ಹಿರಿಯರೇ—ದೇವರ ಮಂದೆಯನ್ನು ಮಮತೆಯಿಂದ ಪಾಲಿಸಿರಿ!
“ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು.”—1 ಥೆಸಲೋನಿಕ 2:7.
1. ಯೆಹೋವನ ಪ್ರತಿಯೊಬ್ಬ ನಿಷ್ಠೆಯುಳ್ಳ ಸಾಕ್ಷಿಯು ಸುಭದ್ರತೆಯ ಅನಿಸಿಕೆಯನ್ನು ಪಡೆಯ ಸಾಧ್ಯವಿದೆಯೇಕೆ?
ಯೆಹೋವನು ಮಹಾ ಕುರುಬನು, ತನ್ನ ಕುರಿಸದೃಶ ಸೇವಕರಿಗೆ ಆತನು ಹೇರಳವಾದ ಒದಗಿಸುವಿಕೆಯನ್ನು ಮಾಡುತ್ತಾನೆ ಮತ್ತು ತನ್ನ ಪವಿತ್ರ ನಾಮಕ್ಕೋಸ್ಕರ “ನೀತಿಯ ಮಾರ್ಗದಲ್ಲಿ” ಅವರನ್ನು ನಡಿಸುತ್ತಾನೆ. ಆದಕಾರಣ, ಯಾರು ಆತನ ಚಿತ್ತವನ್ನು ಮಾಡುತ್ತಾರೋ ಅವರು ಯಾವ ಕೇಡಿಗೂ ಅಂಜುವ ಅಗತ್ಯವಿಲ್ಲ ಮತ್ತು ಅವರು ತಮ್ಮ ಕರುಣಾಮಯ ದೇವರ ಕಡೆಗೆ ಸಾಂತ್ವನಕ್ಕಾಗಿ ನೋಡ ಸಾಧ್ಯವಿದೆ. ನಿಷ್ಠೆಯುಳ್ಳ ಪ್ರತಿಯೊಬ್ಬ ಯೆಹೋವನ ಸಾಕ್ಷಿಗೆ ದೇವರ ಪ್ರೀತಿಯುಳ್ಳ ಪರಾಮರಿಕೆಯ ಕೆಳಗೆ ಸುಭದ್ರವಾಗಿರುವುದಕ್ಕೆ ಸಕಾರಣವದೆ.—ಕೀರ್ತನೆ 23:1-4.
2. ದೇವರ ಪ್ರಭಾವದ ಪ್ರತಿಬಿಂಬದಂತಿರುವ ಯೇಸು, ಯಾವ ಗುಣಗಳನ್ನು ಪ್ರದರ್ಶಿಸುತ್ತಾನೆ?
2 ಯೇಸು ಕ್ರಿಸ್ತನು “[ದೇವರ] ಪ್ರಭಾವದ ಪ್ರತಿಬಿಂಬವೂ ಆತನ ತತ್ವದ ಮೂರ್ತಿಯೂ” ಆಗಿರುತ್ತಾನೆ. (ಇಬ್ರಿಯ 1:1-4) ಆದ್ದರಿಂದ, ಒಳ್ಳೇ ಕುರುಬನಾದ ಯೇಸು ಸಹಾ, ಪ್ರೀತಿ ಮತ್ತು ಕನಿಕರವನ್ನು ಪ್ರದರ್ಶಿಸುತ್ತಾನೆ. (ಯೋಹಾನ 10:14, 15) ದೃಷ್ಟಾಂತಕ್ಕಾಗಿ, ಒಂದು ಸಂದರ್ಭದಲ್ಲಿ, “ಆತನು ಹೊರಗೆ ಬಂದು ಬಹು ಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶ ಮಾಡುತ್ತಿದ್ದನು.”—ಮಾರ್ಕ 6:34.
3. (ಎ) ಯೆಹೋವ ದೇವರು ಮತ್ತು ಯೇಸು ಕ್ರಿಸ್ತರಂತೆ ಕ್ರೈಸ್ತ ಉಪಕುರುಬರು ಯಾವ ಗುಣಗಳನ್ನು ಪ್ರದರ್ಶಿಸಬೇಕು? (ಬಿ) ಯಾವ ಸೂಚನೆ ಮತ್ತು ಎಚ್ಚರಿಕೆಯನ್ನು ಅಪೊಸ್ತಲ ಪೌಲನು ಮೇಲ್ವಿಚಾರಕರಿಗೆ ಕೊಟ್ಟನು?
3 ಕ್ರೈಸ್ತರೆಲ್ಲರೂ ‘ದೇವರನ್ನು ಅನುಸರಿಸುವವರಾಗಿದ್ದು ಕ್ರಿಸ್ತನು ತಮ್ಮನ್ನು ಪ್ರೀತಿಸಿದ ಹಾಗೆ ಪ್ರೀತಿಯಲ್ಲಿ ನಡೆದು’ ಕೊಳ್ಳಬೇಕು. (ಎಫೆಸ 5:1, 2) ಹೀಗೆ ಅವರು, ಪ್ರೀತಿಸುವವರೂ ಕನಿಕರವುಳ್ಳವರೂ ಆಗಿರಬೇಕು. ದೇವರ ಮಂದೆಯ ಉಪಕುರುಬರ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಅಪೊಸ್ತಲ ಪೌಲನು ಅಂದದ್ದು: “ದೇವರು ತನ್ನ ಸ್ವಕುಮಾರನ ರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಮೇಲ್ವಿಚಾರಕರಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು. ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.”—ಅಪೋಸ್ತಲರ ಕೃತ್ಯ 20:28-30.
4. (ಎ) ತಕ್ಕ ಸಮಯದಲ್ಲಿ, ಅಪೊಸ್ತಲರ ಕೃತ್ಯ 20:29, 30ರ ಪೌಲನ ಎಚ್ಚರಿಕೆಗೆ ಅನುಸಾರವಾಗಿ ಏನು ಸಂಭವಿಸಿತು? (ಬಿ) ಯಾವ ಪ್ರಶ್ನೆಗಳು ಈಗ ಗಮನಕ್ಕೆ ಅರ್ಹವಾಗಿವೆ?
4 ತಕ್ಕ ಸಮಯದಲ್ಲಿ, ಧರ್ಮಭಷ್ಟರಾದ “ಕ್ರೂರವಾದ ತೋಳಗಳು” ಗೋಚರಿಸಿದವು ಮತ್ತು ಅವರು “ಹಿಂಡನ್ನು ಕನಿಕರಿಸಲಿಲ್ಲ.” ಆದರೆ, ಯೆಹೋವನ ಸಾಕ್ಷಿಗಳ ನಡುವೆ ಇರುವ ಹಿರಿಯರು ಅಂಥಾ ಕ್ರೂರತೆಯನ್ನು ತೋರಿಸದೆ ಇರುವದಕ್ಕಾಗಿ ನಾವೆಷ್ಟು ಸಂತೋಷಿತರಾಗಿರಬೇಕು! ಆದರೂ, ಈ ಆತ್ಮ-ನೇಮಿತ ಮೇಲ್ವಿಚಾರಕರಿಂದ ಜೊತೆ ಕ್ರೈಸ್ತರು ಯಾವ ರೀತಿಯ ಉಪಚಾರವನ್ನು ಅಪೇಕ್ಷಿಸಬಹುದು? ಮತ್ತು ಅಂಥಾ ನಿಯುಕ್ತರು ಯೆಹೋವನ ಜನರೆಡೆಗೆ ಮಮತೆಯನ್ನು ತೋರಿಸುವುದು ಹೇಗೆ?
ಮಂದೆಯ ಮೇಲೆ ದೊರೆತನವಲ್ಲ
5. (ಎ) ಐಹಿಕ ಅಧಿಪತಿಗಳು ಹೆಚ್ಚಾಗಿ ತಮ್ಮ ಪ್ರಜೆಗಳನ್ನು ಹೇಗೆ ಉಪಚರಿಸುತ್ತಾರೆ? (ಬಿ) ತನ್ನ ಹಿಂಬಾಲಕರ ನಡುವೆ ಬಲಾತ್ಕಾರಕ್ಕೆ ಎಡೆಯಿಲ್ಲವೆಂದು ಯೇಸು ಹೇಗೆ ತೋರಿಸಿದನು?
5 ಕ್ರೈಸ್ತ ಹಿರಿಯರು ನಮ್ಮನ್ನು ಕನಿಕರದಿಂದ ಸತ್ಕರಿಸುವಂತೆ ನಾವು ನ್ಯಾಯವಾಗಿ ಅಪೇಕ್ಷಿಸ ಸಾಧ್ಯವಿದೆ. ಹೆಚ್ಚಾಗಿ ತಮ್ಮ ಪ್ರಜೆಗಳ ಮೇಲೆ ದಬ್ಬಾಳಿಕೆ ನಡಿಸುವ ಲೋಕದ ಅಧಿಪತಿಗಳಂತೆ ಅವರಿಲ್ಲ. ಉದಾಹರಣೆಗೆ, ಫ್ರ್ಯಾಂಕರ ರಾಜ (ಸಾ.ಶ. 768-814ರಲ್ಲಿ ಆಳಿದ) ಷಾಲ್ಮ್ಯೆನ್, ಸ್ಯಾಕ್ಸನ್ರನ್ನು ಮರಣ ವೇದನೆಯ ಕೆಳಗೆ ದೀಕ್ಷಾಸ್ನಾನ ಪಡೆಯುವಂತೆ ಬಲಾತ್ಕರಿಸಿದ್ದನು, ಲೆಂಟ್ ಹಬ್ಬದ ಉಪವಾಸವನ್ನು ಮುರಿದವರಿಗೆ ಅತ್ಯಂತ ಉಗ್ರ ಶಿಕ್ಷೆಯನ್ನು ವಿಧಿಸುತ್ತಿದ್ದನು. ಮನವೊಪ್ಪಿಸುವ ಬದಲು ಎಲ್ಲೆಲ್ಲಿಯೂ ಬಲಾತ್ಕಾರವನ್ನು ಬಳಸಲಾಗುತ್ತಿತ್ತು.” (ಹಿಸ್ಟ್ರಿ ಆಫ್ ದ ಕ್ರಿಶ್ಚನ್ ಚರ್ಚ್, ವಿಲ್ಯಂ ಜೋನ್ಸ್ರಿಂದ.) ಯೇಸುವಿನ ಹಿಂಬಾಲಕರ ನಡುವೆ ಬಲಾತ್ಕಾರಕ್ಕೆ ಎಡೆಯಿರಲಿಲ್ಲ ಯಾಕಂದರೆ ಆತನಂದದ್ದು: “ಅನ್ಯಜನರನ್ನಾಳುವವರು ಅವರ ಮೇಲೆ ದೊರೆತನ ಮಾಡುತ್ತಾರೆ, ಮತ್ತು ದೊಡ್ಡ ಜನರು ಬಲಾತ್ಕಾರದಿಂದ ಅಧಿಕಾರ ನಡಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ನಿಮ್ಮಲ್ಲಿ ಹಾಗಿರಬಾರದು. ಆದರೆ ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಬೇಕು; ನಿಮ್ಮಲ್ಲಿ ಮೊದಲನೆಯವನಾಗ ಬೇಕೆಂದಿರುವವನು ನಿಮ್ಮ ಆಳಾಗಬೇಕು. ಹಾಗೆಯೇ ಮನುಷ್ಯ ಕುಮಾರನು ಸೇವೆ ಮಾಡಿಸಿಕೊಳ್ಳಲಿಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು.”—ಮತ್ತಾಯ 20:25-28, ಆನ್ ಅಮೆರಿಕನ್ ಟ್ರಾನ್ಸ್ಲೇಶನ್.
6. (ಎ) ಹಿರಿಯರ ಸಂಬಂಧದಲ್ಲಿ, ಯಾವ ಮೂಲಭೂತ ಸಂಗತಿಗಳು ಎದ್ದು ನಿಲ್ಲುತ್ತವೆ? (ಬಿ) ಹಿರಿಯರಿಂದ ಏನನ್ನು ಅಪೇಕ್ಷಿಸಲು ಸಭೆಗೆ ಸಕಾರಣವದೆ ಮತ್ತು ಈ ಪುರುಷರು ತಮ್ಮನ್ನು ಹೇಗೆ ವೀಕ್ಷಿಸಿಕೊಳ್ಳಬೇಕು?
6 ಒಬ್ಬ ಕ್ರೈಸ್ತ ಪುರುಷನು ‘ಮೇಲ್ವಿಚಾರಕನ ಸ್ಥಾನಕ್ಕೆ ಪ್ರಯತ್ನಿಸುವುದಾದರೆ ಅವನಿಗೆ ಉತ್ತಮ ಕೆಲಸದ ಬಯಕೆ ಇದೆ.’ (1 ತಿಮೋಥಿ 3:1, NW) ನಾವಿದನ್ನು ಮತ್ತು ಈಗಲೇ ತಿಳಿಸಿದ ಯೇಸುವಿನ ಸೂಚನೆಯನ್ನು ಗಮನಿಸುವುದಾದರೆ, ಈ ಮೂಲಭೂತ ಸಂಗತಿಗಳು ಎದ್ದು ನಿಲ್ಲುತ್ತವೆ: (1) ಕ್ರೈಸ್ತ ಹಿರಿಯರು ಇತರರ ಮೇಲೆ ದಬ್ಬಾಳಿಕೆ ನಡಿಸಬಾರದು. (2) ಯೇಸುವಿನ ಹಿಂಬಾಲಕರ ನಡುವೆ ಜವಾಬ್ದಾರಿಕೆಯನ್ನು ಹೊರುವವರು ಅವರ ಸೇವಕರಾಗಿರಬೇಕು, ಯಜಮಾನರಲ್ಲ. (3) ಮೇಲ್ವಿಚಾರಕನ ಸ್ಥಾನಕ್ಕೆ ಪ್ರಯತ್ನಿಸುವ ಪುರುಷರು ಅದನ್ನು ಒಂದು “ಉತ್ತಮ ಕೆಲಸವಾಗಿ” ನೋಡಬೇಕು, ಉಚ್ಛ ಸ್ಥಾನವಾಗಿ ಅಲ್ಲ. (ಜ್ಞಾನೋಕ್ತಿ 25:27; 1 ಕೊರಿಂಥ 1:31) “ಹಿರಿಯ” ಎಂಬ ನಾಮವು ಯಾವನೇ ಪುರುಷನನ್ನು ಬೇರೆ ಯೆಹೋವನ ಆರಾಧಕರಿಗಿಂತ ಶ್ರೇಷ್ಟನನ್ನಾಗಿ ಮಾಡುವದಿಲ್ಲ. ಬದಲಾಗಿ, ಎಲ್ಲಾ ಹಿರಿಯರು ಆತ್ಮಿಕವಾಗಿ ಬಲಿತವರೂ, ಅನುಭವಿಗಳೂ, ಪವಿತ್ರ ಸೇವೆಯಲ್ಲಿ ನಾಯಕತ್ವ ವಹಿಸುವ ದೀನ ಪುರುಷರೂ ಆಗಿರುವಂತೆ ಸಭೆಯು ಅಪೇಕ್ಷಿಸುವದಕ್ಕೆ ಸಕಾರಣವದೆ. ನಿಶ್ಚಯವಾಗಿಯೂ ಹಿರಿಯರು ತಮ್ಮನ್ನು ಯೆಹೋವ ದೇವರ, ಯೇಸು ಕ್ರಿಸ್ತನ ಮತ್ತು ಜೊತೆ ಕ್ರೈಸ್ತರ ದೀನ ಸೇವಕರಾಗಿ ವಿಕ್ಷೀಸಿಕೊಳ್ಳಬೇಕು.—ರೋಮಾಪುರ 12:11; ಗಲಾತ್ಯ 5:13; ಕೊಲೊಸ್ಸೆ 3:24.
7. (ಎ) ಇತರರೊಂದಿಗೆ ವ್ಯವಹರಿಸುವಲ್ಲಿ ಹಿರಿಯರು 2 ಕೊರಿಂಥ 1:24ನ್ನು ಹೇಗೆ ಅನ್ವಯಿಸಬೇಕು? (ಬಿ) ಆಡಳಿತಾ ಮಂಡಲಿಯಿಂದ ಬರುವ ಸೂಚನೆಗಳ ಕುರಿತು ಹಿರಿಯರು ಏನು ಮಾಡಬೇಕು?
7 ಇತರರ ಪರವಾಗಿ ದೀನತೆಯಲ್ಲಿ ಸೇವೆ ಮಾಡುವುದು ಹಿರಿಯನನ್ನು ಅವರ ಮೇಲೆ “ದೊರೆತನ” ಮಾಡುವದರಿಂದ ತಡೆಯುತ್ತದೆ. ಮತ್ತು ಪೌಲನಂತಹ ಮನೋಭಾವವನ್ನು ನಮ್ಮ ಮೇಲ್ವಿಚಾರಕರು ಪ್ರದರ್ಶಿಸುವುದು ಅದೆಷ್ಟು ಒಳ್ಳೆಯದು! ಕೊರಿಂಥದ ಕ್ರೈಸ್ತರಿಗೆ ಅವನಂದದ್ದು: ‘ನಾವು ನಂಬಿಕೆಯ ವಿಷಯದಲ್ಲಿ ನಿಮ್ಮ ಮೇಲೆ ದೊರೆತನ ಮಾಡುವವರಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ.” (2 ಕೊರಿಂಥ 1:24) ಇದಕ್ಕನುಸಾರವಾಗಿ, ಪ್ರೀತಿಯುಳ್ಳ ಮೇಲ್ವಿಚಾರವನ್ನು ನಡಿಸುವವರು ಅನಾವಶ್ಯಕವಾದ ನೇಮವಿಧಿಗಳನ್ನು ಜೊತೆ ವಿಶ್ವಾಸಿಗಳ ಮೇಲೆ ಹೊರಿಸಲಾರರು. ಬದಲಿಗೆ ಯೆಹೋವನ ಸಾಕ್ಷಿಗಳ ನಡುವೆ ಇರುವ ಮೇಲ್ವಿಚಾರಕರು ಶಾಸ್ತ್ರೀಯ ತತ್ವಗಳಿಂದ ನಡಿಸಲ್ಪಟ್ಟವರಾಗಿದ್ದಾರೆ ಮತ್ತು ದಯೆಯುಳ್ಳ, ಸಹಾಯಕಾರಿ ಸೇವೆಯನ್ನು ನೀಡುತ್ತಾರೆ. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಪಡೆಯುವ ಸೂಚನೆಗಳನ್ನು ಶೀಘ್ರವಾಗಿ ಅನ್ವಯಿಸುವ ಮೂಲಕವೂ ಅವರು ದೇವರ ಮಂದೆಗೆ ಆಳವಾದ ಚಿಂತೆಯನ್ನು ತೋರಿಸುತ್ತಾರೆ.—ಅಪೋಸ್ತಲರ ಕೃತ್ಯ 15ನೇ ಅಧ್ಯಾಯ.
8. ಜೊತೆ ಕ್ರೈಸ್ತರ ಕಡೆಗೆ ಪೌಲನಿಗೆ ಯಾವ ಮನೋಭಾವವಿತ್ತು, ಮತ್ತು ಇದು 20ನೇ ಶತಮಾನದ ಹಿರಿಯರನ್ನು ಹೇಗೆ ಪ್ರಭಾವಿಸಬೇಕು?
8 ದೇವರ ಮಂದೆಯ ಕಡೆಗೆ ಪೌಲನಿಗೆ ಮಮತೆಯುಕ್ತ ಚಿಂತೆ ಇದ್ದದರಿಂದ ಅವನು, ಥೆಸಲೋನಿಕದ ಕ್ರೈಸ್ತರಿಗೆ ಹೀಗೆ ಹೇಳಶಕ್ತನಾದನು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡೆವು. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೋನಿಕ 2:7, 8) ಮೊಲೆಯೂಡುವ ತಾಯಿಯಂತೆ ಪೌಲನು ಕಾರ್ಯ ನಡಿಸಿದ್ದನು: ತಾಯಿ ತನ್ನ ಮಕ್ಕಳನ್ನು ಎಷ್ಟು ಆಳವಾಗಿ ಪ್ರೀತಿಸುತ್ತಾಳೆಂದರೆ ತನ್ನ ಸ್ವಂತ ಅಭಿರುಚಿಗಳಿಗಿಂತ ಮಕ್ಕಳದ್ದನ್ನು ಮುಂದಿಟ್ಟು ಅವರನ್ನು ಮಮತೆಯಿಂದ ಪೋಷಿಸುತ್ತಾಳೆ. ದೇವರ ಮಂದೆಯನ್ನು ಮಮತೆಯಿಂದ ಉಪಚರಿಸುವಂತೆ 20ನೇ ಶತಕದ ಹಿರಿಯರನ್ನು ಇದೆಷ್ಟು ಪ್ರಚೋದಿಸಬೇಕು!
ಪರಿಹಾರ ಮತ್ತು ಚೈತನ್ಯದ ಉಗಮಗಳು
9. ಯೆಹೋವನ ಪ್ರಚಲಿತ ಜನರ ಯಾವ ಪರಿಸ್ಥಿತಿಗಳು ಯೆಶಾಯ 32:1, 2ರಲ್ಲಿ ಮುಂತಿಳಿಸಲ್ಪಟ್ಟಿತ್ತು?
9 ಯೇಸು ಕ್ರಿಸ್ತನ ರಾಜ್ಯಾಡಳಿತದ ಈ ದಿನಕ್ಕೆ ಕೈ ತೋರಿಸುತ್ತಾ ಪ್ರವಾದಿ ಯೆಶಾಯನು, ಒಬ್ಬ ರಾಜನು “ನೀತಿಗನುಸಾರವಾಗಿ ಆಳುವನು” ಮತ್ತು “ರಾಜಪುತ್ರರು” “ನ್ಯಾಯದಿಂದ” ದೊರೆತನ ಮಾಡುವರು ಎಂದು ಮುಂತಿಳಿಸಿದ್ದನು. ಆದಕಾರಣ, ಪ್ರಚಲಿತ ದೇವಪ್ರಭುತ್ವ ಸಂಸ್ಥೆಯ ಹಿರಿಯರು, ಸ್ಥಾಪಿತವಾದ ಸ್ವರ್ಗೀಯ ರಾಜ್ಯದ ಅಭಿರುಚಿಗಳನ್ನು ನಿರ್ವಹಿಸುವವರಾಗಿದ್ದಾರೆ—ರಾಜಯೋಗ್ಯ ಸೇವೆಯಿದು ನಿಶ್ಚಯ! ಈ ಜವಾಬ್ದಾರಿಕೆಯ ಪುರುಷರಿಗೆ ಯೆಶಾಯನ ಮುಂದಿನ ಪ್ರವಾದನಾ ಮಾತುಗಳು ಅನ್ವಯಿಸುತ್ತವೆ: “ಪ್ರತಿಯೊಬ್ಬನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಹಾಗೂ ಬೆಂಗಾವಲಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯೂ ಇರುವನು.”—ಯೆಶಾಯ 32:1, 2.
10. ಯೆಹೋವನ ಸಾಕ್ಷಿಗಳ ನಡುವೆ ಇರುವ ಪ್ರತಿಯೊಬ್ಬ ಹಿರಿಯನು ಯಾವದರ ಉಗಮವಾಗಿರಬೇಕು?
10 ಕ್ರೈಸ್ತ ಪ್ರಪಂಚದ ಜಬರದಸ್ತಿಯ ಧಾರ್ಮಿಕ ಮುಖಂಡರಿಗೆ ಅಸದೃಶವಾಗಿ ಯೆಹೋವನ ಸಾಕ್ಷಿಗಳ ನಡುವಣ ಹಿರಿಯರಾದರೋ ಪರಿಹಾರ ಮತ್ತು ಚೈತನ್ಯದ ಉಗಮಗಳಾಗಿದ್ದಾರೆ. ಹಿರೀ ಪುರುಷರ ಮಂಡಲಿಗಳೋಪಾದಿ ಅವರು, ಶಾಂತಿಯನ್ನು, ನೆಮ್ಮದಿಯನ್ನು ಮತ್ತು ಭದ್ರತೆಯನ್ನು ಯೆಹೋವನ ಸಾಕ್ಷಿಗಳ ನಡುವೆ ಪ್ರವರ್ಧಿಸುತ್ತಾರೆ. ವೈಯಕ್ತಿಕವಾಗಿ ಪ್ರತಿಯೊಬ್ಬ ಹಿರಿಯನು ದೇವರ ಮಂದೆಯನ್ನು ಮಮತೆಯಿಂದ ಪರಿಪಾಲಿಸುವ ಮೂಲಕ ಈ ಉತ್ತಮ ಪರಿಸ್ಥಿತಿಯನ್ನು ತರಲು ನೆರವಾಗಬಹುದು.
ನ್ಯಾಯದಿಂದಲೂ ನೀತಿಯಿಂದಲೂ
11. (ಎ) ಒಂದನೇ ಶತಕದ ಕ್ರೈಸ್ತರ ನಡುವೆ ನೆಲೆಸಿದ್ಧ ಯಾವ ಸಾಮಾನ್ಯ ಪರಿಸ್ಥಿತಿಯು ಇಂದು ಯೆಹೋವನ ಸಾಕ್ಷಿಗಳ ಹೆಚ್ಚಿನ ಸಭೆಗಳಲ್ಲಿ ನೆಲೆಸಿರುತ್ತದೆ? (ಬಿ) ಸಭೆಯ ಕಡೆಗೆ ಮೇಲ್ವಿಚಾರಕರಿಗೆ ಯಾವ ಜವಾಬ್ದಾರಿಕೆ ಇದೆ ಮತ್ತು ಏಕೆ?
11 ಒಂದನೇ ಶತಮಾನದ ಕೆಲವು ಕ್ರೈಸ್ತ ಸಭೆಗಳಲ್ಲಿ ಸಮಸ್ಯೆಗಳು ತಲೆದೋರಿದರೂ, ಅವರ ಸಾಮಾನ್ಯ ಪರಿಸ್ಥಿತಿಯು ಶಾಂತಿ, ಐಕತ್ಯೆ ಮತ್ತು ಸಂತೋಷದ್ದಾಗಿತ್ತು. (1 ಕೊರಿಂಥ 1:10-12; 3:5-9; ಎಫೆಸ 1:2; ಯಾಕೋಬ 2:1-9; 3:2-12; 4:11, 12; 1 ಯೋಹಾನ 1:3, 4) ಒಂದು ಉತ್ತಮ ಆತ್ಮಿಕ ಪರಿಸ್ಥಿತಿಯು ಇಂದು ಸಹಾ ಯೆಹೋವನ ಸಾಕ್ಷಿಗಳ ಹೆಚ್ಚಿನ ಸಭೆಗಳಲ್ಲಿ ನೆಲೆಸಿರುವುದು ದೇವರ ಆಶೀರ್ವಾದದಿಂದಾಗಿ, ಕ್ರಿಸ್ತನ ನಾಯಕತ್ವದಿಂದಾಗಿ, ಸಭಾ ಶಾಂತಿ, ಐಕ್ಯತೆ ಮತ್ತು ಸಂತೋಷವನ್ನು ಖಚಿತಪಡಿಸಲು ಈ ಪುರುಷರು ದೈವಿಕ ಸಹಾಯವನ್ನು ಹುಡುಕುತ್ತಾರೆ ಮತ್ತು ದೇವರ ಸಂಸ್ಥೆಯನ್ನು ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧವಾಗಿರಿಸಲು ದಕ್ಷತೆಯಿಂದ ಪರಿಶ್ರಮಿಸುತ್ತಾರೆ. (ಯೆಶಾಯ 52:11) ಒಂದು ಅಶುದ್ಧವಾದ ಸಂಸ್ಥೆಯು ಎಂದೂ ಶಾಂತಿಯುಕ್ತವೂ ಸಂತೋಷಭರಿತವೂ ಆಗಿರ ಸಾಧ್ಯವಿಲ್ಲ, ಮತ್ತು ಅದಕ್ಕೆ ದೇವರ ಅನುಗ್ರಹವೂ ಆಶೀರ್ವಾದವೂ ಇರಲಾರದು ನಿಶ್ಚಯ. ಕೆಟ್ಟತನವನ್ನು ಸಹಿಸಿಕೊಳ್ಳುವದಕ್ಕೆ ಅವನು ತೀರಾ “ಅತಿ ಪವಿತ್ರ ದೃಷ್ಟಿಯುಳ್ಳವನು.” (ಹಬಕ್ಕೂಕ 1:13) ಹೀಗೆ, ಇತರ ವಿಷಯಗಳಾದ, ನ್ಯಾಯನಿರ್ಣಾಯಕ ವಿಷಯಗಳನ್ನೂ ಹಿರಿಯರು ನ್ಯಾಯದಿಂದ, ಶಾಸ್ತ್ರೀಯ ತತ್ವಕ್ಕನುಸಾರ ನಿರ್ವಹಿಸುವಂತೆ ಅಪೇಕ್ಷಿಸಲ್ಪಡುತ್ತಾರೆ. ಆದರೆ ಅಂಥಾ ಖಟ್ಲೆಗಳನ್ನು ನಿರ್ವಹಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳೇನು?
12. ಬೈಬಲ್ ನಿಯಮಗಳನ್ನು ಅಥವಾ ತತ್ವಗಳನ್ನು ಉಲ್ಲಂಘಿಸದ ವೈಯಕ್ತಿಕ ರೀತಿಯ ಕಾರ್ಯಾಧಿಗಳಲ್ಲಿ ತಲೆಹಾಕಲು ಹಿರಿಯರಿಂದ ಅಪೇಕ್ಷಿಸಲ್ಪಡದಿದ್ದರೂ, ಗಲಾತ್ಯ 6:1ರ ನೋಟದಲ್ಲಿ ಏನು ಮಾಡತಕ್ಕದ್ದು?
12 ಒಂದು ವಿಷಯವೇನಂದರೆ, ವೈಯಕ್ತಿಕ ಮನಸ್ತಾಪಗಳು ಒಳಗೂಡಿರುವ ವಿಷಯಗಳಲ್ಲಿ, ವ್ಯಕ್ತಿಗಳು ಖಾಸಗಿಯಾಗಿ ತಮ್ಮ ಮನಸ್ತಾಪಗಳನ್ನು ಪರಿಹರಿಸಿಕೊಳ್ಳ ಸಾಧ್ಯವಿರಬಹುದು. (ಮತ್ತಾಯ 18:15-17) ಹಿರಿಯರು ನಮ್ಮ ‘ನಂಬಿಕೆಯ ಯಜಮಾನರು ಆಗಿರುವದಿಲ್ಲ’ ಅದ್ದರಿಂದ, ಬೈಬಲಿನ ನಿಯಮ ಅಥವಾ ತತ್ವಗಳ ಗಂಭೀರ ಉಲ್ಲಂಘನೆಯಾಗಿರದ ಪೂರ್ತಿ ವೈಯಕ್ತಿಕ ರೀತಿಯ ಕಾರ್ಯಾಧಿಗಳಲ್ಲಿ ತಲೆಹಾಕಲು ಅವರಿಂದ ಅಪೇಕ್ಷಿಸಲ್ಪಡುವದಿಲ್ಲ. ಆದರೂ, ಒಬ್ಬ ವ್ಯಕ್ತಿಯು ‘ಅರಿವಿಲ್ಲದೆ ಯಾವುದೋ ದೋಷದಲ್ಲಿ ಸಿಕ್ಕಿರುವ’ ರುಜುವಾತು ಅಲ್ಲಿದ್ದರೆ, ಆತ್ಮಿಕವಾಗಿ ಯೋಗ್ಯತೆ ಪಡೆದವರು “ಅಂಥವನನ್ನು ಶಾಂತ ಭಾವದಿಂದ ತಿದ್ದಿ ಸರಿಮಾಡಲು ಪ್ರಯತ್ನಿಸಬೇಕು.”—ಗಲಾತ್ಯ 6:1.
13. ಹಿರಿಯರು ಕ್ರಿಯೆನಡಿಸುವುದು ದುರ್ನಡತೆಯ ರುಜುವಾತಿನ ಮೇಲೆ ಮಾತ್ರವೇ ಗಾಳಿ ಸುದ್ದಿಯ ಮೇಲಲ್ಲವೆಂದು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ?
13 ಹಿರಿಯರು “ನ್ಯಾಯದಿಂದ” ಸೇವೆ ಮಾಡಬೇಕು, ಯಾವಾಗಲೂ ನಿಷ್ಪಕ್ಷಪಾತಿಗಳಾಗಿರಬೇಕು. ಹೀಗೆ ಅವರು, ಕೇವಲ ಗಾಳಿಸುದ್ಧಿಯ ಮೇಲಲ್ಲ, ರುಜುವಾತಿನ ಮೇಲೆ ಕಾರ್ಯ ನಡಿಸಬೇಕು. ಪೌಲನು ಸೂಚಿಸಿದ್ದು: “ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತು ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡ.” (1 ತಿಮೋಥಿ 5:19) ಯೆಹೋವನ ಮಟ್ಟಕ್ಕನುಸಾರವಾಗಿ, ಪುರಾತನ ಇಸ್ರಾಯೇಲಿನಲ್ಲಿ ವಧಾರ್ಹವಾದ ಅಪರಾಧ ಮಾಡಿದ ವ್ಯಕ್ತಿಗೆ ಮರಣ ಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳು’ ಬೇಕಿತ್ತು. ಅದಲ್ಲದೆ ಅಪರಾಧಿಗೆ ತನ್ನ ದೂರುಗಾರರನ್ನು ಎದುರಿಸುವ ಸಂದರ್ಭವಿತ್ತೆಂಬದು ವ್ಯಕ್ತ ಮತ್ತು ಸಾಕಷ್ಟು ರುಜುವಾತು ಅಲ್ಲಿದ್ದರೆ ‘ಅಪರಾಧಿಯನ್ನು ಕೊಲ್ಲುವುದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಹಾಕಬೇಕಿತ್ತು.’—ಧರ್ಮೋಪದೇಶ 17:6, 7.
14. (ಎ) ದಿಯೊತ್ರೇಫನು ತಪ್ಪಾಗಿ ಏನನ್ನು ಮಾಡ ಪ್ರಯತ್ನಿಸಿದ್ದನು? (ಬಿ) ನ್ಯಾಯನಿರ್ಣಾಯಕ ವಿಷಯಗಳನ್ನು ನಿರ್ವಹಿಸುವಾಗ ದೇವರು ಹಿರಿಯರಿಂದ ಏನನ್ನು ಅಪೇಕ್ಷಿಸುತ್ತಾನೆ?
14 ನ್ಯಾಯ ನಿರ್ಣಾಯಕ ಕ್ರಿಯೆಗೆ ಪೂರ್ಣ ಶಾಸ್ತ್ರೀಯ ಆಧಾರವು ಇರಲೇ ಬೇಕು. ಸಭಾ ಮೇಲ್ವಿಚಾರಕರು ಸಾ.ಶ. ಒಂದನೇ ಶತಕದ ಆ ದರ್ಪದ ದಿಯೊತ್ರೇಫನಂತೆ ಇರದ್ದಕ್ಕಾಗಿ ನಾವೆಷ್ಟು ಸಂತೋಷಿತರು. ಸಂಚರಣೆ ಸಹೋದರರನ್ನು ಅತಿಥಿ ಸತ್ಕಾರದಿಂದ ಸೇರಿಸಿಕೊಳ್ಳಲು ಬಯಸಿದವರನ್ನು “ಸಭೆಯೊಳಗಿಂದ ಬಹಿಷ್ಕರಿಸಲು” ಅವನು ತಪ್ಪಾಗಿ ಪ್ರಯತ್ನಿಸಿದ್ದನು. ಅಪೊಸ್ತಲ ಯೋಹಾನನು ಇದನ್ನು ಮತ್ತು ಇತರ ದುಷ್ಕ್ರಿಯೆಗಳನ್ನು ಹಗುರವಾಗಿ ವೀಕ್ಷಿಸಲಿಲ್ಲ, ಬದಲಾಗಿ ಎಚ್ಚರಿಸಿದ್ದು: “ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪು ಕೊಡುವೆನು.” (3 ಯೋಹಾನ 9, 10) ಹೀಗೆ, ಪ್ರಚಲಿತ ನ್ಯಾಯ ನಿರ್ಣಾಯಕ ಕಮಿಟಿಯು ತಾವು ತಕ್ಕೊಳ್ಳುವ ಯಾವುದೇ ಬಹಿಷ್ಕಾರದ ಕ್ರಿಯೆಗೆ ಒಂದು ಬೈಬಲ ಆಧಾರವು ಇರುವಂತೆ ಖಾತ್ರಿ ಮಾಡಲೇ ಬೇಕು.a ನಿಶ್ಚಯವಾಗಿಯೂ ದೇವರು, ಕ್ರೈಸ್ತ ಹಿರಿಯರು ಇತರರೊಂದಿಗೆ ವ್ಯವಹರಿಸುವಲ್ಲಿ ನ್ಯಾಯದಿಂದ ವರ್ತಿಸುವಂತೆ ಅಪೇಕ್ಷಿಸುತ್ತಾನೆ. ನಿಶ್ಚಯವಾಗಿ ಯೆಹೋವನ ಐಹಿಕ ಸಂಸ್ಥೆಯ ಕಾರ್ಯಾಧಿಗಳ ಮೇಲ್ವಿಚಾರ ನೋಡುವವರು “ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ” ಆಗಿರಬೇಕು.—ವಿಮೋಚನಕಾಂಡ 18:21.
15. ನ್ಯಾಯ ನಿರ್ಣಾಯಕ ವಿಚಾರಣೆಗಳಲ್ಲಿ ಪ್ರಾರ್ಥನೆಯು ಯಾವ ಪಾತ್ರ ವಹಿಸಬೇಕು?
15 ಪ್ರತಿಯೊಂದು ಕ್ರೈಸ್ತ ನ್ಯಾಯನಿರ್ಣಾಯಕ ಕಮಿಟಿಯು ಹೃತ್ಪೂರ್ವಕ ಪ್ರಾರ್ಥನೆಯಲ್ಲಿ ಯೆಹೋವನ ಸಹಾಯವನ್ನು ಕೇಳಿಕೊಳ್ಳಬೇಕು. ಗಂಭೀರ ದುರ್ನಡತೆಯ ಆರೋಪವಿರುವ ಸಹೋದರ ಅಥವಾ ಸಹೋದರಿಯೊಂದಿಗಿನ ಕೂಟವನ್ನು ಪ್ರಾರ್ಥನೆಯಿಂದ ಆರಂಭಿಸಬೇಕು. ವಾಸ್ತವದಲ್ಲಿ, ದೇವರ ಸಹಾಯದ ಒಂದು ನಿರ್ದಿಷ್ಟ ಅಗತ್ಯವು ಏಳುವಾಗ, ಚರ್ಚೆಯ ಯಾವುದೇ ಸಮಯದಲ್ಲಿ ಪ್ರಾರ್ಥಿಸುವುದು ಯೋಗ್ಯವಾಗಿದೆ.—ಯಾಕೋಬ 5:13-18.
16. ಯಾವ ವಿಧಾನದಲ್ಲಿ ಹಿರಿಯರು ನ್ಯಾಯ ನಿರ್ಣಾಯಕ ವಿಚಾರಗಳನ್ನು ನಡಿಸತಕ್ಕದ್ದು ಮತ್ತು ಏಕೆ?
16 ಒಬ್ಬ ದುರ್ನಡತೆಯ ಅಪಾದಿತ ಜೊತೆ ವಿಶ್ವಾಸಿಯು ದೇವರ ಮಂದೆಯಲ್ಲಿ “ಕುರಿ” ಎಂಬದು ಹಿರಿಯರಿಗೆ ತಿಳಿದದೆ ಮತ್ತು ಅವರು ಅವನನ್ನು ಕೋಮಲ ಮಮತೆಯಿಂದ ಉಪಚರಿಸಬೇಕು. (ಯೆಹೆಜ್ಕೇಲ 34:7-14 ಹೋಲಿಸಿ.) ಅಕ್ಷರಶಃ ಕುರಿಗೆ ಕೋಮಲ ಪರಾಮರಿಕೆ ಅಗತ್ಯವಿದೆ ಯಾಕಂದರೆ ಅವು ತಮ್ಮ ಕುರುಬನ ಮೇಲೆ ಭದ್ರತೆಗಾಗಿ ಆತುಕೊಳ್ಳುವ ಪುಕ್ಕಲು ಜೀವಿಗಳು. ಹೀಗಿರಲಾಗಿ, ಸ್ಥಳೀಕ ಸಭೆಯಲ್ಲಿರುವ ಸಾಂಕೇತಿಕ ಕುರಿಯ ಕುರಿತೇನು? ಮಹಾ ಕುರುಬನಾದ ಯೆಹೋವ ದೇವರ ಮತ್ತು ಒಳ್ಳೇ ಕುರುಬನಾದ ಯೇಸು ಕ್ರಿಸ್ತನ ಪರಾಮರಿಕೆಯಲ್ಲಿ ಅವರು ನಿಸ್ಸಂದೇಹವಾಗಿ ಸುರಕ್ಷೆಯನ್ನು ಅನುಭವಿಸುತ್ತಾರೆ. ಆದರೆ ಮಂದೆಯ ಉಪಕುರುಬರು ಯೆಹೋವನ ಕುರಿಸದೃಶ ಸೇವಕರ ಆಂತರಿಕ ಶಾಂತಿ ಮತ್ತು ಭದ್ರತೆಯ ಭಾವಕ್ಕೆ ನೆರವಾಗುವ ರೀತಿಯಲ್ಲಿ ಕ್ರಿಯೆ ನಡಿಸಬೇಕು. ನೀವು ಕ್ರೈಸ್ತ ಉಪಕುರುಬರಾಗಿದ್ದಲ್ಲಿ, ನಿಮ್ಮ ಕೈಕೆಳಗೆ ನಿಮ್ಮ ಸಹೋದರರು ಮತ್ತು ಸಹೋದರಿಯರು ಸುರಕ್ಷೆ ಮತ್ತು ನೆಮ್ಮದಿಯ ಭಾವವನ್ನು ಅನುಭವಿಸುತ್ತಾರೋ? ಹಿರಿಯರು ಬೈಬಲ್ ನಿಯಮ ಮತ್ತು ತತ್ವಗಳನ್ನು ದೃಢವಾಗಿ ಎತ್ತಿ ಹಿಡಿಯಲೇ ಬೇಕು ನಿಜ. ಆದರೆ, ಅವರು ಕುರಿಗಳೊಂದಿಗೆ ಪ್ರೀತಿಯ ಭಾವದಲ್ಲಿ ವ್ಯವಹರಿಸುವಂತೆ ಮತ್ತು ನ್ಯಾಯನಿರ್ಣಾಯಕ ವಿಚಾರಣೆಗಳನ್ನು ಶಾಂತಚಿತ್ತದಿಂದ, ಕ್ರಮದಿಂದ, ದಯೆಯಿಂದ ಮತ್ತು ಪರಿಗಣನೆಯ ಭಾವದಿಂದ ನಡಿಸುವಂತೆ ಶಾಸ್ತ್ರೀಯವಾಗಿ ಕೇಳಲ್ಪಡುತ್ತಾರೆ.
17. ನ್ಯಾಯ ನಿರ್ಣಾಯಕ ವಿಚಾರಣೆಗಳಲ್ಲಿ ವಿಶೇಷವಾಗಿ, ಹಿರಿಯರು ಯಾವ ಶಾಸ್ತ್ರೀಯ ವಿಷಯಗಳನ್ನು ಮನಸ್ಸಿನಲ್ಲಿಡಬೇಕು?
17 ಅಸಂಪೂರ್ಣರಾಗಿರಲಾಗಿ, ನಾವೇನನ್ನುತ್ತೇವೋ ಅದರಲ್ಲಿ, ನಾವೆಲ್ಲರೂ ಅನೇಕಸಾರಿ ಮುಗ್ಗರಿಸುವದುಂಟು.” (ಯಾಕೋಬ 3:2, NW) ನಮ್ಮಲ್ಲಿ ಪ್ರತಿಯೊಬ್ಬನಿಗೆ ದೇವರ ಕರುಣೆ ಮತ್ತು ಕ್ರಿಸ್ತನ “ಪ್ರಾಯಶ್ಚಿತ್ತಯಜ್ಞದ” ಅಗತ್ಯವಿದೆ. (1 ಯೋಹಾನ 1:8-2:2; ಕೀರ್ತನೆ 130:3) ಆದ್ದರಿಂದ ಒಬ್ಬ ಕ್ರೈಸ್ತ ಉಪಕುರುಬನು ತನ್ನನ್ನು ಒಬ್ಬ ದೀನ ವ್ಯಕ್ತಿಯಾಗಿ ವೀಕ್ಷಿಸತಕ್ಕದ್ದು. ಅವನು ಯೇಸುವಿನ ಮಾತುಗಳನ್ನೂ ನೆನಪಿಗೆ ತರತಕ್ಕದ್ದು: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದ್ದನ್ನೇ ನೀವು ಅವರಿಗೆ ಮಾಡಿರಿ.” ವಿಶೇಷವಾಗಿ ಈ ಸೂಚನೆಯು ನ್ಯಾಯ ನಿರ್ಣಾಯಕ ವಿಚಾರಣೆಗಳ ಸಮಯದಲ್ಲಿ ಅನ್ವಯಿಸಲ್ಪಡಬೇಕು. ಆತ್ಮಿಕ ಯೋಗ್ಯತೆಗಳುಳ್ಳ ಪುರುಷರು ತಪ್ಪಿತಸ್ಥ ಕ್ರೈಸ್ತನನ್ನು ತಿದ್ದಿ ಸರಿಮಾಡುವಾಗ, ‘ತಾವೂ ದುಷ್ಪ್ರೇರಣೆಗೆ ಒಳಗಾಗದಂತೆ ಎಚ್ಚರವಾಗಿದ್ದು ಶಾಂತ ಭಾವದಿಂದ ತಿದ್ದಲು’ ಪ್ರಯತ್ನಿಸಬೇಕು.—ಗಲಾತ್ಯ 6:1; 1 ಕೊರಿಂಥ 10:12.
18. (ಎ) ನ್ಯಾಯ ನಿರ್ಣಾಯಕ ವಿಚಾರಣೆಗಳಲ್ಲಿ ಹಿರಿಯರು ಇತರರನ್ನು ಕಟುವಾಗಿ ಉಪಚರಿಸಿದರೆ ಏನು ಫಲಿತಾಂಶಿಸಬಹುದು? (ಬಿ) ಮಾರ್ಕ 9:42ರ ವೀಕ್ಷಣೆಯಲ್ಲಿ ಹಿರಿಯರು ಮತ್ತು ಇತರ ಕ್ರೈಸ್ತರು ಏನು ಮಾಡುವುದರ ವಿರುದ್ಧ ಎಚ್ಚರವಿರಬೇಕು?
18 ನ್ಯಾಯ ನಿರ್ಣಾಯಕ ವಿಚಾರಣೆಗಳಲ್ಲಿ ಹಿರಿಯರು ಇತರರನ್ನು ಕಟುವಾಗಿ ಉಪಚರಿಸಿದರೆ, ಅದು ಅಂಥ ವ್ಯಕ್ತಿಗಳಿಗೆ ಹಾನಿಕಾರಕವಾಗಿ ರುಜುವಾಗಬಹುದು. ಆದರೆ ಭಾವನಾತ್ಮಕ ಅಥವಾ ಶಾರೀರಿಕ ಹಾನಿಯು ಒಂದುವೇಳೆ ಆಗದಿದ್ದರೂ, ಗಂಭೀರವಾದ ಆತ್ಮಿಕ ಗಾಯವು ಉಂಟಾಗ ಸಾಧ್ಯವಿದೆ ಮತ್ತು ಮೇಲ್ವಿಚಾರಕರ ಯೋಗ್ಯತೆಗಳ ಕುರಿತಾಗಿ ಸಂದೇಹಿಸಲ್ಪಡಲೂಬಹುದು. (ಯಾಕೋಬ 2:13 ಹೋಲಿಸಿ.) ಅದಕಾರಣ, ನ್ಯಾಯ ನಿರ್ಣಾಯಕ ವಿಚಾರಣೆಯಲ್ಲಿ ಮತ್ತು ಬೇರೆಲ್ಲಾ ಸಮಯದಲ್ಲಿ ಹಿರಿಯರು, ದಯೆಯುಳ್ಳವರೂ ಇತರರನ್ನು ಮುಗ್ಗರಿಸದಂತೆ ಜಾಗ್ರತೆ ವಹಿಸುವವರೂ ಆಗಿರಬೇಕು. ನಿಶ್ಚಯವಾಗಿ ಎಲ್ಲಾ ಕ್ರೈಸ್ತರೂ ಈ ವಿಷಯದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ ಯಾಕಂದರೆ ಯೇಸುವಂದದ್ದು: “ನಂಬುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಕತ್ತೆಯಿಂದ ಎಳೆಯಲ್ಪಡುವಂಥ ಬೀಸುವ ಕಲ್ಲು ಕಟ್ಟಿ ಅವನನ್ನು ಸಮುದ್ರದಲ್ಲಿ ಹಾಕಿದರೂ ಅವನಿಗೆ ಲೇಸು.” (ಮಾರ್ಕ 9:42, NW) ಬೀಸುವ ಮೇಲ್ಗಲ್ಲು ಎಷ್ಟು ದೊಡ್ಡದಾಗಿರಬಹುದೆಂದರೆ ಅದನ್ನು ತಿರುಗಿಸಲು ಸಾಮಾನ್ಯವಾಗಿ ಪಶುವಿನ ಬಲವು ಬೇಕಾಗುತ್ತಿತ್ತು, ಮತ್ತು ಕೊರಳ ಸುತ್ತ ಅಂಥ ಒಂದು ಭಾರವನ್ನು ಕಟ್ಟಿ ಸಮುದ್ರಕ್ಕೆ ಹಾಕಲ್ಪಡುವ ಯಾವನಾದರೂ ಪಾರಾಗಲಾರನು ಖಂಡಿತ. ಹೀಗಿರಲಾಗಿ ಹಿರಿಯನು, ಮುಗ್ಗರಿಸುವಿಕೆಗೆ ಕಾರಣವಾಗದಂತೆ ಎಚ್ಚರವಿರಬೇಕು ನಿಶ್ಚಯ; ಅದು ಅವನಿಗೂ ಮತ್ತು ಮುಗ್ಗರಿಸಲ್ಡಡುವ ಯಾವನೇ ವ್ಯಕ್ತಿಗೂ ಬಾಳುವ ಆತ್ಮಿಕ ಹಾನಿಯನ್ನು ತರ ಸಾಧ್ಯವಿದೆ. —ಫಿಲಿಪ್ಪಿ 1:9-11.
ಮಮತೆಯುಕ್ತ ಗಮನವನ್ನು ತೋರಿಸುತ್ತಾ ಇರ್ರಿ
19. ಜೊತೆ ಹಿರಿಯರಿಗೆ ಪೇತ್ರನು ಯಾವ ಸೂಚನೆಯನ್ನು ಕೊಟ್ಟನು, ಮತ್ತು ಅದಕ್ಕೆ ಯೋಗ್ಯ ಪ್ರತಿಕ್ರಿಯೆ ತೋರಿಸುವ ಮೂಲಕ ಅವರ ಪ್ರತೀಕ್ಷೆಗಳ ಮೇಲೆ ಯಾವ ಪ್ರಭಾವ ಬೀರುವುದು?
19 ಜೊತೆ ಮೇಲ್ವಿಚಾರಕರು ಮಂದೆಯನ್ನು ಹೇಗೆ ಪರಿಪಾಲಿಸಬೇಕೆಂದು ತಿಳಿಸುತ್ತಾ ಅಪೊಸ್ತಲ ಪೇತ್ರನು ಬರೆದದ್ದು: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆ ಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನ ಮಾಡುವಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದು ಕೊಳ್ಳಿರಿ. ಹಿರೀ ಕುರುಬನು ಪ್ರತ್ಯಕ್ಷನಾಗುವಾಗ ನೀವು ದೇವ ಪ್ರಭಾವವೆಂಬ ಎಂದಿಗೂ ಬಾಡದ ಜಯಮಾಲೆಯನ್ನು ಹೊಂದುವಿರಿ.” (1 ಪೇತ್ರ 5:2-4) ಇಂಥ ಸೂಚನೆಯನ್ನು ಅನ್ವಯಿಸುವ ಮೂಲಕ ಮತ್ತು ದೇವರ ಮಂದೆಗೆ ಮಮತೆಯ ಗಮನವನ್ನು ತೋರಿಸುವ ಮೂಲಕ ಮಾತ್ರವೇ ಅಭಿಷಿಕ್ತ ಮೇಲ್ವಿಚಾರಕರು ಅಮರ್ತ್ಯ ಆತ್ಮಿಕ ಜೀವಿಗಳಾಗಿ ತಮ್ಮ ಸ್ವರ್ಗೀಯ ಬಹುಮಾನವನ್ನು ಮತ್ತು ಭೂನಿರೀಕ್ಷೆಗಳುಳ್ಳ ಹಿರಿಯರು ಬರಲಿರುವ ಲೋಕವ್ಯಾಪಕ ಪ್ರಮೋದವನದಲ್ಲಿ ನಿತ್ಯ ಜೀವವನ್ನು ಪಡೆಯಬಹುದು.
20. (ಎ) ಕ್ರೈಸ್ತ ಉಪಕುರುಬರು ತಮ್ಮ ಜೊತೆ ವಿಶ್ವಾಸಿಗಳೊಂದಿಗೆ ಹೇಗೆ ವ್ಯವಹರಿಸಬೇಕು? (ಬಿ) ಪ್ರೀತಿಯುಳ್ಳ ಹಿರಿಯರ ಆದರ್ಶ ಸೇವೆ ಮತ್ತು ಮಮತಾಯುಕ್ತ ಪರಾಮರಿಕೆಯ ಕುರಿತು ನಿಮ್ಮ ಅನಿಸಿಕೆಯೇನು?
20 ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ಇಬ್ಬರೂ ಪ್ರೀತಿ, ಕರುಣೆಗಳುಳ್ಳ ಕುರುಬರು. ಆದ್ದರಿಂದ ಕ್ರೈಸ್ತ ಉಪಕುರುಬರು ದೈವಿಕ ಮಟ್ಟಗಳನ್ನು ದೃಢವಾಗಿ ಎತ್ತಿಹಿಡಿಯುವಾಗ, ತಮ್ಮ ಕುರಿ ಸದೃಶ ಜೊತೆ ವಿಶ್ವಾಸಿಗಳೊಂದಿಗೆ ವ್ಯವಹರಿಸುವಲ್ಲಿ ಪ್ರೀತಿ ಮತ್ತು ಕರುಣೆಯನ್ನು ತೋರಿಸಲೇ ಬೇಕು. ನಿಶ್ಚಯವಾಗಿಯೂ ನಿಷ್ಠೆಯುಳ್ಳ ಯೆಹೋವನ ಸಾಕ್ಷಿಗಳೆಲ್ಲರೂ, ತಮ್ಮ ಹೊಣೆಯನ್ನು ಕಾಪಾಡಿಕೊಳ್ಳುವ ಮತ್ತು ದೇವರ ಮಂದೆಯನ್ನು ಮಮತೆಯಿಂದ ಪರಿಪಾಲಿಸುವ ಅಂಥಾ ಸ್ವಾರ್ಥತ್ಯಾಗಿ ಹಿರಿಯರ ಆದರ್ಶ ಸೇವೆಯನ್ನು ಆಳವಾಗಿ ಗಣ್ಯ ಮಾಡುತ್ತಾರೆ. ಆ ಗಣ್ಯತೆಯನ್ನು, ಅದರೊಂದಿಗೆ ಯೋಗ್ಯ ಗೌರವವನ್ನೂ, ನಮ್ಮ ನಡುವೆ ನಾಯಕತ್ವ ವಹಿಸುವ ಹಿರಿಯರಿಗೆ ವಿಧೇಯರಾಗುವ ಮೂಲಕ ನಾವು ತೋರಿಸ ಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ತೀರ್ಮಾನದಲ್ಲಿ ಗಂಭೀರ ತಪ್ಪು ನಡೆದಿದೆ ಎಂದು ವ್ಯಕ್ತಿಯೊಬ್ಬನು ನಂಬುವುದಾದರೆ, ತನ್ನ ಬಹಿಷ್ಕಾರದ ನಿರ್ಣಯದ ಬಗ್ಗೆ ಅವನು ಅಪ್ಪೀಲು ಮಾಡ ಸಾಧ್ಯವಿದೆ.
ನಿಮ್ಮ ವಿಚಾರವೇನು?
◻ ತನ್ನ ಹಿಂಬಾಲಕರ ನಡುವೆ ಬಲಾತ್ಕಾರಕ್ಕೆ ಯಾವ ಎಡೆಯೂ ಇಲ್ಲವೆಂದು ಯೇಸು ಕ್ರಿಸ್ತನು ತೋರಿಸಿದ್ದು ಹೇಗೆ?
◻ ಆಡಳಿತಾ ಮಂಡಲಿಯಿಂದ ಸೂಚನೆಗಳು ಬಂದಾಗ ಹಿರಿಯರು ಏನು ಮಾಡತಕ್ಕದ್ದು?
◻ ಯೆಶಾಯ 32:1, 2ಕ್ಕೆ ಅನುಸಾರವಾಗಿ, ಯಾವುದಕ್ಕೆ ಹಿರಿಯರು ಉಗಮಗಳಾಗಿರಬೇಕು?
◻ ಕೇವಲ ಗಾಳೀಸುದ್ದಿಯ ಮೇಲೆ ಹಿರಿಯರು ಕ್ರಿಯೆಗೈಯಬಾರದು ಎಂದು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ?
◻ ಕ್ರೈಸ್ತಉಪಕುರುಬರು ಮಂದೆಯನ್ನು ಹೇಗೆ ಉಪಚರಿಸಬೇಕು?
[ಪುಟ 20 ರಲ್ಲಿರುವ ಚಿತ್ರ]
ನ್ಯಾಯ ನಿರ್ಣಾಯಕ ಕಮಿಟಿಯು ಒಬ್ಬ ಜತೆ ವಿಶ್ವಾಸಿಯೊಂದಿಗೆ ಕೂಟವಾಗಿ ಕೂಡುವಾಗ ಹೃತ್ಪೂರ್ವಕ ಪ್ರಾರ್ಥನೆ ಆವಶ್ಯಕ.