ನಿನ್ನ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೋ
“ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.”—ಜ್ಞಾನೋಕ್ತಿ 4:23.
1, 2. ನಾವು ನಮ್ಮ ಹೃದಯವನ್ನು ಏಕೆ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು?
ಕರಿಬಿಯನ್ ದ್ವೀಪವೊಂದರಲ್ಲಿ ಪ್ರಚಂಡವಾದ ಸುಂಟರಗಾಳಿಯು ಬೀಸಿ ನಿಂತ ಬಳಿಕ, ಒಬ್ಬ ವೃದ್ಧ ವ್ಯಕ್ತಿಯು ತನ್ನ ಆಶ್ರಯ ಸ್ಥಳದಿಂದ ಹೊರಬಂದನು. ತನ್ನ ಸುತ್ತಲೂ ಆಗಿರುವಂಥ ಹಾನಿಯನ್ನು ಅವನು ನೋಡುತ್ತಾ ಇದ್ದಾಗ, ತನ್ನ ಮನೆಯ ಮುಂದಿನ ಗೇಟ್ ಬಳಿ ಎಷ್ಟೋ ದಶಕಗಳಿಂದ ಇದ್ದ ಒಂದು ದೊಡ್ಡ ಮರವು ಅಲ್ಲಿಲ್ಲದಿರುವುದನ್ನು ಗಮನಿಸಿದನು. ‘ಈ ಕ್ಷೇತ್ರದಲ್ಲಿರುವ ಚಿಕ್ಕ ಮರಗಳಿಗೆ ಏನೂ ಆಗಿಲ್ಲದಿರುವಾಗ, ಇದಕ್ಕೆ ಹೀಗಾದದ್ದು ಹೇಗೆ?’ ಎಂದವನು ಕುತೂಹಲಪಟ್ಟನು. ಅಲ್ಲಿ ಉಳಿದಿದ್ದ ಮರದ ಮೋಟನ್ನು ನೋಡಿದಾಕ್ಷಣ ಅವನಿಗೆ ಉತ್ತರ ಸಿಕ್ಕಿತು. ಎಂದಿಗೂ ಕದಲಿಸಲಾಗದಂತೆ ತೋರುತ್ತಿದ್ದ ಆ ಮರದ ಒಳಭಾಗವು ಪೂರ್ತಿಯಾಗಿ ಕೊಳೆತುಹೋಗಿತ್ತು, ಮತ್ತು ಆ ಸುಂಟರ ಗಾಳಿಯು ಕಣ್ಣಿಗೆ ಕಾಣದಿದ್ದ ಆ ಮರದ ಸ್ಥಿತಿಯನ್ನು ಬಯಲಿಗೆಳೆದಿತ್ತಷ್ಟೆ.
2 ಕ್ರೈಸ್ತ ಜೀವನ ಮಾರ್ಗದಲ್ಲಿ ದೃಢವಾಗಿ ಬೇರೂರಿರುವಂತೆ ತೋರುವ ಒಬ್ಬ ಸತ್ಯಾರಾಧಕನು ಹೀಗೆಯೇ ನಂಬಿಕೆಯ ಪರೀಕ್ಷೆಯಲ್ಲಿ ಬಿದ್ದುಹೋಗುವಾಗ ಅದೆಂಥ ದುರಂತ! “ಮನುಷ್ಯರ ಹೃದಯದ ಪ್ರತಿಯೊಂದು ಪ್ರವೃತ್ತಿಯು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಬೈಬಲ್ ಹೇಳುವ ಸಂಗತಿಯು ಸರಿಯಾಗಿದೆ. (ಆದಿಕಾಂಡ 8:21, NW) ಇದರರ್ಥ, ಒಬ್ಬನ ಹೃದಯವು ಎಷ್ಟೇ ಒಳ್ಳೇದಾಗಿರಲಿ, ಅವನು ನಿರಂತರವಾಗಿ ಎಚ್ಚರವಾಗಿರದಿದ್ದರೆ, ಅದು ಕೆಟ್ಟದ್ದನ್ನು ಮಾಡುವಂತೆ ಸೆಳೆಯಲ್ಪಡಸಾಧ್ಯವಿದೆ. ಅಪರಿಪೂರ್ಣವಾಗಿರುವ ಯಾವುದೇ ಹೃದಯವು ಭ್ರಷ್ಟವಾಗಲಾರದೆಂದು ಹೇಳಸಾಧ್ಯವಿಲ್ಲ. ಆದುದರಿಂದ, ಈ ಬುದ್ಧಿವಾದವನ್ನು ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ಹಾಗಾದರೆ ನಮ್ಮ ಸಾಂಕೇತಿಕ ಹೃದಯವನ್ನು ನಾವು ಹೇಗೆ ಜಾಗರೂಕತೆಯಿಂದ ಕಾಪಾಡಿಕೊಳ್ಳಬಹುದು?
ಕ್ರಮವಾದ ತಪಾಸಣೆಗಳು ಅತ್ಯಾವಶ್ಯಕ
3, 4. (ಎ) ಶಾರೀರಿಕ ಹೃದಯದ ಕುರಿತಾಗಿ ಯಾವ ಪ್ರಶ್ನೆಗಳನ್ನು ಕೇಳಬಹುದು? (ಬಿ) ನಮ್ಮ ಸಾಂಕೇತಿಕ ಹೃದಯವನ್ನು ಯಾವುದು ಪರೀಕ್ಷಿಸುವಂತೆ ಸಹಾಯಮಾಡುವುದು?
3 ನಿಮ್ಮ ಶರೀರದ ತಪಾಸಣೆಮಾಡಿಸಲು ನೀವೊಬ್ಬ ವೈದ್ಯನ ಬಳಿ ಹೋಗುವಲ್ಲಿ, ಅವನು ನಿಮ್ಮ ಹೃದಯವನ್ನು ಪರೀಕ್ಷಿಸಬಹುದು. ನಿಮ್ಮ ಹೃದಯವನ್ನೂ ಸೇರಿಸಿ ನಿಮ್ಮ ಒಟ್ಟು ಆರೋಗ್ಯವು, ನಿಮಗೆ ಸಾಕಷ್ಟು ಪೌಷ್ಟಿಕಾಂಶಗಳು ಸಿಗುತ್ತವೆಂಬುದನ್ನು ತೋರಿಸುತ್ತದೊ? ನಿಮ್ಮ ರಕ್ತದೊತ್ತಡ ಹೇಗಿದೆ? ನಿಮ್ಮ ಹೃದಯಬಡಿತವು ಸ್ಥಿರವೂ ಬಲವಾದದ್ದೂ ಆಗಿದೆಯೊ? ನಿಮಗೆ ಬೇಕಾದಷ್ಟು ವ್ಯಾಯಾಮ ಸಿಗುತ್ತಿದೆಯೊ? ನಿಮ್ಮ ಹೃದಯವು ಅನಾವಶ್ಯಕವಾದ ಒತ್ತಡಕ್ಕೆ ಗುರಿಯಾಗಿದೆಯೊ?
4 ನಿಮ್ಮ ಶಾರೀರಿಕ ಹೃದಯಕ್ಕೆ ಕ್ರಮವಾದ ತಪಾಸಣೆಗಳು ಬೇಕಾಗಿರುವಲ್ಲಿ, ನಿಮ್ಮ ಸಾಂಕೇತಿಕ ಹೃದಯದ ಕುರಿತಾಗಿ ಏನು? ಯೆಹೋವನು ಅದನ್ನು ಪರೀಕ್ಷಿಸುತ್ತಾನೆ. (1 ಪೂರ್ವಕಾಲವೃತ್ತಾಂತ 29:17) ನಾವು ಸಹ ಅದನ್ನು ಮಾಡಬೇಕು. ಹೇಗೆ? ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕವೇ: ಕ್ರಮವಾದ ವೈಯಕ್ತಿಕ ಅಧ್ಯಯನ ಮತ್ತು ಕೂಟದ ಹಾಜರಿಯ ಮೂಲಕ ನನ್ನ ಹೃದಯಕ್ಕೆ ಸಾಕಷ್ಟು ಆತ್ಮಿಕ ಆಹಾರ ಸಿಗುತ್ತಿದೆಯೊ? (ಕೀರ್ತನೆ 1:1, 2; ಇಬ್ರಿಯ 10:24, 25) ರಾಜ್ಯ ಸಾರುವಿಕೆಯ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ನನ್ನನ್ನು ಪ್ರಚೋದಿಸುತ್ತಾ, ಯೆಹೋವನ ಸಂದೇಶವು ‘ನನ್ನ ಎಲುಬುಗಳಲ್ಲಿ ಅಡಕವಾಗಿರುವ ಉರಿಯುವ ಬೆಂಕಿಯಂತೆ’ ನನ್ನ ಹೃದಯಕ್ಕೆ ತುಂಬ ಮಹತ್ವಪೂರ್ಣವಾದ ವಿಷಯವಾಗಿದೆಯೊ? (ಯೆರೆಮೀಯ 20:9; ಮತ್ತಾಯ 28:19, 20; ರೋಮಾಪುರ 1:15, 16) ಸಾಧ್ಯವಿರುವಾಗೆಲ್ಲ, ಪೂರ್ಣ ಸಮಯದ ಶುಶ್ರೂಷೆಯ ಯಾವುದಾದರೊಂದು ವೈಶಿಷ್ಟ್ಯದಲ್ಲಿ ಪಾಲ್ಗೊಳ್ಳುತ್ತಾ, ನಾನು ಹುರುಪಿನಿಂದ ಹೆಣಗಾಡುತ್ತೇನೊ? (ಲೂಕ 13:24) ನನ್ನ ಸಾಂಕೇತಿಕ ಹೃದಯವನ್ನು ಯಾವ ರೀತಿಯ ವಾತಾವರಣಕ್ಕೆ ಒಡ್ಡುತ್ತೇನೆ? ಯಾರ ಹೃದಯಗಳು ಸತ್ಯಾರಾಧನೆಯಲ್ಲಿ ಐಕ್ಯವಾಗಿವೆಯೊ ಅವರೊಂದಿಗೆ ನಾನು ಸಹವಾಸಮಾಡಲು ಪ್ರಯತ್ನಿಸುತ್ತೇನೊ? (ಜ್ಞಾನೋಕ್ತಿ 13:20; 1 ಕೊರಿಂಥ 15:33) ನಮ್ಮಲ್ಲಿರಬಹುದಾದ ಯಾವುದೇ ಕುಂದನ್ನು ನಾವು ಬೇಗನೆ ಗಮನಿಸಿ, ಅದನ್ನು ಆದಷ್ಟು ಬೇಗನೆ ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳೋಣ.
5. ನಂಬಿಕೆಯ ಪರೀಕ್ಷೆಗಳು ಯಾವ ಉಪಯುಕ್ತ ಉದ್ದೇಶವನ್ನು ಪೂರೈಸುವವು?
5 ಎಷ್ಟೋ ಸಾರಿ ನಾವು ನಂಬಿಕೆಯ ಪರೀಕ್ಷೆಗಳನ್ನು ಅನುಭವಿಸುತ್ತೇವೆ. ಇವು, ನಮ್ಮ ಹೃದಯದ ಸ್ಥಿತಿಯೇನೆಂಬುದನ್ನು ಕಂಡುಹಿಡಿಯುವ ಸಂದರ್ಭಗಳನ್ನು ಒದಗಿಸುತ್ತವೆ. ಇನ್ನೇನು ವಾಗ್ದತ್ತ ದೇಶದೊಳಗೆ ಕಾಲಿರಿಸಲಿದ್ದ ಇಸ್ರಾಯೇಲ್ಯರಿಗೆ ಮೋಶೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.” (ಧರ್ಮೋಪದೇಶಕಾಂಡ 8:2) ನಾವು ಅನಿರೀಕ್ಷಿತವಾದ ಸನ್ನಿವೇಶಗಳು ಅಥವಾ ಪ್ರಲೋಭನೆಗಳನ್ನು ಎದುರಿಸುವಾಗ ಹೊರಬರುವಂಥ ಭಾವನೆಗಳು, ಆಸೆಗಳು ಅಥವಾ ಪ್ರತಿಕ್ರಿಯೆಗಳಿಂದ ನಮಗೆ ಎಷ್ಟೋ ಸಲ ಆಶ್ಚರ್ಯವಾಗಿದೆಯಲ್ಲವೊ? ಯೆಹೋವನು ಅನುಮತಿಸುವಂಥ ಪರೀಕ್ಷೆಗಳು, ನಮ್ಮ ದೋಷಗಳೇನೆಂಬುದನ್ನು ನಮ್ಮ ಗಮನಕ್ಕೆ ತರುತ್ತಾ, ನಾವು ಹೆಚ್ಚಿನ ಸುಧಾರಣೆಯನ್ನು ಮಾಡುವಂತೆ ನಮಗೆ ಅವಕಾಶವನ್ನು ಕೊಡುವವು. (ಯಾಕೋಬ 1:2-4) ಪರೀಕ್ಷೆಗಳು ಬಂದಾಗ ನಾವು ತೋರಿಸಬೇಕಾದ ಪ್ರತಿಕ್ರಿಯೆಯ ಕುರಿತಾಗಿ ಚಿಂತಿಸಲು ಮತ್ತು ಪ್ರಾರ್ಥಿಸಲು ನಾವೆಂದಿಗೂ ತಪ್ಪದಿರೋಣ!
ನಮ್ಮ ಮಾತುಗಳು ಏನನ್ನು ಪ್ರಕಟಿಸುತ್ತವೆ?
6. ನಾವು ಮಾತಾಡಲು ಇಷ್ಟಪಡುವ ಸಂಗತಿಗಳು, ನಮ್ಮ ಹೃದಯದ ಬಗ್ಗೆ ಏನನ್ನು ಪ್ರಕಟಿಸುತ್ತವೆ?
6 ನಮ್ಮ ಹೃದಯದಲ್ಲಿ ನಾವೇನನ್ನು ಕೂಡಿಸಿಟ್ಟಿದ್ದೇವೆಂಬುದನ್ನು ನಾವು ಹೇಗೆ ಪತ್ತೆಹಚ್ಚಬಹುದು? ಯೇಸು ಹೇಳಿದ್ದು: “ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಲೂಕ 6:45) ನಾವು ಸಾಮಾನ್ಯವಾಗಿ ಯಾವುದರ ಕುರಿತಾಗಿ ಮಾತಾಡುತ್ತೇವೊ ಅದು, ನಮ್ಮ ಹೃದಯವು ಯಾವುದರ ಮೇಲೆ ಕೇಂದ್ರೀಕೃತವಾಗಿದೆ ಎಂಬುದನ್ನು ಚೆನ್ನಾಗಿ ಸೂಚಿಸುತ್ತದೆ. ನಾವು ಹೆಚ್ಚಾಗಿ, ಭೌತಿಕ ವಿಷಯಗಳು ಮತ್ತು ಲೌಕಿಕ ಸಾಧನೆಗಳ ಬಗ್ಗೆಯೇ ಮಾತಾಡುತ್ತಿರುತ್ತೇವೊ? ಅಥವಾ ನಮ್ಮ ಸಂಭಾಷಣೆಗಳು ಅನೇಕಸಾರಿ ಆತ್ಮಿಕ ವಿಷಯಗಳು ಮತ್ತು ದೇವಪ್ರಭುತ್ವ ಗುರಿಗಳ ಕುರಿತಾಗಿ ಇರುತ್ತವೊ? ಇತರರ ತಪ್ಪುಗಳ ಕುರಿತಾಗಿ ಡಂಗುರಸಾರುವ ಬದಲಿಗೆ, ಅವುಗಳನ್ನು ಪ್ರೀತಿಯಿಂದ ಮುಚ್ಚಿಹಾಕುವ ಪ್ರವೃತ್ತಿ ನಮಗಿದೆಯೊ? (ಜ್ಞಾನೋಕ್ತಿ 10:11, 12) ನಾವು ಇತರರ ಕುರಿತಾಗಿ ಮತ್ತು ಅವರ ಜೀವನದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದರ ಕುರಿತಾಗಿಯೇ ಹೆಚ್ಚು ಮಾತಾಡುತ್ತಾ, ಆತ್ಮಿಕ ಮತ್ತು ನೈತಿಕ ವಿಷಯಗಳ ಕುರಿತು ತೀರ ಕಡಿಮೆ ಮಾತಾಡುವವರಾಗಿದ್ದೇವೊ? ನಾವು ಬೇರೆ ಜನರ ವೈಯಕ್ತಿಕ ವಿಷಯಗಳಲ್ಲಿ ಅಯೋಗ್ಯವಾದ ಆಸಕ್ತಿಯನ್ನು ತೋರಿಸುತ್ತಿದ್ದೇವೆಂಬುದಕ್ಕೆ ಇದು ಒಂದು ಸಂಕೇತವಾಗಿದೆಯೊ?—1 ಪೇತ್ರ 4:15.
7. ಯೋಸೇಫನ ಹತ್ತು ಮಂದಿ ಸಹೋದರರ ವೃತ್ತಾಂತದಿಂದ ನಮ್ಮ ಹೃದಯವನ್ನು ಕಾಪಾಡಿಕೊಳ್ಳುವುದರ ಕುರಿತಾಗಿ ನಾವು ಯಾವ ಪಾಠವನ್ನು ಕಲಿಯಬಹುದು?
7 ಒಂದು ದೊಡ್ಡ ಕುಟುಂಬದಲ್ಲಿ ಏನು ನಡೆಯಿತೆಂಬುದನ್ನು ಪರಿಗಣಿಸಿರಿ. ಯಾಕೋಬನ ಹತ್ತು ಮಂದಿ ಹಿರಿಯ ಪುತ್ರರು, ಅವರ ತಮ್ಮನಾಗಿದ್ದ ಯೋಸೇಫನೊಂದಿಗೆ ‘ಸ್ನೇಹಭಾವದಿಂದ ಮಾತಾಡಲಾರದೆ ಹೋದರು.’ ಏಕೆ? ಅವನು ತಮ್ಮ ತಂದೆಯ ಅಚ್ಚುಮೆಚ್ಚಿನ ಮಗನಾಗಿದ್ದ ಕಾರಣದಿಂದಲೇ. ಅನಂತರ, ಯೋಸೇಫನು ದೇವರಿಂದ ಬಂದಂಥ ಕೆಲವೊಂದು ಕನಸುಗಳನ್ನು ನೋಡಿದನು. ಮತ್ತು ಇದು ಯೆಹೋವನ ಅನುಗ್ರಹವು ಅವನ ಮೇಲಿತ್ತೆಂಬುದನ್ನು ರುಜುಪಡಿಸಿತು. ಆಗ ಅವರು “ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು.” (ಆದಿಕಾಂಡ 37:4, 5, 11) ಕ್ರೂರ ಮನೋಭಾವದಿಂದ ಅವರು ತಮ್ಮ ತಮ್ಮನನ್ನು ದಾಸತ್ವಕ್ಕೆ ಮಾರಿಬಿಟ್ಟರು. ಅನಂತರ ತಮ್ಮ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾ, ಯೋಸೇಫನನ್ನು ಒಂದು ಕಾಡುಪ್ರಾಣಿಯು ಕೊಂದುಹಾಕಿತೆಂದು ಯಾಕೋಬನು ನೆನಸುವಂತೆ ಮೋಸಮಾಡಿದರು. ಯೋಸೇಫನ ಸಹೋದರರಲ್ಲಿ ಹತ್ತು ಮಂದಿ, ಆ ಸಂದರ್ಭದಲ್ಲಿ ತಮ್ಮ ಹೃದಯವನ್ನು ಕಾಪಾಡಿಕೊಳ್ಳಲು ತಪ್ಪಿಬಿದ್ದರು. ಅಂತೆಯೇ ನಾವು ಇತರರ ಕುರಿತಾಗಿ ಟೀಕಾತ್ಮಕರಾಗಿರುವ ಸ್ವಭಾವದವರಾಗಿರುವಲ್ಲಿ, ಅದು ನಮ್ಮ ಹೃದಯದಲ್ಲಿರುವ ಅಸೂಯೆ ಅಥವಾ ಹೊಟ್ಟೆಕಿಚ್ಚಿನ ಪುರಾವೆಯಾಗಿರಬಹುದೊ? ನಮ್ಮ ಬಾಯಿಯಿಂದ ಹೊರಡುವಂಥ ಮಾತುಗಳನ್ನು ಪರೀಕ್ಷಿಸಲು ನಾವು ಎಚ್ಚರವಾಗಿರಬೇಕು ಮತ್ತು ಯಾವುದೇ ಅಯೋಗ್ಯವಾದ ಪ್ರವೃತ್ತಿಗಳನ್ನು ತಡಮಾಡದೇ ಬೇರುಸಹಿತ ಕಿತ್ತುಹಾಕಬೇಕು.
8. ನಾವು ಒಂದು ಸುಳ್ಳನ್ನು ಹೇಳುವಲ್ಲಿ ನಮ್ಮ ಹೃದಯವನ್ನು ಪರೀಕ್ಷಿಸುವಂತೆ ಯಾವುದು ಸಹಾಯಮಾಡುವುದು?
8 ‘ದೇವರು ಸುಳ್ಳಾಡಲಾರನಾದರೂ’ ಅಪರಿಪೂರ್ಣ ಮಾನವರು ಸುಳ್ಳಾಡುವ ಸಾಧ್ಯತೆ ಇದೆ. (ಇಬ್ರಿಯ 6:19) “ಮನುಷ್ಯರೆಲ್ಲಾ ಟೊಳ್ಳೇ” ಎಂದು ಕೀರ್ತನೆಗಾರನು ಪ್ರಲಾಪಿಸಿದನು. (ಕೀರ್ತನೆ 116:10) ಅಪೊಸ್ತಲ ಪೇತ್ರನು ಸಹ ಯೇಸುವನ್ನು ಅರಿಯೆನೆಂದು ಮೂರು ಸಲ ಸುಳ್ಳು ಹೇಳಿದನು. (ಮತ್ತಾಯ 26:69-75) ಯೆಹೋವನು “ಸುಳ್ಳಿನ ನಾಲಿಗೆ”ಯನ್ನು ದ್ವೇಷಿಸುವುದರಿಂದ ನಾವು ಸುಳ್ಳನ್ನು ಹೇಳದಂತೆ ಜಾಗ್ರತೆವಹಿಸಬೇಕು. (ಜ್ಞಾನೋಕ್ತಿ 6:16-19) ನಾವೆಂದಾದರೂ ಸುಳ್ಳನ್ನು ಹೇಳುವುದಾದರೂ, ಅದನ್ನೇಕೆ ಹೇಳಿದೆವೆಂಬ ಕಾರಣವನ್ನು ಪರೀಕ್ಷಿಸುವುದು ಒಳ್ಳೇದು. ಮನುಷ್ಯನ ಭಯದಿಂದ ಹಾಗೆ ಹೇಳಿದೆವೊ? ಶಿಕ್ಷೆಯ ಭಯದಿಂದಲೊ? ನಮ್ಮ ಹೆಸರನ್ನು ಉಳಿಸಿಕೊಳ್ಳಲಿಕ್ಕಾಗಿಯೊ ಇಲ್ಲವೇ ಪರಮ ಸ್ವಾರ್ಥವು ಸಮಸ್ಯೆಯ ಕಾರಣವಾಗಿತ್ತೊ? ಕಾರಣವು ಏನೇ ಆಗಿರಲಿ, ನಾವು ಅದರ ಕುರಿತಾಗಿ ಚಿಂತಿಸಿ, ನಮ್ಮ ತಪ್ಪನ್ನು ನಮ್ರತೆಯಿಂದ ಒಪ್ಪಿಕೊಂಡು, ಯೆಹೋವನ ಕ್ಷಮೆಯನ್ನು ಯಾಚಿಸಿ, ಆ ಬಲಹೀನತೆಯನ್ನು ಜಯಿಸುವುದರಲ್ಲಿ ಆತನ ಸಹಾಯವನ್ನು ಕೋರುವುದು ಎಷ್ಟು ಸೂಕ್ತ! ಅಂಥ ಸಹಾಯವನ್ನು ಕೊಡುವ ಅತ್ಯುತ್ತಮ ವ್ಯಕ್ತಿಗಳು ‘ಸಭೆಯ ಹಿರಿಯರಾ’ಗಿದ್ದಾರೆ.—ಯಾಕೋಬ 5:14.
9. ನಮ್ಮ ಪ್ರಾರ್ಥನೆಗಳು ನಮ್ಮ ಹೃದಯದ ಕುರಿತಾಗಿ ಏನನ್ನು ಹೊರಗೆಡಹಬಲ್ಲವು?
9 ತನಗೆ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸುವಂತೆ ಸೊಲೊಮೋನನು ಮಾಡಿದ ವಿನಂತಿಗೆ ಪ್ರತಿಕ್ರಿಯಿಸುತ್ತಾ ಯೆಹೋವನು ಹೇಳಿದ್ದು: ‘ನೀನು ಘನಧನೈಶ್ವರ್ಯಗಳನ್ನಾಗಲಿ ಕೇಳಿಕೊಳ್ಳದೆ ಜ್ಞಾನವಿವೇಕಗಳ ಮೇಲೆ ಮನಸ್ಸಿಟ್ಟು ಅವುಗಳನ್ನು ಬೇಡಿಕೊಂಡದರಿಂದ ಅವು ನಿನಗೆ ದೊರಕುವವು. ಇದಲ್ಲದೆ ನಾನು ನಿನಗೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸುತ್ತೇನೆ.’ (2 ಪೂರ್ವಕಾಲವೃತ್ತಾಂತ 1:11, 12) ಸೊಲೊಮೋನನು ಏನು ಬೇಡಿಕೊಂಡನೊ ಮತ್ತು ಏನನ್ನು ಬೇಡಿಕೊಳ್ಳಲಿಲ್ಲವೊ ಅದರಿಂದ ಸೊಲೊಮೋನನ ಹೃದಯಕ್ಕೆ ಪ್ರಿಯವಾದ ಸಂಗತಿಯೇನು ಎಂಬುದು ಯೆಹೋವನಿಗೆ ತಿಳಿದುಬಂತು. ನಮ್ಮ ಹೃದಯದಲ್ಲೇನಿದೆ ಎಂಬುದರ ಬಗ್ಗೆ ನಮ್ಮ ಪ್ರಾರ್ಥನೆಗಳು ಏನನ್ನು ಹೊರಗೆಡಹುತ್ತವೆ? ಜ್ಞಾನ, ವಿವೇಕ ಮತ್ತು ವಿವೇಚನಾಶಕ್ತಿಗಾಗಿ ನಮಗಿರುವ ದಾಹವು ನಮ್ಮ ಪ್ರಾರ್ಥನೆಗಳಲ್ಲಿ ಪ್ರಕಟವಾಗುತ್ತದೊ? (ಜ್ಞಾನೋಕ್ತಿ 2:1-6; ಮತ್ತಾಯ 5:3) ರಾಜ್ಯಾಭಿರುಚಿಗಳು ನಮ್ಮ ಹೃದಯದ ಮುಖ್ಯ ಚಿಂತೆಯಾಗಿವೆಯೊ? (ಮತ್ತಾಯ 6:9, 10) ನಮ್ಮ ಪ್ರಾರ್ಥನೆಗಳು ಯಾಂತ್ರಿಕವೂ ಕಾಟಾಚಾರಕ್ಕಾಗಿ ಮಾಡಿದವುಗಳೂ ಆಗಿರುವಲ್ಲಿ, ಅದು ನಾವು ಯೆಹೋವನ ಕಾರ್ಯಗಳ ಕುರಿತು ಮನನಮಾಡಲು ಸಮಯವನ್ನು ಮಾಡಿಕೊಳ್ಳುವ ಅಗತ್ಯವಿದೆಯೆಂಬುದರ ಸಂಕೇತವಾಗಿರಬಹುದು. (ಕೀರ್ತನೆ 103:2) ಎಲ್ಲ ಕ್ರೈಸ್ತರು, ತಮ್ಮ ಪ್ರಾರ್ಥನೆಗಳು ಏನನ್ನು ಹೊರಗೆಡಹುತ್ತವೆ ಎಂಬುದನ್ನು ವಿವೇಚಿಸಲು ಎಚ್ಚರದಿಂದಿರಬೇಕು.
ನಮ್ಮ ಕ್ರಿಯೆಗಳು ಏನನ್ನು ತಿಳಿಸುತ್ತವೆ?
10, 11. (ಎ) ವ್ಯಭಿಚಾರ ಮತ್ತು ಹಾದರವು ಎಲ್ಲಿಂದ ಆರಂಭವಾಗುತ್ತದೆ? (ಬಿ) ‘ಹೃದಯದಲ್ಲಿ ವ್ಯಭಿಚಾರವನ್ನು ಮಾಡದಿರಲು’ ಯಾವುದು ನಮಗೆ ಸಹಾಯಮಾಡುವುದು?
10 ಕ್ರಿಯೆಗಳು ಮಾತಿಗಿಂತಲೂ ಹೆಚ್ಚನ್ನು ತಿಳಿಯಪಡಿಸುತ್ತವೆ ಎಂದು ಹೇಳಲಾಗುತ್ತದೆ. ನಿಜವಾಗಿಯೂ ನಾವು ಆಂತರ್ಯದಲ್ಲಿ ಏನಾಗಿದ್ದೇವೊ ಅದರ ಕುರಿತಾಗಿ ನಮ್ಮ ಕ್ರಿಯೆಗಳು ಬಹಳಷ್ಟನ್ನು ತಿಳಿಸುತ್ತವೆ. ಉದಾಹರಣೆಗಾಗಿ, ನೈತಿಕತೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೃದಯವನ್ನು ಕಾಪಾಡಿಕೊಳ್ಳುವುದರಲ್ಲಿ, ವ್ಯಭಿಚಾರ ಅಥವಾ ಹಾದರದ ಕೃತ್ಯದಿಂದ ಮಾತ್ರ ದೂರವಿರುವುದಕ್ಕಿಂತಲೂ ಹೆಚ್ಚಿನದ್ದು ಸೇರಿದೆ. ತನ್ನ ಪರ್ವತ ಪ್ರಸಂಗದಲ್ಲಿ ಯೇಸು ತಿಳಿಸಿದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ [“ಹೃದಯದಲ್ಲಿ,” NW] ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:28) ನಮ್ಮ ಹೃದಯದಲ್ಲಿ ವ್ಯಭಿಚಾರಮಾಡುವುದರಿಂದ ನಾವು ಹೇಗೆ ದೂರವಿರಬಲ್ಲೆವು?
11 ನಂಬಿಗಸ್ತ ಪೂರ್ವಜನಾಗಿದ್ದ ಯೋಬನು, ವಿವಾಹಿತ ಕ್ರೈಸ್ತ ಪುರುಷರು ಮತ್ತು ಸ್ತ್ರೀಯರಿಗೆ ಒಂದು ಒಳ್ಳೇ ಮಾದರಿಯನ್ನಿಟ್ಟನು. ತನಗಿಂತಲೂ ಚಿಕ್ಕವರಾಗಿದ್ದ ಸ್ತ್ರೀಯರೊಂದಿಗೆ ಯೋಬನಿಗೆ ನಿಸ್ಸಂದೇಹವಾಗಿಯೂ ಸಾಧಾರಣವಾದ ವ್ಯವಹಾರಗಳಿದ್ದವು, ಮತ್ತು ಅವರಿಗೆ ನೆರವು ಬೇಕಾಗಿದ್ದಾಗ ಅವನು ದಯೆಯಿಂದ ಸಹಾಯಮಾಡಿದನು ಸಹ. ಆದರೆ ಅವರ ವಿಷಯದಲ್ಲಿ ಪ್ರಣಯಾತ್ಮಕ ಆಸಕ್ತಿಯನ್ನು ತೋರಿಸುವ ವಿಚಾರವು, ಸಮಗ್ರತೆಯ ಈ ಮನುಷ್ಯನಿಗೆ ಹಿಡಿಸದಂಥ ಸಂಗತಿಯಾಗಿತ್ತು. ಏಕೆ? ಏಕೆಂದರೆ ಸ್ತ್ರೀಯರನ್ನು ಕಾಮಾಸಕ್ತಿಯಿಂದ ದಿಟ್ಟಿಸದಿರುವಂತೆ ಅವನು ಒಂದು ದೃಢಸಂಕಲ್ಪವನ್ನು ಮಾಡಿದ್ದನು. “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” ಎಂದವನು ಹೇಳಿದನು. (ಯೋಬ 31:1) ನಾವು ಸಹ ನಮ್ಮ ಕಣ್ಣುಗಳೊಂದಿಗೆ ಅದೇ ರೀತಿಯ ನಿಬಂಧನೆಯನ್ನು ಮಾಡಿಕೊಳ್ಳುತ್ತಾ, ನಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳೋಣ.
12. ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವ ವಿಷಯದಲ್ಲಿ ನೀವು ಲೂಕ 16:10ನ್ನು ಹೇಗೆ ಅನ್ವಯಿಸಿಕೊಳ್ಳುವಿರಿ?
12 “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು” ಎಂದು ದೇವರ ಪುತ್ರನು ಘೋಷಿಸಿದನು. (ಲೂಕ 16:10) ದೈನಂದಿನ ಜೀವಿತದ ಚಿಕ್ಕಪುಟ್ಟ ವಿಷಯಗಳಂತೆ ತೋರುವ, ನಮ್ಮ ಮನೆಯ ಏಕಾಂತದಲ್ಲಿ ನಡೆಯುವಂಥ ಸಂಗತಿಗಳ ಕುರಿತಾಗಿಯೂ ನಾವು ನಮ್ಮ ನಡತೆಯನ್ನು ಪರೀಕ್ಷಿಸಬೇಕು. (ಕೀರ್ತನೆ 101:2) ನಮ್ಮ ಮನೆಯಲ್ಲಿ ಕುಳಿತುಕೊಂಡಿರುವಾಗ, ಟಿವಿ ನೋಡುತ್ತಿರುವಾಗ ಅಥವಾ ಇಂಟರ್ನೆಟ್ಗೆ ಜೋಡಿಸಲ್ಪಟ್ಟಿರುವಾಗ, “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ” ಎಂಬ ಶಾಸ್ತ್ರೀಯ ಬುದ್ಧಿವಾದಕ್ಕೆ ಅನುಗುಣವಾಗಿ ನಾವು ನಡೆಯುತ್ತಿದ್ದೇವೆಂಬುದನ್ನು ಖಚಿತಪಡಿಸಿಕೊಳ್ಳುತ್ತೇವೊ? (ಎಫೆಸ 5:3, 4) ಮತ್ತು ಟಿವಿ ಅಥವಾ ವಿಡಿಯೊ ಆಟಗಳಲ್ಲಿ ಲಭ್ಯವಿರುವ ಹಿಂಸಾಚಾರದ ಕುರಿತಾಗಿ ಏನು? “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು [“ಹಿಂಸಾಚಾರವನ್ನು ಪ್ರೀತಿಸುವ ಯಾರನ್ನೇ ಆಗಲಿ,” NW] ದ್ವೇಷಿಸುತ್ತಾನೆ” ಎಂದು ಕೀರ್ತನೆಗಾರನು ಹೇಳುತ್ತಾನೆ.—ಕೀರ್ತನೆ 11:5.
13. ನಮ್ಮ ಹೃದಯದೊಳಗಿಂದ ಏನು ಹೊರಬರುತ್ತದೆಂಬುದರ ಕುರಿತಾಗಿ ನಾವು ಯೋಚಿಸುವಾಗ, ಯಾವ ಎಚ್ಚರಿಕೆ ವಹಿಸುವುದು ಉತ್ತಮವಾಗಿದೆ?
13 “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ,” ಎಂದು ಯೆರೆಮೀಯನು ಎಚ್ಚರಿಸಿದನು. (ಯೆರೆಮೀಯ 17:9) ನಮ್ಮ ದೋಷಗಳಿಗಾಗಿ ನಾವು ನೆವನಗಳನ್ನು ಕೊಡುವಾಗ, ನಮ್ಮ ತಪ್ಪುಗಳನ್ನು ನಿಕೃಷ್ಟಗೊಳಿಸುವಾಗ, ಗಂಭೀರವಾದ ವ್ಯಕ್ತಿತ್ವ ಲೋಪಗಳಿಗಾಗಿ ಏನೋ ವಿವರಣೆ ಕೊಟ್ಟು ತೇಲಿಸಿಬಿಡುವಾಗ ಅಥವಾ ನಮ್ಮ ಸಾಧನೆಗಳ ಬಗ್ಗೆ ಬಣ್ಣ ಹಚ್ಚಿ ಹೇಳುವಾಗ, ಹೃದಯದ ಈ ವಂಚನೆಯು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಇಂಥ ಹೃದಯವು, ದ್ವಿಮುಖವುಳ್ಳ ಹೃದಯದ ರೂಪವನ್ನೂ ತಾಳಲು ಶಕ್ತವಾಗಿದೆ, ಅಂದರೆ ವಂಚನೆಯ ತುಟಿಗಳು ಒಂದು ವಿಷಯವನ್ನು ಹೇಳುತ್ತವೆ, ಆದರೆ ಕ್ರಿಯೆಗಳು ಬೇರೇನನ್ನೊ ಹೇಳುತ್ತವೆ. (ಕೀರ್ತನೆ 12:2; ಜ್ಞಾನೋಕ್ತಿ 23:7) ನಮ್ಮ ಹೃದಯದಿಂದ ಏನು ಹೊರಬರುತ್ತದೆ ಎಂಬುದನ್ನು ನಾವು ಪರೀಕ್ಷಿಸುತ್ತಿರುವಾಗ ನಾವು ಪ್ರಾಮಾಣಿಕರಾಗಿರುವುದು ಎಷ್ಟು ಅತ್ಯಾವಶ್ಯಕ!
ನಮ್ಮ ಕಣ್ಣು ಸರಳವಾಗಿದೆಯೊ?
14, 15. (ಎ) ಒಂದು “ಸರಳ” ಕಣ್ಣು ಏನಾಗಿದೆ? (ಬಿ) ಕಣ್ಣನ್ನು ಸರಳವಾಗಿಡುವುದು ಹೃದಯವನ್ನು ಕಾಪಾಡಿಕೊಳ್ಳಲು ನಮಗೆ ಹೇಗೆ ಸಹಾಯಮಾಡುತ್ತದೆ?
14 “ಕಣ್ಣು ದೇಹಕ್ಕೆ ದೀಪವಾಗಿದೆ” ಎಂದು ಯೇಸು ಹೇಳಿದನು. ಅವನು ಮತ್ತೂ ಕೂಡಿಸಿದ್ದು: “ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ [“ಸರಳವಾಗಿದ್ದರೆ,” NW] ನಿನ್ನ ದೇಹವೆಲ್ಲಾ ಬೆಳಕಾಗಿರುವದು.” (ಮತ್ತಾಯ 6:22) ಸರಳವಾಗಿರುವ ಕಣ್ಣು ಒಂದೇ ಗುರಿ ಅಥವಾ ಉದ್ದೇಶದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅದರಿಂದ ಅದು ಅಪಕರ್ಷಿಸಲ್ಪಡುವುದಿಲ್ಲ ಅಥವಾ ಪಕ್ಕಕ್ಕೆ ತಿರುಗುವುದಿಲ್ಲ. ನಿಜವಾಗಿಯೂ ನಮ್ಮ ಕಣ್ಣು, “ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಡುತ್ತಾ ಇರುವುದರ ಮೇಲೆ ಕೇಂದ್ರೀಕೃತವಾಗಿರಬೇಕು. (ಮತ್ತಾಯ 6:33) ನಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳದಿದ್ದರೆ ನಮ್ಮ ಸಾಂಕೇತಿಕ ಹೃದಯಕ್ಕೆ ಏನಾಗಬಲ್ಲದು?
15 ಜೀವನಾವಶ್ಯಕತೆಗಳಿಗಾಗಿ ಸಂಪಾದನೆಮಾಡುವ ವಿಷಯವನ್ನು ತೆಗೆದುಕೊಳ್ಳಿ. ನಮ್ಮ ಕುಟುಂಬದ ಆವಶ್ಯಕತೆಗಳನ್ನು ಪೂರೈಸುವುದು ಒಂದು ಕ್ರೈಸ್ತ ಆವಶ್ಯಕತೆಯಾಗಿದೆ. (1 ತಿಮೊಥೆಯ 5:8) ಆದರೆ ಆಹಾರ, ಬಟ್ಟೆಬರೆ, ವಸತಿ ಮತ್ತು ಬೇರೆ ವಸ್ತುಗಳ ವಿಷಯದಲ್ಲಿ ನಮ್ಮ ಬಳಿ ಯಾವಾಗಲೂ ನವನಾವೀನ್ಯ, ಅತ್ಯುತ್ತಮ ಮತ್ತು ಅತಿ ಅಪೇಕ್ಷಣೀಯವಾದಂಥದ್ದೇ ಇರಬೇಕೆಂಬ ಆಸೆಯಿಂದ ನಾವು ದುಷ್ಪ್ರೇರಣೆಗೊಳಗಾದರೆ ಆಗೇನು? ಅದು ನಮ್ಮ ಹೃದಯ ಮತ್ತು ಮನಸ್ಸನ್ನು ವಶಪಡಿಸಿಕೊಂಡು, ಹೀಗೆ ನಮ್ಮ ಆರಾಧನೆಯಲ್ಲಿ ಅರೆಹೃದಯದವರನ್ನಾಗಿ ಮಾಡುವುದಲ್ಲವೊ? (ಕೀರ್ತನೆ 119:113, NW; ರೋಮಾಪುರ 16:18) ನಮ್ಮ ಜೀವಿತವು ಕೇವಲ ಕುಟುಂಬ, ವ್ಯಾಪಾರ, ಮತ್ತು ಭೌತಿಕ ವಿಷಯಗಳ ಸುತ್ತಲೂ ಕೇಂದ್ರೀಕೃತವಾಗುವಷ್ಟರ ಮಟ್ಟಿಗೆ ಶಾರೀರಿಕ ಅಗತ್ಯಗಳನ್ನು ನೋಡಿಕೊಳ್ಳುವುದರಲ್ಲೇ ನಾವು ಅಷ್ಟೊಂದು ತಲ್ಲೀನರಾಗಬೇಕೇಕೆ? ಈ ಪ್ರೇರಿತ ಬುದ್ಧಿವಾದವನ್ನು ನೆನಪಿನಲ್ಲಿಡಿರಿ: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.”—ಲೂಕ 21:34, 35.
16. ಕಣ್ಣಿನ ಕುರಿತಾಗಿ ಯೇಸು ಯಾವ ಬುದ್ಧಿವಾದವನ್ನು ಕೊಟ್ಟನು ಮತ್ತು ಏಕೆ?
16 ಹೃದಯ ಮತ್ತು ಮನಸ್ಸಿನೊಂದಿಗೆ ಸಂಪರ್ಕ ಮಾಡುವ ಪ್ರಮುಖ ಮಾಧ್ಯಮವು ಕಣ್ಣಾಗಿದೆ. ಅದು ಯಾವುದರ ಮೇಲೆ ಕೇಂದ್ರೀಕರಿಸುತ್ತದೊ ಅದು ನಮ್ಮ ವಿಚಾರಗಳು, ಭಾವನೆಗಳು ಮತ್ತು ಕ್ರಿಯೆಗಳ ಮೇಲೆ ಬಲವಾದ ಪ್ರಭಾವವನ್ನು ಬೀರಬಲ್ಲದು. ದೃಷ್ಟಾಂತರೂಪದ ಭಾಷೆಯನ್ನು ಉಪಯೋಗಿಸಿ, ದೃಷ್ಟಿಗೆ ಸಂಬಂಧಿಸಿದ ಪ್ರಲೋಭನೆಯ ಶಕ್ತಿಗೆ ಸೂಚಿಸುತ್ತಾ ಯೇಸು ಹೇಳಿದ್ದು: “ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವದಕ್ಕಿಂತ ಅವಯವಗಳಲ್ಲಿ ಒಂದು ಹೋಗುವದು ನಿನಗೆ ಹಿತವಲ್ಲವೇ.” (ಮತ್ತಾಯ 5:29) ಅಯೋಗ್ಯವಾದ ದೃಶ್ಯಗಳ ಮೇಲೆ ಕೇಂದ್ರೀಕರಿಸುವುದರಿಂದ ಕಣ್ಣಿಗೆ ಕಡಿವಾಣವನ್ನು ಹಾಕಬೇಕಾಗಿದೆ. ಉದಾಹರಣೆಗಾಗಿ, ನಿಷಿದ್ಧ ಕಾಮೋದ್ರೇಕವನ್ನು ಮತ್ತು ಆಸೆಗಳನ್ನು ಕೆರಳಿಸುವಂತೆ ಅಥವಾ ಬಡಿದೆಬ್ಬಿಸುವಂತೆ ರಚಿಸಲ್ಪಟ್ಟಿರುವ ವಿಷಯದ ಮೇಲೆ ಕಣ್ಣು ನೆಡದಂತೆ ಜಾಗ್ರತೆವಹಿಸಬೇಕು.
17. ಕೊಲೊಸ್ಸೆ 3:5ರ ಅನ್ವಯವು, ನಾವು ಹೃದಯವನ್ನು ಕಾಪಾಡಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತದೆ?
17 ಆದರೆ ಹೊರಜಗತ್ತಿನೊಂದಿಗಿನ ಸಂಪರ್ಕಕ್ಕಾಗಿ, ದೃಷ್ಟಿಶಕ್ತಿಯು ನಮ್ಮ ಬಳಿಯಿರುವ ಒಂದೇ ಇಂದ್ರಿಯವಲ್ಲ. ಸ್ಪರ್ಶ ಮತ್ತು ಶ್ರವಣದಂಥ ಇತರ ಇಂದ್ರಿಯಗಳು ತಮ್ಮ ಪಾತ್ರವನ್ನು ವಹಿಸುತ್ತವೆ, ಮತ್ತು ಸಂಬಂಧಿತ ದೇಹದ ಅಂಗಗಳ ವಿಷಯದಲ್ಲೂ ನಾವು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪೊಸ್ತಲ ಪೌಲನು ಬುದ್ಧಿವಾದ ನೀಡಿದ್ದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.”—ಕೊಲೊಸ್ಸೆ 3:5.
18. ತಪ್ಪಾಲೋಚನೆಗಳ ಕುರಿತಾಗಿ ನಾವು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
18 ನಮ್ಮ ಮನಸ್ಸಿನ ಯಾವುದೋ ಮೂಲೆಯಲ್ಲಿ ತಪ್ಪಾದ ಆಸೆಯೊಂದು ಚಿಗುರಸಾಧ್ಯವಿದೆ. ಅದರ ಕುರಿತು ಯೋಚಿಸುತ್ತಾ ಇರುವುದು, ಆ ತಪ್ಪಾಸೆಯನ್ನು ಇನ್ನೂ ಹೆಚ್ಚು ಬಲಗೊಳಿಸಿ, ಹೃದಯದ ಮೇಲೆ ಪ್ರಭಾವ ಬೀರಬಲ್ಲದು. “ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” (ಯಾಕೋಬ 1:14, 15) ಈ ಕಾರಣದಿಂದಲೇ ಮುಷ್ಟಿಮೈಥುನವು ನಡೆಯುತ್ತದೆಂದು ಅನೇಕರು ಒಪ್ಪಿಕೊಳ್ಳುತ್ತಾರೆ. ಆದುದರಿಂದ ನಮ್ಮ ಮನಸ್ಸನ್ನು ಆತ್ಮಿಕ ವಿಚಾರಗಳಿಂದ ತುಂಬಿಸುತ್ತಿರುವುದು ಎಷ್ಟು ಪ್ರಾಮುಖ್ಯ! (ಫಿಲಿಪ್ಪಿ 4:8) ಮತ್ತು ಯಾವುದೇ ತಪ್ಪಾಲೋಚನೆಯು ಮನಸ್ಸಿಗೆ ಬಂದರೂ, ಅದನ್ನು ತೆಗೆದುಹಾಕಲು ನಾವು ಪ್ರಯಾಸಪಡಬೇಕು.
‘ಸಂಪೂರ್ಣ ಹೃದಯದಿಂದ ಯೆಹೋವನನ್ನು ಸೇವಿಸಿರಿ’
19, 20. ಯೆಹೋವನನ್ನು ಸಂಪೂರ್ಣ ಹೃದಯದಿಂದ ಸೇವಿಸುವುದರಲ್ಲಿ ನಾವು ಹೇಗೆ ಯಶಸ್ವಿಗಳಾಗಬಹುದು?
19 ತನ್ನ ಇಳಿವಯಸ್ಸಿನಲ್ಲಿ, ರಾಜ ದಾವೀದನು ತನ್ನ ಮಗನಿಗೆ ಹೀಗೆ ಹೇಳಿದನು: “ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” (1 ಪೂರ್ವಕಾಲವೃತ್ತಾಂತ 28:9) ಸೊಲೊಮೋನನು ತಾನೇ ಒಂದು “ವಿಧೇಯ ಹೃದಯ”ಕ್ಕಾಗಿ ಪ್ರಾರ್ಥಿಸಿದನು. (1 ಅರಸುಗಳು 3:9, NW) ಆದರೂ, ಅಂಥ ಹೃದಯವನ್ನು ಜೀವನದುದ್ದಕ್ಕೂ ಕಾಪಾಡಿಕೊಂಡು ಹೋಗುವ ಕಠಿನವಾದ ಕೆಲಸವನ್ನು ಅವನು ಎದುರಿಸಬೇಕಾಯಿತು.
20 ನಾವು ಈ ವಿಷಯದಲ್ಲಿ ಯಶಸ್ವಿಯಾಗಬೇಕಾದರೆ, ಯೆಹೋವನಿಗೆ ಒಪ್ಪುವ ಹೃದಯವನ್ನು ನಾವು ಕೇವಲ ಪಡೆದುಕೊಳ್ಳುವುದಷ್ಟೇ ಅಲ್ಲ, ಬದಲಾಗಿ ಅದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದೂ ಅಗತ್ಯ. ಇದಕ್ಕಾಗಿ, ನಾವು ದೇವರ ವಾಕ್ಯದ ಮರುಜ್ಞಾಪನಗಳನ್ನು ನಮ್ಮ ಹೃದಯದ ಹತ್ತಿರ, ಅಂದರೆ ‘ಹೃದಯದೊಳಗೆ’ ಇಟ್ಟುಕೊಳ್ಳಬೇಕು. (ಜ್ಞಾನೋಕ್ತಿ 4:20-22) ಅಲ್ಲದೆ, ನಮ್ಮ ಹೃದಯವನ್ನು ಪರೀಕ್ಷಿಸುತ್ತಾ, ನಮ್ಮ ನಡೆನುಡಿಯು ಏನನ್ನು ಪ್ರಕಟಿಸುತ್ತದೆಂಬುದರ ಕುರಿತಾಗಿ ಪ್ರಾರ್ಥನಾಪೂರ್ವಕವಾಗಿ ಚಿಂತಿಸುವ ಒಂದು ರೂಢಿಯನ್ನು ಮಾಡಿಕೊಳ್ಳಬೇಕು. ಆದರೆ ನಾವು ಪತ್ತೆಹಚ್ಚಿರುವ ಯಾವುದೇ ಬಲಹೀನತೆಯನ್ನು ಸರಿಪಡಿಸಲು ಯೆಹೋವನ ಸಹಾಯವನ್ನು ಶ್ರದ್ಧಾಪೂರ್ವಕವಾಗಿ ಕೋರದಿದ್ದರೆ, ಹಾಗೆ ಚಿಂತಿಸಿ ಪ್ರಯೋಜನವೇನು? ಅಲ್ಲದೆ, ನಮ್ಮ ಇಂದ್ರಿಯಗಳ ಮೂಲಕ ನಾವು ಏನನ್ನು ಒಳಸೇರಿಸುತ್ತೇವೊ ಅದರ ಬಗ್ಗೆಯೂ ನಾವು ತುಂಬ ಜಾಗರೂಕರಾಗಿರುವುದು ಎಷ್ಟು ಅತ್ಯಾವಶ್ಯಕ! ಹೀಗೆ ಮಾಡುವುದರಿಂದ, ನಮಗೆ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು [ನಮ್ಮ] ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೌದು, ರಕ್ಷಿಸಬೇಕಾದದ್ದೆಲ್ಲದಕ್ಕಿಂತಲೂ ನಮ್ಮ ಹೃದಯವನ್ನು ಹೆಚ್ಚು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಮತ್ತು ಯೆಹೋವನನ್ನು ಸಂಪೂರ್ಣ ಹೃದಯದಿಂದ ಸೇವಿಸುವುದು ನಮ್ಮ ದೃಢನಿರ್ಣಯವಾಗಿರಲಿ.
ನಿಮಗೆ ಜ್ಞಾಪಕವಿದೆಯೆ?
• ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಪ್ರಾಮುಖ್ಯವಾಗಿರುವುದೇಕೆ?
• ನಾವೇನನ್ನು ಹೇಳುತ್ತೇವೊ ಅದನ್ನು ಪರೀಕ್ಷಿಸುವುದು ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯಮಾಡುತ್ತದೆ?
• ನಮ್ಮ ಕಣ್ಣನ್ನು ನಾವು ಏಕೆ “ಸರಳ”ವಾಗಿಡಬೇಕು?
[ಪುಟ 23ರಲ್ಲಿರುವ ಚಿತ್ರಗಳು]
ಕ್ಷೇತ್ರ ಸೇವೆಯಲ್ಲಿ, ಕೂಟಗಳಲ್ಲಿ ಮತ್ತು ಮನೆಯಲ್ಲಿ ನಾವು ಸಾಮಾನ್ಯವಾಗಿ ಯಾವುದರ ಬಗ್ಗೆ ಮಾತಾಡುತ್ತೇವೆ?
[ಪುಟ 25ರಲ್ಲಿರುವ ಚಿತ್ರಗಳು]
ಸರಳವಾಗಿರುವ ಕಣ್ಣು ಅಪಕರ್ಷಿಸಲ್ಪಡುವುದಿಲ್ಲ