ಯೆಹೋವನ ಉದ್ದೇಶ ಖಂಡಿತ ನೆರವೇರುತ್ತದೆ!
“ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.”—ಯೆಶಾ. 46:11.
1, 2. (ಎ) ಯೆಹೋವನು ನಮಗೆ ಏನು ತಿಳಿಸಿದ್ದಾನೆ? (ಬಿ) ಯೆಶಾಯ 46:10, 11 ಮತ್ತು 55:11ರಲ್ಲಿ ಯೆಹೋವನು ಯಾವ ಆಶ್ವಾಸನೆ ಕೊಟ್ಟಿದ್ದಾನೆ?
“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” ಇದು ಬೈಬಲಿನ ಮೊದಲ ವಾಕ್ಯ. ಇದು ತುಂಬ ಸರಳವಾದರೂ ಮಹತ್ವಪೂರ್ಣವಾದ ವಾಕ್ಯ. (ಆದಿ. 1:1) ಇಡೀ ವಿಶ್ವದಲ್ಲಿ ದೇವರು ಸೃಷ್ಟಿಮಾಡಿರುವ ಎಷ್ಟೋ ವಿಷಯಗಳಲ್ಲಿ ನಾವು ಕೆಲವೊಂದನ್ನೇ ನೋಡಿದ್ದೇವೆ. ಬಾಹ್ಯಾಕಾಶ, ಬೆಳಕು, ಗುರುತ್ವಾಕರ್ಷಣೆಯ ಬಗ್ಗೆ ನಮಗೆ ಗೊತ್ತಿರುವುದು ಬರೀ ಸ್ವಲ್ಪ ಅಷ್ಟೇ. (ಪ್ರಸಂ. 3:11) ಆದರೆ ಈ ಭೂಮಿಗಾಗಿ ಮತ್ತು ಮಾನವರಿಗಾಗಿ ಯೆಹೋವನು ಯಾವ ಉದ್ದೇಶ ಇಟ್ಟಿದ್ದಾನೆಂದು ನಮಗೆ ಚೆನ್ನಾಗಿ ತಿಳಿದಿದೆ. ಯಾಕೆಂದರೆ ಆತನೇ ನಮಗೆ ಅದನ್ನು ತಿಳಿಸಿದ್ದಾನೆ. ತನ್ನ ಸ್ವರೂಪದಲ್ಲಿ ಸೃಷ್ಟಿಯಾದ ಮಾನವರು ಈ ಭೂಮಿಯ ಮೇಲೆ ಸಂತೋಷದಿಂದ ಬದುಕಬೇಕೆಂಬುದು ಯೆಹೋವ ದೇವರ ಉದ್ದೇಶವಾಗಿತ್ತು. (ಆದಿ. 1:26) ಮಾನವರು ಆತನ ಮಕ್ಕಳಾಗಿ, ಆತನು ಅವರ ತಂದೆಯಾಗಿ ಇರಬೇಕೆಂದು ಬಯಸಿದನು.
2 ಯೆಹೋವನ ಉದ್ದೇಶವನ್ನು ತಡೆಯಲು ನಡೆದ ಒಂದು ಪ್ರಯತ್ನದ ಬಗ್ಗೆ ಆದಿಕಾಂಡ 3ನೇ ಅಧ್ಯಾಯ ತಿಳಿಸುತ್ತದೆ. (ಆದಿ. 3:1-7) ಆದರೆ ಯಾವುದೇ ಸಮಸ್ಯೆಯನ್ನು ತೆಗೆದುಹಾಕುವುದು ಯೆಹೋವನಿಗೆ ಕಷ್ಟವಲ್ಲ. ಯಾರೂ ಆತನ ದಾರಿಗೆ ಅಡ್ಡಬರಲು ಸಾಧ್ಯವಿಲ್ಲ. (ಯೆಶಾ. 46:10, 11; 55:11) ಹಾಗಾಗಿ ಯೆಹೋವನು ಆರಂಭದಲ್ಲಿ ಏನು ಉದ್ದೇಶಿಸಿದನೋ ಅದನ್ನು ಸರಿಯಾದ ಸಮಯಕ್ಕೆ ಖಂಡಿತ ನೆರವೇರಿಸುವನು. ನಮಗೆ ಇದರ ಬಗ್ಗೆ ಯಾವುದೇ ಸಂದೇಹ ಬೇಡ!
3. (ಎ) ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಯಾವ ಪ್ರಮುಖ ಬೋಧನೆಗಳು ಸಹಾಯ ಮಾಡುತ್ತವೆ? (ಬಿ) ಈ ಬೋಧನೆಗಳ ಬಗ್ಗೆ ನಾವೀಗ ಯಾಕೆ ಮಾತಾಡುತ್ತಿದ್ದೇವೆ? (ಸಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
3 ಭೂಮಿಗಾಗಿ, ಮಾನವರಿಗಾಗಿ ದೇವರು ಯಾವ ಉದ್ದೇಶ ಇಟ್ಟಿದ್ದಾನೆ ಮತ್ತು ಈ ಉದ್ದೇಶವನ್ನು ನೆರವೇರಿಸುವುದರಲ್ಲಿ ಯೇಸುವಿನ ಪಾತ್ರ ಏನೆಂದು ನಮಗೆ ಗೊತ್ತು. ಇವು ತುಂಬ ಪ್ರಾಮುಖ್ಯವಾದ ಬೈಬಲ್ ಬೋಧನೆಗಳು. ನಾವು ದೇವರ ವಾಕ್ಯವನ್ನು ಅಧ್ಯಯನ ಮಾಡಲು ಆರಂಭಿಸಿದ ಸಮಯದಲ್ಲೇ ಇದರ ಕುರಿತು ತಿಳಿದುಕೊಂಡಿರಬಹುದು. ಈ ವಿಷಯಗಳನ್ನು ನಾವು ಬೇರೆಯವರಿಗೂ ಕಲಿಸಬೇಕು. ಇದನ್ನು ಮಾಡಲು ಒಂದು ವಿಶೇಷ ಅವಕಾಶ ನಮಗೆ ಕ್ರಿಸ್ತನ ಮರಣದ ಸ್ಮರಣೆಯ ಸಮಯದಲ್ಲಿ ಸಿಕ್ಕಿದೆ. (ಲೂಕ 22:19, 20) ಜನರು ಈ ವಿಶೇಷ ಸಮಾರಂಭಕ್ಕೆ ಬಂದರೆ ದೇವರ ಅದ್ಭುತ ಉದ್ದೇಶದ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳುತ್ತಾರೆ. ಜನರನ್ನು ಆಮಂತ್ರಿಸುವಾಗ ಯಾವ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳೋಣ ಎಂದು ಯೋಚಿಸುವುದು ಒಳ್ಳೇದು. ಈ ಲೇಖನದಲ್ಲಿ ನಾವು ಮೂರು ಪ್ರಶ್ನೆಗಳನ್ನು ನೋಡೋಣ: ಭೂಮಿ ಮತ್ತು ಮಾನವರ ಬಗ್ಗೆ ದೇವರಿಗೆ ಯಾವ ಉದ್ದೇಶ ಇದೆ? ಆ ಉದ್ದೇಶ ಇಂದಿನ ತನಕ ನೆರವೇರಿಲ್ಲ ಯಾಕೆ? ಯೇಸು ತನ್ನ ಜೀವವನ್ನು ಕೊಟ್ಟದ್ದರಿಂದ ದೇವರ ಉದ್ದೇಶ ನೆರವೇರಲು ಹೇಗೆ ಸಾಧ್ಯವಾಗುತ್ತದೆ?
ಸೃಷ್ಟಿಕರ್ತನ ಉದ್ದೇಶ ಏನಿತ್ತು?
4. ಸೃಷ್ಟಿಯು ಹೇಗೆ ದೇವರ ಮಹಿಮೆಯನ್ನು ಸಾರಿಹೇಳುತ್ತದೆ?
4 ಯೆಹೋವನು ಎಷ್ಟು ಮಹಾನ್ ಸೃಷ್ಟಿಕರ್ತನೆಂದರೆ ಆತನು ಸೃಷ್ಟಿಮಾಡಿದ್ದೆಲ್ಲವೂ ನಮ್ಮನ್ನು ಮೂಕವಿಸ್ಮಿತರಾಗಿ ಮಾಡುತ್ತದೆ. ಎಲ್ಲವೂ ಅತ್ಯುತ್ತಮ ಗುಣಮಟ್ಟದ್ದಾಗಿದೆ. (ಆದಿ. 1:31; ಯೆರೆ. 10:12) ಎಲ್ಲವನ್ನೂ ಸುಂದರವಾಗಿ ಸುವ್ಯವಸ್ಥಿತವಾಗಿ ಉಂಟುಮಾಡಿದ್ದಾನೆ. ಇದೆಲ್ಲಾ ನಮ್ಮ ಪ್ರಯೋಜನಕ್ಕಾಗಿದೆ. ಮಾನವ ದೇಹದ ಜೀವಕೋಶದಲ್ಲಿರುವ ಜಟಿಲತೆಯನ್ನು ನೋಡುವಾಗ, ಈಗಷ್ಟೇ ಹುಟ್ಟಿದ ಮಗುವನ್ನು ನೋಡುವಾಗ, ನಯನಮನೋಹರವಾದ ಸೂರ್ಯಾಸ್ತಮಾನವನ್ನು ನೋಡುವಾಗ ನಿಮಗೆ ಹೇಗನಿಸುತ್ತದೆ? ಮೈಮರೆತು ಹೋಗುತ್ತೇವಲ್ಲಾ? ಏಕೆಂದರೆ ಸೌಂದರ್ಯವನ್ನು ನೋಡಿ ಆನಂದಿಸುವ ಸಾಮರ್ಥ್ಯವನ್ನು ಯೆಹೋವನು ನಮ್ಮಲ್ಲಿ ಇಟ್ಟಿದ್ದಾನೆ.—ಕೀರ್ತನೆ 19:1; 104:24 ಓದಿ.
5. ಸೃಷ್ಟಿಯಲ್ಲಿ ಎಲ್ಲವೂ ಚೆನ್ನಾಗಿ ನಡೆಯಲು ದೇವರು ಏನು ಮಾಡಿದ್ದಾನೆ?
5 ಯೆಹೋವನು ತನ್ನೆಲ್ಲಾ ಸೃಷ್ಟಿಗೆ ಮೇರೆಗಳನ್ನು ಇಟ್ಟಿದ್ದಾನೆ. ಪ್ರಕೃತಿಯಲ್ಲಿ ಕೆಲವು ನಿಯಮಗಳನ್ನು ಇಟ್ಟಿದ್ದಾನೆ. ಮಾನವರಿಗೆ ನೈತಿಕ ನಿಯಮಗಳನ್ನೂ ಕೊಟ್ಟಿದ್ದಾನೆ. ಈ ನಿಯಮಗಳು ಇರುವುದರಿಂದಲೇ ಇಡೀ ವಿಶ್ವದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. (ಕೀರ್ತ. 19:7-9) ಸೃಷ್ಟಿಯಲ್ಲಿ ಎಲ್ಲದಕ್ಕೂ ಅದರದ್ದೇ ಸ್ಥಾನ ಮತ್ತು ಕೆಲಸ ಇದೆ. ಗುರುತ್ವಾಕರ್ಷಣೆಯ ನಿಯಮವನ್ನೇ ತೆಗೆದುಕೊಳ್ಳಿ. ವಾಯುಮಂಡಲವು ಭೂಮಿಯನ್ನು ಬಿಟ್ಟುಹೋಗದಂತೆ ಭೂಮಿಯ ಗುರುತ್ವಾಕರ್ಷಣೆ ನೋಡಿಕೊಳ್ಳುತ್ತದೆ. ಸೂರ್ಯಚಂದ್ರರ ಗುರುತ್ವಾಕರ್ಷಣೆ ಸಮುದ್ರವನ್ನು ಮತ್ತು ಅದರ ಉಬ್ಬರವಿಳಿತವನ್ನು ಸಹ ನಿಯಂತ್ರಿಸುತ್ತದೆ. ಗುರುತ್ವಾಕರ್ಷಣಾ ಶಕ್ತಿ ಇಲ್ಲದೆ ಭೂಮಿಯ ಮೇಲೆ ಯಾವುದೂ ಜೀವಂತ ಇರಲ್ಲ. ಪ್ರಕೃತಿಯಲ್ಲಿ ಯೆಹೋವನಿಟ್ಟಿರುವ ನಿಯಮಗಳಿಂದಾಗಿ ಇಡೀ ವಿಶ್ವದಲ್ಲಿ ಎಲ್ಲವೂ ಕ್ರಮಬದ್ಧವಾಗಿ ನಡೆಯುತ್ತಾ ಇದೆ. ಇದನ್ನೆಲ್ಲಾ ನೋಡುವಾಗ ಯೆಹೋವನು ಭೂಮಿಯನ್ನು ಮತ್ತು ಮಾನವರನ್ನು ಒಂದು ಉದ್ದೇಶದೊಂದಿಗೆ ಸೃಷ್ಟಿಮಾಡಿದ್ದಾನೆಂದು ಗೊತ್ತಾಗುತ್ತದೆ. ನಾವು ಸೇವೆಗೆ ಹೋದಾಗ ಈ ಅದ್ಭುತ ವಿಶ್ವವನ್ನು ಸೃಷ್ಟಿ ಮಾಡಿದವನ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಹಾಯ ಮಾಡೋಣ.—ಪ್ರಕ. 4:11.
6, 7. ಯೆಹೋವನು ಆದಾಮಹವ್ವರಿಗೆ ಯಾವ್ಯಾವ ಉಡುಗೊರೆಗಳನ್ನು ಕೊಟ್ಟನು?
6 ಮಾನವರು ಭೂಮಿಯ ಮೇಲೆ ಸದಾಕಾಲ ಜೀವಿಸಬೇಕೆಂಬುದೇ ಯೆಹೋವನ ಉದ್ದೇಶವಾಗಿತ್ತು. (ಆದಿ. 1:28; ಕೀರ್ತ. 37:29) ಆತನು ಆದಾಮಹವ್ವರಿಗೆ ಉದಾರ ಮನಸ್ಸಿನಿಂದ ಎಷ್ಟೋ ಉಡುಗೊರೆಗಳನ್ನು ಕೊಟ್ಟನು. (ಯಾಕೋಬ 1:17 ಓದಿ.) ಉದಾಹರಣೆಗೆ, ಅವರಿಗೆ ಇಚ್ಛಾಸ್ವಾತಂತ್ರ್ಯ ಕೊಟ್ಟನು. ಯೋಚಿಸಿ ತೀರ್ಮಾನ ಮಾಡುವ, ಪ್ರೀತಿಸುವ ಮತ್ತು ಸ್ನೇಹಿತರನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೊಟ್ಟನು. ಸೃಷ್ಟಿಕರ್ತನೇ ಆದಾಮನೊಂದಿಗೆ ಮಾತಾಡಿ ಸರಿ ದಾರಿಯಲ್ಲಿ ನಡೆಯುವುದು ಹೇಗೆಂದು ಹೇಳಿಕೊಟ್ಟನು. ಆದಾಮನು ತನ್ನನ್ನು, ಏದೆನಿನಲ್ಲಿದ್ದ ಪ್ರಾಣಿಗಳನ್ನು ಮತ್ತು ಆ ಇಡೀ ತೋಟವನ್ನು ಹೇಗೆ ನೋಡಿಕೊಳ್ಳಬೇಕೆಂದು ಕಲಿತನು. (ಆದಿ. 2:15-17, 19, 20) ಯೆಹೋವನು ಮಾಡಿದ ಒಳ್ಳೇ ವಿಷಯಗಳನ್ನು ಸವಿಯಲು, ಮುಟ್ಟಲು, ನೋಡಲು, ಮೂಸಲು ಮತ್ತು ಕೇಳಿಸಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಆದಾಮಹವ್ವರಿಗೆ ಕೊಟ್ಟನು. ಅವರ ಮನೆಯಂತಿದ್ದ ಆ ಸುಂದರ ತೋಟದಲ್ಲಿ ಸಂತೋಷದಿಂದ ಜೀವನ ಮಾಡಲು ಏನೆಲ್ಲಾ ಬೇಕಿತ್ತೋ ಅದನ್ನೆಲ್ಲಾ ಯೆಹೋವನು ಅವರಿಗೆ ಕೊಟ್ಟನು. ತೃಪ್ತಿ ತರುವ ಕೆಲಸವನ್ನು ಇಬ್ಬರಿಗೂ ಕೊಟ್ಟಿದ್ದನು. ಅವರು ನೋಡಿ ಕಲಿಯಲು, ಮಾಡಿ ತಿಳಿಯಲು, ಹೊಸ ಹೊಸದನ್ನು ಕಂಡುಕೊಳ್ಳಲು ಎಷ್ಟೋ ವಿಷಯಗಳಿದ್ದವು. ಅನಂತಕಾಲಕ್ಕೂ ಇದನ್ನು ಮಾಡಬಹುದಿತ್ತು.
7 ದೇವರ ಉದ್ದೇಶದಲ್ಲಿ ಬೇರೆ ವಿಷಯಗಳೂ ಒಳಗೂಡಿದ್ದವು. ಪರಿಪೂರ್ಣ ಮಕ್ಕಳಿಗೆ ಹುಟ್ಟಿಸುವ ಸಾಮರ್ಥ್ಯವನ್ನು ಯೆಹೋವನು ಆದಾಮಹವ್ವರಿಗೆ ಕೊಟ್ಟನು. ಅವರ ಮಕ್ಕಳಿಗೂ ಮಕ್ಕಳಾಗುತ್ತಾ ಹೀಗೆ ಇಡೀ ಭೂಮಿ ಮಾನವರಿಂದ ತುಂಬಬೇಕೆಂದು ದೇವರು ಬಯಸಿದನು. ಪರಿಪೂರ್ಣರಾಗಿದ್ದ ತನ್ನ ಮೊದಲ ಮಾನವ ಮಕ್ಕಳನ್ನು ತುಂಬ ಪ್ರೀತಿಸಿದನು. ಇದೇ ರೀತಿ ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಸಬೇಕೆಂದು ದೇವರು ಬಯಸಿದನು. ಈ ಭೂಮಿಯನ್ನು ಮತ್ತು ಅದರಲ್ಲಿರುವ ಅಮೂಲ್ಯವಾದ ಸುಂದರ ಸೃಷ್ಟಿಯನ್ನು ಮಾನವ ಕುಟುಂಬಕ್ಕೆ ಕೊಟ್ಟನು. ಈ ಭೂಮಿ ಸದಾಕಾಲಕ್ಕೂ ಅವರ ಬೀಡಾಗಿರಲಿತ್ತು.—ಕೀರ್ತ. 115:16.
ದೇವರ ಉದ್ದೇಶ ಯಾಕೆ ನೆರವೇರಲಿಲ್ಲ?
8. ಆದಿಕಾಂಡ 2:16, 17ರಲ್ಲಿರುವ ನಿಯಮವನ್ನು ದೇವರು ಆದಾಮಹವ್ವರಿಗೆ ಯಾಕೆ ಕೊಟ್ಟನು?
8 ಯೆಹೋವನು ಬಯಸಿದಂತೆ ವಿಷಯಗಳು ನಡೆಯಲಿಲ್ಲ. ಯಾಕೆ? ಆತನು ಕೊಟ್ಟ ಒಂದು ಸರಳ ನಿಯಮವನ್ನು ಆದಾಮಹವ್ವರು ಪಾಲಿಸಲಿಲ್ಲ. ಅವರ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇದೆ ಎಂದು ಅವರು ಅರ್ಥಮಾಡಿಕೊಳ್ಳಲಿಕ್ಕೆ ಈ ನಿಯಮವನ್ನು ಅವರಿಗೆ ಕೊಟ್ಟನು. ದೇವರು ಆದಾಮನಿಗೆ, “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ” ಎಂದು ಹೇಳಿದನು. (ಆದಿ. 2:16, 17) ಈ ನಿಯಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. ಪಾಲಿಸುವುದು ಕೂಡ ಸುಲಭವಾಗಿತ್ತು. ಏಕೆಂದರೆ ಆ ತೋಟದಲ್ಲಿ ತಿನ್ನಲು ಎಷ್ಟೋ ವಿಧವಿಧವಾದ ರುಚಿಕರ ಬೇರೆ ಹಣ್ಣುಗಳಿದ್ದವು.
9, 10. (ಎ) ಸೈತಾನನು ಯೆಹೋವನ ಮೇಲೆ ಯಾವ ಆರೋಪ ಹಾಕಿದ? (ಬಿ) ಆದಾಮಹವ್ವ ಯಾವ ತೀರ್ಮಾನ ತೆಗೆದುಕೊಂಡರು? (ಲೇಖನದ ಆರಂಭದ ಚಿತ್ರ ನೋಡಿ.)
9 ಹವ್ವಳು ತನ್ನ ತಂದೆಯಾದ ಯೆಹೋವನ ಮಾತನ್ನು ಮೀರಿ ನಡೆಯುವಂತೆ ಮಾಡಲು ಸೈತಾನ ಒಂದು ಸರ್ಪವನ್ನು ಉಪಯೋಗಿಸಿದ. (ಆದಿಕಾಂಡ 3:1-5 ಓದಿ; ಪ್ರಕ. 12:9) ಯೆಹೋವನ ಮಾನವ ಮಕ್ಕಳು ‘ತೋಟದಲ್ಲಿರುವ ಯಾವ ಮರದ ಹಣ್ಣನ್ನು’ ಬೇಕಾದರೂ ತೆಗೆದು ತಿನ್ನುವ ಹಾಗಿಲ್ಲ ಎಂಬ ವಿಷಯದಲ್ಲಿ ವಿವಾದ ಎಬ್ಬಿಸಿದ. ‘ಏನು!? ನಿಮಗೆ ಏನು ಬೇಕೋ ಅದನ್ನು ಮಾಡುವ ಹಾಗಿಲ್ಲವಾ?’ ಎಂದು ಅವನು ಕೇಳುವ ಹಾಗಿತ್ತು. ಸೈತಾನ ಹವ್ವಳಿಗೆ, “ನೀವು ಹೇಗೂ ಸಾಯುವದಿಲ್ಲ” ಎಂದನು. ಇದು ಶುದ್ಧ ಸುಳ್ಳಾಗಿತ್ತು. ಅವರು ದೇವರ ಮಾತನ್ನು ಕೇಳುವ ಅವಶ್ಯಕತೆ ಇಲ್ಲ ಅಂತ ಅವಳ ಕಿವಿ ಊದಿದ. “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು . . . ಇದು ದೇವರಿಗೆ ಚೆನ್ನಾಗಿ ಗೊತ್ತುಂಟು” ಅಂದ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಈ ಹಣ್ಣು ತಿಂದರೆ ಅವರಿಗೆ ಜ್ಞಾನೋದಯವಾಗುತ್ತದೆ ಎಂದು ದೇವರಿಗೆ ಗೊತ್ತಿರುವುದರಿಂದ ತಿನ್ನಬೇಡಿ ಅಂತಿದ್ದಾನೆ ಅನ್ನುವುದು ಸೈತಾನನ ಆರೋಪವಾಗಿತ್ತು. ಕೊನೆಗೆ, “ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ” ಎಂದು ಸುಳ್ಳು ಭರವಸೆ ನೀಡಿ ದಾರಿತಪ್ಪಿಸಿದ.
10 ಆದಾಮಹವ್ವ ಈಗ ಏನು ಮಾಡಬೇಕೆಂದು ತೀರ್ಮಾನಿಸಬೇಕಿತ್ತು. ದೇವರ ಮಾತನ್ನು ಕೇಳಬೇಕಾ, ಸರ್ಪ ಹೇಳುವುದನ್ನು ಕೇಳಬೇಕಾ? ಅವರು ದೇವರ ಮಾತನ್ನು ಕೇಳದೆ ಹೋದರು ಅನ್ನುವುದು ದುಃಖದ ವಿಷಯ. ತಮ್ಮ ತಂದೆಯನ್ನು ಬಿಟ್ಟು ಸೈತಾನನ ಜೊತೆ ಸೇರಿದರು. ಯೆಹೋವನ ಸಂರಕ್ಷಣೆಯನ್ನು ತಿರಸ್ಕರಿಸಿದರು.—ಆದಿ. 3:6-13.
11. ಯೆಹೋವನು ಯಾಕೆ ಆದಾಮಹವ್ವರ ಪಾಪವನ್ನು ಕಂಡೂ ಕಾಣದಂತೆ ಇರಲಿಲ್ಲ?
11 ಆದಾಮಹವ್ವರು ದೇವರ ಮಾತನ್ನು ಮೀರಿ ನಡೆದಾಗ ಪರಿಪೂರ್ಣತೆ ಕಳೆದುಕೊಂಡರು. ತಪ್ಪು ಮಾಡಿ ದೇವರಿಗೆ ವೈರಿಗಳೂ ಆದರು. ಯಾಕೆಂದರೆ ಆತನು ದುಷ್ಟತನವನ್ನು ದ್ವೇಷಿಸುತ್ತಾನೆ. ಯೆಹೋವನು “ಕೇಡನ್ನು ನೋಡಲಾರದ ಅತಿಪವಿತ್ರದೃಷ್ಟಿಯುಳ್ಳವ.” (ಹಬ. 1:13) ಆದಾಮಹವ್ವರು ಮಾಡಿದ ಪಾಪವನ್ನು ದೇವರು ಕಂಡೂ ಕಾಣದಂತೆ ಇದ್ದಿದ್ದರೆ ಆತನ ಎಲ್ಲ ಸೃಷ್ಟಿಜೀವಿಗಳ ಶಾಂತಿ ಮತ್ತು ಐಕ್ಯತೆ ಕೆಟ್ಟುಹೋಗುವ ಸಾಧ್ಯತೆಯಿತ್ತು. ದೇವದೂತರ ಮತ್ತು ಮಾನವರ ಮನಸ್ಸಲ್ಲಿ ‘ದೇವರು ತನ್ನ ಮಾತಿನಂತೆ ನಡೆಯುವುದಿಲ್ವಾ?’ ಎಂಬ ದೊಡ್ಡ ಪ್ರಶ್ನೆ ಉಳಿದುಬಿಡುತ್ತಿತ್ತು. ಆದರೆ ಯೆಹೋವನು ತನ್ನ ಮಟ್ಟಗಳನ್ನು ತಾನೇ ಪಾಲಿಸುವ ದೇವರು. ಅದನ್ನು ಮೀರಿ ನಡೆಯುವುದಿಲ್ಲ. (ಕೀರ್ತ. 119:142) ಆದ್ದರಿಂದಲೇ, ಆದಾಮಹವ್ವರು ಇಚ್ಛಾಸ್ವಾತಂತ್ರ್ಯವನ್ನು ತಪ್ಪಾಗಿ ಬಳಸಿ ಅವಿಧೇಯತೆ ತೋರಿಸಿದಾಗ ಅವರಿಗೆ ತಕ್ಕ ಶಿಕ್ಷೆ ಕೊಟ್ಟನು. ಆತನು ಹೇಳಿದಂತೆಯೇ ಅವರು ಸತ್ತುಹೋದರು. ಮಣ್ಣಿನಿಂದ ತೆಗೆಯಲ್ಪಟ್ಟವರು ಮಣ್ಣಿಗೆ ಹಿಂದಿರುಗಿದರು.—ಆದಿ. 3:19.
12. ಆದಾಮನ ಮಕ್ಕಳಿಗೆ ಬಂದ ದುಃಸ್ಥಿತಿಯನ್ನು ವಿವರಿಸಿ.
12 ತಿನ್ನಬಾರದೆಂದು ಯೆಹೋವನು ಹೇಳಿದ್ದ ಹಣ್ಣನ್ನು ಆದಾಮಹವ್ವರು ತಿಂದದ್ದರಿಂದ ಅವರಿನ್ನು ಆತನ ಕುಟುಂಬದ ಭಾಗವಾಗಿರಲು ಸಾಧ್ಯವಿರಲಿಲ್ಲ. ಅವರನ್ನು ಏದೆನ್ ತೋಟದಿಂದ ಹೊರಗೆ ಹಾಕಲಾಯಿತು. ಪುನಃ ಅವರು ಅದರೊಳಗೆ ಕಾಲಿಡಲಿಕ್ಕೂ ಆಗಲಿಲ್ಲ. (ಆದಿ. 3:23, 24) ಅವರೇ ತೆಗೆದುಕೊಂಡ ತೀರ್ಮಾನದ ಫಲಿತಾಂಶಗಳನ್ನು ಅನುಭವಿಸುವಂತೆ ಯೆಹೋವನು ಬಿಟ್ಟನು. (ಧರ್ಮೋಪದೇಶಕಾಂಡ 32:4, 5 ಓದಿ.) ತಪ್ಪು ಮಾಡಿದ ಮೇಲೆ ಅವರು ಯೆಹೋವನ ಗುಣಗಳನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಲು ಸಾಧ್ಯವಿರಲಿಲ್ಲ. ಆದಾಮ ಒಂದು ಉಜ್ವಲ ಭವಿಷ್ಯವನ್ನು ಕಳೆದುಕೊಂಡ. ಅವನಿಂದಾಗಿ ಅವನ ಮಕ್ಕಳಿಗೂ ಆ ಸುಂದರ ಬದುಕು ಸಿಗದೇ ಹೋಯಿತು. ತನ್ನ ಮಕ್ಕಳಿಗೆ ಬರೀ ಅಪರಿಪೂರ್ಣತೆ, ಪಾಪ ಮತ್ತು ಮರಣವನ್ನು ಬಳುವಳಿಯಾಗಿ ಕೊಟ್ಟ. (ರೋಮ. 5:12) ನಿತ್ಯಜೀವದ ನಿರೀಕ್ಷೆಯನ್ನು ನೀರುಪಾಲು ಮಾಡಿಬಿಟ್ಟ. ಆದಾಮಹವ್ವರಿಂದ ಪರಿಪೂರ್ಣ ಮಕ್ಕಳನ್ನು ಹುಟ್ಟಿಸಲು ಆಗಲಿಲ್ಲ. ಅವರ ಮಕ್ಕಳಿಗೆ ಹುಟ್ಟಿದ ಮಕ್ಕಳೂ ಪರಿಪೂರ್ಣರಾಗಿರಲಿಲ್ಲ. ಆದಾಮಹವ್ವರಂತೆ ಬೇರೆ ಎಲ್ಲಾ ಮಾನವರನ್ನೂ ದೇವರ ವಿರುದ್ಧ ದಂಗೆ ಏಳುವಂತೆ ಸೈತಾನ ಪ್ರಚೋದಿಸುತ್ತಾನೆ.—ಯೋಹಾ. 8:44.
ಮುರಿದ ಸಂಬಂಧ ಯೇಸುವಿನ ಯಜ್ಞದ ಮೂಲಕ ಸರಿಯಾಗುತ್ತದೆ
13. ಮಾನವರಿಗಾಗಿ ಯೆಹೋವನು ಏನು ಬಯಸಿದನು?
13 ಆದಾಮಹವ್ವರು ತಪ್ಪು ಮಾಡಿದರೂ ಯೆಹೋವನಿಗೆ ಮಾನವರ ಮೇಲೆ ಇದ್ದ ಪ್ರೀತಿ ಕಡಿಮೆಯಾಗಲಿಲ್ಲ. ಅವರು ತನ್ನ ಜೊತೆ ಒಳ್ಳೇ ಸಂಬಂಧ ಇಟ್ಟುಕೊಳ್ಳಬೇಕೆಂದು ಬಯಸಿದನು. ಅವರಲ್ಲಿ ಒಬ್ಬರೂ ಸಾಯುವುದು ಆತನಿಗೆ ಇಷ್ಟವಿರಲಿಲ್ಲ. (2 ಪೇತ್ರ 3:9) ಮಾನವರು ತನ್ನೊಂದಿಗೆ ಒಳ್ಳೇ ಸಂಬಂಧವನ್ನು ಪುನಃ ಪಡೆಯಲು ಯೆಹೋವನು ತಕ್ಷಣ ಏರ್ಪಾಡು ಮಾಡಿದನು. ತನ್ನ ಮಟ್ಟಗಳನ್ನು ಬಿಟ್ಟುಕೊಡದೆ ಆತನು ಇದನ್ನು ಹೇಗೆ ಮಾಡಲು ಸಾಧ್ಯವಾಯಿತು? ನೋಡೋಣ.
14. (ಎ) ಮಾನವರನ್ನು ಪಾಪ ಮರಣದಿಂದ ರಕ್ಷಿಸಲು ದೇವರು ಏನು ಮಾಡಿದನೆಂದು ಯೋಹಾನ 3:16 ತಿಳಿಸುತ್ತದೆ? (ಬಿ) ನಾವು ಜನರೊಂದಿಗೆ ಯಾವ ವಿಷಯದ ಬಗ್ಗೆ ಮಾತಾಡಬಹುದು?
14 ಯೋಹಾನ 3:16 ಓದಿ. ನಾವು ಸ್ಮರಣೆಗೆ ಆಮಂತ್ರಿಸುವ ಕೆಲವು ಜನರಿಗೆ ಈ ವಚನ ಚಿರಪರಿಚಿತ. ಆದರೆ ಯೇಸುವಿನ ಯಜ್ಞದ ಮೂಲಕ ನಮಗೆ ನಿತ್ಯಜೀವ ಹೇಗೆ ಸಿಗುತ್ತದೆ ಅನ್ನುವುದು ಅವರಿಗೆ ಗೊತ್ತಿಲ್ಲ. ಆದ್ದರಿಂದ ನಾವು ಅವರನ್ನು ಸ್ಮರಣೆಗೆ ಆಮಂತ್ರಿಸುವಾಗ ಈ ವಿಷಯದ ಬಗ್ಗೆ ಮಾತಾಡಬಹುದು. ಅವರು ಸ್ಮರಣೆಯ ಸಮಾರಂಭಕ್ಕೆ ಬಂದಾಗ ಮತ್ತು ಆಮೇಲೆ ಅವರನ್ನು ಭೇಟಿಮಾಡಲು ಹೋದಾಗಲೂ ಈ ವಿಷಯದ ಬಗ್ಗೆ ಚರ್ಚಿಸಬಹುದು. ವಿಮೋಚನಾ ಮೌಲ್ಯದ ಬಗ್ಗೆ ಅವರು ಹೆಚ್ಚು ತಿಳಿದುಕೊಂಡಾಗ ಯೆಹೋವನು ಮಾನವರನ್ನು ಎಷ್ಟು ಪ್ರೀತಿಸುತ್ತಾನೆ, ಆತನಲ್ಲಿ ಎಷ್ಟು ವಿವೇಕ ಇದೆ ಎಂದು ಅರ್ಥಮಾಡಿಕೊಳ್ಳುತ್ತಾರೆ. ನಾವು ಯೇಸುವಿನ ಯಜ್ಞದ ಯಾವ ಅಂಶಗಳ ಬಗ್ಗೆ ಜನರೊಂದಿಗೆ ಮಾತಾಡಬಹುದು?
15. ಯೇಸುವಿಗೂ ಆದಾಮನಿಗೂ ಇದ್ದ ವ್ಯತ್ಯಾಸ ಏನು?
15 ಒಬ್ಬ ಪರಿಪೂರ್ಣ ಮಾನವನು ತನ್ನ ಜೀವವನ್ನು ವಿಮೋಚನಾ ಮೌಲ್ಯವಾಗಿ ಕೊಡಲು ದೇವರು ಏರ್ಪಾಡು ಮಾಡಿದನು. ಈ ವ್ಯಕ್ತಿ ಯೆಹೋವನಿಗೆ ನಿಷ್ಠಾವಂತನಾಗಿರಬೇಕಿತ್ತು. ಮಾನವರಿಗಾಗಿ ತನ್ನ ಜೀವವನ್ನು ಕೊಡಬೇಕಿತ್ತು. (ರೋಮ. 5:17-19) ಯೆಹೋವನು ತನ್ನ ಮೊದಲ ಸೃಷ್ಟಿಯಾದ ಯೇಸುವಿನ ಜೀವವನ್ನು ಸ್ವರ್ಗದಿಂದ ಭೂಮಿಗೆ ಸ್ಥಳಾಂತರಿಸಿದನು. (ಯೋಹಾ. 1:14) ಹೀಗೆ ಯೇಸು ಆದಾಮನಂತೆ ಪರಿಪೂರ್ಣ ಮನುಷ್ಯನಾಗಿ ಹುಟ್ಟಿದನು. ಆದರೆ ಯೇಸು ಆದಾಮನಂತೆ ನಡಕೊಳ್ಳದೆ ಯೆಹೋವನು ಒಬ್ಬ ಪರಿಪೂರ್ಣ ವ್ಯಕ್ತಿಯಿಂದ ಏನು ಬಯಸಿದನೋ ಅದನ್ನೆಲ್ಲಾ ಚಾಚೂತಪ್ಪದೆ ಮಾಡಿದನು. ತುಂಬ ದೊಡ್ಡ ಪರೀಕ್ಷೆಗಳು ಬಂದಾಗಲೂ ದೇವರ ಒಂದು ನಿಯಮವನ್ನೂ ಅವನು ಮುರಿಯಲಿಲ್ಲ.
16. ವಿಮೋಚನಾ ಮೌಲ್ಯ ಯಾಕೆ ಒಂದು ಅಮೂಲ್ಯ ಉಡುಗೊರೆಯಾಗಿದೆ?
16 ಪರಿಪೂರ್ಣ ಮಾನವನಾಗಿ ಸಾಯುವ ಮೂಲಕ ಯೇಸು ಮಾನವರನ್ನು ಪಾಪ ಮರಣದಿಂದ ರಕ್ಷಿಸಲು ಸಾಧ್ಯ. ಯೇಸು ಆದಾಮನಿಗೆ ಅನುರೂಪವಾಗಿದ್ದನು. ಅಂದರೆ ಆದಾಮನಂತೆ ಪರಿಪೂರ್ಣ ವ್ಯಕ್ತಿಯಾಗಿದ್ದನು. ದೇವರಿಗೆ ಸಂಪೂರ್ಣ ನಿಷ್ಠೆ ಮತ್ತು ವಿಧೇಯತೆ ತೋರಿಸಿದನು. (1 ತಿಮೊ. 2:6) ಆತನು ನಮಗೋಸ್ಕರ ತನ್ನ ಜೀವವನ್ನೇ ಕೊಟ್ಟನು. ಆತನ ತ್ಯಾಗದ ಮೂಲಕ ಎಲ್ಲಾ ಮಾನವರಿಗೂ ಸದಾಕಾಲ ಜೀವಿಸುವ ಅವಕಾಶ ಸಿಗುತ್ತದೆ. (ಮತ್ತಾ. 20:28) ಹೀಗೆ ಯೇಸುವಿನ ಯಜ್ಞದ ಮೂಲಕ ದೇವರ ಆರಂಭದ ಉದ್ದೇಶ ನೆರವೇರಲಿದೆ.—2 ಕೊರಿಂ. 1:19, 20.
ತನ್ನ ಬಳಿ ಹಿಂದಿರುಗಲು ಯೆಹೋವನು ಸಹಾಯ ಮಾಡುತ್ತಾನೆ
17. ವಿಮೋಚನಾ ಮೌಲ್ಯದ ಮೂಲಕ ನಮಗೆ ಏನೆಲ್ಲಾ ಸಿಗಲಿದೆ?
17 ಯೆಹೋವನು ವಿಮೋಚನಾ ಮೌಲ್ಯವನ್ನು ಕೊಡಲಿಕ್ಕಾಗಿ ದೊಡ್ಡ ತ್ಯಾಗ ಮಾಡಬೇಕಾಯಿತು. (1 ಪೇತ್ರ 1:19) ನಾವು ಆತನಿಗೆ ಎಷ್ಟು ಅಮೂಲ್ಯ ಅಂದರೆ ನಮ್ಮನ್ನು ರಕ್ಷಿಸಲಿಕ್ಕೋಸ್ಕರ ತನ್ನ ಪ್ರಿಯ ಮಗನನ್ನೇ ಕೊಟ್ಟನು. (1 ಯೋಹಾ. 4:9, 10) ಯೇಸು ಒಂದರ್ಥದಲ್ಲಿ ಆದಾಮನ ಸ್ಥಾನ ತೆಗೆದುಕೊಂಡು ನಮಗೆ ತಂದೆಯಂತೆ ಆದನು. (1 ಕೊರಿಂ. 15:45) ಹೇಗೆಂದರೆ ಆತನ ಮೂಲಕ ನಮಗೆ ನಿತ್ಯಜೀವದ ನಿರೀಕ್ಷೆ ಸಿಕ್ಕಿದೆ. ಅಷ್ಟುಮಾತ್ರವಲ್ಲ ಮುಂದೊಂದು ದಿನ ದೇವರ ಕುಟುಂಬದ ಭಾಗವಾಗುವ ಪ್ರತೀಕ್ಷೆಯೂ ಸಿಕ್ಕಿದೆ. ವಿಮೋಚನಾ ಮೌಲ್ಯದ ಮೂಲಕ ಮಾನವರು ಪರಿಪೂರ್ಣರಾಗುವುದರಿಂದ ಯೆಹೋವನು ಯಾವ ನಿಯಮವನ್ನೂ ಮುರಿಯದೆ ನಮ್ಮನ್ನು ತನ್ನ ಕುಟುಂಬದ ಭಾಗವಾಗಿ ಸ್ವೀಕರಿಸಲು ಆಗುತ್ತದೆ. ಆತನಿಗೆ ನಿಷ್ಠಾವಂತರಾಗಿರುವ ಎಲ್ಲರೂ ಪರಿಪೂರ್ಣರಾದಾಗ ಎಷ್ಟು ಚೆನ್ನಾಗಿರುತ್ತದಲ್ವಾ? ಕೊನೆಗೆ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲರೂ ಒಂದೇ ಕುಟುಂಬವಾಗುವರು. ನಾವೆಲ್ಲರೂ ದೇವರ ಮಕ್ಕಳಾಗುವೆವು.—ರೋಮ. 8:21.
18. ಯೆಹೋವನು ಯಾವಾಗ “ಎಲ್ಲರಿಗೂ ಎಲ್ಲವೂ ಆಗುವನು”?
18 ನಮ್ಮ ಮೊದಲ ಹೆತ್ತವರು ಯೆಹೋವನಿಗೆ ಅವಿಧೇಯರಾದರೂ ಆತನು ಮಾನವರನ್ನು ಪ್ರೀತಿಸುವುದನ್ನು ನಿಲ್ಲಿಸಲಿಲ್ಲ. ನಮಗಾಗಿ ತನ್ನ ಒಬ್ಬನೇ ಮಗನನ್ನು ಕೊಟ್ಟನು. ನಾವು ಅಪರಿಪೂರ್ಣರಾಗಿದ್ದರೂ ಯೆಹೋವನಿಗೆ ನಿಷ್ಠೆ ತೋರಿಸುವುದನ್ನು ಸೈತಾನನಿಂದ ತಡೆಯಲು ಸಾಧ್ಯವಿಲ್ಲ. ವಿಮೋಚನಾ ಮೌಲ್ಯದ ಮೂಲಕ ನಾವು ನೀತಿವಂತರಾಗಲು ಯೆಹೋವನು ಸಹಾಯ ಮಾಡುತ್ತಾನೆ. “ಮಗನನ್ನು [ಅಂಗೀಕರಿಸಿ] ಅವನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು” ನಿತ್ಯಜೀವ ಪಡೆಯುವಾಗ ಬದುಕು ಹೇಗಿರುವುದೆಂದು ಸ್ವಲ್ಪ ಯೋಚಿಸಿ ನೋಡಿ! (ಯೋಹಾ. 6:40) ಹೀಗೆ ನಮ್ಮ ಪ್ರೀತಿಯ ತಂದೆ ತನ್ನ ವಿವೇಕವನ್ನು ಉಪಯೋಗಿಸಿ ಮಾನವರನ್ನು ಪರಿಪೂರ್ಣತೆಗೆ ತರುವ ತನ್ನ ಉದ್ದೇಶವನ್ನು ಪೂರೈಸುವನು. ಆಗ ಯೆಹೋವನು “ಎಲ್ಲರಿಗೂ ಎಲ್ಲವೂ ಆಗುವನು.”—1 ಕೊರಿಂ. 15:28.
19. (ಎ) ವಿಮೋಚನಾ ಮೌಲ್ಯವನ್ನು ನಾವು ಮಾನ್ಯಮಾಡುವುದಾದರೆ ಏನು ಮಾಡುತ್ತೇವೆ? (“ಯೋಗ್ಯರು ಯಾರೆಂದು ಹುಡುಕುತ್ತಾ ಇರೋಣ” ಎಂಬ ಚೌಕ ನೋಡಿ.) (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
19 ವಿಮೋಚನಾ ಮೌಲ್ಯವೆಂಬ ಅಮೂಲ್ಯ ಉಡುಗೊರೆಯನ್ನು ನಾವು ಮಾನ್ಯಮಾಡುತ್ತೇವಾದರೆ ಖಂಡಿತ ಈ ಏರ್ಪಾಡಿನ ಬಗ್ಗೆ ಬೇರೆಯವರಿಗೆ ತಿಳಿಸುತ್ತೇವೆ. ಈ ಉಡುಗೊರೆಯ ಮೂಲಕ ಯೆಹೋವನು ಎಲ್ಲಾ ಮಾನವರಿಗೂ ಅನಂತಕಾಲ ಜೀವಿಸುವ ಅವಕಾಶ ಕೊಡುತ್ತಿದ್ದಾನೆಂದು ಜನರಿಗೆ ಗೊತ್ತಾಗಬೇಕು. ಯೇಸುವಿನ ಯಜ್ಞದ ಮೂಲಕ ಸೈತಾನನು ಎಬ್ಬಿಸಿದ ವಿವಾದಗಳಿಗೂ ಉತ್ತರ ಸಿಗುತ್ತದೆ. ಇದು ಹೇಗೆ ಎಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.