ಬೈಬಲಿನ ದೃಷ್ಟಿಕೋನ
ಬೈಬಲಿನ ಅಧ್ಯಯನವನ್ನು ಏಕೆ ಮಾಡಬೇಕು?
ಹೊದಿಕೆಯಿಂದ ಹೊದಿಕೆಯ ತನಕ ಬೈಬಲನ್ನು ಓದುವುದು ಸಾಮಾನ್ಯ ಸಂಗತಿಯಲ್ಲ. ನೀವು ಒಮ್ಮೆ ಇಲ್ಲವೆ ಅನೇಕಾವರ್ತಿ ಇದನ್ನು ಮಾಡಿದ್ದೀರೆ? ಅನೇಕರು ತಾವು ಓದಿದ್ದೇವೆಂದು ಯೋಗ್ಯವಾಗಿಯೆ ಸದಭಿಮಾನ ತಾಳುತ್ತಾರೆ. ಜೀವನದ ಆದ್ಯತೆಗಳ ಪಟ್ಟಿಯಲ್ಲಿ ಬೈಬಲನ್ನು ಓದಲು ಸಮಯವು ಪ್ರಥಮ ಸ್ಥಾನದಲ್ಲಿಲ್ಲದಿದ್ದರೆ ತುತ್ತ ತುದಿಯ ಸಮೀಪದಲ್ಲಾದರೂ ಇರಬೇಕು. ಇದಾವ ಕಾರಣಕ್ಕಾಗಿ? ಇತಿಹಾಸದಲ್ಲೆಲ್ಲ ಅತ್ಯಂತ ವ್ಯಾಪಕವಾಗಿ ಚಲಾವಣೆಯಲ್ಲಿರುವ, ದೇವಪ್ರೇರಿತವೆಂದು ಸಮರ್ಪಕವಾಗಿಯೆ ವಾದಿಸುವ ಒಂದೇ ಒಂದು ಗ್ರಂಥದ ಮೂಲ ಒಳವಿಷಯಗಳ ಪರಿಚಯ ಮಾಡಿಕೊಳ್ಳಲಿಕ್ಕಾಗಿಯೆ.—2 ತಿಮೊಥೆಯ 3:16.
ಆದರೂ, ಒಬ್ಬ ವ್ಯಕ್ತಿ ಬೈಬಲನ್ನು ಕೇವಲ ಓದಿ ಅದರ ಸಾಮಾನ್ಯ ಹೊರಮೇರೆಯನ್ನು ತಿಳಿಯುವುದಕ್ಕಿಂತ ಹೆಚ್ಚಿನದನ್ನು ಮಾಡಬಲ್ಲನು. ದೇವರನ್ನು ಮೆಚ್ಚಿಸಿ ಆ ಪವಿತ್ರ ಗ್ರಂಥದ ಬೋಧನೆಗಳ ಪೂರ್ಣ ಪ್ರಯೋಜನಗಳನ್ನು ಪಡೆಯುವುದು ನಿಮ್ಮ ಅಪೇಕ್ಷೆಯೆ? ಹಾಗಿರುವಲ್ಲಿ, ಅಪೊಸ್ತಲ ಪೌಲನು ಯುವಕ ತಿಮೊಥೆಯನಿಗೆ ಕೊಟ್ಟ ಸಲಹೆಯನ್ನು ಅನುಸರಿಸಿರಿ: “ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು. ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು. ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊಥೆಯ 4:13, 15, 16.
ಬೈಬಲ್ ಬೋಧನೆಗಳ ಮೇಲೆ ಇಂಥ ಧ್ಯಾನಪರತೆ ಮತ್ತು ಅವುಗಳಲ್ಲಿ ಮಗ್ನರಾಗಿರುವುದರಲ್ಲಿ ಶಾಸ್ತ್ರಗಳ ಕೇವಲ ವಾಚನಕ್ಕಿಂತಲೂ ಹೆಚ್ಚಿನದ್ದು ಸೇರಿದೆ. ಬೈಬಲಿನ ಕೇವಲ ವಾಚನವು, ವ್ಯಕ್ತಿಯು ಪಡೆದಿರುವ ಮಾಹಿತಿಯನ್ನು ಸರಿಯಾಗಿ ಉಪಯೋಗಿಸುತ್ತಾನೆ ಎಂಬುದಕ್ಕೆ ಖಾತರಿ ಕೊಡುವುದಿಲ್ಲ. ಮಾನವ ಮಿದುಳಿನ ವಿಷಯ ಪುಸ್ತಕವನ್ನು ಓದಿದ ವ್ಯಕ್ತಿ ಹೇಗೆ ಮಿದುಳಿನ ಸರ್ಜನನಾಗಲು ಅರ್ಹತೆ ಪಡೆಯುವುದಿಲ್ಲವೊ ಹಾಗೆಯೆ. ಈ ಕಾರಣದಿಂದ, ಪೌಲನು ತಿಮೊಥೆಯನಿಗೆ ಕೊಟ್ಟ ಮುಂದಿನ ಸಲಹೆಗೆ ಕಿವಿಗೊಡಿರಿ: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.”—2 ತಿಮೊಥೆಯ 2:15.
ತಿಳಿವಳಿಕೆಯ ನೀಳನೋಟವನ್ನು ತೆರೆಯುತ್ತದೆ
ದೇವರ ವಾಕ್ಯವನ್ನು ನೈಪುಣ್ಯದಿಂದ ಉಪಯೊಗಿಸುವಂತೆ ಕಲಿಯಲು ಅಧ್ಯಯನ ಅಗತ್ಯ. ಒಬ್ಬನು ಬೈಬಲನ್ನು ಜಾಗ್ರತೆಯಿಂದ, ಅದು ಏನು ಹೇಳುತ್ತದೆಂದು ತಿಳಿದು, ಅದರ ಅರ್ಥ ಗ್ರಹಿಸಿ, ಅದರ ವಾಕ್ಯಸಮೂಹಗಳನ್ನು ಪೂರ್ವಾಪರ ಸನ್ನಿವೇಶಗಳಲ್ಲಿ ಓದಿ, ಅದರ ಇತಿಹಾಸವನ್ನು ಗ್ರಹಿಸುತ್ತಾ ಅಭ್ಯಾಸಿಸುವಲ್ಲಿ, ಅನಿರೀಕ್ಷಿತ ಅಂತರ್ಜ್ಞಾನದ ನೀಳನೋಟಗಳು ಅವನಿಗೆ ತೆರೆಯಬಹುದು. ಈಗ ಅವನು ವ್ಯಕ್ತಿಪರವಾಗಿ ದೇವರ ವಾಕ್ಯದಿಂದ ಪ್ರಯೋಜನ ಪಡೆಯಲಾರಂಭಿಸುತ್ತಾನೆ.
ಪೂರ್ವಾಪರ ಸಂಭವಗಳನ್ನು ಓದದೆ, ಶಾಸ್ತ್ರದ ಒಂದು ಭಾಗವನ್ನು ಕೇವಲ ಓದುವುದರಿಂದ ಅಲ್ಲಿ ಹೇಳಿರುವುದರ ಅರ್ಥವನ್ನು ನಾವು ಗ್ರಹಿಸಲಿಕ್ಕಿಲ್ಲವೆಂದು ತೋರಿಸಲು ನಾವು ಒಂದು ದೃಷ್ಟಾಂತವನ್ನು ತೆಗೆದುಕೊಳ್ಳೋಣ. ಅಪೊಸ್ತಲರ ಕೃತ್ಯ 17:11ರಲ್ಲಿ ನಾವು ಥೆಸಲೊನೀಕಕ್ಕಿಂತ ಹೆಚ್ಚು ದೂರದಲ್ಲಿಲ್ಲದ ಬೆರೋಯ ಎಂಬ ಗ್ರೀಕ್ ಪಟ್ಟಣದ ಜನರ ಕುರಿತು ಓದುತ್ತೇವೆ: “ಆ ಸಭೆಯವರು ಥೆಸಲೊನೀಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧ ಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿ ದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.”
ಮೊದಲ ನೋಟದಲ್ಲಿ ನಾವು, ಬೆರೋಯದ ಕ್ರೈಸ್ತರು ಥೆಸಲೊನೀಕದವರಿಗಿಂತ ಅಭ್ಯಾಸನಿರತರಾಗಿದ್ದರೆಂದು ತೀರ್ಮಾನಿಸಬಹುದು. ಆದರೂ, ಅಪೊಸ್ತಲರ ಕೃತ್ಯ 17ನೆಯ ಅಧ್ಯಾಯ 10ನೆಯ ವಚನದಲ್ಲಿ, ಪೌಲ ಮತ್ತು ಸೀಲನು ಬೆರೋಯಕ್ಕೆ ಬಂದಾಗ ದೇವರ ವಾಕ್ಯವನ್ನು ಸಾರಲು “ಯೆಹೂದ್ಯರ ಸಭಾಮಂದಿರ”ಕ್ಕೆ ಹೋದರೆಂಬುದನ್ನು ಗಮನಿಸಿರಿ. ಮತ್ತು 12ನೆಯ ವಚನ, “ಅವರಲ್ಲಿ ಬಹಳ ಮಂದಿ [ಯೆಹೂದ್ಯರು] ನಂಬಿದರು,” ಎಂದು ಹೇಳುತ್ತದೆ. ಆ ವಚನ ಬೇರೊಂದು ತೀರ್ಮಾನವನ್ನು ನಾವು ತಲುಪುವಂತೆ ಸಹಾಯ ಮಾಡುತ್ತದೆ. ಈ ಪವಿತ್ರ ವೃತ್ತಾಂತವು, ಈ ಎರಡು ನಗರಗಳಲ್ಲಿ ಪರಸ್ಪರವಾಗಿ ಹೋಲಿಸಲ್ಪಡುವುದು ಕ್ರೈಸ್ತರಲ್ಲ, ಬದಲಿಗೆ ಆ ಸ್ಥಳಗಳಲ್ಲಿದ್ದ ಯೆಹೂದ್ಯರೇ ಎಂದು ನಮಗೆ ಹೇಳುತ್ತದೆ.
ಇದಲ್ಲದೆ, ಬೆರೋಯದವರನ್ನು ನಡತೆಯಲ್ಲಿ ಹೆಚ್ಚು ಸದ್ಗುಣವುಳ್ಳವರನ್ನಾಗಿ ಮಾಡಿದ್ದು ಯಾವುದೆಂದು ನೀವು ಗಮನಿಸಿದಿರೆ? ಅವರು ಶಾಸ್ತ್ರಗಳನ್ನು ಅತ್ಯಾಸಕಿಯ್ತಿಂದ ಪರೀಕ್ಷಿಸಿದರು. ಪ್ರೊಫೆಸರ್ ಆರ್ಚಿಬಾಲ್ಡ್ ಥಾಮಸ್ ರಾಬರ್ಟ್ಸನ್, ಆ ಮಾತುಗಳ ಮೇಲೆ ವರ್ಡ್ ಪಿಕ್ಜರ್ಸ್ ಇನ್ ದ ನ್ಯೂ ಟೆಸ್ಟಮೆಂಟ್ನಲ್ಲಿ ಹೇಳುವುದು: “ಪೌಲನು ಥೆಸಲೊನೀಕದಲ್ಲಿ ಮಾಡಿದಂತೆಯೆ ಶಾಸ್ತ್ರಗಳನ್ನು ಪ್ರತಿದಿನ ಪ್ರತಿಪಾದಿಸಿದನು, ಆದರೆ ಬೆರೋಯದವರು, ಅವನ ಹೊಸ ಅರ್ಥ ವಿವರಣೆಗೆ ಮುನಿಯುವ ಬದಲಿಗೆ ತಾವೇ ಶಾಸ್ತ್ರಗಳನ್ನು ಪರೀಕ್ಷಿಸಿದರು (ಅನಾಕ್ರಿನೊ ಅಂದರೆ ಮೇಲಿಂದ ಕೆಳಗೆ ಸೋಸಿ ತೆಗೆಯುವುದು, ಕಾನೂನುಬದ್ಧ ಕಾರ್ಯವಿಧಾನಗಳಲ್ಲಿ ಮಾಡುವಂತೆ ಜಾಗ್ರತೆಯ ಮತ್ತು ನಿಷ್ಕೃಷ್ಟ ಸಂಶೋಧನೆ ನಡೆಸುವುದು).” ಅವರ ಪರೀಕ್ಷೆ ಬರೀ ತೋರ್ಕೆಯದ್ದಾಗಿರಲಿಲ್ಲ. ಆ ಬೆರೋಯದ ಯೆಹೂದ್ಯರು, ಯೇಸು ದೀರ್ಘ ವಾಗ್ದಾನಿತ ಮೆಸ್ಸೀಯನೆಂದು ಅವನ ಕುರಿತು ಪೌಲ ಮತ್ತು ಸೀಲನು ಕಲಿಸುತ್ತಿದ್ದದ್ದು ಸತ್ಯವೆಂಬುದನ್ನು ದೃಢೀಕರಿಸಲು ಜಾಗ್ರತೆಯಿಂದ ಪರೀಕ್ಷಿಸಿದರು.
ಆದುದರಿಂದ, ಆ ಪುರಾತನದ ಬೆರೋಯದವರ ಮಾದರಿಯನ್ನು ಅನುಸರಿಸುತ್ತಾ, ನಾವೂ ದೇವರ ವಾಕ್ಯವನ್ನು ಕೇವಲ ಓದುವುದಲ್ಲದೆ, ಅಲ್ಲಿ ಹೇಳಿರುವುದರ ಅರ್ಥ ತಿಳಿಯಲು ಅದರ ಅಭ್ಯಾಸವನ್ನೂ ಮಾಡುವುದು—“ಶಾಸ್ತ್ರಗ್ರಂಥಗಳನ್ನು ಶೋಧಿಸುವುದು”—ಪ್ರಾಮುಖ್ಯ. ಈ ರೀತಿಯಲ್ಲಿ ನಾವು ಬೈಬಲಿಗೆ ನಮ್ಮ ಗಣ್ಯತೆಯ ಆಳವನ್ನು ಹೆಚ್ಚಿಸಬಲ್ಲೆವು, ಮತ್ತು ತಿಮೊಥೆಯನಂತೆ ನಾವೂ ‘ನಮ್ಮನ್ನೂ ನಮ್ಮ ಉಪದೇಶ ಕೇಳುವವರನ್ನೂ ರಕ್ಷಿಸುವೆವು.’ ಏಕೆ? ಏಕೆಂದರೆ, ಶಾಸ್ತ್ರಗಳನ್ನು ಓದಿರುವುದಲ್ಲದೆ, ಕಲಿತಿರುವ ವಿಷಯಗಳಿಗನುಸಾರವಾಗಿ ವಿಧೇಯತೆಯಿಂದ ವರ್ತಿಸುವಂತೆ ನಾವು ಅವುಗಳ ಅಭ್ಯಾಸವನ್ನೂ ಮಾಡಿದ್ದೇವೆ.—ಜ್ಞಾನೋಕ್ತಿ 3:1-6.
ನಿಜ ಮೌಲ್ಯಗಳ ಮತ್ತು ಪ್ರವಾದನೆಗಳ ಉಗಮ
ಬೈಬಲನ್ನು ಅಭ್ಯಾಸಿಸಲಿಕ್ಕಿರುವ ಇನ್ನೆರಡು ಕಾರಣಗಳನ್ನು ನಾವು ಪರಿಗಣಿಸೋಣ. ನೈತಿಕ ಮತ್ತು ಸದ್ಧರ್ಮದ ಮೌಲ್ಯಗಳನ್ನು ಒದಗಿಸುವುದರಲ್ಲಿ ಬೈಬಲು ಇತರ ಯಾವ ಗ್ರಂಥಕ್ಕೂ ಕಡಮೆಯದ್ದಲ್ಲ. ಅನೇಕ ವರ್ಷಗಳ ಹಿಂದೆ, ಒಬ್ಬ ಅಮೆರಿಕನ್ ಶಿಕ್ಷಕ ಈ ಅವಲೋಕನವನ್ನು ಮಾಡಿದರು: “ಕಾಲೆಜ್ ವಿದ್ಯಾಭ್ಯಾಸವಿಲ್ಲದ ಬೈಬಲಿನ ಜ್ಞಾನವು, ಬೈಬಲಿಲ್ಲದ ಕಾಲೆಜ್ ವಿದ್ಯಾಭ್ಯಾಸಕ್ಕಿಂತ ಹೆಚ್ಚು ಬೆಲೆಯುಳ್ಳದ್ದೆಂದು ನನ್ನ ನಂಬುಗೆ.” ಬೈಬಲ್ ಜ್ಞಾನವು ನಿಮ್ಮ ನಿಧಿಯಾಗಬೇಕಾದರೆ, ಶಾಸ್ತ್ರಗಳನ್ನು ಅಧ್ಯಯನ ಮಾಡುವ ನಿಮ್ಮ ಪ್ರೇರಕ ಶಕ್ತಿಯು, ಅದರ ಕಟ್ಟಳೆ ಮತ್ತು ಬೋಧನೆಗಳನ್ನು, ಅವು ನಿಮ್ಮನ್ನು ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಬಲ್ಲ’ ಹೆಚ್ಚು ಉತ್ತಮ ವ್ಯಕ್ತಿಯಾಗಿ ಮಾಡುವಂತೆ ಅನ್ವಯಿಸಿಕೊಳ್ಳುವುದಾಗಿರಬೇಕು.—2 ತಿಮೊಥೆಯ 2:15; ಜ್ಞಾನೋಕ್ತಿ 2:1-22.
ಇದಕ್ಕೆ ಕೂಡಿಸಿ, ಬೈಬಲಿನ ಪುಟಗಳಲ್ಲಿ ಇತಿಹಾಸದಲ್ಲಿ ಈಗಾಗಲೆ ನೆರವೇರಿರುವ ಮತ್ತು ನಮ್ಮ ಶತಮಾನದಲ್ಲಿ ನೆರವೇರುತ್ತಿರುವ ದೇವಪ್ರೇರಿತ ಪ್ರವಾದನೆಗಳು ಅಡಗಿವೆ. ಬೈಬಲ್ ಪ್ರವಾದನೆಗಳ ಅಧ್ಯಯನವು ಈಗಿನ ಲೋಕ ಪರಿಸ್ಥಿತಿಗಳ—ಯುದ್ಧಗಳು, ಬರಗಳು, ಕುಟುಂಬ ಒಡೆತಗಳು, ಹಿಂಸಾತ್ಮಕ ಪಾತಕಗಳು—ಅರ್ಥವನ್ನು ಒಬ್ಬನು ತಿಳಿಯುವಂತೆಯೂ ಅವುಗಳ ಕಾರಣದಿಂದಾಗಿ ಬರುವ ವ್ಯಾಕುಲತೆಯ ಬಲೆಯಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ತಿಳಿಯುವಂತೆಯೂ ಸಹಾಯ ಮಾಡುತ್ತದೆ. (ಲೂಕ 21:10, 11, 25-28) ಹೀಗೆ, ನಮ್ಮ ಆಧುನಿಕ ದಿನಗಳ ಸಮಸ್ಯೆಗಳಿಗೆ ದೇವರ ಉತ್ತರಗಳಿಂದ, ನಾವು ಕಾಲ ಗತಿಯಲ್ಲಿ ಎಲ್ಲಿದ್ದೇವೆ ಮತ್ತು ಭವಿಷ್ಯತ್ತಿಗಾಗಿ ನಾವು ಹೇಗೆ ಯಶಸ್ವಿಯಾಗಿ ಯೋಜಿಸಬಲ್ಲೆವು ಎಂಬುದನ್ನು ತಿಳಿಸುವ ಉತ್ತರಗಳಿಂದ ನಮಗೆ ಜ್ಞಾನೋದಯವಾಗುತ್ತದೆ. ಇಂಥ ಉತ್ತರಗಳು ನಮಗೆ, ವಾಚ್ಟವರ್ ಸೊಸೈಟಿಯನ್ನು ತನ್ನ ಪ್ರಕಾಶನ ಸಂಘವಾಗಿ ಉಪಯೋಗಿಸುವ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವೆಂಬ ಸಾಧನದ ಮೂಲಕ ಬರುತ್ತವೆ.—ಮತ್ತಾಯ 24:45-47; 2 ಪೇತ್ರ 1:19.
ಕೀರ್ತನೆ 119:105 ಹೇಳುವುದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” ಆದುದರಿಂದ, ಬೈಬಲಿನಲ್ಲಿ ಕಂಡು ಬರುವ ವಿವೇಕದ ವಚನಗಳನ್ನು ಕ್ರಮವಾಗಿ ಅಭ್ಯಾಸ ಮಾಡಿ ಅನ್ವಯಿಸುವವರು ದೇವರ ಇಷ್ಟ ಮತ್ತು ಉದ್ದೇಶದ ತಿಳಿವಳಿಕೆಯುಳ್ಳವರ ಮಧ್ಯೆ ಇರುವರು. ಮತ್ತು ಇವರಿಗೆ ವಾಸ್ತವವಾಗಿ, ಇಂದಿನ ನೈತಿಕ ಉಸುಬುನೆಲದ ಮಧ್ಯೆ ಅವರ ದೈನಂದಿನ ಜೀವನದಲ್ಲಿ ನಡೆಸಿಕೊಂಡು ಹೋಗಲು ಬೆಳಗಿದ ಪಥವಿರುವುದು. (g91 10/8)