ಒಂದು ಸ್ವತಂತ್ರ ಜನಾಂಗ ಆದರೆ ಲೆಕ್ಕತೆರಬೇಕಾದವರು
“ನೀವು ಸತ್ಯವನ್ನು ತಿಳುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:32.
1, 2. (ಎ) ಮಾನವ ಇತಿಹಾಸದಲ್ಲಿ ಸ್ವಾತಂತ್ರ್ಯವು ಹೇಗೆ ಪ್ರಧಾನವಾಗಿ ತೋರಿಸಲ್ಪಟ್ಟಿದೆ? (ಬಿ) ಯಾರೊಬ್ಬನು ಮಾತ್ರವೇ ನಿಜವಾಗಿಯೂ ಸ್ವತಂತ್ರನು? ವಿವರಿಸಿರಿ.
ಸ್ವಾತಂತ್ರ್ಯ. ಎಂಥ ಒಂದು ಬಲಿಷ್ಠ ಶಬ್ದ! ಸ್ವತಂತ್ರರಾಗಿರುವ ಆಶೆಯ ಕಾರಣ, ಮಾನವಕುಲವು ಅಗಣಿತವಾದ ಯುದ್ಧಗಳನ್ನು ಮತ್ತು ಕ್ರಾಂತಿಗಳನ್ನು ಹಾಗೂ ದುರೂಹ್ಯವಾದ ಸಾಮಾಜಿಕ ಸಂಕ್ಷೋಭೆಯನ್ನು ಸಹಿಸಿಕೊಂಡಿದೆ. ನಿಶ್ಚಯವಾಗಿಯೂ, ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಹೇಳುವದು: ‘ನಾಗರಿಕತೆಯ ವಿಕಸಿಸುವಿಕೆಯಲ್ಲಿ, ಸ್ವಾತಂತ್ರ್ಯದ ಕಲ್ಪನೆಯು ಆಡಿದಷ್ಟು ಪ್ರಮುಖ ಪಾತ್ರವನ್ನು ಬೇರೆ ಯಾವುದೂ ಆಡಿಲ್ಲ.’
2 ಆದಾಗ್ಯೂ, ಎಷ್ಟೊಂದು ಜನರು ನಿಜವಾಗಿಯೂ ಸ್ವತಂತ್ರರಾಗಿರುತ್ತಾರೆ? ಎಷ್ಟೊಂದು ಜನರಿಗೆ ಸಹಿತ ಸ್ವಾತಂತ್ರ್ಯವೆಂದರೆ ಏನು ಎಂದು ತಿಳಿದದೆ? ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವದು: “ಒಂದು ಸಂಪೂರ್ಣ ಸ್ವಾತಂತ್ರ್ಯ ಜನರಿಗೆ ಇರುವದೆಂದರೆ, ಅವರು ಹೇಗೆ ಯೋಚಿಸುತ್ತಾರೆ, ಮಾತಾಡುತ್ತಾರೆ ಯಾ ವರ್ತಿಸುತ್ತಾರೆ ಎನ್ನುವದರ ಮೇಲೆ ಯಾವುದೇ ನಿರ್ಬಂಧ ಇರಕೂಡದು. ಅವರ ಆಯ್ಕೆಗಳು ಯಾವವು ಎಂಬ ಅರಿವು ಅವರಿಗೆ ಇರತಕ್ಕದ್ದು ಮತ್ತು ಈ ಆಯ್ಕೆಗಳ ನಡುವೆ ತೀರ್ಮಾನಿಸುವ ಶಕ್ತಿಯು ಅವರಿಗೆ ಇರತಕ್ಕದ್ದು.” ಇದರ ನೋಟದಲ್ಲಿ, ಯಾರಾದರೊಬ್ಬರು ನಿಜವಾಗಿಯೂ ಸ್ವತಂತ್ರರಾಗಿರುವದು ನಿಮಗೆ ತಿಳಿದದೆಯೋ? ಅವರು “ಹೇಗೆ ಯೋಚಿಸುತ್ತಾರೆ, ಮಾತಾಡುತ್ತಾರೆ ಯಾ ವರ್ತಿಸುತ್ತಾರೆ ಎನ್ನುವದರ ಮೇಲೆ ಯಾವುದೇ ನಿರ್ಬಂಧ ಇಲ್ಲ” ಎಂದು ಯಾರು ಹೇಳಬಲ್ಲರು? ಸತ್ಯವಾಗಿಯೂ, ಇಡೀ ವಿಶ್ವದಲ್ಲಿ ಕೇವಲ ಏಕಮಾತ್ರ ವ್ಯಕ್ತಿ ಆ ವಿವರಣೆಗೆ ಹೊಂದಿಕೆಯಾಗುತ್ತಾನೆ—ಯೆಹೋವ ದೇವರು. ಅವನಿಗೆ ಮಾತ್ರವೇ ಸರ್ವತಂತ್ರ ಸ್ವತಂತ್ರಾಧಿಕಾರ ಇದೆ. ಅವನ ಇಚ್ಛೆಯ ಯಾವುದೇ ಆಯ್ಕೆಯನ್ನು ಅವನು ಮಾತ್ರ ಮಾಡಶಕ್ತನು ಮತ್ತು ನಂತರ ಎಲ್ಲಾ ವಿರೋಧಗಳ ನಡುವೆಯೂ ಅವನು ಅದನ್ನು ಸಾಧಿಸಶಕ್ತನು. ಅವನು “ಸರ್ವಶಕ್ತನು” ಆಗಿದ್ದಾನೆ.—ಪ್ರಕಟನೆ 1:8; ಯೆಶಾಯ 55:11.
3. ಯಾವ ಶರ್ತದ ಮೇಲೆ ಮಾನವರು ಸಾಮಾನ್ಯವಾಗಿ ಸ್ವಾತಂತ್ರ್ಯದಲ್ಲಿ ಆನಂದಿಸುವರು?
3 ದೀನ ಮಾನವರಿಗೆ, ಸ್ವಾತಂತ್ರ್ಯವು ಕೇವಲ ಸಂಬಂಧಿತವಾಗಿರಬಲ್ಲದು. ಸಾಮಾನ್ಯವಾಗಿ ಅದು ಯಾವುದೋ ಒಂದು ಅಧಿಕಾರದಿಂದ ಅನುಗ್ರಹಿಸಲ್ಪಡುತ್ತದೆ ಯಾ ಖಾತರಿಗೊಳಿಸಲ್ಪಡುತ್ತದೆ ಮತ್ತು ಆ ಅಧಿಕಾರಕ್ಕೆ ನಮ್ಮ ಅಧೀನತೆಯ ಮೇಲೆ ಸಂಬಂಧಿತವಾಗಿದೆ. ಖಂಡಿತವಾಗಿಯೂ, ಹೆಚ್ಚುಕಡಮೆ ಪ್ರತಿಯೊಂದು ವಿದ್ಯಮಾನಗಳಲ್ಲಿ, ಸ್ವಾತಂತ್ರ್ಯದ ಖಾತರಿದಾರನ ಅಧಿಕಾರವನ್ನು ಅವನು ಅಂಗೀಕರಿಸುವಲ್ಲಿ ಮಾತ್ರವೇ ವ್ಯಕ್ತಿಯೊಬ್ಬನು ಸ್ವತಂತ್ರನಾಗಿರಸಾಧ್ಯವಿದೆ. ಉದಾಹರಣೆಗೆ, “ಸ್ವತಂತ್ರ ಜಗತ್ತಿನಲ್ಲಿ” ಜೀವಿಸುವ ವ್ಯಕ್ತಿಗಳು ಚಲನಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಮತ್ತು ಮತ ಸ್ವಾತಂತ್ರ್ಯ ಇಂಥ ಅನೇಕ ಪ್ರಯೋಜನಗಳಲ್ಲಿ ಆನಂದಿಸುತ್ತಾರೆ. ಈ ಸ್ವಾತಂತ್ರ್ಯಗಳನ್ನು ಯಾವುದು ಖಾತರಿಗೊಳಿಸುತ್ತದೆ? ನಾಡಿನ ಕಟ್ಟಳೆ. ಆ ಕಟ್ಟಳೆಗಳಿಗೆ ಅವನು ವಿಧೇಯನಾಗುವಷ್ಟರ ತನಕ ಮಾತ್ರವೇ ವ್ಯಕ್ತಿಯೊಬ್ಬನು ಅವುಗಳಲ್ಲಿ ಆನಂದಿಸಶಕ್ತನು. ಅವನು ತನ್ನ ಸ್ವಾತಂತ್ರ್ಯವನ್ನು ಅಪಪ್ರಯೋಗ ಮಾಡುವದಾದರೆ, ಅವನು ಅಧಿಕಾರಿಗಳಿಗೆ ಲೆಕ್ಕಕೊಡಬೇಕಾಗುತ್ತದೆ, ಮತ್ತು ಅವನ ಸ್ವಾತಂತ್ರ್ಯವನ್ನು ಸೆರೆಮನೆಯ ಒಂದು ಶಿಕ್ಷೆಯ ಮೂಲಕ ತೀವ್ರವಾಗಿ ಮೊಟಕುಗೊಳಿಸಲಾಗಬಹುದು.—ರೋಮಾಪುರ 13:1-4.
ದಿವ್ಯ ಸ್ವಾತಂತ್ರ್ಯ—ಲೆಕ್ಕತೆರುವಿಕೆಯೊಂದಿಗೆ
4, 5. ಯೆಹೋವನ ಆರಾಧಕರು ಯಾವ ಸ್ವಾತಂತ್ರ್ಯದಲ್ಲಿ ಆನಂದಿಸುವರು, ಮತ್ತು ಯಾವುದಕ್ಕಾಗಿ ಅವನು ಅವರನ್ನು ಲೆಕ್ಕತೆರುವಂತೆ ಮಾಡುವನು?
4 ಮೊದಲನೆಯ ಶತಕದಲ್ಲಿ, ಯೇಸುವು ಸ್ವಾತಂತ್ರ್ಯದ ಕುರಿತು ಮಾತಾಡಿದನು. ಅವನು ಯೆಹೂದ್ಯರಿಗೆ ಅಂದದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) ಅವನು ವಾಕ್ ಸ್ವಾತಂತ್ರ್ಯದ ಯಾ ಮತ ಸ್ವಾತಂತ್ರದ ಕುರಿತು ಮಾತಾಡುತ್ತಿರಲಿಲ್ಲ. ಅನೇಕ ಯೆಹೂದ್ಯರು ಹಾತೊರೆಯುತ್ತಿದ್ದ, ರೋಮಿನ ನೊಗದಿಂದ ವಿಮೋಚನೆಯ ಕುರಿತು ಖಂಡಿತವಾಗಿಯೂ ಅವನು ಮಾತಾಡುತ್ತಿರಲಿಲ್ಲ. ಇಲ್ಲ, ಇದು ಎಷ್ಟೋ ಹೆಚ್ಚು ಮೂಲ್ಯತೆಯದ್ದು, ಯಾವುದೇ ಮಾನವ ಕಟ್ಟಳೆಗಳಿಂದ ಯಾ ಯಾವನೋ ಒಬ್ಬ ಮಾನವ ಅಧಿಪತಿಯ ಹುಚ್ಟಾಟಿಕೆಯದ್ದಾಗಿರದೆ, ವಿಶ್ವದ ವರಿಷ್ಠ ಸಾರ್ವಭೌಮನಾದ ಯೆಹೋವನಿಂದ ಅನುಗ್ರಹಿಸಲ್ಪಟ್ಟದ್ದಾಗಿರುತ್ತದೆ. ಅದು ಮೂಢಶ್ರದ್ಧೆಯಿಂದ ಸ್ವಾತಂತ್ರ್ಯ, ಧಾರ್ಮಿಕ ಅಜ್ಞಾನದಿಂದ ಸ್ವಾತಂತ್ರ್ಯ, ಮತ್ತು ಇನ್ನು ಎಷ್ಟೋ, ಎಷ್ಟೋ ಹೆಚ್ಚಿನ ಸ್ವಾತಂತ್ರ್ಯವಾಗಿರುತ್ತದೆ. ಯೆಹೋವನಿಂದ ದಯಪಾಲಿಸಲ್ಪಟ್ಟ ಸ್ವಾತಂತ್ರ್ಯವು ನಿಜವಾದ ಸ್ವಾತಂತ್ರ್ಯವಾಗಿರುತ್ತದೆ, ಮತ್ತು ಅದು ನಿತ್ಯಕ್ಕೂ ಬಾಳಲಿರುವದು.
5 ಅಪೊಸ್ತಲ ಪೌಲನು ಹೇಳಿದ್ದು: “ಆ ಕರ್ತನು [ಯೆಹೋವನು, NW] ದೇವರಾತ್ಮನೇ; ಕರ್ತನ [ಯೆಹೋವನ, NW] ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.” (2 ಕೊರಿಂಥ 3:17) ಶತಮಾನಗಳಲ್ಲೆಲ್ಲಾ ಯೆಹೋವನು ಮಾನವಕುಲದೊಂದಿಗೆ ವ್ಯವಹರಿಸುತ್ತಾ ಇದ್ದನು, ಆ ಮೂಲಕ ಕಟ್ಟಕಡೆಗೆ ನಂಬಿಗಸ್ತರು ಅತ್ಯುತ್ತಮವಾದ ಮತ್ತು ಅತಿ ಮಹತ್ತಾದ ವಿಧದ ಮಾನವ ಸ್ವಾತಂತ್ರ್ಯದಲ್ಲಿ, “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ”ಯಲ್ಲಿ ಆನಂದಿಸಲಿರುವರು. (ರೋಮಾಪುರ 8:21) ತನ್ಮಧ್ಯೆ, ಯೆಹೋವನು ಬೈಬಲ್ ಸತ್ಯದ ಮೂಲಕ ಸ್ವಲ್ಪ ಮಟ್ಟಿಗೆಯ ಸ್ವಾತಂತ್ರ್ಯವನ್ನು ನಮಗೆ ಅನುಗ್ರಹಿಸುತ್ತಾನೆ, ಮತ್ತು ಆ ಸ್ವಾತಂತ್ರ್ಯವನ್ನು ನಾವು ದುರುಪಯೋಗಿಸುವದಾದರೆ, ನಾವು ಲೆಕ್ಕಒಪ್ಪಿಸುವಂತೆ ಮಾಡುತ್ತಾನೆ. ಅಪೊಸ್ತಲ ಪೌಲನು ಬರೆದದ್ದು: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.”—ಇಬ್ರಿಯ 4:13.
6-8. (ಎ) ಆದಾಮ, ಹವ್ವರು ಯಾವ ಸ್ವಾತಂತ್ರ್ಯಗಳಲ್ಲಿ ಆನಂದಿಸಿದರು, ಮತ್ತು ಯಾವ ಶರ್ತದ ಮೇಲೆ ಅವರು ಆ ಸ್ವಾತಂತ್ರ್ಯಗಳನ್ನು ಇಟ್ಟುಕೊಳ್ಳಸಾಧ್ಯವಿತ್ತು? (ಬಿ) ಆದಾಮ, ಹವ್ವರು ತಮಗಾಗಿ ಮತ್ತು ಅವರ ಸಂತತಿಯವರಿಗಾಗಿ ಯಾವದನ್ನು ಕಳಕೊಂಡರು?
6 ನಮ್ಮ ಮೊದಲ ಮಾನವ ಹೆತ್ತವರಾದ ಆದಾಮ, ಹವ್ವರು ಜೀವಂತರಾಗಿದ್ದಾಗ, ಯೆಹೋವನಿಗೆ ಲೆಕ್ಕ ತೆರುವಿಕೆಯು ಮುಂದಕ್ಕೆ ಬಂತು. ಇಚ್ಛಾ ಸ್ವಾತಂತ್ರ್ಯದ ಅಮೂಲ್ಯ ವರದಾನದೊಂದಿಗೆ ಯೆಹೋವನು ಅವರನ್ನು ಸೃಷ್ಟಿಸಿದನು. ಆ ಇಚ್ಛಾ ಸ್ವಾತಂತ್ರ್ಯವನ್ನು ಅವರು ಎಷ್ಟರ ತನಕ ಹೊಣೆಗಾರಿಕೆಯಿಂದ ಉಪಯೋಗಿಸಿದರೋ, ಅಷ್ಟರ ತನಕ ಹೆದರಿಕೆಯಿಂದ ಸ್ವಾತಂತ್ರ್ಯ, ಅಸ್ವಸ್ಥತೆಯಿಂದ ಸ್ವಾತಂತ್ರ್ಯ, ಮರಣದಿಂದ ಸ್ವಾತಂತ್ರ್ಯ, ಮತ್ತು ಒಂದು ಪರಿಶುದ್ಧ ಮನಸ್ಸಾಕ್ಷಿಯಿಂದ ಅವರ ಸ್ವರ್ಗೀಯ ಪಿತನನ್ನು ಸಮೀಪಿಸುವ ಸ್ವಾತಂತ್ರ್ಯವನ್ನು, ಇವೇ ಮೊದಲಾದ ಇತರ ಆಶೀರ್ವಾದಗಳಲ್ಲಿ ಅವರು ಆನಂದಿಸಿದರು. ಆದರೆ ಅವರು ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಅಪಪ್ರಯೋಗಮಾಡಿದಾಗ, ಅದೆಲ್ಲವು ಬದಲಾಯಿಸಲ್ಪಟ್ಟಿತು.
7 ಯೆಹೋವನು ಆದಾಮ, ಹವ್ವರನ್ನು ಏದೆನ್ ತೋಟದಲ್ಲಿ ಇಟ್ಟನು, ಮತ್ತು ಅವರ ಆನಂದಕ್ಕಾಗಿ ಒಂದರ ಹೊರತಾಗಿ ತೋಟದ ಎಲ್ಲಾ ಮರಗಳ ಹಣ್ಣುಗಳನ್ನು ಅವರಿಗೆ ನೀಡಿದನು. ಅದೊಂದನ್ನು ಅವನು ಸ್ವತಃ ಇಟ್ಟುಕೊಂಡನು; “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ” ಅದಾಗಿತ್ತು. (ಆದಿಕಾಂಡ 2:16, 17) ಆ ಮರದ ಹಣ್ಣನ್ನು ತಿನ್ನುವದರಿಂದ ದೂರವಿರುವದರಿಂದ, ಒಳ್ಳೇದು ಮತ್ತು ಕೆಟ್ಟದ್ದು ಯಾವುದು ಎಂಬ ಮಟ್ಟವನ್ನು ಇಡಲು ಯೆಹೋವನು ಮಾತ್ರ ಸ್ವತಂತ್ರನು ಎಂಬುದನ್ನು ಆದಾಮ, ಹವ್ವರು ಅಂಗೀಕರಿಸಲಿದ್ದರು. ಅವರು ಜವಾಬ್ದಾರಿಕೆಯಿಂದ ವರ್ತಿಸಿದರೆ ಮತ್ತು ನಿಷೇಧಿತ ಹಣ್ಣನ್ನು ತಿನ್ನುವದರಿಂದ ದೂರವಿದ್ದರೆ, ಯೆಹೋವನು ಅವರ ಇತರ ಸ್ವಾತಂತ್ರ್ಯಗಳನ್ನು ಕಾದಿಡುವದನ್ನು ಮುಂದರಿಸುತ್ತಿದ್ದನು.
8 ದುಃಖಕರವಾಗಿಯೇ, ಅವಳು ಸ್ವತಃ ‘ಒಳ್ಳೇದು ಮತ್ತು ಕೆಟ್ಟದ್ದನ್ನು’ ಅರಿಯಬೇಕು ಎಂಬ ಸರ್ಪನ ಸಲಹೆಯನ್ನು ಹವ್ವಳು ಆಲಿಸಿದಳು. (ಆದಿಕಾಂಡ 3:1-5) ಮೊದಲು ಅವಳು, ನಂತರ ಆದಾಮನು ನಿಷೇಧಿತ ಹಣ್ಣನ್ನು ತಿಂದರು. ಫಲಿತಾಂಶವಾಗಿ, ಏದೆನ್ ತೋಟದಲ್ಲಿ ಅವರೊಡನೆ ಮಾತಾಡಲು ಯೆಹೋವ ದೇವರು ಬಂದಾಗ, ಅವರು ಲಜ್ಜೆಗೊಂಡರು ಮತ್ತು ತಾವಾಗಿಯೇ ಅಡಗಿಕೊಂಡರು. (ಆದಿಕಾಂಡ 3:8, 9) ಶುದ್ಧ ಮನಸ್ಸಾಕ್ಷಿಯಿಂದ ಬರುವ, ದೇವರನ್ನು ಸಮೀಪಿಸುವ, ಸ್ವಾತಂತ್ರ್ಯದ ಪ್ರಜ್ಞೆಯನ್ನು ಅವರು ಈಗ ಪಾಪಿಗಳಾಗಿದ್ದುದರಿಂದ ಕಳೆದು ಕೊಂಡರು. ಇದರ ಕಾರಣ, ಅವರು ಅನಾರೋಗ್ಯ ಮತ್ತು ಮರಣದಿಂದ ಸ್ವಾತಂತ್ರ್ಯವನ್ನು ಅವರಿಗೂ, ಅವರ ಸಂತತಿಯವರಿಗೂ ಕಳೆದುಕೊಂಡರು. ಪೌಲನು ಹೇಳಿದ್ದು: “ಒಬ್ಬ ಮನುಷ್ಯ [ಆದಾಮ] ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12; ಆದಿಕಾಂಡ 3:16, 19.
9. ಅವರು ಸಂತೋಷಿಸಿದ್ದ ಸ್ವಲ್ಪ ಮಟ್ಟಿಗೆಯ ಸ್ವಾತಂತ್ರ್ಯವನ್ನು ಉತ್ತಮವಾಗಿ ಬಳಸಿದ್ದವರ ದಾಖಲೆಯಲ್ಲಿ ಯಾರಿದ್ದಾರೆ?
9 ಆದಾಗ್ಯೂ, ಮಾನವ ಕುಲಕ್ಕೆ ಇನ್ನೂ ಇಚ್ಛಾ ಸ್ವಾತಂತ್ರ್ಯವು ಇತ್ತು, ಮತ್ತು ಸಮಯಾನಂತರ ಕೆಲವು ಅಪರಿಪೂರ್ಣ ಮಾನವರು ಯೆಹೋವನನ್ನು ಜವಾಬ್ದಾರಿತನದಿಂದ ಸೇವಿಸಲು ಇದನ್ನು ಬಳಸಿದರು. ಅವರಲ್ಲಿ ಕೆಲವರ ಹೆಸರುಗಳು ಪ್ರಾಚೀನತೆಯಿಂದ ನಮಗಾಗಿ ಸಂರಕ್ಷಿಸಲ್ಪಟ್ಟಿವೆ. ಹೇಬೆಲ, ಹನೋಕ, ನೋಹ, ಅಬ್ರಹಾಮ, ಇಸಾಕ, ಮತ್ತು ಯಾಕೋಬ (ಇಸ್ರಾಯೇಲನೆಂದೂ ಕರೆಯಲ್ಪಟ್ಟಿದ್ದಾನೆ) ರಂಥ ಮನುಷ್ಯರು, ಸ್ವಲ್ಪ ಮಟ್ಟಿಗೆ ಸ್ವಾತಂತ್ರ್ಯವನ್ನು ಬಳಸಿ ಇನ್ನೂ ದೇವರ ಚಿತ್ತವನ್ನು ಮಾಡುವದರಲ್ಲಿ ಸಂತೋಷಪಟ್ಟಿದ್ದ ವ್ಯಕ್ತಿಗಳ ಉದಾಹರಣೆಗಳಾಗಿದ್ದಾರೆ. ಮತ್ತು ಇದರ ಫಲಿತಾಂಶವಾಗಿ ಅವರೊಂದಿಗೆ ಎಲ್ಲವೂ ಸುಗಮವಾಗಿ ನಡೆಯಿತು.—ಇಬ್ರಿಯ 11:4-21.
ದೇವರ ಸಕ್ವೀಯ ಜನಾಂಗದ ಸ್ವಾತಂತ್ರ್ಯ
10. ಅವನ ಸಕ್ವೀಯ ಜನರೊಂದಿಗೆ ಯೆಹೋವನು ಮಾಡಿದ ಒಡಂಬಡಿಕೆಯ ಶರ್ತಗಳು ಯಾವವು?
10 ಮೋಶೆಯ ದಿನಗಳಲ್ಲಿ, ಯೆಹೋವನು ಇಸ್ರಾಯೇಲ್ಯರನ್ನು—ಲಕ್ಷಾಂತರ ಸಂಖ್ಯೆಯಲ್ಲಿ ಆಗ ಇದ್ದರು—ಐಗುಪ್ತದಲಿನ್ಲ ದಾಸತ್ವದಿಂದ ಬಿಡುಗಡೆಗೊಳಿಸಿದನು ಮತ್ತು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡದರ್ದಿಂದ, ಅವರು ಅವನ ವಿಶೇಷ ಜನಾಂಗವಾದರು. ಈ ಒಡಂಬಡಿಕೆಯ ಕೆಳಗೆ, ಇಸ್ರಾಯೇಲ್ಯರಿಗೆ ಒಂದು ಯಾಜಕತ್ವ, ಅವರ ಪಾಪಗಳನ್ನು ಸಾಂಕೇತಿಕ ವಿಧದಲ್ಲಿ ಆವರಿಸುತ್ತಿದ್ದ ಪ್ರಾಣಿ ಯಜ್ಞಗಳ ಒಂದು ವ್ಯವಸ್ಥೆಯ ಇತ್ತು. ಹೀಗೆ, ಆರಾಧನೆಯಲ್ಲಿ ದೇವರನ್ನು ಸಮೀಪಿಸಲು ಅವರಿಗೆ ಸ್ವಾತಂತ್ರ್ಯವಿತ್ತು. ಮೂಢಶ್ರದ್ಧೆಯ ಆಚರಣೆಗಳಿಂದ ಮತ್ತು ಸುಳ್ಳು ಆರಾಧನೆಗಳಿಂದ ಅವರನ್ನು ಸ್ವತಂತ್ರರನ್ನಾಗಿ ಇಡಲು, ನಿಯಮಗಳ ಮತ್ತು ವಿಧಿಗಳ ಒಂದು ವ್ಯವಸ್ಥೆಯೂ ಕೂಡ ಅವರಲ್ಲಿತ್ತು. ನಂತರ, ಅವರ ವೈರಿಗಳ ವಿರುದ್ಧವಾಗಿ ದೈವಿಕ ಸಹಾಯದ ಆಶ್ವಾಸನೆಯೊಂದಿಗೆ ವಾಗ್ದಾನ ದೇಶವನ್ನು ಒಂದು ಸೊತ್ತಾಗಿ ಅವರು ಪಡೆಯಲಿದ್ದರು. ಒಡಂಬಡಿಕೆಯ ಅವರ ವತಿಯಿಂದ, ಇಸ್ರಾಯೇಲ್ಯರು ಸ್ವ ಇಚ್ಛೆಯಿಂದ ಈ ಶರ್ತವನ್ನು ಸ್ವೀಕರಿಸಿದರು: “ಯೆಹೋವನು ಹೇಳಿದಂತೆಯೇ ಮಾಡುವೆವು.”—ವಿಮೋಚನಕಾಂಡ 19:3-8; ಧರ್ಮೋಪದೇಶಕಾಂಡ 11:22-25.
11. ಯೆಹೋವನೊಂದಿಗಿನ ಒಡಂಬಡಿಕೆಯ ಅವಳ ಪಾಲನ್ನು ಪರಿಪಾಲಿಸಲು ಇಸ್ರಾಯೇಲ್ ತಪ್ಪಿಹೋದಾಗ, ಯಾವ ಫಲಿತಾಂಶವುಂಟಾಯಿತು?
11 ಇಸ್ರಾಯೇಲ್ಯರು 1,500 ಕ್ಕಿಂತ ಹೆಚ್ಚು ವರ್ಷಗಳಿಂದ ಯೆಹೋವನೊಂದಿಗೆ ಆ ವಿಶೇಷ ಸಂಬಂಧದಲಿದ್ದರು. ಆದರೆ ಸಮಯ ಸಮಯಕ್ಕೆ ಅವರು ಒಡಂಬಡಿಕೆಯನ್ನು ಪರಿಪಾಲಿಸಲು ತಪ್ಪಿಹೋದರು. ಸುಳ್ಳು ಧರ್ಮದಿಂದ ಅವರು ಪುನಃ ಪುನಃ ಭೃಷ್ಟಗೊಳಿಸಲ್ಪಟ್ಟರು ಮತ್ತು ವಿಗ್ರಹಾರಾಧನೆ ಮತ್ತು ಮೂಢಶ್ರದ್ಧೆಯ ಕೆಳಗೆ ಬಂದರು, ಆದುದರಿಂದ ಅವರ ಶತ್ರುಗಳಿಗೆ ಶಾರೀರಿಕವಾಗಿ ದಾಸರಾಗುವಂತೆ ದೇವರು ಅವರನ್ನು ಬಿಟ್ಟುಬಿಟ್ಟನು. (ನ್ಯಾಯಸ್ಥಾಪಕರು 2:11-19) ಒಡಂಬಡಿಕೆಯನ್ನು ಪರಿಪಾಲಿಸುವದರ ಮೂಲಕ ಬರುವ ವಿಮೋಚಿಸುವ ಆಶೀರ್ವಾದಗಳಲ್ಲಿ ಆನಂದಿಸುವ ಬದಲು, ಅದನ್ನು ಮೀರಿ ನಡೆದುದರಿಂದ ಅವರು ದಂಡಿಸಲ್ಪಟ್ಟರು. (ಧರ್ಮೋಪದೇಶಕಾಂಡ 28:1, 2, 15) ಕಟ್ಟಕಡೆಗೆ ಸಾ.ಶ.ಪೂ. 607 ರಲ್ಲಿ ಬ್ಯಾಬಿಲೊನಿನ ದಾಸತ್ವದೊಳಗೆ ಬರುವಂತೆ ಜನಾಂಗವನ್ನು ಯೆಹೋವನು ಅನುಮತಿಸಿದನು.—2 ಪೂರ್ವಕಾಲವೃತ್ತಾಂತ 36:15-21.
12. ಮೋಶೆಯ ನಿಯಮದೊಡಂಬಡಿಕೆಯ ಕುರಿತು ಕಟ್ಟಕಡೆಗೆ ಏನು ರುಜುವಾಯಿತು?
12 ಇದೊಂದು ಕಠಿಣ ಪಾಠವಾಗಿತ್ತು. ನಿಯಮಶಾಸ್ತ್ರವನ್ನು ಪರಿಪಾಲಿಸುವ ಪ್ರಾಮುಖ್ಯತೆಯನ್ನು ಅದರಿಂದ ಅವರು ಕಲಿಯಬೇಕಿತ್ತು. ಆದಾಗ್ಯೂ, 70 ವರ್ಷಗಳ ನಂತರ ಇಸ್ರಾಯೇಲ್ಯರು ಅವರ ಸ್ವದೇಶಕ್ಕೆ ಹಿಂತೆರಳಿದಾಗ, ನಿಯಮದೊಡಂಬಡಿಕೆಯನ್ನು ಪಾಲಿಸಲು ಅವರು ಇನ್ನೂ ತಪ್ಪಿಹೋದರು. ಅವರ ಮರಳುವಿಕೆಯ ಹೆಚ್ಚುಕಡಮೆ ಒಂದು ನೂರು ವರ್ಷಗಳ ನಂತರ, ಯೆಹೋವನು ಇಸ್ರಾಯೇಲ್ಯರ ಯಾಜಕರಿಗೆ ಅಂದದ್ದು: “ನೀವೋ ದಾರಿತಪ್ಪಿದ್ದೀರಿ; ನಿಮ್ಮ ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ.” (ಮಲಾಕಿಯ 2:8) ನಿಶ್ಚಯವಾಗಿಯೂ, ಇಸ್ರಾಯೇಲ್ಯರಲ್ಲಿದ್ದ ಅತಿ ಯಥಾರ್ಥವಂತರು ಕೂಡ ಪರಿಪೂರ್ಣ ನಿಯಮಶಾಸ್ತ್ರವನ್ನು ಕೈಕೊಳ್ಳಶಕ್ತರಾಗಿರಲಿಲ್ಲ. ಅದು ಆಶೀರ್ವಾದಪ್ರದವಾಗಿರುವ ಬದಲು, ಅಪೊಸ್ತಲ ಪೌಲನ ಮಾತುಗಳಲ್ಲಿ ಅದು “ಶಾಪಗ್ರಸ್ತ” ವಾಯಿತು. (ಗಲಾತ್ಯ 3:14) ಸ್ಪಷ್ಟವಾಗಿಗಿ, ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯೊಳಗೆ ಅಪರಿಪೂರ್ಣ, ನಂಬಿಗಸ್ತ ಮಾನವರನ್ನು ತರಬೇಕಾದರೆ ಮೋಶೆಯ ನಿಯಮದೊಡಂಬಡಿಕೆಗಿಂತಲೂ ಅಧಿಕವಾದದ್ದು ಯಾವುದೋ ಒಂದು ಆವಶ್ಯಕವಾಗಿತ್ತು.
ಕ್ರೈಸ್ತ ಸ್ವಾತಂತ್ರ್ಯದ ಸ್ವಭಾವ
13. ಸ್ವಾತಂತ್ರ್ಯಕ್ಕಾಗಿ ಕಟ್ಟಕಡೆಗೆ ಯಾವ ಉತ್ತಮ ಆಧಾರವನ್ನು ಒದಗಿಸಲಾಯಿತು?
13 ಆ ಅಧಿಕವಾದದ್ದು ಯಾವುದೋ ಒಂದು ಯೇಸು ಕ್ರಿಸ್ತನ ಯಜ್ಞವಾಗಿತ್ತು. ಸುಮಾರು ಸಾ.ಶ. 50 ನೆಯ ವರ್ಷದಲ್ಲಿ ಪೌಲನು ಗಲಾತ್ಯದಲ್ಲಿರುವ ಅಭಿಷಿಕ್ತ ಕ್ರೈಸ್ತರ ಸಭೆಗೆ ಬರೆದನು. ನಿಯಮದೊಡಂಬಡಿಕೆಯ ದಾಸತ್ವದಿಂದ ಯೆಹೋವನು ಅವರನ್ನು ಹೇಗೆ ವಿಮೋಚಿಸಿದ್ದಾನೆ ಎಂದು ವಿವರಿಸಿದ ನಂತರ, ಅವನು ಹೇಳಿದ್ದು: “ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು. ಅದರಲ್ಲಿ ಸ್ಥಿರರಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.” (ಗಲಾತ್ಯ 5:1) ಯಾವ ರೀತಿಗಳಲ್ಲಿ ಯೇಸುವು ಜನರನ್ನು ಸ್ವತಂತ್ರಗೊಳಿಸಿದನು?
14, 15. ನಂಬುವ ಯೆಹೂದ್ಯರನ್ನು ಮತ್ತು ಯೆಹೂದ್ಯೇತರರನ್ನು ಯೇಸುವು ಯಾವ ಆಶ್ಚರ್ಯಕರ ರೀತಿಗಳಲ್ಲಿ ಬಿಡುಗಡೆಗೊಳಿಸಿದನು?
14 ಯೇಸುವಿನ ಮರಣದ ನಂತರ, ಮೆಸ್ಸೀಯನೋಪಾದಿ ಅವನನ್ನು ಸ್ವೀಕರಿಸಿದ ಮತ್ತು ಅವನ ಶಿಷ್ಯರಾದಂತಹ ಯೆಹೂದ್ಯರು ಹಳೆಯ ನಿಯಮದೊಡಂಬಡಿಕೆಯ ಸ್ಥಾನದಲ್ಲಿ ಬದಲಿಯಾಗಿ ಬಂದಿರುವ ಹೊಸ ಒಡಂಬಡಿಕೆಯ ಕೆಳಗೆ ಬಂದರು. (ಯೆರೆಮೀಯ 31:31-34; ಇಬ್ರಿಯ 8:7-13) ಈ ಹೊಸ ಒಡಂಬಡಿಕೆಯ ಕೆಳಗೆ, ಅವರು—ಮತ್ತು ಅವರೊಂದಿಗೆ ಜತೆಗೂಡಿದ್ದ ಯೆಹೂದ್ಯೇತರ ವಿಶ್ವಾಸಿಗಳು—ದೇವರ ವಿಶೇಷ ಜನಾಂಗವಾಗಿದ್ದ ಮಾಂಸಿಕ ಇಸ್ರಾಯೇಲ್ಯರ ಸ್ಥಾನದಲ್ಲಿ ಬಂದ ಒಂದು ಹೊಸ, ಆತ್ಮಿಕ ಇಸ್ರಾಯೇಲ್ ಜನಾಂಗದ ಭಾಗವಾದರು. (ರೋಮಾಪುರ 9:25, 26; ಗಲಾತ್ಯ 6:16) ಇದರಿಂದಾಗಿ, ಯೇಸುವು ವಾಗ್ದಾನಿಸಿದ್ದ ಸ್ವಾತಂತ್ರ್ಯದಲ್ಲಿ ಅವರು ಆನಂದಿಸಿದರು, ಅವನು ಅಂದದ್ದು: “ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” ಮೋಶೆಯ ನಿಯಮಶಾಸ್ತ್ರದ ಶಾಪದಿಂದ ಅವರನ್ನು ವಿಮೋಚಿಸುವದು ಮಾತ್ರವಲ್ಲದೆ, ಸತ್ಯವು, ಯೆಹೂದಿ ಕ್ರೈಸ್ತರನ್ನು ಧಾರ್ಮಿಕ ಮುಂದಾಳುಗಳು ಅವರ ಮೇಲೆ ಹೇರಿದ್ದ ದುರ್ಭರವಾದ ಎಲ್ಲಾ ಸಂಪ್ರದಾಯಗಳಿಂದ ಬಿಡುಗಡೆಗೊಳಿಸಿತು. ಮತ್ತು ಯೆಹೂದ್ಯೇತರ ಕ್ರೈಸ್ತರನ್ನು ವಿಗ್ರಹಾರಾಧನೆ ಮತ್ತು ಅವರ ಮೊದಲಿನ ಆರಾಧನೆಯ ಮೂಢಶ್ರದ್ಧೆಗಳಿಂದ ಅದು ಬಿಡಿಸಿತು. (ಮತ್ತಾಯ 15:3, 6; 23:4; ಅ. ಕೃತ್ಯಗಳು 14:11-13; 17:16) ಮತ್ತು ಅದಕ್ಕಿಂತಲೂ ಹೆಚ್ಚು ಅಲ್ಲಿತ್ತು.
15 ಬಿಡುಗಡೆಗೊಳಿಸುವ ಸತ್ಯದ ಕುರಿತು ಮಾತಾಡುವಾಗ, ಯೇಸುವು ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪಮಾಡುವವರೆಲ್ಲರು ಪಾಪಕ್ಕೆ ದಾಸರು.” (ಯೋಹಾನ 8:34) ಆದಾಮ, ಹವ್ವರು ಪಾಪಮಾಡಿದ್ದಂದಿನಿಂದ, ಎಲ್ಲಾ ಕಾಲಗಳಲ್ಲೂ ಜೀವಿಸಿದ್ದ ಪ್ರತಿಯೊಬ್ಬ ವ್ಯಕ್ತಿಯು ಒಬ್ಬ ಪಾಪಿಯಾಗಿದ್ದನು ಮತ್ತು ಹೀಗೆ ಪಾಪಕ್ಕೆ ದಾಸನಾಗಿದ್ದನು. ಇದಕ್ಕೆ ಕೇವಲ ಸ್ವತಃ ಯೇಸು ಒಬ್ಬನೇ ಹೊರತಾಗಿದ್ದಾನೆ, ಮತ್ತು ಯೇಸುವಿನ ಯಜ್ಞವು ನಂಬಿಗಸ್ತರನ್ನು ಆ ದಾಸತ್ವದಿಂದ ವಿಮೋಚಿಸುತ್ತದೆ. ಅವರು ಇನ್ನೂ ಅಪರಿಪೂರ್ಣರು ಮತ್ತು ಸ್ವಭಾವತಃ ಪಾಪಭರಿತರು ಎಂಬದು ಸತ್ಯ. ಆದರೂ, ಈಗ ಅವರ ಪಾಪಗಳಿಗಾಗಿ ಅವರು ಪಶ್ಚಾತ್ತಾಪಪಡ ಸಾಧ್ಯವಿದೆ ಮತ್ತು ಅವರ ವಿಜ್ಞಾಪನೆಗಳು ಆಲಿಸಲ್ಪಡುತ್ತವೆ ಎಂಬ ಭರವಸೆಯೊಂದಿಗೆ, ಯೇಸುವಿನ ಯಜ್ಞದ ಆಧಾರದ ಮೇಲೆ ಕ್ಷಮೆಯನ್ನು ಯಾಚಿಸಬಹುದು. (1 ಯೋಹಾನ 2:1, 2) ಯೇಸುವಿನ ವಿಮೋಚನ ಯಜ್ಞದ ಮೇಲಾಧಾರಿತ, ದೇವರು ಅವರನ್ನು ನೀತಿವಂತರೆಂದು ಘೋಷಿಸುತ್ತಾನೆ, ಮತ್ತು ಒಂದು ಪರಿಶುದ್ಧಗೊಳಿಸಲ್ಪಟ್ಟ ಮನಸಾಕ್ಷಿಯೊಂದಿಗೆ ಅವರು ಅವನನ್ನು ಸಮೀಪಿಸಬಹುದು. (ರೋಮಾಪುರ 8:33) ಇನ್ನೂ ಹೆಚ್ಚಾಗಿ, ಅಂತ್ಯವಿಲ್ಲದ ಜೀವಿತಕ್ಕಾಗಿ ಪುನರುತ್ಥಾನದ ಪ್ರತೀಕ್ಷೆಯು ವಿಮೋಚನಾ ಯಜ್ಞದ ಮೂಲಕ ತೆರೆಯಲ್ಪಟ್ಟಿದ್ದರಿಂದ, ಸತ್ಯವು ಅವರನ್ನು ಮರಣಭಯದಿಂದಲೂ ಕೂಡ ಬಿಡುಗಡೆಗೊಳಿಸಿತು.—ಮತ್ತಾಯ 10:28; ಇಬ್ರಿಯ 2:15.
16. ಲೋಕವು ನೀಡಿರುವ ಯಾವುದೇ ಸ್ವಾತಂತ್ರ್ಯಕ್ಕಿಂತ ಕ್ರೈಸ್ತ ಸ್ವಾತಂತ್ರ್ಯವು ಅಧಿಕ ಅಂಶಗಳನ್ನು ಹೇಗೆ ಒಳಗೊಂಡಿರುತ್ತದೆ?
16 ಒಂದು ಬೆರಗುಗೊಳಿಸುವ ರೀತಿಯಲ್ಲಿ, ಮನುಷ್ಯ ರೀತಿಯಲ್ಲಿ ಮಾತಾಡುವದಾದರೆ ಅವರ ಪರಿಸ್ಥಿತಿಯು ಏನೇ ಆಗಿರಲಿ, ಪುರುಷ ಮತ್ತು ಸ್ತ್ರೀಯರಿಗೆ ಕ್ರೈಸ್ತ ಸ್ವಾತಂತ್ರ್ಯವು ತೆರೆಯಲ್ಪಟ್ಟಿತು. ಬಡವರು, ಸೆರೆಮನೆವಾಸಿಗಳು, ದಾಸರೂ ಕೂಡ ಸ್ವತಂತ್ರರಾಗಸಾಧ್ಯವಿತ್ತು. ಇನ್ನೊಂದು ಪಕ್ಕದಲ್ಲಿ, ಕ್ರಿಸ್ತನ ಕುರಿತಾದ ಸಂದೇಶವನ್ನು ನಿರಾಕರಿಸಿದ ಜನಾಂಗಗಳ ಉನ್ನತ ಸ್ಥಾನದಲ್ಲಿರುವವರು ಮೂಢಶ್ರದ್ಧೆಗೆ, ಪಾಪಕ್ಕೆ, ಮತ್ತು ಮರಣಭಯಕ್ಕೆ ಇನ್ನೂ ದಾಸತ್ವದಲಿದ್ದರು. ನಾವು ಆನಂದಿಸುವ ಈ ಸ್ವಾತಂತ್ರ್ಯಕ್ಕಾಗಿ ಯೆಹೋವನಿಗೆ ಉಪಕಾರ ಸಲ್ಲಿಸುವದನ್ನು ನಾವೆಂದೂ ನಿಲ್ಲಿಸಕೂಡದು. ಲೋಕವು ನೀಡುವ ಯಾವುದೇ ಅದಕ್ಕೆ ಸರಿದೂಗುವಷ್ಟು ಸಮೀಪಕ್ಕೆ ಬರುವದಿಲ್ಲ.
ಸ್ವತಂತ್ರರು ಆದರೆ ಲೆಕ್ಕ ತೆರಲಿದೆ
17. (ಎ) ಮೊದಲನೆಯ ಶತಕದಲ್ಲಿ ಕೆಲವರು ಕ್ರೈಸ್ತ ಸ್ವಾತಂತ್ರ್ಯವನ್ನು ಹೇಗೆ ಕಳಕೊಂಡರು? (ಬಿ) ಸೈತಾನನ ಲೋಕದಲ್ಲಿನ ಸ್ವಾತಂತ್ರ್ಯವೆಂಬ ತೋರುವಿಕೆಯಿಂದ ನಾವು ಏಕೆ ಮೋಸಗೊಳ್ಳಬಾರದು?
17 ಮೊದಲನೆಯ ಶತಮಾನದಲ್ಲಿ, ಅಭಿಷಿಕ್ತ ಕ್ರೈಸ್ತರಲ್ಲಿ ಅಧಿಕಾಂಶ ಅವರ ಸ್ವಾತಂತ್ರ್ಯದಲ್ಲಿ ಪ್ರಾಯಶಃ ಆನಂದಿಸಿದ್ದಿರಬೇಕು ಮತ್ತು ತೆರುವ ಬೆಲೆ ಏನೇ ಆದರೂ, ಅವರ ಸಮಗ್ರತೆಯನ್ನು ಕಾಪಾಡಿಕೊಂಡಿದ್ದರಬೇಕು. ಆದರೂ ಶೋಚನೀಯವಾಗಿ, ಅದರ ಎಲ್ಲಾ ಆಶೀರ್ವಾದಗಳೊಂದಿಗೆ ಕ್ರೈಸ್ತ ಸ್ವಾತಂತ್ರ್ಯದ ರುಚಿನೋಡಿದ ಕೆಲವರು, ತದನಂತರ ಅದನ್ನು ತಳ್ಳಿಬಿಟ್ಟು, ಲೋಕದ ದಾಸ್ವತಕ್ಕೆ ಪುನಃ ಹಿಂತೆರಳಿದರು. ಅದು ಯಾಕೆ? ಅನೇಕರ ನಂಬಿಕೆಯು ನಿಸ್ಸಂದೇಹವಾಗಿ ದುರ್ಬಲಗೊಂಡಿತ್ತು, ಮತ್ತು ಅವರು ಕೇವಲ ‘ತಪ್ಪಿಹೋದರು [ತೇಲಿ ಹೊಡೆಕೊಂಡೊಯ್ಯಲ್ಪಟ್ಟರು, NW ] ’ (ಇಬ್ರಿಯ 2:1) ಇನ್ನಿತರರು ‘ಮನಸ್ಸಿನ ಒಳ್ಳೇ ಸಾಕ್ಷಿಯನ್ನು ತಳ್ಳಿಬಿಟ್ಟು ಕ್ರಿಸ್ತನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಟ್ಟವರಾಗಿದ್ದಾರೆ.’ (1 ತಿಮೊಥಿ 1:19) ಅವರು ಪ್ರಾಯಶಃ ಪ್ರಾಪಂಚಿಕತೆಗೆ ಯಾ ಅನೈತಿಕ ಜೀವನ ಶೈಲಿಗೆ ಬಲಿಬಿದ್ದಿರಬಹುದು. ನಮ್ಮ ನಂಬಿಕೆಯನ್ನು ಜೋಪಾಸನೆ ಮಾಡುವದು ಮತ್ತು ವೈಯಕ್ತಿಕ ಅಧ್ಯಯನ, ಸಹವಾಸ, ಪ್ರಾರ್ಥನೆ, ಮತ್ತು ಕ್ರೈಸ್ತ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿದ್ದುಕೊಂಡು, ಅದರ ಮೇಲೆ ಕಟ್ಟುವದು ಎಷ್ಟೊಂದು ಪ್ರಾಮುಖ್ಯವಾಗಿದೆ! (2 ಪೇತ್ರ 1:5-8) ಕ್ರೈಸ್ತ ಸ್ವಾತಂತ್ರ್ಯವನ್ನು ಗಣ್ಯಮಾಡುವದನ್ನು ನಾವೆಂದೂ ನಿಲ್ಲಿಸದೆ ಇರೋಣ! ನಾವು ಇರುವದಕ್ಕಿಂತಲೂ ಲೋಕದಲ್ಲಿರುವವರು ಹೆಚ್ಚು ಸ್ವತಂತ್ರರಾಗಿದ್ದಾರೆ ಎಂದೆಣಿಸಿ, ಸಭೆಯ ಹೊರಗೆ ಅವರು ಕಾಣುವ ಸಡಿಲತೆಯಿಂದ ಕೆಲವರು ಶೋಧನೆಗೊಳಗಾಗಬಹುದು. ಆದರೂ ವಾಸ್ತವದಲ್ಲಿ, ಲೋಕದಲ್ಲಿ ಯಾವುದು ಸ್ವಾತಂತ್ರ್ಯದಂತೆ ಕಂಡುಬರುತ್ತದೋ ಅದು ಸಾಮಾನ್ಯವಾಗಿ ಕೇವಲ ಬೇಜವಾಬ್ದಾರಿಕೆಯಾಗಿರುತ್ತದೆ. ನಾವು ದೇವರ ದಾಸರಾಗಿಲ್ಲವಾದರೆ, ನಾವು ಪಾಪದ ದಾಸರಾಗಿರುತ್ತೇವೆ ಮತ್ತು ಆ ದಾಸ್ವತವು ಕಹಿಯಾದ ಸಂಬಳವನ್ನು ನೀಡುತ್ತದೆ.—ರೋಮಾಪುರ 6:23; ಗಲಾತ್ಯ 6:7, 8.
18-20. (ಎ) ಕೆಲವರು “ಶಿಲುಬೆಯ ವೈರಿಗಳಾದದ್ದು” ಹೇಗೆ? (ಬಿ) ಕೆಲವರು ‘ತಮ್ಮ ಸ್ವಾತಂತ್ರ್ಯವನ್ನು ಕೆಟ್ಟತನಕ್ಕೆ ಕಣ್ಣುತಡೆಯೋಪಾದಿ ಉಪಯೋಗಿಸಿದ್ದು’ ಹೇಗೆ?
18 ಮುಂದಕ್ಕೆ ಫಿಲಿಪ್ಪಿಯದವರಿಗೆ ಬರೆದ ಅವನ ಪತ್ರದಲ್ಲಿ, ಪೌಲನು ಬರೆದದ್ದು: “ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.” (ಫಿಲಿಪ್ಪಿ 3:18) ಹೌದು, ಒಮ್ಮೆ ಕ್ರೈಸ್ತರಾಗಿದವ್ದರು ಪ್ರಾಯಶಃ ಧರ್ಮಭೃಷ್ಟರಾಗುವ ಮೂಲಕ ಈಗ ನಂಬಿಕೆಯ ಶತ್ರುಗಳಾಗಿದ್ದಾರೆ. ಅವರ ಪಥವನ್ನು ನಾವು ಅನುಸರಿಸದೆ ಇರುವದು ಎಷ್ಟೊಂದು ಅತ್ಯಾವಶ್ಯಕ! ಇದಕ್ಕೆ ಕೂಡಿಸಿ, ಪೇತ್ರನು ಬರೆದದ್ದು: “ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ [ಕೆಟ್ಟತನಕ್ಕೆ ಕಣ್ಣುತಡೆಯೋಪಾದಿ, NW ] ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗದ್ದೀರಲ್ಲಾ.” (1 ಪೇತ್ರ 2:16) ವ್ಯಕ್ತಿಯೊಬ್ಬನು ಅವನ ಸ್ವಾತಂತ್ರ್ಯವನ್ನು ಕೆಟ್ಟತನಕ್ಕೆ ಕಣ್ಣುತಡೆಯೋಪಾದಿ ಹೇಗೆ ನಿರ್ವಹಿಸಬಹುದು? ಗಂಭೀರವಾದ ಪಾಪಗಳನ್ನು—ಪ್ರಾಯಶಃ ರಹಸ್ಯವಾಗಿ—ಸಭೆಯೊಂದಿಗೆ ಇನ್ನೂ ಸಹವಸಿಸುತ್ತಿರುವಾಗಲೇ ಗೈಯುವದರಿಂದಲೇ.
19 ದಿಯೊತ್ರೇಫನ ಕುರಿತು ನೆನಪಿಸಿರಿ, ಅವನ ಕುರಿತು ಯೋಹಾನನು ಅಂದದ್ದು: “ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. . . .ಅವನು [ಸ್ವತಹ ಮಾಡುವದಿಲ್ಲ, NW ] . . . ಇವೂ ಸಾಲದೆ ತಾನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡಿಮ್ಡಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.” (3 ಯೋಹಾನ 9, 10) ದಿಯೊತ್ರೇಫನು ತನ್ನ ಸ್ವಂತ ಸ್ವಾರ್ಥದ ಮಹತ್ವಾಕಾಂಕ್ಷೆಗಾಗಿ ಅವನ ಸ್ವಾತಂತ್ರ್ಯವನ್ನು ಕಣ್ಣುತಡೆಯೋಪಾದಿ ಬಳಸಿದನು.
20 ಶಿಷ್ಯನಾದ ಯೂದನು ಬರೆದದ್ದು: “ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅರಿಯದವರೂ ಆಗಿರುವ ಕೆಲವು ಜನರು ಸಭೆಯಲ್ಲಿ ಕಳ್ಳತನದಿಂದ ಹೊಕ್ಕಿದ್ದಾರೆ; ಅವರಿಗೆ ದಂಡನೆಯಾಗಬೇಕೆಂದು ಪೂರ್ವದಲ್ಲೇ ಅವರ ವಿಷಯವಾಗಿ ಬರೆದದೆ.” (ಯೂದ 4) ಸಭೆಯೊಂದಿಗೆ ಸಹವಾಸ ಮಾಡುತ್ತಿರುವಾಗಲೇ, ಈ ವ್ಯಕ್ತಿಗಳು ಒಂದು ಭೃಷ್ಟಗೊಳಿಸುವ ಪ್ರಭಾವವಾಗಿರುತ್ತಾರೆ. (ಯೂದ 8-10, 16) ಪೆರ್ಗಮ ಮತ್ತು ಥುವತೈರ ಸಭೆಗಳಲ್ಲಿ ಮತಪಂಥಗಳು, ವಿಗ್ರಹಾರಾಧನೆ, ಮತ್ತು ಅನೈತಿಕತೆಯು ಇತ್ತು ಎಂದು ನಾವು ಪ್ರಕಟನೆಯಲ್ಲಿ ಓದುತ್ತೇವೆ. (ಪ್ರಕಟನೆ 2:14, 15, 20-23) ಕ್ರೈಸ್ತ ಸ್ವಾತಂತ್ರ್ಯದ ಎಂಥ ಒಂದು ದುರುಪಯೋಗ!
21. ಅವರ ಕ್ರೈಸ್ತ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸುವವರಿಗೆ ಏನು ಕಾದಿರುತ್ತದೆ?
21 ಈ ರೀತಿಯಲ್ಲಿ ಅವರ ಕ್ರೈಸ್ತ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುವವರಿಗೆ ಏನು ಕಾದಿರುತ್ತದೆ? ಇಸ್ರಾಯೇಲಿಗೆ ಏನು ಸಂಭವಿಸಿತು ಎಂದು ನೆನಪಿಸಿರಿ. ಇಸ್ರಾಯೇಲ್ ದೇವರು ಆದುಕೊಂಡ ಜನಾಂಗವಾಗಿತ್ತು, ಆದರೆ ಯೆಹೋವನು ಕೊನೆಗೂ ಅವಳನ್ನು ತೊರೆದುಬಿಟ್ಟನು. ಯಾಕೆ? ಕಾರಣ ಇಸ್ರಾಯೇಲ್ಯರು ದೇವರೊಂದಿಗಿನ ಅವರ ಸಂಬಂಧವನ್ನು ಕೆಟ್ಟತನಕ್ಕೆ ಕುರುಡರೋಪಾದಿ ಬಳಸಿದರು. ಅಬ್ರಹಾಮನ ಮಕ್ಕಳೆಂದು ಅವರು ಅಹಂಭಾವ ಪಟ್ಟರು ಆದರೆ ಅಬ್ರಹಾಮನ ಸಂತಾನ ಮತ್ತು ಯೆಹೋವನ ಆಯ್ಕೆಯ ಮೆಸ್ಸೀಯನಾದ ಯೇಸುವನ್ನು ನಿರಾಕರಿಸಿದರು. (ಮತ್ತಾಯ 23:37-39; ಯೋಹಾನ 8:39-47; ಅ. ಕೃತ್ಯಗಳು 2:36; ಗಲಾತ್ಯ 3:16) ಸಮಗ್ರವಾಗಿ “ದೇವರ ಇಸ್ರಾಯೇಲು” ತದ್ರೀತಿಯಲ್ಲಿ ಅಪನಂಬಿಗಸ್ತರಾಗಿ ಪರಿಣಮಿಸುವದಿಲ್ಲ. (ಗಲಾತ್ಯ 6:16) ಆದರೆ ಆತ್ಮಿಕ ಯಾ ನೈತಿಕ ಮಾಲಿನ್ಯತೆಗೆ ಕಾರಣವಾಗುವ ಯಾವನೇ ವ್ಯಕ್ತಿಗತ ಕ್ರೈಸ್ತನು ಕಟ್ಟಕಡೆಗೆ ಶಿಸ್ತುಕ್ರಮವನ್ನು, ಅನಾನುಕೂಲ ನ್ಯಾಯತೀರ್ಪನ್ನು ಕೂಡ ಎದುರಿಸಲಿರುವನು. ನಮ್ಮ ಕ್ರೈಸ್ತ ಸ್ವಾತಂತ್ರ್ಯವನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬದಕ್ಕಾಗಿ ನಾವೆಲ್ಲರೂ ಲೆಕ್ಕ ತೆರಲಿಕ್ಕಿದೆ.
22. ದೇವರಿಗೆ ದಾಸರಾಗಿ ತಮ್ಮ ಕ್ರೈಸ್ತ ಸ್ವಾತಂತ್ರ್ಯವನ್ನು ಉಪಯೋಗಿಸುವವರಿಗೆ ಯಾವ ಸಂತೋಷವು ಬರುತ್ತದೆ?
22 ದೇವರಿಗಾಗಿ ದಾಸರಾಗಿರುವದು ಮತ್ತು ನಿಜವಾಗಿಯೂ ಸ್ವತಂತ್ರರಾಗಿರುವದು ಎಷ್ಟೊಂದು ಉತ್ತಮ. ಯೆಹೋವನು ಮಾತ್ರವೇ ಎಣಿಕೆಗೆ ಬರಬಹುದಾದ ಸ್ವಾತಂತ್ರ್ಯವನ್ನು ದಯಪಾಲಿಸುತ್ತಾನೆ. ಜ್ಞಾನೋಕ್ತಿ ಹೇಳುವದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” (ಜ್ಞಾನೋಕ್ತಿ 27:11) ಯೆಹೋವನ ಸಮರ್ಥನೆಗಾಗಿ ನಮ್ಮ ಕ್ರೈಸ್ತ ಸ್ವಾತಂತ್ರ್ಯವನ್ನು ನಾವು ಬಳಸೋಣ. ನಾವು ಹಾಗೆ ಮಾಡುವದಾದರೆ, ನಮ್ಮ ಜೀವಿತಗಳಿಗೆ ಒಂದು ಅರ್ಥವಿರುತ್ತದೆ, ನಮ್ಮ ಸ್ವರ್ಗೀಯ ತಂದೆಗೆ ನಾವು ಸಂತೋಷವನ್ನು ತರುವೆವು, ಮತ್ತು ಕಟ್ಟಕಡೆಗೆ ದೇವರ ಪುತ್ರರ ಮಹಿಮೆಯುಳ್ಳ ವಿಮೋಚನೆಯಲ್ಲಿ ಆನಂದಿಸುವವರೊಂದಿಗೆ ನಾವು ಇರುವೆವು.
ನೀವು ವಿವರಿಸಶಕ್ತರೋ?
▫ ಯಾರೊಬ್ಬನು ಮಾತ್ರವೇ ನಿಜವಾಗಿ ಸ್ವತಂತ್ರನು?
▫ ಆದಾಮ, ಹವ್ವರು ಯಾವ ಸ್ವಾತಂತ್ರ್ಯಗಳಲ್ಲಿ ಆನಂದಿಸಿದರು, ಮತ್ತು ಅವರು ಅದನ್ನು ಕಳಕೊಂಡದ್ದು ಯಾಕೆ?
▫ ಯೆಹೋವನೊಂದಿಗಿನ ಅವರ ಒಡಂಬಡಿಕೆಯನ್ನು ಅವರು ಪರಿಪಾಲಿಸಿದಾಗ ಇಸ್ರಾಯೇಲ್ಯರು ಯಾವ ಸ್ವಾತಂತ್ರ್ಯಗಳಲ್ಲಿ ಆನಂದಿಸಿದರು?
▫ ಯೇಸುವನ್ನು ಸ್ವೀಕರಿಸಿದವರಿಗೆ ಯಾವ ಸ್ವಾತಂತ್ರ್ಯಗಳು ದೊರಕಿದವು?
▫ ಮೊದಲನೆಯ ಶತಕದಲ್ಲಿ ಅವರ ಕ್ರೈಸ್ತ ಸ್ವಾತಂತ್ರ್ಯವನ್ನು ಕೆಲವರು ಕಳಕೊಂಡದ್ದು ಯಾ ದುರುಪಯೋಗ ಮಾಡಿದ್ದು ಹೇಗೆ?
[ಪುಟ 13 ರಲ್ಲಿರುವ ಚಿತ್ರ]
ಮನುಷ್ಯನು ಅನುಗ್ರಹಿಸಬಹುದಾದ ಯಾವುದೇ ಸ್ವಾತಂತ್ರ್ಯಕ್ಕಿಂತ ಯೇಸುವು ದಯಪಾಲಿಸಿದ ಸ್ವಾತಂತ್ರ್ಯವು ಎಷ್ಟೋ ಉತ್ತಮವಾಗಿತ್ತು