ವಿಮೋಚನಾ ಮೌಲ್ಯವು ನಮ್ಮನ್ನು ರಕ್ಷಿಸುವ ವಿಧ
“ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.”—ಯೋಹಾ. 3:36.
1, 2. ಝಯನ್ಸ್ ವಾಚ್ ಟವರ್ ಪ್ರಥಮವಾಗಿ ಪ್ರಕಾಶಿಸಲ್ಪಡಲು ಒಂದು ಕಾರಣವೇನಾಗಿತ್ತು?
“ಬೈಬಲನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವ ಯಾವನೂ ಅದರಲ್ಲಿ ಕ್ರಿಸ್ತನ ಮರಣಕ್ಕೆ ಕೊಡಲಾದ ಪ್ರಾಮುಖ್ಯತೆಯಿಂದ ಪ್ರಭಾವಿಸಲ್ಪಡದೆ ಇರಲಾರನು.” ಹೀಗೆಂದು ಈ ಪತ್ರಿಕೆಯು 1879ರ ಅಕ್ಟೋಬರ್ನಷ್ಟು ಹಿಂದೆಯೇ ತನ್ನ ನಾಲ್ಕನೆಯ ಸಂಚಿಕೆಯಲ್ಲಿ (ಇಂಗ್ಲಿಷ್) ಹೇಳಿತ್ತು. ಮಾತ್ರವಲ್ಲ ಆ ಲೇಖನವು ಕೊನೆಯಲ್ಲಿ ಈ ಗಂಭೀರ ಹೇಳಿಕೆಯನ್ನು ನೀಡಿತು: “ಕ್ರಿಸ್ತನ ಮರಣವು ಯಜ್ಞಾರ್ಪಣೆಯೂ ಅಲ್ಲ ಪಾಪ ನಿವಾರಣಾರ್ಥವಾಗಿ ನೀಡಲ್ಪಟ್ಟದ್ದೂ ಅಲ್ಲ ಎಂದು ಕಡೆಗಣಿಸಿ ಹೇಳುವ ಯಾವುದೇ ವಾದವನ್ನು ನಾವು ತಿರಸ್ಕರಿಸಬೇಕು.”—1 ಯೋಹಾನ 2:1, 2 ಓದಿ.
2 ಝಯನ್ಸ್ ವಾಚ್ ಟವರ್ ಪ್ರಥಮವಾಗಿ 1879ರ ಜುಲೈಯಲ್ಲಿ ಪ್ರಕಾಶಿಸಲ್ಪಟ್ಟ ಕಾರಣಗಳಲ್ಲೊಂದು ಬೈಬಲಿನ ಬೋಧನೆಯಾದ ವಿಮೋಚನಾ ಮೌಲ್ಯವನ್ನು ಸಮರ್ಥಿಸಲಿಕ್ಕಾಗಿಯೇ. ಅದರ ಪುಟಗಳು “ತಕ್ಕ ಸಮಯಕ್ಕೆ ಆಹಾರವನ್ನು” ಒದಗಿಸಿದವು. ಏಕೆಂದರೆ ಆ ಸಮಯದಷ್ಟಕ್ಕೆ, ಕ್ರೈಸ್ತರೆನಿಸಿಕೊಳ್ಳುವವರಲ್ಲಿ ಹೆಚ್ಚಿನವರು ಕ್ರಿಸ್ತನ ಮರಣವು ನಮ್ಮ ಪಾಪಗಳಿಗೆ ವಿಮೋಚನಾ ಮೌಲ್ಯವಾಗಿರಲು ಹೇಗೆ ಸಾಧ್ಯವಿತ್ತೆಂದು ಸಂದೇಹಪಡತೊಡಗಿದ್ದರು. (ಮತ್ತಾ. 24:45) ಆ ಸಮಯದಲ್ಲಿ ಅನೇಕರು ವಿಕಾಸವಾದಕ್ಕೆ ಬಲಿಬಿದ್ದು ಅದರಲ್ಲಿ ನಂಬಿಕೆ ಇಡಲಾರಂಭಿಸಿದ್ದರು. ವಿಕಾಸವಾದದ ಈ ನಂಬಿಕೆಯು ಮನುಷ್ಯನು ಕ್ರಮೇಣ ಪರಿಪೂರ್ಣ ಸ್ಥಿತಿಯನ್ನು ಕಳೆದುಕೊಂಡನು ಎಂಬ ಸತ್ಯಕ್ಕೆ ವಿರುದ್ಧವಾಗಿದೆ. ಏಕೆಂದರೆ ಸುಧಾರಣೆಹೊಂದುತ್ತಾ ಇರುವುದು ಮಾನವ ಸಹಜಗುಣ ಮತ್ತು ಅವನಿಗೆ ವಿಮೋಚನಾ ಮೌಲ್ಯದ ಅಗತ್ಯವಿಲ್ಲ ಎಂದು ವಿಕಾಸವಾದಿಗಳು ಕಲಿಸುತ್ತಾರೆ. ಹೀಗಿರಲಾಗಿ ಅಪೊಸ್ತಲ ಪೌಲನು ತಿಮೊಥೆಯನಿಗೆ ಕೊಟ್ಟ ಸಲಹೆ ವಿಶೇಷವಾಗಿ ಸೂಕ್ತ: “ಪವಿತ್ರವಾದದ್ದನ್ನು ಹೊಲೆಮಾಡುವ ವ್ಯರ್ಥಮಾತುಗಳಿಂದಲೂ ‘ಜ್ಞಾನ’ ಎಂಬುದಾಗಿ ಸುಳ್ಳಾಗಿ ಕರೆಯಲ್ಪಡುವ ವಿರೋಧೋಕ್ತಿಗಳಿಂದಲೂ ದೂರವಾಗಿದ್ದು ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ. ಕೆಲವರು ಅಂಥ ಸುಳ್ಳಾದ ಜ್ಞಾನವನ್ನು ಪ್ರದರ್ಶಿಸುತ್ತಾ ನಂಬಿಕೆಯಿಂದ ಪಥಭ್ರಷ್ಟರಾಗಿದ್ದಾರೆ.”—1 ತಿಮೊ. 6:20, 21.
3. ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
3 ‘ನಂಬಿಕೆಯಿಂದ ಪಥಭ್ರಷ್ಟರಾಗದೆ’ ಇರಲು ನೀವು ದೃಢಸಂಕಲ್ಪ ಮಾಡಿದ್ದೀರಿ ಎಂಬುದರಲ್ಲಿ ಸಂದೇಹವಿಲ್ಲ. ನಿಮ್ಮ ನಂಬಿಕೆಯನ್ನು ದೃಢವಾಗಿರಿಸಲಿಕ್ಕಾಗಿ ಈ ಪ್ರಶ್ನೆಗಳನ್ನು ಪರಿಗಣಿಸುವುದು ಒಳ್ಳೆಯದು: ನನಗೆ ವಿಮೋಚನಾ ಮೌಲ್ಯವು ಏಕೆ ಅಗತ್ಯ? ಅದಕ್ಕಾಗಿ ಸಹಿಸಿಕೊಂಡ ಬೇನೆಬೇಗುದಿಗಳೆಷ್ಟು? ದೇವರ ಕ್ರೋಧದಿಂದ ನನ್ನನ್ನು ರಕ್ಷಿಸಬಲ್ಲ ಈ ಅಮೂಲ್ಯ ಏರ್ಪಾಡಿನಿಂದ ನಾನು ಹೇಗೆ ಪ್ರಯೋಜನ ಹೊಂದಬಲ್ಲೆ?
ದೇವರ ಕ್ರೋಧದಿಂದ ರಕ್ಷಿಸಲ್ಪಟ್ಟದ್ದು
4, 5. ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ದೇವರ ಕ್ರೋಧ ನೆಲೆಗೊಂಡಿದೆ ಎಂಬುದನ್ನು ಯಾವುದು ರುಜುಪಡಿಸುತ್ತದೆ?
4 ಆದಾಮನು ಪಾಪ ಮಾಡಿದಂದಿನಿಂದ ಮಾನವಕುಲದ ಮೇಲೆ ‘ದೇವರ ಕ್ರೋಧವು ನೆಲೆಗೊಂಡಿದೆ’ ಎಂದು ಬೈಬಲ್ ಮತ್ತು ಇತಿಹಾಸದ ಕಟು ನಿಜತ್ವಗಳು ತೋರಿಸುತ್ತವೆ. (ಯೋಹಾನ 3:36) ಯಾವ ಮಾನವನೂ ಕಟ್ಟಕಡೆಗೆ ಮರಣದಿಂದ ಪಾರಾಗಲು ಶಕ್ತನಾಗಿಲ್ಲ ಎಂಬುದೇ ಅದಕ್ಕೆ ಪುರಾವೆ. ಸೈತಾನನ ಪ್ರತಿಸ್ಪರ್ಧಾತ್ಮಕ ಆಳಿಕೆಯು ಇಂದು ನಡಿಯುತ್ತಿರುವ ವಿಪತ್ಕಾರಕ ಪರಿಸ್ಥಿತಿಗಳಿಂದ ಮಾನವಕುಲವನ್ನು ರಕ್ಷಿಸಲು ಪೂರ್ಣ ಅಶಕ್ಯ. ಯಾವುದೇ ಮಾನವ ಸರಕಾರವು ತನ್ನ ಪ್ರಜೆಗಳೆಲ್ಲರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಶಕ್ತವಾಗಿಲ್ಲ. (1 ಯೋಹಾ. 5:19) ಆದುದರಿಂದ ಮಾನವಕುಲವು ಯುದ್ಧ, ಅಪರಾಧ ಮತ್ತು ಬಡತನದಿಂದ ಸಂಕಟಪಡುತ್ತಾ ಇದೆ.
5 ಹೀಗಿರಲಾಗಿ ದೇವರ ಆಶೀರ್ವಾದವು ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲಿಲ್ಲ ಎಂಬದು ಸ್ಪಷ್ಟ. “ಎಲ್ಲ ಭಕ್ತಿಹೀನತೆಯ . . . ವಿರುದ್ಧವಾಗಿ ದೇವರ ಕ್ರೋಧವು ಸ್ವರ್ಗದಿಂದ ಪ್ರಕಟವಾಗುತ್ತಲಿದೆ” ಎಂದು ಪೌಲನು ಹೇಳಿದ್ದಾನೆ. (ರೋಮ. 1:18-20) ಆದುದರಿಂದ ಪಶ್ಚಾತ್ತಾಪಪಡದೆ ಭಕ್ತಿಹೀನ ಜೀವನವನ್ನು ನಡಿಸುತ್ತಿರುವವರೆಲ್ಲರು ತಮ್ಮ ನಡವಳಿಕೆಯ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳುವಂತಿಲ್ಲ. ಇಂದು ಸೈತಾನನ ಲೋಕದ ಮೇಲೆ ಉಪದ್ರವಗಳಂತೆ ಹೊಯ್ಯಲ್ಪಡುತ್ತಿರುವ ತೀರ್ಪಿನ ಸಂದೇಶಗಳಲ್ಲಿ ದೇವರ ಕ್ರೋಧವು ಪ್ರಕಟವಾಗುತ್ತಾ ಇದೆ. ಅಂಥ ಮಾಹಿತಿಯು ನಮ್ಮ ಅನೇಕ ಬೈಬಲಾಧಾರಿತ ಪ್ರಕಾಶನಗಳಲ್ಲಿ ತೋರಿಬರುತ್ತದೆ.—ಪ್ರಕ. 16:1.
6, 7. ಅಭಿಷಿಕ್ತ ಕ್ರೈಸ್ತರಿಂದ ಯಾವ ಕೆಲಸವು ಮುನ್ನಡೆಸಲ್ಪಡುತ್ತಿದೆ? ಸೈತಾನನ ಲೋಕದ ಭಾಗವಾಗಿರುವ ಜನರಿಗೆ ಇನ್ನೂ ಯಾವ ಅವಕಾಶವು ತೆರೆದಿದೆ?
6 ಹಾಗಾದರೆ ಜನರು ಸೈತಾನನ ದಬ್ಬಾಳಿಕೆಯಿಂದ ಬಿಡಿಸಿಕೊಂಡು ದೇವರ ಮೆಚ್ಚಿಕೆಯನ್ನು ಪಡೆಯಲು ವೇಳೆ ಮೀರಿಹೋಗಿದೆ ಎಂದಿದರ ಅರ್ಥವೊ? ಅಲ್ಲ. ಯೆಹೋವನೊಂದಿಗೆ ಸಮಾಧಾನ ಸಂಬಂಧಕ್ಕೆ ನಡಿಸುವ ದ್ವಾರವು ಇನ್ನೂ ಪೂರ್ತಿಯಾಗಿ ತೆರೆದೇ ಇದೆ. ಕ್ರಿಸ್ತನಿಗೆ ‘ಬದಲಿಯಾಗಿ ರಾಯಭಾರಿಗಳಾಗಿರುವ’ ಅಭಿಷಿಕ್ತ ಕ್ರೈಸ್ತರು ಒಂದು ಸಾರ್ವಜನಿಕ ಶುಶ್ರೂಷೆಯ ನೇತೃತ್ವ ವಹಿಸುತ್ತಿದ್ದಾರೆ. ಆ ಮೂಲಕ ಎಲ್ಲಾ ಜನಾಂಗಗಳ ಜನರನ್ನು “ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ” ಎಂದು ಆಮಂತ್ರಿಸಲಾಗುತ್ತಿದೆ.—2 ಕೊರಿಂ. 5:20, 21.
7 ಯೇಸು, ‘ಬರಲಿರುವ ದೇವರ ಕ್ರೋಧದಿಂದ ನಮ್ಮನ್ನು ತಪ್ಪಿಸುವವನಾಗಿದ್ದಾನೆ’ ಎಂದು ಅಪೊಸ್ತಲ ಪೌಲನು ಹೇಳಿದ್ದಾನೆ. (1 ಥೆಸ. 1:10) ಯೆಹೋವನ ಕ್ರೋಧದ ಆ ಕೊನೆಯ ಅಭಿವ್ಯಕ್ತಿಯು ಪಶ್ಚಾತ್ತಾಪಪಡದ ಪಾಪಿಗಳ ನಿತ್ಯನಾಶನದಲ್ಲಿ ಅಂತ್ಯಗೊಳ್ಳುವುದು. (2 ಥೆಸ. 1:6-9) ಯಾರು ಪಾರಾಗುವರು? ಬೈಬಲ್ ಹೇಳುವುದು: “ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.” (ಯೋಹಾ. 3:36) ಹೌದು, ಈ ವಿಷಯಗಳ ವ್ಯವಸ್ಥೆಯು ತನ್ನ ಅಂತ್ಯವನ್ನು ತಲಪುವಾಗ, ಜೀವಂತವಾಗಿದ್ದು ಯೇಸುವಿನಲ್ಲಿ ಮತ್ತು ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನು ಇಡುವ ಎಲ್ಲರೂ ದೇವರ ಕ್ರೋಧದ ಕೊನೆಯ ದಿನದ ನಾಶನವನ್ನು ಪಾರಾಗುವರು.
ವಿಮೋಚನಾ ಮೌಲ್ಯವು ಕಾರ್ಯನಡಿಸುವ ವಿಧ
8. (ಎ) ಆದಾಮಹವ್ವರ ಮುಂದೆ ಯಾವ ಮಹಾ ಪ್ರತೀಕ್ಷೆ ಇತ್ತು? (ಬಿ) ಯೆಹೋವನು ಪರಿಪೂರ್ಣ ನ್ಯಾಯವಂತ ದೇವರೆಂದು ರುಜುವಾದದ್ದು ಹೇಗೆ?
8 ಆದಾಮಹವ್ವರು ಪರಿಪೂರ್ಣರಾಗಿ ಸೃಷ್ಟಿಸಲ್ಪಟ್ಟರು. ಅವರು ದೇವರಿಗೆ ವಿಧೇಯರಾಗಿ ಉಳಿದಿದ್ದಲ್ಲಿ ಭೂಮಿಯು ಈಗ ಅವರ ಸುಖೀ ಸಂತತಿಯಿಂದ ತುಂಬಿದ್ದು ಎಲ್ಲರು ಪರದೈಸಿನಲ್ಲಿ ಒಟ್ಟಿಗೆ ಜೀವಿಸುತ್ತಾ ಇರುತ್ತಿದ್ದರು. ಆದರೆ, ನಮ್ಮ ಆದಿ ಹೆತ್ತವರು ದೇವರ ಆಜ್ಞೆಗೆ ಬೇಕುಬೇಕೆಂದು ಅವಿಧೇಯರಾದರು. ಇದರ ಫಲವಾಗಿ ಅವರಿಗೆ ಶಾಶ್ವತ ಮರಣದ ಶಿಕ್ಷೆ ವಿಧಿಸಲಾಯಿತು ಮತ್ತು ಆ ಆರಂಭದ ಪರದೈಸಿನಿಂದ ಅವರನ್ನು ಹೊರಗೆ ಹಾಕಲಾಯಿತು. ಆದಾಮಹವ್ವರಿಗೆ ಮಕ್ಕಳು ಹುಟ್ಟುವಷ್ಟರೊಳಗೆ ಪಾಪವು ಮಾನವಕುಲವನ್ನು ಪ್ರಭಾವಿಸಿತ್ತು ಮತ್ತು ಆ ಮೊದಲನೆಯ ಪುರುಷ ಮತ್ತು ಸ್ತ್ರೀ ಕ್ರಮೇಣ ವೃದ್ಧರಾಗಿ ಸತ್ತರು. ಇದು ಯೆಹೋವನು ತಾನು ಆಡಿದ ಮಾತಿಗೆ ತಪ್ಪುವುದಿಲ್ಲ ಎಂಬುದನ್ನು ರುಜುಪಡಿಸಿತು. ಎಷ್ಟೆಂದರೂ ಆತನು ಪರಿಪೂರ್ಣ ನ್ಯಾಯವಂತ ದೇವರು. ನಿಷೇಧಿತ ಫಲವನ್ನು ತಿಂದಲ್ಲಿ ಮರಣವು ಬಂದೇ ಬರುವದು ಎಂದು ಆತನು ಆದಾಮನಿಗೆ ಎಚ್ಚರಿಕೆಯನ್ನಿತ್ತಿದ್ದನು ಮತ್ತು ಹಾಗೆಯೇ ಮರಣವು ಬಂತು.
9, 10. (ಎ) ಆದಾಮನ ವಂಶಜರು ಸಾಯುವುದೇಕೆ? (ಬಿ) ಶಾಶ್ವತ ಮರಣವನ್ನು ನಾವು ಹೇಗೆ ಪಾರಾಗಬಲ್ಲೆವು?
9 ನಾವು ಆದಾಮನ ವಂಶಜರಾಗಿರಲಾಗಿ, ಪಾಪಮಾಡುವ ಪ್ರವೃತ್ತಿಯುಳ್ಳ ಮತ್ತು ಕ್ರಮೇಣ ಮರಣಕ್ಕೆ ಅಧೀನವಾಗುವ ಅಪರಿಪೂರ್ಣ ಶರೀರವನ್ನು ಬಾಧ್ಯತೆಯಾಗಿ ಹೊಂದಿದ್ದೇವೆ. ಆದಾಮನು ಪಾಪ ಮಾಡಿದಾಗ ನಾವು ಸಹ ಪಾಪಿಗಳಾದೆವು. ಅವನ ವಂಶಜರಾಗಿ ನಾವು ಹುಟ್ಟಲಿದ್ದದರಿಂದ ಮರಣದ ಶಿಕ್ಷೆಗೆ ನಾವೂ ಒಳಗಾದೆವು. ಒಂದುವೇಳೆ ಯೆಹೋವನು ವಿಮೋಚನಾ ಮೌಲ್ಯವನ್ನು ನೀಡದೆಯೇ ಆದಾಮನಿಂದ ಬಂದ ಮರಣವನ್ನು ತೆಗೆದುಹಾಕಿದ್ದರೆ, ಆತನು ತನ್ನ ಮಾತಿಗೆ ಸತ್ಯವಂತನಾಗಿ ಕಂಡುಬರುತ್ತಿರಲಿಲ್ಲ. ಕಾರ್ಯತಃ ನಮ್ಮೆಲ್ಲರ ಪರವಾಗಿ ಮಾತಾಡುತ್ತಾ ಪೌಲನು ಅಂದದ್ದು: “ಧರ್ಮಶಾಸ್ತ್ರವು ಆಧ್ಯಾತ್ಮಿಕವಾದದ್ದು ಎಂದು ನಮಗೆ ತಿಳಿದಿದೆ; ಆದರೆ ನಾನು ಶರೀರಭಾವದವನಾಗಿದ್ದು ಪಾಪಕ್ಕೆ ದಾಸನಾಗಿ ಮಾರಲ್ಪಟ್ಟವನು. ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು! ಈ ಮರಣಕ್ಕೆ ಒಳಗಾಗುತ್ತಿರುವ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು?”—ರೋಮ. 7:14, 24.
10 ನಮ್ಮ ಪಾಪಗಳನ್ನು ನ್ಯಾಯಯುತವಾಗಿ ಕ್ಷಮಿಸಿ ಶಾಶ್ವತ ಮರಣದ ಶಿಕ್ಷೆಯಿಂದ ನಮ್ಮನ್ನು ಬಿಡಿಸಲಿಕ್ಕಾಗಿ ಕೇವಲ ಯೆಹೋವ ದೇವರು ಮಾತ್ರವೇ ನ್ಯಾಯಬದ್ಧ ಮೂಲಾಧಾರವನ್ನು ನೀಡಶಕ್ತನಿದ್ದನು. ದೇವರು ಅದಕ್ಕಾಗಿ ತನ್ನ ಪ್ರಿಯ ಕುಮಾರನನ್ನು ಪರಿಪೂರ್ಣ ಮನುಷ್ಯನಾಗಿ ಹುಟ್ಟುವಂತೆ ಸ್ವರ್ಗದಿಂದ ಕಳುಹಿಸಿ ನಮಗಾಗಿ ಆ ಮಗನು ತನ್ನ ಜೀವವನ್ನು ವಿಮೋಚನಾ ಮೌಲ್ಯವಾಗಿ ಕೊಡುವಂತೆ ಮಾಡಿದನು. ಆದಾಮನಿಗೆ ಭಿನ್ನನಾಗಿ ಯೇಸುವಾದರೊ ಪರಿಪೂರ್ಣನಾಗಿ ಉಳಿದನು. ನಿಶ್ಚಯವಾಗಿಯೂ “ಅವನು ಯಾವ ಪಾಪವನ್ನೂ ಮಾಡಲಿಲ್ಲ.” (1 ಪೇತ್ರ 2:22) ಹೀಗೆ ಒಂದು ಪರಿಪೂರ್ಣ ಮಾನವಕುಲಕ್ಕೆ ಜನಕನಾಗುವ ಸಾಧ್ಯತೆ ಯೇಸುವಿಗಿತ್ತು. ಆದರೆ ಅದಕ್ಕೆ ಬದಲಾಗಿ ದೇವರ ಶತ್ರುಗಳು ತನ್ನನ್ನು ಮರಣಕ್ಕೆ ಒಪ್ಪಿಸಿಕೊಡುವಂತೆ ಅವನು ಬಿಟ್ಟುಕೊಟ್ಟನು. ಈ ಮೂಲಕ ಆದಾಮನ ಪಾಪಪೂರ್ಣ ವಂಶಜರನ್ನು ದತ್ತು ಸ್ವೀಕಾರಮಾಡಿ ತನ್ನಲ್ಲಿ ನಂಬಿಕೆ ಇಡುವವರು ನಿತ್ಯಜೀವ ಪಡೆಯುವಂತೆ ಸಾಧ್ಯಮಾಡಿದನು. ಶಾಸ್ತ್ರಗ್ರಂಥವು ವಿವರಿಸುವುದು: “ದೇವರು ಒಬ್ಬನೇ ಮತ್ತು ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ; ಅವನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ. ಅವನು ಎಲ್ಲರಿಗೋಸ್ಕರ ಅನುರೂಪವಾದ ವಿಮೋಚನಾ ಮೌಲ್ಯವಾಗಿ ತನ್ನನ್ನು ಒಪ್ಪಿಸಿಕೊಟ್ಟನು.”—1 ತಿಮೊ. 2:5, 6.
11. (ಎ) ವಿಮೋಚನಾ ಮೌಲ್ಯದ ಪ್ರಯೋಜನಗಳನ್ನು ಹೇಗೆ ದೃಷ್ಟಾಂತಿಸಬಹುದು? (ಬಿ) ವಿಮೋಚನಾ ಮೌಲ್ಯದ ಪ್ರಯೋಜನಗಳು ಎಷ್ಟು ವ್ಯಾಪಕವಾಗಿವೆ?
11 ವಿಮೋಚನಾ ಮೌಲ್ಯವು ಹೇಗೆ ಕಾರ್ಯನಡಿಸುತ್ತದೆ ಎಂಬುದನ್ನು ಹೀಗೆ ವಿವರಿಸಬಹುದು: ಭ್ರಷ್ಟಾಚಾರದಲ್ಲಿ ಒಳಗೂಡಿದ ಬ್ಯಾಂಕ್ನಿಂದ ತಮ್ಮ ಉಳಿತಾಯದ ಹಣವನ್ನೆಲ್ಲ ಕಳಕೊಂಡು ನಿರ್ಗತಿಕರಾಗಿ ಸಾಲದಲ್ಲಿ ಬಿದ್ದ ಜನರ ಪರಿಸ್ಥಿತಿಯನ್ನು ಊಹಿಸಿರಿ. ಬ್ಯಾಂಕಿನ ಮಾಲೀಕರಿಗೆ ಹಲವಾರು ವರ್ಷಗಳ ಸೆರೆವಾಸದ ಸಜೆಯನ್ನು ನ್ಯಾಯವಾಗಿ ವಿಧಿಸಲಾಗುತ್ತದೆ. ಆದರೆ ಹಣ ಕಳಕೊಂಡ ನಿರ್ದೋಷಿಗಳಾದ ಜನರ ಕುರಿತೇನು? ಯಾರಾದರೂ ದಯಾಪರ ಧನಿಕ ವ್ಯಕ್ತಿಯೊಬ್ಬನು ಬ್ಯಾಂಕಿನ ಒಡೆತನವನ್ನು ಪುನಃ ವಹಿಸಿಕೊಂಡು ಆ ನಿರ್ಗತಿಕರು ಕಳಕೊಂಡ ಹಣವನ್ನೆಲ್ಲ ಹಿಂದಿರುಗಿಸಿ ಸಾಲದಿಂದ ಮುಕ್ತಗೊಳಿಸಿದ ಹೊರತು ಅವರಿಗೆ ತಮ್ಮ ಪರಿಸ್ಥಿತಿಗಳಿಂದ ಹೊರಬರಲು ಮಾರ್ಗವಿಲ್ಲ. ತದ್ರೀತಿಯಲ್ಲಿ ಆದಾಮನ ವಂಶಜರನ್ನು ಯೆಹೋವ ದೇವರು ಮತ್ತು ಆತನ ಪ್ರಿಯ ಕುಮಾರನು ಕ್ರಯಕೊಟ್ಟು ಖರೀದಿಸಿದ್ದಾರೆ ಮತ್ತು ಯೇಸುವಿನ ಸುರಿದ ರಕ್ತದ ಆಧಾರದಿಂದ ಪಾಪವೆಂಬ ಸಾಲವನ್ನು ರದ್ದುಮಾಡಿದ್ದಾರೆ. ಆದುದರಿಂದಲೇ ಸ್ನಾನಿಕನಾದ ಯೋಹಾನನು ಯೇಸುವಿನ ಕುರಿತು, “ನೋಡಿ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ!” ಎಂದು ಹೇಳಶಕ್ತನಾಗಿದ್ದನು. (ಯೋಹಾ. 1:29) ಯಾರ ಪಾಪಗಳು ತೆಗೆದುಹಾಕಲ್ಪಡುವವೋ ಆ ಮಾನವಕುಲವೆಂಬ ಲೋಕವು ಜೀವಿತರನ್ನು ಮಾತ್ರವಲ್ಲ ಸತ್ತವರನ್ನೂ ಒಳಗೂಡಿರುವುದು.
ವಿಮೋಚನಾ ಮೌಲ್ಯಕ್ಕಾಗಿ ಸಹಿಸಿಕೊಂಡ ಬೇನೆಬೇಗುದಿ
12, 13. ಇಸಾಕನನ್ನು ಬಲಿ ಅರ್ಪಿಸಲು ಅಬ್ರಹಾಮನಿಗಿದ್ದ ಸಿದ್ಧಮನಸ್ಸಿನಿಂದ ನಾವೇನನ್ನು ಕಲಿಯಬಲ್ಲೆವು?
12 ನಮ್ಮ ಸ್ವರ್ಗೀಯ ತಂದೆಗೆ ಮತ್ತು ಆತನ ಪ್ರಿಯ ಕುಮಾರನಿಗೆ ವಿಮೋಚನಾ ಮೌಲ್ಯವು ಎಷ್ಟು ಬೇನೆಬೇಗುದಿಯನ್ನು ಕೊಟ್ಟಿತು ಎಂಬುದನ್ನು ಸರಿಯಾಗಿ ಗ್ರಹಿಸಿಕೊಳ್ಳಲು ನಮಗೆ ಸಾಧ್ಯವಿಲ್ಲ ನಿಜ. ಆದರೆ ಈ ವಿಷಯದ ಕುರಿತು ಧ್ಯಾನಿಸಲು ನೆರವಾಗಬಲ್ಲ ಅನುಭವಗಳನ್ನು ಬೈಬಲ್ ತಿಳಿಸುತ್ತದೆ. ಉದಾಹರಣೆಗೆ ಅಬ್ರಹಾಮನನ್ನು ನೆನಪಿಗೆ ತನ್ನಿ. “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂಬ ಆಜ್ಞೆಯನ್ನು ದೇವರು ಅವನಿಗೆ ಕೊಟ್ಟನು. ಅದಕ್ಕೆ ವಿಧೇಯತೆಯಲ್ಲಿ ಅಬ್ರಹಾಮನು ಮೊರೀಯ ದೇಶಕ್ಕೆ ಮೂರು ದಿನಗಳ ಪ್ರಯಾಣ ಕೈಕೊಂಡಾಗ ಅವನಿಗೆ ಹೇಗನಿಸಿತ್ತು ಎಂಬುದನ್ನು ಊಹಿಸಿಕೊಳ್ಳಿ.—ಆದಿ. 22:2-4.
13 ಕೊನೆಗೂ ದೇವರು ಹೇಳಿದ ಸ್ಥಳಕ್ಕೆ ಅಬ್ರಹಾಮನು ತಲಪಿದನು. ಇಸಾಕನ ಕೈಕಾಲುಗಳನ್ನು ಬಿಗಿದು ತಾನು ಸ್ವತಃ ಕಟ್ಟಿದ ಯಜ್ಞವೇದಿಯ ಮೇಲೆ ಅವನನ್ನು ಇಟ್ಟಾಗ ಅಬ್ರಹಾಮನಿಗಾಗಿದ್ದ ಹೃದಯವೇದನೆಯನ್ನು ಕಲ್ಪಿಸಿಕೊಳ್ಳಿ. ತನ್ನ ಮಗನನ್ನು ಕೊಲ್ಲಲಿಕ್ಕಾಗಿ ಕತ್ತಿಯನ್ನೆತ್ತುವುದು ಅಬ್ರಹಾಮನಿಗೆ ಅದೆಷ್ಟು ಭಾವನಾತ್ಮಕ ಬೇನೆಬೇಗುದಿಯನ್ನು ಕೊಟ್ಟಿದ್ದಿರಬೇಕು! ತನ್ನನ್ನು ಸಾವಿಗೆ ನಡಿಸುವ ಆ ತೀಕ್ಣ ಇರಿತದ ಅಪಾರ ನೋವನ್ನು ಕಾಯುತ್ತಾ ಆ ಯಜ್ಞವೇದಿಯ ಮೇಲೆ ಮಲಗಿದ್ದಾಗ ಇಸಾಕನಿಗಾದ ಅನಿಸಿಕೆಗಳನ್ನೂ ಊಹಿಸಿಕೊಳ್ಳಿ. ಆದರೆ ಯೆಹೋವನ ದೂತನು ಅಬ್ರಹಾಮನನ್ನು ಅದೇ ಕ್ಷಣದಲ್ಲಿ ತಡೆದನು. ಆ ಸಂದರ್ಭದಲ್ಲಿ ಅಬ್ರಹಾಮ ಮತ್ತು ಇಸಾಕರು ಮಾಡಿದ ವಿಷಯವು, ತನ್ನ ಕುಮಾರನನ್ನು ಸೈತಾನನ ಕಾರ್ಯಭಾರಿಗಳು ಕೊಲ್ಲುವಂತೆ ಬಿಟ್ಟದ್ದರಲ್ಲಿ ಯೆಹೋವನು ಅನುಭವಿಸಿದ ಅಪಾರ ಬೇನೆಬೇಗುದಿಯನ್ನು ಗ್ರಹಿಸಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಇಸಾಕನು ಅಬ್ರಹಾಮನೊಂದಿಗೆ ಸಹಕರಿಸಿದ ವಿಷಯವು, ನಮಗಾಗಿ ಬಾಧೆಯನ್ನು ಅನುಭವಿಸಿ ಸಾಯಲು ಯೇಸುವಿಗಿದ್ದ ಸಿದ್ಧಮನಸ್ಸನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ.—ಇಬ್ರಿ. 11:17-19.
14. ಯಾಕೋಬನ ಜೀವಿತದಲ್ಲಿ ನಡೆದ ಯಾವ ಘಟನೆಯು ವಿಮೋಚನಾ ಮೌಲ್ಯಕ್ಕಾಗಿ ಸಹಿಸಿಕೊಂಡ ಮನೋವೇದನೆಯನ್ನು ಗಣ್ಯಮಾಡಲು ನಮಗೆ ಸಹಾಯಮಾಡುತ್ತದೆ?
14 ಯಾಕೋಬನ ಜೀವನದಲ್ಲಿ ನಡೆದ ಘಟನೆಯೊಂದರಿಂದ ಸಹ ವಿಮೋಚನಾ ಮೌಲ್ಯಕ್ಕಾಗಿ ತೆರಲ್ಪಟ್ಟ ಅಪಾರ ಬೇನೆಬೇಗುದಿಯನ್ನು ದೃಷ್ಟಾಂತಿಸಲು ಸಾಧ್ಯವಿದೆ. ತನ್ನ ಎಲ್ಲಾ ಗಂಡುಮಕ್ಕಳಲ್ಲಿ ಯಾಕೋಬನು ಅತಿಯಾಗಿ ಪ್ರೀತಿಸಿದ್ದು ಯೋಸೇಫನನ್ನು. ಇದರಿಂದಾಗಿ ಯೋಸೇಫನ ಅಣ್ಣಂದಿರು ಅಸೂಯೆಪಟ್ಟು ಅವನನ್ನು ಹಗೆಮಾಡಿದರು. ಆದರೂ ಅಣ್ಣಂದಿರ ಯೋಗಕ್ಷೇಮ ವಿಚಾರಿಸಿಕೊಂಡು ಬಾ ಎಂದು ತಂದೆಯು ಹೇಳಿದಾಗ ಯೋಸೇಫನು ಸಿದ್ಧನಾದನು. ಅವನ ಅಣ್ಣಂದಿರು ಆಗ ಹೆಬ್ರೋನಿನ ತಮ್ಮ ಮನೆಯ ಉತ್ತರದಿಕ್ಕಿನಲ್ಲಿ ಸುಮಾರು 100 ಕಿ.ಮೀ. ದೂರದಲ್ಲಿ ಯಾಕೋಬನ ಮಂದೆಯನ್ನು ಮೇಯಿಸುತ್ತಿದ್ದರು. ಅವರು ರಕ್ತದಿಂದ ತೊಯ್ದ ಯೋಸೇಫನ ಅಂಗಿಯನ್ನು ತಂದು ತೋರಿಸಿದಾಗ ಯಾಕೋಬನಿಗಾದ ಮನೋವೇದನೆಯನ್ನು ಊಹಿಸಿಕೊಳ್ಳಿ! ಅವನು ಕೂಗಿಹೇಳಿದ್ದು: “ಈ ಅಂಗಿ ನನ್ನ ಮಗನದೇ ಹೌದು; ದುಷ್ಟಮೃಗವು ಅವನನ್ನು ಕೊಂದು ತಿಂದಿರಬೇಕು; ಯೋಸೇಫನು ಸಂದೇಹವಿಲ್ಲದೆ ಸೀಳಿಹಾಕಲ್ಪಟ್ಟಿರಬೇಕು.” ಇವೆಲ್ಲವು ಯಾಕೋಬನ ಮೇಲೆ ಮಹತ್ತರ ಆಘಾತವನ್ನು ಉಂಟುಮಾಡಿತ್ತು. ಯೋಸೇಫನಿಗಾಗಿ ಅವನು ಬಹುದಿನದ ವರೆಗೆ ಶೋಕಿಸಿದನು. (ಆದಿ. 37:33, 34) ಸನ್ನಿವೇಶಗಳಿಗೆ ಅಪರಿಪೂರ್ಣ ಮಾನವರು ತೋರಿಸುವಂಥದ್ದೇ ಪ್ರತಿಕ್ರಿಯೆಯನ್ನು ಯೆಹೋವನು ತೋರಿಸುವುದಿಲ್ಲ ನಿಜ. ಆದರೂ ಯಾಕೋಬನ ಜೀವನದಲ್ಲಾದ ಈ ಘಟನೆಯನ್ನು ಧ್ಯಾನಿಸುವುದರಿಂದ, ತನ್ನ ಪ್ರಿಯ ಕುಮಾರನು ಭೂಮಿಯಲ್ಲಿ ದುರುಪಚಾರ ಮತ್ತು ಕ್ರೂರ ಮರಣಕ್ಕೆ ಒಳಗಾದಾಗ ದೇವರಿಗೆ ಹೇಗನಿಸಿತ್ತೆಂಬುದನ್ನು ನಾವು ಸ್ಪಲ್ಪ ಮಟ್ಟಿಗೆ ಗ್ರಹಿಸಿಕೊಳ್ಳಲು ಸಹಾಯವಾಗಬಹುದು.
ವಿಮೋಚನಾ ಮೌಲ್ಯದಿಂದ ಪ್ರಯೋಜನ ಪಡೆಯುವುದು
15, 16. (ಎ) ವಿಮೋಚನಾ ಮೌಲ್ಯವನ್ನು ಸ್ವೀಕರಿಸಿದ್ದೇನೆಂದು ಯೆಹೋವನು ತೋರಿಸಿದ್ದು ಹೇಗೆ? (ಬಿ) ವಿಮೋಚನಾ ಮೌಲ್ಯದಿಂದ ನೀವು ಹೇಗೆ ಪ್ರಯೋಜನ ಹೊಂದಿದ್ದೀರಿ?
15 ಯೆಹೋವನು ತನ್ನ ನಂಬಿಗಸ್ತ ಕುಮಾರನನ್ನು ಮಹಿಮಾಭರಿತ ಆತ್ಮ ದೇಹದೊಂದಿಗೆ ಪುನರುತ್ಥಾನಗೊಳಿಸಿದನು. (1 ಪೇತ್ರ 3:18) ಪುನರುತ್ಥಾನಗೊಂಡ ಯೇಸು 40 ದಿನಗಳ ವರೆಗೆ ತನ್ನ ಶಿಷ್ಯರಿಗೆ ಗೋಚರಿಸುತ್ತಾ ಅವರ ನಂಬಿಕೆಯನ್ನು ಬಲಪಡಿಸಿದನು ಮತ್ತು ಮುಂದಿರುವ ಮಹಾ ಸೌವಾರ್ತಿಕ ಸೇವೆಗಾಗಿ ಅವರನ್ನು ಸಿದ್ಧಗೊಳಿಸಿದನು. ನಂತರ ಅವನು ಸ್ವರ್ಗಕ್ಕೆ ಏರಿಹೋಗಿ ಅಲ್ಲಿ ದೇವರಿಗೆ ತನ್ನ ಸುರಿದ ರಕ್ತದ ಬೆಲೆಯನ್ನು ಅರ್ಪಿಸಿದನು. ಇದು ಅವನ ವಿಮೋಚನಾ ಮೌಲ್ಯದ ಯಜ್ಞದ ಬೆಲೆಯಲ್ಲಿ ನಂಬಿಕೆಯನ್ನಿಡುವ ಅವನ ನಿಜ ಹಿಂಬಾಲಕರ ಪರವಾಗಿ ಉಪಯೋಗಿಸಲ್ಪಡಲಿಕ್ಕಿತ್ತು. ಕ್ರಿ.ಶ. 33ರ ಪಂಚಾಶತ್ತಮದಂದು ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿಸುವಂತೆ ಯೆಹೋವನು ಯೇಸುವನ್ನು ನೇಮಿಸಿದನು. ಈ ಮೂಲಕ ದೇವರು ಕ್ರಿಸ್ತನ ವಿಮೋಚನಾ ಮೌಲ್ಯವನ್ನು ಸ್ವೀಕರಿಸಿದ್ದೇನೆಂದು ತೋರಿಸಿಕೊಟ್ಟನು.—ಅ. ಕಾ. 2:33.
16 ಕ್ರಿಸ್ತನ ಈ ಅಭಿಷಿಕ್ತ ಹಿಂಬಾಲಕರು ಆ ಕೂಡಲೆ ತಮ್ಮ ಜೊತೆ ಮನುಷ್ಯರನ್ನು ಪ್ರೇರಿಸುತ್ತಾ, ಅವರು ತಮ್ಮ ಪಾಪಗಳ ಕ್ಷಮಾಪಣೆಗಾಗಿ ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ದೇವರ ಕ್ರೋಧವನ್ನು ಪಾರಾಗುವಂತೆ ಎಚ್ಚರಿಸಿದರು. (ಅ. ಕಾರ್ಯಗಳು 2:38-40 ಓದಿ.) ಆ ಐತಿಹಾಸಿಕ ದಿನದಿಂದ ಈ ತನಕ ಸಕಲ ಜನಾಂಗಗಳಿಂದ ಬಂದ ಲಕ್ಷಾಂತರ ಜನರು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಮೇಲೆ ನಂಬಿಕೆಯಿಡುವ ಮೂಲಕ ದೇವರೊಂದಿಗೆ ಒಂದು ಸುಸಂಬಂಧಕ್ಕೆ ಬಂದಿದ್ದಾರೆ. (ಯೋಹಾ. 6:44) ನಮ್ಮ ಈ ಚರ್ಚೆಯಲ್ಲಿ ನಾವೀಗ ಇನ್ನೆರಡು ಪ್ರಶ್ನೆಗಳನ್ನು ಪರಿಗಣಿಸುವ ಅಗತ್ಯವಿದೆ: ನಮ್ಮಲ್ಲಿ ಯಾರಾದರೂ ನಮ್ಮ ಸ್ವಂತ ಸತ್ಕಾರ್ಯಗಳಿಂದಾಗಿ ನಿತ್ಯಜೀವದ ನಿರೀಕ್ಷೆಯನ್ನು ಪಡೆದಿದ್ದೇವೊ? ಈ ಅದ್ಭುತಕರ ನಿರೀಕ್ಷೆಯನ್ನು ಒಮ್ಮೆ ಪಡೆದುಕೊಂಡೆವೆಂದ ಮೇಲೆ ನಾವು ಅದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆಯೊ?
17. ದೇವರ ಸ್ನೇಹಿತರಾಗಿರುವ ಅದ್ಭುತಕರ ಆಶೀರ್ವಾದವನ್ನು ನಾವು ಹೇಗೆ ವೀಕ್ಷಿಸಬೇಕು?
17 ವಿಮೋಚನಾ ಮೌಲ್ಯಕ್ಕೆ ನಾವು ಸಂಪೂರ್ಣವಾಗಿ ಅಪಾತ್ರರೇ ಸರಿ. ಆದರೂ ಅದರಲ್ಲಿ ನಂಬಿಕೆಯಿಡುವ ಮೂಲಕ ಇಂದು ಲಕ್ಷಾಂತರ ಜನರು ದೇವರ ಸ್ನೇಹಿತರಾಗಿದ್ದಾರೆ. ಪರದೈಸ್ ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆ ಅವರಿಗಿದೆ. ಹಾಗಿದ್ದರೂ ಯೆಹೋವನ ಮಿತ್ರರಾಗಿ ಪರಿಣಮಿಸುವುದು ಅವನೊಂದಿಗೆ ಯಾವಾಗಲೂ ಮಿತ್ರರಾಗಿಯೇ ಉಳಿಯುವೆವು ಎಂಬ ಆಶ್ವಾಸನೆಯನ್ನು ಕೊಡುವುದಿಲ್ಲ. ದೇವರ ಮುಂದಣ ಕ್ರೋಧದ ದಿನವನ್ನು ಪಾರಾಗಲು ‘ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯಕ್ಕಾಗಿ’ ಆಳವಾದ ಗಣ್ಯತೆಯನ್ನು ನಾವು ತೋರಿಸುತ್ತಾ ಇರಬೇಕು.—ರೋಮ. 3:24; ಫಿಲಿಪ್ಪಿ 2:12 ಓದಿ.
ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನಿಡುತ್ತಾ ಇರಿ
18. ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಡುವುದರಲ್ಲಿ ಏನು ಒಳಗೂಡಿದೆ?
18 ಈ ಲೇಖನದ ಮುಖ್ಯ ಶಾಸ್ತ್ರವಚನ ಯೋಹಾನ 3:36 ತೋರಿಸುವ ಮೇರೆಗೆ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದರಲ್ಲಿ ಆತನಿಗೆ ವಿಧೇಯರಾಗಿರುವುದೂ ಸೇರಿದೆ. ವಿಮೋಚನಾ ಮೌಲ್ಯಕ್ಕಾಗಿ ನಮ್ಮ ಗಣ್ಯತೆಯು, ನೀತಿತತ್ವಗಳ ವಿಷಯದಲ್ಲಿ ಅವನು ಕಲಿಸಿದ ವಿಷಯಗಳೂ ಸೇರಿದಂತೆ, ಯೇಸುವಿನ ಬೋಧನೆಗಳಿಗೆ ಹೊಂದಿಕೆಯಲ್ಲಿ ಜೀವಿಸುವಂತೆ ನಮ್ಮನ್ನು ಪ್ರೇರಿಸಬೇಕು. (ಮಾರ್ಕ 7:21-23) “ದೇವರ ಕ್ರೋಧವು” ಜಾರತ್ವ, ಅಶ್ಲೀಲ ತಮಾಷೆ ಮತ್ತು ‘ಪ್ರತಿಯೊಂದು ರೀತಿಯ ಅಶುದ್ಧತೆಯನ್ನು’ ಪಶ್ಚಾತ್ತಾಪಪಡದೆ ನಡಿಸುವವರೆಲ್ಲರ ಮೇಲೆ ಬರುತ್ತದೆ. ಆ ಅಶುದ್ಧತೆಯಲ್ಲಿ ಕಾಮಪ್ರಚೋದಕ ಸಾಹಿತ್ಯವನ್ನು ಪದೇ ಪದೇ ವೀಕ್ಷಿಸುವುದೂ ಸೇರಿರುವುದು.—ಎಫೆ. 5:3-6.
19. ಯಾವ ಧನಾತ್ಮಕ ವಿಧಗಳಲ್ಲಿ ನಾವು ವಿಮೋಚನಾ ಮೌಲ್ಯದಲ್ಲಿ ನಮ್ಮ ನಂಬಿಕೆಯನ್ನು ತೋರಿಸಬಲ್ಲೆವು?
19 ವಿಮೋಚನಾ ಮೌಲ್ಯಕ್ಕಾಗಿ ನಮಗಿರುವ ಗಣ್ಯತೆಯು ‘ದೇವಭಕ್ತಿಯ ಕ್ರಿಯೆಗಳಲ್ಲಿ’ ನಾವು ಕಾರ್ಯಮಗ್ನರಾಗಿರುವಂತೆ ಮಾಡಬೇಕು. (2 ಪೇತ್ರ 3:11) ಕ್ರಮದ ಹಾಗೂ ಮನಃಪೂರ್ವಕ ಪ್ರಾರ್ಥನೆ, ವೈಯಕ್ತಿಕ ಬೈಬಲ್ ಅಧ್ಯಯನ, ಕೂಟದ ಹಾಜರಿ, ಕುಟುಂಬ ಆರಾಧನೆ ಮತ್ತು ರಾಜ್ಯ ಸಾರುವ ಹುರುಪಿನ ಚಟುವಟಿಕೆಗಾಗಿ ನಾವು ಸಾಕಷ್ಟು ಸಮಯವನ್ನು ಬದಿಗಿರಿಸೋಣ. ಅಲ್ಲದೆ ‘ಒಳ್ಳೇದನ್ನು ಮಾಡುವುದನ್ನೂ ಇತರರೊಂದಿಗೆ ಹಂಚಿಕೊಳ್ಳುವುದನ್ನೂ ಮರೆಯದಿರೋಣ, ಏಕೆಂದರೆ ಇಂಥ ಯಜ್ಞಗಳಲ್ಲಿ ದೇವರು ಸಂತೃಪ್ತನಾಗುತ್ತಾನೆ.’—ಇಬ್ರಿ. 13:15, 16.
20. ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನು ಇಡುತ್ತಿರುವವರೆಲ್ಲರೂ ಭವಿಷ್ಯತ್ತಿನಲ್ಲಿ ಯಾವ ಆಶೀರ್ವಾದಗಳನ್ನು ನಿರೀಕ್ಷಿಸಬಲ್ಲರು?
20 ಯೆಹೋವನ ಕ್ರೋಧವು ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ಬರುವಾಗ, ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನಿಟ್ಟದ್ದಕ್ಕಾಗಿ ಹಾಗೂ ಅದಕ್ಕಾಗಿ ಗಣ್ಯತೆಯನ್ನು ತೋರಿಸುತ್ತಾ ಇರುವುದಕ್ಕಾಗಿ ನಾವೆಷ್ಟು ಸಂತೋಷಪಡುವೆವು! ಮತ್ತು ದೇವರ ಕ್ರೋಧದಿಂದ ನಮ್ಮನ್ನು ರಕ್ಷಿಸಿದ ಈ ಅದ್ಭುತಕರ ಏರ್ಪಾಡಿಗಾಗಿ ದೇವರ ವಾಗ್ದತ್ತ ನೂತನ ಲೋಕದಲ್ಲಿ ನಾವು ಸದಾ ಕೃತಜ್ಞರಾಗಿರುವೆವು.—ಯೋಹಾನ 3:16; ಪ್ರಕಟನೆ 7:9, 10, 13, 14 ಓದಿ.
ನಿಮ್ಮ ಉತ್ತರವೇನು?
• ವಿಮೋಚನಾ ಮೌಲ್ಯ ನಮಗೇಕೆ ಅಗತ್ಯ?
• ವಿಮೋಚನಾ ಮೌಲ್ಯಕ್ಕಾಗಿ ಸಹಿಸಿಕೊಂಡ ಬೇನೆಬೇಗುದಿ ಎಷ್ಟು?
• ವಿಮೋಚನಾ ಮೌಲ್ಯದಿಂದ ಯಾವ ಪ್ರಯೋಜನಗಳು ಲಭ್ಯ?
• ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಾವು ನಂಬಿಕೆಯನ್ನು ಇಡುವುದು ಹೇಗೆ?
[ಪುಟ 13ರಲ್ಲಿರುವ ಚಿತ್ರ]
ಯೆಹೋವನೊಂದಿಗೆ ಸಮಾಧಾನ ಸಂಬಂಧಕ್ಕಿರುವ ದ್ವಾರವು ಪೂರ್ತಿ ತೆರೆದಿದೆ
[ಪುಟ 15ರಲ್ಲಿರುವ ಚಿತ್ರಗಳು]
ಅಬ್ರಹಾಮ, ಇಸಾಕ, ಯಾಕೋಬರ ಘಟನೆಗಳನ್ನು ಧ್ಯಾನಿಸುವುದು ವಿಮೋಚನಾ ಮೌಲ್ಯ ತೆರಲಿಕ್ಕಾಗಿ ಸಹಿಸಲಾದ ಮಹಾ ಬೇನೆಯನ್ನು ಗಣ್ಯಮಾಡಲು ನೆರವಾಗುತ್ತದೆ