“ಈ ಸಂಗತಿಗಳು ಸಂಭವಿಸಲೇಬೇಕು”
“ಯೇಸು ಅವರಿಗೆ . . . ಹೇಳಿದ್ದೇನಂದರೆ . . . ಈ ಸಂಗತಿಗಳು ಸಂಭವಿಸಲೇಬೇಕು. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.”—ಮತ್ತಾಯ 24:4-6, NW.
1. ನಮಗೆ ಯಾವ ವಿಷಯದಲ್ಲಿ ಆಸಕ್ತಿಯಿರಬೇಕು?
ನೀವು ನಿಸ್ಸಂದೇಹವಾಗಿಯೂ ಜೀವಿತದ ಕುರಿತು ಮತ್ತು ನಿಮ್ಮ ಭವಿಷ್ಯತ್ತಿನ ಕುರಿತು ಆಸಕ್ತರಾಗಿದ್ದೀರಿ. ಹಾಗಾದರೆ, 1877ರಷ್ಟು ಹಿಂದಿನ ಸಮಯದಲ್ಲಿ, ಸಿ. ಟಿ. ರಸಲರ ಗಮನವನ್ನು ಸೆಳೆದ ಒಂದು ವಿಷಯದಲ್ಲೂ ನೀವು ಆಸಕ್ತರಾಗಿರತಕ್ಕದ್ದು. ವಾಚ್ ಟವರ್ ಸೊಸೈಟಿಯನ್ನು ತದನಂತರ ಸ್ಥಾಪಿಸಿದ ರಸಲರು, ನಮ್ಮ ಕರ್ತನ ಹಿಂದಿರುಗುವಿಕೆಯ ಉದ್ದೇಶ ಹಾಗೂ ವಿಧಾನ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಬರೆದರು. ಈ 64 ಪುಟದ ಪುಸ್ತಿಕೆಯು, ಯೇಸುವಿನ ಹಿಂದಿರುಗುವಿಕೆ ಇಲ್ಲವೆ ಭಾವೀ ಬರೋಣದ ಕುರಿತಾಗಿತ್ತು. (ಯೋಹಾನ 14:3) ಒಂದು ಸಂದರ್ಭದಲ್ಲಿ ಅಪೊಸ್ತಲರು ಎಣ್ಣೆಯ ಮರಗಳ ಗುಡ್ಡದ ಮೇಲಿದ್ದಾಗ, ಆ ಹಿಂದಿರುಗುವಿಕೆಯ ಕುರಿತು ಪ್ರಶ್ನಿಸಿದ್ದು: “ಈ ಸಂಗತಿಗಳು ಯಾವಾಗ ಸಂಭವಿಸುವವು, ಮತ್ತು ನಿನ್ನ ಸಾನ್ನಿಧ್ಯಕ್ಕೂ [ಇಲ್ಲವೆ, “ಬರೋಣಕ್ಕೂ,” ಕಿಂಗ್ ಜೇಮ್ಸ್ ವರ್ಷನ್] ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?”—ಮತ್ತಾಯ 24:3, NW.
2. ಯೇಸು ಮುಂತಿಳಿಸಿದ ವಿಷಯದ ಬಗ್ಗೆ ವ್ಯತ್ಯಾಸವಾದ ನೋಟಗಳಿರುವುದೇಕೆ?
2 ಯೇಸುವಿನ ಉತ್ತರವು ಏನಾಗಿತ್ತೆಂದು ನಿಮಗೆ ಗೊತ್ತೊ? ಅದರ ಅರ್ಥವನ್ನು ನೀವು ಗ್ರಹಿಸಿಕೊಂಡಿದ್ದೀರೊ? ಅದು ಮೂರು ಸುವಾರ್ತೆಗಳಲ್ಲಿ ಕಂಡುಬರುತ್ತದೆ. ಪ್ರೊಫೆಸರ್ ಡಿ. ಎ. ಕಾರ್ಸನ್ ಹೇಳುವುದು: “ಮತ್ತಾಯ 24ನೆಯ ಅಧ್ಯಾಯ ಮತ್ತು ಅದರ ಸಮಾಂತರ ಅಧ್ಯಾಯಗಳಾದ ಮಾರ್ಕ 13 ಮತ್ತು ಲೂಕ 21, ತರ್ಜುಮೆಗಾರರಲ್ಲಿ ಎಬ್ಬಿಸಿರುವಷ್ಟು ಭಿನ್ನಾಭಿಪ್ರಾಯವನ್ನು ಬೈಬಲಿನ ಬೇರೆ ಅಧ್ಯಾಯಗಳು ಎಬ್ಬಿಸಿರುವುದು ತುಂಬ ವಿರಳ.” ತದನಂತರ ಕಾರ್ಸನ್ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ಇದು ಅಸಂಗತವಾದ ಮಾನವ ನೋಟವಲ್ಲದೆ ಮತ್ತೇನೂ ಆಗಿರುವುದಿಲ್ಲ. ಕಳೆದ ಶತಮಾನದಲ್ಲಿ, ಇಂತಹ ಅನೇಕ ವಿಚಾರಗಳು ನಂಬಿಕೆಯ ಕೊರತೆಯನ್ನು ವ್ಯಕ್ತಪಡಿಸಿದವು. ಇಂತಹ ವಿಚಾರಗಳನ್ನು ನೀಡಿದವರು ಉಚ್ಚ ಟೀಕೆಯಿಂದ ಪ್ರಭಾವಿತರಾದರು. ನಾವು ಸುವಾರ್ತೆಗಳಲ್ಲಿ ಓದುವಂತಹದ್ದನ್ನು ಯೇಸು ಎಂದೂ ನುಡಿಯಲಿಲ್ಲ, ಅವನ ಹೇಳಿಕೆಗಳು ಕಾಲಕ್ರಮೇಣ ತಪ್ಪುಗಳಿಂದ ಅಶುದ್ಧಗೊಳಿಸಲ್ಪಟ್ಟವು, ಇಲ್ಲವೆ ಅವನ ಭವಿಷ್ಯವಾಣಿಯು ವಿಫಲಗೊಂಡಿತೆಂಬ ವಿಚಾರಗಳನ್ನು ಅವರು ಪ್ರತಿಪಾದಿಸಿದರು. ಒಬ್ಬ ವ್ಯಾಖ್ಯಾನಕಾರನು ಮಾರ್ಕನ ಸುವಾರ್ತೆಯನ್ನು ‘ಮಹಾಯಾನ ಬೌದ್ಧ ತತ್ವಜ್ಞಾನದ ಬೆಳಕಿನಲ್ಲಿ’ ಪರಿಶೀಲಿಸುವಷ್ಟರ ಮಟ್ಟಿಗೆ ಹೋದನು!
3. ಯೇಸುವಿನ ಪ್ರವಾದನೆಯನ್ನು ಯೆಹೋವನ ಸಾಕ್ಷಿಗಳು ಹೇಗೆ ವೀಕ್ಷಿಸುತ್ತಾರೆ?
3 ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನ ಸಾಕ್ಷಿಗಳು ಬೈಬಲಿನ ವಿಶ್ವಾಸಾರ್ಹತೆಯನ್ನು ಮತ್ತು ನಂಬಲರ್ಹತೆಯನ್ನು ಸ್ವೀಕರಿಸುತ್ತಾರೆ. ಯೇಸು ತನ್ನ ಮರಣಕ್ಕೆ ಮೂರು ದಿನಗಳ ಮುಂಚೆ, ಎಣ್ಣೆಯ ಮರಗಳ ಗುಡ್ಡದ ಮೇಲೆ ತನ್ನೊಂದಿಗಿದ್ದ ನಾಲ್ವರು ಅಪೊಸ್ತಲರಿಗೆ ಹೇಳಿದಂತಹ ವಿಷಯವನ್ನೂ ಅವರು ನಂಬುತ್ತಾರೆ. ಯೇಸು ಅಲ್ಲಿ ಕೊಟ್ಟ ಪ್ರವಾದನೆಯ ಸ್ಪಷ್ಟವಾದ ತಿಳುವಳಿಕೆಯನ್ನು ದೇವಜನರು, ಸಿ. ಟಿ. ರಸಲರ ಸಮಯದಂದಿನಿಂದಲೂ ಪ್ರಗತಿಪರವಾಗಿ ಪಡೆದುಕೊಂಡಿದ್ದಾರೆ. ಕಳೆದ ಕೆಲವೊಂದು ವರ್ಷಗಳಲ್ಲಿ, ಈ ಪ್ರವಾದನೆಯ ಕುರಿತಾದ ತಮ್ಮ ದೃಷ್ಟಿಕೋನವನ್ನು ಕಾವಲಿನಬುರುಜು ಪತ್ರಿಕೆಯು ಇನ್ನೂ ಹೆಚ್ಚಾಗಿ ಸ್ಪಷ್ಟಪಡಿಸಿದೆ. ನೀವು ಆ ಮಾಹಿತಿಯನ್ನು ಗ್ರಹಿಸಿಕೊಂಡು, ನಿಮ್ಮ ಜೀವಿತದಲ್ಲಿ ಅದರ ಪ್ರಭಾವವನ್ನು ಮನಗಂಡಿದ್ದೀರೊ?a ನಾವು ಅದನ್ನು ಪುನರ್ವಿಮರ್ಶಿಸೋಣ.
ನಿಕಟ ಭವಿಷ್ಯತ್ತಿನಲ್ಲಿ ಒಂದು ದುರಂತಮಯ ನೆರವೇರಿಕೆ
4. ಅಪೊಸ್ತಲರು ಭವಿಷ್ಯದ ಬಗ್ಗೆ ಯೇಸುವನ್ನು ಏಕೆ ಪ್ರಶ್ನಿಸಿದ್ದಿರಬೇಕು?
4 ಯೇಸುವೇ ಮೆಸ್ಸೀಯನೆಂದು ಅಪೊಸ್ತಲರಿಗೆ ತಿಳಿದಿತ್ತು. ಆದಕಾರಣ, ಅವನು ತನ್ನ ಮರಣ, ಪುನರುತ್ಥಾನ ಮತ್ತು ಹಿಂದಿರುಗುವಿಕೆಯ ಕುರಿತು ಅವರಿಗೆ ಹೇಳಿದಾಗ, ‘ಯೇಸು ಮರಣಹೊಂದಿ ಇಲ್ಲಿಂದ ಹೋಗಿಬಿಟ್ಟರೆ, ಮೆಸ್ಸೀಯನಾಗಿ ಮಾಡಬೇಕಾಗಿರುವ ಅದ್ಭುತಕರ ವಿಷಯಗಳನ್ನು ಅವನು ಹೇಗೆ ಸಾಧಿಸುವನು?’ ಎಂಬುದಾಗಿ ಅವರು ಯೋಚಿಸಿದ್ದಿರಬೇಕು. ಅಲ್ಲದೆ, ಯೇಸು ಯೆರೂಸಲೇಮ್ ಮತ್ತು ಅದರ ದೇವಾಲಯದ ಅಂತ್ಯದ ಬಗ್ಗೆ ಮಾತಾಡಿದನು. ‘ಅದು ಯಾವಾಗ ಮತ್ತು ಹೇಗೆ ಸಂಭವಿಸುವುದು?’ ಎಂಬುದಾಗಿಯೂ ಅಪೊಸ್ತಲರು ನೆನಸಿರಬಹುದಿತ್ತು. ಇವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ, ಅಪೊಸ್ತಲರು ಕೇಳಿದ್ದು: “ಅದು ಯಾವಾಗ ಆಗುವದು? ಅದೆಲ್ಲಾ ನೆರವೇರುವದಕ್ಕಿರುವಾಗ ಯಾವ ಸೂಚನೆ ತೋರುವದು?”—ಮಾರ್ಕ 13:4; ಮತ್ತಾಯ 16:21, 27, 28; 23:37–24:2.
5. ಯೇಸುವಿನ ಉತ್ತರವು ಪ್ರಥಮ ಶತಮಾನದಲ್ಲಿ ನೆರವೇರಿಕೆಯನ್ನು ಕಂಡುಕೊಂಡದ್ದು ಹೇಗೆ?
5 ಯುದ್ಧಗಳು, ಬರಗಾಲಗಳು, ಅಂಟುರೋಗಗಳು, ಭೂಕಂಪಗಳು, ಕ್ರೈಸ್ತರ ಕಡೆಗೆ ದ್ವೇಷ ಹಾಗೂ ಹಿಂಸೆ, ಸುಳ್ಳು ಮೆಸ್ಸೀಯರು, ಮತ್ತು ರಾಜ್ಯ ಸುವಾರ್ತೆಯ ವ್ಯಾಪಕವಾದ ಸಾರುವಿಕೆಯನ್ನು ಯೇಸು ಮುಂತಿಳಿಸಿದನು. ಇದೆಲ್ಲವೂ ಸಂಭವಿಸುವಾಗ, ಅಂತ್ಯವು ಬರುವುದು. (ಮತ್ತಾಯ 24:4-14; ಮಾರ್ಕ 13:5-13; ಲೂಕ 21:8-19) ಇದನ್ನು ಯೇಸು, ಸಾ.ಶ. 33ರ ಆದಿಭಾಗದಲ್ಲಿ ತಿಳಿಸಿದನು. ಈ ಮುಂತಿಳಿಸಲ್ಪಟ್ಟ ಸಂಗತಿಗಳು ಮುಂದಿನ ದಶಕಗಳಲ್ಲಿ ಮಹತ್ತರವಾದ ವಿಧದಲ್ಲಿ ಸಂಭವಿಸುತ್ತಿರುವುದನ್ನು ಅವನ ಜಾಗೃತ ಶಿಷ್ಯರು ಗುರುತಿಸಬಹುದಿತ್ತು. ಈ ಸೂಚನೆಯು ರೋಮನರ ಹಸ್ತಗಳಲ್ಲಿ ಯೆಹೂದಿ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ನಡೆಸುತ್ತಾ, ಸಾ.ಶ. 66-70ರಲ್ಲಿ ನೆರವೇರಿಕೆಯನ್ನು ಕಂಡುಕೊಂಡಿತೆಂದು ಇತಿಹಾಸವು ರುಜುಪಡಿಸುತ್ತದೆ. ಇದು ಹೇಗೆ ಸಂಭವಿಸಿತು?
6. ಸಾ.ಶ. 66ರಲ್ಲಿ ರೋಮನರ ಮತ್ತು ಯೆಹೂದ್ಯರ ನಡುವೆ ಯಾವ ಪರಿಸ್ಥಿತಿಯು ವಿಕಸಿಸಿಕೊಂಡಿತು?
6 ಸಾ.ಶ. 66ರಲ್ಲಿ, ಯೂದಾಯದ ಸುಡು ಬೇಸಗೆಯಲ್ಲಿ, ಯೆಹೂದಿ ಹಠೋತ್ಸಾಹಿಗಳು ಯೆರೂಸಲೇಮಿನ ದೇವಾಲಯದ ಹತ್ತಿರವಿದ್ದ ಒಂದು ಕೋಟೆಯೊಳಗಿನ ರೋಮನ್ ಕಾವಲುಗಾರರ ಮೇಲೆ ದಾಳಿಮಾಡಿದರು. ಇದು ಆ ದೇಶದ ಎಲ್ಲೆಡೆಯೂ ಹಿಂಸಾಚಾರದ ಕಿಡಿಯನ್ನು ಹೊತ್ತಿಸಿತು. ಯೆಹೂದ್ಯರ ಇತಿಹಾಸ ಎಂಬ ಇಂಗ್ಲಿಷ್ ಪುಸ್ತಕದಲ್ಲಿ, ಪ್ರೊಫೆಸರ್ ಹಿನ್ರಿಕ್ ಗ್ರೆಟ್ಸ್ ತಿಳಿಸಿದ್ದು: “ಸಿರಿಯದ ಅಧಿಪತಿಯೋಪಾದಿ ರೋಮನ್ ಸೇನೆಯ ಗೌರವವನ್ನು ಕಾಪಾಡುವುದು ಸೆಸ್ಟಿಯಸ್ ಗ್ಯಾಲಸನ ಕರ್ತವ್ಯವಾಗಿದ್ದರಿಂದ . . . ತನ್ನ ಸುತ್ತಲೂ ಹರಡುತ್ತಿದ್ದ ದಂಗೆಯನ್ನು ತಡೆಯದೆ ಕೈಕಟ್ಟಿ ಕುಳಿತುಕೊಳ್ಳಲು ಅವನಿಗೆ ಸಾಧ್ಯವಿರಲಿಲ್ಲ. ಅವನು ತನ್ನ ಸೈನ್ಯದಳಗಳನ್ನು ಕೂಡಿಸಿದನು, ಅಲ್ಲದೆ ನೆರೆಹೊರೆಯ ಪ್ರಾಂತಾಧಿಪತಿಗಳೂ ತಮ್ಮ ಪಡೆಗಳನ್ನು ಇಚ್ಛಾಪೂರ್ವಕವಾಗಿ ಕಳುಹಿಸಿಕೊಟ್ಟರು.” 30,000 ಸೈನಿಕರಿದ್ದ ಈ ಸೇನೆಯು ಯೆರೂಸಲೇಮನ್ನು ಸುತ್ತುವರಿಯಿತು. ಒಂದಿಷ್ಟು ಹೋರಾಟದ ನಂತರ, ಯೆಹೂದ್ಯರು ದೇವಾಲಯದ ಹತ್ತಿರವಿದ್ದ ಗೋಡೆಗಳ ಹಿಂದೆ ಅವಿತುಕೊಂಡರು. “ಸತತವಾಗಿ ಐದು ದಿನಗಳ ವರೆಗೆ ರೋಮನರು ಗೋಡೆಗಳನ್ನು ಆಕ್ರಮಿಸಿದರೂ, ಯೆಹೂದ್ಯರ ಅಸ್ತ್ರಗಳ ಸುರಿಮಳೆಯ ಕಾರಣ ಹಿಮ್ಮೆಟ್ಟಬೇಕಾಯಿತು. ಆದರೆ, ಆರನೆಯ ದಿನದಂದು, ದೇವಾಲಯದ ಮುಂದಿದ್ದ ಉತ್ತರದಿಕ್ಕಿನ ಗೋಡೆಯ ಒಂದು ಭಾಗದಲ್ಲಿ ಕೆಳಗಿನಿಂದ ಸುರಂಗ ತೋಡುವುದರಲ್ಲಿ ರೋಮನರು ಸಫಲರಾದರು.”
7. ಯೇಸುವಿನ ಶಿಷ್ಯರು ವಿಷಯಗಳನ್ನು ಹೆಚ್ಚಿನ ಯೆಹೂದ್ಯರಿಗಿಂತ ಭಿನ್ನವಾಗಿ ಏಕೆ ವೀಕ್ಷಿಸಿದರು?
7 ದೇವರು ತಮ್ಮನ್ನು ಮತ್ತು ತಮ್ಮ ಪವಿತ್ರ ನಗರವನ್ನು ಸದಾ ಕಾಪಾಡುವನೆಂದು ನಂಬಿದ್ದ ಯೆಹೂದ್ಯರು, ಇದರಿಂದ ಎಷ್ಟು ಗಲಿಬಿಲಿಗೊಂಡಿದ್ದಿರಬಹುದೆಂದು ಸ್ವಲ್ಪ ಯೋಚಿಸಿರಿ! ಆದರೆ, ಯೆರೂಸಲೇಮ್ ಪಟ್ಟಣವು ಕೇಡಿಗೆ ಒಳಗಾಗಲಿತ್ತೆಂದು ಯೇಸುವಿನ ಶಿಷ್ಯರು ಈಗಾಗಲೇ ಎಚ್ಚರಿಸಲ್ಪಟ್ಟಿದ್ದರು. ಯೇಸು ಮುಂತಿಳಿಸಿದ್ದು: “ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು.” (ಲೂಕ 19:43, 44) ಸಾ.ಶ. 66ರಲ್ಲಿ ಯೆರೂಸಲೇಮಿನೊಳಗಿದ್ದ ಕ್ರೈಸ್ತರಿಗೆ ಅದು ಮರಣವನ್ನು ಸೂಚಿಸಿತೊ?
8. ಯಾವ ದುರಂತವನ್ನು ಯೇಸು ಮುಂತಿಳಿಸಿದನು, ಮತ್ತು ಯಾರಿಗೋಸ್ಕರ ದಿನಗಳು ಕಡಿಮೆಮಾಡಲಾದವೊ ಆ “ಆದುಕೊಳ್ಳಲ್ಪಟ್ಟವರು” ಯಾರಾಗಿದ್ದರು?
8 ಎಣ್ಣೆಯ ಮರಗಳ ಗುಡ್ಡದ ಮೇಲೆ ಅಪೊಸ್ತಲರಿಗೆ ಉತ್ತರನೀಡುತ್ತಾ, ಯೇಸು ಮುಂತಿಳಿಸಿದ್ದು: “ಅಂಥ ಸಂಕಟವು ದೇವರು ಮಾಡಿದ ಸೃಷ್ಟಿ ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ; ಇನ್ನು ಮೇಲೆಯೂ ಆಗುವದಿಲ್ಲ. ಯೆಹೋವನು ಆ ದಿನಗಳನ್ನು ಕಡಿಮೆಮಾಡದಿದ್ದರೆ, ಯಾವ ನರಜೀವಿಯೂ ರಕ್ಷಿಸಲ್ಪಡುತ್ತಿದ್ದಿಲ್ಲ. ಆದರೆ ಆದುಕೊಳ್ಳಲ್ಪಟ್ಟವರ ಪರವಾಗಿ ಆ ದಿನಗಳನ್ನು ಆತನು ಕಡಿಮೆಮಾಡಿದ್ದಾನೆ.” (ಮಾರ್ಕ 13:19, 20, NW; ಮತ್ತಾಯ 24:21, 22) ಹೀಗೆ, ಆ ದಿನಗಳು ಕಡಿಮೆಮಾಡಲ್ಪಡುವವು ಮತ್ತು ‘ಆದುಕೊಳ್ಳಲ್ಪಟ್ಟವರು’ ರಕ್ಷಿಸಲ್ಪಡುವರು. ಇವರು ಯಾರಾಗಿದ್ದಾರೆ? ಇವರು ಯೆಹೋವನನ್ನು ಆರಾಧಿಸುತ್ತೇವೆಂದು ಪ್ರತಿಪಾದಿಸಿದರೂ ಆತನ ಪುತ್ರನನ್ನು ತಿರಸ್ಕರಿಸಿದ ದಂಗೆಕೋರ ಯೆಹೂದ್ಯರಾಗಿರಲಿಲ್ಲ ಎಂಬುದು ಖಂಡಿತ. (ಯೋಹಾನ 19:1-7; ಅ. ಕೃತ್ಯಗಳು 2:22, 23, 36) ಮೆಸ್ಸೀಯ ಹಾಗೂ ರಕ್ಷಕನೋಪಾದಿ ಯೇಸುವಿನಲ್ಲಿ ನಂಬಿಕೆಯನ್ನಿಟ್ಟ ಯೆಹೂದ್ಯರು ಮತ್ತು ಯೆಹೂದ್ಯೇತರರು ನಿಜವಾದ ಆದುಕೊಳ್ಳಲ್ಪಟ್ಟವರಾಗಿದ್ದರು. ದೇವರು ಅಂತಹವರನ್ನು ಆದುಕೊಂಡಿದ್ದನು, ಮತ್ತು ಸಾ.ಶ. 33ರ ಪಂಚಾಶತ್ತಮದಂದು ಅವರನ್ನು “ದೇವರ ಇಸ್ರಾಯೇಲ್” ಎಂಬ ಹೊಸ ಆತ್ಮಿಕ ಜನಾಂಗವಾಗಿ ರೂಪಿಸಿದನು.—ಗಲಾತ್ಯ 6:16; ಲೂಕ 18:7; ಅ. ಕೃತ್ಯಗಳು 10:34-45; 1 ಪೇತ್ರ 2:9.
9, 10. ರೋಮನ್ ದಾಳಿಯ ದಿನಗಳು ಹೇಗೆ “ಕಡಿಮೆಮಾಡಲ್ಪಟ್ಟವು,” ಮತ್ತು ಯಾವ ಪರಿಣಾಮದೊಂದಿಗೆ?
9 ದಿನಗಳು “ಕಡಿಮೆಮಾಡಲ್ಪಟ್ಟ” ಕಾರಣ, ಯೆರೂಸಲೇಮಿನಲ್ಲಿದ್ದ ಅಭಿಷಿಕ್ತ ಆದುಕೊಳ್ಳಲ್ಪಟ್ಟವರು ರಕ್ಷಿಸಲ್ಪಟ್ಟರೊ? ಪ್ರೊಫೆಸರ್ ಗ್ರೆಟ್ಸ್ ಸೂಚಿಸುವುದು: “ಆ ಧೈರ್ಯಶಾಲಿ ಹಠೋತ್ಸಾಹಿಗಳ ವಿರುದ್ಧ ಹೋರಾಟವನ್ನು ದೀರ್ಘಾವಧಿಯ ವರೆಗೆ ಮುಂದುವರಿಸಿಕೊಂಡು ಹೋಗುವುದು ಯೋಗ್ಯವೆಂದು [ಸೆಸ್ಟಿಯಸ್ ಗ್ಯಾಲಸ್] ಭಾವಿಸಲಿಲ್ಲ, ಏಕೆಂದರೆ ಶರತ್ಕಾಲದ ಮಳೆಯು ಬೇಗನೆ ಆರಂಭಿಸಲಿಕ್ಕಿತ್ತು . . . ಮತ್ತು ಈ ಕಾರಣ ಸೇನೆಗೆ ಆಹಾರದ ಸರಬರಾಯಿಗಳು ಲಭ್ಯವಾಗದಿರಬಹುದು. ಆದುದರಿಂದ, ಹಿಮ್ಮೆಟ್ಟುವುದೇ ವಿವೇಕಯುತವಾದ ಮಾರ್ಗವೆಂದು ಅವನು ನೆನಸಿದ್ದಿರಬಹುದು.” ಸೆಸ್ಟಿಯಸನ ವಿಚಾರವು ಏನೇ ಆಗಿದ್ದಿರಲಿ, ರೋಮನ್ ಸೇನೆಯು ಆ ನಗರದಿಂದ ಹಿಮ್ಮೆಟ್ಟಿತು. ಅವರು ಬೆನ್ನಟ್ಟುತ್ತಿದ್ದ ಯೆಹೂದ್ಯರಿಂದ ಭಾರೀ ನಷ್ಟವನ್ನು ಅನುಭವಿಸಿದರು.
10 ಈ ಅನಿರೀಕ್ಷಿತ ರೋಮನ್ ಹಿಮ್ಮೆಟ್ಟುವಿಕೆಯು, ಯೆರೂಸಲೇಮಿನೊಳಗೆ ಗಂಡಾಂತರದಲ್ಲಿ ಸಿಕ್ಕಿಕೊಂಡಿದ್ದ ಯೇಸುವಿನ ಶಿಷ್ಯರು, ಅಂದರೆ “ನರಜೀವಿಯು” ರಕ್ಷಿಸಲ್ಪಡುವಂತೆ ಅನುಮತಿಸಿತು. ಅವಕಾಶದ ಈ ಬಾಗಿಲು ತೆರೆದಾಗ, ಕ್ರೈಸ್ತರು ಆ ಪ್ರಾಂತದಿಂದ ಪಲಾಯನಗೈದರೆಂದು ಇತಿಹಾಸವು ದಾಖಲಿಸುತ್ತದೆ. ಭವಿಷ್ಯತ್ತನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವ ಮತ್ತು ತನ್ನ ಆರಾಧಕರ ಪಾರಾಗುವಿಕೆಯನ್ನು ಖಚಿತಪಡಿಸಿಕೊಳ್ಳುವ ದೇವರ ಸಾಮರ್ಥ್ಯದ ಎಂತಹ ಅಪೂರ್ವ ಪ್ರದರ್ಶನ! ಆದರೆ, ಯೆರೂಸಲೇಮ್ ಹಾಗೂ ಯೂದಾಯದಲ್ಲಿ ಉಳಿದ ಅವಿಶ್ವಾಸಿ ಯೆಹೂದ್ಯರಿಗೆ ಏನು ಸಂಭವಿಸಿತು?
ಸಮಕಾಲೀನರು ಆ ಮಹಾ ಸಂಕಟವನ್ನು ಅನುಭವಿಸುವರು
11. ಯೇಸು “ಈ ಸಂತತಿ”ಯ ಕುರಿತು ಏನು ಹೇಳಿದನು?
11 ದೇವಾಲಯದ ಮೇಲೆ ಕೇಂದ್ರೀಕೃತವಾಗಿದ್ದ ತಮ್ಮ ಆರಾಧನಾ ವ್ಯವಸ್ಥೆಯು ಸದಾಕಾಲ ಮುಂದುವರಿಯುವುದೆಂದು ಅನೇಕ ಯೆಹೂದ್ಯರು ಭಾವಿಸಿದರು. ಆದರೆ ಯೇಸು ಹೇಳಿದ್ದು: “ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಲಲ್ಲೇ ಅದೆ ಎಂದು ತಿಳುಕೊಳ್ಳಿರಿ. ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 24:32-35.
12, 13. “ಈ ಸಂತತಿ” ಎಂಬ ಯೇಸುವಿನ ಉಲ್ಲೇಖವನ್ನು ಶಿಷ್ಯರು ಹೇಗೆ ಅರ್ಥೈಸಿಕೊಂಡಿರಬೇಕು?
12 ಸಾ.ಶ. 66ಕ್ಕೂ ಮುಂಚಿನ ವರ್ಷಗಳಲ್ಲಿ, ಕ್ರೈಸ್ತರು ಸಂಘಟಿತ ಸೂಚನೆಯ ಹಲವಾರು ಭಾಗಗಳನ್ನು, ಅಂದರೆ ಯುದ್ಧಗಳು, ಬರಗಾಲಗಳು, ರಾಜ್ಯ ಸುವಾರ್ತೆಯ ವ್ಯಾಪಕವಾದ ಸಾರುವಿಕೆಯು ಕೂಡ ನೆರವೇರುತ್ತಿರುವುದನ್ನು ನೋಡಿರಬಹುದು. (ಅ. ಕೃತ್ಯಗಳು 11:28; ಕೊಲೊಸ್ಸೆ 1:23) ಆದರೆ, ಈ ಅಂತ್ಯವು ಯಾವಾಗ ಬರಲಿತ್ತು? ‘ಈ ಸಂತತಿಯು [ಗ್ರೀಕ್, ಯೆನೇಯಾ] ಅಳಿದುಹೋಗುವದೇ ಇಲ್ಲವೆಂದು’ ಯೇಸು ಹೇಳಿದಾಗ, ಅವನು ಏನನ್ನು ಅರ್ಥೈಸಿದನು? ಯೇಸು ಆ ಸಮಯದ ಧಾರ್ಮಿಕ ನಾಯಕರನ್ನು ಸೇರಿಸಿ, ವಿರೋಧಿಸುತ್ತಿದ್ದ ಯೆಹೂದ್ಯರ ಗುಂಪನ್ನು ‘ವ್ಯಭಿಚಾರಿಣಿಯಂತಿರುವ ಒಂದು ದುಷ್ಟ ಸಂತತಿ’ ಎಂದು ಅನೇಕ ವೇಳೆ ಸಂಬೋಧಿಸಿದನು. (ಮತ್ತಾಯ 11:16; 12:39, 45; 16:4; 17:17; 23:36) ಆದುದರಿಂದ, ಎಣ್ಣೆಯ ಮರಗಳ ಗುಡ್ಡದ ಮೇಲೆ ಪುನಃ “ಈ ಸಂತತಿ”ಯ ಕುರಿತು ಮಾತಾಡಿದಾಗ, ಇತಿಹಾಸದ ಉದ್ದಕ್ಕೂ ಜೀವಿಸಿದ ಇಡೀ ಯೆಹೂದಿ ಕುಲವನ್ನಾಗಲಿ “ದೇವರಾದುಕೊಂಡ ಜನಾಂಗ”ವಾಗಿದ್ದ ಅವನ ಹಿಂಬಾಲಕರನ್ನಾಗಲಿ ಅವನು ಅರ್ಥೈಸಲಿಲ್ಲ. (1 ಪೇತ್ರ 2:9) ಅಥವಾ, “ಈ ಸಂತತಿ”ಯು ಒಂದು ಸಮಯಾವಧಿಯಾಗಿದೆ ಎಂದೂ ಯೇಸು ಹೇಳುತ್ತಿರಲಿಲ್ಲ.
13 ಬದಲಿಗೆ, ತಾನು ನೀಡಿದಂತಹ ಸೂಚನೆಯ ನೆರವೇರಿಕೆಯನ್ನು ಯಾರು ಅನುಭವಿಸಲಿದ್ದರೊ, ಆ ಪ್ರತಿಕೂಲಭಾವವನ್ನು ಪ್ರಕಟಿಸಿದ ಆಗಿನ ಯೆಹೂದ್ಯರ ಕುರಿತೇ ಯೇಸು ಮಾತಾಡುತ್ತಿದ್ದನು. ಲೂಕ 21:32ರಲ್ಲಿರುವ “ಈ ಸಂತತಿ” ಎಂಬ ಉಲ್ಲೇಖದ ಕುರಿತು, ಪ್ರೊಫೆಸರ್ ಜೋಯೆಲ್ ಬಿ. ಗ್ರೀನ್ ಗಮನಿಸುವುದು: “ಮೂರನೆಯ ಸುವಾರ್ತೆಯಲ್ಲಿ ‘ಈ ಸಂತತಿ’ (ಮತ್ತು ಅದಕ್ಕೆ ಸಂಬಂಧಿಸಿದ ವಾಕ್ಸರಣಿಗಳು), ದೇವರ ಉದ್ದೇಶಕ್ಕೆ ಪ್ರತಿರೋಧವನ್ನು ವ್ಯಕ್ತಪಡಿಸುವ ಜನರ ಒಂದು ಗುಂಪನ್ನು ಯಾವಾಗಲೂ ಸೂಚಿಸಿವೆ. . . . ಮೊಂಡತನದಿಂದ ದೈವಿಕ ಉದ್ದೇಶಕ್ಕೆ ತಮ್ಮ ವಿರೋಧವನ್ನು ಪ್ರಕಟಿಸಿದ ಜನರನ್ನು [ಅದು ಸೂಚಿಸುತ್ತದೆ].”b
14. ಆ “ಸಂತತಿ”ಯು ಏನನ್ನು ಅನುಭವಿಸಿತು, ಆದರೆ ಕ್ರೈಸ್ತರಿಗೆ ಉಂಟಾದ ಫಲಿತಾಂಶವು ಹೇಗೆ ಭಿನ್ನವಾಗಿತ್ತು?
14 ಸೂಚನೆಯ ನೆರವೇರಿಕೆಯನ್ನು ನೋಡಲಿದ್ದ ಯೆಹೂದಿ ವಿರೋಧಿಗಳ ಆ ದುಷ್ಟ ಸಂತತಿಯು, ಯೆಹೂದಿ ವ್ಯವಸ್ಥೆಯ ಅಂತ್ಯವನ್ನೂ ಅನುಭವಿಸಲಿತ್ತು. (ಮತ್ತಾಯ 24:6, 13, 14) ಅವರು ಖಂಡಿತವಾಗಿಯೂ ಆ ಅಂತ್ಯವನ್ನು ಅನುಭವಿಸಿದರು. ಸಾ.ಶ. 70ರಲ್ಲಿ, ಸಮ್ರಾಟ ವೆಸ್ಪೇಶನ್ನ ಮಗನಾದ ಟೈಟಸ್ನ ನಾಯಕತ್ವದಲ್ಲಿ ರೋಮನ್ ಸೇನೆಯು ಹಿಂದಿರುಗಿತು. ಆ ನಗರದಲ್ಲಿ ಮತ್ತೆ ಸಿಕ್ಕಿಕೊಂಡ ಯೆಹೂದ್ಯರ ಕಷ್ಟಾನುಭವವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.c ಪ್ರತ್ಯಕ್ಷಸಾಕ್ಷಿ ಫ್ಲೇವಿಯಸ್ ಜೋಸೀಫಸ್ ವರದಿಸುವುದೇನೆಂದರೆ, ರೋಮನರು ಆ ನಗರವನ್ನು ಧ್ವಂಸಮಾಡುವಷ್ಟರೊಳಗೆ, ಸುಮಾರು 11,00,000 ಯೆಹೂದ್ಯರು ಸತ್ತುಹೋಗಿದ್ದರು ಮತ್ತು 1,00,000ದಷ್ಟು ಜನರು ಬಂಧಿವಾಸಿಗಳೋಪಾದಿ ಒಯ್ಯಲ್ಪಟ್ಟಿದ್ದರು. ಇವರಲ್ಲಿ ಹೆಚ್ಚಿನವರು ಹಸಿವೆಯಿಂದ ಇಲ್ಲವೆ ರೋಮಿನ ಅಖಾಡಗಳಲ್ಲಿ ಕ್ರೂರವಾಗಿ ಸತ್ತರು. ನಿಜವಾಗಿಯೂ, ಸಾ.ಶ. 66-70ರ ಸಂಕಟವು, ಯೆರೂಸಲೇಮ್ ಮತ್ತು ಯೆಹೂದಿ ವ್ಯವಸ್ಥೆಯು ಹಿಂದೆಂದೂ ಅನುಭವಿಸದಿದ್ದ ಇಲ್ಲವೆ ಇನ್ನು ಮುಂದೆ ಎಂದಿಗೂ ಅನುಭವಿಸಲಾರದಂತಹ ಮಹಾ ಸಂಕಟವಾಗಿತ್ತು. ಆದರೆ, ಯೇಸುವಿನ ಪ್ರವಾದನಾತ್ಮಕ ಎಚ್ಚರಿಕೆಗೆ ಕಿವಿಗೊಟ್ಟು, ಸಾ.ಶ. 66ರಲ್ಲಿ ರೋಮನ್ ಸೇನೆಗಳ ನಿರ್ಗಮನದ ನಂತರ ಯೆರೂಸಲೇಮನ್ನು ಬಿಟ್ಟುಹೋಗಿದ್ದ ಕ್ರೈಸ್ತರಿಗೆ ಸಂಭವಿಸಿದ ಘಟನೆಯು ಎಷ್ಟೊಂದು ಭಿನ್ನವಾಗಿತ್ತು! “ಆದುಕೊಳ್ಳಲ್ಪಟ್ಟ” ಕ್ರೈಸ್ತ ಅಭಿಷಿಕ್ತರು, ಸಾ.ಶ. 70ರಲ್ಲಿ “ರಕ್ಷಿಸಲ್ಪಟ್ಟರು” ಇಲ್ಲವೆ ಕಾಪಾಡಲ್ಪಟ್ಟರು.—ಮತ್ತಾಯ 24:16, 22.
ಸಂಭವಿಸಲಿದ್ದ ಇನ್ನೊಂದು ನೆರವೇರಿಕೆ
15. ಯೇಸುವಿನ ಪ್ರವಾದನೆಗೆ ಸಾ.ಶ. 70ರ ತರುವಾಯ ವ್ಯಾಪಕವಾದ ನೆರವೇರಿಕೆಯು ಇರುವುದೆಂದು ನಾವು ಹೇಗೆ ನಿಶ್ಚಿತರಾಗಿರಬಲ್ಲೆವು?
15 ಹಾಗಿದ್ದರೂ, ಇದೇ ಅಂತ್ಯವಾಗಿರಲಿಲ್ಲ. ಯೇಸು ಈ ಮೊದಲು, ನಗರವು ಧ್ವಂಸಗೊಂಡ ನಂತರ ತಾನು ಯೆಹೋವನ ಹೆಸರಿನಲ್ಲಿ ಬರುವೆನೆಂದು ಸೂಚಿಸಿದ್ದನು. (ಮತ್ತಾಯ 23:38, 39; 24:2) ತರುವಾಯ, ಎಣ್ಣೆಯ ಮರಗಳ ಗುಡ್ಡದ ಮೇಲೆ ತಾನು ನುಡಿದ ಪ್ರವಾದನೆಯಲ್ಲಿ ಯೇಸು ಈ ವಿಷಯವನ್ನು ಮತ್ತಷ್ಟೂ ಸ್ಪಷ್ಟಪಡಿಸಿದನು. ಬರಲಿದ್ದ ‘ಮಹಾ ಸಂಕಟವನ್ನು’ ಉಲ್ಲೇಖಿಸಿದ ಬಳಿಕ, ಸುಳ್ಳು ಕ್ರಿಸ್ತರು ಬರುವರೆಂದು ಮತ್ತು ಯೆರೂಸಲೇಮ್ ನಗರವು ದೀರ್ಘ ಸಮಯದ ವರೆಗೆ ಜನಾಂಗಗಳಿಂದ ತುಳಿದಾಡಲ್ಪಡುವುದೆಂದು ಅವನು ಹೇಳಿದನು. (ಮತ್ತಾಯ 24:21, 23-28; ಲೂಕ 21:24) ಈ ಪ್ರವಾದನೆಗೆ ಇನ್ನೂ ವ್ಯಾಪಕವಾದ, ಮತ್ತೊಂದು ನೆರವೇರಿಕೆಯು ಇರಸಾಧ್ಯವಿತ್ತೊ? ನಿಜತ್ವಗಳು ಹೌದೆಂದು ಉತ್ತರಿಸುತ್ತವೆ. ನಾವು ಪ್ರಕಟನೆ 6:2-8ನ್ನು (ಸಾ.ಶ. 70ರಲ್ಲಿ ಯೆರೂಸಲೇಮಿನಲ್ಲಿ ಸಂಭವಿಸಿದ ಸಂಕಟದ ನಂತರ ಬರೆಯಲ್ಪಟ್ಟಿತು) ಮತ್ತಾಯ 24:6-8 ಮತ್ತು ಲೂಕ 21:10, 11ರೊಂದಿಗೆ ಹೋಲಿಸುವಾಗ, ಯುದ್ಧ, ಆಹಾರದ ಅಭಾವಗಳು, ಮತ್ತು ಅಂಟುರೋಗಗಳು ವ್ಯಾಪಕವಾದ ಪ್ರಮಾಣದಲ್ಲಿ ಮುಂದೆ ಸಂಭವಿಸಲಿಕ್ಕಿದ್ದವೆಂದು ಗಮನಿಸುತ್ತೇವೆ. ಯೇಸುವಿನ ಮಾತುಗಳ ಈ ವ್ಯಾಪಕ ನೆರವೇರಿಕೆಯು, 1914ರಲ್ಲಿ ಆರಂಭಿಸಿದ Iನೆಯ ಜಾಗತಿಕ ಯುದ್ಧದ ಸಮಯದಂದಿನಿಂದ ಸಂಭವಿಸುತ್ತಿದೆ.
16-18. ಮುಂದೆ ಏನು ಸಂಭವಿಸುವುದೆಂಬ ನಿರೀಕ್ಷೆ ನಮಗಿದೆ?
16 “ಮಹಾ ಸಂಕಟವು” ಇನ್ನೂ ಭವಿಷ್ಯತ್ತಿನಲ್ಲಿ ಸಂಭವಿಸಲಿದೆ ಎಂಬುದನ್ನು ಸೂಚನೆಯ ಪ್ರಚಲಿತ ನೆರವೇರಿಕೆಯು ತೋರಿಸುತ್ತದೆಂದು, ಯೆಹೋವನ ಸಾಕ್ಷಿಗಳು ಅನೇಕ ದಶಕಗಳಿಂದ ಕಲಿಸುತ್ತಾ ಬಂದಿದ್ದಾರೆ. ಸದ್ಯದ ದುಷ್ಟ “ಸಂತತಿ”ಯು ಆ ಸಂಕಟವನ್ನು ನೋಡುವುದು. ಸಾ.ಶ. 66ರಲ್ಲಿ ಗ್ಯಾಲಸನ ಆಕ್ರಮಣವು ಯೆರೂಸಲೇಮಿನ ಮೇಲೆ ಸಂಕಟದ ಆರಂಭವನ್ನು ತಂದಂತೆಯೇ, ಒಂದು ಪ್ರಾರಂಭಿಕ ಹಂತವು (ಅಂದರೆ, ಎಲ್ಲ ಸುಳ್ಳು ಧರ್ಮದ ಮೇಲೆ ದಾಳಿಯು) ಇರುವುದೆಂದು ತಿಳಿದುಬರುತ್ತದೆ.d ತರುವಾಯ, ಅನಿರ್ದಿಷ್ಟ ಕಾಲದ ವಿರಾಮದ ನಂತರ, ಅಂತ್ಯವು ಬರುವುದು. ಇದು ಸಾ.ಶ. 70ರಲ್ಲಾದ ನಾಶನಕ್ಕೆ ಸಮವಾದ ಲೋಕವ್ಯಾಪಕ ನಾಶನವಾಗಿರುವುದು.
17 ನಮ್ಮ ಮುಂದಿರುವ ಸಂಕಟದ ಕುರಿತು ಯೇಸು ಹೇಳಿದ್ದು: “ಆ ದಿನಗಳ ಸಂಕಟವು [ಸುಳ್ಳು ಧರ್ಮದ ನಾಶನ] ತೀರಿದಕೂಡಲೆ ಸೂರ್ಯನು ಕತ್ತಲಾಗಿಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು. ಆಗ ಮನುಷ್ಯ ಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು.”—ಮತ್ತಾಯ 24:29, 30.
18 ಆದಕಾರಣ, “ಆ ದಿನಗಳ ಸಂಕಟವು ತೀರಿದಕೂಡಲೆ” ಯಾವುದೊ ಬಗೆಯ ಆಕಾಶಸ್ಥ ಉತ್ಪಾತಗಳು ಸಂಭವಿಸುವವೆಂದು ಯೇಸು ತಾನೇ ಹೇಳುತ್ತಾನೆ. (ಹೋಲಿಸಿ ಯೋವೇಲ 2:28-32; 3:15.) ಇದು ಅವಿಧೇಯ ಮಾನವರನ್ನು ಎಷ್ಟು ತಬ್ಬಿಬ್ಬುಗೊಳಿಸಿ, ತಲ್ಲಣಗೊಳಿಸುವುದೆಂದರೆ ಅವರು “ಎದೆಬಡಕೊಳ್ಳುವರು.” ಅನೇಕರು “ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.” ಆದರೆ ನಿಜ ಕ್ರೈಸ್ತರು ಈ ರೀತಿಯ ಅನುಭವಕ್ಕೆ ಒಳಗಾಗರು! ಅವರು ‘ಬಿಡುಗಡೆಯು ಸಮೀಪವಾಗಿರುವ ಕಾರಣ, ತಮ್ಮ ತಲೆಯನ್ನು ಮೇಲೆತ್ತುವರು.’—ಲೂಕ 21:25, 26, 28.
ಮುಂದಿರುವ ನ್ಯಾಯತೀರ್ಪು!
19. ಕುರಿ ಮತ್ತು ಆಡುಗಳ ಸಾಮ್ಯವು ಯಾವಾಗ ನೆರವೇರುವುದೆಂದು ನಾವು ಹೇಗೆ ಹೇಳಬಲ್ಲೆವು?
19 ಮತ್ತಾಯ 24:29-31, (1) ಮನುಷ್ಯ ಕುಮಾರನು ಬರುತ್ತಾನೆಂದು, (2) ಈ ಬರುವಿಕೆ ಮಹಾ ಮಹಿಮೆಯೊಂದಿಗೆ ಕೂಡಿರುವುದೆಂದು, (3) ದೂತರು ಅವನೊಂದಿಗೆ ಇರುವರೆಂದು, ಮತ್ತು (4) ಭೂಲೋಕದ ಎಲ್ಲ ಕುಲದವರು ಅವನನ್ನು ನೋಡುವರೆಂದು ಮುಂತಿಳಿಸುವುದನ್ನು ಗಮನಿಸಿರಿ. ಯೇಸು ಕುರಿ ಮತ್ತು ಆಡುಗಳ ಸಾಮ್ಯದಲ್ಲಿ ಈ ಅಂಶಗಳನ್ನು ಮತ್ತೆ ತಿಳಿಸುತ್ತಾನೆ. (ಮತ್ತಾಯ 25:31-46) ಆದಕಾರಣ, ಸಂಕಟದ ಪ್ರಾರಂಭಿಕ ಹಂತದ ತರುವಾಯ, ಯೇಸು ತನ್ನ ದೂತರೊಂದಿಗೆ ಬಂದು ನ್ಯಾಯತೀರಿಸಲು ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಸಮಯಕ್ಕೆ ಈ ಸಾಮ್ಯವು ಸಂಬಂಧಿಸುತ್ತದೆಂದು ನಾವು ತೀರ್ಮಾನಿಸಬಲ್ಲೆವು. (ಯೋಹಾನ 5:22; ಅ. ಕೃತ್ಯಗಳು 17:31; ಹೋಲಿಸಿ 1 ಅರಸು 7:7; ದಾನಿಯೇಲ 7:10, 13, 14, 22, 26; ಮತ್ತಾಯ 19:28.) ನ್ಯಾಯತೀರ್ಪಿಗೆ ಯಾರೆಲ್ಲ ಒಳಗಾಗುವರು, ಮತ್ತು ಯಾವ ಫಲಿತಾಂಶದೊಂದಿಗೆ? ಎಲ್ಲರೂ ಯೇಸುವಿನ ಮಹಿಮಾಭರಿತ ಸಿಂಹಾಸನದ ಮುಂದೆಯೇ ನಿಂತಿರುವರೋ ಎಂಬಂತೆ, ಅವನು ಎಲ್ಲ ಜನಾಂಗಗಳ ಕಡೆಗೆ ಗಮನ ಹರಿಸುವನೆಂದು ಈ ಸಾಮ್ಯವು ತೋರಿಸುತ್ತದೆ.
20, 21. (ಎ) ಯೇಸುವಿನ ಸಾಮ್ಯದಲ್ಲಿರುವ ಕುರಿಗಳಿಗೆ ಏನು ಸಂಭವಿಸುವುದು? (ಬಿ) ಭವಿಷ್ಯತ್ತಿನಲ್ಲಿ ಆಡುಗಳು ಏನನ್ನು ಅನುಭವಿಸುವವು?
20 ಕುರಿಸದೃಶ ಸ್ತ್ರೀಪುರುಷರು ಯೇಸುವಿನ ಅನುಗ್ರಹಕ್ಕೆ, ಅಂದರೆ ಬಲಪಕ್ಕಕ್ಕೆ ಬೇರ್ಪಡಿಸಲ್ಪಡುವರು. ಏಕೆ? ಏಕೆಂದರೆ, ಕ್ರಿಸ್ತನ ಸ್ವರ್ಗೀಯ ರಾಜ್ಯದಲ್ಲಿ ಭಾಗವಹಿಸಲಿರುವ ಅಭಿಷಿಕ್ತ ಕ್ರೈಸ್ತರಿಗೆ, ಅಂದರೆ ಯೇಸುವಿನ ಸಹೋದರರಿಗೆ ಒಳ್ಳೆಯದನ್ನು ಮಾಡಲು ತಮಗಿದ್ದ ಅವಕಾಶಗಳನ್ನು ಅವರು ಉಪಯೋಗಿಸಿಕೊಂಡಿದ್ದಾರೆ. (ದಾನಿಯೇಲ 7:27; ಇಬ್ರಿಯ 2:9–3:1) ಸಾಮ್ಯಕ್ಕೆ ಸುಸಂಗತವಾಗಿ, ಲಕ್ಷಾಂತರ ಕುರಿಸದೃಶ ಕ್ರೈಸ್ತರು ಯೇಸುವಿನ ಆತ್ಮಿಕ ಸಹೋದರರನ್ನು ಗುರುತಿಸಿದ್ದಾರೆ ಮತ್ತು ಅವರಿಗೆ ಸಮರ್ಥನೆಯನ್ನು ನೀಡಿದ್ದಾರೆ. ಫಲಸ್ವರೂಪವಾಗಿ, ಈ ಮಹಾ ಸಮೂಹಕ್ಕೆ “ಮಹಾ ಸಂಕಟವನ್ನು” ಪಾರಾಗುವ ಮತ್ತು ದೇವರ ರಾಜ್ಯದ ಭೂಕ್ಷೇತ್ರವಾದ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಬೈಬಲ್ ಆಧಾರಿತ ನಿರೀಕ್ಷೆಯಿದೆ.—ಪ್ರಕಟನೆ 7:9, 14; 21:3, 4; ಯೋಹಾನ 10:16.
21 ಆದರೆ ಆಡುಸದೃಶ ಜನರು ಬಹಳ ಭಿನ್ನವಾದ ಪರಿಣಾಮಕ್ಕೆ ಒಳಗಾಗುವರು! ಯೇಸು ಬರುವಾಗ ‘ಅವರು ಎದೆಬಡಕೊಳ್ಳುವವರೋಪಾದಿ’ ಮತ್ತಾಯ 24:30ರಲ್ಲಿ ವರ್ಣಿಸಲ್ಪಟ್ಟಿದ್ದಾರೆ. ಮತ್ತು ಹಾಗೆ ವಿಷಾದಿಸಲು ಅವರಿಗೆ ಕಾರಣವಿದೆ. ಏಕೆಂದರೆ ಅವರು ರಾಜ್ಯ ಸುವಾರ್ತೆಯನ್ನು ತಿರಸ್ಕರಿಸಿದ್ದಾರೆ, ಯೇಸುವಿನ ಶಿಷ್ಯರನ್ನು ವಿರೋಧಿಸಿದ್ದಾರೆ, ಮತ್ತು ಗತಿಸಿಹೋಗುತ್ತಿರುವ ಲೋಕವನ್ನು ಇಷ್ಟಪಟ್ಟಿದ್ದಾರೆ. (ಮತ್ತಾಯ 10:16-18; 1 ಯೋಹಾನ 2:15-17) ಆಡುಸದೃಶ ಜನರು ಯಾರೆಂಬುದನ್ನು ಭೂಮಿಯಲ್ಲಿರುವ ಯೇಸುವಿನ ಶಿಷ್ಯರಲ್ಲ, ಸ್ವತಃ ಯೇಸುವೇ ನಿರ್ಧರಿಸುತ್ತಾನೆ. ಇವರ ಕುರಿತು ಅವನು ಹೇಳುವುದು: “ಇವರು ನಿತ್ಯಶಿಕ್ಷೆಗೂ . . . ಹೋಗುವರು.”—ಮತ್ತಾಯ 25:46.
22. ಯೇಸುವಿನ ಪ್ರವಾದನೆಯ ಯಾವ ಭಾಗವು ಹೆಚ್ಚಿನ ಪರಿಗಣನೆಗೆ ಯೋಗ್ಯವಾಗಿದೆ?
22 ಮತ್ತಾಯ 24 ಮತ್ತು 25ನೆಯ ಅಧ್ಯಾಯಗಳಲ್ಲಿರುವ ಪ್ರವಾದನೆಯನ್ನು ಅರ್ಥೈಸಿಕೊಳ್ಳುವುದರಲ್ಲಿ ನಾವು ಮಾಡಿರುವ ಪ್ರಗತಿಯು ರೋಮಾಂಚಕಾರಿಯಾಗಿದೆ. ಆದರೆ, ಯೇಸುವಿನ ಪ್ರವಾದನೆಯ ಒಂದು ಭಾಗವಾದ, ‘ಹಾಳುಮಾಡುವ ಅಸಹ್ಯವಸ್ತುವು ಪವಿತ್ರ ಸ್ಥಾನದಲ್ಲಿ ನಿಂತಿರುವದು’ ಎಂಬುದು ನಮ್ಮ ಹೆಚ್ಚಿನ ಗಮನಕ್ಕೆ ಯೋಗ್ಯವಾಗಿದೆ. ಈ ವಿಷಯದಲ್ಲಿ ವಿವೇಚನೆಯನ್ನು ಉಪಯೋಗಿಸುವಂತೆ ಮತ್ತು ಕ್ರಿಯೆಗೈಯಲು ಸಿದ್ಧರಾಗಿರುವಂತೆ ಯೇಸು ತನ್ನ ಹಿಂಬಾಲಕರನ್ನು ಉತ್ತೇಜಿಸಿದನು. (ಮತ್ತಾಯ 24:15, 16) ಈ “ಅಸಹ್ಯವಸ್ತುವು” ಏನಾಗಿದೆ? ಅದು ಪವಿತ್ರ ಸ್ಥಾನದಲ್ಲಿ ಯಾವಾಗ ನಿಲ್ಲುತ್ತದೆ? ನಮ್ಮ ಪ್ರಚಲಿತ ಹಾಗೂ ಭಾವೀ ಜೀವಿತದ ಪ್ರತೀಕ್ಷೆಗಳು ಹೇಗೆ ಒಳಗೊಂಡಿವೆ? ಮುಂದಿನ ಲೇಖನವು ಇದನ್ನು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಫೆಬ್ರವರಿ 15, 1994; ಅಕ್ಟೋಬರ್ 15 ಮತ್ತು ನವೆಂಬರ್ 1, 1995; ಮತ್ತು ಆಗಸ್ಟ್ 15, 1996ರ ಕಾವಲಿನಬುರುಜು ಸಂಚಿಕೆಗಳಲ್ಲಿನ ಅಭ್ಯಾಸ ಲೇಖನಗಳನ್ನು ನೋಡಿರಿ.
b ಬ್ರಿಟಿಷ್ ಪಂಡಿತ ಜಿ. ಆರ್. ಬೀಸ್ಲೀ ಮರೇ ಗಮನಿಸುವುದು: “‘ಈ ಸಂತತಿ’ ಎಂಬ ವಾಕ್ಸರಣಿಯು ತರ್ಜುಮೆಗಾರರಿಗೆ ಯಾವ ತೊಂದರೆಯನ್ನೂ ಒಡ್ಡಬಾರದು. ಆದಿಯ ಗ್ರೀಕ್ ಭಾಷೆಯಲ್ಲಿ ಯೆನೇಯಾ ಪದದ ಅರ್ಥವು ಜನನ, ಸಂತಾನ, ಮತ್ತು ಹೀಗೆ ಕುಲ ಎಂದಾಗಿದ್ದರೂ, . . . [ಗ್ರೀಕ್ ಸೆಪ್ಟುಜೆಅಂಟ್]ನಲ್ಲಿ ಅದು ಹೀಬ್ರೂ ಪದವಾದ ಡಾರ್ ಅನ್ನು ಕಾಲ, ಮಾನವಕುಲದ ಕಾಲ, ಇಲ್ಲವೆ ಸಮಕಾಲೀನರ ಅರ್ಥದಲ್ಲಿ ಸಂತತಿ ಎಂಬುದಾಗಿ ಅನೇಕ ವೇಳೆ ಭಾಷಾಂತರಿಸಲಾಯಿತು. . . . ಯೇಸು ಈ ಪದವನ್ನು ಉಪಯೋಗಿಸಿ ಮಾತಾಡಿದಾಗಲೆಲ್ಲ, ಅದಕ್ಕೆ ಇಬ್ಬಗೆಯ ಅರ್ಥವಿರುವಂತೆ ತೋರುತ್ತದೆ: ಒಂದು ಕಡೆಯಲ್ಲಿ ಅದು ಯಾವಾಗಲೂ ಅವನ ಸಮಕಾಲೀನರನ್ನು ಸೂಚಿಸಿತು, ಮತ್ತೊಂದು ಕಡೆಯಲ್ಲಿ ಅದು ಸೂಚಿತಾರ್ಥವುಳ್ಳ ವಿಮರ್ಶೆಯನ್ನು ಸೂಚಿಸಿತು.”
c ಯೆಹೂದ್ಯರ ಇತಿಹಾಸದಲ್ಲಿ ಪ್ರೊಫೆಸರ್ ಗ್ರೆಟ್ಸ್ ಹೇಳುವುದೇನೆಂದರೆ, ಕೆಲವೊಮ್ಮೆ ರೋಮನರು ದಿನಕ್ಕೆ 500 ಸೆರೆಯಾಳುಗಳನ್ನು ಶೂಲಕ್ಕೇರಿಸಿದರು. ಸೆರೆಹಿಡಿಯಲ್ಪಟ್ಟ ಇತರ ಯೆಹೂದ್ಯರ ಕೈಗಳನ್ನು ಕಡಿದುಹಾಕಿ ಅವರನ್ನು ಮತ್ತೆ ನಗರಕ್ಕೆ ಕಳುಹಿಸಲಾಯಿತು. ಅಲ್ಲಿನ ಪರಿಸ್ಥಿತಿಯು ಹೇಗಿತ್ತು? “ಹಣವು ತನ್ನ ಮೌಲ್ಯವನ್ನು ಕಳೆದುಕೊಂಡಿದ್ದ ಕಾರಣ, ಆಹಾರವನ್ನು ಖರೀದಿಸಲು ಸಾಧ್ಯವಿರಲಿಲ್ಲ. ಜನರು ಒಂದು ಹಿಡಿ ಹುಲ್ಲು, ಚರ್ಮದ ತುಂಡು, ಇಲ್ಲವೆ ನಾಯಿಗಳಿಗೆ ಎಸೆದ ಚೂರುಪಾರುಗಳಂತಹ ಅತ್ಯಂತ ಅಸಹ್ಯವಾದ ಆಹಾರಕ್ಕಾಗಿ ಬೀದಿಗಳಲ್ಲಿ ಜಗಳವಾಡಿದರು. . . . ಹೂಳಲ್ಪಡದ ಶವಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದಂತೆ, ಅಲ್ಲಿನ ಬಿಸಿ ಹವೆಯು ಮಾರಕವಾಗಿ ಪರಿಣಮಿಸಿತು. ಮತ್ತು ಜನರು ಕಾಯಿಲೆ, ಬರಗಾಲ, ಮತ್ತು ಖಡ್ಗಕ್ಕೆ ಬಲಿಯಾದರು.”
d ಭಾವೀ ಸಂಕಟದ ಈ ಅಂಶವನ್ನು ಮುಂದಿನ ಲೇಖನವು ಚರ್ಚಿಸುತ್ತದೆ.
ನಿಮಗೆ ಜ್ಞಾಪಕವಿದೆಯೇ?
◻ ಮತ್ತಾಯ 24:4-14 ಪ್ರಥಮ ಶತಮಾನದಲ್ಲಿ ಹೇಗೆ ನೆರವೇರಿತು?
◻ ಅಪೊಸ್ತಲರ ಸಮಯದಲ್ಲಿ, ಮತ್ತಾಯ 24:21, 22ರಲ್ಲಿ ಮುನ್ಸೂಚಿಸಲ್ಪಟ್ಟಂತೆ, ದಿನಗಳು ಕಡಿಮೆಮಾಡಲ್ಪಟ್ಟು, ನರಜೀವಿಯು ರಕ್ಷಿಸಲ್ಪಟ್ಟದ್ದು ಹೇಗೆ?
◻ ಮತ್ತಾಯ 24:34ರಲ್ಲಿ ಉಲ್ಲೇಖಿಸಲ್ಪಟ್ಟ “ಸಂತತಿ”ಯ ವೈಶಿಷ್ಟ್ಯವೇನು?
◻ ಎಣ್ಣೆಯ ಮರಗಳ ಗುಡ್ಡದ ಮೇಲೆ ನೀಡಲ್ಪಟ್ಟ ಪ್ರವಾದನೆಗೆ ವ್ಯಾಪಕವಾದ ಮತ್ತೊಂದು ನೆರವೇರಿಕೆಯು ಇರುವುದೆಂದು ನಮಗೆ ಹೇಗೆ ಗೊತ್ತಿದೆ?
◻ ಕುರಿ ಮತ್ತು ಆಡುಗಳ ಸಾಮ್ಯವು ಯಾವಾಗ ಮತ್ತು ಹೇಗೆ ನೆರವೇರುವುದು?
[ಪುಟ 12 ರಲ್ಲಿರುವ ಚಿತ್ರ]
ರೋಮ್ನಲ್ಲಿರುವ ಆರ್ಕ್ ಆಫ್ ಟೈಟಸ್ನ ಮೇಲಿನ ಚಿತ್ರವು, ಯೆರೂಸಲೇಮಿನ ನಾಶನದಿಂದ ಪಡೆದ ಕೊಳ್ಳೆಯನ್ನು ತೋರಿಸುತ್ತದೆ
[ಕೃಪೆ]
Soprintendenza Archeologica di Roma