“ಪ್ರಾಪಂಚಿಕ ಆತ್ಮವನ್ನು” ಪ್ರತಿರೋಧಿಸಿರಿ
“ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ . . . ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.” —1 ಕೊರಿಂ. 2:12.
ಗಣಿಗಳಲ್ಲಿ ಕೆಲಸಮಾಡುವ ಕಾರ್ಮಿಕರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಬ್ರಿಟಿಷ್ ಅಧಿಕಾರಿಗಳು 1911ರಲ್ಲಿ ಒಂದು ಕಾನೂನನ್ನು ಜಾರಿಗೆ ತಂದರು. ಅದರಂತೆ, ಪ್ರತಿ ಗಣಿಯಲ್ಲಿ ಎರಡು ಕನೇರಿ ಹಕ್ಕಿಗಳನ್ನು ಒಂದು ಗೂಡಿನಲ್ಲಿಡಬೇಕಿತ್ತು. ಇದರ ಉದ್ದೇಶವೇನು? ಈ ಪುಟ್ಟ ಹಕ್ಕಿಗಳು ಇಂಗಾಲದ ಮೊನೊಕ್ಸೈಡ್ಗಳಂಥ ವಿಷಾನಿಲಗಳಿಗೆ ಸೂಕ್ಷ್ಮಗ್ರಾಹಿಯಾಗಿದ್ದು, ವಿಷಪೂರಿತ ಗಾಳಿಯನ್ನು ಸೇವಿಸಿದ ಕೂಡಲೇ ಚಡಪಡಿಸುತ್ತವೆ ಅಥವಾ ಕೆಲವೊಮ್ಮೆ ಗೂಡಿನ ಕಂಬಿಯಿಂದ ಬಿದ್ದುಬಿಡುತ್ತವೆ. ಈ ಆರಂಭದ ಎಚ್ಚರಿಕೆ ತುಂಬ ಮಹತ್ತ್ವದ್ದಾಗಿರುತ್ತಿತ್ತು ಏಕೆಂದರೆ ಬಣ್ಣರಹಿತ, ವಾಸನೆರಹಿತ ಅನಿಲವಾಗಿರುವ ಇಂಗಾಲದ ಮೊನೊಕ್ಸೈಡ್, ಕೆಂಪು ರಕ್ತಕಣಗಳು ದೇಹಕ್ಕೆ ಆಮ್ಲಜನಕವನ್ನು ಸಾಗಿಸದಂತೆ ಮಾಡುವ ಮೂಲಕ ಮನುಷ್ಯರನ್ನು ಸಾಯಿಸುತ್ತದೆ. ಆದುದರಿಂದ ಗಣಿಯಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಂದರ್ಭಗಳಲ್ಲಿ, ರಕ್ಷಣಾ ತಂಡದವರು ಗಣಿಯೊಳಗೆ ಹೋಗುವಾಗ ಈ ಹಕ್ಕಿಗಳನ್ನು ಕೊಂಡೊಯ್ಯಬೇಕಿತ್ತು. ವಿಷಾನಿಲ ಹರಡಿದೆ ಎಂದು ಹಕ್ಕಿಗಳಿಂದ ಆರಂಭದ ಎಚ್ಚರಿಕೆ ಸಿಗದೇ ಹೋದರೆ ರಕ್ಷಣಾ ತಂಡದವರು ಗೊತ್ತಿಲ್ಲದೆ ವಿಷಪೂರಿತ ಗಾಳಿ ಸೇವಿಸಿ ಮೂರ್ಛೆಹೋಗಿ, ನಂತರ ಸಾಯುವರು.
2 ಆಧ್ಯಾತ್ಮಿಕ ಅರ್ಥದಲ್ಲಿ ಕ್ರೈಸ್ತರು ಸಹ ಆ ಗಣಿಗಾರರ ಸನ್ನಿವೇಶದಲ್ಲಿದ್ದಾರೆ. ಹೇಗೆ? ಯೇಸು ತನ್ನ ಶಿಷ್ಯರಿಗೆ ಲೋಕವ್ಯಾಪಕವಾಗಿ ಸುವಾರ್ತೆ ಸಾರುವ ನೇಮಕವನ್ನು ಕೊಟ್ಟಾಗ, ಸೈತಾನ ಮತ್ತು ಪ್ರಪಂಚದ ಆತ್ಮದ ನಿಯಂತ್ರಣದಲ್ಲಿರುವ ಒಂದು ಅಪಾಯಕಾರಿ ಪರಿಸರದೊಳಕ್ಕೆ ಅವರನ್ನು ಕಳುಹಿಸುತ್ತಿದ್ದನೆಂದು ಆತನಿಗೆ ತಿಳಿದಿತ್ತು. (ಮತ್ತಾ. 10:16; 1 ಯೋಹಾ. 5:19) ತನ್ನ ಶಿಷ್ಯರ ಕುರಿತು ಆತನಿಗೆಷ್ಟು ಚಿಂತೆಯಿತ್ತೆಂದರೆ ಆತನು ಸಾಯುವ ಮುಂಚಿನ ರಾತ್ರಿಯಂದು ತನ್ನ ತಂದೆಗೆ ಹೀಗೆ ಪ್ರಾರ್ಥಿಸಿದನು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.”—ಯೋಹಾ. 17:15.
3 ಮಾರಣಾಂತಿಕ ಆಧ್ಯಾತ್ಮಿಕ ನಿದ್ರೆ ಬರಿಸುವ ಸಂಗತಿಗಳ ಕುರಿತು ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದನು. ಅವನ ಮಾತುಗಳು ನಮಗೆ ವಿಶೇಷ ಅರ್ಥವುಳ್ಳವುಗಳಾಗಿವೆ ಏಕೆಂದರೆ ನಾವೀಗ ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ ಜೀವಿಸುತ್ತಿದ್ದೇವೆ. ಯೇಸು ತನ್ನ ಶಿಷ್ಯರನ್ನು ಪ್ರೇರೇಪಿಸಿದ್ದು: “ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ . . . ಎಚ್ಚರವಾಗಿರ್ರಿ.” (ಲೂಕ 21:34-36) ಅವರು ಕಲಿತ ಸಂಗತಿಗಳನ್ನು ನೆನಪಿಗೆ ತರುವಂತೆ, ಎಚ್ಚರವಾಗಿರುವಂತೆ ಮತ್ತು ಧೈರ್ಯದಿಂದಿರುವಂತೆ ತನ್ನ ತಂದೆಯು ಪವಿತ್ರಾತ್ಮವನ್ನು ಒದಗಿಸುವನೆಂದು ಸಹ ಯೇಸು ಮಾತು ಕೊಟ್ಟನೆಂಬುದು ಸಂತೋಷದ ಸಂಗತಿ.—ಯೋಹಾ. 14:26.
4 ನಮ್ಮ ಕುರಿತೇನು? ನಮ್ಮ ಸಹಾಯಕ್ಕಾಗಿಯೂ ಅದೇ ಪವಿತ್ರಾತ್ಮ ಇಂದು ಲಭ್ಯವಿದೆಯೋ? ಲಭ್ಯವಿರುವಲ್ಲಿ, ಅದನ್ನು ಪಡೆಯಲಿಕ್ಕಾಗಿ ನಾವೇನು ಮಾಡಬೇಕು? ಪ್ರಾಪಂಚಿಕ ಆತ್ಮ ಅಂದರೇನು, ಮತ್ತು ಅದು ಹೇಗೆ ಕಾರ್ಯವೆಸಗುತ್ತದೆ? ನಾವು ಈ ಲೋಕದ ಆತ್ಮವನ್ನು ಹೇಗೆ ಯಶಸ್ವಿಯಾಗಿ ಪ್ರತಿರೋಧಿಸಬಲ್ಲೆವು?—1 ಕೊರಿಂಥ 2:12 ಓದಿ.
ಪವಿತ್ರಾತ್ಮವೋ ಪ್ರಾಪಂಚಿಕ ಆತ್ಮವೋ?
5 ಪವಿತ್ರಾತ್ಮವು ಪ್ರಥಮ ಶತಮಾನದಲ್ಲಿ ಮಾತ್ರವಲ್ಲ, ಈಗಲೂ ಲಭ್ಯವಿದೆ. ಅದು, ಸರಿಯಾದದ್ದನ್ನು ಮಾಡಲು ನಮಗೆ ಬಲವನ್ನು ಕೊಡುತ್ತದೆ ಮಾತ್ರವಲ್ಲ, ಯೆಹೋವನ ಸೇವೆಗಾಗಿ ನಮ್ಮಲ್ಲಿ ಚೈತನ್ಯವನ್ನೂ ತುಂಬಿಸುತ್ತದೆ. (ರೋಮಾ. 12:11; ಫಿಲಿ. 4:13) ಅದು ನಮ್ಮಲ್ಲಿ ಪ್ರೀತಿ, ದಯೆ, ಒಳ್ಳೇತನದಂಥ ಕೋಮಲ ಗುಣಗಳನ್ನು ಫಲಿಸಬಲ್ಲದು. ಈ ಗುಣಗಳು ‘ಆತ್ಮದ ಫಲಗಳೂ’ ಹೌದು. (ಗಲಾ. 5:22, 23) ಆದರೆ ಪವಿತ್ರಾತ್ಮವನ್ನು ಪಡೆಯಲು ಮನಸ್ಸಿಲ್ಲದವರಿಗೆ ಯೆಹೋವನು ಅದನ್ನು ಬಲವಂತವಾಗಿ ಕೊಡುವುದಿಲ್ಲ.
6 ಹೀಗಿರುವುದರಿಂದ ನಾವು ಹೀಗೆ ಕೇಳಿಕೊಳ್ಳುವುದು ಸಮಂಜಸ: ‘ಪವಿತ್ರಾತ್ಮವನ್ನು ಪಡೆಯಲು ನಾನೇನು ಮಾಡಬೇಕು?’ ನಾವು ಮಾಡಬಹುದಾದ ಅನೇಕ ವಿಷಯಗಳಿವೆಯೆಂದು ಬೈಬಲ್ ತೋರಿಸುತ್ತದೆ. ಸರಳವಾದ ಒಂದು ಪ್ರಮುಖ ಹೆಜ್ಜೆಯು, ಅದಕ್ಕಾಗಿ ದೇವರನ್ನು ಬೇಡಿಕೊಳ್ಳುವುದೇ ಆಗಿದೆ. (ಲೂಕ 11:13 ಓದಿ.) ಇನ್ನೊಂದು ಉಪಯುಕ್ತ ಹೆಜ್ಜೆಯು, ದೇವರ ಆತ್ಮಪ್ರೇರಿತ ವಾಕ್ಯವನ್ನು ಅಧ್ಯಯನಮಾಡಿ ಅದರ ಸಲಹೆಯನ್ನು ಅನ್ವಯಿಸುವುದಾಗಿದೆ. (2 ತಿಮೊ. 3:16) ಬೈಬಲನ್ನು ಬರೀ ಓದಿದವರಿಗೆಲ್ಲ ದೇವರಾತ್ಮ ಸಿಗುವುದಿಲ್ಲ ನಿಜ. ಯಥಾರ್ಥ ಮನಸ್ಸಿನ ಕ್ರೈಸ್ತನೊಬ್ಬನು ದೇವರ ವಾಕ್ಯವನ್ನು ಅಧ್ಯಯನಮಾಡುವಾಗ, ಆ ಪ್ರೇರಿತ ವಾಕ್ಯದಲ್ಲಿ ಅಡಕವಾಗಿರುವ ಭಾವಗಳನ್ನು ಮತ್ತು ಹೊರನೋಟವನ್ನು ಹೀರಿಕೊಳ್ಳಬಲ್ಲನು. ಯೆಹೋವನು ಯೇಸುವನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿದ್ದಾನೆಂದು ಮತ್ತು ಆತನ ಮೂಲಕ ಪವಿತ್ರಾತ್ಮವನ್ನು ಒದಗಿಸಿದ್ದಾನೆಂದು ನಾವು ಅಂಗೀಕರಿಸುವುದೂ ಅತ್ಯಾವಶ್ಯಕ. (ಕೊಲೊ. 2:6) ಆದುದರಿಂದ, ನಾವು ಯೇಸುವಿನ ಮಾದರಿಯನ್ನು ಅನುಕರಿಸಿ ಆತನ ಬೋಧನೆಗಳಿಗನುಸಾರ ಜೀವಿಸಬೇಕು. (1 ಪೇತ್ರ 2:21) ನಾವು ಎಷ್ಟರ ಮಟ್ಟಿಗೆ ಕ್ರಿಸ್ತನಂತಿರಲು ಪ್ರಯತ್ನಿಸುತ್ತೇವೋ, ಅಷ್ಟು ಹೆಚ್ಚಾಗಿ ಪವಿತ್ರಾತ್ಮವನ್ನು ಪಡೆಯುವೆವು.
7 ಇದಕ್ಕೆ ವಿರುದ್ಧವಾಗಿ, ಸೈತಾನನ ವ್ಯಕ್ತಿತ್ವವನ್ನು ತೋರಿಸುವಂತೆ ಪ್ರಾಪಂಚಿಕ ಆತ್ಮ ಜನರನ್ನು ಪ್ರಭಾವಿಸುತ್ತದೆ. (ಎಫೆಸ 2:1-3 ಓದಿ.) ಪ್ರಾಪಂಚಿಕ ಆತ್ಮವು ಹಲವಾರು ವಿಧಗಳಲ್ಲಿ ಕಾರ್ಯವೆಸಗುತ್ತದೆ. ಇಂದು ನಾವು ನಮ್ಮ ಸುತ್ತಲೂ ನೋಡುವಂತೆ, ದೇವರ ವಿರುದ್ಧ ದಂಗೆಯೇಳುವಂತೆ ಈ ಆತ್ಮ ಕುಮ್ಮಕ್ಕು ಕೊಡುತ್ತದೆ. ಅದು “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ”ವನ್ನು ಪ್ರವರ್ಧಿಸುತ್ತದೆ. (1 ಯೋಹಾ. 2:16) ಅದು ಜಾರತ್ವ, ವಿಗ್ರಹಾರಾಧನೆ, ಮಾಟ, ಹೊಟ್ಟೆಕಿಚ್ಚು, ಸಿಟ್ಟು ಮತ್ತು ಕುಡಿಕತನದಂಥ ಶರೀರಭಾವದ ಕರ್ಮಗಳನ್ನು ಉತ್ಪಾದಿಸುತ್ತದೆ. (ಗಲಾ. 5:19-21) ಅದು ಧರ್ಮಭ್ರಷ್ಟ ಮಾತುಗಳನ್ನು ಸಹ ಉತ್ತೇಜಿಸುತ್ತದೆ. (2 ತಿಮೊ. 2:14-18) ವ್ಯಕ್ತಿಯೊಬ್ಬನು, ಪ್ರಾಪಂಚಿಕ ಆತ್ಮವು ತನ್ನನ್ನು ಪ್ರಭಾವಿಸುವಂತೆ ಎಷ್ಟು ಹೆಚ್ಚಾಗಿ ಬಿಡುತ್ತಾನೋ ಅಷ್ಟೇ ಹೆಚ್ಚಾಗಿ ಅವನು ಸೈತಾನನ ವ್ಯಕ್ತಿತ್ವವನ್ನು ಅನುಕರಿಸುತ್ತಾನೆ.
8 ಈ ಲೋಕದಲ್ಲಿ ಪ್ರಾಪಂಚಿಕ ಆತ್ಮ ಪ್ರಭಾವಬೀರದ ಸ್ಥಳ ಇಲ್ಲ. ಆದುದರಿಂದ ಪ್ರತಿಯೊಬ್ಬ ವ್ಯಕ್ತಿಯು, ಪವಿತ್ರಾತ್ಮ ಅಥವಾ ಪ್ರಾಪಂಚಿಕ ಆತ್ಮ ಇವೆರಡರಲ್ಲಿ ಯಾವುದು ತನ್ನ ಜೀವನವನ್ನು ಪ್ರಭಾವಿಸುವಂತೆ ಬಿಡುವೆನೆಂಬುದನ್ನು ಆಯ್ಕೆಮಾಡಬೇಕು. ಇನ್ನೂ ಪ್ರಾಪಂಚಿಕ ಆತ್ಮದ ನಿಯಂತ್ರಣದಲ್ಲಿರುವವರು ಅದರ ಹಿಡಿತದಿಂದ ಹೊರಬಂದು, ಪವಿತ್ರಾತ್ಮವು ತಮ್ಮ ಜೀವಿತಗಳನ್ನು ಮಾರ್ಗದರ್ಶಿಸುವಂತೆ ಅನುಮತಿಸಬಲ್ಲರು. ಆದರೆ ತದ್ವಿರುದ್ಧವಾದದ್ದೂ ಸಂಭವಿಸಸಾಧ್ಯವಿದೆ. ಅದೇನೆಂದರೆ, ಸ್ವಲ್ಪಕಾಲ ಪವಿತ್ರಾತ್ಮದಿಂದ ನಡೆಸಲ್ಪಟ್ಟವರು ಪ್ರಾಪಂಚಿಕ ಆತ್ಮಕ್ಕೆ ಸಿಕ್ಕಿಬೀಳಬಹುದು. (ಫಿಲಿ. 3:18, 19) ಪ್ರಾಪಂಚಿಕ ಆತ್ಮವನ್ನು ಹೇಗೆ ಪ್ರತಿರೋಧಿಸಬಹುದು ಎಂಬುದನ್ನು ನಾವೀಗ ಪರಿಗಣಿಸೋಣ.
ಆರಂಭದ ಎಚ್ಚರಿಕೆಯ ಸೂಚನೆಗಳನ್ನು ಗುರುತಿಸಿರಿ
9 ಆರಂಭದ ಪ್ಯಾರಗಳಲ್ಲಿ ತಿಳಿಸಲಾದಂತೆ, ವಿಷಾನಿಲಗಳನ್ನು ಪತ್ತೆಹಚ್ಚಲಿಕ್ಕಾಗಿ ಬ್ರಿಟಿಷ್ ಗಣಿಗಾರರು ಕನೇರಿ ಹಕ್ಕಿಗಳನ್ನು ಬಳಸುತ್ತಿದ್ದರು. ಒಂದು ಹಕ್ಕಿ ಅದರ ಗೂಡಿನ ಕಂಬಿಯಿಂದ ಬೀಳುವುದು, ಗಣಿಗಾರನು ತನ್ನ ಜೀವ ಉಳಿಸಲು ಬೇಗನೇ ಕಾರ್ಯವೆಸಗಬೇಕೆಂಬ ಸೂಚನೆ ಕೊಡುತ್ತಿತ್ತು. ಆಧ್ಯಾತ್ಮಿಕ ಅರ್ಥದಲ್ಲಿ, ನಾವು ಪ್ರಾಪಂಚಿಕ ಆತ್ಮದಿಂದ ಪ್ರಭಾವಿತರಾಗುತ್ತಿದ್ದೇವೆಂದು ತಿಳಿಸುವ ಆರಂಭದ ಎಚ್ಚರಿಕೆಯ ಸೂಚನೆಗಳಾವುವು?
10 ನಾವು ದೇವರ ವಾಕ್ಯದಲ್ಲಿರುವ ಸತ್ಯವನ್ನು ಕಲಿತು, ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡಾಗ, ಬೈಬಲನ್ನು ತುಂಬ ಉತ್ಸುಕತೆಯಿಂದ ಓದುತ್ತಿದ್ದೆವು. ನಾವು ಮನಃಪೂರ್ವಕವಾಗಿ ಅನೇಕ ಬಾರಿ ಪ್ರಾರ್ಥಿಸುತ್ತಿದ್ದೆವು. ಸಭಾ ಕೂಟಗಳಿಗೆ ಹಾಜರಾಗಲು ನಾವು ತುದಿಗಾಲಲ್ಲಿ ನಿಂತಿರುತ್ತಿದ್ದೆವು ಮತ್ತು ಬಾಯಾರಿದ ಮನುಷ್ಯನಿಗೆ ನೀರಿನ ಚಿಲುಮೆ ಹೇಗೋ ಹಾಗೆ ಪ್ರತಿಯೊಂದು ಕೂಟವೂ ನಮಗೆ ಆಧ್ಯಾತ್ಮಿಕ ಚೈತನ್ಯದ ಮೂಲವಾಗಿತ್ತು. ಆ ಮಾರ್ಗಕ್ರಮವು ನಾವು ಪ್ರಾಪಂಚಿಕ ಆತ್ಮದಿಂದ ಹೊರಬಂದು, ಅದರಿಂದ ದೂರವಿರಲು ಸಹಾಯಮಾಡಿತು.
11 ಆದರೆ ಈಗಲೂ ನಾವು ಪ್ರತಿದಿನ ಬೈಬಲನ್ನು ಓದುತ್ತೇವೋ? (ಕೀರ್ತ. 1:2) ನಾವು ಮನಃಪೂರ್ವಕವಾಗಿ ಅನೇಕ ಬಾರಿ ಪ್ರಾರ್ಥಿಸುತ್ತೇವೋ? ಈಗಲೂ ಸಭಾ ಕೂಟಗಳಿಗೆ ಹಾಜರಾಗಲು ಹಾತೊರೆಯುತ್ತೇವೋ ಮತ್ತು ಪ್ರತಿ ವಾರ ಎಲ್ಲ ಕೂಟಗಳಿಗೆ ಹಾಜರಾಗಲು ಪ್ರಯತ್ನಿಸುವ ಮೂಲಕ ಇದನ್ನು ತೋರಿಸುತ್ತೇವೋ? (ಕೀರ್ತ. 84:10) ಅಥವಾ ನಮಗಿದ್ದ ಈ ಒಳ್ಳೇ ರೂಢಿಗಳಲ್ಲಿ ಕೆಲವೊಂದನ್ನು ಬಿಟ್ಟುಬಿಟ್ಟಿದ್ದೇವೋ? ಹಲವಾರು ಜವಾಬ್ದಾರಿಗಳು ನಮ್ಮ ಸಮಯ ಹಾಗೂ ಶಕ್ತಿಯನ್ನು ತೆಗೆದುಕೊಳ್ಳುತ್ತವೆ ನಿಜ. ಇದರಿಂದಾಗಿ ಒಳ್ಳೆಯ ಆಧ್ಯಾತ್ಮಿಕ ನಿಯತಕ್ರಮವನ್ನು ಅನುಸರಿಸುವುದು ಕಷ್ಟಕರವಾಗಿರಬಹುದು. ಆದರೆ ಸಮಯ ದಾಟಿದಂತೆ ನಮಗಿದ್ದ ಕೆಲವೊಂದು ಒಳ್ಳೇ ರೂಢಿಗಳು ಇಲ್ಲವಾಗುತ್ತಿರುವಲ್ಲಿ, ಇದು ಪ್ರಾಪಂಚಿಕ ಆತ್ಮವು ನಮ್ಮನ್ನು ಪ್ರಭಾವಿಸುವಂತೆ ಬಿಟ್ಟಿದ್ದರ ಪರಿಣಾಮವಾಗಿರಬಹುದೋ? ಒಂದುಕಾಲದಲ್ಲಿ ನಮಗಿದ್ದ ಒಳ್ಳೇ ರೂಢಿಗಳನ್ನು ಮತ್ತೆ ಬೆಳೆಸಲು ನಾವೀಗ ಶತಪ್ರಯತ್ನ ಮಾಡುವೆವೋ?
‘ನಿಮ್ಮ ಹೃದಯಗಳು ಭಾರವಾಗದಿರಲಿ’
12 ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸಲು ನಾವು ಇನ್ನೇನು ಮಾಡಬಲ್ಲೆವು? ಯೇಸು ತನ್ನ ಶಿಷ್ಯರಿಗೆ “ಎಚ್ಚರವಾಗಿರ್ರಿ” ಎಂದು ಹೇಳುವ ಸ್ವಲ್ಪ ಮುಂಚೆ, ಕೆಲವು ನಿರ್ದಿಷ್ಟ ಅಪಾಯಗಳ ಕುರಿತು ಹೀಗಂದನು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.”—ಲೂಕ 21:34, 35.
13 ಆ ಎಚ್ಚರಿಕೆಯನ್ನು ಕುರಿತು ಯೋಚಿಸಿರಿ. ತಿಂದುಕುಡಿಯುವುದರಲ್ಲಿ ಆನಂದಪಡುವುದು ತಪ್ಪೆಂದು ಯೇಸು ಖಂಡಿಸುತ್ತಿದ್ದನೋ? ಇಲ್ಲ! ಆತನಿಗೂ ಸೊಲೊಮೋನನ ಈ ಮಾತುಗಳು ತಿಳಿದಿದ್ದವು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.” (ಪ್ರಸಂ. 3:12, 13) ಹಾಗಿದ್ದರೂ ಈ ಕ್ಷೇತ್ರಗಳಲ್ಲಿ ಸ್ವನಿಯಂತ್ರಣ ಕಳೆದುಕೊಳ್ಳುವಂತೆ ಪ್ರಾಪಂಚಿಕ ಆತ್ಮವು ಒತ್ತಾಸೆ ಕೊಡುತ್ತದೆಂದು ಯೇಸುವಿಗೆ ತಿಳಿದಿತ್ತು.
14 ಅತಿಯಾಗಿ ತಿನ್ನುವುದು ಇಲ್ಲವೇ ಕುಡಿಯುವುದರ ಅಪಾಯಗಳನ್ನು ಅಲಕ್ಷಿಸುವಂತೆ ಪ್ರಾಪಂಚಿಕ ಆತ್ಮವು ನಮ್ಮ ಮನಸ್ಸನ್ನು ಕೆಡಿಸಿಲ್ಲ ಎಂಬುದನ್ನು ಹೇಗೆ ಖಚಿತಪಡಿಸಬಲ್ಲೆವು? ನಮ್ಮನ್ನೇ ಹೀಗೆ ಕೇಳಿಕೊಳ್ಳಬಲ್ಲೆವು: ‘ಹೊಟ್ಟೆಬಾಕತನದ ಕುರಿತು ಬೈಬಲಿನಲ್ಲಿ ಇಲ್ಲವೇ ನಮ್ಮ ಪ್ರಕಾಶನಗಳಲ್ಲಿ ಬರುವ ಸಲಹೆಯನ್ನು ಓದುವಾಗ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ? ನನ್ನ ಕೃತ್ಯಗಳಿಗೆ ನೆವಗಳನ್ನು ಕೊಟ್ಟು ಇಲ್ಲವೇ ಅವುಗಳನ್ನು ಸಮರ್ಥಿಸಿ, ಈ ಬುದ್ಧಿವಾದ “ನನಗೆ ಸಂಬಂಧಪಟ್ಟದ್ದಲ್ಲ” ಇಲ್ಲವೇ “ಇದು ಅತಿಯಾಯಿತು” ಎಂದು ಹೇಳಿ ಅದನ್ನು ತಳ್ಳಿಹಾಕುತ್ತೇನೋ?a ಮದ್ಯದ ಕುರಿತು ಕೊಡಲಾಗುವ ಸಲಹೆಯನ್ನು ಹೇಗೆ ವೀಕ್ಷಿಸುತ್ತೇನೆ? ಒಂದುವೇಳೆ ನಾನು ಮದ್ಯ ಸೇವಿಸುತ್ತಿರುವಲ್ಲಿ ಅದನ್ನು ಮಿತವಾಗಿ ಸೇವಿಸುತ್ತೇನೋ? “ಕುಡಿಕತನ”ದಿಂದ ದೂರವಿರುತ್ತೇನೋ? ಕೊಡಲಾಗಿರುವ ಬುದ್ಧಿವಾದವು ನನಗೆ ಅನ್ವಯವಾಗುವುದಿಲ್ಲ ಎಂದೆಣಿಸುತ್ತಾ ಅದನ್ನು ತೆಗಳುತ್ತೇನೋ? ನನ್ನ ಕುಡಿತದ ಬಗ್ಗೆ ಇತರರು ಏನಾದರೂ ಹೇಳುವಾಗ ನನ್ನನ್ನೇ ಸಮರ್ಥಿಸಿಕೊಳ್ಳುತ್ತೇನೋ ಇಲ್ಲವೇ ಸಿಟ್ಟುಗೊಳ್ಳುತ್ತೇನೋ? ಬೈಬಲಿನ ಅಂಥ ಸಲಹೆಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಇತರರಿಗೆ ಹೇಳುತ್ತೇನೋ?’ ಹೌದು, ಇಂಥ ಬುದ್ಧಿವಾದದ ಕುರಿತು ಒಬ್ಬ ವ್ಯಕ್ತಿಗಿರುವ ಮನೋಭಾವವು ಅವನು ಪ್ರಾಪಂಚಿಕ ಆತ್ಮದ ಪ್ರಭಾವಕ್ಕೆ ಒಳಗಾಗುತ್ತಿದ್ದಾನೋ ಇಲ್ಲವೋ ಎಂಬುದರ ಒಂದು ಸೂಚನೆ ಆಗಿದೆ.—ರೋಮಾಪುರ 13:11-14 ಹೋಲಿಸಿ.
ಚಿಂತೆಯಿಂದ ಅಡಗಿಹೋಗಬೇಡಿ
15 ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವುದಕ್ಕೆ ಇನ್ನೊಂದು ಮುಖ್ಯ ಹೆಜ್ಜೆ ಚಿಂತೆಯನ್ನು ನಿಯಂತ್ರಿಸುವುದಾಗಿದೆ. ಅಪರಿಪೂರ್ಣರಾದ ನಮಗೆ ನಮ್ಮ ದೈನಂದಿನ ಅಗತ್ಯಗಳ ಕುರಿತು ಸದಾ ಚಿಂತಿಸುವ ಸ್ವಭಾವವಿದೆಯೆಂದು ಯೇಸುವಿಗೆ ತಿಳಿದಿತ್ತು. ಆದುದರಿಂದ ಆತನು ತನ್ನ ಶಿಷ್ಯರಿಗೆ “ಚಿಂತೆಮಾಡಬೇಡಿರಿ” ಎಂದು ಪ್ರೀತಿಯಿಂದ ಹೇಳಿದನು. (ಮತ್ತಾ. 6:25) ದೇವರನ್ನು ಮೆಚ್ಚಿಸುವುದು, ಕ್ರೈಸ್ತ ಜವಾಬ್ದಾರಿಗಳನ್ನು ನಿರ್ವಹಿಸುವುದು ಮತ್ತು ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುವುದರಂಥ ಪ್ರಮುಖ ವಿಷಯಗಳನ್ನು ಕುರಿತು ನಾವು ಚಿಂತಿಸಬೇಕಾಗುತ್ತದೆ ನಿಜ. (1 ಕೊರಿಂ. 7:31-34) ಹಾಗಾದರೆ, ಯೇಸುವಿನ ಎಚ್ಚರಿಕೆಯಿಂದ ನಾವೇನು ಕಲಿಯಬಲ್ಲೆವು?
16 ಪ್ರಾಪಂಚಿಕ ಆತ್ಮವು ಬದುಕುಬಾಳಿನ ಡಂಬ ಅಥವಾ ಷೋಕಿ ಜೀವನಕ್ಕೆ ಮಹತ್ತ್ವ ಕೊಡುತ್ತದೆ ಮತ್ತು ಇದರಿಂದ ಜನರು ಅನುಚಿತ ಚಿಂತೆಗೆ ಗುರಿಯಾಗುತ್ತಾರೆ. ಹಣವೇ ಸರ್ವಸ್ವ ಮತ್ತು, ನಮ್ಮನ್ನು ಆಧ್ಯಾತ್ಮಿಕ ಗುಣಗಳಿಂದಲ್ಲ ಬದಲಾಗಿ ನಮ್ಮ ಬಳಿಯಿರುವ ಸ್ವತ್ತುಗಳ ಪ್ರಮಾಣ ಹಾಗೂ ಅವುಗಳ ಉತ್ಕೃಷ್ಟ ದರ್ಜೆಯಿಂದ ಅಳೆಯಲಾಗುತ್ತದೆಂದು ನಂಬುವಂತೆ ಮಾಡುವುದೇ ಈ ಪ್ರಪಂಚದ ಬಯಕೆ. ಈ ತತ್ತ್ವದಿಂದ ಮೋಸಹೋಗುವವರು, ಐಶ್ವರ್ಯವನ್ನು ಗಿಟ್ಟಿಸಿಕೊಳ್ಳಲು ಹಗಲೂ ರಾತ್ರಿ ಗಾಣದೆತ್ತಿನಂತೆ ದುಡಿಯುತ್ತಾರೆ ಮತ್ತು ಮಾರುಕಟ್ಟೆಗೆ ಬಂದಿರುವ ಹೊಚ್ಚ ಹೊಸದಾದ, ದೊಡ್ಡದಾದ ಮತ್ತು ಅತ್ಯಾಧುನಿಕ ಉತ್ಪನ್ನಗಳನ್ನು ಖರೀದಿಸುವುದರ ಬಗ್ಗೆಯೇ ಸದಾ ಚಿಂತಿಸುತ್ತಾರೆ. (ಜ್ಞಾನೋ. 18:11) ಭೌತಿಕ ವಸ್ತುಗಳ ಕುರಿತ ಈ ವಕ್ರ ನೋಟವು, ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಯನ್ನು ಅಡಗಿಸುವ ಇಲ್ಲವೇ ಕುಂಠಿತಗೊಳಿಸುವ ಚಿಂತೆಯನ್ನು ಹುಟ್ಟಿಸುತ್ತದೆ.—ಮತ್ತಾಯ 13:18, 22 ಓದಿ.
17 ಚಿಂತೆಯಿಂದ ಅಡಗಿಸಲ್ಪಡುವುದನ್ನು ತಪ್ಪಿಸಬೇಕಾದರೆ ನಾವು ಯೇಸುವಿನ ಈ ಆಜ್ಞೆಗೆ ವಿಧೇಯರಾಗಬೇಕು: “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” ನಾವಿದನ್ನು ಮಾಡಿದರೆ, ನಮಗೆ ನಿಜವಾಗಿ ಅಗತ್ಯವಿರುವುದೆಲ್ಲವೂ ದೊರಕುವುದೆಂದು ಯೇಸು ಆಶ್ವಾಸನೆ ಕೊಡುತ್ತಾನೆ. (ಮತ್ತಾ. 6:33) ನಮಗೆ ಈ ವಾಗ್ದಾನದಲ್ಲಿ ನಂಬಿಕೆಯಿದೆಯೆಂದು ಹೇಗೆ ತೋರಿಸಬಲ್ಲೆವು? ಒಂದು ವಿಧ, ದೇವರ ನೀತಿಯನ್ನು ಪ್ರಥಮವಾಗಿ ಹುಡುಕುವುದು, ಅಂದರೆ ಹಣಕಾಸಿನ ವಿಷಯಗಳಲ್ಲಿ ದೇವರ ನೀತಿಯ ಮಟ್ಟವನ್ನು ಪಾಲಿಸುವುದಾಗಿದೆ. ಉದಾಹರಣೆಗೆ, ತೆರಿಗೆಕಟ್ಟುವುದನ್ನು ತಪ್ಪಿಸಲು ನಾವು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದಿಲ್ಲ ಇಲ್ಲವೆ ನಮ್ಮ ವ್ಯಾಪರದ ಬಗ್ಗೆ ‘ಚಿಕ್ಕಪುಟ್ಟ’ ಸುಳ್ಳನ್ನೂ ಹೇಳುವುದಿಲ್ಲ. ಹಣಕಾಸಿನ ವ್ಯವಹಾರಗಳಲ್ಲಿ ನಾವು ಕೊಟ್ಟ ಮಾತನ್ನು ಪಾಲಿಸಲು ನಮ್ಮಿಂದಾದಷ್ಟನ್ನು ಮಾಡುತ್ತೇವೆ. ಸಾಲಗಳನ್ನು ತೀರಿಸುವ ವಿಷಯದಲ್ಲಿ ‘ನಮ್ಮ ಮಾತು ಹೌದಾದರೆ ಹೌದು’ ಆಗಿರುತ್ತದೆ. (ಮತ್ತಾ. 5:37; ಕೀರ್ತ. 37:21) ಹೀಗೆ ಪ್ರಾಮಾಣಿಕನಾಗಿರುವುದರಿಂದ ಒಬ್ಬ ವ್ಯಕ್ತಿ ಧನಿಕನಾಗಲಿಕ್ಕಿಲ್ಲ ನಿಜ, ಆದರೆ ಅವನು ದೇವರ ಮೆಚ್ಚುಗೆ ಗಳಿಸುತ್ತಾನೆ, ಶುದ್ಧ ಮನಸ್ಸಾಕ್ಷಿ ಹೊಂದುತ್ತಾನೆ ಮತ್ತು ಅವನ ಚಿಂತೆ ಬಹಳಷ್ಟು ಕಡಿಮೆಯಾಗುತ್ತದೆ.
18 ರಾಜ್ಯವನ್ನು ಪ್ರಥಮವಾಗಿ ಹುಡುಕಲಿಕ್ಕಾಗಿ ನಮ್ಮ ಆದ್ಯತೆಗಳನ್ನು ಸೂಕ್ತ ಕ್ರಮದಲ್ಲಿಡಬೇಕು. ಯೇಸುವಿನ ಮಾದರಿಯನ್ನು ಪರಿಗಣಿಸಿರಿ. ಆತನ ಬಳಿ ಉತ್ತಮ ದರ್ಜೆಯ ಉಡುಪು ಇತ್ತು. (ಯೋಹಾ. 19:23) ಒಳ್ಳೇ ಸ್ನೇಹಿತರ ಜೊತೆಯಲ್ಲಿ ಉಂಡುಕುಡಿದನು. (ಮತ್ತಾ. 11:18, 19) ಆದರೆ ಸ್ವತ್ತುಗಳು ಮತ್ತು ಮನೋರಂಜನೆ ಅವನ ಬದುಕಿನಲ್ಲಿ, ಊಟಕ್ಕೆ ಹಾಕುವ ಉಪ್ಪಿನಂತಿತ್ತೇ ಹೊರತು ಅದೇ ಅವನ ಊಟ ಇಲ್ಲವೇ ಬದುಕು ಆಗಿರಲಿಲ್ಲ. ಯೆಹೋವನ ಚಿತ್ತ ಮಾಡುವುದು ಅವನಿಗೆ ಊಟದಂತಿತ್ತು. (ಯೋಹಾ. 4:34-36) ಯೇಸುವಿನ ಮಾದರಿಯನ್ನು ನಾವು ಅನುಕರಿಸುವಾಗ ಜೀವನವು ಎಷ್ಟು ಪ್ರತಿಫಲದಾಯಕವಾಗುತ್ತದೆ! ತುಳಿಯಲ್ಪಟ್ಟ ಜನರಿಗೆ ಬೈಬಲಿನಿಂದ ಸಾಂತ್ವನಕೊಟ್ಟು ಸಹಾಯಮಾಡುವ ಆನಂದ ನಮಗಿದೆ. ನಮಗೆ ಸಭೆಯ ಪ್ರೀತಿ ಹಾಗೂ ಬೆಂಬಲ ಸಿಗುತ್ತದೆ. ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತೇವೆ. ನಮ್ಮ ಆದ್ಯತೆಗಳು ಸೂಕ್ತ ಕ್ರಮದಲ್ಲಿರುವಾಗ, ನಾವು ಸ್ವತ್ತುಗಳು ಹಾಗೂ ಮನೋರಂಜನೆಗೆ ದಾಸರಾಗಿರುವುದಿಲ್ಲ. ಬದಲಿಗೆ ಅವು, ಯೆಹೋವನನ್ನು ಆರಾಧಿಸಲು ನಮಗೆ ಸಹಾಯಮಾಡುವ ಸೇವಕರು ಇಲ್ಲವೇ ಸಾಧನಗಳಾಗಿರುತ್ತವೆ ಅಷ್ಟೇ. ದೇವರ ರಾಜ್ಯವನ್ನು ಬೆಂಬಲಿಸುವ ಕೆಲಸದಲ್ಲಿ ನಾವು ಎಷ್ಟು ಕ್ರಿಯಾಶೀಲರಾಗಿರುತ್ತೇವೋ, ಪ್ರಾಪಂಚಿಕ ಆತ್ಮದಿಂದ ಪ್ರಭಾವಿತರಾಗುವ ಸಾಧ್ಯತೆ ಅಷ್ಟು ಕಡಿಮೆ ಆಗುತ್ತದೆ.
‘ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡಿರಿ’
19 ಆಲೋಚನೆಗಳು ಕ್ರಿಯೆಗೆ ನಡೆಸುತ್ತವೆ. ಯಾವುದನ್ನು ಕೆಲವೊಮ್ಮೆ ಯೋಚಿಸದೇ ಮಾಡಿದ ಕೆಲಸವೆಂದು ಹೇಳಲಾಗುತ್ತದೋ ಅದು ಹೆಚ್ಚಾಗಿ ಶಾರೀರಿಕ ಆಲೋಚನೆಗಳ ಪರಿಣಾಮವಾಗಿರುತ್ತದೆ. ಹಾಗಾಗಿ ನಮ್ಮ ಆಲೋಚನಾ ರೀತಿಯನ್ನು ಸಂರಕ್ಷಿಸುವಂತೆ ಅಪೊಸ್ತಲ ಪೌಲನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. ಅವನು ಬರೆದದ್ದು: ‘ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮವನ್ನನುಸರಿಸುವವರು ಪವಿತ್ರಾತ್ಮಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ.’—ರೋಮಾ. 8:5.
20 ನಮ್ಮ ಆಲೋಚನೆಗಳು, ಹಿಂಬಾಲಿಸಿ ಬರುವ ಕೃತ್ಯಗಳು ಪ್ರಾಪಂಚಿಕ ಆತ್ಮದಿಂದ ಪ್ರಭಾವಿಸಲ್ಪಡದಂತೆ ನಾವೇನು ಮಾಡಬೇಕು? ಒಂದರ್ಥದಲ್ಲಿ ನಮ್ಮ ಮನಸ್ಸಿಗೆ ಸೋಸುವ ಪರದೆ ಹಾಕುವ ಮೂಲಕ ಲೋಕದ ತತ್ತ್ವಗಳು ಮನಸ್ಸಿಗೆ ಹೋಗದಂತೆ ಸಾಧ್ಯವಿರುವಷ್ಟರ ಮಟ್ಟಿಗೆ ತಡೆಯಬೇಕು. ಉದಾಹರಣೆಗೆ ಮನೋರಂಜನೆಯನ್ನು ಆಯ್ಕೆಮಾಡುವಾಗ, ಅನೈತಿಕತೆ ಇಲ್ಲವೇ ಹಿಂಸಾಚಾರಕ್ಕೆ ಪ್ರಾಧಾನ್ಯತೆ ಕೊಡುವ ಕಾರ್ಯಕ್ರಮಗಳಿಂದ ನಮ್ಮ ಮನಸ್ಸನ್ನು ಕಲುಷಿತಗೊಳಿಸದಿರೋಣ. ದೇವರ ಪವಿತ್ರ ಇಲ್ಲವೇ ಶುದ್ಧ ಆತ್ಮವು ಕಲುಷಿತ ಮನಸ್ಸಿನಲ್ಲಿ ವಾಸಿಸುವುದಿಲ್ಲವೆಂದು ನಮಗೆ ತಿಳಿದಿದೆ. (ಕೀರ್ತ. 11:5; 2 ಕೊರಿಂ. 6:15-18) ಅಷ್ಟುಮಾತ್ರವಲ್ಲದೆ, ಕ್ರಮದ ಬೈಬಲ್ ವಾಚನ, ಪ್ರಾರ್ಥನೆ, ಧ್ಯಾನ ಮತ್ತು ಕೂಟದ ಹಾಜರಿಯೊಂದಿಗೆ ದೇವರಾತ್ಮ ನಮ್ಮ ಮನಸ್ಸಿನೊಳಗೆ ಬರಲು ಆಮಂತ್ರಿಸುತ್ತೇವೆ. ಅಲ್ಲದೇ, ಸಾರುವ ಕಾರ್ಯದಲ್ಲಿ ಕ್ರಮವಾಗಿ ಪಾಲ್ಗೊಳ್ಳುವಾಗ ಆ ಆತ್ಮದೊಂದಿಗೆ ಕೆಲಸಮಾಡುತ್ತೇವೆ.
21 ನಾವು ಪ್ರಾಪಂಚಿಕ ಆತ್ಮವನ್ನು ಮತ್ತು ಅದು ಹುಟ್ಟಿಸುವ ಶರೀರದಾಶೆಗಳನ್ನು ಪ್ರತಿರೋಧಿಸಲೇಬೇಕು. ಈ ನಿಟ್ಟಿನಲ್ಲಿ ನಾವು ಮಾಡುವ ಪ್ರಯತ್ನವು ಸಾರ್ಥಕವಾಗಿದೆ ಏಕೆಂದರೆ ಪೌಲನು ತಿಳಿಸುವಂತೆ, ‘ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ.’—ರೋಮಾ. 8:6.
[ಪಾದಟಿಪ್ಪಣಿ]
a ಹೊಟ್ಟೆಬಾಕತನ ಎಂಬುದು ಒಂದು ಮಾನಸಿಕ ಪ್ರವೃತ್ತಿ. ಇದು, ಒಬ್ಬನು ಅತ್ಯಾಶೆಯಿಂದ ಗಬಗಬನೆ ಇಲ್ಲವೇ ಅತಿಯಾಗಿ ತಿನ್ನುವುದರಿಂದ ತೋರಿಬರುತ್ತದೆ. ಒಬ್ಬನು ಹೊಟ್ಟೆಬಾಕನೋ ಎಂಬುದನ್ನು ಅವನ ದೇಹದ ಗಾತ್ರದಿಂದಲ್ಲ ಬದಲಾಗಿ ಆಹಾರದ ಕಡೆಗಿನ ಅವನ ಮನೋಭಾವದಿಂದ ನಿರ್ಧರಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ ಸಾಧಾರಣ ಗಾತ್ರದ ದೇಹವಿರಬಹುದು ಅಥವಾ ಅವನು ಸಣಕಲಾಗಿರಬಹುದು, ಆದರೂ ಹೊಟ್ಟೆಬಾಕನಾಗಿರಬಹುದು. ಇನ್ನೊಂದು ಕಡೆ, ಅತಿ ತೂಕಕ್ಕೆ ಕಾರಣ ಯಾವುದೇ ಕಾಯಿಲೆ ಆಗಿರಬಹುದು ಇಲ್ಲವೇ ಅನುವಂಶಿಕ ಕಾರಣಗಳಿಂದ ದೇಹದಲ್ಲಿ ಅತಿ ಬೊಜ್ಜು ಸಂಗ್ರಹವಾಗಿರಬಹುದು. ಒಬ್ಬ ವ್ಯಕ್ತಿಯ ತೂಕ ಏನೇ ಆಗಿರಲಿ, ತಿನ್ನುವ ವಿಷಯದಲ್ಲಿ ಅತ್ಯಾಸೆ ತೋರಿಸುತ್ತಾನೋ ಎಂಬುದೇ ಮುಖ್ಯ.—2004, ನವೆಂಬರ್ 1ರ ಕಾವಲಿನಬುರುಜು ಸಂಚಿಕೆಯಲ್ಲಿ, “ವಾಚಕರಿಂದ ಪ್ರಶ್ನೆಗಳು” ಲೇಖನ ನೋಡಿ.
ನಿಮಗೆ ಜ್ಞಾಪಕವಿದೆಯೋ?
• ಪವಿತ್ರಾತ್ಮವನ್ನು ಪಡೆಯಲಿಕ್ಕಾಗಿ ನಾವೇನು ಮಾಡತಕ್ಕದ್ದು?
• ಪ್ರಾಪಂಚಿಕ ಆತ್ಮವು ನಮ್ಮನ್ನು ಪ್ರಭಾವಿಸಬಹುದಾದ ಕೆಲವು ವಿಧಗಳಾವುವು?
• ನಾವು ಪ್ರಾಪಂಚಿಕ ಆತ್ಮವನ್ನು ಹೇಗೆ ಪ್ರತಿರೋಧಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಹಿಂದೆ, ಬ್ರಿಟಿಷ್ ಗಣಿಗಳಲ್ಲಿ ಕನೇರಿ ಹಕ್ಕಿಗಳನ್ನು ಏಕೆ ಇರಿಸಲಾಗುತ್ತಿತ್ತು? (ಬಿ) ಕ್ರೈಸ್ತರು ಯಾವ ಅಪಾಯವನ್ನು ಎದುರಿಸುತ್ತಿದ್ದಾರೆ?
3, 4. ಯೇಸು ತನ್ನ ಶಿಷ್ಯರಿಗೆ ಯಾವ ಎಚ್ಚರಿಕೆ ಕೊಟ್ಟನು, ಮತ್ತು ಇದು ನಮಗೇಕೆ ಆಸಕ್ತಿಯದ್ದಾಗಿದೆ?
5, 6. ಪವಿತ್ರಾತ್ಮವು ನಮಗಾಗಿ ಏನು ಮಾಡಬಲ್ಲದು, ಮತ್ತು ಅದನ್ನು ಪಡೆಯಲಿಕ್ಕಾಗಿ ನಾವೇನು ಮಾಡಬೇಕು?
7. ಪ್ರಾಪಂಚಿಕ ಆತ್ಮವು ವ್ಯಕ್ತಿಗಳನ್ನು ಹೇಗೆ ಪ್ರಭಾವಿಸುತ್ತದೆ?
8. ನಮ್ಮೆಲ್ಲರ ಮುಂದೆ ಯಾವ ಆಯ್ಕೆಯಿದೆ?
9-11. ನಾವು ಪ್ರಾಪಂಚಿಕ ಆತ್ಮದ ಪ್ರಭಾವಕ್ಕೆ ಒಳಗಾಗುತ್ತಿದ್ದೇವೆಂದು ಎಚ್ಚರಿಸುವ ಕೆಲವು ಸೂಚನೆಗಳಾವುವು?
12. ಯಾರ ವಿಷಯದಲ್ಲಿ ‘ಜಾಗರೂಕರಾಗಿರಲು’ ಯೇಸು ತನ್ನ ಶಿಷ್ಯರಿಗೆ ಹೇಳಿದನು, ಮತ್ತು ಏಕೆ?
13, 14. ತಿನ್ನುವುದರ ಮತ್ತು ಕುಡಿಯುವುದರ ಕುರಿತು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
15. ಮಾನವರ ಯಾವ ಸ್ವಭಾವದ ಬಗ್ಗೆ ಯೇಸು ಎಚ್ಚರಿಸಿದನು?
16. ಪ್ರಾಪಂಚಿಕ ಆತ್ಮವು ಅನೇಕ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ?
17. ಚಿಂತೆಯಿಂದ ಅಡಗಿಹೋಗದಿರಲು ನಾವೇನು ಮಾಡಬೇಕು?
18. ಯೇಸು ನಮಗಾಗಿ ಯಾವ ಉತ್ತಮ ಮಾದರಿಯನ್ನಿಟ್ಟನು, ಮತ್ತು ಆತನನ್ನು ಅನುಕರಿಸುವುದರಿಂದ ನಮಗೇನು ಪ್ರಯೋಜನವಿದೆ?
19-21. ನಾವು ‘ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದು’ ಹೇಗೆ, ಮತ್ತು ಏಕೆ ಹಾಗೆ ಮಾಡತಕ್ಕದ್ದು?
[ಪುಟ 21ರಲ್ಲಿರುವ ಚಿತ್ರ]
ಕೆಲಸಕ್ಕೋ ಶಾಲೆಗೋ ಹೋಗುವ ಮುಂಚೆ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳಿ
[ಪುಟ 23ರಲ್ಲಿರುವ ಚಿತ್ರಗಳು]
ನಮ್ಮ ಮನಸ್ಸನ್ನು ಶುದ್ಧವಾಗಿರಿಸಬೇಕು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಾಮಾಣಿಕರಾಗಿರಬೇಕು ಮತ್ತು ಅನ್ನಪಾನಗಳಲ್ಲಿ ಮಿತಭಾವದವರಾಗಿರಬೇಕು