ಲೂಕ
12 ಆ ಸಮಯದಲ್ಲಿ ಸಾವಿರಾರು ಜನ ಒಂದು ಕಡೆ ಸೇರಿಬಂದಿದ್ರು. ಎಷ್ಟು ಕಿಕ್ಕಿರಿದು ಹೋಗಿದ್ದರಂದ್ರೆ ಒಬ್ಬರನ್ನೊಬ್ರು ತುಳಿದಾಡ್ತಾ ಇದ್ರು. ಆಗ ಯೇಸು ಶಿಷ್ಯರಿಗೆ ಹೀಗಂದನು “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದ್ರೆ ಅವರು ಮಾಡೋ ಮೋಸದ ಬಗ್ಗೆ ಹುಷಾರಾಗಿರಿ.+ 2 ಮುಚ್ಚಿಟ್ಟಿರೋ ಎಲ್ಲ ವಿಷ್ಯಗಳು ಹೊರಗೆ ಬಂದೇ ಬರುತ್ತೆ, ಗುಟ್ಟು ಖಂಡಿತ ರಟ್ಟಾಗುತ್ತೆ.+ 3 ಹಾಗಾಗಿ ನೀವು ಕತ್ತಲಲ್ಲಿ ಹೇಳಿದ್ದು ಬೆಳಕಲ್ಲಿ ಕೇಳಿಸುತ್ತೆ. ನೀವು ಮನೆಯಲ್ಲಿ ಗುಸುಗುಸು ಅನ್ನೋದನ್ನ ಮನೆ ಮೇಲಿಂದ ಕೂಗಿ ಹೇಳ್ತಾರೆ. 4 ಸ್ನೇಹಿತರೇ,+ ನಾನು ಹೇಳೋದನ್ನ ಕೇಳಿ, ನಿಮ್ಮನ್ನ ಕೊಲ್ಲುವವ್ರಿಗೆ ಹೆದ್ರಬೇಡಿ. ಯಾಕಂದ್ರೆ ಕೊಂದ ಮೇಲೆ ಅವ್ರಿಂದ ಏನೂ ಮಾಡೋಕಾಗಲ್ಲ.+ 5 ಆದ್ರೆ ನೀವು ಯಾರಿಗೆ ಭಯಪಡಬೇಕು ಅಂತ ನಾನು ಹೇಳ್ತೀನಿ ನಿಮ್ಮನ್ನ ಕೊಲ್ಲೋದಷ್ಟೆ ಅಲ್ಲ, ಕೊಂದ ಮೇಲೆ ಸಂಪೂರ್ಣ ನಾಶ*+ ಮಾಡೋ ಅಧಿಕಾರ ಇರೋ ದೇವರಿಗೆ ಭಯಪಡಿ. ಹೌದು, ಆತನಿಗೆ ಮಾತ್ರ ಭಯಪಡಿ.+ 6 ಕಮ್ಮಿ ಬೆಲೆಯ ಎರಡು ನಾಣ್ಯಕ್ಕೆ* ಐದು ಗುಬ್ಬಿ ಸಿಗುತ್ತಲ್ಲಾ? ಹಾಗಿದ್ರೂ ನಿಮ್ಮ ತಂದೆ ಅದ್ರಲ್ಲಿ ಒಂದನ್ನೂ ಮರೆಯಲ್ಲ.*+ 7 ನಿಮ್ಮ ತಲೆಯಲ್ಲಿ ಎಷ್ಟು ಕೂದಲಿದೆ ಅಂತಾನೂ ದೇವರಿಗೆ ಗೊತ್ತು.+ ಹಾಗಾಗಿ ಹೆದ್ರಬೇಡಿ. ಈ ಚಿಕ್ಕ ಗುಬ್ಬಿಗಳಿಗಿಂತ ನಿಮಗೆ ತುಂಬ ಬೆಲೆ ಇದೆ.+
8 “ಇದನ್ನ ನೆನಪಲ್ಲಿಡಿ, ಜನ್ರ ಮುಂದೆ ‘ನಾನು ಯೇಸುವಿನ ಶಿಷ್ಯ’ ಅಂತ ಹೇಳೋರನ್ನ+ ಮನುಷ್ಯಕುಮಾರ ಕೂಡ ದೇವದೂತರ ಮುಂದೆ ‘ಹೌದು, ಇವನು ನನ್ನ ಶಿಷ್ಯ’ ಅಂತ ಹೇಳ್ತಾನೆ.+ 9 ಆದ್ರೆ ಜನ್ರ ಮುಂದೆ ‘ಯೇಸು ನನಗೆ ಗೊತ್ತಿಲ್ಲ’ ಅಂತ ಹೇಳೋರನ್ನ ನಾನೂ ದೇವದೂತರ ಮುಂದೆ ‘ಅವನು ಯಾರಂತ ನಂಗೂ ಗೊತ್ತಿಲ್ಲ’ ಅಂತ ಹೇಳ್ತೀನಿ.+ 10 ಮನುಷ್ಯಕುಮಾರನ ವಿರುದ್ಧ ಮಾತಾಡಿದ್ರೆ ಕ್ಷಮೆ ಸಿಗುತ್ತೆ. ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಕ್ಷಮೆ ಸಿಗಲ್ಲ.+ 11 ಅವರು ನಿಮ್ಮನ್ನ ಸಾರ್ವಜನಿಕ ಸಭೆಗಳ* ಮುಂದೆ, ರಾಜ್ಯಪಾಲರ ಮುಂದೆ, ಸರಕಾರಿ ಅಧಿಕಾರಿಗಳ ಮುಂದೆ ಎಳ್ಕೊಂಡು ಹೋದ್ರೆ ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಅಂತ ಚಿಂತೆ ಮಾಡಬೇಡಿ.+ 12 ಯಾಕಂದ್ರೆ ಆ ಸಮಯದಲ್ಲಿ ಏನು ಹೇಳಬೇಕಂತ ಪವಿತ್ರಶಕ್ತಿನೇ ಕಲಿಸುತ್ತೆ.”+
13 ಆಗ ಗುಂಪಲ್ಲಿದ್ದ ಒಬ್ಬ “ಗುರು, ನಮ್ಮ ಅಪ್ಪನ ಆಸ್ತಿಯಲ್ಲಿ ನನ್ನ ಪಾಲನ್ನ ಕೊಡೋಕೆ ನನ್ನ ಅಣ್ಣನಿಗೆ ಹೇಳು” ಅಂದ. 14 ಅದಕ್ಕೆ ಯೇಸು “ನನ್ನನ್ನ ನಿಮ್ಮ ನ್ಯಾಯಾಧೀಶನಾಗಿ ದಲ್ಲಾಳಿಯಾಗಿ ನೇಮಿಸಿದ್ದು ಯಾರು?” ಅಂತ ಕೇಳಿದನು. 15 “ಹುಷಾರಾಗಿರಿ, ಯಾವುದೇ ರೀತಿಯ ದುರಾಸೆಗೆ* ಅವಕಾಶ ಕೊಡಬೇಡಿ.+ ಯಾಕಂದ್ರೆ ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ” ಅಂದನು.+ 16 ಆಮೇಲೆ ಒಂದು ಉದಾಹರಣೆ ಹೇಳಿದನು “ಒಬ್ಬ ಶ್ರೀಮಂತನ ಹೊಲ ಚೆನ್ನಾಗಿ ಫಲಕೊಡ್ತು. 17 ಆಗ ಅವನು ‘ನನ್ನ ಬೆಳೆ ತುಂಬಿಡೋಕೆ ಎಲ್ಲೂ ಸ್ಥಳ ಇಲ್ಲ. ಏನು ಮಾಡ್ಲಿ? 18 ಒಂದು ಕೆಲಸ ಮಾಡ್ತೀನಿ.+ ಎಲ್ಲ ಗೋಡೌನ್ ಒಡೆದು ಇನ್ನೂ ದೊಡ್ಡ ಗೋಡೌನ್ಗಳನ್ನ ಕಟ್ಟಿಸ್ತೀನಿ. ಅಲ್ಲಿ ದವಸಧಾನ್ಯಗಳನ್ನ, ನನ್ನ ಎಲ್ಲ ವಸ್ತುಗಳನ್ನ ತುಂಬಿಸ್ತೀನಿ’ ಅಂತ ಯೋಚಿಸಿದ. 19 ಆಮೇಲೆ ‘ತುಂಬ ವರ್ಷಗಳಿಗೆ ಸಾಕಾಗುವಷ್ಟು ವಸ್ತುಗಳನ್ನ ಕೂಡಿಟ್ಟಿದ್ದೀನಿ. ಇನ್ನು ಆರಾಮವಾಗಿ ಇರ್ತಿನಿ, ತಿಂದು ಕುಡಿದು ಮಜಾ ಮಾಡ್ತೀನಿ’ ಅಂತಾನೂ ಅಂದ್ಕೊಂಡ. 20 ಆದ್ರೆ ದೇವರು ‘ಬುದ್ಧಿ ಇಲ್ಲದವನೇ, ಇವತ್ತು ರಾತ್ರಿನೇ ನಿನ್ನ ಪ್ರಾಣ ಹೋಗುತ್ತೆ. ನೀನು ಕೂಡಿಸಿ ಇಟ್ಟಿದ್ದೆಲ್ಲ ಯಾರು ಅನುಭವಿಸ್ತಾರೆ?’ ಅಂತ ಕೇಳಿದನು.+ 21 ದೇವರ ದೃಷ್ಟಿಯಲ್ಲಿ ಶ್ರೀಮಂತರಾಗೋದು ಬಿಟ್ಟು, ತಮಗೋಸ್ಕರ ಹಣ-ಆಸ್ತಿ ಕೂಡಿಸಿಡೋ ಜನ್ರಿಗೂ ಇದೇ ಗತಿ ಆಗುತ್ತೆ.”+
22 ಆಮೇಲೆ ಯೇಸು ಶಿಷ್ಯರಿಗೆ ಹೀಗಂದನು “ಅದಕ್ಕೇ ನಿಮಗೆ ಹೇಳ್ತಿದ್ದೀನಿ, ಜೀವನ ಮಾಡೋಕೆ ಏನು ತಿನ್ನಬೇಕು, ದೇಹಕ್ಕೆ ಏನು ಹಾಕೊಬೇಕು ಅಂತ ಚಿಂತೆ ಮಾಡೋದನ್ನ ಬಿಟ್ಟುಬಿಡಿ.+ 23 ಯಾಕಂದ್ರೆ ಊಟಕ್ಕಿಂತ ಪ್ರಾಣಕ್ಕೆ, ಬಟ್ಟೆಗಿಂತ ದೇಹಕ್ಕೆ ಹೆಚ್ಚು ಬೆಲೆಯಿದೆ. 24 ಕಾಗೆಗಳನ್ನ ನೋಡಿ. ಅವು ಬೀಜ ಬಿತ್ತಲ್ಲ, ಕೊಯ್ಯಲ್ಲ. ಅವುಗಳಿಗೆ ಗೋಡೌನ್ಗಳೂ ಇಲ್ಲ. ಆದ್ರೂ ದೇವರು ಕಾಗೆಗಳನ್ನ ನೋಡ್ಕೊಳ್ತಾನೆ.+ ನೀವು ಆ ಪಕ್ಷಿಗಿಂತ ಹೆಚ್ಚು ಅಮೂಲ್ಯ ಅಲ್ವಾ?+ 25 ಚಿಂತೆಮಾಡಿ ನಿಮ್ಮ ವಯಸ್ಸು ಒಂದು ನಿಮಿಷ* ಆದ್ರೂ ಹೆಚ್ಚಾಗಿದ್ಯಾ? 26 ಇಷ್ಟು ಚಿಕ್ಕ ಕೆಲಸ ಮಾಡೋಕೆ ಆಗಲ್ಲ ಅಂದಮೇಲೆ ಬೇರೆ ವಿಷ್ಯಗಳ ಬಗ್ಗೆ ಯಾಕೆ ಚಿಂತೆ?+ 27 ಲಿಲಿ ಹೂವು ಹೇಗೆ ಬೆಳೆಯುತ್ತೆ ನೋಡಿ. ಅವು ದುಡಿಯಲ್ಲ, ನೇಯಲ್ಲ. ಆದ್ರೆ ನನ್ನನ್ನ ನಂಬಿ, ಈ ಒಂದು ಹೂವಿಗೆ ಇರುವಷ್ಟು ಸೌಂದರ್ಯ ರಾಜ ಸೊಲೊಮೋನ ಹಾಕ್ತಿದ್ದ ದುಬಾರಿ ಬಟ್ಟೆಗೂ ಇರ್ಲಿಲ್ಲ.+ 28 ನಂಬಿಕೆ ಕೊರತೆ ಇರುವವ್ರೇ, ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ ಗಿಡಗಳನ್ನೇ ದೇವರು ಈ ರೀತಿ ಅಲಂಕರಿಸಿದ್ರೆ ನಿಮಗೆ ಬೇಕಾಗಿರೋ ಬಟ್ಟೆ ಕೊಡದೆ ಇರ್ತಾನಾ? 29 ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು ಅಂತ ಚಿಂತೆ ಮಾಡೋದನ್ನ ನಿಲ್ಲಿಸಿ. ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಡಿ.+ 30 ಲೋಕದ ಜನ ಈ ವಿಷ್ಯಗಳ ಹಿಂದೆನೇ ಹಗಲುರಾತ್ರಿ ಓಡ್ತಿದ್ದಾರೆ. ಆದ್ರೆ ನಿಮಗೆ ಇದೆಲ್ಲ ಬೇಕು ಅಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಚೆನ್ನಾಗಿ ಗೊತ್ತು.+ 31 ಅದ್ರ ಬದಲು ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡಿ. ಆಗ ಬೇರೆಲ್ಲ ವಿಷ್ಯಗಳನ್ನ ದೇವರೇ ನಿಮಗೆ ಕೊಡ್ತಾನೆ.+
32 ಚಿಕ್ಕ ಹಿಂಡೇ,+ ಭಯಪಡಬೇಡ, ನಿಮ್ಮನ್ನ ರಾಜರಾಗಿ+ ಮಾಡೋದಂದ್ರೆ ನಿಮ್ಮ ತಂದೆಗೆ ತುಂಬ ಇಷ್ಟ. 33 ನಿಮ್ಮ ಹತ್ರ ಇರೋದನ್ನ ಮಾರಿ ದಾನಧರ್ಮ* ಮಾಡಿ.+ ಹಾಳಾಗದ ಹಣದ ಚೀಲ ಮಾಡ್ಕೊಳ್ಳಿ, ಅಂದ್ರೆ ಯಾವಾಗ್ಲೂ ಉಳಿಯೋ ಆಸ್ತಿಯನ್ನ ಸ್ವರ್ಗದಲ್ಲಿ ಕೂಡಿಸಿ.+ ಕಳ್ಳನೂ ಅದ್ರ ಹತ್ರ ಬರಲ್ಲ, ಹುಳನೂ ತಿನ್ನಲ್ಲ. 34 ನಿನ್ನ ಆಸ್ತಿ ಎಲ್ಲಿರುತ್ತೋ ಅಲ್ಲೇ ನಿನ್ನ ಮನಸ್ಸೂ ಇರುತ್ತೆ.
35 ಸೇವಕರು ಹಾಕೋ ಬಟ್ಟೆ ಹಾಕೊಂಡು ತಯಾರಾಗಿ.*+ ನಿಮ್ಮ ದೀಪಗಳು ಉರಿತಾ ಇರಬೇಕು.+ 36 ಯಜಮಾನ ಮದುವೆಯಿಂದ+ ವಾಪಸ್+ ಬಂದು ಬಾಗಿಲು ತಟ್ಟಿದ ತಕ್ಷಣ ತೆಗಿಯೋಕೆ ಕಾಯ್ತಾ ಇರೋ ಆಳಿನ ತರ ಇರಿ. 37 ಯಜಮಾನ ಬಂದಾಗ ಕಾಯ್ತಾ ಇರೋ ಆಳುಗಳು ಖುಷಿಯಾಗಿ ಇರ್ತಾರೆ! ನನ್ನನ್ನ ನಂಬಿ, ಯಜಮಾನ ಸೇವಕರು ಹಾಕೋ ಬಟ್ಟೆ ಹಾಕೊಂಡು* ಆಳುಗಳನ್ನ ಊಟಕ್ಕೆ ಕೂರಿಸಿ ಸೇವೆ ಮಾಡ್ತಾನೆ. 38 ಯಜಮಾನ ಮಧ್ಯರಾತ್ರಿಯಲ್ಲಿ* ಬರಲಿ, ಕೋಳಿ ಕೂಗುವಾಗ* ಬರಲಿ ಆ ಆಳುಗಳು ತಯಾರಾಗಿ ಇದ್ರೆ ಅವರು ಖುಷಿಯಾಗಿ ಇರ್ತಾರೆ. 39 ಆದ್ರೆ ಈ ವಿಷ್ಯ ನೆನಪಿಡಿ, ಕಳ್ಳ ಯಾವ ಸಮಯದಲ್ಲಿ ಬರ್ತಾನೆ ಅಂತ ಯಜಮಾನನಿಗೆ ಗೊತ್ತಿದ್ರೆ ಕನ್ನಾ ಹಾಕೋಕೆ ಬಿಡಲ್ಲ ತಾನೇ?+ 40 ಹಾಗಾಗಿ ನೀವು ಸಹ ಸಿದ್ಧರಾಗಿರಿ. ಯಾಕಂದ್ರೆ ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರ ಬರ್ತಾನೆ.”+
41 ಆಗ ಪೇತ್ರ “ಸ್ವಾಮಿ, ನೀನು ಈ ಉದಾಹರಣೆ ನಮಗೆ ಮಾತ್ರ ಹೇಳ್ತಿದ್ದೀಯಾ ಇಲ್ಲಾ ಎಲ್ರಿಗೂ ಹೇಳ್ತಿದ್ದೀಯಾ?” ಅಂತ ಕೇಳಿದ. 42 ಅದಕ್ಕೆ ಒಡೆಯ ಹೀಗಂದನು “ಎಲ್ಲಾ ಸೇವಕರಿಗೆ ತಕ್ಕ ಸಮಯಕ್ಕೆ+ ಅವ್ರಿಗೆ ಬೇಕಾಗಿರೋ ಆಹಾರ ಅಳೆದು ಕೊಡ್ತಾ ಇರೋಕೆ ಯಜಮಾನ ಅವ್ರ ಮೇಲೆ ನೇಮಿಸೋ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ನಿಜಕ್ಕೂ ಯಾರು? 43 ಯಜಮಾನ ಬಂದಾಗ ಕೊಟ್ಟ ಕೆಲಸ ಮಾಡ್ತಾ ಇರೋ ಆಳು ಸಂತೋಷವಾಗಿ ಇರ್ತಾನೆ! 44 ನಿಮಗೆ ನಿಜ ಹೇಳ್ತೀನಿ, ಯಜಮಾನ ಆ ಆಳಿಗೆ ಎಲ್ಲ ಆಸ್ತಿ ನೋಡ್ಕೊಳ್ಳೋಕೆ ಹೇಳ್ತಾನೆ. 45 ಆದ್ರೆ ಆ ಆಳು ಕೆಟ್ಟವನಾಗಿ ‘ನನ್ನ ಯಜಮಾನ ಬರೋಕೆ ತಡಮಾಡ್ತಾ ಇದ್ದಾನೆ’ ಅಂತ ಅಂದ್ಕೊಂಡು ಬೇರೆ ಆಳುಗಳನ್ನ ಹೊಡೆದು ಕುಡುಕರ ಜೊತೆ ತಿಂತಾ ಕುಡಿತಾ+ ಇರೋದಾದ್ರೆ 46 ಆ ಆಳು ನೆನಸದ ದಿನದಲ್ಲಿ, ಎದುರುನೋಡದ ಸಮಯದಲ್ಲಿ ಯಜಮಾನ ಬರ್ತಾನೆ. ಅವನಿಗೆ ಕಠಿಣ ಶಿಕ್ಷೆ ಕೊಡ್ತಾನೆ. ನಂಬಿಕೆ ಇಲ್ಲದವ್ರಿಗೆ ಆಗೋ ಗತಿನೇ ಅವನಿಗೂ ಆಗುತ್ತೆ. 47 ಯಜಮಾನನ ಇಷ್ಟ ಅರ್ಥ ಮಾಡ್ಕೊಂಡ್ರೂ ಸಿದ್ಧನಾಗಿ ಇರದಿದ್ರೆ ಹೇಳಿದ್ದನ್ನ* ಮಾಡದಿದ್ರೆ ಆ ಆಳು ತುಂಬ ಏಟು ತಿಂತಾನೆ.+ 48 ಆದ್ರೆ ಒಬ್ಬ ಆಳಿಗೆ ಯಜಮಾನನ ಇಷ್ಟ ಏನಂತ ಅರ್ಥ ಆಗದೆ ಅವನು ಏಟು ತಿನ್ನೋ ಕೆಲಸಗಳನ್ನ ಮಾಡಿದ್ರೆ ಕಮ್ಮಿ ಏಟು ಬೀಳುತ್ತೆ. ಹಾಗಾಗಿ ಹೆಚ್ಚು ಜವಾಬ್ದಾರಿ ಸಿಕ್ಕಿದವರು ಅದನ್ನ ಚೆನ್ನಾಗಿ ಮಾಡಬೇಕು. ತುಂಬ ವಿಷ್ಯಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಸಿಕ್ಕಿದ್ರೆ ಅದನ್ನೆಲ್ಲ ಸರಿಯಾಗಿ ಮಾಡಬೇಕಂತ ಜನ ನೆನಸ್ತಾರೆ.+
49 ನಾನು ಭೂಮಿ ಮೇಲೆ ಬೆಂಕಿ ಹಚ್ಚೋಕೆ ಬಂದೆ. ಆ ಬೆಂಕಿ ಕಿಡಿ ಈಗಾಗಲೇ ಶುರುವಾಗಿದೆ, ನನಗೆ ಇದಕ್ಕಿಂತ ಇನ್ನೇನು ಬೇಕು? 50 ನಿಜಕ್ಕೂ ನಾನು ತಗೊಳ್ಳಬೇಕಾದ ದೀಕ್ಷಾಸ್ನಾನ ಇದೆ. ಆ ದೀಕ್ಷಾಸ್ನಾನ ತಗೊಳ್ಳೋ ತನಕ ನಾನು ತುಂಬ ನೋವಲ್ಲಿ ಇರ್ತಿನಿ!+ 51 ನಾನು ಭೂಮಿಗೆ ಶಾಂತಿ ತರೋಕೆ ಬಂದೆ ಅಂತ ಅಂದ್ಕೊಂಡ್ರಾ? ನಿಮಗೆ ನಿಜ ಹೇಳ್ತೀನಿ, ನಾನು ಶಾಂತಿಯನ್ನಲ್ಲ ಜಗಳ ಹುಟ್ಟುಹಾಕೋಕೆ ಬಂದೆ.+ 52 ಇವತ್ತಿಂದ ಒಂದೇ ಮನೆಯಲ್ಲಿ ಐದು ಜನ ಇದ್ರೆ ಅವ್ರಲ್ಲಿ ಇಬ್ರಿಗೆ ಮೂರು ಜನ್ರನ್ನ ಕಂಡ್ರೆ ಆಗಲ್ಲ, ಮೂರು ಜನಕ್ಕೆ ಇನ್ನಿಬ್ಬರನ್ನ ಕಂಡ್ರೆ ಆಗಲ್ಲ. 53 ತಂದೆ ಮಗನಿಗೆ, ಮಗ ತಂದೆಗೆ, ತಾಯಿ ಮಗಳಿಗೆ, ಮಗಳು ತಾಯಿಗೆ, ಅತ್ತೆ ಸೊಸೆಗೆ, ಸೊಸೆ ಅತ್ತೆಗೆ ಜಗಳ ಇರುತ್ತೆ.”+
54 ಆಮೇಲೆ ಜನ್ರಿಗೆ ಹೀಗಂದನು “ಪಶ್ಚಿಮ ದಿಕ್ಕಲ್ಲಿ ಮೋಡ ಮೇಲೆ ಬರೋದನ್ನ ನೋಡಿದಾಗ ‘ಬಿರುಗಾಳಿ ಬರುತ್ತೆ’ ಅಂತೀರ, ಅದು ಬರುತ್ತೆ. 55 ದಕ್ಷಿಣ ದಿಕ್ಕಿಂದ ಗಾಳಿ ಬೀಸಿದಾಗ ‘ಸೆಕೆ ಶುರು ಆಗುತ್ತೆ’ ಅಂತೀರ, ಹಾಗೇ ಆಗುತ್ತೆ. 56 ಕಪಟಿಗಳೇ, ಭೂಮಿ-ಆಕಾಶ ನೋಡಿ ವಾತಾವರಣ ಹೇಗಿರುತ್ತೆ ಅಂತ ಕಂಡುಹಿಡಿಯೋಕೆ ನಿಮಗೆ ಆಗುತ್ತೆ. ಆದ್ರೆ ಈ ಸಮಯದಲ್ಲಿ ಆಗ್ತಿರೋ ವಿಷ್ಯಗಳ ಅರ್ಥ ಕಂಡುಹಿಡಿಯೋಕೆ ನಿಮ್ಮಿಂದ ಯಾಕೆ ಆಗ್ತಿಲ್ಲ?+ 57 ಯಾವುದು ಸರಿ ಅಂತ ನಿರ್ಧಾರ ಮಾಡೋಕೆ ಯಾಕೆ ನಿಮ್ಮಿಂದ ಆಗ್ತಿಲ್ಲ? 58 ಉದಾಹರಣೆಗೆ ನಿನ್ನ ವಿರೋಧಿ ನಿನ್ನ ಮೇಲೆ ಕೇಸು ಹಾಕೋಕೆ ನ್ಯಾಯಾಲಯಕ್ಕೆ ಹೋಗ್ತಾ ಇರುವಾಗ ದಾರಿಯಲ್ಲೇ ಅವನ ಜೊತೆ ಮಾತಾಡಿ ರಾಜಿಮಾಡ್ಕೊ. ಇಲ್ಲದಿದ್ರೆ ಅವನು ಏನಾದ್ರೂ ಮಾಡಿ ನಿನ್ನನ್ನ ನ್ಯಾಯಾಧೀಶನಿಗೆ ಒಪ್ಪಿಸಬಹುದು. ಆ ನ್ಯಾಯಾಧೀಶ ನಿನ್ನನ್ನ ಅಲ್ಲಿನ ಅಧಿಕಾರಿಗೆ ಒಪ್ಪಿಸಬಹುದು. ಅವನು ನಿನ್ನನ್ನ ಜೈಲಿಗೆ ಹಾಕಬಹುದು.+ 59 ನಿನಗೆ ನಿಜ ಹೇಳ್ತಾ ಇದ್ದೀನಿ, ಬಿಡಿಗಾಸು* ಬಿಡದೆ ಪೂರ್ತಿ ಸಾಲ ತೀರಿಸೋ ತನಕ ನಿನಗೆ ಅಲ್ಲಿಂದ ಹೊರಗೆ ಬರೋಕಾಗಲ್ಲ.”