ಅಧ್ಯಾಯ 26
ಭಾಷಣದ ವಿಷಯಭಾಗವನ್ನು ತರ್ಕಬದ್ಧವಾಗಿ ವಿಕಸಿಸುವುದು
ವಿಷಯಭಾಗವನ್ನು ತರ್ಕಬದ್ಧವಾಗಿ ಸಂಘಟಿಸುವ ಮೊದಲು, ನಿಮ್ಮ ಮನಸ್ಸಿನಲ್ಲಿ ಒಂದು ಉದ್ದೇಶವಿರಬೇಕು. ಒಂದು ಪ್ರತ್ಯೇಕ ವಿಷಯವಸ್ತುವಿನ ಕುರಿತು ಅಂದರೆ ಒಂದು ನಂಬಿಕೆ, ಮನೋಭಾವ, ಗುಣ, ವರ್ತನಾರೀತಿ ಅಥವಾ ಜೀವನ ರೀತಿಯ ಕುರಿತು ಇತರರಿಗೆ ಮಾಹಿತಿಯನ್ನು ತಿಳಿಯಪಡಿಸುವುದು ಮಾತ್ರ ನಿಮ್ಮ ಉದ್ದೇಶವಾಗಿದೆಯೊ? ಒಂದು ನಿಶ್ಚಿತ ವಿಚಾರವನ್ನು ರುಜುಪಡಿಸುವುದು ಅಥವಾ ಅಲ್ಲಗಳೆಯುವುದು ನಿಮ್ಮ ಅಭಿಲಾಷೆಯಾಗಿದೆಯೊ? ನಿಮ್ಮ ಗುರಿಯು ಒಂದು ವಿಷಯಕ್ಕೆ ಗಣ್ಯತೆಯನ್ನು ವರ್ಧಿಸುವುದಾಗಲಿ ಕ್ರಿಯೆಗೈಯುವಂತೆ ಪ್ರಚೋದಿಸುವುದಾಗಲಿ ಆಗಿದೆಯೊ? ನಿಮ್ಮ ವಿಷಯಭಾಗವನ್ನು ನೀವು ಒಬ್ಬ ವ್ಯಕ್ತಿಯ ಮುಂದೆ ಸಾದರಪಡಿಸುತ್ತಿರಲಿ ಅಥವಾ ಒಂದು ದೊಡ್ಡ ಸಭೆಯ ಮುಂದೆ ಸಾದರಪಡಿಸುತ್ತಿರಲಿ, ಅದನ್ನು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ; ಹೀಗೆ ಮಾಡಲಿಕ್ಕಾಗಿ, ಅವರಿಗೆ ಆ ವಿಷಯವಸ್ತುವಿನ ಕುರಿತು ಈಗಾಗಲೇ ಏನು ತಿಳಿದಿದೆ ಮತ್ತು ಅದರ ಕಡೆಗೆ ಅವರ ಮನೋಭಾವವೇನು ಎಂಬ ವಿಷಯವನ್ನು ನೀವು ಪರಿಗಣಿಸುವ ಅಗತ್ಯವಿದೆ. ಇದನ್ನು ಮಾಡಿ ಮುಗಿಸಿದ ಬಳಿಕ, ಈ ಉದ್ದೇಶವನ್ನು ಸಾಧಿಸಲು ಸಹಾಯವಾಗುವ ರೀತಿಯಲ್ಲಿ ನಿಮ್ಮ ವಿಷಯಭಾಗದ ಹೊರಮೇರೆಯನ್ನು ತಯಾರಿಸಿರಿ.
ದಮಸ್ಕದಲ್ಲಿ ಸೌಲ (ಪೌಲ)ನು ಮಾಡಿದ ಶುಶ್ರೂಷೆಯ ಸಂಬಂಧದಲ್ಲಿ, ಅವನು “ಅಧಿಕ ಸಾಮರ್ಥ್ಯವುಳ್ಳವನಾಗಿ ಯೇಸುವೇ ಕ್ರಿಸ್ತನೆಂದು [“ತರ್ಕಬದ್ಧವಾಗಿ,” NW] ಸಿದ್ಧಾಂತಪಡಿಸಿ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರಾಗ ಮಾಡಿದನು” ಎಂದು ಅಪೊಸ್ತಲರ ಕೃತ್ಯಗಳು 9:22 ವರದಿಸುತ್ತದೆ. ಆ ತರ್ಕಬದ್ಧವಾದ ಸಿದ್ಧಾಂತದಲ್ಲಿ ಏನೆಲ್ಲ ಸೇರಿತ್ತು? ಪೌಲನು ಅಂತಿಯೋಕ್ಯ ಮತ್ತು ಥೆಸಲೊನೀಕದಲ್ಲಿ ತರುವಾಯ ಮಾಡಿದ ಶುಶ್ರೂಷೆಯ ದಾಖಲೆಯು ಸೂಚಿಸುವಂತೆ, ಯೆಹೂದ್ಯರು ಹೀಬ್ರು ಶಾಸ್ತ್ರವನ್ನು ಅಂಗೀಕರಿಸುತ್ತಾರೆಂಬ ಮತ್ತು ಅದು ಮೆಸ್ಸೀಯನ ಕುರಿತು ಏನು ಹೇಳುತ್ತದೋ ಅದನ್ನು ತಾವು ಒಪ್ಪುತ್ತೇವೆಂದು ಹೇಳುತ್ತಾರೆಂಬ ನಿಜತ್ವದ ಮೇಲೆ ಅವನು ಪ್ರಥಮವಾಗಿ ವಿಷಯವನ್ನು ನೆಲೆಗೊಳಿಸಿದನು. ಬಳಿಕ, ಆ ಶಾಸ್ತ್ರವಚನಗಳಿಂದ ಪೌಲನು ಮೆಸ್ಸೀಯನ ಜೀವನ ಮತ್ತು ಶುಶ್ರೂಷೆಗೆ ಸಂಬಂಧಪಟ್ಟ ಭಾಗಗಳನ್ನು ಆರಿಸಿ ತೆಗೆದನು. ಅವನು ಇವನ್ನು ಉಲ್ಲೇಖಿಸಿ, ಅವುಗಳನ್ನು ಯೇಸುವಿನ ಸಂಬಂಧದಲ್ಲಿ ಏನು ನಿಜವಾಗಿಯೂ ನಡೆದಿತ್ತೊ ಅದಕ್ಕೆ ಹೋಲಿಸಿದನು. ಕಟ್ಟಕಡೆಗೆ ಅವನು ಸುವ್ಯಕ್ತವಾದ ತೀರ್ಮಾನಕ್ಕೆ, ಅಂದರೆ ಯೇಸುವೇ ಕ್ರಿಸ್ತನು ಅಥವಾ ಮೆಸ್ಸೀಯನೆಂಬ ತೀರ್ಮಾನಕ್ಕೆ ಬಂದನು. (ಅ. ಕೃ. 13:16-41; 17:2, 3) ಬೈಬಲ್ ಸತ್ಯವನ್ನು ನೀವೂ ತರ್ಕಬದ್ಧವಾಗಿ ನೀಡುವಲ್ಲಿ, ಇತರರನ್ನು ಒಡಂಬಡಿಸುವ ಪ್ರಭಾವ ಅದಕ್ಕಿರಬಲ್ಲದು.
ಭಾಷಣವನ್ನು ಸಂಘಟಿಸುವುದು. ಭಾಷಣದ ವಿಷಯಭಾಗವನ್ನು ತರ್ಕಬದ್ಧವಾದ ವಿವಿಧ ರೀತಿಗಳಲ್ಲಿ ಏರ್ಪಡಿಸಸಾಧ್ಯವಿದೆ. ಒಂದುವೇಳೆ ಬೇರೆ ಬೇರೆ ವಿಧಾನಗಳನ್ನು ಒಟ್ಟಿಗೆ ಉಪಯೋಗಿಸುವುದು ನಿಮಗೆ ಪ್ರಯೋಜನದಾಯಕವಾಗಿ ಕಂಡುಬರುವಲ್ಲಿ, ನೀವು ಹಾಗೆ ಮಾಡಬಹುದು. ಈ ಸಾಧ್ಯತೆಗಳಲ್ಲಿ ಕೆಲವನ್ನು ಪರಿಗಣಿಸಿರಿ.
ವಿಷಯವಸ್ತುಗಳಿಗನುಸಾರವಾದ ಜೋಡಣೆ. ನಿಮ್ಮ ಭಾಷಣದ ವಿಷಯಭಾಗವನ್ನು ಬೇರೆ ಬೇರೆ ವಿಭಾಗಗಳಾಗಿ ಮಾಡಿ, ಅದರಲ್ಲಿ ಪ್ರತಿಯೊಂದು ವಿಭಾಗವು ನಿಮ್ಮ ಉದ್ದೇಶವನ್ನು ಪೂರೈಸುವಂತೆ ಸಂಘಟಿಸುವುದು ಇದರಲ್ಲಿ ಸೇರಿದೆ. ಈ ವಿಭಾಗಗಳು ನಿಮ್ಮ ಭಾಷಣದ ವಿಷಯವಸ್ತುವನ್ನು ಅರ್ಥಮಾಡಿಕೊಳ್ಳಲು ಅತಿ ಪ್ರಾಮುಖ್ಯವಾಗಿರುವ ಮುಖ್ಯಾಂಶಗಳಾಗಿರಬಹುದು. ಅವು ಒಂದು ವಿಚಾರವನ್ನು ರುಜುಪಡಿಸುವ ಇಲ್ಲವೆ ಅಲ್ಲಗಳೆಯುವ ನಿರ್ದಿಷ್ಟ ವಾದಗಳಾಗಿರಬಹುದು. ಕೆಲವು ಅಂಶಗಳು ಭಾಷಣದ ವಿಷಯವಸ್ತುವಿಗೆ ಸಂಬಂಧಿಸುವುದಾದರೂ, ನಿಮ್ಮ ಸಭಿಕರು ಅಥವಾ ನಿಮ್ಮ ಉದ್ದೇಶದ ಮೇಲೆ ಹೊಂದಿಕೊಂಡು, ನೀವು ಅವುಗಳನ್ನು ಕೂಡಿಸಬಹುದು ಇಲ್ಲವೆ ತೆಗೆದುಬಿಡಬಹುದು.
ವಿಷಯವಸ್ತುಗಳಿಗನುಸಾರವಾದ ಜೋಡಣೆಯ ಕುರಿತಾದ ಒಂದು ಉದಾಹರಣೆಯನ್ನು ಪರಿಗಣಿಸಿರಿ. ದೇವರ ಹೆಸರಿನ ಕುರಿತಾದ ಒಂದು ಚಿಕ್ಕ ಭಾಷಣದಲ್ಲಿ, (1) ದೇವರ ಹೆಸರನ್ನು ತಿಳಿದುಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ, (2) ದೇವರ ಹೆಸರೇನು, ಮತ್ತು (3) ನಾವು ಆ ಹೆಸರನ್ನು ಹೇಗೆ ಗೌರವಿಸಬಲ್ಲೆವು ಎಂಬ ವಿಷಯಗಳು ಸೇರಿರಬಹುದು.
ಭಾಷಣದ ವಿಷಯಭಾಗವನ್ನು ವಿಷಯಕ್ಕನುಸಾರ ಜೋಡಿಸುವುದರ ಕುರಿತು ಹೆಚ್ಚಿನದ್ದನ್ನು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮನೆ ಬೈಬಲ್ ಅಧ್ಯಯನಗಳಲ್ಲಿ ಉಪಯೋಗಿಸಲಿಕ್ಕಾಗಿ ರಚಿಸಿರುವ ಪ್ರಕಾಶನಗಳನ್ನು ಪರೀಕ್ಷಿಸುವುದರಿಂದ ತಿಳಿಯಸಾಧ್ಯವಿದೆ. (ಮತ್ತಾ. 24:45) ಈ ಪ್ರಕಾಶನಗಳಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಮೂಲಭೂತ ಬೈಬಲ್ ಸತ್ಯಗಳ ಸಮಗ್ರ ನೋಟವನ್ನು ಪಡೆದುಕೊಳ್ಳುವಂತೆ ಸಹಾಯಮಾಡುವ ಅನೇಕ ವಿಷಯವಸ್ತುಗಳಿವೆ. ದೊಡ್ಡ ಪುಸ್ತಕಗಳಲ್ಲಿ ಪ್ರತಿ ಅಧ್ಯಾಯವನ್ನು ವಿಭಾಗಿಸಲು ಉಪಶಿರೋನಾಮಗಳನ್ನು ಉಪಯೋಗಿಸಲಾಗುತ್ತದೆ. ಪ್ರತಿಯೊಂದು ಭಾಗವು ಮುಂಬರುವ ಮುದ್ರಿತ ವಿಷಯಭಾಗಕ್ಕಾಗಿ ವಿದ್ಯಾರ್ಥಿಯನ್ನು ಸಿದ್ಧಪಡಿಸಿ, ಹೀಗೆ ಅವನು ಪೂರ್ತಿ ಚಿತ್ರಣವನ್ನು ಗ್ರಹಿಸುವಂತೆ ನೆರವು ನೀಡುತ್ತದೆ.
ಕಾರ್ಯಕಾರಣ ಭಾವ. ಮಾಹಿತಿಯನ್ನು ತರ್ಕಬದ್ಧವಾಗಿ ನೀಡುವ ಇನ್ನೊಂದು ವಿಧಾನವು, ಕಾರಣದಿಂದ ಕಾರ್ಯಕ್ಕೆ ಒಂದು ವಿಷಯವನ್ನು ತರ್ಕಬದ್ಧವಾಗಿ ಚರ್ಚಿಸುವುದೇ.
ತಾವು ಮಾಡುತ್ತಿರುವ ಅಥವಾ ಮಾಡಲು ಯೋಜಿಸುವ ಕೆಲಸದ ಪರಿಣಾಮವನ್ನು ಜಾಗರೂಕತೆಯಿಂದ ಪರಿಗಣಿಸಬೇಕಾಗಿರುವ ಒಂದು ಗುಂಪಿಗೊ ಅಥವಾ ಒಬ್ಬೊಬ್ಬ ವ್ಯಕ್ತಿಗಳಿಗೊ ನೀವು ಮಾತಾಡುವಾಗ, ಈ ರೀತಿಯ ಪ್ರಸ್ತಾಪವು ಪರಿಣಾಮಕಾರಿಯಾಗಿರಬಲ್ಲದು. ಜ್ಞಾನೋಕ್ತಿ 7ನೆಯ ಅಧ್ಯಾಯವು ಇದರ ಅತ್ಯುತ್ತಮವಾದ ಉದಾಹರಣೆಯನ್ನು ಒದಗಿಸುತ್ತದೆ. ಅಲ್ಲಿ “ಅಲ್ಪಬುದ್ಧಿಯುಳ್ಳ” (ಕಾರಣ) ಒಬ್ಬ ಅನನುಭವಿ ಯುವಕನು ಒಬ್ಬ ವೇಶ್ಯೆಯೊಂದಿಗೆ ಸಂಬಂಧವನ್ನಿಟ್ಟುಕೊಂಡದ್ದರಿಂದ ಅಹಿತಕರ ಫಲಿತಾಂಶಗಳನ್ನು (ಕಾರ್ಯ) ಅನುಭವಿಸುವುದನ್ನು ವಿಶದವಾಗಿ ವರ್ಣಿಸಲಾಗಿದೆ.—ಜ್ಞಾನೋ. 7:7.
ಹೆಚ್ಚಿನ ಒತ್ತನ್ನು ನೀಡಲಿಕ್ಕಾಗಿ ನೀವು, ಯೆಹೋವನ ಮಾರ್ಗಗಳಲ್ಲಿ ನಡೆಯಲು ತಪ್ಪುವವರು ಅನುಭವಿಸುವ ಕೆಟ್ಟ ಫಲಿತಾಂಶಗಳನ್ನು, ಯೆಹೋವನಿಗೆ ಕಿವಿಗೊಡುವವರು ಅನುಭವಿಸುವ ಒಳ್ಳೆಯ ಫಲಿತಾಂಶಗಳೊಂದಿಗೆ ಹೋಲಿಸಿ ವ್ಯತ್ಯಾಸವನ್ನು ತೋರಿಸಬಹುದು. ಮೋಶೆಯು ಯೆಹೋವನ ಆತ್ಮದಿಂದ ಪ್ರಚೋದಿತನಾಗಿ, ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ಮೊದಲು ಇಂತಹ ವ್ಯತ್ಯಾಸವನ್ನು ತೋರಿಸುತ್ತ ಅವರೊಂದಿಗೆ ಮಾತಾಡಿದನು.—ಧರ್ಮೋ., ಅಧ್ಯಾ. 28.
ಕೆಲವು ಸಂದರ್ಭಗಳಲ್ಲಿ, ಒಂದು ಸನ್ನಿವೇಶವನ್ನು (ಕಾರ್ಯ) ಗುರುತಿಸುವ ಮೂಲಕ ನಿಮ್ಮ ಚರ್ಚೆಯನ್ನು ಆರಂಭಿಸಿ, ಬಳಿಕ ಆ ಸನ್ನಿವೇಶಕ್ಕೆ ನಡೆಸಿದ ಸಹಾಯಕರವಾದ ಸಂಗತಿಗಳನ್ನು (ಕಾರಣ) ಸೂಚಿಸುವ ರುಜುವಾತನ್ನು ನೀಡುವುದು ಒಳ್ಳೇದು. ಇದರಲ್ಲಿ ಪದೇ ಪದೇ ಸಮಸ್ಯೆ ಮತ್ತು ಪರಿಹಾರದ ಶೈಲಿ ಒಳಗೂಡಿರುತ್ತದೆ.
ಸಮಸ್ಯೆ ಮತ್ತು ಪರಿಹಾರ. ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಜನರಿಗೆ ಚಿಂತೆ ಹುಟ್ಟಿಸುವಂಥ ಒಂದು ಸಮಸ್ಯೆಯ ಕುರಿತು ಚರ್ಚಿಸಿ, ಅದಕ್ಕೆ ತೃಪ್ತಿಕರವಾದ ಪರಿಹಾರವಿದೆಯೆಂದು ತೋರಿಸುವಾಗ, ಇದು ಒಬ್ಬ ವ್ಯಕ್ತಿಯು ನಮಗೆ ಕಿವಿಗೊಡುವಂತೆ ಪ್ರೋತ್ಸಾಹಿಸಬಹುದು. ಅಲ್ಲಿ ತಿಳಿಸಲ್ಪಡುವ ಸಮಸ್ಯೆಯು ನೀವು ಎತ್ತಿಹೇಳಿದ ವಿಷಯವಾಗಿರಬಹುದು ಇಲ್ಲವೆ ಆ ವ್ಯಕ್ತಿಯು ಪ್ರಸ್ತಾಪಿಸಿದ ವಿಷಯವಾಗಿರಬಹುದು.
ಇಂತಹ ಒಂದು ಸಮಸ್ಯೆಯು, ಜನರು ವೃದ್ಧರಾಗಿ ಸಾಯುವ, ಪಾತಕವು ಎಲ್ಲೆಡೆಯೂ ಹರಡುತ್ತಿರುವ ಅಥವಾ ವ್ಯಾಪಕವಾದ ಅನ್ಯಾಯವು ಕಂಡುಬರುವ ನಿಜತ್ವವಾಗಿರಬಹುದು. ಇಂತಹ ಸಮಸ್ಯೆಯಿದೆ ಎಂಬುದನ್ನು ತೋರಿಸಲು ಸವಿಸ್ತಾರವಾದ ಚರ್ಚೆಯ ಅಗತ್ಯವಿರುವುದಿಲ್ಲ, ಏಕೆಂದರೆ ಅದು ಈಗಾಗಲೇ ಸುವ್ಯಕ್ತವಾಗಿರುತ್ತದೆ. ಆದುದರಿಂದ ಕೇವಲ ಸಮಸ್ಯೆಯನ್ನು ಪ್ರಸ್ತಾಪಿಸುವುದರೊಂದಿಗೆ ಆರಂಭಿಸುವುದು ಮತ್ತು ಅದಕ್ಕೆ ಬೈಬಲಿನಲ್ಲಿ ನೀಡಲ್ಪಟ್ಟಿರುವ ಪರಿಹಾರವನ್ನು ತೋರಿಸುವುದಷ್ಟೇ ಸಾಕು.
ಇನ್ನೊಂದು ಕಡೆಯಲ್ಲಿ, ಸಮಸ್ಯೆಯು ವ್ಯಕ್ತಿಪರವಾದುದಾಗಿರಬಹುದು; ಅಂದರೆ ಒಂಟಿಹೆತ್ತವರು ಎದುರಿಸುವ ಪಂಥಾಹ್ವಾನಗಳು, ಗಂಭೀರವಾದ ಕಾಯಿಲೆಯ ಕಾರಣ ನಿರುತ್ತೇಜನ, ಇಲ್ಲವೆ ಒಬ್ಬ ವ್ಯಕ್ತಿಯ ದುರುಪಚಾರದ ಕಾರಣ ಇನ್ನೊಬ್ಬನು ಅನುಭವಿಸುತ್ತಿರುವ ಕಷ್ಟದಂಥ ಸಮಸ್ಯೆಗಳನ್ನು ಒಳಗೊಂಡಿರಬಹುದು. ಆಗ ಹೆಚ್ಚಿನ ಒಳಿತನ್ನು ಸಾಧಿಸಬೇಕಾದರೆ ನೀವು ಪ್ರಥಮವಾಗಿ ಉತ್ತಮವಾಗಿ ಕಿವಿಗೊಡುವವರಾಗಿರಬೇಕು. ಈ ಎಲ್ಲ ಸಮಸ್ಯೆಗಳಿಗೆ ಬೈಬಲು ಬೆಲೆಬಾಳುವ ಮಾಹಿತಿಯನ್ನು ಒದಗಿಸುತ್ತದೆ. ಆದರೆ ಅದನ್ನು ವಿವೇಚನೆಯಿಂದ ಉಪಯೋಗಿಸುವ ಅಗತ್ಯವಿದೆ. ನಿಮ್ಮ ಚರ್ಚೆಯು ಆ ವ್ಯಕ್ತಿಗೆ ನಿಜವಾದ ಪ್ರಯೋಜನವನ್ನು ತರಬೇಕಾದರೆ, ನೀವು ವಾಸ್ತವಿಕ ನೋಟವುಳ್ಳವರಾಗಿರಬೇಕು. ನೀವು ಚರ್ಚಿಸುತ್ತಿರುವುದು ಶಾಶ್ವತ ಪರಿಹಾರವನ್ನೊ, ಅಲ್ಪಾವಧಿಯ ಉಪಶಮನವನ್ನೊ ಅಥವಾ ಈ ವಿಷಯಗಳ ವ್ಯವಸ್ಥೆಯಲ್ಲಿ ಬದಲಾವಣೆ ಹೊಂದದಿರುವಂಥ ಒಂದು ಸನ್ನಿವೇಶವನ್ನು ನಿಭಾಯಿಸುವ ವಿಧವನ್ನೊ ಎಂಬುದನ್ನು ಸ್ಪಷ್ಟಪಡಿಸಿರಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನೀವು ಪ್ರಸ್ತುತಪಡಿಸುತ್ತಿರುವ ಶಾಸ್ತ್ರೀಯ ತರ್ಕಸರಣಿಯು, ನೀವು ಅದರಿಂದ ಬರಮಾಡುವ ತೀರ್ಮಾನವನ್ನು ಬೆಂಬಲಿಸಲು ಸಮರ್ಥವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಹಾಗಿಲ್ಲದಿರುವಲ್ಲಿ, ನೀವು ಸೂಚಿಸುವ ಪರಿಹಾರವು ಖಂಡಿತವಾಗಿಯೂ ಆ ವ್ಯಕ್ತಿಗೆ ತರ್ಕಬದ್ಧವಾಗಿ ಕಂಡುಬರದು.
ಕಾಲಗಣನಾತ್ಮಕ ಕ್ರಮ. ಭಾಷಣದ ಕೆಲವು ವಿಷಯಭಾಗಗಳು ಕಾಲಗಣನಾತ್ಮಕ ರೀತಿಯಲ್ಲಿ ನೀಡಲು ಅನುಕೂಲಕರವಾಗಿರುತ್ತವೆ. ಉದಾಹರಣೆಗೆ, ವಿಮೋಚನಕಾಂಡ ಪುಸ್ತಕದಲ್ಲಿ ತಿಳಿಸಲಾಗಿರುವ ಹತ್ತು ಬಾಧೆಗಳು ಅವು ಸಂಭವಿಸಿದ ಕ್ರಮಕ್ಕನುಸಾರ ಕೊಡಲ್ಪಟ್ಟಿವೆ. ಇಬ್ರಿಯ 11ನೆಯ ಅಧ್ಯಾಯದಲ್ಲಿ, ಅಪೊಸ್ತಲ ಪೌಲನು ಆದರ್ಶಪ್ರಾಯರಾದ ನಂಬಿಗಸ್ತ ಸ್ತ್ರೀಪುರುಷರನ್ನು ಕಾಲಗಣನಾತ್ಮಕ ಕ್ರಮದಲ್ಲಿ ಪಟ್ಟಿಮಾಡಿದನು.
ನೀವು ಗತ ಘಟನೆಗಳನ್ನು ಕಾಲಗಣನಾತ್ಮಕ ಕ್ರಮದಲ್ಲಿ ಹೇಳುವಲ್ಲಿ, ನಿರ್ದಿಷ್ಟ ಪರಿಸ್ಥಿತಿಗಳು ಹೇಗೆ ಬೆಳೆದುಬಂದವೆಂಬುದನ್ನು ನಿಮ್ಮ ಸಭಿಕರು ಅರ್ಥಮಾಡಿಕೊಳ್ಳುವಂತೆ ಇದು ಸಹಾಯಮಾಡಬಹುದು. ಇದು ಆಧುನಿಕ ಇತಿಹಾಸದಂತೆಯೇ ಬೈಬಲ್ ಕಾಲಗಳ ಘಟನೆಗಳಿಗೂ ಅನ್ವಯಿಸುತ್ತದೆ. ಹೀಗೆ ನೀವು ಕಾಲಗಣನಾತ್ಮಕ ಕ್ರಮವನ್ನು ಕಾರ್ಯಕಾರಣ ಭಾವ ತರ್ಕಕ್ರಮದೊಂದಿಗೆ ಸಂಯೋಜಿಸಬಹುದು. ಭವಿಷ್ಯತ್ತಿನಲ್ಲಿ ನಡೆಯಲಿವೆಯೆಂದು ಬೈಬಲ್ ಹೇಳುವ ಘಟನೆಗಳನ್ನು ನೀವು ವಿವರಿಸಲು ಯೋಜಿಸುವಲ್ಲಿ, ಅವನ್ನು ಕಾಲಗಣನಾತ್ಮಕ ರೀತಿಯಲ್ಲಿ ಹೇಳುವುದು, ನಿಮ್ಮ ಸಭಿಕರು ಅನುಸರಿಸಲು ಮತ್ತು ಜ್ಞಾಪಿಸಿಕೊಳ್ಳಲು ಪ್ರಾಯಶಃ ಅತಿ ಸುಲಭವಾಗಿರುವ ರೀತಿಯಾಗಿರುವುದು.
ಕಾಲಗಣನಾತ್ಮಕ ರೀತಿಯನ್ನು ಉಪಯೋಗಿಸುವುದೆಂದರೆ, ನೀವು ಸದಾ ಆರಂಭದಿಂದಲೇ ಪ್ರಾರಂಭಿಸಬೇಕೆಂದು ಅದರ ಅರ್ಥವಲ್ಲ. ಕೆಲವು ಸಂದರ್ಭಗಳಲ್ಲಿ, ಕಥೆಯ ಗಮನಾರ್ಹ ಹಂತದಲ್ಲಿ ಒಂದು ವೃತ್ತಾಂತವನ್ನು ಪರಿಚಯ ಮಾಡಿಸುವುದು ಹೆಚ್ಚು ಪರಿಣಾಮಕಾರಿಯಾಗಿರಬಹುದು. ಉದಾಹರಣೆಗೆ, ಒಂದು ಅನುಭವವನ್ನು ಹೇಳುವಾಗ, ದೇವರ ಕಡೆಗಿನ ಒಬ್ಬನ ಸಮಗ್ರತೆಯು ಪರೀಕ್ಷಿಸಲ್ಪಟ್ಟ ಸಮಯದ ಕುರಿತು ಹೇಳಲು ನೀವು ನಿರ್ಣಯಿಸಬಹುದು. ವೃತ್ತಾಂತದ ಆ ಭಾಗದಲ್ಲಿ ಈಗ ನೀವು ಆಸಕ್ತಿಯನ್ನು ಕೆರಳಿಸಿರುವುದರಿಂದ, ಅದಕ್ಕೆ ನಡೆಸಿದಂಥ ವಿವರಗಳನ್ನು ಕಾಲಗಣನಾತ್ಮಕ ಕ್ರಮದಲ್ಲಿ ನೀವು ಹೇಳಸಾಧ್ಯವಿದೆ.
ಸಂಬಂಧಪಟ್ಟ ವಿಷಯಗಳನ್ನು ಮಾತ್ರ ಉಪಯೋಗಿಸುವುದು. ನೀವು ನಿಮ್ಮ ವಿಷಯಭಾಗವನ್ನು ಹೇಗೆ ಸಂಘಟಿಸಿದರೂ, ಸಂಬಂಧಪಟ್ಟಿರುವ ವಿಷಯಗಳನ್ನು ಮಾತ್ರ ಉಪಯೋಗಿಸುವಂತೆ ಜಾಗರೂಕತೆ ವಹಿಸಿರಿ. ನಿಮ್ಮ ಭಾಷಣದ ಮುಖ್ಯ ವಿಷಯವು, ನೀವು ಮಾಡುವ ಆಯ್ಕೆಯ ಮೇಲೆ ಪರಿಣಾಮ ಬೀರುವಂತಿರಬೇಕು. ನಿಮ್ಮ ಸಭಿಕರಲ್ಲಿ ಯಾರೆಲ್ಲ ಇದ್ದಾರೆಂಬುದನ್ನೂ ನೀವು ಪರಿಗಣಿಸಬೇಕು. ಸಭಿಕರ ಒಂದು ಗುಂಪಿಗೆ ಒಂದು ನಿರ್ದಿಷ್ಟ ಅಂಶವು ಅತ್ಯಾವಶ್ಯಕವಾಗಿರುವಾಗ, ಇನ್ನೊಂದು ಗುಂಪಿಗೆ ಅದು ಅನಾವಶ್ಯಕವಾಗಿದ್ದೀತು. ನೀವು ಶೇಖರಿಸಿರುವ ಎಲ್ಲ ವಿಷಯಭಾಗವು ನಿಮ್ಮ ಉದ್ದೇಶವನ್ನು ಸಾಧಿಸಲು ನೆರವಾಗುವುದೆಂಬ ನಿಶ್ಚಯತೆಯೂ ನಿಮಗಿರಬೇಕು. ಇಲ್ಲದಿದ್ದರೆ, ನಿಮ್ಮ ಭಾಷಣ ನೀಡುವಿಕೆಯು ಆಸಕ್ತಿಕರವಾಗಿರುವುದಾದರೂ, ಅದು ತನ್ನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಬಹುದು.
ಸಂಶೋಧನೆ ಮಾಡುವಾಗ, ನಿಮ್ಮ ವಿಷಯವಸ್ತುವಿಗೆ ಸಂಬಂಧಿಸಿರುವ ಅಧಿಕ ಪ್ರಮಾಣದ ಆಸಕ್ತಿಕರ ಮಾಹಿತಿಯನ್ನು ನೀವು ಕಂಡುಕೊಳ್ಳಬಹುದು. ಇದರಲ್ಲಿ ಎಷ್ಟನ್ನು ನೀವು ಉಪಯೋಗಿಸಬೇಕು? ನೀವು ಸಭಿಕರನ್ನು ಅತಿರೇಕ ಮಾಹಿತಿಯಿಂದ ಮುಳುಗಿಸಿಬಿಡುವಲ್ಲಿ, ನಿಮ್ಮ ಉದ್ದೇಶವನ್ನು ಸಾಧಿಸುವುದರಲ್ಲಿ ನೀವು ಸೋತುಹೋಗಬಹುದು. ಗುಂಡಿನ ಸುರಿಮಳೆಯ ರೀತಿಯಲ್ಲಿ ಹೇಳಿದ ಅನೇಕಾನೇಕ ವಿಚಾರಗಳಿಗಿಂತ, ಚೆನ್ನಾಗಿ ವಿಕಸಿಸಲ್ಪಟ್ಟಂಥ ಕೆಲವೇ ಮುಖ್ಯ ವಿಚಾರಗಳು ಹೆಚ್ಚು ಸುಲಭವಾಗಿ ನೆನಪಿನಲ್ಲಿಡಲ್ಪಡುತ್ತವೆ. ಒಂದು ವಿಷಯವಸ್ತುವಿನ ಕುರಿತಾದ ಪ್ರಾಸಂಗಿಕ ಮಾಹಿತಿಯನ್ನು ಒಳಗೂಡಿಸಲೇ ಬಾರದೆಂದು ಇದರ ಅರ್ಥವಲ್ಲ. ಆದರೆ ಅದು ನಿಮ್ಮ ಉದ್ದೇಶವನ್ನು ಮೊಬ್ಬಾಗಿಸುವಂತೆ ಬಿಡಬೇಡಿರಿ. ಬೈಬಲಿನಲ್ಲಿ ಇಂತಹ ವಿವರಗಳನ್ನು ಮಾರ್ಕ 7:3, 4 ರಲ್ಲಿ ಮತ್ತು ಯೋಹಾನ 4:1-3, 7-9 ರಲ್ಲಿ ಹೇಗೆ ಜಾಗರೂಕತೆಯಿಂದ ಒಳಗೂಡಿಸಲಾಗಿದೆಯೆಂಬುದನ್ನು ಗಮನಿಸಿರಿ.
ನೀವು ಒಂದು ಅಂಶದಿಂದ ಇನ್ನೊಂದಕ್ಕೆ ಮುಂದುವರಿಯುವಾಗ, ಸಭಿಕರು ವಿಚಾರಧಾರೆಯನ್ನು ಕಳೆದುಕೊಳ್ಳುವಂಥ ರೀತಿಯಲ್ಲಿ ಥಟ್ಟನೆ ಬೇರೆ ಅಂಶಕ್ಕೆ ಮುಂದುವರಿಯದಂತೆ ನೋಡಿಕೊಳ್ಳಿರಿ. ವಿಚಾರಗಳು ಒಟ್ಟಿಗೆ ಫಲಕಾರಿಯಾಗಿ ಕಾರ್ಯನಡಿಸಬೇಕಾದರೆ, ನೀವು ಒಂದು ವಿಚಾರದಿಂದ ಇನ್ನೊಂದಕ್ಕೆ ಹೋಗುವಾಗ ಒಂದು ಸೇತುವೆಯನ್ನು ಒದಗಿಸಬೇಕಾಗಬಹುದು. ಅದು ವಿಚಾರಗಳ ಮಧ್ಯೆ ಇರುವ ಸಂಬಂಧವನ್ನು ಸೂಚಿಸುವ ಒಂದು ವಾಕ್ಯಾಂಗವಾಗಿರಬಹುದು ಅಥವಾ ಒಂದು ಪೂರ್ಣ ವಾಕ್ಯವಾಗಿರಬಹುದು. ಅನೇಕ ಭಾಷೆಗಳಲ್ಲಿ, ಹೊಸ ವಿಚಾರಕ್ಕೆ ಹಿಂದಿನ ವಿಚಾರದೊಂದಿಗಿರುವ ಸಂಬಂಧವನ್ನು ಸೂಚಿಸಲಿಕ್ಕಾಗಿ ಸರಳವಾದ ಜೋಡಣೆಯ ಪದಗಳನ್ನು ಅಥವಾ ಪದಗುಚ್ಛಗಳನ್ನು ಉಪಯೋಗಿಸಸಾಧ್ಯವಿದೆ.
ಸಂಬಂಧಪಟ್ಟ ವಿಷಯಭಾಗವನ್ನು ಮಾತ್ರ ಉಪಯೋಗಿಸುತ್ತ, ಅದನ್ನು ತರ್ಕಬದ್ಧವಾದ ಕ್ರಮದಲ್ಲಿ ಏರ್ಪಡಿಸುವುದು, ನೀವು ನಿಮ್ಮ ಉದ್ದೇಶವನ್ನು ಸಾಧಿಸುವಂತೆ ಸಹಾಯಮಾಡುವುದು.