಳಿಗನುಸಾರ ವರ್ತಿಸಿದನು. ಅವನ ಭೂಜೀವಿತವು ಅಲ್ಪಾವಧಿಯದ್ದಾಗಿತ್ತು, ಆದರೆ ಅವನು ಪ್ರತಿಫಲದಾಯಕ ಹಾಗೂ ಸಂತೃಪ್ತಿಕರವಾದ ಜೀವನವೃತ್ತಿಯಲ್ಲಿ ಆನಂದಿಸಿದನು. ಮತ್ತು ಸಂತೋಷಚಿತ್ತನಾಗಿಯೇ ಉಳಿದನು. ಅವನು ಶಿಷ್ಯರನ್ನು ಒಟ್ಟುಗೂಡಿಸಿ, ದೇವರನ್ನು ಹೇಗೆ ಆರಾಧಿಸಬೇಕು, ಮಾನವಕುಲವನ್ನು ಹೇಗೆ ಪ್ರೀತಿಸಬೇಕು ಮತ್ತು ಲೋಕವನ್ನು ಹೇಗೆ ಜಯಿಸಬೇಕು ಎಂಬುದನ್ನು ಕಲಿಸಿದನು. (ಯೋಹಾನ 16:33) ಅವನು ಅವರ ಹೃದಯಗಳಲ್ಲಿ ನಿರೀಕ್ಷೆಯನ್ನು ತುಂಬಿಸಿದನು ಮತ್ತು “ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದನು.” (2 ತಿಮೊಥೆಯ 1:10) ಒಂದುವೇಳೆ ನೀವು ಅವನ ಶಿಷ್ಯರ ನಡುವೆ ಇರುತ್ತಿದ್ದಲ್ಲಿ, ಒಬ್ಬ ಶಿಷ್ಯನಾಗಿರುವುದರ ಅರ್ಥವೇನೆಂದು ನೀವು ನೆನಸುತ್ತಿದ್ದಿರಿ? ಶಿಷ್ಯರ ಕುರಿತು ಯೇಸು ಏನು ಹೇಳುತ್ತಾನೆ ಎಂಬುದನ್ನು ಪರಿಗಣಿಸುವ ಮೂಲಕ, ನಮ್ಮ ಜೀವಿತಗಳನ್ನು ಹೇಗೆ ಸಂಪದ್ಭರಿತಗೊಳಿಸುವುದು ಎಂಬುದನ್ನು ನಾವು ಕಲಿಯಸಾಧ್ಯವಿದೆ. ಅವನ ದೃಷ್ಟಿಕೋನವನ್ನು ಅಂಗೀಕರಿಸುವುದು ಮತ್ತು ಕೆಲವು ಮೂಲಭೂತ ತತ್ತ್ವಗಳನ್ನು ಅನ್ವಯಿಸಿಕೊಳ್ಳುವುದು ಅದರಲ್ಲಿ ಒಳಗೂಡಿದೆ.—ಮತ್ತಾಯ 10:24, 25; ಲೂಕ 14:26, 27; ಯೋಹಾನ 8:31, 32; 13:35; 15:8.
2, 3. (ಎ) ಯೇಸುವಿನ ಶಿಷ್ಯನಾಗುವುದರ ಅರ್ಥವೇನು? (ಬಿ) ‘ನಾನು ಯಾರ ಶಿಷ್ಯನಾಗಿದ್ದೇನೆ’ ಎಂದು ನಾವು ನಮ್ಮನ್ನು ಕೇಳಿಕೊಳ್ಳುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?
2 ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ, “ಶಿಷ್ಯ” ಎಂದು ಭಾಷಾಂತರಿಸಲ್ಪಟ್ಟಿರುವ ಶಬ್ದವು, ಮೂಲತಃ ಒಂದು ವಿಷಯದ ಕಡೆಗೆ ಮನಸ್ಸು ಹರಿಸುವವನು ಅಥವಾ ಕಲಿತುಕೊಳ್ಳುವವನು ಎಂಬರ್ಥವುಳ್ಳದ್ದಾಗಿದೆ. ಇದಕ್ಕೆ ಸಂಬಂಧಿಸಿದ ಒಂದು ಶಬ್ದವು ನಮ್ಮ ಮುಖ್ಯ ವಚನವಾದ ಮತ್ತಾಯ 11:29ರಲ್ಲಿ (NW) ಕಂಡುಬರುತ್ತದೆ: “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ ಮತ್ತು ನನ್ನಿಂದ ಕಲಿತುಕೊಳ್ಳಿರಿ, ಏಕೆಂದರೆ ನಾನು ಮೃದುಸ್ವಭಾವದವನೂ ದೀನ ಮನಸ್ಸುಳ್ಳವನೂ ಆಗಿದ್ದೇನೆ, ಮತ್ತು ನೀವು ನಿಮ್ಮ ಆತ್ಮಗಳಿಗೆ ಚೈತನ್ಯವನ್ನು ಕಂಡುಕೊಳ್ಳುವಿರಿ.” ಹೌದು, ಒಬ್ಬ ಶಿಷ್ಯನು ಕಲಿಯುವವನಾಗಿದ್ದಾನೆ. ಸಾಮಾನ್ಯವಾಗಿ ಸುವಾರ್ತಾ ಪುಸ್ತಕಗಳು “ಶಿಷ್ಯ” ಎಂಬ ಶಬ್ದವನ್ನು, ಯೇಸು ಸಾರುತ್ತಿದ್ದಾಗ ಅವನೊಂದಿಗೆ ಪ್ರಯಾಣಿಸಿದ ಹಾಗೂ ಆತನಿಂದ ಉಪದೇಶವನ್ನು ಪಡೆದುಕೊಂಡಿದ್ದ ಅವನ ಆಪ್ತ ಹಿಂಬಾಲಕರಿಗೆ ಮಾತ್ರ ಅನ್ವಯಿಸುತ್ತವೆ. ಕೆಲವರು ಯೇಸುವಿನ ಬೋಧನೆಗಳನ್ನು ಸುಮ್ಮನೆ ಅಂಗೀಕರಿಸಿದ್ದಿರಬಹುದು, ಅದು ಕೂಡ ರಹಸ್ಯವಾಗಿ. (ಲೂಕ 6:17; ಯೋಹಾನ 19:38) ಸುವಾರ್ತಾ ಬರಹಗಾರರು ‘[ಸ್ನಾನಿಕನಾದ] ಯೋಹಾನನ ಶಿಷ್ಯರು ಹಾಗೂ ಫರಿಸಾಯರ ಶಿಷ್ಯರ’ ಕುರಿತೂ ಬರೆದರು. (ಮಾರ್ಕ 2:18) ‘ಫರಿಸಾಯರ ಬೋಧನೆಯ ಕುರಿತು ಎಚ್ಚರಿಕೆಯಾಗಿರಬೇಕೆಂದು’ ಸಹ ಯೇಸು ತನ್ನ ಹಿಂಬಾಲಕರಿಗೆ ಎಚ್ಚರಿಕೆ ನೀಡಿದ್ದರಿಂದ, ‘ನಾನು ಯಾರ ಶಿಷ್ಯನಾಗಿದ್ದೇನೆ?’ ಎಂದು ನಾವು ನಮ್ಮನ್ನೇ ಕೇಳಿಕೊಳ್ಳಸಾಧ್ಯವಿದೆ.—ಮತ್ತಾಯ 16:12.
3 ಒಂದುವೇಳೆ ನಾವು ಯೇಸುವಿನ ಶಿಷ್ಯರಾಗಿರುವಲ್ಲಿ, ಅವನಿಂದ ನಾವು ಕಲಿತುಕೊಂಡಿರುವಲ್ಲಿ, ನಮ್ಮ ಸಮಕ್ಷಮದಲ್ಲಿ ಇತರರಿಗೆ ಆತ್ಮಿಕವಾಗಿ ಚೈತನ್ಯವನ್ನು ಪಡೆದುಕೊಂಡಂಥ ಅನುಭವವಾಗಬೇಕು. ನಾವು ಮೃದುಸ್ವಭಾವಿಗಳೂ ದೀನ ಮನಸ್ಸಿನವರೂ ಆಗಿದ್ದೇವೆ ಎಂಬುದನ್ನು ಅವರು ವಿವೇಚಿಸಿ ತಿಳಿದುಕೊಳ್ಳಶಕ್ತರಾಗಬೇಕು. ಒಂದುವೇಳೆ ನಮ್ಮ ಉದ್ಯೋಗದ ಸ್ಥಳದಲ್ಲಿ ನಮಗೆ ಆಡಳಿತ ನಿರ್ವಹಣೆಯ ಜವಾಬ್ದಾರಿಗಳಿರುವಲ್ಲಿ, ನಾವು ಹೆತ್ತವರಾಗಿರುವಲ್ಲಿ, ಅಥವಾ ಕ್ರೈಸ್ತ ಸಭೆಯಲ್ಲಿ ಕುರಿಪಾಲನಾ ಕರ್ತವ್ಯಗಳಿರುವಲ್ಲಿ, ಯೇಸು ಹೇಗೆ ತನ್ನ ರಕ್ಷಣೆಯ ಕೆಳಗಿದ್ದ ಜನರನ್ನು ನೋಡಿಕೊಂಡನೋ ಅದೇ ರೀತಿ ನಮ್ಮ ರಕ್ಷಣೆಯ ಕೆಳಗಿರುವವರನ್ನೂ ನಾವು ನೋಡಿಕೊಳ್ಳುತ್ತಿದ್ದೇವೆ ಎಂಬ ಅನಿಸಿಕೆ ಅವರಿಗಾಗುತ್ತದೋ?
ಯೇಸು ಜನರೊಂದಿಗೆ ವ್ಯವಹರಿಸಿದ ವಿಧ
4, 5. (ಎ) ಸಮಸ್ಯೆಗಳಿದ್ದ ಜನರೊಂದಿಗೆ ಯೇಸು ಹೇಗೆ ವ್ಯವಹರಿಸಿದನು ಎಂಬುದನ್ನು ತಿಳಿದುಕೊಳ್ಳುವುದು ಕಷ್ಟಕರವಲ್ಲವೇಕೆ? (ಬಿ) ಒಬ್ಬ ಫರಿಸಾಯನ ಮನೆಯಲ್ಲಿ ಊಟಮಾಡುತ್ತಿರುವಾಗ, ಯೇಸುವಿಗೆ ಯಾವ ಅನುಭವವಾಯಿತು?
4 ಜನರೊಂದಿಗೆ ಅದರಲ್ಲೂ ವಿಶೇಷವಾಗಿ ಗಂಭೀರ ಸಮಸ್ಯೆಗಳಿದ್ದವರೊಂದಿಗೆ ಯೇಸು ಹೇಗೆ ವ್ಯವಹರಿಸಿದನು ಎಂಬುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಇದನ್ನು ತಿಳಿದುಕೊಳ್ಳುವುದು ಅಷ್ಟೇನೂ ಕಷ್ಟಕರವಾಗಿರಬಾರದು; ಏಕೆಂದರೆ, ಇತರರೊಂದಿಗಿನ ಯೇಸುವಿನ ಮುಖಾಮುಖಿ ಭೇಟಿಗಳ ಕುರಿತಾದ ಅನೇಕ ವರದಿಗಳು ಬೈಬಲಿನಲ್ಲಿವೆ. ಅವನು ಭೇಟಿಯಾದವರಲ್ಲಿ ಕೆಲವರು ತೀರ ಸಂಕಷ್ಟಕ್ಕೊಳಗಾಗಿದ್ದವರೂ ಆಗಿದ್ದರು. ಧಾರ್ಮಿಕ ಮುಖಂಡರು, ಅದರಲ್ಲೂ ವಿಶೇಷವಾಗಿ ಫರಿಸಾಯರು, ತದ್ರೀತಿಯ ಸಮಸ್ಯೆಗಳಿದ್ದ ಜನರೊಂದಿಗೆ ವ್ಯವಹರಿಸಿದ ವಿಧವನ್ನು ನಾವೀಗ ಗಮನಿಸೋಣ. ಈ ಹೋಲಿಕೆಯು ಹೆಚ್ಚಿನ ತಿಳಿವಳಿಕೆಯನ್ನು ನೀಡುವುದು.
5 ಸಾ.ಶ. 31ನೆಯ ವರ್ಷದಲ್ಲಿ, ಯೇಸು ಗಲಿಲಾಯದಲ್ಲಿ ಸಾರುತ್ತಿದ್ದಾಗ, ‘ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡನು.’ ಆ ಆಮಂತ್ರಣವನ್ನು ಒಪ್ಪಿಕೊಳ್ಳಲು ಯೇಸು ಹಿಂಜರಿಯಲಿಲ್ಲ. “ಆತನು ಆ ಫರಿಸಾಯನ ಮನೆಗೆ ಹೋಗಿ ಊಟಕ್ಕೆ ಒರಗಿಕೊಂಡನು. ಆಗ ಆ ಊರಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಒರಗಿದ್ದಾನೆಂದು ಗೊತ್ತುಹಿಡುಕೊಂಡು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಹಿಂದೆ ಆತನ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತ್ಯಾವಮಾಡಿ ತನ್ನ ತಲೇಕೂದಲಿನಿಂದ ಒರಸಿ ಅವುಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.”—ಲೂಕ 7:36-38.
6. “ದುರಾಚಾರಿ”ಯಾಗಿದ್ದ ಆ ಹೆಂಗಸು ಫರಿಸಾಯನ ಮನೆಗೆ ಯಾಕೆ ಬಂದಿದ್ದಿರಬಹುದು?
6 ನೀವು ಇದನ್ನು ಚಿತ್ರಿಸಿಕೊಳ್ಳಬಲ್ಲಿರೋ? ಒಂದು ಪರಾಮರ್ಶೆ ಪುಸ್ತಕವು ಹೀಗೆ ಪ್ರತಿಪಾದಿಸುತ್ತದೆ: “ತಿಂದು ಉಳಿದ ಎಂಜಲನ್ನು ಕೂಡಿಸಿಕೊಳ್ಳಲಿಕ್ಕಾಗಿ ಅಂತಹ ಔತಣಕೂಟಕ್ಕೆ ಬಡಜನರು ಭೇಟಿ ನೀಡುವಂತೆ ಅನುಮತಿಸಲ್ಪಟ್ಟಿದ್ದ ಸಾಮಾಜಿಕ ಸಂಪ್ರದಾಯವನ್ನು ಆ ಹೆಂಗಸು (37ನೇ ವಚನ) ಸದುಪಯೋಗಿಸಿಕೊಂಡಳು.” ಯಾರು ಆಮಂತ್ರಿಸಲ್ಪಟ್ಟಿಲ್ಲವೋ ಅಂತಹ ಒಬ್ಬ ವ್ಯಕ್ತಿಯು ಹೇಗೆ ಅಲ್ಲಿಗೆ ಪ್ರವೇಶಿಸಸಾಧ್ಯವಿತ್ತೆಂಬುದನ್ನು ಅದು ವಿವರಿಸಬಹುದು. ಊಟವು ಮುಗಿದ ನಂತರ ಮಿಕ್ಕಿದ್ದನ್ನು ಒಟ್ಟುಗೂಡಿಸಿಕೊಳ್ಳಲಿಕ್ಕಾಗಿ ಕಾಯುತ್ತಿದ್ದ ಇತರರೂ ಅಲ್ಲಿದ್ದಿರಬಹುದು. ಆದರೂ, ಈ ಹೆಂಗಸಿನ ನಡವಳಿಕೆಯು ಅಸಾಮಾನ್ಯವಾಗಿತ್ತು. ಏಕೆಂದರೆ ಊಟವು ಮುಗಿಯಲಿ ಎಂದು ಕಾಯುತ್ತಾ, ಅವಳು ಒಂದು ಮೂಲೆಯಿಂದ ಗಮನಿಸುತ್ತಾ ನಿಂತಿರಲಿಲ್ಲ. ಅವಳು ತುಂಬ ಕೆಟ್ಟ ಹೆಸರನ್ನು ಪಡೆದಿದ್ದಳು ಮತ್ತು “ದುರಾಚಾರಿ” ಎಂದು ಕುಪ್ರಸಿದ್ಧಳಾಗಿದ್ದಳು. ಆದುದರಿಂದಲೇ “ಇವಳ ಪಾಪಗಳು ಬಹಳವಾಗಿದ್ದರೂ,” ಅವುಗಳ ಕುರಿತು ತನಗೆ ತಿಳಿದಿದೆ ಎಂದು ಯೇಸು ಹೇಳಿದನು.—ಲೂಕ 7:47.
7, 8. (ಎ) ಲೂಕ 7:36-38ರಲ್ಲಿ ವರದಿಸಲ್ಪಟ್ಟಿರುವಂತಹ ಸನ್ನಿವೇಶಗಳಲ್ಲಿ ನಾವು ಹೇಗೆ ಪ್ರತಿಕ್ರಿಯಿಸಿದ್ದಿರಬಹುದು? (ಬಿ) ಸೀಮೋನನು ಹೇಗೆ ಪ್ರತಿಕ್ರಿಯಿಸಿದನು?
7 ನೀವು ಆ ಸಮಯದಲ್ಲಿ ಜೀವಿಸುತ್ತಿದ್ದು, ಯೇಸುವಿನ ಸ್ಥಾನದಲ್ಲಿದ್ದೀರಿ ಎಂದು ನೆನಸಿ. ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ಈ ಹೆಂಗಸು ನಿಮ್ಮ ಬಳಿಗೆ ಬರುತ್ತಿದ್ದಲ್ಲಿ ನಿಮಗೆ ಪೇಚಾಟದ ಅನಿಸಿಕೆಯಾಗುತ್ತಿತ್ತೋ? ಅಂತಹ ಸನ್ನಿವೇಶವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತಿತ್ತು? (ಲೂಕ 7:45) ನೀವು ಗಾಬರಿಪಡುತ್ತಿದ್ದಿರೋ, ಹೆದರುತ್ತಿದ್ದಿರೋ?
8 ಬೇರೆ ಅತಿಥಿಗಳ ನಡುವೆ ನೀವು ಇರುತ್ತಿದ್ದಲ್ಲಿ, ನಿಮ್ಮ ಆಲೋಚನೆಯೂ ಹೆಚ್ಚುಕಡಿಮೆ ಫರಿಸಾಯನಾದ ಸೀಮೋನನ ಆಲೋಚನೆಯಂತೆಯೇ ಇರಸಾಧ್ಯವಿತ್ತೋ? “[ಯೇಸುವನ್ನು] ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು—ಇವಳು ದುರಾಚಾರಿ; ಇವನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು ಅಂದುಕೊಂಡನು.” (ಲೂಕ 7:39) ಇದಕ್ಕೆ ತದ್ವಿರುದ್ಧವಾಗಿ, ಯೇಸು ಅತಿ ಸಹಾನುಭೂತಿಯುಳ್ಳ ಮನುಷ್ಯನಾಗಿದ್ದನು. ಅವನು ಆ ಸ್ತ್ರೀಯ ಅವಸ್ಥೆಯನ್ನು ಮನಗಂಡನು ಮತ್ತು ಅವಳ ಅಳಲನ್ನು ಅರ್ಥಮಾಡಿಕೊಂಡನು. ಅವಳು ಯಾವ ರೀತಿಯಲ್ಲಿ ಅಂಥ ದುರಾಚಾರದ ಜೀವನಕ್ಕೆ ಬಲಿಬಿದ್ದಳು ಎಂಬುದು ನಮಗೆ ತಿಳಿಸಲ್ಪಟ್ಟಿಲ್ಲ. ಒಂದುವೇಳೆ ಅವಳು ನಿಜವಾಗಿಯೂ ಒಬ್ಬ ವೇಶ್ಯೆಯಾಗಿರುತ್ತಿದ್ದಲ್ಲಿ, ಆ ಪಟ್ಟಣದ ಜನರಾಗಿದ್ದ ಧರ್ಮನಿಷ್ಠ ಯೆಹೂದ್ಯರು ಅವಳಿಗೆ ಸಹಾಯಮಾಡಿರಲಿಲ್ಲ ಎಂಬುದಂತೂ ಖಂಡಿತ.
9. ಯೇಸು ಹೇಗೆ ಪ್ರತಿಕ್ರಿಯಿಸಿದನು, ಮತ್ತು ಇದರ ಫಲಿತಾಂಶವು ಏನಾಗಿದ್ದಿರುವ ಸಾಧ್ಯತೆಯಿದೆ?
9 ಆದರೆ ಯೇಸು ಅವಳಿಗೆ ಸಹಾಯಮಾಡಲು ಬಯಸಿದನು. ಅವನು ಅವಳಿಗೆ “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. ತದನಂತರ ಅವನು ಕೂಡಿಸಿ ಹೇಳಿದ್ದು: “ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿ ಅದೆ; ಸಮಾಧಾನದಿಂದ ಹೋಗು.” (ಲೂಕ 7:48-50) ಇಲ್ಲಿಗೆ ಈ ವೃತ್ತಾಂತವು ಕೊನೆಗೊಳ್ಳುತ್ತದೆ. ಯೇಸು ಅವಳಿಗೆ ಹೆಚ್ಚಿನ ಸಹಾಯವನ್ನು ಮಾಡಲಿಲ್ಲ ಎಂದು ಕೆಲವರು ಆಕ್ಷೇಪಿಸಬಹುದು. ವಾಸ್ತವದಲ್ಲಿ, ಯೇಸು ಅವಳನ್ನು ಆಶೀರ್ವದಿಸಿ ಕಳುಹಿಸಿದನು. ತದನಂತರ ಅವಳು ತನ್ನ ಹೀನ ಜೀವನ ರೀತಿಗೆ ಪುನಃ ಹಿಂದಿರುಗಿದ್ದಿರಬಹುದು ಎಂದು ನೀವು ನೆನಸುತ್ತೀರೋ? ನಾವು ಇದರ ಬಗ್ಗೆ ಕಡಾಖಂಡಿತವಾಗಿ ಹೇಳಲಾರೆವಾದರೂ, ಮುಂದೆ ಲೂಕನು ಏನು ಹೇಳುತ್ತಾನೆಂಬುದನ್ನು ಗಮನಿಸಿರಿ. ಯೇಸು “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು” ಎಂದು ಅವನು ದಾಖಲಿಸಿದನು. ಯೇಸುವಿನೊಂದಿಗೆ ಹಾಗೂ ಅವನ ಶಿಷ್ಯರೊಂದಿಗೆ “ಕೆಲವು ಹೆಂಗಸರು” ಇದ್ದರು ಮತ್ತು ಅವರು “ತಮ್ಮ ಆಸ್ತಿಯಿಂದ ಅವನಿಗೆ ಕೊಟ್ಟು ಉಪಚಾರಮಾಡುತ್ತಿದ್ದರು” ಎಂದು ಸಹ ಲೂಕನು ವರದಿಸಿದನು. ಆದುದರಿಂದ, ಪಶ್ಚಾತ್ತಾಪಪಟ್ಟ ಹಾಗೂ ಕೃತಜ್ಞತೆಯನ್ನು ತೋರಿಸಿದ ಈ ಸ್ತ್ರೀಯು ಈಗ ಅವರ ನಡುವೆ ಇದ್ದಿರುವ ಸಾಧ್ಯತೆಯಿದೆ. ಈಗ ಅವಳು ಶುದ್ಧ ಮನಸ್ಸಾಕ್ಷಿಯಿಂದ, ಒಂದು ಹೊಸ ಉದ್ದೇಶದಿಂದ, ಹಾಗೂ ದೇವರಿಗಾಗಿ ಇನ್ನೂ ಹೆಚ್ಚು ಆಳವಾದ ಪ್ರೀತಿಯಿಂದ, ಆತನಿಗೆ ಸಂತೋಷವನ್ನುಂಟುಮಾಡುವಂಥ ರೀತಿಯ ಜೀವನವನ್ನು ಆರಂಭಿಸಿದ್ದಿರಬಹುದು.—ಲೂಕ 8:1-3.
ಯೇಸು ಮತ್ತು ಫರಿಸಾಯರ ನಡುವಣ ಭಿನ್ನತೆ
10. ಯೇಸು, ಹಾಗೂ ಸೀಮೋನನ ಮನೆಯಲ್ಲಿದ್ದ ಹೆಂಗಸಿನ ಕುರಿತಾದ ವೃತ್ತಾಂತವನ್ನು ಪರಿಗಣಿಸುವುದು ಪ್ರಯೋಜನಾರ್ಹವಾಗಿದೆ ಏಕೆ?
10 ಈ ಸುಸ್ಪಷ್ಟ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? ಇದು ನಮ್ಮ ಭಾವನೆಗಳನ್ನು ಉದ್ರೇಕಿಸುವುದಿಲ್ಲವೋ? ನೀವು ಸೀಮೋನನ ಮನೆಯಲ್ಲಿ ಇದ್ದಿರೆಂದು ಭಾವಿಸಿಕೊಳ್ಳುವುದಾದರೆ, ಆಗ ನಿಮಗೆ ಹೇಗನಿಸುತ್ತಿತ್ತು? ನೀವು ಯೇಸುವಿನಂತೆ ಪ್ರತಿಕ್ರಿಯಿಸುತ್ತಿದ್ದಿರೋ, ಅಥವಾ ನಿಮ್ಮಲ್ಲಿ ಅವನ ಫರಿಸಾಯ ಆತಿಥೇಯನಂತಹ ಸ್ವಲ್ಪ ಅನಿಸಿಕೆ ಉಂಟಾಗುತ್ತಿತ್ತೋ? ಯೇಸು ದೇವಕುಮಾರನಾಗಿದ್ದನು, ಆದುದರಿಂದ ಅವನಂತಹ ಅನಿಸಿಕೆ ನಮಗಾಗುತ್ತಿರಲಿಲ್ಲ ಹಾಗೂ ಅವನಂತೆಯೇ ನಾವು ವರ್ತಿಸುತ್ತಿರಲಿಲ್ಲ. ಇನ್ನೊಂದು ಕಡೆಯಲ್ಲಿ, ಫರಿಸಾಯನಾದ ಸೀಮೋನನಂತೆ ನಮ್ಮ ಕುರಿತು ಆಲೋಚಿಸಲು ನಾವು ಆತುರಪಡುತ್ತಿರಲಿಲ್ಲವೇನೋ. ನಮ್ಮಲ್ಲಿ ಯಾರಿಗೂ ಫರಿಸಾಯ ಸ್ವಭಾವವನ್ನು ಹೊಂದುವುದೂ ಹೆಮ್ಮೆಯ ಸಂಗತಿಯಾಗಿರದು.
11. ನಾವು ಫರಿಸಾಯರ ಗುಂಪಿಗೆ ಸೇರಿಸಲ್ಪಡಲು ಬಯಸುವುದಿಲ್ಲವೇಕೆ?
11 ಬೈಬಲಿನ ಹಾಗೂ ಐಹಿಕ ಪುರಾವೆಯ ಅಧ್ಯಯನದಿಂದ, ಸಾರ್ವಜನಿಕ ಹಿತ ಹಾಗೂ ರಾಷ್ಟ್ರೀಯ ಕಲ್ಯಾಣದ ರಕ್ಷಕರೋಪಾದಿ ಫರಿಸಾಯರಿಗೆ ಸ್ವತಃ ತಮ್ಮ ಬಗ್ಗೆ ಉತ್ಕೃಷ್ಟ ಮನೋಭಾವವಿತ್ತು ಎಂಬ ತೀರ್ಮಾನಕ್ಕೆ ಬರಸಾಧ್ಯವಿದೆ. ಮೂಲಭೂತವಾಗಿ ದೇವರ ಧರ್ಮಶಾಸ್ತ್ರವು ಸುಸ್ಪಷ್ಟವಾಗಿತ್ತು ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವಂತಿತ್ತು ಎಂಬ ವಿಷಯದಲ್ಲೇ ಅವರು ತೃಪ್ತರಾಗಿರಲಿಲ್ಲ. ಧರ್ಮಶಾಸ್ತ್ರವು ಸ್ವಲ್ಪ ಅನಿರ್ದಿಷ್ಟವಾಗಿ ಕಂಡುಬಂದಲ್ಲೆಲ್ಲಾ, ತಮ್ಮ ಮನಸ್ಸಾಕ್ಷಿಯು ಒಳಗೂಡುವುದನ್ನು ತಪ್ಪಿಸಲಿಕ್ಕಾಗಿ ಅವರು ತಮ್ಮದೇ ಆದ ನಿಯಮಗಳನ್ನು ರಚಿಸಿದರು. ಈ ಧಾರ್ಮಿಕ ಮುಖಂಡರು, ಎಲ್ಲಾ ವಿಷಯಗಳಲ್ಲಿ ಅಂದರೆ ದಿನನಿತ್ಯದ ಚಿಕ್ಕಪುಟ್ಟ ವಿಷಯಗಳಲ್ಲಿಯೂ ನಡತೆಯನ್ನು ನಿಯಂತ್ರಿಸಲಿಕ್ಕಾಗಿ ಒಂದೊಂದೂ ಆಜ್ಞೆಯನ್ನು ಜಾರಿಗೆ ತರಲು ಪ್ರಯತ್ನಿಸಿದರು.a
12. ಫರಿಸಾಯರಿಗೆ ಸ್ವತಃ ತಮ್ಮ ಬಗ್ಗೆ ಯಾವ ದೃಷ್ಟಿಕೋನವಿತ್ತು?
12 ಪ್ರಥಮ ಶತಮಾನದ ಯೆಹೂದಿ ಇತಿಹಾಸಕಾರನಾಗಿದ್ದ ಜೋಸೀಫಸನು, ಫರಿಸಾಯರು ತಮ್ಮನ್ನು ದಯಾಪರರೂ, ಮೃದುಸ್ವಭಾವಿಗಳೂ, ತಮ್ಮ ಕೆಲಸಕ್ಕೆ ಪೂರ್ಣರಾಗಿ ಅರ್ಹರೂ ಆಗಿದ್ದೇವೆ ಎಂದು ಪರಿಗಣಿಸಿಕೊಂಡಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತಾನೆ. ಫರಿಸಾಯರಲ್ಲಿ ಕೆಲವರು ಈ ವರ್ಣನೆಗನುಸಾರ ಇದ್ದರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಹೀಗೆ ಹೇಳುವಾಗ ನಿಕೋದೇಮನು ನಿಮ್ಮ ಮನಸ್ಸಿಗೆ ಬರಬಹುದು. (ಯೋಹಾನ 3:1, 2; 7:50, 51) ಸಮಯಾನಂತರ, ಫರಿಸಾಯರಲ್ಲಿ ಕೆಲವರು ಕ್ರೈಸ್ತ ಜೀವನಮಾರ್ಗವನ್ನು ಅನುಸರಿಸಿದರು ಸಹ. (ಅ. ಕೃತ್ಯಗಳು 15:5) ಕ್ರೈಸ್ತ ಅಪೊಸ್ತಲ ಪೌಲನು, ಫರಿಸಾಯರಂತಹ ಕೆಲವು ಯೆಹೂದ್ಯರ ಕುರಿತು ಹೀಗೆ ಬರೆದನು: “ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿ ಜ್ಞಾನಾನುಸಾರವಾದದ್ದಲ್ಲ.” (ರೋಮಾಪುರ 10:2) ಆದರೂ, ಜನಸಾಮಾನ್ಯರ ದೃಷ್ಟಿಯಲ್ಲಿ ಅವರು ಹೇಗೆ ಪರಿಗಣಿಸಲ್ಪಟ್ಟಿದ್ದರೋ ಅದನ್ನೇ ಸುವಾರ್ತಾ ವೃತ್ತಾಂತಗಳು ಪ್ರಸ್ತುತಪಡಿಸುತ್ತವೆ; ಅಂದರೆ ಅವರು ದುರಭಿಮಾನಿಗಳೂ ಅಹಂಕಾರಿಗಳೂ ಸ್ವನೀತಿವಂತರೂ ತಪ್ಪನ್ನು ಕಂಡುಹಿಡಿಯುವವರೂ ಟೀಕಿಸುವವರೂ ಇತರರನ್ನು ಕೀಳಾಗಿ ಕಾಣುವವರೂ ಆಗಿದ್ದರು.
ಯೇಸುವಿನ ದೃಷ್ಟಿಕೋನ
13. ಫರಿಸಾಯರ ವಿಷಯದಲ್ಲಿ ಯೇಸುವಿಗೆ ಏನು ಹೇಳಲಿಕ್ಕಿತ್ತು?
13 ಶಾಸ್ತ್ರಿಗಳು ಹಾಗೂ ಫರಿಸಾಯರನ್ನು ಯೇಸು ಕಪಟಿಗಳ ವರ್ಗಕ್ಕೆ ಸೇರಿಸಿದನು. “ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.” ಹೌದು, ಹೊರಿಸಲ್ಪಟ್ಟ ಹೊರೆಯು ತುಂಬ ಭಾರವಾಗಿತ್ತು ಮತ್ತು ಜನರ ಮೇಲೆ ಹಾಕಿದ್ದ ನೊಗವು ತುಂಬ ನಿರ್ದಯವಾಗಿತ್ತು. ಯೇಸು, ಶಾಸ್ತ್ರಿಗಳು ಮತ್ತು ಫರಿಸಾಯರನ್ನು ‘ಹುಚ್ಚರು’ ಎಂದು ಕರೆದನು. ಒಬ್ಬ ಹುಚ್ಚನು ಸಮಾಜಕ್ಕೆ ಬೆದರಿಕೆಯಾಗಿದ್ದಾನೆ. ಯೇಸು, ಶಾಸ್ತ್ರಿಗಳು ಮತ್ತು ಫರಿಸಾಯರನ್ನು “ದಾರಿತೋರಿಸುವ ಕುರುಡರು” ಎಂದು ಸಹ ಕರೆದನು. ಅಷ್ಟುಮಾತ್ರವಲ್ಲ, ಅವರು “ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ” ಕಡೆಗಣಿಸಿಬಿಟ್ಟಿದ್ದರೆಂದು ಸಹ ಅವನು ಹೇಳಿದನು. ಯಾರಾದರೂ ಯೇಸು ತನ್ನನ್ನು ಫರಿಸಾಯ ಸ್ವಭಾವವುಳ್ಳವನೆಂದು ನೆನಸುವಂತೆ ಬಯಸುವರೋ?—ಮತ್ತಾಯ 23:1-4, 16, 17, 23.
14, 15. (ಎ) ಲೇವಿಯನಾದ ಮತ್ತಾಯನೊಂದಿಗೆ ಯೇಸು ವ್ಯವಹರಿಸಿದ ರೀತಿಯು, ಫರಿಸಾಯರ ಮಾರ್ಗಗಳ ಕುರಿತು ಏನನ್ನು ಬಯಲುಪಡಿಸುತ್ತದೆ? (ಬಿ) ಈ ವೃತ್ತಾಂತದಿಂದ ನಾವು ಯಾವ ಮುಖ್ಯ ಪಾಠಗಳನ್ನು ಕಲಿಯಸಾಧ್ಯವಿದೆ?
14 ಸುವಾರ್ತಾ ವೃತ್ತಾಂತಗಳನ್ನು ಓದುವ ಪ್ರತಿಯೊಬ್ಬ ವಾಚಕನು, ಅಧಿಕಾಂಶ ಫರಿಸಾಯರ ಟೀಕಾತ್ಮಕ ಸ್ವಭಾವವನ್ನು ಗಮನಿಸಸಾಧ್ಯವಿದೆ. ಲೇವಿಯೂ ಸುಂಕವಸೂಲಿ ಮಾಡುವವನೂ ಆಗಿದ್ದ ಮತ್ತಾಯನನ್ನು ಯೇಸು ತನ್ನ ಶಿಷ್ಯನಾಗಲು ಆಮಂತ್ರಿಸಿದ ಬಳಿಕ, ಲೇವಿಯು ಅವನಿಗೆ ಒಂದು ದೊಡ್ಡ ಔತಣವನ್ನು ಮಾಡಿಸಿದನು. ಆ ವೃತ್ತಾಂತವು ಹೇಳುವುದು: “ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗುಣುಗುಟ್ಟುತ್ತಾ—ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವದೇಕೆ ಎಂದು ಕೇಳಿದರು. ಅದಕ್ಕೆ ಯೇಸು . . . ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.”—ಲೂಕ 5:27-32.
15 ಆ ಸಂದರ್ಭದಲ್ಲಿ ಯೇಸು, “ನೀವು ಹೋಗಿ—ನನಗೆ ಯಜ್ಞವು ಬೇಡ, ಕರುಣೆಯೇ ಬೇಕು ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ” ಎಂದು ಹೇಳಿದ ವಿಷಯವನ್ನು ಲೇವಿಯು ತಾನೇ ಅರ್ಥಮಾಡಿಕೊಂಡನು. (ಮತ್ತಾಯ 9:13) ಇಬ್ರಿಯ ಪ್ರವಾದಿಗಳ ಬರಹದಲ್ಲಿ ತಾವು ನಂಬಿಕೆಯಿಡುತ್ತೇವೆ ಎಂದು ಫರಿಸಾಯರು ಪ್ರತಿಪಾದಿಸಿದರೂ, ಹೋಶೇಯ 6:6ರಿಂದ ತೆಗೆದುಕೊಳ್ಳಲ್ಪಟ್ಟಿರುವ ಈ ಹೇಳಿಕೆಯನ್ನು ಅವರು ಅಂಗೀಕರಿಸಲಿಲ್ಲ. ತಾವು ತಪ್ಪುಮಾಡುವವರಾಗಿರುವಲ್ಲಿ, ಸಂಪ್ರದಾಯಕ್ಕೆ ವಿಧೇಯರಾಗುವ ಸಲುವಾಗಿಯೇ ಅದನ್ನು ಮಾಡಲಿರುವೆವೆಂದು ಅವರು ನಿಶ್ಚಯಿಸಿದ್ದರು. ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಸಾಧ್ಯವಿದೆ: ‘ಒಂದು ವಿಷಯದ ಕುರಿತಾದ ವೈಯಕ್ತಿಕ ಅಭಿಪ್ರಾಯವನ್ನು ಅಥವಾ ಜನಸಾಮಾನ್ಯ ಅನಿಸಿಕೆಯನ್ನು ಪ್ರತಿಬಿಂಬಿಸುವಂತಹ ಕೆಲವೊಂದು ನಿಯಮಗಳ ವಿಷಯದಲ್ಲಿ ಛಲವಾದಿ ಎಂಬ ಹೆಸರು ನನಗಿದೆಯೋ? ಅಥವಾ ಎಲ್ಲಕ್ಕಿಂತಲೂ ಮಿಗಿಲಾಗಿ ನಾನು ಕರುಣಾಳುವೂ ದಯಾಪರನೂ ಆಗಿದ್ದೇನೆ ಎಂದು ಇತರರು ನನ್ನ ಬಗ್ಗೆ ನೆನಸುತ್ತಾರೋ?’
16. ಫರಿಸಾಯರ ರೀತಿನೀತಿಯು ಹೇಗಿತ್ತು, ಮತ್ತು ಅವರಂತಿರುವುದನ್ನು ನಾವು ಹೇಗೆ ದೂರಮಾಡಸಾಧ್ಯವಿದೆ?
16 ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳಲ್ಲೂ ತಪ್ಪನ್ನು ಕಂಡುಹಿಡಿಯುವುದು ಫರಿಸಾಯರ ರೀತಿನೀತಿಯಾಗಿತ್ತು. ಫರಿಸಾಯರು ಪ್ರತಿಯೊಂದು ವಿಧದಲ್ಲಿ ನಿಜವಾದ ಅಥವಾ ಕಲ್ಪಿತ ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರು. ಅವರು ಯಾವಾಗಲೂ ಜನರ ಮೇಲೆರಗುತ್ತಿದ್ದು, ಅವರ ಕುಂದುಕೊರತೆಗಳ ಕುರಿತು ಅವರಿಗೆ ನೆನಪು ಹುಟ್ಟಿಸಿದರು. ಮರುಗ, ಸೋಪು ಮತ್ತು ಜೀರಿಗೆಗಳಂತಹ ಅತಿ ಕ್ಷುಲ್ಲಕ ಗಿಡಮೂಲಿಕೆಗಳ ದಶಮಾಂಶವನ್ನು ಕೊಡುವುದರ ವಿಷಯದಲ್ಲಿ ಫರಿಸಾಯರು ಜಂಬಕೊಚ್ಚಿಕೊಂಡರು. ತಮ್ಮ ಉಡುಪುಗಳ ಮೂಲಕ ಅವರು ಭಕ್ತಿಯ ಆಡಂಬರವನ್ನು ತೋರ್ಪಡಿಸಿದರು ಮತ್ತು ಆ ಜನಾಂಗವನ್ನು ಮಾರ್ಗದರ್ಶಿಸಲು ಪ್ರಯತ್ನಿಸಿದರು. ಒಂದುವೇಳೆ ನಮ್ಮ ಕ್ರಿಯೆಗಳು ಯೇಸುವಿನ ಮಾದರಿಗೆ ಹೊಂದಿಕೆಯಲ್ಲಿರಬೇಕಾದರೆ, ಯಾವಾಗಲೂ ಇತರರ ತಪ್ಪುಗಳನ್ನೇ ಹುಡುಕುತ್ತಾ, ಅವುಗಳನ್ನು ಎತ್ತಿಹೇಳುತ್ತಾ ಇರುವ ಪ್ರವೃತ್ತಿಯನ್ನು ನಾವು ತೊರೆಯಬೇಕು ಎಂಬುದಂತೂ ಖಂಡಿತ.
ಯೇಸು ಹೇಗೆ ಸಮಸ್ಯೆಗಳನ್ನು ನಿರ್ವಹಿಸಿದನು?
17-19. (ಎ) ತುಂಬ ಗಂಭೀರ ಪರಿಣಾಮಗಳಿಗೆ ನಡೆಸಸಾಧ್ಯವಿದ್ದ ಒಂದು ಸನ್ನಿವೇಶವನ್ನು ಯೇಸು ಹೇಗೆ ನಿರ್ವಹಿಸಿದನು ಎಂಬುದನ್ನು ವಿವರಿಸಿರಿ. (ಬಿ) ಯಾವುದು ಆ ಸನ್ನಿವೇಶವನ್ನು ಹೆಚ್ಚು ಒತ್ತಡಭರಿತವಾದದ್ದಾಗಿ ಮತ್ತು ಅಹಿತಕರವಾದದ್ದಾಗಿ ಮಾಡಿತು? (ಸಿ) ಆ ಹೆಂಗಸು ಯೇಸುವಿನ ಬಳಿಗೆ ಬರುತ್ತಿದ್ದಾಗ ನೀವು ಅಲ್ಲಿರುತ್ತಿದ್ದಲ್ಲಿ, ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ?
17 ಯೇಸು ಸಮಸ್ಯೆಗಳನ್ನು ನಿರ್ವಹಿಸಿದ ವಿಧವು, ಫರಿಸಾಯರು ಉಪಯೋಗಿಸುತ್ತಿದ್ದ ವಿಧಕ್ಕಿಂತ ತೀರ ಭಿನ್ನವಾಗಿತ್ತು. ತುಂಬ ಗಂಭೀರವಾಗಿರಸಾಧ್ಯವಿದ್ದ ಒಂದು ಸನ್ನಿವೇಶವನ್ನು ಯೇಸು ಹೇಗೆ ನಿರ್ವಹಿಸಿದನು ಎಂಬುದನ್ನು ಪರಿಗಣಿಸಿರಿ. ಸುಮಾರು 12 ವರ್ಷಗಳಿಂದ ರಕ್ತಕುಸುಮರೋಗವಿದ್ದ ಒಬ್ಬ ಹೆಂಗಸನ್ನು ಇದು ಒಳಗೂಡಿತ್ತು. ನೀವು ಈ ವೃತ್ತಾಂತವನ್ನು ಲೂಕ 8:42-48ರಲ್ಲಿ ಓದಸಾಧ್ಯವಿದೆ.
18 ಆ ಹೆಂಗಸು “ಅಂಜಿ ನಡುಗುತ್ತಾ” ಇದ್ದಳು ಎಂದು ಮಾರ್ಕನ ವೃತ್ತಾಂತವು ಹೇಳುತ್ತದೆ. (ಮಾರ್ಕ 5:33) ಏಕೆ? ಏಕೆಂದರೆ ತಾನು ದೇವರ ಧರ್ಮಶಾಸ್ತ್ರದ ನಿಯಮವನ್ನು ಉಲ್ಲಂಘಿಸಿದ್ದೇನೆ ಎಂಬುದು ಅವಳಿಗೆ ಗೊತ್ತಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. ಯಾಜಕಕಾಂಡ 15:25-28ಕ್ಕನುಸಾರ, ಅಸಾಮಾನ್ಯ ರೀತಿಯ ರಕ್ತಕುಸುಮರೋಗವಿರುವ ಒಬ್ಬ ಹೆಂಗಸು, ಆ ಸ್ರಾವವಾಗುವ ದಿನಗಳಲ್ಲೆಲ್ಲಾ ಹಾಗೂ ತದನಂತರ ಒಂದು ವಾರದ ವರೆಗೆ ಅಶುದ್ಧಳಾಗಿ ಪರಿಗಣಿಸಲ್ಪಡುತ್ತಿದ್ದಳು. ಅವಳು ಮುಟ್ಟುವ ಎಲ್ಲಾ ವಸ್ತುಗಳು ಹಾಗೂ ಅವಳ ಸಂಪರ್ಕಹೊಂದುವ ಪ್ರತಿಯೊಬ್ಬ ವ್ಯಕ್ತಿಯು ಸಹ ಅಶುದ್ಧನಾಗುತ್ತಿದ್ದನು. ಯೇಸುವನ್ನು ಸಮೀಪಿಸಲಿಕ್ಕಾಗಿ ಈ ಹೆಂಗಸು ಜನರ ಗುಂಪಿನ ಮಧ್ಯದಿಂದ ಕಷ್ಟಪಟ್ಟು ದಾರಿಮಾಡಿಕೊಂಡು ಬರಬೇಕಾಗಿತ್ತು. ನಾವು ಸುಮಾರು 2,000 ವರ್ಷಗಳ ನಂತರ ಈ ವೃತ್ತಾಂತವನ್ನು ಪರಿಗಣಿಸುವಾಗ, ಅವಳ ಪಾಡನ್ನು ನೆನಸಿಕೊಂಡು ನಮಗೆ ಮರುಕ ಹುಟ್ಟುತ್ತದೆ.
19 ಒಂದುವೇಳೆ ನೀವು ಆ ದಿನ ಅಲ್ಲಿರುತ್ತಿದ್ದಲ್ಲಿ, ಆ ಸನ್ನಿವೇಶವನ್ನು ಹೇಗೆ ಪರಿಗಣಿಸುತ್ತಿದ್ದಿರಿ? ನೀವು ಏನು ಹೇಳುತ್ತಿದ್ದಿರಿ? ಅವಳು ಉಂಟುಮಾಡಿದ್ದಿರಬಹುದಾದ ಯಾವುದೇ ಸಮಸ್ಯೆಗಳ ಬಗ್ಗೆ ಏನೂ ಹೇಳದೆ, ಯೇಸು ಈ ಹೆಂಗಸನ್ನು ಕರುಣೆಯಿಂದ, ಪ್ರೀತಿಯಿಂದ ಹಾಗೂ ಪರಿಗಣನಾರ್ಹ ರೀತಿಯಲ್ಲಿ ಉಪಚರಿಸಿದನು ಎಂಬುದನ್ನು ಗಮನಿಸಿರಿ.—ಮಾರ್ಕ 5:34.
20. ಯಾಜಕಕಾಂಡ 15:25-27ರಲ್ಲಿರುವ ವಿಷಯವು ಇಂದು ಒಂದು ಆವಶ್ಯಕತೆಯಾಗಿರುತ್ತಿದ್ದಲ್ಲಿ, ನಾವು ಯಾವ ಪಂಥಾಹ್ವಾನವನ್ನು ಎದುರಿಸುತ್ತಿದ್ದೆವು?
20 ಈ ಘಟನೆಯಿಂದ ನಾವು ಏನಾದರೂ ಕಲಿತುಕೊಳ್ಳಸಾಧ್ಯವಿದೆಯೋ? ಇಂದು ಕ್ರೈಸ್ತ ಸಭೆಯೊಂದರಲ್ಲಿ ನೀವು ಒಬ್ಬ ಹಿರಿಯರಾಗಿದ್ದೀರಿ ಎಂದಿಟ್ಟುಕೊಳ್ಳಿ. ಮತ್ತು ಯಾಜಕಕಾಂಡ 15:25-27ರಲ್ಲಿರುವ ವಿಷಯವು ಇಂದು ಒಂದು ಕ್ರೈಸ್ತ ಆವಶ್ಯಕತೆಯಾಗಿತ್ತೆಂದೂ, ಭಾವಾವೇಶದಿಂದ ಮತ್ತು ನಿಸ್ಸಹಾಯಕ ಅನಿಸಿಕೆಯಿಂದ ಒಬ್ಬ ಕ್ರೈಸ್ತ ಸ್ತ್ರೀಯು ಆ ನಿಯಮವನ್ನು ಉಲ್ಲಂಘಿಸಿದ್ದಳೆಂದೂ ಭಾವಿಸಿಕೊಳ್ಳಿ. ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ಟೀಕಾತ್ಮಕ ಸಲಹೆಯನ್ನು ಕೊಟ್ಟು ನೀವು ಅವಳನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದಿರೋ? “ಇಲ್ಲ, ಖಂಡಿತವಾಗಿಯೂ ನಾನು ಹಾಗೆ ಮಾಡುವುದಿಲ್ಲ! ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ದಯೆ, ಪ್ರೀತಿ, ಹಿತಚಿಂತನೆ ಹಾಗೂ ಪರಿಗಣನೆಯನ್ನು ತೋರಿಸಲು ನಾನು ಸರ್ವ ಪ್ರಯತ್ನವನ್ನೂ ಮಾಡುವೆ” ಎಂದು ನೀವು ಹೇಳುತ್ತೀರಿ. ಶಹಬಾಶ್! ಆದರೆ ಅದನ್ನು ಮಾಡುವುದು, ಅಂದರೆ ಯೇಸುವಿನ ಮಾದರಿಯನ್ನು ಅನುಕರಿಸುವುದೇ ಪಂಥಾಹ್ವಾನವಾಗಿದೆ.
21. ಧರ್ಮಶಾಸ್ತ್ರದ ಕುರಿತು ಯೇಸು ಜನರಿಗೆ ಏನನ್ನು ಕಲಿಸಿದನು?
21 ಜನರು ಯೇಸುವಿನಿಂದ ಚೈತನ್ಯವನ್ನು ಪಡೆದುಕೊಂಡರು, ಹುರಿದುಂಬಿಸಲ್ಪಟ್ಟರು ಮತ್ತು ಪ್ರೋತ್ಸಾಹಿಸಲ್ಪಟ್ಟರು. ದೇವರ ನಿಯಮವು ಸ್ಪಷ್ಟರೂಪದ್ದಾಗಿದ್ದಲ್ಲಿ, ಅದರಂತೆಯೇ ಮಾಡಬೇಕಿತ್ತು. ಅಸ್ಪಷ್ಟವಾಗಿ ಕಂಡುಬಂದಲ್ಲಿ, ಜನರು ತಮ್ಮ ಮನಸ್ಸಾಕ್ಷಿಗೆ ಕಿವಿಗೊಡಬೇಕಾಗಿತ್ತು ಮತ್ತು ತಮ್ಮ ನಿರ್ಣಯಗಳ ಮೂಲಕ ದೇವರಿಗಾಗಿರುವ ತಮ್ಮ ಪ್ರೀತಿಯನ್ನು ಅವರು ತೋರಿಸಸಾಧ್ಯವಿತ್ತು. ದೇವರ ಧರ್ಮಶಾಸ್ತ್ರವು ತುಂಬ ನಮ್ಯವಾಗಿತ್ತು. (ಮಾರ್ಕ 2:27, 28) ದೇವರು ತನ್ನ ಜನರನ್ನು ಪ್ರೀತಿಸಿದನು, ಅವರ ಒಳಿತಿಗಾಗಿ ಸತತವಾಗಿ ಕಾರ್ಯನಡಿಸಿದನು ಮತ್ತು ಅವರು ತಪ್ಪುಮಾಡಿದಾಗ ಅವರಿಗೆ ಕರುಣೆ ತೋರಿಸಲು ಮನಃಪೂರ್ವಕವಾಗಿ ಸಿದ್ಧನಿದ್ದನು. ಯೇಸು ಸಹ ಹಾಗೆಯೇ ಇದ್ದನು.—ಯೋಹಾನ 14:9.
ಯೇಸುವಿನ ಬೋಧನೆಗಳ ಫಲಿತಾಂಶಗಳು
22. ಯೇಸುವಿನಿಂದ ಕಲಿತುಕೊಳ್ಳುವುದು, ಯಾವ ರೀತಿಯ ಮನೋಭಾವವನ್ನು ಹೊಂದಿರುವಂತೆ ಅವನ ಶಿಷ್ಯರಿಗೆ ಸಹಾಯಮಾಡಿತು?
22 ಯೇಸುವಿನ ಮಾತುಗಳಿಗೆ ಕಿವಿಗೊಟ್ಟು ಅವನ ಶಿಷ್ಯರಾದವರು, “ನನ್ನ ನೊಗವು ಮೃದುವಾದದ್ದು ಮತ್ತು ನನ್ನ ಹೊರೆಯು ಹಗುರವಾದದ್ದು” ಎಂಬ ಅವನ ಹೇಳಿಕೆಯ ಸತ್ಯತೆಯನ್ನು ಗ್ರಹಿಸಿದರು. (ಮತ್ತಾಯ 11:30) ಅವನು ತಮ್ಮ ಮೇಲೆ ಹೊರೆಯನ್ನು ಹೊರಿಸಿದ್ದಾನೆ, ಪೀಡಿಸುತ್ತಿದ್ದಾನೆ, ತಮಗೆ ಉಪನ್ಯಾಸ ನೀಡುತ್ತಿದ್ದಾನೆ ಎಂದು ಅವರಿಗೆ ಎಂದೂ ಅನಿಸಲಿಲ್ಲ. ಅವರು ನಿಸ್ಸಂಕೋಚದಿಂದಿದ್ದರು, ಹೆಚ್ಚು ಸಂತೋಷಿತರಾಗಿದ್ದರು ಮತ್ತು ದೇವರೊಂದಿಗಿನ ಹಾಗೂ ಪರಸ್ಪರ ಸಂಬಂಧದ ಕುರಿತು ತುಂಬ ದೃಢಭರವಸೆಯುಳ್ಳವರಾಗಿದ್ದರು. (ಮತ್ತಾಯ 7:1-5; ಲೂಕ 9:49, 50) ಒಬ್ಬ ಆತ್ಮಿಕ ಮುಖಂಡನು ಇತರರಿಗೆ ಚೈತನ್ಯವನ್ನು ನೀಡುವವನಾಗಿರಬೇಕು, ಹೃದಮನಗಳಲ್ಲಿ ದೀನತೆಯನ್ನು ತೋರಿಸುವವನಾಗಿರಬೇಕು ಎಂಬುದನ್ನು ಅವರು ಅವನಿಂದ ಕಲಿತುಕೊಂಡರು.—1 ಕೊರಿಂಥ 16:17, 18; ಫಿಲಿಪ್ಪಿ 2:3.
23. ಯೇಸುವಿನೊಂದಿಗಿರುವುದು ಶಿಷ್ಯರಿಗೆ ಯಾವ ಪ್ರಾಮುಖ್ಯ ಪಾಠವನ್ನು ಕಲಿಸಿತು ಮತ್ತು ಅವರು ಯಾವ ತೀರ್ಮಾನಗಳಿಗೆ ಬರುವಂತೆ ಮಾಡಿತು?
23 ಅಷ್ಟುಮಾತ್ರವಲ್ಲ, ಕ್ರಿಸ್ತನೊಂದಿಗೆ ಐಕ್ಯರಾಗಿ ಉಳಿಯುವ ಹಾಗೂ ಅವನು ತೋರಿಸಿದಂತಹ ಆತ್ಮವನ್ನೇ ತೋರಿಸುವ ಮಹತ್ವದಿಂದ ಅನೇಕರು ತುಂಬ ಪ್ರಭಾವಿತರಾದರು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” (ಯೋಹಾನ 15:9, 10) ದೇವರ ಶುಶ್ರೂಷಕರು ಹಾಗೂ ಸೇವಕರೋಪಾದಿ ಅವರು ಯಶಸ್ಸನ್ನು ಪಡೆಯಬೇಕಾದರೆ, ಯೇಸುವಿನಿಂದ ತಾವು ಕಲಿತ ವಿಷಯಗಳನ್ನು ಅವರು ಶ್ರದ್ಧಾಪೂರ್ವಕವಾಗಿ ಅನ್ವಯಿಸಿಕೊಳ್ಳಬೇಕಾಗಿತ್ತು. ದೇವರ ಅದ್ಭುತಕರ ಸುವಾರ್ತೆಯ ಕುರಿತು ಸಾರುವುದರಲ್ಲಿ, ಸಾರ್ವಜನಿಕವಾಗಿ ಕಲಿಸುವುದರಲ್ಲಿ, ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ವ್ಯವಹರಿಸುವುದರಲ್ಲಿ ಅವರು ಇದನ್ನು ತೋರ್ಪಡಿಸಬೇಕಿತ್ತು. ಆ ಸಹೋದರರ ಬಳಗವು ಸಭೆಗಳಾಗಿ ಬೆಳೆದಾಗ, ಯೇಸು ತೋರಿಸಿದ ಮಾರ್ಗವೇ ಸರಿಯಾದ ಮಾರ್ಗವಾಗಿತ್ತು ಎಂಬುದನ್ನು ಅವರು ಸ್ವತಃ ಪುನಃ ಪುನಃ ಜ್ಞಾಪಿಸಿಕೊಳ್ಳಬೇಕಾಗಿತ್ತು. ಅವನು ಕಲಿಸಿದ ವಿಷಯವೇ ಸತ್ಯವಾಗಿತ್ತು, ಮತ್ತು ಅವನಲ್ಲಿ ಅವರು ಗಮನಿಸಿದ್ದ ಜೀವನ ರೀತಿಯೇ ನಿಜವಾಗಿಯೂ ಹಾರೈಸಬೇಕಾದ ಜೀವನ ರೀತಿಯಾಗಿತ್ತು.—ಯೋಹಾನ 14:6; ಎಫೆಸ 4:20, 21.
24. ಯೇಸುವಿನ ಮಾದರಿಯಿಂದ ನಾವು ಯಾವ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು?
24 ನಾವು ಚರ್ಚಿಸುತ್ತಿರುವ ಕೆಲವು ವಿಷಯಗಳನ್ನು ನೀವು ಪರಿಗಣಿಸುವಾಗ, ಪ್ರಗತಿಯನ್ನು ಮಾಡಸಾಧ್ಯವಿರುವ ವಿಧಗಳನ್ನು ನೀವು ಕಂಡುಕೊಳ್ಳುತ್ತೀರೋ? ಯೇಸು ಯಾವಾಗಲೂ ಸರಿಯಾದ ರೀತಿಯಲ್ಲಿ ಆಲೋಚಿಸಿದನು, ಕಲಿಸಿದನು ಮತ್ತು ವರ್ತಿಸಿದನು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರೋ? ಹಾಗಾದರೆ, ಇದರಿಂದ ಪ್ರೋತ್ಸಾಹವನ್ನು ಪಡೆದುಕೊಳ್ಳಿ. ಅವನು ನಮಗೆ ತಿಳಿಸಿರುವ ಉತ್ತೇಜನದಾಯಕ ಮಾತುಗಳು ಹೀಗಿವೆ: “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.”—ಯೋಹಾನ 13:17.
[ಪಾದಟಿಪ್ಪಣಿ]
a “[ಯೇಸು ಹಾಗೂ ಫರಿಸಾಯರ ಮಧ್ಯೆ ಇದ್ದ] ಮೂಲಭೂತ ಭಿನ್ನತೆಯು, ದೇವರ ಕುರಿತಾದ ಎರಡು ವಿರೋಧಾತ್ಮಕ ತಿಳಿವಳಿಕೆಗಳ ದೃಷ್ಟಿಕೋನದಿಂದಲೇ ಸ್ಪಷ್ಟಗೊಳಿಸಲ್ಪಟ್ಟಿದೆ. ಫರಿಸಾಯರಿಗನುಸಾರ, ಮೂಲತಃ ದೇವರು ಬೇಡಿಕೆಗಳನ್ನು ಮಾಡುವವನಾಗಿದ್ದಾನೆ; ಆದರೆ ಯೇಸುವಿಗನುಸಾರ ದೇವರು ಕೃಪಾಳುವೂ ದಯಾಮಯಿಯೂ ಆಗಿದ್ದಾನೆ. ಒಬ್ಬ ಫರಿಸಾಯನು ದೇವರ ಒಳ್ಳೇತನ ಹಾಗೂ ಪ್ರೀತಿಯನ್ನು ಅಲ್ಲಗಳೆಯುವುದಿಲ್ಲ ಎಂಬುದು ನಿಜವಾದರೂ, ಟೋರಾ [ಧರ್ಮಶಾಸ್ತ್ರ]ದ ಕೊಡುಗೆಯಲ್ಲಿ ಹಾಗೂ ಅದರಲ್ಲಿ ಏನು ಕೇಳಿಕೊಳ್ಳಲ್ಪಟ್ಟಿದೆಯೋ ಅದನ್ನು ಪೂರೈಸುವ ಸಾಧ್ಯತೆಯಲ್ಲಿ ಇವೆಲ್ಲವೂ ವ್ಯಕ್ತಪಡಿಸಲ್ಪಟ್ಟಿವೆ ಎಂಬುದು ಅವನ ದೃಷ್ಟಿಕೋನವಾಗಿರುತ್ತದೆ. . . . ಧರ್ಮಶಾಸ್ತ್ರದ ಅರ್ಥವಿವರಣೆಗಾಗಿ ಕೊಡಲ್ಪಟ್ಟಿರುವ ಮೌಖಿಕ ಸಂಪ್ರದಾಯವನ್ನು ಅದರ ನಿಯಮಗಳೊಂದಿಗೆ ಪಾಲಿಸುವುದೇ ಟೋರಾವನ್ನು ನೆರವೇರಿಸುವ ಮಾರ್ಗವಾಗಿದೆ ಎಂಬುದು ಫರಿಸಾಯನ ಅಭಿಪ್ರಾಯ. . . . ಪ್ರೀತಿಯ ಕುರಿತಾದ ಎರಡು ದೊಡ್ಡ ಆಜ್ಞೆಗಳೇ (ಮತ್ತಾ. 22:34-40) ಸ್ವೀಕಾರಾರ್ಹವಾದ ಉತ್ತಮ ಮಾದರಿಯೆಂದು ಯೇಸು ಅರ್ಥವಿವರಿಸಿದ್ದು ಮತ್ತು ಮೌಖಿಕ ಸಂಪ್ರದಾಯದ ನಿರ್ಬಂಧಿತ ರೀತಿಯನ್ನು ಅವನು ತಿರಸ್ಕರಿಸಿದ್ದು, . . . ಫರಿಸಾಯರ ಕುತರ್ಕದೊಂದಿಗೆ ಸಂಘರ್ಷಿಸುತ್ತಿತ್ತು.”—ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ಥಿಯೊಲಜಿ.
ನೀವು ಹೇಗೆ ಉತ್ತರಿಸುವಿರಿ?
• ಯೇಸುವಿನ ಶಿಷ್ಯನಾಗುವುದು ನಿಮಗೆ ಯಾವ ಅರ್ಥದಲ್ಲಿದೆ?
• ಯೇಸು ಜನರೊಂದಿಗೆ ಹೇಗೆ ವ್ಯವಹರಿಸಿದನು?
• ಯೇಸು ಕಲಿಸಿದ ವಿಧದಿಂದ ನಾವು ಏನನ್ನು ಕಲಿಯಬಲ್ಲೆವು?
• ಫರಿಸಾಯರಿಗೂ ಯೇಸುವಿಗೂ ಹೇಗೆ ಭಿನ್ನತೆಯಿತ್ತು?
[ಪುಟ 18, 19ರಲ್ಲಿರುವ ಚಿತ್ರ]
ಜನರ ಕಡೆಗೆ ಫರಿಸಾಯರಿಗಿದ್ದ ಮನೋಭಾವಕ್ಕಿಂತ ಯೇಸುವಿನ ಮನೋಭಾವವು ಎಷ್ಟು ಭಿನ್ನವಾಗಿತ್ತು!