‘ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುವವರನ್ನು ಮಾನ್ಯಮಾಡಿರಿ’
“ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುತ್ತಾ ಕರ್ತನಲ್ಲಿ ನಿಮ್ಮ ಮೇಲ್ವಿಚಾರಣೆ ಮಾಡುತ್ತಾ ನಿಮಗೆ ಬುದ್ಧಿಹೇಳುವವರನ್ನು ಮಾನ್ಯಮಾಡಿರಿ.”—1 ಥೆಸ. 5:12.
1, 2. (ಎ) ಪೌಲನು ಥೆಸಲೊನೀಕದ ಸಭೆಗೆ ಪ್ರಥಮ ಪತ್ರವನ್ನು ಬರೆದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು? (ಬಿ) ಏನು ಮಾಡುವಂತೆ ಪೌಲನು ಥೆಸಲೊನೀಕದವರನ್ನು ಉತ್ತೇಜಿಸಿದನು?
ನೀವು ಪ್ರಥಮ ಶತಮಾನದ ಥೆಸಲೊನೀಕ ಸಭೆಯ ಸದಸ್ಯರಲ್ಲೊಬ್ಬರು ಎಂದು ನೆನಸಿ. ಆ ಸಭೆಯು ಯೂರೋಪ್ನಲ್ಲಿ ಆರಂಭದಲ್ಲಿ ಸ್ಥಾಪಿಸಲ್ಪಟ್ಟ ಸಭೆಗಳಲ್ಲೊಂದು. ಅಪೊಸ್ತಲ ಪೌಲನು ಅಲ್ಲಿನ ಸಹೋದರರನ್ನು ಬಲಪಡಿಸುವುದರಲ್ಲಿ ತುಂಬ ಸಮಯ ವ್ಯಯಿಸಿದ್ದನು. ಅವನು ಇತರ ಸಭೆಗಳಲ್ಲಿ ಮಾಡಿದಂತೆ ಈ ಸಭೆಯಲ್ಲಿಯೂ ಮುಂದಾಳುತ್ವ ವಹಿಸಲಿಕ್ಕಾಗಿ ಹಿರೀಪುರುಷರನ್ನು ನೇಮಿಸಿದ್ದಿರಬಹುದು. (ಅ. ಕಾ. 14:23) ಆದರೆ ಈ ಸಭೆಯ ಸ್ಥಾಪನೆಯ ಬಳಿಕ ಪೌಲಸೀಲರನ್ನು ನಗರದಿಂದ ಹೊರಗಟ್ಟಲಿಕ್ಕಾಗಿ ಯೆಹೂದ್ಯರು ದೊಂಬಿಯೊಂದನ್ನು ಕೂಡಿಸಿಕೊಂಡು ಗಲಭೆಯೆಬ್ಬಿಸಿದರು. ಹಾಗಾಗಿ ಪೌಲಸೀಲರು ಆ ನಗರವನ್ನು ಬಿಟ್ಟುಬರಬೇಕಾಯಿತು. ಅಲ್ಲಿದ್ದ ಕ್ರೈಸ್ತರಿಗೆ ತಮ್ಮನ್ನು ಬೆಂಬಲಿಸಲು ಯಾರೂ ಇಲ್ಲವೇನೋ ಎಂದನಿಸಿದ್ದಿರಬಹುದು. ಅವರು ಭಯಪಟ್ಟಿರಲೂಬಹುದು.
2 ಥೆಸಲೊನೀಕವನ್ನು ಬಿಟ್ಟುಬಂದ ಪೌಲನಿಗೂ ಆ ಹೊಸ ಸಭೆಯ ಬಗ್ಗೆ ಚಿಂತೆಯಿತ್ತು. ಅವನು ಪುನಃ ಅಲ್ಲಿಗೆ ಹೋಗಲು ಪ್ರಯತ್ನಿಸಿದನಾದರೂ ಅವನ ದಾರಿಗೆ ‘ಸೈತಾನನು ಅಡ್ಡಬಂದನು.’ ಆದ್ದರಿಂದ ಆ ಸಭೆಯನ್ನು ಹುರಿದುಂಬಿಸಲಿಕ್ಕಾಗಿ ತಿಮೊಥೆಯನನ್ನು ಕಳುಹಿಸಿದನು. (1 ಥೆಸ. 2:18; 3:2) ತಿಮೊಥೆಯನು ಉತ್ತಮ ವರದಿಯೊಂದಿಗೆ ಅಲ್ಲಿಂದ ಹಿಂದಿರುಗಿದಾಗ ಪೌಲನು ಥೆಸಲೊನೀಕದವರಿಗೆ ಪತ್ರವನ್ನು ಬರೆಯಲು ಪ್ರಚೋದಿಸಲ್ಪಟ್ಟನು. ಅನೇಕ ವಿಷಯಗಳ ಕುರಿತು ಬರೆಯುವಾಗ, ‘ತಮ್ಮ ಮೇಲ್ವಿಚಾರಣೆ ಮಾಡುವವರನ್ನು ಮಾನ್ಯಮಾಡುವಂತೆಯೂ’ ಪೌಲನು ಅವರನ್ನು ಉತ್ತೇಜಿಸಿದನು.—1 ಥೆಸಲೊನೀಕ 5:12, 13 ಓದಿ.
3. ಹಿರೀಪುರುಷರಿಗೆ ಅತ್ಯಧಿಕ ಪರಿಗಣನೆಯನ್ನು ತೋರಿಸಲು ಥೆಸಲೊನೀಕದ ಕ್ರೈಸ್ತರಿಗೆ ಯಾವ ಕಾರಣಗಳಿದ್ದವು?
3 ಥೆಸಲೊನೀಕದ ಕ್ರೈಸ್ತರ ಮಧ್ಯೆ ಮುಂದಾಳುತ್ವ ವಹಿಸುತ್ತಿದ್ದ ಸಹೋದರರಿಗೆ ಪೌಲ ಮತ್ತು ಅವನ ಸಂಚರಣ ಸಂಗಡಿಗರಿಗಿದ್ದಷ್ಟು ಅನುಭವ ಇರಲಿಲ್ಲ, ಯೆರೂಸಲೇಮಿನಲ್ಲಿನ ಹಿರಿಯರಿಗಿದ್ದಷ್ಟು ಆಧ್ಯಾತ್ಮಿಕ ಜ್ಞಾನವೂ ಅವರಿಗಿರಲಿಲ್ಲ. ಏಕೆಂದರೆ, ಸಭೆ ಸ್ಥಾಪನೆಯಾಗಿ ಒಂದು ವರ್ಷ ಕೂಡ ಆಗಿರಲಿಲ್ಲ! ಆದರೂ ತಮ್ಮ ಹಿರೀಪುರುಷರಿಗೆ ಕೃತಜ್ಞರಾಗಿರಲು ಸಭೆಯಲ್ಲಿದ್ದವರಿಗೆ ಸಕಾರಣಗಳಿದ್ದವು. ಹಿರೀಪುರುಷರು “ಪ್ರಯಾಸಪಟ್ಟು ಕೆಲಸಮಾಡುತ್ತಾ” ಸಭೆಯ “ಮೇಲ್ವಿಚಾರಣೆ ಮಾಡುತ್ತಾ” ಸಹೋದರರಿಗೆ ‘ಬುದ್ಧಿಹೇಳುತ್ತಿದ್ದರು.’ ವಾಸ್ತವದಲ್ಲಿ, ‘ಹಿರಿಯರಿಗೆ ಪ್ರೀತಿಯಿಂದ ಅತ್ಯಧಿಕವಾಗಿರುವುದಕ್ಕಿಂತ ಹೆಚ್ಚಿನ ಪರಿಗಣನೆಯನ್ನು ತೋರಿಸಲು’ ಸಹೋದರರಿಗೆ ಯೋಗ್ಯ ಕಾರಣಗಳಿದ್ದವು. ಪೌಲನು ಈ ವಿನಂತಿಯ ನಂತರ “ಒಬ್ಬರೊಂದಿಗೊಬ್ಬರು ಶಾಂತಿಶೀಲರಾಗಿರಿ” ಎಂಬ ಸಲಹೆ ಕೊಟ್ಟನು. ಒಂದುವೇಳೆ ನೀವು ಥೆಸಲೊನೀಕದಲ್ಲಿ ಇರುತ್ತಿದ್ದರೆ, ಹಿರಿಯರ ಕೆಲಸವನ್ನು ಆಳವಾಗಿ ಗಣ್ಯಮಾಡುತ್ತಿದ್ದಿರೋ? ದೇವರು ಕ್ರಿಸ್ತನ ಮೂಲಕ ನಿಮ್ಮ ಸಭೆಯಲ್ಲಿ ಒದಗಿಸಿರುವ “ಮನುಷ್ಯರಲ್ಲಿ ದಾನಗಳನ್ನು” ನೀವು ಹೇಗೆ ವೀಕ್ಷಿಸುತ್ತೀರಿ?—ಎಫೆ. 4:8.
‘ಪ್ರಯಾಸಪಟ್ಟು ಕೆಲಸಮಾಡುತ್ತಾರೆ’
4, 5. ಸಭೆಗೆ ಬೋಧಿಸುವುದು ಪೌಲನ ದಿನಗಳಲ್ಲಿನ ಹಿರೀಪುರುಷರಿಗೆ ಪ್ರಯಾಸದ ಕೆಲಸವಾಗಿತ್ತೇಕೆ? ಇಂದೂ ಅದೇಕೆ ಪ್ರಯಾಸದ ಕೆಲಸವಾಗಿದೆ?
4 ಥೆಸಲೊನೀಕದಲ್ಲಿದ್ದ ಹಿರೀಪುರುಷರು ಪೌಲಸೀಲರನ್ನು ಬೆರೋಯಕ್ಕೆ ಕಳುಹಿಸಿದ ನಂತರ ಹೇಗೆ “ಪ್ರಯಾಸಪಟ್ಟು ಕೆಲಸಮಾಡುತ್ತಾ” ಇದ್ದರು? ನಿಸ್ಸಂಶಯವಾಗಿಯೂ ಅವರು ಪೌಲನನ್ನು ಅನುಕರಿಸುತ್ತಾ ಶಾಸ್ತ್ರವಚನಗಳನ್ನು ಬಳಸಿ ಸಭೆಗೆ ಬೋಧಿಸುತ್ತಿದ್ದರು. ‘ಥೆಸಲೊನೀಕದ ಕ್ರೈಸ್ತರು ದೇವರ ವಾಕ್ಯವನ್ನು ಗಣ್ಯಮಾಡುತ್ತಿದ್ದರೋ?’ ಎಂಬ ಸಂಶಯ ನಿಮಗಿದ್ದೀತು. ಏಕೆಂದರೆ ಬೆರೋಯದವರು “ಥೆಸಲೊನೀಕದವರಿಗಿಂತ ಹೆಚ್ಚು ಉದಾತ್ತ ಮನಸ್ಸಿನವರಾಗಿದ್ದರು, . . . ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು” ಎಂದು ಬೈಬಲ್ ತಿಳಿಸುತ್ತದೆ. (ಅ. ಕಾ. 17:11) ಆದರೆ ಗಮನಿಸತಕ್ಕ ವಿಷಯವೇನೆಂದರೆ ಈ ವಚನ ಥೆಸಲೊನೀಕದಲ್ಲಿದ್ದ ಕ್ರೈಸ್ತರ ಬಗ್ಗೆ ಮಾತಾಡುತ್ತಿಲ್ಲ, ಬದಲಾಗಿ ಅಲ್ಲಿದ್ದ ಯೆಹೂದ್ಯರ ಬಗ್ಗೆ ಮಾತಾಡುತ್ತಿದೆ. ಥೆಸಲೊನೀಕದಲ್ಲಿ ವಿಶ್ವಾಸಿಗಳಾದವರು ‘ದೇವರ ವಾಕ್ಯವನ್ನು ಮನುಷ್ಯರ ವಾಕ್ಯವೆಂದು ಎಣಿಸದೆ, ದೇವರ ವಾಕ್ಯವೆಂದೇ ಅಂಗೀಕರಿಸಿದರು.’ (1 ಥೆಸ. 2:13) ಅಂಥವರನ್ನು ಆಧ್ಯಾತ್ಮಿಕವಾಗಿ ಪೋಷಿಸಲಿಕ್ಕಾಗಿ ಹಿರೀಪುರುಷರು ಖಂಡಿತ ಪ್ರಯಾಸಪಟ್ಟು ಕೆಲಸಮಾಡಿರಲೇಬೇಕು.
5 ಇಂದು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗ ದೇವರ ಮಂದೆಗೆ “ತಕ್ಕ ಸಮಯಕ್ಕೆ ಆಹಾರವನ್ನು” ಒದಗಿಸುತ್ತಿದೆ. (ಮತ್ತಾ. 24:45) ಆಳಿನ ನಿರ್ದೇಶನದ ಕೆಳಗೆ ಸ್ಥಳಿಕ ಹಿರಿಯರು ತಮ್ಮ ಸಹೋದರರನ್ನು ಆಧ್ಯಾತ್ಮಿಕವಾಗಿ ಪೋಷಿಸಲಿಕ್ಕಾಗಿ ಪ್ರಯಾಸಪಟ್ಟು ಕೆಲಸಮಾಡುತ್ತಾರೆ. ಸಭೆಯಲ್ಲಿರುವವರಿಗೆ ಬೈಬಲಾಧರಿತ ಪ್ರಕಾಶನಗಳು ಹೇರಳವಾಗಿ ಲಭ್ಯವಿರಬಹುದು. ಕೆಲವು ಭಾಷೆಗಳಲ್ಲಿ ಕಾವಲಿನ ಬುರುಜು ಪ್ರಕಾಶನಗಳ ವಿಷಯಸೂಚಿ ಮತ್ತು ವಾಚ್ಟವರ್ ಲೈಬ್ರರಿ ಆನ್ ಸಿಡಿ-ರಾಮ್ನಂಥ ಸಾಧನಗಳು ಸಹ ಲಭ್ಯವಿವೆ. ಸಭೆಯ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಹಿರಿಯರು ತಮ್ಮ ಸಭಾ ನೇಮಕಗಳನ್ನು ತಯಾರಿಸಲು ಅನೇಕ ತಾಸುಗಳನ್ನು ವ್ಯಯಿಸುತ್ತಾರೆ. ಹೀಗೆ ನೇಮಿತ ಮಾಹಿತಿಯನ್ನು ಪ್ರಯೋಜನವಾಗುವಂಥ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ತಮಗೆ ಸಿಗುವ ನೇಮಕಗಳಿಗಾಗಿ ತಯಾರಿಮಾಡಲು ಹಿರಿಯರೆಷ್ಟು ಸಮಯ ವ್ಯಯಿಸುತ್ತಾರೆ ಎಂಬ ಬಗ್ಗೆ ನೀವೆಂದಾದರೂ ಯೋಚಿಸಿನೋಡಿದ್ದೀರೋ?
6, 7. (ಎ) ಥೆಸಲೊನೀಕದ ಹಿರೀಪುರುಷರಿಗೆ ಪೌಲನು ಯಾವ ಮಾದರಿಯನ್ನಿಟ್ಟನು? (ಬಿ) ಇಂದು ಹಿರಿಯರಿಗೆ ಪೌಲನನ್ನು ಅನುಕರಿಸಲು ಕೆಲವೊಮ್ಮೆ ಕಷ್ಟವಾಗುವುದೇಕೆ?
6 ಥೆಸಲೊನೀಕದಲ್ಲಿದ್ದ ಹಿರೀಪುರುಷರು ಮಂದೆಯನ್ನು ಪರಿಪಾಲಿಸುವುದರಲ್ಲಿ ಪೌಲನಿಟ್ಟ ಅತ್ಯುತ್ತಮ ಮಾದರಿಯನ್ನು ನೆನಪಿನಲ್ಲಿಟ್ಟರು. ಪೌಲನು ಯಾಂತ್ರಿಕವಾಗಿ ಅಥವಾ ಕಾಟಾಚಾರಕ್ಕಾಗಿ ಮಂದೆಯನ್ನು ಪರಿಪಾಲಿಸುತ್ತಿರಲಿಲ್ಲ. ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ‘ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ ಅವನು ವಾತ್ಸಲ್ಯದಿಂದ ನಡೆದುಕೊಂಡನು.’ (1 ಥೆಸಲೊನೀಕ 2:7, 8 ಓದಿ.) ‘ತನ್ನ ಪ್ರಾಣವನ್ನು ಕೊಡುವುದಕ್ಕೂ’ ಅವನು ಸಿದ್ಧನಿದ್ದನು! ಮಂದೆಯನ್ನು ಪರಿಪಾಲಿಸುವ ಹಿರೀಪುರುಷರು ಅವನಂತೆಯೇ ಇರಬೇಕು.
7 ಇಂದು ಕ್ರೈಸ್ತ ಕುರುಬರು ಮಂದೆಯನ್ನು ಪ್ರೀತಿಯಿಂದ ಕಾಣುವ ಮೂಲಕ ಪೌಲನನ್ನು ಅನುಕರಿಸುತ್ತಾರೆ. ಸ್ವಭಾವತಃ ಕೆಲವೊಂದು ಕುರಿಗಳು ಸೌಮ್ಯವೂ ಸ್ನೇಹಪರವೂ ಆಗಿರಲಿಕ್ಕಿಲ್ಲ. ಆದರೂ ಹಿರಿಯರು ಕುರಿಗಳನ್ನು ಅರ್ಥಮಾಡಿಕೊಳ್ಳುತ್ತಾ ಅವುಗಳಲ್ಲಿ ಒಳ್ಳೆಯದನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅಪರಿಪೂರ್ಣತೆಯ ನಿಮಿತ್ತ ಪ್ರತಿಯೊಬ್ಬರ ಬಗ್ಗೆ ಸಕಾರಾತ್ಮಕ ನೋಟವನ್ನು ಹೊಂದಿರಲು ಹಿರಿಯನೊಬ್ಬನಿಗೆ ಕೆಲವೊಮ್ಮೆ ಕಷ್ಟವಾಗಬಹುದು ನಿಜ. ಹಾಗಿದ್ದರೂ, ಎಲ್ಲರೊಂದಿಗೆ ವಾತ್ಸಲ್ಯದಿಂದ ನಡೆದುಕೊಳ್ಳಲು ಅವನು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಾನೆ. ಹೀಗೆ ಕ್ರಿಸ್ತನ ಕೆಳಗೆ ಉತ್ತಮ ಕುರುಬನಾಗಿರಲು ಪ್ರಯಾಸಪಡುವ ಅವನು ಶ್ಲಾಘನೆಗೆ ಅರ್ಹನಲ್ಲವೇ?
8, 9. ಪ್ರಸ್ತುತ ದಿನಗಳ ಹಿರಿಯರು ‘ನಮ್ಮ ಪ್ರಾಣಗಳನ್ನು ಕಾಯುವ’ ಕೆಲವು ವಿಧಗಳು ಯಾವುವು?
8 ಹಿರಿಯರಿಗೆ ‘ಅಧೀನರಾಗಿರಲು’ ನಮ್ಮೆಲ್ಲರಿಗೂ ಕಾರಣಗಳಿವೆ. ಪೌಲನು ಬರೆದಂತೆ, ‘ಅವರು ನಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ.’ (ಇಬ್ರಿ. 13:17) ಈ ಅಭಿವ್ಯಕ್ತಿಯು, ತನ್ನ ಮಂದೆಯನ್ನು ರಕ್ಷಿಸಲಿಕ್ಕಾಗಿ ನಿದ್ರೆಯನ್ನೂ ತೊರೆಯುವ ಕುರುಬನನ್ನು ನೆನಪಿಸುತ್ತದೆ. ಅದೇ ರೀತಿಯಲ್ಲಿ ಇಂದು ಹಿರಿಯರು ಅಸ್ವಸ್ಥರ, ಭಾವನಾತ್ಮಕ ಇಲ್ಲವೆ ಆಧ್ಯಾತ್ಮಿಕ ಸಮಸ್ಯೆಗಳಿರುವವರ ಅಗತ್ಯಗಳನ್ನು ನೋಡಿಕೊಳ್ಳಲಿಕ್ಕಾಗಿ ನಿದ್ರೆಯನ್ನೂ ತ್ಯಾಗಮಾಡುತ್ತಾರೆ. ಉದಾಹರಣೆಗೆ, ಹಾಸ್ಪಿಟಲ್ ಲಿಏಸಾನ್ ಕಮಿಟಿಗಳಲ್ಲಿ ಸೇವೆಸಲ್ಲಿಸುವ ಸಹೋದರರು ವೈದ್ಯಕೀಯ ತುರ್ತುಪರಿಸ್ಥಿತಿ ಎದ್ದಾಗ ನಿದ್ರೆಯನ್ನೂ ತೊರೆದಿದ್ದಾರೆ. ಅಂಥ ಪರಿಸ್ಥಿತಿ ನಮಗೆ ಎದುರಾಗುವಾಗ ನಾವು ಅವರ ನೆರವನ್ನು ಬಹಳ ಮಾನ್ಯಮಾಡುತ್ತೇವಲ್ಲವೇ?
9 ರೀಜನಲ್ ಬಿಲ್ಡಿಂಗ್ ಕಮಿಟಿ ಮತ್ತು ರಿಲೀಫ್ ಕಮಿಟಿಗಳಲ್ಲಿರುವ ಹಿರಿಯರು ಸಹೋದರರಿಗೆ ಸಹಾಯ ಮಾಡಲಿಕ್ಕಾಗಿ ಪ್ರಯಾಸಪಟ್ಟು ಕೆಲಸಮಾಡುತ್ತಾರೆ. ಅವರು ನಮ್ಮ ಹೃತ್ಪೂರ್ವಕ ಬೆಂಬಲಕ್ಕೆ ಅರ್ಹರು! 2008ರಲ್ಲಿ ಮ್ಯಾನ್ಮಾರ್ನಲ್ಲಿ ನಾರ್ಗಿಸ್ ಚಂಡಮಾರುತ ಬೀಸಿದಾಗ ಕೈಗೊಳ್ಳಲಾದ ಪರಿಹಾರ ಕಾರ್ಯಾಚರಣೆಯ ಬಗ್ಗೆ ಪರಿಗಣಿಸಿ. ತೀವ್ರ ಹಾನಿಗೊಳಗಾದ ಇರಾವಡ್ಡಿ ನದೀ ಮುಖಜಭೂಮಿ ಪ್ರದೇಶದಲ್ಲಿನ ಬೋತಿಂಗೋನ್ ಸಭೆಯನ್ನು ತಲುಪಲಿಕ್ಕಾಗಿ ಪರಿಹಾರ ತಂಡದವರು ಧ್ವಂಸಗೊಂಡ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಶವಗಳನ್ನು ದಾಟುತ್ತಾ ಪ್ರಯಾಣಿಸಿದರು. ಬೋತಿಂಗೋನ್ಗೆ ತಲುಪಿದ ಮೊದಲ ಪರಿಹಾರ ತಂಡ ಅದಾಗಿತ್ತು. ಆ ತಂಡದಲ್ಲಿ ತಮ್ಮ ಮುಂಚಿನ ಸರ್ಕಿಟ್ ಮೇಲ್ವಿಚಾರಕರನ್ನು ನೋಡಿದ ಸ್ಥಳಿಕ ಸಹೋದರರು ಕೂಗಿ ಹೇಳಿದ್ದು: “ನೋಡಿ, ನಮ್ಮ ಸರ್ಕಿಟ್ ಮೇಲ್ವಿಚಾರಕರು! ಯೆಹೋವನು ನಮ್ಮನ್ನು ರಕ್ಷಿಸಿದ್ದಾನೆ!” ಹಿರಿಯರು ಹಗಲೂ ಇರುಳೂ ಪ್ರಯಾಸಪಟ್ಟು ಮಾಡುವ ಕೆಲಸವನ್ನು ನೀವು ಮಾನ್ಯಮಾಡುತ್ತೀರೋ? ಕೆಲವು ಹಿರಿಯರು ಕಷ್ಟಕರವಾದಂಥ ನ್ಯಾಯನಿರ್ಣಾಯಕ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಕಮಿಟಿಗಳಲ್ಲಿ ಸೇವೆಸಲ್ಲಿಸಲು ನೇಮಿಸಲ್ಪಡುತ್ತಾರೆ. ಈ ಹಿರಿಯರು ತಾವು ಪೂರೈಸಿದ ಕೆಲಸದ ಬಗ್ಗೆ ಎಂದೂ ಜಂಬಕೊಚ್ಚಿಕೊಳ್ಳುವುದಿಲ್ಲ. ಅವರ ಸೇವೆಯ ಪ್ರಯೋಜನ ಪಡೆದವರಂತೂ ಖಂಡಿತ ಅವರಿಗೆ ಕೃತಜ್ಞರಾಗಿದ್ದಾರೆ.—ಮತ್ತಾ. 6:2-4.
10. ಹೆಚ್ಚಾಗಿ ನಮ್ಮ ಗಮನಕ್ಕೆ ಬಾರದ ಯಾವೆಲ್ಲ ಕೆಲಸಗಳನ್ನು ಹಿರಿಯರು ನಿರ್ವಹಿಸುತ್ತಾರೆ?
10 ಇಂದು ಅನೇಕ ಹಿರಿಯರಿಗೆ ಕಾಗದಪತ್ರಗಳಿಗೆ ಸಂಬಂಧಿಸಿದ ಕೆಲಸವನ್ನೂ ಮಾಡಲಿಕ್ಕಿರುತ್ತದೆ. ಉದಾಹರಣೆಗೆ, ಹಿರಿಯರ ಮಂಡಲಿಯ ಸಂಯೋಜಕನು ವಾರವಾರದ ಕೂಟಗಳ ಶೆಡ್ಯೂಲನ್ನು ತಯಾರಿಸುತ್ತಾನೆ. ಸಭಾ ಕಾರ್ಯದರ್ಶಿಯು ಮಾಸಿಕ ಹಾಗೂ ವಾರ್ಷಿಕ ಕ್ಷೇತ್ರ ಸೇವಾ ವರದಿಗಳನ್ನು ಸಂಗ್ರಹಿಸಿ ಬ್ರಾಂಚ್ ಆಫೀಸಿಗೆ ಕಳುಹಿಸುತ್ತಾನೆ. ಶಾಲಾ ಮೇಲ್ವಿಚಾರಕನು ಜಾಗರೂಕತೆಯಿಂದ ಶಾಲಾ ಶೆಡ್ಯೂಲನ್ನು ತಯಾರಿಸುತ್ತಾನೆ. ಮೂರು ತಿಂಗಳಿಗೊಮ್ಮೆ ಸಭಾ ಅಕೌಂಟ್ ದಾಖಲೆಗಳನ್ನು ಆಡಿಟ್ ಮಾಡಲಿಕ್ಕಿರುತ್ತದೆ. ಸಭಾ ಹಿರಿಯರು ಬ್ರಾಂಚ್ ಆಫೀಸಿನಿಂದ ಬರುವ ಪತ್ರಗಳನ್ನು ಓದಿ ಅವುಗಳಲ್ಲಿರುವ ನಿರ್ದೇಶನಗಳನ್ನು ಅನ್ವಯಿಸಿಕೊಳ್ಳುವ ಮೂಲಕ ‘ನಂಬಿಕೆಯಲ್ಲಿ ಏಕತೆಯನ್ನು’ ಕಾಪಾಡಿಕೊಳ್ಳುತ್ತಾರೆ. (ಎಫೆ. 4:3, 13) ಪ್ರಯಾಸಪಟ್ಟು ಕೆಲಸಮಾಡುವ ಇಂಥ ಹಿರಿಯರ ಪ್ರಯತ್ನಗಳಿಂದಾಗಿ ‘ಎಲ್ಲವುಗಳು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯುತ್ತವೆ.’—1 ಕೊರಿಂ. 14:40.
‘ನಿಮ್ಮ ಮೇಲ್ವಿಚಾರಣೆ ಮಾಡುತ್ತಾರೆ’
11, 12. ಯಾರು ಸಭೆಯ ಮೇಲ್ವಿಚಾರಣೆ ಮಾಡುತ್ತಾರೆ? ಅದರಲ್ಲಿ ಏನೆಲ್ಲ ಸೇರಿದೆ?
11 ಥೆಸಲೊನೀಕದಲ್ಲಿ ಕಷ್ಟಪಟ್ಟು ಕೆಲಸಮಾಡುತ್ತಿದ್ದ ಹಿರೀಪುರುಷರನ್ನು ಪೌಲನು ಸಭೆಯ ‘ಮೇಲ್ವಿಚಾರಣೆ ಮಾಡುವವರು’ ಎಂದು ವರ್ಣಿಸಿದನು. (1 ಥೆಸ. 5:12) ಮೂಲ ಗ್ರೀಕ್ನಲ್ಲಿ ಈ ಪದವು “ಮುಂದೆ ನಿಂತುಕೊಳ್ಳುವುದು” ಎಂಬರ್ಥವನ್ನೂ ಕೊಡುತ್ತದೆ. ಪೌಲನು ಅದೇ ಹಿರಿಯರನ್ನು ‘ಪ್ರಯಾಸಪಟ್ಟು ಕೆಲಸಮಾಡುವವರು’ ಎಂದು ಸಹ ತಿಳಿಸಿದನು. ಪೌಲನು ಇಲ್ಲಿ ಸಭೆಯಲ್ಲಿದ್ದ ಎಲ್ಲ ಹಿರೀಪುರುಷರ ಬಗ್ಗೆ ಮಾತಾಡುತ್ತಿದ್ದನೇ ಹೊರತು ಒಬ್ಬ “ಅಧ್ಯಕ್ಷ ಮೇಲ್ವಿಚಾರಕನ” ಬಗ್ಗೆ ಮಾತಾಡುತ್ತಿರಲಿಲ್ಲ. ಇಂದು ಹೆಚ್ಚುಕಡಿಮೆ ಎಲ್ಲ ಹಿರಿಯರು ಸಭೆಯ ಮುಂದೆ ನಿಂತು ಸಭಾ ಕೂಟಗಳನ್ನು ನಡೆಸುತ್ತಾರೆ. “ಹಿರಿಯರ ಮಂಡಲಿಯ ಸಂಯೋಜಕ” ಎಂದು ಇತ್ತೀಚೆಗೆ ಮಾಡಲಾದ ಬದಲಾವಣೆಯು ಎಲ್ಲ ಹಿರಿಯರನ್ನು ಒಂದೇ ಮಂಡಲಿಯ ಸದಸ್ಯರಾಗಿ ವೀಕ್ಷಿಸಲು ಸಹಾಯಮಾಡುತ್ತದೆ.
12 ಸಭೆಯ ‘ಮೇಲ್ವಿಚಾರಣೆ ಮಾಡುವುದರಲ್ಲಿ’ ಬೋಧಿಸುವುದಕ್ಕಿಂತ ಹೆಚ್ಚಿನದ್ದು ಸೇರಿದೆ. 1 ತಿಮೊಥೆಯ 3:4 ರಲ್ಲೂ ಅದೇ ಅಭಿವ್ಯಕ್ತಿಯನ್ನು ಉಪಯೋಗಿಸಲಾಗಿದೆ. ಮೇಲ್ವಿಚಾರಕನು “ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆಮಾಡುವವನೂ ಪೂರ್ಣ ಗಂಭೀರತೆಯೊಂದಿಗೆ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡವನೂ ಆಗಿರಬೇಕು” ಎಂದು ಪೌಲನು ಹೇಳಿದನು. ಇಲ್ಲಿ, ‘ಮೇಲ್ವಿಚಾರಣೆಮಾಡುವುದು’ ಎಂಬ ಅಭಿವ್ಯಕ್ತಿಯು ತನ್ನ ಮಕ್ಕಳಿಗೆ ಬೋಧಿಸುವುದನ್ನು ಮಾತ್ರವಲ್ಲ ಕುಟುಂಬದಲ್ಲಿ ಮುಂದಾಳುತ್ವ ವಹಿಸುವುದನ್ನೂ ‘ಮಕ್ಕಳನ್ನು ಅಧೀನದಲ್ಲಿಟ್ಟುಕೊಳ್ಳುವುದನ್ನೂ’ ಸೂಚಿಸುತ್ತದೆ. ಹೌದು, ಹಿರಿಯರು ಸಭೆಯಲ್ಲಿ ಮುಂದಾಳುತ್ವ ವಹಿಸುತ್ತಾರೆ. ಹೀಗೆ ಯೆಹೋವನಿಗೆ ಅಧೀನತೆ ತೋರಿಸುವಂತೆ ಎಲ್ಲರಿಗೂ ಸಹಾಯಮಾಡುತ್ತಾರೆ.—1 ತಿಮೊ. 3:5.
13. ಹಿರಿಯರ ಕೂಟದಲ್ಲಿ ಒಂದು ನಿರ್ಣಯ ತೆಗೆದುಕೊಳ್ಳಲು ಸಮಯ ಹಿಡಿಯಬಹುದು ಏಕೆ?
13 ಮಂದೆಯ ಮೇಲ್ವಿಚಾರಣೆಯನ್ನು ಉತ್ತಮವಾಗಿ ನಿರ್ವಹಿಸಲು ಹಿರಿಯರು ಒಟ್ಟುಸೇರಿ ಸಭೆಯ ಅಗತ್ಯಗಳನ್ನು ಹಾಗೂ ಸಭೆಗೆ ಸಹಾಯ ನೀಡಬಹುದಾದ ವಿಧಗಳನ್ನು ಚರ್ಚಿಸುತ್ತಾರೆ. ಎಲ್ಲ ನಿರ್ಣಯಗಳನ್ನು ಒಬ್ಬ ಹಿರಿಯನೇ ಮಾಡುವುದು ಹೆಚ್ಚು ಉತ್ತಮವೆಂಬಂತೆ ಕಂಡೀತು. ಆದರೆ, ಆಧುನಿಕ ದಿನಗಳ ಹಿರಿಯರ ಮಂಡಲಿಯಲ್ಲಿರುವ ಹಿರಿಯರೆಲ್ಲರೂ ಪ್ರಥಮ ಶತಮಾನದ ಆಡಳಿತ ಮಂಡಲಿಯ ಮಾದರಿಯನ್ನು ಅನುಸರಿಸುತ್ತ ಬೈಬಲಿನಲ್ಲಿ ಮಾರ್ಗದರ್ಶನವನ್ನು ಹುಡುಕುತ್ತಾರೆ ಮತ್ತು ವಿಚಾರಗಳನ್ನು ಮುಕ್ತವಾಗಿ ಚರ್ಚಿಸುತ್ತಾರೆ. ಸ್ಥಳೀಯ ಸಭೆಯ ಅಗತ್ಯಗಳನ್ನು ಬೈಬಲ್ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಪೂರೈಸುವುದೇ ಅವರ ಗುರಿ. ಇದು ಹೆಚ್ಚು ಪರಿಣಾಮಕಾರಿಯಾಗಬೇಕಾದರೆ, ಪ್ರತಿ ಹಿರಿಯನೂ ಬೈಬಲನ್ನು ಹಾಗೂ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಕೊಡುವ ನಿರ್ದೇಶನಗಳನ್ನು ಅವಲೋಕಿಸುತ್ತಾ ಹಿರಿಯರ ಕೂಟಗಳಿಗಾಗಿ ಚೆನ್ನಾಗಿ ತಯಾರಿಮಾಡಬೇಕು. ಇದು ಸಮಯ ತೆಗೆದುಕೊಳ್ಳುತ್ತದೆ ನಿಜ. ಪ್ರಥಮ ಶತಮಾನದ ಆಡಳಿತ ಮಂಡಲಿ ಸುನ್ನತಿಯ ವಿಚಾರವನ್ನು ಪರಿಗಣಿಸುವಾಗ ಇದ್ದಂತೆ ಭಿನ್ನಾಭಿಪ್ರಾಯಗಳಿರುವಲ್ಲಿ, ಬೈಬಲಾಧರಿತವಾಗಿ ಒಮ್ಮತದ ನಿರ್ಣಯಕ್ಕೆ ಬರಲು ಬಹುಶಃ ಹೆಚ್ಚಿನ ಸಮಯ ಮತ್ತು ಸಂಶೋಧನೆಯ ಅಗತ್ಯಬೀಳಬಹುದು.—ಅ. ಕಾ. 15:2, 6, 7, 12-14, 28.
14. ಹಿರಿಯರ ಮಂಡಲಿಯು ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ನೀವು ಮಾನ್ಯಮಾಡುತ್ತೀರೋ? ನಿಮಗೆ ಹಾಗನಿಸುವುದೇಕೆ?
14 ಒಬ್ಬ ಹಿರಿಯನು ತಾನು ಹೇಳಿದ್ದೇ ಆಗಬೇಕೆಂದು ಇಲ್ಲವೆ ತನ್ನ ಅಭಿಪ್ರಾಯವೇ ಸರಿಯೆಂದು ಹಠಹಿಡಿಯುವಲ್ಲಿ ಏನಾಗಬಹುದು? ಅಥವಾ ಪ್ರಥಮ ಶತಮಾನದ ದಿಯೊತ್ರೇಫನಂತೆ ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತುವಲ್ಲಿ ಆಗೇನು? (3 ಯೋಹಾ. 9, 10) ಖಂಡಿತ ಇಡೀ ಸಭೆ ಕಷ್ಟಕ್ಕೊಳಗಾಗುವುದು. ಪ್ರಥಮ ಶತಮಾನದ ಸಭೆಯ ಶಾಂತಿಭಂಗಮಾಡಲು ಪ್ರಯತ್ನಿಸಿದ ಸೈತಾನನು, ಇಂದು ಸಹ ಸಭೆಯ ಶಾಂತಿಭಂಗಮಾಡಲು ಬಯಸುತ್ತಾನೆ ಎಂಬದರಲ್ಲಿ ಯಾವುದೇ ಸಂಶಯವಿಲ್ಲ. ಅವನು ಇದಕ್ಕಾಗಿ, ಪ್ರಖ್ಯಾತಿ ಗಳಿಸಬೇಕೆಂಬ ಆಸೆಯಂಥ ಮಾನವನ ಸ್ವಾರ್ಥಪರ ಪ್ರವೃತ್ತಿಗಳನ್ನು ಬಳಸಿಕೊಳ್ಳುತ್ತಾನೆ. ಆದ್ದರಿಂದ ಹಿರಿಯರು ದೀನತೆಯನ್ನು ಬೆಳೆಸಿಕೊಳ್ಳುವ ಹಾಗೂ ಒಂದೇ ಮಂಡಲಿಯಾಗಿ ಒಟ್ಟಾಗಿ ಕೆಲಸಮಾಡುವ ಅಗತ್ಯವಿದೆ. ಒಂದೇ ಮಂಡಲಿಯಾಗಿ ಸಹಕರಿಸುವ ಹಿರಿಯರ ದೀನತೆಯನ್ನು ನಾವು ತುಂಬ ಮಾನ್ಯಮಾಡುತ್ತೇವೆ.
‘ನಿಮಗೆ ಬುದ್ಧಿಹೇಳುತ್ತಾರೆ’
15. ಹಿರಿಯರು ಯಾವ ಹೇತುವಿನಿಂದ ಒಬ್ಬ ಸಹೋದರನಿಗೋ ಸಹೋದರಿಗೋ ಬುದ್ಧಿಹೇಳುತ್ತಾರೆ?
15 ಅನಂತರ ಪೌಲನು ಹಿರಿಯರು ಮಾಡುವ ಕಷ್ಟಕರವಾದ ಆದರೂ ಪ್ರಾಮುಖ್ಯವಾದ ಕೆಲಸವನ್ನು ಒತ್ತಿಹೇಳಿದನು. ಅದುವೇ ಮಂದೆಗೆ ಬುದ್ಧಿಹೇಳುವುದಾಗಿದೆ. “ಬುದ್ಧಿಹೇಳು” ಎಂಬುದಕ್ಕಿರುವ ಗ್ರೀಕ್ ಪದವನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಬಳಸಿರುವುದು ಪೌಲನೊಬ್ಬನೇ. ಇದು ಪ್ರಬಲವಾದ ಸಲಹೆಯನ್ನು ಸೂಚಿಸಬಹುದಾದರೂ ವೈರತ್ವವನ್ನೆಂದೂ ಸೂಚಿಸದು. (ಅ. ಕಾ. 20:31; 2 ಥೆಸ. 3:15) ಉದಾಹರಣೆಗೆ, ಪೌಲನು ಕೊರಿಂಥದವರಿಗೆ ಬರೆದದ್ದು: “ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ನಾನು ಈ ವಿಷಯಗಳನ್ನು ಬರೆಯುತ್ತಿಲ್ಲ; ಬದಲಾಗಿ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿಹೇಳಲಿಕ್ಕಾಗಿಯೇ ಬರೆಯುತ್ತಿದ್ದೇನೆ.” (1 ಕೊರಿಂ. 4:14) ಇತರರ ಕಡೆಗೆ ಪ್ರೀತಿಪರ ಪರಿಗಣನೆ ಇದ್ದುದರಿಂದಲೇ ಪೌಲನು ಬುದ್ಧಿಹೇಳುತ್ತಿದ್ದನು.
16. ಇತರರಿಗೆ ಬುದ್ಧಿಹೇಳುವಾಗ ಹಿರಿಯರು ಏನನ್ನು ಮನಸ್ಸಿನಲ್ಲಿಡುತ್ತಾರೆ?
16 ಇತರರಿಗೆ ಬುದ್ಧಿಹೇಳುವ ವಿಧಾನದ ಮಹತ್ವವನ್ನೂ ಹಿರಿಯರು ಮನಸ್ಸಿನಲ್ಲಿಡುತ್ತಾರೆ. ದಯಾಪರರೂ ಪ್ರೀತಿಪರರೂ ಸಹಾಯ ನೀಡುವವರೂ ಆಗಿರುವ ಮೂಲಕ ಅವರು ಪೌಲನನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. (1 ಥೆಸಲೊನೀಕ 2:11, 12 ಓದಿ.) ಆದರೂ ಹಿರಿಯರು ‘ಸ್ವಸ್ಥಬೋಧನೆಯ ಮೂಲಕ ಬುದ್ಧಿಹೇಳಲು ಶಕ್ತರಾಗಿರುವಂತೆ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಳ್ಳುತ್ತಾರೆ.’—ತೀತ 1:5-9.
17, 18. ನೀವು ಹಿರಿಯರಿಂದ ಬುದ್ಧಿವಾದ ಪಡೆದುಕೊಳ್ಳುವಾಗ ಏನನ್ನು ಮನಸ್ಸಿನಲ್ಲಿಡಬೇಕು?
17 ಹಿರಿಯರೂ ಅಪರಿಪೂರ್ಣರು ನಿಜ. ಆದ್ದರಿಂದ ಮಾತಾಡುವಾಗ ಕೆಲವೊಮ್ಮೆ ಅವರಿಂದಲೂ ತಪ್ಪಾಗಬಹುದು. (1 ಅರ. 8:46; ಯಾಕೋ. 3:8) ಅಲ್ಲದೆ, ಆಧ್ಯಾತ್ಮಿಕ ಸಹೋದರ ಸಹೋದರಿಯರಿಗೆ ಸಲಹೆ ಸ್ವೀಕರಿಸುವುದು ಸಾಮಾನ್ಯವಾಗಿ ‘ಆನಂದಕರವಾಗಿರದೆ ದುಃಖಕರವಾಗಿರುತ್ತದೆ’ ಎನ್ನುವುದನ್ನು ಹಿರಿಯರು ಅರಿತಿದ್ದಾರೆ. (ಇಬ್ರಿ. 12:11) ಆದ್ದರಿಂದ ಹಿರಿಯನೊಬ್ಬನು ನಿರ್ದಿಷ್ಟ ವಿಚಾರದ ಬಗ್ಗೆ ಬಹಳ ಪರಿಶೀಲನೆ ಮತ್ತು ಪ್ರಾರ್ಥನೆ ಮಾಡಿದ ನಂತರವೇ ಒಬ್ಬ ವ್ಯಕ್ತಿಗೆ ಬುದ್ಧಿವಾದ ಹೇಳುತ್ತಾನೆ. ಹಿರಿಯನೊಬ್ಬನು ನಿಮಗೆ ಬುದ್ಧಿಹೇಳುವಲ್ಲಿ ನಿಮ್ಮ ಮೇಲೆ ಅವನಿಗಿರುವ ಪ್ರೀತಿಪರ ಕಾಳಜಿಯನ್ನು ನೀವು ಮಾನ್ಯಮಾಡುತ್ತೀರೋ?
18 ವೈದ್ಯಕೀಯವಾಗಿ ಗುರುತಿಸಲು ಕಷ್ಟಕರವಾದ ಆರೋಗ್ಯ ಸಮಸ್ಯೆಯೊಂದು ನಿಮಗಿದೆಯೆಂದು ನೆನಸಿ. ಆದರೆ ಒಬ್ಬ ವೈದ್ಯನು ಆ ಸಮಸ್ಯೆಯನ್ನು ಸರಿಯಾಗಿ ಗುರುತಿಸುತ್ತಾ ಸೂಕ್ತ ಪರಿಹಾರವನ್ನು ಸೂಚಿಸುತ್ತಾನೆ. ನಿಮಗಾದರೋ ಅವನು ಹೇಳಿದ ಚಿಕಿತ್ಸೆಯನ್ನು ಸ್ವೀಕರಿಸುವುದು ಕಷ್ಟವೆನಿಸುತ್ತದೆ. ಹಾಗಂತ ನೀವು ಆ ವೈದ್ಯನ ಮೇಲೆ ಕೋಪಿಸಿಕೊಳ್ಳುವಿರೋ? ಇಲ್ಲ, ಅಲ್ಲವೇ? ಅವನು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳುವುದಾದರೂ ಅದು ನಿಮ್ಮ ಪ್ರಯೋಜನಕ್ಕೇ ಎಂದು ಭಾವಿಸಿ ನೀವದನ್ನು ಖಂಡಿತ ಸ್ವೀಕರಿಸುವಿರಿ. ಆ ವೈದ್ಯನು ಮಾಹಿತಿಯನ್ನು ತಿಳಿಯಪಡಿಸಿದ ವಿಧದಿಂದ ನಿಮ್ಮ ಮನಸ್ಸಿಗೆ ನೋವಾಗಿರಬಹುದಾದರೂ ಅದು ನಿಮ್ಮ ನಿರ್ಣಯವನ್ನು ಬಾಧಿಸುವಂತೆ ನೀವು ಬಿಡುತ್ತೀರೋ? ನಿಶ್ಚಯವಾಗಿಯೂ ಇಲ್ಲ, ಅಲ್ಲವೇ? ನೀವು ನಿಮ್ಮನ್ನೇ ಆಧ್ಯಾತ್ಮಿಕವಾಗಿ ರಕ್ಷಿಸಿಕೊಳ್ಳಬಲ್ಲ ವಿಧವನ್ನು ತೋರಿಸಲು ಯೆಹೋವ ಮತ್ತು ಯೇಸು ಹಿರಿಯರನ್ನು ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಹಿರಿಯರು ನಿಮಗೆ ಬುದ್ಧಿಹೇಳಿದ ವಿಧ ಹೇಗೆಯೇ ಇರಲಿ, ಅವರಿಗೆ ಕಿವಿಗೊಡಲು ಅದು ನಿಮಗೆ ತಡೆಯಾಗದಿರಲಿ!
ಯೆಹೋವನು ಒದಗಿಸಿರುವ ಹಿರಿಯರನ್ನು ಮಾನ್ಯಮಾಡಿ
19, 20. ‘ಮನುಷ್ಯರಲ್ಲಿ ದಾನಗಳಿಗೆ’ ನೀವು ಹೇಗೆ ಗಣ್ಯತೆಯನ್ನು ಸಲ್ಲಿಸಬಲ್ಲಿರಿ?
19 ವಿಶೇಷವಾಗಿ ನಿಮಗೆಂದೇ ತಯಾರಿಸಿರುವ ಉಡುಗೊರೆಯೊಂದನ್ನು ನಿಮಗೆ ಕೊಡಲಾಗುವಲ್ಲಿ ನೀವೇನು ಮಾಡುವಿರಿ? ಅದನ್ನು ಉಪಯೋಗಿಸುವ ಮೂಲಕ ನೀವದನ್ನು ಮಾನ್ಯಮಾಡುವಿರೋ? ಯೆಹೋವನು ಯೇಸು ಕ್ರಿಸ್ತನ ಮೂಲಕ “ಮನುಷ್ಯರಲ್ಲಿ ದಾನಗಳನ್ನು” ನಿಮಗಾಗಿ ಒದಗಿಸಿದ್ದಾನೆ. ಈ ದಾನ ಇಲ್ಲವೆ ಉಡುಗೊರೆಗಾಗಿ ನೀವು ಕೃತಜ್ಞತೆ ತೋರಿಸಬಲ್ಲ ಒಂದು ವಿಧ, ಹಿರಿಯರು ಕೊಡುವ ಭಾಷಣಗಳನ್ನು ಕಿವಿಗೊಟ್ಟು ಕೇಳಿ ಅವರು ಹೇಳುವ ಅಂಶಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುವುದೇ ಆಗಿದೆ. ಕೂಟಗಳಲ್ಲಿ ಅರ್ಥಪೂರ್ಣ ಹೇಳಿಕೆಗಳನ್ನು ನೀಡುವ ಮೂಲಕವೂ ನಿಮ್ಮ ಗಣ್ಯತೆಯನ್ನು ಸೂಚಿಸಬಲ್ಲಿರಿ. ಹಿರಿಯರು ಮುಂದಾಳುತ್ವ ವಹಿಸುತ್ತಿರುವ ಕ್ಷೇತ್ರ ಶುಶ್ರೂಷೆಯಂಥ ಕೆಲಸಗಳನ್ನು ಬೆಂಬಲಿಸಿರಿ. ಹಿರಿಯನೊಬ್ಬನು ಕೊಟ್ಟ ಸಲಹೆಯಿಂದಾಗಿ ನಿಮಗೆ ಪ್ರಯೋಜನವಾಗಿರುವಲ್ಲಿ, ಅದನ್ನು ಅವರಿಗೇಕೆ ತಿಳಿಸಬಾರದು? ಜೊತೆಗೆ, ಹಿರಿಯರ ಕುಟುಂಬಕ್ಕೂ ಗಣ್ಯತೆಯನ್ನು ಯಾಕೆ ಸಲ್ಲಿಸಬಾರದು? ಹಿರಿಯನೊಬ್ಬನು ಸಭೆಯಲ್ಲಿ ಪ್ರಯಾಸಪಟ್ಟು ಕೆಲಸಮಾಡಲಿಕ್ಕಾಗಿ ಅವನ ಕುಟುಂಬವು ಅವನೊಂದಿಗೆ ಕಳೆಯುತ್ತಿದ್ದ ಸಮಯವನ್ನು ತ್ಯಾಗಮಾಡಿದೆ ಎಂಬದನ್ನು ನೆನಪಿನಲ್ಲಿಡಿ.
20 ಹೌದು, ನಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುವ, ನಮ್ಮ ಮೇಲ್ವಿಚಾರಣೆ ಮಾಡುವ ಮತ್ತು ನಮಗೆ ಬುದ್ಧಿಹೇಳುವ ಹಿರಿಯರನ್ನು ಮಾನ್ಯಮಾಡಲು ನಮಗೆ ಹೇರಳ ಕಾರಣಗಳಿವೆ. ‘ಮನುಷ್ಯರಲ್ಲಿ ದಾನಗಳಾಗಿರುವ’ ಇವರು ನಿಜಕ್ಕೂ ಯೆಹೋವನ ಪ್ರೀತಿಪೂರ್ವಕ ಒದಗಿಸುವಿಕೆಯಾಗಿದ್ದಾರೆ!
ನಿಮಗೆ ಜ್ಞಾಪಕವಿದೆಯೊ?
• ಥೆಸಲೊನೀಕದ ಕ್ರೈಸ್ತರಿಗೆ ತಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿದ್ದವರನ್ನು ಮಾನ್ಯಮಾಡಲು ಯಾವ ಕಾರಣಗಳಿದ್ದವು?
• ನಿಮ್ಮ ಸಭೆಯಲ್ಲಿರುವ ಹಿರಿಯರು ನಿಮಗಾಗಿ ಹೇಗೆ ಪ್ರಯಾಸಪಟ್ಟು ಕೆಲಸಮಾಡುತ್ತಾರೆ?
• ನಿಮ್ಮ ಮೇಲ್ವಿಚಾರಣೆ ಮಾಡುವ ಹಿರಿಯರಿಂದ ನಿಮಗೆ ಯಾವ ಪ್ರಯೋಜನವಿದೆ?
• ಹಿರಿಯನೊಬ್ಬನು ಬುದ್ಧಿಹೇಳುವಾಗ ನೀವೇನನ್ನು ಮನಸ್ಸಿನಲ್ಲಿಡಬೇಕು?
[ಪುಟ 27ರಲ್ಲಿರುವ ಚಿತ್ರ]
ಹಿರಿಯರು ಸಭೆಯನ್ನು ಪರಿಪಾಲಿಸುವ ವಿಧಗಳನ್ನು ನೀವು ಮಾನ್ಯಮಾಡುತ್ತೀರೋ?