“ಸುಳ್ಳು ಕಥೆಗಳನ್ನು ತಳ್ಳಿಬಿಡು”
ಜನರ ಕುರಿತಾದ ಅನುಭವಗಳು ಮತ್ತು ಕಥೆಗಳಿಂದ ಬೈಬಲ್ ತುಂಬಿಹೋಗಿದೆ. ಅವುಗಳನ್ನು ಓದುವುದರಲ್ಲಿ ನಾವು ಆನಂದಿಸುತ್ತೇವೆ ಮಾತ್ರವಲ್ಲ ಅವುಗಳಿಂದ ನಾವು ಪ್ರಯೋಜನವನ್ನೂ ಪಡೆಯುತ್ತೇವೆ. ರೋಮ್ನಲ್ಲಿದ್ದ ಕ್ರೈಸ್ತ ಸಭೆಗೆ ಅಪೊಸ್ತಲ ಪೌಲನು ಬರೆದದ್ದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.”—ರೋಮಾಪುರ 15:4.
ಅನುಭವಗಳನ್ನು ಹೇಳುವುದರಲ್ಲಿ ಸ್ವತಃ ಪೌಲನೇ ಭಾಗವಹಿಸಿದನು. ಅವರ ಪ್ರಥಮ ಮಿಷನೆರಿ ಸಂಚಾರದ ಸಮಾಪ್ತಿಯಲ್ಲಿ ಪೌಲ ಮತ್ತು ಬಾರ್ನಬರ ಕುರಿತು ಬೈಬಲ್ ಹೇಳುವುದು: “ಅಲ್ಲಿ [ಸಿರಿಯನ್ ಅಂತಿಯೋಕ್ಯದಲ್ಲಿ] ಸಭೆಯನ್ನು ಕೂಡಿಸಿ ದೇವರು ತಮ್ಮೊಂದಿಗಿದ್ದು ಮಾಡಿದ್ದೆಲ್ಲವನ್ನೂ ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲನ್ನು ತೆರೆದದ್ದನ್ನೂ ವಿವರವಾಗಿ ಹೇಳಿದರು.” (ಅ. ಕೃತ್ಯಗಳು 14:27) ನಿಸ್ಸಂಶಯವಾಗಿ ಸಹೋದರರು ಈ ಅನುಭವಗಳಿಂದ ಬಹಳವಾಗಿ ಉತ್ತೇಜಿಸಲ್ಪಟ್ಟರು.
ಹಾಗಿದ್ದರೂ, ಎಲ್ಲಾ ಅನುಭವಗಳು ಆತ್ಮೋನ್ನತಿ ಮಾಡುವಂಥವುಗಳಾಗಿರುವುದಿಲ್ಲ. ಪ್ರೇರಣೆಯ ಕೆಳಗೆ, ಪೌಲನು ತಿಮೊಥೆಯನನ್ನು ಎಚ್ಚರಿಸಿದ್ದು: “ಪವಿತ್ರವಾಗಿರುವುದನ್ನು ಉಲ್ಲಂಘಿಸುವ ಮತ್ತು ವೃದ್ಧ ಸ್ತ್ರೀಯರು ಹೇಳುವ ಸುಳ್ಳು ಕಥೆಗಳನ್ನು ತಳ್ಳಿಬಿಡು.” (1 ತಿಮೊಥೆಯ 4:7, NW) ಮತ್ತು ತೀತನಿಗೆ, ನಿಷ್ಠಾವಂತ ಕ್ರೈಸ್ತರು “ಯೆಹೂದ್ಯರ ಕಲ್ಪನಾಕಥೆಗಳಿಗೂ ಸತ್ಯಭ್ರಷ್ಟರಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ” ಇರಬೇಕೆಂದು ಅವನು ಬರೆದನು.—ತೀತ 1:14.
ಈ ಸುಳ್ಳು ಕಥೆಗಳು, ಅಥವಾ ಕಲ್ಪನಾಕಥೆಗಳು ಏನಾಗಿದ್ದವು? ಎರಡೂ ಪದಗಳು ಗ್ರೀಕ್ ಪದವಾದ ಮೈಥಾಸ್ (“ಮಿಥೈ”) ನಿಂದ ಬರುತ್ತವೆ. ಈ ಶಬ್ದವು “ನೈಜತೆಯೊಂದಿಗೆ ಸಂಬಂಧವಿರದ ಒಂದು (ಧಾರ್ಮಿಕ) ಕಥೆಯನ್ನು” ವರ್ಣಿಸುತ್ತದೆ ಎಂಬುದಾಗಿ ದ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ಹೇಳುತ್ತದೆ.
ಪೌಲನ ದಿನದ ಲೋಕವು ಇಂತಹ ಕಥೆಗಳಿಂದ ತುಂಬಿತ್ತು. ಬಹುಶಃ ಪೌಲನ ಸಮಯದ ಎರಡು ನೂರಕ್ಕಿಂತಲೂ ಹೆಚ್ಚು ವರ್ಷಗಳ ಮುಂಚೆ ಬರೆಯಲ್ಪಟ್ಟ ಟೋಬಿಟನ ಸಂದೇಹಾಸ್ಪದವಾದ ಪುಸ್ತಕವು ಒಂದು ಉದಾಹರಣೆಯಾಗಿದೆ. ಈ ಕಥೆಯು, ಅವನ ಕಣ್ಣುಗಳೊಳಗೆ ಪಕ್ಷಿಯೊಂದರ ಹಿಕ್ಕೆ ಬಿದ್ದಾಗ ಕುರುಡನಾದ ಧಾರ್ಮಿಕ ಶ್ರದ್ಧೆಯುಳ್ಳ ಟೋಬಿಟನ ಕುರಿತು ಹೇಳುತ್ತದೆ. ತದನಂತರ, ಸಾಲವೊಂದನ್ನು ವಸೂಲುಮಾಡಲು ತನ್ನ ಮಗನಾದ ಟೊಬಾಯಸನನ್ನು ಅವನು ಕಳುಹಿಸುತ್ತಾನೆ. ದಾರಿಯಲ್ಲಿ, ಒಬ್ಬ ದೇವದೂತನ ನಿರ್ದೇಶನದಿಂದ, ಒಂದು ಮೀನಿನ ಹೃದಯ, ಪಿತ್ತಜನಕಾಂಗ ಮತ್ತು ಪಿತ್ತರಸವನ್ನು ಟೊಬಾಯಸ್ ಪಡೆಯುತ್ತಾನೆ. ಮುಂದೆ, ಏಳು ಬಾರಿ ಮದುವೆಯಾದರೂ, ಮದುವೆಯ ರಾತ್ರಿಯಂದು ದುಷ್ಟಾತ್ಮದ ಮೂಲಕ ಪ್ರತಿಯೊಬ್ಬ ಗಂಡನು ಕೊಲ್ಲಲ್ಪಟ್ಟ ಕಾರಣದಿಂದ ಕನ್ಯೆಯಾಗಿ ಉಳಿದಿರುವ ಒಬ್ಬಾಕೆ ವಿಧವೆಯನ್ನು ಅವನು ಸಂಧಿಸುತ್ತಾನೆ. ದೇವದೂತನ ಪ್ರೋತ್ಸಾಹದಿಂದ ಟೊಬಾಯಸ್ ಅವಳನ್ನು ಮದುವೆಯಾಗುತ್ತಾನೆ ಮತ್ತು ಮೀನಿನ ಹೃದಯ ಮತ್ತು ಪಿತ್ತಜನಕಾಂಗವನ್ನು ಸುಡುವ ಮೂಲಕ ದೆವವ್ವನ್ನು ಓಡಿಸಿಬಿಡುತ್ತಾನೆ. ತದನಂತರ ಮೀನಿನ ಪಿತ್ತರಸದಿಂದ, ಟೊಬಾಯಸ್ ತನ್ನ ತಂದೆಯ ದೃಷ್ಟಿಯನ್ನು ಗುಣಪಡಿಸುತ್ತಾನೆ.
ಸ್ಪಷ್ಟವಾಗಿಗಿ, ಈ ಕಥೆಯು ಸತ್ಯವಾಗಿಲ್ಲ. ಅದರ ಕಾಲ್ಪನಿಕ ಸ್ವರೂಪ ಮತ್ತು ಮೂಢನಂಬಿಕೆಗೆ ಅದು ಕೊಡುವ ಕರೆಯಲ್ಲದೆ ಅದರಲ್ಲಿ ತಪ್ಪಿದೆ. ಉದಾಹರಣೆಗೆ, 257 ವರ್ಷಗಳ ಅಂತರದಿಂದ ಬೇರ್ಪಡಿಸಲ್ಪಟ್ಟ ಇಸ್ರಾಯೇಲಿನ ಇತಿಹಾಸದಲ್ಲಿನ ಘಟನೆಗಳು—ಉತ್ತರದಿಕ್ಕಿನ ಕುಲಗಳ ದಂಗೆ ಮತ್ತು ನಿನೆವೆಗೆ ಇಸ್ರಾಯೇಲ್ಯರ ಗಡೀಪಾರುಗೊಳಿಸುವಿಕೆ—ಇವೆರಡನ್ನೂ ಟೋಬಿಟನು ಕಣ್ಣಾರೆ ಕಂಡನೆಂದು ದಾಖಲೆಯು ಹೇಳುತ್ತದೆ. ಆದರೂ, ಅವನ ಮರಣದ ಸಮಯದಲ್ಲಿ ಟೋಬಿಟನು 112 ವರ್ಷ ಪ್ರಾಯದವನಾಗಿದ್ದನೆಂದು ಕಥೆಯು ಹೇಳುತ್ತದೆ.—ಟೋಬಿಟ್ 1:4, 11; 14:1, ದ ಜೆರೂಸಲೇಮ್ ಬೈಬಲ್.
ಅಂತಹ ಕಲ್ಪನಾಕಥೆಗಳು, ದೇವರ ನಂಬಿಗಸ್ತ ಸೇವಕರಿಂದ ಘೋಷಿಸಲ್ಪಡುವ ಸತ್ಯವಾದ “ಸ್ವಸ್ಥಬೋಧನಾವಾಕ್ಯಗಳ ಮಾದರಿ”ಗೆ ಅಸಮಂಜಸವಾಗಿವೆ. (2 ತಿಮೊಥೆಯ 1:13) ಅವು ದೇವಭಕ್ತಿರಹಿತ ವೃದ್ಧ ಹೆಂಗಸರ ಮೂಲಕ ಹೇಳಲ್ಪಡುವ ರೀತಿಯ ಐತಿಹಾಸಿಕ ನಿಜತ್ವಕ್ಕೆ ವಿರುದ್ಧವಾಗಿರುವ ಕಲ್ಪನೆಯ ಉತ್ಪನ್ನಗಳಾಗಿವೆ. ಇವು ಕ್ರೈಸ್ತರು ತಳ್ಳಿಬಿಡಬೇಕಾದ ಕಥೆಗಳಾಗಿದ್ದವು.
ಸತ್ಯದ ಮಾತುಗಳನ್ನು ಪರೀಕ್ಷಿಸುವುದು
ಅದೇ ರೀತಿಯ ಕಥೆಗಳು ಇಂದು ಯಥೇಚ್ಛವಾಗಿವೆ. ಪೌಲನು ಬರೆದದ್ದು: “[ಜನರು] ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; . . . ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.” (2 ತಿಮೊಥೆಯ 4:3, 4) ಭೂಮಿಯ ಕೆಲವು ಭಾಗಗಳಲ್ಲಿ, ಅಲೌಕಿಕ ವಿಷಯಗಳ ಕುರಿತಾದ ಕಥೆಗಳು ವ್ಯಾಪಕವೂ ಜನಪ್ರಿಯವೂ ಆಗಿವೆ. ಆದುದರಿಂದ, ಅವು ಬೈಬಲಿನೊಂದಿಗೆ ಹೊಂದಾಣಿಕೆಯಲ್ಲಿವೆಯೊ ಎಂಬುದನ್ನು ನೋಡಲು, ಕ್ರೈಸ್ತರು ವಿವೇಕಪೂರ್ಣವಾಗಿ ಧಾರ್ಮಿಕ ಕಥೆಗಳ “ಮಾತುಗಳನ್ನು ವಿವೇಚಿಸುತ್ತಾರೆ.”—ಯೋಬ 12:11.
ಸ್ಪಷ್ಟವಾಗಿಗಿ, ಅನೇಕ ಕಥೆಗಳು ಬೈಬಲಿನೊಂದಿಗೆ ಹೊಂದಾಣಿಕೆಯಲ್ಲಿಲ್ಲ. ಉದಾಹರಣೆಗೆ, ಲೋಕದ ಅನೇಕ ಭಾಗಗಳಲ್ಲಿ, ಮಾನವ ಆತ್ಮವು ಅಮರವಾಗಿದೆ ಎಂಬ ಅಭಿಪ್ರಾಯವನ್ನು ಬೆಂಬಲಿಸುವ ಕಥೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಒಬ್ಬ ವ್ಯಕ್ತಿಯು ಒಂದು ನವಜಾತ ಶಿಶುವಿನ ದೇಹದಲ್ಲಿಯೋ, ಒಂದು ಆತ್ಮವಾಗಿಯೋ, ಅಥವಾ ಒಂದು ಪ್ರತ್ಯೇಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯಾಗಿಯೋ ಪುನಃ ಕಾಣಿಸಿಕೊಳ್ಳಲಿಕ್ಕಾಗಿ ಮಾತ್ರ ಸಾಯುವುದನ್ನು ಈ ಕಥೆಗಳು ವರ್ಣಿಸುತ್ತವೆ.
ದೇವರ ವಾಕ್ಯವಾದರೊ, ಮಾನವ ಆತ್ಮಗಳು ಅಮರವಾಗಿಲ್ಲ; ಆತ್ಮಗಳು ಸಾಯುತ್ತವೆಂದು ತೋರಿಸುತ್ತದೆ. (ಯೆಹೆಜ್ಕೇಲ 18:4) ಇನ್ನೂ ಹೆಚ್ಚಾಗಿ, ಸತ್ತವರು ಯೋಚಿಸಲು, ಮಾತಾಡಲು, ಅಥವಾ ಯಾವುದನ್ನೂ ಮಾಡಲು ಅಶಕ್ತರಾಗಿದ್ದು, ಸಮಾಧಿಯಲ್ಲಿ ಜೀವರಹಿತವಾಗಿದ್ದಾರೆಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 9:5, 10; ರೋಮಾಪುರ 6:23) ಹೀಗೆ, ಆತ್ಮವು ಅಮರವಾಗಿದೆ ಎಂಬ ಅಭಿಪ್ರಾಯವನ್ನು ಪ್ರವರ್ತಿಸುವ ಸುಳ್ಳು ಕಥೆಗಳಿಂದ ದುರ್ಮಾರ್ಗಕ್ಕೆ ಎಳೆಯಲ್ಪಡುವವರು, ಪೌಲನು ಹೇಳಿದಂತೆ, ಬೈಬಲಿನ “ಸ್ವಸ್ಥಬೋಧನೆ” ಯಿಂದ “ಪ್ರತ್ಯೇಕವಾಗಿ ಸರಿದರು.”
ಅಲೌಕಿಕತೆಯ ಕಥೆಗಳು
ಇತರ ಕಥೆಗಳು ಮಾಟಗಾರ್ತಿಯರ ಮತ್ತು ಮಂತ್ರವಾದಿಗಳ ಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತವೆ. ಉದಾಹರಣೆಗೆ, ಆಫ್ರಿಕದ ಭಾಗಗಳಲ್ಲಿ, ಈ ಮಾಟಗಾರ್ತಿಯರು ಮತ್ತು ಮಂತ್ರವಾದಿಗಳು, ಸ್ವತಃ ತಮ್ಮನ್ನು ಅಥವಾ ಇತರರನ್ನು ಸರೀಸೃಪಗಳಾಗಿ, ಮಂಗಗಳಾಗಿ, ಮತ್ತು ಪಕ್ಷಿಗಳಾಗಿ ಪರಿವರ್ತಿಸಲು; ತಮ್ಮ ಧ್ಯೇಯಗಳನ್ನು ಸಾಧಿಸಲು ವಾಯುವಿನಲ್ಲಿ ಹಾರಲು; ಕಾಣಿಸಿಕೊಳ್ಳಲು ಮತ್ತು ಅದೃಶ್ಯವಾಗಲು; ಗೋಡೆಗಳ ಮಧ್ಯದಿಂದ ದಾಟಿಬರಲು; ಮತ್ತು ನೆಲದ ಕೆಳಗೆ ಹೂತಿಟ್ಟ ವಸ್ತುಗಳನ್ನು ಕಾಣಲು ಸಾಧ್ಯಗೊಳಿಸುವ ಭಯಂಕರ ಶಕಿಗ್ತಳಿಂದ ಸನ್ನದ್ಧರಾಗಿದ್ದಾರೆಂದು ಹೇಳಲಾಗುತ್ತದೆ.
ಇಂತಹ ಕಥೆಗಳಲ್ಲಿ ವ್ಯಾಪಕವಾದ ನಂಬಿಕೆಯೊಂದಿಗೆ, ಅವುಗಳ ಮಹಾ ಸಮೃದ್ಧಯು, ಅವು ಸತ್ಯವಾಗಿವೆಯೆಂದು ನಂಬುವಂತೆ ಕ್ರೈಸ್ತ ಸಭೆಯಲ್ಲಿ ಕೆಲವರನ್ನು ಪ್ರಭಾವಿಸಬಹುದು. ಸಾಧಾರಣ ಮಾನವರಿಗೆ ಇಂತಹ ವಿಷಯಗಳನ್ನು ಮಾಡಲು ಸಾಧ್ಯವಿಲ್ಲವಾದರೂ, ಆತ್ಮಿಕ ಜೀವಿಗಳಾದ ದೆವ್ವಗಳಿಂದ ಅತಿಮಾನುಷ ಶಕ್ತಿಗಳನ್ನು ಪಡೆಯುವವರು ಅಂತಹ ವಿಷಯಗಳನ್ನು ಮಾಡಬಲ್ಲರೆಂದು ಅವರು ತರ್ಕಿಸಬಹುದು. ಈ ತೀರ್ಮಾನಕ್ಕೆ ಒಂದು ಸಂಭಾವ್ಯ ಆಧಾರವು 2 ಥೆಸಲೊನೀಕ 2:9, 10 ಆಗಿದೆ. ಅದು ಹೇಳುವುದು: “ಆ ಅಧರ್ಮಸ್ವರೂಪನ ಪ್ರತ್ಯಕ್ಷತೆಯು ಸೈತಾನನ ಮಾಟಕ್ಕನುಗುಣವಾಗಿರುವದು. ಅದು ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶನಮಾರ್ಗದಲ್ಲಿರುವವರಿಗೋಸ್ಕರ ಸಂಭವಿಸುವದು. ಅವರು ಸತ್ಯದ ಮೇಲೆ ಪ್ರೀತಿಯನ್ನಿಡದ ಕಾರಣದಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.”
ಸೈತಾನನು ಮಹತ್ಕಾರ್ಯಗಳ ವಿಷಯದಲ್ಲಿ ಸಮರ್ಥನಾಗಿದ್ದಾನೆಂದು ಈ ವಚನವು ತೋರಿಸುವ ಸಂಗತಿಯು ಸತ್ಯವಾಗಿದ್ದರೂ, ಸೈತಾನನು “ಮೋಸಗೊಳಿಸುವ ಸೂಚಕಕಾರ್ಯ ಅದ್ಭುತಕಾರ್ಯ” ಅಷ್ಟೇ ಅಲ್ಲದೆ “ದುರ್ನೀತಿಯ ಎಲ್ಲಾ ವಂಚನೆಯ” ಕರ್ತೃ ಕೂಡ ಆಗಿದ್ದಾನೆಂದು ಅದು ತಿಳಿಸುತ್ತದೆ. ಏಕರೂಪವಾಗಿ, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ” ಪ್ರಧಾನ ವಂಚಕನು ಸೈತಾನನಾಗಿದ್ದಾನೆಂದು ಬೈಬಲ್ ತೋರಿಸುತ್ತದೆ. (ಪ್ರಕಟನೆ 12:9) ಸತ್ಯವಾಗಿರದ ವಿಷಯಗಳನ್ನು ಜನರು ನಂಬುವಂತೆ ಮಾಡುವುದರಲ್ಲಿ ಅವನು ನಿಪುಣನಾಗಿದ್ದಾನೆ.
ಈ ಕಾರಣದಿಂದಾಗಿ, ಪ್ರೇತವ್ಯವಹಾರ ಮತ್ತು ಮಾಟದಲ್ಲಿ ಒಳಗೊಂಡಿರುವವರ ಸಾಕ್ಷ್ಯ ಮತ್ತು ಅಭಿಪ್ರಾಯ ಪ್ರಕಟನೆಗಳು ಕೂಡ ಅನೇಕ ವೇಳೆ ತೀರಾ ಅವಿಶ್ವಾಸಾರ್ಹ. ತಾವು ಕೆಲವೊಂದು ವಿಷಯಗಳನ್ನು ಕಂಡಿದ್ದೇವೆ, ಕೇಳಿದ್ದೇವೆ, ಇಲ್ಲವೆ ಅನುಭವಿಸಿದ್ದೇವೆಂದು ಇಂತಹ ಜನರು ಯಥಾರ್ಥವಾಗಿ ನಂಬಬಹುದು; ಆದರೂ, ವಾಸ್ತವದಲ್ಲಿ, ಅವರು ಅನುಭವಿಸಿರುವುದಿಲ್ಲ. ಉದಾಹರಣೆಗೆ, ಸತ್ತ ಜನರ ಆತ್ಮಗಳೊಂದಿಗೆ ತಾವು ಸಂಸರ್ಗ ಮಾಡಿದ್ದೇವೆಂದು ನೆನಸುವವರಿದ್ದಾರೆ. ಆದರೆ ಅವರು ತಪ್ಪಾಗಿ ಗ್ರಹಿಸಿದ್ದಾರೆ, ವಂಚಿಸಲ್ಪಟ್ಟಿದ್ದಾರೆ, ಸೈತಾನಿಕ ವಂಚನೆಯ ಬಲಿಪಶುಗಳಾಗಿದ್ದಾರೆ. ಸತ್ತವರು “ಮೌನಲೋಕವನ್ನು ಸೇರು” ತ್ತಿದ್ದಾರೆಂದು ಬೈಬಲ್ ಹೇಳುತ್ತದೆ.—ಕೀರ್ತನೆ 115:17.
ಪಿಶಾಚನ ವಂಚನೆಯ ಇತಿಹಾಸದ ನೋಟದಲ್ಲಿ, ಯಾವುದೇ ವಿದ್ಯಮಾನದಲ್ಲಿ ಅಲೌಕಿಕ ಕಥೆಗಳ ಸತ್ಯತೆಯು ಸಂದೇಹಾಸ್ಪದವಾಗಿ ಪರಿಗಣಿಸಲ್ಪಡಲು ಅರ್ಹವಾಗಿದೆ. ಹೆಚ್ಚಿನವು ಸಂತತವಾದ ಪುನಃ ಹೇಳುವಿಕೆಯಿಂದ ಅತಿಶಯಿಸಲ್ಪಟ್ಟ ಮೂಢಭಕ್ತಿಯ ಕಲ್ಪನೆಗಳಾಗಿವೆ.
ಇಂತಹ ಕಲ್ಪನಾಕಥೆಗಳನ್ನು ಪುನರುಚ್ಚರಿಸುವುದು, ಸುಳ್ಳಿನ ಮೂಲಪುರುಷ, ಪಿಶಾಚನಾದ ಸೈತಾನನ ಅಭಿರುಚಿಗಳನ್ನು ಪ್ರವರ್ತಿಸುತ್ತದೆ. (ಯೋಹಾನ 8:44) ಯೆಹೋವನಿಗೆ ಅಸಹ್ಯವಾಗಿರುವ ಮಾಂತ್ರಿಕ ಆಚರಣೆಗಳಲ್ಲಿ ಅವು ಆಸಕ್ತಿಯನ್ನು ಕೆರಳಿಸುತ್ತವೆ. (ಧರ್ಮೋಪದೇಶಕಾಂಡ 18:10-12) ಅವು ಜನರನ್ನು ಭಯ ಮತ್ತು ಮೂಢಭಕ್ತಿಯ ಜಾಲದಲ್ಲಿ ಬಂಧಿಸುತ್ತವೆ. “ಕಲ್ಪನಾಕಥೆಗಳಿಗೂ . . . ಲಕ್ಷ್ಯಕೊಡದೆ” ಇರಬೇಕೆಂದು ಪೌಲನು ಕ್ರೈಸ್ತರಿಗೆ ಸಲಹೆ ನೀಡಿದರ್ದಲ್ಲಿ ಆಶ್ಚರ್ಯವೇನೂ ಇಲ್ಲ.—1 ತಿಮೊಥೆಯ 1:3, 4.
ದೆವ್ವಗಳ ಸಾಕ್ಷ್ಯವನ್ನು ತಿರಸ್ಕರಿಸುವುದು
ಆದರೆ ಕಥೆಗಳು ಸತ್ಯವಾಗಿ ತೋರಿದರೆ ಆಗೇನು? ಕೆಲವೊಮ್ಮೆ ಆತ್ಮಗಳು ಯಾ ಆಧ್ಯಾತ್ಮವಾದಿಗಳು ಯೆಹೋವನ ಪರಮಾಧಿಕಾರವನ್ನು ಮತ್ತು ಆತನ ಸಾಕ್ಷಿಗಳ ಸತ್ಯತೆಯನ್ನು ಅಂಗೀಕರಿಸುತ್ತಿರುವುದರ ಅನುಭವಗಳ ಕುರಿತು ಹೇಳಲಾಗುತ್ತದೆ. ಇಂತಹ ಕಥೆಗಳನ್ನು ಕ್ರೈಸ್ತರು ಪುನರುಚ್ಚರಿಸಬೇಕೊ?
ಇಲ್ಲ, ಅವರು ಪುನರುಚ್ಚರಿಸಬಾರದು. ಯೇಸು ದೇವರ ಕುಮಾರನಾಗಿದ್ದನೆಂದು ದುಷ್ಟಾತ್ಮಗಳು ಕೂಗಿಕೊಂಡಾಗ, ಅವನು “ತಾನು ಇಂಥವನೆಂಬದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಹೇಳಿದನು.” (ಮಾರ್ಕ 3:12) ಅದೇ ರೀತಿಯಲ್ಲಿ, ಪೌಲ ಮತ್ತು ಬಾರ್ನಬರನ್ನು “ಪರಾತ್ಪರನಾದ ದೇವರ ದಾಸರು” ಮತ್ತು “ರಕ್ಷಣೆಯ ಮಾರ್ಗ”ದ ಪ್ರಚಾರಕರೆಂದು ಹುಡುಗಿಯೊಬ್ಬಳು ಗುರುತಿಸುವಂತೆ ಭವಿಷ್ಯಜ್ಞಾನದ ಒಂದು ದೆವ್ವವು ಬಲವಂತಪಡಿಸಿದಾಗ, ಪೌಲನು ಆಕೆಯಿಂದ ಆತ್ಮವನ್ನು ಹೊರದೂಡಿದನು. (ಅ. ಕೃತ್ಯಗಳು 16:16-18) ದೇವರ ಉದ್ದೇಶ ಅಥವಾ ಆತನ ಆಯ್ದ ಸೇವಕರ ಕುರಿತು ದೆವ್ವಗಳು ಸಾಕ್ಷಿ ನೀಡುವಂತೆ ಯೇಸುವಾಗಲಿ, ಪೌಲನಾಗಲಿ, ಯಾ ಬೈಬಲ್ ಬರಹಗಾರರಲ್ಲಿ ಯಾವ ಬರಹಗಾರನೇ ಆಗಲಿ ಅನುಮತಿಸಲಿಲ್ಲ.
ಭೂಮಿಗೆ ಬರುವ ಮೊದಲು ಯೇಸು ಕ್ರಿಸ್ತನು ಆತ್ಮಲೋಕದಲ್ಲಿ ಜೀವಿಸಿದ್ದನು ಎಂಬ ಸಂಗತಿಯೂ ಗಮನಾರ್ಹವಾಗಿದೆ. ಸೈತಾನನನ್ನು ಅವನು ವೈಯಕ್ತಿಕವಾಗಿ ಅರಿತಿದ್ದನು. ಆದರೂ, ಯೇಸು ಸೈತಾನನ ಚಟುವಟಿಕೆಗಳ ಕುರಿತಾದ ಕಥೆಗಳಿಂದ ಅವನ ಶಿಷ್ಯರನ್ನು ರಂಜಿಸಲಿಲ್ಲ, ಯಾ ಸೈತಾನನು ಏನನ್ನು ಮಾಡಸಾಧ್ಯವಿತ್ತು ಮತ್ತು ಏನನ್ನು ಮಾಡಸಾಧ್ಯವಿರಲಿಲ್ಲ ಎಂಬುದರ ಕುರಿತು ವಿವರಗಳನ್ನು ಅವನು ಒದಗಿಸಲಿಲ್ಲ. ಸೈತಾನನು ಮತ್ತು ಅವನ ದೆವ್ವಗಳು ಯೇಸುವಿನ ಗೆಳೆಯರಾಗಿರಲಿಲ್ಲ. ಅವರು ಬಹಿಷ್ಕೃತರೂ, ದಂಗೆಕೋರರೂ, ಪವಿತ್ರವಾದುದನ್ನು ದ್ವೇಷಿಸುವವರೂ, ದೇವರ ವೈರಿಗಳೂ ಆಗಿದ್ದರು.
ನಾವು ತಿಳಿಯಲವಶ್ಯವಿರುವ ವಿಷಯದ ಕುರಿತು ಬೈಬಲ್ ನಮಗೆ ಹೇಳುತ್ತದೆ. ದೆವ್ವಗಳು ಯಾರು, ಅವು ಜನರನ್ನು ಹೇಗೆ ತಪ್ಪು ದಾರಿಗೆ ಎಳೆಯುತ್ತವೆ, ಮತ್ತು ನಾವು ಅವುಗಳನ್ನು ಹೇಗೆ ತೊರೆಯಬಲ್ಲೆವೆಂದು ಅದು ವಿವರಿಸುತ್ತದೆ. ಯೆಹೋವ ಮತ್ತು ಯೇಸು ದೆವ್ವಗಳಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದಾರೆಂದು ಅದು ತೋರಿಸುತ್ತದೆ. ಯೆಹೋವನನ್ನು ನಾವು ನಿಷ್ಠೆಯಿಂದ ಸೇವಿಸುವುದಾದರೆ, ದುಷ್ಟಾತ್ಮಗಳು ಯಾವುದೇ ಶಾಶ್ವತವಾದ ಹಾನಿಯನ್ನು ನಮಗೆ ಮಾಡಸಾಧ್ಯವಿಲ್ಲವೆಂದು ಅದು ಉಪದೇಶಿಸುತ್ತದೆ.—ಯಾಕೋಬ 4:7.
ಹಾಗಾದರೆ, ಒಳ್ಳೆಯ ಕಾರಣದಿಂದ ಕ್ರೈಸ್ತರು, ದೇವರನ್ನು ವಿರೋಧಿಸುವವರ ಅಭಿರುಚಿಗಳನ್ನು ಪ್ರವರ್ತಿಸುವುದರಲ್ಲಿ ಮಾತ್ರ ಫಲಿಸುವ ಸುಳ್ಳು ಕಥೆಗಳನ್ನು ತಳ್ಳಿ ಹಾಕುತ್ತಾರೆ. ಯೇಸು ‘ಸತ್ಯದ ವಿಷಯವಾಗಿ ಸಾಕ್ಷಿ’ ಹೇಳಿದಂತೆಯೇ ಅವನ ಹಿಂಬಾಲಕರಿಂದು ಮಾಡುತ್ತಾರೆ. (ಯೋಹಾನ 18:37) ವಿವೇಕಪೂರ್ಣವಾಗಿ ಅವರು ಬೈಬಲಿನ ಬುದ್ಧಿವಾದಕ್ಕೆ ಗಮನಕೊಡುತ್ತಾರೆ: “ಯಾವಾವದು ಸತ್ಯವೂ . . . ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”—ಫಿಲಿಪ್ಪಿ 4:8.
[ಪುಟ 31 ರಲ್ಲಿರುವ ಚಿತ್ರ]
ರಹಸ್ಯವಾದದ ಎಲ್ಲ ತೋರಿಕೆಗಳು ಸತ್ಯ ಕ್ರೈಸ್ತರಿಂದ ಖಂಡಿತವಾಗಿ ತೊರೆಯಲ್ಪಡಬೇಕು