ಅಧ್ಯಾಯ 21
“ಯಾರಾದ್ರೂ ನಾಶವಾದ್ರೆ ಅದಕ್ಕೆ ನಾನು ಕಾರಣ ಅಲ್ಲ”
ಪೌಲ ಹುರುಪಿಂದ ಸಿಹಿಸುದ್ದಿ ಸಾರಿದ ಮತ್ತು ಹಿರಿಯರಿಗೆ ಸಲಹೆ ಕೊಟ್ಟ
ಆಧಾರ: ಅಪೊಸ್ತಲರ ಕಾರ್ಯ 20:1-38
1-3. (ಎ) ಯೂತಿಖ ಹೇಗೆ ಸತ್ತ? (ಬಿ) ಆಗ ಪೌಲ ಏನು ಮಾಡಿದ? (ಸಿ) ಈ ಘಟನೆಯಿಂದ ಪೌಲನ ಬಗ್ಗೆ ನಮಗೇನು ಗೊತ್ತಾಗುತ್ತೆ?
ಪೌಲ ಮತ್ತು ಸಹೋದರರು ತ್ರೋವದಲ್ಲಿ ಒಂದು ಮನೆಯ ಮೇಲಂತಸ್ತಿನ ಕೋಣೆಯಲ್ಲಿ ಸೇರಿಬಂದಿದ್ರು. ಅವರ ಜೊತೆ ಪೌಲ ಇರೋದು ಇದೇ ಕೊನೇ ರಾತ್ರಿ ಆಗಿತ್ತು. ಹಾಗಾಗಿ ಅವನು ತುಂಬ ಹೊತ್ತು ಮಾತಾಡಿದ. ಮಾತಾಡ್ತಾ ಮಾತಾಡ್ತಾ ಮಧ್ಯರಾತ್ರಿ ಆಗೋಯ್ತು. ಕೋಣೆಯಲ್ಲಿ ಕೆಲವು ದೀಪಗಳು ಮಾತ್ರ ಉರೀತಾ ಇದ್ವು. ಇದ್ರಿಂದ ಕೋಣೆ ತುಂಬ ಹೊಗೆ ತುಂಬ್ಕೊಳ್ತು, ಸೆಕೆನೂ ಜಾಸ್ತಿ ಆಯ್ತು. ಯೂತಿಖ ಅನ್ನೋ ಯುವಕ ಆ ಕೋಣೆಯ ಕಿಟಕಿಯಲ್ಲಿ ಕೂತಿದ್ದ. ಪೌಲನ ಭಾಷಣ ಕೇಳ್ತಾ ಕೇಳ್ತಾ ಅವನಿಗೆ ನಿದ್ದೆ ಬಂದುಬಿಡ್ತು, ಆಗ ಅವನು ಮೂರನೇ ಮಹಡಿಯಿಂದ ಕೆಳಗೆ ಬಿದ್ದುಬಿಟ್ಟ!
2 ಅವನಿಗೆ ಏನಾಯ್ತು ಅಂತ ನೋಡೋಕೆ ಮೊದಲು ಓಡಿ ಬಂದವರಲ್ಲಿ ವೈದ್ಯನಾಗಿದ್ದ ಲೂಕನೂ ಇದ್ದಿರಬೇಕು. ಆ ಯುವಕನ “ಹತ್ರ ಹೋಗಿ ನೋಡಿದಾಗ ಅವನು ಸತ್ತುಹೋಗಿದ್ದ.” (ಅ. ಕಾ. 20:9) ಆದ್ರೆ ಆಗ ಒಂದು ಅದ್ಭುತ ನಡೀತು. ಪೌಲ ಅವನ ಮೇಲೆ ಬಿದ್ದು ಅವನನ್ನ ತಬ್ಬಿಕೊಂಡ. ಆಮೇಲೆ ಹೀಗೆ ಹೇಳಿದ: “ಅಳೋದನ್ನ ನಿಲ್ಲಿಸಿ, ಇವನು ಇನ್ನೂ ಜೀವಂತ ಇದ್ದಾನೆ.” ಹೀಗೆ ಪೌಲ ಯೂತಿಖನನ್ನ ಮತ್ತೆ ಬದುಕಿಸಿದ.—ಅ. ಕಾ. 20:10.
3 ಯೆಹೋವ ದೇವರು ತನ್ನ ಪವಿತ್ರಶಕ್ತಿಯಿಂದ ಎಂಥೆಂಥ ಅದ್ಭುತಗಳನ್ನ ಮಾಡಬಹುದು ಅಂತ ಇದ್ರಿಂದ ಗೊತ್ತಾಗುತ್ತೆ. ಯೂತಿಖ ಸಾಯೋಕೆ ಪೌಲ ಕಾರಣ ಅಲ್ಲ. ಆದ್ರೂ ಈ ಘಟನೆಯಿಂದಾಗಿ ಆ ವಿಶೇಷ ಸಂದರ್ಭದಲ್ಲಿ ಸಹೋದರ ಸಹೋದರಿಯರಿಗೆ ಬೇಜಾರ್ ಆಗಬಾರದು ಅಥವಾ ಯೆಹೋವನ ಮೇಲಿರೋ ನಂಬಿಕೆಯನ್ನ ಕಳ್ಕೊಬಾರದು ಅನ್ನೋದು ಪೌಲನ ಇಷ್ಟ ಆಗಿತ್ತು. ಹಾಗಾಗಿ, ಯೂತಿಖನಿಗೆ ಮತ್ತೆ ಜೀವ ಬರೋ ತರ ಮಾಡಿದ. ಹೀಗೆ ಪೌಲ ಅಲ್ಲಿದ್ದ ಸಹೋದರರನ್ನೆಲ್ಲ ಸಮಾಧಾನ ಮಾಡಿ, ಬಲ ತುಂಬಿಸಿ, ಸಾರೋ ಕೆಲಸವನ್ನ ಮುಂದುವರಿಸೋಕೆ ಹುರುಪು ತುಂಬಿಸಿ ಅಲ್ಲಿಂದ ಹೋದ. ಅವನು ಅವ್ರಿಗೆ, “ನಿಮ್ಮಲ್ಲಿ ಯಾರಾದ್ರೂ ನಾಶವಾದ್ರೆ ಅದಕ್ಕೆ ನಾನು ಕಾರಣ ಅಲ್ಲ” ಅಂತ ಹೇಳಿದ. ಈ ಮಾತುಗಳಿಂದ, ಪೌಲ ಬೇರೆಯವರ ಜೀವಕ್ಕೆ ತುಂಬ ಬೆಲೆ ಕೊಡ್ತಾನೆ ಅಂತ ಗೊತ್ತಾಗುತ್ತೆ. (ಅ. ಕಾ. 20:26) ನಾವೂ ಇದೇ ತರ ಜೀವಕ್ಕೆ ಬೆಲೆ ಕೊಡಬೇಕು. ಅದನ್ನ ಮಾಡೋದು ಹೇಗೆ ಅಂತ ಈಗ ನೋಡೋಣ.
“ಅಲ್ಲಿಂದ ಮಕೆದೋನ್ಯಕ್ಕೆ ಹೋದ” (ಅ. ಕಾ. 20:1, 2)
4. ಎಫೆಸದಲ್ಲಿ ಪೌಲ ಏನೆಲ್ಲಾ ಸಮಸ್ಯೆಗಳನ್ನ ಎದುರಿಸಿದ?
4 ಹಿಂದಿನ ಅಧ್ಯಾಯದಲ್ಲಿ ನೋಡಿದ ಹಾಗೆ, ಪೌಲ ಎಫೆಸದಲ್ಲಿ ತುಂಬಾ ಸಮಸ್ಯೆಗಳನ್ನ ಎದುರಿಸಿದ. ಅಲ್ಲಿ ನಡೆದ ಘಟನೆ ಅವನಲ್ಲಿ ಭಯ ಹುಟ್ಟಿಸಿಬಿಡ್ತು. ಅಲ್ಲಿ ಅವನು ಸಾರಿದಾಗ ದೊಡ್ಡ ಗಲಾಟೆನೇ ಆಯ್ತು. ಅಲ್ಲಿನ ಅಕ್ಕಸಾಲಿಗರು ಅರ್ತೆಮೀ ದೇವಿಯ ಮೂರ್ತಿಗಳನ್ನ ಮಾರಾಟ ಮಾಡಿ ಜೀವನ ಸಾಗಿಸ್ತಿದ್ರು. ಹಾಗಾಗಿ ಅವರೂ ಗಲಾಟೆಯಲ್ಲಿ ಸೇರ್ಕೊಂಡ್ರು. “ಗಲಾಟೆ ನಿಂತುಹೋದ ಮೇಲೆ ಪೌಲ ಶಿಷ್ಯರನ್ನ ಬರೋಕೆ ಹೇಳಿದ. ಅವ್ರನ್ನ ಪ್ರೋತ್ಸಾಹಿಸಿ ಅವ್ರಿಗೆ ಮತ್ತೆ ಸಿಗೋಣ ಅಂತ ಹೇಳಿ ಅಲ್ಲಿಂದ ಮಕೆದೋನ್ಯಕ್ಕೆ ಹೋದ” ಅಂತ ಅಪೊಸ್ತಲರ ಕಾರ್ಯ 20:1 ಹೇಳುತ್ತೆ.
5, 6. (ಎ) ಪೌಲ ಮಕೆದೋನ್ಯದಲ್ಲಿ ಎಷ್ಟು ಸಮಯ ಇದ್ದಿರಬಹುದು? (ಬಿ) ಅವನು ಅಲ್ಲಿನ ಸಹೋದರರಿಗೆ ಏನು ಮಾಡಿದ? (ಸಿ) ಅವನು ಸಹೋದರ ಸಹೋದರಿಯನ್ನ ಹೇಗೆ ನೋಡ್ತಿದ್ದ?
5 ಮಕೆದೋನ್ಯಕ್ಕೆ ಹೊರಟ ಪೌಲ ರೇವು ಪಟ್ಟಣವಾದ ತ್ರೋವದಲ್ಲಿ ಸ್ವಲ್ಪ ಸಮಯ ಉಳ್ಕೊಂಡ. ಕೊರಿಂಥಕ್ಕೆ ಹೋಗಿದ್ದ ತೀತ ವಾಪಸ್ ಬಂದು ಅಲ್ಲಿ ಸಿಗ್ತಾನೆ ಅಂತ ಪೌಲ ನೆನಸಿದ್ದ. (2 ಕೊರಿಂ. 2:12, 13) ಆದ್ರೆ ತೀತ ಬರಲ್ಲ ಅಂತ ಗೊತ್ತಾದಾಗ ಪೌಲ ಮಕೆದೋನ್ಯಕ್ಕೆ ಹೋದ. ಅಲ್ಲಿದ್ದ “ಶಿಷ್ಯರನ್ನ ತುಂಬ ಪ್ರೋತ್ಸಾಹಿಸಿದ.” ಅವನು ಅಲ್ಲೇ ಸುಮಾರು ಒಂದು ವರ್ಷ ಇದ್ದಿರಬಹುದು.a (ಅ. ಕಾ. 20:2) ಕೊನೆಗೂ ತೀತ ಮಕೆದೋನ್ಯದಲ್ಲಿ ಪೌಲನನ್ನ ಭೇಟಿಯಾದ. ಅವನು ಒಳ್ಳೇ ಸುದ್ದಿ ತಂದಿದ್ದ. ಪೌಲ ಕೊರಿಂಥದವರಿಗೆ ಬರೆದ ಮೊದಲನೇ ಪತ್ರಕ್ಕೆ ಅವರು ತೋರಿಸಿದ ಒಳ್ಳೇ ಪ್ರತಿಕ್ರಿಯೆ ಬಗ್ಗೆ ತೀತ ಹೇಳಿದ. (2 ಕೊರಿಂ. 7:5-7) ಇದನ್ನ ಕೇಳಿದಾಗ ಪೌಲನಿಗೆ ಇನ್ನೊಂದು ಪತ್ರ ಬರೀಬೇಕಂತ ಮನಸ್ಸಾಯ್ತು. ಅದೇ 2 ಕೊರಿಂಥ ಪುಸ್ತಕ.
6 ಎಫೆಸ ಮತ್ತು ಮಕೆದೋನ್ಯದ ಸಹೋದರರನ್ನ ಪೌಲ ಭೇಟಿ ಮಾಡಿದ್ರ ಬಗ್ಗೆ ಲೂಕ ವಿವರಿಸುವಾಗ “ಪ್ರೋತ್ಸಾಹಿಸಿ” ಮತ್ತು “ಪ್ರೋತ್ಸಾಹಿಸಿದ” ಅನ್ನೋ ಪದ ಬಳಸಿದ್ದನ್ನ ಗಮನಿಸಿದ್ರಾ? ಈ ಪದಗಳು ಪೌಲನಿಗೆ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ ಇತ್ತು ಅಂತ ತೋರಿಸ್ಕೊಡುತ್ತೆ. ಬೇರೆಯವರನ್ನ ಕೀಳಾಗಿ ನೋಡ್ತಿದ್ದ ಫರಿಸಾಯರ ತರ ಇವನು ಇರಲಿಲ್ಲ. ಸಹೋದರರ ಜೊತೆ ಸೇರಿ ಯೆಹೋವನ ಸೇವೆ ಮಾಡೋಕೆ ಖುಷಿ ಪಡ್ತಿದ್ದ. (ಯೋಹಾ. 7:47-49; 1 ಕೊರಿಂ. 3:9) ಅವ್ರನ್ನ ತಿದ್ದೋ ಸಮಯದಲ್ಲೂ ಕೀಳಾಗಿ ನೋಡ್ತಿರಲಿಲ್ಲ.—2 ಕೊರಿಂ. 2:4.
7. ಕ್ರೈಸ್ತ ಮೇಲ್ವಿಚಾರಕರು ಪೌಲನ ತರ ಏನು ಮಾಡಬಹುದು?
7 ಇವತ್ತು ಸಂಚರಣ ಮೇಲ್ವಿಚಾರಕರು ಮತ್ತು ಸಭೆಯ ಹಿರಿಯರು ಪೌಲನ ತರ ಇರೋಕೆ ಪ್ರಯತ್ನಿಸ್ತಾರೆ. ಯಾರಾದ್ರೂ ತಪ್ಪು ಮಾಡಿದ್ರೆ ಅವ್ರಿಗೆ ಅದನ್ನ ಮನಗಾಣಿಸುವಾಗ ಕೂಡ ಅವ್ರನ್ನ ಬಲಪಡಿಸೋದೇ ಮೇಲ್ವಿಚಾರಕರ ಗುರಿ ಆಗಿರುತ್ತೆ. ಅವ್ರ ಹತ್ರ ಒರಟಾಗಿ ನಡ್ಕೊಳ್ಳಲ್ಲ. ಅವ್ರ ನೋವನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತಾರೆ. ತುಂಬ ಅನುಭವ ಇರೋ ಒಬ್ಬ ಸಂಚರಣ ಮೇಲ್ವಿಚಾರಕ ಹೀಗೆ ಹೇಳ್ತಾರೆ: “ಸಹೋದರ ಸಹೋದರಿಯರಲ್ಲಿ ಹೆಚ್ಚಿನವರು ಸರಿಯಾಗಿ ಇರೋದ್ದನ್ನೇ ಮಾಡೋಕೆ ಇಷ್ಟಪಡ್ತಾರೆ. ಆದ್ರೆ ಅದನ್ನ ಮಾಡೋಕೆ ಆಗದೇ ಇದ್ದಾಗ ಅವ್ರಿಗೆ ಕಿರಿಕಿರಿ ಆಗಿಬಿಡುತ್ತೆ. ತಾವೆಷ್ಟೇ ಪ್ರಯತ್ನ ಮಾಡಿದ್ರೂ ಏನೂ ಮಾಡಕ್ಕಾಗಲ್ಲ ಅನ್ನೋ ಭಯ ಅವ್ರ ಮನಸ್ಸಲ್ಲಿ ಕೂತುಬಿಡುತ್ತೆ.” ಇಂಥವ್ರಿಗೆ ಬೇಕಾದ ಬಲವನ್ನ ಮೇಲ್ವಿಚಾರಕರಿಂದ ಕೊಡಕ್ಕಾಗುತ್ತೆ!—ಇಬ್ರಿ. 12:12, 13.
‘ಅವನನ್ನ ಕೊಲ್ಲೋಕೆ ಒಳಸಂಚು ಮಾಡಿದ್ರು’ (ಅ. ಕಾ. 20:3, 4)
8, 9. (ಎ) ಸಿರಿಯಕ್ಕೆ ಹಡಗಲ್ಲಿ ಹೋಗೋ ಪೌಲನ ಯೋಜನೆಗೆ ಯಾವ ಅಡ್ಡಿ ಬಂತು? (ಬಿ) ಯೆಹೂದ್ಯರು ಪೌಲನ ಮೇಲೆ ದ್ವೇಷ ಬೆಳೆಸ್ಕೊಳ್ಳೋಕೆ ಕಾರಣ ಏನಿರಬಹುದು?
8 ಪೌಲ ಮಕೆದೋನ್ಯದಿಂದ ಕೊರಿಂಥಕ್ಕೆ ಹೋದ.b ಅಲ್ಲಿ ಮೂರು ತಿಂಗಳು ಇದ್ದ ಮೇಲೆ ಕೆಂಕ್ರೆಗೆ ಹೋಗಿ ಅಲ್ಲಿಂದ ಹಡಗಲ್ಲಿ ಸಿರಿಯಕ್ಕೆ ಹೋಗಬೇಕಂತ ಇದ್ದ. ಯಾಕಂದ್ರೆ ಸಿರಿಯದಿಂದ ಯೆರೂಸಲೇಮಿಗೆ ಹೋಗೋಕೆ ಸುಲಭ ಆಗ್ತಿತ್ತು. ಇದ್ರಿಂದ ಅವನು ಅಲ್ಲಿನ ಬಡ ಸಹೋದರರಿಗೆ ಕಾಣಿಕೆಗಳನ್ನ ತಗೊಂಡು ಹೋಗಿ ಕೊಡೋಕೆ ಆಗ್ತಿತ್ತು.c (ಅ. ಕಾ. 24:17; ರೋಮ. 15:25, 26) ಆದ್ರೆ ಇದ್ದಕ್ಕಿದ್ದ ಹಾಗೆ ಪರಿಸ್ಥಿತಿ ಬದಲಾಯ್ತು. ‘ಯೆಹೂದ್ಯರು ಪೌಲನನ್ನ ಕೊಲ್ಲೋಕೆ ಒಳಸಂಚು ಮಾಡಿದ್ರು’ ಅಂತ ಅಪೊಸ್ತಲರ ಕಾರ್ಯ 20:3 ಹೇಳುತ್ತೆ. ಹಾಗಾಗಿ ಪೌಲ ತನ್ನ ಯೋಜನೆಯನ್ನ ಬದಲಾಯಿಸ್ಕೊಂಡ.
9 ಯೆಹೂದ್ಯರು ಪೌಲನ ಮೇಲೆ ದ್ವೇಷ ಬೆಳೆಸ್ಕೊಳ್ಳೋಕೆ ಕಾರಣ ಏನು? ಒಂದು, ಪೌಲ ಯೆಹೂದಿ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಸೇರಿಸಿಕೊಂಡಿದ್ದ. ಎರಡು, ಹಿಂದಿನ ಸಲ ಪೌಲ ಕೊರಿಂಥದಲ್ಲಿ ಸಾರಿದಾಗ ಅಲ್ಲಿನ ಸಭಾಮಂದಿರದ ಪ್ರಮುಖ ವ್ಯಕ್ತಿಯಾಗಿದ್ದ ಕ್ರಿಸ್ಪ ಕ್ರೈಸ್ತನಾಗಿದ್ದ. (ಅ. ಕಾ. 18:7, 8; 1 ಕೊರಿಂ. 1:14) ಅಷ್ಟೇ ಅಲ್ಲ, ಒಂದು ಸಲ ಯೆಹೂದ್ಯರು ಪೌಲನ ಮೇಲೆ ಆರೋಪ ಹಾಕಿ ಅಖಾಯದ ರಾಜ್ಯಪಾಲ ಗಲ್ಲಿಯೋನನ ಹತ್ರ ಕರ್ಕೊಂಡು ಬಂದಿದ್ರು. ಆದ್ರೆ ಗಲ್ಲಿಯೋನ ಅವರ ಆರೋಪಕ್ಕೆ ಆಧಾರನೇ ಇಲ್ಲ ಅಂತ ಹೇಳಿ ಅದನ್ನ ತಳ್ಳಿಹಾಕಿದ್ದ. ಇದ್ರಿಂದ ಪೌಲನ ಶತ್ರುಗಳಿಗೆ ಅವಮಾನ ಆಗಿತ್ತು. (ಅ. ಕಾ. 18:12-17) ಈ ಸಲ ಕೊರಿಂಥದ ಯೆಹೂದ್ಯರಿಗೆ, ಪೌಲ ಕೆಂಕ್ರೆಗೆ ಹಡಗು ಹತ್ತುತ್ತಾನೆ ಅಂತ ಗೊತ್ತಿದ್ದಿರಬೇಕು ಅಥವಾ ಊಹಿಸಿದ್ದಿರಬೇಕು. ಅದಕ್ಕೆ ಪೌಲ ಅಲ್ಲಿ ಬಂದಾಗ ಅವನ ಮೇಲೆ ದಾಳಿ ಮಾಡಿ ಸಾಯಿಸಬೇಕು ಅಂತ ಸಂಚು ಹೂಡಿದ್ರು. ಆದ್ರೆ ಪೌಲ ಏನು ಮಾಡಿದ?
10. ಪೌಲ ಕೆಂಕ್ರೆಯ ಮೂಲಕ ಪ್ರಯಾಣಿಸದೆ ಇದ್ದಿದ್ದು ಅವನು ಪುಕ್ಕಲ ಅಂತ ಅರ್ಥನಾ? ವಿವರಿಸಿ.
10 ತನ್ನ ಸುರಕ್ಷತೆಗಾಗಿ ಮತ್ತು ತನ್ನ ಕೈಯಲ್ಲಿದ್ದ ಕಾಣಿಕೆಗಳ ಸಂರಕ್ಷಣೆಗಾಗಿ ಪೌಲ ಕೆಂಕ್ರೆಯಿಂದ ಸಮುದ್ರ ಮಾರ್ಗವಾಗಿ ಹೋಗದೆ ಮಕೆದೋನ್ಯದ ಮಾರ್ಗವಾಗಿ ಪ್ರಯಾಣ ಮಾಡೋಕೆ ತೀರ್ಮಾನ ಮಾಡಿದ. ಈ ಮಾರ್ಗದಲ್ಲೂ ತುಂಬ ಅಪಾಯ ಇತ್ತು. ದಾರಿಯಲ್ಲಿ ಕಳ್ಳರು ಅಲ್ಲಲ್ಲಿ ಹೊಂಚುಹಾಕೊಂಡು ಕೂತಿರ್ತಿದ್ರು. ಪ್ರವಾಸಿಗೃಹಗಳಲ್ಲೂ ಸುರಕ್ಷತೆ ಇರಲಿಲ್ಲ. ಆದ್ರೂ ಕೆಂಕ್ರೆಯಲ್ಲಿ ಸಂಚುಹಾಕೊಂಡು ಇದ್ದವರ ಕೈಗೆ ಸಿಕ್ಕಿಹಾಕೊಳ್ಳೋದಕ್ಕಿಂತ ಈ ದಾರಿಯಲ್ಲೇ ಹೋಗೋದೇ ಒಳ್ಳೇದು ಅಂತ ಪೌಲ ಅಂದ್ಕೊಂಡ. ಈ ಮಿಷನರಿ ಪ್ರಯಾಣದಲ್ಲಿ ಪೌಲನ ಜೊತೆ ಅರಿಸ್ತಾರ್ಕ, ಗಾಯ, ಸೆಕುಂದ, ಸೋಪತ್ರ, ತಿಮೊತಿ, ತ್ರೊಫಿಮ ಮತ್ತು ತುಖಿಕ ಇದ್ದಿದ್ದು ಒಳ್ಳೇದಾಯ್ತು.—ಅ. ಕಾ. 20:3, 4.
11. (ಎ) ಇವತ್ತು ಕ್ರೈಸ್ತರು ತಮ್ಮನ್ನ ಕಾಪಾಡ್ಕೊಳ್ಳೋಕೆ ಏನು ಮಾಡ್ತಾರೆ? (ಬಿ) ಈ ವಿಷ್ಯದಲ್ಲಿ ಯೇಸು ಯಾವ ಮಾದರಿ ಇಟ್ಟಿದ್ದಾನೆ?
11 ಪೌಲನ ತರಾನೇ ನಾವೂ ಇವತ್ತು ಸೇವೆಗೆ ಹೋಗೋವಾಗ ನಮ್ಮ ಸುರಕ್ಷತೆಗಾಗಿ ಕೆಲವು ಹೆಜ್ಜೆಗಳನ್ನ ತಗೊಳ್ತೀವಿ. ಕೆಲವು ಸ್ಥಳಗಳಲ್ಲಿ ಒಬ್ಬರೇ ಹೋಗೋ ಬದ್ಲು ಗುಂಪಾಗಿ ಅಥವಾ ಇಬ್ಬಿಬ್ಬರಾಗಿ ಹೋಗ್ತೀವಿ. ಒಂದುವೇಳೆ ಹಿಂಸೆ ಬಂದ್ರೆ ಏನು ಮಾಡ್ತೀವಿ? ನಮಗೆ ಹಿಂಸೆ ಬಂದೇ ಬರುತ್ತೆ ಅಂತ ಚೆನ್ನಾಗಿ ಗೊತ್ತು. (ಯೋಹಾ. 15:20; 2 ತಿಮೊ. 3:12) ಹಾಗಂತ ನಾವು ಸಮಸ್ಯೆಯಲ್ಲಿ ಬೇಕುಬೇಕಂತ ಹೋಗಿ ಬೀಳಲ್ಲ. ಬದಲಿಗೆ ಯೇಸುವಿನ ಮಾದರಿ ಅನುಕರಿಸ್ತೀವಿ. ಯೇಸುಗೆ ಹಿಂಸೆ ಬಂದಾಗ ಆತನು ಏನು ಮಾಡಿದ? ಒಂದು ಸಲ, ಯೆರೂಸಲೇಮಲ್ಲಿದ್ದ ವಿರೋಧಿಗಳು ಅವನ ಮೇಲೆ ಕಲ್ಲೆಸೆಯೋಕೆ ನೋಡಿದಾಗ “ಯೇಸು ಅಡಗಿಕೊಂಡು ದೇವಾಲಯದಿಂದ ಹೊರಗೆ ಹೋದನು.” (ಯೋಹಾ. 8:59) ಇನ್ನೊಂದು ಸಲ, ಯೆಹೂದ್ಯರು ಅವನನ್ನ ಕೊಲ್ಲೋಕೆ ಸಂಚು ಮಾಡ್ತಿದ್ದಾರೆ ಅಂತ ಗೊತ್ತಾದಾಗ “ಯೇಸು ಯೆಹೂದ್ಯರ ಕಣ್ಣಿಗೆ ಬೀಳದೆ ಪ್ರಯಾಣ ಮಾಡ್ತಾ ಇದ್ದನು. ಅಲ್ಲಿಂದ ಕಾಡಿನ ಹತ್ರ ಇದ್ದ . . . ಊರಿಗೆ ಹೋದನು.” (ಯೋಹಾ. 11:54) ಯೇಸು ತನ್ನನ್ನ ಕಾಪಾಡ್ಕೊಳ್ಳೋಕೆ ತನ್ನಿಂದ ಆಗೋದನ್ನೆಲ್ಲ ಮಾಡಿದ. ಆದ್ರೆ ದೇವರ ಇಷ್ಟಕ್ಕೆ ವಿರುದ್ಧವಾಗಿ ಏನೂ ಮಾಡೋಕೆ ಹೋಗಲಿಲ್ಲ. ಇವತ್ತು ಕ್ರೈಸ್ತರಾದ ನಾವೂ ಇದೇ ತರ ಮಾಡ್ತೀವಿ.—ಮತ್ತಾ. 10:16.
“ಅವ್ರಿಗೆ ತುಂಬ ಖುಷಿ ಆಯ್ತು” (ಅ. ಕಾ. 20:5-12)
12, 13. (ಎ) ಯೂತಿಖನಿಗೆ ಪೌಲ ಮತ್ತೆ ಜೀವ ಬರೋ ತರ ಮಾಡಿದಾಗ ಸಭೆಯವ್ರಿಗೆ ಹೇಗನಿಸ್ತು? (ಬಿ) ತಮ್ಮವರನ್ನ ಕಳ್ಕೊಂಡವರಿಗೆ ಇವತ್ತು ಬೈಬಲ್ ಕೊಡೋ ಯಾವ ನಿರೀಕ್ಷೆ ಸಾಂತ್ವನ ನೀಡುತ್ತೆ?
12 ಪೌಲ ಮತ್ತು ಅವನ ಜೊತೆಗೆ ಇದ್ದವರು ಮಕೆದೋನ್ಯದ ತನಕ ಒಟ್ಟಿಗೆ ಬಂದ್ರು. ಆಮೇಲೆ ಸ್ವಲ್ಪ ಸಮಯಕ್ಕೆ ಬೇರೆಬೇರೆ ಆದ್ರು. ಆದ್ರೆ ಅವರು ತ್ರೋವದಲ್ಲಿ ಮತ್ತೆ ಒಂದಾದ್ರು.d ಇದ್ರ ಬಗ್ಗೆ ಲೂಕ “ಐದು ದಿನ ಆದಮೇಲೆ ತ್ರೋವಕ್ಕೆ ಬಂದು ಅವ್ರನ್ನ ಭೇಟಿ ಮಾಡಿದ್ವಿ” ಅಂತ ಹೇಳಿದ್ದಾನೆ.e (ಅ. ಕಾ. 20:6) ಪೌಲ ಯೂತಿಖನಿಗೆ ಮತ್ತೆ ಜೀವ ಬರೋ ತರ ಮಾಡಿದ್ದು ಇಲ್ಲೇ. ಅಲ್ಲಿದ್ದ ಸಹೋದರ ಸಹೋದರಿಯರಿಗೆ ತಮ್ಮ ಸಭೆಯ ಸಹೋದರನಾಗಿದ್ದ ಯೂತಿಖನಿಗೆ ಮತ್ತೆ ಜೀವ ಬಂದಿದ್ದನ್ನ ನೋಡಿದಾಗ ಎಷ್ಟು ಸಂತೋಷ ಆಗಿರುತ್ತೆ ಅಲ್ವಾ! ನಿಜ, “ಅವ್ರಿಗೆ ತುಂಬ ಖುಷಿ ಆಯ್ತು” ಅಂತ ಬೈಬಲ್ ಹೇಳುತ್ತೆ.—ಅ. ಕಾ. 20:12.
13 ಈಗ ನಮ್ಮ ಕಾಲದಲ್ಲಿ ಇಂಥ ಅದ್ಭುತಗಳು ನಡಿಯಲ್ಲ. ಆದ್ರೂ ನಮ್ಮವರು ಯಾರಾದ್ರೂ ತೀರಿಕೊಂಡಾಗ ನಮಗೆ ದುಃಖ ಆಗುತ್ತೆ, ಆದ್ರೆ ಅವ್ರನ್ನ ಮತ್ತೆ ನೋಡಬಹುದು ಅಂತ ಬೈಬಲ್ ಕೊಡೋ ನಿರೀಕ್ಷೆನ ನೆನಸ್ಕೊಂಡಾಗ “ತುಂಬ ಖುಷಿ” ಆಗುತ್ತೆ. (ಯೋಹಾ. 5:28, 29) ಯೂತಿಖ ಅಪರಿಪೂರ್ಣನಾಗಿದ್ರಿಂದ ಅವನು ಮತ್ತೆ ಸತ್ತ. (ರೋಮ. 6:23) ಆದ್ರೆ ಹೊಸ ಲೋಕದಲ್ಲಿ ಯಾರಿಗೆಲ್ಲ ದೇವರು ಮತ್ತೆ ಜೀವ ಕೊಡ್ತಾನೋ ಅವ್ರಿಗೆಲ್ಲ ಶಾಶ್ವತವಾಗಿ ಬದುಕೋ ಅವಕಾಶ ಸಿಗುತ್ತೆ. ಯೇಸು ಜೊತೆ ಆಳ್ವಿಕೆ ಮಾಡೋರಿಗೆ ಅಮರತ್ವ ಸಿಗುತ್ತೆ. (1 ಕೊರಿಂ. 15:51-53) ಹಾಗಾಗಿ ಅಭಿಷಿಕ್ತರೂ ಬೇರೆ ಕುರಿಗಳೂ ಮತ್ತೆ ಬದುಕೋ ನಿರೀಕ್ಷೆಯನ್ನ ನೆನಸ್ಕೊಂಡು ಈಗ “ತುಂಬ ಖುಷಿ” ಪಡ್ತಾರೆ.—ಯೋಹಾ. 10:16.
“ಎಲ್ರ ಮುಂದೆ . . . ಹೇಳಿದೆ. ಮನೆಮನೆಗೂ ಬಂದು ಕಲಿಸಿದೆ” (ಅ. ಕಾ. 20:13-24)
14. ಎಫೆಸದ ಹಿರಿಯರು ಮಿಲೇತದಲ್ಲಿ ಪೌಲನನ್ನ ಭೇಟಿ ಆದಾಗ ಅವನು ಏನು ಹೇಳಿದ?
14 ಪೌಲ ಮತ್ತು ಅವನ ಜೊತೆಗಾರರು ತ್ರೋವದಿಂದ ಅಸ್ಸೋಸಿಗೆ, ಆಮೇಲೆ ಅಲ್ಲಿಂದ ಮಿತಿಲೇನೆಗೆ, ಖೀಯೊಸ್, ಸಾಮೊಸ್ ಮತ್ತು ಮಿಲೇತಕ್ಕೆ ಪ್ರಯಾಣ ಮಾಡಿದ್ರು. 50ನೇ ದಿನದ ಹಬ್ಬಕ್ಕೆ ಯೆರೂಸಲೇಮಿಗೆ ತಲುಪಬೇಕು ಅಂತ ಪೌಲ ಅಂದ್ಕೊಂಡಿದ್ದ. ಅಲ್ಲಿಗೆ ಬೇಗ ಹೋಗಬೇಕು ಅನ್ನೋ ಕಾರಣಕ್ಕೆ ಅವನು ಎಫೆಸದಲ್ಲಿ ನಿಲ್ಲಿಸದೆ ಹೋಗೋ ಹಡಗು ಹತ್ತಿದ್ದ. ಆದ್ರೆ ಅವನಿಗೆ ಎಫೆಸದ ಹಿರಿಯರ ಹತ್ರ ಮಾತಾಡಬೇಕು ಅಂತ ಆಸೆನೂ ಇತ್ತು. ಅದಕ್ಕೆ ಮಿಲೇತಕ್ಕೆ ಬಂದು ತನ್ನನ್ನ ಭೇಟಿ ಮಾಡಿ ಅಂತ ಅವ್ರನ್ನ ಕೇಳ್ಕೊಂಡ. (ಅ. ಕಾ. 20:13-17) ಅವರು ಅಲ್ಲಿಗೆ ಬಂದಾಗ ಪೌಲ, “ನಾನು ಏಷ್ಯಾ ಪ್ರದೇಶಕ್ಕೆ ಕಾಲಿಟ್ಟ ಮೊದಲನೇ ದಿನದಿಂದ ಇಲ್ಲಿ ತನಕ ನಿಮ್ಮ ಜೊತೆ ಹೇಗೆ ನಡ್ಕೊಂಡಿದ್ದೀನಿ ಅಂತ ನಿಮಗೆ ಚೆನ್ನಾಗಿ ಗೊತ್ತು. ಯೆಹೂದ್ಯರು ನನ್ನನ್ನ ಸಾಯಿಸೋಕೆ ಒಳಸಂಚು ಮಾಡಿದಾಗ ಕಣ್ಣೀರಿಟ್ಟು ಕಷ್ಟಪಟ್ಟೆ. ನಾನು ದೀನತೆಯಿಂದ ಪ್ರಭುವಿನ ಸೇವೆ ಮಾಡಿದೆ. ನಿಮ್ಗೆ ಪ್ರಯೋಜನ ಆಗೋ ಯಾವುದೇ ವಿಷ್ಯನ ನಾನು ನಿಮ್ಮಿಂದ ಮುಚ್ಚಿಡಲಿಲ್ಲ. ಎಲ್ರ ಮುಂದೆ ಅದನ್ನ ನಾನು ನಿಮಗೆ ಹೇಳಿದೆ. ಮನೆಮನೆಗೂ ಬಂದು ಕಲಿಸಿದೆ. ಪಶ್ಚಾತ್ತಾಪಪಟ್ಟು ದೇವ್ರನ್ನ ಆರಾಧಿಸೋ ಹಾಗೆ ಮತ್ತು ನಮ್ಮ ಯೇಸು ಪ್ರಭು ಮೇಲೆ ನಂಬಿಕೆ ಇಡೋ ಹಾಗೆ ಯೆಹೂದ್ಯರಿಗೂ ಗ್ರೀಕರಿಗೂ ಚೆನ್ನಾಗಿ ವಿವರಿಸಿದೆ” ಅಂತ ಹೇಳಿದ.—ಅ. ಕಾ. 20:18-21.
15. ಮನೆಮನೆಗೆ ಹೋಗಿ ಸಾರೋದ್ರಿಂದ ಯಾವ ಕೆಲವು ಪ್ರಯೋಜನಗಳು ಸಿಗುತ್ತೆ?
15 ನಾವು ಸಾರೋಕೆ ಬೇರೆಬೇರೆ ವಿಧಾನಗಳನ್ನ ಬಳಸ್ತೀವಿ. ಪೌಲನ ತರ ನಾವು ಕೂಡ ಎಲ್ಲಿ ಜನ್ರು ಇರ್ತಾರೋ ಅಲ್ಲಿ ಹೋಗಿ ಸಾರೋಕೆ ಪ್ರಯತ್ನ ಮಾಡ್ತೀವಿ. ಉದಾಹರಣೆಗೆ ಬಸ್ ಸ್ಟಾಪ್ಗಳಿಗೆ, ತುಂಬ ಜನ ಓಡಾಡೋ ರಸ್ತೆಗಳಿಗೆ, ಮಾರುಕಟ್ಟೆಗಳಿಗೆ ಹೋಗ್ತೀವಿ. ಹಾಗಂತ ಮನೆಮನೆ ಸೇವೆನಾ ಮರಿಯಲ್ಲ, ಯಾಕಂದ್ರೆ ಇದು ಯೆಹೋವನ ಸಾಕ್ಷಿಗಳು ಸಾರೋ ಮುಖ್ಯ ವಿಧಾನ. ಮನೆಮನೆಗೆ ಹೋಗಿ ಸಾರೋವಾಗ ಎಲ್ಲಾ ಜನ್ರಿಗೂ ಬೈಬಲಲ್ಲಿರೋ ಸಂದೇಶವನ್ನ ಕೇಳಿಸ್ಕೊಳ್ಳೋಕೆ ಸಾಕಷ್ಟು ಅವಕಾಶ ಸಿಗುತ್ತೆ. ಹೀಗೆ, ದೇವರ ತರ ನಾವು ಕೂಡ ಭೇದಭಾವ ಮಾಡಲ್ಲ ಅಂತ ತೋರಿಸ್ಕೊಡ್ತೀವಿ. ಜೊತೆಗೆ ಒಳ್ಳೇ ಮನಸ್ಸಿನ ಪ್ರತಿಯೊಬ್ಬರಿಗೂ ಯಾವ ಸಹಾಯ ಬೇಕು ಅಂತ ನೋಡಿ ದೇವರ ಬಗ್ಗೆ ಕಲಿಸ್ತೀವಿ. ಅಷ್ಟೇ ಅಲ್ಲ, ಈ ಸೇವೆ ಮಾಡುವಾಗ ನಮ್ಮ ನಂಬಿಕೆ ಮತ್ತು ತಾಳ್ಮೆನೂ ಜಾಸ್ತಿ ಆಗುತ್ತೆ. ಹೀಗೆ ನಾವು ಸಾರ್ವಜನಿಕವಾಗಿ ಮತ್ತು ಮನೆಮನೆಗೆ ಹೋಗಿ ಹುರುಪಿಂದ ಸಾರೋದನ್ನ ನೋಡಿ ಜನ ನಮ್ಮನ್ನ ಸತ್ಯ ಕ್ರೈಸ್ತರು ಅಂತ ಗುರುತಿಸ್ತಾರೆ.
16, 17. (ಎ) ಪೌಲ ಧೈರ್ಯಶಾಲಿ ಅಂತ ಹೇಗೆ ತೋರಿಸ್ಕೊಟ್ಟ? (ಬಿ) ಇವತ್ತು ಕ್ರೈಸ್ತರು ಅವನ ತರ ಏನು ಮಾಡ್ತಿದ್ದಾರೆ?
16 ಯೆರೂಸಲೇಮಿಗೆ ಹೋದ್ರೆ ಅಲ್ಲಿ ಏನೆಲ್ಲಾ ಅಪಾಯ ಕಾದಿದಿಯೋ ಗೊತ್ತಿಲ್ಲ ಅಂತ ಪೌಲ ಎಫೆಸದ ಹಿರಿಯರ ಹತ್ರ ಹೇಳಿದ. ಅವನು ಅವ್ರಿಗೆ, “ಆದ್ರೂ ನನ್ನ ಪ್ರಾಣಕ್ಕೆ ಏನಾಗುತ್ತೋ ಅನ್ನೋ ಚಿಂತೆ ನನಗಿಲ್ಲ. ಯೇಸು ಪ್ರಭು ನನಗೆ ಕೊಟ್ಟ ಈ ಕೆಲಸವನ್ನ ಮಾಡಿ ಮುಗಿಸೋದೆ ನನ್ನ ಗುರಿ. ದೇವ್ರ ಅಪಾರ ಕೃಪೆ ಬಗ್ಗೆ ಎಲ್ಲ ಕಡೆ ಚೆನ್ನಾಗಿ ಸಾರಿ ಹೇಳೋದೇ ಆ ಕೆಲಸ” ಅಂತ ಹೇಳಿದ. (ಅ. ಕಾ. 20:24) ಆರೋಗ್ಯ ಹಾಳಾಗಲಿ, ತುಂಬ ವಿರೋಧ ಬರಲಿ, ಏನೇ ಆಗಲಿ ತನಗೆ ಸಿಕ್ಕಿರೋ ನೇಮಕವನ್ನ ಪೌಲ ಧೈರ್ಯವಾಗಿ ಮಾಡಿ ಮುಗಿಸಿದ.
17 ಇವತ್ತು ಕ್ರೈಸ್ತರಿಗೆ ಕೂಡ ಬೇರೆ ಬೇರೆ ಕಷ್ಟಗಳು ಬರ್ತಿದೆ. ಕೆಲವು ದೇಶಗಳಲ್ಲಿ ಸರ್ಕಾರ ನಿಷೇಧ ಹಾಕಿದೆ, ಕೆಲವರು ಹಿಂಸೆ ಅನುಭವಿಸ್ತಾ ಇದ್ದಾರೆ, ಇನ್ನು ಕೆಲವ್ರನ್ನ ತುಂಬ ಸುಸ್ತು ಮಾಡಿಬಿಡೋ ಮಾನಸಿಕ, ಶಾರೀರಿಕ ಕಾಯಿಲೆಗಳು ಕಾಡ್ತಿದೆ, ಶಾಲೆ-ಕಾಲೇಜಲ್ಲಿ ಮಕ್ಕಳು, ಯುವ ಜನರು ಬೇರೆ ಮಕ್ಕಳಿಂದ ಒತ್ತಡಗಳನ್ನ ಎದುರಿಸ್ತಿದ್ದಾರೆ. ಆದ್ರೂ ಅದೆಷ್ಟೇ ಕಷ್ಟ ಬಂದ್ರೂ ಅವ್ರೆಲ್ಲಾ ಪೌಲನ ತರ ಸ್ಥಿರವಾಗಿ, ಧೈರ್ಯವಾಗಿ ಮುಂದೆ ಸಾಗ್ತಿದ್ದಾರೆ. ಸಿಹಿಸುದ್ದಿಯನ್ನ “ಎಲ್ಲ ಕಡೆ ಚೆನ್ನಾಗಿ ಸಾರಿ” ಹೇಳೋಕೆ ಯಾವ ಕಷ್ಟನೂ ಅಡ್ಡಿ ಆಗದ ಹಾಗೆ ನೋಡ್ಕೊಳ್ತಿದ್ದಾರೆ.
“ನಿಮ್ಮ ಬಗ್ಗೆ ಜಾಗ್ರತೆ ವಹಿಸಿ. ಇಡೀ ಸಭೆನ ಚೆನ್ನಾಗಿ ನೋಡ್ಕೊಳ್ಳಿ” (ಅ. ಕಾ. 20:25-38)
18. (ಎ) ಪೌಲ ಬೇರೆಯವ್ರ ಸಾವಿಗೆ ಕಾರಣ ಆಗದಿರೋಕೆ ಏನು ಮಾಡಿದ? (ಬಿ) ಪೌಲನ ತರ ಇರೋಕೆ ಎಫೆಸದ ಹಿರಿಯರು ಏನು ಮಾಡಬೇಕಿತ್ತು?
18 ಪೌಲ ತನ್ನನ್ನೇ ಮಾದರಿಯಾಗಿ ತೋರಿಸಿ ಎಫೆಸದ ಹಿರಿಯರಿಗೆ ನೇರವಾಗಿ ಬುದ್ಧಿವಾದ ಹೇಳಿದ. ತಾನು ಅವ್ರನ್ನ ನೋಡೋದು ಇದೇ ಕೊನೇ ಸಲ ಅಂತಾನೂ ಹೇಳಿದ. ಆಮೇಲೆ, “ನಿಮ್ಮಲ್ಲಿ ಯಾರಾದ್ರೂ ನಾಶವಾದ್ರೆ ಅದಕ್ಕೆ ನಾನು ಕಾರಣ ಅಲ್ಲ. ಯಾಕಂದ್ರೆ ದೇವ್ರ ಇಷ್ಟ ಏನಂತ ನಾನು ನಿಮಗೆ ಪೂರ್ತಿಯಾಗಿ ಹೇಳಿದ್ದೀನಿ” ಅಂದ. ಯಾರೇ ನಾಶವಾದ್ರೂ ಅದ್ರ ಹೊಣೆ ತಮ್ಮ ಮೇಲೆ ಬರದೇ ಇರಬೇಕಂದ್ರೆ ಎಫೆಸದ ಹಿರಿಯರು ಪೌಲನ ತರ ಏನು ಮಾಡಬೇಕಿತ್ತು? ಪೌಲ ಹೇಳಿದ್ದು: “ನೀವು ನಿಮ್ಮ ಬಗ್ಗೆ ಜಾಗ್ರತೆ ವಹಿಸಿ. ಇಡೀ ಸಭೆನ ಚೆನ್ನಾಗಿ ನೋಡ್ಕೊಳ್ಳಿ. ಯಾಕಂದ್ರೆ ದೇವ್ರ ಸಭೆನ ಕಾಯೋಕ್ಕೋಸ್ಕರ ಪವಿತ್ರಶಕ್ತಿ ನಿಮ್ಮನ್ನ ಮೇಲ್ವಿಚಾರಕರನ್ನಾಗಿ ನೇಮಿಸಿದೆ. ಅಷ್ಟೇ ಅಲ್ಲ ದೇವರು ಆ ಸಭೆನ ತನ್ನ ಸ್ವಂತ ಮಗನ ರಕ್ತದಿಂದ ಕೊಂಡ್ಕೊಂಡಿದ್ದಾನೆ.” (ಅ. ಕಾ. 20:26-28) “ಕ್ರೂರ ತೋಳಗಳ ತರ ಇರೋ ಜನ” ಸಭೆಯೊಳಗೆ ಸೇರ್ಕೊಂಡು “ಶಿಷ್ಯರನ್ನ ತಮ್ಮ ಕಡೆ ಎಳ್ಕೊಳ್ಳೋಕೆ ತಪ್ಪುತಪ್ಪಾಗಿ ಏನೇನೋ ಕಲಿಸ್ತಾರೆ” ಅಂತ ಪೌಲ ಎಚ್ಚರಿಸಿದ. ಹಾಗಾಗಿ ಈಗಿರೋ ಹಿರಿಯರು ಏನು ಮಾಡಬೇಕು? ಪೌಲ ಹೇಳಿದ ಹಾಗೆ “ಯಾವಾಗ್ಲೂ ಎಚ್ಚರವಾಗಿ” ಇರಬೇಕು. ಪೌಲ ತೋರಿಸಿದ ಮಾದರಿಯನ್ನ ಅನುಕರಿಸಬೇಕು, ಅವನು ಹೇಳಿದ್ದು, “ನಾನು ಮೂರು ವರ್ಷ ಬಿಡದೆ ಹಗಲೂರಾತ್ರಿ ಕಣ್ಣೀರು ಸುರಿಸಿ ನಿಮ್ಮಲ್ಲಿ ಒಬ್ಬೊಬ್ರಿಗೂ ಬುದ್ಧಿಹೇಳಿದೆ ಅಂತ ನೆನಪಿಟ್ಕೊಳ್ಳಿ.”—ಅ. ಕಾ. 20:29-31.
19. (ಎ) ಒಂದನೇ ಶತಮಾನದ ಕೊನೆಯಷ್ಟಕ್ಕೆ ಏನಾಯ್ತು? (ಬಿ) ಧರ್ಮಭ್ರಷ್ಟತೆ ಜಾಸ್ತಿ ಆಗ್ತಾ ಆಗ್ತಾ ಮುಂದಿನ ಶತಮಾನಗಳಲ್ಲಿ ಏನಾಯ್ತು?
19 ಆ “ಕ್ರೂರ ತೋಳಗಳ ತರ ಇರೋ ಜನ” ಒಂದನೇ ಶತಮಾನದ ಕೊನೆಯಷ್ಟಕ್ಕೆ ಕಾಣಿಸ್ಕೊಂಡ್ರು. ಕ್ರಿ.ಶ. 98ರ ಸಮಯದಲ್ಲಿ ಅಪೊಸ್ತಲ ಯೋಹಾನ ಹೀಗೆ ಬರೆದ: “ಈಗ್ಲೇ ತುಂಬ ಶತ್ರುಗಳು ಬಂದುಬಿಟ್ಟಿದ್ದಾರೆ . . . ಅವರು ನಮ್ಮ ಜೊತೆನೇ ಇದ್ದವರು. ಆದ್ರೆ ನಮ್ಮವರಲ್ಲ. ಅವರು ನಮ್ಮವರು ಆಗಿದ್ರೆ ನಮ್ಮ ಜೊತೆನೇ ಇರ್ತಿದ್ರು.” (1 ಯೋಹಾ. 2:18, 19) ಮೂರನೇ ಶತಮಾನದಷ್ಟಕ್ಕೆ ಧರ್ಮಭ್ರಷ್ಟತೆ ಬೆಳೆದು ಪಾದ್ರಿವರ್ಗ ಹುಟ್ಕೊಳ್ತು. ನಾಲ್ಕನೇ ಶತಮಾನದಲ್ಲಿ, ಸುಳ್ಳು ಕ್ರೈಸ್ತ ಧರ್ಮವನ್ನ ಕಾನ್ಸ್ಟೆಂಟೀನ್ ಅನ್ನೋ ರಾಜ ಕಾನೂನುಬದ್ಧ ಮಾಡಿದ. ಆ ಧಾರ್ಮಿಕ ನಾಯಕರು ‘ತಪ್ಪುತಪ್ಪಾಗಿ ಏನೇನೋ ಕಲಿಸೋಕೆ ಶುರುಮಾಡಿದ್ರು.’ ಸುಳ್ಳು ಧರ್ಮಗಳ ಆಚಾರ-ವಿಚಾರಗಳನ್ನ ಬೈಬಲಲ್ಲಿರೋ ವಿಷ್ಯಗಳಿಗೆ ಬೆರೆಸಿ ಇದು ಕ್ರೈಸ್ತ ಧರ್ಮಕ್ಕೆ ಸೇರಿದ್ದು ಅನ್ನೋ ತರ ಮಾಡಿಬಿಟ್ರು. ಅದ್ರ ಪರಿಣಾಮವನ್ನ ಈಗ್ಲೂ ನೋಡಬಹುದು. ಕ್ರೈಸ್ತರು ಅಂತ ಹೇಳ್ಕೊಳ್ಳೋ ಜನ್ರು ನಂಬೋ ಆಚಾರ-ವಿಚಾರಗಳಲ್ಲಿ, ಸಂಪ್ರದಾಯಗಳಲ್ಲಿ ಅದು ಕಾಣಿಸುತ್ತೆ.
20, 21. (ಎ) ಪೌಲ ಹೇಗೆ ಬೇರೆಯವ್ರ ಸೇವೆ ಮಾಡಿದ? (ಬಿ) ಇವತ್ತಿರೋ ಹಿರಿಯರು ಹೇಗೆ ಇದನ್ನೇ ಮಾಡ್ತಾರೆ?
20 ಮೊದಲನೇ ಶತಮಾನದಲ್ಲಿ ಸಮಯ ಹೋದ ಹಾಗೆ ಕೆಲವು ಮೇಲ್ವಿಚಾರಕರು ಸಭೆಯಲ್ಲಿರೋ ಸಹೋದರ ಸಹೋದರಿಯರನ್ನ ತಮ್ಮ ಲಾಭಕ್ಕೆ ಬಳಸ್ಕೊಂಡ್ರು. ಆದ್ರೆ ಪೌಲ ಯಾವತ್ತೂ ಹಾಗೆ ಮಾಡ್ಲಿಲ್ಲ. ಸಭೆ ಮೇಲೆ ಭಾರ ಹಾಕದೆ ತನ್ನ ಖರ್ಚನ್ನ ತಾನೇ ನೋಡ್ಕೊಂಡ. ಅದಕ್ಕೋಸ್ಕರ ಅವನು ಕೆಲಸ ಮಾಡಿದ. ಸಹೋದರ ಸಹೋದರಿಯರಿಂದ ತನಗೆ ಲಾಭ ಸಿಗುತ್ತೆ ಅಂತ ಅವನು ಅವ್ರ ಸೇವೆ ಮಾಡಲಿಲ್ಲ. ಅದಕ್ಕೆ ಪೌಲ ಎಫೆಸದ ಹಿರಿಯರಿಗೆ, ‘ಬೇರೆಯವ್ರಿಗೆ ಸಹಾಯ ಮಾಡಿ’ ಮತ್ತು “ಯೇಸು ಪ್ರಭು ಹೇಳಿದ ಮಾತನ್ನ ನೆನಪಲ್ಲಿ ಇಟ್ಕೊಳ್ಳಿ. ಆತನು ಹೀಗೆ ಹೇಳಿದನು ‘ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ’” ಅಂತ ಹೇಳಿದ.—ಅ. ಕಾ. 20:35.
21 ಇವತ್ತು ಪಾದ್ರಿಗಳು ತಮ್ಮ ಚರ್ಚಿಗೆ ಬರೋ ಜನ್ರಿಂದ ದುಡ್ಡುಕಾಸನ್ನ ಕಿತ್ತು ತಿಂತಾರೆ. ಆದ್ರೆ ನಮ್ಮ ಹಿರಿಯರು ಪೌಲನ ತರಾನೇ ಸಭೆಯವರನ್ನ ಚೆನ್ನಾಗಿ ನೋಡ್ಕೊಳ್ತಿದ್ದಾರೆ. “ದೇವ್ರ ಸಭೆನ ಕಾಯೋ” ಜವಾಬ್ದಾರಿಯನ್ನ ಯಾವುದೇ ಸ್ವಾರ್ಥ ಇಲ್ಲದೆ ಮಾಡ್ತಾರೆ. ಅಹಂಕಾರ ಇರೋರಿಗೆ ಮತ್ತು ‘ತಮಗೆ ಗೌರವ ಬರಬೇಕಂತ ಬಯಸೋರಿಗೆ’ ಸಭೆಲಿ ಜಾಗ ಇಲ್ಲ. (ಜ್ಞಾನೋ. 25:27) ಯಾಕಂದ್ರೆ ಅಹಂಕಾರ ಬಂದ್ರೆ ಅದ್ರ ಹಿಂದೆ ಅವಮಾನನೂ ಬರುತ್ತೆ.—ಜ್ಞಾನೋ. 11:2.
22. ಎಫೆಸದ ಹಿರಿಯರು ಪೌಲನನ್ನ ತುಂಬ ಪ್ರೀತಿಸೋಕೆ ಕಾರಣ ಏನು?
22 ಪೌಲ ಸಹೋದರರ ಕಡೆಗೆ ಮನಸಾರೆ ಪ್ರೀತಿ ತೋರಿಸಿದ್ರಿಂದ ಅವರೂ ಅವನನ್ನ ತುಂಬ ಪ್ರೀತಿಸಿದ್ರು. ಅವನು ಅಲ್ಲಿಂದ ಹೊರಡುವಾಗ “ಶಿಷ್ಯರೆಲ್ಲ ತುಂಬ ಅತ್ರು. ಪೌಲನನ್ನ ಗಟ್ಟಿಯಾಗಿ ಅಪ್ಕೊಂಡು ಪ್ರೀತಿಯಿಂದ ಮುದ್ದಿಟ್ರು.” (ಅ. ಕಾ. 20:37, 38) ಪೌಲನ ತರ ಸಹೋದರ ಸಹೋದರಿಯರಿಗೋಸ್ಕರ ಸ್ವಾರ್ಥ ಇಲ್ಲದೆ ಸಹಾಯ ಮಾಡೋ ಮೇಲ್ವಿಚಾರಕರಿಗೆ ನಾವು ತುಂಬ ಗೌರವ ಕೊಡ್ತೀವಿ, ಪ್ರೀತಿಸ್ತೀವಿ. ಪೌಲನ ಬಗ್ಗೆ ಕಲಿತ ಮೇಲೆ “ನಿಮ್ಮಲ್ಲಿ ಯಾರಾದ್ರೂ ನಾಶವಾದ್ರೆ ಅದಕ್ಕೆ ನಾನು ಕಾರಣ ಅಲ್ಲ” ಅಂತ ಅವನು ಹೇಳಿದ್ದು ಸುಮ್ನೆ ಅಲ್ಲ ಅಂತ ಗೊತ್ತಾಯ್ತು ಅಲ್ವಾ? ಅವನು ತನ್ನ ಬಗ್ಗೆ ಕೊಚ್ಚಿಕೊಳ್ತಾನೂ ಇರಲಿಲ್ಲ ಅಥವಾ ತಾನು ಮಾಡಿದಿಕ್ಕೆ ಬಣ್ಣ ಹಚ್ಚಿ ಹೇಳ್ತಾನೂ ಇರಲಿಲ್ಲ ಅನ್ನೋದನ್ನ ನೀವೂ ಒಪ್ಕೊಳ್ತೀರಾ ಅಲ್ವಾ?—ಅ. ಕಾ. 20:26.
a “ಮಕೆದೋನ್ಯದಿಂದ ಪೌಲ ಬರೆದ ಪತ್ರಗಳು” ಅನ್ನೋ ಚೌಕ ನೋಡಿ.
b ಪೌಲ ಕೊರಿಂಥವನ್ನ ಈ ಸಲ ಭೇಟಿ ಮಾಡಿದಾಗ್ಲೇ ರೋಮನ್ನರಿಗೆ ಪತ್ರವನ್ನ ಬರೆದಿದ್ದಿರಬೇಕು.
c “ಪೌಲ ವಿಪತ್ತು ಪರಿಹಾರ ಕಾಣಿಕೆಯನ್ನ ತಂದ್ಕೊಟ್ಟ” ಅನ್ನೋ ಚೌಕ ನೋಡಿ.
d ಅಪೊಸ್ತಲರ ಕಾರ್ಯ 20:5, 6ರಲ್ಲಿ ಲೂಕ “ನಮಗೋಸ್ಕರ,” “ನಾವು” ಅನ್ನೋ ಪದಗಳನ್ನ ಉಪಯೋಗಿಸಿದ್ದಾನೆ. ಪೌಲ ಮತ್ತು ಲೂಕ ಫಿಲಿಪ್ಪಿಯಲ್ಲಿ ಭೇಟಿಯಾದ್ರು ಅಂತ ಇದ್ರಿಂದ ಗೊತ್ತಾಗುತ್ತೆ. ಅಲ್ಲಿ ತನಕ ಲೂಕ ಸ್ವಲ್ಪ ಕಾಲ ಫಿಲಿಪ್ಪಿಯಲ್ಲೇ ಇದ್ದ.—ಅ. ಕಾ. 16:10-17, 40.
e ಅವರು ಇದಕ್ಕೆ ಮುಂಚೆ ಒಂದು ಸಲ ಫಿಲಿಪ್ಪಿಯಿಂದ ತ್ರೋವಕ್ಕೆ ಬರೀ ಎರಡು ದಿನದಲ್ಲಿ ಬಂದಿದ್ರು. ಆದ್ರೆ ಈ ಸಲ ಸಮುದ್ರದಲ್ಲಿ ಗಾಳಿ ತುಂಬ ಜೋರಾಗಿ ಬೀಸ್ತಾ ಇದ್ದಿದ್ರಿಂದ ಐದು ದಿನ ಹಿಡೀತು.—ಅ. ಕಾ. 16:11.