ಯೆಹೋವನ ಜನರು ನಂಬಿಕೆಯಲ್ಲಿ ದೃಢಗೊಳಿಸಲ್ಪಟ್ಟರು
“ಸಭೆಗಳು ನಂಬಿಕೆಯಲ್ಲಿ ದೃಢಗೊಳಿಸಲ್ಪಡುತ್ತಾ, ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಹೋದವು.”—ಅ.ಕೃತ್ಯಗಳು 16:5.
1. ಅಪೊಸ್ತಲ ಪೌಲನನ್ನು ದೇವರು ಹೇಗೆ ಉಪಯೋಗಿಸಿದನು?
ಯೆಹೋವ ದೇವರು ತಾರ್ಸದ ಸೌಲನನ್ನು “ಆರಿಸಿದ ಸಾಧನವಾಗಿ” ಉಪಯೋಗಿಸಿದನು. ಅಪೊಸ್ತಲ ಪೌಲನೋಪಾದಿ, ಅವನು ‘ಅನೇಕ ವಿಷಯಗಳಲ್ಲಿ ಹಿಂಸೆಯನ್ನು’ ಅನುಭವಿಸಿದನು. ಆದರೆ ಅವನ ಮತ್ತು ಇತರರ ಕಾರ್ಯದ ಮೂಲಕ ಯೆಹೋವನ ಸಂಸ್ಥಾಪನೆಯು ಐಕ್ಯತೆ ಮತ್ತು ಆಶ್ಚರ್ಯಕರವಾದ ವಿಸ್ತರಣೆಯಲ್ಲಿ ಆನಂದಿಸಿತು.—ಅ.ಕೃತ್ಯಗಳು 9:15, 16.
2. ಅ.ಕೃತ್ಯಗಳು 13:1–16:5 ಗಮನಿಸುವುದರಿಂದ ಏನು ಪ್ರಯೋಜನವಾಗಲಿದೆ?
2 ಅಧಿಕ ಸಂಖ್ಯೆಯಲ್ಲಿ ಅನ್ಯಜನರು ಕ್ರೈಸ್ತರಾಗುತ್ತಾ ಇದ್ದರು ಮತ್ತು ದೇವಜನರ ನಡುವೆ ಐಕ್ಯತೆಯನ್ನು ವರ್ಧಿಸಲು ಮತ್ತು ನಂಬಿಕೆಯಲ್ಲಿ ಅವರನ್ನು ದೃಢಗೊಳಿಸಲು ಆಡಳಿತ ಮಂಡಲಿಯ ಒಂದು ಪ್ರಮುಖ ಕೂಟವು ಬಹಳಷ್ಟನ್ನು ಮಾಡಿತು. ಅಪೊಸ್ತಲರ ಕೃತ್ಯಗಳು 13:1–16:5 ರಲ್ಲಿ ದಾಖಲಿಸಿದ ಇವುಗಳನ್ನು ಮತ್ತು ಇತರ ಬೆಳವಣಿಗೆಗಳನ್ನು ಪರಿಗಣಿಸುವುದು ಅತೀ ಪ್ರಯೋಜನಕಾರಿಯಾಗಿದೆ ಯಾಕಂದರೆ ಯೆಹೋವನ ಸಾಕ್ಷಿಗಳು ತತ್ಸಮಾನವಾದ ಬೆಳವಣಿಗೆಯನ್ನೂ, ಆತ್ಮೀಕ ಆಶೀರ್ವಾದಗಳನ್ನೂ ಆನಂದಿಸುತ್ತಿದ್ದಾರೆ. (ಯೆಶಾಯ 60:22) (ಈ ಸಂಚಿಕೆಯ ಅಭ್ಯಾಸ ಲೇಖನಗಳ ವೈಯಕ್ತಿಕ ಅಭ್ಯಾಸದಲ್ಲಿ, ದಪ್ಪಕ್ಷರಗಳಲ್ಲಿ ಸೂಚಿಸಲ್ಪಟ್ಟ ಪುಸ್ತಕದ ಉಲ್ಲೇಖವನ್ನು ನೀವು ಓದುವಂತೆ ನಾವು ಸಲಹೆ ಮಾಡುತ್ತೇವೆ.)
ಮಿಶನೆರಿಗಳು ಕಾರ್ಯೋನ್ಮುಖರಾಗುತ್ತಾರೆ
3. ಅಂತಿಯೋಕ್ಯದಲ್ಲಿ “ಪ್ರವಾದಿಗಳಿಂದ ಮತ್ತು ಬೋಧಕರಿಂದ” ಯಾವ ಕೆಲಸವು ಮಾಡಲ್ಪಟ್ಟಿತು?
3 ಸಭೆಯಿಂದ ಸಿರಿಯದ ಅಂತಿಯೋಕ್ಯಕ್ಕೆ ಕಳುಹಿಸಲ್ಪಟ್ಟ ಪುರುಷರು ನಂಬಿಕೆಯಲ್ಲಿ ದೃಢರಾಗುವಂತೆ ವಿಶ್ವಾಸೀಗಳಿಗೆ ಸಹಾಯಮಾಡಿದರು. (13:1-5) ಅಂತಿಯೋಕ್ಯದಲ್ಲಿ ಬಾರ್ನಬ, ಸಿಮೆಯೋನ (ನೀಗರ), ಕುರೇನ್ಯದ ಲೂಕ್ಯ, ಮೆನಹೇನ, ತಾರ್ಸದ ಸೌಲ ಮುಂತಾದ “ಪ್ರವಾದಿಗಳೂ ಬೋಧಕರೂ” ಇದ್ದರು. ಪ್ರವಾದಿಗಳು ದೇವರ ವಾಕ್ಯವನ್ನು ವಿವರಿಸಿ ಬರಬೇಕಾದ ಸಂಗತಿಗಳನ್ನು ಹೇಳುತ್ತಿದ್ದಾಗ, ಬೋಧಕರು ಶಾಸ್ತ್ರ ಗ್ರಂಥಗಳಲ್ಲಿ ಮತ್ತು ದೈವಿಕ ಜೀವಿತದ ಕುರಿತು ಉಪದೇಶಿಸುತ್ತಿದ್ದರು. (1 ಕೊರಿಂಥ್ಯದವರಿಗೆ 13:8; 14:4) ಬಾರ್ನಬ ಮತ್ತು ಸೌಲರು ಒಂದು ವಿಶೇಷ ನೇಮಕ ಪಡೆದರು. ಬಾರ್ನಬನ ರಕ್ತ ಸಂಬಂಧಿಯಾದ ಮಾರ್ಕನನ್ನು ಸಂಗಡ ತೆಗೆದು ಕೊಂಡು ಅವರು ಕುಪ್ರ ದ್ವೀಪಕ್ಕೆ ಹೋದರು. (ಕೊಲೊಸ್ಸೆಯವರಿಗೆ 4:10) ಸಲಮೀಸ್ನ ಪೂರ್ವ ಬಂದರಿನ ಸಭಾಮಂದಿರಗಳಲ್ಲಿ ಅವರು ಸಾರಿದರು, ಆದರೆ ಯೆಹೂದ್ಯರು ಒಳ್ಳೇ ಪ್ರತಿವರ್ತನೆ ತೋರಿಸಿದರ್ದ ಯಾವುದೇ ದಾಖಲೆ ಇಲ್ಲ. ಯಾಕಂದರೆ ಅಂತಹವರು ಪ್ರಾಪಂಚಿಕವಾಗಿ ಸುಸ್ಥಿತಿಯಲ್ಲಿದ್ದುದರಿಂದ, ಮೆಸ್ಸೀಯನ ಆವಶ್ಯಕತೆ ಅವರಿಗೆ ಏನಿದ್ದೀತು?
4. ಕುಪ್ರ ದ್ವೀಪದಲ್ಲಿ ಮಿಶನೆರಿಗಳು ಸಾರಿದಾಗ ಏನು ಸಂಭವಿಸಿತು?
4 ಕುಪ್ರ ದ್ವೀಪದ ಇತರ ಸಾಕ್ಷಿಕಾರ್ಯವನ್ನು ದೇವರು ಆಶೀರ್ವದಿಸಿದನು. (13:6-12) ಪಾಫೋಸಿನಲ್ಲಿ ಮಿಶನೆರಿಗಳು ಯೆಹೂದ್ಯ ಮಂತ್ರವಾದಿಯೂ, ಸುಳ್ಳು ಪ್ರವಾದಿಯೂ ಆದ ಬಾರ್-ಯೇಸು (ಎಲುಮನು) ಎಂಬವನನ್ನು ಎದುರಿಸಿದರು. ಅಧಿಪತಿಯಾಗಿದ್ದ ಸೆರ್ಗ್ಯಪೌಲನು ದೇವರ ವಾಕ್ಯವನ್ನು ಕೇಳುವುದನ್ನು ತಡೆಯಲು ಇವನು ಪ್ರಯತ್ನಿಸುತ್ತಿದ್ದಾಗ, ಸೌಲನು ಪವಿತ್ರಾತ್ಮ ಭರಿತನಾಗಿ ಅಂದದ್ದು: ‘ಎಲೋ, ಎಲ್ಲಾ ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಯೆಹೋವನ ನೀಟಾದ ಮಾರ್ಗಗಳನ್ನು ಡೊಂಕುಮಾಡುವುದನ್ನು ಬಿಡುವುದಿಲ್ಲವೋ?’ ಆಗ ದೇವರ ಶಿಕ್ಷಾ ಹಸ್ತವು ಎಲುಮನನ್ನು ಕೆಲವು ಸಮಯದ ತನಕ ಕುರುಡನನ್ನಾಗಿ ಮಾಡಿತು ಮತ್ತು ಸೆರ್ಗ್ಯ ಪೌಲನು “ಯೆಹೋವನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.”(NW)
5, 6. (ಎ) ಪಿಸಿದ್ಯದ ಅಂತಿಯೋಕ್ಯದ ಸಭಾಮಂದಿರದಲ್ಲಿ ಪೌಲನು ಮಾತಾಡಿದಾಗ, ಯೇಸುವಿನ ಕುರಿತು ಅವನು ಏನು ಹೇಳಿದನು? (ಬಿ) ಪೌಲನ ಭಾಷಣದ ಪರಿಣಾಮವೇನು?
5 ಕುಪ್ರದಿಂದ ಈ ತಂಡವು ಏಶ್ಯಾ ಮೈನರಿನ ಪೆರ್ಗೆಗೆ ಸಮುದ್ರ ಯಾನ ಮಾಡಿ ಬಂದರು. ಪೌಲ ಮತ್ತು ಬಾರ್ನಬರು ತದನಂತರ ಪರ್ವತಗಳ ಕಣಿವೆಗಳ ಮೂಲಕ ಉತ್ತರಾಭಿಮುಖವಾಗಿ ಹೋದರು, ಬಹುಶಃ ಪಿಸಿದ್ಯ ಸೀಮೆಯ ಅಂತಿಯೋಕ್ಯಕ್ಕೆ ಹೋಗುವಾಗ ‘ನದಿಗಳ ಮತ್ತು ಕಳ್ಳರ ಅಪಾಯಗಳು’ ಎದುರಾಗಿದ್ದಿರಬೇಕು. (2 ಕೊರಿಂಥದವರಿಗೆ 11:25, 26) ಅಲ್ಲಿ ಪೌಲನು ಸಭಾಮಂದಿರದಲ್ಲಿ ಮಾತಾಡಿದನು. (13:13-41) ಇಸ್ರಾಯೇಲ್ಯರೊಂದಿಗಿನ ದೇವರ ವ್ಯವಹಾರವನ್ನು ಪುನರಾವರ್ತನೆ ಮಾಡುತ್ತಾ, ರಕ್ಷಕನಾದ ಯೇಸುವು ದಾವೀದನ ಮನೆತನದವನೆಂದು ಗುರುತಿಸಿದನು. ಯೆಹೂದ್ಯ ಅಧಿಪತಿಗಳು ಯೇಸುವಿನ ಮರಣವನ್ನು ಬಯಸಿದರೂ, ದೇವರು ಅವನನ್ನು ಪುನರುತ್ಥಾನಗೊಳಿಸಿದಾಗ, ಅವರ ಪಿತೃಜರಿಗೆ ಕೊಟ್ಟ ವಾಗ್ದಾನವು ನೆರವೇರಿಸಲ್ಪಟ್ಟಿತು. (ಕೀರ್ತನೆ 2:7; 16:10; ಯೆಶಾಯ 55:3) ಕ್ರಿಸ್ತನ ಮೂಲಕವಾದ ರಕ್ಷಣೆಯ ದೇವರ ವರದಾನವನ್ನು ತೃಣೀಕರಿಸದಂತೆ ಪೌಲನು ತನ್ನನ್ನು ಆಲಿಸುವವರಿಗೆ ಎಚ್ಚರಿಸಿದನು.—ಹಬಕ್ಕೂಕ 1:5, ಸೆಪ್ತುವಜಿಂಟ್.
6 ಪೌಲನ ಭಾಷಣವು, ಇಂದಿನ ಯೆಹೋವನ ಸಾಕ್ಷಿಗಳಿಂದ ಕೊಡಲ್ಪಡುವ ಬಹಿರಂಗ ಭಾಷಣಗಳಂತೆಯೇ, ಆಸಕ್ತಿಯನ್ನು ಕೆರಳಿಸಿತು. (13:42-52) ಮುಂದಿನ ಸಬ್ಬತ್ನಲ್ಲಿ ಯೆಹೋವನ ವಾಕ್ಯವನ್ನು ಕೇಳಲು ಇಡೀ ನಗರವೇ ನೆರೆದು ಬಂದಿತ್ತು ಮತ್ತು ಇದು ಯೆಹೂದ್ಯರಲ್ಲಿ ಮತ್ಸರವನ್ನು ಹುಟ್ಟಿಸಿತು. ಯಾಕೆ, ಒಂದೇ ವಾರದಲ್ಲಿ, ಆ ಯೆಹೂದ್ಯರು ಅವರ ಇಡೀ ಜೀವಮಾನದಲ್ಲಿ ಮಾಡಿದ್ದಕ್ಕಿಂತಲೂ ಹೆಚ್ಚು ಅನ್ಯಜನರನ್ನು ಈ ಮಿಶನೆರಿಗಳು ಮತಾಂತರಿಸಿದ್ದರು ! ಪೌಲನೊಡನೆ ಯೆಹೂದ್ಯರು ದೂಷಣೆಯ ರೀತಿಯಲ್ಲಿ ಎದುರ್ಚಂಡಿಸುತ್ತಾ ಇದ್ದುದರಿಂದ, ಆತ್ಮೀಕ ಬೆಳಕು ಬೇರೆಡೆ ಪ್ರಕಾಶಿಸುವ ಸಮಯವೆಂದು ಮನಗಂಡು, ಅವರು ಅಂದದ್ದು: ‘ಆದರೆ ನೀವು ದೇವರ ವಾಕ್ಯವನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪುಮಾಡಿಕೊಂಡದರ್ದಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ.’—ಯೆಶಾಯ 49:6.
7. ಪೌಲ ಬಾರ್ನಬರು ಹಿಂಸೆಗೆ ಹೇಗೆ ಪ್ರತಿಕ್ರಿಯೆ ತೋರಿಸಿದರು?
7 ಈಗ ಅನ್ಯಜನರು ಸಂತೋಷ ಪಡಲಾರಂಭಿಸಿದರು, ಮತ್ತು ನಿತ್ಯಜೀವಕ್ಕೆ ಯೋಗ್ಯವಾದ ಮನೋಭಾವವುಳ್ಳವರೆಲ್ಲರೂ ನಂಬುವವರಾದರು. ಆ ಸೀಮೆಯೆಲ್ಲೆಲ್ಲಾ ಯೆಹೋವನ ವಾಕ್ಯವು ಹಬ್ಬಿದಾಗ್ಯೂ, ಪೌಲ, ಬಾರ್ನಬರನ್ನು ಹಿಂಸಿಸಲು ಮತ್ತು ಅವರ ಮೇರೆಯಿಂದ ಹೊರದಬ್ಬಲು ಯೆಹೂದ್ಯರು ಕುಲೀನ ಸ್ತ್ರೀಯರನ್ನು (ಪ್ರಾಯಶಃ ಅವರ ಗಂಡಂದಿರನ್ನು ಯಾ ಇತರರನ್ನು ಒತ್ತಡ ಪಡಿಸಲು) ಮತ್ತು ಇತರ ಪ್ರಮುಖರನ್ನು ಪ್ರೇರಿಸಿದರು. ಆದರೆ ಅದು ಮಿಶನೆರಿಗಳನ್ನು ನಿಲ್ಲಿಸಲಿಲ್ಲ. ಅವರು ಕೇವಲ “ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಝಾಡಿಸಿಬಿಟ್ಟು” ಅಲ್ಲಿಂದ ರೋಮನ್ ಪ್ರಾಂತ್ಯದ ಗಲಾತ್ಯದ ಪ್ರಮುಖ ನಗರವಾದ ಇಕೋನ್ಯಕ್ಕೆ (ಆಧುನಿಕ ಕೊನ್ಯಾ) ಹೋದರು. (ಲೂಕ 9:5; 10:11) ಒಳ್ಳೆಯದು, ಪಿಸಿದ್ಯದ ಅಂತಿಯೋಕ್ಯದಲ್ಲಿ ಬಿಟ್ಟು ಬಂದ ಶಿಷ್ಯರ ಕುರಿತಾಗಿ ಏನು? ನಂಬಿಕೆಯಲ್ಲಿ ದೃಢಗೊಳಿಸಲ್ಪಟ್ಟವರಾಗಿ, ಅವರು “ಸಂತೋಷಪೂರ್ಣರೂ ಪವಿತ್ರಾತ್ಮ ಭರಿತರೂ ಆದರು.” ಆತ್ಮೀಕ ಪ್ರಗತಿಯನ್ನು ವಿರೋಧವು ನಿರ್ಬಂಧಿಸುವ ಅವಶ್ಯಕತೆಯಿಲ್ಲ ಎಂದು ನೋಡಲು ನಮಗೆ ಸಹಾಯ ಮಾಡುತ್ತದೆ.
ಹಿಂಸೆಯ ನಡುವೆ ನಂಬಿಕೆಯಲ್ಲಿ ದೃಢತೆ
8. ಇಕೋನ್ಯದಲ್ಲಿ ಯಶ್ವಸೀ ಸಾಕ್ಷಿ ನೀಡುವಿಕೆಯ ಫಲಿತಾಂಶವಾಗಿ ಏನು ಸಂಭವಿಸಿತು?
8 ಪೌಲ ಮತ್ತು ಬಾರ್ನಬರು ಹಿಂಸೆಯ ನಡುವೆಯೂ ನಂಬಿಕೆಯಲ್ಲಿ ದೃಢರಾಗಿದ್ದರೆಂದು ತಾವಾಗಿಯೇ ರುಜುಪಡಿಸಿದರು. (14:1-7) ಇಕೋನ್ಯದ ಸಭಾಮಂದಿರದಲ್ಲಿ ಅವರ ಸಾರುವಿಕೆಯ ಪ್ರತಿವರ್ತನೆಯಲ್ಲಿ, ಅನೇಕ ಯೆಹೂದ್ಯರೂ, ಗ್ರೀಕರೂ ನಂಬಿದರು. ಅವಿಶ್ವಾಸೀ ಯೆಹೂದ್ಯರು ಅನ್ಯ ಜನರನ್ನು ಹೊಸ ವಿಶ್ವಾಸೀಗಳ ವಿರುದ್ಧ ರೇಗಿಸಿ ಕೆಡಿಸಿದಾಗ, ದೇವರ ಅಧಿಕಾರದಿಂದ ಕೆಲಸಗಾರರಾದ ಇಬ್ಬರೂ ಧೈರ್ಯದಿಂದ ಮಾತಾಡಿದರು ಮತ್ತು ಅವರು ಅನೇಕ ಸೂಚಕ ಕಾರ್ಯಗಳನ್ನು ಮಾಡುವಂತೆ ಅವರಿಗೆ ಶಕ್ತಿ ಕೊಟ್ಟದ್ದರಿಂದ ತನ್ನ ಮೆಚ್ಚಿಕೆಯನ್ನು ತೋರಿಸಿದನು. ಇದು ಗುಂಪನ್ನು, ಕೆಲವರು ಯೆಹೂದ್ಯರ ಪರವಾಗಿ, ಇನ್ನಿತರರು ಅಪೊಸ್ತಲರ (ಕಳುಹಿಸಲ್ಪಟ್ಟವರ) ಪರವಾಗಿ, ಹೀಗೆ ಇಬ್ಭಾಗಮಾಡಿತು. ಅಪೊಸ್ತಲರು ಹೇಡಿಗಳಾಗಿರಲಿಲ್ಲ, ಆದರೆ ಅವರನ್ನು ಕಲ್ಲೆಸೆದು ಕೊಲ್ಲುವ ಹಂಚಿಕೆ ಅವರಿಗೆ ತಿಳಿದುಬಂದಾಗ, ವಿವೇಕತನದಿಂದಲೇ ಸಾರಲಿಕ್ಕಾಗಿ ಅವರು ದಕ್ಷಿಣ ಗಲಾತ್ಯದ ಏಶ್ಯಾ ಮೈನರ್ ಪ್ರದೇಶವಾಗಿದ್ದ ಲುಕವೋನ್ಯಕ್ಕೆ ಹೋದರು. ಯುಕ್ತಾಯುಕ್ತ ಪರಿಜ್ಞಾನವುಳ್ಳವರಾಗಿರುವ ಮೂಲಕ, ಕೆಲವೊಮ್ಮೆ ಹಿಂಸೆಯ ನಡುವೆಯೂ ನಾವು ಕಾರ್ಯಮಗ್ನರಾಗಿರ ಬಲ್ಲೆವು.—ಮತ್ತಾಯ 10:23.
9, 10. (ಎ) ಕುಂಟನನ್ನು ವಾಸಿಮಾಡಿದಾಗ ಲುಸ್ತ್ರ ದ ನಿವಾಸಿಗಳು ಹೇಗೆ ಪ್ರತಿವರ್ತನೆ ತೋರಿಸಿದರು? (ಬಿ) ಲುಸ್ತ್ರ ದಲ್ಲಿ ಪೌಲ ಬಾರ್ನಬರ ಪ್ರತಿವರ್ತನೆ ಏನಾಗಿತ್ತು?
9 ಲುಕವೋನ್ಯದ ನಗರವಾದ ಲುಸ್ತ್ರವು ಅನಂತರ ಸಾಕ್ಷಿಯನ್ನು ಪಡೆಯಿತು. (14:8-18) ಅಲ್ಲಿ ಪೌಲನು ಹುಟ್ಟಿನಿಂದಲೇ ಕುಂಟನಾಗಿದ್ದ ಒಬ್ಬನನ್ನು ಗುಣಪಡಿಸಿದನು. ಈ ಅದ್ಭುತಕ್ಕೆ ಯೆಹೋವನು ಜವಾಬ್ದಾರನೆಂದು ತಿಳಿಯದೇ, ಗುಂಪು ಕೂಗಲಾರಂಭಿಸಿತು: “ದೇವತೆಗಳು ಮನುಷ್ಯರೂಪದಿಂದ ನಮ್ಮ ಬಳಿಗೆ ಇಳಿದು ಬಂದರು !” ಇದು ಲುಕವೋನ್ಯ ಭಾಷೆಯಲ್ಲಿ ಹೇಳಲ್ಪಟ್ಟದ್ದರಿಂದ, ಬಾರ್ನಬ ಮತ್ತು ಪೌಲರಿಗೆ ಏನು ಸಂಭವಿಸುತ್ತದೆಂದು ತಿಳಿಯಲಿಲ್ಲ. ಪೌಲನು ಮಾತಾಡಲು ಮುಂದಾಳುತನ ವಹಿಸಿದರ್ದಿಂದ ಜನರು ಅವನನ್ನು ಹೆರ್ಮೆದೇವರೆಂದೂ (ದೇವರುಗಳ ನಿರರ್ಗಳ ಮಾತಾಡುವ ದೂತನು), ಬಾರ್ನಬನು ಗ್ರೀಕರ ಮುಖ್ಯದೇವರಾದ ದ್ಯೌಸ್ದೇವರೆಂದೂ ಎಣಿಸಿದರು.
10 ದ್ಯೌಸ್ದೇವರ ಪೂಜಾರಿಯು ಎತ್ತುಗಳನ್ನೂ ಹೂವಿನ ಹಾರಗಳನ್ನೂ ತಂದು ಪೌಲ ಬಾರ್ನಬರಿಗೆ ಬಲಿಕೊಡಬೇಕೆಂದು ಇದ್ದನು. ಪ್ರಾಯಶಃ ಸಾಮಾನ್ಯವಾಗಿ ತಿಳಿಯಲ್ಪಡುತ್ತಿದ್ದ ಗ್ರೀಕನ್ನು ಮಾತಾಡಿ ಇಲ್ಲವೇ ಅನುವಾದಕನ ಮೂಲಕ ಸಂದರ್ಶಕರು ಬಲುಬೇಗನೇ, ತಾವೂ ಕೂಡಾ ಅವರಂಥ ಬಲಹೀನತೆಗಳಿರುವ ಮನುಷ್ಯರೆಂದೂ ಮತ್ತು ಇಂತಹ “ವ್ಯರ್ಥವಾದ ಕೆಲಸಗಳಿಂದ” (ನಿರ್ಜೀವವಾದ ದೇವರುಗಳು ಇಲ್ಲವೇ ಬೊಂಬೆಗಳು) ಜೀವಸ್ವರೂಪನಾದ ದೇವರ ಕಡೆಗೆ ಜನರನ್ನು ತಿರುಗಿಸುವ ಸುವಾರ್ತೆಯನ್ನು ತಾವು ಸಾರುವವರೆಂದೂ ವಿವರಿಸಿದರು. (1 ಅರಸುಗಳು 16:13; ಕೀರ್ತನೆ 115:3-9; 146:6) ಹೌದು, ದೇವರು ಗತಿಸಿ ಹೋದ ಕಾಲಗಳಲ್ಲಿ ಜನಾಂಗಗಳನ್ನು (ಇಬ್ರಿಯರನ್ನು ಅಲ್ಲ) ತಮ್ಮ ಇಚ್ಛೆಯ ಪ್ರಕಾರ ನಡೆಯುವುದಕ್ಕೆ ಬಿಟ್ಟನು, ಆದರೆ ‘ಅವರಿಗೆ ಮಳೇಗಳನ್ನೂ, ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರ ಕೊಟ್ಟು ಅವರ ಹೃದಯಗಳನ್ನು ಆನಂದದಿಂದ ತುಂಬಿಸಿ,’ ತನ್ನ ಅಸ್ತಿತ್ವದ ಮತ್ತು ಒಳ್ಳೇತನದ ಕುರಿತಾಗಿ ಸಾಕ್ಷಿ ಕೊಡದೆ ಇರಲಿಲ್ಲ. (ಕೀರ್ತನೆ 147:8) ಇಂತಹ ತರ್ಕಬದ್ಧ ನಿರೂಪಣೆಯಿದ್ದಾಗ್ಯೂ, ಬಾರ್ನಬ ಮತ್ತು ಪೌಲರಿಗೆ ಜನರನ್ನು ತಮಗೆ ಬಲಿಕೊಡದಂತೆ ತಡೆಯಲು ಕಷ್ಟವಾಗಿತ್ತು, ಆದರೂ, ಮಿಶನೆರಿಗಳು ತಮಗಾಗಿ ದೇವರೋಪಾದಿ ಪೂಜ್ಯನೀಯ ಗೌರವವನ್ನು ಸ್ವೀಕರಿಸಲಿಲ್ಲ, ಇಲ್ಲವೇ ಆ ಪ್ರದೇಶದಲ್ಲಿ ಕ್ರೈಸ್ತತ್ವವನ್ನು ಸ್ಥಾಪಿಸಲು ಅವರು ಅಂಥಹ ಅಧಿಕಾರವನ್ನು ಉಪಯೋಗಿಸಲಿಲ್ಲ. ಯೆಹೋವನ ಸೇವೆಯಲ್ಲಿ ಏನನ್ನು ಪೂರೈಸಲು ನಮಗೆ ಬಿಡುತ್ತಾನೋ, ಅದರಿಂದ ನಾವು ಹೊಗಳಿಕೆ ಪಡೆಯುವ ಹಂಬಲವುಳ್ಳವರಾಗಿರುವುದಾದರೆ, ಇದೊಂದು ಉತ್ತಮ ಉದಾಹರಣೆ!
11. ಈ ಉಲ್ಲೇಖದಿಂದ ನಾವೇನು ಕಲಿಯಬಲ್ಲೆವು: “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು”?
11 ಪಕ್ಕನೇ ಹಿಂಸೆಯು ತನ್ನ ಕರಾಳ ತಲೆಯನ್ನು ತೋರಿಸಿತು. (14:19-28) ಅದು ಹೇಗೆ? ಪಿಸಿದ್ಯದ ಅಂತಿಯೋಕ್ಯ ಮತ್ತು ಇಕೋನ್ಯದ ಯೆಹೂದ್ಯರಿಂದ ಪ್ರೇರಿಸಲ್ಪಟ್ಟು ಗುಂಪುಗಳು ಪೌಲನನ್ನು ಕಲ್ಲಿಸೆದು, ಅವನು ಸತ್ತಿದ್ದಾನೆಂದು ಎಣಿಸಿ, ಊರ ಹೊರಕ್ಕೆ ಎಳೆದು ಬಿಟ್ಟರು. (2 ಕೊರಿಂಥದವರಿಗೆ 11:24, 25) ಆದರೆ ಶಿಷ್ಯರು ಅವನ ಸುತ್ತಲೂ ನಿಂತುಕೊಂಡಿರುವಾಗ, ಅವನು ಎದ್ದನು ಮತ್ತು ಯಾರಿಗೂ ತಿಳಿಯದಂತೆ ಲುಸ್ತ್ರಕ್ಕೆ ಪ್ರಾಯಶಃ ಕತ್ತಲೆಯ ಮರೆಯಲ್ಲಿ ಹೊರಟುಹೋದನು. ಮರುದಿನ, ಬಾರ್ನಬನು ಮತ್ತು ಅವನು ದೆರ್ಬೆಗೆ ಹೋದರು, ಅಲ್ಲಿ ಅನೇಕರು ಶಿಷ್ಯರಾಗಿದ್ದರು. ಲುಸ್ತ್ರ , ಇಕೋನ್ಯ ಮತ್ತು ಅಂತಿಯೋಕ್ಯಕ್ಕೆ ಮಿಶನೆರಿಗಳು ಪುನಃ ಭೇಟಿ ನೀಡಿ ಶಿಷ್ಯರನ್ನು ಬಲಪಡಿಸುತ್ತಾ, ನಂಬಿಕೆಯಲ್ಲಿ ನಿಲ್ಲುವಂತೆ ಪ್ರೋತ್ಸಾಹಿಸುತ್ತಾ ಅಂದದ್ದು: “ನಾವು ಬಲುಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು.” ಕ್ರೈಸ್ತರೋಪಾದಿ, ಸಂಕಟಗಳನ್ನು ಅನುಭವಿಸುವುದನ್ನು ನಾವು ನಿರೀಕ್ಷಿಸಬಹುದು, ಆದರೆ ನಮ್ಮ ನಂಬಿಕೆಯಲ್ಲಿ ಒಪ್ಪಂದವನ್ನು ಮಾಡಿ ಅವುಗಳನ್ನು ತಪ್ಪಿಸಿಕೊಳ್ಳ ಬಾರದು. (2 ತಿಮೊಥಿ 3:12) ಆ ಸಮಯದಲ್ಲಿ, ಹಿರಿಯರು ಸಭೆಗಳಿಗೆ ನೇಮಿಸಲ್ಪಟ್ಟರು, ಹಾಗೂ ಗಲಾತ್ಯದವರಿಗೆ ಪೌಲನ ಪತ್ರವು ಬರೆಯಲ್ಪಟ್ಟಿತು.
12. ಪೌಲನ ಮೊದಲ ಮಿಶನೆರಿ ಪ್ರಯಾಣವು ಕೊನೆಗೊಂಡಾಗ, ಇಬ್ಬರು ಮಿಶನೆರಿಗಳು ಏನು ಮಾಡಿದರು?
12 ಪಿಸಿದ್ಯದಿಂದ ಹೋಗುತ್ತಾ, ಪೌಲ ಬಾರ್ನಬರು ಪಂಪುಲ್ಯ ಸೀಮೆಯ ಒಂದು ಪ್ರಮುಖ ನಗರವಾದ ಪೆರ್ಗೆಯಲ್ಲಿ ವಾಕ್ಯವನ್ನು ಸಾರಿದರು. ಕೆಲವು ಸಮಯದ ನಂತರ ಅವರು ಸಿರಿಯಾದ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಪೌಲನ ಮೊದಲ ಮಿಶನೆರಿ ಪ್ರಯಾಣವು ಕೊನೆಗೊಂಡಿತು, ಇಬ್ಬರು ಮಿಶನೆರಿಗಳು ಸಭೆಗೆ “ದೇವರು ತಮ್ಮೊಂದಿಗೆ ಇದ್ದು ಮಾಡಿದ್ದೆಲ್ಲವನ್ನೂ ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲನ್ನು ತೆರೆದದ್ದನ್ನೂ” ವಿವರಿಸಿದರು. ಕೆಲವೊಂದು ಸಮಯ ಶಿಷ್ಯರೊಂದಿಗೆ ಅಂತಿಯೋಕ್ಯದಲ್ಲಿ ಕಳೆದರು ಮತ್ತು ಇದು ನಿಸ್ಸಂದೇಹವಾಗಿ ಅವರ ನಂಬಿಕೆಯನ್ನು ದೃಢಗೊಳಿಸಲು ನೆರವಾಯಿತು. ಇಂದು ಸಂಚರಣೆ ಮೇಲ್ವಿಚಾರಕರ ಸಂದರ್ಶನಗಳು ತದ್ರೀತಿಯ ಆತ್ಮೀಕ ಪರಿಣಾಮಗಳನ್ನು ತರುತ್ತವೆ.
ಪ್ರಮುಖ ಪ್ರಶ್ನೆಯೊಂದು ಬಗೆಹರಿಸಲ್ಪಟ್ಟಿತು
13. ಇಬ್ರಿಯ ಮತ್ತು ಯೆಹೂದ್ಯೇತರ ಗುಂಪುಗಳಾಗಿ ಕ್ರೈಸ್ತತ್ವವು ಇಬ್ಭಾಗಗೊಳ್ಳದೇ ಇರಬೇಕಾದರೆ, ಯಾವುದರ ಜರೂರಿಯಿತ್ತು?
13 ನಂಬಿಕೆಯಲ್ಲಿ ದೃಢತೆಯು ಯೋಚನೆಯ ಐಕ್ಯತೆಯನ್ನು ಕೇಳಿಕೊಳ್ಳುತ್ತದೆ. (1 ಕೊರಿಂಥದವರಿಗೆ 1:10) ಕ್ರೈಸ್ತತ್ವವು ಇಬ್ರಿಯ ಮತ್ತು ಯೆಹೂದ್ಯೇತರ ಗುಂಪುಗಳಾಗಿ ಇಬ್ಭಾಗಗೊಳ್ಳದೇ ಇರಬೇಕಾದರೆ, ದೇವರ ಸಂಸ್ಥಾಪನೆಯೊಳಗೆ ಪ್ರವಾಹದೋಪಾದಿ ಬರುವ ಅನ್ಯಜನರು ಮೋಶೆಯ ನಿಯಮವನ್ನು ಪರಿಪಾಲಿಸಿ, ಸುನ್ನತಿಯನ್ನು ಮಾಡಿಕೊಳ್ಳಬೇಕೋ ಎಂಬದನ್ನು ಆಡಳಿತ ಮಂಡಲಿಯು ತೀರ್ಮಾನಿಸಬೇಕಿತ್ತು. (15:1-5) ಯೂದಾಯದ ಕೆಲವು ನಿರ್ದಿಷ್ಟ ಜನರು ಸಿರಿಯಾದ ಅಂತಿಯೋಕ್ಯಕ್ಕೆ ಈಗಾಗಲೇ ಪ್ರಯಾಣ ಮಾಡಿ ಅನ್ಯಜನರು ಸುನ್ನತಿಮಾಡಿಕೊಳ್ಳದ ವಿನಾ ಅವರು ರಕ್ಷಣೆ ಹೊಂದಲಾರರು ಎಂದು ಅನ್ಯಜನರಿಂದ ಬಂದ ವಿಶ್ವಾಸೀಗಳಿಗೆ ಉಪದೇಶಿಸುತ್ತಿದ್ದರು. (ವಿಮೋಚನಕಾಂಡ 12:48) ಆದಕಾರಣ, ಪೌಲ, ಬಾರ್ನಬ ಮತ್ತು ಇತರರು ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಕಳುಹಿಸಲ್ಪಟ್ಟರು. ಅಲಿಯ್ಲೂ ಕೂಡಾ, ಅನ್ಯಜನರು ಸುನ್ನತಿಹೊಂದ ಬೇಕು ಮತ್ತು ನಿಯಮ ಶಾಸ್ತ್ರ ವನ್ನು ಕೈಕೊಳ್ಳಬೇಕು ಎಂದು ಹಿಂದೆ ಕಾನೂನುಪರತೆಯ ಮನಸ್ಸಿದ್ದ ಫರಿಸಾಯರಾಗಿದ್ದ ವಿಶ್ವಾಸೀಗಳು ಪ್ರತಿಪಾದಿಸಿದರು.
14. (ಎ) ಯೆರೂಸಲೇಮಿನ ಸಂಮೇಳನದಲ್ಲಿ ವಾಗ್ವಾದವು ನಡೆದಿದ್ದರೂ, ಯಾವ ಒಂದು ಒಳ್ಳೇ ಮಾದರಿಯು ಇಡಲ್ಪಟ್ಟಿತು? (ಬಿ) ಆ ಸಮಯದಲ್ಲಿ ಪೇತ್ರನ ವಾದಮಂಡನೆಯ ತಿರುಳೇನಾಗಿತ್ತು?
14 ದೇವರ ಚಿತ್ತವನ್ನು ಖಚಿತ ಪಡಿಸಿ ಕೊಳ್ಳಲು ಒಂದು ಸಂಮೇಳನವನ್ನು ನಡೆಸಲಾಯಿತು. (15:6-11) ಹೌದು, ಬಹಳಷ್ಟು ಚರ್ಚೆ-ವಿವಾದವು ನಡೆಯಿತು, ಆದರೆ ಬಲವಾದ ನಿಶಿತ್ಚಾಭಿಪ್ರಾಯಗಳುಳ್ಳ ಪುರುಷರೋಪಾದಿ ಅವರಲ್ಲಿ ಹೋರಾಟಗಳಿರಲಿಲ್ಲ—ಇಂದಿನ ಹಿರಿಯರಿಗೆ ಒಂದು ಒಳ್ಳೆಯ ಮಾದರಿಯಾಗಿರುತ್ತದೆ ! ಅದಾದ ನಂತರ ಪೇತ್ರನು ಅಂದದ್ದು: ‘ಅನ್ಯಜನರು [ಕೊರ್ನೇಲ್ಯನಂತವರು] ಸುವಾರ್ತೆಯನ್ನು ನನ್ನ ಬಾಯಿಂದ ಕೇಳಿ ನಂಬಬೇಕೆಂದು ದೇವರು ನನ್ನನ್ನು ಆರಿಸಿಕೊಂಡನು. ಅವರಿಗೆ ಪವಿತ್ರಾತ್ಮವನ್ನು ದಯಪಾಲಿಸಿದರ್ದ ಮೂಲಕ ಸಾಕ್ಷಿ ಕೊಟ್ಟು ನಮಗೂ ಅವರಿಗೂ ಏನೂ ಭೇದಮಾಡಲಿಲ್ಲ. [ಅ.ಕೃತ್ಯಗಳು 10:44-47] ಹೀಗಿರುವುದರಿಂದ ನಮ್ಮ ಪಿತೃಗಳಾಗಲಿ ನಾವಾಗಲಿ ಹೊರಲಾರದ ನೊಗವನ್ನು [ನಿಯಮ ಶಾಸ್ತ್ರವನ್ನು ಕೈಗೊಳ್ಳುವ ಹಂಗು] ಅವರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಯಾಕೆ? ಕರ್ತನಾದ ಯೇಸುವಿನ ಕೃಪೆಯಿಂದಲೇ ನಾವು [ಮಾಂಸಿಕ ರೀತಿಯಲ್ಲಿ ಯೆಹೂದ್ಯರು] ರಕ್ಷಣೆಹೊಂದುವೆವೆಂಬದಾಗಿ ನಂಬುತ್ತೇವೆಲ್ಲಾ; ಹಾಗೆಯೇ ಅವರೂ ಹೊಂದುವರು.’ ರಕ್ಷಣೆಗಾಗಿ ಸುನ್ನತಿ ಮತ್ತು ನಿಯಮ ಶಾಸ್ತ್ರ ವನ್ನು ಕೈಗೊಳ್ಳುವುದು ಅವಶ್ಯಕವಾಗಿರುವುದಿಲ್ಲವೆಂದು ಸುನ್ನತಿಯಾಗದ ಅನ್ಯಜನರನ್ನು ದೇವರು ಸ್ವೀಕರಿಸಿದ್ದು ತೋರಿಸಿತು.—ಗಲಾತ್ಯದವರಿಗೆ 5:1.
15. ಯಾವ ಮೂಲ ವಿಷಯಗಳನ್ನು ಯಾಕೋಬನು ಹೇಳಿದನು, ಮತ್ತು ಅನ್ಯಜನರ ಕ್ರೈಸ್ತರಿಗೆ ಏನು ಬರೆಯಲು ಅವನು ಸೂಚಿಸಿದನು?
15 ಪೇತ್ರನು ಮಾತಾಡಿ ಮುಗಿಸಿದ ನಂತರ ಸಭೆಯು ಮೌನವಾಯಿತು, ಆದರೆ ಇನ್ನಷ್ಟು ಹೇಳಲಿಕ್ಕಿತ್ತು. (15:12-21) ಬಾರ್ನಬನೂ ಪೌಲನೂ ಅನ್ಯಜನರಲ್ಲಿ ದೇವರು ಅವರ ಮೂಲಕ ನಡಿಸಿದ ಸೂಚಕ ಕಾರ್ಯಗಳನ್ನು ತಿಳಿಸಿದರು. ಅನಂತರ ಅಧ್ಯಕ್ಷನಾಗಿದ್ದ, ಯೇಸುವಿನ ಮಲತಮ್ಮನಾದ ಯಾಕೋಬನು ಹೇಳಿದ್ದು: ‘ದೇವರು ಮೊದಲಲ್ಲಿ ಅನ್ಯಜನರನ್ನು ಕಟಾಕ್ಷಿಸಿ ನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು ಆರಿಸಿ ಕೊಂಡ ವಿಧವನ್ನು ಸಿಮೆಯೋನನು [ಪೇತ್ರನ ಇಬ್ರಿಯ ಹೆಸರು] ವಿವರಿಸಿದನು.’ ಯೆಹೂದ್ಯರಿಂದಲೂ, ಅನ್ಯಜನರಿಂದಲೂ ಯೇಸುವಿನ ಶಿಷ್ಯರ (ರಾಜ್ಯದ ಬಾಧ್ಯಸ್ಥರು) ಒಟ್ಟುಗೂಡಿಸುವಿಕೆಯು, “ದಾವೀದನ ಗುಡಾರವನ್ನು” (ದಾವೀದನ ಸಂತತಿಯ ರಾಜತ್ವದ ಪುನಃ ಸ್ಥಾಪಿಸುವಿಕೆ) ಎತ್ತಿ ಸರಿಪಡಿಸುವಿಕೆಯ ಮುಂತಿಳಿಸಿದ ಪ್ರವಾದನೆಯ ನೆರವೇರಿಕೆಯಾಗಿದೆ ಎಂದು ಯಾಕೋಬನು ಸೂಚಿಸಿದನು. (ಆಮೋಸ 9:11,12, ಸೆಪ್ತುವಜಿಂಟ್; ರೋಮಾಪುರದವರಿಗೆ 8:17) ದೇವರು ಇದನ್ನು ಉದ್ದೇಶಿಸಿರುವುದರಿಂದ, ಶಿಷ್ಯರು ಇದನ್ನು ಸ್ವೀಕರಿಸಬೇಕಾಗಿದೆ. (1) ವಿಗ್ರಹಗಳಿಂದ ಮಲಿನಗೊಂಡ ವಸ್ತುಗಳನ್ನೂ (2) ಹಾದರವನ್ನೂ (3) ರಕ್ತ ಮತ್ತು ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಅವರು ವಿಸರ್ಜಿಸುವಂತೆ ಅನ್ಯಜನರಾದ ಕ್ರೈಸ್ತರಿಗೆ ಬರೆಯಲು ಯಾಕೋಬನು ಸಲಹೆಕೊಟ್ಟನು. ಈ ನಿಷೇಧಗಳು ಪ್ರತಿ ಸಬ್ಬತ್ ದಿನದಲ್ಲಿ ಓದಲ್ಪಡುತ್ತಿದ್ದ ಮೋಶೆಯ ಬರವಣಿಗೆಗಳಲ್ಲಿ ಇದ್ದವು.—ಆದಿಕಾಂಡ 9:3, 4; 12:15-17; 35:2, 4.
16. ಯಾವ ಮೂರು ವಿಷಯಗಳಲ್ಲಿ ಮೊದಲನೆಯ ಶತಮಾನದ ಆಡಳಿತ ಮಂಡಲಿಯ ಕಾಗದದಲ್ಲಿ ಇಂದಿನ ತನಕ ಮಾರ್ಗದರ್ಶನೆಯಾಗಿರುವುದು ಕೊಡಲ್ಪಟ್ಟಿತ್ತು?
16 ಈಗ ಆಡಳಿತ ಮಂಡಲಿಯು ಒಂದು ಕಾಗದವನ್ನು ಸಿರಿಯಾದ ಅಂತಿಯೋಕ ಮತ್ತು ಕಿಲಿಕ್ಯದಲ್ಲಿರುವ ಅನ್ಯಜನಾಂಗದ ಕ್ರೈಸ್ತರಿಗೆ ಬರೆಯಿತು. (15:22-35) ಪವಿತ್ರಾತ್ಮನೂ, ಕಾಗದ ಬರೆದವರೂ ವಿಗ್ರಹಗಳಿಗೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ (ಕೆಲವರು ಕ್ರಮವಾಗಿ ಸೇವಿಸುತ್ತಿದ್ದರು), ರಕ್ತವನ್ನು ಹೊರಗೆ ಸುರಿಸದೇ ಕುತ್ತಿಗೆ ಹಿಸುಕಿ ಕೊಂದದ್ದನ್ನೂ (ಅನೇಕ ವಿಧರ್ಮಿಯರು ಅಂತಹ ಮಾಂಸ ಒಂದು ರುಚಿಕರ ಭಕ್ಷ್ಯವೆಂದೆಣಿಸುತ್ತಿದ್ದರು), ಮತ್ತು ಹಾದರ (ಗ್ರೀಕ್, ಫೊರ್ನೀಯಾ, ಶಾಸ್ತ್ರೀಯ ಮದುವೆಯ ಹೊರಗಣ ನಿಷಿದ್ಧಕರ ಲೈಂಗಿಕ ಸಂಬಂಧಗಳನ್ನು ಸೂಚಿಸುತ್ತದೆ) ವಿಸರ್ಜಿಸುವಂತೆ ಕೇಳಿಕೊಂಡರು. ಈ ರೀತಿ ವಿಸರ್ಜಿಸುವುದರಿಂದ ಅವರು ಆತ್ಮೀಕವಾಗಿ ಏಳಿಗೆಹೊಂದುವರು, ತದ್ರೀತಿಯಲ್ಲಿ ಯೆಹೋವನ ಸಾಕ್ಷಿಗಳು ಇಂದು “ಈ ಅವಶ್ಯಕ ಸಂಗತಿಗಳಿಗನುಸಾರ ನಡೆಯುವುದರಿಂದ” ಅವರೂ ಏಳಿಗೆ ಹೊಂದುತ್ತಿದ್ದಾರೆ. “ಒಳ್ಳೆಯ ಆರೋಗ್ಯ ನಿಮಗಾಗಲಿ !” (NW) ಅಂದರೆ “ಶುಭವಿದಾಯ” ಕೋರುವುದಕ್ಕೆ ಸಮಾನವಾಗಿರುತ್ತದೆಯೇ ಹೊರತು ಈ ಆವಶ್ಯಕತೆಗಳು ಪ್ರಮುಖವಾಗಿ ಆರೋಗ್ಯದ ದೃಷ್ಟಿಯಿಂದ ಕೊಡಲ್ಪಟ್ಟಿದ್ದವು ಎಂದೆಣಿಸಬಾರದು. ಅಂತಿಯೋಕ್ಯದಲ್ಲಿ ಕಾಗದವು ಓದಲ್ಪಟ್ಟಾಗ, ನೀಡಲ್ಪಟ್ಟ ಪ್ರೋತ್ಸಾಹನೆಗಾಗಿ ಸಭೆಯು ಬಹಳ ಆನಂದ ಪಟ್ಟಿತು. ಆ ಸಮಯದಲ್ಲಿ ಪೌಲ, ಸೀಲ, ಬಾರ್ನಬರ ಮತ್ತು ಇತರರ ಪ್ರೋತ್ಸಾಹನೆಯ ಮಾತುಗಳಿಂದ ಅಂತಿಯೋಕ್ಯದಲ್ಲಿರುವ ದೇವಜನರು ನಂಬಿಕೆಯಲ್ಲಿ ದೃಢಗೊಳಿಸಲ್ಪಟ್ಟರು. ಸಹ ವಿಶ್ವಾಸೀಗಳನ್ನು ಪ್ರೋತ್ಸಾಹಿಸಲು ಮತ್ತು ಕಟ್ಟಲು ನಾವೂ ಕೂಡಾ ಮಾರ್ಗಗಳನ್ನು ಹುಡುಕೋಣ.
ಎರಡನೆಯ ಮಿಶನೆರಿ ಪ್ರಯಾಣ ಆರಂಭಿಸುತ್ತದೆ
17. (ಎ) ಎರಡನೆಯ ಮಿಶನೆರಿ ಪ್ರಯಾಣವನ್ನು ಪ್ರಸ್ತಾಪಿಸಿದಾಗ, ಯಾವ ಸಮಸ್ಯೆಯು ಎದಿತ್ದು? (ಬಿ) ತಮ್ಮ ವಿವಾದವನ್ನು ಪೌಲ ಬಾರ್ನಬರು ಹೇಗೆ ನಿರ್ವಹಿಸಿದರು?
17 ಎರಡನೆಯ ಮಿಶನೆರಿ ಪ್ರಯಾಣವನ್ನು ಪ್ರಸ್ತಾಪಿಸಿದಾಗ ಒಂದು ಸಮಸ್ಯೆಯು ಏಳುತ್ತದೆ. (15:36-41) ತಾನು ಮತ್ತು ಬಾರ್ನಬನು ಕುಪ್ರ ದ್ವೀಪ ಮತ್ತು ಏಶ್ಯಾ ಮೈನರನ್ನು ಪುನಃ ಭೇಟಿ ಮಾಡುವುದನ್ನು ಪೌಲನು ಸೂಚಿಸಿದನು. ಬಾರ್ನಬನು ಒಪ್ಪಿದನಾದರೂ, ಅವನ ದಾಯಾದನಾಗಿದ್ದ ಮಾರ್ಕನನ್ನು ತಮ್ಮೊಂದಿಗೆ ಕೊಂಡೊಯ್ಯಲು ಬಯಸಿದನು. ಪೌಲನು ಇದನ್ನು ಸಹಮತಿಸಲಿಲ್ಲ ಯಾಕಂದರೆ ಮಾರ್ಕನು ಅವರನ್ನು ಪಂಫುಲ್ಯದಲ್ಲಿ ತ್ಯಜಿಸಿಹೋಗಿದ್ದನು. ಆಗ “ತೀಕ್ಷ್ಣ ವಾಗ್ವಾದವು” ಉಂಟಾಯಿತು. ಆದರೆ ಪೌಲನಾಗಲಿ, ಬಾರ್ನಬನಾಗಲಿ ಅವರ ವೈಯಕ್ತಿಕ ವ್ಯವಹಾರದಲ್ಲಿ ಇತರ ಹಿರಿಯರನ್ನು ಇಲ್ಲವೇ ಆಡಳಿತ ಮಂಡಲಿಯನ್ನು ಒಳಗೂಡಿಸುವುದರ ಮೂಲಕ ತಮ್ಮ ಸ್ವಂತ ಸಮರ್ಥನೆಯನ್ನು ಮಾಡಿಕೊಳ್ಳಲು ಹುಡುಕಲಿಲ್ಲ. ಎಂಥಹ ಉತ್ತಮ ಉದಾಹರಣೆ !
18. ಪೌಲ ಬಾರ್ನಬರ ಅಗಲುವಿಕೆಯಿಂದ ಏನು ಸಂಭವಿಸಿತು, ಮತ್ತು ಈ ಘಟನೆಯಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು?
18 ಆದಾಗ್ಯೂ, ಈ ವಿವಾದವು ಅವರ ಅಗಲುವಿಕೆಗೆ ಕಾರಣವಾಯಿತು. ಬಾರ್ನಬನು ತನ್ನೊಂದಿಗೆ ಮಾರ್ಕನನ್ನು ತೆಗೆದು ಕೊಂಡು ಕುಪ್ರದ್ವೀಪಕ್ಕೆ ಹೋದನು. ಪೌಲನು ತನ್ನ ಸಂಗಡಿಗನಾದ ಸೀಲನೊಂದಿಗೆ “ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ದೃಢಪಡಿಸಿದನು.” ಬಾರ್ನಬನು ಕುಟುಂಬ ಸಂಬಂಧಗಳಿಂದ ಪ್ರಭಾವಿತನಾಗಿದ್ದಿರಬಹುದು, ಆದರೆ ಅವನು ಪೌಲನ ಅಪೊಸ್ತಲತ್ವವನ್ನು ಮತ್ತು “ಆರಿಸಿಕೊಂಡಿರುವ ಸಾಧನ”ವೆಂಬುದನ್ನು ಅಂಗೀಕರಿಸಬೇಕಿತ್ತು. (ಅ.ಕೃತ್ಯಗಳು 9:15) ಮತ್ತು ನಮ್ಮ ವಿಷಯದಲ್ಲೇನು? ದೇವಪ್ರಭುತ್ವ ಅಧಿಕಾರವನ್ನು ಮತ್ತು “ನಂಬಿಗಸ್ತನೂ ವಿವೇಕಿಯೂ ಆದ ಆಳಿನೊಂದಿಗೆ” ಪೂರ್ಣವಾಗಿ ಸಹಕರಿಸುವ ಆವಶ್ಯಕತೆಯನ್ನು ಇದು ನಮ್ಮಲ್ಲಿ ಅಚ್ಚೊತ್ತಬೇಕು !—ಮತ್ತಾಯ 24:45-47.
ಸಮಾಧಾನದಲ್ಲಿ ಪ್ರಗತಿ
19. ತಿಮೊಥಿಯಲ್ಲಿ ಆಧುನಿಕ ದಿನದ ಕ್ರೈಸ್ತ ಯುವಕರಿಗೆ ಯಾವ ಮಾದರಿಯು ಇದೆ?
19 ಈ ವಿವಾದವು ಸಭೆಯ ಸಮಾಧಾನವನ್ನು ಕೆಡಿಸಲು ಬಿಡಲ್ಪಡಲಿಲ್ಲ. ದೇವ ಜನರು ನಂಬಿಕೆಯಲ್ಲಿ ದೃಢಗೊಳಿಸಲ್ಪಡುತ್ತಾ ಹೋದರು. (16:1-5) ಪೌಲ ಸೀಲರು ದೆರ್ಬೆಗೆ, ಅಲ್ಲಿಂದ ಲುಸ್ತ್ರಕ್ಕೂ ಹೋದರು. ಅಲ್ಲಿ ಯೆಹೂದಿ ವಿಶ್ವಾಸೀಯಾಗಿದ್ದ ಯೂನಿಸಳ ಮತ್ತು ಅವಳ ಅವಿಶ್ವಾಸೀ ಗ್ರೀಕ್ ಗಂಡನ ಪುತ್ರನಾದ ತಿಮೊಥೆಯನೆಂಬವನು ವಾಸವಾಗಿದ್ದನು. ತಿಮೊಥಿಯು ಎಳೆಯನಾಗಿದ್ದನು, ಯಾಕಂದರೆ ಅದರ ನಂತರ ಸುಮಾರು 18 ಯಾ 20 ವರ್ಷಗಳ ನಂತರ ಅವನ ವಿಷಯ ಇನ್ನೂ ಹೇಳಿದ್ದು: “ಯೌವನಸ್ಥನೆಂದು ನಿನ್ನನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಅವಕಾಶಕೊಡಬೇಡ.” (1 ತಿಮೊಥಿ 4:12) ಅವನ “ವಿಷಯದಲ್ಲಿ ಲುಸ್ತ್ರ ದಲ್ಲಿಯೂ ಮತ್ತು [ಸುಮಾರು 18 ಮೈಲು ದೂರದಲ್ಲಿರುವ] ಇಕೋನ್ಯದಲ್ಲಿಯೂ ಸಹೋದರರು ಒಳ್ಳೇ ಸಾಕ್ಷಿ ಹೇಳುತ್ತಿದ್ದರು.” ಯಾಕಂದರೆ ಅವನ ಉತ್ತಮ ಶುಶ್ರೂಷೆ ಮತ್ತು ದೈವಿಕ ಗುಣಗಳಿಗಾಗಿ ಪ್ರಖ್ಯಾತನಾಗಿದ್ದನು. ಅಂಥಹ ಪ್ರಖ್ಯಾತಿಯನ್ನು ಯೆಹೋವನ ಸಹಾಯದಿಂದ ಪಡೆಯಲು ಕ್ರೈಸ್ತ ಯುವಕರು ಇಂದು ಶ್ರಮಿಸತಕ್ಕದ್ದು. ತಿಮೊಥಿಯ ತಂದೆಯು ಗ್ರೀಕನೆಂದು ತಿಳಿದಿರುವ ಯೆಹೂದ್ಯರ ಮನೆಗಳಿಗೆ ಮತ್ತು ಸಭಾಮಂದಿರಗಳಿಗೆ ಅವರು ಹೋಗಲಿಕ್ಕಿದ್ದುದರಿಂದ ಮತ್ತು ಮೆಸ್ಸೀಯನ ಕುರಿತು ಕಲಿಯುವ ಜರೂರಿಯಿರುವ ಯೆಹೂದಿ ಸ್ತ್ರೀ-ಪುರುಷರಿಗೆ ಸಮೀಪಿಸಲು ಯಾವುದೇ ಅಡ್ಡಿ ಇರಬಾರದೆಂದು ಅಪೊಸ್ತಲನು ಬಯಸಿದ್ದರಿಂದ, ಪೌಲನು ತಿಮೊಥಿಯ ಸುನ್ನತಿಯನ್ನು ಮಾಡಿಸಿದನು. ಬೈಬಲಿನ ತತ್ವಗಳನ್ನು ಉಲ್ಲಂಘಿಸದೇ, ಇಂದು ಕೂಡಾ ಎಲ್ಲಾ ವಿಧದ ಜನರಿಗೆ ಸುವಾರ್ತೆಯು ತಲುಪಬೇಕೆಂಬ ಉದ್ದೇಶದಿಂದ ಯೆಹೋವನ ಸಾಕ್ಷಿಗಳು ತಮಗೆ ಮಾಡ ಸಾಧ್ಯವಿರುವುದನ್ನೆಲ್ಲಾ ಮಾಡುತ್ತಾರೆ.—1 ಕೊರಿಂಥದವರಿಗೆ 9:19-23.
20. ಮೊದಲನೆಯ ಶತಕದ ಆಡಳಿತ ಮಂಡಲಿಯ ಕಾಗದಕ್ಕನುಸಾರ ನಡೆದು ಕೊಂಡದ್ದರಿಂದಾದ ಪರಿಣಾಮವೇನು, ಮತ್ತು ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕೆಂದು ನೀವು ಎಣಿಸುತ್ತೀರಿ?
20 ಜತೆಯಲ್ಲಿ ತಿಮೊಥಿಯು ಪರಿಚಾರಕನಾಗಿದ್ದು, ಪೌಲ ಸೀಲರು ಆಡಳಿತ ಮಂಡಲಿಯು ನಿರ್ಣಯಿಸಿದ್ದ ವಿಧಿಗಳನ್ನು ಆಚರಿಸಲು ಒಪ್ಪಿಸಿದರು. ಫಲಿತಾಂಶವೇನಾಯಿತು? ಸಿರಿಯಾ, ಕಿಲಿಕ್ಯ ಮತ್ತು ಗಲಾತ್ಯವನ್ನು ಪ್ರಾಯಶಃ ಸೂಚಿಸುತ್ತಾ ಲೂಕನು ಬರೆದದ್ದು: “ಸಭೆಗಳು ನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.” ಹೌದು, ಆಡಳಿತ ಮಂಡಲಿಯ ಕಾಗದಕ್ಕನುಸಾರ ನಡೆದದ್ದರಿಂದ ಐಕ್ಯತೆ ಮತ್ತು ಆತ್ಮೀಕ ಏಳಿಗೆಯು ಆಯಿತು. ಯೆಹೋವನ ಜನರು ಐಕ್ಯತೆಯಲ್ಲಿರಲು ಮತ್ತು ನಂಬಿಕೆಯಲ್ಲಿ ದೃಢವಾಗಿ ನಿಲ್ಲುವ ಆವಶ್ಯಕತೆಯಿರುವ ನಮ್ಮ ಈ ಕ್ಲೇಶಕರ ಸಮಯಗಳಿಗಾಗಿ, ಇದು ಎಂಥಹ ಒಂದು ಉತ್ತಮ ಮಾದರಿಯಾಗಿರುತ್ತದೆ. ! (w90 6/15)
ನೀವು ಹೇಗೆ ಉತ್ತರಿಸುವಿರಿ?
◻ ಹಿಂಸೆಗೆ ಪೌಲ ಮತ್ತು ಬಾರ್ನಬರು ಹೇಗೆ ಪ್ರತಿವರ್ತಿಸಿದರು?
◻ ಈ ಉಲ್ಲೇಖದಿಂದ ಏನು ಕಲಿಯಬಲ್ಲೆವು: “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು”?
◻ ಮೊದಲನೆಯ ಶತಕದ ಆಡಳಿತ ಮಂಡಲಿಯಿಂದ ಕಳುಹಿಸಲ್ಪಟ್ಟ ಕಾಗದದಲ್ಲಿದ್ದ ಮೂರು ವಿಷಯಗಳಿಂದ ಯಾವ ಪಾಠವನ್ನು ನಾವು ಪಡೆಯುವೆವು?
◻ ಯೆಹೋವನ ಮೊದಲನೆಯ ಶತಕದ ಸಾಕ್ಷಿಗಳು ನಂಬಿಕೆಯಲ್ಲಿ ದೃಢರಾಗಿ ನಿಲ್ಲಲು ಮಾಡಿದ ವಿಷಯ-ಅಂಶಗಳು ನಮಗೆ ಇಂದು ಹೇಗೆ ಅನ್ವಯವಾಗುತ್ತವೆ?