“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ” ಇರಲಿ
“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.
1. ತನ್ನ ಮರಣಕ್ಕೆ ತುಸು ಮುಂಚೆ ಯೇಸು ಯಾವ ಗುಣವನ್ನು ಒತ್ತಿ ಹೇಳಿದನು?
“ಪ್ರಿಯ ಮಕ್ಕಳೇ.” (ಯೋಹಾನ 13:33) ಈ ಕೋಮಲ ಮಾತುಗಳೊಂದಿಗೆ ಯೇಸು ತನ್ನ ಮರಣಕ್ಕೆ ಮುಂಚಿನ ಸಾಯಂಕಾಲ ತನ್ನ ಅಪೊಸ್ತಲರನ್ನು ಸಂಬೋಧಿಸಿದನು. ಅವರೊಂದಿಗೆ ಮಾತಾಡುತ್ತಿದ್ದಾಗ ಅವನು ಈ ಕರುಣಾಭರಿತ ಅಭಿವ್ಯಕ್ತಿಯನ್ನು ಈ ಹಿಂದೆ ಉಪಯೋಗಿಸಿದ್ದನೆಂಬ ಯಾವ ದಾಖಲೆಯೂ ಸುವಾರ್ತಾ ವೃತ್ತಾಂತಗಳಲ್ಲಿಲ್ಲ. ಆದರೆ ಆ ವಿಶೇಷ ರಾತ್ರಿಯಂದು, ತನ್ನ ಹಿಂಬಾಲಕರಿಗಾಗಿ ಅವನಲ್ಲಿದ್ದ ಆಳವಾದ ಪ್ರೀತಿಯನ್ನು ತಿಳಿಯಪಡಿಸಲು ಈ ಮಮತೆಯ ಸಂಬೋಧನೆಯನ್ನು ಉಪಯೋಗಿಸುವಂತೆ ಅವನು ಪ್ರಚೋದಿಸಲ್ಪಟ್ಟನು. ವಾಸ್ತವದಲ್ಲಿ ಆ ರಾತ್ರಿ ಯೇಸು ಸುಮಾರು 30 ಬಾರಿ ಪ್ರೀತಿಯ ಕುರಿತು ಮಾತಾಡಿದನು. ಈ ಗುಣವನ್ನು ಅವನು ಅಷ್ಟು ಒತ್ತಿ ಹೇಳಿದ್ದೇಕೆ?
2. ಪ್ರೀತಿಯನ್ನು ತೋರಿಸುವುದು ಕ್ರೈಸ್ತರಿಗೆ ಅಷ್ಟು ಪ್ರಾಮುಖ್ಯವಾದ ವಿಷಯವಾಗಿದೆ ಏಕೆ?
2 ಪ್ರೀತಿಯು ಅಷ್ಟು ಪ್ರಾಮುಖ್ಯವೇಕೆ ಎಂಬುದನ್ನು ಯೇಸು ವಿವರಿಸಿದನು. “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಅವನು ಹೇಳಿದನು. (ಯೋಹಾನ 13:35; 15:12, 17) ಕ್ರಿಸ್ತನ ಹಿಂಬಾಲಕರಾಗಿರುವುದಕ್ಕೂ ಸಹೋದರ ಪ್ರೀತಿಯನ್ನು ತೋರಿಸುವುದಕ್ಕೂ ಪರಸ್ಪರ ಸಂಬಂಧವಿದೆ. ಸತ್ಯ ಕ್ರೈಸ್ತರು ಗುರುತಿಸಲ್ಪಡುವುದು ಅವರ ವಿಚಿತ್ರ ರೀತಿಯ ಉಡುಪಿನಿಂದಲೂ ಅಲ್ಲ, ಅವರ ಅಸಾಮಾನ್ಯವಾದ ಪದ್ಧತಿಗಳಿಂದಲೂ ಅಲ್ಲ, ಬದಲಾಗಿ ಅವರು ಒಬ್ಬರಿಗೊಬ್ಬರು ತೋರಿಸುವ ಬೆಚ್ಚಗಿನ ಮತ್ತು ಕೋಮಲವಾದ ಪ್ರೀತಿಯಿಂದಲೇ. ಈ ಗಮನಾರ್ಹವಾದ ರೀತಿಯ ಪ್ರೀತಿಯುಳ್ಳವರಾಗಿರುವುದು, ಹಿಂದಿನ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ, ಕ್ರಿಸ್ತನ ಶಿಷ್ಯರಿಗಿರುವ ಮೂರು ಪ್ರಮುಖ ಆವಶ್ಯಕತೆಗಳಲ್ಲಿ ಎರಡನೆಯದ್ದಾಗಿರುತ್ತದೆ. ಈ ಆವಶ್ಯಕತೆಯನ್ನು ಪೂರೈಸುತ್ತಾ ಇರಲು ನಮಗೆ ಯಾವುದು ಸಹಾಯಮಾಡುವುದು?
“ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ” ಹೋಗುವುದು
3. ಪ್ರೀತಿಯ ಕುರಿತು ಅಪೊಸ್ತಲ ಪೌಲನು ಯಾವ ಬುದ್ಧಿವಾದವನ್ನು ಕೊಟ್ಟನು?
3 ಕ್ರಿಸ್ತನ ಒಂದನೆಯ ಶತಮಾನದ ಹಿಂಬಾಲಕರಲ್ಲಿದ್ದಂತೆಯೇ, ಈ ಗಮನಾರ್ಹವಾದ ಪ್ರೀತಿಯು ಇಂದು ಕ್ರಿಸ್ತನ ನಿಜ ಹಿಂಬಾಲಕರ ನಡುವೆ ಕಂಡುಬರುತ್ತದೆ. ಒಂದನೆಯ ಶತಮಾನದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ಸಹೋದರಸ್ನೇಹವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದು . . . ಸಹೋದರರನ್ನೆಲ್ಲಾ ಪ್ರೀತಿಸುವವರಾಗಿಯೇ ಇದ್ದೀರಿ.” ಹಾಗಿದ್ದರೂ ಪೌಲನು ಕೂಡಿಸಿ ಹೇಳಿದ್ದು: “ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಪ್ರಬೋಧಿಸುತ್ತೇವೆ.” (1 ಥೆಸಲೊನೀಕ 3:12; 4:9, 10) ನಾವು ಸಹ ಪೌಲನ ಈ ಬುದ್ಧಿವಾದವನ್ನು ಹೃದಯಕ್ಕೆ ತೆಗೆದುಕೊಂಡು ಒಬ್ಬರಿಗೊಬ್ಬರು “ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ” ಹೋಗಲು ಪ್ರಯತ್ನಿಸುವುದು ಆವಶ್ಯಕ.
4. ಪೌಲ ಮತ್ತು ಯೇಸುವಿಗನುಸಾರ ನಾವು ಯಾರಿಗೆ ವಿಶೇಷ ಪರಿಗಣನೆಯನ್ನು ತೋರಿಸಬೇಕು?
4 ಅದೇ ಪ್ರೇರಿತ ಪತ್ರದಲ್ಲಿ ಪೌಲನು ತನ್ನ ಜೊತೆ ವಿಶ್ವಾಸಿಗಳನ್ನು, “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ” ಎಂದು ಹೇಳಿ ಪ್ರೋತ್ಸಾಹಿಸಿದನು. (1 ಥೆಸಲೊನೀಕ 5:14) ಇನ್ನೊಂದು ಸಂದರ್ಭದಲ್ಲಿ, ಅವನು ಕ್ರೈಸ್ತರಿಗೆ, “ದೃಢವಾದ ನಂಬಿಕೆಯುಳ್ಳ ನಾವು . . . ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು” ಎಂದು ಹೇಳಿದನು. (ರೋಮಾಪುರ 15:1) ಬಲಹೀನರಿಗೆ ಸಹಾಯಮಾಡುವ ವಿಷಯದಲ್ಲಿ ಯೇಸು ಸಹ ಸೂಚನೆಗಳನ್ನು ಕೊಟ್ಟನು. ತನ್ನ ದಸ್ತಗಿರಿಯ ರಾತ್ರಿಯಂದು ಪೇತ್ರನು ತನ್ನನ್ನು ಬಿಟ್ಟುಹೋಗುವನೆಂದು ಮುಂದಾಗಿಯೇ ತಿಳಿಸಿದ ಬಳಿಕ ಯೇಸು ಪೇತ್ರನಿಗಂದದ್ದು: “ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು.” ಏಕೆ? ಏಕೆಂದರೆ ಅವರೂ ಯೇಸುವನ್ನು ತ್ಯಜಿಸಿದ್ದರಿಂದ ಅವರಿಗೂ ಸಹಾಯದ ಆವಶ್ಯಕತೆಯಿರುವುದು. (ಲೂಕ 22:32; ಯೋಹಾನ 21:15-17) ಈ ಕಾರಣದಿಂದ, ನಾವು ನಮ್ಮ ಪ್ರೀತಿಯನ್ನು, ಆತ್ಮಿಕವಾಗಿ ಬಲಹೀನರಾಗಿರುವವರಿಗೆ ಮತ್ತು ಕ್ರೈಸ್ತ ಸಭೆಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿರುವವರಿಗೆ ವಿಸ್ತರಿಸುವಂತೆ ದೇವರ ವಾಕ್ಯವು ಆಜ್ಞಾಪಿಸುತ್ತದೆ. (ಇಬ್ರಿಯ 12:12) ನಾವು ಹಾಗೇಕೆ ಮಾಡಬೇಕು? ಯೇಸು ಕೊಟ್ಟ ಎರಡು ಸ್ಫುಟವಾದ ಸಾಮ್ಯಗಳು ಇದಕ್ಕೆ ಉತ್ತರವನ್ನು ಒದಗಿಸುತ್ತವೆ.
ಕಳೆದುಹೋದ ಕುರಿ ಮತ್ತು ಕಳೆದುಹೋಗಿದ್ದ ಪಾವಲಿ
5, 6. (ಎ) ಯೇಸು ಯಾವ ಎರಡು ಸಂಕ್ಷಿಪ್ತ ಸಾಮ್ಯಗಳನ್ನು ಕೊಟ್ಟನು? (ಬಿ) ಈ ಸಾಮ್ಯಗಳು ಯೆಹೋವನ ಕುರಿತು ಏನನ್ನು ತಿಳಿಯಪಡಿಸುತ್ತವೆ?
5 ದಾರಿ ತಪ್ಪಿಹೋಗಿರುವವರ ಕಡೆಗೆ ಯೆಹೋವನ ದೃಷ್ಟಿಕೋನದ ಕುರಿತು ಬೋಧಿಸಲು ಯೇಸು ಎರಡು ಸಂಕ್ಷಿಪ್ತ ಸಾಮ್ಯಗಳನ್ನು ಕೊಟ್ಟನು. ಒಂದು ಒಬ್ಬ ಕುರುಬನ ಕುರಿತಾಗಿತ್ತು. ಯೇಸು ಹೇಳಿದ್ದು: “ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದುಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ? ಸಿಕ್ಕಿದ ಮೇಲೆ ಅವನು ಸಂತೋಷಪಡುತ್ತಾ ಅದನ್ನು ತನ್ನ ಹೆಗಲಿನ ಮೇಲೆ ಇಟ್ಟುಕೊಂಡು ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ—ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಅವರಿಗೆ ಹೇಳುವವನಲ್ಲವೇ. ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ.”—ಲೂಕ 15:4-7.
6 ಎರಡನೆಯ ಸಾಮ್ಯವು ಒಬ್ಬ ಸ್ತ್ರೀಯ ಕುರಿತಾಗಿತ್ತು. ಯೇಸು ಹೇಳಿದ್ದು: “ಯಾವ ಹೆಂಗಸು ತನ್ನಲ್ಲಿ ಹತ್ತು ಪಾವಲಿಗಳಿರಲಾಗಿ ಒಂದು ಪಾವಲಿ ಹೋದರೆ ದೀಪಾಹಚ್ಚಿ ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳು? ಸಿಕ್ಕಿದ ಮೇಲೆ ಆಕೆಯು ತನ್ನ ಗೆಣತಿಯರನ್ನೂ ನೆರೆಹೊರೆಯವರನ್ನೂ ಕೂಡಿಸಿ—ಹೋಗಿದ್ದ ಪಾವಲಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುವಳಲ್ಲವೇ. ಅದರಂತೆ ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ.”—ಲೂಕ 15:8-10.
7. ಕಳೆದುಹೋದ ಕುರಿ ಮತ್ತು ಕಳೆದುಹೋಗಿದ್ದ ಪಾವಲಿಯ ಸಾಮ್ಯಗಳಲ್ಲಿ ಯಾವ ಎರಡು ಪಾಠಗಳು ನಮಗಿವೆ?
7 ಈ ಸಂಕ್ಷಿಪ್ತ ಸಾಮ್ಯಗಳಿಂದ ನಾವೇನು ಕಲಿಯಬಲ್ಲೆವು? (1) ಬಲಹೀನರಾಗಿ ಪರಿಣಮಿಸುವವರ ವಿಷಯದಲ್ಲಿ ನಮಗೆ ಹೇಗೆ ಅನಿಸಬೇಕು? ಮತ್ತು (2) ಅವರಿಗೆ ಸಹಾಯಮಾಡಲು ನಾವೇನು ಮಾಡಬೇಕು? ಎಂಬುದನ್ನು ಅವು ತೋರಿಸುತ್ತವೆ. ಈ ಅಂಶಗಳನ್ನು ನಾವು ಪರಿಗಣಿಸೋಣ.
ಕಳೆದುಹೋದರೂ ಬೆಲೆಯುಳ್ಳದ್ದು
8. (ಎ) ಕುರುಬನೂ ಆ ಸ್ತ್ರೀಯೂ ತಮಗಾದ ನಷ್ಟಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಿದರು? (ಬಿ) ಅವರ ಕಳೆದುಹೋಗಿದ್ದ ಸ್ವತ್ತನ್ನು ಅವರು ಹೇಗೆ ವೀಕ್ಷಿಸಿದರೆಂಬುದರ ಕುರಿತು ಅವರ ಪ್ರತಿಕ್ರಿಯೆಯು ನಮಗೆ ಏನು ತಿಳಿಸುತ್ತದೆ?
8 ಈ ಎರಡು ಸಾಮ್ಯಗಳಲ್ಲಿಯೂ ಏನೋ ಒಂದು ಕಳೆದುಹೋಗಿತ್ತು. ಆದರೆ ಅದರ ಧಣಿಗಳ ಪ್ರತಿಕ್ರಿಯೆಯನ್ನು ಗಮನಿಸಿರಿ. ಕುರುಬನು ಹೀಗನ್ನಲಿಲ್ಲ: ‘ಒಂದು ಕುರಿ ಹೋದರೇನಂತೆ, ನನ್ನ ಬಳಿ 99 ಇವೆ ತಾನೇ? ಹೋದರೆ ಹೋಗಲಿ, ಇರುವಂತಹ ಕುರಿಗಳೇ ಸಾಕು.’ ಆ ಸ್ತ್ರೀ ಹೀಗನ್ನಲಿಲ್ಲ: ‘ಒಂದು ಪಾವಲಿಗಾಗಿ ಏಕೆ ತಲೆಕೆಡಿಸಿಕೊಳ್ಳಬೇಕು? ನನ್ನಲ್ಲಿರುವ ಒಂಬತ್ತು ಪಾವಲಿಗಳು ಸಾಕು.’ ಇದರ ಬದಲು ಇಲ್ಲಿ ಕುರುಬನು ಕಳೆದುಹೋಗಿದ್ದ ಕುರಿಗಾಗಿ, ತನ್ನ ಬಳಿ ಇರುವಂಥದ್ದು ಅದೊಂದೆಯೋ ಎಂಬಂತೆ ಹುಡುಕಿದನು. ಮತ್ತು ಆ ಸ್ತ್ರೀ ಆ ಪಾವಲಿಯ ನಷ್ಟವನ್ನು, ತನ್ನಲ್ಲಿ ಬೇರೆ ಪಾವಲಿಗಳೇ ಇಲ್ಲವೊ ಎಂಬಂತೆ ಮನಸ್ಸಿಗೆ ಹಚ್ಚಿಕೊಂಡಳು. ಈ ಎರಡೂ ಸಂದರ್ಭಗಳಲ್ಲಿ, ಕಳೆದುಹೋಗಿದ್ದ ವಸ್ತು ಅದರ ಧಣಿಯ ಮನಸ್ಸಿನಲ್ಲಿ ಅಮೂಲ್ಯವಾಗಿತ್ತು. ಇದು ಏನನ್ನು ದೃಷ್ಟಾಂತಿಸುತ್ತದೆ?
9. ಆ ಕುರುಬನೂ ಸ್ತ್ರೀಯೂ ತೋರಿಸಿದ ಚಿಂತೆಯಿಂದ ಏನು ಚಿತ್ರಿಸಲ್ಪಡುತ್ತದೆ?
9 ಈ ಎರಡು ಸಂದರ್ಭಗಳಲ್ಲಿಯೂ ಯೇಸುವಿನ ತೀರ್ಮಾನವನ್ನು ಲಕ್ಷಿಸಿರಿ: ‘ಅದರಂತೆ . . . ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದು,’ ಮತ್ತು “ಅದರಂತೆ ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ.” ಆ ಕುರುಬನ ಮತ್ತು ಆ ಸ್ತ್ರೀಯ ಚಿಂತೆಯು, ಯೆಹೋವನ ಮತ್ತು ಸ್ವರ್ಗೀಯ ಜೀವಿಗಳ ಭಾವನೆಗಳನ್ನು ಚಿಕ್ಕ ಪ್ರಮಾಣದಲ್ಲಿ ವ್ಯಕ್ತಪಡಿಸುತ್ತದೆ. ಕಳೆದುಹೋದ ವಸ್ತುಗಳು ಆ ಕುರುಬನ ಮತ್ತು ಸ್ತ್ರೀಯ ದೃಷ್ಟಿಯಲ್ಲಿ ಅಮೂಲ್ಯವಾಗಿ ಉಳಿದಿದ್ದಂತೆಯೇ, ದೇವಜನರಿಂದ ನಿಧಾನವಾಗಿ ದೂರ ತೇಲಿಹೋಗಿ ಸಂಪರ್ಕವನ್ನು ಕಳೆದುಕೊಂಡವರು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರಾಗಿ ಉಳಿಯುತ್ತಾರೆ. (ಯೆರೆಮೀಯ 31:3) ಇಂತಹ ವ್ಯಕ್ತಿಗಳು ಆತ್ಮಿಕವಾಗಿ ದುರ್ಬಲರಾಗಿರಬಹುದಾದರೂ, ಅವರು ದಂಗೆಕೋರರಾಗಿದ್ದಾರೆಂದು ಹೇಳಲಾಗುವುದಿಲ್ಲ. ಅವರ ದುರ್ಬಲಾವಸ್ಥೆಯಲ್ಲಿಯೂ, ಅವರು ಸ್ವಲ್ಪ ಮಟ್ಟಿಗೆ ಯೆಹೋವನ ಆವಶ್ಯಕತೆಗಳನ್ನು ಪಾಲಿಸುತ್ತಾ ಇರಬಹುದು. (ಕೀರ್ತನೆ 119:176; ಅ. ಕೃತ್ಯಗಳು 15:28) ಆದಕಾರಣ, ಗತಕಾಲಗಳ ಹಾಗೆಯೇ ಯೆಹೋವನು ಅವರನ್ನು “ತನ್ನ ಸನ್ನಿಧಿಯಿಂದ ತಳ್ಳಿ”ಬಿಡುವುದಿಲ್ಲ.”—2 ಅರಸುಗಳು 13:23.
10, 11. (ಎ) ಸಭೆಯಿಂದ ನಿಧಾನವಾಗಿ ತೇಲುತ್ತಾ ದೂರಹೋಗಿರುವವರನ್ನು ನಾವು ಹೇಗೆ ವೀಕ್ಷಿಸಬೇಕು? (ಬಿ) ಯೇಸುವಿನ ಎರಡು ಸಾಮ್ಯಗಳಿಗನುಸಾರ, ನಾವು ಅವರಿಗಾಗಿ ನಮಗಿರುವ ಚಿಂತೆಯನ್ನು ಹೇಗೆ ತೋರಿಸಬಲ್ಲೆವು?
10 ಯೆಹೋವ ಮತ್ತು ಯೇಸುವಿನಂತೆಯೇ ನಾವೂ ಬಲಹೀನರಾಗಿ ಕ್ರೈಸ್ತ ಸಭೆಯಿಂದ ತಪ್ಪಿಹೋಗಿರುವವರ ವಿಷಯದಲ್ಲಿ ತುಂಬ ಚಿಂತಿತರಾಗಿರುತ್ತೇವೆ. (ಯೆಹೆಜ್ಕೇಲ 34:16; ಲೂಕ 19:10) ನಾವು ಆತ್ಮಿಕವಾಗಿ ದುರ್ಬಲನಾಗಿರುವ ಒಬ್ಬ ವ್ಯಕ್ತಿಯನ್ನು ಕಳೆದುಹೋಗಿರುವ ಕುರಿಯಂತೆ ವೀಕ್ಷಿಸುತ್ತೇವೆಯೇ ಹೊರತು ಪ್ರಯೋಜನಕ್ಕೆ ಬಾರದವರೆಂದಲ್ಲ. ನಾವು ಹೀಗೆ ತರ್ಕಿಸುವುದಿಲ್ಲ: ‘ಒಬ್ಬ ಬಲಹೀನನ ವಿಷಯದಲ್ಲಿ ಏಕೆ ತಲೆಕೆಡಿಸಿಕೊಳ್ಳಬೇಕು? ಅವನಿಲ್ಲದಿದ್ದರೂ ಸಭೆ ಚೆನ್ನಾಗಿ ನಡೆಯುತ್ತಿದೆಯಲ್ಲ?’ ಅದಕ್ಕೆ ಬದಲಾಗಿ, ಯೆಹೋವನಂತೆಯೇ ನಾವು, ಬಿಟ್ಟುಹೋದರೂ ಹಿಂದಿರುಗಲು ಬಯಸುವವರನ್ನು ಅಮೂಲ್ಯರಾಗಿ ವೀಕ್ಷಿಸುತ್ತೇವೆ.
11 ಆದರೆ ನಮಗಿರುವ ಚಿಂತೆಯ ಭಾವನೆಗಳನ್ನು ನಾವು ಹೇಗೆ ತೋರಿಸಬಲ್ಲೆವು? ಯೇಸುವಿನ ಎರಡು ಸಾಮ್ಯಗಳು, ನಾವು (1) ಆರಂಭದ ಹೆಜ್ಜೆಯನ್ನಿಡುವ ಮೂಲಕ, (2) ಸೌಮ್ಯಭಾವದಿಂದ ವ್ಯವಹರಿಸುವ ಮೂಲಕ, ಮತ್ತು (3) ಶ್ರದ್ಧಾಪೂರ್ವಕರಾಗಿರುವ ಮೂಲಕ ವ್ಯಕ್ತಪಡಿಸಬಲ್ಲೆವೆಂದು ಸೂಚಿಸುತ್ತವೆ. ಈ ಅಂಶಗಳನ್ನು ನಾವು ಒಂದೊಂದಾಗಿ ಪರಿಗಣಿಸೋಣ.
ಆರಂಭದ ಹೆಜ್ಜೆಯನ್ನಿಡಿರಿ
12. ‘ಕಳೆದುಹೋದದ್ದನ್ನು ಹುಡುಕಿಕೊಂಡು ಹೋಗುವನು’ ಎಂಬ ಮಾತುಗಳು ಆ ಕುರುಬನ ಮನೋಭಾವದ ಕುರಿತು ನಮಗೆ ಏನನ್ನು ತಿಳಿಸುತ್ತವೆ?
12 ಎರಡು ಸಾಮ್ಯಗಳಲ್ಲಿ ಮೊದಲನೆಯದ್ದರಲ್ಲಿ, ಕುರುಬನು ‘ಕಳೆದುಹೋದದ್ದನ್ನು ಹುಡುಕಿಕೊಂಡು ಹೋಗುವನು’ ಎಂದು ಯೇಸು ಹೇಳುತ್ತಾನೆ. ತಪ್ಪಿಹೋದ ಕುರಿಯನ್ನು ಹುಡುಕಲು ಕುರುಬನು ಆರಂಭದ ಹೆಜ್ಜೆಯನ್ನಿಟ್ಟು, ಉದ್ದೇಶಪೂರ್ವಕ ಪ್ರಯತ್ನವನ್ನು ಮಾಡುತ್ತಾನೆ. ಕಷ್ಟಗಳು, ಅಪಾಯ ಮತ್ತು ಅಂತರವು ಅವನನ್ನು ತಡೆದು ಹಿಡಿಯುವುದಿಲ್ಲ. ಇದಕ್ಕೆ ಬದಲಾಗಿ, ಅದು “ಸಿಕ್ಕುವ ತನಕ” ಅವನು ಪಟ್ಟುಬಿಡದೆ ಹುಡುಕುತ್ತಾನೆ.—ಲೂಕ 15:4.
13. ಪೂರ್ವಕಾಲದ ನಂಬಿಗಸ್ತ ಪುರುಷರು ಬಲಹೀನರ ಆವಶ್ಯಕತೆಗಳಿಗೆ ಹೇಗೆ ಪ್ರತಿವರ್ತಿಸಿದರು, ಮತ್ತು ಅಂತಹ ಬೈಬಲ್ ಮಾದರಿಗಳನ್ನು ನಾವು ಹೇಗೆ ಅನುಕರಿಸಬಲ್ಲೆವು?
13 ತದ್ರೀತಿಯಲ್ಲಿ, ಪ್ರೋತ್ಸಾಹದ ಅಗತ್ಯವಿರುವ ಒಬ್ಬ ವ್ಯಕ್ತಿಗೆ ಸಹಾಯ ನೀಡಬೇಕಾದರೆ, ಹೆಚ್ಚು ಬಲವುಳ್ಳ ವ್ಯಕ್ತಿಯೇ ಅನೇಕವೇಳೆ ಆರಂಭದ ಹೆಜ್ಜೆಯನ್ನಿಡುವುದು ಆವಶ್ಯಕವಾಗಿರುತ್ತದೆ. ಇದನ್ನು ಪೂರ್ವಕಾಲದ ನಂಬಿಗಸ್ತರು ತಿಳಿದಿದ್ದರು. ಉದಾಹರಣೆಗೆ, ತನ್ನ ಆಪ್ತ ಸ್ನೇಹಿತನಾದ ದಾವೀದನಿಗೆ ಪ್ರೋತ್ಸಾಹದ ಅಗತ್ಯವಿದೆಯೆಂದು ರಾಜ ಸೌಲನ ಪುತ್ರನಾದ ಯೋನಾತಾನನು ಗಮನಿಸಿದಾಗ, ಯೋನಾತಾನನು ‘ಹೋರೆಷಕ್ಕೆ ಹೋಗಿ ದೇವರಲ್ಲಿ ದಾವೀದನನ್ನು ಬಲಪಡಿಸಿದನು.’ (1 ಸಮುವೇಲ 23:16, 17) ಶತಮಾನಗಳ ನಂತರ, ರಾಜ್ಯಪಾಲ ನೆಹೆಮೀಯನು ತನ್ನ ಯೆಹೂದಿ ಸಹೋದರರಲ್ಲಿ ಕೆಲವರು ನಿರುತ್ತೇಜನಗೊಂಡಿರುವುದನ್ನು ನೋಡಿದಾಗ, ಅವನು ಅವರನ್ನು “ಸಂದರ್ಶಿಸಿ” ಅವರು ‘ಯೆಹೋವನನ್ನು ನೆನಪು’ಮಾಡುವಂತೆ ಪ್ರೋತ್ಸಾಹಿಸಿದನು. (ನೆಹೆಮೀಯ 4:14) ಇಂದು ನಾವು ಕೂಡ ‘ಸಂದರ್ಶಿಸಲು,’ ಅಂದರೆ ಆರಂಭದ ಹೆಜ್ಜೆಯನ್ನಿಡಲು ಮತ್ತು ಬಲಹೀನರನ್ನು ಬಲಪಡಿಸಲು ಬಯಸುವೆವು. ಆದರೆ ಸಭೆಯಲ್ಲಿ ಯಾರು ಇದನ್ನು ಮಾಡಬೇಕು?
14. ಬಲಹೀನರಿಗೆ ಸಹಾಯಮಾಡಲು ಕ್ರೈಸ್ತ ಸಭೆಯಲ್ಲಿ ಯಾರು ಪ್ರಯತ್ನಿಸಬೇಕು?
14 ವಿಶೇಷವಾಗಿ ಕ್ರೈಸ್ತ ಹಿರಿಯರಿಗೆ, ‘ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿ, ಭಯಭ್ರಾಂತಹೃದಯರಿಗೆ—ಬಲಗೊಳ್ಳಿರಿ, ಹೆದರಬೇಡಿರಿ’ ಎಂದು ಹೇಳುವ ಜವಾಬ್ದಾರಿಯಿದೆ. (ಯೆಶಾಯ 35:3, 4; 1 ಪೇತ್ರ 5:1, 2) ಆದರೆ “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ,” ಎಂಬ ಪೌಲನ ಬುದ್ಧಿವಾದವು ಹಿರಿಯರಿಗೆ ಮಾತ್ರ ಕೊಡಲ್ಪಡಲಿಲ್ಲವೆಂಬುದನ್ನು ಗಮನಿಸಿರಿ. ಬದಲಿಗೆ, ಪೌಲನ ಮಾತುಗಳು ಇಡೀ ‘ಥೆಸಲೊನೀಕ ಸಭೆಗೆ’ ನಿರ್ದೇಶಿಸಲ್ಪಟ್ಟಿದ್ದವು. (1 ಥೆಸಲೊನೀಕ 1:1; 5:14) ಹೀಗಿರುವುದರಿಂದ, ಬಲಹೀನರಿಗೆ ಸಹಾಯ ನೀಡುವ ಕಾರ್ಯವು ಎಲ್ಲಾ ಕ್ರೈಸ್ತರಿಗಾಗಿದೆ. ಆ ಸಾಮ್ಯದ ಕುರುಬನಂತೆ, ಪ್ರತಿಯೊಬ್ಬ ಕ್ರೈಸ್ತನು ‘ಕಳೆದುಹೋದದ್ದನ್ನು ಹುಡುಕಿಕೊಂಡು ಹೋಗುವಂತೆ’ ಪ್ರೇರಿಸಲ್ಪಡಬೇಕು. ಹೌದು, ಇದನ್ನು ಹಿರಿಯರೊಂದಿಗೆ ಸಹಕರಿಸಿ ಅತಿ ಪರಿಣಾಮಕಾರಿಯಾಗಿ ಮಾಡಬಹುದೆಂಬುದು ನಿಶ್ಚಯ. ನಿಮ್ಮ ಸಭೆಯಲ್ಲಿರುವ ಒಬ್ಬ ಬಲಹೀನನಿಗೆ ನೆರವಾಗಲು ನೀವು ಏನಾದರೂ ಮಾಡಬಲ್ಲಿರೊ?
ಸೌಮ್ಯಭಾವದವರಾಗಿರಿ
15. ಆ ಕುರುಬನು ಹಾಗೆ ವರ್ತಿಸಲು ಕಾರಣವೇನಿದ್ದಿರಬಹುದು?
15 ಆ ಕುರುಬನು ಕಳೆದುಹೋಗಿದ್ದ ಕುರಿಯನ್ನು ಕೊನೆಗೆ ಕಂಡುಕೊಂಡಾಗ ಏನು ಮಾಡುತ್ತಾನೆ? ಅವನು “ಅದನ್ನು ತನ್ನ ಹೆಗಲಿನ ಮೇಲೆ” ಇಟ್ಟುಕೊಳ್ಳುತ್ತಾನೆ. (ಲೂಕ 15:5) ಎಷ್ಟೊಂದು ಮನಕರಗಿಸುವ ಮತ್ತು ಅರ್ಥವತ್ತಾದ ವಿವರಣೆ! ಆ ಕುರಿಯು ಅನೇಕ ದಿನಗಳನ್ನು ಹಾಗೂ ರಾತ್ರಿಗಳನ್ನು ಅಪರಿಚಿತ ಪ್ರದೇಶದಲ್ಲಿ ಅಲೆದಾಡುತ್ತಾ ಕಳೆದಿರಬಹುದು. ಪ್ರಾಯಶಃ ಬೆನ್ನಟ್ಟಿ ಬರುತ್ತಿದ್ದ ಸಿಂಹಗಳ ಅಪಾಯವೂ ಅದಕ್ಕಿದ್ದಿರಬಹುದು. (ಯೋಬ 38:39, 40) ಆಹಾರದ ಕೊರತೆಯಿಂದಾಗಿ ಆ ಕುರಿಯು ನಿಸ್ಸಂದೇಹವಾಗಿ ದುರ್ಬಲಗೊಂಡಿರಬೇಕು. ಅದು ಮಂದೆಗೆ ಹಿಂದಿರುಗುವಾಗ ದಾರಿಯಲ್ಲಿ ಎದುರಿಸುವ ಅಡ್ಡಿತಡೆಗಳನ್ನು ಅದರ ಸ್ವಂತ ಶಕ್ತಿಯಿಂದ ಜಯಿಸಲು ತೀರ ನಿತ್ರಾಣವಾದದ್ದಾಗಿದೆ. ಆದಕಾರಣ, ಆ ಕುರುಬನು ಬಗ್ಗಿ, ಆ ಕುರಿಯನ್ನು ಸೌಮ್ಯವಾಗಿ ಮೇಲೆತ್ತಿ, ಎಲ್ಲಾ ಅಡ್ಡಿತಡೆಗಳನ್ನು ತಪ್ಪಿಸಿ ಮಂದೆಗೆ ಹಿಂದಿರುಗಿಸುತ್ತಾನೆ. ಈ ಕುರುಬನು ತೋರಿಸಿದ ಪರಾಮರಿಕೆಯನ್ನು ನಾವು ಹೇಗೆ ತೋರಿಸಬಲ್ಲೆವು?
16. ಆ ಕುರುಬನು ತಪ್ಪಿಹೋಗಿದ್ದ ಕುರಿಗೆ ತೋರಿಸಿದ ಕೋಮಲ ಭಾವವನ್ನು ನಾವು ಏಕೆ ಪ್ರತಿಬಿಂಬಿಸಬೇಕು?
16 ಸಭೆಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿರುವ ವ್ಯಕ್ತಿಯು ಆತ್ಮಿಕ ಅರ್ಥದಲ್ಲಿ ತೀರ ಬಳಲಿರಬಹುದು. ಕುರುಬನಿಂದ ಬೇರ್ಪಟ್ಟ ಆ ಕುರಿಯಂತೆ, ಆ ವ್ಯಕ್ತಿಯು ಈ ಲೋಕವೆಂಬ ಪ್ರತಿಕೂಲ ಪ್ರದೇಶದಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡಿರಬಹುದು. ಕ್ರೈಸ್ತ ಸಭೆಯೆಂಬ ಕುರಿಮಂದೆಯ ಸಂರಕ್ಷಣೆಯಿಲ್ಲದಿದ್ದುದರಿಂದ, ಅವನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗು”ತ್ತಿರುವ ಪಿಶಾಚನ ದಾಳಿಗಳಿಗೆ ಎಂದಿಗಿಂತಲೂ ಹೆಚ್ಚು ಒಡ್ಡಲ್ಪಟ್ಟಿರುತ್ತಾನೆ. (1 ಪೇತ್ರ 5:8) ಇದಲ್ಲದೆ, ಆತ್ಮಿಕ ಆಹಾರದ ಕೊರತೆಯಿಂದಲೂ ಅವನು ದುರ್ಬಲನಾಗಿರುತ್ತಾನೆ. ಈ ಕಾರಣದಿಂದ, ಅವನು ಸಭೆಗೆ ಹಿಂದಿರುಗಿ ಬರುವ ಪ್ರಯಾಣದಲ್ಲಿ ಎದುರಾಗುವ ತಡೆಗಳನ್ನು ತನ್ನ ಸ್ವಂತ ಶಕ್ತಿಯಿಂದ ಜಯಿಸಲು ತೀರ ಬಲಹೀನನಾಗಿರುತ್ತಾನೆ. ಆದುದರಿಂದ, ಸಾಂಕೇತಿಕವಾಗಿ ಹೇಳುವುದಾದರೆ, ನಾವು ಬಗ್ಗಿ, ಆ ಬಲಹೀನನನ್ನು ಸೌಮ್ಯ ರೀತಿಯಲ್ಲಿ ಮೇಲೆತ್ತಿ, ಹೊತ್ತುಕೊಂಡು ಮಂದೆಗೆ ಹಿಂದೆ ಒಯ್ಯುವ ಆವಶ್ಯಕತೆಯಿರುತ್ತದೆ. (ಗಲಾತ್ಯ 6:2) ನಾವದನ್ನು ಹೇಗೆ ಮಾಡಬಹುದು?
17. ನಾವು ಒಬ್ಬ ಬಲಹೀನ ವ್ಯಕ್ತಿಯನ್ನು ಭೇಟಿಮಾಡುವಾಗ ಅಪೊಸ್ತಲ ಪೌಲನನ್ನು ಹೇಗೆ ಅನುಕರಿಸಬಲ್ಲೆವು?
17 ಅಪೊಸ್ತಲ ಪೌಲನು ಹೇಳಿದ್ದು: “ಯಾವನಾದರೂ ಬಲವಿಲ್ಲದವನಾದರೆ ನಾನು ಅವನ ಬಲಹೀನತೆಯಲ್ಲಿ ಭಾಗಿಯಾಗುವುದಿಲ್ಲವೊ?” (2 ಕೊರಿಂಥ 11:29, ದ ನ್ಯೂ ಇಂಗ್ಲಿಷ್ ಬೈಬಲ್; 1 ಕೊರಿಂಥ 9:22) ಬಲಹೀನರಾಗಿರುವವರನ್ನೂ ಸೇರಿಸಿ, ಪೌಲನಿಗೆ ಎಲ್ಲಾ ಜನರ ಬಗ್ಗೆ ಸಹಾನುಭೂತಿಯಿತ್ತು. ನಾವು ಸಹ ಬಲಹೀನರಿಗಾಗಿ ಇದೇ ರೀತಿಯ ಸಹಾನುಭೂತಿಯನ್ನು ಪ್ರದರ್ಶಿಸಬೇಕು. ಆತ್ಮಿಕವಾಗಿ ಬಲಹೀನನಾಗಿರುವ ಒಬ್ಬ ಕ್ರೈಸ್ತನನ್ನು ಭೇಟಿಮಾಡುವಾಗ, ಅವನು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯನೆಂದೂ ಜೊತೆ ಸಾಕ್ಷಿಗಳು ಅವನ ಅನುಪಸ್ಥಿತಿಗಾಗಿ ತೀರ ಪರಿತಪಿಸುತ್ತಿದ್ದಾರೆಂದೂ ಅವನಿಗೆ ಪುನರಾಶ್ವಾಸನೆ ಕೊಡಿರಿ. (1 ಥೆಸಲೊನೀಕ 2:17) ಅವರು ಅವನಿಗೆ ಬೆಂಬಲ ನೀಡಲು, ‘ಆಪತ್ತಿನಲ್ಲಿ ಸಾರ್ಥಕನಾಗಿರುವ ಒಬ್ಬ ಸಹೋದರನಾಗಿರಲು’ ಸಿದ್ಧರಿದ್ದಾರೆಂದು ಅವನಿಗೆ ಗೊತ್ತಾಗಲಿ. (ಜ್ಞಾನೋಕ್ತಿ 17:17; ಕೀರ್ತನೆ 34:18) ನಮ್ಮ ಹೃದಯದಿಂದ ಬರುವ ಮಾತುಗಳು ಅವನನ್ನು ಕೋಮಲವಾಗಿ ಮತ್ತು ಕ್ರಮೇಣವಾಗಿ ಎಷ್ಟರ ವರೆಗೆ ಮೇಲೆತ್ತಬಹುದೆಂದರೆ, ಅವನು ಮಂದೆಗೆ ಹಿಂದಿರುಗಲು ಶಕ್ತನಾಗುತ್ತಾನೆ. ನಾವು ಆ ಬಳಿಕ ಏನು ಮಾಡಬೇಕು? ಆ ಸ್ತ್ರೀಯ ಮತ್ತು ಕಳೆದುಹೋಗಿದ್ದ ಪಾವಲಿಯ ಸಾಮ್ಯವು ನಮಗೆ ಮಾರ್ಗದರ್ಶನವನ್ನು ಒದಗಿಸುತ್ತದೆ.
ಶ್ರದ್ಧಾಪೂರ್ವಕವಾಗಿರಿ
18. (ಎ) ಸಾಮ್ಯದಲ್ಲಿನ ಆ ಸ್ತ್ರೀ ಏಕೆ ನಿರೀಕ್ಷಾಹೀನಳಾಗಲಿಲ್ಲ? (ಬಿ) ಆ ಸ್ತ್ರೀಯು ಶ್ರದ್ಧಾಪೂರ್ವಕವಾದ ಯಾವ ಪ್ರಯತ್ನಗಳನ್ನು ಮಾಡಿದಳು, ಮತ್ತು ಫಲಿತಾಂಶವೇನಾಗಿತ್ತು?
18 ಪಾವಲಿಯನ್ನು ಕಳೆದುಕೊಂಡಿದ್ದ ಆ ಸ್ತ್ರೀಗೆ ಪರಿಸ್ಥಿತಿಯು ಕಷ್ಟಕರವಾಗಿದ್ದರೂ, ಅದು ನಿರೀಕ್ಷಾಹೀನವಾಗಿಲ್ಲವೆಂದು ತಿಳಿದಿದೆ. ಆ ಪಾವಲಿಯು ಪೊದೆತುಂಬಿರುವ ಒಂದು ದೊಡ್ಡ ಹೊಲದಲ್ಲಿ ಅಥವಾ ಆಳವಾದ, ಕೆಸರು ತುಂಬಿದ ಕೆರೆಯಲ್ಲಿ ಬಿದ್ದಿದ್ದರೆ, ಅದನ್ನು ಕಂಡುಹಿಡಿಯಲು ಅಸಾಧ್ಯವೆಂದು ಆಕೆ ನೆನಸಿ ಬಹುಶಃ ಬಿಟ್ಟುಬಿಡುತ್ತಿದ್ದಳು. ಆದರೆ ಆ ಪಾವಲಿ ಮನೆಯಲ್ಲಿಯೇ ಎಲ್ಲಿಯೊ ಬಿದ್ದಿದೆ, ಅದನ್ನು ಕಂಡುಹಿಡಿಯುವ ಸಾಧ್ಯತೆ ಇದೆ ಎಂದು ತಿಳಿದಿರುವ ಆಕೆ ಅದಕ್ಕಾಗಿ ಕೂಲಂಕಷವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಹುಡುಕತೊಡಗುತ್ತಾಳೆ. (ಲೂಕ 15:8) ಪ್ರಥಮವಾಗಿ, ಆಕೆ ಕತ್ತಲಾಗಿರುವ ತನ್ನ ಮನೆಯನ್ನು ದೀಪ ಹಚ್ಚಿ ಬೆಳಗಿಸುತ್ತಾಳೆ. ಬಳಿಕ ಪೊರಕೆಯಿಂದ ಆಕೆ ನೆಲವನ್ನು ಗುಡಿಸುತ್ತಾ ಇರುವಾಗ ಪಾವಲಿಯ ಕಿಣಿಕಿಣಿ ಶಬ್ದವು ಎಲ್ಲಿಯಾದರೂ ಕೇಳಿಬರುತ್ತದೊ ಎಂದು ಕಿವಿ ನಿಮಿರಿಸಿಕೊಂಡಿರುತ್ತಾಳೆ. ಬಳಿಕ ಆಕೆ ಜಾಗರೂಕತೆಯಿಂದ ಪ್ರತಿಯೊಂದು ಮೂಲೆಯನ್ನೂ ಪರೀಕ್ಷಿಸುವಾಗ ಆ ದೀಪದ ಬೆಳಕಿಗೆ ಬೆಳ್ಳಿ ಪಾವಲಿಯು ಹೊಳೆಯುವುದನ್ನು ಆಕೆ ನೋಡುತ್ತಾಳೆ. ಆ ಸ್ತ್ರೀಯ ಶ್ರದ್ಧಾಪೂರ್ವಕ ಪ್ರಯತ್ನಕ್ಕೆ ಪ್ರತಿಫಲ ದೊರೆಯುತ್ತದೆ!
19. ಕಳೆದುಹೋಗಿದ್ದ ಪಾವಲಿಯ ಸಾಮ್ಯದಲ್ಲಿನ ಆ ಸ್ತ್ರೀಯ ವರ್ತನೆಯಿಂದ, ಬಲಹೀನರಿಗೆ ಸಹಾಯಮಾಡುವ ವಿಷಯದಲ್ಲಿ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?
19 ಸಾಮ್ಯದ ಈ ವಿವರವು ನಮಗೆ ಜ್ಞಾಪಕ ಹುಟ್ಟಿಸುವಂತೆ, ಒಬ್ಬ ಬಲಹೀನ ಕ್ರೈಸ್ತನಿಗೆ ಸಹಾಯ ನೀಡುವ ನಮ್ಮ ಶಾಸ್ತ್ರೀಯ ಹಂಗು ನಮ್ಮ ಸಾಮರ್ಥ್ಯಕ್ಕೆ ಮೀರಿರುವುದಿಲ್ಲ. ಅದೇ ಸಮಯದಲ್ಲಿ, ಇದಕ್ಕೆ ಪ್ರಯತ್ನವೂ ಅಗತ್ಯವೆಂಬದನ್ನು ನಾವು ಗ್ರಹಿಸುತ್ತೇವೆ. ಅಪೊಸ್ತಲ ಪೌಲನು ಎಫೆಸದ ಹಿರಿಯರಿಗೆ, “ನೀವೂ ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು” ಎಂದು ಹೇಳಿದನು. (ಅ. ಕೃತ್ಯಗಳು 20:35ಎ) ಆ ಸ್ತ್ರೀ ತನ್ನ ಮನೆಯಲ್ಲಿ ಅಲ್ಲಿ ಇಲ್ಲಿ ಕಣ್ಣಾಡಿಸಿ, ಕೇವಲ ಆಗೊಮ್ಮೆ ಈಗೊಮ್ಮೆ ಪ್ರಾಸಂಗಿಕವಾಗಿ ಹುಡುಕುವುದರಿಂದಾಗಿ ಆ ಪಾವಲಿಯನ್ನು ಕಂಡುಕೊಳ್ಳಲಿಲ್ಲ ಎಂಬದನ್ನು ಮನಸ್ಸಿನಲ್ಲಿಡಿರಿ. ಆಕೆ ಯಶಸ್ವಿಯಾಗಲು ಕಾರಣ, ಅದು “ಸಿಕ್ಕುವ ತನಕ” ಕ್ರಮಬದ್ಧವಾಗಿ ಹುಡುಕಿದ್ದೇ ಆಗಿದೆ. ಹಾಗೆಯೇ, ಆತ್ಮಿಕವಾಗಿ ಬಲಹೀನನಾಗಿರುವ ವ್ಯಕ್ತಿಯೊಬ್ಬನನ್ನು ನಾವು ಸಂಪಾದಿಸಲು ಪ್ರಯತ್ನಿಸುವಾಗ, ನಮ್ಮ ವಿಧಾನವು ಶ್ರದ್ಧಾಪೂರ್ವಕವೂ ಉದ್ದೇಶಪೂರ್ವಕವೂ ಆಗಿರಬೇಕು. ಇದಕ್ಕಾಗಿ ನಾವೇನು ಮಾಡಬಲ್ಲೆವು?
20. ಬಲಹೀನರಿಗೆ ಸಹಾಯಮಾಡಲು ಏನು ಮಾಡಸಾಧ್ಯವಿದೆ?
20 ಬಲಹೀನನೊಬ್ಬನು ನಂಬಿಕೆ ಮತ್ತು ಕೃತಜ್ಞತೆಯನ್ನು ಬೆಳೆಸಿಕೊಳ್ಳುವಂತೆ ನಾವು ಹೇಗೆ ಸಹಾಯ ನೀಡಬಲ್ಲೆವು? ತಕ್ಕದಾದ ಕ್ರೈಸ್ತ ಸಾಹಿತ್ಯವನ್ನು ಉಪಯೋಗಿಸಿ ಅವನೊಂದಿಗೆ ವ್ಯಕ್ತಿಪರವಾಗಿ ಬೈಬಲ್ ಅಧ್ಯಯನ ನಡೆಸುವುದು ಅವನಿಗೆ ಬೇಕಾದಂಥ ಔಷಧವಾಗಿರಬಹುದು. ಹೌದು, ಬಲಹೀನ ವ್ಯಕ್ತಿಯೊಬ್ಬನೊಂದಿಗೆ ಬೈಬಲ್ ಅಧ್ಯಯನ ನಡೆಸುವುದರಿಂದ ಸುಸಂಗತವಾಗಿ ಮತ್ತು ಸಮಗ್ರವಾಗಿ ಅವನಿಗೆ ನೆರವನ್ನು ಕೊಡುವಂತಾಗುವುದು. ಅಗತ್ಯವಿರುವ ಇಂತಹ ಸಹಾಯವನ್ನು ಯಾರು ಕೊಡಬೇಕೆಂಬುದರ ಬಗ್ಗೆ ಬಹುಶಃ ಸೇವಾ ಮೇಲ್ವಿಚಾರಕನು ಅತ್ಯುತ್ತಮವಾದ ನಿರ್ಣಯವನ್ನು ಮಾಡಬಲ್ಲನು. ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕೆಂದು ಮತ್ತು ಯಾವ ಪ್ರಕಾಶನವು ಹೆಚ್ಚು ಸಹಾಯಕಾರಿಯಾಗಿದ್ದೀತೆಂದು ಅವನು ಸೂಚಿಸಬಹುದು. ಸಾಮ್ಯದಲ್ಲಿನ ಆ ಸ್ತ್ರೀಯು ತನ್ನ ಕೆಲಸವನ್ನು ಪೂರೈಸಲು ಸಹಾಯಕರವಾದ ಉಪಕರಣಗಳನ್ನು ಉಪಯೋಗಿಸಿದಂತೆಯೇ, ಬಲಹೀನರಾಗಿರುವವರಿಗೆ ನೆರವು ನೀಡುವ ನಮ್ಮ ದೇವದತ್ತ ಜವಾಬ್ದಾರಿಯನ್ನು ಪೂರೈಸುವಂತೆ ಸಹಾಯಮಾಡಲು ಇಂದು ನಮ್ಮ ಬಳಿಯೂ ಉಪಕರಣಗಳಿವೆ. ನಮ್ಮ ಎರಡು ಹೊಸ ಉಪಕರಣಗಳು ಅಥವಾ ಪುಸ್ತಕಗಳು ಈ ಪ್ರಯತ್ನದಲ್ಲಿ ನಮಗೆ ವಿಶೇಷವಾಗಿ ಸಹಾಯಮಾಡುವವು. ಒಬ್ಬನೇ ಸತ್ಯದೇವರನ್ನು ಆರಾಧಿಸಿರಿ (ಇಂಗ್ಲಿಷ್) ಮತ್ತು ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್)a ಎಂಬ ಪುಸ್ತಕಗಳೇ ಅವು.
21. ಬಲಹೀನರಿಗೆ ಸಹಾಯ ನೀಡುವುದು ನಮಗೆಲ್ಲರಿಗೂ ಹೇಗೆ ಆಶೀರ್ವಾದವನ್ನು ತರುತ್ತದೆ?
21 ಬಲಹೀನರಿಗೆ ನೆರವಾಗುವುದು ಎಲ್ಲರಿಗೆ ಆಶೀರ್ವಾದಗಳನ್ನು ತರುತ್ತದೆ. ಸಹಾಯ ನೀಡಲ್ಪಟ್ಟವನು ನಿಜ ಸ್ನೇಹಿತರೊಂದಿಗೆ ಪುನಃ ಸೇರಿಕೊಳ್ಳುವ ಸಂತೋಷವನ್ನು ಅನುಭವಿಸುತ್ತಾನೆ. ಕೊಡುವುದರಿಂದ ಮಾತ್ರ ಸಿಗಬಲ್ಲ ಹೃತ್ಪೂರ್ವಕವಾದ ಸಂತೋಷವನ್ನು ನಾವು ಅನುಭವಿಸುತ್ತೇವೆ. (ಲೂಕ 15:6, 9; ಅ. ಕೃತ್ಯಗಳು 20:35) ಸಭೆಯ ಪ್ರತಿಯೊಬ್ಬ ಸದಸ್ಯನು ಇತರರಲ್ಲಿ ಪ್ರೀತಿಯ ಆಸಕ್ತಿಯನ್ನು ತೋರಿಸುವಾಗ, ಸಂಪೂರ್ಣ ಸಭೆಯು ಹೃದಯೋಲ್ಲಾಸದಲ್ಲಿ ಬೆಳೆಯುತ್ತದೆ. ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ, ಬಲಹೀನರನ್ನು ಬೆಂಬಲಿಸಲು ತಮಗಿರುವ ಬಯಕೆಯು ತಮ್ಮ ಭೂಸೇವಕರಲ್ಲಿ ಪ್ರತಿಬಿಂಬಿಸಲ್ಪಡುವಾಗ, ನಮ್ಮ ಕಾಳಜಿಭರಿತ ಕುರುಬರಾದ ಯೆಹೋವನಿಗೂ ಯೇಸು ಕ್ರಿಸ್ತನಿಗೂ ಮಾನವು ಸಲ್ಲಿಸಲ್ಪಡುತ್ತದೆ. (ಕೀರ್ತನೆ 72:12-14; ಮತ್ತಾಯ 11:28-30; 1 ಕೊರಿಂಥ 11:1; ಎಫೆಸ 5:1) ‘ನಮ್ಮಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುತ್ತಾ’ ಮುಂದುವರಿಯಲು ಎಂತಹ ಸಕಾರಣಗಳು ನಮಗಿವೆ!
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
ನೀವು ವಿವರಿಸಬಲ್ಲಿರೊ?
• ಪ್ರೀತಿಯನ್ನು ತೋರಿಸುವುದು ನಮ್ಮಲ್ಲಿ ಒಬ್ಬೊಬ್ಬನಿಗೂ ಏಕೆ ಅಗತ್ಯ?
• ನಾವು ನಮ್ಮ ಪ್ರೀತಿಯನ್ನು ಬಲಹೀನರಿಗೆ ಏಕೆ ವಿಸ್ತರಿಸಬೇಕು?
• ಕಳೆದುಹೋಗಿದ್ದ ಕುರಿ ಮತ್ತು ಪಾವಲಿಯ ಸಾಮ್ಯಗಳು ನಮಗೆ ಯಾವ ಪಾಠಗಳನ್ನು ಕಲಿಸುತ್ತವೆ?
• ಬಲಹೀನನಾಗಿರುವ ವ್ಯಕ್ತಿಯೊಬ್ಬನಿಗೆ ಸಹಾಯಮಾಡಲು ನಾವು ಯಾವ ಪ್ರಾಯೋಗಿಕ ಕ್ರಮಗಳನ್ನು ಕೈಕೊಳ್ಳಬಲ್ಲೆವು?
[ಪುಟ 16, 17ರಲ್ಲಿರುವ ಚಿತ್ರಗಳು]
ಬಲಹೀನರಿಗೆ ಸಹಾಯಮಾಡುವುದರಲ್ಲಿ ನಾವು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವವರೂ ಸೌಮ್ಯಭಾವದವರೂ ಶ್ರದ್ಧಾಪೂರ್ವಕರೂ ಆಗಿರುತ್ತೇವೆ
[ಪುಟ 16, 17ರಲ್ಲಿರುವ ಚಿತ್ರ]
ಬಲಹೀನರಿಗೆ ಮಾಡುವ ಸಹಾಯವು ಎಲ್ಲರಿಗೂ ಆಶೀರ್ವಾದಗಳನ್ನು ತರುತ್ತದೆ