ಅಧ್ಯಾಯ 95
ವಿವಾಹ ವಿಚ್ಛೇದನದ ಮತ್ತು ಮಕ್ಕಳ ಪ್ರೀತಿಯ ಮೇಲೆ ಪಾಠಗಳು
ಯೇಸುವು ಮತ್ತು ಅವನ ಶಿಷ್ಯರು ಸಾ.ಶ.33ರ ಪಸ್ಕಹಬ್ಬಕ್ಕೆ ಹಾಜರಾಗಲು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಅವರು ಯೊರ್ದನ್ ಹೊಳೆಯನ್ನು ದಾಟುತ್ತಾರೆ ಮತ್ತು ಪೆರಿಯ ಪ್ರಾಂತ್ಯದ ಮೂಲಕ ಹಾದುಹೋಗುವ ಮಾರ್ಗವನ್ನು ಹಿಡಿಯುತ್ತಾರೆ. ಕೆಲವು ವಾರಗಳ ಮೊದಲು ಯೇಸುವು ಪೆರಿಯದಲ್ಲಿ ಇದ್ದನು, ಆದರೆ ಅವನ ಮಿತ್ರ ಲಾಜರನು ಅಸ್ವಸ್ಥನಾದಾಗ ಅವನನ್ನು ಯೂದಾಯಕ್ಕೆ ಕರೇಕಳುಹಿಸಲಾಯಿತು. ಪೆರಿಯದಲ್ಲಿರುವಾಗ, ಯೇಸುವು ಫರಿಸಾಯರೊಡನೆ ವಿವಾಹ ವಿಚ್ಛೇದನೆಯ ಬಗ್ಗೆ ಮಾತಾಡಿದ್ದನು, ಪುನಃ ಅವರು ಅದೇ ವಿಚಾರವನ್ನು ಮುಂದಕ್ಕೆ ತರುತ್ತಾರೆ.
ವಿವಾಹವಿಚ್ಛೇದನೆಯ ಕುರಿತು ವಿವಿಧ ಆಲೋಚನೆಗಳುಳ್ಳ ಗುಂಪುಗಳು ಫರಿಸಾಯರ ನಡುವೆ ಇದ್ದವು. “ಏನೋ ಅವಲಕ್ಷಣವನ್ನು ಕಂಡರೆ” ಸ್ತ್ರೀಯನ್ನು ವಿಚ್ಛೇದಿಸಸಾಧ್ಯವಿತ್ತು ಎಂದು ಮೋಶೆಯು ಹೇಳಿದ್ದನು. ಇದು ಕೇವಲ ದುಶ್ಶೀಲತೆಗೆ ಮಾತ್ರ ಸೂಚಿಸುತ್ತದೆ ಎಂದು ಕೆಲವರು ನಂಬುತ್ತಿದ್ದರು. ಆದರೆ ಇನ್ನಿತರರು “ಏನೋ ಅವಲಕ್ಷಣದಲ್ಲಿ” ಚಿಕ್ಕಪುಟ್ಟ ದೋಷಗಳೂ ಕೂಡಿದ್ದವು ಎಂದು ನಂಬುತ್ತಿದ್ದರು. ಆದುದರಿಂದ, ಯೇಸುವನ್ನು ಪರೀಕ್ಷಿಸಲು ಫರಿಸಾಯರು ಕೇಳುವದು: “ಒಬ್ಬನು ಯಾವದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೂ ಹೇಗೆ?” ಭಿನ್ನ ಭಿನ್ನ ನೋಟಗಳುಳ್ಳ ಫರಿಸಾಯರೊಂದಿಗೆ ಯೇಸುವಿನ ಯಾವುದೇ ಉತ್ತರವು ಅವನನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ ಎಂದು ಅವರು ಧೃಡ ಭರವಸೆಯಿಂದಿದ್ದರು.
ಯೇಸುವು ಈ ಪ್ರಶ್ನೆಯನ್ನು ಬಹಳ ಚಾಕಚಕ್ಯತೆಯಿಂದ ನಿಭಾಯಿಸುತ್ತಾನೆ, ಯಾವುದೇ ಮಾನವ ಅಭಿಪ್ರಾಯಗಳನ್ನು ಆಕರ್ಷಿಸುವದಿಲ್ಲ, ಆದರೆ ಮದುವೆಯ ಮೂಲದ ರಚನೆಯ ಕಡೆಗೆ ಗಮನ ಸೆಳೆಯುತ್ತಾನೆ. “ನೀವು ಓದಲಿಲ್ಲವೋ?” ಅವನು ಕೇಳುತ್ತಾನೆ, “ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ—ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನು. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”
ದೇವರು ಮೂಲ ಉದ್ದೇಶವು ಏನಂದರೆ ವಿವಾಹ ಸಂಗಾತಿಗಳು ಒಟ್ಟಿಗೆ ಇರಬೇಕೇ ಹೊರತು ಅವರು ವಿಚ್ಛೇದನೆ ಪಡೆಯಬೇಕೆಂದು ಇರಲಿಲ್ಲ ಎಂದು ಯೇಸುವು ತೋರಿಸುತ್ತಾನೆ. ಅದು ಹಾಗಿರುವದಾದರೆ, ಫರಿಸಾಯರು ಪ್ರತಿಕ್ರಿಯಿಸುವದು: “ಹಾಗಾದರೆ ತ್ಯಾಗಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಯಾಕೆ ಆಜ್ಞೆ ಕೊಟ್ಟನು?”
“ಮೋಶೆಯು ನಿಮ್ಮ ಮೊಂಡತನವನ್ನು ನೋಡಿ ನಿಮ್ಮ ಹೆಂಡರನ್ನು ಬಿಟ್ಟುಬಿಡುವದಕ್ಕೆ ಅಪ್ಪಣೆಕೊಟ್ಟನು,” ಯೇಸುವು ಉತ್ತರಿಸುತ್ತಾನೆ, “ಆದರೆ ಆದಿಯಿಂದಲೇ ಹಾಗೆ ಇರಲಿಲ್ಲ.” ಹೌದು, ಏದೆನ್ ತೋಟದಲ್ಲಿ ದೇವರು ವಿವಾಹದ ಒಂದು ನೈಜ ಮಟ್ಟವನ್ನು ಸ್ಥಾಪಿಸಿದಾಗ, ಅವನು ವಿಚ್ಛೇದನೆಗಾಗಿ ಯಾವುದೇ ಒದಗಿಸುವಿಕೆಯನ್ನು ಮಾಡಿರಲಿಲ್ಲ.
ಯೇಸುವು ಫರಿಸಾಯರಿಗೆ ಹೇಳುವದನ್ನು ಮುಂದರಿಸುತ್ತಾ ಹೋಗುತ್ತಾನೆ: “ಹಾದರದ ಕಾರಣದಿಂದಲ್ಲದೇ, [ಗ್ರೀಕ್ನಲ್ಲಿ ಪೊ-ರ್ನೀ‘ಯ] ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ.” ಈ ಮೂಲಕ ಅವನು ಪೊ-ರ್ನೀ‘ಯ, ಅಂದರೆ ನಿರ್ಲಜ್ಜಾ ಲೈಂಗಿಕ ಅನೈತಿಕತೆಯು ಮಾತ್ರ ವಿಚ್ಛೇದನೆಗಾಗಿ ದೇವರು ಸಮ್ಮತಿಸುವ ಒಂದೇ ಒಂದು ಕಾರಣವಾಗಿದೆ ಎಂದು ತೋರಿಸುತ್ತಾನೆ.
ವಿಚ್ಛೇದನೆಗಾಗಿ ಇದೊಂದೇ ಅಧಾರವು ಇರಲಾಗಿ, ಮದುವೆಯು ಸದಾಕಾಲ ಬಾಳುವ ಒಂದು ಐಕ್ಯತೆಯಾಗಿರುತ್ತದೆ ಎಂದು ಅರಿತುಕೊಂಡು, ಶಿಷ್ಯರು ಹೀಗೆ ಹೇಳಲು ನಡಿಸಲ್ಪಟ್ಟರು: “ಹೆಂಡತಿಯ ವಿಷಯವಾಗಿ ಗಂಡನ ಧರ್ಮ ಹೀಗಿದ್ದರೆ ಮದುವೆಯಾಗುವದು ಒಳ್ಳೇದಲ್ಲ.” ಮದುವೆಯಾಗಲು ಯೋಚಿಸುವವನು ವೈವಾಹಿಕ ಬಂಧನದ ಒಂದು ಶಾಶ್ವತತೆಯನ್ನು ಗಂಭೀರವಾಗಿ ಎಣಿಸಬೇಕಾಗುತ್ತದೆ ಎನ್ನುವದರಲ್ಲಿ ಯಾವುದೇ ಪ್ರಶ್ನೆಯಿರುವದಿಲ್ಲ!
ಯೇಸುವು ಒಂಟಿಗತನದ ಕುರಿತು ಮಾತಾಡುತ್ತಾ ಹೋಗುತ್ತಾನೆ. ಕೆಲವರು ಗರ್ಭದಿಂದ ನಪುಂಸಕರಾಗಿರುವದರಿಂದ, ಅವರು ಮದುವೆಯಾಗಲು ಅಸಾಮರ್ಥ್ಯವುಳ್ಳವರಾಗಿರುತ್ತಾರೆ, ಯಾಕಂದರೆ ಲೈಂಗಿಕವಾಗಿ ಬೆಳವಣಿಗೆ ಹೊಂದಿರುವದಿಲ್ಲ. ಇನ್ನಿತರರು ಮನುಷ್ಯರಿಂದ ಕ್ರೂರ ರೀತಿಯಲ್ಲಿ ಲೈಂಗಿಕವಾಗಿ ವಿಕಲರಾಗಿ ಮಾಡಲ್ಪಟ್ಟು ನಪುಂಸಕರಾಗಿ ಮಾಡಲ್ಪಟ್ಟಿದ್ದಾರೆ. ಕೊನೇದಾಗಿ, ಕೆಲವರು ಪರಲೋಕ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹೆಚ್ಚು ಪೂರ್ಣವಾಗಿ ಮಾಡಲು ತಮ್ಮನ್ನು ನೀಡಿಕೊಳ್ಳಲು ಶಕ್ತರಾಗುವಂತೆ, ಮದುವೆಯಾಗುವ ಮತ್ತು ಲೈಂಗಿಕ ಸಂಬಂಧದಲ್ಲಿ ಆನಂದಿಸುವ ಆಶೆಯನ್ನು ಅಣಗಿಸುತ್ತಾರೆ. “ಅಂಗೀಕರಿಸಬಲ್ಲವನು [ಒಂಟಿಗನಾಗಿರಲು] ಅಂಗೀಕರಿಸಲಿ,” ಎಂದು ಹೇಳಿ ಯೇಸುವು ಸಮಾಪ್ತಿಗೊಳಿಸುತ್ತಾನೆ.
ಈಗ ಜನರು ಯೇಸುವಿನ ಬಳಿಗೆ ಅವರ ಚಿಕ್ಕ ಮಕ್ಕಳನ್ನು ತರುತ್ತಾರೆ. ಆದಾಗ್ಯೂ, ಶಿಷ್ಯರು, ಮಕ್ಕಳನ್ನು ಗದರಿಸಿ, ಅವರನ್ನು ದೂರ ಕಳುಹಿಸಲು ಪ್ರಯತ್ನಿಸುತ್ತಾರೆ, ಅನಾವಶ್ಯಕ ಒತ್ತಡದಿಂದ ಯೇಸುವನ್ನು ಸುರಕ್ಷಿತವಾಗಿಡಲು ಅವರು ಬಯಸುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಯೇಸುವು ಹೇಳುವದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ.”
ಎಂಥಾ ಉತ್ತಮ ಪಾಠಗಳನ್ನು ಯೇಸುವು ಇಲ್ಲಿ ಒದಗಿಸುತ್ತಾನೆ! ದೇವರ ರಾಜ್ಯವನ್ನು ಪಡೆಯಲು ಎಳೆಯ ಮಕ್ಕಳಲ್ಲಿ ಇರುವಂಥ ನಮ್ರತೆ ಮತ್ತು ಕಲಿಸಲ್ಪಡುವ ಸಾಧ್ಯತೆಯ ಗುಣಗಳನ್ನು ನಾವು ಅನುಕರಿಸತಕ್ಕದ್ದು. ಆದರೆ ಯೇಸುವಿನ ಉದಾಹರಣೆಯು, ವಿಶೇಷವಾಗಿ ಹೆತ್ತವರು ಅವರ ಮಕ್ಕಳೊಂದಿಗೆ ಸಮಯವನ್ನು ವ್ಯಯಿಸುವದು ಎಷ್ಟೊಂದು ಪ್ರಾಮುಖ್ಯ ಎಂಬುದನ್ನು ತೋರಿಸುತ್ತದೆ. ಈಗ ಯೇಸುವು ಈ ಚಿಕ್ಕವರನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಅಪ್ಪಿಕೊಂಡು, ಅವರನ್ನು ಆಶೀರ್ವದಿಸುತ್ತಾನೆ. ಮತ್ತಾಯ 19:1-15; ಧರ್ಮೋಪದೇಶಕಾಂಡ 24:1; ಲೂಕ 16:18; ಮಾರ್ಕ 10:1-16; ಲೂಕ 18:15-17.
▪ ಫರಿಸಾಯರಲ್ಲಿ ವಿಚ್ಛೇದನೆಯ ಕುರಿತು ಭಿನ್ನವಾದ ಯಾವ ನೋಟಗಳು ಇದ್ದವು, ಮತ್ತು ಯೇಸುವನ್ನು ಅವರು ಪರೀಕ್ಷಿಸಿದ್ದು ಹೇಗೆ?
▪ ಅವನನ್ನು ಪರೀಕ್ಷಿಸಲು ಫರಿಸಾಯರು ಮಾಡಿದ ಪ್ರಯತ್ನಗಳನ್ನು ಯೇಸುವು ಹೇಗೆ ನಿಭಾಯಿಸಿದನು, ಮತ್ತು ವಿವಾಹ ವಿಚ್ಛೇದನೆಗೆ ಯೇಸುವು ಕೊಟ್ಟ ಒಂದೇ ಒಂದು ಆಧಾರ ಯಾವುದು?
▪ ಮದುವೆಯಾಗುವದು ವಿಹಿತವಲ್ಲ ಎಂದು ಯೇಸುವಿನ ಶಿಷ್ಯರು ಹೇಳಲು ಕಾರಣವೇನು, ಮತ್ತು ಯೇಸುವು ಯಾವ ಶಿಫಾರಸನ್ನು ಮಾಡಿದನು?
▪ ಚಿಕ್ಕ ಮಕ್ಕಳೊಂದಿಗಿನ ಅವನ ವ್ಯವಹಾರಗಳಲ್ಲಿ ಯೇಸುವು ನಮಗೇನನ್ನು ಕಲಿಸಿದನು?