ಯೇಸುವಿನ ಕುರಿತಾದ ಸತ್ಯವನ್ನು ತಿಳಿಯಪಡಿಸಿರಿ
1 ಅಭಿಷಿಕ್ತ ಕ್ರೈಸ್ತರಿಗೆ “ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವ ಕೆಲಸವು ಇದೆ. ಮತ್ತು ಇದರಲ್ಲಿ, ಅವರ ಸಂಗಾತಿಗಳಾದ ಬೇರೆ ಕುರಿಗಳು ಅವರಿಗೆ ನೆರವನ್ನು ನೀಡುತ್ತಾರೆ. (ಪ್ರಕ. 12:17) ಇದು ಪ್ರಾಮುಖ್ಯವಾದ ನೇಮಕವಾಗಿದೆ, ಏಕೆಂದರೆ ಅವನ ಮೂಲಕ ಮಾತ್ರ ರಕ್ಷಣೆಯನ್ನು ಪಡೆಯಸಾಧ್ಯವಿದೆ.—ಯೋಹಾ. 17:3; ಅ. ಕೃ. 4:12.
2 ‘ಮಾರ್ಗ, ಸತ್ಯ ಮತ್ತು ಜೀವ’: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ” ಎಂದು ಯೇಸು ಹೇಳಿದನು. (ಯೋಹಾ. 14:6) “ಮಾರ್ಗ”ವಾಗಿರುವ ಯೇಸುವಿನ ಮೂಲಕ ಮಾತ್ರ ನಾವು ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸಬಲ್ಲೆವು ಮತ್ತು ಆತನೊಂದಿಗೆ ಒಂದು ಅಂಗೀಕೃತ ಸಂಬಂಧವನ್ನು ಪಡೆಯಬಲ್ಲೆವು. (ಯೋಹಾ. 15:16) ಯೇಸು “ಸತ್ಯವೂ” ಆಗಿದ್ದಾನೆ ಹೇಗೆಂದರೆ, ಹೀಬ್ರು ಶಾಸ್ತ್ರವಚನಗಳಲ್ಲಿ ಒಳಗೂಡಿದ್ದ ಪ್ರವಾದನೆಗಳು ಮತ್ತು ಛಾಯೆಗಳು ಅವನಲ್ಲಿಯೇ ವಾಸ್ತವರೂಪವನ್ನು ತಾಳಿದವು. (ಯೋಹಾ. 1:17; ಕೊಲೊ. 2:16, 17) ಖಂಡಿತವಾಗಿಯೂ ಸತ್ಯ ಪ್ರವಾದನೆಯ ಮೂಲಭೂತ ಗುರಿಯು, ದೇವರ ಉದ್ದೇಶವನ್ನು ಪೂರೈಸುವುದರಲ್ಲಿ ಯೇಸುವಿಗಿರುವ ಕೇಂದ್ರೀಯ ಪಾತ್ರದ ಮೇಲೆ ಬೆಳಕನ್ನು ಬೀರುವುದೇ ಆಗಿದೆ. (ಪ್ರಕ. 19:10) ಇದಲ್ಲದೆ, ಯೇಸು “ಜೀವವೂ” ಆಗಿದ್ದಾನೆ. ನಿತ್ಯಜೀವದ ವರದಾನವನ್ನು ಪಡೆಯಲಿಕ್ಕಾಗಿ ಎಲ್ಲರೂ ಅವನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡಬೇಕು.—ಯೋಹಾ. 3:16, 36; ಇಬ್ರಿ. 2:9.
3 ಶಿರಸ್ಸು ಮತ್ತು ಆಳುತ್ತಿರುವ ಅರಸ: ತನ್ನ ಮಗನಿಗೆ ಯೆಹೋವನು ವಹಿಸಿಕೊಟ್ಟಿರುವ ಮಹತ್ತರವಾದ ಆಡಳಿತ ಅಧಿಕಾರವನ್ನು ಸಹ ಜನರು ಗ್ರಹಿಸಬೇಕು. ಯೇಸುವಿಗೆ ದೇವರ ರಾಜ್ಯದ ಅರಸನಾಗಿ ಆಳುವ ಅಧಿಕಾರವು ಕೊಡಲ್ಪಟ್ಟಿದೆ—‘ಅವನಿಗೆ ಜನರ ವಿಧೇಯತೆಯು’ ಸೇರತಕ್ಕದ್ದಾಗಿದೆ. (ಆದಿ. 49:10) ಇದಕ್ಕೆ ಕೂಡಿಸಿ, ಯೆಹೋವನು ಅವನನ್ನು ಸಭೆಯ ಶಿರಸ್ಸಾಗಿ ನೇಮಿಸಿದ್ದಾನೆ. (ಎಫೆ. 1:22, 23) ಯೇಸು ಹೇಗೆ ಸಭೆಯ ಮೇಲ್ವಿಚಾರಣೆಮಾಡುತ್ತಾನೆ ಹಾಗೂ “ಹೊತ್ತುಹೊತ್ತಿಗೆ” ಆತ್ಮಿಕ ‘ಆಹಾರವನ್ನು’ ಒದಗಿಸಲಿಕ್ಕಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ಉಪಯೋಗಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕಾಗಿದೆ.—ಮತ್ತಾ. 24:45-47.
4 ಕರುಣಾಭರಿತ ಮಹಾಯಾಜಕ: ಯೇಸು ಮಾನವನೋಪಾದಿ ಪರೀಕ್ಷೆಗಳನ್ನು ಹಾಗೂ ಕಷ್ಟಾನುಭವವನ್ನು ಅನುಭವಿಸಿದವನಾಗಿರುವುದರಿಂದ, ಅವನು “ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.” (ಇಬ್ರಿ. 2:17, 18) ಯೇಸು ತಮ್ಮ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿ ತೋರಿಸುತ್ತಾನೆ ಹಾಗೂ ತಮಗೋಸ್ಕರ ದಯಾಭಾವದಿಂದ ಬೇಡುತ್ತಾನೆ ಎಂಬ ತಿಳಿವಳಿಕೆಯು ಅಪರಿಪೂರ್ಣ ಮಾನವರಿಗೆ ಎಷ್ಟು ಹೃದಯೋತ್ತೇಜಕವಾದದ್ದಾಗಿದೆ! (ರೋಮಾ. 8:34) ಯೇಸುವಿನ ಯಜ್ಞದ ಆಧಾರದ ಮೇಲೆ ಹಾಗೂ ಮಹಾಯಾಜಕನೋಪಾದಿ ಅವನು ಸಲ್ಲಿಸುವ ಸೇವೆಗಳ ಮೂಲಕ, “ಸಮಯೋಚಿತವಾದ ಸಹಾಯ”ವನ್ನು ಪಡೆಯಲಿಕ್ಕಾಗಿ ನಾವು “ವಾಕ್ ಸರಳತೆಯಿಂದ” ಯೆಹೋವನನ್ನು ಸಮೀಪಿಸಬಲ್ಲೆವು.—ಇಬ್ರಿ. 4:15, 16, NW.
5 ಯೇಸುವಿನ ಕುರಿತಾದ ಸತ್ಯವನ್ನು ಇತರರಿಗೆ ತಿಳಿಯಪಡಿಸಲಿಕ್ಕಾಗಿರುವ ನಮ್ಮ ಪ್ರಯತ್ನಗಳು, ಅವರೂ ಅವನಿಗೆ ವಿಧೇಯರಾಗುವಂತೆ ಮತ್ತು ನಮ್ಮೊಂದಿಗೆ ಐಕ್ಯಭಾವದಿಂದ ಅವನ ಸೇವೆಮಾಡುವಂತೆ ಅವರನ್ನು ಪ್ರಚೋದಿಸಲಿ.—ಯೋಹಾ. 14:15, 21.