ಅನಾವಶ್ಯಕ ಚಿಂತೆಯ ವಿಷಯದಲ್ಲಿ ಎಚ್ಚರವಾಗಿರಿ!
ನಾವು ಚಿಂತೆಯ ವಿಷಯದಲ್ಲಿ ಏಕೆ ಆಸಕ್ತಿವಹಿಸಬೇಕು? ನಾವು ಕೆಲವೊಮ್ಮೆ ಚಿಂತೆ ತೋರಿಸಬೇಕಾದ ಸಂದರ್ಭಗಳಿರುವುದಿಲ್ಲವೊ? ಹೌದು, ಅಂತಹ ಸಂದರ್ಭಗಳಿವೆ. ಆದರೆ ಅನಾವಶ್ಯಕ ಚಿಂತೆಯು ನಮ್ಮ ಆರೋಗ್ಯಕ್ಕೆ ಹಾನಿಕರವಾಗಿರಸಾಧ್ಯವಿದೆ. ಅದು ನಮ್ಮ ಬಲ ಹಾಗೂ ಕ್ರಿಯೆಗೈಯಲು ಮುಂತೊಡಗುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಾ, ಖಿನ್ನತೆಯನ್ನು ಉಂಟುಮಾಡಸಾಧ್ಯವಿದೆ. ಒಂದು ಪ್ರೇರಿತ ಜ್ಞಾನೋಕ್ತಿಯು ಹೇಳುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು.”—ಜ್ಞಾನೋಕ್ತಿ 12:25.
ಸತತವಾಗಿ ಯೋಚಿಸುವುದರಿಂದ ಗಂಭೀರವಾದ ಶಾರೀರಿಕ ಸಮಸ್ಯೆಗಳು ಉಂಟಾಗಸಾಧ್ಯವಿದೆಯೆಂದು ಸಂಶೋಧನೆಯು ತೋರಿಸುತ್ತದೆ. ನಿಮ್ಮ ನರವ್ಯೂಹವನ್ನು ನಿಯಂತ್ರಿಸುವ ವಿಧ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಚಿಂತೆಯು ದೇಹದ ಕ್ರಿಯೆಗಳ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು ಎಂಬುದು ವೈದ್ಯರಿಗೆ ತಿಳಿದಿದೆ. ಅದು ರಕ್ತದೊತ್ತಡವನ್ನು ಹೆಚ್ಚಿಸಬಲ್ಲದು (ಅಥವಾ ತಗ್ಗಿಸಬಲ್ಲದು); ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ಏರಿಸಬಲ್ಲದು; ಪಿತ್ತಜನಕಾಂಗದ ಮೇಲಿರುವ ಆ್ಯಡ್ರೀನಲಿನ್ನ ಮೇಲೆ ಕಾರ್ಯವೆಸಗುವ ಮೂಲಕ, ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳನ್ನು ಉಂಟುಮಾಡಬಲ್ಲದು. ಅದು ನಿಮ್ಮ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಹೃದಯವು ಬಡಿಯುವಾಗ ಉಂಟಾಗುವ ವಿದ್ಯುದಲೆಗಳ ದಾಖಲೆ) ಅನ್ನು ಸಹ ಬದಲಾಯಿಸಬಲ್ಲದು. ಡಾ. ಚಾರ್ಲ್ಸ್ ಮಯೊ ಹೇಳಿದ್ದು: ‘ಚಿಂತೆಯು, ರಕ್ತ ಪರಿಚಲನೆ, ಹೃದಯ, ಗ್ರಂಥಿಗಳು, ಹಾಗೂ ಇಡೀ ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ.’”—ಡಾ. ಪಿ. ಸ್ಟೈನ್ಕ್ರಾನ್ ಹಾಗೂ ಡಾ. ಡಿ. ಲಾಫಿಯ ಅವರಿಂದ, 1970, ಪು. 14.
ಅನಾವಶ್ಯಕವಾದ ಚಿಂತೆಯು ಆತ್ಮಿಕ ಹಾನಿಗೂ ಮುನ್ನಡಿಸಬಹುದು; ಇದು ಇನ್ನೂ ಹೆಚ್ಚು ಗಂಭೀರವಾದದ್ದಾಗಿದೆ. ಆದುದರಿಂದಲೇ, ಚಿಂತೆಯ ಪರಿಣಾಮಗಳ ಕುರಿತು ಬೈಬಲು ಅತ್ಯಧಿಕ ವಿಷಯಗಳನ್ನು ತಿಳಿಸುತ್ತದೆ. ಅನೇಕ ಹೀಬ್ರು ಶಬ್ದಗಳು, ಚಿಂತೆ ಅಥವಾ ಆತಂಕದ ಅರ್ಥವನ್ನು ಕೊಡುತ್ತವೆ. ಇವುಗಳಲ್ಲಿ ಒಂದು (ಟ್ಸರಾರ್) ಎಂಬ ಶಬ್ದವಾಗಿದ್ದು, ಭೌತಿಕ ಅರ್ಥದೊಂದಿಗೆ ಸಂಬಂಧಿಸಿದ್ದಾಗಿದೆ ಮತ್ತು ಅದನ್ನು ‘ಗಂಟುಕಟ್ಟು,’ ‘ಮುಚ್ಚಿಬಿಡು’ (NW), ಮತ್ತು ‘ಸಂಕೋಚ,’ ಎಂದು ಭಾಷಾಂತರಿಸಲಾಗಿದೆ. (ವಿಮೋಚನಕಾಂಡ 12:34; ಜ್ಞಾನೋಕ್ತಿ 26:8; ಯೆಶಾಯ 49:19) ಸಾಂಕೇತಿಕ ರೀತಿಯಲ್ಲಿ ಹೇಳುವುದಾದರೆ, ಅದು “ಕಳವಳಗೊಳ್ಳು; ಇಕ್ಕಟ್ಟಿನಲ್ಲಿರು” ಎಂಬುದನ್ನು ಅರ್ಥೈಸುತ್ತದೆ. (ಆದಿಕಾಂಡ 32:7; 1 ಸಮುವೇಲ 28:15) ಇನ್ನೊಂದು ಶಬ್ದವು ದಾಗ್ ಆಗಿದ್ದು, “ಚಿಂತೆಯಲ್ಲಿರು; ಬೆದರಿಹೋಗು” ಎಂದು ಭಾಷಾಂತರಿಸಲ್ಪಡುತ್ತದೆ; ಇದು ದಿಯಾಗ್ಹ ಎಂಬ ಶಬ್ದಕ್ಕೆ ಸಂಬಂಧಿಸಿದ್ದಾಗಿದ್ದು, ಇದರ ಅರ್ಥ “ಕಳವಳ” ಎಂದಾಗಿದೆ. (1 ಸಮುವೇಲ 9:5; ಯೆಶಾಯ 57:11; ಜ್ಞಾನೋಕ್ತಿ 12:25) ಮೆರಿಮ್ನ ಎಂಬ ಗ್ರೀಕ್ ನಾಮಪದವು “ಚಿಂತೆ” ಎಂದು ಭಾಷಾಂತರಿಸಲ್ಪಡುತ್ತದೆ, ಆದರೆ ಮೆರಿಮ್ನಾಒ ಎಂಬ ಸಂಬಂಧಿತ ಕ್ರಿಯಾಪದದ ಅರ್ಥ “ಚಿಂತೆಮಾಡು”ವುದಾಗಿದೆ.—ಮತ್ತಾಯ 13:22; ಲೂಕ 12:22.
ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಅನೇಕವೇಳೆ ಜೀವಿತದ ಒಂದು ಭಾಗವಾಗಿರುವ ಸಮಸ್ಯೆಗಳ ಕುರಿತು ಕಳವಳಪಡುವುದು, ‘ದೇವರ ವಾಕ್ಯ’ಕ್ಕಾಗಿರುವ ಗಣ್ಯತೆಯನ್ನು ಸಂಪೂರ್ಣವಾಗಿ ತಡೆಯಸಾಧ್ಯವಿದೆ ಎಂದು ಯೇಸು ಕ್ರಿಸ್ತನು ಸೂಚಿಸಿದನು. ಮುಳ್ಳುಗಳು, ಬೀಜ ಮೊಳೆತ ಸಸಿಗಳು ಬೆಳೆದು ಫಲವನ್ನು ಫಲಿಸದಂತೆ ಮಾಡಲು ಸಾಧ್ಯವಿರುವಂತೆಯೇ, ಚಿಂತೆಯು ನಮ್ಮ ಆತ್ಮಿಕ ಬೆಳವಣಿಗೆಯನ್ನು ಹಾಗೂ ನಾವು ದೇವರಿಗೆ ಸಲ್ಲಿಸುವ ಸ್ತುತಿಯನ್ನು ತಡೆಗಟ್ಟಸಾಧ್ಯವಿದೆ. (ಮತ್ತಾಯ 13:22; ಮಾರ್ಕ 4:18, 19; ಲೂಕ 8:7, 11, 14) ಈ ಚಿಂತೆಗಳು ತಮ್ಮ ಜೀವಿತವನ್ನು ನಿಯಂತ್ರಿಸುವಂತೆ ಬಿಟ್ಟುಕೊಟ್ಟವರು, ಅಂದರೆ ಆತ್ಮಿಕ ಅಭಿರುಚಿಗಳನ್ನು ತೊರೆದವರು, ದೇವಕುಮಾರನು ತನ್ನ ಮಹಿಮೆಯೊಡನೆ ಬರುವಾಗ, ಅವನು ಅವರನ್ನು ಅಲ್ಲಗಳೆಯುವಂತಹ—ನಿತ್ಯ ನಷ್ಟವನ್ನು ಅನುಭವಿಸುವ—ಸ್ಥಿತಿಯಲ್ಲಿ ತಮ್ಮನ್ನು ಕಂಡುಕೊಳ್ಳಸಾಧ್ಯವಿದೆ ಎಂದು, ‘ಕಡೇ ದಿವಸಗಳ’ ಕುರಿತಾದ ತನ್ನ ಪ್ರವಾದನೆಯಲ್ಲಿ ಅವನು ಎಚ್ಚರಿಸಿದನು.—ಲೂಕ 21:34-36.
ಯೋಗ್ಯವಾದ ಚಿಂತೆಗಳು ಅಥವಾ ಕಳವಳಗಳು
ಯಾವ ವಿಷಯಗಳ ಕುರಿತು ಚಿಂತಿಸುವುದು ಒಳಿತಾಗಿದೆ? ಮೊದಲಾಗಿ, ಯೆಹೋವ ದೇವರ ಸಮರ್ಪಿತ ಸೇವಕರಿಂದ ಆನಂದಿಸಲ್ಪಡುವ ಆಶೀರ್ವಾದಗಳನ್ನು ಪಡೆದುಕೊಳ್ಳುವ ಸಲುವಾಗಿ, ಆತನನ್ನು ಪ್ರಸನ್ನಗೊಳಿಸುವಂತಹ ವಿಷಯಗಳ ಕುರಿತಾಗಿ ಚಿಂತಿಸುವುದು ಯೋಗ್ಯವಾಗಿದೆ. ಅಷ್ಟುಮಾತ್ರವಲ್ಲ, ಗಂಭೀರವಾದ ತಪ್ಪನ್ನು ಮಾಡಿರುವ ದೋಷಿಯೊಬ್ಬನಿಗೆ, ಕೀರ್ತನೆಗಾರನಂತಹ ಅನಿಸಿಕೆಯಾಗಬೇಕು: “ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನ [“ಚಿಂತೆ,” NW]ವುಂಟಾಯಿತು.” (ಕೀರ್ತನೆ 38:18) ಪಾಪದ ಕುರಿತಾದ ಯೋಗ್ಯ ಕಳವಳವು, ಪಾಪ ನಿವೇದನೆಮಾಡಿಕೊಳ್ಳುವಂತೆ, ಪಶ್ಚಾತ್ತಾಪಪಡುವಂತೆ, ಹಾಗೂ ತಪ್ಪು ಮಾರ್ಗದಿಂದ ಹಿಂದಿರುಗುವಂತೆ, ಸರ್ವೋನ್ನತ ದೇವರೊಂದಿಗೆ ಪುನಃ ಒಂದು ಒಳ್ಳೆಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವಂತೆ ಮಾಡುತ್ತದೆ. ಇದಲ್ಲದೆ ಕ್ರೈಸ್ತರು, ಜೊತೆ ವಿಶ್ವಾಸಿಗಳ ಆತ್ಮಿಕ, ಶಾರೀರಿಕ, ಹಾಗೂ ಪ್ರಾಪಂಚಿಕ ಹಿತದ ಕುರಿತು ಚಿಂತಿಸಬೇಕು, ಅಥವಾ ನಿಜವಾಗಿಯೂ ಕಾಳಜಿವಹಿಸಬೇಕು. (1 ಕೊರಿಂಥ 12:25-27) ಈ ರೀತಿಯ ಕಳವಳವು, ಅಪೊಸ್ತಲ ಯೋಹಾನನು ಗಾಯನಿಗೆ ಬರೆದ ಪತ್ರದಲ್ಲಿ ಪ್ರತಿಬಿಂಬಿತವಾಗಿತ್ತು: “ಪ್ರಿಯನೇ, ನೀನು ಆತ್ಮವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಪ್ರಾರ್ಥಿಸುತ್ತೇನೆ.” (3 ಯೋಹಾನ 2) ಅಪೊಸ್ತಲ ಪೌಲನು “ಎಲ್ಲಾ ಸಭೆಗಳ ವಿಷಯವಾದ ಚಿಂತೆ”ಯ ಕುರಿತು ಮಾತಾಡಿದನು. (2 ಕೊರಿಂಥ 11:28) ದೇವಕುಮಾರನ ಎಲ್ಲ ನಂಬಿಗಸ್ತ ಶಿಷ್ಯರು, ಕಡೆಯ ವರೆಗೂ ನಂಬಿಗಸ್ತಿಕೆಯಿಂದ ಉಳಿಯುವ ವಿಷಯದಲ್ಲಿ ಅವನು ತುಂಬ ಕಳವಳವುಳ್ಳವನಾಗಿದ್ದನು.
“ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸು”ವುದು, ಅಂದರೆ ದೇವಕುಮಾರನ ಅಭಿರುಚಿಗಳಿಗೆ ಒತ್ತಾಸೆಕೊಡುವ ಪ್ರತಿಯೊಂದು ವಿಷಯದ ಬಗ್ಗೆ ಕಾಳಜಿವಹಿಸುವುದರ ಕುರಿತು ಶಾಸ್ತ್ರವಚನಗಳು ಸೂಚಿಸುತ್ತವೆ. ಅವಿವಾಹಿತ ಕ್ರೈಸ್ತರಿಗೆ, ಒಬ್ಬ ಸಂಗಾತಿಯ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹೊರಬೇಕಾಗಿರುವುದಿಲ್ಲ ಅಥವಾ ಅವರನ್ನು ನೋಡಿಕೊಳ್ಳಬೇಕಾಗಿರುವುದಿಲ್ಲ. ಆದುದರಿಂದ ವಿವಾಹಿತರಿಗಿಂತಲೂ ಇವರಿಗೆ “ಪ್ರಪಂಚದ ಕಾರ್ಯಗಳನ್ನು ಕುರಿತು” ಕಡಿಮೆ ಚಿಂತಿಸಲಿಕ್ಕಿರುತ್ತದೆ ಮತ್ತು ಅವರು “ಕರ್ತನ ಕಾರ್ಯಗಳಿಗೆ” ಹೆಚ್ಚು ಗಮನಕೊಡುತ್ತಾರೆ.—1 ಕೊರಿಂಥ 7:32-35.
ಇನ್ನೊಂದು ಕಡೆಯಲ್ಲಿ, ಕ್ರೈಸ್ತ ಪತಿಪತ್ನಿಯರು “ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸ”ಸಾಧ್ಯವಿದೆ ಎಂದು ಅಪೊಸ್ತಲ ಪೌಲನು ಬರೆದನು. ಆದರೆ ಅವಿವಾಹಿತ ಕ್ರೈಸ್ತರಿಗೆ ಈ ಅಪಕರ್ಷಣೆಗಳು ಇರುವುದಿಲ್ಲ. ಒಬ್ಬ ಅವಿವಾಹಿತ ವ್ಯಕ್ತಿಗೆ ವೈಯಕ್ತಿಕ ಆರೈಕೆ ಹಾಗೂ ಮನೆಯನ್ನು ನೋಡಿಕೊಳ್ಳಲು ಮತ್ತು ಜೀವಿತದ ಆವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿಗಳನ್ನು ಪೂರೈಸಲು ಬೇಕಾದಷ್ಟು ಸಮಯವು ದೊರಕುತ್ತದೆ; ಆದರೆ ಒಂದು ಕುಟುಂಬಕ್ಕೆ ಇದನ್ನು ಪೂರೈಸಲು ಸಮಯವು ಸಾಕಾಗುವುದಿಲ್ಲ. ಮತ್ತು ಪತಿಪತ್ನಿಯ ಅನ್ಯೋನ್ಯ ಸಂಬಂಧದ ಕಾರಣದಿಂದ, ಇಡೀ ಕುಟುಂಬದ ಶಾರೀರಿಕ, ಮಾನಸಿಕ, ಭಾವನಾತ್ಮಕ, ಹಾಗೂ ಆತ್ಮಿಕ ಹಿತಕ್ಷೇಮಕ್ಕೆ ಸಹಾಯ ಮಾಡುವಂತಹ ಒದಗಿಸುವಿಕೆಗಳಲ್ಲಿ, ಅವರು ಒಬ್ಬರು ಇನ್ನೊಬ್ಬರನ್ನು ಸಂತೋಷಪಡಿಸಲು ಯೋಗ್ಯವಾಗಿಯೇ ಚಿಂತಿಸುತ್ತಾರೆ ಅಥವಾ ಕಳವಳಪಡುತ್ತಾರೆ. ಮಕ್ಕಳಿರುವ ವಿವಾಹಿತ ದಂಪತಿಗಳು, ಅನಾರೋಗ್ಯ, ತುರ್ತುಪರಿಸ್ಥಿತಿ, ದೌರ್ಬಲ್ಯಗಳು, ಅಥವಾ ಅಂಗವಿಕಲತೆಗಳೊಂದಿಗೆ ಹೆಣಗಾಡಬೇಕಾಗಿಲ್ಲವಾದರೂ, ಮಾನವ ಜೀವಿತಕ್ಕೆ ಸಂಬಂಧಿಸಿದ ಅಶಾಸ್ತ್ರೀಯ ಚಟುವಟಿಕೆಗಳಿಗೆ ಹೆಚ್ಚೆಚ್ಚು ಸಮಯವನ್ನು ವಿನಿಯೋಗಿಸುವಂತೆ, ಅಥವಾ “ಪ್ರಪಂಚದ ಕಾರ್ಯಗಳ ಕುರಿತು ಚಿಂತಿ”ಸುವಂತೆ ಅಗತ್ಯಪಡಿಸಲ್ಪಡುತ್ತಾರೆ. ಆದರೆ ಅವಿವಾಹಿತ ಕ್ರೈಸ್ತರಿಗೆ ಈ ಎಲ್ಲ ಅಡಚಣೆಗಳಿರುವುದಿಲ್ಲ.
ಆದರೂ, ವಿವಾಹಿತ ದಂಪತಿಗಳಾಗಿದ್ದು, ಒಂದು ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯಿರುವವರು ಸಹ, ಲೌಕಿಕ ಚಿಂತೆಗಳು ತಮ್ಮ ಜೀವಿತಗಳಲ್ಲಿ ಪ್ರಾಮುಖ್ಯ ಸ್ಥಾನವನ್ನು ತೆಗೆದುಕೊಳ್ಳುವಂತೆ ಬಿಡಬಾರದು. ಲಾಜರನ ತಂಗಿಯಾದ ಮಾರ್ಥಳಿಗೆ ಯೇಸು ಕ್ರಿಸ್ತನು ಇದನ್ನು ಸ್ಪಷ್ಟಪಡಿಸಿದನು. ತನ್ನ ಅತಿಥಿಗಳನ್ನು ತೃಪ್ತಿಪಡಿಸುವುದರ ಕುರಿತು ಚಿಂತೆಯುಳ್ಳವಳಾಗಿದ್ದು, ಯೇಸು ಹೇಳುವಂತಹ ಮಾತುಗಳಿಗೆ ಗಮನಕೊಡಲಿಕ್ಕಾಗಿ ಸಮಯವನ್ನು ಮಾಡಿಕೊಳ್ಳಲು ಅವಳು ಅಸಮರ್ಥಳಾದಳು. ಮರಿಯಳಾದರೋ “ಉತ್ತಮ ಭಾಗವನ್ನು ಆರಿಸಿಕೊಳ್ಳಲು,” ದೇವಕುಮಾರನಿಂದ ಆತ್ಮಿಕ ಪೋಷಣೆಯನ್ನು ಪಡೆದುಕೊಳ್ಳಲು ಶಕ್ತಳಾಗಿದ್ದಳು.—ಲೂಕ 10:38-42.
ಅನಾವಶ್ಯಕ ಚಿಂತೆಗಳನ್ನು ದೂರಮಾಡುವುದು
ಹಾಗಾದರೆ ನಾವು ಅನಾವಶ್ಯಕ ಚಿಂತೆಯನ್ನು ಹೇಗೆ ದೂರಮಾಡಸಾಧ್ಯವಿದೆ? ತನ್ನ ಸೇವಕರ ಹಿತಕ್ಷೇಮಕ್ಕಾಗಿ ಯೆಹೋವನು ತೋರಿಸುವ ಪ್ರೀತಿಪೂರ್ಣ ಕಾಳಜಿಯಲ್ಲಿ ಸಂಪೂರ್ಣವಾಗಿ ಭರವಸೆಯಿಡುವುದು, ಅನಗತ್ಯವಾದ ಚಿಂತೆಯನ್ನು ದೂರಮಾಡಲು ನಮಗೆ ಸಹಾಯ ಮಾಡಬಲ್ಲದು. ಪ್ರವಾದಿಯಾದ ಯೆರೆಮೀಯನು ಹೇಳಿದ್ದು: “ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅಂತಹ ದೃಢಕಾಯನು ಧನ್ಯನು. . . . ಅವನು ಎಂದಿಗೂ ಚಿಂತೆಪಡುವುದಿಲ್ಲ, ಮತ್ತು ಸದಾ ಫಲವನ್ನು ಫಲಿಸುತ್ತಾ ಇರುವನು.” (ಯೆರೆಮೀಯ 17:7, 8, NW) ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಕ್ರಿಸ್ತನು ಇದೇ ಅಭಿಪ್ರಾಯೋಕ್ತಿಯನ್ನು ನುಡಿದನು. ಚಿಂತೆಯ ಕುರಿತಾದ ತನ್ನ ಸಲಹೆಯನ್ನು ಅವನು ಈ ಮಾತುಗಳಿಂದ ಮುಕ್ತಾಯಗೊಳಿಸಿದನು: “ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.” (ಮತ್ತಾಯ 6:25-34) ಒಬ್ಬ ಕ್ರೈಸ್ತನಿಗಾದರೋ, ಪ್ರತಿ ದಿನ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಿಕ್ಕಿರುತ್ತದೆ; ಆ ಸಮಸ್ಯೆಗಳ ಜೊತೆಗೆ, ನಾಳೆ ಏನು ಸಂಭವಿಸುತ್ತದೋ ಎಂಬ ಚಿಂತೆಯನ್ನೂ ಅವನು ಕೂಡಿಸಬಹುದು. ಆದರೆ ವಾಸ್ತವದಲ್ಲಿ ಕೆಲವೊಮ್ಮೆ ಆ ಸಮಸ್ಯೆಗಳು ತಲೆದೋರುವುದೇ ಇಲ್ಲ.
ಹಿಂಸೆಯ ಸಮಯಗಳಲ್ಲಿ, ಪ್ರಶ್ನೆಮಾಡುವಂತಹ ಅಧಿಕಾರಿಗಳ ಮುಂದೆ ಒಬ್ಬ ಕ್ರೈಸ್ತನನ್ನು ಹಾಜರುಪಡಿಸಲಾಗುವುದಾದರೂ, ದೇವರ ಸಹಾಯದಲ್ಲಿನ ಅವನ ಭರವಸೆಯು ಅವನನ್ನು ಚಿಂತೆಯಿಂದ ವಿಮೋಚಿಸಬಲ್ಲದು. ಆ ವ್ಯಕ್ತಿಯ ಪರೀಕ್ಷೆಯ ಸಮಯದಲ್ಲಿ, ಪವಿತ್ರಾತ್ಮದ ಮೂಲಕ ಅವನನ್ನು ಸಂರಕ್ಷಿಸುವೆನು ಮತ್ತು ಅತ್ಯುತ್ತಮ ವಿಧದಲ್ಲಿ ಸಾಕ್ಷಿಯನ್ನು ಕೊಡುವಂತೆ ಅವನನ್ನು ಬಲಪಡಿಸುವೆನು ಎಂದು, ಯೆಹೋವನು ತನ್ನ ವಾಕ್ಯದಲ್ಲಿ ನಂಬಿಗಸ್ತ ಸೇವಕರಿಗೆ ಆಶ್ವಾಸನೆ ನೀಡುತ್ತಾನೆ.—ಮತ್ತಾಯ 10:18-20; ಲೂಕ 12:11, 12.
ಆದುದರಿಂದ, ನಮಗೆ ಚಿಂತೆಯನ್ನು ಉಂಟುಮಾಡುವಂತಹ ಯಾವುದೇ ವಿಷಯದಲ್ಲಿ ತಲ್ಲೀನರಾಗಿರುವಾಗ, ಅಸಹಾಯಕತೆ ಹಾಗೂ ಭಯದಿಂದ ತುಂಬಿರುವಾಗ, ನಾವು ಪ್ರಾರ್ಥನೆಯಲ್ಲಿ ನಮ್ಮ ಸ್ವರ್ಗೀಯ ತಂದೆಯ ಕಡೆಗೆ ತಿರುಗಬೇಕು. ಹೀಗೆ ನಾವು ‘ನಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕ’ಸಾಧ್ಯವಿದೆ, ಮತ್ತು ನಮ್ಮ ವಿಷಯದಲ್ಲಿ ಕಾಳಜಿ ತೋರಿಸುವ ಒಬ್ಬಾತನು ನಮ್ಮ ಪ್ರಾರ್ಥನೆಗೆ ಕಿವಿಗೊಡುತ್ತಾನೆ ಎಂಬ ದೃಢವಿಶ್ವಾಸದಿಂದ ಇರಸಾಧ್ಯವಿದೆ. (1 ಪೇತ್ರ 5:7) “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ” ಎಂದು ಪೌಲನು ಹೇಳುತ್ತಾನೆ. ಇದರ ಫಲಿತಾಂಶವೇನೆಂದರೆ, ನಾವು ಆಂತರಿಕ ನೆಮ್ಮದಿಯನ್ನು, ಅಂದರೆ ದೇವರ ಶಾಂತಿಯನ್ನು ಪಡೆದುಕೊಳ್ಳುವೆವು; ಅದು ನಮ್ಮ ಹೃದಯಗಳನ್ನೂ ಮಾನಸಿಕ ಶಕ್ತಿಗಳನ್ನೂ ಕಾಪಾಡುವುದು. (ಫಿಲಿಪ್ಪಿ 4:6, 7) ನಮ್ಮ ಆಂತರ್ಯದಲ್ಲಿ, ಅಂದರೆ ನಮ್ಮ ಹೃದಯದಲ್ಲಿ ನಮಗಾಗುವ ಅಸಹಾಯಕತೆ, ಕೇಡಿನ ಮುನ್ಸೂಚನೆ, ಹಾಗೂ ಅಪಾಯದ ಭೀತಿಯಿಂದ ಬಿಡುಗಡೆ ದೊರೆಯುತ್ತದೆ. ಮತ್ತು ಚಿಂತೆಯಿಂದ ಉಂಟಾಗುವ ಅಪಕರ್ಷಣೆಗಳು ಹಾಗೂ ಜಟಿಲ ಸ್ಥಿತಿಗಳಿಂದ ನಮ್ಮ ಮನಸ್ಸುಗಳು ಗಲಿಬಿಲಿಗೊಳ್ಳುವುದಿಲ್ಲ. ಆದುದರಿಂದ, ನಾವು ಪವಿತ್ರ ಶಾಸ್ತ್ರಗಳ ವಿವೇಕಯುತ ಸಲಹೆಯನ್ನು ಅನುಸರಿಸಿ, ಅನಾವಶ್ಯಕ ಚಿಂತೆಯನ್ನು ದೂರಮಾಡೋಣ.