ಸುಳ್ಳು ತರ್ಕಗಳಿಂದ ನಿಮ್ಮನ್ನು ಮೋಸಗೊಳಿಸಿಕೊಳ್ಳಬೇಡಿ
ನಿಷೇಧಿತ ಮರದ ಹಣ್ಣನ್ನು ತಿಂದ ಹವ್ವಳಿಗೆ, “ಇದೇನು ನೀನು ಮಾಡಿದ್ದು” ಎಂದು ದೇವರು ಕೇಳಲು ಆಕೆ, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದುತ್ತರಿಸಿದಳು. (ಆದಿ. 3:13) ದೇವರಿಗೆ ಅವಿಧೇಯಳಾಗುವಂತೆ ಅವಳನ್ನು ಪ್ರೇರಿಸಿದ ಆ ವಂಚಕ ಸರ್ಪವಾದ ಸೈತಾನನು, “ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿರುವ . . . ಪುರಾತನ ಸರ್ಪ” ಎಂದು ಕಾಲಾನಂತರ ಕರೆಯಲ್ಪಟ್ಟನು.—ಪ್ರಕ. 12:9.
ಆದಿಕಾಂಡ ಪುಸ್ತಕದ ಆ ವೃತ್ತಾಂತವು ಸೈತಾನನು ಅಜಾಗರೂಕರನ್ನು ಮೋಸಗೊಳಿಸುವ ಉದ್ದೇಶದಿಂದ ಒಂದಕ್ಕೊಂದು ಸುಳ್ಳನ್ನು ಹೆಣೆಯುವ ಕುತಂತ್ರಿಯೆಂದು ತೋರಿಸುತ್ತದೆ. ಹವ್ವಳು ಅವನ ಮೋಸಕ್ಕೆ ಬಲಿಯಾದಳು. ಆದಾಗ್ಯೂ, ನಮ್ಮನ್ನು ತಪ್ಪುದಾರಿಗೆ ನಡಿಸುವವನು ಸೈತಾನನೊಬ್ಬನೇ ಎಂದು ನಾವೆಣಿಸಬಾರದು. ‘ಸುಳ್ಳಾದ ತರ್ಕಗಳಿಂದ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುವ’ ಅಪಾಯವೂ ಇದೆಯೆಂದು ಬೈಬಲ್ ಎಚ್ಚರಿಸುತ್ತದೆ.—ಯಾಕೋ. 1:22.
ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುವುದು ಅಸಾಧ್ಯ, ಅಸಂಭವ ಕೂಡ ಎಂದು ನಮಗನಿಸೀತು. ಆದರೆ ಆ ಬಗ್ಗೆ ದೈವಿಕ ಎಚ್ಚರಿಕೆ ಕೊಡಲಾಗಿರುವುದಕ್ಕೆ ಖಂಡಿತ ಒಂದು ಉದ್ದೇಶವಿರಲೇಬೇಕು. ಆದ್ದರಿಂದ, ನಮ್ಮನ್ನು ನಾವೇ ಹೇಗೆ ಮೋಸಗೊಳಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಯಾವ ರೀತಿಯ ಸುಳ್ಳು ತರ್ಕ ನಮ್ಮನ್ನು ತಪ್ಪುದಾರಿಗೆ ನಡಿಸಬಹುದು ಎಂಬುದನ್ನು ನಾವು ಪರಿಗಣಿಸಬೇಕು. ಬೈಬಲ್ನಲ್ಲಿನ ಉದಾಹರಣೆಯೊಂದು ನಮಗೆ ಈ ದಿಸೆಯಲ್ಲಿ ಸಹಾಯಮಾಡುವುದು.
ಆತ್ಮವಂಚನೆಗೊಳಗಾದವರಿಂದ ಪಾಠ
ಸರಿಸುಮಾರು ಕ್ರಿ.ಪೂ. 537ರಲ್ಲಿ ಪಾರಸಿಯ ಅರಸನಾದ ಮಹಾ ಕೋರೆಷನು ಬಾಬೆಲಿನಲ್ಲಿ ಬಂದಿಯಾಗಿದ್ದ ಯೆಹೂದ್ಯರಿಗೆ ಯೆರೂಸಲೇಮಿಗೆ ಹಿಂದಿರುಗಿ ದೇವಾಲಯವನ್ನು ಪುನಃ ಕಟ್ಟುವಂತೆ ಅಪ್ಪಣೆಕೊಟ್ಟನು. (ಎಜ್ರ 1:1, 2) ಜನರು ಹೊರಟುಬಂದ ಮರುವರ್ಷವೇ ಯೆಹೋವನ ಉದ್ದೇಶದಂತೆ ಹೊಸ ದೇವಾಲಯಕ್ಕಾಗಿ ಅಸ್ತಿವಾರ ಹಾಕಿದರು. ಈ ಮಹತ್ವಪೂರ್ಣ ಕೆಲಸದ ಆರಂಭಿಕ ಹಂತವನ್ನು ಯೆಹೋವನು ಆಶೀರ್ವದಿಸಿದ್ದಕ್ಕಾಗಿ ಅವರು ಸಂತೋಷಿಸುತ್ತಾ ಆತನನ್ನು ಸ್ತುತಿಸಿದರು. (ಎಜ್ರ 3:8, 10, 11) ಆದರೆ ಸ್ವಲ್ಪದರಲ್ಲೇ ಪುನರ್ನಿರ್ಮಾಣದ ಕೆಲಸಕ್ಕೆ ವಿರೋಧ ಬಂದಾಗ ಜನರು ಎದೆಗುಂದಿದರು. (ಎಜ್ರ 4:4) ಅವರು ಹಿಂದಿರುಗಿ ಬಂದು ಸುಮಾರು 15 ವರ್ಷಗಳ ಬಳಿಕ ಪಾರಸಿಯ ಅಧಿಕಾರಿಗಳು ಯೆರೂಸಲೇಮಿನ ಎಲ್ಲಾ ನಿರ್ಮಾಣಕಾರ್ಯಗಳ ಮೇಲೆ ನಿಷೇಧ ಹೇರಿದರು. ಆ ನಿಷೇಧಾಜ್ಞೆಯನ್ನು ಜಾರಿಗೆ ತರಲಿಕ್ಕಾಗಿ ಪ್ರಾಂತೀಯ ಅಧಿಕಾರಿಗಳು ಯೆರೂಸಲೇಮಿಗೆ ಬಂದು “ಬಲಾತ್ಕಾರದಿಂದಲೂ ಅಧಿಕಾರದಿಂದಲೂ ಯೆಹೂದ್ಯರನ್ನು ತಡೆದರು.”—ಎಜ್ರ 4:21-24.
ಹೀಗೆ ತೀವ್ರ ವಿರೋಧ ಎದುರಾದಾಗ ಯೆಹೂದ್ಯರು ಸುಳ್ಳಾದ ತರ್ಕದಿಂದ ತಮ್ಮನ್ನೇ ಮೋಸಗೊಳಿಸಿಕೊಂಡರು. “ಯೆಹೋವನ ಆಲಯವನ್ನು ಕಟ್ಟುವದಕ್ಕೆ ಸಮಯವು ಇನ್ನೂ ಬಂದಿಲ್ಲ” ಎಂದು ಅಂದುಕೊಂಡರು. (ಹಗ್ಗಾ. 1:2) ದೇವಾಲಯವನ್ನು ತಕ್ಷಣ ಕಟ್ಟಬೇಕೆಂದು ದೇವರೇನೂ ಬಯಸುವುದಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದರು. ದೇವರ ಚಿತ್ತವನ್ನು ಮಾಡಲಿಕ್ಕಾಗಿ ಮಾರ್ಗಗಳನ್ನು ಹುಡುಕದೆ, ತಮ್ಮ ಪವಿತ್ರ ನೇಮಕಗಳನ್ನು ಬಿಟ್ಟು ಸ್ವಂತ ಮನೆಗಳನ್ನು ಉತ್ತಮಗೊಳಿಸುವುದರಲ್ಲಿ ಮಗ್ನರಾದರು. ಆದ್ದರಿಂದ ದೇವರ ಪ್ರವಾದಿಯಾದ ಹಗ್ಗಾಯನು ಅವರಿಗೆ, “[ಯೆಹೋವನ] ಆಲಯವು ಹಾಳುಬಿದ್ದಿದೆಯಲ್ಲಾ; ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ?” ಎಂದು ನೇರವಾಗಿ ಕೇಳಿದನು.—ಹಗ್ಗಾ. 1:4.
ಈ ಉದಾಹರಣೆಯಲ್ಲಿ ನಮಗಿರುವ ಪಾಠ? ದೇವರ ಉದ್ದೇಶದ ಕಾಲಾವಧಿಯ ಕುರಿತ ತಪ್ಪಾದ ನೋಟವು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಿರ್ಲಕ್ಷಿಸಿ ವೈಯಕ್ತಿಕ ಕೆಲಸಕಾರ್ಯಗಳಲ್ಲೇ ಮುಳುಗಿರುವಂತೆ ಮಾಡಬಲ್ಲದು. ದೃಷ್ಟಾಂತಕ್ಕೆ, ಅತಿಥಿಗಳು ಬರುವುದನ್ನು ನೀವು ನಿರೀಕ್ಷಿಸುತ್ತಿದ್ದೀರೆಂದು ನೆನಸಿ. ಅವರ ಆಗಮನವನ್ನು ಎದುರುನೋಡುತ್ತಾ, ಅವರ ತಂಗುವಿಕೆಗಾಗಿ ಎಲ್ಲ ವ್ಯವಸ್ಥೆಗಳನ್ನು ಬೇಗಬೇಗನೆ ಮಾಡಿಮುಗಿಸಲು ನೀವು ಪ್ರಯತ್ನಿಸುತ್ತೀರಿ. ಆದರೆ, ಅವರು ತಡವಾಗಿ ಬರುತ್ತಾರೆಂಬ ಸುದ್ದಿ ನಿಮಗೆ ಸಿಗುತ್ತದೆ. ಆಗ ನೀವು ತಯಾರಿಯನ್ನೇ ನಿಲ್ಲಿಸಿಬಿಡುವಿರೋ?
ದೇವಾಲಯವನ್ನು ತಡಮಾಡದೆ ಪುನಃ ಕಟ್ಟಬೇಕೆಂಬುದೇ ಯೆಹೋವನ ಅಪೇಕ್ಷೆಯಾಗಿದೆಯೆಂದು ಹಗ್ಗಾಯ, ಜೆಕರ್ಯರು ಯೆಹೂದ್ಯರಿಗೆ ಮನವರಿಕೆಮಾಡಿದರು. “ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸನಡಿಸಿರಿ” ಎಂದು ಹಗ್ಗಾಯನು ಉತ್ತೇಜಿಸಿದನು. (ಹಗ್ಗಾ. 2:4) ದೇವರಾತ್ಮವು ತಮ್ಮನ್ನು ಬೆಂಬಲಿಸುವುದೆಂಬ ಭರವಸೆಯೊಂದಿಗೆ ಅವರು ನಿರ್ಮಾಣಕೆಲಸವನ್ನು ಮುಂದುವರಿಸಬೇಕಿತ್ತು. (ಜೆಕ. 4:6, 7) ಯೆಹೋವನ ದಿನದ ಕುರಿತು ತಪ್ಪುತೀರ್ಮಾನಕ್ಕೆ ಬರದಿರಲು ಈ ಉದಾಹರಣೆ ನಮಗೆ ಸಹಾಯಮಾಡುತ್ತದೋ?—1 ಕೊರಿಂ. 10:11.
ಸುಳ್ಳು ತರ್ಕಗಳಿಗೆ ಬದಲಾಗಿ ಸ್ವಸ್ಥಯೋಚನೆ
ಅಪೊಸ್ತಲ ಪೇತ್ರನು ತನ್ನ ಎರಡನೇ ಪತ್ರದಲ್ಲಿ, “ನೂತನ ಆಕಾಶವನ್ನೂ ನೂತನ ಭೂಮಿಯನ್ನೂ” ತರಲಿರುವ ಯೆಹೋವನ ಕಾಲತಖ್ತೆಯ ಬಗ್ಗೆ ಚರ್ಚಿಸಿದನು. (2 ಪೇತ್ರ 3:13) ಮಾನವ ವ್ಯವಹಾರಗಳಲ್ಲಿ ದೇವರು ಎಂದಾದರೂ ಹಸ್ತಕ್ಷೇಪ ಮಾಡುವನೋ ಎಂದು ಕೆಲವು ಕುಚೋದ್ಯಗಾರರು ಸಂಶಯವೆಬ್ಬಿಸಿದ್ದರ ಬಗ್ಗೆ ಅವನು ಬರೆದನು. “ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ,” ಹಾಗಾಗಿ ಏನೂ ಸಂಭವಿಸದೆಂದು ಅವರು ತಪ್ಪಾಗಿ ತರ್ಕಿಸುತ್ತಿದ್ದರು. (2 ಪೇತ್ರ 3:4) ಅಂಥ ಕುತರ್ಕಗಳು ಸುಳ್ಳೆಂದು ರುಜುಪಡಿಸಲು ಪೇತ್ರನು ಬಯಸಿದನು. “ಮರುಜ್ಞಾಪನದ ಮೂಲಕ ನಿಮ್ಮ ಸ್ಪಷ್ಟವಾದ ಆಲೋಚನಾ ಸಾಮರ್ಥ್ಯವನ್ನು ಪ್ರಚೋದಿಸುತ್ತಿದ್ದೇನೆ” ಎಂದು ಅವನು ಬರೆದನು. ಇಡೀ ಭೂಮಿಯ ಮೇಲೆ ವಿಪತ್ಕಾರಕ ಜಲಪ್ರಳಯವನ್ನು ತರುವ ಮೂಲಕ ದೇವರು ಈ ಹಿಂದೆ ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡಿದ್ದನು. ಇದನ್ನು ಜೊತೆ ಕ್ರೈಸ್ತರಿಗೆ ಮರುಜ್ಞಾಪಿಸುವ ಮೂಲಕ ಕುಚೋದ್ಯಗಾರರ ಎಣಿಕೆ ತಪ್ಪೆಂದು ಪೇತ್ರನು ರುಜುಪಡಿಸಿದನು.—2 ಪೇತ್ರ 3:1, 5-7.
ತದ್ರೀತಿಯ ಉತ್ತೇಜನವನ್ನು ಹಗ್ಗಾಯನು ಕ್ರಿ.ಪೂ. 520ರಲ್ಲಿ ಯೆಹೂದ್ಯರಿಗೆ ನೀಡಿದನು. ಧೈರ್ಯಗೆಟ್ಟು ನಿರ್ಮಾಣಕೆಲಸ ನಿಲ್ಲಿಸಿದ್ದ ಅವರಿಗೆ, “ನಿಮ್ಮ ಮಾರ್ಗಗಳನ್ನು ಆಲೋಚಿಸಿ ನೋಡಿರಿ” ಎಂದವನು ಬುದ್ಧಿಹೇಳಿದನು. (ಹಗ್ಗಾ. 1:5, NIBV) ಅವರ ಆಲೋಚನಾ ಸಾಮರ್ಥ್ಯವನ್ನು ಪ್ರಚೋದಿಸಲಿಕ್ಕಾಗಿ ದೇವರ ಉದ್ದೇಶಗಳ ಕುರಿತು ಮತ್ತು ಆತನು ತನ್ನ ಜನರಿಗೆ ಮಾಡಿರುವ ವಾಗ್ದಾನಗಳ ಕುರಿತು ನೆನಪುಹುಟ್ಟಿಸಿದನು. (ಹಗ್ಗಾ. 1:8; 2:4, 5) ಈ ಪ್ರೋತ್ಸಾಹ ಪಡೆದುಕೊಂಡ ಯೆಹೂದ್ಯರು ಕೂಡಲೆ ಅಧಿಕಾರಿಗಳ ನಿಷೇಧಾಜ್ಞೆಯನ್ನು ಲೆಕ್ಕಿಸದೆ ಪುನಃ ನಿರ್ಮಾಣಕೆಲಸಕ್ಕೆ ಕೈಹಾಕಿದರು. ವಿರೋಧಿಗಳು ಮತ್ತೆ ಅದನ್ನು ನಿಲ್ಲಿಸಲು ಪ್ರಯತ್ನಿಸಿದರಾದರೂ ವಿಫಲರಾದರು. ನಿಷೇಧಾಜ್ಞೆಯನ್ನು ಹಿಂತೆಗೆಯಲಾಯಿತು. ಆಲಯದ ನಿರ್ಮಾಣಕಾರ್ಯ ಐದು ವರ್ಷಗಳಲ್ಲಿ ಪೂರ್ಣಗೊಂಡಿತು.—ಎಜ್ರ 6:14, 15; ಹಗ್ಗಾ. 1:14, 15.
ನಮ್ಮ ಮಾರ್ಗಗಳ ಕುರಿತು ಆಲೋಚಿಸೋಣ
ಕಷ್ಟಗಳು ಎದುರಾದಾಗ ನಾವು ಹಗ್ಗಾಯನ ದಿನದಲ್ಲಿದ್ದ ಯೆಹೂದ್ಯರಂತೆ ಎದೆಗುಂದುವ ಸಾಧ್ಯತೆಯಿದೆಯೋ? ಹಾಗಾಗುವಲ್ಲಿ, ಸುವಾರ್ತೆಯನ್ನು ಹುರುಪಿನಿಂದ ಸಾರಲು ನಮಗೆ ಕಷ್ಟವಾದೀತು. ಆದರೆ ಯಾವುದು ನಮ್ಮನ್ನು ಎದೆಗುಂದಿಸಬಹುದು? ಪ್ರಾಯಶಃ ಈ ಲೋಕದಲ್ಲಿರುವ ಅನ್ಯಾಯವು ನಮ್ಮನ್ನು ಬಾಧಿಸುತ್ತಿರಬಹುದು. ಹಬಕ್ಕೂಕನ ಕುರಿತು ಯೋಚಿಸಿ. ಅವನು ಕೇಳಿದ್ದು: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ.” (ಹಬ. 1:2) ದೇವರು ತಡಮಾಡುತ್ತಿದ್ದಾನೆಂದು ಕ್ರೈಸ್ತನೊಬ್ಬನು ನೆನಸುವಲ್ಲಿ ಅವನು ತನ್ನ ತುರ್ತುಪ್ರಜ್ಞೆಯನ್ನು ಕಳೆದುಕೊಂಡು ಐಷಾರಾಮದ ಜೀವನಕ್ಕೆ ಆದ್ಯತೆ ಕೊಟ್ಟಾನು. ನಮ್ಮ ಜೀವನದಲ್ಲೂ ಹಾಗೆ ಸಂಭವಿಸುತ್ತಿದೆಯೋ? ಹಾಗಿರುವಲ್ಲಿ ನಾವು ನಮ್ಮನ್ನೇ ಮೋಸಗೊಳಿಸಿಕೊಳ್ಳುತ್ತಿದ್ದೇವೆ. ‘ನಮ್ಮ ಮಾರ್ಗಗಳನ್ನು ಆಲೋಚಿಸಿ ನೋಡುವಂತೆ’ ಮತ್ತು ‘ಸ್ಪಷ್ಟವಾಗಿ ಆಲೋಚಿಸುವ ನಮ್ಮ ಸಾಮರ್ಥ್ಯವನ್ನು ಪ್ರಚೋದಿಸುವಂತೆ’ ಬೈಬಲ್ ಕೊಡುವ ಸಲಹೆಗೆ ಕಿವಿಗೊಡುವುದು ಎಷ್ಟೊಂದು ಪ್ರಾಮುಖ್ಯ! ನಾವು ಹೀಗೆ ಕೇಳಿಕೊಳ್ಳಬೇಕು: ‘ಈ ದುಷ್ಟ ಲೋಕವು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ಉಳಿದಿರುವುದಕ್ಕಾಗಿ ನಾನು ಆಶ್ಚರ್ಯಪಡುತ್ತೇನೋ?’
ಕಾಯುವಂತೆ ಬೈಬಲ್ ಮುಂತಿಳಿಸಿತು
ಈ ಲೋಕದ ಸಮಾಪ್ತಿಯ ಕುರಿತ ಯೇಸುವಿನ ಮಾತುಗಳನ್ನು ನಾವೀಗ ಪರಿಗಣಿಸೋಣ. ಕಡೇ ದಿವಸಗಳ ಬಗ್ಗೆ ಯೇಸುವಿನ ಪ್ರವಾದನಾತ್ಮಕ ಮಾತುಗಳನ್ನು ಮಾರ್ಕನು ದಾಖಲಿಸಿದ್ದಾನೆ. ಅದರಲ್ಲಿ, ಎಚ್ಚರವಾಗಿರಬೇಕೆಂದು ಯೇಸು ಪದೇ ಪದೇ ಒತ್ತಿಹೇಳಿರುವುದನ್ನು ನಾವು ನೋಡುತ್ತೇವೆ. (ಮಾರ್ಕ 13:33-37) ಯೆಹೋವನ ಮಹಾದಿನದಲ್ಲಾಗುವ ಅರ್ಮಗೆದೋನ್ ಯುದ್ಧದ ಪ್ರವಾದನಾತ್ಮಕ ವರ್ಣನೆಯಲ್ಲೂ ತದ್ರೀತಿಯ ಎಚ್ಚರಿಕೆಯಿದೆ. (ಪ್ರಕ. 16:14-16) ಏಕೆ ಇಷ್ಟು ಸಲ ಎಚ್ಚರಿಕೆಗಳನ್ನು ಕೊಡಲಾಗಿದೆ? ತಾವು ಕಾಯುತ್ತಿರುವ ಸಮಯಾವಧಿ ಬಹಳ ದೀರ್ಘವಾಗುತ್ತಿದೆ ಎಂದೆಣಿಸುವಲ್ಲಿ ಜನರು ತಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದಲೇ ಮರುಜ್ಞಾಪನಗಳು ಅಗತ್ಯ.
ಈ ಲೋಕದ ಅಂತ್ಯಕ್ಕಾಗಿ ಕಾಯುತ್ತಿರುವ ನಾವು ಸದಾ ಎಚ್ಚರವಾಗಿರಬೇಕಾದ ಅಗತ್ಯವನ್ನು ಯೇಸು ದೃಷ್ಟಾಂತಿಸಿದನು. ಕನ್ನಹಾಕಲ್ಪಟ್ಟ ಮನೆಯ ಯಜಮಾನನ ಕುರಿತು ಯೇಸು ಅಲ್ಲಿ ತಿಳಿಸಿದನು. ತನ್ನ ಮನೆಯಲ್ಲಿ ಕಳ್ಳತನವಾಗುವುದನ್ನು ಯಜಮಾನನು ಹೇಗೆ ತಡೆಯಬಹುದಿತ್ತು? ರಾತ್ರಿಯಿಡೀ ಜಾಗರಣೆ ಮಾಡಿ ಎಚ್ಚರವಾಗಿರುವ ಮೂಲಕವೇ. ದೃಷ್ಟಾಂತದ ಕೊನೆಯಲ್ಲಿ ಯೇಸು ನಮಗೆ ಈ ಬುದ್ಧಿವಾದ ಕೊಡುತ್ತಾನೆ: “ನೀವು ಸಹ ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಮತ್ತಾ. 24:43, 44.
ದೀರ್ಘಸಮಯವಾದರೂ ಸರಿ ನಾವು ಕಾಯಲು ಸಿದ್ಧರಾಗಿರಬೇಕೆಂದು ಈ ದೃಷ್ಟಾಂತ ತೋರಿಸುತ್ತದೆ. ಈ ದುಷ್ಟ ಲೋಕವು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ಉಳಿದಿರಬಹುದಾದರೂ ಆ ಬಗ್ಗೆ ಅತಿಯಾಗಿ ಚಿಂತಿಸಬಾರದು. ‘ಯೆಹೋವನ ಸಮಯವು ಇನ್ನೂ ಬಂದಿಲ್ಲ’ ಎಂದು ಸುಳ್ಳಾಗಿ ತರ್ಕಿಸುತ್ತಾ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳಬಾರದು. ಅಂಥ ಯೋಚನೆಯು ರಾಜ್ಯದ ಸಂದೇಶವನ್ನು ಸಾರಲು ನಮಗಿರುವ ಹುರುಪನ್ನು ಕುಗ್ಗಿಸುತ್ತದೆ.—ರೋಮ. 12:11.
ಸುಳ್ಳಾದ ತರ್ಕಗಳನ್ನು ಮನಸ್ಸಿನಿಂದ ಕಿತ್ತೆಸೆಯಿರಿ
ಸುಳ್ಳಾದ ತರ್ಕಗಳಿಗೆ ಅನ್ವಯವಾಗುವ ಒಂದು ಮೂಲತತ್ತ್ವವು ಗಲಾತ್ಯ 6:7ರಲ್ಲಿದೆ. ಅದನ್ನುವುದು: “ಮೋಸಹೋಗಬೇಡಿರಿ; . . . ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.” ಒಂದು ಹೊಲದಲ್ಲಿ ಬಿತ್ತನೆ ಮಾಡದಿರುವಲ್ಲಿ ಕಳೆಗಳು ಸುಲಭವಾಗಿ ಬೆಳೆದುಬಿಡುತ್ತವೆ. ಅಂತೆಯೇ ನಾವು ನಮ್ಮ ಸ್ಪಷ್ಟವಾದ ಯೋಚನಾ ಸಾಮರ್ಥ್ಯವನ್ನು ಪ್ರಚೋದಿಸದಿರುವಲ್ಲಿ ಸುಳ್ಳಾದ ತರ್ಕಗಳು ನಮ್ಮ ಮನದಲ್ಲಿ ಬೇರುಬಿಡಬಲ್ಲವು. ಉದಾಹರಣೆಗೆ, ‘ಯೆಹೋವನ ದಿನ ಖಂಡಿತ ಬರುತ್ತದೆ, ಆದರೆ ಸದ್ಯಕ್ಕಂತೂ ಬರುವುದಿಲ್ಲ’ ಎಂದು ನಾವು ಅಂದುಕೊಳ್ಳಬಹುದು. ಇಂಥ ಮನೋಭಾವವು ದೇವಪ್ರಭುತ್ವಾತ್ಮಕ ಚಟುವಟಿಕೆಗಳನ್ನು ಹಗುರವಾಗಿ ತಕ್ಕೊಳ್ಳುವಂತೆ ಮಾಡಬಲ್ಲದು. ಸಮಯಸಂದಂತೆ ನಾವು ಆಧ್ಯಾತ್ಮಿಕ ರೂಢಿಗಳನ್ನು ನಿರ್ಲಕ್ಷಿಸಲಾರಂಭಿಸಬಹುದು. ಆಗ ಯೆಹೋವನ ದಿನವು ಅನಿರೀಕ್ಷಿತವಾಗಿ ನಮ್ಮ ಮೇಲೆ ಬಂದೆರಗೀತು.—2 ಪೇತ್ರ 3:10.
ಆದರೆ, “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು” ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುತ್ತಾ ಇರುವಲ್ಲಿ ಸುಳ್ಳಾದ ತರ್ಕಗಳು ನಮ್ಮ ಮನಸ್ಸಿನಲ್ಲಿ ಬೇರುಬಿಡವು. (ರೋಮ. 12:2) ಬೈಬಲನ್ನು ದಿನಾಲೂ ಓದುವುದು ಈ ನಿಟ್ಟಿನಲ್ಲಿ ಸಹಾಯಕರ. ಏಕೆಂದರೆ ಯೆಹೋವನು ಯಾವಾಗಲೂ ನೇಮಿತ ಸಮಯದಲ್ಲಿ ಕ್ರಿಯೆಗೈಯುತ್ತಾನೆಂಬ ನಮ್ಮ ಭರವಸೆಯನ್ನು ಬೈಬಲ್ ಬಲಪಡಿಸುತ್ತದೆ.—ಹಬ. 2:3.
ಅಧ್ಯಯನ, ಪ್ರಾರ್ಥನೆ, ಕೂಟಗಳಿಗೆ ಕ್ರಮದ ಹಾಜರಿ, ಸಾರುವಿಕೆ ಮತ್ತು ಪ್ರೀತಿದಯೆಯ ಕ್ರಿಯೆಗಳು ‘ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುವಂತೆ’ ನಮಗೆ ಸಾಧ್ಯಮಾಡುತ್ತವೆ. (2 ಪೇತ್ರ 3:11, 12) ನಮ್ಮ ಸ್ಥಿರಚಿತ್ತತೆಯನ್ನು ಯೆಹೋವನು ಗಮನಿಸುತ್ತಾನೆ. ಅಪೊಸ್ತಲ ಪೌಲನು ನೆನಪುಹುಟ್ಟಿಸಿದ್ದು: “ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ; ನಾವು ದಣಿಯದಿದ್ದರೆ ತಕ್ಕ ಸಮಯದಲ್ಲಿ ಫಲವನ್ನು ಕೊಯ್ಯುವೆವು.”—ಗಲಾ. 6:9.
ಯೆಹೋವನ ದಿನವು ಮುಂದೆಂದೋ ಬರಲಿದೆ ಎಂಬಂಥ ಸುಳ್ಳಾದ ತರ್ಕಗಳಿಂದ ನಮ್ಮನ್ನು ಮೋಸಗೊಳಿಸಿಕೊಳ್ಳುವ ಸಮಯ ಖಂಡಿತ ಇದಲ್ಲ. ಬದಲಾಗಿ ಯೆಹೋವನ ದಿನವು ಶೀಘ್ರದಲ್ಲೇ ಬರಲಿದೆ ಎಂಬ ನಿಶ್ಚಿತಾಭಿಪ್ರಾಯದಿಂದಿರುವ ಸಮಯ ಇದಾಗಿದೆ.
[ಪುಟ 4ರಲ್ಲಿರುವ ಚಿತ್ರ]
ನಿರ್ಮಾಣಕೆಲಸದಲ್ಲಿ ಒಳಗೂಡುವಂತೆ ಹಗ್ಗಾಯ ಜೆಕರ್ಯರು ಯೆಹೂದ್ಯರನ್ನು ಉತ್ತೇಜಿಸಿದರು
[ಪುಟ 5ರಲ್ಲಿರುವ ಚಿತ್ರ]
ಕಳ್ಳ ಯಾವಾಗ ಬರುತ್ತಾನೆಂದು ಮನೆಯ ಯಜಮಾನನಿಗೆ ಗೊತ್ತಿರುತ್ತಿದ್ದಲ್ಲಿ ಆತ ಏನು ಮಾಡುತ್ತಿದ್ದ?