ಹಿರಿಯರೇ ಹೊರೆಯನ್ನು ಹೊತ್ತುಕೊಳ್ಳಲಿಕ್ಕಾಗಿ ಇತರರಿಗೆ ತರಬೇತಿ ನೀಡಿರಿ
ಲೋಕವ್ಯಾಪಕವಾಗಿ ಇರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ, ಮೇಲ್ವಿಚಾರಣೆಯ ಸ್ಥಾನಗಳಲ್ಲಿ ಸೇವೆಸಲ್ಲಿಸಬಹುದಾದ ಪುರುಷರ ಆವಶ್ಯಕತೆ ಬಹಳಷ್ಟಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ.
ಮೊದಲ ಕಾರಣವೇನೆಂದರೆ, “ಅಲ್ಪನಿಂದ ಬಲವಾದ ಜನಾಂಗ”ವನ್ನು ಮಾಡುವ ತನ್ನ ವಾಗ್ದಾನವನ್ನು ಯೆಹೋವನು ಪೂರೈಸುತ್ತಾ ಇದ್ದಾನೆ. (ಯೆಶಾಯ 60:22) ಆತನ ಅಪಾತ್ರ ಕೃಪೆಯಿಂದಾಗಿ, ಕಳೆದ ಮೂರು ವರ್ಷಗಳಲ್ಲಿ ಬಹುಮಟ್ಟಿಗೆ ಹತ್ತು ಲಕ್ಷ ಹೊಸ ಶಿಷ್ಯರು ದೀಕ್ಷಾಸ್ನಾನ ಪಡೆದುಕೊಂಡು ಯೆಹೋವನ ಸಾಕ್ಷಿಗಳಾಗಿದ್ದಾರೆ. ಈ ಹೊಸಬರು ಕ್ರೈಸ್ತ ಪ್ರೌಢತೆಗೆ ಪ್ರಗತಿಮಾಡುವಂತೆ ಸಹಾಯಮಾಡಲು ಜವಾಬ್ದಾರಿಯುತ ಪುರುಷರ ಅಗತ್ಯವಿದೆ.—ಇಬ್ರಿಯ 6:1, 2.
ಎರಡನೆಯ ಕಾರಣವೇನೆಂದರೆ, ಅನೇಕ ದಶಕಗಳಿಂದ ಸೇವೆಸಲ್ಲಿಸಿರುವ ಹಿರಿಯರು ವೃದ್ಧರಾಗುತ್ತಿರುವುದರಿಂದ ಅಥವಾ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಿರುವುದರಿಂದ, ಅವರು ಸಭೆಯಲ್ಲಿ ಹೊರುತ್ತಿದ್ದ ಕೆಲಸದ ಹೊರೆಯನ್ನು ಕಡಿಮೆಗೊಳಿಸುವಂತೆ ಒತ್ತಾಯಿಸಲ್ಪಟ್ಟಿದ್ದಾರೆ.
ಮೂರನೆಯ ಕಾರಣವೇನೆಂದರೆ, ಹುರುಪಿನ ಅನೇಕ ಮಂದಿ ಕ್ರೈಸ್ತ ಹಿರಿಯರು ಈಗ, ಹಾಸ್ಪಿಟಲ್ ಲಿಯಾಸನ್ ಕಮಿಟಿಗಳಲ್ಲಿ, ರೀಜನಲ್ ಬಿಲ್ಡಿಂಗ್ ಕಮಿಟಿಗಳಲ್ಲಿ ಅಥವಾ ಎಸೆಂಬ್ಲಿ ಹಾಲ್ ಕಮಿಟಿಗಳಲ್ಲಿ ಸದಸ್ಯರಾಗಿ ಕೆಲಸಮಾಡುತ್ತಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲಿಕ್ಕಾಗಿ ತಮ್ಮ ಸ್ಥಳಿಕ ಸಭೆಯಲ್ಲಿ ತಮಗಿದ್ದ ಕೆಲವೊಂದು ಜವಾಬ್ದಾರಿಗಳನ್ನು ಅವರು ಬಿಟ್ಟುಕೊಡಬೇಕಾಯಿತು.
ಹೆಚ್ಚಿನ ಅರ್ಹ ಪುರುಷರಿಗಾಗಿರುವ ಅಗತ್ಯವು ಹೇಗೆ ನೀಗಿಸಲ್ಪಡಬಹುದು? ತರಬೇತಿಗೊಳಿಸುವುದು ಮುಖ್ಯ ಕೀಲಿ ಕೈ ಆಗಿದೆ. “ಇತರರಿಗೆ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ” ತರಬೇತಿಯನ್ನು ನೀಡುವಂತೆ, ಬೈಬಲ್ ಕ್ರೈಸ್ತ ಮೇಲ್ವಿಚಾರಕರಿಗೆ ಪ್ರೋತ್ಸಾಹವನ್ನು ಕೊಡುತ್ತದೆ. (2 ತಿಮೊಥೆಯ 2:2) “ತರಬೇತಿಗೊಳಿಸು” ಎಂಬ ಕ್ರಿಯಾಪದದ ಅರ್ಥವು, ಯೋಗ್ಯರಾಗಲು, ಅರ್ಹರಾಗಲು, ನುರಿತವರಾಗಲು ಕಲಿಸುವುದೇ ಆಗಿದೆ. ಹಿರಿಯರು ಬೇರೆ ಅರ್ಹ ಪುರುಷರನ್ನು ಹೇಗೆ ತರಬೇತಿಗೊಳಿಸಬಹುದು ಎಂಬುದನ್ನು ಪರಿಗಣಿಸೋಣ.
ಯೆಹೋವನ ಮಾದರಿಯನ್ನು ಅನುಸರಿಸಿರಿ
ಯೇಸು ಕ್ರಿಸ್ತನು ಖಂಡಿತವಾಗಿಯೂ ತನ್ನ ಕೆಲಸಕ್ಕೆ ‘ಯೋಗ್ಯನೂ, ಅರ್ಹನೂ, ನುರಿತವನೂ’ ಆಗಿದ್ದನು. ಇದು ಅಚ್ಚರಿಯ ಸಂಗತಿಯೇನಲ್ಲ. ಯಾಕೆಂದರೆ ಸ್ವತಃ ಯೆಹೋವನೇ ಅವನಿಗೆ ತರಬೇತಿಯನ್ನು ನೀಡಿದ್ದನು. ಈ ತರಬೇತಿ ಕಾರ್ಯಕ್ರಮವನ್ನು ಇಷ್ಟು ಪರಿಣಾಮಕಾರಿಯಾಗಿ ಮಾಡಿದ ಅಂಶಗಳಾವುವು? ಯೋಹಾನ 5:20ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ಮೂರು ಅಂಶಗಳನ್ನು ತಿಳಿಸಿದನು: “ತಂದೆಯು ಮಗನ ಮೇಲೆ [1] ಮಮತೆಯನ್ನಿಟ್ಟು ತಾನು ಮಾಡುವವುಗಳನ್ನೆಲ್ಲಾ [2] ಅವನಿಗೆ ತೋರಿಸುತ್ತಾನೆ. ಇದಲ್ಲದೆ [3] ಇವುಗಳಿಗಿಂತ ದೊಡ್ಡ ಕೆಲಸಗಳನ್ನು ಅವನಿಗೆ ತೋರಿಸುವನು.” (ಓರೆ ಅಕ್ಷರಗಳು ನಮ್ಮವು.) ಈ ಅಂಶಗಳಲ್ಲಿ ಪ್ರತಿಯೊಂದನ್ನು ನಾವು ಪರೀಕ್ಷಿಸಿದರೆ, ತರಬೇತಿಗೊಳಿಸುವ ವಿಷಯದ ಕುರಿತು ನಮಗೆ ಒಳನೋಟವು ಸಿಗುವುದು.
‘ತಂದೆಗೆ ಮಗನ ಮೇಲೆ ಮಮತೆಯಿದೆ’ ಎಂದು ಯೇಸು ಪ್ರಥಮವಾಗಿ ಹೇಳಿದನೆಂಬುದನ್ನು ಗಮನಿಸಿರಿ. ಸೃಷ್ಟಿಯ ಆರಂಭದಿಂದಲೇ, ಯೆಹೋವನು ಮತ್ತು ಆತನ ಮಗನ ನಡುವೆ ಒಂದು ಬೆಚ್ಚಗಿನ ಬಂಧವಿತ್ತು. ಜ್ಞಾನೋಕ್ತಿ 8:30 ಆ ಸಂಬಂಧದ ಮೇಲೆ ಬೆಳಕನ್ನು ಬೀರುತ್ತದೆ: “ನಾನು [ಯೇಸು] ಆತನ [ಯೆಹೋವ ದೇವರ] ಹತ್ತಿರ ಶಿಲ್ಪಿಯಾಗಿದ್ದುಕೊಂಡು [“ಆತನು ವಿಶೇಷವಾಗಿ ಪ್ರೀತಿಸುತ್ತಿದ್ದವನೋಪಾದಿ,” NW] ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ . . . ಹರ್ಷಿಸುತ್ತಾ” ಇದ್ದೆನು. (ಓರೆ ಅಕ್ಷರಗಳು ನಮ್ಮವು.) ಯೆಹೋವನು ತನ್ನನ್ನು ‘ವಿಶೇಷವಾಗಿ ಪ್ರೀತಿಸುತ್ತಿದ್ದಾನೆ’ ಎಂಬ ವಿಷಯದಲ್ಲಿ ಯೇಸುವಿನ ಮನಸ್ಸಿನಲ್ಲಿ ಸ್ವಲ್ಪವೂ ಶಂಕೆಯಿರಲಿಲ್ಲ. ಮತ್ತು ತನ್ನ ತಂದೆಯ ಪಕ್ಕದಲ್ಲಿ ಕೆಲಸಮಾಡುತ್ತಿರುವಾಗ ತನಗಾಗುತ್ತಿದ್ದ ಆನಂದವನ್ನು ಯೇಸು ಅಡಗಿಸಿಡಲಿಲ್ಲ. ಕ್ರೈಸ್ತ ಹಿರಿಯರು ಮತ್ತು ಯಾರಿಗೆ ಅವರು ತರಬೇತಿ ನೀಡುತ್ತಿದ್ದಾರೋ ಅವರ ನಡುವೆ ಒಂದು ಬೆಚ್ಚಗಿನ, ಮುಚ್ಚುಮರೆಯಿಲ್ಲದ ಸಂಬಂಧವಿರುವುದು ಎಷ್ಟು ಒಳ್ಳೇದು!
ಯೇಸು ತಿಳಿಸಿದಂಥ ಎರಡನೆಯ ಅಂಶವೇನೆಂದರೆ, ತಂದೆಯು “ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ.” ಈ ಮಾತುಗಳು ಜ್ಞಾನೋಕ್ತಿ 8:30ರಲ್ಲಿರುವ ವಿಷಯವನ್ನು ದೃಢೀಕರಿಸುತ್ತವೆ. ಅದೇನೆಂದರೆ, ಈ ವಿಶ್ವವು ಸೃಷ್ಟಿಸಲ್ಪಡುತ್ತಿದ್ದಾಗ ಯೇಸು ಯೆಹೋವನ ‘ಹತ್ತಿರವಿದ್ದನು.’ (ಆದಿಕಾಂಡ 1:26) ಈ ಅತ್ಯುತ್ಕೃಷ್ಟವಾದ ಮಾದರಿಯನ್ನು ಹಿರಿಯರು, ಶುಶ್ರೂಷಾ ಸೇವಕರೊಂದಿಗೆ ನಿಕಟವಾಗಿ ಕೆಲಸಮಾಡುತ್ತಾ, ಅವರು ತಮ್ಮ ಕರ್ತವ್ಯಗಳನ್ನು ಉತ್ತಮವಾದ ರೀತಿಯಲ್ಲಿ ನಿರ್ವಹಿಸಬಹುದಾದ ವಿಧವನ್ನು ತೋರಿಸುವ ಮೂಲಕ ಅನುಸರಿಸಬಲ್ಲರು. ಹೊಸದಾಗಿ ನೇಮಿಸಲ್ಪಟ್ಟಿರುವ ಶುಶ್ರೂಷಾ ಸೇವಕರಿಗೆ ಮಾತ್ರ ಅಂಥ ಪ್ರಗತಿಪರ ತರಬೇತಿಯ ಅಗತ್ಯವಿದೆ ಎಂದಲ್ಲ. ಅನೇಕ ವರ್ಷಗಳಿಂದ ಮೇಲ್ವಿಚಾರಕರಾಗಲು ಪ್ರಯತ್ನಿಸುತ್ತಿದ್ದು, ಈ ವರೆಗೂ ನೇಮಕವನ್ನು ಪಡೆಯದಿರುವಂಥ ನಂಬಿಗಸ್ತ ಸಹೋದರರ ಕುರಿತಾಗಿ ಏನು? (1 ತಿಮೊಥೆಯ 3:1) ಈ ಪುರುಷರು ಯಾವ ಕ್ಷೇತ್ರಗಳಲ್ಲಿ ಅಭಿವೃದ್ಧಿಮಾಡಬೇಕೆಂಬುದನ್ನು ತಿಳಿದುಕೊಳ್ಳುವಂತೆ ಹಿರಿಯರು ಅವರಿಗೆ ಸ್ಪಷ್ಟವಾದ ಸಲಹೆಯನ್ನು ಕೊಡಬೇಕು.
ಉದಾಹರಣೆಗಾಗಿ, ಒಬ್ಬ ಶುಶ್ರೂಷಾ ಸೇವಕನು ತನ್ನ ಕರ್ತವ್ಯಗಳನ್ನು ಪೂರೈಸುವ ವಿಷಯದಲ್ಲಿ ಭರವಸಾರ್ಹನು, ಸಮಯನಿಷ್ಠನು ಮತ್ತು ಶ್ರದ್ಧೆಯುಳ್ಳವನಾಗಿರಬಹುದು. ಅವನೊಬ್ಬ ಒಳ್ಳೆಯ ಶಿಕ್ಷಕನೂ ಆಗಿರಬಹುದು. ಸಭೆಯಲ್ಲಿ ಅವನು ಅನೇಕ ವಿಧಗಳಲ್ಲಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿರಬಹುದು. ಆದರೆ ಜೊತೆ ಕ್ರೈಸ್ತರೊಂದಿಗೆ ಅವನು ಒರಟಾಗಿ ವರ್ತಿಸುತ್ತಿರುವುದನ್ನು ಅವನು ಗ್ರಹಿಸಿರಲಿಕ್ಕಿಲ್ಲ. “ಜ್ಞಾನದ ಲಕ್ಷಣವಾಗಿರುವ ಶಾಂತಗುಣ”ವನ್ನು ಹಿರಿಯರು ತೋರಿಸುವ ಅಗತ್ಯವಿದೆ. (ಯಾಕೋಬ 3:13) ಒಬ್ಬ ಹಿರಿಯನು ಆ ಶುಶ್ರೂಷಾ ಸೇವಕನೊಂದಿಗೆ ಮಾತಾಡಿ, ನಿರ್ದಿಷ್ಟ ಉದಾಹರಣೆಗಳನ್ನು ಕೊಟ್ಟು ಸಮಸ್ಯೆಯನ್ನು ಸ್ಪಷ್ಟವಾಗಿ ತಿಳಿಸಿ, ಸುಧಾರಣೆಗಾಗಿ ವ್ಯಾವಹಾರಿಕ ಸಲಹೆಯನ್ನು ಕೊಡುವುದು ದಯಾಪೂರ್ವಕ ಸಂಗತಿಯಲ್ಲವೊ? ಹಿರಿಯನು ‘ತನ್ನ ಸಲಹೆಗೆ ಉಪ್ಪನ್ನು ಕೂಡಿಸಿದರೆ’ ಅವನ ಹೇಳಿಕೆಗಳನ್ನು ಆ ಸಹೋದರನು ಸಂತೋಷದಿಂದ ಸ್ವೀಕರಿಸಬಹುದು. (ಕೊಲೊಸ್ಸೆ 4:6, NW) ಆದರೆ ಶುಶ್ರೂಷಾ ಸೇವಕನು ಕಿವಿಗೊಡಲು ಸಿದ್ಧನೂ, ತನಗೆ ಸಿಗುವ ಯಾವುದೇ ಸಲಹೆಗೆ ಸ್ಪಂದಿಸುವವನೂ ಆಗಿರುವ ಮೂಲಕ, ಆ ಸಲಹೆಯನ್ನು ನೀಡುವ ಹಿರಿಯನ ಕೆಲಸವನ್ನು ಇನ್ನೂ ಸಂತೋಷದಾಯಕವಾಗಿ ಮಾಡುವನೆಂಬುದು ಖಂಡಿತ.—ಕೀರ್ತನೆ 141:5.
ಕೆಲವೊಂದು ಸಭೆಗಳಲ್ಲಿ ಹಿರಿಯರು ಶುಶ್ರೂಷಾ ಸೇವಕರಿಗೆ ವ್ಯಾವಹಾರಿಕವಾದ, ಮುಂದುವರಿಯುವ ತರಬೇತಿಯನ್ನು ಕೊಡುತ್ತಾ ಇದ್ದಾರೆ. ಉದಾಹರಣೆಗಾಗಿ, ಅಸ್ವಸ್ಥರನ್ನು ಇಲ್ಲವೇ ವೃದ್ಧರನ್ನು ಭೇಟಿಯಾಗಲು ಹೋಗುವಾಗ ಅವರು ತಮ್ಮೊಂದಿಗೆ ಅರ್ಹರಾದ ಶುಶ್ರೂಷಾ ಸೇವಕರನ್ನು ಕರೆದುಕೊಂಡು ಹೋಗುತ್ತಾರೆ. ಈ ರೀತಿಯಲ್ಲಿ, ಶುಶ್ರೂಷಾ ಸೇವಕರು ಕುರಿಪಾಲನಾ ಕೆಲಸದಲ್ಲಿ ಅನುಭವವನ್ನು ಪಡೆದುಕೊಳ್ಳುತ್ತಾರೆ. ಆದರೆ, ಒಬ್ಬ ಶುಶ್ರೂಷಾ ಸೇವಕನು, ತನ್ನ ಸ್ವಂತ ಆತ್ಮಿಕ ಪ್ರಗತಿಯನ್ನು ಹೆಚ್ಚಿಸಲು ತಾನಾಗಿಯೇ ಮಾಡಬಲ್ಲ ಅನೇಕ ವಿಷಯಗಳಿವೆ ಎಂಬುದು ಸತ್ಯ.—ಕೆಳಗೆ ಕೊಡಲ್ಪಟ್ಟಿರುವ, “ಶುಶ್ರೂಷಾ ಸೇವಕರು ಏನು ಮಾಡಬಲ್ಲರು?” ಎಂಬ ಶೀರ್ಷಿಕೆಯುಳ್ಳ ರೇಖಾಚೌಕವನ್ನು ನೋಡಿರಿ.
ಯೇಸುವಿನ ತರಬೇತಿಯನ್ನು ಪರಿಣಾಮಕಾರಿಯಾಗಿ ಮಾಡಿದ ಮೂರನೆಯ ಅಂಶವೇನೆಂದರೆ, ಮುಂದಿನ ಪ್ರಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಯೆಹೋವನು ಅವನನ್ನು ತರಬೇತಿಗೊಳಿಸಿದನು. ತಂದೆಯು “ಇವುಗಳಿಗಿಂತ ದೊಡ್ಡ ಕೆಲಸಗಳನ್ನು” ಮಗನಿಗೆ ತೋರಿಸುವನೆಂದು ಯೇಸು ಹೇಳಿದನು. ಭೂಮಿಯ ಮೇಲಿದ್ದಾಗ ಯೇಸು ಪಡೆದುಕೊಂಡಂಥ ಅನುಭವವು, ಅವನು ತನ್ನ ಭವಿಷ್ಯತ್ತಿನ ನೇಮಕಗಳನ್ನು ಪೂರೈಸಲಿಕ್ಕಾಗಿ ಅಗತ್ಯವಿರುವ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವನನ್ನು ಶಕ್ತಗೊಳಿಸಿತು. (ಇಬ್ರಿಯ 4:15; 5:8, 9) ಉದಾಹರಣೆಗಾಗಿ, ಈಗ ಮೃತರಾಗಿರುವ ಕೋಟ್ಯಾನುಕೋಟಿ ಜನರನ್ನು ಉಜ್ಜೀವಿಸಿ, ಅವರಿಗೆ ನ್ಯಾಯತೀರ್ಪು ನೀಡುವ ಎಂಥ ಭಾರಿ ನೇಮಕ ಯೇಸುವಿಗೆ ಬೇಗನೆ ಸಿಗಲಿದೆ!—ಯೋಹಾನ 5:21, 22.
ಶುಶ್ರೂಷಾ ಸೇವಕರನ್ನು ತರಬೇತಿಗೊಳಿಸುವಾಗ, ಇಂದಿನ ಹಿರಿಯರು ಭವಿಷ್ಯತ್ತಿನ ಅಗತ್ಯಗಳನ್ನು ಮನಸ್ಸಿನಲ್ಲಿಡಬೇಕು. ಸದ್ಯದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಮಂದಿ ಹಿರಿಯರು ಮತ್ತು ಶುಶ್ರೂಷಾ ಸೇವಕರು ಇರಬಹುದಾದರೂ, ಒಂದು ವೇಳೆ ಹೊಸ ಸಭೆಯೊಂದು ಸ್ಥಾಪಿಸಲ್ಪಟ್ಟರೆ ಸಾಕಷ್ಟು ಹಿರಿಯರು ಮತ್ತು ಶುಶ್ರೂಷಾ ಸೇವಕರು ಇರುವರೊ? ಒಂದುವೇಳೆ ಹಲವಾರು ಹೊಸ ಸಭೆಗಳು ರಚಿಸಲ್ಪಟ್ಟರೆ ಆಗೇನು? ಕಳೆದ ಮೂರು ವರ್ಷಗಳಿಂದ 6,000ಕ್ಕಿಂತಲೂ ಹೆಚ್ಚು ಹೊಸ ಸಭೆಗಳು ಲೋಕವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆ ಹೊಸ ಸಭೆಗಳನ್ನು ಪರಾಮರಿಸಲಿಕ್ಕಾಗಿ ಎಷ್ಟೊಂದು ದೊಡ್ಡ ಸಂಖ್ಯೆಯ ಹಿರಿಯರು ಮತ್ತು ಶುಶ್ರೂಷಾ ಸೇವಕರ ಅಗತ್ಯವಿದೆ!
ಹಿರಿಯರೇ, ನೀವು ಯಾರಿಗೆ ತರಬೇತಿಯನ್ನು ನೀಡುತ್ತಾ ಇದ್ದೀರೊ ಆ ಪುರುಷರೊಂದಿಗೆ ಒಂದು ಬೆಚ್ಚಗಿನ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ ನೀವು ಯೆಹೋವನ ಮಾದರಿಯನ್ನು ಅನುಸರಿಸುತ್ತಿದ್ದೀರೊ? ಅವರು ತಮ್ಮ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ನೀವು ತೋರಿಸುತ್ತಿದ್ದೀರೊ? ಭವಿಷ್ಯತ್ತಿನ ಅಗತ್ಯಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಂಡಿದ್ದೀರೊ? ಯೇಸುವನ್ನು ತರಬೇತಿಗೊಳಿಸಿದ ಯೆಹೋವನ ಮಾದರಿಯನ್ನು ಅನುಸರಿಸುವುದರಿಂದ ಅನೇಕರಿಗೆ ಹೇರಳ ಆಶೀರ್ವಾದಗಳು ಸಿಗುವವು.
ಜವಾಬ್ದಾರಿಯನ್ನು ವಹಿಸಿಕೊಡಲು ಹೆದರಬೇಡಿ
ಬಹಳಷ್ಟು ದೊಡ್ಡ ನೇಮಕಗಳನ್ನು ನಿರ್ವಹಿಸುವ ರೂಢಿಯಾಗಿಬಿಟ್ಟಿರುವ ಸಮರ್ಥ ಹಿರಿಯರು, ಇತರರಿಗೆ ಕೆಲವೊಂದು ಜವಾಬ್ದಾರಿಗಳನ್ನು ವಹಿಸಿಕೊಡಲು ಸ್ವಲ್ಪ ಹಿಂದೆಮುಂದೆ ನೋಡಬಹುದು. ಏಕೆಂದರೆ ಅವರದನ್ನು ಹಿಂದೆ ಮಾಡಲು ಪ್ರಯತ್ನಿಸಿದ್ದರೂ, ಅದರಿಂದ ಸಿಕ್ಕಿದಂಥ ಫಲಿತಾಂಶಗಳು ತೃಪ್ತಿದಾಯಕವಾಗಿರದೇ ಇದ್ದಿರಬಹುದು. ಆದುದರಿಂದ, ‘ನನ್ನ ಯಾವುದೇ ಕೆಲಸವು ಸರಿಯಾಗಿ ಆಗಬೇಕಾದರೆ, ಅದನ್ನು ನಾನೇ ಮಾಡಿದರೆ ಒಳ್ಳೇದು’ ಎಂಬ ಮನೋಭಾವವನ್ನು ಅವರು ತಾಳಬಹುದು. ಆದರೆ ಈ ಮನೋಭಾವವು, ಕಡಿಮೆ ಅನುಭವವುಳ್ಳ ಪುರುಷರು ಹೆಚ್ಚು ಅನುಭವೀ ಪುರುಷರಿಂದ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ಶಾಸ್ತ್ರವಚನಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಯೆಹೋವನ ಚಿತ್ತದೊಂದಿಗೆ ಹೊಂದಿಕೆಯಲ್ಲಿದೆಯೊ?—2 ತಿಮೊಥೆಯ 2:2.
ಅಪೊಸ್ತಲ ಪೌಲನ ಪ್ರಯಾಣ ಸಂಗಾತಿಗಳಲ್ಲಿ ಒಬ್ಬನಾಗಿದ್ದ ಮಾರ್ಕನು, ಪಂಫುಲ್ಯದಲ್ಲಿ ತನ್ನ ನೇಮಕವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ಹಿಂದಿರುಗಿದಾಗ ಪೌಲನಿಗೆ ತುಂಬ ನಿರಾಶೆಯಾಯಿತು. (ಅ. ಕೃತ್ಯಗಳು 15:38, 39) ಆದರೆ ಈ ನಿರುತ್ತೇಜನವು, ಇತರರನ್ನು ತರಬೇತಿಗೊಳಿಸುವುದರಿಂದ ತನ್ನನ್ನು ತಡೆಯುವಂತೆ ಪೌಲನು ಬಿಡಲಿಲ್ಲ. ಅವನು ತಿಮೊಥೆಯನೆಂಬ ಇನ್ನೊಬ್ಬ ಸಹೋದರನನ್ನು ಆರಿಸಿಕೊಂಡು, ಅವನನ್ನು ಮಿಷನೆರಿ ಕೆಲಸದಲ್ಲಿ ತರಬೇತಿಗೊಳಿಸಿದನು.a (ಅ. ಕೃತ್ಯಗಳು 16:1-3) ಬೆರೋಯದಲ್ಲಿ ಆ ಮಿಷನೆರಿಗಳು ಎಷ್ಟು ತೀವ್ರವಾದ ವಿರೋಧವನ್ನು ಎದುರಿಸಿದರೆಂದರೆ, ಅಲ್ಲಿಯೇ ಉಳಿಯುವುದು ಪ್ರಾಯೋಗಿಕವಲ್ಲವೆಂದು ಪೌಲನಿಗೆ ತೋರಿತು. ಆದುದರಿಂದ, ಅವನು ಆ ಹೊಸ ಸಭೆಯನ್ನು, ಒಬ್ಬ ಪ್ರೌಢ ಮತ್ತು ಹಿರಿಯ ಸಹೋದರನಾದ ಸೀಲ ಮತ್ತು ತಿಮೊಥೆಯರ ವಶದಲ್ಲಿ ಬಿಟ್ಟುಬಂದನು. (ಅ. ಕೃತ್ಯಗಳು 17:13-15) ತಿಮೊಥೆಯನು ಸೀಲನಿಂದ ಬಹಳಷ್ಟನ್ನು ಕಲಿತುಕೊಂಡನೆಂಬ ವಿಷಯದಲ್ಲಿ ಸಂದೇಹವೇ ಇಲ್ಲ. ತದನಂತರ ತಿಮೊಥೆಯನು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಾಗಿದ್ದಾಗ, ಥೆಸಲೊನೀಕದಲ್ಲಿದ್ದ ಸಭೆಯನ್ನು ಪ್ರೋತ್ಸಾಹಿಸಲಿಕ್ಕಾಗಿ ಪೌಲನು ಅವನನ್ನು ಅಲ್ಲಿಗೆ ಕಳುಹಿಸಿದನು.—1 ಥೆಸಲೊನೀಕ 3:1-3.
ಪೌಲ ಮತ್ತು ತಿಮೊಥೆಯರ ನಡುವಣ ಸಂಬಂಧವು, ಔಪಚಾರಿಕವೂ, ನೀರಸವೂ, ಇಲ್ಲವೇ ಭಾವರಹಿತವಾದದ್ದೂ ಆಗಿರಲಿಲ್ಲ. ಅವರ ನಡುವೆ ಒಂದು ಬೆಚ್ಚಗಿನ ಬಂಧವಿತ್ತು. ಪೌಲನು ಕೊರಿಂಥದಲ್ಲಿದ್ದ ಸಭೆಗೆ ಬರೆಯುತ್ತಿದ್ದಾಗ, ತಾನು ಅಲ್ಲಿಗೆ ಕಳುಹಿಸಲು ಯೋಜಿಸುತ್ತಿದ್ದ ತಿಮೊಥೆಯನ ಕುರಿತು, ‘ಕರ್ತನಲ್ಲಿ ತನ್ನ ಮಗನು, ನನಗೆ ಪ್ರಿಯನೂ ನಂಬಿಗಸ್ತನೂ ಆಗಿದ್ದಾನೆ’ ಎಂದು ಹೇಳಿದನು. ಅವನು ಕೂಡಿಸಿ ಹೇಳಿದ್ದು: “[ತಿಮೊಥೆಯನು] ಕ್ರಿಸ್ತನ ಸೇವೆಯಲ್ಲಿರುವ ನನ್ನ ನಡಾವಳಿಯನ್ನು [“ವಿಧಾನಗಳನ್ನು,” NW] . . . ನಿಮ್ಮ ನೆನಪಿಗೆ ತರುವನು.” (1 ಕೊರಿಂಥ 4:17, ಓರೆ ಅಕ್ಷರಗಳು ನಮ್ಮವು.) ತಿಮೊಥೆಯನು ತಾನು ಪೌಲನಿಂದ ಪಡೆದುಕೊಂಡ ತರಬೇತಿಗೆ ಸ್ಪಂದಿಸುತ್ತಾ, ತನ್ನ ನೇಮಕಗಳನ್ನು ಪೂರೈಸುವುದರಲ್ಲಿ ಅರ್ಹನಾದನು. ಪೌಲನು ತಿಮೊಥೆಯನಲ್ಲಿ ಆಸಕ್ತಿಯನ್ನು ತೋರಿಸಿದಂತೆ, ಎಷ್ಟೋ ಮಂದಿ ಯುವ ಸಹೋದರರು, ತಮ್ಮಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿದ ಚಿಂತಿತ ಹಿರೀ ಪುರುಷರಿಂದ ಪಡೆದುಕೊಂಡ ತರಬೇತಿಯ ಸದುಪಯೋಗವನ್ನು ಮಾಡಿಕೊಂಡಿರುವುದರಿಂದ, ಸಮರ್ಥ ಶುಶ್ರೂಷಾ ಸೇವಕರು, ಹಿರಿಯರು ಅಥವಾ ಸಂಚರಣಾ ಮೇಲ್ವಿಚಾರಕರೂ ಆಗಿದ್ದಾರೆ.
ಹಿರಿಯರೇ, ಇತರರಿಗೆ ತರಬೇತಿಯನ್ನು ನೀಡಿರಿ!
ಯೆಶಾಯ 60:22ರಲ್ಲಿರುವ ಪ್ರವಾದನೆಯು ಇಂದು ನೆರವೇರುತ್ತಿದೆಯೆಂಬುದು ಸುಸ್ಪಷ್ಟ. ಯೆಹೋವನು “ಅಲ್ಪನಿಂದ ಬಲವಾದ ಜನಾಂಗವನ್ನು” ಮಾಡುತ್ತಿದ್ದಾನೆ. ಆ ಜನಾಂಗವು “ಬಲ”ವಾಗಿ ಉಳಿಯಬೇಕಾದರೆ ಅದು ಸುಸಂಘಟಿತವಾಗಿರಬೇಕು. ಹಿರಿಯರೇ, ಯಾರು ತರಬೇತಿಯನ್ನು ಪಡೆಯಲು ಅರ್ಹರಾಗಿದ್ದಾರೊ ಆ ಸಮರ್ಪಿತ ಪುರುಷರಿಗೆ ಹೆಚ್ಚಿನ ತರಬೇತಿಯನ್ನು ನೀಡುವ ಮಾರ್ಗಗಳನ್ನು ನೀವು ಯಾಕೆ ಪರಿಗಣಿಸಿ ನೋಡಬಾರದು? ಪ್ರತಿಯೊಬ್ಬ ಶುಶ್ರೂಷಾ ಸೇವಕನಿಗೆ ಪ್ರಗತಿಯನ್ನು ಮಾಡಲಿಕ್ಕೋಸ್ಕರ ಯಾವ ಸುಧಾರಣೆಗಳನ್ನು ಮಾಡಬೇಕೆಂಬುದರ ಕುರಿತು ಚೆನ್ನಾಗಿ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮತ್ತು ದೀಕ್ಷಾಸ್ನಾನ ಹೊಂದಿರುವ ಸಹೋದರರೇ, ನಿಮಗೆ ಕೊಡಲಾಗುವ ಯಾವುದೇ ವೈಯಕ್ತಿಕ ಗಮನದ ಪೂರ್ಣ ಲಾಭವನ್ನು ಪಡೆದುಕೊಳ್ಳಿರಿ. ನಿಮ್ಮ ಸಾಮರ್ಥ್ಯ, ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸುವ ಅವಕಾಶಗಳ ಲಾಭವನ್ನು ಪಡೆದುಕೊಳ್ಳಿ. ಪ್ರೀತಿಪರ ನೆರವಿನ ಇಂಥ ಕಾರ್ಯಕ್ರಮವನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುವನು.—ಯೆಶಾಯ 61:5.
[ಪಾದಟಿಪ್ಪಣಿ]
a ತದನಂತರ, ಪೌಲನು ಪುನಃ ಒಮ್ಮೆ ಮಾರ್ಕನೊಂದಿಗೆ ಕೆಲಸಮಾಡಿದನು.—ಕೊಲೊಸ್ಸೆ 4:10.
[ಪುಟ 30ರಲ್ಲಿರುವ ಚೌಕ]
ಶುಶ್ರೂಷಾ ಸೇವಕರು ಏನು ಮಾಡಬಲ್ಲರು?
ಹಿರಿಯರು ಶುಶ್ರೂಷಾ ಸೇವಕರಿಗೆ ತರಬೇತಿಯನ್ನು ಕೊಡಬೇಕಾಗಿರುವುದಾದರೂ, ತಮ್ಮ ಸ್ವಂತ ಆತ್ಮಿಕ ಪ್ರಗತಿಯನ್ನು ಹೆಚ್ಚಿಸಲಿಕ್ಕಾಗಿ ಶುಶ್ರೂಷಾ ಸೇವಕರೇ ಬಹಳಷ್ಟನ್ನು ಮಾಡಬಲ್ಲರು.
—ತಮ್ಮ ನೇಮಕಗಳನ್ನು ನಿರ್ವಹಿಸುವುದರಲ್ಲಿ ಶುಶ್ರೂಷಾ ಸೇವಕರು ಶ್ರದ್ಧೆಯುಳ್ಳವರೂ, ವಿಶ್ವಾಸಾರ್ಹರೂ ಆಗಿರಬೇಕು. ಅವರು ಒಳ್ಳೇ ಅಭ್ಯಾಸದ ರೂಢಿಗಳನ್ನೂ ಬೆಳೆಸಿಕೊಳ್ಳಬೇಕು. ಸಾಧಾರಣಮಟ್ಟಿಗೆ, ಪ್ರಗತಿಯು ಅಭ್ಯಾಸದ ಮೇಲೆ ಮತ್ತು ಕಲಿತಿರುವಂಥ ವಿಷಯಗಳ ಅನ್ವಯದ ಮೇಲೆ ಅವಲಂಬಿಸಿರುತ್ತದೆ.
—ಒಬ್ಬ ಶುಶ್ರೂಷಾ ಸೇವಕನು, ಒಂದು ಕ್ರೈಸ್ತ ಕೂಟದಲ್ಲಿ ಭಾಷಣವನ್ನು ಕೊಡಲು ತಯಾರಿಸುತ್ತಿರುವಾಗ, ಆ ವಿಷಯವನ್ನು ಹೇಗೆ ಸಾದರಪಡಿಸುವುದು ಎಂಬುದರ ಬಗ್ಗೆ ಒಬ್ಬ ಸಮರ್ಥ ಹಿರಿಯನ ಸಲಹೆಗಳನ್ನು ಕೇಳಲು ಹಿಂಜರಿಯಬಾರದು.
—ತಾನು ಒಂದು ಬೈಬಲ್ ಭಾಷಣವನ್ನು ಕೊಡುವಾಗ, ತನ್ನನ್ನು ಗಮನಿಸಿ, ಅನಂತರ ಸುಧಾರಣೆಯನ್ನು ಮಾಡಲಿಕ್ಕಾಗಿ ಸಲಹೆಯನ್ನು ಕೊಡುವಂತೆಯೂ ಶುಶ್ರೂಷಾ ಸೇವಕನು ಒಬ್ಬ ಹಿರಿಯನನ್ನು ಕೇಳಿಕೊಳ್ಳಬಹುದು.
ಶುಶ್ರೂಷಾ ಸೇವಕರು ಹಿರಿಯರಿಂದ ಸಲಹೆಯನ್ನು ಕೇಳಿಕೊಳ್ಳಬೇಕು, ಅದನ್ನು ಸ್ವೀಕರಿಸಬೇಕು ಮತ್ತು ಅನ್ವಯಿಸಬೇಕು. ಈ ರೀತಿಯಲ್ಲಿ ಅವರ ಅಭಿವೃದ್ಧಿಯು “ಎಲ್ಲರಿಗೂ ಪ್ರಸಿದ್ಧವಾಗುವದು.”—1 ತಿಮೊಥೆಯ 4:15.