ಯೇಸುವಿನ ಪ್ರಾರ್ಥನೆಗೆ ತಕ್ಕಂತೆ ನಡೆಯಿರಿ
“ತಂದೆಯೇ, . . . ನಿನ್ನ ಮಗನು ನಿನ್ನನ್ನು ಮಹಿಮೆಪಡಿಸಸಾಧ್ಯವಾಗುವಂತೆ ನಿನ್ನ ಮಗನನ್ನು ಮಹಿಮೆಪಡಿಸು.”—ಯೋಹಾ. 17:1.
1, 2. ಕ್ರಿ.ಶ. 33ರಂದು ಪಸ್ಕಹಬ್ಬವನ್ನು ಆಚರಿಸಿದ ನಂತರ ಯೇಸು ತನ್ನ ಅಪೊಸ್ತಲರಿಗಾಗಿ ಇನ್ನೇನನ್ನು ಮಾಡಿದನು? ವಿವರಿಸಿ.
ಕ್ರಿ.ಶ. 33, ನೈಸಾನ್ 14. ಸೂರ್ಯ ಮುಳುಗಿಯಾಗಿದೆ. ಯೇಸು ಮತ್ತು ಅವನ ಸಂಗಡಿಗರು ಪಸ್ಕಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಪೂರ್ವಜರನ್ನು ದೇವರು ಈಜಿಪ್ಟಿನ ದಾಸತ್ವದಿಂದ ಬಿಡಿಸಿದ್ದನ್ನು ಈ ಹಬ್ಬ ಜ್ಞಾಪಕ ಹುಟ್ಟಿಸುತ್ತಿತ್ತು. ಆದರೆ ಯೇಸುವಿನ ನಂಬಿಗಸ್ತ ಶಿಷ್ಯರು ಅದಕ್ಕಿಂತ ಎಷ್ಟೋ ಉಚ್ಛವಾದ “ನಿತ್ಯಬಿಡುಗಡೆಯನ್ನು” ಪಡೆಯಲಿದ್ದಾರೆ. ಮರುದಿನ, ಅವರ ಪಾಪರಹಿತ ನಾಯಕನು ವೈರಿಗಳಿಂದ ಕೊಲ್ಲಲ್ಪಡುವನು. ಈ ಕೆಟ್ಟ ಕೃತ್ಯ ಆಶೀರ್ವಾದಕರವಾಗಿ ಮಾರ್ಪಡಲಿತ್ತು. ಯೇಸು ಸುರಿಸಿದ ರಕ್ತವು ಪಾಪ ಮತ್ತು ಮರಣದಿಂದ ಮಾನವರ ಬಿಡುಗಡೆಗೆ ಆಧಾರವನ್ನು ಒದಗಿಸಲಿತ್ತು.—ಇಬ್ರಿ. 9:12-14.
2 ಈ ಪ್ರೀತಿಭರಿತ ಏರ್ಪಾಡನ್ನು ನಾವು ಮರೆಯದಿರುವಂತೆ ಯೇಸು ಪಸ್ಕದ ಬದಲಿಗೆ ಒಂದು ಹೊಸ ವಾರ್ಷಿಕಾಚರಣೆಯನ್ನು ಸ್ಥಾಪಿಸಿದನು. ಒಂದು ಹುಳಿಯಿಲ್ಲದ ರೊಟ್ಟಿಯನ್ನು ಮುರಿದು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರಲ್ಲಿ ಪ್ರತಿಯೊಬ್ಬನಿಗೆ ಹಂಚಿ ಅವನು ಹೇಳಿದ್ದು: “ಇದು ನಿಮಗೋಸ್ಕರ ಕೊಡಲ್ಪಡಲಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.” ಅದೇ ರೀತಿಯಾಗಿ ಕೆಂಪು ದ್ರಾಕ್ಷಾರಸ ತುಂಬಿದ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡಲಿರುವ ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಹೇಳಿದನು.—ಲೂಕ 22:19, 20.
3. (1) ಯೇಸುವಿನ ಮರಣಾನಂತರ ಯಾವ ದೊಡ್ಡ ಬದಲಾವಣೆ ಆಗಲಿತ್ತು? (2) ಯೇಸು ಮಾಡಿದ ಪ್ರಾರ್ಥನೆಯ ಕುರಿತಾಗಿ ನಾವು ಏನನ್ನು ಯೋಚಿಸಬೇಕು?
3 ದೇವರ ಮತ್ತು ಇಸ್ರಾಯೇಲ್ ಜನಾಂಗದ ಮಧ್ಯೆ ಮಾಡಲ್ಪಟ್ಟಿದ್ದ ಹಳೆಯ ಧರ್ಮಶಾಸ್ತ್ರದ ಒಡಂಬಡಿಕೆಗೆ ಅಂತ್ಯವು ಬೇಗನೆ ಬರಲಿತ್ತು. ಅದರ ಸ್ಥಾನದಲ್ಲಿ ಯೆಹೋವ ಮತ್ತು ಯೇಸುವಿನ ಅಭಿಷಿಕ್ತ ಹಿಂಬಾಲಕರ ಮಧ್ಯೆ ಮಾಡಲಾಗುವ ಒಂದು ಹೊಸ ಒಡಂಬಡಿಕೆ ಬರಲಿತ್ತು. ಈ ಹೊಸ ಆಧ್ಯಾತ್ಮಿಕ ಜನಾಂಗದ ಹಿತದ ಬಗ್ಗೆ ಯೇಸುವಿಗೆ ತುಂಬ ಚಿಂತೆಯಿತ್ತು. ಇಸ್ರಾಯೇಲ್ ಜನಾಂಗವಾದರೋ ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ವಿಭಜಿತವಾಗಿತ್ತು. ಅದು ಸರಿಯಾಗುವ ಸ್ಥಿತಿಯಲ್ಲೇ ಇರಲಿಲ್ಲ. ಹೀಗೆ ಆ ಜನಾಂಗ ದೇವರ ಪವಿತ್ರ ನಾಮಕ್ಕೆ ಮಹಾ ಕಳಂಕ ತಂದಿತ್ತು. (ಯೋಹಾ. 7:45-49; ಅ. ಕಾ. 23:6-9) ಆದರೆ ತನ್ನ ಹಿಂಬಾಲಕರು ಪೂರ್ಣ ಐಕ್ಯತೆಯಿಂದಿದ್ದು ಹೊಂದಾಣಿಕೆಯಿಂದ ಕೆಲಸಮಾಡಿ ದೇವರ ಹೆಸರಿಗೆ ಮಹಿಮೆ ತರಬೇಕೆಂದು ಯೇಸು ಬಯಸಿದನು. ಹಾಗಾದರೆ ಅದಕ್ಕಾಗಿ ಯೇಸು ಏನು ಮಾಡಿದನು? ಮನುಷ್ಯನಿಗೆ ಓದಲು ಅವಕಾಶವಿರುವ ಪ್ರಾರ್ಥನೆಗಳಲ್ಲೇ ಬಹು ಸುಂದರ ಪ್ರಾರ್ಥನೆಯನ್ನು ಅವನು ಆಗ ಮಾಡಿದನು. (ಯೋಹಾ. 17:1-26; ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ.) ನಾವೀಗ ಹೀಗೆ ಯೋಚಿಸಬಹುದು: “ದೇವರು ಯೇಸುವಿನ ಆ ಪ್ರಾರ್ಥನೆಗೆ ಉತ್ತರ ನೀಡಿದ್ದಾನೋ?” ಮಾತ್ರವಲ್ಲ ನಾವು ನಮ್ಮನ್ನೇ ಪರೀಕ್ಷಿಸುತ್ತಾ “ಆ ಪ್ರಾರ್ಥನೆಗೆ ಹೊಂದಿಕೆಯಲ್ಲಿ ನಾನು ನಡೆಯುತ್ತಿದ್ದೇನೋ” ಎಂದು ಕೇಳಿಕೊಳ್ಳಬೇಕು.
ಯೇಸು ಯಾವುದಕ್ಕೆ ಆದ್ಯತೆ ಕೊಟ್ಟನು?
4, 5. (1) ಯೇಸು ತನ್ನ ಪ್ರಾರ್ಥನೆಯ ಆರಂಭದಲ್ಲಿ ಹೇಳಿದ ವಿಷಯಗಳಿಂದ ನಾವೇನು ಕಲಿಯುತ್ತೇವೆ? (2) ಯೇಸು ತನ್ನ ಕುರಿತು ಮಾಡಿದ ಪ್ರಾರ್ಥನೆಗೆ ಯೆಹೋವನು ಹೇಗೆ ಉತ್ತರ ಕೊಟ್ಟನು?
4 ಯೇಸು ತನಗೆ ದೇವರಿಂದ ದೊರೆತ ಅಮೂಲ್ಯ ಜ್ಞಾನವನ್ನು ಶಿಷ್ಯರಿಗೆ ರಾತ್ರಿ ಬಹಳ ಹೊತ್ತಿನ ವರೆಗೆ ತಿಳಿಯಪಡಿಸುತ್ತಾನೆ. ಬಳಿಕ ಅವನು ಆಕಾಶದ ಕಡೆಗೆ ಕಣ್ಣೆತ್ತಿ ಹೀಗೆ ಪ್ರಾರ್ಥಿಸುತ್ತಾನೆ: “ತಂದೆಯೇ, ಗಳಿಗೆಯು ಬಂದಿದೆ; ನಿನ್ನ ಮಗನು ನಿನ್ನನ್ನು ಮಹಿಮೆಪಡಿಸಸಾಧ್ಯವಾಗುವಂತೆ ನಿನ್ನ ಮಗನನ್ನು ಮಹಿಮೆಪಡಿಸು. ನೀನು ಅವನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೂ ಅವನು ನಿತ್ಯಜೀವವನ್ನು ಕೊಡಲಾಗುವಂತೆ ಅವನಿಗೆ ಎಲ್ಲ ಜನರ ಮೇಲೆ ಅಧಿಕಾರವನ್ನು ಕೊಟ್ಟಿದ್ದೀ. . . . ನೀನು ನನಗೆ ಮಾಡಲು ಕೊಟ್ಟಿರುವ ಕೆಲಸವನ್ನು ಪೂರೈಸುವ ಮೂಲಕ ನಾನು ಈ ಭೂಮಿಯಲ್ಲಿ ನಿನ್ನನ್ನು ಮಹಿಮೆಪಡಿಸಿದ್ದೇನೆ. ಆದುದರಿಂದ ಈಗ ತಂದೆಯೇ, ಲೋಕವು ಉಂಟಾಗುವುದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದ ನನ್ನನ್ನು ನಿನ್ನ ಬಳಿಯಲ್ಲಿ ಮಹಿಮೆಪಡಿಸು.”—ಯೋಹಾ. 17:1-5.
5 ಯೇಸು ತನ್ನ ಪ್ರಾರ್ಥನೆಯಲ್ಲಿ ಯಾವುದಕ್ಕೆ ಆದ್ಯತೆ ಕೊಟ್ಟನೆಂದು ಗಮನಿಸಿ. ಅವನ ಮುಖ್ಯ ಚಿಂತೆ ಸ್ವರ್ಗದಲ್ಲಿರುವ ತನ್ನ ತಂದೆಯನ್ನು ಮಹಿಮೆಪಡಿಸುವುದಾಗಿತ್ತು. ಇದು ಅವನು ಮಾದರಿ ಪ್ರಾರ್ಥನೆಯಲ್ಲಿ ಮಾಡಿದ ಈ ಪ್ರಥಮ ಬಿನ್ನಹಕ್ಕೆ ಹೊಂದಿಕೆಯಲ್ಲಿದೆ: “ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” (ಲೂಕ 11:2) ಇದರ ನಂತರ ಯೇಸುವಿಗಿದ್ದ ಚಿಂತೆ ಶಿಷ್ಯರ ಅಗತ್ಯಗಳ ಬಗ್ಗೆ. ‘ಅವರೆಲ್ಲರಿಗೂ ನಿತ್ಯಜೀವವನ್ನು’ ಕೊಡಬೇಕೆನ್ನುವುದೇ ಅವನ ಬಯಕೆಯಾಗಿತ್ತು. ಅದರ ಬಳಿಕ ಯೇಸು ಈ ಒಂದು ವೈಯಕ್ತಿಕ ವಿನಂತಿ ಮಾಡುತ್ತಾನೆ: “ತಂದೆಯೇ, ಲೋಕವು ಉಂಟಾಗುವುದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದ ನನ್ನನ್ನು ನಿನ್ನ ಬಳಿಯಲ್ಲಿ ಮಹಿಮೆಪಡಿಸು.” ಯೆಹೋವನು ತನ್ನ ನಂಬಿಗಸ್ತ ಪುತ್ರನಿಗೆ ಅವನು ಕೇಳಿದ್ದಕ್ಕಿಂತ ಹೆಚ್ಚನ್ನು ಕೊಟ್ಟನು. ಏನನ್ನು ಕೊಟ್ಟನು? ಎಲ್ಲಾ ದೇವದೂತರ ಹೆಸರಿಗಿಂತ “ಹೆಚ್ಚು ಶ್ರೇಷ್ಠವಾದ ಹೆಸರನ್ನು” ಕೊಟ್ಟನು.—ಇಬ್ರಿ. 1:4.
‘ಒಬ್ಬನೇ ಸತ್ಯದೇವರನ್ನು ತಿಳಿದುಕೊಳ್ಳುವುದು’
6. (1) ನಿತ್ಯಜೀವ ಸಿಗಬೇಕಿದ್ದರೆ ಅಪೊಸ್ತಲರು ಏನು ಮಾಡಬೇಕಿತ್ತು? (2) ಅವರು ಅದನ್ನು ಮಾಡಿದರೆಂದು ನಮಗೆ ಹೇಗೆ ತಿಳಿಯುತ್ತದೆ?
6 ಪಾಪಿಗಳಾದ ನಾವು ಅಪಾತ್ರ ಕೊಡುಗೆಯಾದ ನಿತ್ಯಜೀವವನ್ನು ಪಡೆಯಲು ಅರ್ಹರಾಗಬೇಕಾದರೆ ಏನು ಮಾಡಬೇಕೆಂಬ ವಿಷಯದ ಕುರಿತು ಸಹ ಯೇಸು ಪ್ರಾರ್ಥಿಸುತ್ತಾನೆ. (ಯೋಹಾನ 17:3 ಓದಿ.) ನಾವು ದೇವರ ಮತ್ತು ಕ್ರಿಸ್ತನ ಕುರಿತು “ಜ್ಞಾನವನ್ನು ಪಡೆದುಕೊಳ್ಳುತ್ತಾ” ಇರಬೇಕೆಂದು ಅವನು ಹೇಳುತ್ತಾನೆ. ಇದನ್ನು ಮಾಡುವ ಒಂದು ವಿಧ, ಯೆಹೋವನ ಮತ್ತು ಆತನ ಪುತ್ರನ ವಿಷಯದಲ್ಲಿ ಹೆಚ್ಚು ಕಲಿತುಕೊಳ್ಳಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವುದಾಗಿದೆ. ದೇವರ ಜ್ಞಾನವನ್ನು ಪಡೆಯುವ ಇನ್ನೊಂದು ಪ್ರಮುಖ ವಿಧ, ಆತನ ಬಗ್ಗೆ ಕಲಿತದ್ದನ್ನು ನಾವು ಅನ್ವಯಿಸಿಕೊಳ್ಳುವುದು ಮತ್ತು ಅದರಿಂದ ಸಿಗುವ ಆನಂದವನ್ನು ಅನುಭವಿಸುವುದೇ ಆಗಿದೆ. ಯೇಸುವಿನ ನಂಬಿಗಸ್ತ ಅಪೊಸ್ತಲರ ಕುರಿತೇನು? ಯೇಸು ತನ್ನ ಪ್ರಾರ್ಥನೆಯಲ್ಲಿ ಮುಂದೆ ಹೇಳುತ್ತಾನೆ: “ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ ಮತ್ತು ಇವರು ಅವುಗಳನ್ನು ಅಂಗೀಕರಿಸಿ”ದ್ದಾರೆ. (ಯೋಹಾ. 17:8) ಆದರೆ ನಿತ್ಯಜೀವ ಪಡೆಯಬೇಕಾದರೆ ಅವರು ದೇವರ ಮಾತುಗಳ ಕುರಿತು ಧ್ಯಾನಿಸುತ್ತಾ ಇರಬೇಕಿತ್ತು. ಆ ಮಾತುಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳುತ್ತಾ ಇರಬೇಕಾಗಿತ್ತು. ಆ ನಂಬಿಗಸ್ತ ಅಪೊಸ್ತಲರು ತಮ್ಮ ಭೂಜೀವಿತದ ಕೊನೆಯ ತನಕ ಹೀಗೆ ಮಾಡಿದರಾ? ಹೌದು. ಇದು ನಮಗೆ ಹೇಗೆ ತಿಳಿಯುತ್ತದೆ? ಹೇಗೆಂದರೆ, ಅವರಲ್ಲಿ ಪ್ರತಿಯೊಬ್ಬರ ಹೆಸರು ಸ್ವರ್ಗೀಯ ಹೊಸ ಯೆರೂಸಲೇಮಿನ 12 ಅಸ್ತಿವಾರದ ಕಲ್ಲುಗಳ ಮೇಲೆ ಅಳಿಸಲಾಗದ ರೀತಿಯಲ್ಲಿ ಬರೆಯಲ್ಪಟ್ಟಿದೆ.—ಪ್ರಕ. 21:14.
7. (1) ದೇವರನ್ನು ‘ತಿಳಿಯುವುದು’ ಅಂದರೇನು? (2) ಅದೇಕೆ ಅಷ್ಟು ಪ್ರಾಮುಖ್ಯ?
7 “ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವು”ದು ಎಂಬುದರ ಮೂಲ ಪದಗಳನ್ನು “ತಿಳಿಯುತ್ತಾ ಇರಬೇಕು” ಇಲ್ಲವೆ “ತಿಳಿದುಕೊಳ್ಳುವುದನ್ನು ಮುಂದುವರಿಸಬೇಕು” ಎಂದೂ ಭಾಷಾಂತರಿಸಬಹುದೆಂದು ಗ್ರೀಕ್ ಭಾಷೆಯ ವಿದ್ವಾಂಸರು ಹೇಳುತ್ತಾರೆ. ರೆಫರೆನ್ಸ್ ಬೈಬಲ್ನಲ್ಲಿ ಯೋಹಾನ 17:3 ರ ಪಾದಟಿಪ್ಪಣಿಯಲ್ಲಿ “ನಿನ್ನನ್ನು ತಿಳಿದುಕೊಳ್ಳುವುದು” ಎಂದು ಕೊಡಲಾಗಿದೆ. ಹೀಗೆ, “ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವು”ದು ಮುಂದುವರಿಯುತ್ತಾ ಇರುವ ಕ್ರಿಯೆಯಾಗಿದೆ ಹಾಗೂ ಇದರ ಮೂಲಕ ನಮಗೆ ದೇವರನ್ನು ‘ತಿಳಿಯುವ’ ಸುಯೋಗ ಸಿಗುತ್ತದೆ. ಆದರೂ ವಿಶ್ವದ ಅತಿ ಶ್ರೇಷ್ಠ ವ್ಯಕ್ತಿಯನ್ನು ತಿಳಿದುಕೊಳ್ಳುವುದೆಂದರೆ, ಆತನ ಗುಣಗಳು ಮತ್ತು ಉದ್ದೇಶವನ್ನು ತಿಳಿದು ಮನಸ್ಸಿನಲ್ಲಿಟ್ಟುಕೊಳ್ಳುವುದು ಮಾತ್ರವಲ್ಲ, ಅದಕ್ಕಿಂತ ಹೆಚ್ಚನ್ನು ಮಾಡಬೇಕು. ಯೆಹೋವನೊಂದಿಗೆ ಮತ್ತು ಜೊತೆವಿಶ್ವಾಸಿಗಳೊಂದಿಗೆ ಪ್ರೀತಿಯ ನಿಕಟ ಬಂಧವನ್ನು ಬೆಸೆಯಬೇಕು. “ಪ್ರೀತಿಸದವನು ದೇವರನ್ನು ತಿಳಿದವನಲ್ಲ” ಎನ್ನುತ್ತದೆ ಬೈಬಲ್. (1 ಯೋಹಾ. 4:8) ದೇವರನ್ನು ತಿಳಿಯುವುದರಲ್ಲಿ ಆತನಿಗೆ ವಿಧೇಯತೆ ತೋರಿಸುವುದು ಸೇರಿದೆ. (1 ಯೋಹಾನ 2:3-5 ಓದಿ.) ಯೆಹೋವನನ್ನು ತಿಳಿದುಕೊಂಡಿರುವವರಲ್ಲಿ ನಾವು ಒಬ್ಬರಾಗಿರುವುದು ಎಷ್ಟು ದೊಡ್ಡ ಸುಯೋಗವಲ್ಲವೆ! ಆದರೆ ಇಸ್ಕರಿಯೋತ ಯೂದನ ಕುರಿತು ಯೋಚಿಸಿ. ಅವನು ಈ ಸುಯೋಗವನ್ನು ಕಳೆದುಕೊಂಡನು. ಹಾಗೆಯೇ ನಮ್ಮಿಂದಲೂ ಈ ಅಮೂಲ್ಯ ಸಂಬಂಧ ತಪ್ಪಿಹೋಗುವ ಸಾಧ್ಯತೆಯಿದೆ. ಆದುದರಿಂದ, ಅದನ್ನು ಉಳಿಸಿಕೊಳ್ಳಲು ಕಠಿಣ ಶ್ರಮಪಡೋಣ. ಹಾಗೆ ಮಾಡುವಲ್ಲಿ, ನಮಗೆ ನಿತ್ಯಜೀವದ ಅಪಾತ್ರ ಉಡುಗೊರೆ ದೊರಕುವುದು.—ಮತ್ತಾ. 24:13.
“ನಿನ್ನ ಸ್ವಂತ ಹೆಸರಿನ ನಿಮಿತ್ತ”
8, 9. (1) ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯಾವುದರ ಬಗ್ಗೆ ಹೆಚ್ಚು ಚಿಂತಿಸಿದನು? (2) ಯೇಸು ಯಾವ ಧಾರ್ಮಿಕ ಸಂಪ್ರದಾಯವನ್ನು ತಿರಸ್ಕರಿಸಿರಬೇಕು?
8 ಯೋಹಾನ 17ನೇ ಅಧ್ಯಾಯದಲ್ಲಿರುವ ಯೇಸುವಿನ ಪ್ರಾರ್ಥನೆಯನ್ನು ಓದಿದ ಬಳಿಕ ಅವನಿಗೆ ಅಲ್ಲಿದ್ದ ತನ್ನ ಅಪೊಸ್ತಲರ ಮೇಲೆ ಮಾತ್ರವಲ್ಲ, ಅವನ ಭಾವೀ ಶಿಷ್ಯರ ಮೇಲೆಯೂ ಆಳವಾದ ಪ್ರೀತಿಯಿತ್ತೆಂದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. (ಯೋಹಾ. 17:20) ಆದರೂ ನಮ್ಮ ರಕ್ಷಣೆಯೇ ಯೇಸುವಿನ ಪ್ರಧಾನ ಚಿಂತೆಯಾಗಿರಲಿಲ್ಲ. ತನ್ನ ಭೂಶುಶ್ರೂಷೆಯ ಆರಂಭದಿಂದ ಅಂತ್ಯದ ವರೆಗೆ ಅವನ ಪ್ರಧಾನ ಉದ್ದೇಶ ತಂದೆಯ ಹೆಸರನ್ನು ಪವಿತ್ರಗೊಳಿಸುವುದು ಹಾಗೂ ಮಹಿಮೆಪಡಿಸುವುದಾಗಿತ್ತು. ಉದಾಹರಣೆಗೆ ತನಗೆ ನೇಮಕವಾಗಿರುವ ಕೆಲಸದ ಕುರಿತು ನಜರೇತಿನ ಸಭಾಮಂದಿರದಲ್ಲಿ ಪ್ರಕಟಿಸುವಾಗ ಅವನು ಯೆಶಾಯನ ಗ್ರಂಥದ ಸುರುಳಿಯಿಂದ ಹೀಗೆ ಓದಿ ಹೇಳಿದನು: “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು.” ಇದನ್ನು ಓದಿ ಹೇಳುವಾಗ, ಯೇಸು ದೇವರ ಹೆಸರನ್ನು ಸ್ಪಷ್ಟವಾಗಿ ಉಚ್ಛರಿಸಿದನು ಎಂಬುದರಲ್ಲಿ ಸಂದೇಹವೇ ಇಲ್ಲ.—ಲೂಕ 4:16-21.
9 ಯೇಸು ಭೂಮಿಗೆ ಬರುವುದಕ್ಕಿಂತ ಎಷ್ಟೋ ಮೊದಲು ಧಾರ್ಮಿಕ ಮುಖಂಡರು ಯೆಹೂದಿ ಸಂಪ್ರದಾಯಕ್ಕನುಸಾರ, ದೇವರ ಹೆಸರನ್ನು ಬಳಸಬಾರದೆಂದು ಜನರಿಗೆ ಬೋಧಿಸಿದರು. ಅಂಥ ಅಶಾಸ್ತ್ರೀಯ ಸಂಪ್ರದಾಯವನ್ನು ಯೇಸು ದೃಢವಾಗಿ ತಿರಸ್ಕರಿಸಿದನು ಎಂಬುದರಲ್ಲಿ ಸಂಶಯವಿಲ್ಲ. ಅವನು ತನ್ನ ವಿರೋಧಿಗಳಿಗೆ ಹೀಗಂದನು: “ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ಆದರೆ ನೀವು ನನ್ನನ್ನು ಸ್ವೀಕರಿಸುತ್ತಿಲ್ಲ; ಬೇರೆ ಯಾವನಾದರೂ ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಸ್ವೀಕರಿಸುವಿರಿ.” (ಯೋಹಾ. 5:43) ಬಳಿಕ ತಾನು ಸಾಯುವುದಕ್ಕೆ ಕೆಲವೇ ದಿನಗಳ ಹಿಂದೆ ಯೇಸು, “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸು” ಎಂದು ಪ್ರಾರ್ಥಿಸಿದಾಗಲೂ ತನ್ನ ಜೀವನದ ಮುಖ್ಯ ಉದ್ದೇಶವನ್ನು ವ್ಯಕ್ತಪಡಿಸಿದನು. (ಯೋಹಾ. 12:28) ಆದ್ದರಿಂದಲೇ, ನಾವು ಈಗ ಪರೀಕ್ಷಿಸುತ್ತಿರುವ ಪ್ರಾರ್ಥನೆಯ ಆರಂಭದಿಂದ ಕೊನೆಯವರೆಗೆ ಅವನಿಗೆ ತನ್ನ ತಂದೆಯ ನಾಮದ ಕುರಿತಾಗಿ ಇದ್ದ ಚಿಂತೆಯ ಕುರಿತು ಹೇಳಿರುವುದನ್ನು ನಾವು ಕಾಣಬಹುದು.
10, 11. (1) ಯೇಸು ತನ್ನ ತಂದೆಯ ಹೆಸರನ್ನು ತಿಳಿಯಪಡಿಸಿದ್ದು ಹೇಗೆ? (2) ಯೇಸುವಿನ ಶಿಷ್ಯರ ಗುರಿಯೇನಾಗಿರಬೇಕು?
10 ಯೇಸು ಪ್ರಾರ್ಥಿಸಿದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು; ನೀನು ಇವರನ್ನು ನನಗೆ ಕೊಟ್ಟಿ; ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ. ಇದಲ್ಲದೆ ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಆದರೆ ಇವರು ಲೋಕದಲ್ಲಿ ಇರುತ್ತಾರೆ; ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಪವಿತ್ರನಾದ ತಂದೆಯೇ, ನೀನು ನನಗೆ ಕೊಟ್ಟಿರುವ ನಿನ್ನ ಸ್ವಂತ ಹೆಸರಿನ ನಿಮಿತ್ತವಾಗಿ ಇವರನ್ನು ಕಾಯಿ; ಹೀಗೆ ನಾವು ಒಂದಾಗಿರುವ ಪ್ರಕಾರ ಇವರೂ ಒಂದಾಗಿರುವಂತಾಗುವುದು.”—ಯೋಹಾ. 17:6, 11.
11 ತಂದೆಯ ಹೆಸರನ್ನು ತನ್ನ ಶಿಷ್ಯರಿಗೆ ಪ್ರಕಟಪಡಿಸುವುದೆಂದರೆ, ಅದನ್ನು ಕೇವಲ ಬಾಯಿಮಾತಿನಲ್ಲಿ ಉಚ್ಛರಿಸುವುದಷ್ಟೇ ಆಗಿರಲಿಲ್ಲ. ದೇವರ ಹೆಸರು ಏನನ್ನು ಪ್ರತಿನಿಧಿಸುತ್ತದೆಂದು ಅವನು ಅವರಿಗೆ ತಿಳಿಸಿದನು. ಅಂದರೆ ದೇವರ ಸೊಗಸಾದ ಗುಣಗಳು ಮತ್ತು ಆತನು ನಮ್ಮೊಂದಿಗೆ ವ್ಯವಹರಿಸುವ ವಿಧವನ್ನು ಅವರು ತಿಳಿಯುವಂತೆ ಸಹ ಸಹಾಯ ಮಾಡಿದನು. (ವಿಮೋ. 34:5-7) ಅಲ್ಲದೆ, ಈಗಲೂ ಸ್ವರ್ಗದಲ್ಲಿ ಮಹಿಮಾಭರಿತ ಸ್ಥಾನದಲ್ಲಿರುವ ಯೇಸು, ತನ್ನ ಶಿಷ್ಯರು ಭೂವ್ಯಾಪಕವಾಗಿ ಯೆಹೋವನ ಹೆಸರನ್ನು ಪ್ರಸಿದ್ಧಿಪಡಿಸುವಂತೆ ಸಹಾಯಮಾಡುತ್ತಿದ್ದಾನೆ. ಯಾವ ಗುರಿಯಿಂದ ಇದನ್ನು ಮಾಡಲಾಗುತ್ತಿದೆ? ಈ ದುಷ್ಟ ಲೋಕಕ್ಕೆ ಅಂತ್ಯ ಬರುವ ಮೊದಲು ಹೆಚ್ಚು ಮಂದಿ ಶಿಷ್ಯರು ಒಟ್ಟುಗೂಡಿಸಲ್ಪಡಬೇಕೆಂದೇ. ಅನಂತರ ಯೆಹೋವನು, ತನ್ನ ನಿಷ್ಠೆಯ ಸಾಕ್ಷಿಗಳನ್ನು ರಕ್ಷಿಸಲು ಕ್ರಿಯೆಗೈಯುವಾಗ ಎಂಥ ಮಹಿಮಾನ್ವಿತ ಹೆಸರನ್ನು ಮಾಡಿಕೊಳ್ಳಲಿದ್ದಾನೆ ಎಂದು ಊಹಿಸಿ!—ಯೆಹೆ. 36:23.
“ಲೋಕವು ನಂಬುವುದಕ್ಕಾಗಿ”
12. ಜೀವರಕ್ಷಕ ಕೆಲಸವನ್ನು ಯಶಸ್ವಿಯಾಗಿ ಮಾಡಲು ಯಾವ ಮೂರು ವಿಷಯಗಳನ್ನು ನಾವು ಮಾಡಬೇಕು?
12 ಶಿಷ್ಯರು ತಮ್ಮ ಬಲಹೀನತೆಗಳನ್ನು ಜಯಿಸುವಂತೆ ಸಹಾಯಮಾಡಲು ಯೇಸು ಭೂಮಿಯಲ್ಲಿದ್ದಾಗ ತುಂಬ ಶ್ರಮಿಸಿದನು. ಯೇಸು ಆರಂಭಿಸಿದ ಕೆಲಸವನ್ನು ಮಾಡಿ ಮುಗಿಸಬೇಕಾದರೆ ಅವರು ಈ ಬಲಹೀನತೆಗಳನ್ನು ಜಯಿಸುವುದು ಅವಶ್ಯವಾಗಿತ್ತು. “ನೀನು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದೆನು” ಎಂದು ಯೇಸು ಪ್ರಾರ್ಥಿಸುತ್ತಾನೆ. ಅವರು ಈ ಜೀವರಕ್ಷಕ ಕೆಲಸವನ್ನು ಮಾಡಿಮುಗಿಸಬೇಕಾದರೆ ಮಾಡಬೇಕಾದ ಮೂರು ಮುಖ್ಯ ವಿಷಯಗಳನ್ನು ಯೇಸು ಹೇಳಿದನು. ಒಂದನೆಯದಾಗಿ, ಅವರು ಸೈತಾನನ ಈ ಅಪವಿತ್ರ ಲೋಕದ ಭಾಗವಾಗಿರದಂತೆ ಪ್ರಾರ್ಥಿಸುತ್ತಾನೆ. ಎರಡನೆಯದಾಗಿ, ಅವರು ದೇವರ ವಾಕ್ಯದ ಸತ್ಯವನ್ನು ಅನ್ವಯಿಸಿಕೊಳ್ಳುವ ಮೂಲಕ ಪವಿತ್ರರಾಗಿ ಉಳಿಯುವಂತೆ ಪ್ರಾರ್ಥಿಸುತ್ತಾನೆ. ಮೂರನೆಯದಾಗಿ, ತನ್ನ ಮತ್ತು ತನ್ನ ತಂದೆಯ ಮಧ್ಯೆ ಇರುವ ಅದೇ ಪ್ರೀತಿಯ ಬಂಧ ತನ್ನ ಶಿಷ್ಯರಲ್ಲೂ ಇದ್ದು ಅವರು ಐಕ್ಯರಾಗಿರುವಂತೆ ಯೇಸು ಪದೇಪದೇ ಯಾಚಿಸುತ್ತಾನೆ. ಇದು ಸ್ವಪರೀಕ್ಷೆಯನ್ನು ಕೇಳಿಕೊಳ್ಳುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಬೇಕು. ‘ನಾನು ಯೇಸುವಿನ ಮೂರು ಬಿನ್ನಹಗಳಿಗೆ ಹೊಂದಿಕೆಯಾಗಿ ವರ್ತಿಸುತ್ತಿದ್ದೇನಾ?’ ಈ ವಿಷಯಗಳಿಗೆ ತನ್ನ ಶಿಷ್ಯರು ಗಮನಕೊಡುವಲ್ಲಿ ‘ದೇವರೇ ಯೇಸುವನ್ನು ಕಳುಹಿಸಿ ಕೊಟ್ಟದ್ದು ಎಂದು ಲೋಕವು” ನಂಬಬಹುದೆಂಬ ನಿರೀಕ್ಷೆ ಯೇಸುವಿಗಿತ್ತು.—ಯೋಹಾನ 17:15-21 ಓದಿ.
13. ಯೇಸುವಿನ ಪ್ರಾರ್ಥನೆಗೆ ಒಂದನೆಯ ಶತಮಾನದಲ್ಲಿ ಹೇಗೆ ಉತ್ತರ ಸಿಕ್ಕಿತು?
13 ಯೇಸುವಿನ ಪ್ರಾರ್ಥನೆಗೆ ಉತ್ತರ ದೊರೆಯಿತೆಂಬುದನ್ನು ಅಪೊಸ್ತಲರ ಕಾರ್ಯಗಳು ಪುಸ್ತಕವನ್ನು ಅಧ್ಯಯನ ಮಾಡುವುದರಿಂದ ತಿಳಿದುಬರುತ್ತದೆ. ಆರಂಭದ ಕ್ರೈಸ್ತರಲ್ಲಿ ವಿಭಜನೆಯಾಗುವ ಸಾಧ್ಯತೆಗಳು ಹೆಚ್ಚಿದ್ದವು. ಏಕೆಂದರೆ ಅವರಲ್ಲಿ ಯೆಹೂದ್ಯರು, ಅನ್ಯರು, ಧನಿಕರು, ಬಡವರು, ಗುಲಾಮರು ಮತ್ತು ಧನಿಗಳು ಇದ್ದರು. ಆದರೂ ಇವರೆಲ್ಲರ ಮಧ್ಯೆ ಎಷ್ಟು ಒತ್ತಾದ ಐಕ್ಯತೆ ಬೆಸೆಯಿತೆಂದರೆ, ವಿವಿಧ ಅಂಗಗಳಿರುವ ಮಾನವ ಶರೀರಕ್ಕೆ ಅವರನ್ನು ಹೋಲಿಸಸಾಧ್ಯವಿತ್ತು. ಯೇಸು ಶಿರಸ್ಸಾಗಿದ್ದನು. (ಎಫೆ. 4:15, 16) ಸೈತಾನನ ವಿಭಜಿತ ಲೋಕದಲ್ಲಿ ಇದು ಎಷ್ಟು ಅದ್ಭುತ ಸಾಧನೆಯಾಗಿತ್ತು! ಇದಕ್ಕೆ ಸಕಲ ಕೀರ್ತಿ ಯೆಹೋವನಿಗೆ ಸಲ್ಲಬೇಕು! ಏಕೆಂದರೆ, ಆತನೇ ತನ್ನ ಬಲಾಢ್ಯ ಪವಿತ್ರಾತ್ಮಶಕ್ತಿಯ ಮೂಲಕ ಇದನ್ನು ಸಾಧ್ಯಮಾಡಿದನು.—1 ಕೊರಿಂ. 3:5-7.
14. ಯೇಸುವಿನ ಪ್ರಾರ್ಥನೆಗೆ ಆಧುನಿಕ ದಿನಗಳಲ್ಲಿ ಹೇಗೆ ಉತ್ತರ ಸಿಕ್ಕಿದೆ?
14 ಆದರೆ ದುಃಖಕರವಾಗಿ ಈ ಐಕ್ಯ ಅಪೊಸ್ತಲರ ಮರಣದ ನಂತರ ಉಳಿಯಲಿಲ್ಲ. ಮುಂತಿಳಿಸಲಾದಂತೆ, ಒಂದು ಧರ್ಮಭ್ರಷ್ಟತೆ ತಲೆದೋರಿತು. ಇದರ ಪರಿಣಾಮವಾಗಿ ಕ್ರೈಸ್ತ ಪ್ರಪಂಚದ ವಿಭಜಿತ ಪಂಥಗಳು ಎದ್ದು ಬಂದವು. (ಅ. ಕಾ. 20:29, 30) ಆದರೆ 1919ರಲ್ಲಿ, ಯೇಸು ತನ್ನ ಅಭಿಷಿಕ್ತ ಹಿಂಬಾಲಕರನ್ನು ಸುಳ್ಳುಧರ್ಮದ ಬಂಧನದಿಂದ ಬಿಡಿಸಿ “ಐಕ್ಯದ ಪರಿಪೂರ್ಣ ಬಂಧ”ದಲ್ಲಿ ಒಟ್ಟುಗೂಡಿಸಿದನು. (ಕೊಲೊ. 3:14) ಅವರ ಸಾರುವ ಕೆಲಸ ಉಳಿದ ಜನರ ಮೇಲೆ ಯಾವ ಪರಿಣಾಮ ಬೀರಿದೆ? “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಎಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು “ಬೇರೆಕುರಿ” ಸಂಗಡಿಗರು ದೇವರ ಅಭಿಷಿಕ್ತರ ಐಕ್ಯ ಮಂದೆಯೊಳಗೆ ತರಲ್ಪಟ್ಟಿದ್ದಾರೆ. (ಯೋಹಾ. 10:16; ಪ್ರಕ. 7:9) “[ಯೆಹೋವನಾದ] ನೀನು ನನ್ನನ್ನು ಕಳುಹಿಸಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸುವಂತೆಯೇ ಇವರನ್ನೂ ಪ್ರೀತಿಸುತ್ತೀ ಎಂದೂ ಲೋಕವು ತಿಳಿದುಕೊ”ಳ್ಳಲಿ ಎಂಬ ಯೇಸುವಿನ ಪ್ರಾರ್ಥನೆಗೆ ಎಂಥ ಮಹತ್ತಾದ ಉತ್ತರ!—ಯೋಹಾ. 17:23.
ಮನಸ್ಪರ್ಶಿಸುವ ಸಮಾಪ್ತಿ
15. ತನ್ನ ಅಭಿಷಿಕ್ತ ಹಿಂಬಾಲಕರಿಗಾಗಿ ಯೇಸು ಯಾವ ವಿಶೇಷ ಬಿನ್ನಹ ಮಾಡಿದನು?
15 ನೈಸಾನ್ 14ರ ಸಂಜೆಯಂದು ಈ ಪ್ರಾರ್ಥನೆ ಮಾಡುವ ಮೊದಲು ಯೇಸು ತನ್ನ ಅಪೊಸ್ತಲರೊಂದಿಗೆ ಒಂದು ಒಡಂಬಡಿಕೆ ಮಾಡುವ ಮೂಲಕ ಅವರಿಗೆ ಮಹಿಮೆ ಅಥವಾ ಗೌರವವನ್ನು ಕೊಟ್ಟನು. ಅವರು ತನ್ನ ರಾಜ್ಯದಲ್ಲಿ ತನ್ನೊಂದಿಗೆ ಆಳುವರೆಂದು ಮಾತುಕೊಟ್ಟನು. (ಲೂಕ 22:28-30; ಯೋಹಾ. 17:22) ಆದ್ದರಿಂದ, ತನ್ನ ಶಿಷ್ಯರಾಗಲಿರುವ ಎಲ್ಲ ಅಭಿಷಿಕ್ತರ ಪರವಾಗಿ ಯೇಸು ಹೀಗೆ ಪ್ರಾರ್ಥಿಸಿದನು: “ತಂದೆಯೇ, ನೀನು ನನಗೆ ಯಾರನ್ನು ಕೊಟ್ಟಿದ್ದೀಯೋ ಅವರು ನಾನಿರುವಲ್ಲಿಯೇ ನನ್ನೊಂದಿಗೆ ಇದ್ದುಕೊಂಡು, ಲೋಕಾದಿಗಿಂತ ಮುಂಚೆ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ನನ್ನ ಮಹಿಮೆಯನ್ನು ಇವರು ನೋಡುವಂತೆ ಬಯಸುತ್ತೇನೆ.” (ಯೋಹಾ. 17:24) ಅಭಿಷಿಕ್ತರಿಗೆ ಸಿಗುವ ಈ ಬಹುಮಾನಕ್ಕಾಗಿ ಬೇರೆ ಕುರಿಗಳು ಅಸೂಯೆ ಪಡುವುದಿಲ್ಲ, ಬದಲಿಗೆ ಉಲ್ಲಾಸಿಸುತ್ತಾರೆ. ಇದು ಸಹ ಭೂಮಿಯಲ್ಲಿರುವ ಎಲ್ಲ ನಿಜ ಕ್ರೈಸ್ತರ ಮಧ್ಯೆಯಿರುವ ಏಕತೆಗೆ ಪುರಾವೆಯಾಗಿದೆ.
16, 17. (1) ತಾನು ಏನು ಮಾಡುತ್ತಾ ಇರುವೆನೆಂದು ಯೇಸು ತನ್ನ ಪ್ರಾರ್ಥನೆಯ ಕೊನೆಯಲ್ಲಿ ಹೇಳಿದನು? (2) ನಾವೇನು ಮಾಡಲು ದೃಢಮನಸ್ಸು ಮಾಡಿರಬೇಕು?
16 ಇಂದು ಯೆಹೋವನ ಜನರು ಭೂಮಿಯಲ್ಲಿದ್ದಾರೆ ಮತ್ತು ಅವರು ಆತನನ್ನು ನಿಜವಾಗಿ ಪ್ರೀತಿಸುತ್ತಾರೆ ಎಂಬುದರ ಸ್ಪಷ್ಟ ರುಜುವಾತು ಕಣ್ಣ ಮುಂದೆ ಇದ್ದರೂ ಹೆಚ್ಚಿನ ಜನರು ಧಾರ್ಮಿಕ ಮುಖಂಡರ ಪ್ರಭಾವಕ್ಕೊಳಗಾಗಿ ಇದನ್ನು ಮನಸ್ಸಿಗೆ ತಕ್ಕೊಳ್ಳುವುದೇ ಇಲ್ಲ. ಯೇಸುವಿನ ಸಮಯದಲ್ಲೂ ಹೀಗೆಯೇ ಆಯಿತು. ಆದ್ದರಿಂದಲೇ ಆತನು ಈ ಮನಸ್ಪರ್ಶಿ ಮಾತುಗಳನ್ನು ಹೇಳಿದನು: “ನೀತಿವಂತನಾದ ತಂದೆಯೇ, ಲೋಕವು ನಿನ್ನನ್ನು ತಿಳಿದುಕೊಂಡಿರುವುದಿಲ್ಲ; ಆದರೆ ನಾನು ನಿನ್ನನ್ನು ತಿಳಿದುಕೊಂಡಿದ್ದೇನೆ ಮತ್ತು ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂಬುದನ್ನು ಇವರು ತಿಳಿದುಕೊಂಡಿದ್ದಾರೆ. ನೀನು ನನಗೆ ತೋರಿಸಿದ ಪ್ರೀತಿಯು ಇವರಲ್ಲಿ ಇರಬೇಕೆಂದೂ ನಾನು ಇವರಲ್ಲಿ ಐಕ್ಯವಾಗಿರಬೇಕೆಂದೂ ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು.”—ಯೋಹಾ. 17:25, 26.
17 ಯೇಸು ತನ್ನ ಪ್ರಾರ್ಥನೆಗೆ ಅನುಸಾರವಾಗಿ ಕಾರ್ಯನಡಿಸಿದನು ಎಂಬುದನ್ನು ಯಾರು ಅಲ್ಲಗಳೆಯಸಾಧ್ಯ? ಸಭೆಯ ಶಿರಸ್ಸಾದ ಆತನು ತನ್ನ ತಂದೆಯ ನಾಮ ಮತ್ತು ಉದ್ದೇಶವನ್ನು ನಾವು ಪ್ರಸಿದ್ಧಿಪಡಿಸುವಂತೆ ನಮಗೆ ಸಹಾಯಮಾಡುತ್ತಾ ಇದ್ದಾನೆ. ನಾವು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಅವನ ಆಜ್ಞೆಯನ್ನು ಹುರುಪಿನಿಂದ ಪಾಲಿಸುವ ಮೂಲಕ ಅವನ ಶಿರಸ್ಸುತನಕ್ಕೆ ಅಧೀನತೆ ತೋರಿಸುತ್ತಿರೋಣ. (ಮತ್ತಾ. 28:19, 20; ಅ. ಕಾ. 10:42) ನಮ್ಮ ಅಮೂಲ್ಯ ಐಕ್ಯವನ್ನು ಉಳಿಸಿಕೊಳ್ಳಲು ಶ್ರಮಿಸೋಣ. ಹೀಗೆ ಮಾಡುವ ಮೂಲಕ ನಾವು ಯೇಸುವಿನ ಪ್ರಾರ್ಥನೆಗೆ ಅನುಸಾರವಾಗಿ ನಡೆಯುತ್ತಿರುವೆವು. ಇದು ಯೆಹೋವನ ನಾಮಕ್ಕೆ ಮಹಿಮೆಯನ್ನು ತರುವುದು. ನಮಗೆ ಅನಂತ ಸಂತೋಷವನ್ನು ಕೊಡುವುದು.