ಅಧ್ಯಾಯ 66
ಪರ್ಣಶಾಲೆಗಳ ಜಾತ್ರೆಯಲ್ಲಿ
ಯೇಸುವು ಅವನ ದೀಕ್ಷಾಸ್ನಾನದ ಸುಮಾರು ಮೂರು ವರ್ಷಗಳ ಸಮಯಾವಧಿಯಲ್ಲಿ ಬಹಳಷ್ಟು ಪ್ರಸಿದ್ಧಿಯಾಗಿದ್ದನು. ಅನೇಕ ಸಾವಿರ ಮಂದಿ ಅವನ ಮಹತ್ಕಾರ್ಯಗಳನ್ನು ನೋಡಿದ್ದರು ಮತ್ತು ಅವನ ಕಾರ್ಯ ಚಟುವಟಿಕೆಯ ವರದಿಗಳು ದೇಶದಲ್ಲೆಲಾ ಹರಡಿದ್ದವು. ಈಗ, ಯೆರೂಸಲೇಮಿನಲ್ಲಿ ಪರ್ಣಶಾಲೆಗಳ ಜಾತ್ರೆಗೆ ಜನರು ನೆರೆಯುತ್ತಿದ್ದಂತೆ, ಅವರು ಅವನಿಗಾಗಿ ಹುಡುಕುತ್ತಾರೆ. “ಆ ಮನುಷ್ಯನು ಎಲ್ಲಿದ್ದಾನೆ?” ಅವರು ತಿಳಿಯಲು ಬಯಸುತ್ತಿದ್ದರು.
ಯೇಸುವು ಒಂದು ವಿವಾದದ ವಸ್ತುವಿಷಯವಾದನು. “ಆತನು ಒಳ್ಳೆಯವನು,” ಕೆಲವರು ಹೇಳಿದರು. “ಅಲ್ಲ, ಜನರನ್ನು ತಪ್ಪಾದ ಮಾರ್ಗಕ್ಕೆ ಎಳೆಯುತ್ತಾನೆ,” ಇತರರು ಅಂದರು. ಜಾತ್ರೆಯ ಆರಂಭದ ದಿನಗಳಲ್ಲಿ ಅಲ್ಲಿ ಇಂತಹ ರೀತಿಯ ಗುಜುಗುಜು ಮಾತು ಬಹಳಷ್ಟು ನಡೆಯುತ್ತಿತ್ತು. ಆದರೂ ಯೇಸುವಿನ ಪರವಾಗಿ ಬಹಿರಂಗವಾಗಿ ಮಾತಾಡಲು ಯಾರಿಗೂ ಧೈರ್ಯವಿರಲಿಲ್ಲ. ಇದು ಯಾಕಂದರೆ ಯೆಹೂದ್ಯರ ಮುಖಂಡರುಗಳ ಪ್ರತೀಕಾರಕ್ಕೆ ಜನರು ಭಯ ಪಡುತ್ತಿದ್ದರು.
ಜಾತ್ರೆಯ ಮಧ್ಯಕಾಲದಲ್ಲಿ ಯೇಸುವು ಆಗಮಿಸುತ್ತಾನೆ. ಅವನು ದೇವಾಲಯಕ್ಕೆ ಹೋದನು, ಅಲ್ಲಿ ಅವನ ಅದ್ಭುತಕರವಾದ ಕಲಿಸುವ ಸಾಮರ್ಥ್ಯದಿಂದ ಜನರು ಅತ್ಯಾಶ್ಚರ್ಯ ಪಟ್ಟರು. ಯೇಸುವು ಯಾವುದೇ ರಬ್ಬಿಯರ ಶಾಲೆಗಳಿಗೆ ಎಂದೂ ಹಾಜರಾಗಿರಲಿಲ್ಲವಾದ್ದರಿಂದ, ಯೆಹೂದ್ಯರು ಅದಕ್ಕೆ ಆಶ್ಚರ್ಯ ಪಟ್ಟರು: “ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವದು ಹೇಗೆ?”
“ನಾನು ಹೇಳುವ ಬೋಧನೆಯು ನನ್ನದಲ್ಲ,” ಯೇಸುವು ವಿವರಿಸುತ್ತಾನೆ, “ನನ್ನನ್ನು ಕಳುಹಿಸಿದಾತನದು. ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು.” ಯೇಸುವಿನ ಬೋಧನೆಯು ದೇವರ ನಿಯಮಗಳಿಗೆ ಬಹಳ ನಿಕಟದಲ್ಲಿತ್ತು. ಆದಕಾರಣ, ಅವನ ತನ್ನ ಸ್ವಂತ ಮಾನಕ್ಕಾಗಿ ಅಲ್ಲ, ಬದಲು ದೇವರಿಗೆ ಮಾನಬರಬೇಕೆಂದು ಹುಡುಕುತ್ತಿದ್ದನು ಎಂಬುದು ವೇದ್ಯವಾಗುತ್ತದೆ. “ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟನು, ಅಲ್ಲವೇ?” ಯೇಸುವು ವಿಚಾರಿಸುತ್ತಾನೆ. ಗದರಿಸುವಿಕೆಯ ರೀತಿಯಲ್ಲಿ ಅವನು ಹೇಳುವದು: “ನಿಮ್ಮಲ್ಲಿ ಒಬ್ಬನಾದರೂ ಧರ್ಮಶಾಸ್ತ್ರದಂತೆ ನಡೆಯುವದಿಲ್ಲವಲ್ಲಾ.”
“ಯಾಕೆ ನನ್ನನ್ನು ಕೊಲ್ಲಲು ನೋಡುತ್ತೀರಿ?” ಯೇಸು ಅನಂತರ ಕೇಳುತ್ತಾನೆ.
ಗುಂಪಿನಲ್ಲಿದ್ದ ಜನರು, ಪ್ರಾಯಶಃ ಜಾತ್ರೆಯ ಸಂದರ್ಶಕರು, ಅಂಥಾ ಪ್ರಯತ್ನಗಳ ಕುರಿತು ಏನೂ ತಿಳಿದಿರಲಿಲ್ಲ. ಅಂಥ ಅದ್ಭುತಕರವಾದ ಬೋಧಕನನ್ನು ಕೊಲ್ಲಲು ಯಾರಾದರೂ ಬಯಸುತ್ತಾರೆಂದು ಎಣಿಸುವದೇ ಅಸಾಧ್ಯವೆಂದು ಅವರು ಪರಿಗಣಿಸುತ್ತಾರೆ. ಆದುದರಿಂದ, ಈ ರೀತಿಯಲ್ಲಿ ಯೇಸುವು ಯೋಚಿಸಿದ್ದರಿಂದ ಅವನಲ್ಲಿ ಏನೋ ಹೆಚ್ಚು ಕಡಿಮೆಯಾಗಿದೆ ಎಂದವರು ನಂಬುತ್ತಾರೆ. “ನಿನಗೆ ದೆವ್ವ ಹಿಡಿದದೆ,” ಅವರನ್ನುತ್ತಾರೆ. “ಯಾರು ನಿನ್ನನ್ನು ಕೊಲ್ಲುವದಕ್ಕೆ ನೋಡುತ್ತಾರೆ?”
ಜನಸಮೂಹಕ್ಕೆ ಇದು ತಿಳಿದಿರದಿದ್ದರೂ, ಯೆಹೂದ್ಯರ ಮುಖಂಡರುಗಳು ಯೇಸುವನ್ನು ಕೊಲ್ಲಲು ಬಯಸುತ್ತಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಯೇಸುವು ಒಬ್ಬ ಮನುಷ್ಯನನ್ನು ಸಬ್ಬತ್ ದಿನದಲ್ಲಿ ವಾಸಿಮಾಡಿದಾಗ, ಮುಖಂಡರುಗಳು ಅವನನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದುದರಿಂದ, ಅವರ ಅಸಮಂಜಸ ಯೋಚನೆಯ ಕಡೆಗೆ ಈಗ ತೋರಿಸುತ್ತಾ ಅವನು ಅವರನ್ನು ಕೇಳುವದು: “ಮೋಶೆಯ ನೇಮವನ್ನು ಮೀರಬಾರದೆಂದು ಒಬ್ಬನು ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿಸಿಕೊಳ್ಳುವದಾದರೆ, ನಾನು ಸಬ್ಬತ್ ದಿನದಲ್ಲಿ ಒಬ್ಬ ಮನುಷ್ಯನನ್ನು ಸಂಪೂರ್ಣವಾಗಿ ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ಕೋಪಗೊಳ್ಳುತ್ತೀರೋ? ಕಣ್ಣಿಗೆ ತೋರಿದರ್ದ ಮೇಲೆ ತೀರ್ಪು ಮಾಡಬೇಡಿರಿ; ನ್ಯಾಯವಾದ ತೀರ್ಪು ಮಾಡಿರಿ.”
ಯೆರೂಸಲೇಮಿನ ನಿವಾಸಿಗಳು ಪರಿಸ್ಥಿತಯ ಅರುಹು ಉಳ್ಳವರಾಗಿ, ಈಗ ಹೇಳುವದು: “ಇವನನ್ನಲ್ಲವೇ ಅವರು ಕೊಲ್ಲಬೇಕೆಂದಿರುವದು? ನೋಡಿರಿ, ಇವನು ಧಾರಾಳವಾಗಿ ಮಾತಾಡುತ್ತಾನೆ, ಅವರು ಅವನಿಗೆ ಏನೂ ಹೇಳುವದಿಲ್ಲ. ಹಿರೀಸಭೆಯವರು ಇವನೇ ಬರಬೇಕಾದ ಕ್ರಿಸ್ತನೆಂದು ನಿಶ್ಚಯ ಮಾಡಿಕೊಂಡಿದ್ದಾರೇನೋ?” ಯೆರೂಸಲೇಮಿನ ಈ ನಿವಾಸಿಗಳು, ಯೇಸುವು ಕ್ರಿಸ್ತನೆಂದು ಯಾಕೆ ನಂಬುವದಿಲ್ಲವೆಂದು ವಿವರಿಸುತ್ತಾರೆ: “ಇವನು ಎಲ್ಲಿಯವನೆಂದು ನಾವು ಬಲ್ಲೆವು; ಆದರೆ ಕ್ರಿಸ್ತನು ಬರುವಾಗ ಅವನು ಎಲ್ಲಿಯವನೋ ಎಂದು ಒಬ್ಬರಿಗೂ ತಿಳಿಯುವದಿಲ್ಲ,”
ಯೇಸುವು ಉತ್ತರಿಸುವದು: “ನನ್ನನ್ನು ಬಲ್ಲಿರಿ, ನಾನು ಎಲ್ಲಿಯವನೆಂದು ಬಲ್ಲಿರಿ ನಿಜವೇ. ಆದರೂ ನಾನು ನನ್ನಷ್ಟಕ್ಕೆ ಬಂದವನಲ್ಲ, ನನ್ನನ್ನು ಕಳುಹಿಸಿದಾತನು ನಿಜವಾದವನು; ನೀವು ಆತನನ್ನು ಅರಿತವರಲ್ಲ. ನಾನು ಆತನನ್ನು ಬಲ್ಲೆನು; ಆತನ ಕಡೆಯಿಂದ ಬಂದವನಾದದರಿಂದಲೂ ನನ್ನನ್ನು ಆತನೇ ಕಳುಹಿಸಿದ್ದರಿಂದಲೂ ಆತನನ್ನು ಬಲ್ಲೆನು.” ಆಗ ಅವರು ಆತನನ್ನು ಹಿಡಿಯುವದಕ್ಕೆ ನೋಡಿದರು, ಪ್ರಾಯಶಃ ಅವನನ್ನು ಸೆರೆಮನೆಗೆ ದೊಬ್ಬಲು ಇಲ್ಲವೇ ಕೊಲ್ಲಲು ಇದ್ದಿರಬಹುದು. ಆದರೂ ಅವರು ಇದರಲ್ಲಿ ಯಶಸ್ವಿಯಾಗಲಿಲ್ಲ, ಯಾಕಂದರೆ ಯೇಸುವು ಸಾಯುವ ಕಾಲ ಇನ್ನೂ ಬಂದಿರಲಿಲ್ಲ.
ಆದರೂ ಅನೇಕರು ಯೇಸುವಿನ ಮೇಲೆ ನಂಬಿಕೆ ಇಟ್ಟರು, ಅವರು ಹಾಗೆ ಮಾಡಬೇಕಿತ್ತು. ಯಾಕೆ, ಅವನು ನೀರಿನ ಮೇಲೆ ನಡೆದಿದ್ದನು, ಬಿರುಗಾಳಿಯನ್ನು ಶಾಂತಗೊಳಿಸಿದ್ದನು, ತುಫಾನು ತುಂಬಿದ ಸಮುದ್ರವನ್ನು ಸ್ತಬ್ಧಗೊಳಿಸಿದ್ದನು, ಕೆಲವೇ ರೊಟ್ಟಿ ಮತ್ತು ಮೀನುಗಳಿಂದ ಸಾವಿರಾರು ಮಂದಿಯನ್ನು ಅದ್ಭುತಕರವಾಗಿ ಉಣಿಸಿದ್ದನು, ರೋಗಿಗಳನ್ನು ಸ್ವಸ್ಥಮಾಡಿದ್ದನು, ಕುಂಟರನ್ನು ನಡೆಯುವಂತೆ, ಕುರುಡರು ಕಾಣುವಂತೆ ಮಾಡಿದ್ದನು, ಕುಷ್ಠರೋಗಿಗಳು ವಾಸಿಗೊಳಿಸಲ್ಪಟ್ಟಿದ್ದರು ಮತ್ತು ಸತ್ತವರನ್ನು ಕೂಡಾ ಎಬ್ಬಿಸಿದ್ದನು. ಆದುದರಿಂದ ಅವರು ಕೇಳುವದು: “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡಾನೋ?”
ಈ ಸಂಗತಿಗಳ ಕುರಿತು ಜನರು ಗುಜುಗುಜು ಮಾತಾಡುವದನ್ನು ಫರಿಸಾಯರು ಕೇಳಿದಾಗ, ಅವರು ಮತ್ತು ಮಹಾಯಾಜಕರುಗಳು, ಯೇಸುವನ್ನು ಹಿಡಿಯುವದಕ್ಕೆ ಓಲೇಕಾರರನ್ನು ಕಳುಹಿಸಿದರು. ಯೋಹಾನ 7:11-32.
▪ ಜಾತ್ರೆಗೆ ಯೇಸುವು ಯಾವಾಗ ಬಂದನು, ಮತ್ತು ಅವನ ಕುರಿತು ಜನರು ಏನನ್ನು ಹೇಳುತ್ತಿದ್ದರು?
▪ ಯೇಸುವಿಗೆ ದೆವ್ವ ಹಿಡದದೆ ಎಂದು ಕೆಲವರು ಹೇಳಿದ್ದು ಯಾಕೆ ಇರಬಹುದು?
▪ ಯೆರೂಸಲೇಮಿನ ನಿವಾಸಿಗಳು ಯೇಸುವಿನ ಕುರಿತು ಯಾವ ದೃಷ್ರಿಯುಳ್ಳವರಾಗಿದ್ದರು?
▪ ಯೇಸುವಿನ ಮೇಲೆ ಅನೇಕರು ನಂಬಿಕೆ ಇಟ್ಟದು ಯಾಕೆ?