ವಾಚಕರಿಂದ ಪ್ರಶ್ನೆಗಳು
ಯೇಸು ಕ್ರಿಸ್ತನು 12 ಮಂದಿ ಅಪೊಸ್ತಲರನ್ನು ಸಾರಲು ಕಳುಹಿಸಿದಾಗ ಕೋಲನ್ನು ತಕ್ಕೊಳ್ಳುವಂತೆ ಹಾಗೂ ಕೆರಗಳನ್ನು ಮೆಟ್ಟಿಕೊಳ್ಳುವಂತೆ ಹೇಳಿದನೋ?
ಯೇಸು ಅಪೊಸ್ತಲರನ್ನು ಸಾರಲು ಕಳುಹಿಸಿದ್ದರ ಬಗ್ಗೆ ಮೂರು ಸುವಾರ್ತಾ ವೃತ್ತಾಂತಗಳಲ್ಲಿರುವ ವರದಿ ಒಂದಕ್ಕೊಂದು ಹೊಂದಿಕೆಯಲ್ಲಿಲ್ಲ ಎಂಬುದು ಕೆಲವರ ವಾದ. ಆದರೆ ಈ ಮೂರೂ ವೃತ್ತಾಂತಗಳನ್ನು ಹೋಲಿಸಿ ನೋಡುವಲ್ಲಿ ನಾವೊಂದು ಆಸಕ್ತಿಕರ ಅಂಶವನ್ನು ಕಂಡುಕೊಳ್ಳುವೆವು. ಮೊದಲು ಮಾರ್ಕ ಮತ್ತು ಲೂಕನು ಬರೆದಿರುವ ವಿಷಯವನ್ನು ಹೋಲಿಸಿ ನೋಡೋಣ. ಮಾರ್ಕನ ವೃತ್ತಾಂತ ಹೀಗನ್ನುತ್ತದೆ: “[ಯೇಸು] ಅವರಿಗೆ ಆಜ್ಞಾಪಿಸಿದ್ದು: ‘ಪ್ರಯಾಣಕ್ಕಾಗಿ ನಿಮ್ಮೊಂದಿಗೆ ಕೋಲನ್ನು ಹೊರತು ಬೇರೇನನ್ನೂ ತೆಗೆದುಕೊಂಡು ಹೋಗಬೇಡಿ; ರೊಟ್ಟಿಯನ್ನಾಗಲಿ ಆಹಾರದ ಚೀಲವನ್ನಾಗಲಿ ನಡುಪಟ್ಟಿಯ ಜೇಬಿನಲ್ಲಿ ತಾಮ್ರದ ಕಾಸನ್ನಾಗಲಿ ತೆಗೆದುಕೊಂಡು ಹೋಗಬೇಡಿ; ಆದರೆ ಕೆರಗಳನ್ನು ಬಿಗಿದುಕೊಳ್ಳಿ ಮತ್ತು ನೀವು ಧರಿಸಿಕೊಂಡಿರುವ ಉಡುಪೇ ಸಾಕು, ಇನ್ನೊಂದು ಉಡುಪು [“ಒಳಉಡುಪು,” ಪಾದಟಿಪ್ಪಣಿ] ಬೇಡ.’” (ಮಾರ್ಕ 6:7-9) ಲೂಕನು ಬರೆದದ್ದು: “ಪ್ರಯಾಣಕ್ಕಾಗಿ ಕೋಲನ್ನಾಗಲಿ ಆಹಾರದ ಚೀಲವನ್ನಾಗಲಿ ರೊಟ್ಟಿಯನ್ನಾಗಲಿ ಬೆಳ್ಳಿಯ ಕಾಸನ್ನಾಗಲಿ ತೆಗೆದುಕೊಂಡು ಹೋಗಬೇಡಿ; ಎರಡು ಒಳಉಡುಪುಗಳೂ ಬೇಡ.” (ಲೂಕ 9:1-3) ಮೇಲ್ನೋಟಕ್ಕೆ ಈ ಎರಡು ವೃತ್ತಾಂತಗಳು ಒಂದಕ್ಕೊಂದು ವ್ಯತಿರಿಕ್ತವಾಗಿರುವಂತೆ ನಮಗೆ ತೋರುತ್ತವೆ. ಯೇಸು ಅಪೊಸ್ತಲರಿಗೆ ಕೋಲನ್ನು ತಕ್ಕೊಳ್ಳುವಂತೆ ಹಾಗೂ ಕೆರಗಳನ್ನು ಬಿಗಿದುಕೊಳ್ಳುವಂತೆ ಹೇಳಿದನೆಂದು ಮಾರ್ಕನ ವೃತ್ತಾಂತ ತಿಳಿಸುತ್ತದೆ. ಆದರೆ ಲೂಕನ ವೃತ್ತಾಂತವು ಅವರು ತಮ್ಮೊಂದಿಗೆ ಏನನ್ನೂ, ಒಂದು ಕೋಲನ್ನು ಸಹ ಕೊಂಡೊಯ್ಯಬಾರದೆಂದು ಯೇಸು ಹೇಳಿದ್ದಾಗಿ ತಿಳಿಸುತ್ತದೆ. ಕೆರಗಳ ವಿಷಯದಲ್ಲಿ ಲೂಕನು ಏನೂ ತಿಳಿಸಿಲ್ಲ, ಮಾರ್ಕನಾದರೋ ಆ ಬಗ್ಗೆ ತಿಳಿಸಿದ್ದಾನೆ.
ಯೇಸು ಅಪೊಸ್ತಲರಿಗೆ ಏನು ಹೇಳಬಯಸಿದನು ಎಂಬುದನ್ನು ಅರ್ಥಮಾಡಿಕೊಳ್ಳಲು ಮೂರೂ ಸುವಾರ್ತಾ ವೃತ್ತಾಂತಗಳಲ್ಲಿ ಸಾಮಾನ್ಯವಾಗಿರುವ ಒಂದು ಅಭಿವ್ಯಕ್ತಿಯನ್ನು ಗಮನಿಸಿರಿ. ಮೇಲೆ ತಿಳಿಸಲಾಗಿರುವ ವೃತ್ತಾಂತಗಳಲ್ಲಿ ಹಾಗೂ ಮತ್ತಾಯ 10:5-10ರಲ್ಲಿಯೂ ಗಮನಿಸುವಂತೆ ‘ಎರಡು ಒಳಉಡುಪುಗಳನ್ನು’ ಧರಿಸಬಾರದೆಂದು ಅಥವಾ ಇಟ್ಟುಕೊಳ್ಳಬಾರದೆಂದು ಅಪೊಸ್ತಲರಿಗೆ ಹೇಳಲಾಗಿತ್ತು. ಪ್ರತಿಯೊಬ್ಬ ಅಪೊಸ್ತಲನು ಒಂದು ಒಳಉಡುಪನ್ನು ಧರಿಸಿದ್ದನು. ಆದರೆ ಅವರು ಪ್ರಯಾಣಕ್ಕಾಗಿ ಮತ್ತೊಂದನ್ನು ತೆಗೆದುಕೊಳ್ಳಬಾರದಿತ್ತು. ಅದೇ ರೀತಿಯಲ್ಲಿ ಅವರು ಒಂದು ಜೊತೆ ಕೆರಗಳನ್ನು ಹಾಕಿಕೊಂಡಿದ್ದರು. ಹಾಗಾಗಿ ಮಾರ್ಕನು ಅವರು ಹಾಕಿಕೊಂಡಿದ್ದ ಆ ‘ಕೆರಗಳನ್ನು ಬಿಗಿದುಕೊಳ್ಳುವ’ ಅಗತ್ಯವನ್ನು ಒತ್ತಿಹೇಳಿದನಷ್ಟೇ. ಕೋಲುಗಳ ಕುರಿತೇನು? “ಪ್ರಾಚೀನ ಇಬ್ರಿಯ ಜನರಿಗೆ ಪ್ರಯಾಣಿಸುವಾಗ ತಮ್ಮೊಂದಿಗೆ ಕೋಲುಗಳನ್ನೂ ತೆಗೆದುಕೊಂಡು ಹೋಗುವ ರೂಢಿ ಇದ್ದಿರುವಂತೆ ತೋರುತ್ತದೆ” ಎಂದು ಯೆಹೂದ್ಯರ ಕುರಿತ ಒಂದು ವಿಶ್ವಕೋಶವು ತಿಳಿಸುತ್ತದೆ. (ಆದಿ. 32:10) ಯೇಸು ಆ ಆಜ್ಞೆ ಕೊಡುವಾಗ ಅಪೊಸ್ತಲರ ಬಳಿ ಯಾವ ಕೋಲು ಇತ್ತೋ ಅದನ್ನು ಹೊರತುಪಡಿಸಿ “ಪ್ರಯಾಣಕ್ಕಾಗಿ . . . ಬೇರೇನನ್ನೂ ತೆಗೆದುಕೊಂಡು ಹೋಗಬೇಡಿ” ಎಂದು ಮಾರ್ಕನು ವರದಿಸಿದನು. ಹೀಗೆ ಯೇಸು ಕೊಟ್ಟ ನಿರ್ದೇಶನದಲ್ಲಿ ಸುವಾರ್ತಾ ಲೇಖಕರು ಒತ್ತಿಹೇಳಿದ ವಿಷಯವೇನೆಂದರೆ, ಅಪೊಸ್ತಲರು ಪ್ರಯಾಣಕ್ಕಾಗಿ ಹೆಚ್ಚು ವಸ್ತುಗಳನ್ನು ತೆಗೆದುಕೊಳ್ಳಲು ಹೋಗಿ ತಡಮಾಡಬಾರದೆಂದೇ.
ಯೇಸುವಿನ ಆಜ್ಞೆಯನ್ನು ಸ್ವತಃ ಕೇಳಿಸಿಕೊಂಡು ವರದಿಸಿದ ಮತ್ತಾಯನು ಈ ವಿಷಯಕ್ಕೆ ಹೆಚ್ಚು ಒತ್ತುಕೊಡುತ್ತಾನೆ. ಯೇಸು ಹೇಳಿದ್ದು: “ನಿಮ್ಮ ನಡುಪಟ್ಟಿಯ ಜೇಬುಗಳಲ್ಲಿ ಚಿನ್ನ ಅಥವಾ ಬೆಳ್ಳಿ ಅಥವಾ ತಾಮ್ರವನ್ನಾಗಲಿ ಅಥವಾ ಪ್ರಯಾಣಕ್ಕಾಗಿ ಆಹಾರದ ಚೀಲವನ್ನಾಗಲಿ ಎರಡು ಒಳಉಡುಪುಗಳನ್ನಾಗಲಿ ಕೆರಗಳನ್ನಾಗಲಿ ಕೋಲನ್ನಾಗಲಿ ಕೊಂಡೊಯ್ಯಬೇಡಿರಿ; ಏಕೆಂದರೆ ಕೆಲಸಗಾರನು ತನ್ನ ಕೂಲಿಗೆ ಅರ್ಹನು.” (ಮತ್ತಾ. 10:9, 10) ಹಾಗಾದರೆ ಅಪೊಸ್ತಲರು ಧರಿಸಿದ್ದ ಕೆರಗಳು ಹಾಗೂ ಅವರ ಕೈಯಲ್ಲಿದ್ದ ಕೋಲುಗಳ ಕುರಿತೇನು? ಯೇಸು ಅವರಿಗೆ ಪ್ರಯಾಣಕ್ಕೆಂದು ಹೆಚ್ಚೆಚ್ಚು ವಸ್ತುಗಳನ್ನು ಕೂಡಿಸಲು ಹೋಗಬೇಡಿ ಎಂದು ಹೇಳಿದನೇ ವಿನಃ ಅವರ ಬಳಿ ಈಗಾಗಲೇ ಇದ್ದಂಥ ವಸ್ತುಗಳನ್ನು ಬಿಸಾಡುವಂತೆ ಹೇಳಲಿಲ್ಲ. ಯೇಸು ಹಾಗೆ ಆಜ್ಞಾಪಿಸಿದ್ದೇಕೆ? “ಏಕೆಂದರೆ ಕೆಲಸಗಾರನು ತನ್ನ ಕೂಲಿಗೆ ಅರ್ಹನು.” ಇದೇ ಯೇಸುವಿನ ಆಜ್ಞೆಯ ಸಾರವಾಗಿತ್ತು. ಇದು, ಊಟಬಟ್ಟೆಯ ವಿಷಯದಲ್ಲಿ ಚಿಂತೆಮಾಡದಂತೆ ಯೇಸು ಪರ್ವತ ಪ್ರಸಂಗದಲ್ಲಿ ಹೇಳಿದ ಮಾತುಗಳಿಗೆ ಹೊಂದಿಕೆಯಲ್ಲಿದೆ.—ಮತ್ತಾ. 6:25-32.
ಈ ಸುವಾರ್ತಾ ವೃತ್ತಾಂತಗಳು ಮೇಲ್ನೋಟಕ್ಕೆ ಒಂದಕ್ಕೊಂದು ವ್ಯತಿರಿಕ್ತವಾಗಿರುವಂತೆ ತೋರುವುದಾದರೂ ಅವೆಲ್ಲವೂ ಒಂದೇ ಅಂಶವನ್ನು ಒತ್ತಿಹೇಳುತ್ತವೆ. ಅಪೊಸ್ತಲರು ಹೆಚ್ಚು ವಸ್ತುಗಳನ್ನು ತೆಗೆದುಕೊಳ್ಳಲು ಹೋಗುವ ಮೂಲಕ ಅಪಕರ್ಷಿತರಾಗದೆ ತಮ್ಮ ಬಳಿ ಇದ್ದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕಿತ್ತು. ಏಕೆ? ಏಕೆಂದರೆ ಯೆಹೋವನು ಅವರಿಗೆ ಅಗತ್ಯವಿರುವುದೆಲ್ಲವನ್ನು ಒದಗಿಸಲಿದ್ದನು.