ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆ
“ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನ [“ದೇವರ ಜ್ಞಾನ,” NW]ವನ್ನು ಪಡೆದುಕೊಳ್ಳುವಿ.”—ಜ್ಞಾನೋಕ್ತಿ 2:5.
1. ಮಾನವ ಹೃದಯವು ದೈವಿಕ ಯಂತ್ರಜ್ಞಾನದ ಕೌಶಲಕೃತಿ ಎಂದು ಹೇಳಸಾಧ್ಯವಿದೆಯೇಕೆ?
ಇದೇ ಕ್ಷಣದಲ್ಲಿ ಭೂಮಿಯ ಮೇಲೆ ಸುಮಾರು 5,60,00,00,000 ಮಾನವ ಹೃದಯಗಳು ತುಡಿಯುತ್ತಿವೆ. ಪ್ರತಿ ದಿನ ನಿಮ್ಮ ಸ್ವಂತ ಹೃದಯವು 1,00,000 ಬಾರಿ ಬಡಿಯುತ್ತಾ, 7,600 ಲೀಟರ್ ಸಮಮೊತ್ತದ ರಕ್ತವನ್ನು ನಿಮ್ಮ ಶರೀರದ 1,00,000 ಕಿಲೊಮೀಟರ್ ಹೃದಯರಕ್ತನಾಳ ವ್ಯೂಹದ ಮೂಲಕ ಪಂಪು ಮಾಡುತ್ತದೆ. ಬೇರೆ ಯಾವ ಸ್ನಾಯುವೂ ದೈವಿಕ ಯಂತ್ರಜ್ಞಾನದ ಈ ಕೌಶಲಕೃತಿಗಿಂತ ಹೆಚ್ಚು ಕಷ್ಟಪಟ್ಟು ದುಡಿಯುವುದಿಲ್ಲ.
2. ಸಾಂಕೇತಿಕ ಹೃದಯವನ್ನು ನೀವು ಹೇಗೆ ಬಣ್ಣಿಸುವಿರಿ?
2 ಭೂಮಿಯಲ್ಲಿ ಕಾರ್ಯನಡಿಸುತ್ತಿರುವ 5,60,00,00,000 ಸಾಂಕೇತಿಕ ಹೃದಯಗಳೂ ಇವೆ. ಈ ಸಾಂಕೇತಿಕ ಹೃದಯದಲ್ಲಿ ನಮ್ಮ ಸಂವೇಗಗಳು, ನಮ್ಮ ಪ್ರೇರೇಪಣೆಗಳು, ನಮ್ಮ ಅಪೇಕ್ಷೆಗಳು ನೆಲಸುತ್ತವೆ. ಅದು ನಮ್ಮ ಆಲೋಚನೆಯ, ನಮ್ಮ ತಿಳಿವಳಿಕೆಯ, ನಮ್ಮ ಇಷ್ಟದ ಕೇಂದ್ರವಾಗಿದೆ. ಸಾಂಕೇತಿಕ ಹೃದಯವು ಅಹಂಕಾರದ್ದು ಅಥವಾ ದೈನ್ಯವುಳ್ಳದ್ದು, ಕುಗ್ಗಿದಂತಹದ್ದು ಅಥವಾ ಆನಂದವುಳ್ಳದ್ದು, ಕತ್ತಲೆಯದ್ದು ಅಥವಾ ಜ್ಞಾನೋದಯವುಳ್ಳದ್ದು ಆಗಿರಬಲ್ಲದು.—ನೆಹೆಮೀಯ 2:2; ಜ್ಞಾನೋಕ್ತಿ 16:5; ಮತ್ತಾಯ 11:29; ಅ. ಕೃತ್ಯಗಳು 14:17; 2 ಕೊರಿಂಥ 4:6; ಎಫೆಸ 1:16-18.
3, 4. ಸುವಾರ್ತೆಯಿಂದ ಹೃದಯಗಳು ಹೇಗೆ ತಲಪಲ್ಪಡುತ್ತಾ ಇವೆ?
3 ಯೆಹೋವ ದೇವರು ಮಾನವ ಹೃದಯವನ್ನು ಪರೀಕ್ಷಿಸಶಕ್ತನು. ಜ್ಞಾನೋಕ್ತಿ 17:3 ಹೇಳುವುದು: “ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು; ಹೃದಯಗಳನ್ನು ಶೋಧಿಸುವವನು ಯೆಹೋವನೇ.” ಆದರೂ, ಪ್ರತಿಯೊಂದು ಹೃದಯವನ್ನು ಬರೇ ಶೋಧಿಸಿ ತೀರ್ಪನ್ನು ಉಚ್ಚರಿಸುವ ಬದಲಾಗಿ, ಮಾನವ ಹೃದಯಗಳನ್ನು ಸುವಾರ್ತೆಯಿಂದ ತಲಪಲು ಯೆಹೋವನು ತನ್ನ ಸಾಕ್ಷಿಗಳನ್ನು ಉಪಯೋಗಿಸುತ್ತಿದ್ದಾನೆ. ಇದು ಅಪೊಸ್ತಲ ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿದೆ: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ? ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.”—ರೋಮಾಪುರ 10:13-15.
4 ‘ಶುಭದ ಸುವಾರ್ತೆಯನ್ನು ಸಾರಲು’ ಮತ್ತು ಪ್ರತಿಕ್ರಿಯಿಸುವ ಹೃದಯದ ಜನರನ್ನು ಕಂಡುಹಿಡಿಯಲು ತನ್ನ ಸಾಕ್ಷಿಗಳನ್ನು ಭೂಮಿಯ ಕಟ್ಟಕಡೆಗೆ ಕಳುಹಿಸುವರೆ ಯೆಹೋವನು ಸಂತೋಷಪಟ್ಟಿದ್ದಾನೆ. ನಾವೀಗ 50,00,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ—ಭೂಮಿಯ ಮೇಲಿನ ಸುಮಾರು 1,200 ಜನರಿಗೆ 1 ಸಾಕ್ಷಿಯ ಪ್ರಮಾಣದಲ್ಲಿ. ಭೂಮಿಯ ನೂರಾರು ಕೋಟಿ ಜನರನ್ನು ಸುವಾರ್ತೆಯಿಂದ ತಲಪುವುದೇನೂ ಸುಲಭವಲ್ಲ. ಆದರೆ ದೇವರು ಈ ಕೆಲಸವನ್ನು ಯೇಸು ಕ್ರಿಸ್ತನ ಮೂಲಕ ಮಾರ್ಗದರ್ಶಿಸುತ್ತಾ ಪ್ರಾಮಾಣಿಕ ಹೃದಯದವರನ್ನು ಸೆಳೆಯುತ್ತಿದ್ದಾನೆ. ಹೀಗೆ, ಯೆಶಾಯ 60:22ರಲ್ಲಿ ದಾಖಲೆಯಾದ ಪ್ರವಾದನೆಯು ಸತ್ಯವಾಗಿ ಪರಿಣಮಿಸುತ್ತಿದೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೇ ಉಂಟುಮಾಡುವೆನು.”
5. ಜ್ಞಾನವೆಂದರೇನು, ಮತ್ತು ಲೌಕಿಕ ವಿವೇಕದ ಕುರಿತು ಏನು ಹೇಳಸಾಧ್ಯವಿದೆ?
5 ಆ ಸಮಯವು ಈಗಲೇ, ಮತ್ತು ಒಂದು ವಿಷಯ ಸ್ಪಷ್ಟ—ಭೂಮಿಯ ಕೊಟ್ಯಂತರ ಜನರಿಗೆ ಜ್ಞಾನದ ಅಗತ್ಯವಿದೆ. ಮೂಲಭೂತವಾಗಿ ಅನುಭವ, ಅವಲೋಕನೆ ಮತ್ತು ಅಧ್ಯಯನದಿಂದ ಗಳಿಸಲ್ಪಟ್ಟ ವಸ್ತುಸ್ಥಿತಿಗಳ ಪರಿಚಯವೇ ಜ್ಞಾನವು. ಲೋಕವು ಬಹಳಷ್ಟು ಜ್ಞಾನದ ಸಂಚಯವನ್ನು ಮಾಡಿರುತ್ತದೆ. ಸಾರಿಗೆ, ಆರೋಗ್ಯ ಆರೈಕೆ, ಮತ್ತು ಸಂಪರ್ಕ ಸಾಧನಗಳಂತಹ ರಂಗಗಳಲ್ಲಿ ಪ್ರಗತಿಯನ್ನು ಮಾಡಲಾಗಿದೆ. ಆದರೆ ಮಾನವಕುಲಕ್ಕೆ ನಿಜವಾಗಿ ಅಗತ್ಯವಿರುವುದು ಲೌಕಿಕ ಜ್ಞಾನವೋ? ಇಲ್ಲ! ಯುದ್ಧ, ದಬ್ಬಾಳಿಕೆ, ರೋಗ, ಮತ್ತು ಮರಣವು ಮಾನವಕುಲವನ್ನು ಬಾಧಿಸುತ್ತಾ ಮುಂದುವರಿದಿದೆ. ಲೌಕಿಕ ವಿವೇಕವು ಅನೇಕ ಬಾರಿ ಮರುಭೂಮಿಯ ಬಿರುಗಾಳಿಯಲ್ಲಿ ನೆಲೆ ಬದಲಾಯಿಸುವ ಮರಳಿನಂತಿರುವುದಾಗಿ ಕಂಡುಬಂದಿದೆ.
6. ರಕ್ತದ ವಿಷಯದಲ್ಲಿ, ದೇವರ ಜ್ಞಾನವು ಲೌಕಿಕ ವಿವೇಕದೊಂದಿಗೆ ಹೇಗೆ ತುಲನೆಯಾಗುತ್ತದೆ?
6 ದೃಷ್ಟಾಂತಕ್ಕೆ: ಕೆಲವು ಶತಮಾನಗಳ ಪೂರ್ವದಲ್ಲಿ, ರಕ್ತ ಹೊರಹರಿಸುವುದು ರೋಗವಾಸಿಯನ್ನು ತರುತ್ತದೆಂಬ ಭಾವನೆ ವಾಡಿಕೆಯಾಗಿತ್ತು. ತಮ್ಮ ಜೀವಿತದ ಅಂತಿಮ ತಾಸುಗಳಲ್ಲಿ ಅಮೆರಿಕದ ಮೊದಲನೆಯ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್ರವರ ರಕ್ತವನ್ನು ಪದೇ ಪದೇ ಹೊರಹರಿಸಲಾಯಿತು. ಒಂದು ಬಿಂದುವಿನಲ್ಲಿ ಅವರಂದದ್ದು: “ನನ್ನನ್ನು ಶಾಂತವಾಗಿ ಸಾಯಬಿಡಿರಿ; ನಾನು ಹೆಚ್ಚು ಹೊತ್ತು ಬದುಕಲಾರೆ.” ಅವರು ಹೇಳಿದ್ದು ಸರಿಯಾಗಿತ್ತು, ಏಕೆಂದರೆ ಅವರು ಅದೇ ದಿನ—ಡಿಸೆಂಬರ್ 14, 1799ರಂದು ಸತ್ತರು. ರಕ್ತ ಹೊರಹರಿಸುವ ಬದಲಿಗೆ ಇಂದು ಮಾನವ ದೇಹದ ಒಳಗೆ ರಕ್ತ ಪೂರಣವನ್ನು ಮಾಡುವುದರ ಮೇಲೆ ಒತ್ತನ್ನು ಹಾಕಲಾಗುತ್ತದೆ. ಎರಡೂ ಕಾರ್ಯವಿಧಾನಗಳು ಪ್ರಾಣಾಂತಕ ಸಮಸ್ಯೆಗಳಿಂದ ತುಂಬಿವೆ. ಹಾಗಿದ್ದರೂ, ಈ ಎಲ್ಲ ಸಮಯದಲ್ಲಿ, ದೇವರ ವಾಕ್ಯವು ಹೇಳಿರುವುದು: “ರಕ್ತವನ್ನೂ . . . ವಿಸರ್ಜಿಸುವದು ಅವಶ್ಯವಾಗಿದೆ.” (ಅ. ಕೃತ್ಯಗಳು 15:29) ದೇವರ ಜ್ಞಾನವಾದರೋ ಯಾವಾಗಲೂ ಸರಿಯಾಗಿದೆ, ವಿಶ್ವಾಸಾರ್ಹವಾಗಿದೆ, ಸದ್ಯೋಚಿತವಾಗಿದೆ.
7. ಮಕ್ಕಳನ್ನು ಬೆಳಸುವ ವಿಷಯದಲ್ಲಿ ನಿಷ್ಕೃಷ್ಟವಾದ ಶಾಸ್ತ್ರೀಯ ಜ್ಞಾನವು ಲೌಕಿಕ ವಿವೇಕದೊಂದಿಗೆ ಹೇಗೆ ಹೋಲಿಕೆಯಾಗುತ್ತದೆ?
7 ವಿಶ್ವಾಸಾರ್ಹವಲ್ಲದ ಲೌಕಿಕ ಜ್ಞಾನದ ಇನ್ನೊಂದು ದೃಷ್ಟಾಂತವನ್ನು ಗಮನಿಸಿರಿ. ವರ್ಷಾಂತರಗಳಿಂದ ಮನಃಶಾಸ್ತ್ರಜ್ಞರು ಮಕ್ಕಳ ಸ್ವಚ್ಛಂದಾವಕಾಶದ ಬೆಳೆಸುವಿಕೆಯನ್ನು ಪ್ರತಿಪಾದಿಸಿದರಾದರೂ, ಅದರ ಪ್ರತಿಪಾದಕರಲ್ಲಿ ಒಬ್ಬನು ಅದು ತಪ್ಪಾಗಿತ್ತೆಂದು ತರುವಾಯ ಒಪ್ಪಿಕೊಂಡನು. ಜರ್ಮನ್ ಫಿಲಲಾಜಿಕಲ್ ಅಸೋಷಿಯೇಷನ್ ಒಮ್ಮೆ ಹೇಳಿದ್ದೇನಂದರೆ, “ಯುವ ಜನರಲ್ಲಿ ಈಗ ನಮಗಿರುವ ಸಮಸ್ಯೆಗಳಿಗೆ ಕಡಿಮೆ ಪಕ್ಷ ಪರೋಕ್ಷವಾಗಿ ಜವಾಬ್ದಾರಿಯಾಗಿರುವುದು” ಸ್ವಚ್ಛಂದಾವಕಾಶವೇ. ಲೌಕಿಕ ಜ್ಞಾನವು ಗಾಳಿಯ ಹೊಡೆತಕ್ಕೆ ಸಿಕ್ಕಿದೆಯೋ ಎಂಬಂತೆ ಹಿಂದಕ್ಕೂ ಮುಂದಕ್ಕೂ ಓಲಾಡುತ್ತದೆ, ಆದರೆ ನಿಷ್ಕೃಷ್ಟ ಶಾಸ್ತ್ರೀಯ ಜ್ಞಾನವಾದರೋ ಸ್ಥಿರವಾದದ್ದು. ಮಕ್ಕಳ ತರಬೇತಿನ ಕುರಿತು ಬೈಬಲ್ ಸಮತೆಯ ಬುದ್ಧಿವಾದವನ್ನು ನೀಡುತ್ತದೆ. “ಮಗನನ್ನು ಶಿಕ್ಷಿಸು, ನಿನ್ನನ್ನು ಸುದಾರಿಸುವನು; ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು,” ಎನ್ನುತ್ತದೆ ಜ್ಞಾನೋಕ್ತಿ 29:17. ಅಂತಹ ಶಿಕ್ಷೆಯು ಪ್ರೀತಿಯಿಂದ ನಿರ್ವಹಿಸಲ್ಪಡಬೇಕು, ಯಾಕೆಂದರೆ ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಕೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿಸಲಹಿರಿ.”—ಎಫೆಸ 6:4.
“ದೇವರ ಜ್ಞಾನ”
8, 9. ಮಾನವಕುಲಕ್ಕೆ ನಿಜವಾಗಿ ಅಗತ್ಯವಿರುವ ಜ್ಞಾನದ ಕುರಿತು ಜ್ಞಾನೋಕ್ತಿ 2:1-6 ಏನು ಹೇಳುತ್ತದೋ ಅದನ್ನು ನೀವು ಹೇಗೆ ವಿವರಿಸುವಿರಿ?
8 ಪೌಲನು ಒಬ್ಬ ಸುಶಿಕ್ಷಿತ ಮನುಷ್ಯನಾಗಿದ್ದರೂ, ಅವನಂದದ್ದು: “ಯಾವನೂ ತನ್ನನ್ನು ತಾನೇ ಮೋಸಗೊಳಿಸದಿರಲಿ. ತಾನು ನಿಮ್ಮಲ್ಲಿ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವವನು ಜ್ಞಾನಿಯಾಗುವಂತೆ ಹುಚ್ಚನಾಗಲಿ. ಯಾಕಂದರೆ ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ.” (1 ಕೊರಿಂಥ 3:18, 19) ಮಾನವಕುಲಕ್ಕೆ ನಿಜವಾಗಿ ಅಗತ್ಯವಿರುವ ಜ್ಞಾನವನ್ನು ದೇವರು ಮಾತ್ರ ಒದಗಿಸಬಲ್ಲನು. ಅದರ ಕುರಿತು ಜ್ಞಾನೋಕ್ತಿ 2:1-6 ಹೇಳುವುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೇವರ ಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.”
9 ಯಾರು ಸಹೃದಯಗಳಿಂದ ಪ್ರೇರಿಸಲ್ಪಟ್ಟಿದ್ದಾರೋ ಅವರು ದೈವದತ್ತ ಜ್ಞಾನವನ್ನು ಯೋಗ್ಯ ಉಪಯೋಗಕ್ಕೆ ಹಾಕುವ ಮೂಲಕ ವಿವೇಕಕ್ಕೆ ಗಮನ ಕೊಡುತ್ತಾರೆ. ತಾವು ಕಲಿಯುತ್ತಿರುವ ನಿಜತ್ವಗಳನ್ನು ಜಾಗ್ರತೆಯಿಂದ ತೂಗಿನೋಡುತ್ತಾ ಅವರು ತಮ್ಮ ಹೃದಯಗಳನ್ನು ವಿವೇಚನೆಯ ಕಡೆಗೆ ತಿರುಗಿಸುತ್ತಾರೆ. ಕಾರ್ಯತಃ, ಅವರು ತಿಳಿವಳಿಕೆಗಾಗಿ ಕೂಗಿಕೊಳ್ಳುತ್ತಾರೆ, ಅಥವಾ ಒಂದು ವಿಷಯದ ಅಂಶಗಳು ಒಂದಕ್ಕೊಂದು ಹೇಗೆ ಸಂಬಂಧಿಸುತ್ತವೆಂದು ಕಾಣುವ ಶಕ್ತಿಯನ್ನು ಪಡೆಯುತ್ತಾರೆ. ಬೆಳ್ಳಿಗಾಗಿ ಅಗೆಯುತ್ತಾರೋ ಮತ್ತು ಗುಪ್ತ ನಿಧಿಗಳಿಗಾಗಿ ಹುಡುಕುತ್ತಾರೋ ಎಂಬಂತೆ ಸಹೃದಯಿಗಳು ಕೆಲಸ ಮಾಡುತ್ತಾರೆ. ಆದರೆ ಆ ಪ್ರತಿವರ್ತಕ ಹೃದಯಗಳ ಜನರಿಂದ ಯಾವ ಮಹಾ ನಿಕ್ಷೇಪವು ಕಂಡುಕೊಳ್ಳಲ್ಪಡುತ್ತದೆ? “ದೇವರ ಜ್ಞಾನ”ವೇ ಅದು. ಅದೇನು? ಸರಳವಾಗಿ ಹೇಳುವುದಾದರೆ, ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಜ್ಞಾನವೇ ಅದು.
10. ಒಳ್ಳೆಯ ಆತ್ಮಿಕ ಆರೋಗ್ಯದಲ್ಲಿ ಆನಂದಿಸಲಿಕ್ಕಾಗಿ ನಾವೇನು ಮಾಡತಕ್ಕದ್ದು?
10 ದೇವರ ಜ್ಞಾನವು ಸ್ವಸ್ಥವೂ, ಸ್ಥಿರವೂ, ಜೀವದಾಯಕವೂ ಆಗಿದೆ. ಅದು ಆತ್ಮಿಕ ಸ್ವಾಸ್ಥ್ಯವನ್ನು ಪ್ರವರ್ಧಿಸುತ್ತದೆ. ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸಿದ್ದು: “ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥ ವಾಕ್ಯಗಳ ಮಾದರಿಯನ್ನು ಭದ್ರವಾಗಿ ಹಿಡಿದುಕೊ.” (2 ತಿಮೊಥೆಯ 1:13, NW) ಒಂದು ಭಾಷೆಯಲ್ಲಿ ಪದಗಳ ಮಾದರಿಯು ಇರುತ್ತದೆ. ತತ್ಸಮಾನವಾಗಿ, ಶಾಸ್ತ್ರೀಯ ಸತ್ಯದ “ಶುದ್ಧ ಭಾಷೆಯಲ್ಲಿ” “ಸ್ವಸ್ಥ ವಾಕ್ಯಗಳ ಮಾದರಿ” ಇದೆ; ಇದು ಮುಖ್ಯವಾಗಿ ದೇವರ ರಾಜ್ಯದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವೆಂಬ ಬೈಬಲಿನ ಮುಖ್ಯ ವಿಷಯದ ಮೇಲೆ ಆಧಾರಿಸಿದೆ. (ಚೆಫನ್ಯ 3:9, NW) ಈ ಸ್ವಸ್ಥ ವಾಕ್ಯಗಳ ಮಾದರಿಯನ್ನು ನಾವು ನಮ್ಮ ಹೃದಮನಗಳಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ. ಸಾಂಕೇತಿಕ ಹೃದ್ರೋಗವನ್ನು ನಾವು ದೂರವಿರಿಸಿ ಆತ್ಮಿಕವಾಗಿ ಸ್ವಸ್ಥವಾಗಿ ಉಳಿಯಬೇಕಾದರೆ, ಬೈಬಲನ್ನು ನಿತ್ಯದ ಜೀವನದಲ್ಲಿ ಅನ್ವಯಿಸಬೇಕು ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ದೇವರು ಮಾಡುತ್ತಿರುವ ಆತ್ಮಿಕ ಒದಗಿಸುವಿಕೆಗಳನ್ನು ಪೂರ್ಣ ಉಪಯೋಗಕ್ಕೆ ಹಾಕಬೇಕು. (ಮತ್ತಾಯ 24:45-47; ತೀತ 2:2) ಉತ್ತಮವಾದ ಆತ್ಮಿಕ ಆರೋಗ್ಯಕ್ಕಾಗಿ ನಮಗೆ ದೇವರ ಜ್ಞಾನದ ಅಗತ್ಯವಿದೆಯೆಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡೋಣ.
11. ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆಯೇಕೆಂಬುದಕ್ಕೆ ಕೆಲವು ಕಾರಣಗಳಾವುವು?
11 ಭೂಮಿಯ ನೂರಾರು ಕೋಟಿ ಜನರಿಗೆ ಏಕೆ ದೇವರ ಜ್ಞಾನವು ಬೇಕೆಂಬುದಕ್ಕೆ ಇನ್ನಿತರ ಕಾರಣಗಳನ್ನು ಪರಿಗಣಿಸಿರಿ. ಭೂಮಿ ಮತ್ತು ಮಾನವರು ಹೇಗೆ ಅಸ್ತಿತ್ವಕ್ಕೆ ಬಂದರೆಂಬುದು ಅವರೆಲ್ಲರಿಗೆ ತಿಳಿದಿದೆಯೇ? ಇಲ್ಲ, ಅವರಿಗೆ ತಿಳಿದಿಲ್ಲ. ಮಾನವಕುಲದ ಎಲ್ಲರು ಸತ್ಯ ದೇವರನ್ನೂ ಆತನ ಪುತ್ರನನ್ನೂ ತಿಳಿದಿದ್ದಾರೋ? ದೈವಿಕ ಪರಮಾಧಿಕಾರ ಮತ್ತು ಮಾನವ ಸಮಗ್ರತೆಯ ಕುರಿತು ಸೈತಾನನು ಎಬ್ಬಿಸಿದ ವಾದಾಂಶಗಳನ್ನು ಪ್ರತಿಯೊಬ್ಬನು ಅರಿತಿದ್ದಾನೋ? ಪುನಃ ಇಲ್ಲ. ನಾವು ವೃದ್ಧರಾಗುವುದೂ ಸಾಯುವುದೂ ಯಾಕೆಂದು ಜನರಿಗೆ ಸಾಮಾನ್ಯವಾಗಿ ತಿಳಿದಿದೆಯೇ? ಇಲ್ಲವೆಂದು ನಾವು ಇನ್ನೊಮ್ಮೆ ಹೇಳಲೇಬೇಕು. ದೇವರ ರಾಜ್ಯವು ಈಗ ಆಳುತ್ತಾ ಇದೆ ಮತ್ತು ನಾವು ಕಡೇ ದಿನಗಳಲ್ಲಿ ಜೀವಿಸುತ್ತಿದ್ದೇವೆ ಎಂದು ಭೂನಿವಾಸಿಗಳೆಲ್ಲರು ಗ್ರಹಿಸುತ್ತಾರೋ? ದುರಾತ್ಮ ಸೇನೆಗಳ ಅರಿವು ಅವರಿಗಿದೆಯೇ? ಸಂತೋಷದ ಕುಟುಂಬ ಜೀವನವನ್ನು ಹೊಂದುವುದು ಹೇಗೆಂಬುದರ ಕುರಿತು ನಂಬಲರ್ಹವಾದ ಜ್ಞಾನವು ಮಾನವರೆಲ್ಲರಿಗೆ ಇದೆಯೇ? ಮತ್ತು ಪ್ರಮೋದವನದಲ್ಲಿ ಸಂತಸದ ಜೀವನವೇ ವಿಧೇಯ ಮಾನವಕುಲಕ್ಕಾಗಿ ನಮ್ಮ ಸೃಷ್ಟಿಕರ್ತನ ಉದ್ದೇಶವೆಂದು ಜನಸಮೂಹಕ್ಕೆ ಗೊತ್ತಿದೆಯೇ? ಈ ಪ್ರಶ್ನೆಗಳಿಗೂ ಉತ್ತರ ಇಲ್ಲವೆಂದೇ ಆಗಿದೆ. ಹಾಗಾದರೆ ಸ್ಫುಟವಾಗಿ, ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆ.
12. ನಾವು ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಹೇಗೆ ಆರಾಧಿಸಬಲ್ಲೆವು?
12 ತನ್ನ ಭೂಜೀವಿತದ ಕೊನೆಯ ರಾತ್ರಿಯಲ್ಲಿ ಯೇಸು ಪ್ರಾರ್ಥನೆಯಲ್ಲಿ ಏನು ಹೇಳಿದನೋ ಆ ಕಾರಣದಿಂದಾಗಿಯೂ ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆ. ಆತನು ಹೀಗಂದದ್ದನ್ನು ಕೇಳಲು ಆತನ ಅಪೊಸ್ತಲರು ಆಳವಾಗಿ ಪ್ರೇರಿಸಲ್ಪಟ್ಟಿದ್ದಿರಬೇಕು: “ಒಬ್ಬನೇ ಸತ್ಯದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದೇ ನಿತ್ಯಜೀವವು.” (ಯೋಹಾನ 17:3, NW) ಅಂತಹ ಜ್ಞಾನವನ್ನು ಅನ್ವಯಿಸುವುದು ದೇವರನ್ನು ಸ್ವೀಕರಣೀಯವಾಗಿ ಆರಾಧಿಸುವ ಒಂದೇ ಮಾರ್ಗವು. “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು,” ಅಂದನು ಯೇಸು. (ಯೋಹಾನ 4:24, NW) ನಂಬಿಕೆ ಮತ್ತು ಪ್ರೀತಿಯಿಂದ ತುಂಬಿರುವ ಹೃದಯಗಳಿಂದ ನಾವು ಪ್ರೇರಿಸಲ್ಪಡುವಾಗ, ದೇವರನ್ನು “ಆತ್ಮದಿಂದ” ನಾವು ಆರಾಧಿಸುತ್ತೇವೆ. “ಸತ್ಯದಿಂದ” ನಾವು ಆತನನ್ನು ಆರಾಧಿಸುವುದು ಹೇಗೆ? ಆತನ ವಾಕ್ಯವನ್ನು ಅಧ್ಯಯನ ಮಾಡಿ—“ದೇವರ ಜ್ಞಾನ”ವಾದ ಆತನ ಪ್ರಕಾಶಿತ ಸತ್ಯಕ್ಕನುಸಾರ ಆತನನ್ನು ಆರಾಧಿಸುವ ಮೂಲಕವೇ.
13. ಯಾವ ಘಟನೆಯು ಅಪೊಸ್ತಲರ ಕೃತ್ಯಗಳು 16:25-34ರಲ್ಲಿ ದಾಖಲೆಯಾಗಿದೆ, ಮತ್ತು ಅದರಿಂದ ನಾವೇನನ್ನು ಕಲಿಯಬಲ್ಲೆವು?
13 ಪ್ರತಿ ವರ್ಷ ಸಾವಿರಾರು ಜನರು ಯೆಹೋವನನ್ನು ಆರಾಧಿಸಲು ಆರಂಭಿಸುತ್ತಾರೆ. ಆದರೂ, ಆಸಕ್ತ ಜನರೊಂದಿಗೆ ಬಹಳ ದೀರ್ಘ ಸಮಯದ ತನಕ ಅಭ್ಯಾಸ ಮಾಡಲೇಬೇಕೋ, ಇಲ್ಲವೇ ಪ್ರಾಮಾಣಿಕ ಹೃದಯದ ಜನರಿಗೆ ಹೆಚ್ಚು ಬೇಗನೆ ದೀಕ್ಷಾಸ್ನಾನದ ಹಂತಕ್ಕೆ ಬರಲು ಸಾಧ್ಯವಿದೆಯೇ? ಒಳ್ಳೇದು, ಅಪೊಸ್ತಲರ ಕೃತ್ಯಗಳು 16:25-34ರಲ್ಲಿ ತಿಳಿಸಲಾದ ಸೆರೆಯ ಅಧಿಕಾರಿ ಮತ್ತು ಅವನ ಮನೆಯವರ ಸನ್ನಿವೇಶದಲ್ಲಿ ಏನಾಯಿತೆಂಬುದನ್ನು ಗಮನಿಸಿರಿ. ಪೌಲ ಮತ್ತು ಸೀಲರು ಫಿಲಿಪ್ಪಿಯಲ್ಲಿ ಸೆರೆಮನೆಗೆ ಹಾಕಲ್ಪಟ್ಟಿದ್ದರು. ಆದರೆ ಮಧ್ಯರಾತ್ರಿಯಲ್ಲಿ ಒಂದು ಮಹಾ ಭೂಕಂಪವು ಸೆರೆಮನೆಯ ಬಾಗಿಲುಗಳನ್ನು ತೆರೆದುಹಾಕಿತು. ಸೆರೆಯಲ್ಲಿದ್ದವರೆಲ್ಲರು ಓಡಿಹೋಗಿದ್ದಿರಬೇಕೆಂದೂ, ತನಗೆ ಕಠಿನ ಶಿಕ್ಷೆಯಾಗುವುದೆಂದೂ ಭಾವಿಸಿ ಸೆರೆಯ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದಾಗ, ತಾವೆಲ್ಲರೂ ಅಲ್ಲೇ ಇದ್ದೇವೆಂದು ಪೌಲನು ಅವನಿಗೆ ಹೇಳಿದನು. ಪೌಲ ಮತ್ತು ಸೀಲರು “ಅವನಿಗೂ ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು.” ಆ ಸೆರೆಯ ಅಧಿಕಾರಿ ಮತ್ತು ಅವನ ಕುಟುಂಬದವರು ಅನ್ಯರಾಗಿದ್ದು ಅವರಿಗೆ ಪವಿತ್ರ ಶಾಸ್ತ್ರಗಳಲ್ಲಿನ ಯಾವ ಹಿನ್ನೆಲೆಯೂ ಇದ್ದಿರಲಿಲ್ಲ. ಆದರೂ, ಆ ಒಂದೇ ರಾತ್ರಿಯಲ್ಲಿ, ಅವರು ವಿಶ್ವಾಸಿಗಳಾದರು. ಅದಕ್ಕಿಂತಲೂ ಹೆಚ್ಚಾಗಿ, ಅವನು “ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನಮಾಡಿಸಿಕೊಂಡನು.” ಅವು ಅಪೂರ್ವವಾದ ಸನ್ನಿವೇಶಗಳಾಗಿದ್ದವು ನಿಜ, ಆದರೆ ಹೊಸಬರಿಗೆ ಮೂಲಸತ್ಯಗಳು ಕಲಿಸಲ್ಪಟ್ಟವು ಮತ್ತು ಅನಂತರ ಬೇರೆ ವಿಷಯಗಳನ್ನು ಅವರು ಸಭಾ ಕೂಟಗಳಲ್ಲಿ ಕಲಿತರು. ತದ್ರೀತಿಯ ಒಂದು ವಿಷಯವು ಇಂದು ಶಕ್ಯವಾಗಿರಬೇಕು.
ಬೆಳೆಯು ಬಹಳ!
14. ಕೊಂಚ ಕಾಲಾವಧಿಯಲ್ಲಿ ಪರಿಣಾಮಕಾರಕವಾದ ಅಧಿಕ ಸಂಖ್ಯಾತ ಬೈಬಲ್ ಅಧ್ಯಯನಗಳನ್ನು ನಡಸುವ ಅಗತ್ಯವಿದೆಯೇಕೆ?
14 ಕಡಿಮೆ ಕಾಲಾವಧಿಯ ಪರಿಣಾಮಕಾರಿ ಬೈಬಲ್ ಅಧ್ಯಯನಗಳನ್ನು ಅಧಿಕ ಸಂಖ್ಯೆಯಲ್ಲಿ ಯೆಹೋವನ ಸಾಕ್ಷಿಗಳು ನಡಸಶಕ್ತರಾಗಿದ್ದರೆ ಒಳ್ಳೇದಾಗುತ್ತಿತ್ತು. ಇದಕ್ಕೆ ನಿಜವಾದ ಅಗತ್ಯವು ಇದೆ. ಉದಾಹರಣೆಗೆ, ಪೂರ್ವ ಯೂರೋಪಿನ ದೇಶಗಳಲ್ಲಿ ಬೈಬಲ್ ಅಧ್ಯಯನಗಳಿಗಾಗಿ ಜನರು ಕಾಯುಗರ ಪಟ್ಟಿಯಲ್ಲಿ ಸೇರಬೇಕಾಗಿದೆ. ಬೇರೆ ಕಡೆಗಳಲ್ಲಿಯೂ ವಿಷಯವು ಹೀಗೆಯೇ ಇದೆ. ಡೊಮಿನಿಕನ್ ರಿಪಬ್ಲಿಕ್ನ ಒಂದು ಶಹರದಲ್ಲಿ ಐದು ಸಾಕ್ಷಿಗಳಿಗೆ ಎಷ್ಟೊಂದು ವಿನಂತಿಗಳಿದ್ದವೆಂದರೆ ಎಲ್ಲ ಅಧ್ಯಯನಗಳನ್ನು ನಡಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರೇನು ಮಾಡಿದರು? ರಾಜ್ಯ ಸಭಾಗೃಹದ ಕೂಟಗಳಿಗೆ ಹಾಜರಾಗಲು ಅವರು ಆಸಕ್ತ ಜನರನ್ನು ಆಮಂತ್ರಿಸಿದರು ಮತ್ತು ಬೈಬಲ್ ಅಧ್ಯಯನಗಳಿಗಾಗಿ ಕಾಯುಗರ ಪಟ್ಟಿಯನ್ನು ಸೇರಲು ಹೇಳಿದರು. ಭೂಸುತ್ತಲೂ ಅನೇಕ ಸ್ಥಳಗಳಲ್ಲಿ ಇದೇ ಪರಿಸ್ಥಿತಿಯು ಇರುತ್ತದೆ.
15, 16. ದೇವರ ಜ್ಞಾನವನ್ನು ಅಧಿಕ ತ್ವರೆಯಾಗಿ ಹಬ್ಬಿಸುವಂತೆ ಏನನ್ನು ಒದಗಿಸಲಾಗಿದೆ, ಮತ್ತು ಅದರ ಕುರಿತ ಕೆಲವು ನಿಜತ್ವಗಳೇನು?
15 ವಿಸ್ತಾರವಾದ ಟೆರಿಟೊರಿಗಳು—ಕೊಯ್ಲಿನ ಮಹಾ ಹೊಲಗಳು—ದೇವಜನರಿಗಾಗಿ ತೆರೆಯಲ್ಪಡುತ್ತಾ ಇವೆ. “ಬೆಳೆಯ ಯಜಮಾನ”ನಾದ ಯೆಹೋವನು ಅಧಿಕ ಕೆಲಸಗಾರರನ್ನು ಕಳುಹಿಸುತ್ತಿದ್ದಾನಾದರೂ, ಮಾಡಲು ಇನ್ನೂ ಬಹಳಷ್ಟಿದೆ. (ಮತ್ತಾಯ 9:37, 38) ಆದುದರಿಂದ ದೇವರ ಜ್ಞಾನವನ್ನು ಅಧಿಕ ಶೀಘ್ರವಾಗಿ ಹಬ್ಬಿಸಲಿಕ್ಕಾಗಿ, ‘ನಂಬಿಗಸ್ತ ಆಳು,’ ಬೈಬಲ್ ವಿದ್ಯಾರ್ಥಿಗಳು ಪ್ರತಿಯೊಂದು ಪಾಠದೊಂದಿಗೆ ಆತ್ಮಿಕ ಪ್ರಗತಿಯನ್ನು ಮಾಡಲಾಗುವಂತೆ ವಿಶಿಷ್ಟ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡುವ ಒಂದು ಸಂಗತಿಯನ್ನು ಒದಗಿಸಿದ್ದಾನೆ. ಗೃಹ ಬೈಬಲ್ ಅಧ್ಯಯನವನ್ನು ಸ್ವಲ್ಪ ವೇಗವಾಗಿ—ಪ್ರಾಯಶಃ ಕೆಲವೇ ತಿಂಗಳುಗಳಲ್ಲಿ—ಆವರಿಸಸಾಧ್ಯವಾಗುವ ಒಂದು ಹೊಸ ಪ್ರಕಾಶನವು ಅದಾಗಿದೆ. ಅದನ್ನು ನಮ್ಮ ಬ್ರೀಫ್ಕೇಸ್ಗಳಲ್ಲಿ, ಕೈಚೀಲಗಳಲ್ಲಿ, ಅಥವಾ ನಮ್ಮ ಜೇಬುಗಳಲ್ಲಿಯೂ ಒಯ್ಯಬಹುದಾಗಿದೆ! “ಹರ್ಷಭರಿತ ಸ್ತುತಿಗಾರರು” ಅಧಿವೇಶನಗಳಲ್ಲಿ ಕೂಡಿಬಂದ ನೂರಾರು ಸಾವಿರ ಯೆಹೋವನ ಸಾಕ್ಷಿಗಳು ಈ 192 ಪುಟದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಹೊಸ ಪುಸ್ತಕವನ್ನು ಪಡೆದುಕೊಳ್ಳಲು ಸಂತೋಷಪಟ್ಟರು.
16 ಈ ಜ್ಞಾನ ಪುಸ್ತಕದಲ್ಲಿ ಜಾಗರೂಕತೆಯಿಂದ ಅಂತಿಮ ರೂಪದಲ್ಲಿ ಹಾಕಲ್ಪಟ್ಟ ಮಾಹಿತಿಯನ್ನು ವಿವಿಧ ದೇಶಗಳಲ್ಲಿನ ಲೇಖಕರು ತಯಾರಿಸಿದರು. ಆದುದರಿಂದ ಅದಕ್ಕೆ ಅಂತಾರಾಷ್ಟ್ರೀಯ ಆಕರ್ಷಣೆ ಇರಲೇಬೇಕು. ಆದರೆ ಲೋಕಾದ್ಯಂತವಾಗಿ ಇರುವ ಜನರ ಭಾಷೆಗಳಲ್ಲಿ ಈ ಹೊಸ ಪ್ರಕಾಶನದ ಬಿಡುಗಡೆಗೆ ಮುಂಚೆ ತುಂಬ ಸಮಯ ಹಿಡಿಯುವುದೋ? ಇಲ್ಲ, ಯಾಕೆಂದರೆ 192 ಪುಟದ ಪುಸ್ತಕವನ್ನು ದೊಡ್ಡ ಪುಸ್ತಕಗಳಿಗಿಂತ ಹೆಚ್ಚು ಬೇಗನೆ ಭಾಷಾಂತರಿಸಸಾಧ್ಯವಿದೆ. ಅಕ್ಟೋಬರ್ 1995ರೊಳಗೆ, ಆಡಳಿತ ಮಂಡಲಿಯ ಬರವಣಿಗೆಯ ಕಮಿಟಿಯು, ಈ ಪುಸ್ತಕವನ್ನು ಇಂಗ್ಲಿಷ್ ಭಾಷೆಯಿಂದ 130ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರಿಸಲು ಒಪ್ಪಿಗೆಯನ್ನಿತ್ತಿತ್ತು.
17. ಯಾವ ಅಂಶಗಳು ಜ್ಞಾನ ಪುಸ್ತಕವನ್ನು ಉಪಯೋಗಿಸಲು ಸುಲಭವನ್ನಾಗಿ ಮಾಡಬೇಕು?
17 ಈ ಜ್ಞಾನ ಪುಸ್ತಕದ ಪ್ರತಿಯೊಂದು ಅಧ್ಯಾಯದಲ್ಲಿನ ವಿಶಿಷ್ಟ ಮಾಹಿತಿಗಳು ವಿದ್ಯಾರ್ಥಿಗಳನ್ನು ಸಾಧಾರಣ ತೀವ್ರಗತಿಯ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಶಕ್ತಗೊಳಿಸಬೇಕು. ಶಾಸ್ತ್ರೀಯ ಸತ್ಯಗಳನ್ನು ಈ ಪುಸ್ತಕವು ಒಂದು ಭಕ್ತಿವರ್ಧಕ ರೀತಿಯಲ್ಲಿ ಸಾದರಪಡಿಸುತ್ತದೆ. ಅದು ಸುಳ್ಳು ಬೋಧನೆಗಳಿಗೆ ವಿಸ್ತಾರ ಗಮನಕೊಡುವುದಿಲ್ಲ. ಭಾಷಾ ಸ್ಪಷ್ಟತೆ ಮತ್ತು ತರ್ಕಬದ್ಧ ವಿಕಸನೆಯು ಈ ಪುಸ್ತಕವನ್ನು ಬೈಬಲ್ ಅಧ್ಯಯನ ನಡಸಲು ಮತ್ತು ಜನರು ದೇವರ ಜ್ಞಾನವನ್ನು ಗ್ರಹಿಸಿಕೊಳ್ಳುವಂತೆ ನೆರವಾಗಲು ಸುಲಭವನ್ನಾಗಿ ಮಾಡಬೇಕು. ಉದ್ಧರಿತ ವಚನಗಳಲ್ಲದೆ, ಚರ್ಚೆಗಾಗಿ ತಯಾರಿಯಲ್ಲಿ ವಿದ್ಯಾರ್ಥಿಯು ತೆರೆದು ನೋಡಬಲ್ಲ ಉದಾಹರಿಸಲ್ಪಟ್ಟ ಬೈಬಲ್ ವಚನಗಳೂ ಅದರಲ್ಲಿವೆ. ಇವನ್ನು ಅಧ್ಯಯನದ ಸಮಯದಲ್ಲಿ, ಸಮಯವು ಅನುಮತಿಸುವಂತೆ, ಓದಬಹುದು. ಆದರೂ ಮುಖ್ಯ ವಿಷಯಗಳನ್ನು ಮಬ್ಬುಗೊಳಿಸಬಲ್ಲ ಅಧಿಕ ಸಮಾಚಾರವನ್ನು ಒಳತರುವುದು ಸೂಕ್ತವಲ್ಲ. ಬದಲಿಗೆ, ಬೈಬಲ್ ಅಧ್ಯಯನ ನಡಿಸುವವರು ವಿದ್ಯಾರ್ಥಿಗೆ, ಪುಸ್ತಕವು ಪ್ರತಿಯೊಂದು ಅಧ್ಯಾಯದಲ್ಲಿ ಏನನ್ನು ಸಿದ್ಧಪಡಿಸುತ್ತದೋ ಅದನ್ನು ವಿವೇಚಿಸಿ ತಿಳಿಯಪಡಿಸಲು ಪ್ರಯತ್ನಿಸಬೇಕು. ಮುಖ್ಯ ವಿಚಾರಗಳು ತನ್ನ ಮನಸ್ಸಿನಲ್ಲಿ ಅತಿ ಸ್ಪಷ್ಟವಾಗಿ ಇರುವಂತೆ, ಕಲಿಸುವವನು ಸಹ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕೆಂದೇ ಇದರ ಅರ್ಥ.
18. ಜ್ಞಾನ ಪುಸ್ತಕದ ಉಪಯೋಗದ ಕುರಿತು ಯಾವ ಸೂಚನೆಗಳನ್ನು ನೀಡಲಾಗಿದೆ?
18 ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು ಶಿಷ್ಯರನ್ನಾಗಿ ಮಾಡುವ ಕಾರ್ಯವನ್ನು ಹೇಗೆ ತ್ವರೆಗೊಳಿಸಬಲ್ಲದು? ಈ 192 ಪುಟದ ಪುಸ್ತಕವನ್ನು ತುಲನಾತ್ಮಕವಾಗಿ ಕೊಂಚ ಸಮಯದೊಳಗೆ ಅಭ್ಯಾಸಿಸಸಾಧ್ಯವಿದೆ ಮತ್ತು “ನಿತ್ಯ ಜೀವಕ್ಕಾಗಿ ಯೋಗ್ಯ ಪ್ರವೃತಿಯುಳ್ಳ”ವರು ಅದರ ಅಧ್ಯಯನದ ಮೂಲಕ ಸಾಕಷ್ಟನ್ನು ಕಲಿತು ಯೆಹೋವನಿಗೆ ಸಮರ್ಪಣೆಯನ್ನು ಮಾಡಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಶಕ್ತರಾಗಬೇಕು. (ಅ. ಕೃತ್ಯಗಳು 13:48, NW) ಆದುದರಿಂದ ನಾವು ಜ್ಞಾನ ಪುಸ್ತಕವನ್ನು ಶುಶ್ರೂಷೆಯಲ್ಲಿ ಸದುಪಯೋಗಕ್ಕೆ ಹಾಕೋಣ. ಬೈಬಲ್ ವಿದ್ಯಾರ್ಥಿಯು ಇನ್ನೊಂದು ಪುಸ್ತಕದ ಹೆಚ್ಚು ಭಾಗವನ್ನು ಅಭ್ಯಾಸಮಾಡಿದ್ದರೆ, ಅದನ್ನು ಮುಗಿಸುವುದು ಪ್ರಾಯೋಗಿಕವಾಗಬಹುದು. ಇಲ್ಲವಾದರೆ, ಬೈಬಲ್ ಅಧ್ಯಯನಗಳನ್ನು ಜ್ಞಾನ ಪುಸ್ತಕಕ್ಕೆ ತಿರುಗಿಸುವಂತೆ ಸೂಚಿಸಲಾಗುತ್ತದೆ. ಈ ಹೊಸ ಪುಸ್ತಕವನ್ನು ಮುಗಿಸಿದ ಬಳಿಕ, ಅದೇ ವಿದ್ಯಾರ್ಥಿಯೊಂದಿಗೆ ಎರಡನೆಯ ಪುಸ್ತಕದಲ್ಲಿ ಒಂದು ಅಭ್ಯಾಸ ನಡಸಲ್ಪಡಬೇಕೆಂದು ಸೂಚಿಸಲಾಗುವುದಿಲ್ಲ. ಸತ್ಯವನ್ನು ಸ್ವೀಕರಿಸುವವರು ತಮ್ಮ ಜ್ಞಾನವನ್ನು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುವ ಮೂಲಕ ಹಾಗೂ ಬೈಬಲನ್ನೂ ಹಲವಾರು ಕ್ರೈಸ್ತ ಪ್ರಕಾಶನಗಳನ್ನೂ ಓದುವ ಮೂಲಕ ತಾವೇ ಪೂರ್ಣತೆಗೆ ತರಬಹುದು.—2 ಯೋಹಾನ 1.
19. ಜ್ಞಾನ ಪುಸ್ತಕದಲ್ಲಿ ಬೈಬಲ್ ಅಧ್ಯಯನಗಳನ್ನು ನಡಸುವ ಮೊದಲು, ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 175ರಿಂದ 218 ಪುಟಗಳನ್ನು ಪರಾಮರ್ಶಿಸುವುದು ಯಾಕೆ ಸಹಾಯಕರವಾಗಿರುವುದು?
19 ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಅಪೇಕ್ಷಿಸುವ ಅಸ್ನಾತ ಪ್ರಚಾರಕರೊಂದಿಗೆ ಹಿರಿಯರು ಪುನರ್ವಿಮರ್ಶಿಸುವ ಎಲ್ಲ ಪ್ರಶ್ನೆಗಳನ್ನು ಉತ್ತರಿಸಲು ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುವ ಹೇತುವಿನಿಂದ ಜ್ಞಾನ ಪುಸ್ತಕವು ಬರೆಯಲ್ಪಟ್ಟಿದೆ. ಆದುದರಿಂದ, ನಿಮ್ಮ ಸದ್ಯದ ಬೈಬಲ್ ಅಧ್ಯಯನಗಳನ್ನು ಈ ಹೊಸ ಪ್ರಕಾಶನಕ್ಕೆ ತಿರುಗಿಸುವ ಮೊದಲು, ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 175ರಿಂದ 218 ಪುಟಗಳಲ್ಲಿರುವ ಪ್ರಶ್ನೆಗಳನ್ನು ಪರಾಮರ್ಶಿಸಲು ನೀವು ಕೆಲವು ತಾಸುಗಳನ್ನು ಕಳೆಯುವಂತೆ ಶಿಫಾರಸ್ಸು ಮಾಡಲಾಗಿದೆ.a ಇದು ಜ್ಞಾನ ಪುಸ್ತಕದ ಬೈಬಲ್ ಅಧ್ಯಯನಗಳ ಸಮಯದಲ್ಲಿ ಅಂತಹ ಪ್ರಶ್ನೆಗಳ ಉತ್ತರಗಳಿಗೆ ಒತ್ತನ್ನು ಹಾಕುವಂತೆ ನಿಮಗೆ ನೆರವಾಗುವುದು.
20. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದೊಂದಿಗೆ ಏನು ಮಾಡಲು ನೀವು ಯೋಜಿಸುತ್ತೀರಿ?
20 ಎಲ್ಲೆಲ್ಲೂ ಇರುವ ಜನರು ಸುವಾರ್ತೆಯನ್ನು ಕೇಳಬೇಕು. ಹೌದು, ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆ, ಮತ್ತು ಅದನ್ನು ತಿಳಿಯಪಡಿಸಲು ಯೆಹೋವನಿಗೆ ತನ್ನ ಸಾಕ್ಷಿಗಳಿದ್ದಾರೆ. ಈಗ ನಮಗೆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಮೂಲಕವಾಗಿ ಒದಗಿಸಿದ ಒಂದು ಹೊಸ ಪುಸ್ತಕವಿದೆ. ಸತ್ಯವನ್ನು ಕಲಿಸಲು ಮತ್ತು ಯೆಹೋವನ ಪವಿತ್ರ ನಾಮಕ್ಕೆ ಗೌರವವನ್ನು ತರಲು ನೀವು ಅದನ್ನು ಉಪಯೋಗಿಸುವಿರೋ? ನಿತ್ಯಜೀವಕ್ಕೆ ನಡಸುವ ಆ ಜ್ಞಾನವು ಅನೇಕರಿಗೆ ದೊರಕುವಂತೆ ನೀವು ಸರ್ವ ಪ್ರಯತ್ನವನ್ನು ಮಾಡುವಾಗ ಯೆಹೋವನು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುವನು.
[ಪಾದಟಿಪ್ಪಣಿ]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
ನೀವು ಹೇಗೆ ಉತ್ತರಿಸುವಿರಿ?
◻ ಸಾಂಕೇತಿಕ ಹೃದಯವನ್ನು ನೀವು ಹೇಗೆ ಬಣ್ಣಿಸುವಿರಿ?
◻ ದೇವರ ಜ್ಞಾನವೆಂದರೇನು?
◻ ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆಯೇಕೆ?
◻ ಯಾವ ಹೊಸ ಪುಸ್ತಕ ಲಭ್ಯವಿದೆ, ಮತ್ತು ಅದನ್ನು ಹೇಗೆ ಉಪಯೋಗಿಸಲು ನೀವು ಯೋಜಿಸುತ್ತೀರಿ?
[ಪುಟ 10 ರಲ್ಲಿರುವ ಚಿತ್ರ]
ಭೂಮಿಯ ನೂರಾರು ಕೋಟಿ ಜನರಿಗೆ ದೇವರ ಜ್ಞಾನದ ಅಗತ್ಯವಿದೆ ಏಕೆಂಬುದಕ್ಕೆ ಅನೇಕ ಕಾರಣಗಳಿವೆ