ಅಧ್ಯಾಯ 15
‘ಯೇಸು ಕನಿಕರಪಟ್ಟನು’
1-3. (ಎ) ಇಬ್ಬರು ಕುರುಡರು ಸಹಾಯಕ್ಕಾಗಿ ಬೇಡಿಕೊಂಡಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು? (ಬಿ) ‘ಕನಿಕರಪಟ್ಟನು’ ಎಂಬ ಅಭಿವ್ಯಕ್ತಿಯ ಅರ್ಥವೇನು? (ಪಾದಟಿಪ್ಪಣಿ ನೋಡಿ)
ಯೆರಿಕೋವಿನ ಸಮೀಪ. ದಾರಿಬದಿಯಲ್ಲಿ ಇಬ್ಬರು ಕುರುಡರು ಕುಳಿತಿದ್ದಾರೆ. ಅವರು ಅಲ್ಲಿ ಪ್ರತಿದಿನ ಬಂದು ಜನರು ಹಾದುಹೋಗುವ ಜಾಗದಲ್ಲಿ ಕುಳಿತು ಭಿಕ್ಷೆಬೇಡುತ್ತಾರೆ. ಆದರೆ ಇಂದು ಅವರ ಜೀವನವನ್ನೇ ಪೂರ್ತಿ ಪರಿವರ್ತಿಸಲಿದ್ದ ಒಂದು ಘಟನೆ ನಡೆಯಲಿತ್ತು.
2 ಇದ್ದಕ್ಕಿದ್ದಂತೆ ಆ ಭಿಕ್ಷುಕರು ಗಲಭೆಯನ್ನು ಕೇಳಿಸಿಕೊಳ್ಳುತ್ತಾರೆ. ಅದು ಏನೆಂದು ನೋಡಲಾಗದ್ದರಿಂದ, ಅವರಲ್ಲೊಬ್ಬನು ಏನಾಗುತ್ತಿದೆ ಎಂದು ವಿಚಾರಿಸುತ್ತಾನೆ. ಆಗ ಜನರು, “ನಜರೇತಿನ ಯೇಸು ಹಾದುಹೋಗುತ್ತಿದ್ದಾನೆ” ಎಂದು ತಿಳಿಸುತ್ತಾರೆ. ಯೆರೂಸಲೇಮಿಗೆ ಇದು ಯೇಸುವಿನ ಕೊನೆಯ ಪ್ರಯಾಣವಾಗಿತ್ತು. ಆದರೆ ಅವನು ಒಬ್ಬನೇ ಪ್ರಯಾಣಿಸುತ್ತಿಲ್ಲ, ಜನರ ದೊಡ್ಡ ಗುಂಪು ಅವನನ್ನು ಹಿಂಬಾಲಿಸುತ್ತಿದೆ. ಆ ಮಾರ್ಗವಾಗಿ ಯೇಸು ಹೋಗುತ್ತಿದ್ದಾನೆಂದು ಕೇಳಿಸಿಕೊಂಡಾಗ ಆ ಭಿಕ್ಷುಕರು, “ಕರ್ತನೇ, ದಾವೀದನ ಕುಮಾರನೇ, ನಮಗೆ ಕರುಣೆ ತೋರಿಸು” ಎಂದು ಗಟ್ಟಿಯಾಗಿ ಕೂಗುತ್ತಾರೆ. ಇದರಿಂದ ಸಿಡಿಮಿಡಿಗೊಂಡ ಜನರು ಸುಮ್ಮನಿರುವಂತೆ ಅವರನ್ನು ಗದರಿಸುತ್ತಾರೆ. ಆದರೆ ಅವರು ಇನ್ನಷ್ಟು ಕೂಗಲಾರಂಭಿಸುತ್ತಾರೆ; ಸುಮ್ಮನಿರಲು ಒಪ್ಪುವದೇ ಇಲ್ಲ.
3 ಗುಂಪಿನ ಭಾರಿ ಗದ್ದಲದ ನಡುವೆಯೂ ಅವರ ಕೂಗು ಯೇಸುವಿನ ಕಿವಿಗೆಬೀಳುತ್ತದೆ. ಅವನೇನು ಮಾಡುತ್ತಾನೆ? ಹಲವಾರು ಆಲೋಚನೆಗಳಿಂದ ಅವನ ಹೃದಮನ ಈಗಾಗಲೇ ಭಾರವಾಗಿದೆ. ಅವನು ತನ್ನ ಭೂಜೀವನದ ಕೊನೆಯ ವಾರದ ಹೊಸ್ತಿಲಲ್ಲಿದ್ದನು. ಯೆರೂಸಲೇಮಿನಲ್ಲಿ, ಕಷ್ಟಾನುಭವ ಹಾಗೂ ಕ್ರೂರ ಮರಣ ತನ್ನನ್ನು ಎದುರುನೋಡುತ್ತಿದೆ ಎಂಬುದು ಅವನಿಗೆ ತಿಳಿದಿತ್ತು. ಹಾಗಿದ್ದರೂ ಪಟ್ಟುಹಿಡಿದು ಕೂಗುತ್ತಿದ್ದ ಅವರನ್ನು ಅಲಕ್ಷಿಸಲಿಲ್ಲ. ಅವನು ನಿಂತು, ಅವರಿಬ್ಬರನ್ನು ತನ್ನ ಬಳಿಗೆ ಕರೆದುಕೊಂಡು ಬರುವಂತೆ ಕೇಳಿಕೊಳ್ಳುತ್ತಾನೆ. ಅವರು, “ಕರ್ತನೇ, ನಮ್ಮ ಕಣ್ಣುಗಳು ತೆರೆಯಲ್ಪಡಲಿ” ಎಂದು ಅಂಗಲಾಚುತ್ತಾರೆ. “ಯೇಸು ಅವರ ಮೇಲೆ ಕನಿಕರಪಟ್ಟು” ಅವರ ಕಣ್ಣುಗಳನ್ನು ಮುಟ್ಟುತ್ತಾನೆ. ಕೂಡಲೇ ಅವರಿಗೆ ದೃಷ್ಟಿ ಬರುತ್ತದೆ.a ಮತ್ತು ಅವರು ಒಂದು ಕ್ಷಣವೂ ತಡಮಾಡದೇ ಯೇಸುವನ್ನು ಹಿಂಬಾಲಿಸಲಾರಂಭಿಸುತ್ತಾರೆ.—ಲೂಕ 18:35-43; ಮತ್ತಾಯ 20:29-34.
4. ಯೇಸು, “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ” ಇರುವನು ಎಂಬ ಪ್ರವಾದನೆಯನ್ನು ಹೇಗೆ ನೆರವೇರಿಸಿದನು?
4 ಯೇಸು ಕನಿಕರ ತೋರಿಸಿದ್ದು ಈ ಒಂದು ಸಂದರ್ಭದಲ್ಲಿ ಮಾತ್ರವೇ ಅಲ್ಲ. ಅನೇಕ ಸಂದರ್ಭಗಳಲ್ಲಿ, ಬೇರೆ ಬೇರೆ ಪರಿಸ್ಥಿತಿಗಳ ಕೆಳಗೆ ಯೇಸು ಕನಿಕರ ತೋರಿಸಲು ಆಳವಾಗಿ ಪ್ರಚೋದಿಸಲ್ಪಟ್ಟಿದ್ದನು. ಅವನು “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ” ಇರುವನು ಎಂಬುದಾಗಿ ಬೈಬಲ್ ಪ್ರವಾದನೆ ಮುಂತಿಳಿಸಿತ್ತು. (ಕೀರ್ತನೆ 72:13) ಈ ಮಾತುಗಳಿಗೆ ತಕ್ಕಂತೆ ಯೇಸು ಇತರರ ಭಾವನೆಗಳ ಕಡೆಗೆ ಸೂಕ್ಷ್ಮಗ್ರಾಹಿಯಾಗಿದ್ದನು. ಜನರಿಗೆ ಸಹಾಯ ಮಾಡಲು ಅವನು ಮೊದಲ ಹೆಜ್ಜೆ ತೆಗೆದುಕೊಂಡನು. ಈ ಕನಿಕರವೇ ಸಾರುವಂತೆ ಅವನನ್ನು ಹುರಿದುಂಬಿಸಿತು. ಯೇಸುವಿನ ಮಾತುಗಳು ಮತ್ತು ಕ್ರಿಯೆಗಳ ಹಿಂದಿದ್ದ ಕೋಮಲ ಕನಿಕರವನ್ನು ಸುವಾರ್ತಾ ಪುಸ್ತಕಗಳು ಹೇಗೆ ಪ್ರಕಟಪಡಿಸುತ್ತವೆ ಹಾಗೂ ತದ್ರೀತಿಯ ಕನಿಕರವನ್ನು ನಾವು ಹೇಗೆ ತೋರಿಸಬಹುದು ಎಂಬುದನ್ನು ಈಗ ನೋಡೋಣ.
ಇತರರ ಭಾವನೆಗಳಿಗೆ ಪರಿಗಣನೆ
5, 6. ಯೇಸು ಪರಾನುಭೂತಿಯುಳ್ಳ ವ್ಯಕ್ತಿಯಾಗಿದ್ದನು ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?
5 ಯೇಸು ತುಂಬ ಪರಾನುಭೂತಿಯುಳ್ಳ ವ್ಯಕ್ತಿಯಾಗಿದ್ದನು. ಅವನು ಕಷ್ಟಪಡುತ್ತಿರುವವರ ಭಾವನೆಗಳನ್ನು ಅರ್ಥಮಾಡಿಕೊಂಡದ್ದು ಮಾತ್ರವಲ್ಲ, ಅವುಗಳಲ್ಲಿ ಭಾಗಿಯಾದನು ಸಹ. ಅವರ ಎಲ್ಲ ಕಷ್ಟಗಳಲ್ಲಿ ಭಾಗಿಯಾಗದಿದ್ದರೂ ಅವರ ನೋವನ್ನು ತನ್ನ ಹೃದಯದಲ್ಲಿ ಅನುಭವಿಸಿದನು. (ಇಬ್ರಿಯ 4:15) ಹನ್ನೆರಡು ವರ್ಷಗಳಿಂದ ರಕ್ತಸ್ರಾವರೋಗದ ನಿಮಿತ್ತ ನರಳುತ್ತಿದ್ದ ಒಬ್ಬ ಸ್ತ್ರೀಯನ್ನು ವಾಸಿಮಾಡುವಾಗ ಯೇಸು ಆ ರೋಗವನ್ನು, “ಕಾಡುತ್ತಿದ್ದ ವಿಷಮ ರೋಗ” ಎಂದು ಸೂಚಿಸಿದನು. ಅಂದರೆ, ಅದು ಆಕೆಗೆ ವೇದನೆ ಹಾಗೂ ಕಷ್ಟಗಳನ್ನು ತಂದೊಡ್ಡಿದೆ ಎಂಬುದನ್ನು ಅವನು ಅರ್ಥಮಾಡಿಕೊಂಡನು. (ಮಾರ್ಕ 5:25-34) ಲಾಜರನು ಮೃತಪಟ್ಟಾಗ ಮರಿಯಳು ಹಾಗೂ ಆಕೆಯೊಂದಿಗಿದ್ದವರು ಅಳುತ್ತಿರುವುದನ್ನು ನೋಡಿದಾಗ ಅವನು ಸಹ ತನ್ನೊಳಗೇ ತುಂಬ ನೊಂದುಕೊಂಡನು. ತಾನು ಇನ್ನೇನು ಲಾಜರನನ್ನು ಪುನರುತ್ಥಾನಗೊಳಿಸಲಿದ್ದೇನೆ ಎಂಬುದು ಗೊತ್ತಿದ್ದರೂ ಸಹ ಯೇಸುವಿನ ಮನ ಎಷ್ಟು ಕರಗಿತೆಂದರೆ ಅವನ ಕಣ್ಣುಗಳಲ್ಲಿ ಕಣ್ಣೀರು ಉಕ್ಕಿಬಂತು.—ಯೋಹಾನ 11:33, 35.
6 ಇನ್ನೊಂದು ಸಂದರ್ಭದಲ್ಲಿ ಕುಷ್ಠರೋಗಿಯೊಬ್ಬನು ಯೇಸುವಿನ ಬಳಿ ಬಂದು “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. ಅಸ್ವಸ್ಥತೆಯನ್ನೇ ಎಂದೂ ಅನುಭವಿಸದ ಪರಿಪೂರ್ಣ ವ್ಯಕ್ತಿಯಾದ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅವನಲ್ಲಿ ಅನುಕಂಪ ಉಂಟಾಯಿತು. ಆ ಕುಷ್ಠರೋಗಿಗಾಗಿ ಅವನು ‘ಕನಿಕರಪಟ್ಟನು.’ (ಮಾರ್ಕ 1:40-42) ಅನಂತರ ಅವನು ಅಸಾಧಾರಣ ಸಂಗತಿಯೊಂದನ್ನು ಮಾಡಿದನು. ಕುಷ್ಠರೋಗಿಗಳು ಧರ್ಮಶಾಸ್ತ್ರದ ಪ್ರಕಾರ ಅಶುದ್ಧರು ಮತ್ತು ಬೇರೆಯವರೊಂದಿಗೆ ಬೆರೆಯುವಂತಿಲ್ಲ ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. (ಯಾಜಕಕಾಂಡ 13:45, 46) ಆ ವ್ಯಕ್ತಿಯನ್ನು ಮುಟ್ಟದೇ ಅವನನ್ನು ವಾಸಿಮಾಡುವ ಶಕ್ತಿ ಸಹ ಯೇಸುವಿಗಿತ್ತು. (ಮತ್ತಾಯ 8:5-13) ಆದರೂ ಕೈಚಾಚಿ ಕುಷ್ಠರೋಗಿಯನ್ನು ಮುಟ್ಟಿ, “ನನಗೆ ಮನಸ್ಸುಂಟು. ಶುದ್ಧನಾಗು” ಎಂದು ಹೇಳಿದನು. ತಕ್ಷಣವೇ ಕುಷ್ಠವು ವಾಸಿಯಾಯಿತು. ಯೇಸು ಎಂಥ ಕೋಮಲ ಪರಾನುಭೂತಿ ತೋರಿಸಿದನು!
7. ಪರಾನುಭೂತಿಯನ್ನು ಬೆಳೆಸಿಕೊಳ್ಳಲು ಯಾವುದು ನಮಗೆ ಸಹಾಯ ಮಾಡಬಲ್ಲದು? ಅದನ್ನು ಹೇಗೆ ವ್ಯಕ್ತಪಡಿಸಬಹುದು?
7 ಪರಾನುಭೂತಿ ತೋರಿಸುವುದರಲ್ಲಿ ಯೇಸುವನ್ನು ಅನುಕರಿಸುವಂತೆ ಕ್ರೈಸ್ತರಾಗಿರುವ ನಮ್ಮನ್ನು ಉತ್ತೇಜಿಸಲಾಗಿದೆ. “ಅನುಕಂಪ” ತೋರಿಸುವಂತೆ ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ.b (1 ಪೇತ್ರ 3:8) ದೀರ್ಘಕಾಲಿಕ ರೋಗದಿಂದಲೋ ಖಿನ್ನತೆಯಿಂದಲೋ ಬಳಲುತ್ತಿರುವವರ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ನಾವು ಅಂಥ ನೋವನ್ನು ಅನುಭವಿಸಿರದಿದ್ದರಂತೂ ಅದು ಇನ್ನಷ್ಟು ಕಷ್ಟವೇ. ಆದರೆ ನೆನಪಿಡಿ, ಕಷ್ಟ ನೋವುಗಳನ್ನು ಅನುಭವಿಸಿದ್ದರೆ ಮಾತ್ರ ಪರಾನುಭೂತಿ ತೋರಿಸಲು ಸಾಧ್ಯವಾಗುವುದು ಎಂದೇನಿಲ್ಲ. ಯೇಸು ಒಮ್ಮೆಯೂ ಅಸ್ವಸ್ಥನಾಗಿರದಿದ್ದರೂ ಅಸ್ವಸ್ಥರಿಗೆ ಪರಾನುಭೂತಿ ತೋರಿಸಿದನು. ಹಾಗಾದರೆ ನಾವು ಹೇಗೆ ಪರಾನುಭೂತಿಯನ್ನು ಬೆಳೆಸಿಕೊಳ್ಳಬಲ್ಲೆವು? ಕಷ್ಟಗಳನ್ನು ಅನುಭವಿಸುತ್ತಿರುವವರು ಹೃದಯಬಿಚ್ಚಿ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವಾಗ ತಾಳ್ಮೆಯಿಂದ ಕಿವಿಗೊಡುವ ಮೂಲಕವೇ. ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: ‘ಆ ಸನ್ನಿವೇಶದಲ್ಲಿ ನಾನಿರುತ್ತಿದ್ದರೆ, ನನಗೆ ಹೇಗನಿಸುತ್ತಿತ್ತು?’ (1 ಕೊರಿಂಥ 12:26) ಇತರರ ಭಾವನೆಗಳೆಡೆಗೆ ನಾವು ಸೂಕ್ಷ್ಮ ಸಂವೇದಿಗಳಾಗಿ ಇರುವುದಾದರೆ, ‘ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಲು’ ಹೆಚ್ಚು ಶಕ್ತರಾಗುವೆವು. (1 ಥೆಸಲೊನೀಕ 5:14) ಕೆಲವೊಮ್ಮೆ ಪರಾನುಭೂತಿಯನ್ನು ಮಾತುಗಳಲ್ಲಿ ಮಾತ್ರವಲ್ಲ, ಕಣ್ಣೀರಿನ ಮೂಲಕವೂ ವ್ಯಕ್ತಪಡಿಸಬಹುದು. “ಅಳುವವರೊಂದಿಗೆ ಅಳಿರಿ” ಎಂಬದಾಗಿ ರೋಮನ್ನರಿಗೆ 12:15 ಹೇಳುತ್ತದೆ.
8, 9. ಯೇಸು ಇತರರ ಭಾವನೆಗಳಿಗೆ ಪರಿಗಣನೆ ತೋರಿಸಿದ್ದು ಹೇಗೆ?
8 ಯೇಸು ಇತರರ ಬಗ್ಗೆ ಪರಿಗಣನೆಯುಳ್ಳವನಾಗಿದ್ದನು ಮತ್ತು ಅವರ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡನು. ಕಿವುಡನೂ ತೊದಲು ಮಾತಾಡುವವನೂ ಆಗಿದ್ದ ಒಬ್ಬ ಮನುಷ್ಯನನ್ನು ಯೇಸುವಿನ ಬಳಿ ಕರೆತಂದ ಸಂದರ್ಭವನ್ನು ಜ್ಞಾಪಿಸಿಕೊಳ್ಳಿ. ಅವನಲ್ಲಿದ್ದ ಮುಜುಗರವನ್ನು ಗ್ರಹಿಸಿದ ಯೇಸು, ‘ಆ ಮನುಷ್ಯನನ್ನು ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋದನು.’ ಖಾಸಗಿಯಾಗಿ, ಆ ಗುಂಪಿನಲ್ಲಿದ್ದ ಜನರ ದೃಷ್ಟಿಗೆ ಬೀಳದಂತೆ ಅವನನ್ನು ವಾಸಿಮಾಡಿದನು. ಸಾಮಾನ್ಯವಾಗಿ ಬೇರೆಯವರನ್ನು ವಾಸಿಮಾಡುವ ಸಂದರ್ಭಗಳಲ್ಲಿ ಅವನು ಹೀಗೆ ಮಾಡುತ್ತಿರಲಿಲ್ಲ.—ಮಾರ್ಕ 7:31-35.
9 ಜನರು ಯೇಸುವಿನ ಬಳಿ ಒಬ್ಬ ಕುರುಡನನ್ನು ಕರೆತಂದು ವಾಸಿಮಾಡುವಂತೆ ಕೇಳಿಕೊಂಡಾಗಲೂ ಅವನು ತದ್ರೀತಿಯ ಪರಿಗಣನೆ ತೋರಿಸಿದನು. “ಅವನು ಆ ಕುರುಡನ ಕೈಹಿಡಿದುಕೊಂಡು” ಅವನನ್ನು ‘ಊರ ಹೊರಗೆ ಕರೆದುಕೊಂಡು ಹೋದನು.’ ಮತ್ತು ಅಲ್ಲಿ ಹಂತಹಂತವಾಗಿ ಗುಣಪಡಿಸಿದನು. ಏಕೆಂದರೆ ಸೂರ್ಯನ ಬೆಳಕಿನ ಪ್ರಖರತೆಗೂ ಸುತ್ತಮುತ್ತ ಕಂಗೊಳಿಸುತ್ತಿದ್ದ ವಿಸ್ಮಯಕರ ದೃಶ್ಯಗಳಿಗೂ ಅವನ ಮೆದುಳು ಹಾಗೂ ಕಣ್ಣುಗಳು ಹೊಂದಿಕೊಳ್ಳಲು ಸಮಯ ಬೇಕಾಗಿತ್ತು. (ಮಾರ್ಕ 8:22-26) ಎಂಥ ಪರಿಗಣನೆ!
10. ನಾವು ಯಾವ ವಿಧಗಳಲ್ಲಿ ಇತರರ ಭಾವನೆಗಳಿಗೆ ಪರಿಗಣನೆ ತೋರಿಸಬಹುದು?
10 ಯೇಸುವಿನ ಹಿಂಬಾಲಕರಾಗಿರಬೇಕಾದರೆ ನಾವು ಕೂಡ ಇತರರ ಭಾವನೆಗಳಿಗೆ ಪರಿಗಣನೆ ತೋರಿಸಬೇಕು. ದುಡುಕಿ ಮಾತಾಡುವಲ್ಲಿ ಇತರರ ಭಾವನೆಗಳಿಗೆ ಘಾಸಿಯಾಗುತ್ತದೆ ಎಂಬುದನ್ನು ತಿಳಿದಿರುವ ನಾವು ಯೋಚಿಸಿ ಮಾತಾಡಬೇಕು. (ಜ್ಞಾನೋಕ್ತಿ 12:18; 18:21) ಕಟುವಾದ ಮಾತುಗಳು, ಹೀನೈಸುವ ಹೇಳಿಕೆಗಳು ಮತ್ತು ಚುಚ್ಚುವಂಥ ಕೊಂಕುನುಡಿಗಳಿಗೆ ಕ್ರೈಸ್ತರ ಮಧ್ಯೆ ಯಾವುದೇ ಜಾಗವಿಲ್ಲ. ಏಕೆಂದರೆ ಅವರು ಇತರರ ಭಾವನೆಗಳೆಡೆಗೆ ಸೂಕ್ಷ್ಮಸಂವೇದಿಗಳಾಗಿದ್ದಾರೆ. (ಎಫೆಸ 4:31) ಹಿರಿಯರೇ, ಇತರರ ಭಾವನೆಗಳಿಗೆ ನೀವು ಹೇಗೆ ಪರಿಗಣನೆ ತೋರಿಸಬಲ್ಲಿರಿ? ಸಲಹೆ ಕೊಡುವಾಗ ಅದರೊಂದಿಗೆ ದಯೆಯನ್ನು ಸೇರಿಸುತ್ತಾ ನಿಮ್ಮ ಮಾತುಗಳನ್ನು ಮೃದುಗೊಳಿಸಿ. ಹೀಗೆ ಕಿವಿಗೊಡುವವನ ಘನತೆಗೆ ಕುಂದುಬರದಂತೆ ನೋಡಿಕೊಳ್ಳಿ. (ಗಲಾತ್ಯ 6:1) ಹೆತ್ತವರೇ, ನೀವು ನಿಮ್ಮ ಮಕ್ಕಳ ಭಾವನೆಗಳೆಡೆಗೆ ಹೇಗೆ ಪರಿಗಣನೆ ತೋರಿಸಬಹುದು? ಶಿಸ್ತನ್ನು ಕೊಡುವಾಗ, ಅವರಿಗೆ ಮುಜುಗರವಾಗದಂಥ ರೀತಿಯಲ್ಲಿ ಕೊಡಲು ಪ್ರಯತ್ನಿಸಿ.—ಕೊಲೊಸ್ಸೆ 3:21.
ಇತರರಿಗೆ ನೆರವಾಗಲು ಮುಂದಾಗಿ
11, 12. ಯೇಸು ಇತರರು ಕೇಳಿದ ನಂತರ ಮಾತ್ರವೇ ಕನಿಕರ ತೋರಿಸಿದ್ದಲ್ಲ ಎಂಬುದನ್ನು ಯಾವ ಬೈಬಲ್ ವೃತ್ತಾಂತಗಳು ತೋರಿಸುತ್ತವೆ?
11 ಯೇಸು ಇತರರು ಕೇಳಿಕೊಂಡ ಬಳಿಕವಷ್ಟೇ ಕನಿಕರ ತೋರಿಸಿದ್ದಲ್ಲ. ಎಷ್ಟೆಂದರೂ ಕನಿಕರ ಎಂಬುದು ಒಂದು ನಿಷ್ಕ್ರಿಯ ಗುಣವಲ್ಲ. ಬದಲಾಗಿ ಸಕ್ರಿಯ ಗುಣವಾಗಿದ್ದು ಒಬ್ಬ ವ್ಯಕ್ತಿಯನ್ನು ಕ್ರಿಯೆಗೈಯಲು ಪ್ರಚೋದಿಸುತ್ತದೆ. ಯೇಸುವಿನಲ್ಲಿ ಕೋಮಲ ಕನಿಕರವಿತ್ತು. ಅದು ಇತರರಿಗೆ ಸಹಾಯ ಮಾಡಲು ಮುಂದಾಗುವಂತೆ ಅವನನ್ನು ಪ್ರಚೋದಿಸಿತು. ಉದಾಹರಣೆಗೆ, ಜನರ ದೊಡ್ಡ ಗುಂಪೊಂದು ಅವನೊಂದಿಗೆ ಮೂರು ದಿವಸ ಉಳಿದುಕೊಂಡಾಗ, ಅವರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಹಸಿವಾಗಿದೆಯೆಂದಾಗಲಿ ಅಥವಾ ಅದರ ಕುರಿತು ಏನಾದರೂ ಮಾಡುವಂತೆಯಾಗಲಿ ಯೇಸುವಿಗೆ ಯಾರೂ ಹೇಳಬೇಕಾಗಿರಲಿಲ್ಲ. ವೃತ್ತಾಂತ ಹೇಳುವುದು: “ಯೇಸು ಶಿಷ್ಯರನ್ನು ತನ್ನ ಬಳಿಗೆ ಕರೆದು, ‘ಈ ಜನರ ಗುಂಪನ್ನು ನೋಡಿ ನನಗೆ ಕನಿಕರವಾಗುತ್ತಿದೆ, ಏಕೆಂದರೆ ಈಗಾಗಲೇ ಮೂರು ದಿವಸಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಇವರ ಬಳಿ ಊಟಕ್ಕೆ ಏನೂ ಇಲ್ಲ; ಇವರನ್ನು ಉಪವಾಸ ಕಳುಹಿಸಿಬಿಡಲು ನನಗೆ ಇಷ್ಟವಿಲ್ಲ. ಇವರು ದಾರಿಯಲ್ಲಿ ಬಳಲಿಹೋಗಬಹುದು’” ಎಂದನು. ತದನಂತರ ಅದ್ಭುತವನ್ನು ಮಾಡಿ ಸ್ವಇಚ್ಛೆಯಿಂದ ಆ ಗುಂಪಿಗೆ ಯೇಸು ಆಹಾರವನ್ನೊದಗಿಸಿದನು.—ಮತ್ತಾಯ 15:32-38.
12 ಇನ್ನೊಂದು ವೃತ್ತಾಂತವನ್ನು ಪರಿಗಣಿಸಿ. ಕ್ರಿ.ಶ. 31ರಲ್ಲಿ, ಯೇಸು ನಾಯಿನೆಂಬ ಊರಿನ ಬಳಿ ಬಂದಾಗ, ಹೃದಯವಿದ್ರಾವಕ ದೃಶ್ಯವೊಂದು ಅವನ ಕಣ್ಣಿಗೆ ಬೀಳುತ್ತದೆ. ಶವಸಂಸ್ಕಾರದ ಮೆರವಣಿಗೆಯೊಂದು ಊರಿನಿಂದ ಹೊರಗೆ ಹೊರಟಿತ್ತು. ಬಹುಶಃ ಅವರು ಸಮೀಪದ ಬೆಟ್ಟದಲ್ಲಿರುವ ಸಮಾಧಿಗೆ ಹೋಗುತ್ತಿದ್ದಿರಬೇಕು. ತೀರಿಕೊಂಡವನು ವಿಧವೆಯೊಬ್ಬಳ “ಒಬ್ಬನೇ ಮಗನಾಗಿದ್ದನು.” ಅವನನ್ನು ಸಮಾಧಿಮಾಡಲು ಅವರು ಹೊರಟಿದ್ದರು. ಆ ತಾಯಿಯ ಹೃದಯದಲ್ಲಿ ಮಡುಗಟ್ಟಿದ ದುಃಖವನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರೋ? ಆಕೆ ತನ್ನ ಒಬ್ಬನೇ ಮಗನನ್ನು ಕಳೆದುಕೊಂಡಿದ್ದಳು. ತನ್ನ ನೋವನ್ನು ಹಂಚಿಕೊಳ್ಳಲು ಆಕೆಯ ಗಂಡನೂ ಇರಲಿಲ್ಲ. ಮೆರವಣಿಗೆಯಲ್ಲಿ ಅಷ್ಟು ಜನರಿದ್ದರೂ ಯೇಸು ‘ಕಂಡದ್ದು’ ಮಗನನ್ನು ಕಳೆದುಕೊಂಡಿದ್ದ ವಿಧವೆಯನ್ನಾಗಿತ್ತು. ಆಕೆಯನ್ನು ನೋಡಿ ಅವನ ಮನ ಮಮ್ಮಲಮರುಗಿತು. ಹೌದು, ಅವನು ‘ಅವಳ ಮೇಲೆ ಕನಿಕರಪಟ್ಟನು.’ ಯಾರೂ ಅವನನ್ನು ಕೇಳಿಕೊಳ್ಳಬೇಕಾಗಿರಲಿಲ್ಲ. ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಅವನ ಹೃದಯದಲ್ಲಿದ್ದ ಕನಿಕರವೇ ಅವನನ್ನು ಪ್ರೇರಿಸಿತು. ಅವನು, ‘ಚಟ್ಟದ ಹತ್ತಿರ ಹೋಗಿ ಅದನ್ನು ಮುಟ್ಟಿದನು.’ ಬಳಿಕ ಯೌವನಸ್ಥನನ್ನು ಪುನರುತ್ಥಾನಗೊಳಿಸಿದನು. ಆಮೇಲೆ ಏನಾಯಿತು? ಯೇಸು ಆ ಯೌವನಸ್ಥನಿಗೆ, ತನ್ನೊಂದಿಗೆ ಪ್ರಯಾಣಿಸುತ್ತಿದ್ದ ದೊಡ್ಡ ಗುಂಪಿನೊಂದಿಗೆ ಸೇರಿ ತನ್ನನ್ನು ಹಿಂಬಾಲಿಸುವಂತೆ ಹೇಳಲಿಲ್ಲ. ಬದಲಾಗಿ, “ಅವನನ್ನು ಅವನ ತಾಯಿಗೆ ಒಪ್ಪಿಸಿದನು.” ಹೀಗೆ ಆ ಮಗನು ವಿಧವೆ ತಾಯಿಯೊಂದಿಗಿದ್ದು ಆಕೆಗೆ ಆಸರೆಯಾಗಿರುವಂತೆ ನೋಡಿಕೊಂಡನು.—ಲೂಕ 7:11-15.
13. ಅಗತ್ಯದಲ್ಲಿರುವವರಿಗೆ ತಕ್ಕ ನೆರವು ನೀಡಲು ಮೊದಲ ಹೆಜ್ಜೆಯಿಡುವುದರಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಹುದು?
13 ಯೇಸುವಿನ ಮಾದರಿಯನ್ನು ನಾವು ಹೇಗೆ ಅನುಸರಿಸಬಹುದು? ಅದ್ಭುತ ಮಾಡಿ ಆಹಾರವನ್ನು ಒದಗಿಸಲು ಇಲ್ಲವೇ ಮೃತರನ್ನು ಪುನರುತ್ಥಾನಗೊಳಿಸಲು ಖಂಡಿತ ನಮ್ಮ ಕೈಲಾಗದು. ಆದರೆ, ಇತರರಿಗೆ ಸಹಾಯ ಮಾಡಲು ಮೊದಲ ಹೆಜ್ಜೆಯಿಡುವ ವಿಷಯದಲ್ಲಿ ನಾವು ಯೇಸುವನ್ನು ಅನುಕರಿಸಬಹುದು. ಜೊತೆ ವಿಶ್ವಾಸಿಯೊಬ್ಬನು ಹಣಕಾಸಿನ ದೊಡ್ಡ ಹೊಡೆತವನ್ನು ಅನುಭವಿಸಬಹುದು ಇಲ್ಲವೇ ತನ್ನ ಉದ್ಯೋಗವನ್ನು ಕಳೆದುಕೊಳ್ಳಬಹುದು. (1 ಯೋಹಾನ 3:17) ವಿಧವೆಯೊಬ್ಬಳ ಮನೆಯನ್ನು ತುರ್ತಾಗಿ ರಿಪೇರಿ ಮಾಡಬೇಕಾಗಬಹುದು. (ಯಾಕೋಬ 1:27) ಕುಟುಂಬ ಸದಸ್ಯರನ್ನು ಮರಣದಲ್ಲಿ ಕಳೆದುಕೊಂಡು, ಸಾಂತ್ವನ ಅಥವಾ ಸ್ವಲ್ಪಮಟ್ಟಿಗಿನ ಪ್ರಾಯೋಗಿಕ ಸಹಾಯದ ಅಗತ್ಯದಲ್ಲಿರುವವರ ಬಗ್ಗೆ ನಮಗೆ ತಿಳಿದುಬರಬಹುದು. (1 ಥೆಸಲೊನೀಕ 5:11) ಇತರರು ನಿಜವಾಗಿಯೂ ಸಹಾಯದ ಅಗತ್ಯದಲ್ಲಿರುವಲ್ಲಿ, ಅದನ್ನು ಒದಗಿಸಲು ಅವರು ಕೇಳುವ ತನಕ ನಾವು ಕಾಯಬೇಕಾಗಿಲ್ಲ. (ಜ್ಞಾನೋಕ್ತಿ 3:27) ನಮ್ಮ ಪರಿಸ್ಥಿತಿಗನುಗುಣವಾಗಿ ನೆರವನ್ನು ನೀಡಲು ತಕ್ಕ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಕನಿಕರವು ನಮ್ಮನ್ನು ಪ್ರೇರಿಸುವುದು. ದಯೆಯಿಂದ ಮಾಡಿದ ಚಿಕ್ಕ ಕೆಲಸ ಅಥವಾ ಹೃದಯದಾಳದಿಂದ ಆಡಿದ ಸಾಂತ್ವನದ ಕೆಲವೇ ನುಡಿಗಳು ಕನಿಕರದ ಶಕ್ತಿಯುತ ಅಭಿವ್ಯಕ್ತಿಗಳಾಗಿರುವವು ಎಂಬುದನ್ನು ಎಂದೂ ಮರೆಯದಿರಿ.—ಕೊಲೊಸ್ಸೆ 3:12.
ಕನಿಕರವು ಸಾರುವಂತೆ ಯೇಸುವನ್ನು ಪ್ರಚೋದಿಸಿತು
14. ಸುವಾರ್ತೆ ಸಾರುವ ಕೆಲಸಕ್ಕೆ ಯೇಸು ಆದ್ಯತೆ ಕೊಟ್ಟದ್ದೇಕೆ?
14 ಈ ಪುಸ್ತಕದ 2ನೇ ಭಾಗದಲ್ಲಿ ನಾವು ನೋಡಿದಂತೆ, ಯೇಸು ಸುವಾರ್ತೆಯನ್ನು ಸಾರುವುದರಲ್ಲಿ ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾನೆ. ಅವನಂದದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ಈ ಕೆಲಸಕ್ಕೆ ಅವನೇಕೆ ಆದ್ಯತೆ ಕೊಟ್ಟನು? ದೇವರ ಮೇಲೆ ಅವನಿಗಿದ್ದ ಪ್ರೀತಿಯೇ ಇದಕ್ಕೆ ಪ್ರಧಾನ ಕಾರಣವಾಗಿತ್ತಾದರೂ ಇನ್ನೊಂದು ಕಾರಣವೂ ಇತ್ತು. ಅದುವೇ, ಅವನಲ್ಲಿದ್ದ ಹೃತ್ಪೂರ್ವಕ ಕನಿಕರ. ಅದು ಇತರರ ಆಧ್ಯಾತ್ಮಿಕ ಅಗತ್ಯಗಳಿಗೆ ಸ್ಪಂದಿಸುವಂತೆ ಅವನನ್ನು ಪ್ರಚೋದಿಸಿತು. ಅವನು ಬೇರೆ ಬೇರೆ ರೀತಿಯಲ್ಲಿ ಕನಿಕರವನ್ನು ತೋರಿಸಿದ್ದರೂ, ಇತರರ ಆಧ್ಯಾತ್ಮಿಕ ಹಸಿವನ್ನು ತಣಿಸಿದ್ದೇ ಅವುಗಳಲ್ಲಿ ಪ್ರಮುಖವಾಗಿತ್ತು. ತಾನು ಯಾರಿಗೆ ಸಾರಿದನೋ ಅವರನ್ನು ಯೇಸು ಹೇಗೆ ವೀಕ್ಷಿಸಿದನು ಎಂಬುದನ್ನು ತೋರಿಸುವ ಎರಡು ಘಟನೆಗಳನ್ನು ನಾವೀಗ ನೋಡೋಣ. ಅಂಥ ಪರಿಗಣನೆಯು, ಸಾರ್ವಜನಿಕ ಶುಶ್ರೂಷೆಯಲ್ಲಿ ನಾವು ಯಾವ ಉದ್ದೇಶದಿಂದ ಪಾಲ್ಗೊಳ್ಳುತ್ತೇವೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುವುದು.
15, 16. ತಾನು ಯಾರಿಗೆ ಸಾರಿದನೋ ಆ ಜನರನ್ನು ಯೇಸು ಹೇಗೆ ವೀಕ್ಷಿಸಿದನು ಎಂಬುದನ್ನು ತೋರಿಸುವ ಎರಡು ಘಟನೆಗಳನ್ನು ವಿವರಿಸಿ.
15 ಯೇಸು ಶುಶ್ರೂಷೆಯಲ್ಲಿ ಹುರುಪಿನಿಂದ ಎರಡು ವರ್ಷ ಕಳೆದ ಬಳಿಕ ಅಂದರೆ ಕ್ರಿ.ಶ. 31ರಲ್ಲಿ, ತನ್ನ ಸೇವೆಯನ್ನು ಇನ್ನಷ್ಟು ಹೆಚ್ಚಿಸಲಿಕ್ಕಾಗಿ ಗಲಿಲಾಯದ ‘ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಲು’ ಆರಂಭಿಸಿದನು. ಅಲ್ಲಿ ಅವನೇನನ್ನು ನೋಡಿದನೋ ಅದು ಅವನ ಹೃದಯವನ್ನು ಸ್ಪರ್ಶಿಸಿತು. ಅಪೊಸ್ತಲ ಮತ್ತಾಯನು ವರದಿಸುವುದು: “ಅವನು ಜನರ ಗುಂಪನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:35, 36) ಹೌದು, ಜನಸಾಮಾನ್ಯರಿಗೆ ಯೇಸು ಅನುಕಂಪ ತೋರಿಸಿದನು. ಅವರು ಆಧ್ಯಾತ್ಮಿಕವಾಗಿ ಶೋಚನೀಯ ಸ್ಥಿತಿಯಲ್ಲಿರುವುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅವರನ್ನು ಪರಿಪಾಲಿಸಬೇಕಿದ್ದ ಧಾರ್ಮಿಕ ಮುಖಂಡರೇ ಅವರನ್ನು ದುರುಪಚರಿಸಿ ಪೂರ್ತಿ ಕಡೆಗಣಿಸಿದ್ದಾರೆ ಎಂಬುದು ಅವನಿಗೆ ತಿಳಿದಿತ್ತು. ಕನಿಕರದಿಂದ ತುಂಬ ಪ್ರಚೋದಿತನಾದ ಯೇಸು ನಿರೀಕ್ಷೆಯ ಸಂದೇಶದೊಂದಿಗೆ ಜನರನ್ನು ತಲಪಲು ಸಾಕಷ್ಟು ಶ್ರಮಿಸಿದನು. ದೇವರ ರಾಜ್ಯದ ಸುವಾರ್ತೆಗಿಂತ ಹೆಚ್ಚಿನದ್ದೇನೂ ಅವರಿಗೆ ಬೇಕಾಗಿರಲಿಲ್ಲ.
16 ಹಲವು ತಿಂಗಳುಗಳ ನಂತರ ಕ್ರಿ.ಶ. 32ರ ಪಸ್ಕ ಹಬ್ಬದ ಸುಮಾರಿಗೆ ತದ್ರೀತಿಯ ಇನ್ನೊಂದು ಘಟನೆ ಸಂಭವಿಸಿತು. ಈ ಸಂದರ್ಭದಲ್ಲಿ, ಯೇಸು ಮತ್ತು ಅವನ ಅಪೊಸ್ತಲರು ವಿಶ್ರಮಿಸಲು ಏಕಾಂತವಾದ ಸ್ಥಳವನ್ನು ಹುಡುಕುತ್ತಾ, ದೋಣಿಯನ್ನು ಹತ್ತಿ ಗಲಿಲಾಯ ಸಮುದ್ರವನ್ನು ದಾಟುತ್ತಿದ್ದರು. ಆದರೆ ಜನರ ದೊಡ್ಡ ಗುಂಪು ಓಡೋಡಿ ಬಂದು ದೋಣಿಯು ಸೇರುವ ಮೊದಲೇ ಆಚೇ ದಡದಲ್ಲಿ ಒಟ್ಟುಸೇರಿತ್ತು. ಯೇಸು ಹೇಗೆ ಪ್ರತಿಕ್ರಿಯಿಸಿದನು? “ದೋಣಿಯಿಂದ ಕೆಳಗೆ ಇಳಿದಾಗ ಅವನು ಜನರ ದೊಡ್ಡ ಗುಂಪನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗೆ ಇದ್ದಾರಲ್ಲ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.” (ಮಾರ್ಕ 6:31-34) ಇಲ್ಲಿ ಕೂಡ, ಯೇಸು ಜನರ ಶೋಚನೀಯ ಆಧ್ಯಾತ್ಮಿಕ ಸ್ಥಿತಿಯನ್ನು ನೋಡಿ ‘ಕನಿಕರಪಟ್ಟನು.’ “ಕುರುಬನಿಲ್ಲದ ಕುರಿಗಳ ಹಾಗೆ” ಇದ್ದ ಅವರು ಆಧ್ಯಾತ್ಮಿಕವಾಗಿ ಹಸಿದಿದ್ದರು ಮತ್ತು ತಮ್ಮ ಆರೈಕೆಯನ್ನು ತಾವೇ ಮಾಡಿಕೊಳ್ಳಬೇಕಿತ್ತು. ಅಲ್ಲಿ ಅವರಿಗೆ ಸಾರುವಂತೆ ಯೇಸುವನ್ನು ಪ್ರಚೋದಿಸಿದ್ದು ಕನಿಕರವೇ ಹೊರತು, ಕರ್ತವ್ಯ ಅಥವಾ ಹಂಗಿನ ಪ್ರಜ್ಞೆಯಲ್ಲ.
17, 18. (ಎ) ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ನಮ್ಮನ್ನು ಯಾವುದು ಪ್ರೇರಿಸುತ್ತದೆ? (ಬಿ) ನಾವು ಇತರರಿಗಾಗಿ ಕನಿಕರವನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು?
17 ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಯೇಸುವಿನ ಹಿಂಬಾಲಕರಾಗಿರುವ ನಮ್ಮನ್ನು ಯಾವುದು ಪ್ರೇರಿಸುತ್ತದೆ? ಈ ಪುಸ್ತಕದ 9ನೇ ಅಧ್ಯಾಯದಲ್ಲಿ ನಾವು ಪರಿಗಣಿಸಿರುವಂತೆ, ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಆಜ್ಞೆ ಹಾಗೂ ಜವಾಬ್ದಾರಿ ನಮಗಿದೆ. (ಮತ್ತಾಯ 28:19, 20; 1 ಕೊರಿಂಥ 9:16) ಆದರೆ, ಕೇವಲ ಕರ್ತವ್ಯ ಯಾ ಹಂಗಿನ ದೃಷ್ಟಿಯಿಂದ ನಾವು ಈ ಕೆಲಸದಲ್ಲಿ ಪಾಲ್ಗೊಳ್ಳಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವನ ಮೇಲಿನ ಪ್ರೀತಿಯೇ, ಆತನ ರಾಜ್ಯದ ಕುರಿತಾದ ಸುವಾರ್ತೆ ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಯಾರು ನಮಗಿಂತ ಭಿನ್ನ ನಂಬಿಕೆಗಳನ್ನು ಹೊಂದಿರುತ್ತಾರೋ ಆ ಜನರ ಮೇಲಿನ ಕನಿಕರ ಸಹ ಸಾರುವಂತೆ ನಮ್ಮನ್ನು ಪ್ರೇರಿಸುತ್ತದೆ. (ಮಾರ್ಕ 12:28-31) ಹಾಗಾದರೆ, ನಾವು ಇತರರಿಗಾಗಿ ಕನಿಕರವನ್ನು ಬೆಳೆಸಿಕೊಳ್ಳುವುದು ಹೇಗೆ?
18 ಯೇಸು ಜನರನ್ನು ಹೇಗೆ ವೀಕ್ಷಿಸಿದನೋ ಹಾಗೆಯೇ ನಾವು ವೀಕ್ಷಿಸುವ ಅಗತ್ಯವಿದೆ. ಅವನು, ಜನರು ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಂತೆ’ ಇದ್ದಾರೆ ಎಂದು ಹೇಳಿದನು. ಕಳೆದುಹೋಗಿರುವ ಕುರಿಯೊಂದು ನಿಮಗೆ ಸಿಕ್ಕಿದೆಯೆಂದು ನೆನಸಿ. ಹಸಿರು ಹುಲ್ಲುಗಾವಲಿನೆಡೆಗೆ ಮತ್ತು ನೀರಿನೆಡೆಗೆ ನಡೆಸಬಲ್ಲ ಕುರುಬನಿಲ್ಲದೆ ಆ ಬಡ ಪ್ರಾಣಿಯು ತುಂಬ ಹಸಿದು ಬಾಯಾರಿದೆ. ಆ ಕುರಿಯನ್ನು ನೋಡುವಾಗ ನಿಮಗೆ ಅನುಕಂಪ ಹುಟ್ಟುವುದಿಲ್ಲವೇ? ಅದಕ್ಕೆ ಆಹಾರ ಹಾಗೂ ನೀರನ್ನು ನೀಡಲು ನೀವು ನಿಮ್ಮಿಂದಾದದ್ದೆಲ್ಲವನ್ನೂ ಮಾಡುವುದಿಲ್ಲವೇ? ಸುವಾರ್ತೆಯನ್ನು ಇನ್ನೂ ತಿಳಿಯದಿರುವ ಅನೇಕ ಜನರು ಆ ಕುರಿಯಂತಿದ್ದಾರೆ. ಅವರು ಸುಳ್ಳು ಧಾರ್ಮಿಕ ಕುರುಬರಿಂದ ಅಲಕ್ಷಿಸಲ್ಪಟ್ಟು ಆಧ್ಯಾತ್ಮಿಕವಾಗಿ ಹಸಿದು ಬಾಯಾರಿದ್ದಾರೆ. ಭವಿಷ್ಯದ ಕುರಿತ ನಿಜ ನಿರೀಕ್ಷೆ ಅವರಿಗಿಲ್ಲ. ಅವರಿಗೇನು ಅಗತ್ಯವಾಗಿದೆಯೋ ಅದು ಅಂದರೆ, ದೇವರ ವಾಕ್ಯದಲ್ಲಿ ಕಂಡುಬರುವ ಪೌಷ್ಟಿಕ ಆಧ್ಯಾತ್ಮಿಕ ಆಹಾರ ಹಾಗೂ ಸತ್ಯದ ನೀರು ನಮ್ಮ ಬಳಿ ಇದೆ. (ಯೆಶಾಯ 55:1, 2) ನಮ್ಮ ಸುತ್ತಲಿರುವ ಜನರ ಆಧ್ಯಾತ್ಮಿಕ ಅಗತ್ಯಗಳನ್ನು ನೋಡುವಾಗ ನಮ್ಮ ಹೃದಯದಲ್ಲಿ ಅವರ ಬಗ್ಗೆ ಅನುಕಂಪ ಹುಟ್ಟುತ್ತದೆ. ಯೇಸುವಿನಂತೆ ನಾವು ಜನರ ಬಗ್ಗೆ ಆಳವಾಗಿ ಚಿಂತಿಸುವಲ್ಲಿ, ರಾಜ್ಯದ ನಿರೀಕ್ಷೆಯನ್ನು ಅವರೊಂದಿಗೆ ಹಂಚಿಕೊಳ್ಳಲು ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುವೆವು.
19. ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಅರ್ಹನಾದ ಬೈಬಲ್ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಲು ನಾವೇನು ಮಾಡಬಹುದು?
19 ಯೇಸುವಿನ ಮಾದರಿಯನ್ನು ಅನುಸರಿಸುವಂತೆ ನಾವು ಇತರರಿಗೆ ಹೇಗೆ ಸಹಾಯ ಮಾಡಬಲ್ಲೆವು? ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಅರ್ಹನಾದ ಬೈಬಲ್ ವಿದ್ಯಾರ್ಥಿಯನ್ನು ನಾವು ಪ್ರೋತ್ಸಾಹಿಸಲು ಬಯಸುತ್ತೇವೆ ಎಂದಿಟ್ಟುಕೊಳ್ಳಿ. ಅಥವಾ ಶುಶ್ರೂಷೆಯಲ್ಲಿ ಪುನಃ ಒಮ್ಮೆ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ನಿಷ್ಕ್ರಿಯನಾದ ವ್ಯಕ್ತಿಗೆ ನಾವು ಸಹಾಯ ಮಾಡಲು ಬಯಸುತ್ತೇವೆ ಎಂದಿಟ್ಟುಕೊಳ್ಳಿ. ಅಂಥವರಿಗೆ ನಾವು ಹೇಗೆ ನೆರವು ನೀಡಬಹುದು? ನಾವು ಅವರ ಹೃದಯವನ್ನು ಪ್ರೇರಿಸುವ ಅಗತ್ಯವಿದೆ. ಯೇಸು ಪ್ರಥಮವಾಗಿ ಜನರ ಮೇಲೆ ‘ಕನಿಕರಪಟ್ಟನು’ ತದನಂತರ ಅವರಿಗೆ ಬೋಧಿಸಿದನು ಎಂಬುದನ್ನು ಜ್ಞಾಪಿಸಿಕೊಳ್ಳಿ. (ಮಾರ್ಕ 6:34) ಆದ್ದರಿಂದ ಕನಿಕರವನ್ನು ಬೆಳೆಸಿಕೊಳ್ಳುವಂತೆ ನಾವು ಅವರಿಗೆ ಸಹಾಯ ಮಾಡುವಲ್ಲಿ, ಯೇಸುವಿನಂತಿರಲು ಹಾಗೂ ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಅವರ ಹೃದಯವೇ ಅವರನ್ನು ಪ್ರೇರಿಸಬಲ್ಲದು. ನಾವು ಅವರಿಗೆ ಹೀಗೆ ಕೇಳಬಹುದು: ‘ರಾಜ್ಯ ಸಂದೇಶವನ್ನು ಸ್ವೀಕರಿಸಿದ್ದರಿಂದ ನಿಮ್ಮ ಜೀವನ ಹೇಗೆ ಸುಧಾರಣೆಗೊಂಡಿದೆ? ಈ ಸಂದೇಶವನ್ನು ಇನ್ನೂ ತಿಳಿಯದಿದ್ದವರ ಕುರಿತೇನು? ಸುವಾರ್ತೆ ಅವರಿಗೂ ಅವಶ್ಯವಿಲ್ಲವೇ? ಅವರಿಗೆ ಸಹಾಯ ಮಾಡಲು ನೀವೇನು ಮಾಡಬಲ್ಲಿರಿ?’ ಹಾಗಿದ್ದರೂ, ದೇವರ ಮೇಲಿನ ಪ್ರೀತಿ ಮತ್ತು ಆತನನ್ನು ಆರಾಧಿಸುವ ಬಯಕೆಯೇ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಬಲವಾದ ಪ್ರಚೋದನೆಯಾಗಿದೆ.
20. (ಎ) ಯೇಸುವಿನ ಹಿಂಬಾಲಕರಾಗಿರುವುದರಲ್ಲಿ ಏನು ಒಳಗೂಡಿದೆ? (ಬಿ) ಮುಂದಿನ ಅಧ್ಯಾಯದಲ್ಲಿ ಏನನ್ನು ಪರಿಗಣಿಸಲಾಗುವುದು?
20 ಯೇಸುವಿನ ಹಿಂಬಾಲಕರಾಗಿರುವುದೆಂದರೆ, ಅವನ ಬೋಧನೆಗಳನ್ನು ಇತರರಿಗೆ ತಿಳಿಸುವುದು ಹಾಗೂ ಅವನ ಕಾರ್ಯಗಳನ್ನು ನಕಲುಮಾಡುವುದಷ್ಟೇ ಅಲ್ಲ. ಅವನಲ್ಲಿದ್ದ “ಮನೋಭಾವ”ವನ್ನು ನಾವು ಬೆಳೆಸಿಕೊಳ್ಳಬೇಕು. (ಫಿಲಿಪ್ಪಿ 2:5) ಯೇಸುವಿನ ಮಾತು ಹಾಗೂ ಕ್ರಿಯೆಗಳಲ್ಲಿ ಕಂಡುಬರುವ ಅವನ ಯೋಚನೆಗಳು ಹಾಗೂ ಭಾವನೆಗಳನ್ನು ಬೈಬಲ್ ನಮಗೆ ತಿಳಿಯಪಡಿಸುತ್ತಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬೇಕು! “ಕ್ರಿಸ್ತನ ಮನಸ್ಸನ್ನು” ಚೆನ್ನಾಗಿ ತಿಳಿದುಕೊಳ್ಳುವಲ್ಲಿ ಅನುಕಂಪ ಹಾಗೂ ಹೃತ್ಪೂರ್ವಕ ಕನಿಕರವನ್ನು ಬೆಳೆಸಿಕೊಳ್ಳಲು, ಹೀಗೆ ಜನರನ್ನು ಯೇಸು ಹೇಗೆ ಉಪಚರಿಸಿದನೋ ಹಾಗೆಯೇ ಉಪಚರಿಸಲು ಹೆಚ್ಚು ಶಕ್ತರಾಗುವೆವು. (1 ಕೊರಿಂಥ 2:16) ಮುಂದಿನ ಅಧ್ಯಾಯದಲ್ಲಿ, ನಿರ್ದಿಷ್ಟವಾಗಿ ತನ್ನ ಹಿಂಬಾಲಕರಿಗೆ ಯೇಸು ತೋರಿಸಿದ ಪ್ರೀತಿಯ ಭಿನ್ನ ವಿಧಗಳನ್ನು ನಾವು ಪರಿಗಣಿಸಲಿದ್ದೇವೆ.
a ‘ಕನಿಕರಪಟ್ಟನು’ ಎಂದು ಭಾಷಾಂತರಿಸಲಾದ ಗ್ರೀಕ್ ಪದವು ಕರುಣೆಯ ಭಾವನೆಯನ್ನು ವ್ಯಕ್ತಪಡಿಸುವ ಗ್ರೀಕ್ ಪದಗಳಲ್ಲೇ ಶ್ರೇಷ್ಠ ಪದವಾಗಿದೆ. ಈ ಪದವು “ಕಷ್ಟಗಳನ್ನು ನೋಡಿದಾಗ ಮೂಡುವ ಅನುಕಂಪವನ್ನು ಮಾತ್ರವಲ್ಲ, ಉಪಶಮನ ನೀಡುವ ಮತ್ತು ಕಷ್ಟವನ್ನು ತೊಲಗಿಸುವ ಬಲವಾದ ಬಯಕೆಯನ್ನೂ” ಸೂಚಿಸುತ್ತದೆ ಎಂಬದಾಗಿ ಪರಾಮರ್ಶನ ಗ್ರಂಥವೊಂದು ತಿಳಿಸುತ್ತದೆ.
b “ಅನುಕಂಪ” ಎಂಬದಾಗಿ ಭಾಷಾಂತರಿಸಲ್ಪಟ್ಟ ಗ್ರೀಕ್ ವಿಶೇಷಣದ ಅಕ್ಷರಾರ್ಥ, “ಇನ್ನೊಬ್ಬ ವ್ಯಕ್ತಿಯೊಂದಿಗೆ ಕಷ್ಟಾನುಭವಿಸುವುದು” ಎಂದಾಗಿದೆ.