ಯೇಸುವಿನ ಅದ್ಭುತಗಳಿಂದ ಪಾಠಗಳು
“ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಆಯಿತು; . . . ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದರು. ದ್ರಾಕ್ಷಾರಸವು ಸಾಲದೆ ಹೋಗಲಾಗಿ ಯೇಸುವಿನ ತಾಯಿ ಆತನಿಗೆ—ಅವರಲ್ಲಿ ದ್ರಾಕ್ಷಾರಸವಿಲ್ಲ ಎಂದು ಹೇಳಿದಳು.” ಈ ಪ್ರಸಂಗವು ಯೇಸುವಿನ ಪ್ರಥಮ ಅದ್ಭುತಕ್ಕೆ ಸಂದರ್ಭವನ್ನು ಒದಗಿಸಿತು.—ಯೋಹಾನ 2:1-3.
ಅಂಥ ಒಂದು ಸಮಸ್ಯೆಯು ಯೇಸುವಿನ ಗಮನಕ್ಕೆ ತರಲು ತೀರ ನಿಕೃಷ್ಟವೂ, ಅತೀ ಕ್ಷುಲ್ಲಕವೂ, ಆಗಿರಲಿಲ್ಲವೋ? ಒಬ್ಬ ಬೈಬಲ್ ವಿದ್ವಾಂಸರು ವಿವರಿಸುವುದು: “ಮೂಡಲ ದೇಶಗಳಲ್ಲಿ ಅತಿಥಿಸತ್ಕಾರವು ಒಂದು ಪವಿತ್ರ ಕರ್ತವ್ಯವಾಗಿತ್ತು . . . ನಿಜವಾದ ಅತಿಥಿಸತ್ಕಾರವು ವಿಶೇಷವಾಗಿ ಒಂದು ಮದುವೆ ಔತಣದಲ್ಲಿ, ಆಹಾರ ಮತ್ತು ಪಾನೀಯದ ತುಂಬು ಸಮೃದ್ಧಿಯನ್ನು ಅವಶ್ಯಪಡಿಸಿತ್ತು. ಒಂದು ಮದುವೆ ಔತಣದಲ್ಲಿ ಆಹಾರ ಮತ್ತು ಪಾನೀಯದ ಸರಬರಾಯಿಗಳು ಬರಿದಾಗಿ ಹೋಗಿದ್ದರೆ, ಈ ಪೇಚಾಟದಿಂದ ಕುಟುಂಬದ ಮತ್ತು ಯುವ ದಂಪತಿಗಳ ಹೆಸರು ಯಾವಾಗಲೂ ಹಾಳಾಗಿರುತ್ತಿತ್ತು.”
ಆದುದರಿಂದ ಯೇಸು ಕ್ರಿಯೆಗೈದನು. “ಯೆಹೂದ್ಯರ ಶುದ್ಧಾಚಾರದ ಪದ್ಧತಿಯ ಪ್ರಕಾರ ಎರಡು ಮೂರು ಕೊಳಗ ನೀರು ಹಿಡಿಯುವ ಆರು ಕಲ್ಲಿನ ಬಾನೆಗಳು ಅಲ್ಲಿ ಇಟ್ಟಿದ್ದವು” ಎಂಬದನ್ನು ಅವನು ಗಮನಿಸಿದನು. ಯೆಹೂದ್ಯರೊಳಗೆ ಊಟಗಳ ಮುಂಚೆ ಸಂಸ್ಕಾರ ಸಂಬಂಧವಾದ ತೊಳೆಯುವಿಕೆ ಒಂದು ರೂಢಿಯಾಗಿತ್ತು, ಮತ್ತು ಉಪಸ್ಥಿತದಿದ್ದವರ ಅಗತ್ಯಗಳನ್ನು ಪೂರೈಸಲು ಭಾರೀ ಪರಿಮಾಣದ ನೀರು ಆವಶ್ಯಕವಾಗಿತ್ತು. “ಆ ಬಾನೆಗಳಲ್ಲಿ ನೀರು ತುಂಬಿರಿ” ಎಂದು ಅತಿಥಿಗಳನ್ನು ಉಪಚರಿಸುತ್ತಿದ್ದವರಿಗೆ ಯೇಸು ಆಜ್ಞಾಪಿಸಿದನು. ಯೇಸು “ಔತಣದ ಪಾರುಪತ್ಯಗಾರ” ನಾಗಿರಲಿಲ್ಲ, ಆದರೂ ಅವನು ನೇರವಾಗಿ ಮತ್ತು ಅಧಿಕಾರಯುಕ್ತವಾಗಿ ಮಾತಾಡಿದನು. ವೃತ್ತಾಂತವು ತಿಳಿಸುವದು: “ಈಗ, ಔತಣದ ಪಾರುಪತ್ಯಗಾರನು ನೀರನ್ನು ರುಚಿ ನೋಡಿದಾಗ, [ಅದು] ದ್ರಾಕ್ಷಾಮದ್ಯವಾಗಿ ಪರಿಣಮಿಸಿತ್ತು.”—ಯೋಹಾನ 2:6-9, NW; ಮಾರ್ಕ 7:3.
ಒಂದು ಮದುವೆಯಂತಹ ಸಾಧಾರಣವಿಷಯವು ಯೇಸುವಿನ ಪ್ರಥಮ ಅದ್ಭುತದ ಹಿನ್ನಲೆಯಾಗಿತ್ತೆಂಬದು ವಿಲಕ್ಷಣವಾಗಿ ತೋರಬಹುದು, ಆದರೆ ಆ ಪ್ರಸಂಗವು ಯೇಸುವಿನ ಕುರಿತಾಗಿ ಹೆಚ್ಚನ್ನು ಪ್ರಕಟಪಡಿಸುತ್ತದೆ. ಅವನೊಬ್ಬ ಅವಿವಾಹಿತ ವ್ಯಕ್ತಿಯಾಗಿದ್ದನು, ಮತ್ತು ಅನಂತರದ ಸಂದರ್ಭಗಳಲ್ಲಿ ತನ್ನ ಶಿಷ್ಯರೊಂದಿಗೆ ಆತನು ಅವಿವಾಹಿತತನದ ಪ್ರಯೋಜನಗಳನ್ನು ಚರ್ಚಿಸಿದನು. (ಮತ್ತಾಯ 19:12) ಆದಾಗಲೂ, ಒಂದು ಮದುವೆ ಔತಣದಲ್ಲಿ ಅವನ ಉಪಸ್ಥಿತಿಯು ಆತನು ಮದುವೆಯ ವಿರೋಧಿಯಾಗಿರಲಿಲ್ಲವೆಂದು ಪ್ರಕಟಿಸುತ್ತದೆ. ಅವನು ಸಮತೂಕವುಳ್ಳವನಾಗಿದ್ದನು, ಮದುವೆಯ ಏರ್ಪಾಡನ್ನು ಬೆಂಬಲಿಸುವವನಾಗಿದ್ದನು; ಅವನು ಅದನ್ನು ದೇವರ ದೃಷ್ಟಿಯಲ್ಲಿ ಗೌರವಾರ್ಹವಾಗಿರುವಂತಹ ವಿಷಯವನ್ನಾಗಿ ದೃಷ್ಟಿಸಿದನು.—ಇಬ್ರಿಯ 13:4 ಹೋಲಿಸಿರಿ.
ಚರ್ಚಿನ ಕುಶಲಕರ್ಮಿಗಳು ಸಮಯಾನಂತರ ವರ್ಣಿಸಿದಂತೆ ಯೇಸು ಒಬ್ಬ ನಿಷ್ಠುರನಾದ ತಪಸಿಯ್ವಾಗಿರಲಿಲ್ಲ. ಅವನು ಜನರೊಂದಿಗೆ ಬೆರೆಯುವದನ್ನು ಸ್ಪಷ್ಟವಾಗಿಗಿ ಆನಂದಿಸುತ್ತಿದ್ದನು ಮತ್ತು ಸಾಮಾಜಿಕ ಸಹವಾಸ ಮಾಡುವದಕ್ಕೆ ವಿರೋಧಿಯಾಗಿರಲಿಲ್ಲ. (ಲೂಕ 5:29 ಹೋಲಿಸಿರಿ.) ಹೀಗೆ ಅವನ ಕ್ರಿಯೆಗಳು ಆತನ ಹಿಂಬಾಲಕರಿಗೆ ಒಂದು ಪೂರ್ವನಿದರ್ಶನವನ್ನು ಇಟ್ಟವು. ಧಾರ್ಮಿಕತೆಯು ಆನಂದರಹಿತತೆಯ ಅರ್ಥದಲ್ಲಿದೆಯೋ ಎಂಬಂತೆ, ಅವರು ಅನಾವಶ್ಯಕವಾಗಿ ಗಂಭೀರ ಅಥವಾ ಖಿನ್ನರಾಗಿರಬಾರದೆಂದು ಯೇಸು ವೈಯಕ್ತಿಕವಾಗಿ ಪ್ರದರ್ಶಿಸಿದನು. ಇದಕ್ಕೆ ವ್ಯತಿರಿಕ್ತವಾಗಿ, ಸಮಯಾನಂತರ ಕ್ರೈಸ್ತರಿಗೆ ಹೀಗೆ ಆಜ್ಞಾಪಿಸಲಾಯಿತು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ.” (ಫಿಲಿಪ್ಪಿ 4:4) ವಿನೋದವನ್ನು ಸಮಂಜಸವಾದ ಮೇರೆಗಳೊಳಗೆ ಇಡಲು ಕ್ರೈಸ್ತರು ಇಂದು ಜಾಗೃತರಾಗಿದ್ದಾರೆ. ಅವರು ದೇವರ ಸೇವೆಯಲ್ಲಿ ತಮ್ಮ ಆನಂದವನ್ನು ಕಂಡುಕೊಳ್ಳುತ್ತಾರೆ, ಆದರೆ ಯೇಸುವಿನ ಉದಾಹರಣೆಯನ್ನು ಅನುಸರಿಸುತ್ತಾ, ಒಂದು ಸಾಮಾಜಿಕ ಸನ್ನಿವೇಶದಲ್ಲಿ ಒಬ್ಬರಿನ್ನೊಬ್ಬರ ಸಹವಾಸವನ್ನು ಆನಂದಿಸಲು ಅವರು ಕೆಲವೊಮ್ಮೆ ಸಮಯವನ್ನು ಕಂಡುಹಿಡಿಯುತ್ತಾರೆ.
ಯೇಸುವಿನ ಭಾವನೆಗಳ ಕೋಮಲತೆಯನ್ನೂ ಗಮನಿಸಿರಿ. ಅದ್ಭುತವೊಂದನ್ನು ನಡಿಸುವ ಯಾವ ಹಂಗಿನೊಳಗೂ ಅವನಿರಲಿಲ್ಲ. ಈ ಸಂಬಂಧದಲ್ಲಿ ನೆರವೇರಿಸಲ್ಪಡಬೇಕಾಗಿದ್ದ ಯಾವುದೇ ಪ್ರವಾದನೆಯು ಇರಲಿಲ್ಲ. ಕೇವಲ ಆತನ ತಾಯಿಯ ಚಿಂತೆ ಮತ್ತು ವಿವಾಹಿತರಾಗುತ್ತಿದ್ದ ದಂಪತಿಗಳ ಅವಸ್ಥೆಯಿಂದ ಯೇಸು ಭಾವನಾತ್ಮಕವಾಗಿ ಕಲುಕಿಸಲ್ಪಟ್ಟನೆಂಬದು ವ್ಯಕ್ತ. ಅವನು ಅವರ ಅನಿಸಿಕೆಗಳ ಕುರಿತು ಕಾಳಜಿ ವಹಿಸಿದನು ಮತ್ತು ಅವರಿಗೆ ಪೇಚಾಟವನ್ನು ತಪ್ಪಿಸಲು ಬಯಸಿದನು. ಯೇಸು ನಿಮ್ಮಲ್ಲಿ—ನಿಮ್ಮ ದೈನಂದಿನ ಸಮಸ್ಯೆಗಳಲ್ಲಿಯೂ—ನಿಜವಾಗಿ ಆಸಕ್ತನಾಗಿದ್ದಾನೆಂಬ ವಿಷಯದಲ್ಲಿ ಅದು ನಿಮ್ಮ ಭರವಸೆಯನ್ನು ಕಟ್ಟುವದಿಲ್ಲವೋ?—ಇಬ್ರಿಯ 4:14-16 ಹೋಲಿಸಿರಿ.
ಪ್ರತಿಯೊಂದು ಬಾನೆ “ಎರಡು ಮೂರು ಕೊಳಗ ನೀರು ಹಿಡಿಯ” ಬಹುದಿತ್ತಾದದರಿಂದ, ಯೇಸುವಿನ ಅದ್ಭುತವು ದ್ರಾಕ್ಷಾಮದ್ಯದ ಒಂದು ಮಹತ್ತಾದ ಪರಿಮಾಣವನ್ನು ಒಳಗೂಡಿತ್ತು—ಪ್ರಾಯಶಃ 390 ಲಿಟರುಗಳು (105 ಗ್ಯಾಲನ್ಗಳು)! (ಯೋಹಾನ 2:6) ಇಷ್ಟೊಂದು ದೊಡ್ಡ ಪ್ರಮಾಣವು ಯಾಕೆ ಬೇಕಾಗಿತ್ತು? ಯೇಸು, ದೇವರು ಖಂಡಿಸುವಂತಹ ಕುಡಿಕತನವನ್ನು ಪ್ರವರ್ಧಿಸತ್ತಿರಲಿಲ್ಲ. (ಎಫೆಸ 5:18) ಬದಲಾಗಿ, ಅವನು ದೇವರಂತಹ ಔದಾರ್ಯವನ್ನು ಪ್ರದರ್ಶಿಸುತ್ತಿದ್ದನು. ದ್ರಾಕ್ಷಾರಸವು ಒಂದು ಸರ್ವೇಸಾಮಾನ್ಯವಾದ ಪಾನೀಯವಾಗಿದದ್ದರಿಂದ, ಹೆಚ್ಚಾದದ್ದನ್ನು ಬೇರೆ ಸಂದರ್ಭಗಳಲ್ಲಿ ಉಪಯೋಗಿಸಬಹುದಾಗಿತ್ತು.—ಹೋಲಿಸಿರಿ ಮತ್ತಾಯ 14:14-20; 15:32-37.
ಆದಿ ಕ್ರೈಸ್ತರು ಯೇಸುವಿನ ಔದಾರ್ಯದ ಉದಾಹರಣೆಯನ್ನು ಅನುಕರಿಸಿದರು. (ಅ. ಕೃತ್ಯಗಳು 4:34, 35.) ಮತ್ತು ಇಂದು ತದ್ರೀತಿಯಲ್ಲಿ ಯೆಹೋವನ ಜನರು ‘ಕೊಡಲು’ ಉತ್ತೇಜಿಸಲ್ಪಡುತ್ತಾರೆ. (ಲೂಕ 6:38) ಆದಾಗಲೂ, ಯೇಸುವಿನ ಮೊದಲ ಅದ್ಭುತಕ್ಕೆ ಒಂದು ಪ್ರವಾದನಾತ್ಮಕ ಅರ್ಥವೂ ಇದೆ. ಹಸಿವನ್ನು ಸಂಪೂರ್ಣವಾಗಿ ನಿರ್ಮೂಲಮಾಡುತ್ತಾ, ದೇವರು ಉದಾರವಾಗಿ “ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು” ಒದಗಿಸುವ ಒಂದು ಭವಿಷ್ಯತ್ತಿನ ಸಮಯಕ್ಕೆ ಅದು ನಿರ್ದೇಶಿಸುತ್ತದೆ.—ಯೆಶಾಯ 25:6.
ಆದರೂ, ದೈಹಿಕ ಗುಣಪಡಿಸುವಿಕೆಯನ್ನು ಒಳಗೊಂಡಿದ್ದ ಯೇಸು ನಡಿಸಿದಂತಹ ಅನೇಕ ಅದ್ಭುತಗಳ ಕುರಿತು ಏನು? ನಾವು ಅವುಗಳಿಂದ ಏನನ್ನು ಕಲಿಯಬಲ್ಲೆವು?
ಸಬ್ಬತ್ ದಿನದಂದು ಒಳ್ಳೆಯದನ್ನು ಮಾಡುವುದು
“ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ.” ಈ ಶಬ್ದಗಳನ್ನು ಯೇಸು, 38 ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ಮನುಷ್ಯನಿಗೆ ನುಡಿದನು. ಸುವಾರ್ತಾ ದಾಖಲೆಯು ಮುಂದುವರಿಯುವುದು: “ಆ ಕ್ಷಣವೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆದನು.” ಆಶ್ಚರ್ಯಕರವಾಗಿ, ಸನ್ನಿವೇಶದ ಈ ಬದಲಾವಣೆಯನ್ನು ಎಲ್ಲರೂ ಮೆಚ್ಚಲಿಲ್ಲ. ದಾಖಲೆಯು ತಿಳಿಸುವದು: “ಯೇಸು ಸಬ್ಬತ್ದಿನದಂದು ಇಂಥ ಕೆಲಸಗಳನ್ನು ಮಾಡುತ್ತಾನಲ್ಲಾ ಎಂದು (ಯೆಹೂದ್ಯರು, NW) ಆತನನ್ನು ಹಿಂಸಿಸುವವರಾದರು.”—ಯೋಹಾನ 5:1-9, 16.
ಸಬ್ಬತ್ದಿನವು, ಎಲ್ಲರಿಗೆ ಒಂದು ವಿರಾಮದ ಮತ್ತು ಸಂತೋಷಪಡಿಸುವಿಕೆಯ ದಿನವಾಗಿರಲು ಉದ್ದೇಶಿಸಲ್ಪಟ್ಟಿತ್ತು. (ವಿಮೋಚನಕಾಂಡ 20:8-11) ಆದರೂ ಯೇಸುವಿನ ದಿನದೊಳಗೆ, ಅದು ದಬ್ಬಾಳಿಕೆಯ ಮಾನವ ನಿರ್ಮಿತ ನಿಯಮಗಳ ಒಂದು ಜಾಲವಾಗಿತ್ತು. ಟಾಲ್ಮೂಡ್ನ ಅತಿ ಲಂಬವಾದ ಸಬ್ಬತ್ನಿಯಮಗಳ ವಿಭಾಗದಲ್ಲಿ, “ಸ್ವಸ್ಥ ಬುದ್ಧಿಯ ಒಬ್ಬನು ವಿರಳವಾಗಿ ಗಂಭೀರವೆಂದು ಎಣಿಸುವಂತಹ ವಿಷಯಗಳನ್ನು ಪ್ರಮುಖ ಧಾರ್ಮಿಕ ಪ್ರಮುಖತೆಯದ್ದಾಗಿ ಗಂಭೀರವಾಗಿ ಚರ್ಚಿಸಲ್ಪಟ್ಟಿವೆ” ಎಂದು ವಿದ್ವಾಂಸ ಆಲ್ಫ್ರೆಡ್ ಎಡರ್ಶೈಮ್ ಬರೆದರು. (ದ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜೀಜಸ್ ದ ಮೆಸೈಯ) ಒಬ್ಬ ಯೆಹೂದಿಯ ಜೀವಿತದ ಕಾರ್ಯತಃ ಪ್ರತಿಯೊಂದು ರೂಪವನ್ನು ನಿಯಂತ್ರಿಸಿದ ಅತ್ಯಲ್ಪ, ನಿರಂಕುಶ ನಿಯಮಗಳಿಗೆ ರಬ್ಬಿಗಳು—ಅನೇಕ ಸಲ ಮಾನವನ ಅನಿಸಿಕೆಗಳಿಗಾಗಿ ಕಠೋರ ಅನಾದರದೊಂದಿಗೆ—ಸಾವುಬದುಕಿನ ಅತಿಮುಖ್ಯ ಧಾರ್ಮಿಕ ಮಹತ್ವವನ್ನು ಜೋಡಿಸಿದರು. ಒಂದು ಸಬ್ಬತ್ ನಿಯಮವು ಹೀಗೆ ವಿಧಿಸಿತು: “ಕಟ್ಟಡವೊಂದು ಒಬ್ಬ ಮನುಷ್ಯನ ಮೇಲೆ ಬಿದ್ದಲ್ಲಿ ಮತ್ತು ಅವನಲ್ಲಿ ಇದ್ದಾನೋ ಇಲ್ಲವೋ, ಅಥವಾ ಅವನು ಜೀವಂತನಾಗಿದ್ದಾನೋ ಅಥವಾ ಸತ್ತಿದ್ದಾನೋ, ಅಥವಾ ಅವನೊಬ್ಬ ವಿಧರ್ಮಿಯೋ ಯಾ ಒಬ್ಬ ಇಸ್ರಾಯೇಲ್ಯನಾಗಿದ್ದಾನೋ ಎಂಬ ಸಂದೇಹವಿದ್ದಲ್ಲಿ, ಅವರು ಅವನ ಮೇಲಿನಿಂದ ಅವಶೇಷಗಳನ್ನು ತೆಗೆಯಬಹುದು. ಅವನು ಜೀವಂತನಾಗಿರುವುದಾಗಿ ಅವರು ಕಂಡುಹಿಡಿದರೆ ಅವನ ಮೇಲಿನಿಂದ ಇನ್ನೂ ಹೆಚ್ಚನ್ನು ತೆಗೆಯಬಹುದು; ಆದರೆ [ಅವನು] ಸತ್ತಿರುವಲ್ಲಿ, ಅವರು ಅವನನ್ನು ಬಿಟ್ಟುಬಿಡಬೇಕು.”—ಟ್ರಾಕ್ಟೇಟ್ ಯೊಮಾ 8:7, ದ ಮಿಶ್ನಾ, ಹರ್ಬರ್ಟ್ ಡ್ಯಾನ್ಬಿಯಿಂದ ಭಾಷಾಂತರಿಸಲ್ಪಟ್ಟದ್ದು.
ಯೇಸು ಅಂತಹ ಅತಿ ಸೂತ್ರತೆಯ, ಅತಿ ಸೂಕ್ಷ್ಮ ತರ್ಕಗಳನ್ನು ಹೇಗೆ ದೃಷ್ಟಿಸಿದನು? ಸಬ್ಬತ್ತಿನಂದು ಗುಣಪಡಿಸಿದ್ದಕ್ಕಾಗಿ ಟೀಕಿಸಲ್ಪಟ್ಟಾಗ, ಅವನು ಅಂದದ್ದು: “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ.” (ಯೋಹಾನ 5:17) ತನ್ನನ್ನೇ ಐಶ್ವರ್ಯವಂತನನ್ನಾಗಿ ಮಾಡಲು ಯೇಸು ಐಹಿಕ ಕೆಲಸವನ್ನು ಮಾಡುತ್ತಿರಲಿಲ್ಲ. ಬದಲಾಗಿ ಅವನು ದೇವರ ಚಿತ್ತವನ್ನು ಮಾಡುತ್ತಿದ್ದನು. ಲೇವಿಯರು ತಮ್ಮ ಪವಿತ್ರ ಸೇವೆಯನ್ನು ಸಬ್ಬತ್ತಿನಂದು ಮುಂದುವರಿಸಲು ಹೇಗೆ ಅನುಮತಿಸಲ್ಪಟ್ಟಿದ್ದರೋ ಹಾಗೆಯೇ ಯೇಸು ಮೆಸ್ಸೀಯನೋಪಾದಿ ತನ್ನ ದೇವ ನೇಮಿತ ಕರ್ತವ್ಯಗಳನ್ನು, ದೇವರ ನಿಯಮವನ್ನು ಉಲಂಘಿಸದೆ ಯುಕ್ತವಾಗಿ ನಡಿಸಸಾಧ್ಯವಿತ್ತು.—ಮತ್ತಾಯ 12:5.
ಯೇಸುವಿನ ಸಬ್ಬತ್ದಿನದ ಗುಣಪಡಿಸುವಿಕೆಗಳು, ಯೆಹೂದಿ ಶಾಸ್ತ್ರಿಗಳು ಮತ್ತು ಫರಿಸಾಯರನ್ನು “ಧರ್ಮವನ್ನು ಅತಿಯಾಗಿ ಆಚರಿಸು” ವವರಾಗಿ, ಅವರ ಯೋಚನೆಯಲ್ಲಿ ಕಟ್ಟುನಿಟ್ಟಿನವರು ಹಾಗೂ ಸಮತೋಲನವಿಲ್ಲದವರಾಗಿ ಬಯಲುಪಡಿಸಿತು. (ಪ್ರಸಂಗಿ 7:16) ಖಂಡಿತವಾಗಿ, ಒಳ್ಳೇ ಕಾರ್ಯಗಳು ವಾರದ ಕೆಲವು ನಿರ್ದಿಷ್ಟ ದಿನಗಳಿಗೆ ನಿರ್ಬಂಧಿಸಲ್ಪಡಬೇಕೆಂಬುದು ದೇವರ ಚಿತ್ತವಾಗಿರಲಿಲ್ಲ, ಅಥವಾ ಸಬ್ಬತ್ತನ್ನು ಪ್ರಯೋಜನವಿಲ್ಲದ ಅತಿ ಸೂತ್ರತೆಯ ಒಂದು ಕಾರ್ಯವಿಧಾನವಾಗಿರಲು ದೇವರು ಉದ್ದೇಶಿಸಿರಲಿಲ್ಲ. ಮಾರ್ಕ 2:27 ರಲ್ಲಿ ಯೇಸು ಹೇಳಿದ್ದು: “ಸಬ್ಬತ್ದಿನವು ಮನುಷ್ಯರಿಗೋಸ್ಕರ ಉಂಟಾಯಿತೇ ಹೊರತು ಮನುಷ್ಯರು ಸಬ್ಬತ್ದಿನಕ್ಕೋಸ್ಕರ ಉಂಟಾಗಲಿಲ್ಲ.” ಯೇಸು ಜನರನ್ನು ಪ್ರೀತಿಸಿದನು, ನಿರಂಕುಶ ನಿಯಮಗಳನ್ನಲ್ಲ.
ಅಂತೆಯೇ ಕ್ರೈಸ್ತರು ಇಂದು ತಮ್ಮ ಆಲೋಚನೆಯಲ್ಲಿ ಅತಿಯಾಗಿ ಕಟ್ಟುನಿಟ್ಟಿನವರು ಅಥವಾ ನಿಯಮಾಭಿಮುಖವಾಗಿರುವವರು ಆಗಿರದೆ ಇರುವದರಿಂದ ಒಳ್ಳೇದನ್ನು ಮಾಡುತ್ತಾರೆ. ಸಭೆಯಲ್ಲಿ ಅಧಿಕಾರದಲ್ಲಿರುವವರು ಇತರರ ಮೇಲೆ ವಿಪರೀತವಾದ ಮಾನವ ನಿರ್ಮಿತ ನಿಯಮಗಳು ಮತ್ತು ಕಾರ್ಯನೀತಿಗಳ ಹೊರೆ ಹೊರಿಸುವುದರಿಂದ ದೂರವಿರುತ್ತಾರೆ. ಯೇಸುವಿನ ಮಾದರಿಯು ನಾವು ಒಳ್ಳೇದನ್ನು ಮಾಡಲು ಸಂದರ್ಭಗಳಿಗಾಗಿ ಹುಡುಕುವಂತೆಯೂ ನಮ್ಮನ್ನು ಉತ್ತೇಜಿಸುತ್ತದೆ. ಉದಾಹರಣೆಗಾಗಿ, ಒಬ್ಬ ಕ್ರೈಸ್ತನು ತಾನು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಔಪಚಾರಿಕವಾಗಿ ತೊಡಗಿರುವಾಗ ಅಥವಾ ವೇದಿಕೆಯ ಮೇಲೆ ಭಾಷಣ ನೀಡುತ್ತಿರುವಾಗ ಮಾತ್ರ ಬೈಬಲ್ ಸತ್ಯಗಳನ್ನು ಹಂಚುವೆನು ಎಂದು ತರ್ಕಿಸಲಾರನು. ಅಪೊಸ್ತಲ ಪ್ರೇತ್ರನು ಹೇಳುವುದು, ಕ್ರೈಸ್ತನು ತನ್ನಲ್ಲಿರುವ “ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧ” ನಾಗಿರಬೇಕು. (1 ಪೇತ್ರ 3:15) ಒಳ್ಳೇದನ್ನು ಮಾಡುವದಕ್ಕೆ ಸಮಯದ ಯಾವದೇ ನಿರ್ಬಂಧಗಳಿಲ್ಲ.
ಕನಿಕರದಲ್ಲಿ ಒಂದು ಪಾಠ
ಇನ್ನೊಂದು ಗಮನಾರ್ಹವಾದ ಅದ್ಭುತವು ಲೂಕ 7:11-17 ರಲ್ಲಿ ದಾಖಲಿಸಲ್ಪಟ್ಟಿದೆ. ವೃತ್ತಾಂತಕ್ಕನುಸಾರ, ಯೇಸು “ನಾಯಿನೆಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರೂ ಇನ್ನೂ ಅನೇಕ ಜನರೂ ಹೋಗುತ್ತಿದ್ದರು.” ಈ ದಿನದ ವರೆಗೂ, ನೆಯಿನಿನ ಆಧುನಿಕ ಅರಬಿ ಹಳ್ಳಿಯ ಅಗ್ನೇಯಕ್ಕೆ ಸ್ಮಶಾನ ಸ್ಥಳಗಳನ್ನು ಕಾಣಬಹುದು. “ಆತನು ಊರಬಾಗಲಿನ ಹತ್ತಿರಕ್ಕೆ ಬಂದಾಗ,” ಒಂದು ಕೋಲಾಹಲದ ದೃಶ್ಯವನ್ನು ಆತನು ಎದುರಿಸಿದನು. “ಸತ್ತುಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು. ಇವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ಗಂಡಸತ್ತವಳಾಗಿದ್ದಳು. ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು.” ಪ್ರಾಚೀನ ಸಮಯಗಳಿಂದ “ಹೂಣಿಡುವ ಕ್ರಮವು ಬದಲಾಗಿಲ್ಲ” ಎಂದು ಎಚ್. ಬಿ. ಟ್ರಿಸ್ಟ್ರಾಮ್ ಗಮನಿಸಿದರು, ಮತ್ತು ಕೂಡಿಸಿದ್ದು: “ವೃತ್ತಿಪರ ಶೋಕಿಸುವ ಹೆಂಗಸರಿಂದ ನಡಿಸಲ್ಪಟ್ಟ ಚಟ್ಟದ ಮುಂದೆ ಹೋಗುವ ಹೆಂಗಸರನ್ನು ನಾನು ನೋಡಿದ್ದೇನೆ. ಅವರು ತಮ್ಮ ತೋಳುಗಳನ್ನು ಬೀಸುತ್ತಾರೆ, ಮತ್ತು ದುಃಖದ ಉನ್ಮತ್ತ ಭಾವಾಭಿನಯಗಳೊಂದಿಗೆ ತಮ್ಮ ಕೂದಲನ್ನು ಎಳೆಯುತ್ತಾರೆ, ಮತ್ತು ಸತ್ತವರ ಹೆಸರನ್ನು ಕಿರಿಚುತ್ತಿರುತ್ತಾರೆ.”—ಇಸ್ರ್ನ್ಟ್ ಕಸ್ಟಮ್ಸ್ ಇನ್ ಬೈಬಲ್ ಲ್ಯಾಂಡ್ಸ್.
ಇಂತಹ ಕೋಲಾಹಲದ ಅವ್ಯವಸ್ಥೆಯ ಮಧ್ಯೆ, ದುಃಖಿಸುತ್ತಿದ್ದ ಒಬ್ಬ ವಿಧವೆ ನಡೆಯುತ್ತಿದ್ದಳು. ಅವಳ ಮುಖಭಾವವೇ ದುಃಖವನ್ನು ಪ್ರತಿಬಿಂಬಿಸುತ್ತಿದ್ದಿರಬೇಕು. ಈಗಾಗಲೇ ತನ್ನ ಗಂಡನನ್ನು ಕಳೆದುಕೊಂಡವಳಾಗಿ, ಅವಳು ತನ್ನ ಮಗನನ್ನು, ಲೇಖಕನಾದ ಹರ್ಬರ್ಟ್ ಲಾಕ್ಯರ್ರವರ ಮಾತಿನಂತೆ “ತನ್ನ ಮುದಿಪ್ರಾಯದ ಕೋಲಾಗಿ, ತನ್ನ ಏಕಾಂಗಿತನದ ಸಾಂತ್ವನವಾಗಿ—ಮನೆಯ ಬೆಂಬಲ ಮತ್ತು ಕಂಬವಾಗಿ” ದೃಷ್ಟಿಸುತ್ತಿದ್ದಳು. “ಅವಳ ಏಕಮಾತ್ರ ಪುತ್ರನ ನಷ್ಟದಿಂದ, ಉಳಿದಂತಹ ಕೊನೆಯ ಬೆಂಬಲವು ನಿರ್ಮೂಲವಾಗಿತ್ತು.” (ಆಲ್ ದ ಮಿರಕ್ಲ್ಸ್ ಆಫ್ ದ ಬೈಬಲ್) ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಲೂಕನ ವಾಗ್ವೈಖರಿಯ ಮಾತುಗಳಲ್ಲಿ “ಸ್ವಾಮಿಯು ಆಕೆಯನ್ನು ಕಂಡು ಕನಿಕರಿಸಿ [ಕನಿಕರದಿಂದ ಪ್ರಚೋದಿತನಾಗಿ, NW]—ಅಳಬೇಡ ಎಂದು ಆಕೆಗೆ ಹೇಳಿ” ದನು. “ಕನಿಕರಿಸಿ” ಎಂಬ ವಾಕ್ಸರಣಿಯು “ಕರುಳುಗಳು” ಎಂದು ಅಕ್ಷರಶಃವಾಗಿ ಅರ್ಥೈಸುವ ಗ್ರೀಕ್ ಶಬ್ದದಿಂದ ತೆಗೆಯಲ್ಪಟ್ಟಿದೆ. ಅದರ ಅರ್ಥ “ಒಬ್ಬನು ಆಂತರ್ಯದ ಆಳದಿಂದ ಭಾವನಾತ್ಮಕವಾಗಿ ಪ್ರೇರಿಸಲ್ಪಡುವುದು.” (ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್) ಹೌದು, ಯೇಸುವಿನ ಭಾವನೆಗಳು ಗಾಢವಾಗಿ ಕಲಕಿಸಲ್ಪಟ್ಟಿದ್ದವು.
ಯೇಸುವಿನ ಸ್ವಂತ ತಾಯಿ ಪ್ರಾಯಶಃ ಈ ಸಮಯದಲ್ಲಿ ಒಬ್ಬ ವಿಧವೆಯಾಗಿದ್ದಳು, ಆದುದರಿಂದ ಅವನು ತನ್ನ ದತ್ತು ತಂದೆಯಾದ ಯೋಸೇಫನನ್ನು ಕಳೆದುಕೊಂಡದರ್ದಲ್ಲಿ ವಿಯೋಗದ ದುಃಖವನ್ನು ಚೆನ್ನಾಗಿ ಅರಿತಿದ್ದನು ಎಂಬದು ಸಂಭವನೀಯ. (ಯೋಹಾನ 19:25-27 ಹೋಲಿಸಿ.) ವಿಧವೆಯು ಯೇಸುವನ್ನು ಬೇಡಿಕೊಳ್ಳಬೇಕಾಗಿರಲಿಲ್ಲ. ಮೋಶೆಯ ನಿಯಮಶಾಸ್ತ್ರಕ್ಕನುಸಾರ ಒಂದು ಶವವನ್ನು ಸ್ಪರ್ಶಿಸುವುದು ಒಬ್ಬನನ್ನು ಅಶುದ್ಧನನ್ನಾಗಿ ಮಾಡುವ ವಾಸ್ತವಾಂಶದ ಹೊರತೂ, ಆತನು ಸಹಜತೆಯಿಂದ “ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಿ” ದನು. (ಅರಣ್ಯಕಾಂಡ 19:11) ತನ್ನ ಅದ್ಭುತಕರ ಶಕ್ತಿಯೊಂದಿಗೆ, ಯೇಸು ಅಶುದ್ಧತನದ ಮೂಲವನ್ನೇ ತೆಗೆಯಶಕ್ತನಾಗಿದ್ದನು! “ಆಗ ಆತನು—ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು.”
ಕನಿಕರದ ಕುರಿತಾಗಿ, ಭಾವನೆಗಳನ್ನು ಕಲುಕಿಸುವ ಎಂತಹ ಒಂದು ಪಾಠ! ಈ “ಕಡೇ ದಿವಸಗಳಲ್ಲಿ” ತೋರಿಸಲ್ಪಡುವ ಪ್ರೀತಿರಹಿತ, ನಿರ್ದಯ ಮನೋಭಾವನೆಗಳನ್ನು ಕ್ರೈಸ್ತರು ಅನುಕರಿಸಬಾರದು. (2 ತಿಮೊಥೆಯ 3:1-5) ವ್ಯತಿರಿಕ್ತವಾಗಿ, 1 ಪೇತ್ರ 3:8 ಉತ್ತೇಜಿಸುವುದು: “ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣತ್ಣಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” ನಮ್ಮ ಪರಿಚಿತರು ಒಂದು ಮರಣ ಅಥವಾ ಗಂಭೀರ ಅಸ್ವಸ್ಥತೆಯನ್ನು ಅನುಭವಿಸುವದಾದರೆ, ನಾವು ಒಂದು ಪುನರುತ್ಥಾನವನ್ನು ನಡಿಸಲಾರೆವು ಅಥವಾ ಅಸ್ವಸ್ಥನನ್ನು ಗುಣಪಡಿಸಲಾರೆವು. ಆದರೆ ಪ್ರಾಯಶಃ ನಾವು ಕೇವಲ ಅಲ್ಲಿ ಉಪಸ್ಥಿತರಿದ್ದು, ಅವರೊಂದಿಗೆ ಅಳುವುದರ ಮೂಲಕ, ನಾವು ಪ್ರಾಯೋಗಿಕ ಸಹಾಯವನ್ನು ಮತ್ತು ಸಾಂತ್ವನವನ್ನು ನೀಡಬಲ್ಲೆವು.—ರೋಮಾಪುರ 12:15.
ಯೇಸುವಿನಿಂದ ನಡಿಸಲ್ಪಟ್ಟ ಈ ನಾಟಕೀಯ ಪುನರುತ್ಥಾನವು ಭವಿಷತ್ತಿಗೂ—“ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ” ಒಂದು ಕಾಲಕ್ಕೆ—ನಿರ್ದೇಶಿಸುತ್ತದೆ! (ಯೋಹಾನ 5:28, 29) ಅಗಲಿದ ತಾಯಂದಿರು, ತಂದೆಯರು, ಮಕ್ಕಳು ಮತ್ತು ಸ್ನೇಹಿತರು ಸಮಾಧಿಯಿಂದ ಹಿಂದಿರುಗುವಾಗ ಭೂವ್ಯಾಪಕವಾಗಿ, ವಿಯೋಗ ಹೊಂದಿದವರು ವೈಯಕ್ತಿಕವಾಗಿ ಯೇಸುವಿನ ಕನಿಕರವನ್ನು ಅನುಭವಿಸುವರು!
ಅದ್ಭುತಗಳಿಂದ ಪಾಠಗಳು
ಹಾಗಾದರೆ, ಸ್ಪಷ್ಟವಾಗಿಗಿ, ಯೇಸುವಿನ ಅದ್ಭುತಗಳು ಶಕ್ತಿಯ ರೋಮಾಂಚಕ ಪ್ರದರ್ಶನಗಳಿಗಿಂತ ಹೆಚ್ಚಿನವುಗಳಾಗಿದ್ದವು. ಅವು ದೇವರನ್ನು ಮಹಿಮೆಪಡಿಸಿದವು, ಹೀಗೆ ‘ದೇವರನ್ನು ಕೊಂಡಾಡಲು [ಮಹಿಮೆಪಡಿಸಲು NW]’ ಪ್ರಚೋದಿಸಲ್ಪಟ್ಟ ಕ್ರೈಸ್ತರಿಗೆ ಒಂದು ನಮೂನೆಯನ್ನು ಇಟ್ಟಿತು. (ರೋಮಾಪುರ 15:6) ಅವು ಒಳ್ಳೆಯದನ್ನು ಮಾಡುವುದನ್ನು, ಔದಾರ್ಯ ತೋರಿಸುವುದನ್ನು, ಕನಿಕರವನ್ನು ಪ್ರದರ್ಶಿಸುವದನ್ನು ಉತ್ತೇಜಿಸಿದವು. ಹೆಚ್ಚು ಪ್ರಮುಖವಾಗಿ, ಅವು ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯಲ್ಲಿ ನಡಿಸಲ್ಪಡುವ ಮಹತ್ಕಾರ್ಯಗಳ ಒಂದು ಮುನ್ನೋಟವಾಗಿ ಕಾರ್ಯನಡಿಸಿದವು.
ಭೂಮಿಯಲ್ಲಿದ್ದಾಗ, ಯೇಸು ತನ್ನ ಮಹತ್ಕಾರ್ಯಗಳನ್ನು ಸಂಬಂಧಿತವಾಗಿ ಚಿಕ್ಕದ್ದಾಗಿದ್ದ ಒಂದು ಭೂವಠಾರದಲ್ಲಿ ನಡಿಸಿದನು. (ಮತ್ತಾಯ 15:24) ಮಹಿಮೆಪಡಿಸಲ್ಪಟ್ಟ ರಾಜನೋಪಾದಿ, ಆತನ ನ್ಯಾಯಾಧಿಕಾರವು ಭೂವ್ಯಾಪಕವಾಗಿ ಹರಡುವುದು! (ಕೀರ್ತನೆ 72:8) ಯೇಸು ಭೂಮಿಯಲ್ಲಿದ್ದಾಗ, ಆತನ ಅದ್ಭುತಕರ ಗುಣಪಡಿಸುವಿಕೆಗಳನ್ನು ಮತ್ತು ಪುನರುತ್ಥಾನಗಳನ್ನು ಪಡೆದವರು ಕಟ್ಟಕಡೆಗೆ ಸತ್ತರು. ಆತನ ಸ್ವರ್ಗೀಯ ರಾಜತ್ವದ ಕೆಳಗೆ, ನಿತ್ಯ ಜೀವಕ್ಕೆ ದಾರಿಯನ್ನು ತೆರೆಯುತ್ತಾ, ಪಾಪ ಮತ್ತು ಮರಣವು ಪೂರ್ಣವಾಗಿ ತೆಗೆಯಲ್ಪಡುವುದು. (ರೋಮಾಪುರ 6:23; ಪ್ರಕಟನೆ 21:3, 4) ಹೌದು, ಯೇಸುವಿನ ಅದ್ಭುತಗಳು ಒಂದು ಮಹಿಮಾಭರಿತ ಭವಿಷ್ಯತ್ತಿಗೆ ನಿರ್ದೇಶಿಸುತ್ತವೆ. ಅದರ ಭಾಗವಾಗಿರುವ ಒಂದು ನಿಜ ನಿರೀಕ್ಷೆಯನ್ನು ಬೆಳೆಸಲು ಯೆಹೋವನ ಸಾಕ್ಷಿಗಳು ಲಕ್ಷಾಂತರ ಜನರಿಗೆ ಸಹಾಯಮಾಡಿದ್ದಾರೆ. ಆ ಸಮಯವು ಬರುವ ತನಕ, ಯೇಸು ಕ್ರಿಸ್ತನ ಅದ್ಭುತಗಳಿಂದ ಬೇಗನೇ ಏನು ನಡೆಯಲಿದೆಯೆಂಬದರ ಒಂದು ಆಶ್ಚರ್ಯಕರವಾದ ಮುನ್ನರಿವು ಒದಗಿಸಲ್ಪಟ್ಟಿದೆ!
[ಪುಟ 7 ರಲ್ಲಿರುವ ಚಿತ್ರ]
ಯೇಸು ನೀರನ್ನು ದ್ರಾಕ್ಷಾಮದ್ಯವಾಗಿ ಮಾರ್ಪಡಿಸುತ್ತಾನೆ