ಸಭೆಯು ಯೆಹೋವನನ್ನು ಸ್ತುತಿಸಲಿ
“ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿಪದಗಳನ್ನು ಹಾಡುವೆನು.”—ಇಬ್ರಿಯ 2:12.
ಇತಿಹಾಸದ ಉದ್ದಕ್ಕೂ ಜನರು ಕುಟುಂಬವೆಂಬ ಮೂಲ ಘಟಕದಲ್ಲಿ ಸಾಹಚರ್ಯವನ್ನೂ ಭದ್ರತೆಯನ್ನೂ ಕಂಡುಕೊಂಡಿದ್ದಾರೆ. ಆದರೂ, ಇಂದು ಲೋಕಾದ್ಯಂತವಿರುವ ಅಸಂಖ್ಯಾತ ಜನರು ವಿಶೇಷ ಒಡನಾಟ ಮತ್ತು ಭದ್ರತೆಯಲ್ಲಿ ಆನಂದಿಸುವ ಇನ್ನೊಂದು ಘಟಕವನ್ನು ಬೈಬಲ್ ಗುರುತಿಸುತ್ತದೆ. ಅದು ಕ್ರೈಸ್ತ ಸಭೆಯೇ. ನೀವು ಆಪ್ತತೆ ಮತ್ತು ಬೆಂಬಲನೀಡುವ ಒಂದು ಕುಟುಂಬದ ಭಾಗವಾಗಿರ್ರಿ ಇಲ್ಲದಿರ್ರಿ ದೇವರು ಸಭಾ ಏರ್ಪಾಡಿನ ಮೂಲಕ ಒದಗಿಸಿರುವ ಈ ವಿಷಯಕ್ಕೆ ಕೃತಜ್ಞತೆ ತೋರಿಸಬಲ್ಲಿರಿ ಮತ್ತು ತೋರಿಸಬೇಕು. ಹೌದು, ಯೆಹೋವನ ಸಾಕ್ಷಿಗಳ ಸಭೆಯೊಂದಿಗೆ ನೀವು ಈಗಾಗಲೇ ಜೊತೆಗೂಡಿರುವಲ್ಲಿ ಅಲ್ಲಿನ ಉತ್ತೇಜಕ ಸಹವಾಸ ಮತ್ತು ಸುರಕ್ಷೆಗೆ ಸಾಕ್ಷ್ಯ ನೀಡಬಲ್ಲಿರಿ.
2 ಈ ಸಭೆ ಕೇವಲ ಒಂದು ಸಾಮಾಜಿಕ ಗುಂಪಲ್ಲ. ಸಮಾನ ಹಿನ್ನೆಲೆ ಅಥವಾ ಕ್ರೀಡೆ, ಹವ್ಯಾಸಗಳಲ್ಲಿ ಸಮಾನಾಭಿರುಚಿಗಳುಳ್ಳ ಜನರು ಕೂಡಿಬರುವ ಸಮಾಜ ಸಂಘ ಇಲ್ಲವೆ ಕ್ಲಬ್ ಸಹ ಆಗಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಈ ಸಭಾ ಏರ್ಪಾಡು ಪ್ರಧಾನವಾಗಿ ಯೆಹೋವ ದೇವರ ಸ್ತುತಿಗಾಗಿ ಇದೆ. ಕೀರ್ತನೆಗಳ ಪುಸ್ತಕವು ಒತ್ತಿಹೇಳುವಂತೆ ಇದು ದೀರ್ಘಕಾಲದಿಂದಲೂ ನಿಜವಾಗಿದೆ. ಕೀರ್ತನೆ 35:18ರಲ್ಲಿ ನಾವು ಓದುವುದು: “ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.” ಇದೇ ರೀತಿಯಲ್ಲಿ ಕೀರ್ತನೆ 107:31, 32 ನಮ್ಮನ್ನು ಪ್ರೋತ್ಸಾಹಿಸುವುದು: “ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ. ನೆರೆದ ಸಭೆಯಲ್ಲಿ ಆತನನ್ನು ಕೀರ್ತಿಸಲಿ.”
3 ಸಭೆಯ ಇನ್ನೊಂದು ಆವಶ್ಯಕ ಪಾತ್ರವನ್ನು ಕ್ರೈಸ್ತ ಅಪೊಸ್ತಲ ಪೌಲನು ಎತ್ತಿ ತೋರಿಸಿದನು. ಅವನು ಹೇಳಿದ್ದು; ‘ದೇವರ ಮನೆ [“ಕುಟುಂಬ,” NW] ಅಂದರೆ ಜೀವಸ್ವರೂಪನಾದ ದೇವರ ಸಭೆ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ.’ (1 ತಿಮೊಥೆಯ 3:15) ಇಲ್ಲಿ ಪೌಲನು ಯಾವ ಸಭೆಯ ಬಗ್ಗೆ ಮಾತಾಡುತ್ತಿದ್ದನು? ಬೈಬಲ್ “ಸಭೆ” ಎಂಬ ಪದವನ್ನು ಯಾವ ವಿಧಗಳಲ್ಲಿ ಬಳಸುತ್ತದೆ? ಇದು ನಮ್ಮ ಜೀವನ ಮತ್ತು ಪ್ರತೀಕ್ಷೆಗಳನ್ನು ಹೇಗೆ ಪ್ರಭಾವಿಸಬೇಕು? ಇದಕ್ಕೆ ಉತ್ತರವನ್ನು ಪಡೆದುಕೊಳ್ಳಲು ನಾವು ಮೊದಲಾಗಿ ದೇವರ ವಾಕ್ಯದಲ್ಲಿ “ಸಭೆ” ಎಂಬ ಪದವನ್ನು ಯಾವ ವಿಭಿನ್ನ ಅರ್ಥಗಳಲ್ಲಿ ಉಪಯೋಗಿಸಲಾಗಿದೆ ಎಂಬುದನ್ನು ಪರೀಕ್ಷಿಸೋಣ.
4 “ಸಭೆ” ಎಂಬುದಾಗಿ ಅನೇಕವೇಳೆ ಅನುವಾದ ಮಾಡಲಾಗಿರುವ ಹೀಬ್ರು ಪದದ ಮೂಲಾರ್ಥ “ಒಟ್ಟುಗೂಡಿಸು” ಅಥವಾ “ಕೂಡಿಸು” ಆಗಿದೆ. (ಧರ್ಮೋಪದೇಶಕಾಂಡ 4:10; 9:10) ಕೀರ್ತನೆಗಾರನು ಸ್ವರ್ಗದ ದೇವದೂತರ ಸಂಬಂಧದಲ್ಲಿ ಮಾತಾಡುವಾಗ “ಸಭೆ” ಎಂದು ಬಳಸಿದನು. ಇದನ್ನು ದುರ್ಜನರ ಗುಂಪಿನ ವಿಷಯದಲ್ಲಿಯೂ ಉಪಯೋಗಿಸಸಾಧ್ಯವಿದೆ. (ಕೀರ್ತನೆ 26:5; 89:5-7) ಆದರೂ, ಹೀಬ್ರು ಶಾಸ್ತ್ರಗಳು ಇದನ್ನು ಅತಿ ಹೆಚ್ಚಾಗಿ ಇಸ್ರಾಯೇಲ್ಯರ ಸಂಬಂಧದಲ್ಲಿ ಉಪಯೋಗಿಸುತ್ತವೆ. ಯಾಕೋಬಿನಿಂದ “ಜನಾಂಗಗಳು” ಉಂಟಾಗುವುವು ಅಥವಾ ಮೂಲ ಹೀಬ್ರು ಭಾಷೆಯಲ್ಲಿ ತಿಳಿಸುವಂತೆ ಅವನು “ಜನಗಳ ಸಭೆ” ಆಗುವನೆಂದು ದೇವರು ಸೂಚಿಸಿದನು ಮತ್ತು ಹಾಗೆಯೇ ಆಯಿತು. (ಆದಿಕಾಂಡ 28:3; 35:11; 48:4) ಇಸ್ರಾಯೇಲ್ಯರು “ಯೆಹೋವನ ಸಭೆ,” “[ಸತ್ಯ] ದೇವರ ಸಭೆ” ಆಗಿ ಕರೆಯಲ್ಪಟ್ಟಿದ್ದರು ಅಥವಾ ಆರಿಸಲ್ಪಟ್ಟಿದ್ದರು.—ಅರಣ್ಯಕಾಂಡ 20:4; ನೆಹೆಮೀಯ 13:1; ಯೆಹೋಶುವ 8:35; 1 ಸಮುವೇಲ 17:47; ಮೀಕ 2:5.
5 ಇದಕ್ಕೆ ಅನುರೂಪವಾದ ಗ್ರೀಕ್ ಪದವು, “ಹೊರಗೆ” ಮತ್ತು “ಕರೆ” ಎಂಬ ಅರ್ಥವುಳ್ಳ ಎರಡು ಗ್ರೀಕ್ ಶಬ್ದಗಳಿಂದ ಬಂದಿರುವ ಎಕ್ಲೀಸಿಯ ಆಗಿದೆ. ಇದನ್ನು ಎಫೆಸದಲ್ಲಿ ದೇಮೇತ್ರಿಯನು ಪೌಲನ ವಿರುದ್ಧ ಎಬ್ಬಿಸಿದ “ಸಭೆ”ಯಂಥ ಅಧಾರ್ಮಿಕ ಗುಂಪುಗಳಿಗೂ ಅನ್ವಯಿಸಸಾಧ್ಯವಿದೆ. (ಅ. ಕೃತ್ಯಗಳು 19:32, 39, 41) ಆದರೆ ಬೈಬಲ್ ಸಾಮಾನ್ಯವಾಗಿ ಕ್ರೈಸ್ತ ಸಭೆಯ ಸಂಬಂಧದಲ್ಲಿ ಇದನ್ನು ಬಳಸುತ್ತದೆ. ಕೆಲವು ಭಾಷಾಂತರಗಳು ಈ ಪದವನ್ನು “ಚರ್ಚ್” ಎಂಬುದಾಗಿ ಉಪಯೋಗಿಸುತ್ತವಾದರೂ, ದಿ ಇಂಪೀರಿಯಲ್ ಬೈಬಲ್ ಡಿಕ್ಷನೆರಿ ಹೇಳಿಕೆಯ ಪ್ರಕಾರ, “ಇದು ಕ್ರೈಸ್ತರು ಸಾರ್ವಜನಿಕ ಆರಾಧನೆಗಾಗಿ ಕೂಡಿಬರುವ ಕಟ್ಟಡವನ್ನು ಸೂಚಿಸುವುದೇ ಇಲ್ಲ.” ಆದರೂ ಆಸಕ್ತಿಕರವಾಗಿ, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ “ಸಭೆ” ಎಂಬ ಪದವು ಕಡಿಮೆಪಕ್ಷ ನಾಲ್ಕು ವಿಭಿನ್ನ ವಿಧಗಳಲ್ಲಿ ಅನ್ವಯಿಸಲ್ಪಟ್ಟಿರುವುದನ್ನು ನಾವು ನೋಡುತ್ತೇವೆ.
ದೇವರ ಅಭಿಷಿಕ್ತ ಸಭೆ
6 ಕೀರ್ತನೆ 22:22ರಲ್ಲಿ ಕಂಡುಬರುವ ದಾವೀದನ ಮಾತುಗಳನ್ನು ಯೇಸುವಿಗೆ ಅನ್ವಯಿಸುತ್ತ ಅಪೊಸ್ತಲ ಪೌಲನು ಬರೆದುದು: “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿಪದಗಳನ್ನು ಹಾಡುವೆನು. . . . ಆದದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣಮಾಡುವದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು.” (ಇಬ್ರಿಯ 2:12, 17) ದಾವೀದನು ಪೂರ್ವಕಾಲದ ಇಸ್ರಾಯೇಲ್ ಸಭೆಯ ಮಧ್ಯದಲ್ಲಿ ದೇವರನ್ನು ಸ್ತುತಿಸಿದ್ದನು. (ಕೀರ್ತನೆ 40:9) ಆದರೂ, ಯೇಸು “ಸಭಾಮಧ್ಯದಲ್ಲಿ” ದೇವರನ್ನು ಸ್ತುತಿಸಿದನೆಂದು ಪೌಲನು ಹೇಳಿದಾಗ ಏನನ್ನು ಸೂಚಿಸಿದನು? ಇದು ಯಾವ ಸಭೆ?
7 ನಾವು ಇಬ್ರಿಯ 2:12, 17ರಲ್ಲಿ ಓದುವ ವಿಷಯವು ಗಮನಾರ್ಹ. ಕ್ರಿಸ್ತನು ಒಂದು ಸಭೆಯ ಸದಸ್ಯನಾಗಿದ್ದು, ಅಲ್ಲಿ ಅವನು ತನ್ನ ಸಹೋದರರಿಗೆ ದೇವರ ನಾಮವನ್ನು ಪ್ರಕಟಿಸಿದನೆಂದು ಇದು ತೋರಿಸುತ್ತದೆ. ಆ ಸಹೋದರರು ಯಾರಾಗಿದ್ದರು? “ಅಬ್ರಹಾಮನ ಸಂತತಿಯ” ಭಾಗವಾಗಿದ್ದು “ಪರಲೋಕಸ್ವಾಸ್ಥ್ಯಕ್ಕಾಗಿ . . . ಕರೆಯಲ್ಪಟ್ಟ” ಕ್ರಿಸ್ತನ ಅಭಿಷಿಕ್ತ ಸಹೋದರರೇ ಅವರಾಗಿದ್ದರು. (ಇಬ್ರಿಯ 2:16–3:1; ಮತ್ತಾಯ 25:40) ಹೌದು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ “ಸಭೆ” ಎಂಬುದರ ಪ್ರಧಾನಾರ್ಥವು ಕ್ರಿಸ್ತನ ಆತ್ಮಾಭಿಷಿಕ್ತ ಅನುಯಾಯಿಗಳ ಸಂಘಟಿತ ಗುಂಪು ಎಂದಾಗಿದೆ. ಈ 1,44,000 ಮಂದಿ ಅಭಿಷಿಕ್ತರು “ಪರಲೋಕದಲ್ಲಿ ಹೆಸರು ಬರಸಿಕೊಂಡಿರುವ ಚೊಚ್ಚಲಮಕ್ಕಳ ಸಭೆ”ಯಾಗಿ ರಚಿಸಲ್ಪಡುತ್ತಾರೆ.—ಇಬ್ರಿಯ 12:23.
8 ಈ ಕ್ರೈಸ್ತ ‘ಸಭೆಯು’ ಮುಂದಕ್ಕೆ ರಚಿಸಲ್ಪಡುವುದೆಂದು ಯೇಸು ಸೂಚಿಸಿದನು. ತನ್ನ ಮರಣಕ್ಕೆ ಸುಮಾರು ಒಂದು ವರ್ಷಕ್ಕೆ ಮುನ್ನ ಅವನು ಒಬ್ಬ ಅಪೊಸ್ತಲನಿಗೆ ಹೇಳಿದ್ದು: “ನೀನು ಪೇತ್ರನು, ಈ ಬಂಡೆಯ [“ಭಾರಿಬಂಡೆ,” NW] ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳಲೋಕದ [“ಹೇಡೀಸ್ನ ದ್ವಾರಗಳ,” NW] ಬಲವು ಅದನ್ನು ಸೋಲಿಸಲಾರದು.” (ಮತ್ತಾಯ 16:18) ಈ ಮುಂತಿಳಿಸಲ್ಪಟ್ಟ ಭಾರಿಬಂಡೆ ಯೇಸು ತಾನೇ ಆಗಿದ್ದನೆಂಬುದನ್ನು ಪೇತ್ರನೂ ಪೌಲನೂ ಸರಿಯಾಗಿ ಅರ್ಥಮಾಡಿಕೊಂಡಿದ್ದರು. ಕ್ರಿಸ್ತನೆಂಬ ಭಾರಿಬಂಡೆಯ ಮೇಲಿರುವ ಆಧ್ಯಾತ್ಮಿಕ ಆಲಯದ ‘ಜೀವವುಳ್ಳ ಕಲ್ಲುಗಳು’ ಯಾರೆಂದರೆ ಅವರನ್ನು ಕರೆದಾತನ “ಗುಣಾತಿಶಯಗಳನ್ನು ಪ್ರಚಾರಮಾಡುವ . . . ದೇವರ ಸ್ವಕೀಯ ಪ್ರಜೆ [“ವಿಶೇಷ ಒಡೆತನಕ್ಕಾಗಿರುವ ಜನ,” NW]” ಆಗಿದ್ದರೆಂದು ಪೇತ್ರನು ಬರೆದನು.—1 ಪೇತ್ರ 2:4-9; ಕೀರ್ತನೆ 118:22; ಯೆಶಾಯ 8:14; 1 ಕೊರಿಂಥ 10:1-4.
9 ಈ ‘ವಿಶೇಷ ಒಡೆತನಕ್ಕಾಗಿರುವ ಜನರು’ ಕ್ರೈಸ್ತ ಸಭೆಯಾಗಿ ರಚಿಸಲ್ಪಡಲು ಆರಂಭಿಸಿದ್ದು ಯಾವಾಗ? ಸಾ.ಶ. 33ರ ಪಂಚಾಶತ್ತಮದಂದು ಯೆರೂಸಲೇಮಿನಲ್ಲಿ ನೆರೆದು ಬಂದಿದ್ದ ಶಿಷ್ಯರ ಮೇಲೆ ದೇವರು ಪವಿತ್ರಾತ್ಮವನ್ನು ಸುರಿಸಿದಾಗಲೇ. ತರುವಾಯ ಅದೇ ದಿನ ಪೇತ್ರನು ಯೆಹೂದ್ಯರ ಮತ್ತು ಯೆಹೂದಿ ಮತಾವಲಂಬಿಗಳ ಒಂದು ಗುಂಪಿಗೆ ಮನಮುಟ್ಟುವ ಭಾಷಣವೊಂದನ್ನು ಕೊಟ್ಟನು. ಆಗ ಯೇಸುವಿನ ಮರಣದ ಬಗ್ಗೆ ಕೇಳಿಸಿಕೊಂಡ ಅನೇಕರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ಪಡೆದುಕೊಂಡರು. ಬೈಬಲ್ ವರದಿಗನುಸಾರ ಮೂರು ಸಾವಿರ ಮಂದಿ ದೀಕ್ಷಾಸ್ನಾನ ಪಡೆದರೆಂದು ನಾವು ತಿಳಿಯುತ್ತೇವೆ. ಇದು ಸಂಭವಿಸಿದೊಡನೆ ಅವರು ಹೊಸತಾದ ಮತ್ತು ಬೆಳೆಯುತ್ತಿರುವ ದೇವರ ಸಭೆಯ ಭಾಗವಾದರು. (ಅ. ಕೃತ್ಯಗಳು 2:1-4, 14, 37-47) ಅದರ ವೃದ್ಧಿಗೆ ಕಾರಣವೇನೆಂದರೆ, ಮಾಂಸಿಕ ಇಸ್ರಾಯೇಲ್ಯರು ಇನ್ನು ಮುಂದೆ ದೇವರ ಸಭೆಯಾಗಿರುವುದಿಲ್ಲ ಎಂಬ ನಿಜತ್ವವನ್ನು ಹೆಚ್ಚೆಚ್ಚು ಮಂದಿ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ಒಪ್ಪಿಕೊಂಡದ್ದೇ. ಹೀಗೆ, ಮಾಂಸಿಕ ಇಸ್ರಾಯೇಲ್ಯರಿಗೆ ಬದಲಾಗಿ ಆಧ್ಯಾತ್ಮಿಕವಾದ “ದೇವರ ಇಸ್ರಾಯೇಲ್ಯ” ಸಭೆಯನ್ನು ರಚಿಸಿದ ಅಭಿಷಿಕ್ತ ಕ್ರೈಸ್ತರು ದೇವರ ನಿಜ ಸಭೆಯಾಗಿ ಪರಿಣಮಿಸಿದರು.—ಗಲಾತ್ಯ 6:16; ಅ. ಕೃತ್ಯಗಳು 20:28.
10 ಬೈಬಲ್ ಅನೇಕ ಬಾರಿ “ಕ್ರಿಸ್ತನಿಗೆ ಮತ್ತು ಸಭೆಗೆ” ಎಂಬಂಥ ವಾಕ್ಯಾಂಗವನ್ನು ಉಪಯೋಗಿಸುತ್ತ ಯೇಸು ಮತ್ತು ಅಭಿಷಿಕ್ತರ ಮಧ್ಯೆ ಇರುವ ಪ್ರತ್ಯೇಕತೆಯನ್ನು ಸೂಚಿಸುತ್ತದೆ. ಯೇಸು ಈ ಆತ್ಮಾಭಿಷಿಕ್ತ ಕ್ರೈಸ್ತರ ಸಭೆಯ ಶಿರಸ್ಸಾಗಿದ್ದಾನೆ. ದೇವರು “[ಯೇಸುವನ್ನು] ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು. ಸಭೆಯು ಆತನ ದೇಹವಾಗಿದೆ” ಎಂದು ಪೌಲನು ಬರೆದನು. (ಎಫೆಸ 1:22, 23; 5:23, 32, NW; ಕೊಲೊಸ್ಸೆ 1:18, 24) ಇಂದು ಭೂಮಿಯ ಮೇಲೆ ಈ ಸಭೆಯ ಅಭಿಷಿಕ್ತ ಸಹೋದರರಲ್ಲಿ ಕೇವಲ ಒಂದು ಚಿಕ್ಕ ಜನಶೇಷ ಮಾತ್ರ ಉಳಿದಿದೆ. ಆದರೂ, ಅವರ ಶಿರಸ್ಸಾದ ಯೇಸು ಕ್ರಿಸ್ತನು ಅವರನ್ನು ಪ್ರೀತಿಸುತ್ತಾನೆಂಬ ಭರವಸೆ ನಮಗಿರಬಲ್ಲದು. ಅವರ ಕಡೆಗೆ ಅವನಿಗಿರುವ ಅನಿಸಿಕೆಯು ಎಫೆಸ 5:25, 26ರಲ್ಲಿ ಹೀಗೆ ವರ್ಣಿಸಲ್ಪಟ್ಟಿದೆ: “ಕ್ರಿಸ್ತನು ಸಭೆಯನ್ನು ಪ್ರೀತಿಸಿ . . . ತನ್ನನ್ನು ಒಪ್ಪಿಸಿಕೊಟ್ಟನು.” ಯೇಸು ಅವರನ್ನು ಪ್ರೀತಿಸುವುದು ಯಾಕೆಂದರೆ ತಾನು ಭೂಮಿಯಲ್ಲಿದ್ದಾಗ ಮಾಡಿದಂತೆಯೇ ಅವರು ದೇವರಿಗೆ “ಸ್ತುತಿಯಜ್ಞವನ್ನು ಅಂದರೆ ಆತನ ಹೆಸರಿಗೆ ಬಹಿರಂಗ ಘೋಷಣೆಯನ್ನು ಮಾಡುವ ತುಟಿಗಳ ಫಲ”ವನ್ನು ಅರ್ಪಿಸುವುದರಲ್ಲಿ ಕಾರ್ಯಮಗ್ನರಾಗಿರುವುದರಿಂದಲೇ.—ಇಬ್ರಿಯ 13:15, NW.
“ಸಭೆ”—ಬೇರೆ ಅರ್ಥಗಳಲ್ಲಿ
11 ಬೈಬಲ್ ಕೆಲವೊಮ್ಮೆ “ಸಭೆ” ಎಂಬ ಪದವನ್ನು ಹೆಚ್ಚು ಸೀಮಿತ ಅಥವಾ ಪ್ರತ್ಯೇಕವಾದ ಅರ್ಥದಲ್ಲಿ ಬಳಸುತ್ತದೆ. ಅಂದರೆ, “ದೇವರ ಸಭೆ”ಯಾಗಿರುವ 1,44,000 ಮಂದಿ ಅಭಿಷಿಕ್ತರ ಇಡೀ ಗುಂಪಿಗೆ ಅದು ಅನ್ವಯಿಸುವುದಿಲ್ಲ. ಉದಾಹರಣೆಗೆ, ಪೌಲನು ಕ್ರೈಸ್ತರ ಒಂದು ಗುಂಪಿಗೆ ಬರೆದುದು: “ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.” (1 ಕೊರಿಂಥ 10:32) ಪೂರ್ವಕಾಲದ ಕೊರಿಂಥದ ಕ್ರೈಸ್ತನೊಬ್ಬನು ಅಸಭ್ಯವಾಗಿ ವರ್ತಿಸಿದ್ದಲ್ಲಿ, ಅದು ಕೆಲವರಿಗೆ ವಿಘ್ನವಾಗಿರಬಹುದಿತ್ತು ಎಂಬುದು ವ್ಯಕ್ತ. ಆದರೆ, ಆ ಅಸಭ್ಯ ವರ್ತನೆಯು ಅಂದಿನಿಂದ ಇಂದಿನ ವರೆಗಿರುವ ಎಲ್ಲ ಗ್ರೀಕರಿಗೆ, ಎಲ್ಲ ಯೆಹೂದ್ಯರಿಗೆ ಇಲ್ಲವೆ ಎಲ್ಲ ಅಭಿಷಿಕ್ತರಿಗೆ ವಿಘ್ನವಾಗಿರಲಿಕ್ಕಿತ್ತೋ? ನಿಶ್ಚಯವಾಗಿಯೂ ಇಲ್ಲ. ಆದಕಾರಣ, ಈ ವಚನದಲ್ಲಿ “ದೇವರ ಸಭೆ” ಎಂಬುದು ಒಂದು ನಿರ್ದಿಷ್ಟ ಸಮಯದಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಅನ್ವಯಿಸುವಂತೆ ತೋರುತ್ತದೆ. ಇದಕ್ಕನುಸಾರ, ಸಭೆಯನ್ನು ದೇವರು ಮಾರ್ಗದರ್ಶಿಸುತ್ತಾನೆ, ಬೆಂಬಲಿಸುತ್ತಾನೆ ಅಥವಾ ಆಶೀರ್ವದಿಸುತ್ತಾನೆ ಎಂದು ಹೇಳುವಾಗ ಅದು ಒಂದು ನಿರ್ದಿಷ್ಟ ಸಮಯದಲ್ಲಿ ಎಲ್ಲಿಯೇ ಜೀವಿಸುವ ಕ್ರೈಸ್ತರೆಲ್ಲರಿಗೆ ಸೂಚಿಸಬಲ್ಲದು. ಇಲ್ಲವೆ, ಇಂದು ದೇವರ ಸಭೆಯಲ್ಲಿ ಸಂತೋಷ ಮತ್ತು ಶಾಂತಿ ನೆಲಸಿದೆ ಎಂದು ಹೇಳುವಾಗ ಅದು ಇಡೀ ಕ್ರೈಸ್ತ ಸಹೋದರತ್ವದಲ್ಲಿ ನೆಲಸಿದೆ ಎಂದರ್ಥ.
12 ಬೈಬಲ್ “ಸಭೆ” ಎಂಬುದನ್ನು ಬಳಸುವ ಮೂರನೆಯ ವಿಧವು ಒಂದು ಭೌಗೋಳಿಕ ಕ್ಷೇತ್ರದಲ್ಲಿರುವ ಎಲ್ಲ ಕ್ರೈಸ್ತರಿಗೆ ಅನ್ವಯವಾಗುತ್ತದೆ. ನಾವು ಹೀಗೆ ಓದುತ್ತೇವೆ: “ಹೀಗಿರಲಾಗಿ ಯೂದಾಯ ಗಲಿಲಾಯ ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನಹೊಂದಿತು.” (ಅ. ಕೃತ್ಯಗಳು 9:31) ಆ ವಿಶಾಲ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಕ್ರೈಸ್ತ ಗುಂಪುಗಳಿದ್ದರೂ, ಯೂದಾಯ, ಗಲಿಲಾಯ ಮತ್ತು ಸಮಾರ್ಯಗಳಲ್ಲಿದ್ದ ಕ್ರೈಸ್ತರ ಗುಂಪುಗಳೆಲ್ಲವನ್ನು “ಸಭೆ”ಯಾಗಿ ಸೂಚಿಸಲಾಯಿತು. ಸಾ.ಶ. 33ರ ಪಂಚಾಶತ್ತಮದಲ್ಲಿ ಮತ್ತು ಅದಾಗಿ ಸ್ವಲ್ಪದರಲ್ಲಿ ದೀಕ್ಷಾಸ್ನಾನ ಪಡೆದವರ ಸಂಖ್ಯೆಯನ್ನು ನೋಡುವಾಗ, ಆ ಯೆರೂಸಲೇಮ್ ಕ್ಷೇತ್ರದಲ್ಲಿ ಒಂದಕ್ಕಿಂತಲೂ ಹೆಚ್ಚು ಗುಂಪುಗಳು ಕ್ರಮವಾಗಿ ಕೂಡಿಬರುತ್ತಿದ್ದಿರಬಹುದು. (ಅ. ಕೃತ್ಯಗಳು 2:41, 46, 47; 4:4; 6:1, 7) Iನೇ ಹೆರೋದ ಅಗ್ರಿಪ್ಪನು ಸಾ.ಶ. 44ರಲ್ಲಿ ಮರಣಪಡುವ ತನಕ ಯೂದಾಯವನ್ನು ಆಳಿದನು. ಕಡಮೆಪಕ್ಷ ಸಾ.ಶ. 50ರೊಳಗಾದರೂ ಯೂದಾಯದಲ್ಲಿ ಅನೇಕ ಸಭೆಗಳಿದ್ದವೆಂದು 1 ಥೆಸಲೊನೀಕ 2:14ರಿಂದ ವ್ಯಕ್ತವಾಗುತ್ತದೆ. ಹೀಗೆ, ಹೆರೋದನು “ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವದಕ್ಕೆ” ಕೈಹಾಕಿದನೆಂದು ನಾವು ಓದುವಾಗ, ಯೆರೂಸಲೇಮಿನಲ್ಲಿ ಕೂಡಿಬರುತ್ತಿದ್ದ ಒಂದಕ್ಕಿಂತ ಹೆಚ್ಚು ಸಭೆಗಳಿಗೆ ಅದು ಸೂಚಿಸುತ್ತಿದ್ದಿರಬಹುದು.—ಅ. ಕೃತ್ಯಗಳು 12:1.
13 ನಾಲ್ಕನೆಯದಾಗಿ “ಸಭೆ” ಎಂಬ ಪದದ ಇನ್ನೂ ಹೆಚ್ಚು ಸೀಮಿತವಾದ ಮತ್ತು ಸಾಮಾನ್ಯ ಉಪಯೋಗವು ಒಂದು ಮನೆಯಂಥ ಸ್ಥಳದಲ್ಲಿ ಕೂಡಿಬರುವ ಒಂದೇ ಒಂದು ಸ್ಥಳಿಕ ಸಭೆಯಲ್ಲಿರುವ ಕ್ರೈಸ್ತರನ್ನು ಸೂಚಿಸುತ್ತದೆ. ಪೌಲನು ‘ಗಲಾತ್ಯದ ಸಭೆಗಳ’ ಕುರಿತು ತಿಳಿಸಿದನು. ಆ ವಿಸ್ತಾರವಾದ ರೋಮನ್ ಪ್ರಾಂತ್ಯದಲ್ಲಿ ಅಂಥ ಒಂದಕ್ಕಿಂತ ಹೆಚ್ಚು ಸಭೆಗಳಿದ್ದವು. ಅಂತಿಯೋಕ್ಯ, ದೆರ್ಬೆ, ಲುಸ್ತ್ರ ಮತ್ತು ಇಕೋನ್ಯ ಊರುಗಳಿದ್ದ ಆ ಗಲಾತ್ಯದ ಕುರಿತು ಪೌಲನು ಎರಡು ಬಾರಿ ಬಹುವಚನದಲ್ಲಿ ‘ಸಭೆಗಳು’ ಎಂದು ಕರೆದನು. ಈ ಸ್ಥಳಿಕ ಸಭೆಗಳಲ್ಲಿ ಅರ್ಹತೆಯುಳ್ಳ ಹಿರೀಪುರುಷರನ್ನು ಅಥವಾ ಮೇಲ್ವಿಚಾರಕರನ್ನು ನೇಮಿಸಲಾಯಿತು. (1 ಕೊರಿಂಥ 16:1; ಗಲಾತ್ಯ 1:2; ಅ. ಕೃತ್ಯಗಳು 14:19-23) ಶಾಸ್ತ್ರಾಧಾರಿತವಾಗಿ ಅವೆಲ್ಲವೂ ‘ದೇವರ ಸಭೆಗಳು’ ಆಗಿದ್ದವು.—1 ಕೊರಿಂಥ 11:16; 2 ಥೆಸಲೊನೀಕ 1:4.
14 ಕೆಲವು ಸಂದರ್ಭಗಳಲ್ಲಿ, ಕ್ರೈಸ್ತ ಕೂಟಗಳ ಗುಂಪುಗಳು ಒಂದು ಖಾಸಗಿ ಮನೆಯಲ್ಲಿ ಕೂಡಿಬರುವಷ್ಟು ಚಿಕ್ಕದ್ದಾಗಿದ್ದಿರಬಹುದು. ಹಾಗಿದ್ದರೂ, ಇಂಥ ಕೆಲವು ಗುಂಪುಗಳಿಗೆ “ಸಭೆ” ಎಂಬ ಪದವನ್ನು ಉಪಯೋಗಿಸಲಾಗುತ್ತಿತ್ತು. ನಮಗೆ ತಿಳಿದಿರುವವುಗಳು ಅಕ್ವಿಲ ಮತ್ತು ಪ್ರಿಸ್ಕ, ನುಂಫ ಮತ್ತು ಫಿಲೆಮೋನನ ಮನೆಯಲ್ಲಿದ್ದ ಸಭೆಗಳು. (ರೋಮಾಪುರ 16:3-5; ಕೊಲೊಸ್ಸೆ 4:15; ಫಿಲೆಮೋನ 2) ಇದು ಇಂದಿನ ಚಿಕ್ಕ ಗಾತ್ರದ ಸ್ಥಳಿಕ ಸಭೆಗಳಿಗೆ ಮತ್ತು ಖಾಸಗಿ ಮನೆಗಳಲ್ಲಿಯೂ ಕ್ರಮವಾಗಿ ಕೂಡಿಬರುವ ಸಭೆಗಳಿಗೆ ಪ್ರೋತ್ಸಾಹದ ಮೂಲವಾಗಿರಬೇಕು. ಯೆಹೋವನು ಒಂದನೆಯ ಶತಮಾನದಲ್ಲಿ ಇಂಥ ಚಿಕ್ಕ ಸಭೆಗಳಿಗೆ ಮನ್ನಣೆ ನೀಡಿದನು. ಇಂದು ಸಹ ಆತನು ನಿಶ್ಚಯವಾಗಿ ಅಂಥ ಚಿಕ್ಕ ಸಭೆಗಳನ್ನು ಮಾನ್ಯಮಾಡಿ ತನ್ನ ಆತ್ಮದ ಮೂಲಕ ಆಶೀರ್ವದಿಸುತ್ತಾನೆ.
ಸಭೆಗಳು ಯೆಹೋವನನ್ನು ಸ್ತುತಿಸುತ್ತವೆ
15 ಕೀರ್ತನೆ 22:22ರ ನೆರವೇರಿಕೆಯಲ್ಲಿ ಯೇಸು ಸಭಾಮಧ್ಯದಲ್ಲಿ ಯೆಹೋವನನ್ನು ಸ್ತುತಿಸಿದನೆಂದು ನಾವು ಈ ಮೊದಲೇ ಗಮನಿಸಿದೆವು. (ಇಬ್ರಿಯ 2:12) ಅವನ ನಂಬಿಗಸ್ತ ಹಿಂಬಾಲಕರು ಸಹ ಹಾಗೆಯೇ ಮಾಡಬೇಕಾಗಿತ್ತು. ಪ್ರಥಮ ಶತಮಾನದಲ್ಲಿ ಸತ್ಯ ಕ್ರೈಸ್ತರು ದೇವರ ಪುತ್ರರಾಗಲು ಮತ್ತು ಹೀಗೆ ಕ್ರಿಸ್ತನ ಸಹೋದರರಾಗಲು ಪವಿತ್ರಾತ್ಮದಿಂದ ಅಭಿಷಿಕ್ತರಾದಾಗ, ಕೆಲವರಲ್ಲಿ ಆತ್ಮವು ಅಧಿಕವಾಗಿ ವಿಶೇಷ ರೀತಿಯಲ್ಲಿ ಕಾರ್ಯನಡೆಸಿತು. ಅವರಿಗೆ ಆತ್ಮದ ಅದ್ಭುತ ವರಗಳು ದೊರೆತವು. ಅಂಥ ವರಗಳ ಕೆಲವು ರುಜುವಾತುಗಳು, ಜ್ಞಾನ ಅಥವಾ ವಿವೇಕದ ವಿಶೇಷ ವಾಕ್ಶಕ್ತಿ, ವಾಸಿಮಾಡುವ ಇಲ್ಲವೆ ಪ್ರವಾದಿಸುವ ಶಕ್ತಿ ಅಥವಾ ಅರಿಯದ ಭಾಷೆಗಳಲ್ಲೂ ನುಡಿಯುವ ಸಾಮರ್ಥ್ಯವಾಗಿದ್ದವು.—1 ಕೊರಿಂಥ 12:4-11.
16 ಭಾಷಾವರದ ಬಗ್ಗೆ ಪೌಲನು ಹೇಳಿದ್ದು: “ನಾನು ಆತ್ಮದ ವರದಿಂದ ಸ್ತುತಿ ಹಾಡುವೆನು, ಮನಸ್ಸಿನಿಂದಲೂ ಸ್ತುತಿ ಹಾಡುವೆನು.” (1 ಕೊರಿಂಥ 14:15, NW) ಇತರರು ತಿಳಿವಳಿಕೆ ಪಡೆಯಬೇಕಾದರೆ ತಾನು ಹೇಳುವ ಮಾತುಗಳು ಅವರಿಗೆ ಅರ್ಥವಾಗುವುದು ಪ್ರಾಮುಖ್ಯ ಎಂದು ಪೌಲನು ಗ್ರಹಿಸಿದನು. ಪೌಲನ ಗುರಿಯು ಯೆಹೋವನನ್ನು ಸಭಾಮಧ್ಯದಲ್ಲಿ ಸ್ತುತಿಸುವುದಾಗಿತ್ತು. ಆತ್ಮದ ವರವಿದ್ದ ಇತರರನ್ನು ಅವನು ಪ್ರೋತ್ಸಾಹಿಸಿದ್ದು: “ಸಭೆಗೆ ಭಕ್ತಿವೃದ್ಧಿ ಉಂಟಾಗುವ ಹಾಗೆ ಅದಕ್ಕಿಂತಲೂ ಹೆಚ್ಚಾದದ್ದನ್ನು ಮಾಡುವದಕ್ಕೆ ಪ್ರಯತ್ನಿಸಿರಿ.” “ಸಭೆಗೆ” ಅಂದರೆ ಅವರು ಆ ವರವನ್ನು ಪ್ರದರ್ಶಿಸುತ್ತಿದ್ದ ಸ್ಥಳಿಕ ಸಭೆ ಎಂದರ್ಥ. (1 ಕೊರಿಂಥ 14:4, 5, 12, 23) ಪೌಲನಿಗೆ ಸ್ಥಳಿಕ ಸಭೆಗಳಲ್ಲಿ ಅಭಿರುಚಿಯಿತ್ತೆಂಬುದು ಸ್ಪಷ್ಟ. ಪ್ರತಿಯೊಂದು ಸಭೆಯಲ್ಲಿ ಕ್ರೈಸ್ತರಿಗೆ ಯೆಹೋವನನ್ನು ಸ್ತುತಿಸುವ ಅವಕಾಶವಿದೆಯೆಂಬುದು ಅವನಿಗೆ ತಿಳಿದಿತ್ತು.
17 ಯೆಹೋವನು ತನ್ನ ಸಭೆಯನ್ನು ಉಪಯೋಗಿಸುತ್ತಾ ಬೆಂಬಲಿಸುತ್ತಿದ್ದಾನೆ. ಆತನು ಇಂದು ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರ ಸಂಘಟಿತ ಗುಂಪನ್ನು ಆಶೀರ್ವದಿಸುತ್ತಿದ್ದಾನೆ. ದೇವಜನರಿಗೆ ದೊರೆಯುತ್ತಿರುವ ಹೇರಳ ಆಧ್ಯಾತ್ಮಿಕ ಆಹಾರದ ಪೂರೈಕೆಯಿಂದ ಇದನ್ನು ನೋಡಸಾಧ್ಯವಿದೆ. (ಲೂಕ 12:42) ಆತನು ಭೂವ್ಯಾಪಕವಾಗಿ ಸಮಸ್ತ ಸಹೋದರತ್ವವನ್ನು ಆಶೀರ್ವದಿಸುತ್ತಿದ್ದಾನೆ. ನಾವೆಲ್ಲಿ ನಮ್ಮ ಸೃಷ್ಟಿಕರ್ತನನ್ನು ನಮ್ಮ ಕ್ರಿಯೆಗಳಿಂದ ಮತ್ತು ಭಕ್ತಿವರ್ಧಕವಾದ ಆಧ್ಯಾತ್ಮಿಕ ಹೇಳಿಕೆಗಳಿಂದ ಸ್ತುತಿಸುತ್ತೇವೊ ಆ ಸ್ಥಳಿಕ ಸಭೆಗಳನ್ನು ಆತನು ಆಶೀರ್ವದಿಸುತ್ತಿದ್ದಾನೆ. ನಾವು ನಮ್ಮ ಸ್ಥಳಿಕ ಸಭಾಮಧ್ಯದಲ್ಲಿ ಇರುವಾಗ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲೂ ದೇವರನ್ನು ಸ್ತುತಿಸಲು ಬೇಕಾದ ಉಪದೇಶ ಮತ್ತು ತರಬೇತನ್ನು ಅಲ್ಲಿ ಪಡೆಯುತ್ತೇವೆ.
18 ಮಕೆದೋನ್ಯದಲ್ಲಿದ್ದ ಸ್ಥಳಿಕ ಫಿಲಿಪ್ಪಿ ಸಭೆಯನ್ನು ಪ್ರೋತ್ಸಾಹಿಸುತ್ತಾ ಅಪೊಸ್ತಲ ಪೌಲನು ಏನು ಬರೆದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಅವನು ಬರೆದುದು: ‘ಯೇಸು ಕ್ರಿಸ್ತನ ಮೂಲಕವಾಗಿರುವ ಸುನೀತಿಯೆಂಬ ಫಲದಿಂದ ತುಂಬಿದವರಾಗಿ ಕಾಣಿಸಿಕೊಂಡು ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ತರಬೇಕೆಂದು ಬೇಡಿಕೊಳ್ಳುತ್ತೇನೆ.’ ಯೇಸುವಿನಲ್ಲಿ ತಮಗಿರುವ ನಂಬಿಕೆ ಮತ್ತು ಆಶ್ಚರ್ಯಕರ ನಿರೀಕ್ಷೆಯ ಕುರಿತು ಅವರು ಇತರರಿಗೆ ಅಂದರೆ ಹೊರಗಿನವರಿಗೆ ತಿಳಿಸುವುದು ಇದರಲ್ಲಿ ಸೇರಿರುವುದು. (ಫಿಲಿಪ್ಪಿ 1:9-11; 3:8-11) ಆದುದರಿಂದಲೇ, ಪೌಲನು ಜೊತೆಕ್ರೈಸ್ತರನ್ನು ಉತ್ತೇಜಿಸಿದ್ದು: “[ಯೇಸುವಿನ] ಮೂಲಕ ನಾವು ಯಾವಾಗಲೂ ದೇವರಿಗೆ ಸ್ತುತಿಯಜ್ಞವನ್ನು ಅಂದರೆ ಆತನ ಹೆಸರಿಗೆ ಬಹಿರಂಗ ಘೋಷಣೆಯನ್ನು ಮಾಡುವ ತುಟಿಗಳ ಫಲವನ್ನು ಅರ್ಪಿಸೋಣ.”—ಇಬ್ರಿಯ 13:15, NW.
19 ನೀವು ಯೇಸುವಿನಂತೆಯೇ “ಸಭಾಮಧ್ಯದಲ್ಲಿ” ದೇವರನ್ನು ಸ್ತುತಿಸಲು ಸಂತೋಷಿಸುತ್ತೀರೋ? ಯೆಹೋವನನ್ನು ಇನ್ನೂ ತಿಳಿಯದ ಮತ್ತು ಸ್ತುತಿಸದೇ ಇರುವವರ ಮುಂದೆ ಆತನನ್ನು ಕೀರ್ತಿಸಲಿಕ್ಕಾಗಿ ನಿಮ್ಮ ತುಟಿಗಳನ್ನು ಬಳಸುವುದರಲ್ಲಿ ಆನಂದಿಸುತ್ತೀರೋ? (ಇಬ್ರಿಯ 2:12; ರೋಮಾಪುರ 15:9-11) ಈ ಪ್ರಶ್ನೆಗಳಿಗೆ ನಾವು ವೈಯಕ್ತಿಕವಾಗಿ ಕೊಡುವ ಉತ್ತರವು, ದೇವರ ಉದ್ದೇಶದಲ್ಲಿ ನಮ್ಮ ಸ್ಥಳಿಕ ಸಭೆಯು ವಹಿಸುವ ಪಾತ್ರದ ಕುರಿತು ನಮಗಿರುವ ಮನೋಭಾವದ ಮೇಲೆ ಸ್ವಲ್ಪಮಟ್ಟಿಗೆ ಹೊಂದಿಕೊಂಡಿರಬಹುದು. ಮುಂದಿನ ಲೇಖನದಲ್ಲಿ, ಯೆಹೋವನು ನಮ್ಮ ಸ್ಥಳಿಕ ಸಭೆಯನ್ನು ಹೇಗೆ ನಿರ್ದೇಶಿಸುತ್ತಿದ್ದಾನೆ ಮತ್ತು ಬಳಸುತ್ತಿದ್ದಾನೆ ಹಾಗೂ ಇಂದು ನಮ್ಮ ಜೀವಿತಗಳಲ್ಲಿ ಅದರ ಪಾತ್ರ ಯಾವುದಾಗಿರಬೇಕು ಎಂಬುದನ್ನು ಪರಿಗಣಿಸೋಣ. (w07 4/15)
ನೆನಪಿದೆಯೆ?
• ಅಭಿಷಿಕ್ತ ಕ್ರೈಸ್ತರಿಂದ ರಚಿತವಾದ “ದೇವರ ಸಭೆ” ಹೇಗೆ ಅಸ್ತಿತ್ವಕ್ಕೆ ಬಂತು?
• “ಸಭೆ” ಎಂಬ ಪದವನ್ನು ಬೈಬಲ್ ಬೇರೆ ಯಾವ ಮೂರು ವಿಧಗಳಲ್ಲಿ ಬಳಸುತ್ತದೆ?
• ದಾವೀದ, ಯೇಸು ಮತ್ತು ಪ್ರಥಮ ಶತಮಾನದ ಕ್ರೈಸ್ತರು ಸಭೆಯ ವಿಷಯದಲ್ಲಿ ಏನು ಮಾಡಬಯಸಿದರು ಮತ್ತು ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು?
[ಅಧ್ಯಯನ ಪ್ರಶ್ನೆಗಳು]
1, 2. ಸಭೆಯು ಏಕೆ ಅಷ್ಟೊಂದು ಪ್ರಯೋಜನಕರವಾಗಿದೆ ಮತ್ತು ಅದರ ಪ್ರಧಾನ ಪಾತ್ರವೇನು?
3. ಪೌಲನಿಗನುಸಾರವಾಗಿ ಸಭೆಯ ಪಾತ್ರವೇನು?
4. ಹೀಬ್ರು ಶಾಸ್ತ್ರಗಳಲ್ಲಿ “ಸಭೆ” ಎಂಬ ಪದವನ್ನು ಅತಿ ಹೆಚ್ಚಾಗಿ ಹೇಗೆ ಉಪಯೋಗಿಸಲಾಗಿದೆ?
5. ಯಾವ ಗ್ರೀಕ್ ಪದವನ್ನು ಸಾಮಾನ್ಯವಾಗಿ “ಸಭೆ” ಎಂಬುದಾಗಿ ಭಾಷಾಂತರಿಸಲಾಗಿದೆ ಮತ್ತು ಈ ಪದವನ್ನು ಯಾವ ಅರ್ಥದಲ್ಲಿ ಅನ್ವಯಿಸಸಾಧ್ಯವಿದೆ?
6. ದಾವೀದನೂ ಯೇಸುವೂ ಸಭೆಯಲ್ಲಿ ಏನು ಮಾಡಿದರು?
7. ಕ್ರೈಸ್ತ ಗ್ರೀಕ್ ಶಾಸ್ತ್ರಗಳು “ಸಭೆ” ಎಂಬ ಪದವನ್ನು ಯಾವ ಪ್ರಧಾನ ವಿಧದಲ್ಲಿ ಬಳಸುತ್ತವೆ?
8. ಕ್ರೈಸ್ತ ಸಭೆಯ ರಚನೆಯನ್ನು ಯೇಸು ಹೇಗೆ ಮುಂದಾಗಿಯೇ ಸೂಚಿಸಿದನು?
9. ದೇವರ ಸಭೆಯು ಯಾವಾಗ ರಚಿಸಲ್ಪಡಲು ಆರಂಭಿಸಿತು?
10. ದೇವರ ಸಭೆಯೊಂದಿಗೆ ಯೇಸುವಿಗೆ ಇರುವ ಸಂಬಂಧವೇನು?
11. ಕ್ರೈಸ್ತ ಗ್ರೀಕ್ ಶಾಸ್ತ್ರಗಳು “ಸಭೆ”ಯನ್ನು ಯಾವ ಎರಡನೆಯ ಅರ್ಥದಲ್ಲಿ ಉಪಯೋಗಿಸುತ್ತವೆ?
12. ಬೈಬಲ್ನಲ್ಲಿ “ಸಭೆ” ಎಂಬುದನ್ನು ಯಾವ ಮೂರನೆಯ ಅರ್ಥದಲ್ಲಿ ಉಪಯೋಗಿಸಲಾಗಿದೆ?
13. ಬೈಬಲ್ “ಸಭೆ”ಯನ್ನು ಉಪಯೋಗಿಸುವ ನಾಲ್ಕನೆಯ ಮತ್ತು ಸಾಮಾನ್ಯ ವಿಧ ಯಾವುದು?
14. ಕೆಲವು ವಚನಗಳಲ್ಲಿ “ಸಭೆ” ಎಂಬ ಪದಪ್ರಯೋಗದಿಂದ ನಾವು ಏನನ್ನು ತೀರ್ಮಾನಿಸಬಲ್ಲೆವು?
15. ಕೆಲವು ಆದಿ ಸಭೆಗಳಲ್ಲಿ ಪವಿತ್ರಾತ್ಮದ ಕಾರ್ಯಾಚರಣೆ ಹೇಗೆ ತೋರಿಸಲ್ಪಟ್ಟಿತು?
16. ಅದ್ಭುತಕರವಾದ ಆತ್ಮವರಗಳ ಒಂದು ಗುರಿ ಯಾವುದಾಗಿತ್ತು?
17. ಇಂದಿನ ಸ್ಥಳಿಕ ಸಭೆಗಳ ಸಂಬಂಧದಲ್ಲಿ ಯಾವ ವಿಷಯವಾಗಿ ನಾವು ನಿಶ್ಚಯದಿಂದಿರಬಲ್ಲೆವು?
18, 19. ಪ್ರಾಮಾಣಿಕ ಕ್ರೈಸ್ತರು ಯಾವುದೇ ಸ್ಥಳಿಕ ಸಭೆಯಲ್ಲಿ ಏನು ಮಾಡಬಯಸುತ್ತಾರೆ?
[ಪುಟ 9ರಲ್ಲಿರುವ ಚಿತ್ರ]
ಯೇಸು ಯಾವ ಸಭೆಯ ಅಸ್ತಿವಾರವಾಗಿದ್ದನು?
[ಪುಟ 12ರಲ್ಲಿರುವ ಚಿತ್ರ]
ಬೆನೀನ್ನಲ್ಲಿರುವ ಕ್ರೈಸ್ತರಂತೆ, ನಾವು ಯೆಹೋವನನ್ನು ಕೂಡಿದ ಸಭೆಗಳಲ್ಲಿ ಸ್ತುತಿಸಬಲ್ಲೆವು