‘ಕ್ರಿಸ್ತನನ್ನು’ ಏಕೆ ಹಿಂಬಾಲಿಸಬೇಕು?
“ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ . . . ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ.” —ಲೂಕ 9:23.
1, 2. ನಾವು ‘ಕ್ರಿಸ್ತನನ್ನು’ ಹಿಂಬಾಲಿಸಬೇಕು ಎಂಬುದಕ್ಕೆ ಕಾರಣಗಳನ್ನು ಪರಿಗಣಿಸುವುದು ಪ್ರಾಮುಖ್ಯವೇಕೆ?
ಯೆಹೋವನು, ಭೂಮಿ ಮೇಲೆ ತನ್ನ ಆರಾಧನೆಗಾಗಿ ಸೇರಿಬಂದಿರುವ ಜನಸಮೂಹದ ಕಡೆಗೆ ದೃಷ್ಟಿ ಹಾಯಿಸುವಾಗ, ಹೊಸ ಆಸಕ್ತ ಜನರು ಮತ್ತು ಎಳೆಯರಾದ ನಿಮ್ಮನ್ನು ನೋಡಿ ಆತನಿಗೆಷ್ಟು ಸಂತೋಷವಾಗುತ್ತಿರಬೇಕು! ನೀವು ಬೈಬಲ್ ಅಧ್ಯಯನ ಮಾಡುತ್ತಿರುವಾಗ, ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವಾಗ ಮತ್ತು ದೇವರ ವಾಕ್ಯದಲ್ಲಿರುವ ಜೀವರಕ್ಷಕ ಸತ್ಯದ ಜ್ಞಾನವನ್ನು ಹೆಚ್ಚಿಸಿಕೊಳ್ಳುವಾಗ ಯೇಸುವಿನ ಈ ಆಮಂತ್ರಣದ ಬಗ್ಗೆ ಗಂಭೀರವಾಗಿ ಆಲೋಚಿಸತಕ್ಕದ್ದು: “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ದಿನೇದಿನೇ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ.” (ಲೂಕ 9:23) ಯೇಸು ಇಲ್ಲಿ, ನೀವು ನಿಮ್ಮನ್ನೇ ನಿರಾಕರಿಸಿ ಆತನ ಹಿಂಬಾಲಕರಾಗಬೇಕೆಂದು ಹೇಳುತ್ತಿದ್ದಾನೆ. ಆದದ್ದರಿಂದ, ನಾವೇಕೆ ‘ಕ್ರಿಸ್ತನನ್ನು’ ಹಿಂಬಾಲಿಸಬೇಕು ಎಂಬುದಕ್ಕೆ ಕಾರಣಗಳನ್ನು ಪರಿಗಣಿಸುವುದು ಪ್ರಾಮುಖ್ಯ.—ಮತ್ತಾ. 16:13-16.
2 ಆದರೆ ನಮ್ಮಲ್ಲಿ, ಈಗಾಗಲೇ ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುತ್ತಿರುವವರ ಕುರಿತೇನು? “ಅದನ್ನು ಹೆಚ್ಚು ಪೂರ್ಣವಾಗಿ ಮಾಡುತ್ತಾ ಇರಬೇಕೆಂದು” ನಮ್ಮನ್ನು ಪ್ರೋತ್ಸಾಹಿಸಲಾಗಿದೆ. (1 ಥೆಸ. 4:1, 2) ನಾವು ಇತ್ತೀಚೆಗೆ ಸತ್ಯವನ್ನು ಸ್ವೀಕರಿಸಿದ್ದಿರಬಹುದು ಇಲ್ಲವೇ ದಶಕಗಳೇ ಕಳೆದಿರಬಹುದು. ಹೀಗಿದ್ದರೂ ಕ್ರಿಸ್ತನನ್ನು ಏಕೆ ಹಿಂಬಾಲಿಸಬೇಕೆಂಬ ಕಾರಣಗಳ ಕುರಿತ ಮನನವು ದೈನಂದಿನ ಬದುಕಿನಲ್ಲಿ ಅವನನ್ನು ಹೆಚ್ಚೆಚ್ಚಾಗಿ ಹಿಂಬಾಲಿಸುವಂತೆ ಪೌಲನು ಕೊಟ್ಟ ಬುದ್ಧಿವಾದವನ್ನು ಅನ್ವಯಿಸಲು ನಮಗೆ ಸಹಾಯ ಮಾಡುವುದು. ಕ್ರಿಸ್ತನನ್ನು ಏಕೆ ಹಿಂಬಾಲಿಸಬೇಕೆಂಬುದಕ್ಕೆ ಐದು ಕಾರಣಗಳನ್ನು ನಾವೀಗ ಪರಿಗಣಿಸೋಣ.
ಯೆಹೋವನೊಂದಿಗೆ ನಮ್ಮ ಆಪ್ತತೆಯನ್ನು ಹೆಚ್ಚಿಸಲು
3. ಯಾವ ಎರಡು ವಿಧಗಳಲ್ಲಿ ನಾವು ಯೆಹೋವನ ಬಗ್ಗೆ ತಿಳಿದುಕೊಳ್ಳಬಲ್ಲೆವು?
3 ಅಪೊಸ್ತಲ ಪೌಲನು “ಅರಿಯೊಪಾಗದ ಮಧ್ಯದಲ್ಲಿ ನಿಂತು” ಅಥೇನೆಯವರನ್ನು ಸಂಬೋಧಿಸುತ್ತಾ ಹೇಳಿದ್ದು: “ಆತನು [ದೇವರು] ನಿಯಮಿತ ಕಾಲಗಳನ್ನೂ ಮನುಷ್ಯ ನಿವಾಸದ ಮೇರೆಗಳನ್ನೂ ನಿರ್ಣಯಿಸಿದನು; ಹೀಗೆ ಮಾಡಿದ್ದು, ಅವರು ದೇವರಿಗಾಗಿ ತಡಕಾಡಿ, ನಿಜವಾಗಿಯೂ ಕಂಡುಹಿಡಿಯುವ ಕಾರಣದಿಂದ ಆತನನ್ನು ಹುಡುಕುವಂತೆ ಮಾಡಲಿಕ್ಕಾಗಿಯೇ. ಆದರೆ ವಾಸ್ತವದಲ್ಲಿ ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.” (ಅ. ಕಾ. 17:22, 26, 27) ನಾವು ದೇವರನ್ನು ಹುಡುಕಬಲ್ಲೆವು ಮತ್ತು ನಿಜವಾಗಿಯೂ ಆತನನ್ನು ತಿಳಿದುಕೊಳ್ಳಬಲ್ಲೆವು. ಉದಾಹರಣೆಗೆ, ದೇವರ ಗುಣಗಳು ಹಾಗೂ ಸಾಮರ್ಥ್ಯಗಳ ಬಗ್ಗೆ ಸೃಷ್ಟಿಯು ಬಹಳಷ್ಟನ್ನು ತಿಳಿಸುತ್ತದೆ. ನಾವು ಕೃತಜ್ಞತಾಭಾವದಿಂದ ಸೃಷ್ಟಿಕಾರ್ಯಗಳನ್ನು ಧ್ಯಾನಿಸುವಲ್ಲಿ ಸೃಷ್ಟಿಕರ್ತನ ಬಗ್ಗೆ ಬಹಳಷ್ಟನ್ನು ಕಲಿಯಬಲ್ಲೆವು. (ರೋಮ. 1:20) ಯೆಹೋವನು ತನ್ನ ಲಿಖಿತ ವಾಕ್ಯವಾದ ಬೈಬಲ್ನಲ್ಲಿ ತನ್ನ ಬಗ್ಗೆ ವಿವರಗಳನ್ನೂ ಕೊಟ್ಟಿದ್ದಾನೆ. (2 ತಿಮೊ. 3:16, 17) ನಾವು ಎಷ್ಟು ಹೆಚ್ಚಾಗಿ ‘ಯೆಹೋವನ ಕಾರ್ಯಗಳನ್ನು ಧ್ಯಾನಿಸುತ್ತೇವೊ’ ಮತ್ತು ‘ಆತನ ಪ್ರವರ್ತನೆಗಳನ್ನು ಸ್ಮರಿಸುತ್ತೇವೋ’ ಅಷ್ಟೇ ಹೆಚ್ಚಾಗಿ ಆತನ ಬಗ್ಗೆ ತಿಳಿದುಕೊಳ್ಳಬಲ್ಲೆವು.—ಕೀರ್ತ. 77:12.
4. ಕ್ರಿಸ್ತನನ್ನು ಹಿಂಬಾಲಿಸುವುದರಿಂದ ನಾವು ಹೇಗೆ ಯೆಹೋವನ ಒಳ್ಳೇ ಪರಿಚಯ ಮಾಡಿಕೊಳ್ಳಬಹುದು?
4 ಯೆಹೋವ ದೇವರ ಹೆಚ್ಚು ಆಪ್ತ ಪರಿಚಯ ಮಾಡಿಕೊಳ್ಳುವ ಅತ್ಯುತ್ತಮ ವಿಧವು, ಕ್ರಿಸ್ತನನ್ನು ಹಿಂಬಾಲಿಸುವುದೇ ಆಗಿದೆ. “ಲೋಕವು ಉಂಟಾಗುವುದಕ್ಕಿಂತ ಮುಂಚೆ” ಯೇಸು ತನ್ನ ತಂದೆಯ ಬಳಿ ಇದ್ದಾಗ ಅವನಿಗಿದ್ದ ಮಹಿಮೆಯ ಕುರಿತು ಸ್ವಲ್ಪ ಯೋಚಿಸಿ! (ಯೋಹಾ. 17:5) ಯೇಸು, “ದೇವರಿಂದಾದ ಸೃಷ್ಟಿಗೆ ಆದಿ” ಆಗಿದ್ದಾನೆ. (ಪ್ರಕ. 3:14) “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾದ ಅವನು ಎಷ್ಟೋ ಯುಗಗಳಿಂದ ಸ್ವರ್ಗದಲ್ಲಿ ತನ್ನ ತಂದೆಯಾದ ಯೆಹೋವನೊಂದಿಗೆ ಜೀವಿಸಿದನು. ಅವನ ಮಾನವಪೂರ್ವ ಅಸ್ತಿತ್ವದಲ್ಲಿ ಅವನು ತಂದೆಯೊಂದಿಗೆ ಸುಮ್ಮನೆ ಸಮಯ ಕಳೆಯುತ್ತಿರಲಿಲ್ಲ. ಅವನು ಸರ್ವಶಕ್ತ ದೇವರ ಆಪ್ತ ಒಡನಾಡಿಯಾಗಿ, ಸಂತೋಷದಿಂದ ಆತನೊಟ್ಟಿಗೆ ಕೆಲಸ ಮಾಡಿದನು. ಅವರ ನಡುವೆ ಬೆಸೆದ ಆ ಆಪ್ತವಾದ ಬಂಧ ಬೇರೆ ಯಾರ ನಡುವೆಯೂ ಇಲ್ಲ. ಯೇಸು ತನ್ನ ತಂದೆ ಕೆಲಸ ಮಾಡುವ ವಿಧ, ಆತನ ಭಾವನೆಗಳು ಹಾಗೂ ಗುಣಗಳನ್ನು ಗಮನಿಸಿದ್ದು ಮಾತ್ರವಲ್ಲ, ಆತನ ಬಗ್ಗೆ ಕಲಿತದ್ದೆಲ್ಲವನ್ನೂ ತನ್ನದಾಗಿಸಿಕೊಂಡನು. ಫಲಿತಾಂಶವಾಗಿ ಈ ವಿಧೇಯ ಮಗನು ತನ್ನ ತಂದೆಯಂತೇ ಆದನು. ಎಷ್ಟರ ಮಟ್ಟಿಗೆ ಅಂದರೆ ಬೈಬಲ್ ಆತನನ್ನು “ಅದೃಶ್ಯನಾದ ದೇವರ ಪ್ರತಿರೂಪ” ಎಂದು ಕರೆಯುತ್ತದೆ. (ಕೊಲೊ. 1:15) ಕ್ರಿಸ್ತನನ್ನು ನಿಕಟವಾಗಿ ಹಿಂಬಾಲಿಸುವ ಮೂಲಕ ನಾವು ಯೆಹೋವನ ಒಳ್ಳೇ ಪರಿಚಯ ಮಾಡಿಕೊಳ್ಳಬಲ್ಲೆವು.
ಯೆಹೋವನನ್ನು ಹೆಚ್ಚು ಪೂರ್ಣವಾಗಿ ಅನುಕರಿಸಲು
5. ನಾವು ಯೆಹೋವನನ್ನು ಹೆಚ್ಚು ಪೂರ್ಣವಾಗಿ ಅನುಕರಿಸಲು ಯಾವುದು ಸಹಾಯ ಮಾಡಬಲ್ಲದು, ಮತ್ತು ಏಕೆ?
5 ನಮ್ಮನ್ನು ‘ದೇವರ ಸ್ವರೂಪದಲ್ಲಿ ಆತನ ಹೋಲಿಕೆಗೆ ಸರಿಯಾಗಿ ಉಂಟುಮಾಡ’ಲಾಗಿದೆ. ಆದದರಿಂದ, ದೈವಿಕ ಗುಣಗಳನ್ನು ಪ್ರತಿಫಲಿಸುವ ಸಾಮರ್ಥ್ಯ ನಮ್ಮಲ್ಲಿದೆ. (ಆದಿ. 1:26) ಅಪೊಸ್ತಲ ಪೌಲನು ಕ್ರೈಸ್ತರಿಗೆ, “ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ” ಎಂದು ಉತ್ತೇಜಿಸಿದನು. (ಎಫೆ. 5:1) ಕ್ರಿಸ್ತನನ್ನು ಹಿಂಬಾಲಿಸುವುದರಿಂದ ನಮ್ಮ ಸ್ವರ್ಗೀಯ ತಂದೆಯನ್ನು ಅನುಕರಿಸಲು ಸಾಧ್ಯವಾಗುತ್ತದೆ. ಏಕೆಂದರೆ, ಯೇಸು ಬೇರಾರಿಗಿಂತಲೂ ಹೆಚ್ಚು ಪೂರ್ಣವಾಗಿ ದೇವರ ಯೋಚನಾರೀತಿ, ಭಾವನೆಗಳು ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದನು. ಯೇಸು ಭೂಮಿ ಮೇಲಿದ್ದಾಗ ಯೆಹೋವನ ನಾಮವನ್ನು ತಿಳಿಯಪಡಿಸಿದ್ದು ಮಾತ್ರವಲ್ಲ ಆತನ ವ್ಯಕ್ತಿತ್ವವನ್ನೂ ಪ್ರಕಟಪಡಿಸಿದನು. (ಮತ್ತಾಯ 11:27 ಓದಿ.) ಯೇಸು ಇದನ್ನು ತನ್ನ ಮಾತು, ಕ್ರಿಯೆಗಳು, ಬೋಧನೆಗಳು ಹಾಗೂ ಮಾದರಿಯ ಮೂಲಕ ಮಾಡಿದನು.
6. ಯೇಸುವಿನ ಬೋಧನೆಗಳು ಯೆಹೋವನ ಬಗ್ಗೆ ಏನನ್ನು ಪ್ರಕಟಿಸುತ್ತವೆ?
6 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಮತ್ತು ಆತನ ಆರಾಧಕರ ಬಗ್ಗೆ ಆತನಿಗೆ ಹೇಗನಿಸುತ್ತದೆಂಬುದನ್ನು ಯೇಸು ತನ್ನ ಬೋಧನೆಗಳ ಮೂಲಕ ತೋರಿಸಿದನು. (ಮತ್ತಾ. 22:36-40; ಲೂಕ 12:6, 7; 15:4-7) ಉದಾಹರಣೆಗೆ, ಆತನು ದಶಾಜ್ಞೆಗಳಲ್ಲಿ ಒಂದಾದ ‘ವ್ಯಭಿಚಾರ ಮಾಡಬಾರದು’ ಎಂಬ ಆಜ್ಞೆಯನ್ನು ಉಲ್ಲೇಖಿಸಿದ ಬಳಿಕ, ಒಬ್ಬ ವ್ಯಕ್ತಿ ಆ ಕೃತ್ಯವನ್ನು ನಡೆಸುವ ಎಷ್ಟೋ ಮುಂಚೆಯೇ ಅವನ ಹೃದಯದಲ್ಲೇನು ನಡೆಯುತ್ತದೋ ಅದರ ಬಗ್ಗೆ ದೇವರ ನೋಟವೇನು ಎಂಬುದನ್ನು ವಿವರಿಸಿದನು. ಅವನಂದದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ವಿಮೋ. 20:14; ಮತ್ತಾ. 5:27, 28) ಧರ್ಮಶಾಸ್ತ್ರದ ಒಂದು ನಿಯಮದ ಅರ್ಥ, “ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕು” ಎಂದು ಫರಿಸಾಯರು ವಿವರಿಸುತ್ತಿದ್ದರು. ಯೇಸು ಇದನ್ನು ತಿಳಿಸಿದ ಬಳಿಕ ಈ ಬಗ್ಗೆ ಯೆಹೋವನ ಯೋಚನಾ ರೀತಿಯನ್ನು ತಿಳಿಸುತ್ತಾ ಅವನಂದದ್ದು: “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ. ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ.” (ಮತ್ತಾ. 5:43, 44; ವಿಮೋ. 23:4; ಯಾಜ. 19:18) ದೇವರ ಯೋಚನೆ ಮತ್ತು ಭಾವನೆಗಳ ಬಗ್ಗೆ ಒಳನೋಟ ಪಡೆಯುವ ಮೂಲಕ ನಾವಾತನನ್ನು ಹೆಚ್ಚು ಪೂರ್ಣವಾಗಿ ಅನುಕರಿಸಲು ಸಜ್ಜಾಗುತ್ತೇವೆ.
7, 8. ಯೇಸುವಿನ ಮಾದರಿಯಿಂದ ಯೆಹೋವನ ಬಗ್ಗೆ ನಾವೇನು ಕಲಿಯುತ್ತೇವೆ?
7 ಯೇಸು ತನ್ನ ತಂದೆ ಯಾವ ವಿಧದ ವ್ಯಕ್ತಿ ಎಂಬುದನ್ನು ತನ್ನ ಮಾದರಿಯ ಮೂಲಕವೂ ತೋರಿಸಿದನು. ಯೇಸು ದೀನದರಿದ್ರರ ಕಡೆಗೆ ತೋರಿಸಿದ ಕರುಣೆ, ಕಷ್ಟದಲ್ಲಿದ್ದವರಿಗೆ ತೋರಿಸಿದ ಅನುಕಂಪ, ಶಿಷ್ಯರು ಎಳೆಯ ಮಕ್ಕಳನ್ನು ಗದರಿಸಿದಾಗ ತೋರಿಸಿದ ಕೋಪ ಇತ್ಯಾದಿಗಳ ಕುರಿತು ಸುವಾರ್ತಾ ವೃತ್ತಾಂತಗಳಲ್ಲಿ ಓದುವಾಗ, ಅವನ ತಂದೆಯಲ್ಲೂ ಅದೇ ರೀತಿಯ ಭಾವನೆಗಳು ಹುಟ್ಟಿದ್ದನ್ನು ನಾವು ಚಿತ್ರಿಸಿಕೊಳ್ಳಬಹುದಲ್ಲವೇ? (ಮಾರ್ಕ 1:40-42; 10:13, 14; ಯೋಹಾ. 11:32-35) ಯೇಸುವಿನ ಕ್ರಿಯೆಗಳು ದೇವರ ಪ್ರಧಾನ ಗುಣಗಳ ಮೇಲೆ ಹೇಗೆ ಬೆಳಕನ್ನು ಚೆಲ್ಲಿದವು ಎಂಬುದರ ಕುರಿತು ಯೋಚಿಸಿರಿ. ಕ್ರಿಸ್ತನು ನಡೆಸಿದ ಅದ್ಭುತಗಳು, ಅವನ ಬಳಿ ಅಪಾರ ಶಕ್ತಿ ಇತ್ತೆಂಬುದನ್ನು ತೋರಿಸುವುದಿಲ್ಲವೋ? ಆದರೆ ಆ ಶಕ್ತಿಯನ್ನು ಆತನೆಂದೂ ತನ್ನ ಲಾಭಕ್ಕಾಗಲಿ, ಇತರರ ಹಾನಿಗಾಗಲಿ ಬಳಸಲಿಲ್ಲ. (ಲೂಕ 4:1-4) ದುರಾಸೆಯ ವ್ಯಾಪಾರಿಗಳನ್ನು ಅವನು ಆಲಯದಿಂದ ಹೊರಗಟ್ಟಿದ್ದು, ಅವನಿಗಿದ್ದ ನ್ಯಾಯಪ್ರಜ್ಞೆಯನ್ನು ಎಷ್ಟು ಸ್ಪಷ್ಟವಾಗಿ ತೋರಿಸಿತು! (ಮಾರ್ಕ 11:15-17; ಯೋಹಾ. 2:13-16) ಜನರ ಹೃದಯಗಳನ್ನು ಮುಟ್ಟಲು ಅವನು ಬಳಸುತ್ತಿದ್ದ ಇಂಪಾದ ಮಾತುಗಳು, ವಿವೇಕದ ಸಂಬಂಧದಲ್ಲಿ ಅವನು “ಸೊಲೊಮೋನನಿಗಿಂತಲೂ ಹೆಚ್ಚಿನವನು” ಎಂಬುದನ್ನು ತೋರಿಸಿಕೊಟ್ಟವು. (ಮತ್ತಾ. 12:42) ಯೇಸು ಬೇರೆಯವರಿಗಾಗಿ ತನ್ನ ಪ್ರಾಣವನ್ನು ಕೊಡುವ ಮೂಲಕ ತೋರಿಸಿದ ಪ್ರೀತಿಯ ಬಗ್ಗೆ ಏನು ಹೇಳಬಲ್ಲೆವು? ಆ “ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ.”—ಯೋಹಾ. 15:13.
8 ದೇವರ ಪುತ್ರನು, ತನ್ನ ಪ್ರತಿಯೊಂದು ಮಾತು ಹಾಗೂ ಕ್ರಿಯೆಯಲ್ಲಿ ಯೆಹೋವನನ್ನು ಎಷ್ಟು ಪರಿಪೂರ್ಣವಾಗಿ ಪ್ರತಿಬಿಂಬಿಸಿದನೆಂದರೆ ಅವನು ಹೀಗನ್ನಸಾಧ್ಯವಿತ್ತು: “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ.” (ಯೋಹಾನ 14:9-11 ಓದಿ.) ಹೀಗಿರುವುದರಿಂದ ಕ್ರಿಸ್ತನನ್ನು ಅನುಕರಿಸುವುದು ಯೆಹೋವನನ್ನು ಅನುಕರಿಸುವುದಕ್ಕೆ ಸಮಾನವಾಗಿದೆ.
ಯೆಹೋವನ ಅಭಿಷಿಕ್ತನಾಗಿರುವ ಯೇಸು
9. ಯೇಸು ಯಾವಾಗ ಮತ್ತು ಹೇಗೆ ದೇವರ ಅಭಿಷಿಕ್ತನಾದನು?
9 ಸಾ.ಶ. 29ರ ಶರತ್ಕಾಲದಲ್ಲಿ, 30 ವರ್ಷದವನಾಗಿದ್ದ ಯೇಸು ಸ್ನಾನಿಕನಾದ ಯೋಹಾನನ ಬಳಿ ಬಂದಾಗ ಏನಾಯಿತೆಂಬುದನ್ನು ಪರಿಗಣಿಸಿರಿ. “ಯೇಸು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ನೀರಿನಿಂದ ಕೂಡಲೆ ಮೇಲಕ್ಕೆ ಬರಲು, ಇಗೋ! ಆಕಾಶವು ತೆರೆಯಲ್ಪಟ್ಟಿತು ಮತ್ತು ದೇವರಾತ್ಮವು ಪಾರಿವಾಳದ ರೂಪದಲ್ಲಿ ಅವನ ಮೇಲೆ ಇಳಿದುಬರುತ್ತಿರುವುದನ್ನು ಯೋಹಾನನು ಕಂಡನು.” ಯೇಸು ಆಗ ಕ್ರಿಸ್ತನು ಅಂದರೆ ಮೆಸ್ಸೀಯನಾದನು. ಅದೇ ಹೊತ್ತಿನಲ್ಲಿ, ಯೇಸುವೇ ತನ್ನ ಅಭಿಷಿಕ್ತನೆಂದು ಯೆಹೋವನು ತಿಳಿಯಪಡಿಸಿದನು. ಆತನಂದದ್ದು: “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ.” (ಮತ್ತಾ. 3:13-17) ಕ್ರಿಸ್ತನನ್ನು ಹಿಂಬಾಲಿಸಲಿಕ್ಕಾಗಿ ಇದೆಷ್ಟು ಒಳ್ಳೇ ಕಾರಣ!
10, 11. (ಎ) ಯೇಸುವಿಗೆ ಸೂಚಿಸುತ್ತಾ “ಕ್ರಿಸ್ತ” ಎಂಬ ಬಿರುದನ್ನು ಯಾವ ವಿಧಗಳಲ್ಲಿ ಬಳಸಲಾಗಿದೆ? (ಬಿ) ನಾವು ಯೇಸು ಕ್ರಿಸ್ತನನ್ನು ಏಕೆ ಹಿಂಬಾಲಿಸಬೇಕು?
10 ಬೈಬಲ್ನಲ್ಲಿ “ಕ್ರಿಸ್ತ” ಎಂಬ ಬಿರುದನ್ನು ಯೇಸುವಿಗೆ ವಿಭಿನ್ನ ವಿಧಗಳಲ್ಲಿ ಬಳಸಲಾಗಿದೆ. ಉದಾಹರಣೆಗೆ, ಯೇಸು ಕ್ರಿಸ್ತ, ಕ್ರಿಸ್ತ ಯೇಸು ಮತ್ತು ಕ್ರಿಸ್ತ ಎಂಬ ಪದಗಳನ್ನು ಪರಿಗಣಿಸಿ. “ಯೇಸು ಕ್ರಿಸ್ತ” ಎಂಬ ಪದವನ್ನು ಪ್ರಥಮ ಬಾರಿ ಯೇಸುವೇ ಬಳಸಿದನು. ಇದರಲ್ಲಿ ಮೊದಲು ಹೆಸರು ಬಳಿಕ ಬಿರುದು ಬರುತ್ತದೆ. ತನ್ನ ತಂದೆಗೆ ಪ್ರಾರ್ಥಿಸುವಾಗ ಅವನು ಹೇಳಿದ್ದು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾ. 17:3) ಈ ಪದಬಳಕೆಯು, ದೇವರು ಕಳುಹಿಸಿದ ಮತ್ತು ಆತನ ಅಭಿಷಿಕ್ತನಾಗಿ ಪರಿಣಮಿಸಿದವನ ಕಡೆಗೆ ಸ್ಪಷ್ಟವಾಗಿ ಗಮನಸೆಳೆಯುತ್ತದೆ. “ಕ್ರಿಸ್ತ ಯೇಸು” ಎಂಬುದರಲ್ಲಿ ಹೆಸರಿಗಿಂತ ಮುಂಚೆ ಬಿರುದನ್ನು ಇಡಲಾಗುವಾಗ, ವ್ಯಕ್ತಿಗಿಂತ ಅವನ ಸ್ಥಾನ ಇಲ್ಲವೇ ಹುದ್ದೆಗೆ ಹೆಚ್ಚು ಒತ್ತುಕೊಡಲಾಗುತ್ತದೆ. (2 ಕೊರಿಂ. 4:5) ಬರೀ “ಕ್ರಿಸ್ತ” ಎಂಬ ಬಿರುದನ್ನು ಬಳಸುವುದು, ಯೇಸುವಿಗಿರುವ ಮೆಸ್ಸೀಯನ ಸ್ಥಾನವನ್ನು ಒತ್ತಿಹೇಳುವ ಇನ್ನೊಂದು ವಿಧಾನವಾಗಿದೆ.—ಅ. ಕಾ. 5:42.
11 ಯೇಸುವನ್ನು ಸೂಚಿಸುತ್ತಾ “ಕ್ರಿಸ್ತ” ಎಂಬ ಬಿರುದನ್ನು ಯಾವುದೇ ವಿಧದಲ್ಲಿ ಉಪಯೋಗಿಸಿದರೂ ಅದು ಈ ಮಹತ್ತ್ವಪೂರ್ಣ ಸತ್ಯವನ್ನು ಒತ್ತಿಹೇಳುತ್ತದೆ: ದೇವರ ಪುತ್ರನು ತಂದೆಯ ಚಿತ್ತವನ್ನು ತಿಳಿಯಪಡಿಸಲು ಮಾನವನಾಗಿ ಈ ಭೂಮಿಗೆ ಬಂದರೂ ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ, ಬರೀ ಪ್ರವಾದಿಯೂ ಆಗಿರಲಿಲ್ಲ. ಅವನು ಯೆಹೋವನ ಅಭಿಷಿಕ್ತನಾಗಿದ್ದನು. ಖಂಡಿತವಾಗಿಯೂ ನಾವು ಅವನನ್ನು ಹಿಂಬಾಲಿಸಬೇಕು.
ರಕ್ಷಣೆಯ ಏಕೈಕ ಮಾರ್ಗ ಯೇಸುವೇ
12. ಅಪೊಸ್ತಲ ತೋಮನಿಗೆ ಮಾಡಲಾದ ಯಾವ ಹೇಳಿಕೆ ನಮಗಿಂದು ಮಹತ್ತ್ವಪೂರ್ಣವಾಗಿದೆ?
12 ಮೆಸ್ಸೀಯನನ್ನು ಹಿಂಬಾಲಿಸುತ್ತಾ ಇರುವುದಕ್ಕಿರುವ ಇನ್ನೊಂದು ಪ್ರಮುಖ ಕಾರಣವು, ಯೇಸು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಆಡಿದ ಮಾತುಗಳಲ್ಲಿದೆ. ಈ ಮಾತುಗಳನ್ನು ಯೇಸು ತನ್ನ ಸಾವಿನ ಕೆಲವೇ ತಾಸುಗಳ ಮುಂಚೆ ಆಡಿದ್ದನು. ಯೇಸು ತಾನು ಹೊರಟುಹೋಗಿ ಅವರಿಗಾಗಿ ಒಂದು ಸ್ಥಳವನ್ನು ಸಿದ್ಧಮಾಡುವೆನೆಂದು ಹೇಳಿದಾಗ ತೋಮನು ಎಬ್ಬಿಸಿದ ಪ್ರಶ್ನೆಗೆ ಹೀಗೆ ಉತ್ತರಿಸಿದನು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.” (ಯೋಹಾ. 14:1-6) ಯೇಸು ಆಗ ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗೆ ಮಾತಾಡುತ್ತಿದ್ದನು. ಅವನು ಅವರಿಗೆ ಸ್ವರ್ಗದಲ್ಲಿ ಒಂದು ಸ್ಥಳವನ್ನು ನೀಡುವುದಾಗಿ ಮಾತುಕೊಟ್ಟನು. ಆದರೆ ಅವನಾಡಿದ ಮಾತುಗಳು, ಭೂಮಿಯ ಮೇಲೆ ನಿತ್ಯಜೀವವನ್ನು ನಿರೀಕ್ಷಿಸುವವರಿಗೂ ಮಹತ್ತ್ವಪೂರ್ಣವಾಗಿವೆ. (ಪ್ರಕ. 7:9, 10; 21:1-4) ಅದು ಹೇಗೆ?
13. ಯೇಸು ಯಾವ ಅರ್ಥದಲ್ಲಿ “ಮಾರ್ಗ”ವಾಗಿದ್ದಾನೆ?
13 ಯೇಸು ಕ್ರಿಸ್ತನು “ಮಾರ್ಗ”ವಾಗಿದ್ದಾನೆ. ಅಂದರೆ, ಆತನೊಬ್ಬನ ಮೂಲಕ ಮಾತ್ರ ನಾವು ದೇವರ ಬಳಿಸಾರಬಹುದು. ಈ ಮಾತು ಪ್ರಾರ್ಥನೆಯ ವಿಷಯದಲ್ಲಿ ಸತ್ಯವಾಗಿದೆ. ನಾವು ಯೇಸುವಿನ ಮೂಲಕ ಪ್ರಾರ್ಥಿಸಿದರೆ ಮಾತ್ರ, ತಂದೆಯ ಚಿತ್ತಕ್ಕೆ ಹೊಂದಿಕೆಯಲ್ಲಿ ಬೇಡಿದ್ದನ್ನು ಕೊಡುವನೆಂಬ ಆಶ್ವಾಸನೆ ನಮಗಿರಬಲ್ಲದು. (ಯೋಹಾ. 15:16) ಆದರೆ ಯೇಸು ಇನ್ನೊಂದು ಅರ್ಥದಲ್ಲೂ “ಮಾರ್ಗ”ವಾಗಿದ್ದಾನೆ. ಪಾಪವು ಮಾನವಕುಲವನ್ನು ದೇವರಿಂದ ದೂರ ಸರಿಸಿದೆ. (ಯೆಶಾ. 59:2) ಯೇಸು ‘ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟನು.’ (ಮತ್ತಾ. 20:28) ಇದರ ಫಲಿತಾಂಶವನ್ನು ಬೈಬಲ್ ವಿವರಿಸುವುದು: “ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದ ಶುದ್ಧೀಕರಿಸುತ್ತದೆ.” (1 ಯೋಹಾ. 1:7) ಹೀಗೆ, ಮನುಷ್ಯರು ದೇವರೊಂದಿಗೆ ಸಮಾಧಾನಮಾಡುವಂತೆ ಪುತ್ರನು ದಾರಿ ತೆರೆದನು. (ರೋಮ. 5:8-10) ಆದುದರಿಂದ ನಮಗೆ ದೇವರೊಂದಿಗೆ ಉತ್ತಮ ಸಂಬಂಧವಿರಬೇಕಾದರೆ ನಾವು ಯೇಸುವಿನಲ್ಲಿ ನಂಬಿಕೆಯಿಟ್ಟು ಅವನಿಗೆ ವಿಧೇಯರಾಗಬೇಕು.—ಯೋಹಾ. 3:36.
14. ಯೇಸು “ಸತ್ಯ” ಆಗಿರುವುದು ಹೇಗೆ?
14 ಯೇಸು “ಸತ್ಯವೂ” ಆಗಿದ್ದಾನೆ. ಏಕೆಂದರೆ ಅವನು ಯಾವಾಗಲೂ ಸತ್ಯದ ಕುರಿತು ಮಾತಾಡಿದನು ಮತ್ತು ಅದಕ್ಕನುಸಾರ ಜೀವಿಸಿದನು. ಅಷ್ಟೇ ಅಲ್ಲ, ಮೆಸ್ಸೀಯನ ಕುರಿತು ಬರೆಯಲಾಗಿರುವ ಅನೇಕಾನೇಕ ಪ್ರವಾದನೆಗಳೂ ಅವನಲ್ಲಿ ನೆರವೇರಿದವು. ಅಪೊಸ್ತಲ ಪೌಲನು ಬರೆದದ್ದು: “ದೇವರ ವಾಗ್ದಾನಗಳು ಎಷ್ಟೇ ಇರುವುದಾದರೂ ಅವು ಅವನ ಮೂಲಕ ಹೌದಾಗಿ ಪರಿಣಮಿಸಿವೆ.” (2 ಕೊರಿಂ. 1:20) ಮೋಶೆಯ ಧರ್ಮಶಾಸ್ತ್ರದಲ್ಲಿದ್ದ, “ಬರಲಿರುವ ಒಳ್ಳೆಯ ವಿಷಯಗಳ ಛಾಯೆ” ಕ್ರಿಸ್ತ ಯೇಸುವಿನಲ್ಲಿ ನೈಜವಾದವು. (ಇಬ್ರಿ. 10:1; ಕೊಲೊ. 2:17) ಯೇಸುವೇ ಎಲ್ಲ ಪ್ರವಾದನೆಗಳ ಮುಖ್ಯ ಬಿಂದುವಾಗಿದ್ದಾನೆ. ಅವು, ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಅವನಿಗಿರುವ ಪ್ರಧಾನ ಪಾತ್ರದ ಮೇಲೆ ಬೆಳಕು ಚೆಲ್ಲುತ್ತವೆ. (ಪ್ರಕ. 19:10) ದೇವರು ನಮಗಾಗಿ ಏನನ್ನು ಉದ್ದೇಶಿಸಿದ್ದಾನೋ ಅದರ ನೆರವೇರಿಕೆಯಿಂದ ಪ್ರಯೋಜನಪಡೆಯಬೇಕಾದರೆ ನಾವು ಮೆಸ್ಸೀಯನನ್ನು ಹಿಂಬಾಲಿಸಬೇಕು.
15. ಯೇಸು ಯಾವ ಅರ್ಥದಲ್ಲಿ “ಜೀವ” ಆಗಿದ್ದಾನೆ?
15 ಯೇಸು “ಜೀವವೂ” ಆಗಿದ್ದಾನೆ. ಏಕೆಂದರೆ ಅವನು ಮಾನವಕುಲವನ್ನು ತನ್ನ ಜೀವರಕ್ತದಿಂದ ಖರೀದಿಸಿದ್ದಾನೆ. ನಿತ್ಯಜೀವವೆಂಬ ವರವನ್ನು ದೇವರು “ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕ” ಕೊಡುತ್ತಾನೆ. (ರೋಮ. 6:23) ಮೃತರಿಗೂ ಯೇಸು “ಜೀವ” ಆಗಿದ್ದಾನೆ. (ಯೋಹಾ. 5:28, 29) ಅಷ್ಟುಮಾತ್ರವಲ್ಲದೆ, ಅವನ ಸಹಸ್ರ ವರ್ಷದಾಳಿಕೆಯಲ್ಲಿ ಮಹಾ ಯಾಜಕನಾಗಿ ಅವನೇನು ಮಾಡುವನೆಂಬುದರ ಕುರಿತಾಗಿ ಯೋಚಿಸಿರಿ. ಅವನು ತನ್ನ ಭೂಪ್ರಜೆಗಳಿಗೆ ಪಾಪಮರಣದಿಂದ ನಿತ್ಯ ವಿಮೋಚನೆ ಕೊಡುವನು!—ಇಬ್ರಿ. 9:11, 12, 28.
16. ಯೇಸುವನ್ನು ಹಿಂಬಾಲಿಸಲು ನಮಗೆ ಯಾವ ಕಾರಣವಿದೆ?
16 ಯೇಸು ತೋಮನಿಗೆ ಕೊಟ್ಟ ಉತ್ತರವು ನಮಗೆ ಮಹತ್ತ್ವಾರ್ಥವನ್ನು ಹೊಂದಿದೆ. ಯೇಸುವೇ ಮಾರ್ಗ, ಸತ್ಯ ಮತ್ತು ಜೀವ ಆಗಿದ್ದಾನೆ. ಅವನ ಮುಖಾಂತರ ಲೋಕವನ್ನು ರಕ್ಷಿಸಲಿಕ್ಕಾಗಿ ದೇವರು ಅವನನ್ನು ಭೂಮಿಗೆ ಕಳುಹಿಸಿದನು. (ಯೋಹಾ. 3:17) ಅವನನ್ನು ಬಿಟ್ಟು ಬೇರೆ ಯಾರ ಮೂಲಕವೂ ತಂದೆಯ ಬಳಿ ಹೋಗಲಾರೆವು. ಬೈಬಲ್ ಸ್ಪಷ್ಟವಾಗಿ ಹೀಗನ್ನುತ್ತದೆ: “ಬೇರೆ ಯಾರಿಂದಲೂ ರಕ್ಷಣೆಯು ದೊರಕುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಾವು ರಕ್ಷಣೆಯನ್ನು ಹೊಂದಸಾಧ್ಯವಿಲ್ಲ.” (ಅ. ಕಾ. 4:12) ಆದದ್ದರಿಂದ ನಮ್ಮ ಹಿನ್ನಲೆ ಯಾವುದೇ ಆಗಿರಲಿ, ಯೇಸುವನ್ನು ನಂಬಿ, ಅವನನ್ನು ಹಿಂಬಾಲಿಸುವುದೇ ವಿವೇಕಯುತ ಕ್ರಮವಾಗಿದೆ. ಇದು ನಮ್ಮನ್ನು ಜೀವಕ್ಕೆ ನಡೆಸುವುದು.—ಯೋಹಾ. 20:31.
ಕ್ರಿಸ್ತನಿಗೆ ಕಿವಿಗೊಡಲು ನಮಗೆ ಅಪ್ಪಣೆಯಿದೆ
17. ದೇವರ ಮಗನಿಗೆ ನಾವು ಕಿವಿಗೊಡುವುದು ಪ್ರಾಮುಖ್ಯವೇಕೆ?
17 ಪೇತ್ರ, ಯೋಹಾನ, ಯಾಕೋಬರು ಯೇಸುವಿನ ರೂಪಾಂತರವನ್ನು ಕಣ್ಣಾರೆ ನೋಡಿದರು. ಆ ಸಮಯದಲ್ಲಿ ಪರಲೋಕದಿಂದ ಒಂದು ವಾಣಿ, “ಇವನು ನಾನು ಆರಿಸಿಕೊಂಡಿರುವ ನನ್ನ ಮಗನು. ಇವನ ಮಾತಿಗೆ ಕಿವಿಗೊಡಿರಿ” ಎಂದು ಹೇಳುವುದನ್ನು ಅವರು ಕೇಳಿಸಿಕೊಂಡರು. (ಲೂಕ 9:28, 29, 35) ಮೆಸ್ಸೀಯನಿಗೆ ಕಿವಿಗೊಡಬೇಕೆಂದು ಕೊಡಲಾಗಿರುವ ಅಪ್ಪಣೆಗೆ ನಾವು ವಿಧೇಯತೆ ತೋರಿಸುವುದು ಒಂದು ಗಂಭೀರ ವಿಷಯವಾಗಿದೆ.—ಅ. ಕಾರ್ಯಗಳು 3:22, 23 ಓದಿ.
18. ಯೇಸು ಕ್ರಿಸ್ತನಿಗೆ ನಾವು ಹೇಗೆ ಕಿವಿಗೊಡಬಲ್ಲೆವು?
18 ಯೇಸುವಿಗೆ ಕಿವಿಗೊಡುವುದರಲ್ಲಿ ಅವನ ‘ಮೇಲೆ ದೃಷ್ಟಿನೆಟ್ಟವರಾಗಿ ಅವನ ಮಾದರಿಯನ್ನು ನಿಕಟವಾಗಿ ಪರಿಗಣಿಸುವುದು’ ಸೇರಿದೆ. (ಇಬ್ರಿ. 12:2, 3) ಆದುದರಿಂದ ನಾವು ಅವನ ಬಗ್ಗೆ ಬೈಬಲ್ನಲ್ಲಿ ಮತ್ತು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಪ್ರಕಾಶನಗಳಲ್ಲಿ ಓದುವಂಥ ಹಾಗೂ ಕ್ರೈಸ್ತ ಕೂಟಗಳಲ್ಲಿ ಕೇಳಿಸಿಕೊಳ್ಳುವಂಥ “ಸಂಗತಿಗಳಿಗೆ ಸಾಮಾನ್ಯವಾದುದಕ್ಕಿಂತ ಹೆಚ್ಚಿನ ಗಮನವನ್ನು ಕೊಡುವ ಅಗತ್ಯವಿದೆ.” (ಇಬ್ರಿ. 2:1; ಮತ್ತಾ. 24:45) ಯೇಸುವಿನ ಕುರಿಗಳಾಗಿ ನಾವು ಅವನಿಗೆ ಕಿವಿಗೊಟ್ಟು ಅವನನ್ನು ಹಿಂಬಾಲಿಸಲು ಉತ್ಸುಕರಾಗಿರೋಣ.—ಯೋಹಾ. 10:27.
19. ಕ್ರಿಸ್ತನನ್ನು ಹಿಂಬಾಲಿಸುತ್ತಾ ಇರಲು ಯಾವುದು ಸಹಾಯ ಮಾಡುವುದು?
19 ಏನೇ ಎದುರಾಗಲಿ ಕ್ರಿಸ್ತನನ್ನು ಹಿಂಬಾಲಿಸುತ್ತಾ ಇರಲು ನಾವು ಶಕ್ತರಾಗುವೆವೋ? ಹೌದು ಶಕ್ತರಾಗಬಲ್ಲೆವು. ಆದರೆ ಅದಕ್ಕಾಗಿ “ಕ್ರಿಸ್ತ ಯೇಸುವಿನ ಸಂಬಂಧದಲ್ಲಿನ ನಂಬಿಕೆ ಮತ್ತು ಪ್ರೀತಿಯೊಂದಿಗೆ” ನಾವು ಕಲಿತದ್ದೆಲ್ಲವನ್ನೂ ಆಚರಣೆಗೆ ತರುವ ಮೂಲಕ “ಸ್ವಸ್ಥಕರವಾದ ಮಾತುಗಳ ನಮೂನೆಯನ್ನು ಭದ್ರವಾಗಿ ಹಿಡಿದುಕೊಂಡಿ”ರಬೇಕು.—2 ತಿಮೊ. 1:13.
ನೀವೇನು ಕಲಿತಿರಿ?
• ‘ಕ್ರಿಸ್ತನನ್ನು’ ಹಿಂಬಾಲಿಸುವುದು ಯೆಹೋವನೊಂದಿಗಿನ ನಮ್ಮ ಆಪ್ತತೆಯನ್ನು ಹೇಗೆ ಹೆಚ್ಚಿಸುವುದು?
• ಯೇಸುವನ್ನು ಅನುಕರಿಸುವುದು ಯೆಹೋವನನ್ನು ಅನುಕರಿಸುವುದಕ್ಕೆ ಸಮಾನವಾಗಿದೆ ಏಕೆ?
• ಯೇಸು “ಮಾರ್ಗವೂ ಸತ್ಯವೂ ಜೀವವೂ” ಆಗಿರುವುದು ಹೇಗೆ?
• ಯೆಹೋವನ ಅಭಿಷಿಕ್ತನಿಗೆ ನಾವೇಕೆ ಕಿವಿಗೊಡಬೇಕು?
[ಪುಟ 29ರಲ್ಲಿರುವ ಚಿತ್ರ]
ಯೇಸುವಿನ ಬೋಧನೆಗಳು ಯೆಹೋವನ ಶ್ರೇಷ್ಠವಾದ ಯೋಚನಾರೀತಿಯನ್ನು ಪ್ರತಿಬಿಂಬಿಸುತ್ತವೆ
[ಪುಟ 30ರಲ್ಲಿರುವ ಚಿತ್ರ]
ನಾವು ಯೆಹೋವನ ಅಭಿಷಿಕ್ತನನ್ನು ನಂಬಿಗಸ್ತಿಕೆಯಿಂದ ಹಿಂಬಾಲಿಸಬೇಕು
[ಪುಟ 32ರಲ್ಲಿರುವ ಚಿತ್ರ]
ಯೆಹೋವನು ಘೋಷಿಸಿದ್ದು: ‘ಇವನು ನನ್ನ ಮಗನು. ಇವನ ಮಾತಿಗೆ ಕಿವಿಗೊಡಿರಿ’