“ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು”
“ಆ ಸಮಯದಲ್ಲಿ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು.”—ಮತ್ತಾ. 13:43.
1. ದೇವರ ರಾಜ್ಯದ ಯಾವ ವಿವಿಧ ವೈಶಿಷ್ಟ್ಯಗಳನ್ನು ವಿವರಿಸಲಿಕ್ಕಾಗಿ ಯೇಸು ದೃಷ್ಟಾಂತಗಳನ್ನು ಉಪಯೋಗಿಸಿದನು?
ದೇವರ ರಾಜ್ಯದ ವಿವಿಧ ವೈಶಿಷ್ಟ್ಯಗಳನ್ನು ವಿವರಿಸಲಿಕ್ಕಾಗಿ ಯೇಸು ಕ್ರಿಸ್ತನು ಅನೇಕ ದೃಷ್ಟಾಂತಗಳನ್ನು ಅಥವಾ ಸಾಮ್ಯಗಳನ್ನು ಉಪಯೋಗಿಸಿದನು. ಅವನು “ಜನರಿಗೆ ದೃಷ್ಟಾಂತಗಳ ಮೂಲಕ ತಿಳಿಸಿದನು. ವಾಸ್ತವದಲ್ಲಿ, ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ.” (ಮತ್ತಾ. 13:34) ರಾಜ್ಯ ಸತ್ಯದ ಬೀಜಗಳನ್ನು ಬಿತ್ತುವ ಕುರಿತ ದೃಷ್ಟಾಂತಗಳಲ್ಲಿ ಯೇಸು, ರಾಜ್ಯ ಸಂದೇಶವನ್ನು ಸ್ವೀಕರಿಸುವುದರಲ್ಲಿ ವ್ಯಕ್ತಿಯೊಬ್ಬನ ಹೃದಯದ ಸ್ಥಿತಿಯು ಯಾವ ಪಾತ್ರವಹಿಸುತ್ತದೆ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನು ಉಂಟುಮಾಡುವುದರಲ್ಲಿ ಯೆಹೋವನ ಪಾತ್ರವೇನು ಎಂಬುದನ್ನು ಒತ್ತಿಹೇಳಿದನು. (ಮಾರ್ಕ 4:3-9, 26-29) ಭೂಮಿಯ ಮೇಲೆ ರಾಜ್ಯ ಹಿತಾಸಕ್ತಿಗಳ ಮಹತ್ತಾದ ಬೆಳವಣಿಗೆಯನ್ನು ಸಹ ಯೇಸು ದೃಷ್ಟಾಂತಿಸಿದನು. ಆ ಬೆಳವಣಿಗೆಯು ಆರಂಭದಲ್ಲಿ ಯಾವಾಗಲೂ ಗೋಚರವಾಗಿರದಿದ್ದರೂ ಅದನ್ನು ತಿಳಿಸಲಾಯಿತು. (ಮತ್ತಾ. 13:31-33) ಅದಲ್ಲದೆ ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸುವ ಎಲ್ಲರೂ ಆ ರಾಜ್ಯದ ಅರ್ಹ ಪ್ರಜೆಗಳಾಗಿರಬೇಕೆಂದಿಲ್ಲ ಎಂಬುದನ್ನೂ ಅವನು ಒತ್ತಿಹೇಳಿದನು.—ಮತ್ತಾ. 13:47-50.a
2. ಗೋದಿ ಮತ್ತು ಕಳೆಗಳ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿ ಒಳ್ಳೆಯ ಬೀಜ ಏನನ್ನು ಪ್ರತಿನಿಧಿಸುತ್ತದೆ?
2 ಆದರೂ ಯೇಸುವಿನ ದೃಷ್ಟಾಂತಗಳಲ್ಲಿ ಒಂದು ಯೇಸುವಿನೊಂದಿಗೆ ಅವನ ರಾಜ್ಯದಲ್ಲಿ ಆಳಲಿರುವವರನ್ನು ಒಟ್ಟುಗೂಡಿಸುವ ವಿಷಯದ ಮೇಲೆ ಕೇಂದ್ರೀಕರಿಸಿದೆ. ಇದನ್ನು ಹೆಚ್ಚಾಗಿ ಗೋದಿ ಮತ್ತು ಕಳೆಗಳ ಸಾಮ್ಯವೆಂದು ಕರೆಯಲಾಗುತ್ತದೆ. ಇದು ಮತ್ತಾಯ 13ನೇ ಅಧ್ಯಾಯದಲ್ಲಿ ದಾಖಲೆಯಾಗಿದೆ. ಇನ್ನೊಂದು ದೃಷ್ಟಾಂತದಲ್ಲಿಯಾದರೋ ಬಿತ್ತಲಾದ ಬೀಜವನ್ನು “ರಾಜ್ಯದ ವಾಕ್ಯ” ಎಂದು ಯೇಸು ಹೇಳುತ್ತಾನೆ. ಈ ದೃಷ್ಟಾಂತದಲ್ಲಿ ಒಳ್ಳೆಯ ಬೀಜವು ಬೇರೆ ವಿಷಯವನ್ನು ಅಂದರೆ ‘ರಾಜ್ಯದ ಪುತ್ರರನ್ನು’ ಪ್ರತಿನಿಧಿಸುತ್ತದೆ ಎಂದು ನಮಗನ್ನುತ್ತಾನೆ. (ಮತ್ತಾ. 13:19, 38) ಇವರು ರಾಜ್ಯದ ಪ್ರಜೆಗಳಲ್ಲ, ಬದಲಾಗಿ ರಾಜ್ಯದ “ಪುತ್ರರು” ಅಥವಾ ಬಾಧ್ಯಸ್ಥರು ಆಗಿದ್ದಾರೆ.—ರೋಮ. 8:14-17; ಗಲಾತ್ಯ 4:6, 7 ಓದಿ.
ಗೋದಿ ಮತ್ತು ಕಳೆಗಳ ದೃಷ್ಟಾಂತ
3. ದೃಷ್ಟಾಂತದಲ್ಲಿರುವ ಮನುಷ್ಯನಿಗೆ ಎದುರಾಗುವ ಸಮಸ್ಯೆಯನ್ನು ಮತ್ತು ಈ ಸಮಸ್ಯೆಯನ್ನು ನಿರ್ವಹಿಸಲು ಅವನು ಮಾಡುವ ತೀರ್ಮಾನವನ್ನು ವಿವರಿಸಿ.
3 ದೃಷ್ಟಾಂತವು ಈ ರೀತಿ ಇದೆ: “ಸ್ವರ್ಗದ ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಜನರು ನಿದ್ರೆಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು. ಅದರ ದಳವು ಮೊಳೆತು ಫಲ ಬಿಟ್ಟಾಗ ಕಳೆಗಳು ಸಹ ಕಾಣಿಸಿಕೊಂಡವು. ಆಗ ಮನೆಯ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ, ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಹಾಗಾದರೆ ಅದರಲ್ಲಿ ಕಳೆಗಳು ಎಲ್ಲಿಂದ ಬಂದವು?’ ಎಂದು ಕೇಳಿದರು. ಅದಕ್ಕೆ ಅವನು, ‘ಒಬ್ಬ ವೈರಿಯು ಇದನ್ನು ಮಾಡಿದನು’ ಎಂದನು. ಆಗ ಅವರು, ‘ನಾವು ಹೋಗಿ ಅವುಗಳನ್ನು ಕಿತ್ತು ಒಟ್ಟುಗೂಡಿಸಬೇಕೊ?’ ಎಂದು ಕೇಳಿದರು. ಅವನು ಅವರಿಗೆ, ‘ಬೇಡ, ಒಂದುವೇಳೆ ಕಳೆಗಳನ್ನು ಕಿತ್ತು ಒಟ್ಟುಗೂಡಿಸುವಾಗ ಅವುಗಳೊಂದಿಗೆ ನೀವು ಗೋದಿಯನ್ನೂ ಕಿತ್ತುಬಿಡಬಹುದು. ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಕೊಯ್ಲಿನ ಕಾಲದಲ್ಲಿ ನಾನು ಕೊಯ್ಯುವವರಿಗೆ ಮೊದಲು ಕಳೆಗಳನ್ನು ಒಟ್ಟುಗೂಡಿಸಿ ಸುಡುವುದಕ್ಕಾಗಿ ಅವುಗಳನ್ನು ಕಟ್ಟಿಡುವಂತೆ, ನಂತರ ಹೋಗಿ ಗೋದಿಯನ್ನು ನನ್ನ ಕಣಜಕ್ಕೆ ತುಂಬಿಸುವಂತೆ ಹೇಳುವೆನು’ ಎಂದನು.”—ಮತ್ತಾ. 13:24-30.
4. (ಎ) ದೃಷ್ಟಾಂತದಲ್ಲಿರುವ ಆ ಮನುಷ್ಯನು ಯಾರು? (ಬಿ) ಯಾವಾಗ ಮತ್ತು ಹೇಗೆ ಯೇಸು ಈ ಬೀಜವನ್ನು ಬಿತ್ತಲು ಆರಂಭಿಸಿದನು?
4 ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ ಆ ಮನುಷ್ಯನು ಯಾರು? ಯೇಸು ನಂತರ ದೃಷ್ಟಾಂತವನ್ನು ತನ್ನ ಶಿಷ್ಯರಿಗೆ ವಿವರಿಸುತ್ತಾ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು” ಎಂದು ಹೇಳುತ್ತಾನೆ. (ಮತ್ತಾ. 13:37) ‘ಮನುಷ್ಯಕುಮಾರನಾದ’ ಯೇಸು ತನ್ನ ಭೂಶುಶ್ರೂಷೆಯ ಮೂರುವರೆ ವರ್ಷಗಳ ಸಮಯದಲ್ಲಿ ಆ ಬಿತ್ತನೆಗಾಗಿ ಹೊಲವನ್ನು ಸಿದ್ಧಗೊಳಿಸಿದನು. (ಮತ್ತಾ. 8:20; 25:31; 26:64) ಅನಂತರ ಕ್ರಿ.ಶ. 33ರ ಪಂಚಾಶತ್ತಮದಿಂದ ಹಿಡಿದು ಅವನು ‘ರಾಜ್ಯದ ಪುತ್ರರನ್ನು’ ಪ್ರತಿನಿಧಿಸುವ ಒಳ್ಳೆಯ ಬೀಜವನ್ನು ಬಿತ್ತಲು ಆರಂಭಿಸಿದನು. ಈ ಬಿತ್ತುವಿಕೆಯು ಯೆಹೋವನ ಪ್ರತಿನಿಧಿಯಾದ ಯೇಸು ತನ್ನ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿಸಿದಾಗ ಆರಂಭಿಸಿತೆಂಬುದು ಸ್ಪಷ್ಟ. ಆ ಮೂಲಕ ಅವನು ಅವರನ್ನು ದೇವರ ಪುತ್ರರಾಗಿ ಅಭಿಷೇಕಿಸಿದನು.b (ಅ. ಕಾ. 2:33) ಬಿತ್ತಲ್ಪಟ್ಟ ಒಳ್ಳೆಯ ಬೀಜವು ಬೆಳೆದು ಪಕ್ವಗೊಂಡ ಗೋದಿಯಾಯಿತು. ಆದುದರಿಂದ ಒಳ್ಳೆಯ ಬೀಜವನ್ನು ಬಿತ್ತುವ ಮುಖ್ಯ ಉದ್ದೇಶವು ಯೇಸುವಿನೊಂದಿಗೆ ಅವನ ರಾಜ್ಯದಲ್ಲಿ ರಾಜರೂ ಸಹಬಾಧ್ಯರೂ ಆಗಿ ಆಳುವವರ ಪೂರ್ಣ ಸಂಖ್ಯೆಯನ್ನು ಕಟ್ಟಕಡೆಗೆ ಒಟ್ಟುಗೂಡಿಸುವುದೇ ಆಗಿತ್ತು.
5. ದೃಷ್ಟಾಂತದಲ್ಲಿರುವ ವೈರಿ ಯಾರು, ಮತ್ತು ಕಳೆಗಳಿಂದ ಯಾರು ಪ್ರತಿನಿಧಿಸಲ್ಪಟ್ಟಿದ್ದಾರೆ?
5 ದೃಷ್ಟಾಂತದಲ್ಲಿರುವ ವೈರಿ ಯಾರು ಮತ್ತು ಕಳೆಗಳು ಯಾರು? ವೈರಿಯು ‘ಪಿಶಾಚನೆಂದು’ ಯೇಸು ಹೇಳುತ್ತಾನೆ. ಕಳೆಗಳನ್ನು ‘ಕೆಡುಕನ ಪುತ್ರರಾಗಿ’ ವರ್ಣಿಸಲಾಗಿದೆ. (ಮತ್ತಾ. 13:25, 38, 39) ಅಕ್ಷರಾರ್ಥದಲ್ಲಿ, ಯೇಸು ಸೂಚಿಸಿದ ಆ ಕಳೆಗಳು ಪ್ರಾಯಶಃ ಕಳೆಹುಲ್ಲಾಗಿರಬಹುದು. ಈ ವಿಷಕಾರಿ ಸಸ್ಯವು ಪೂರ್ತಿಯಾಗಿ ಬೆಳೆಯುವ ಮುಂಚೆ ಗೋದಿಯ ಸಸಿಯನ್ನು ಒತ್ತಾಗಿ ಹೋಲುತ್ತದೆ. ಖೋಟಾ ಕ್ರೈಸ್ತರ ಎಂಥ ಒಪ್ಪುವ ಹೋಲಿಕೆ! ಇವರು ರಾಜ್ಯದ ಪುತ್ರರೆಂದು ಹೇಳಿಕೊಳ್ಳುವುದಾದರೂ ನಿಜ ಫಲವನ್ನು ಉತ್ಪಾದಿಸುವುದಿಲ್ಲ. ಕ್ರಿಸ್ತನ ಹಿಂಬಾಲಕರೆಂದು ಹೇಳಿಕೊಳ್ಳುವ ಈ ಕಪಟಿ ಕ್ರೈಸ್ತರು ನಿಜವಾಗಿ ಪಿಶಾಚ ಸೈತಾನನ ‘ಸಂತಾನದ’ ಭಾಗವಾಗಿದ್ದಾರೆ.—ಆದಿ. 3:15.
6. ಕಳೆಗಳು ಗೋಚರಿಸಲಾರಂಭಿಸಿದ್ದು ಯಾವಾಗ, ಮತ್ತು ಆ ಸಮಯದಲ್ಲಿ ಜನರು ‘ನಿದ್ರೆಮಾಡುತ್ತಿದ್ದದ್ದು’ ಹೇಗೆ?
6 ಈ ಕಳೆಯಂಥ ಕ್ರೈಸ್ತರು ಗೋಚರಿಸಿದ್ದು ಯಾವಾಗ? “ಜನರು ನಿದ್ರೆಮಾಡುತ್ತಿದ್ದಾಗ” ಎಂದು ಯೇಸು ಹೇಳುತ್ತಾನೆ. (ಮತ್ತಾ. 13:25) ಅದು ಯಾವಾಗ ಆಯಿತು? ಎಫೆಸದ ಹಿರಿಯರಿಗೆ ಅಪೊಸ್ತಲ ಪೌಲನು ಹೇಳಿದ ಮಾತುಗಳಲ್ಲಿ ನಮಗೆ ಉತ್ತರವು ಸಿಗುತ್ತದೆ: “ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ಪ್ರವೇಶಿಸುವವು ಮತ್ತು ಮಂದೆಯನ್ನು ಕೋಮಲತೆಯಿಂದ ನೋಡಿಕೊಳ್ಳುವುದಿಲ್ಲ ಎಂಬುದನ್ನು ನಾನು ಬಲ್ಲೆ; ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.” (ಅ. ಕಾ. 20:29, 30) ಆ ಹಿರಿಯರು ಆಧ್ಯಾತ್ಮಿಕವಾಗಿ ಸದಾ ಎಚ್ಚರವಾಗಿರುವಂತೆ ಅವನು ಬುದ್ಧಿವಾದವನ್ನಿತ್ತನು. ಧರ್ಮಭ್ರಷ್ಟತೆಯ ವಿರುದ್ಧ “ಪ್ರತಿಬಂಧಕವಾಗಿ” ಕಾರ್ಯನಡಿಸಿದ ಅಪೊಸ್ತಲರು ಮರಣದಲ್ಲಿ ನಿದ್ರೆಹೋಗಲಾರಂಭಿಸಿದಾಗ ಅನೇಕ ಕ್ರೈಸ್ತರು ಆಧ್ಯಾತ್ಮಿಕವಾಗಿ ನಿದ್ರೆಹೋದರು. (2 ಥೆಸಲೊನೀಕ 2:3, 6-8 ಓದಿ.) ಮಹಾ ಧರ್ಮಭ್ರಷ್ಟತೆಯು ಆರಂಭಗೊಂಡದ್ದು ಆಗಲೇ.
7. ಗೋದಿಯಲ್ಲಿ ಕೆಲವು ಗೋದಿ ಕಳೆಗಳಾಗಿ ಮಾರ್ಪಟ್ಟವೊ? ವಿವರಿಸಿ.
7 ಗೋದಿಯು ಕಳೆಗಳಾಗಿ ಮಾರ್ಪಡುವುದು ಎಂದು ಯೇಸು ಹೇಳಲಿಲ್ಲ, ಬದಲಾಗಿ ಗೋದಿಯ ಮಧ್ಯೆ ಕಳೆಗಳನ್ನು ಬಿತ್ತಲಾಯಿತು ಎಂದು ಹೇಳಿದನು. ಆದ್ದರಿಂದ ಪ್ರಾಮಾಣಿಕ ಕ್ರೈಸ್ತರಾಗಿದ್ದು ತದನಂತರ ಸತ್ಯವನ್ನು ಬಿಟ್ಟುಹೋಗುವವರನ್ನು ಈ ದೃಷ್ಟಾಂತವು ಸೂಚಿಸುವುದಿಲ್ಲ. ಬದಲಾಗಿ ದುಷ್ಟ ಜನರನ್ನು ಕ್ರೈಸ್ತ ಸಭೆಯೊಳಗೆ ತರುವ ಮೂಲಕ ಅದನ್ನು ಭ್ರಷ್ಟಗೊಳಿಸುವ ಸೈತಾನನ ಉದ್ದೇಶಪೂರ್ವಕ ಪ್ರಯತ್ನಕ್ಕೆ ಅದು ಸೂಚಿಸುತ್ತದೆ. ಕೊನೆಯ ಅಪೊಸ್ತಲ ಯೋಹಾನನು ವೃದ್ಧನಾದ ಸಮಯದೊಳಗೆ ಈ ಧರ್ಮಭ್ರಷ್ಟತೆಯು ಸ್ಪಷ್ಟವಾಗಿ ತೋರಿಬಂತು.—2 ಪೇತ್ರ 2:1-3; 1 ಯೋಹಾ. 2:18.
“ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ”
8, 9. (ಎ) ಯಜಮಾನನು ತನ್ನ ಆಳುಗಳಿಗೆ ಕೊಟ್ಟ ಸೂಚನೆಗಳು ಯೇಸುವನ್ನು ಆಲಿಸುತ್ತಿದ್ದವರಿಗೆ ಅರ್ಥವಾಗಿದ್ದಿರಬೇಕು ಏಕೆ? (ಬಿ) ನೆರವೇರಿಕೆಯಲ್ಲಿ ಗೋದಿ ಮತ್ತು ಕಳೆಗಳು ಒಟ್ಟಾಗಿ ಬೆಳೆದದ್ದು ಹೇಗೆ?
8 ಯಜಮಾನನ ಆಳುಗಳು ಸಮಸ್ಯೆಯ ಕುರಿತಾಗಿ ಅವನಿಗೆ ತಿಳಿಸುತ್ತಾ ಕೇಳುವುದು: “ನಾವು ಹೋಗಿ [ಆ ಕಳೆಗಳನ್ನು] ಕಿತ್ತು ಒಟ್ಟುಗೂಡಿಸಬೇಕೊ?” (ಮತ್ತಾ. 13:27, 28) ಅವನು ಕೊಟ್ಟ ಉತ್ತರವು ಅಚ್ಚರಿಯನ್ನು ಉಂಟುಮಾಡಬಹುದು. ಕೊಯ್ಲಿನ ತನಕ ಗೋದಿ ಮತ್ತು ಕಳೆ ಎರಡೂ ಒಟ್ಟಿಗೆ ಬೆಳೆಯಲು ಬಿಡುವಂತೆ ಅವನು ಅವರಿಗೆ ಹೇಳುತ್ತಾನೆ. ಆ ಆಜ್ಞೆಯು ಯೇಸುವಿನ ಶಿಷ್ಯರಿಗೆ ಅರ್ಥವಾಗಿರಬೇಕು. ಏಕೆಂದರೆ ಗೋದಿ ಯಾವುದು ಕಳೆಹುಲ್ಲು ಯಾವುದು ಎಂದು ಗುರುತಿಸುವುದು ಎಷ್ಟು ಕಷ್ಟ ಎಂಬುದು ಅವರಿಗೆ ತಿಳಿದಿತ್ತು. ಸಾಮಾನ್ಯವಾಗಿ ಕಳೆಹುಲ್ಲಿನ ಬೇರುಗಳು ಗೋದಿಯ ಬೇರುಗಳೊಂದಿಗೆ ಹೇಗೆ ಒತ್ತಾಗಿ ಹೆಣೆದುಕೊಳ್ಳುತ್ತವೆ ಎಂಬುದು ಸಹ ಬೇಸಾಯದ ಅನುಭವವಿರುವ ಕೆಲವರಿಗೆ ತಿಳಿದಿರುತ್ತದೆ.c ಆದುದರಿಂದ ಯಜಮಾನನು ಅವರಿಗೆ ಕಾಯುವಂತೆ ಹೇಳುವುದರಲ್ಲಿ ಆಶ್ಚರ್ಯವಿಲ್ಲ.
9 ಇದೇ ರೀತಿಯಲ್ಲಿ ಶತಮಾನಗಳಿಂದ ಕ್ರೈಸ್ತಪ್ರಪಂಚದ ವಿವಿಧ ಪಂಗಡಗಳು ಕಳೆಗಳ ಸಮೃದ್ಧ ಬೆಳೆಯನ್ನು ಉತ್ಪಾದಿಸಿವೆ. ಈ ಬೆಳೆ ಮೊದಲಾಗಿ ರೋಮನ್ ಕ್ಯಾಥೋಲಿಕ್ ಮತ್ತು ಆರ್ತಡಾಕ್ಸ್ ಚರ್ಚುಗಳ ಮಧ್ಯೆ ಮತ್ತು ಅನಂತರ ಅನೇಕ ಪ್ರಾಟೆಸ್ಟಂಟ್ ಗುಂಪುಗಳ ಮಧ್ಯೆ ತಲೆದೋರಿತು. ಅದೇ ಸಮಯದಲ್ಲಿ ಲೋಕವೆಂಬ ಹೊಲದಲ್ಲಿ ಅಪ್ಪಟ ಗೋದಿಯ ಕೆಲವು ಬೀಜಗಳನ್ನೂ ಬಿತ್ತಲಾಯಿತು. ಕೊಯ್ಲಿನ ಸಂಕ್ಷಿಪ್ತ ಕಾಲಕ್ಕೆ ಹೋಲಿಸುವಾಗ ಬೆಳೆ ಬೆಳೆಯುವ ಕಾಲ ದೀರ್ಘ. ದೃಷ್ಟಾಂತದಲ್ಲಿನ ಮನೆಯ ಯಜಮಾನನು ಬೆಳೆಯು ಬೆಳೆದು ಕೊಯ್ಲಿಗೆ ಸಿದ್ಧವಾಗುವ ದೀರ್ಘಾವಧಿಯ ತನಕ ತಾಳ್ಮೆಯಿಂದ ಕಾದನು.
ದೀರ್ಘಾವಧಿಯಿಂದ ಮುನ್ನೋಡಿದ ಕೊಯ್ಲಿನ ಕಾಲ
10, 11. (ಎ) ಕೊಯ್ಲಿನ ಕಾಲವು ಯಾವಾಗ? (ಬಿ) ಸಾಂಕೇತಿಕ ಗೋದಿಯು ಯೆಹೋವನ ಕಣಜಕ್ಕೆ ತುಂಬಿಸಲ್ಪಡುತ್ತಿರುವುದು ಹೇಗೆ?
10 ಯೇಸು ನಮಗನ್ನುವುದು: “ಕೊಯ್ಲು ಅಂದರೆ ವಿಷಯಗಳ ವ್ಯವಸ್ಥೆಯ ಸಮಾಪ್ತಿ; ಕೊಯ್ಯುವವರು ದೇವದೂತರು.” (ಮತ್ತಾ. 13:39) ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿನಗಳಲ್ಲಿ ಪ್ರತ್ಯೇಕಿಸುವ ಕೆಲಸವೊಂದು ನಡೆಯುತ್ತದೆ. ಅಂದರೆ ರಾಜ್ಯದ ಪುತ್ರರು ಒಟ್ಟುಗೂಡಿಸಲ್ಪಟ್ಟು ಕಳೆಗಳಂಥ ಜನರಿಂದ ಪ್ರತ್ಯೇಕಿಸಲ್ಪಡುವರು. ಇದರ ಕುರಿತು ಅಪೊಸ್ತಲ ಪೇತ್ರನು ನಮಗೆ ಹೇಳುವುದು: “ದೇವರ ಮನೆಯಿಂದಲೇ ಪ್ರಾರಂಭವಾಗುವ ನ್ಯಾಯತೀರ್ಪಿನ ನೇಮಿತ ಸಮಯವು ಇದಾಗಿದೆ. ಅದು ಮೊದಲು ನಮ್ಮಲ್ಲಿಯೇ ಪ್ರಾರಂಭವಾಗುವುದಾದರೆ ದೇವರ ಸುವಾರ್ತೆಗೆ ವಿಧೇಯರಾಗದಿರುವವರ ಅಂತ್ಯವು ಏನಾಗಿರುವುದು?”—1 ಪೇತ್ರ 4:17.
11 ಕಡೇ ದಿನಗಳ ಆರಂಭದ ಸ್ವಲ್ಪ ಸಮಯದ ನಂತರ ಅಥವಾ ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ’ ನಿಜ ಕ್ರೈಸ್ತರೆಂದು ಹೇಳಿಕೊಳ್ಳುವವರ ನ್ಯಾಯತೀರ್ಪು ಆರಂಭಿಸಿತು. ಅವರು ನಿಜವಾಗಿ ‘ರಾಜ್ಯದ ಪುತ್ರರೋ’ ಅಥವಾ ‘ಕೆಡುಕನ ಪುತ್ರರೋ’ ಎಂಬುದನ್ನು ಅದು ಬಯಲುಪಡಿಸಿತು. “ಮೊದಲು” ಮಹಾ ಬಾಬೆಲ್ ಬಿತ್ತು, “ನಂತರ” ರಾಜ್ಯದ ಪುತ್ರರು ಕೊಯ್ಲಿನ ಆರಂಭದಲ್ಲಿ ಒಟ್ಟುಗೂಡಿಸಲ್ಪಟ್ಟರು. (ಮತ್ತಾ. 13:30) ಆದರೆ ಈ ಸಾಂಕೇತಿಕ ಗೋದಿಯು ಈಗ ಯೆಹೋವನ ಕಣಜಕ್ಕೆ ತುಂಬಿಸಲ್ಪಡುತ್ತಿರುವುದು ಹೇಗೆ? ಕೊಯ್ಲಿಗೆ ತರಲ್ಪಟ್ಟ ಈ ಜನರು ದೇವರ ಮೆಚ್ಚಿಗೆ ಮತ್ತು ಭದ್ರತೆಯಿದ್ದ ಪುನಃಸ್ಥಾಪಿಸಲ್ಪಟ್ಟ ಕ್ರೈಸ್ತ ಸಭೆಯೊಳಗೆ ತರಲ್ಪಟ್ಟರು ಅಥವಾ ಸ್ವರ್ಗೀಯ ಬಹುಮಾನವನ್ನು ಪಡೆದರು.
12. ಕೊಯ್ಲು ಎಷ್ಟು ಸಮಯದ ತನಕ ಮುಂದುವರಿಯುತ್ತದೆ?
12 ಈ ನ್ಯಾಯತೀರ್ಪು ಎಷ್ಟು ಸಮಯ ಇರುತ್ತದೆ? ಯೇಸು ಕೊಯ್ಲನ್ನು ಒಂದು “ಕಾಲ” ಎಂದು ಕರೆದಿದ್ದಾನೆ. ಆದುದರಿಂದ ಅದು ಒಂದು ಸಮಯಾವಧಿಯ ತನಕ ಮುಂದುವರಿಯುತ್ತದೆ. (ಪ್ರಕ. 14:15, 16) ಅಭಿಷಿಕ್ತರಲ್ಲಿ ಪ್ರತಿಯೊಬ್ಬ ಸದಸ್ಯನ ನ್ಯಾಯತೀರ್ಪು ಅಂತ್ಯಕಾಲದ ಉದ್ದಕ್ಕೂ ಮುಂದುವರಿಯುತ್ತದೆ. ಅವರಿಗೆ ಕೊನೆಯ ಮುದ್ರೆ ಒತ್ತಿಯಾಗುವ ತನಕ ಅದು ಇರುವುದು.—ಪ್ರಕ. 7:1-4.
13. ಕಳೆಗಳಂಥವರು ಯಾವ ರೀತಿಯಲ್ಲಿ ಎಡವುವಂತೆ ಮಾಡುತ್ತಾರೆ, ಮತ್ತು ಅವರು ಅಧರ್ಮವನ್ನು ಹೇಗೆ ನಡೆಸುತ್ತಾರೆ?
13 ರಾಜ್ಯದೊಳಗಿಂದ ಒಟ್ಟುಗೂಡಿಸಲ್ಪಡುವವರು ಯಾರು ಮತ್ತು ಅವರು ಎಡವುವಂತೆ ಮಾಡುವುದೂ ಅಧರ್ಮವನ್ನು ನಡೆಸುವುದೂ ಹೇಗೆ? (ಮತ್ತಾ. 13:41) ಕಳೆಯಂತಿರುವ ಕ್ರೈಸ್ತಪ್ರಪಂಚದ ಧರ್ಮಗುರುಗಳು ಶತಮಾನಗಳಿಂದ ಲಕ್ಷಾಂತರ ಜನರನ್ನು ದಾರಿತಪ್ಪಿಸಿದ್ದಾರೆ. ಹೇಗೆಂದರೆ ‘ಎಡವುವಂತೆ ಮಾಡುವ ವಿಷಯಗಳಿಂದ’ ಅಂದರೆ ದೇವರನ್ನು ಅಗೌರವಗೊಳಿಸುವ ಬೋಧನೆಗಳಾದ ನರಕಾಗ್ನಿಯ ನಿತ್ಯಶಿಕ್ಷೆ, ಗಲಿಬಿಲಿಗೊಳಿಸುವ ಹಾಗೂ ನಿಗೂಢವಾದ ತ್ರಯೈಕ್ಯವೆಂಬ ಸಿದ್ಧಾಂತಗಳ ಮೂಲಕವೇ. ಅನೇಕ ಧಾರ್ಮಿಕ ಮುಖಂಡರು ಈ ಲೋಕದೊಂದಿಗೆ ತಮ್ಮ ವ್ಯಭಿಚಾರಿ ಸ್ನೇಹ ಸಂಬಂಧದ ಮೂಲಕ ಹಾಗೂ ಕೆಲವು ಸಂದರ್ಭಗಳಲ್ಲಿ ತಮ್ಮ ಕುತ್ಸಿತ ಅನೈತಿಕ ನಡವಳಿಕೆಯ ಮೂಲಕ ತಮ್ಮ ಮಂದೆಗಳಿಗೆ ಕೆಟ್ಟ ಮಾದರಿಯನ್ನು ಇಟ್ಟಿದ್ದಾರೆ. (ಯಾಕೋ. 4:4) ಅದಲ್ಲದೆ ಕ್ರೈಸ್ತಪ್ರಪಂಚವು ತನ್ನ ಸದಸ್ಯರ ಮಧ್ಯೆ ಲೈಂಗಿಕ ಅನೈತಿಕತೆಯನ್ನು ಅಧಿಕಾಧಿಕವಾಗಿ ಸೈರಿಸುತ್ತಾ ಬಂದಿದೆ. (ಯೂದ 4 ಓದಿ.) ಇವೆಲ್ಲವುಗಳ ಮಧ್ಯೆ ಅವರು ಬಾಹ್ಯ ತೋರಿಕೆಯ ಧರ್ಮಶ್ರದ್ಧೆ ಮತ್ತು ದೈವಭಕ್ತಿಯ ಸೋಗನ್ನು ಹಾಕಿದವರಾಗಿ ಮುಂದುವರಿಯುತ್ತಾರೆ. ಎಡವುವಂತೆ ಮಾಡುವ ಇಂಥ ಕಳೆಯಂಥ ಪ್ರಭಾವಗಳಿಂದ ಮತ್ತು ಭ್ರಷ್ಟ ಬೋಧನೆಗಳಿಂದ ಪ್ರತ್ಯೇಕವಾಗಿರಲು ರಾಜ್ಯದ ಪುತ್ರರು ಎಷ್ಟು ಸಂತೋಷಿತರು!
14. ಕಳೆಗಳಂಥವರು ಗೋಳಾಡುವುದೂ ಹಲ್ಲುಕಡಿಯುವುದೂ ಹೇಗೆ?
14 ಕಳೆಗಳಂಥವರು ಗೋಳಾಡುವುದೂ ಹಲ್ಲುಕಡಿಯುವುದೂ ಹೇಗೆ? (ಮತ್ತಾ. 13:42) “ರಾಜ್ಯದ ಪುತ್ರರು” ಈ ಕಳೆಗಳಂಥವರ ಆಧ್ಯಾತ್ಮಿಕ ವಿಷಕಾರಿ ಪರಿಸ್ಥಿತಿಯನ್ನು ಬಯಲುಪಡಿಸಿದ ಕಾರಣದಿಂದ “ಕೆಡುಕನ ಪುತ್ರರು” ಯಾತನೆಗೆ ಒಳಪಡುತ್ತಿದ್ದಾರೆ. ತಮ್ಮ ಚರ್ಚ್ ಸದಸ್ಯರ ಬೆಂಬಲ ಕಡಿಮೆಯಾಗುತ್ತಿರುವುದಕ್ಕಾಗಿ ಹಾಗೂ ಅವರ ಮೇಲೆ ಹತೋಟಿಯನ್ನು ಕಳೆದುಕೊಂಡದ್ದಕ್ಕಾಗಿಯೂ ಅವರು ಹಲುಬಿ ಗೋಳಾಡುತ್ತಿದ್ದಾರೆ.—ಯೆಶಾಯ 65:13, 14 ಓದಿ.
15. ಕಳೆಗಳಂಥ ಜನರು ಬೆಂಕಿಯಿಂದ ಸುಟ್ಟುಹಾಕಲ್ಪಡುವುದು ಹೇಗೆ?
15 ಈ ಕಳೆಗಳು ಕೀಳಲ್ಪಡುವುದೂ ಬೆಂಕಿಯಿಂದ ಸುಟ್ಟುಹಾಕಲ್ಪಡುವುದೂ ಹೇಗೆ? (ಮತ್ತಾ. 13:40) ಕಳೆಗಳ ಅಂತಿಮ ಅವಸ್ಥೆಗೆ ಇದು ಸೂಚಿಸುತ್ತದೆ. ಅವು ಬೆಂಕಿಯ ಕುಲುಮೆಗೆ ಸಾಂಕೇತಿಕವಾಗಿ ಹಾಕಲ್ಪಡುವುದು ಅವು ನಿತ್ಯನಾಶನಕ್ಕಾಗಿ ಸಾಗುತ್ತಿವೆ ಎಂಬುದರ ಸೂಚನೆ. (ಪ್ರಕ. 20:14; 21:8) ಕಳೆಗಳಂಥ ಈ ಖೋಟಾ ಕ್ರೈಸ್ತರು, ಅಂದರೆ ವಂಚಕರು ‘ಮಹಾ ಸಂಕಟದ’ ಸಮಯದಲ್ಲಿ ನಿರ್ಮೂಲಗೊಳಿಸಲ್ಪಡುವರು.—ಮತ್ತಾ. 24:21.
ಅವರು “ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು”
16, 17. ದೇವರ ಆಲಯದ ಕುರಿತು ಮಲಾಕಿಯನು ಏನನ್ನು ಪ್ರವಾದಿಸಿದನು, ಮತ್ತು ಇದು ನೆರವೇರಲಾರಂಭಿಸಿದ್ದು ಹೇಗೆ?
16 ಗೋದಿಯಂಥವರು ‘ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವದು’ ಯಾವಾಗ? (ಮತ್ತಾ. 13:43) ದೇವರ ಆಲಯವನ್ನು ಶುದ್ಧೀಕರಿಸುವ ಕುರಿತಾಗಿ ಮಲಾಕಿಯನು ಪ್ರವಾದಿಸಿದ್ದು: “ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಫಕ್ಕನೆ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಐತರುತ್ತಾನೆ; ಇದು ಸೇನಾಧೀಶ್ವರ ಯೆಹೋವನ ನುಡಿ. ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ ಅಗಸನ ಚೌಳಿಗೂ ಸಮಾನನಾಗಿದ್ದಾನೆ; ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.”—ಮಲಾ. 3:1-3.
17 ಆಧುನಿಕ ಸಮಯದಲ್ಲಿ ಈ ಪ್ರವಾದನೆಯು 1918ರಲ್ಲಿ ನೆರವೇರಲಿಕ್ಕೆ ಆರಂಭಿಸಿತೆಂಬುದು ಸ್ಪಷ್ಟ. ಆಗ ಯೆಹೋವನು ‘ಒಡಂಬಡಿಕೆಯ ದೂತನಾದ’ ಯೇಸು ಕ್ರಿಸ್ತನೊಂದಿಗೆ ಆಧ್ಯಾತ್ಮಿಕ ಆಲಯವನ್ನು ಪರೀಕ್ಷಿಸಿದನು. ಈ ಶುದ್ಧೀಕರಣವು ಮುಗಿದ ಬಳಿಕ ಏನು ಸಂಭವಿಸುತ್ತದೆ ಎಂಬುದನ್ನು ಮಲಾಕಿಯನು ನಮಗೆ ತಿಳಿಸುತ್ತಾನೆ: “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.” (ಮಲಾ. 3:18) ಪುನಶ್ಚೈತನ್ಯಗೊಳಿಸಲ್ಪಟ್ಟ ನಿಜ ಕ್ರೈಸ್ತರ ಚಟುವಟಿಕೆಯ ಉಬ್ಬರವು ಆ ಕಾಲಾವಧಿಯನ್ನು ಕೊಯ್ಲಿನ ಸಮಯದ ಆರಂಭ ಎಂಬುದಾಗಿ ಸೂಚಿಸುತ್ತದೆ.
18. ನಮ್ಮ ದಿನದಲ್ಲಿ ಏನು ಸಂಭವಿಸುವುದೆಂದು ದಾನಿಯೇಲನು ಪ್ರವಾದಿಸಿದನು?
18 ಪ್ರವಾದಿಯಾದ ದಾನಿಯೇಲನು ನಮ್ಮ ದಿನಗಳ ಕುರಿತು ಹೇಳುತ್ತಾ ಮುಂತಿಳಿಸಿದ್ದು: “ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು; ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.” (ದಾನಿ. 12:3) ಅಷ್ಟು ಹೊಳಪಿನಿಂದ ಪ್ರಕಾಶಿಸುವ ಇವರು ಯಾರು? ಅಭಿಷಿಕ್ತ ಕ್ರೈಸ್ತರೇ ಹೊರತು ಬೇರೆ ಯಾರೂ ಅಲ್ಲ. ಗೋದಿ ಮತ್ತು ಕಳೆಗಳ ದೃಷ್ಟಾಂತದಲ್ಲಿ ಯೇಸು ಸೂಚಿಸಿದ ಅಪ್ಪಟ ಗೋದಿ ಇವರೇ. ಕುರಿಗಳಂಥ ಸದಾ ವೃದ್ಧಿಯಾಗುತ್ತಿರುವ ಮಹಾ ಸಮೂಹದವರು, ‘ಒಟ್ಟುಗೂಡಿಸಲ್ಪಡುತ್ತಿರುವ’ ಕಳೆಗಳಂಥ ಖೋಟಾ ಕ್ರೈಸ್ತರನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಆಧ್ಯಾತ್ಮಿಕ ಇಸ್ರಾಯೇಲಿನ ಉಳಿಕೆಯವರೊಂದಿಗೆ ತಮ್ಮನ್ನು ಜೊತೆಗೂಡಿಸಿಕೊಳ್ಳುವಾಗ ದೇವರ ರಾಜ್ಯದ ಈ ಭಾವೀ ಪ್ರಜೆಗಳು ಕಗ್ಗತ್ತಲೆ ತುಂಬಿದ ಈ ಲೋಕದಲ್ಲಿ ತದ್ರೀತಿ ತಮ್ಮ ಬೆಳಕನ್ನು ಪ್ರಕಾಶಿಸುತ್ತಾರೆ.—ಜೆಕ. 8:23; ಮತ್ತಾ. 5:14-16; ಫಿಲಿ. 2:15.
19, 20. “ರಾಜ್ಯದ ಪುತ್ರರು” ಯಾವುದಕ್ಕಾಗಿ ಆತುರದಿಂದ ಎದುರುನೋಡುತ್ತಾರೆ, ಮತ್ತು ಮುಂದಿನ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?
19 ಇಂದು “ರಾಜ್ಯದ ಪುತ್ರರು” ತಮ್ಮ ಮಹಿಮಾಭರಿತ ಸ್ವರ್ಗೀಯ ಬಹುಮಾನವನ್ನು ಆತುರದಿಂದ ಎದುರುನೋಡುತ್ತಾರೆ. (ರೋಮ. 8:18, 19; 1 ಕೊರಿಂ. 15:53; ಫಿಲಿ. 1:21-24) ಆ ಸಮಯದ ತನಕವಾದರೋ ಅವರು ನಂಬಿಗಸ್ತರೂ ಪ್ರಕಾಶಮಾನವಾಗಿ ಹೊಳೆಯುವವರೂ ‘ಕೆಡುಕನ ಪುತ್ರರಿಂದ’ ಪ್ರತ್ಯೇಕವಾದವರೂ ಆಗಿ ಉಳಿಯಬೇಕು. (ಮತ್ತಾ. 13:38; ಪ್ರಕ. 2:10) ನಮ್ಮ ಕಾಲದಲ್ಲಿ ಕಳೆಗಳ ಈ ಸಾಂಕೇತಿಕ ‘ಒಟ್ಟುಗೂಡಿಸುವಿಕೆಯ’ ಫಲಿತಾಂಶವನ್ನು ಕಾಣುವ ಸುಯೋಗವನ್ನು ಹೊಂದಿರುವುದಕ್ಕಾಗಿ ನಾವೆಲ್ಲರೂ ಎಷ್ಟು ಸಂತೋಷಿತರಾಗಿರಬಲ್ಲೆವು!
20 ಆದರೆ ಈ ರಾಜ್ಯದ ಪುತ್ರರ ಮತ್ತು ರಾಜ್ಯದ ಪ್ರಜೆಗಳಾಗಿ ಭೂಮಿಯ ಮೇಲೆ ಸದಾ ಜೀವಿಸುವ ನಿರೀಕ್ಷೆಯುಳ್ಳ ಹೆಚ್ಚೆಚ್ಚಾಗುತ್ತಿರುವ ಮಹಾ ಸಮೂಹದವರ ನಡುವಣ ಸಂಬಂಧ ಏನಾಗಿದೆ? ಮುಂದಿನ ಲೇಖನವು ಈ ಪ್ರಶ್ನೆಯನ್ನು ಉತ್ತರಿಸುವುದು.
[ಪಾದಟಿಪ್ಪಣಿಗಳು]
a ಈ ದೃಷ್ಟಾಂತಗಳ ಸವಿವರ ಚರ್ಚೆಗಾಗಿ 2008, ಜುಲೈ 15ರ ಕಾವಲಿನಬುರುಜುವಿನ ಪುಟ 12-21 ನೋಡಿ.
b ಈ ಸಾಮ್ಯದಲ್ಲಿ ಬಿತ್ತುವಿಕೆಯು, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಪ್ರತಿನಿಧಿಸುವುದಿಲ್ಲ. ಯಾಕೆಂದರೆ ಆ ಕೆಲಸವು ಅಭಿಷಿಕ್ತರಾಗಿ ಪರಿಣಮಿಸುವ ಹೊಸಬರನ್ನು ಒಟ್ಟುಗೂಡಿಸುತ್ತದೆ. ಹೊಲದಲ್ಲಿ ಬಿತ್ತಲಾಗುವ ಒಳ್ಳೆಯ ಬೀಜವನ್ನು ಯೇಸು “ರಾಜ್ಯದ ಪುತ್ರರು” ಎಂದು ಕರೆದಿದ್ದಾನೆ ಹೊರತು “ಪುತ್ರರಾಗಲಿರುವವರು” ಎಂದು ಹೇಳಲಿಲ್ಲ. ಆ ಬಿತ್ತುವಿಕೆಯು ಹೊಲವೆಂಬ ಲೋಕದಲ್ಲಿರುವ ಈ ರಾಜ್ಯದ ಪುತ್ರರ ಅಭಿಷೇಕಕ್ಕೆ ಸೂಚಿಸುತ್ತದೆ.
c ಕಳೆಹುಲ್ಲಿನ ಬೇರುಗಳು ಗೋದಿಯ ಬೇರುಗಳೊಂದಿಗೆ ಎಷ್ಟು ಒತ್ತಾಗಿ ಹೆಣೆದುಕೊಳ್ಳುತ್ತವೆ ಎಂದರೆ ಕೊಯ್ಲಿನ ಮುಂಚೆ ಅವನ್ನು ಕೀಳುವುದಾದರೆ ಗೋದಿಯೂ ಕಿತ್ತುಹೋಗಸಾಧ್ಯವಿದೆ.—ಶಾಸ್ತ್ರವಚನಗಳ ಒಳನೋಟ, (ಇಂಗ್ಲಿಷ್) ಸಂಪುಟ 1, ಪುಟ 1178 ನೋಡಿ.
ನಿಮಗೆ ನೆನಪಿದೆಯೇ?
ಗೋದಿ ಮತ್ತು ಕಳೆಗಳ ಯೇಸುವಿನ ದೃಷ್ಟಾಂತದಲ್ಲಿರುವ ಈ ಕೆಳಗಿನ ವಿಷಯಗಳ ಅರ್ಥವೇನು?
• ಒಳ್ಳೆಯ ಬೀಜ
• ಬೀಜ ಬಿತ್ತಿದ ಮನುಷ್ಯ
• ಬೀಜ ಬಿತ್ತುವಿಕೆ
• ವೈರಿ
• ಕಳೆಗಳು
• ಕೊಯ್ಲಿನ ಕಾಲ
• ಕಣಜ
• ಗೋಳಾಡುವುದು ಮತ್ತು ಹಲ್ಲುಕಡಿಯುವುದು
• ಬೆಂಕಿಯ ಕುಲುಮೆ
[ಪುಟ 20ರಲ್ಲಿರುವ ಚಿತ್ರಗಳು]
ಕ್ರಿ.ಶ. 33ರ ಪಂಚಾಶತ್ತಮದಂದು ಒಳ್ಳೆಯ ಬೀಜದ ಬಿತ್ತನೆಯು ಆರಂಭಿಸಿತು
[ಪುಟ 23ರಲ್ಲಿರುವ ಚಿತ್ರ]
ಸಾಂಕೇತಿಕ ಗೋದಿಯು ಈಗ ಯೆಹೋವನ ಕಣಜದೊಳಕ್ಕೆ ತರಲ್ಪಡುತ್ತಾ ಇದೆ
[ಕೃಪೆ]
Pictorial Archive (Near Eastern History) Est.