ಈಗ ಮೃತರಾಗಿರುವ ದಶಲಕ್ಷಾಂತರ ಜನರು ಪುನಃ ಜೀವಿಸುವರು
ಈಗ ಮೃತರಾಗಿರುವ ದಶಲಕ್ಷಾಂತರ ಜನರು ಪುನಃ ಜೀವಿಸುವರು—ಇದೆಷ್ಟು ಹೃದಯ ಪುಳಕಿತ ನಿರೀಕ್ಷೆ! ಆದರೆ ಇದು ವಾಸ್ತವವೆ? ಇದನ್ನು ನಿಮಗೆ ಮನದಟ್ಟು ಮಾಡಲು ಯಾವುದರ ಅಗತ್ಯವಿದ್ದೀತು? ಒಂದು ವಾಗ್ದಾನದಲ್ಲಿ ನಂಬಬೇಕಾದರೆ, ಆ ವಾಗ್ದಾನ ಮಾಡಿರುವಾತನು ಅದನ್ನು ನೆರವೇರಿಸಲು ಇಷ್ಟವುಳ್ಳವನೂ ಶಕ್ತನೂ ಆಗಿರಬೇಕು. ಹಾಗಾದರೆ, ಈಗ ಮೃತ್ತರಾಗಿರುವ ದಶಲಕ್ಷಾಂತರ ಜನರು ಪುನಃ ಬದುಕುವರೆಂದು ವಾಗ್ದಾನ ಮಾಡಿದಾತನು ಯಾರು?
ಸಾ.ಶ. 31ರ ವಸಂತಕಾಲದಲ್ಲಿ ಯೇಸು ಧೈರ್ಯದಿಂದ, ಯೆಹೋವ ದೇವರು ತನಗೆ ಸತ್ತವರನ್ನು ಬದುಕಿಸುವ ಶಕ್ತಿಯನ್ನು ಕೊಟ್ಟಿದ್ದಾನೆಂದು ಹೇಳಿದನು. ಯೇಸು ವಚನ ಕೊಟ್ಟದ್ದು: “ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆಂದು ತಿಳುಕೊಳ್ಳಿರಿ. ಅದಕ್ಕೆ ಆಶ್ಚರ್ಯ ಪಡಬೇಡಿರಿ; ಸಮಾಧಿ [ಸ್ಮಾರಕವಾದ ಸಮಾಧಿ, NW]ಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:21, 28, 29) ಹೌದು, ಈಗ ಸತ್ತಿರುವ ದಶಲಕ್ಷಾಂತರ ಜನರು ಈ ಭೂಮಿಯ ಮೇಲೆ ಪುನಃ ಜೀವಿಸುವರು ಮತ್ತು ಅವರು ಅದರಲ್ಲಿ ಅನಂತಕಾಲ ಬದುಕುವರೆಂದು ಯೇಸು ವಾಗ್ದಾನಿಸಿದನು. (ಯೋಹಾನ 3:16; 17:3; ಇದಕ್ಕೆ ಕೀರ್ತನೆ 37:29 ಮತ್ತು ಮತ್ತಾಯ 5:5 ಹೋಲಿಸಿ.) ಯೇಸು ಈ ವಚನ ಕೊಟ್ಟದ್ದರಿಂದ ಅವನು ಅದನ್ನು ನೆರವೇರಿಸುವನೆಂಬುದು ವಿಶ್ವಸನೀಯವೆ? ಅವನು ಅದನ್ನು ಮಾಡಶಕ್ತನೆ?
ಬೈಬಲ್ ದಾಖಲೆಗನುಸಾರ, ಯೇಸು ಆ ವಾಗ್ದಾನವನ್ನು ಕೊಡುವ ವರೆಗೆ ಯಾರನ್ನೂ ಪುನರುತ್ಥಾನಗೊಳಿಸಿರಲಿಲ್ಲ. ಆದರೆ ಇದಾಗಿ ಎರಡು ವರುಷ ಮುಗಿಯುವುದರೊಳಗಾಗಿ ಅವನು ತನಗೆ ಪುನರುತ್ಥಾನ ಮಾಡಲು ಇಷ್ಟವಿದೆ ಮತ್ತು ಇದಕ್ಕೆ ತಾನು ಶಕ್ತನೆಂದು ಪ್ರಬಲ ರೀತಿಯಲ್ಲಿ ಪ್ರದರ್ಶಿಸಿದನು.
“ಲಾಜರನೇ, ಹೊರಗೆ ಬಾ”
ಅದೊಂದು ಹೃದಯಸ್ಪರ್ಶಿಸುವ ದೃಶ್ಯ. ಲಾಜರನು ಗುರುತರವಾಗಿ ಕಾಯಿಲೆ ಬಿದ್ದಿದ್ದನು. ಅವನ ಇಬ್ಬರು ಸೋದರಿಯರಾದ ಮರಿಯ ಮತ್ತು ಮಾರ್ಥ, ಯೋರ್ದಾನ್ ಹೊಳೆಯಾಚೆಗಿದ್ದ ಯೇಸುವಿಗೆ ಈ ಸುದ್ದಿ ಕಳುಹಿಸಿದರು: “ಸ್ವಾಮೀ, ನಿನ್ನ ಪ್ರಿಯ ಮಿತ್ರನು ಅಸ್ವಸ್ಥನಾಗಿದ್ದಾನೆ.” (ಯೋಹಾನ 11:3) ಹೌದು, ಯೇಸುವಿಗೆ ಈ ಕುಟುಂಬದ ಮೇಲೆ ತುಂಬ ಮಮತೆಯಿತ್ತು. ಅವನು ಬೇಥಾನ್ಯದ ಅವರ ಮನೆಯಲ್ಲಿ ಪ್ರಾಯಶಃ ಪದೇ ಪದೇ ಅತಿಥಿಯಾಗಿ ಬಂದಿದ್ದನು. (ಲೂಕ 10:38-42; ಇದಕ್ಕೆ ಲೂಕ 9:58 ಹೋಲಿಸಿ.) ಆದರೆ ಈಗ ಯೇಸುವಿನ ಪ್ರಿಯ ಮಿತ್ರನು ತುಂಬ ಕಾಯಿಲೆಯಾಗಿದ್ದನು.
ಆದರೆ ಮರಿಯ ಮತ್ತು ಮಾರ್ಥ, ಯೇಸು ಏನು ಮಾಡುವನೆಂದು ನಿರೀಕ್ಷಿಸಿದರು? ಅವರು, ಅವನು ಬೇಥಾನ್ಯಕ್ಕೆ ಬರುವಂತೆ ಹೇಳಿ ಕಳುಹಿಸಲಿಲ್ಲ. ಆದರೆ ಯೇಸು ಲಾಜರನನ್ನು ಪ್ರೀತಿಸಿದ್ದನೆಂದು ಅವರಿಗೆ ತಿಳಿದಿತ್ತು. ಯೇಸು ತನ್ನ ರೋಗಿಯಾದ ಮಿತ್ರನನ್ನು ನೊಡಬಯಸಲಿಕ್ಕಿಲ್ಲವೆ? ಯೇಸು ಅವನನ್ನು ಅದ್ಭುತಕರವಾಗಿ ವಾಸಿಮಾಡುವನೆಂದು ಅವರು ನಿಸ್ಸಂಶಯವಾಗಿ ನಿರೀಕ್ಷಿಸಿದರು. ಯೇಸು ತನ್ನ ಶುಶ್ರೂಷೆಯಲ್ಲಿ ಇಷ್ಟರೊಳಗೆ ಅನೇಕರನ್ನು ಅದ್ಭುತಕರವಾಗಿ ವಾಸಿ ಮಾಡಿದ್ದನು. ಮತ್ತು ದೂರದ ಪ್ರದೇಶ ಅವನಿಗೆ ತಡೆಯಾಗಿರಲಿಲ್ಲ. (ಮತ್ತಾಯ 8:5-13 ಹೋಲಿಸಿ.) ಹೀಗಿರುವಾಗ ಇಷ್ಟು ಪ್ರಿಯ ಮಿತ್ರನಿಗೆ ಅವನು ಕಡಮೆ ಸಹಾಯ ಮಾಡಿಯಾನೆ? ಆದರೆ, ಕುತೂಹಲ ಹುಟ್ಟಿಸುವ ರೀತಿಯಲ್ಲಿ, ಯೇಸು ಒಡನೆ ಬೇಥಾನ್ಯಕ್ಕೆ ಹೋಗುವ ಬದಲು ಇದ್ದಲ್ಲಿಯೆ ಎರಡು ದಿನ ಉಳಿದನು.—ಯೋಹಾನ 11:5,6.
ಸುದ್ದಿ ಕಳುಹಿಸಲ್ಪಟ್ಟ ಬಳಿಕ ಪ್ರಾಯಶಃ ಯೇಸುವಿಗೆ ಸುದ್ದಿ ಮುಟ್ಟುವುದರೊಳಗೆ ಲಾಜರನು ಸತ್ತನು. (ಯೋಹಾನ 11:3, 6, 17, ಹೋಲಿಸಿ.) ಆದರೆ ಹೆಚ್ಚಿನ ಸುದ್ದಿ ಬೇಕಾಗಿರಲಿಲ್ಲ. ಲಾಜರನು ಯಾವಾಗ ಸತ್ತನೆಂದು ಯೇಸುವಿಗೆ ತಿಳಿದಿತ್ತು. ಮತ್ತು ಅವನು ಅದರ ವಿಷಯ ಏನೋ ಮಾಡಲಿಕ್ಕಿದ್ದನು. ಲಾಜರನ ಮರಣದ ಕುರಿತು ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಾನೆ. ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” (ಯೋಹಾನ 11:11) ಯೇಸು ಈ ಹಿಂದೆ ಇಬ್ಬರನ್ನು ಸತ್ತವರೊಳಗಿಂದ ಎಬ್ಬಿಸಿದ್ದನು. ಆದರೆ ಅವರು ಸತ್ತು ತುಸು ಕಾಲದೊಳಗೆ ಅವರನ್ನು ಎಬ್ಬಿಸಿದ್ದನು.a ಆದರೆ ಈ ಬಾರಿ ಇದು ಭಿನ್ನವಾಗಿತ್ತು. ಯೇಸು ಕೊನೆಗೆ ಬೇಥಾನ್ಯಕ್ಕೆ ಬಂದಾಗ ಅವನ ಪ್ರಿಯ ಮಿತ್ರನು ಸತ್ತು ನಾಲ್ಕು ದಿನವಾಗಿತ್ತು. (ಯೋಹಾನ 11:17,39) ಅಷ್ಟು ಸಮಯದಿಂದ ಸತ್ತು ಹೋಗಿದ್ದ ಮತ್ತು ದೇಹವು ಕೊಳೆಯಲು ಆರಂಭವಾಗಿದ್ದವನನ್ನು ಯೇಸು ಪುನರ್ಜೀವಿಸಶಕ್ತನಾಗಿದ್ದನೊ?
ಯೇಸು ಬರುತ್ತಿದ್ದಾನೆಂದು ಕೇಳಿದ ಸಕ್ರಿಯ ಮಹಿಳೆಯಾಗಿದ್ದ ಮಾರ್ಥ ಅವನನ್ನು ಭೇಟಿಯಾಗಲು ಓಡಿದಳು. (ಲೂಕ 10:38-42 ಹೋಲಿಸಿ.) ಯೇಸುವನ್ನು ಭೇಟಿಯಾದೊಡನೆ ಆಕೆಯ ಹೃದಯ ಹೀಗೆ ಹೇಳಲು ಆಕೆಯನ್ನು ಪ್ರಚೋದಿಸಿತು: “ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.” ಆದರೂ ಅವಳು ನಂಬಿಕೆ ಪ್ರಕಟಿಸಿದಳು: “ಈಗಲಾದರೋ ದೇವರನ್ನು ಏನು ಬೇಡಿಕೊಳ್ಳುತ್ತಿಯೋ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ಬಲ್ಲೆನು.” ಆಕೆಯ ಶೋಕದಿಂದ ಸ್ಪರ್ಶಿತನಾದ ಯೇಸು, “ನಿನ್ನ ತಮ್ಮನು ಎದ್ದು ಬರುವನು” ಎಂಬ ಆಶ್ವಾಸನೆ ಕೊಟ್ಟನು. ಭಾವೀ ಪುನರುತ್ಥಾನದಲ್ಲಿ ತನ್ನ ನಂಬಿಕೆ ಸೂಚಿಸಿದ ಆಕೆಗೆ ಯೇಸು ಸರಳವಾಗಿ ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನನ್ನು ನಂಬುವವನು ಸತ್ತರೂ ಬದುಕುವನು.”—ಯೋಹಾನ 11:20-25.
ಸಮಾಧಿಗೆ ಬಂದಾಗ, ದ್ವಾರದಲ್ಲಿದ್ದ ಕಲ್ಲನ್ನು ಸರಿಸುವಂತೆ ಯೇಸು ಹೇಳಿದನು. ಮೊದಲು ಮಾರ್ಥಳು, “ಸ್ವಾಮೀ, ಅವನು ಸತ್ತು ನಾಲ್ಕು ದಿವಸವಾಯಿತು. ಈಗ ನಾತ ಹುಟ್ಟಿದೆ” ಎಂದು ಆಕ್ಷೇಪವೆತ್ತಿದಳು. ಆದರೆ ಯೇಸು, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ” ಎಂಬ ಆಶ್ವಾಸನೆ ಕೊಟ್ಟನು. ಬಳಿಕ ಅವನು ಗಟ್ಟಿಯಾಗಿ ಪ್ರಾರ್ಥಿಸಿ, “ಲಾಜರನೇ, ಹೊರಗೆ ಬಾ” ಎಂದು ಆಜ್ಞಾಪಿಸಿದನು. ಯೇಸುವಿನ ಆಜ್ಞೆಯಂತೆ ಲಾಜರನು, ಸತ್ತು ನಾಲ್ಕು ದಿನಗಳಾಗಿದ್ದರೂ ಹೊರಗೆ ಬಂದನು!—ಯೋಹಾನ 11:38-44.
ಇದು ನಿಜವಾಗಿಯೂ ನಡೆಯಿತೊ?
ಲಾಜರನ ಈ ಎಬ್ಬಿಸುವಿಕೆಯು ಯೋಹಾನನ ಸುವಾರ್ತೆಯಲ್ಲಿ ಐತಿಹಾಸಿಕ ನಿಜತ್ವವಾಗಿ ಕೊಡಲ್ಪಟ್ಟಿದೆ. ಕೊಡಲ್ಪಟ್ಟಿರುವ ವಿವರಣೆ ಕೇವಲ ರೂಪಕ ಕಥೆಯಾಗಿರಲು ತೀರಾ ವಿಶದವಾಗಿದೆ. ಅದರ ಐತಿಹಾಸಿಕ್ಯವನ್ನು ಪ್ರಶ್ನಿಸುವುದು, ಯೇಸು ಕ್ರಿಸ್ತನ ಪುನರುತ್ಥಾನವನ್ನು ಸೇರಿಸಿ, ಬೈಬಲಿನ ಸಕಲ ಅದ್ಭುತಗಳನ್ನು ಪ್ರಶ್ನಿಸಿದಂತೆ.b ಮತ್ತು ಯೇಸುವಿನ ಪುನರುತ್ಥಾನವನ್ನು ಅಲ್ಲಗಳೆಯುವುದು ಮೊತ್ತದಲ್ಲಿ ಕ್ರಿಸ್ತೀಯ ನಂಬಿಕೆಯನ್ನು ಅಲ್ಲಗಳೆಯುವುದಕ್ಕೆ ಸದೃಶ.—1 ಕೊರಿಂಥ 15:13-15.
ವಾಸ್ತವವಾಗಿ, ನೀವು ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳುವಲ್ಲಿ ಪುನರುತ್ಥಾನದಲ್ಲಿ ನಂಬಿಕೆ ಇಡಲು ನಿಮಗೆ ಯಾವ ಸಮಸ್ಯೆಯೂ ಇರಬಾರದು. ದೃಷ್ಟಾಂತ: ಒಬ್ಬನು ತನ್ನ ಅಂತಿಮ ಇಷ್ಟಪತ್ರವನ್ನು ವಿಡಿಯೋಟೇಪ್ ಮಾಡಬಲ್ಲನು. ಮತ್ತು ಅವನು ಸತ್ತ ಬಳಿಕ ಅವನ ಬಂಧುಬಾಂಧವರು ಅವನ ಸೊತ್ತನ್ನು ಏನು ಮಾಡಬೇಕೆಂಬ ವಿಷಯದಲ್ಲಿ ಅವನು ವಿವರಿಸುವುದನ್ನು ನೋಡಿ, ಕೇಳಬಹುದು. ನೂರು ವರುಷಗಳ ತಗ್ಗಿಗೆ ಇಂಥ ವಿಷಯವನ್ನು ಯೋಚಿಸುವುದೂ ಅಸಾಧ್ಯವಾಗಿತ್ತು. ಲೋಕದ ಮೂಲೆಗಳಲ್ಲಿ ಬದುಕುವ ಜನರಿಗೆ ವಿಡಿಯೋ ರೆಕಾರ್ಡಿಂಗ್ ಮಾಡುವ “ಅದ್ಭುತವು” ಈಗಲೂ ತಿಳಿವಳಿಕೆಗೆ ಮೀರಿದ ವಿಷಯ. ಸೃಷ್ಟಿಕರ್ತನು ಸ್ಥಾಪಿಸಿದ ವೈಜ್ಞಾನಿಕ ಮೂಲಸೂತ್ರಗಳನ್ನು ಮನುಷ್ಯನು, ಇಂಥ ನೋಡಿ, ಕೇಳುವ ದೃಶ್ಯವನ್ನು ಪುನರ್ರಚಿಸಲಿಕ್ಕಾಗಿ ಉಪಯೋಗಿಸಲು ಸಾಧ್ಯವಿರುವುದಾದರೆ, ಸೃಷ್ಟಿಕರ್ತನಿಗೆ ಇದಕ್ಕಿಂತ ಎಷ್ಟೊ ಹೆಚ್ಚಿನದನ್ನು ಮಾಡಸಾಧ್ಯವಿರುವುದಿಲ್ಲವೆ? ಹಾಗಾದರೆ, ಜೀವವನ್ನು ಸೃಷ್ಟಿಸಿದ ಒಬ್ಬನಿಗೆ, ಒಂದು ಹೊಸದಾಗಿ ರಚಿಸಿದ ದೇಹದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಪುನರುತ್ಪಾದಿಸಿ ಅವನನ್ನು ಪುನರುತ್ಥಾನಗೊಳಿಸುವುದು ಸಾಧ್ಯವೆಂಬುದು ತರ್ಕಸಮ್ಮತವಲ್ಲವೆ?
ಲಾಜರನನ್ನು ಜೀವಕ್ಕೆ ಪುನಃಸ್ಥಾಪಿಸಿದ ಈ ಅದ್ಭುತ, ಯೇಸುವಿನಲ್ಲಿ ಮತ್ತು ಪುನರುತ್ಥಾನದಲ್ಲಿ ನಂಬಿಕೆಯನ್ನು ಹೆಚ್ಚಿಸುವಂತೆ ಮಾಡಿತು. (ಯೋಹಾನ 11:41,42; 12:9-11, 17-19) ಹೃದಯದ್ರಾವಕ ರೀತಿಯಲ್ಲಿ ಇದು, ಪುನರುತ್ಥಾನ ಮಾಡಲು ಯೆಹೋವನಿಗೆ ಮತ್ತು ಆತನ ಪುತ್ರನಿಗಿರುವ ಇಷ್ಟ ಮತ್ತು ಬಯಕೆಯನ್ನು ತೋರಿಸುತ್ತದೆ.
‘ದೇವರಿಗೆ ಹಂಬಲಿಕೆ ಇದ್ದೀತು’
ಲಾಜರನ ಮರಣಕ್ಕೆ ಯೇಸು ತೋರಿಸಿದ ಪ್ರತಿಕ್ರಿಯೆ ದೇವಕುಮಾರನ ಅತಿ ಕೋಮಲ ಪಕ್ಕವೊಂದನ್ನು ತೋರಿಸಿತು. ಆ ಸಂದರ್ಭದಲ್ಲಿ ಅವನ ಆಳವಾದ ಅನಿಸಿಕೆ, ಮೃತರನ್ನು ಪುನರುತ್ಥಾನಗೊಳಸಲು ಅವನಿಗಿರುವ ತೀವ್ರಾಪೇಕ್ಷೆಯನ್ನು ತೋರಿಸುತ್ತದೆ. ನಾವು ಓದುವುದು: “ಮರಿಯಳು ಯೇಸು ಇದಲ್ದಿಗ್ಲೆ ಬಂದು ಆತನನ್ನು ಕಂಡು ಆತನ ಪಾದಕ್ಕೆ ಬಿದ್ದು—ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ ಅಂದಳು. ಆಕೆಯು ಗೋಳಾಡುವದನ್ನೂ ಆಕೆಯ ಸಂಗಡ ಬಂದ ಯೆಹೂದ್ಯರು ಗೋಳಾಡುವದನ್ನೂ ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ—ಅವನನ್ನು ಎಲ್ಲಿ ಇಟ್ಟಿದ್ದೀರೆಂದು ಕೇಳಿದನು. ಅವರು—ಸ್ವಾಮೀ, ಬಂದು ನೋಡು ಅಂದರು. ಯೇಸು ಕಣ್ಣೀರು ಬಿಟ್ಟನು. ಯೆಹೂದ್ಯರು ನೋಡಿ—ಆಹಾ, ಈತನು ಅವನ ಮೇಲೆ ಎಷ್ಟೊ ಮಮತೆ ಇಟ್ಟಿದ್ದನು ಎಂದು ಹೇಳಿದರು.”—ಯೋಹಾನ 11:32-36.
ಯೇಸುವಿನ ಹೃದಯದ್ರಾವಕ ಕನಿಕರ ಮೂರು ಹೇಳಿಕೆಗಳಿಂದ ಇಲ್ಲಿ ತೋರಿಬರುತ್ತದೆ: “ನೊಂದುಕೊಂಡು”, “ತತ್ತರಿಸಿ” ಮತ್ತು “ಕಣ್ಣೀರು ಬಿಟ್ಟನು.” ಅಪೊಸ್ತಲ ಯೋಹಾನನು ಈ ಹೃದಯಸ್ಪರ್ಶಿ ದೃಶ್ಯವನ್ನು ದಾಖಲೆಮಾಡಿದಾಗ ಬರೆದ ಮೂಲಭಾಷಾ ಪದಗಳು, ಯೇಸು ಎಷ್ಟರ ಮಟ್ಟಿಗೆ ಭಾವುಕತೆಯಿಂದ ಪ್ರಚೋದಿತನಾದನೆಂದು ಸೂಚಿಸುತ್ತದೆ.
“ನೊಂದುಕೊಂಡು” ಎಂಬರ್ಥದ ಗ್ರೀಕ್ ಪದ ಬೇನೆಯಿಂದ ಯಾ ಆಳವಾಗಿ ಪ್ರೇರಿಸಲ್ಪಡುವುದು ಎಂಬ ಕ್ರಿಯಾಪದ (ಎಂಬ್ರಿಮಾವೊಮೈ) ದಿಂದ ಬಂದಿದೆ. ಬೈಬಲ್ ವ್ಯಾಖ್ಯಾನಕಾರ ವಿಲ್ಯಂ ಬಾರ್ಕ್ಲೆ ಹೇಳುವುದು: “ಸಾಮಾನ್ಯ ಶೈಲಿಯ ಗ್ರೀಕಿನಲ್ಲಿ [ಎಂಬ್ರಿಮಾವೊಮೈ]ಯ ವಾಡಿಕೆಯ ಉಪಯೋಗವು ಕುದುರೆಯ ಗುಟ್ಟರಿಕೆಯೆ. ಇಲ್ಲಿ ಇದರ ಅರ್ಥವು, ಯೇಸು ಎಷ್ಟು ಆಳವಾದ ಭಾವುಕತೆಯಿಂದ ಪರವಶವಾದನೆಂದರೆ ಅವನ ಹೃದಯದಿಂದ ಅನೈಚ್ಫಿಕವಾದ ನರಳುವಿಕೆ ಹೊರಬಂತು.”
“ತತ್ತರಿಸಿ” ಎಂದು ಭಾಷಾಂತರವಾಗಿರುವ ಪದ, ಉದ್ರೇಕ ಸೂಚಿಸುವ ಪದವಾದ (ಟರಾಸೊ) ದಿಂದ ಬಂದಿದೆ. ದ ನ್ಯೂ ಥೇಯರ್ಸ್ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್ ಇದಕ್ಕನುಸಾರ ಇದರ ಅರ್ಥವು, “ಒಬ್ಬನಿಗೆ ಆಂತರಿಕ ಕಲಕಾಟವನ್ನುಂಟುಮಾಡು. . . ಒಬ್ಬನನ್ನು ಮಹಾ ನೋವು ಯಾ ಶೋಕದಿಂದ ತಟ್ಟು” ಎಂದಾಗಿದೆ. “ಕಣ್ಣೀರು ಬಿಟ್ಟನು” ಎಂಬುದು “ಬಾಷ್ಪ ಬಿಡು, ಮೌನವಾಗಿ ಅಳು” ಎಂಬ ಗ್ರೀಕ್ ಕ್ರಿಯಾಪದ (ಡಕ್ರಾಯೊ) ದಿಂದ ಬಂದಿದೆ. ಇದು ಯೋಹಾನ 11:33 ರಲ್ಲಿ ಹೇಳಿರುವ, ಮರಿಯ ಮತ್ತು ಅವಳ ಸಂಗಡವಿದ್ದ ಯೆಹೂದ್ಯರ ‘ಗೋಳಾಟ’ಕ್ಕೆ ಭಿನ್ನವಾಗಿದೆ. ಅಲ್ಲಿ ಉಪಯೋಗಿಸಿರುವ ಗ್ರೀಕ್ ಪದ (ಕ್ಲಾಯೊ ದಿಂದ)ದ ಅರ್ಥ, ಕೇಳುವಂತೆ ಯಾ ಗಟ್ಟಿಯಾಗಿ ಅಳುವುದು ಎಂದಾಗಿದೆ.c
ಯೇಸು ಹೀಗೆ ತನ್ನ ಪ್ರಿಯ ಮಿತ್ರ ಲಾಜರನ ಮರಣ ಮತ್ತು ಅವನ ಅಕ್ಕನ ಅಳುವಿಕೆಯಿಂದ ತುಂಬ ಪ್ರಭಾವಿತನಾದನು. ಯೇಸುವಿನ ಹೃದಯ ಎಷ್ಟು ಭಾವಪರವಶವಾಯಿತೆಂದರೆ ಅವನ ನೇತ್ರಗಳಲ್ಲಿ ಬಾಷ್ಪ ತುಂಬಿ ಹರಿಯಿತು. ಇದರಲ್ಲಿ ಗಮನಾರ್ಹ ವಿಷಯವೇನಂದರೆ, ಯೇಸು ಈ ಹಿಂದೆ ಇಬ್ಬರನ್ನು ಪುನರ್ಜೀವಿಸುವಂತೆ ಮಾಡಿದ್ದನು. ಮತ್ತು ಈ ಸಂದರ್ಭದಲ್ಲಿ ಲಾಜರನನ್ನು ಎಬ್ಬಿಸಲು ಪೂರ್ತಿಯಾಗಿ ಉದ್ದೇಶಿಸಿದ್ದನು. (ಯೋಹಾನ 11:11, 23, 25) ಆದರೂ ಇಲ್ಲಿ ಅವನು “ಕಣ್ಣೀರು ಬಿಟ್ಟನು.” ಹೀಗೆ, ಮಾನವರಿಗೆ ಪುನಃ ಜೀವವನ್ನು ಕೊಡುವುದು ಕೇವಲ ಅವನ ನಿತ್ಯಗಟ್ಟಲೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ತೋರಿಸಲ್ಪಟ್ಟಂತೆ, ಅವನ ಕೋಮಲವಾದ ಹಾಗೂ ಆಳವಾದ ಅನಿಸಿಕೆ, ಮರಣದ ಹಾವಳಿಯನ್ನು ಅಂತ್ಯಗೊಳಿಸಲು ಅವನಿಗಿರುವ ತೀವ್ರ ಅಪೇಕ್ಷೆಯನ್ನು ಸ್ಪಷ್ಟವಾಗಿಗಿ ತೋರಿಸುತ್ತದೆ.
ಯೇಸು, ‘ಯೆಹೋವ ದೇವರ ಇರುವಿಕೆಯ ನಿಷ್ಕೃಷ್ಟ ಪ್ರತಿನಿಧೀಕರಣ’ ವಾಗಿರುವುದರಿಂದ ನಮ್ಮ ಸ್ವರ್ಗೀಯ ತಂದೆಯಿಂದ ನಾವು ಇದಕ್ಕಿಂತ ಕಡಮೆ ಬಯಸುವುದಿಲ್ಲ. (ಇಬ್ರಿಯ 1:3) ಪುನರುತ್ಥಾನಗೊಳಿಸಲು ಯೆಹೋವನಿಗಿರುವ ಇಷ್ಟದ ಕುರಿತು ನಂಬಿಗಸ್ತ ಯೋಬನು ಹೇಳಿದ್ದು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೆ?. . . ನೀನು ಕರೆದರೆ ಉತ್ತರ ಕೊಡುವೆನು. ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:14, 15) “ನಿನಗೆ ಹಂಬಲಿಕೆ ಹುಟ್ಟೀತು” ಎಂದು ಭಾಷಾಂತರವಾಗಿರುವ ಮೂಲಭಾಷೆಯ ಪದ, ಶ್ರದ್ಧಾಪೂರ್ವಕವಾದ ಹಾರೈಕೆ ಮತ್ತು ಬಯಕೆಯನ್ನು ಸೂಚಿಸುತ್ತದೆ. (ಆದಿಕಾಂಡ 31:30; ಕೀರ್ತನೆ 84:2) ಯೆಹೋವ ದೇವರು ಪುನರುತ್ಥಾನವನ್ನು ಉತ್ಸಾಹದಿಂದ ಮುಂಭಾವಿಸುತ್ತಾನೆಂಬುದು ಸ್ಪಷ್ಟ.
ಪುನರುತ್ಥಾನದ ವಾಗ್ದಾನದಲ್ಲಿ ನಾವು ನಿಜವಾಗಿಯೂ ವಿಶ್ವಾಸವಿಡಬಲ್ಲೆವೊ? ಯೆಹೋವನೂ ಆತನ ಪುತ್ರನೂ ಇದರಲ್ಲಿ ಇಷ್ಟವುಳ್ಳವರು ಮತ್ತು ಇದನ್ನು ನೆರವೇರಿಸಲು ಸಾಮರ್ಥ್ಯವುಳ್ಳವರೆಂಬುದು ನಿಸ್ಸಂಶಯ. ಇದು ನಿಮಗೆ ಯಾವ ಅರ್ಥದಲ್ಲಿದೆ? ಮೃತರಾಗಿರುವ ನಿಮ್ಮ ಪ್ರಿಯರೊಂದಿಗೆ ಇದೇ ಭೂಮಿಯ ಮೇಲೆ ಶಾಂತಿಯ ಸ್ಥಿತಿಗತಿಯಲ್ಲಿ ಪುನರ್ಮಿಲನವಾಗುವ ಪ್ರತೀಕ್ಷೆ ನಿಮಗಿದೆ!
ಇದು ಈಗ ರೊಬೆರ್ಟ (ಹಿಂದಿನ ಲೇಖನದಲ್ಲಿ ತಿಳಿಸಿದಂತೆ)ಳ ನಿರೀಕ್ಷೆ. ಆಕೆಯ ತಾಯಿ ಸತ್ತು ಅನೇಕ ವರುಷಗಳ ಬಳಿಕ ಯೆಹೋವನ ಸಾಕ್ಷಿಗಳು, ಅವಳು ಬೈಬಲನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವಂತೆ ಸಹಾಯ ಮಾಡಿದರು. ಅವಳು ನೆನಪಿಸಿಕೊಳ್ಳುವುದು: “ಪುನರುತ್ಥಾನದ ನಿರೀಕ್ಷೆಯ ಕುರಿತು ಕಲಿತಾಗ ನಾನು ಅತ್ತೆ. ನನ್ನ ತಾಯಿಯನ್ನು ಪುನಃ ನೋಡುವೆನೆಂದು ತಿಳಿಯವುದು ಆಶ್ಚರ್ಯಕರವೇ ಸರಿ.” ನಿಮ್ಮ ಹೃದಯವೂ ಈ ಪ್ರಕಾರ ಪ್ರಿಯರನ್ನು ನೋಡಲು ಹಂಬಲಿಸುವುದಾದರೆ, ಈ ಅದ್ಭುತಕರವಾದ ಪ್ರತೀಕ್ಷೆಯ ಕುರಿತು ಹೆಚ್ಚು ಕಲಿಯಲು ನೀವು ಬಯಸುವಿರೆಂಬುದು ನಿಸ್ಸಂದೇಹ. (w90 5/1)
[ಅಧ್ಯಯನ ಪ್ರಶ್ನೆಗಳು]
a ಯೋಹಾನ 5:28, 29ರಲ್ಲಿ ದಾಖಲೆಯಾಗಿರುವ ವಾಗ್ದಾನವನ್ನು ಯೇಸು ಮಾಡಿದ ಬಳಿಕ ಮತ್ತು ಲಾಜರನ ಮರಣದ ಮಧ್ಯೆ ಕಳೆದ ಸಮಯದಲ್ಲಿ ಯೇಸು ನಾಯಿನಿನ ವಿಧವೆಯ ಮಗನನ್ನು ಮತ್ತು ಯಾಯೀರನ ಪುತ್ರಿಯನ್ನು ಎಬ್ಬಿಸಿದನು.—ಲೂಕ 7:11-17; 8:40-56.
b ವಾಚ್ಟವರ್ ಬೈಬಲ್ ಎಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಟಿಸಿರುವ, ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್ ಪುಸ್ತಕದ 6ನೆಯ ಅಧ್ಯಾಯ, “ದ ಮಿರೆಕ್ಲ್ಸ್—ಡಿಡ್ ದೇ ರಿಯಲಿ ಹ್ಯಾಪನ್?” ನೋಡಿ.
c ರಸಕರವಾಗಿ, ಕೇಳುವಂತೆ ಅಳುವುದು ಎಂಬುದಕ್ಕಿರುವ ಗ್ರೀಕ್ ಪದ (ಕ್ಲಾಯೊ) ವನ್ನು ಯೇಸು ಯೆರೂಸಲೇಮಿನ ನಾಶವನ್ನು ಮಂತಿಳಿಸಿದ ಸಂದರ್ಭದಲ್ಲಿ ಉಪಯೋಗಿಸಲಾಗಿದೆ. ಲೂಕನ ವೃತ್ತಾಂತ ಹೇಳುವುದು: “ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣ(ಯೆರೂಸಲೇಮ್)ವನ್ನು ನೋಡಿ ಅತ್ತು” ಬಿಟ್ಟನು.—ಲೂಕ 19:41.
[ಪುಟ 5 ರಲ್ಲಿರುವ ಚಿತ್ರ]
ಯಾಯೀರನ ಮಗಳನ್ನು ಯೇಸು ಎಬ್ಬಿಸಿದ್ದು ಮೃತರ ಭಾವೀ ಪುನರುತ್ಥಾನದಲ್ಲಿ ನಂಬಿಕೆಗೆ ಆಧಾರವನ್ನು ಕೊಡುತ್ತದೆ
[ಪುಟ 6 ರಲ್ಲಿರುವ ಚಿತ್ರ]
ಲಾಜರನ ಮರಣದಿಂದ ಯೇಸು ತೀರಾ ಮನಕರಗಿದವನಾದನು
[ಪುಟ 7 ರಲ್ಲಿರುವ ಚಿತ್ರ]
ಪುನರುತ್ಥಾನವನ್ನು ನೋಡುವವರ ಸಂತೋಷ ನಾಯಿನಿನ ವಿಧವೆಯ ಸತ್ತಿದ್ದ ಮಗನನ್ನು ಯೇಸು ಎಬ್ಬಿಸಿದಾಗ ಆಕೆಗಾದ ಸಂತೋಷದಂತಿರುವುದು