ಐದು ಸಾಮಾನ್ಯ ತರ್ಕದೋಷಗಳು ಅವುಗಳಿಂದ ಮೋಸ ಹೋಗಬೇಡಿರಿ!
“ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ.”a ಈ ಸಲಹೆಯು ಸುಮಾರು 2000 ವರ್ಷಗಳ ಹಿಂದೆ ಕೊಡಲ್ಪಟ್ಟಿದ್ದು, ಇನ್ನೂ ಸತ್ಯವಾಗಿ ಘಣಘಣಿಸುತ್ತದೆ. ಇಂದು ನಾವು ಮನವೊಪ್ಪಿಸುವ ಮಾತುಗಳ ಸತತವಾದ ಹೊಡೆತಕ್ಕೆ ಗುರಿಯಾಗಿದ್ದೇವೆ: ಚಲನ ಚಿತ್ರ ತಾರೆಗಳು ಕಾಂತಿವರ್ಧಕಗಳನ್ನು ಮಾರುವದು, ರಾಜಕಾರಣಿಗಳು ಧೋರಣೆಗಳನ್ನು ಪ್ರವರ್ಧಿಸುವದು, ಮಾರಾಟಗಾರರು ಉತ್ಪನ್ನಗಳನ್ನು ಮುಂದೂಡುವದು, ವೈದಿಕರು ಬೋಧನೆಯನ್ನು ವ್ಯಾಖ್ಯಾನಿಸುವದು. ಈ ಒಡಂಬಡಿಸುವ ದ್ವನಿಗಳು ಹೆಚ್ಚಾಗಿ ಯಾವಾಗಲೂ ಮೋಸಕರವಾಗಿ ರುಜುವಾಗುತ್ತವೆ—ಹುರುಳಿಲ್ಲದ ಮಾತುಗಳಲ್ಲದೆ ಬೇರೇನೂ ಅಲ್ಲ. ಆದರೂ, ಜನರು ಸಾಮಾನ್ಯವಾಗಿ ಸುಲಭವಾಗಿಯೇ ಅದರಿಂದ ಮೋಸಗೊಳಿಸಲ್ಪಡುತ್ತಾರೆ.
ಹೆಚ್ಚಾಗಿ ಹೀಗಾಗುವದು ಯಾಕೆಂದರೆ ಜನರು ತಪ್ಪು ತರ್ಕದೋಷಗಳಿಂದ ಸತ್ಯವನ್ನು ಬೇರ್ಪಡಿಸಲು ತಪ್ಪುವದರಿಂದಲೇ. ನ್ಯಾಯಶಾಸ್ತ್ರದ ವಿದ್ಯಾರ್ಥಿಗಳು, ಯೋಗ್ಯ ವಿವೇಚನೆಯ ಪಥದಿಂದ ಹಿಮ್ಮೆಟ್ಟುವ ಯಾವದೇ ಸಂಗತಿಯನ್ನು ವಿವರಿಸಲು “ತರ್ಕದೋಷ” ಎಂಬ ಶಬ್ದವನ್ನು ಉಪಯೋಗಿಸುತ್ತಾರೆ. ಸರಳವಾಗಿ ಹೇಳುವದಾದರೆ, ತರ್ಕದೋಷವು ಒಂದು ತಪ್ಪುದಾರಿಗೆ ನಡಿಸುವ ಅಥವಾ ಅಯುಕ್ತವಾದ ವಾದವಾಗಿದೆ, ಅದರಲ್ಲಿ ಪೂರ್ವೊಕ್ತ ಹೇಳಿಕೆಗಳಿಂದ ಅಥವಾ ಹೇಳಿಕೆಗಳ ಆಧಾರದಿಂದ ತೀರ್ಮಾನವು ಹಿಂಬಾಲಿಸುವದಿಲ್ಲ. ಆದರೂ ತಪ್ಪು ತರ್ಕದೋಷಗಳು, ಶಕಿಭ್ತರಿತವಾಗಿ ಒಬ್ಬನನ್ನು ಒಡಂಬಡಿಸಶಕ್ತವು ಯಾಕಂದರೆ ಅವು ಹೆಚ್ಚಾಗಿ ಬಾವೂದ್ರೇಕಗಳಿಗೆ ಬಲವಾಗಿ ಅಪ್ಪೀಲು ಮಾಡುತ್ತವೆ—ಯುಕ್ತಾಯುಕ್ತ ವಿವೇಚನೆಗಲ್ಲ.
ಮೋಸಹೋಗುವದರಿಂದ ದೂರವಿರುವದಕ್ಕೆ ಕೀಲಿಕೈಯು ತರ್ಕದೋಷದ ಕಾರ್ಯಗತಿಯನ್ನು ತಿಳಿಯುವದೇ. ಆದ್ದರಿಂದ, ದೇವ-ದತ್ತ “ವಿವೇಚನಾ ಶಕ್ತಿಯನ್ನು” ಚೂಪುಗೊಳಿಸುವ ನೋಟದಿಂದ, ಆ ಐದು ಸಾಮಾನ್ಯ ತರ್ಕದೋಷಗಳನ್ನು ಗಮನಿಸೋಣ.—ರೊಮಾಪುರ 12:1.
ತರ್ಕದೋಷ ನಂಬ್ರ 1
ವ್ಯಕ್ತಿಯನ್ನು ಆಕ್ರಮಿಸುವುದು ಈ ರೀತಿಯ ತರ್ಕದೋಷವು, ಒಂದು ಪೂರಾ ರೀತಿಯಲ್ಲಿ ಸಪ್ರಮಾಣವುಳ್ಳ ವಾದವನ್ನು ಅಥವಾ ಹೇಳಿಕೆಯನ್ನು ಅದನ್ನು ನೀಡುವ ವ್ಯಕ್ತಿಯ ಮೇಲೆ ಅಸಂಗತ ಧಾಳಿಯನ್ನು ಮಾಡುವ ಮೂಲಕ ನಂಬದಂತೆ ಅಥವಾ ಕಳಂಕಿತಗೊಳಿಸುವಂತೆ ಪ್ರಯತ್ನಿಸುತ್ತದೆ.
ಬೈಬಲಿನಿಂದ ಒಂದು ಉದಾಹರಣೆಯನ್ನು ಗಮನಿಸಿರಿ: ಒಮ್ಮೆ ಯೇಸು ಕ್ರಿಸ್ತನು ಬರಲಿದ್ದ ತನ್ನ ಮರಣ ಮತ್ತು ಪುನರುತ್ಥಾನದ ಕುರಿತು ಇತರರು ಅರಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದನು. ಅವು ಆತನಿಗೆ ಕಿವಿಗೊಡುತ್ತಿದ್ದವರಿಗೆ ಕಲ್ಪಿಸಲು ಹೊಸತಾದ ಮತ್ತು ಕಷ್ಟದ ವಿಷಯಗಳಾಗಿದ್ದವು. ಆದರೆ ಯೇಸುವಿನ ಬೋಧನೆಗಳ ಶ್ರೇಷ್ಠತೆಯನ್ನು ತೂಗಿನೋಡುವ ಬದಲಿಗೆ, ಕೆಲವರು ಯೇಸುವಿನ ಮೇಲೆಯೇ ಆಕ್ರಮಿಸಿ ಅಂದದ್ದು: “ಅವನಿಗೆ ದೆವ್ವ ಹಿಡಿದದೆ, ಹುಚ್ಚು ಹಿಡಿದದೆ, ಯಾಕೆ ಅವನ ಮಾತು ಕೇಳುತ್ತೀರಿ?”—ಯೋಹಾನ 10:20; ಅ.ಕೃ. 26:24, 25 ಹೋಲಿಸಿ.
ನಾವು ಕೇಳಬಯಸದ ಒಂದು ವಿಷಯವನ್ನು ಅವನು ಅಥವಾ ಅವಳು ಹೇಳುವಾಗ ಅವನನ್ನು “ಮೂರ್ಖ,” “ಹುಚ್ಚ,” ಅಥವಾ “ಮೂಢ”ನೆಂದು ಕರೆಯುವದು ಬಹು ಸುಲಭ. ಇದೇ ರೀತಿಯ ಇನ್ನೊಂದು ತಂತ್ರವು ವ್ಯಕ್ತಿಯನ್ನು ಚುಚ್ಚು ಮಾತಿನ ಗುಟುಕಿನಿಂದ ಆಕ್ರಮಿಸುವದೇ. ಇದರ ಕೆಲವು ಸಾಮಾನ್ಯ ಮಾದರಿಗಳು: “ವಿಷಯವು ನಿನಗೆ ನಿಜವಾಗಿ ಗೊತ್ತಿದ್ದಾದರೆ, ಆ ರೀತಿಯ ದೃಷ್ಟಿಕೋನ ನಿನ್ನಲ್ಲಿರುತ್ತಿರಲಿಲ್ಲ” ಅಥವಾ “ನೀನದನ್ನು ನಂಬುವದು, ನಂಬುವಂತೆ ನಿನಗದು ಹೇಳಲ್ಪಟ್ಟದ್ದರಿಂದ ಮಾತ್ರವೇ.”
ಇಂಥ ಕುಶಾಗ್ರ ಯಾ ಅಷ್ಟು ಕುಶಾಗ್ರವಲ್ಲದ ವೈಯಕ್ತಿಕ ಧಾಳಿಗಳು ನಿಮ್ಮನ್ನು ಜಬರಿಸಬಹುದು ಮತ್ತು ಒತ್ತಾಯಿಸಬಹುದು, ಆದರೆ ನೀವು ಹೇಳಿದ್ದನ್ನೆಂದೂ ನಾಮಂಜೂರು ಮಾಡಲಾರದು. ಆದ್ದರಿಂದ ಈ ತರ್ಕದೋಷಕ್ಕೆ ಎಚ್ಚರವಿರ್ರಿ!
ತರ್ಕದೋಷ ನಂಬ್ರ 2
ಅಧಿಕಾರಕ್ಕೆ ಅಪ್ಪೀಲು ಮಾಡುವುದು ಈ ರೀತಿಯ ಮೌಖಿಕ ಜಬರಿಸುವಿಕೆಯನ್ನು, ಪರಿಣಿತರು ಅಥವಾ ಪ್ರಖ್ಯಾತರು ಎಂದೆಣಿಸುವ ಜನರ ಸಾಕ್ಷ್ಯಗಳನ್ನು ಆಧಾರವಾಗಿ ಕೊಡುವ ಮೂಲಕ ಪೂರೈಸಲಾಗುತ್ತದೆ. ನಿಶ್ಚಯವಾಗಿ, ವಿಷಯದ ಬಗ್ಗೆ ನಮಗಿಂತ ಹೆಚ್ಚು ತಿಳಿದವರನ್ನು ಸಲಹೆಗಾಗಿ ನೋಡುವದು ತೀರಾ ಸ್ವಾಭಾವಿಕ. ಆದರೆ ಎಲ್ಲಾ ಅಧಿಕೃತ ಅಪ್ಪೀಲುಗಳು ಯೋಗ್ಯ ವಿವೇಚನೆಯ ಮೇಲೆ ಆಧರಿತವಲ್ಲ.
ನಿಮ್ಮ ಡಾಕ್ಟರರು ನಿಮಗೆ ಹೀಗನ್ನುತ್ತಾರೆಂದು ನೆನಸಿರಿ: “ನಿನಗೆ ಮಲೇರಿಯ ತಗಲಿದೆ.” ನೀವು ಸಹಜವಾಗಿ, “ನಿಮಗೆ ಹೇಗೆ ಗೊತ್ತು ಡಾಕ್ಟರರೇ,” ಎಂದು ಕೇಳುತ್ತೀರಿ. “ನೋಡು, ನಾನು ಡಾಕ್ಟರ್. ಈ ವಿಷಯಗಳಲ್ಲಿ ನಿನಗಿಂತ ನನಗೆ ಎಷ್ಟೋ ಹೆಚ್ಚು ತಿಳಿದದೆ. ನನ್ನ ಮಾತನ್ನು ಕೇಳು, ನಿನಗೆ ಮಲೇರಿಯ ತಗಲಿದೆ” ಎಂದು ಅವರು ಹೇಳುತ್ತಲೇ ಇರುವುದು ಅದೆಷ್ಟು ಅನುಚಿತ. ರೋಗ ಪರೀಕ್ಷೆಯು ಅದನ್ನು ಸರಿಯೆಂದು ಸಿದ್ಧಪಡಿಸ ಬಹುದಾದರೂ, ನಿಮಗೆ ಮಲೇರಿಯ ತಾಗಿದೆಯೆಂದು ಕೇವಲ ಡಾಕ್ಟರರ ಮಾತುಗಳಿಂದ ಮಾತ್ರವೇ ವಿವೇಚಿಸುವದು ತರ್ಕದೋಷವು. ನಿಮ್ಮ ರೋಗ ಲಕ್ಷಣಗಳು, ರಕ್ತ-ಪರೀಕ್ಷೆ ಫಲಿತಾಂಶಗಳು ಮುಂತಾದ ನಿಜತ್ವಗಳನ್ನು ಅವರು ಚರ್ಚಿಸುವದಾದರೆ ಅದು ಹೆಚ್ಚು ಉಪಯುಕ್ತವು.
ಅಧಿಕೃತ ಅಪ್ಪೀಲು ಮಾಡಿ ಜಬರಿಸುವ ಇನ್ನೊಂದು ಉದಾಹರಣೆ, ಯೋಹಾನ 7:32-49ರಲ್ಲಿ ವಿವರಿಸಲ್ಪಟ್ಟಿದೆ. ಅಲ್ಲಿ, ಯೇಸುವನ್ನು ಕೈದು ಮಾಡಲು ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿದ್ದನ್ನು ನಾವು ನೋಡುತ್ತೇವೆ. ಅವರು ಅವನ ಬೋಧನೆಯಿಂದ ಎಷ್ಟು ಪ್ರಭಾವಿತರಾದರೆಂದರೆ, ಅವನನ್ನು ಕೈದು ಮಾಡುವ ಬದಲಿಗೆ, ಅವರು ಹಿಂದೆ ಬಂದು ತಮ್ಮ ಮೇಲಧಿಕಾರಿಗಳಿಗೆ ಅಂದದ್ದು: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.” ಪ್ರತ್ಯುತ್ತರವಾಗಿ ಯೇಸುವಿನ ವೈರಿಗಳು ಹೇಳಿದ್ದು: “ನೀವೂ ಮರುಳಾದಿರಾ? ಹಿರೀ ಸಭೆಯವರಲ್ಲಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ?” ಯೇಸುವಿನ ಬೋಧನಾಕ್ರಮವನ್ನು ಆಕ್ಷೇಪಿಸುವ ಯಾವ ಪ್ರಯತ್ನವೂ ಅಲ್ಲಿರದ್ದನ್ನು ಗಮನಿಸಿರಿ. ಬದಲಿಗೆ, ಯೆಹೂದಿ ಮುಖಂಡರು ಮೋಶೆಯ ಧರ್ಮಶಾಸ್ತ್ರದಲ್ಲಿ ತಾವೇ “ಪಾರಂಗತರು” ಎಂದು ತಮ್ಮ ಅಧಿಕಾರಕ್ಕೇ ಅಪ್ಪೀಲು ಮಾಡಿದ ಮೂಲಕ ಯೇಸುವಿನ ಮಾತುಗಳಿಗೆ ಅನಾದಾರ ತೋರಿಸಲು ಅವರು ಕಾರಣವಿತ್ತರು.
ರಸಕರವಾಗಿಯೇ, ಇಂದಿನ ವೈದಿಕರು ಸಹಾ ತ್ರಿಯೈಕ್ಯ, ಆತ್ಮದ ಅಮರತ್ವ ಮತ್ತು ನರಕಾಗ್ನಿ ಮುಂತಾದ ಬೋಧನೆಗಳನ್ನು ಬೈಬಲಿನಿಂದ ರುಜುಪಡಿಸಲು ಅಶಕ್ತರಾದಾಗ, ತದ್ರೀತಿಯ ವ್ಯೂಹ ರಚಿಸುತ್ತಾರೆ.
ದುರ್ಬಲ ಅಧಿಕೃತ ಅಪ್ಪೀಲುಗಳು ಜಾಹೀರಾತಿನಲ್ಲಿಯೂ ಬಹಳಷ್ಟಿವೆ, ಪ್ರಖ್ಯಾತ ವ್ಯಕ್ತಿಗಳು ತಮ್ಮ ಪರಿಣಿತ ಕ್ಷೇತ್ರಕ್ಕಿಂತ ತೀರಾ ಬೇರೆಯಾದ ರಂಗಗಳಲ್ಲಿ ಸಾಮಾನ್ಯವಾಗಿ ಸಾಕ್ಷ್ಯಗಳನ್ನು ಕೊಡುವದನ್ನು ನಾವಲ್ಲಿ ಕಾಣುತ್ತೇವೆ. ಒಬ್ಬ ಯಶ್ವಸೀ ಗಾಲ್ಫ್ ಆಟಗಾರನು ಒಂದು ಫೋಟೋ-ಕಾಪಿ ಮೆಶಿನನ್ನು ಖರೀದಿಸುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತಾನೆ. ಒಬ್ಬ ಫುಟ್ಬಾಲ್ ಕ್ರೀಡಾಪಟುವು ರೆಫ್ರಿಜರೇಟರನ್ನು ಕೊಳ್ಳುವಂತೆ ಅಪ್ಪೀಲು ಮಾಡುತ್ತಾನೆ. ಒಬ್ಬ ಒಲಿಂಪಿಕ್ ಅಂಗಸಾಧಕನು ಒಂದು ನಿರ್ದಿಷ್ಟ ಉಪಹಾರ ದವಸಕ್ಕೆ ಶಿಫಾರಸು ಮಾಡುತ್ತಾನೆ. ಇಂಥ “ಅಧಿಕೃತ” ಮೂಲಗಳಿಗೆ ತಾವು ವಿಕ್ರಯಿಸುವ ಉತ್ಪನ್ನಗಳ ಕುರಿತು ಕೊಂಚ ಅಥವಾ ಏನೂ ತಿಳಿದಿಲ್ಲ ಎಂಬದರ ಕುರಿತು ಹೆಚ್ಚಿನವರು ಲಕ್ಷ್ಯಕೊಡುವದೂ ಇಲ್ಲ.
ನ್ಯಾಯಸಮ್ಮತ ತಜ್ಞರು ಸಹಾ—ಬೇರೆಲ್ಲರಂತೆಯೇ—ಪಕ್ಷಪಾತವನ್ನು ತೋರಿಸಬಹುದು. ಒಬ್ಬ ಉಚ್ಛ ಯೋಗ್ಯತೆಗಳುಳ್ಳ ಸಂಶೋಧಕನು, ತಂಬಾಕು ಸೇವನೆಯು ಹಾನಿರಹಿತವೆಂದು ವಾದಿಸಲೂ ಬಹುದು ಎಂಬದನ್ನು ಮನಗಾಣಿರಿ. ಆದರೆ ಅವನು ಯಾ ಅವಳು ಒಂದು ತಂಬಾಕು ಕೈಗಾರಿಕೆಯಲ್ಲಿ ಕೆಲಸಕ್ಕಿದ್ದಲ್ಲಿ, ಅಂಥ “ಪರಿಣಿತ” ಸಾಕ್ಷ್ಯವು ಸಂಶಯಾಸ್ಪದವಲ್ಲವೇ?
ತರ್ಕದೋಷ ನಂಬ್ರ 3
‘ಗುಂಪಿನ ಜತೆಸೇರು’ ಇಲ್ಲಿ ಅಪ್ಪೀಲು ಜನಪ್ರಿಯ ಬಾವೂದ್ರೇಕಕ್ಕೆ, ದುರಭಿಪ್ರಾಯಕ್ಕೆ ಮತ್ತು ನಂಬಿಕೆಗಳಿಗೆ. ಇರುವ ಅಭಿಪ್ರಾಯಗಳಿಗೆ ವಿರುದ್ಧವಾಗಿ ಎತ್ತಿ ಮಾತಾಡಲು ನಾವು ಹಿಂಜರಿಯುತ್ತೇವೆ. ಬಹು ಸಂಖ್ಯಾತ ಅಭಿಪ್ರಾಯವು ಯಾಂತ್ರಿಕವಾಗಿಯೇ ಸತ್ಯ ಎಂದು ವೀಕ್ಷಿಸುವ ಈ ಪ್ರವೃತ್ತಿಯನ್ನು ‘ಗುಂಪಿನ ಜತೆಸೇರು’ ತರ್ಕದೋಷದಲ್ಲಿ ಅತಿ ಪರಿಣಾಮಕಾರಿಯಾಗಿ ಉಪಯೋಗಿಸಲಾಗುತ್ತದೆ.
ಉದಾಹರಣೆಗೆ, ಅಮೆರಿಕದ ಒಂದು ಜನಪ್ರಿಯ ಪತ್ರಿಕೆಯು, ಹಲವಾರು ಜನರು ನಗುತ್ತಾ ಒಂದು ಗ್ಲಾಸ್ ರಮ್ ಮದ್ಯವನ್ನು ಆನಂದಿಸುವದನ್ನು ತೋರಿಸಿತು. ಚಿತ್ರದೊಂದಿಗೆ ಈ ಧ್ಯೇಯಮಂತ್ರವಿತ್ತು: “ಸಂಭವಿಸುತ್ತಿರುವುದು ಇದೇ. ಅಮೆರಿಕದಲ್ಲೆಲ್ಲೂ ಜನರು . . . ರಮ್ನೆಡೆಗೆ ತಿರುಗುತ್ತಿದ್ದಾರೆ.” ಇದು ‘ಗುಂಪಿನ ಜತೆಸೇರಲು’ ಕೋಲಾಹಲದ ಅಪ್ಪೀಲು.
ಇತರರು ಒಂದು ವಿಷಯವನ್ನು ಯೋಚಿಸುತ್ತಾರೆ ಯಾ ಮಾಡುತ್ತಾರೆ ಎಂದಾದರೆ, ನೀವೂ ಅದನ್ನು ಮಾಡಬೇಕೆಂದು ಅರ್ಥವೋ? ಅದಲ್ಲದೆ, ಜನಪ್ರಿಯ ಅಭಿಪ್ರಾಯವು ಸತ್ಯದ ಮಾಪಕವಲ್ಲ. ಶತಮಾನಗಳಲ್ಲಿ ಎಲ್ಲಾ ತರದ ವಿಚಾರಗಳು ಜನಪ್ರಿಯವಾಗಿ ಸ್ವೀಕರಿಸಲ್ಪಟ್ಟರೂ, ತದನಂತರ ತಪ್ಪಾಗಿ ರುಜುವಾಗಿದೆ. ಆದರೂ ‘ಗುಂಪಿನ ಜತೆಸೇರು’ ಎಂಬ ತರ್ಕದೋಷವು ಛಲಹಿಡಿದು ನಿಂತದೆ. ‘ಎಲ್ಲರೂ ಅದನ್ನು ಮಾಡುತ್ತಿದ್ದಾರೆ’ ಎಂಬ ಒಕ್ಕೂಟದ ಕೂಗು ಜನರನ್ನು ಮಾದಕದ್ರವ್ಯ ಸೇವಿಸಲು, ವ್ಯಭಿಚಾರ ನಡಿಸಲು, ಮಾಲಿಕರಿಂದ ಕದಿಯಲು ಮತ್ತು ತೆರಿಗೆ ವಂಚನೆಮಾಡಲು ಪ್ರೇರೇಪಿಸುತ್ತದೆ.
ವಾಸ್ತವಿಕತೆಯೇನಂದರೆ, ಎಲ್ಲರೂ ಆ ಸಂಗತಿಗಳನ್ನು ಮಾಡುವುದಿಲ್ಲ. ಮತ್ತು ಅವರದನ್ನು ಮಾಡಿದರೂ ನೀವದನ್ನು ಮಾಡಲು ಯಾವ ಕಾರಣವೂ ಇಲ್ಲ. ವಿಮೋಚನಕಾಂಡ 23:2ರಲ್ಲಿ ಕೊಟ್ಟ ಸಲಹೆಯು ಒಂದು ಸಾಮಾನ್ಯ ನಡವಳಿಕಾ ನಿಯಮವಾಗಿ ಕಾರ್ಯನಡಿಸುತ್ತದೆ: “ದುಷ್ಕಾರ್ಯವನ್ನು ಮಾಡುವವರು ಬಹುಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.”
ತರ್ಕದೋಷ ನಂಬ್ರ 4
ಎರಡರಲ್ಲಿ⁄ಯಾವುದಾದರೊಂದು ವಿವೇಚನೆ ಈ ತರ್ಕದೋಷವು ವಿಸ್ತಾರವಾದ ಆಯ್ಕೆಗಳ ಅವಕಾಶವನ್ನು ಕೇವಲ ಎರಡಕ್ಕೆ ಇಳಿಸುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಹೀಗೆ ಹೇಳಬಹುದು: ‘ರಕ್ತಪೂರಣ ಮಾಡಿರಿ, ಇಲ್ಲವಾದರೆ ಸಾಯಿರಿ.’ ಯೆಹೋವನ ಸಾಕ್ಷಿಗಳು, ‘ರಕ್ತದಿಂದ ದೂರವಿರ್ರಿ’ ಎಂಬ ತಮ್ಮ ಬೈಬಲಾಧಾರಿತ ನಿರ್ಣಯದಿಂದಾಗಿ ಆಗಾಗ್ಯೆ ಇಂಥ ವಿವೇಚನೆಗೆ ಎದುರಾಗುತ್ತಾರೆ. (ಅ.ಕೃ. 15:29) ಈ ವಿವೇಚನಾ ರೇಖೆಯ ದುರ್ಬಲತೆಯೇನು? ಇದರಲ್ಲಿ ಇತರ ಸಾಧಾರವುಳ್ಳ ಸಂಭಾವ್ಯತೆಗಳು ಹೊರಗಿರಿಸಲ್ಪಟ್ಟಿವೆ. ಅನ್ಯ ಮಾರ್ಗಗಳ ಔಷಧೋಪಚಾರವನ್ನು ಕೊಡಸಾಧ್ಯವಿದೆಂದು ನಿಜತ್ವಗಳು ತೋರಿಸುತ್ತವೆ, ಮತ್ತು ಹೆಚ್ಚಿನ ಶಸ್ತ್ರಕ್ರಿಯೆಗಳನ್ನು ರಕ್ತರಹಿತವಾಗಿಯೇ ಸಾಫಲ್ಯದಿಂದ ನಡಿಸ ಸಾಧ್ಯವಿದೆ. ನಿಪುಣರಾದ ಡಾಕ್ಟರರು ಹೆಚ್ಚಾಗಿ ಕನಿಷ್ಟ ರಕ್ತನಷ್ಟದಿಂದ ಶಸ್ತ್ರಕ್ರಿಯೆ ನಡಿಸುತ್ತಾರೆ. ಇನ್ನೊಂದು ಸಂಭಾವ್ಯತೆಯು ಅರಕ್ತ ದ್ರವಗಳನ್ನು, ರಕ್ತರಸ ಗಾತ್ರ ವಿಕಸನಗಳನ್ನುb ಉಪಯೋಗಿಸುವದೇ. ಅದಲ್ಲದೆ, ರಕ್ತ ಪೂರಣಗಳನ್ನು ಅನೇಕರು ತಕ್ಕೊಂಡಿದ್ದಾರೆ ಮತ್ತು ಸತ್ತಿದ್ದಾರೆ. ಅದೇ ರೀತಿಯಲ್ಲಿ, ಅನೇಕರು ರಕ್ತ ನಿರಾಕರಿಸಿದ್ದಾರೆ ಮತ್ತು ಜೀವಿಸಿದ್ದಾರೆ. ಹೀಗೆ, ಎರಡಲ್ಲಿ ಯಾವದಾದರೊಂದು ಎಂಬ ವಿವೇಚನೆಯು ತೆರಪುಳ್ಳದ್ದಾಗಿದೆ.
ಹೀಗೆ ಎರಡರಲ್ಲಿ⁄ಯಾವಾದರೊಂದು ವಿವೇಚನೆಯು ನೀಡಲ್ಪಟ್ಟಾಗ, ನಿಮ್ಮನ್ನು ಕೇಳಿಕೊಳ್ಳಿರಿ. ‘ಅಲ್ಲಿ ನಿಜವಾಗಿ ಎರಡೇ ಸಂಭಾವ್ಯ ಆಯ್ಕೆಗಳಿವೆಯೋ? ಬೇರೆ ಆಯ್ಕೆಗಳು ಇರಬಹುದೋ?’
ತರ್ಕದೋಷ ನಂಬ್ರ 5
ಅತಿರೇಕ ಸುಲಭೀಕರಣ ಇಲ್ಲಿ ಒಂದು ಹೇಳಿಕೆ ಅಥವಾ ವಾದವು ಸಂಬಂಧಿತ ಪರಿಗಣನೆಗಳನ್ನು ಅಸಡ್ಡೆ ಮಾಡಿ, ಒಂದು ಜಟಿಲವಾಗಿರಬಹುದಾದ ಪ್ರಶ್ನೆಯನ್ನು ಅತಿರೇಕ ಸುಲಭವಾಗಿ ಸೂಚಿಸುತ್ತದೆ.
ಒಂದು ಜಟಿಲವಾದ ವಿಷಯವನ್ನು ಸುಲಭೀಕರಿಸುವದರಲ್ಲಿ ಏನೂ ತಪ್ಪಿಲ್ಲ ಎಂಬದು ಗ್ರಾಹ್ಯ—ಒಳ್ಳೇ ಶಿಕ್ಷಕರು ಅದನ್ನು ಯಾವಾಗಲೂ ಮಾಡುತ್ತಾರಷ್ಟೇ. ಆದರೆ ಕೆಲವೊಮ್ಮೆ ಸತ್ಯವನ್ನು ವಕ್ರಗೊಳಿಸುವ ಬಿಂದುವಿನ ತನಕವೂ ವಿಷಯವು ಸುಲಭೀಕರಿಸಲ್ಪಡುತ್ತದೆ. ಉದಾಹರಣೆಗೆ ನೀವು ಹೀಗೆ ಓದಬಹುದು: ‘ವಿಕಸಿಸುವ ದೇಶಗಳಲ್ಲಿ ಬಡತನಕ್ಕೆ ಕಾರಣ ತೀವ್ರ ಜನಸಂಖ್ಯೆಯೇರಿಕೆಯೇ.’ ಇದರಲ್ಲಿ ಒಂದು ಅಂಶಿಕ ಸತ್ಯವು ಇದೆ, ಆದರೆ ಅದು ಇತರ ಪ್ರಧಾನ ಗಮನಗಳಾದ ಅಯುಕ್ತ ರಾಜಕೀಯ ನಿರ್ವಹಣೆ, ವ್ಯಾಪಾರದ ಅನುಚಿತ ಉಪಯೋಗ ಮತ್ತು ಹವಾಮಾನದ ಸ್ಥಿತಿಗತಿಗಳನ್ನು ಅಸಡ್ಡೆ ಮಾಡುತ್ತದೆ.
ದೇವರ ವಾಕ್ಯವಾದ ಬೈಬಲಿನ ವಿಷಯದಲ್ಲಾದರೋ ಅತಿರೇಕ ಸುಲಭೀಕರಣವು ಅನೇಕಾನೇಕ ತಪ್ಪು ತಿಳುವಳಿಕೆಗಳಿಗೆ ನಡಿಸಿದೆ. ಉದಾಹರಣೆಗೆ, ಅ.ಕೃ. 16:30, 31ನ್ನು ಗಮನಿಸಿರಿ. ಅಲ್ಲಿ ಜೈಲರನೊಬ್ಬನು ರಕ್ಷಣೆಯ ಕುರಿತು ಒಂದು ಪ್ರಶ್ನೆ ಕೇಳಿದನು. ಪೌಲನು ಉತ್ತರಿಸಿದ್ದು: “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ರಕ್ಷಣೆ ಹೊಂದುವಿ.” ಇದರಿಂದ ಅನೇಕರು ತೀರ್ಮಾನಿಸಿರುವದೇನಂದರೆ, ಯೇಸುವನ್ನು ಕೇವಲ ಮಾನಸಿಕವಾಗಿ ಸ್ವೀಕರಿಸುವದೇ ರಕ್ಷಣೆಗಾಗಿ ಸಾಕು ಎಂಬದಾಗಿ!
ಇದು ಒಂದು ಅತಿರೇಕ ಸುಲಭೀಕರಣ. ಹೌದು, ಯೇಸುವನ್ನು ನಮ್ಮ ವಿಮೋಚಕನಾಗಿ ಸ್ವೀಕರಿಸುವದು ಅತ್ಯಾವಶ್ಯಕ. ಆದರೆ ಬೈಬಲ್ ಸತ್ಯತೆಗಳ ಪೂರ್ಣ ತಿಳುವಳಿಕೆಯನ್ನು ಪಡೆಯಲಿಕ್ಕೆ, ಯೇಸು ಏನನ್ನು ಕಲಿಸಿದನೋ ಮತ್ತು ಆಜ್ಞಾಪಿಸಿದನೋ ಅದನ್ನು ನಂಬುವದು ಕೂಡಾ ಅತ್ಯಾವಶ್ಯಕ. ಇದು ಪೌಲ ಮತ್ತು ಸೀಲರು ತದನಂತರ, “ಅವನಿಗೂ [ಜೈಲರನಿಗೆ] ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು” ಎಂಬ ನಿಜತ್ವದಿಂದ ತಿಳಿದುಬರುತ್ತದೆ. (ಅ.ಕೃ. 16:32) ರಕ್ಷಣೆಯಲ್ಲಿ ವಿಧೇಯತೆಯು ಕೂಡಾ ಸೇರಿದೆ. ಪೌಲನು ತರುವಾಯ ಇದನ್ನು ಯೇಸುವಿನ ಕುರಿತಾಗಿ ಬರೆಯುವಾಗ ತೋರಿಸುತ್ತಾ, “ಆತನು ತನಗೆ ವಿಧೇಯರಾಗಿರುವವರೆಲ್ಲರಿಗೆ ನಿರಂತರವಾದ ರಕ್ಷಣೆಗೆ ಕಾರಣನಾದನು” ಎಂದು ಹೇಳಿದ್ದಾನೆ.—ಇಬ್ರಿಯ. 5:9.
ಒಂದು ಪುರಾತನ ಜ್ಞಾನೋಕ್ತಿ ಹೇಳುವದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋ. 14:15) ಆದುದರಿಂದ, ತರ್ಕದೋಷಗಳಿಂದ ಮೋಸಹೋಗಬೇಡಿರಿ. ಹೇಳಿದ ವಿಷಯಗಳ ಮೇಲೆ ನ್ಯಾಯೋಚಿತ ಆಕ್ರಮಣಗಳ ಮತ್ತು ವ್ಯಕ್ತಿತ್ವಗಳ ಮೇಲಣ ಹುರಳಿಲ್ಲದ ಆಕ್ರಮಣಗಳ ನಡುವಣ ವ್ಯತ್ಯಾಸವನ್ನು ಮಾಡಲು ಕಲಿಯಿರಿ. “ಅಧಿಕೃತರಿಗೆ” ಮಾಡುವ ದುರ್ಬಲ ಅಪ್ಪೀಲುಗಳಿಂದ, ‘ಜನಗುಂಪನ್ನು ಸೇರಲು’ ಮಾಡುವ ಪ್ರೇರೇಪಣೆಗಳಿಂದ, ಎರಡರಲ್ಲಿ⁄ಯಾವದಾದರೊಂದು ವಿವೇಚನೆಯನ್ನು ಅಥವಾ ಅತಿರೇಕ ಸುಲಭೀಕರಣಗಳಿಂದ—ವಿಶೇಷವಾಗಿ ಧಾರ್ಮಿಕ ಸತ್ಯಗಳಂಥ ಪ್ರಾಮುಖ್ಯ ಸತ್ಯತೆಯು ಒಳಗೂಡಿರುವಾಗ, ಮೋಸಹೋಗಬೇಡಿರಿ. ನಿಜ ಸಂಗತಿಯನ್ನೆಲ್ಲಾ, ಅಥವಾ ಬೈಬಲು ಹೇಳುವಂತೆ, “ಎಲ್ಲವನ್ನೂ ಪರಿಶೋಧಿಸಿ” ತಿಳುಕೊಳ್ಳಿರಿ.—1 ಥೆಸಲೋನಿಕ 5:21. (g90 5/22)
[ಅಧ್ಯಯನ ಪ್ರಶ್ನೆಗಳು]
a ಬೈಬಲ್ನಲ್ಲಿ ಎಫೆಸ 5:6ರಿಂದ ತೆಗೆಯಲ್ಪಟ್ಟದ್ದು.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ಜೆಹೋವಸ್ ವಿಟ್ನೆಸಸ್ ಆ್ಯಂಡ್ ದ ಕ್ವೆಶ್ಚನ್ ಆಫ್ ಬ್ಲಡ್ ಕಿರುಪುಸ್ತಕ ನೋಡಿರಿ