ಮಿಷ್ನಾ ಮತ್ತು ಮೋಶೆಗೆ ದೇವರು ಕೊಟ್ಟ ಧರ್ಮಶಾಸ್ತ್ರ
“ನಾವು ಎಂದಿಗೂ ಗ್ರಹಿಸಸಾಧ್ಯವಿಲ್ಲದ ವಿಷಯಗಳ ಕುರಿತಾಗಿ ಈಗಾಗಲೇ ದೀರ್ಘ ಸಮಯದಿಂದ ನಡೆದಿರುವ ಒಂದು ಸಂಭಾಷಣೆಯನ್ನು ಸೇರುತ್ತಿದ್ದೇವೆ ಎಂಬ ಭಾವನೆಯೊಂದಿಗೆ ನಾವು ಆರಂಭಿಸುತ್ತೇವೆ . . . ನಮಗೆ . . . ಬಹು ದೂರದ ವಿಮಾನ ನಿಲ್ದಾಣವೊಂದರಲ್ಲಿ ಪ್ರಯಾಣದ ಕಾಯುವ ಕೋಣೆಯೊಂದರಲ್ಲಿದ್ದೇವೊ ಎಂಬ ಅನಿಸಿಕೆಯಾಗುತ್ತದೆ. ಜನರು ಹೇಳುವ ಮಾತುಗಳು ನಮಗೆ ಅರ್ಥವಾಗುತ್ತವೆ, ಆದರೆ ಅವರು ವಾಸ್ತವವಾಗಿ ಏನನ್ನು ವ್ಯಕ್ತಪಡಿಸಲು ಉದ್ದೇಶಿಸುತ್ತಾರೊ ಮತ್ತು ಅವರ ವಾಸ್ತವವಾದ ಆಸಕ್ತಿಗಳಿಂದ, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ಸ್ವರಗಳಲ್ಲಿರುವ ತುರ್ತಿನಿಂದ ನಾವು ದಿಗ್ಭ್ರಮೆಗೊಳ್ಳುತ್ತೇವೆ.” ಮಿಷ್ನಾವನ್ನು ಪ್ರಥಮ ಸಲ ಓದುವಾಗ, ಓದುಗರಿಗೆ ಆಗಬಹುದಾದ ಅನಿಸಿಕೆಯನ್ನು ಯೆಹೂದಿ ವಿದ್ವಾಂಸ ಜೇಕಬ್ ನೊಯಿಸ್ನರ್ ಈ ವಿಧದಲ್ಲಿ ವರ್ಣಿಸುತ್ತಾನೆ. ನೊಯಿಸ್ನರ್ ಕೂಡಿಸಿ ಹೇಳುವುದು: “ಮಿಷ್ನಾಗೆ ಒಂದು ತರ್ಕಬದ್ಧವಾದ ಆರಂಭವಿಲ್ಲ. ಅದು ಹಠತ್ತಾಗಿ ಅಂತ್ಯಗೊಳ್ಳುತ್ತದೆ.”
ಯೆಹೂದ್ಯ ಮತದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಡ್ಯಾನಿಯಲ್ ಜೆರೆಮೀ ಸಿಲ್ವರ್, ಮಿಷ್ನಾವನ್ನು “ರಬ್ಬಿಗಳ ಯೆಹೂದ್ಯ ಮತದ ಅತಿಮುಖ್ಯ ಗ್ರಂಥಪಾಠ” ಎಂದು ಕರೆಯುತ್ತಾನೆ. ವಾಸ್ತವದಲ್ಲಿ, ಅವನು ಮುಂದುವರಿಯುತ್ತಾ ಹೇಳಿಕೆಯನ್ನೀಯುವುದು: “[ಯೆಹೂದಿ] ಶಿಕ್ಷಣವನ್ನು ಮುಂದುವರಿಸುವ ಪ್ರಧಾನ ವ್ಯಾಸಂಗಕ್ರಮವಾಗಿ ಮಿಷ್ನಾ ಬೈಬಲನ್ನು ಸ್ಥಾನಪಲ್ಲಟಗೊಳಿಸಿತು.” ಅಷ್ಟೊಂದು ಅಸ್ಪಷ್ಟವಾದ ಶೈಲಿಯನ್ನು ಹೊಂದಿರುವ ಒಂದು ಪುಸ್ತಕವು, ಇಷ್ಟೊಂದು ಪ್ರಾಮುಖ್ಯವಾಗಿ ಪರಿಣಮಿಸಿದ್ದೇಕೆ?
ಇದರ ಉತ್ತರದ ಒಂದು ಭಾಗವು, ಮಿಷ್ನಾದಲ್ಲಿ ಮಾಡಲ್ಪಟ್ಟಿರುವ ಈ ಹೇಳಿಕೆಯಲ್ಲಿ ಅಡಕವಾಗಿದೆ: “ಮೋಶೆಯು, ಟೊರಾವನ್ನು ಸೀನಾಯಿಯಲ್ಲಿ ಪಡೆದನು ಮತ್ತು ಅದನ್ನು ಯೆಹೋಶುವನಿಗೆ ಹಸ್ತಾಂತರಿಸಿದನು, ಯೆಹೋಶುವನು ಅದನ್ನು ಹಿರಿಯರಿಗೆ, ಮತ್ತು ಹಿರಿಯರು ಅದನ್ನು ಪ್ರವಾದಿಗಳಿಗೆ ಹಸ್ತಾಂತರಿಸಿದರು. ಮತ್ತು ಪ್ರವಾದಿಗಳು ಅದನ್ನು ಮಹಾ ಸಭೆಯ ಪುರುಷರಿಗೆ ಹಸ್ತಾಂತರಿಸಿದರು.” (ಏವೋಟ್ 1:1) ಸೀನಾಯಿಬೆಟ್ಟದಲ್ಲಿ ಮೋಶೆಗೆ ಹಸ್ತಾಂತರಿಸಲ್ಪಟ್ಟ ಮಾಹಿತಿ—ಇಸ್ರಾಯೇಲಿಗೆ ದೇವರು ಕೊಟ್ಟ ಧರ್ಮಶಾಸ್ತ್ರದ ಅಲಿಖಿತ ಭಾಗ—ಯೊಂದಿಗೆ ವ್ಯವಹರಿಸುತ್ತಿರುವುದಾಗಿ ಮಿಷ್ನಾ ಹೇಳಿಕೊಳ್ಳುತ್ತದೆ. ಮಹಾ ಸಭೆಯ (ಅನಂತರ ಸನ್ಹೆದ್ರಿನ್ ಎಂದು ಕರೆಯಲ್ಪಟ್ಟಿತು) ಪುರುಷರನ್ನು, ವಿವೇಕಿ ವಿದ್ವಾಂಸರು ಅಥವಾ ಜ್ಞಾನಿಗಳ ಒಂದು ದೊಡ್ಡ ಶ್ರೇಣಿಯ ಭಾಗವಾಗಿ ವೀಕ್ಷಿಸಲಾಗಿತ್ತು. ಇವರು, ಸಂತತಿಯಿಂದ ಸಂತತಿಗೆ ಬಾಯಿಮಾತಿನ ಮೂಲಕ ನಿರ್ದಿಷ್ಟ ಬೋಧನೆಗಳನ್ನು ದಾಟಿಸಿದರು, ಮತ್ತು ಇವು ಕೊನೆಗೆ ಮಿಷ್ನಾದಲ್ಲಿ ದಾಖಲಿಸಲ್ಪಟ್ಟವು. ಆದರೆ ಇದು ವಾಸ್ತವಿಕ ಸಂಗತಿಯೊ? ಮಿಷ್ನಾವನ್ನು ವಾಸ್ತವವಾಗಿ ಬರೆದವರು ಯಾರು, ಮತ್ತು ಏಕೆ? ಅದರ ಒಳವಿಷಯಗಳು, ಸೀನಾಯಿಯಲ್ಲಿ ಮೋಶೆಯಿಂದ ಆರಂಭಗೊಂಡವೊ? ಅದರಲ್ಲಿ ಇಂದು ನಮಗಾಗಿ ಅರ್ಥವಿದೆಯೊ?
ದೇವಾಲಯವಿಲ್ಲದ ಯೆಹೂದ್ಯ ಮತ
ಶಾಸ್ತ್ರಗಳು ಪ್ರೇರಣೆಯ ಕೆಳಗೆ ಬರೆಯಲ್ಪಡುತ್ತಿದ್ದಾಗ, ಮೋಶೆಯ ಲಿಖಿತ ಧರ್ಮಶಾಸ್ತ್ರಕ್ಕೆ ಕೂಡಿಸಿ ಕೊಡಲ್ಪಟ್ಟಿರುವ ದೈವಿಕವಾದ ಮೌಖಿಕ ಧರ್ಮಶಾಸ್ತ್ರದಲ್ಲಿ ನಂಬಿಕೆಯು ಅಜ್ಞಾತವಾಗಿತ್ತು.a (ವಿಮೋಚನಕಾಂಡ 34:27) ಹಲವಾರು ಶತಮಾನಗಳ ಬಳಿಕ, ಈ ವಿಚಾರವನ್ನು ಬೆಳೆಸಿ ಪ್ರವರ್ಧಿಸಿದವರು, ಯೆಹೂದ್ಯ ಮತದೊಳಗಿನ ಗುಂಪಾದ ಫರಿಸಾಯರಾಗಿದ್ದರು. ಸಾ.ಶ. ಒಂದನೆಯ ಶತಮಾನದಲ್ಲಿ, ಸದ್ದುಕಾಯರು ಮತ್ತು ಇತರ ಯೆಹೂದ್ಯರು ಈ ಬೈಬಲ್ಯೇತರ ಬೋಧನೆಯನ್ನು ವಿರೋಧಿಸಿದರು. ಆದಾಗಲೂ, ಯೆರೂಸಲೇಮಿನಲ್ಲಿದ್ದ ದೇವಾಲಯವು ಯೆಹೂದಿ ಆರಾಧನೆಯ ಕೇಂದ್ರವಾಗಿದ್ದಷ್ಟು ಸಮಯ, ಮೌಖಿಕ ಧರ್ಮಶಾಸ್ತ್ರದ ವಿವಾದಾಂಶವು ಗೌಣವಾಗಿತ್ತು. ದೇವಾಲಯದಲ್ಲಿನ ಆರಾಧನೆಯು, ಪ್ರತಿಯೊಬ್ಬ ಯೆಹೂದಿಯ ಅಸ್ತಿತ್ವಕ್ಕೆ ರಚನಾಕ್ರಮ ಮತ್ತು ಸ್ವಲ್ಪ ಮಟ್ಟಿಗಿನ ಸ್ಥಿರತೆಯನ್ನು ಕೊಟ್ಟಿತು.
ಸಾ.ಶ. 70ರಲ್ಲಾದರೊ, ಯೆಹೂದಿ ಜನಾಂಗವು ಊಹಿಸಲಾಗದಂತಹ ಪ್ರಮಾಣಗಳ ಧಾರ್ಮಿಕ ಬಿಕ್ಕಟ್ಟನ್ನು ಎದುರಿಸಿತು. ಯೆರೂಸಲೇಮ್, ರೋಮನ್ ಸೈನ್ಯಗಳಿಂದ ನಾಶಗೊಳಿಸಲ್ಪಟ್ಟಿತು ಮತ್ತು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಯೆಹೂದ್ಯರು ಕೊಲ್ಲಲ್ಪಟ್ಟರು. ಅವರ ಆತ್ಮಿಕ ಜೀವಿತಗಳ ಕೇಂದ್ರವಾಗಿದ್ದ ದೇವಾಲಯವು ಇನ್ನಿಲ್ಲವಾಗಿತ್ತು. ದೇವಾಲಯದಲ್ಲಿ ಯಜ್ಞ ಮತ್ತು ಯಾಜಕತ್ವದ ಸೇವೆಯನ್ನು ಅವಶ್ಯಪಡಿಸಿದಂತಹ ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಜೀವಿಸುವುದು, ಅಸಾಧ್ಯವಾದ ಸಂಗತಿಯಾಗಿತ್ತು. ಯೆಹೂದ್ಯ ಮತದ ಅಡಿಗಲ್ಲು ಅಸ್ತಿತ್ವಹೀನವಾಯಿತು. ಟ್ಯಾಲ್ಮುಡ್ ಸಂಬಂಧಿತ ವಿದ್ವಾಂಸ ಏಡನ್ ಸ್ಟೈನ್ಸಾಲ್ಟ್ಸ್ ಬರೆಯುವುದು: “ಸಾ.ಶ. 70ರಲ್ಲಿನ . . . ನಾಶನವು . . . ಧಾರ್ಮಿಕ ಜೀವನದ ಇಡೀ ಆಧಾರಕಟ್ಟಿನ ಪುನರ್ನಿರ್ಮಾಣವನ್ನು ಒಂದು ತುರ್ತು ಅಗತ್ಯವನ್ನಾಗಿ ಮಾಡಿತು.” ಮತ್ತು ಅವರು ಅದನ್ನು ನಿಶ್ಚಯವಾಗಿಯೂ ಪುನರ್ನಿರ್ಮಿಸಿದರು.
ದೇವಾಲಯವು ನಾಶಗೊಳಿಸಲ್ಪಡುವ ಮುಂಚೆಯೂ, ಫರಿಸಾಯ ಮುಖಂಡನಾದ ಹಿಲೆಲನ ಒಬ್ಬ ಗೌರವಾನಿತ್ವ ಶಿಷ್ಯನಾದ ಯೋಹಾನಾನ್ ಬೆನ್ ಸಾಕೈ, (ಬೇಗನೆ ಸಮ್ರಾಟನಾಗಲಿದ್ದ) ವೆಸ್ಪೇಶನ್ನಿಂದ, ಯೆಹೂದ್ಯ ಮತದ ಆತ್ಮಿಕ ಕೇಂದ್ರ ಮತ್ತು ಸನ್ಹೆದ್ರಿನ್ನನ್ನು ಯೆರೂಸಲೇಮಿನಿಂದ ಯಾವ್ನೆಗೆ ಸ್ಥಳಾಂತರಿಸಲು ಅನುಮತಿಯನ್ನು ಪಡೆದನು. ಸ್ಟೈನ್ಸಾಲ್ಟ್ಸ್ ವಿವರಿಸುವಂತೆ, ಯೆರೂಸಲೇಮಿನ ನಾಶನದ ನಂತರ, ಯೋಹಾನಾನ್ ಬೆನ್ ಸಾಕೈ, “ಜನರಿಗಾಗಿ ಒಂದು ಹೊಸ ಕೇಂದ್ರವನ್ನು ಸ್ಥಾಪಿಸುವ ಮತ್ತು ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುವ ಪಂಥಾಹ್ವಾನವನ್ನು ಎದುರಿಸಿದನು. ದೇವಾಲಯವು ಅಸ್ತಿತ್ವಹೀನವಾಗಿದ್ದರಿಂದ, ಇದರ ಮೂಲಕ ಧಾರ್ಮಿಕ ಅತ್ಯುತ್ಸಾಹವನ್ನು ಇನ್ನೊಂದು ಕೇಂದ್ರ ಬಿಂದುವಿಗೆ ತಿರುಗಿಸಬೇಕಾಗಿತ್ತು.” ಆ ಹೊಸ ಕೇಂದ್ರ ಬಿಂದುವು, ಮೌಖಿಕ ಧರ್ಮಶಾಸ್ತ್ರವಾಗಿತ್ತು.
ದೇವಾಲಯವು ಹಾಳುಬಿದ್ದಿರಲಾಗಿ, ಸದ್ದುಕಾಯರು ಮತ್ತು ಇತರ ಯೆಹೂದಿ ಪಂಥಗಳು, ಮನದಟ್ಟಾಗುವ ಬೇರೆ ಯಾವುದೇ ಪರ್ಯಾಯ ಮಾರ್ಗವನ್ನು ನೀಡಲಿಲ್ಲ. ಫರಿಸಾಯರು ಎಲ್ಲ ವಿರೋಧಿ ಗುಂಪುಗಳನ್ನು ಏಕೀಕರಿಸುತ್ತಾ, ಮುಖ್ಯ ಯೆಹೂದಿ ಪ್ರಭಾವಶಕ್ತಿಯಾದರು. ಏಕತೆಗೆ ಪ್ರಾಶಸ್ತ್ಯ ಕೊಡುತ್ತಾ, ಮುಂದಾಳುತ್ವ ವಹಿಸುತ್ತಿದ್ದ ರಬ್ಬಿಗಳು ತಮ್ಮನ್ನು ಫರಿಸಾಯರೆಂದು ಕರೆದುಕೊಳ್ಳುವುದನ್ನು ನಿಲ್ಲಿಸಿದರು. ಈ ಪದವು ಪಂಥಾಭಿಮಾನಿ ಮತ್ತು ಪಕ್ಷವರ್ತಿ ಸೂಚಿತಾರ್ಥಗಳಿಂದ ತುಂಬಿತ್ತು. ಅವರು ಕೇವಲ ರಬ್ಬಿಗಳು, “ಇಸ್ರಾಯೇಲಿನ ಜ್ಞಾನಿಗಳು” ಎಂದು ಜ್ಞಾತರಾದರು. ಈ ಜ್ಞಾನಿಗಳು, ಮೌಖಿಕ ಧರ್ಮಶಾಸ್ತ್ರದ ತಮ್ಮ ವಿಚಾರಕ್ಕೆ ಆಶ್ರಯ ನೀಡಲು, ನಂಬಿಕೆಗಳ ಒಂದು ವ್ಯವಸ್ಥೆಯನ್ನು ರಚಿಸಲಿದ್ದರು. ಅದು, ಮಾನವ ಆಕ್ರಮಣಕ್ಕೆ ಭೇದ್ಯವಾಗಿದ್ದ ದೇವಾಲಯಕ್ಕಿಂತ ತೀರ ಕಡಿಮೆ ಭೇದ್ಯವಾಗಿರುವ ಒಂದು ಆತ್ಮಿಕ ರಚನಾಕ್ರಮವಾಗಿರಲಿತ್ತು.
ಮೌಖಿಕ ಧರ್ಮಶಾಸ್ತ್ರದ ಬಲಪಡಿಸುವಿಕೆ
ಯಾವ್ನೆಯಲ್ಲಿದ್ದ (ಯೆರೂಸಲೇಮಿನ ಪಶ್ಚಿಮಕ್ಕೆ 40 ಕಿಲೊಮೀಟರುಗಳಷ್ಟು ದೂರದಲ್ಲಿ) ರಬ್ಬಿಗಳ ಶಿಕ್ಷಣ ಸಂಸ್ಥೆಯು ಈಗ ಮುಖ್ಯ ಕೇಂದ್ರವಾಗಿತ್ತಾದರೂ, ಮೌಖಿಕ ಧರ್ಮಶಾಸ್ತ್ರವನ್ನು ಕಲಿಸುವ ಇತರ ಶಿಕ್ಷಣ ಸಂಸ್ಥೆಗಳು ಇಸ್ರಾಯೇಲಿನಾದ್ಯಂತ ಮತ್ತು ಬ್ಯಾಬಿಲೊನ್ ಮತ್ತು ರೋಮ್ನಷ್ಟು ದೂರದಲ್ಲೂ ತಲೆದೋರಲಾರಂಭಿಸಿದವು. ಆದಾಗಲೂ, ಇದು ಒಂದು ಸಮಸ್ಯೆಯನ್ನು ಸೃಷ್ಟಿಸಿತು. ಸ್ಟೈನ್ಸಾಲ್ಟ್ಸ್ ವಿವರಿಸುವುದು: “ಎಲ್ಲ ಜ್ಞಾನಿಗಳು ಒಟ್ಟುಗೂಡಿದ್ದು, ಪಾಂಡಿತ್ಯದ ಮುಖ್ಯ ಕೆಲಸವು [ಯೆರೂಸಲೇಮಿನಲ್ಲಿ] ಪುರುಷರ ಒಂದು ಗುಂಪಿನಿಂದ ನಡೆಸಲ್ಪಡುತ್ತಿದ್ದಷ್ಟು ಸಮಯ, ಸಂಪ್ರದಾಯದ ಏಕರೂಪತೆಯು ಸಂರಕ್ಷಿಸಲ್ಪಟ್ಟಿತು. ಆದರೆ ಬೋಧಕರ ಸಂಖ್ಯೆಯಲ್ಲಿನ ವೃದ್ಧಿ ಮತ್ತು ಪ್ರತ್ಯೇಕ ಶಾಲೆಗಳ ಸ್ಥಾಪನೆಯು . . . ಪದಕ್ರಮ ಮತ್ತು ಅಭಿವ್ಯಕ್ತಿಯ ವಿಧಾನಗಳ ವಿಪುಲತೆಯನ್ನು ಸೃಷ್ಟಿಸಿತು.”
ಮೌಖಿಕ ಧರ್ಮಶಾಸ್ತ್ರದ ಬೋಧಕರನ್ನು ಟ್ಯಾನಾಯಿಮ್ ಎಂದು ಕರೆಯಲಾಗುತ್ತಿತ್ತು. ಈ ಪದವನ್ನು, “ಅಭ್ಯಾಸಿಸು,” “ಪುನರುಚ್ಚರಿಸು” ಅಥವಾ “ಕಲಿಸು” ಎಂಬ ಆ್ಯರಮೇಯಿಕ್ ಮೂಲಾರ್ಥವುಳ್ಳ ಶಬ್ದದಿಂದ ಪಡೆಯಲಾಗಿದೆ. ತೀವ್ರವಾದ ಪುನರುಚ್ಚರಿಸುವಿಕೆ ಮತ್ತು ಕಂಠಪಾಠದ ಮೂಲಕ, ಅವರು ಮೌಖಿಕ ಧರ್ಮಶಾಸ್ತ್ರವನ್ನು ಕಲಿಯುವ ಮತ್ತು ಕಲಿಸುವ ವಿಧಾನವನ್ನು ಇದು ಎತ್ತಿತೋರಿಸಿತು. ಮೌಖಿಕ ಸಂಪ್ರದಾಯಗಳ ಕಂಠಪಾಠವನ್ನು ಸುಲಭಗೊಳಿಸಲು, ಪ್ರತಿಯೊಂದು ಪದ್ಧತಿ ಅಥವಾ ಸಂಪ್ರದಾಯವು, ಒಂದು ಸಂಕ್ಷಿಪ್ತ, ಚುಟುಕಾದ ವಾಕ್ಸರಣಿಯಾಗಿ ಮೊಟಕುಗೊಳಿಸಲ್ಪಟ್ಟಿತ್ತು. ಪದಗಳು ಎಷ್ಟು ಕಡಿಮೆಯೊ ಅಷ್ಟು ಒಳ್ಳೇದು. ರಬ್ಬಿಗಳು ಒಂದು ಸಂಪ್ರದಾಯಬದ್ಧ, ಕಾವ್ಯಾತ್ಮಕ ರೂಪವನ್ನು ಕೊಡಲು ಪ್ರಯತ್ನಿಸಿದರು, ಮತ್ತು ಆ ವಾಕ್ಸರಣಿಗಳನ್ನು ಅನೇಕವೇಳೆ ಪಠಿಸಲಾಗುತ್ತಿತ್ತು ಅಥವಾ ಹಾಡಲಾಗುತ್ತಿತ್ತು. ಆದರೂ, ಈ ಹೇಳಿಕೆಗಳು ಅವ್ಯವಸ್ಥಿತವಾಗಿದ್ದವು ಮತ್ತು ಅವು ಬೋಧಕರೊಳಗೇ ಬಹಳವಾಗಿ ಭಿನ್ನಭಿನ್ನವಾಗಿದ್ದವು.
ಅನೇಕ ವಿಭಿನ್ನ ಮೌಖಿಕ ಸಂಪ್ರದಾಯಗಳಿಗೆ ನಿರ್ದಿಷ್ಟ ರೂಪ ಮತ್ತು ರಚನೆಯನ್ನು ಕೊಟ್ಟ ಪ್ರಥಮ ರಬ್ಬಿ, ಆಕೀವಾ ಬೆನ್ ಜೋಸೇಫ್ (ಸಿ. 50-ಸಾ.ಶ. 135) ಆಗಿದ್ದನು. ಅವನ ಕುರಿತಾಗಿ, ಸ್ಟೈನ್ಸಾಲ್ಟ್ಸ್ ಬರೆಯುವುದು: “ಅವನ ಸಮಕಾಲೀನರು ಅವನ ಚಟುವಟಿಕೆಯನ್ನು, ಹೊಲಕ್ಕೆ ಹೋಗಿ ತಾನು ಕಂಡುಕೊಳ್ಳುವಂತಹ ಹಣ್ಣು ಅಥವಾ ತರಕಾರಿಗಳನ್ನು ತನ್ನ ಬುಟ್ಟಿಯಲ್ಲಿ ಗೊತ್ತುಗುರಿಯಿಲ್ಲದೆ ತುಂಬಿಸಿಕೊಂಡು, ಅನಂತರ ಮನೆಗೆ ಹಿಂದಿರುಗಿ ಪ್ರತಿಯೊಂದು ಜಾತಿಯನ್ನು ಪ್ರತ್ಯೇಕವಾಗಿ ಏರ್ಪಡಿಸಿಡುವ ಕಾರ್ಮಿಕನೊಬ್ಬನಿಗೆ ಹೋಲಿಸಿದರು. ಆಕೀವಾ, ಅಸಂಖ್ಯಾತ ಅವ್ಯವಸ್ಥಿತ ವಿಷಯಗಳನ್ನು ಅಭ್ಯಾಸಿಸಿದ್ದನು ಮತ್ತು ಅವುಗಳನ್ನು ವಿಭಿನ್ನ ವಿಭಾಗಗಳಾಗಿ ವರ್ಗೀಕರಿಸಿದನು.”
ಸಾ.ಶ. ಎರಡನೆಯ ಶತಮಾನದಲ್ಲಿ—ಯೆರೂಸಲೇಮಿನ ನಾಶನದ 60ಕ್ಕೂ ಹೆಚ್ಚು ವರ್ಷಗಳ ಬಳಿಕ—ರೋಮಿನ ವಿರುದ್ಧವಾದ ಎರಡನೆಯ ದೊಡ್ಡ ಯೆಹೂದಿ ದಂಗೆಯು, ಬಾರ್ ಕಾಕ್ಬಾನಿಂದ ಮುನ್ನಡೆಸಲ್ಪಟ್ಟಿತು. ಪುನಃ ಒಮ್ಮೆ, ದಂಗೆಯು ವಿಪತ್ತನ್ನು ತಂದಿತು. ಬಲಿಯಾದ ಸುಮಾರು ಹತ್ತು ಲಕ್ಷ ಯೆಹೂದ್ಯರಲ್ಲಿ, ಆಕೀವಾ ಮತ್ತು ಅವನ ಶಿಷ್ಯರಲ್ಲಿ ಅನೇಕರಿದ್ದರು. ದೇವಾಲಯದ ನಾಶನದ ವಾರ್ಷಿಕೋತ್ಸವದ ದಿನವನ್ನು ಬಿಟ್ಟು, ಬೇರೆ ಯಾವುದೇ ಸಮಯದಲ್ಲಿ ಯೆಹೂದ್ಯರು ಯೆರೂಸಲೇಮನ್ನು ಪ್ರವೇಶಿಸಬಾರದೆಂದು ರೋಮನ್ ಸಾಮ್ರಾಟ ಹೇಡ್ರಿಯನ್ ಪ್ರಕಟಿಸಿದಾಗ, ದೇವಾಲಯವನ್ನು ಪುನರ್ನಿರ್ಮಿಸುವ ಯಾವುದೇ ನಿರೀಕ್ಷೆಗಳು ನುಚ್ಚುನೂರುಗೊಳಿಸಲ್ಪಟ್ಟವು.
ಆಕೀವಾನ ನಂತರ ಜೀವಿಸಿದ ಟ್ಯಾನಾಯಿಮ್, ಯೆರೂಸಲೇಮಿನಲ್ಲಿದ್ದ ದೇವಾಲಯವನ್ನು ಎಂದೂ ನೋಡಿರಲಿಲ್ಲ. ಆದರೆ, ಮೌಖಿಕ ಧರ್ಮಶಾಸ್ತ್ರದ ಸಂಪ್ರದಾಯಗಳ ಕುರಿತಾದ ರಚನಾ ನಮೂನೆಯ ಅಭ್ಯಾಸವು, ಅವರ “ದೇವಾಲಯ” ಅಥವಾ ಆರಾಧನೆಯ ಕೇಂದ್ರವಾಗಿ ಪರಿಣಮಿಸಿತು. ಮೌಖಿಕ ಧರ್ಮಶಾಸ್ತ್ರದ ಈ ರಚನೆಯ ಭದ್ರಪಡಿಸುವಿಕೆಯಲ್ಲಿ ಆಕೀವಾ ಮತ್ತು ಅವನ ಶಿಷ್ಯರಿಂದ ಆರಂಭಿಸಲ್ಪಟ್ಟ ಕೆಲಸವು, ಟ್ಯಾನಾಯಿಮ್ರಲ್ಲಿ ಕೊನೆಯವನಾದ ಜೂಡ ಹನಾಸಿಯಿಂದ ಪುನಃ ವಹಿಸಲ್ಪಟ್ಟಿತು.
ಮಿಷ್ನಾದ ರಚನಾರೀತಿ
ಜೂಡ ಹನಾಸಿಯು, ಹಿಲೆಲ ಮತ್ತು ಗಮಲಿಯೇಲನ ಸಂತತಿಯವನಾಗಿದ್ದನು.b ಬಾರ್ ಕಾಕ್ಬಾನ ದಂಗೆಯ ಸಮಯದಲ್ಲಿ ಜನಿಸಿದ್ದು, ಅವನು ಎರಡನೆಯ ಶತಮಾನದ ಅಂತ್ಯ ಮತ್ತು ಸಾ.ಶ. ಮೂರನೆಯ ಶತಮಾನದ ಆರಂಭದಷ್ಟಕ್ಕೆ ಇಸ್ರಾಯೇಲಿನಲ್ಲಿದ್ದ ಯೆಹೂದಿ ಸಮುದಾಯದ ಮುಖ್ಯಸ್ಥನಾದನು. ಹನಾಸಿ ಎಂಬ ಬಿರುದಿನ ಅರ್ಥ, “ರಾಜಕುಮಾರ” ಎಂದಾಗಿದೆ. ಇದು, ಅವನು ತನ್ನ ಜೊತೆ ಯೆಹೂದ್ಯರ ದೃಷ್ಟಿಯಲ್ಲಿ ಹೊಂದಿದ್ದ ಸ್ಥಾನವನ್ನು ಸೂಚಿಸುತ್ತದೆ. ಅವನನ್ನು ಅನೇಕವೇಳೆ ಕೇವಲ ರಬ್ಬಿಯೆಂದು ಕರೆಯಲಾಗುತ್ತದೆ. ಜೂಡ ಹನಾಸಿ, ಪ್ರಥಮವಾಗಿ ಬೆಟ್ ಷಿಆರಿಮ್ನಲ್ಲಿ ಮತ್ತು ತದನಂತರ ಗಲಿಲಿಯ ಸಫಾರಸ್ನಲ್ಲಿ ತನ್ನ ಸ್ವಂತ ಶಿಕ್ಷಣ ಸಂಸ್ಥೆ ಮತ್ತು ಸನ್ಹೆದ್ರಿನ್ ಇವೆರಡನ್ನೂ ಮುನ್ನಡೆಸಿದನು.
ರೋಮ್ನೊಂದಿಗಿನ ಮುಂದಿನ ಸಂಘರ್ಷಣೆಗಳು, ಮೌಖಿಕ ಧರ್ಮಶಾಸ್ತ್ರದ ದಾಟಿಸುವಿಕೆಯನ್ನೇ ಅಪಾಯಕ್ಕೊಡ್ಡಬಹುದೆಂದು ಅರಿಯುತ್ತಾ, ಅದರ ಸಂರಕ್ಷಣೆಯನ್ನು ಖಚಿತಗೊಳಿಸುವ ಒಂದು ರಚನಾಕ್ರಮವನ್ನು ಅದಕ್ಕೆ ಕೊಡಲು ಜೂಡ ಹನಾಸಿ ನಿರ್ಧರಿಸಿದನು. ತನ್ನ ಶಿಕ್ಷಣಸಂಸ್ಥೆಯಲ್ಲಿ, ತನ್ನ ದಿನದಲ್ಲಿದ್ದ ಅತಿ ಗಮನಾರ್ಹ ವಿದ್ವಾಂಸರನ್ನು ಅವನು ಒಟ್ಟುಗೂಡಿಸಿದನು. ಮೌಖಿಕ ಧರ್ಮಶಾಸ್ತ್ರದ ಪ್ರತಿಯೊಂದು ಅಂಶ ಮತ್ತು ಸಂಪ್ರದಾಯವನ್ನು ವಾಗ್ವಾದಕ್ಕೊಳಪಡಿಸಲಾಯಿತು. ಈ ಚರ್ಚೆಗಳ ಸಂಕಲನಗಳನ್ನು, ಹೀಬ್ರು ಭಾಷೆಯ ಕಾವ್ಯಾತ್ಮಕ ಗದ್ಯರೂಪದ ಕಟ್ಟುನಿಟ್ಟಿನ ನಮೂನೆಯನ್ನು ಅನುಸರಿಸುತ್ತಾ, ನಂಬಲಾಗದಷ್ಟು ಸಂಕ್ಷೇಪವಾದ ವಾಕ್ಸರಣಿಗಳಲ್ಲಿ ಸಂಚಯಿಸಲಾಯಿತು.
ಈ ಸಂಕಲನಗಳನ್ನು, ಪ್ರಧಾನ ವಿಷಯಗಳಿಗನುಸಾರ ಆರು ದೊಡ್ಡ ವಿಭಾಗಗಳಾಗಿ ಅಥವಾ ಶಾಸನಗಳಾಗಿ ಸಂಘಟಿಸಲಾಯಿತು. ಜೂಡ ಇವುಗಳನ್ನು 63 ವಿಭಾಗಗಳು ಅಥವಾ ಪ್ರಬಂಧಗಳಾಗಿ ಪುನಃ ವಿಭಾಗಿಸಿದನು. ಆತ್ಮಿಕ ಕಟ್ಟೋಣವು ಈಗ ಪೂರ್ಣವಾಗಿತ್ತು. ಈ ಹಂತದ ವರೆಗೆ, ಅಂತಹ ಸಂಪ್ರದಾಯಗಳು ಯಾವಾಗಲೂ ಬಾಯಿಮಾತಿನ ಮೂಲಕ ದಾಟಿಸಲ್ಪಟ್ಟಿದ್ದವು. ಆದರೆ ಒಂದು ಹೆಚ್ಚಿನ ಸಂರಕ್ಷಣೆಯೋಪಾದಿ, ಎಲ್ಲವನ್ನು ಬರವಣಿಗೆಯಲ್ಲಿ ಹಾಕುವ ಕೊನೆಯ ಕ್ರಾಂತಿಕಾರಿ ಹೆಜ್ಜೆಯು ತೆಗೆದುಕೊಳ್ಳಲ್ಪಟ್ಟಿತು. ಮೌಖಿಕ ನಿಯಮಕ್ಕೆ ಆಶ್ರಯ ನೀಡುವ ಭಾವೋತ್ತೇಜಕವಾದ ಈ ಹೊಸ ಲಿಖಿತ ರಚನಾಕ್ರಮವು, ಮಿಷ್ನಾ ಎಂದು ಕರೆಯಲ್ಪಟ್ಟಿತು. ಮಿಷ್ನಾ ಎಂಬ ಹೆಸರು, “ಪುನರುಚ್ಚರಿಸು,” “ಅಭ್ಯಾಸಿಸು” ಅಥವಾ “ಕಲಿಸು” ಎಂಬ ಅರ್ಥವುಳ್ಳ ಹೀಬ್ರೂ ಮೂಲ ಪದವಾದ ಶಾನಾದಿಂದ ಬರುತ್ತದೆ. ಅದು, ಯಾವುದರಿಂದ ಟ್ಯಾನಾಯಿಮ್ ಎಂಬ ಪದವು ಬರುತ್ತದೊ, ಆ ಟೆನಾ ಎಂಬ ಆ್ಯರಮೇಯಿಕ್ ಪದಕ್ಕೆ ಸಮಾನಪದವಾಗಿದೆ. ಟ್ಯಾನಾಯಿಮ್ ಎಂಬ ಪದವನ್ನು, ಮಿಷ್ನಾದ ಬೋಧಕರಿಗೆ ಅನ್ವಯಿಸಲಾಗುತ್ತಿತ್ತು.
ಮಿಷ್ನಾದ ಉದ್ದೇಶವು, ಯೆಹೂದಿ ಧರ್ಮಶಾಸ್ತ್ರದ ಒಂದು ಅಂತಿಮ ಸಾರಾಂಶವನ್ನು ಸ್ಥಾಪಿಸುವುದಾಗಿರಲಿಲ್ಲ. ಓದುಗನಿಗೆ ಮೂಲತತ್ತ್ವಗಳು ತಿಳಿದಿದ್ದವೆಂದು ಊಹಿಸಿಕೊಳ್ಳುತ್ತಾ, ಅದು ನಿಯಮಕ್ಕೆ ಒಳಪಡದಂತಹ ಸಂಗತಿಗಳೊಂದಿಗೆ ಹೆಚ್ಚಾಗಿ ವ್ಯವಹರಿಸಿತು. ವಾಸ್ತವವಾಗಿ, ಅದು ಜೂಡ ಹನಾಸಿಯ ಅವಧಿಯ ಸಮಯದಲ್ಲಿ, ರಬ್ಬಿಗಳ ಶಿಕ್ಷಣಾಸಂಸ್ಥೆಗಳಲ್ಲಿ ಚರ್ಚಿಸಲ್ಪಟ್ಟ ಮತ್ತು ಕಲಿಸಲ್ಪಟ್ಟ ವಿಷಯವನ್ನು ಸಾರಾಂಶಿಸಿತು. ಮಿಷ್ನಾವು, ಹೆಚ್ಚಿನ ವಾಗ್ವಾದಕ್ಕಾಗಿ ಮೌಖಿಕ ನಿಯಮದ ಒಂದು ಹೊರಮೇರೆ, ಯಾವುದರ ಮೇಲೆ ಅವರು ಕಟ್ಟಸಾಧ್ಯವಿದೆಯೊ ಅಂತಹ ಅಸ್ಥಿಪಂಜರದಂಥ ರೂಪ, ಅಥವಾ ಮೂಲ ರಚನೆಯಾಗಿರಲು ಅರ್ಥೈಸಲ್ಪಟ್ಟಿತು.
ಸೀನಾಯಿಬೆಟ್ಟದಲ್ಲಿ ಮೋಶೆಗೆ ಕೊಡಲ್ಪಟ್ಟ ಯಾವುದೇ ವಿಷಯವನ್ನು ಪ್ರಕಟಿಸುವ ಬದಲಿಗೆ, ಫರಿಸಾಯರಿಂದ ಆರಂಭವಾದ ಒಂದು ವಿಚಾರವಾಗಿರುವ ಮೌಖಿಕ ಧರ್ಮಶಾಸ್ತ್ರದ ವಿಕಸನದ ಕುರಿತಾದ ಒಳನೋಟವನ್ನು ಮಿಷ್ನಾ ಒದಗಿಸುತ್ತದೆ. ಮಿಷ್ನಾದಲ್ಲಿ ದಾಖಲಿಸಲ್ಪಟ್ಟಿರುವ ಮಾಹಿತಿಯು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿರುವ ಹೇಳಿಕೆಗಳು ಮತ್ತು ಯೇಸು ಕ್ರಿಸ್ತನು ಹಾಗೂ ಫರಿಸಾಯರ ನಡುವೆ ನಡೆದ ನಿರ್ದಿಷ್ಟ ಚರ್ಚೆಗಳ ಮೇಲೆ ಸ್ವಲ್ಪ ಬೆಳಕನ್ನು ಚೆಲ್ಲುತ್ತದೆ. ಆದಾಗಲೂ, ಎಚ್ಚರಿಕೆಯ ಅಗತ್ಯವಿದೆ, ಯಾಕಂದರೆ ಮಿಷ್ನಾದಲ್ಲಿ ಕಂಡುಬರುವ ವಿಚಾರಗಳು ಸಾ.ಶ. ಎರಡನೆಯ ಶತಮಾನದ ಯೆಹೂದಿ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ. ಮಿಷ್ನಾವು, ಎರಡನೆಯ ದೇವಾಲಯದ ಅವಧಿ ಮತ್ತು ಟ್ಯಾಲ್ಮುಡ್ನ ನಡುವಿನ ಜೋಡಣೆಯಾಗಿದೆ.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್) ಎಂಬ ಬ್ರೋಷರ್ನ 8-11ನೆಯ ಪುಟಗಳನ್ನು ನೋಡಿರಿ.
b ಜುಲೈ 15, 1996ರ ಕಾವಲಿನಬುರುಜು ಪತ್ರಿಕೆಯಲ್ಲಿ, “ಗಮಲಿಯೇಲ—ಅವನು ತಾರ್ಸದ ಸೌಲನಿಗೆ ಕಲಿಸಿದನು” ಎಂಬ ಲೇಖನವನ್ನು ನೋಡಿರಿ.
[ಪುಟ 26 ರಲ್ಲಿರುವ ಚೌಕ]
ಮಿಷ್ನಾದ ವಿಭಾಗಗಳು
ಮಿಷ್ನಾವು ಆರು ಶಾಸನಗಳಾಗಿ ವಿಭಾಗಿಸಲ್ಪಟ್ಟಿದೆ. ಇವುಗಳಲ್ಲಿ, 63 ಚಿಕ್ಕ ಪುಸ್ತಕಗಳು ಅಥವಾ ಪ್ರಬಂಧಗಳು ಅಡಕವಾಗಿವೆ. ಇವು, ಅಧ್ಯಾಯಗಳು ಮತ್ತು ಮಿಷ್ನಾಯೊಟ್ ಅಥವಾ ಪ್ಯಾರಗ್ರಾಫ್ಗಳಾಗಿ (ವಚನಗಳಲ್ಲ) ವಿಭಾಗಿಸಲ್ಪಟ್ಟಿವೆ.
1. ಸರಾಯಿಮ್ (ವ್ಯವಸಾಯಸಂಬಂಧಿತ ನಿಯಮಗಳು)
ಈ ಪ್ರಬಂಧಗಳು, ಆಹಾರದ ವಿಷಯದಲ್ಲಿ ಹೇಳಲ್ಪಡುವ ಪ್ರಾರ್ಥನೆಗಳು ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತಾದ ಚರ್ಚೆಗಳನ್ನು ಒಳಗೊಂಡಿವೆ. ಅವು, ದಶಮಾಂಶಕೊಡುವಿಕೆ, ಯಾಜಕರ ಭಾಗಗಳು, ಹಕ್ಕಲಾಯಿಗಳು, ಮತ್ತು ಸಬ್ಬತ್ ವರ್ಷಗಳ ಕುರಿತಾದ ನಿಯಮಗಳನ್ನೂ ಒಳಗೊಂಡಿವೆ.
2. ಮೋಅಡ್ (ಪವಿತ್ರ ಸಂದರ್ಭಗಳು, ಹಬ್ಬಗಳು)
ಈ ಶಾಸನದಲ್ಲಿನ ಪ್ರಬಂಧಗಳು, ಸಬ್ಬತ್, ದೋಷಪರಿಹಾರಕ ದಿನ, ಮತ್ತು ಇತರ ಹಬ್ಬಗಳಿಗೆ ಸಂಬಂಧಿಸಿದ ನಿಯಮಗಳನ್ನು ಚರ್ಚಿಸುತ್ತವೆ.
3. ನಾಶೀಮ್ (ಸ್ತ್ರೀಯರು, ವಿವಾಹ ನಿಯಮ)
ಇವು ವಿವಾಹ ಮತ್ತು ವಿವಾಹ ವಿಚ್ಛೇದ, ಪ್ರತಿಜ್ಞೆಗಳು, ನಾಜೀರರು, ಮತ್ತು ವ್ಯಭಿಚಾರವೆಂದು ಶಂಕಿಸಲ್ಪಟ್ಟ ವಿದ್ಯಮಾನಗಳನ್ನು ಚರ್ಚಿಸುವ ಪ್ರಬಂಧಗಳಾಗಿವೆ.
4. ನೆಸಿಕಿನ್ (ಹಾನಿಗಳು ಮತ್ತು ಪೌರ ನಿಯಮ)
ಈ ಶಾಸನದಲ್ಲಿನ ಪ್ರಬಂಧಗಳು, ಪೌರ ಮತ್ತು ಆಸ್ತಿ ನಿಯಮ, ನ್ಯಾಯಾಲಯಗಳು ಮತ್ತು ದಂಡನೆಗಳು, ಸನ್ಹೆದ್ರಿನ್ನ ಕಾರ್ಯಾಚರಣೆ, ವಿಗ್ರಹಾರಾಧನೆ, ಶಪಥಗಳು ಮತ್ತು ಪೌರಹಿರಿಯರ ನೀತಿತತ್ವಗಳಿಗೆ ಸಂಬಂಧಿಸಿದ ವಿಷಯಗಳನ್ನು ಆವರಿಸುತ್ತವೆ. (ಏವೋಟ್).
5. ಕೋಡಾಶಿಮ್ (ಯಜ್ಞಗಳು)
ಈ ಪ್ರಬಂಧಗಳು, ಪ್ರಾಣಿ ಮತ್ತು ಧಾನ್ಯ ಅರ್ಪಿಸುವಿಕೆಗಳಿಗೆ ಸಂಬಂಧಿಸಿದ ಕಟ್ಟಳೆಗಳು ಹಾಗೂ ದೇವಾಲಯದ ಅಳತೆಗಳನ್ನು ಚರ್ಚಿಸುತ್ತವೆ.
6. ಟೊಹಾರೋಟ್ (ಶುದ್ಧೀಕರಣದ ಸಂಸ್ಕಾರಗಳು)
ಈ ಶಾಸನದಲ್ಲಿ, ಸಂಸ್ಕಾರಬದ್ಧವಾದ ಶುದ್ಧತೆ, ಸ್ನಾನ, ಕೈಗಳ ತೊಳೆಯುವಿಕೆ, ಚರ್ಮ ರೋಗಗಳು, ಮತ್ತು ವಿಭಿನ್ನ ವಸ್ತುಗಳ ಅಶುದ್ಧತೆಯನ್ನು ಚರ್ಚಿಸುವ ಪ್ರಬಂಧಗಳು ಅಡಕವಾಗಿವೆ.
[ಪುಟ 28 ರಲ್ಲಿರುವ ಚೌಕ]
ಮಿಷ್ನಾ ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗಳು
ಮತ್ತಾಯ 12:1, 2: “ಆ ಕಾಲದಲ್ಲಿ ಯೇಸು ಸಬ್ಬತ್ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ ಆತನ ಶಿಷ್ಯರು ಹಸಿದು ತೆನೆಗಳನ್ನು ಮುರುಕೊಂಡು ತಿನ್ನುತ್ತಿದ್ದರು. ಫರಿಸಾಯರು ಅದನ್ನು ಕಂಡು—ನೋಡು, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ ಎಂದು ಆತನಿಗೆ ಹೇಳಿದರು.” ಯೇಸುವಿನ ಶಿಷ್ಯರು ಏನನ್ನು ಮಾಡಿದರೊ ಅದನ್ನು ಹೀಬ್ರೂ ಶಾಸ್ತ್ರಗಳು ನಿಷೇಧಿಸುವುದಿಲ್ಲ. ಆದರೆ ಮಿಷ್ನಾದಲ್ಲಿ, ಸಬ್ಬತ್ ದಿನದಂದು ರಬ್ಬಿಗಳಿಂದ ಮಾಡಲು ನಿಷೇಧಿಸಲ್ಪಟ್ಟಿರುವ 39 ಚಟುವಟಿಕೆಗಳ ಒಂದು ಪಟ್ಟಿಯನ್ನು ನಾವು ಕಂಡುಕೊಳ್ಳುತ್ತೇವೆ.—ಶಾಬ್ಬಾಟ್ 7:2.
ಮತ್ತಾಯ 15:3: “ಆತನು [ಯೇಸು] ಅವರಿಗೆ ಉತ್ತರಕೊಟ್ಟದ್ದೇನಂದರೆ—ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ಆಜ್ಞೆಯನ್ನು ಯಾಕೆ ಮೀರುತ್ತೀರಿ?” ಮಿಷ್ನಾ ಈ ಮನೋಭಾವವನ್ನು ದೃಢೀಕರಿಸುತ್ತದೆ. (ಸನ್ಹೆದ್ರಿನ್ 11:3) ನಾವು ಓದುವುದು: “[ಲಿಖಿತ] ಧರ್ಮಶಾಸ್ತ್ರದ ಮಾತುಗಳ [ಪಾಲಿಸುವಿಕೆ]ಗಿಂತಲೂ, ಶಾಸ್ತ್ರಿಗಳ ಮಾತುಗಳ [ಪಾಲಿಸುವಿಕೆ]ಗೆ ಹೆಚ್ಚು ಮಹತ್ತಾದ ಕಟ್ಟುನಿಟ್ಟು ಅನ್ವಯವಾಗುತ್ತದೆ. ಒಬ್ಬ ಮನುಷ್ಯನು ಧರ್ಮಶಾಸ್ತ್ರದ ಮಾತುಗಳನ್ನು ಉಲ್ಲಂಘಿಸುತ್ತಾ, ‘ತಾಯಿತಿಗಳನ್ನು ಧರಿಸಲು ಯಾವುದೇ ಹಂಗು ಇಲ್ಲ’ ಎಂದು ಹೇಳಿದರೆ ಅವನು ದೋಷಿಯಲ್ಲ; [ಆದರೆ] ಶಾಸ್ತ್ರಿಗಳ ಮಾತುಗಳಿಗೆ ಕೂಡಿಸುತ್ತಾ, ‘ಅವುಗಳಲ್ಲಿ ಐದು ಭಾಗಗಳಿರಬೇಕು’ [ಎಂದು ಅವನು ಹೇಳಿದರೆ] ಅವನು ದೋಷಿಯಾಗಿದ್ದಾನೆ.”—ದ ಮಿಷ್ನಾ, ಹರ್ಬರ್ಟ್ ಡ್ಯಾನ್ಬೀಯಿಂದ, ಪುಟ 400.
ಎಫೆಸ 2:14: “ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದವನಾದ ಆತನೇ [ಯೇಸು] ನಮಗೆ ಸಮಾಧಾನಕರ್ತೃವಾಗಿದ್ದಾನೆ. . . . ನಮ್ಮನ್ನು ಅಗಲಿಸಿದ ಅಡ್ಡಗೋಡೆಯನ್ನು ಕೆಡವಿಹಾಕಿದನು.” ಮಿಷ್ನಾ ಹೇಳುವುದು: “ದೇವಾಲಯ ಬೆಟ್ಟದಲ್ಲಿ ಹತ್ತು ಹಸ್ತದೂರದಷ್ಟು ಎತ್ತರದ, ಒಂದು ಜಾಲರಿ ಕಟಕಟೆ (ಸಾರೆಗ್) ಇತ್ತು.” (ಮಿಡಾಟ್ 2:3) ಅನ್ಯರು ಈ ಹಂತವನ್ನು ದಾಟಿ ಒಳಗಣ ಅಂಗಣಗಳನ್ನು ಪ್ರವೇಶಿಸುವುದರಿಂದ ನಿಷೇಧಿಸಲ್ಪಟ್ಟರು. ಈ ಗೋಡೆಯು ಇನ್ನೂ ನಿಂತುಕೊಂಡಿದ್ದ ಸಾ.ಶ. 60 ಅಥವಾ 61ರಲ್ಲಿ ಅಪೊಸ್ತಲ ಪೌಲನು ಎಫೆಸದವರಿಗೆ ಬರೆಯುತ್ತಿದ್ದಾಗ, ಅವನು ಅದಕ್ಕೆ ಸಾಂಕೇತಿಕವಾಗಿ ಸೂಚಿಸುತ್ತಿದ್ದಿರಬಹುದು. ಆ ಸಾಂಕೇತಿಕ ಗೋಡೆಯು, ಧರ್ಮಶಾಸ್ತ್ರದ ಒಡಂಬಡಿಕೆಯಾಗಿತ್ತು. ಅದು ಬಹು ಸಮಯದಿಂದ ಯೆಹೂದ್ಯರನ್ನು ಮತ್ತು ಅನ್ಯರನ್ನು ಪ್ರತ್ಯೇಕಿಸಿತ್ತು. ಆದಾಗಲೂ ಸಾ.ಶ. 33ರಲ್ಲಿ, ಕ್ರಿಸ್ತನ ಮರಣದ ಆಧಾರದ ಮೇಲೆ ಆ ಗೋಡೆಯು ಅಳಿಸಿಹಾಕಲ್ಪಟ್ಟಿತು.