ಹಿರಿಯರೇ—ನಿಮ್ಮ ಹೊಣೆಯನ್ನು ಕಾಪಾಡಿಕೊಳ್ಳಿರಿ
“ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಮೇಲ್ವಿಚಾರಕರಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ ನಿಮ್ಮ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.”—ಅಪೋಸ್ತಲರ ಕೃತ್ಯ 20:28. NW.
1. ಕ್ರೈಸ್ತ ಹೊಣೆಯಲ್ಲಿ ಏನು ಒಳಗೂಡಿದೆ?
ಯೆಹೋವ ದೇವರು ತನ್ನ ಐಹಿಕ ಸಂಸ್ಥೆಯಲ್ಲಿರುವವರಿಗೆ ಒಂದು ಆಶ್ಚರ್ಯಕರವಾದ ಹೊಣೆಯನ್ನು ದಯಪಾಲಿಸಿದ್ದಾನೆ. ಆದರೆ, ಈ ಹೊಣೆ ಎಂದರೇನು? ಒಬ್ಬ ವ್ಯಕ್ತಿಯ ವಶಕ್ಕೆ ಒಪ್ಪಿಸಲ್ಪಟ್ಟ ಬೆಲೆಯುಳ್ಳ ವಸ್ತುವಿಗಾಗಿ ಅವನು ಲೆಕ್ಕ ಕೊಡಬೇಕಾದದ್ದೇ ಹೊಣೆಯಾಗಿದೆ. ಕ್ರೈಸ್ತ ಹೊಣೆಯಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದ ಆಳಿ”ನಿಂದ “ಹೊತ್ತು ಹೊತ್ತಿನ ಆಹಾರವಾಗಿ” ನೀಡಲ್ಪಡುವ ಹಾಗೂ ಶಾಸ್ತ್ರ ವಚನಗಳ ಮೂಲಕವಾಗಿ ಕೊಡಲ್ಪಟ್ಟ ಸತ್ಯದ “ಸ್ವಸ್ಥ ಬೋಧನಾ ವಾಕ್ಯಗಳ ಮಾದರಿಯು” ಸೇರಿರುತ್ತದೆ. (2 ತಿಮೊಥಿ 1:13, 14; ಮತ್ತಾಯ 24:45-47) ಈ ಹೊಣೆಯಲ್ಲಿ ಸತ್ಯದೊಂದಿಗೆ ಜತೆಗೂಡಿರುವ ಹಾಗೂ ಸಭೆಯ ಒಳಗೂ ಹೊರಗೂ ಸಾರಲ್ಪಡಬೇಕಾದ ಶುಶ್ರೂಷೆಯೂ ಸೇರಿದೆ. (2 ತಿಮೊಥಿ 4:1-5) ರಾಜ್ಯ ಘೋಷಕರು, ಆತ್ಮ-ನಿಯುಕ್ತ ಹಿರಿಯರು ಸಹಾ, ಈ ಹೊಣೆಯನ್ನು ಉತ್ಕೃಷ್ಟ ಬೆಲೆಯುಳ್ಳದ್ದಾಗಿ ನೋಡಬೇಕು.
2. ಹಿರಿಯರಿಗೆ ಯಾವ ಹೆಚ್ಚಿನ ಹೊಣೆಯು ಇರುತ್ತದೆ ಮತ್ತು ಪೇತ್ರನು ಅದರ ಕುರಿತು ಏನಂದನು?
2 ಕ್ರೈಸ್ತ ಹಿರಿಯರಿಗೆ ಇನ್ನೊಂದು ಹೆಚ್ಚಿನ ಹೊಣೆಗಾರಿಕೆ ಇದೆ—ದೇವರ ಮಂದೆಯನ್ನು ಪರಿಪಾಲಿಸುವ ಜವಾಬ್ದಾರಿಯೇ ಅದು. ಈ ವಿಷಯವಾಗಿ ಅಪೋಸ್ತಲ ಪೇತ್ರನು ಬರೆದದ್ದು: “ಸಭೆಯ ಹಿರಿಯರೇ, ಜೊತೆ ಹಿರಿಯನಾದ ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ಕಂಡವನೂ ಇನ್ನು ಮುಂದೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ಪಾಲುಗಾರನೂ ಅಗಿದ್ದು ನಿಮ್ಮನ್ನು ಎಚ್ಚರಿಸಿ ಹೇಳುವದೇನಂದರೆ—ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ದೇವರ ಚಿತ್ತದ ಪ್ರಕಾರ ಇಷ್ಟ ಪೂರ್ವಕವಾಗಿಯೂ, ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧ ಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನ ಮಾಡುವವರಂತೆ ನಡಿಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ. ಹಿರೀ ಕುರುಬನು ಪ್ರತ್ಯಕ್ಷನಾಗುವಾಗ ನೀವು ದೇವ ಪ್ರಭಾವವೆಂಬ ಎಂದೂ ಬಾಡದ ಜಯಮಾಲೆಯನ್ನು ಹೊಂದುವಿರಿ.”— 1 ಪೇತ್ರ 5:1-4.
3. ಕ್ರೈಸ್ತ ಹಿರಿಯರು ಯಾವುದರ ಉಗಮಗಳಾಗಿರಬೇಕು?
3 ಕ್ರೈಸ್ತ ಹಿರಿಯರು, “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” (ಯೆಶಾಯ 32:1, 2) ಇದರ ಅರ್ಥವೇನಂದರೆ, ಹಿರಿಯರು ದೇವರ ಕುರಿ-ಸದೃಶ ಸೇವಕರ ಮಂದೆಗೆ ಭದ್ರತೆ, ಶಾಂತಿ, ಮತ್ತು ಸ್ಥೈರ್ಯತೆಯ ಉಗಮಗಳಾಗಿರಬೇಕು. ಹಿರಿಯರಿಂದ ಮತ್ತು ಉಪಕುರುಬರಿಂದ “ಇನ್ನೂ ಹೆಚ್ಚಾಗಿ” ಕೇಳಲ್ಪಡುವದು ಯಾಕೆಂದರೆ “ಅವರ ವಶಕ್ಕೆ ಬಹಳವಾಗಿ ಒಪ್ಪಿಸಿಯದೆ.” (ಲೂಕ 12:48) ಮತ್ತು ನಿಶ್ಚಯವಾಗಿಯೂ ಕಾದುಕೊಳ್ಳಬೇಕಾದ ಒಂದು ಅಮೂಲ್ಯ ಹೊಣೆಯು ಅವರಿಗಿದೆ.
ನಿಮ್ಮ ವಶಕ್ಕೆ ಕೊಡಲ್ಪಟ್ಟದ್ದೇಕೆ?
4. ಅಷ್ಟು ಹೆಚ್ಚು ಹಿರಿಯರ ಅಗತ್ಯವಿರುವುದೇಕೆ?
4 ಯೆಹೋವನ ಸಾಕ್ಷಿಗಳ 63,000 ಕ್ಕಿಂತಲೂ ಹೆಚ್ಚು ಸಭೆಗಳು ಲೋಕವ್ಯಾಪಕವಾಗಿ ಇರಲಾಗಿ, ದೇವರ ಮಂದೆಯನ್ನು ಪರಿಪಾಲಿಸಲು ಆತ್ಮಿಕ ಯೋಗ್ಯತೆಗಳನ್ನು ಪಡೆದ ಸಾವಿರಾರು ಪುರುಷರ ಅವಶ್ಯಕತೆ ಇದೆ. ಪ್ರತಿಯೊಂದು ದೇಶದಲ್ಲಿ ಅನೇಕ ಹಿರಿಯರು ಇದ್ದಾರೆ, ಮತ್ತು ಇದು ಸಂತೋಷದ ಸಂಗತಿ. ಲೋಕವ್ಯಾಪಕವಾಗಿ ಪ್ರತಿಯೊಂದು ಸಭೆಯಲ್ಲಿ, ಸರಾಸರಿ ಸುಮಾರು 60 ರಾಜ್ಯದ ಪ್ರಚಾರಕರು ಇದ್ದಾರೆ. ಆದ್ದರಿಂದ, ಹಿರಿಯರಿಗೆ ಮಾಡಲು ಬಹಳಷ್ಟು ಕೆಲಸವು ಅಲ್ಲಿದೆ.—1 ಕೊರಿಂಥ 15:58.
5. ಹಿರಿಯನಾಗಿ ಸೇವೆ ಮಾಡುವ ಸುಯೋಗವು ಪುರುಷನಿಗೆ ನೀಡಲ್ಪಡುವುದು ಯಾವ ಆಧಾರದ ಮೇಲೆ?
5 ನೀವೊಬ್ಬ ಹಿರಿಯರಾಗಿದ್ದಲ್ಲಿ, ಈ ಆಶೀರ್ವದಿತ ಸುಯೋಗವು ನಿಮಗೆ ನೀಡಲ್ಪಟ್ಟಿರುವುದೇಕೆ? ಯಾಕೆಂದರೆ ನೀವು ನಿರ್ದಿಷ್ಟ ವಿಷಯಗಳನ್ನು ಮಾಡಿದ್ದೀರಿ, ಮತ್ತು ನಿಮಗೆ ಆತ್ಮಿಕ ಯೋಗ್ಯತೆಗಳು ಇವೆ. ಉದಾಹರಣೆಗೆ, ನೀವು ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದಿರ್ದಬೇಕು. (ಯೆಹೋಶುವ 1:7, 8) ಕ್ಷೇತ್ರ ಶುಶ್ರೂಷೆಯಲ್ಲಿ ಉತ್ಸಾಹದಿಂದ ಪಾಲಿಗರಾಗಿದ್ದಿರಬೇಕು, ಇತರರು ರಾಜ್ಯದ ಪ್ರಚಾರಕರಾಗುವಂತೆ ಸಹಾಯ ಮಾಡಿರಲೂಬೇಕು. “ಮೊದಲು ಯೋಗ್ಯತೆ ಪರೀಕ್ಷಿಸಲ್ಪಟ್ಟ” ನಂತರ, ಶುಶ್ರೂಷೆ ಸೇವಕರಾಗಿ ನೀವು ನಂಬಿಗಸ್ತಿಕೆಯಿಂದ ಸೇವೆ ಮಾಡಿದಿರಿ. ಮೇಲ್ವಿಚಾರಕನಾಗುವುದು ಒಂದು “ಒಳ್ಳೆಯ ಕೆಲಸ” ಎಂಬದನ್ನು ಗಣ್ಯಮಾಡುತ್ತಾ, ಹಿರಿಯರಾಗಿ ಯೋಗ್ಯತೆ ಪಡೆಯಲು ನೀವು ‘ಪ್ರಯತ್ನ ಮಾಡಿದಿರಿ’ ಮತ್ತು ಅದನ್ನು ‘ಹುಡುಕಿದಿರಿ’. (1 ತಿಮೊಥಿ 3:1, 10) ತಿಮೊಥಿಯಂತೆ ನೀವು, “ಸಹೋದರರಿಂದ ಒಳ್ಳೇ ಸಾಕ್ಷಿ” ಹೇಳಿಸಿಕೊಂಡಿರಿ. (ಅಪೋಸ್ತಲರ ಕೃತ್ಯ 16:2) ಹಿರಿಯರಾಗಿ ಶಿಫಾರಸು ಮಾಡಲ್ಪಟ್ಟಾಗ ನೀವು 30ಕ್ಕೆ ಹತ್ತರಿಸಿದ ವಯಸ್ಸಿನವರು ಅಥವಾ ಅದಕ್ಕಿಂತ ದೊಡ್ಡವರು ಆಗಿದ್ದು, ಜೀವಿತದಲ್ಲಿ ಅನುಭವ ಪಡೆದವರಾಗಿದ್ದಿರಬೇಕು. ಸಭೆಯು ನಿಮ್ಮನ್ನು ಆತ್ಮಿಕವಾಗಿ ಬಲಿತವರೂ, ಗೋಚರಣೀಯರೂ ಆದ ಸಹೋದರರಾಗಿ ನೋಡಿ, ಪರಿಣಾಮಕಾರಿ ಶಾಸ್ತ್ರೀಯ ಸೂಚನೆ ಕೊಡಶಕ್ತರೂ ಮತ್ತು ಗುಟ್ಟನ್ನು ಕಾಪಾಡ ಬಲ್ಲವರೂ ಅಗಿ ಗೌರವಿಸಿರುತ್ತದೆ.
ನಿಮ್ಮ ಹೊಣೆಯನ್ನು ಕಾಪಾಡುವ ವಿಧ
6, 7. ಒಬ್ಬ ಪುರುಷನು ಹಿರಿಯನಾಗಿ ತನ್ನ ಹೊಣೆಯನ್ನು ಕಾಪಾಡುವಂತೆ 1 ತಿಮೊಥಿ 4:13-15 ಯಾವ ಸೂಚನೆಯನ್ನು ಒದಗಿಸುತ್ತದೆ?
6 ಹೌದು, ನೀವು ಹಿರಿಯರಾಗಿದ್ದಲ್ಲಿ, ಕ್ರೈಸ್ತ ಮೇಲ್ವಿಚಾರಣೆಯು ನಿಮಗೆ ಕೊಡಲ್ಪಟ್ಟಿರುವುದು ಯೋಗ್ಯ ಕಾರಣಗಳಿಗಾಗಿಯೇ. ಮತ್ತು ಎಷ್ಟೊಂದು ಸೌಭಾಗ್ಯದ ಅನಿಸಿಕೆ ನಿಮಗಾಗಿತ್ತು! ಆದರೆ ನಿಮ್ಮ ಹೊಣೆಯನ್ನು ನೀವು ಕಾಪಾಡುವುದು ಹೇಗೆ?
7 ನಿಮ್ಮ ಹೊಣೆಯನ್ನು ಕಾಪಾಡಿಕೊಳ್ಳುವ ಒಂದು ವಿಧಾನವು ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿ ನಿಶ್ಚಯತೆ ಮತ್ತು ದಕ್ಷತೆಯಿಂದಿರುವುದೇ. ಯೆಹೋವನ ಸಂಸ್ಥೆಯಲ್ಲಿ ನಮಗೆಲ್ಲರಿಗೂ ವಿವಿಧ ಜವಾಬ್ದಾರಿಗಳ ನೇಮಕಗಳಿವೆ. ಆದ್ದರಿಂದ, ನಿಮ್ಮ ಸ್ಥಳದಲ್ಲಿ ಇದ್ದುಕೊಂಡು, ‘ನಿಮ್ಮನ್ನು ಚಿಕ್ಕವರಾಗಿ ನಡಿಸಿಕೊಳ್ಳಿರಿ.’ (ಲೂಕ 9:46-48; ನ್ಯಾಯಸ್ಥಾಪಕರು 7:21ಕ್ಕೆ ಹೋಲಿಸಿ.) ನಿಮ್ಮ ಸುಯೋಗಗಳನ್ನು ನೆಚ್ಚಿರಿ ಮತ್ತು ಎಂದೂ ‘ಜೋಲುಗೈಯಿಂದ ಕೆಲಸ’ ಮಾಡದಿರ್ರಿ. (ಜ್ಞಾನೋಕ್ತಿ 10:4) ನಿಂತಲ್ಲಿಯೇ ನಿಲ್ಲದೆ, ಯೆಹೋವನ ಸಹಾಯದಿಂದ ಶುಶ್ರೂಷೆಯ ಎಲ್ಲಾ ವಿಭಾಗಗಳಲ್ಲಿ ಪ್ರಗತಿಯನ್ನು ಮಾಡಿರಿ. ಪೌಲನು ತಿಮೊಥಿಗೆ ಕೊಟ್ಟ ಈ ಸೂಚನೆಯನ್ನು ಖಂಡಿತವಾಗಿಯೂ ಪಾಲಿಸಿರಿ: “ನಾನು ಬರುವ ತನಕ ವೇದ ಪಾರಾಯಣ, ಪ್ರಸಂಗ, ಉಪದೇಶ ಮಾಡುವುದರಲ್ಲಿ ಆಸಕ್ತನಾಗಿರು. ನಿನ್ನಲ್ಲಿರುವ ವರವನ್ನು ಅಲಕ್ಷ ಮಾಡಬೇಡ. ಸಭೆಯ ಹಿರಿಯರು ಪ್ರವಾದನೆ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ. ನಿನ್ನ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”—1 ತಿಮೊಥಿ 4:13-15.
8. ಸೂಕ್ತವಾದ ಸೂಚನೆಯನ್ನು ಕೊಡಲು ಮತ್ತು ಕೂಟಗಳಲ್ಲಿ ಆತ್ಮಿಕವಾಗಿ ಬಲವರ್ಧಿಸುವ ವಿಷಯವನ್ನು ನೀಡುವಂತೆ ಹಿರಿಯರಿಗೆ ಯಾವುದು ಸಹಾಯ ಮಾಡುವುದು?
8 ವೈಯಕ್ತಿಕ ಅಭ್ಯಾಸಕ್ಕಾಗಿ ಒಂದು ಒಳ್ಳೆಯ, ಫಲದಾಯಕ ಕಾಲತಖ್ತೆಯನ್ನು ಇಡುವಂತೆ ಖಚಿತ ಮಾಡಿಕೊಳ್ಳಿರಿ. ಹಿರಿಯರೋಪಾದಿ ಸೂಕ್ತವಾದ ಶಾಸ್ತ್ರೀಯ ಸೂಚನೆಯನ್ನು ಕೊಡುವಂತೆ ನಿಮ್ಮಿಂದ ನ್ಯಾಯವಾಗಿ ಅಪೇಕ್ಷಿಸಲ್ಪಡುತ್ತದೆ. ಈ ಜವಾಬ್ದಾರಿಗಾಗಿ ನಿಮ್ಮನ್ನು ಸನ್ನದ್ಧರಾಗಿರಿಸಲು, ಇಡೀ ಬೈಬಲನ್ನು ನೀವು ಧ್ಯಾನ ಪೂರ್ವಕವಾಗಿ, ಪ್ರಾಯಶಃ ಹಲವಾರು ಸಾರಿ ಓದಿರುತ್ತೀರೋ? (ಜ್ಞಾನೋಕ್ತಿ 15:28) ನಿಮ್ಮ ವೇದಿಕೆಯ ಮೇಲಿನ ನೇಮಕಗಳ ಕುರಿತೇನು? ಅವನ್ನು ಚೆನ್ನಾಗಿ ತಯಾರಿಸಿರಿ. ನಮ್ಮ ಕೂಟಗಳಿಗೆ ಹಾಜರಿರುವವರ ಆತ್ಮಿಕ ಬಲವರ್ಧನೆಗಾಗಿ ನೀವು ಏನನ್ನಾದರೂ ನೀಡಲಾಗುವಂತೆ ಯೆಹೋವನ ಸಹಾಯವನ್ನು ಪ್ರಾರ್ಥನಾಪೂರ್ವಕವಾಗಿ ಹುಡುಕಿರಿ. ವಿಶಿಷ್ಟವಾಗಿ ಹಿರಿಯರು, ‘ಭಕ್ತಿಯನ್ನು ವೃದ್ಧಿಮಾಡುವ ಕಾಲೋಚಿತವಾದ ಮಾತನ್ನು ಕೇಳುವವರ ಹಿತಕ್ಕಾಗಿ’ ಆಡಬೇಕು.—ಎಫೆಸ 4:29; ರೋಮಾಪುರ 1:11.
9. 2 ತಿಮೊಥಿ 4:2ಕ್ಕೆ ಅನುಸಾರವಾಗಿ, ಒಬ್ಬ ಹಿರಿಯನು ಏನು ಮಾಡಬೇಕು?
9 ಹಿರಿಯರೋಪಾದಿ ಪೌಲನ ಈ ಸೂಚನೆಯನ್ನು ಪಾಲಿಸಿರಿ: “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.” (2 ತಿಮೊಥಿ 4:2) ಪೌಲನು ಧರ್ಮಭ್ರಷ್ಟತೆಯ ಕುರಿತು ಚಿಂತಿಸುತ್ತಿದ್ದನು ಯಾಕಂದರೆ ಸಭೆಯಲ್ಲಿ ಕೆಲವರು ‘ಬುದಿಯ್ಧಿಲ್ಲದ‘ ಪ್ರಶ್ನೆಗಳನ್ನು ಹಾಕಿ ‘ವಾಗ್ವಾದಗಳನ್ನು’ ನಡಿಸುತ್ತಾ’ ‘ಸತ್ಯದ ಬೋಧನೆಗೆ ಕಿವಿಗೊಡದೆ’ ಇದ್ದರು. (2 ತಿಮೊಥಿ 2: 14-18, 23-25; 3:8-13; 4:3, 4) ಸಭೆಯು ಅನುಕೂಲವಾದ ಕಾಲವನ್ನು ಅಥವಾ ಅನಾನುಕೂಲದ ತೊಂದರೆಯ ಕಾಲವನ್ನು ಅನುಭವಿಸಲಿ, ತಿಮೊಥಿಯು “ದೇವರ ವಾಕ್ಯವನ್ನು ಸಾರಬೇಕಿತ್ತು.” ಇದು ಜೊತೆ ವಿಶ್ವಾಸಿಗಳಿಗೆ ಧರ್ಮಭ್ರಷ್ಟತೆಯನ್ನು ಎದುರಿಸಲು ಬಲವನ್ನು ಕೊಡುವುದು. ಅದೇ ರೀತಿ ಇಂದು ಹಿರಿಯರು, ದೇವರ ತೂರಿಹೋಗುವ ವಾಕ್ಯವನ್ನು ಅಥವಾ ಸಂದೇಶವನ್ನು ಸಾರಬೇಕು, ಅದು ಹೃದಯವನ್ನು ತಲಪುತ್ತದೆ ಮತ್ತು ಯೆಹೋವನ ಮಟ್ಟಗಳ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ.—ಇಬ್ರಿಯ 4:12.
10. ಹಿರಿಯನು ತನ್ನ ಕುಟುಂಬ ಸದಸ್ಯರೊಂದಿಗೆ ಮತ್ತು ಇತರರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಸೇವೆ ಮಾಡಬೇಕು ಏಕೆ?
10 ಅಧಿಕಾರದಿಂದ ಮಾತಾಡಬೇಕಾದರೆ, ಹಿರಿಯನು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ಜೀವಿಸಬೇಕು. ಸಭೆಯೊಳಗೆ ವೇದಿಕೆಯ ಮೇಲೆ ಮಾತ್ರವೇ ಅವನು ‘ದೇವರ ವಾಕ್ಯವನ್ನು ಸಾರು’ತ್ತಾನಾದರೆ ಅವನು ತನ್ನ ಹೊಣೆಯನ್ನು ಪೂರ್ಣವಾಗಿ ಕಾಪಾಡುತ್ತಿಲ್ಲ. ಅದೇ ವಚನದಲ್ಲಿ ಪೌಲನು ತಿಮೊಥಿಯನ್ನು ಹುರಿದುಂಬಿಸಿದ್ದು: “ಸೌವಾರ್ತಿಕನ ಕೆಲಸವನ್ನು ಮಾಡು.” ಹಿರಿಯರೋಪಾದಿ, ‘ನಿಮಗೆ ನೇಮಿಸಿರುವ ಸೇವೆಯನ್ನು ಪೂರ್ಣವಾಗಿ ಪೂರೈಸಬೇಕಾದರೆ’ ನೀವು ದೇವರ ವಾಕ್ಯವನ್ನು “ಬಹಿರಂಗವಾಗಿ ಮತ್ತು ಮನೆಮನೆಯಲ್ಲಿಯೂ’ ಸಾರಬೇಕು. (2 ತಿಮೊಥಿ 4:5; ಅಪೋಸ್ತಲರ ಕೃತ್ಯ 20:20, 21) ಅದರ್ದಿಂದ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗಿರಿ. ಇದು ನಿಮ್ಮ ಮತ್ತು ನಿಮ್ಮ ಪತ್ನಿಯ ನಡುವಣ ಆತ್ಮಿಕ ಬಂಧವನ್ನು ಕಟ್ಟಲು ನೆರವಾಗುವದು ಮತ್ತು ನಿಮ್ಮ ಮಕ್ಕಳಿಗೆ ಬಹಳಷ್ಟು ಪ್ರಯೋಜನವನ್ನು ತರುವುದು. ಸಭೆಯ ಇತರ ಸದಸ್ಯರೊಂದಿಗೂ, ಸಾರುವ ಕಾರ್ಯದಲ್ಲಿ ಭಾಗವಹಿಸಲು ಸ್ವಲ್ಪ ಸಮಯವನ್ನು ವ್ಯಯಿಸಿರಿ. ಇದು ಆತ್ಮಿಕ ಬಂಧಗಳನ್ನು ಬಲಗೊಳಿಸುವುದು ಮತ್ತು ಸಹೋದರ ಪ್ರೀತಿಯನ್ನು ಹೆಚ್ಚಿಸುವುದು. (ಯೋಹಾನ 13:34, 35) ತನ್ನ ಕುಟುಂಬ ಮತ್ತು ಸಭೆಯ ನಡುವೆ ಅಮೂಲ್ಯ ಸಮಯವನ್ನು ವ್ಯಯಿಸುವಾಗ ಹಿರಿಯನು ಸಮತೆಯನ್ನು ತೋರಿಸಬೇಕಾಗಿದೆ ನಿಶ್ಚಯ. ವಿವೇಚನೆಯನ್ನು ಬಳಸುವ ಮೂಲಕ ಅವನು, ಒಂದಕ್ಕೆ ತೀರಾ ಹೆಚ್ಚು ಸಮಯವನ್ನು ಕೊಡುವದರಿಂದ ಮತ್ತು ಇನ್ನೊಂದನ್ನು ಅಲಕ್ಷಿಸಿ, ಹಾನಿ ಮಾಡುವದರಿಂದ ತಡೆಯಲ್ಪಡುವನು.
11. ಶಿಕ್ಷಕನೋಪಾದಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಹಿರಿಯನು ಪರಿಶ್ರಮಿಸಬೇಕು ಏಕೆ?
11 ಹಿರಿಯರಾಗಿ ನಿಮ್ಮ ಹೊಣೆಯನ್ನು ಕಾಪಾಡಲಿಕ್ಕಾಗಿ, ಶಿಕ್ಷಕರೋಪಾದಿ ನಿಮ್ಮ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲು ಪ್ರಯತ್ನಿಸಿರಿ. “ಬೋಧಿಸುವವನು ಬೋಧಿಸುವದರಲ್ಲಿ” ಮತ್ತು “ಬುದ್ಧಿ ಹೇಳುವವನು ಬುದ್ಧಿಹೇಳುವದರಲ್ಲಿ ನಿರತನಾಗಿರಲಿ” ಎಂದು ಪೌಲನು ಹೇಳಿದ್ದಾನೆ. (ರೋಮಾಪುರ 12:7, 8) ಶಿಕ್ಷಕನು ಬೇರೆಯವರ ಮುಂದೆ ಉಪದೇಶಿಸುವವನಾಗಿ ನಿಂತಿರುತ್ತಾನಾದ್ದರಿಂದ, ಅವನಿಂದ ಹೆಚ್ಚನ್ನು ಅಪೇಕ್ಷಿಸುವುದಕ್ಕೆ ಅವರಿಗೆ ನ್ಯಾಯವಾದ ಹಕ್ಕಿದೆ. ಹಿರಿಯನೊಬ್ಬನು ತನ್ನ ಕಲಿಸುವಿಕೆಯಲ್ಲಿ ಗಂಭೀರ ತಪ್ಪನ್ನು ಮಾಡಿದಲ್ಲಿ ಮತ್ತು ಇದು ಜೊತೆ ವಿಶ್ವಾಸಿಗಳಲ್ಲಿ ಸಮಸ್ಯೆಗಳನ್ನುಂಟು ಮಾಡಿದಲ್ಲಿ, ಅವನು ದೇವರಿಂದ ತೀರ್ಪಿಗೊಳಗಾಗುವ ಸಾಲಿನಲ್ಲಿರುವನು. (ಯಾಕೋಬ 3:1, 2; ಮತ್ತಾಯ 12:36, 37) ಆದ್ದರಿಂದ ಹಿರಿಯರು, ದೇವರ ವಾಕ್ಯದ ಗಂಭೀರ ವಿದ್ಯಾರ್ಥಿಗಳಾಗಿರುವ ಅಗತ್ಯವಿದೆ ಮತ್ತು ಅದನ್ನು ತಮ್ಮ ಜೀವಿತದಲ್ಲಿ ಅವರು ಅನ್ವಯಿಸಲೇ ಬೇಕು. ಆಗ ಅವರ ಶಾಸ್ತ್ರೀಯ ಕಲಿಸುವಿಕೆಯು, ವೈಯಕ್ತಿಕ ಅನ್ವಯದ ಬೆಂಬಲದೊಂದಿಗೆ, ಜೊತೆ ಕ್ರೈಸ್ತರಿಂದ ಬಹಳವಾಗಿ ಗಣ್ಯ ಮಾಡಲ್ಪಡುವುದು. ಅದು ಸಭೆಯನ್ನೂ ಧರ್ಮಭ್ರಷ್ಟತೆಯೇ ಮುಂತಾದ ಅಹಿತಕರ ಪ್ರಭಾವಗಳಿಂದ ರಕ್ಷಿಸುವುದು.
ಕುಳಿಗಳನ್ನು ವಿಸರ್ಜಿಸಿರಿ
12. ಈ ಪತ್ರಿಕೆಯಲ್ಲಿ ಒಮ್ಮೆ ಪ್ರಕಟವಾದ ಯಾವ ಸೂಚನೆಯು, ಒಬ್ಬ ಹಿರಿಯನು ತನ್ನ ನಾಲಿಗೆಯನ್ನು ದುರುಪಯೋಗಿಸದಂತೆ ದೂರವಿರಲು ಸಹಾಯ ಮಾಡುತ್ತದೆ?
12 ಕುಳಿಗಳನ್ನು ವಿಸರ್ಜಿಸುವ ಮೂಲಕ ಹಿರಿಯರಾದ ನಿಮ್ಮ ಹೊಣೆಯನ್ನು ಕಾಪಾಡಿಕೊಳ್ಳಿರಿ. ಶಿಕ್ಷಕರಾಗಿರುವ ನಿಮ್ಮ ನಾಲಗೆಯ ದುರಪಯೋಗವು ಅದರಲ್ಲೊಂದು. ಈ ಎಚ್ಚರಿಕೆಯ ಅಗತ್ಯವನ್ನು ಯೆಹೋವನ ಸಂಸ್ಥೆಯು ಬಹಳ ಹಿಂದಿನಿಂದಲೇ ಒತ್ತಿಹೇಳಿದೆ. ಉದಾಹರಣೆಗೆ, ಮೇ 15, 1897ರ ತನ್ನ ಸಂಚಿಕೆಯಲ್ಲಿ ಈ ಪತ್ರಿಕೆಯು, ಯಾಕೋಬ 3:1-13ನ್ನು ಚರ್ಚಿಸುತ್ತಾ, ವಿಶೇಷವಾಗಿ ಹಿರಿಯರ ಕುರಿತಾಗಿ ಹೇಳಿದ್ದು: “ವಾಕಾತ್ಚುರ್ಯದ ನಾಲಿಗೆಯು ಅವರಿಗಿರುವುದಾದರೆ ಅದು, ಒಂದು ಮಹಾ ಆಶೀರ್ವಾದದ ಊಟೆಯಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕರ್ತನೆಡೆಗೆ, ಸತ್ಯದೆಡೆಗೆ ಮತ್ತು ನೀತಿಯ ಮಾರ್ಗದೆಡೆಗೆ ನಡಿಸಬಹುದು. ಅಥವಾ, ಇನ್ನೊಂದು ಕಡೆ, ಅದು ತಪ್ಪಿನಿಂದ ದೂಷಿತವಾಗಿದ್ದರೆ, ಅಪಾರವಾದ ಹಾನಿಗೆ—ನಂಬಿಕೆ, ನೈತಿಕತೆ ಮತ್ತು ಸತ್ಕಾರ್ಯಗಳ ನಷ್ಟಕ್ಕೆ ನಡಿಸಬಹುದು. ಬೋಧಿಸುವವರವನ್ನು ನಡಿಸುವ ಯಾವನಾದರೂ ದೇವರ ಮತ್ತು ಮನುಷ್ಯನ ದೃಷ್ಟಿಯ ಮುಂದೆ ತನ್ನನ್ನು ಅಧಿಕ ಜವಾಬ್ದಾರಿಕೆಗೆ ತೆರೆದಿಡುತ್ತಾನೆ. . . . ಯಾವನು ದೈವಿಕ ವಾಕ್ಯವು ಹೊರಡುವ ಊಟೆಯಾಗಿದ್ದು ಆಶೀರ್ವಾದವನ್ನೂ, ಚೈತನ್ಯವನ್ನೂ ಮತ್ತು ಬಲವನ್ನೂ ತರುತ್ತಾನೋ ಅವನು, ಶಾಪವನ್ನು ತರುವ ಸುಳ್ಳು ಬೋಧನೆ ಮತ್ತು ದೇವರನ್ನು ಅಗೌರವಿಸುವ ಮತ್ತು ಆತನ ವಾಕ್ಯವನ್ನು ವಕ್ರಗೊಳಿಸುವ ಕಹಿನೀರನ್ನು ಅದೇ ಊಟೆಯಿಂದ ಹೊರಡಿಸದಂತೆ ನೋಡಿಕೊಳ್ಳುವನು. ಕೂಟಗಳಿಗೆ ನಾಯಕರನ್ನು ಆರಿಸುವಲ್ಲಿ, ಇಲ್ಲಿ ತಿಳಿಸಿದ ‘ನಾಲಿಗೆ’ಯ ಯೋಗ್ಯತೆಯನ್ನು ದುರ್ಲಕ್ಷಿಸಬಾರದು. ಕಿಚ್ಚಿನ ನಾಲಿಗೆಯನ್ನು ಆರಿಸಬಾರದು, ಬದಲಾಗಿ ನಮ್ರರೂ, ವಿನಯಶೀಲರೂ, ತಮ್ಮ ನಾಲಿಗೆಯನ್ನು ‘ಹತೋಟಿ’ಯಲ್ಲಿಟ್ಟು ‘ದೇವರ ಸ್ತುತಿಗಳನ್ನು ಮಾತ್ರವೇ ಮಾತಾಡಲು’ ಎಚ್ಚರದಿಂದ ಪ್ರಯತ್ನಿಸುವವರನ್ನು ಮಾತ್ರವೇ ಆರಿಸಬೇಕು.” ಹಿರಿಯನು ತನ್ನ ನಾಲಿಗೆಯನ್ನು ಯೋಗ್ಯವಾಗಿ ಉಪಯೋಗಿಸುವುದು ಅದೆಷ್ಟು ಮಹತ್ವದ್ದು!
13. ಮನೋರಂಜನೆಯ ಕುರಿತು ಯಾವ ಎಚ್ಚರಿಕೆಯನ್ನು ಹಿರಿಯರು ವಹಿಸುವ ಅಗತ್ಯವಿದೆ?
13 ಅತಿರೇಕ ಮನೋರಂಜನೆಯು ಸಹಾ ವರ್ಜಿಸಬೇಕಾದ ಒಂದು ಕುಳಿಯಾಗಿದೆ. ಮನೋರಂಜನೆ ಕ್ರೈಸ್ತನನ್ನು ಚೇತನಗೊಳಿಸಬೇಕು ಮತ್ತು ಬಲಪಡಿಸಬೇಕು; ಬಳಲಿಸುವಂಥಾದ್ದು, ಅಪಕರ್ಶಿಸುವಂಥಾದ್ದು ಆಗಿರಬಾರದು. ಅಷ್ಟಲ್ಲದೆ ಮೇಲ್ವಿಚಾರಕರು, “ಮಿತ ಸ್ವಭಾವಿಗಳು” ಆಗಿರಬೇಕು. (1 ತಿಮೊಥಿ 3:2) ಮನೋರಂಜನೆಯ ಸಂಬಂಧದಲ್ಲಿ ನೀವೇನು ಮಾಡುತ್ತೀರೋ ಅದರಲ್ಲಿ ಮಿತವು ಇರುವುದಾದರೆ ಅದು, ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಕಾಯುವದು ಮತ್ತು ಸಭೆಗೆ ಒಳ್ಳೆಯ ಮಾದರಿಯನ್ನು ಕೊಡುವದು. ನಿಮ್ಮ ಜೊತೆ ವಿಶ್ವಾಸಿಗಳು ವಾರಾಂತ್ಯಗಳಲ್ಲಿ ದಕ್ಷತೆಯಿಂದ ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗುವಾಗ ನೀವಾದರೋ ವಾರಾಂತ್ಯಗಳಲ್ಲಿ ಪದೇ ಪದೇ ಮನೋರಂಜನೆಗಾಗಿ ಹೊರಟು ಹೋಗುವುದಾದರೆ, ಅದು ಖಂಡಿತ ಒಳ್ಳೇ ಮಾದರಿಯಲ್ಲ. ಸುವಾರ್ತೆಯು ಸಾರಲ್ಪಡಲೇ ಬೇಕು ಮತ್ತು ಹಿರಿಯರು ಹುರುಪಿನ ರಾಜ್ಯ ಘೋಷಕರಾಗಿ ಅದರಲ್ಲಿ ನಾಯಕರಾಗಿರಬೇಕು.—ಮಾರ್ಕ 13:10; ತೀತ 2:14.
14. (ಎ) ಹಿರಿಯರು ಲೈಂಗಿಕ ಅನೈತಿಕತೆಯ ವಿರುದ್ಧ ಕಾದುಕೊಳ್ಳುವ ಅಗತ್ಯವನ್ನು ಯಾವ ಶಾಸ್ತ್ರೀಯ ಉದಾಹರಣೆಗಳು ಎತ್ತಿಹೇಳುತ್ತವೆ? (ಬಿ) ಆತ್ಮಿಕ ಸಹೋದರಿಯರಿಗೆ ಸಹಾಯ ನೀಡುವ ವಿಷಯದಲ್ಲಿ ಪದೆಪದೇ ನೀಡಲ್ಪಟ್ಟ ಯಾವ ಎಚ್ಚರಿಕೆಯನ್ನು ಹಿರಿಯರು ದುರ್ಲಕ್ಷಿಸಬಾರದು?
14 ಲೈಂಗಿಕ ಅನೈತಿಕತೆಯು ವರ್ಜಿಸಬೇಕಾದ ಇನ್ನೊಂದು ಕುಳಿಯಾಗಿದೆ. ದೇವ ಜನರ ಸಮಗ್ರತೆಯನ್ನು ಮುರಿಯುವ ತನ್ನ ಪ್ರಯತ್ನದಲ್ಲಿ ಸೈತಾನನು ಬಳಸುವ ಶೋಧನೆಗಳನ್ನು ಎದುರಿಸದೇ ಇದ್ದರೆ, ಲೋಕದ ನೈತಿಕ ಕೊಳೆಯು ಒಬ್ಬ ಹಿರಿಯನನ್ನು ಸಹಾ, ಪ್ರಭಾವಿಸಬಲ್ಲದು. (ಮತ್ತಾಯ 4:1-11; 6:9, 13 ಹೋಲಿಸಿ.) ಬಿಳಾಮನನ್ನು ನೆನಪಿಗೆ ತನ್ನಿರಿ. ಇಸ್ರಾಯೇಲ್ಯರನ್ನು ಶಪಿಸುವ ತನ್ನ ಪ್ರಯತ್ನದಲ್ಲಿ ವೈಫಲ್ಯಗೊಂಡ ಅವನು, ಇಸ್ರಾಯೇಲ್ಯರನ್ನು ಲಿಂಗಾರಾಧನೆಯ ಪಾಶಕ್ಕೆಳೆದರೆ ಯೆಹೋವನು ತಾನೇ ಅವರನ್ನು ಶಪಿಸುವನು ಎಂದು ವಿವೇಚಿಸಿಕೊಂಡನು. ಹೀಗೆ ಬಿಳಾಮನು, ಮೋವಾಬ್ಯ ಅರಸ ಬಾಲಾಕನಿಗೆ, “ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ ಜಾರತ್ವ ಮಾಡುವುದರಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳು”ವಂತೆ ಮಾಡಲು ಕಲಿಸಿದನು. ಆ ಕುಳಿಯಿಂದ ಅವರು ತಮ್ಮನ್ನು ದೂರವಿರಿಸಿಕೊಂಡರೋ? ಇಲ್ಲ, 24,000 ಮಂದಿ ಇಸ್ರಾಯೇಲ್ಯರು ಯೆಹೋವನು ತಂದ ವ್ಯಾಧಿಯಿಂದ ಸತ್ತರು ಯಾಕಂದರೆ ಅವರು ಮೊವಾಬ್ಯ ಸ್ತ್ರೀಯರೊಂದಿಗೆ ಅನೈತಿಕ ಸಂಬಂಧವನ್ನಿಟ್ಟರು ಮತ್ತು ಅವರ ದೇವತೆಗಳಿಗೆ ಅಡ್ಡಬಿದ್ದರು. (ಪ್ರಕಟನೆ 2:14; ಅರಣ್ಯಕಾಂಡ 25:1-9) ‘ದೇವರ ಹೃದಯಕ್ಕೆ ಒಪ್ಪಿಗೆಯಾಗಿದ್ದ’ ದಾವೀದನು ಸಹಾ, ಲೈಂಗಿಕ ಅನೈತಿಕತೆಯ ಕುಳಿಗೆ ಮುಗ್ಗರಿಸಿ ಬಿದ್ದನೆಂಬದನ್ನು ನೆನಪಿಡಿರಿ. (1 ಸಮುವೇಲ 13:14; 2 ಸಮುವೇಲ 11:2-4) ಹೀಗಿರಲಾಗಿ, ಒಬ್ಬ ಹಿರಿಯನು ಒಬ್ಬಾಕೆ ಆತ್ಮಿಕ ಸಹೋದರಿಗೆ ಏಕಾಂತದಲ್ಲಿ ಖಾಸಗಿ ಸಹಾಯ ನೀಡುವುದನ್ನು ಎಂದೂ ಮಾಡದಂತೆ “ನಂಬಿಗಸ್ತ ಮನೆವಾರ್ತೆಯವನು” ಪದೇ ಪದೇ ಕೊಡುವ ಸಲಹೆಯನ್ನು ಪಾಲಿಸಿರಿ. ಈ ಜವಾಬ್ದಾರಿಕೆಯನ್ನು ನಿರ್ವಹಿಸಬೇಕಾದಲ್ಲಿ, ಬೇರೊಬ್ಬ ಹಿರಿಯನು ಅಲ್ಲಿರುವಂತೆ ನೋಡಿಕೊಳ್ಳಿರಿ.—ಲೂಕ 12:42.
15. ಪ್ರಾಪಂಚಿಕತೆಯ ಕುಳಿಯಿಂದ ದೂರವಿರಲು ಒಬ್ಬ ಹಿರಿಯನ ಕುಟುಂಬವು ಅವನಿಗೆ ಹೇಗೆ ಸಹಾಯ ಮಾಡಬಹುದು?
15 ಪ್ರಾಪಂಚಿಕತೆಯು ಹಿರಿಯನು ವಿಸರ್ಜಿಸಬೇಕಾದ ಇನ್ನೊಂದು ಕುಣಿಯಾಗಿದೆ. ಆವಶ್ಯಕ ವಸ್ತುಗಳಲ್ಲಿ ತೃಪ್ತರಾಗಿರಿ, ತಕ್ಕದಾದ ಒದಗಿಸುವಿಕೆಗಳನ್ನು ಯೆಹೋವನು ಮಾಡುವನೆಂಬ ಭರವಸವಿರಲಿ. (ಮತ್ತಾಯ 6:25-33; ಇಬ್ರಿಯ 13:5) ನಿಮ್ಮ ಕುಟುಂಬವು ಮಿತವ್ಯಯದ ಜೀವನ ನಡಿಸುವಂತೆ ತರಬೇತು ಕೊಡಿರಿ ಯಾಕಂದರೆ ವ್ಯರ್ಥ ಖರ್ಚು, ಕುಟುಂಬಕ್ಕೆ ಸಹಾಯಕಾರಿಯಾಗಬಲ್ಲ ಹಾಗೂ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು, ಸಭೆಯನ್ನು ಬಲಪಡಿಸಲು ಮತ್ತು ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ಕೊಡಬಲ್ಲ ಸಮಯ ಮತ್ತು ಸಾಧ್ಯತೆಯನ್ನು ಅಪಹರಿಸುತ್ತದೆ. ಈ ವಿಷಯದಲ್ಲಿ ತನ್ನ ಕುಟುಂಬದ ಸಹಕಾರದಿಂದ ಹಿರಿಯನು ಪ್ರಯೋಜನ ಪಡೆಯುತ್ತಾನೆ ಮತ್ತು ನಿಜವಾಗಿ ಬೇಕಾಗದ ವಿಷಯಗಳಿಗಾಗಿ ಅವರು ಅವನನ್ನು ಒತ್ತಾಯ ಪಡಿಸದಕ್ಕಾಗಿ ಅಭಾರಿಯಾಗಿದ್ದಾನೆ. ವಾಸ್ತವದಲ್ಲಿ, “ಕಳವಳದಿಂದ ಕಾಡಿದ ಬಹು ಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು.”—ಜ್ಞಾನೋಕ್ತಿ 15:16.
“ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ”
16. ಎಫೆಸದ ಮೇಲ್ವಿಚಾರಕರಿಗೆ ಪೌಲನು ಯಾವ ಸೂಚನೆಯನ್ನು ಕೊಟ್ಟನು?
16 ಹಿರಿಯರು ತಮ್ಮ ಹೊಣೆಯನ್ನು ಕಾಪಾಡಿಕೊಳ್ಳಬೇಕಾದರೆ, ಎಫೆಸದ ಮೇಲ್ವಿಚಾರಕರಿಗೆ ಪೌಲನು ಕೊಟ್ಟ ಸೂಚನೆಯನ್ನು ಅವರು ಅನ್ವಯಿಸಲೇ ಬೇಕು. ಅವನು ಅವರಿಗೆ ಹೇಳಿದ್ದು: “ದೇವರು ಸರ್ವಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಮೇಲ್ವಿಚಾರಕರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು. ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳೆಕೊಳ್ಳುವರು. ಆಗ ನಾನು ಕಣ್ಣೀರು ಸುರಿಸುತ್ತಾ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬರಿಗೆ ಬುದ್ಧಿಹೇಳಿದೆನೆಂದು ನೀವು ಜ್ಞಾಪಿಸಿಕೊಳ್ಳಿರಿ.”—ಅಪೋಸ್ತಲರ ಕೃತ್ಯ 20:28-31.
17, 18. ಈ ಪತ್ರಿಕೆಯಲ್ಲಿ ಸುಮಾರು 82 ವರ್ಷಗಳ ಹಿಂದೆ ಪ್ರಕಾಶಿಸಲ್ಪಟ್ಟ ಯಾವ ಸೂಚನೆಯು ಕ್ರೈಸ್ತ ಹಿರಿಯರಿಗೆ ಇನ್ನೂ ಅನ್ವಯಿಸುತ್ತದೆ?
17 ಸುಮಾರು 82 ವರ್ಷಗಳಿಗಿಂತಲೂ ಮುಂಚಿತವಾಗಿ, ದಿ ವಾಚ್ಟವರ್ (ಮಾರ್ಚ್ 1, 1909), ಪೌಲನ ಈ ಸೂಚನೆಯನ್ನು ಉದ್ದರಿಸಿ ಜೊತೆ ಹಿರಿಯರಿಗೆ ಅನ್ವಯಿಸುತ್ತಾ ಹೀಗೆಂದು ಹೇಳಿತು: “ಹಿರಿಯರು ಎಲ್ಲೆಲ್ಲಿಯೂ ವಿಶೇಷ ಗಮನವನ್ನು ಕೊಡುವ ಅಗತ್ಯವಿದೆ. ಯಾಕಂದರೆ ಪ್ರತಿಯೊಂದು ಮೊಕದ್ದಮೆಯಲ್ಲಿ ಅತ್ಯಂತ ಪ್ರಮುಖರು ಮತ್ತು ಅನುಗ್ರಹಿತರು ಬಹು ಕಠಿಣವಾದ ಹಲ್ಲೆಗಳಿಗೆ ಮತ್ತು ಪರೀಕೆಗ್ಷಳಿಗೆ ಗುರಿಯಾಗುತ್ತಾರೆ. [ಯಾಕೋಬನು], ‘ಸಹೋದರರೇ, ಬೋಧಕರಿಗೆ ಕಠಿಣವಾದ ತೀರ್ಪು ಆಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ’ ಎಂಬ ಬುದ್ಧಿವಾದವನ್ನು ಕೊಟ್ಟಿದ್ದಾನೆ. ಅದೇ ರೀತಿ ನಾವು ಸಹಾ, ಹೃದಯದಲ್ಲಿ ಶುದ್ಧರೂ, ನಿಸ್ವಾರ್ಥರೂ ಆದ ಹಿರಿಯರೆಲ್ಲರಿಗೆ ಬುದ್ಧಿಹೇಳುವದೇನಂದರೆ, ಅವರಲ್ಲಿ ಮಾನವರೆಲ್ಲರ ಕಡೆಗೆ ಪ್ರೀತಿ ಮತ್ತು ಸದ್ಭಾವನೆಗಳಲ್ಲದೆ ಬೇರೇನೂ ಇರಬಾರದು ಮತ್ತು ಅವರು ದೇವರಾತ್ಮನ ಫಲಗಳಿಂದಲೂ ಕೃಪೆಯಿಂದಲೂ ಅಧಿಕಾಧಿಕವಾಗಿ ತುಂಬುತ್ತಾ, ಮಂದೆಯ ಕಡೆಗೂ ಗಮನ ಕೊಡಬೇಕು ಎಂಬದೇ. ಮಂದೆಯು ಕರ್ತನದ್ದು ಮತ್ತು ನಿಮಗೆ ಕರ್ತನ ಕಡೆಗೆ ಹಾಗೂ ಅವರ ಕಡೆಗೆ ಜವಾಬ್ದಾರಿಕೆ ಇದೆ ಎಂಬದನ್ನು ನೆನಪಿಡಿರಿ. ಅವರ ಆತ್ಮಗಳನ್ನು (ಅಭಿರುಚಿಗಳನ್ನು) ಕಾಯುವ ವಿಷಯದಲ್ಲಿ ನೀವು ಮಹಾ ಮುಖ್ಯ ಕುರುಬನಿಗೆ ಲೆಕ್ಕ ಕೊಡಲೇ ಬೇಕೆಂಬದನ್ನೂ ನೆನಪಿನಲ್ಲಿಡಿರಿ. ಎಲ್ಲದರಲ್ಲಿಯೂ ಪ್ರೀತಿಯೇ ಮುಖ್ಯ ತತ್ವವೆಂಬದು ನೆನಪಿರಲಿ; ಬೋಧನೆಗಳನ್ನು ದುರ್ಲಕ್ಷಿಸದೇ, ಕರ್ತನ ದೇಹದ ವಿವಿಧ ಸದಸ್ಯರ ನಡುವೆ ಕರ್ತನಾತ್ಮದ ವಿಕಾಸಕ್ಕಾಗಿ ವಿಶೇಷ ಗಮನ ಕೊಡಿರಿ. ಹೀಗೆ ಅವರು ‘ಬೆಳಕಿನ ದೇವಭಕ್ತರ ಬಾಧ್ಯತೆಯಲ್ಲಿ ಕೂಡುವಂತೆ’ ಮತ್ತು ದೈವಿಕ ಚಿತ್ತಕ್ಕನುಸಾರ, ಈ ಕೆಟ್ಟ ದಿನಗಳಲ್ಲಿ ಮುಗ್ಗರಿಕೆಯನ್ನು ಅನುಭವಿಸದಂತೆ, ಬದಲಾಗಿ ಎಲ್ಲವನ್ನು ಕೈಕೊಂಡವರಾಗಿ ಕ್ರಿಸ್ತನಲ್ಲಿ, ಅವನ ದೇಹದಲ್ಲಿ, ಅವನ ಅಂಗಗಳಲ್ಲಿ, ಅವನ ಸಹ-ಯಜ್ಞಗಳಲ್ಲಿ ಮತ್ತು ಸಹ ಬಾಧ್ಯಸ್ಥರಲ್ಲಿ ಪೂರ್ಣರಾಗಿ ನಿಲ್ಲುವಂತೆ ಆಗುವುದು.”
18 ಆ ಮಾತುಗಳು ಆತ್ಮಾಭಿಷಿಕ್ತ ಹಿರಿಯರಿಗೆ ಮತ್ತು ಜತೆ ವಿಶ್ವಾಸಿಗಳಿಗೆ, ಆ ಅರಂಭದ ಕಾಲದ ಯೆಹೋವನ ಸಂಸ್ಥೆಯ ತಿಳುವಳಿಕೆ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ನೇರವಾಗಿ ಉದ್ದೇಶಿಸಲ್ಪಟ್ಟಿತ್ತು. ಆದರೂ, ಆ ಸೂಚನೆಯು ಇಂದು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ! ಅವರ ನಿರೀಕ್ಷೆಯು ಸ್ವರ್ಗೀಯವಾಗಿರಲಿ, ಭೂಮಿಯದ್ದಾಗಿರಲಿ, ಕ್ರೈಸ್ತ ಹಿರಿಯರು ತಮ್ಮ ವಿಷಯದಲ್ಲಿ ಎಚ್ಚರದಿಂದಿರಬೇಕು. ತಮ್ಮ ಹೊಣೆಯನ್ನು ಕಾದುಕೊಳ್ಳಬೇಕು ಮತ್ತು ದೇವರ ಮಂದೆಯ ಅಭಿರುಚಿಗಳನ್ನು ಪ್ರೀತಿಯಿಂದ ಪರಾಮರಿಕೆ ಮಾಡಬೇಕು.
ನಿಮ್ಮ ಹೊಣೆಯನ್ನು ಕಾಯುವುದರಿಂದ ಸಂತೋಷ ಲಭಿಸುತ್ತದೆ
19, 20. ಹಿರಿಯರು ತಮ್ಮ ಹೊಣೆಯನ್ನು ಕಾದುಕೊಳ್ಳುವಾಗ ಸಂತೋಷವು ಲಭಿಸುತ್ತದೆ ಎಂದು ಏಕೆ ಹೇಳಬಹುದು?
19 ಸಂತೋಷ—ವಾಸ್ತವದಲ್ಲಿ, ಹೃತ್ಪೂರ್ವಕ ಸಂತೋಷವು—ಕ್ರೈಸ್ತ ಹಿರಿಯರಾದ ನಿಮ್ಮ ಹೊಣೆಯನ್ನು ಕಾಪಾಡುವುದರಿಂದ ಲಭಿಸುವುದು. ಒಂದು ಗಂಭೀರವಾದ ಜವಾಬ್ದಾರಿಕೆಯನ್ನು ಚೆನ್ನಾಗಿ ನಿರ್ವಹಿಸುವುದರಲ್ಲಿ ಒಂದು ಸಂತೋಷವಿರುತ್ತದೆ. ಆದ್ದರಿಂದ, ಜಾಗರೂಕರಾಗಿರ್ರಿ, ಪ್ರಾರ್ಥನೆ ಮಾಡಿರಿ, ಪರಿಶ್ರಮಿಗಳಾಗಿರ್ರಿ. ಹಿರಿಯರೋಪಾದಿ ನಿಮ್ಮ ಹೊಣೆಯನ್ನು ಕಾಪಾಡಿರಿ ಮತ್ತು ಆ ಲೇಖಕನ ದೌತಿಯನ್ನು ನಡುವಿಗೆ ಕಟ್ಟಿದ್ದ ಪುರುಷನು ಅಂದಂತೆ, “ನಿನ್ನ ಅಪ್ಪಣೆಯಂತೆಯೇ ಮಾಡಿದ್ದೇನೆ” ಎಂದು ಹೇಳಶಕ್ತರಾಗುವ ಸಮಯಕ್ಕಾಗಿ ಮುನ್ನೋಡಿರಿ.—ಯೆಹೆಜ್ಕೇಲ 9:3, 4, 11.
20 ಹೌದು, ಹಿರಿಯರಾಗಿ ನಿಷ್ಠೆಯಿಂದ ಕೆಲಸ ಮಾಡಿರಿ, ಈ ಮೂಲಕ ನೋಹನ ಕುರಿತಾಗಿ, “ಅವನು ಅಪ್ಪಣೆ ಕೊಟ್ಟ ಪ್ರಕಾರವೇ ಮಾಡಿದನು” ಎಂದು ಹೇಗೆ ಹೇಳಲಾಗಿದೆಯೋ ಹಾಗೆ ನಿಮ್ಮ ಕುರಿತೂ ಹೇಳುವಂತಾಗುವುದು. (ಆದಿಕಾಂಡ 6:22) ಅಂಥ ದಕ್ಷತೆಯ ಸೇವೆಯಿಂದ ಸಭೆಯು ಅನೇಕ ರೀತಿಯಲ್ಲಿ ಪ್ರಯೋಜನ ಹೊಂದುತ್ತದೆ. ಎಲ್ಲಾದಕ್ಕಿಂತ ಹೆಚ್ಚಾಗಿ, ತಮ್ಮ ಹೊಣೆಯನ್ನು ಕಾದುಕೊಳ್ಳುವ ನಂಬಿಗಸ್ತ ಹಿರಿಯರ ಸೇವೆಯನ್ನು ಪಡೆಯುವ ಬಲವಾದ, ಕ್ರಿಯಾಶೀಲ ಸಭೆಗಳಿಂದ ಯೆಹೋವನಿಗೆ ಗೌರವ ಬರುತ್ತದೆ. ಆದರೆ ಕಾರ್ಯಥ ನಿಮಗೆ, “ಭಲಾ, ನೀನು ಒಳ್ಳೆಯ ಆಳು” ಎಂದು ಹೇಳಲ್ಪಡಬೇಕಾದರೆ ಅಧಿಕ ವಿಷಯಗಳ ಅಗತ್ಯವಿದೆ. (ಲೂಕ 19:17) ಹಿರಿಯರಾದ ನೀವು, ದೇವರ ಮಂದೆಯನ್ನು ಮಮತೆಯಿಂದಲೂ ಪಾಲಿಸತಕ್ಕದ್ದು. (w89 9/15)
ನೀವೇನು ಹೇಳುವಿರಿ?
◻ ಕ್ರೈಸ್ತ ಹಿರಿಯರಿಗೆ ಯಾವ ಹೆಚ್ಚಿನ ಹೊಣೆಯು ಇರುತ್ತದೆ?
◻ ಒಬ್ಬ ಹಿರಿಯನು ತನ್ನ ಹೊಣೆಯನ್ನು ಕಾಪಾಡಲು ಯಾವ ನಿಶ್ಚಯಾತ್ಮಕ ಹೆಜ್ಜೆಗಳನ್ನು ತಕ್ಕೊಳ್ಳಬಹುದು?
◻ ತನ್ನ ಹೊಣೆಯನ್ನು ಕಾಪಾಡಲು ಹಿರಿಯನು, ಯಾವ ಕುಳಿಗಳನ್ನು ವರ್ಜಿಸಬೇಕು?
◻ ಹಿರಿಯರು ತಮ್ಮ ಹೊಣೆಯನ್ನು ಕಾಪಾಡುವಾಗ ಸಂತೋಷವು ಲಭಿಸುವುದೇಕೆ?
[ಪುಟ 12 ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯರು “ಅತಿವೃಷ್ಟಿಯಲ್ಲಿ ಆವರಣದ ಹಾಗೂ” ಇರಬೇಕು
[ಪುಟ 14 ರಲ್ಲಿರುವ ಚಿತ್ರ]
ಹಿರಿಯರೋಪಾದಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಇತರರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲಿಗರಾಗಿರಿ
[ಪುಟ 15 ರಲ್ಲಿರುವ ಚಿತ್ರ]
ಹಿರಿಯರಾದ ನೀವು ನಿಮ್ಮ ಹೊಣೆಯನ್ನು ಕಾದುಕೊಂಡರೆ, ಸಭೆಯು ಅನೇಕ ರೀತಿಯಲ್ಲಿ ಪ್ರಯೋಜನ ಹೊಂದುವದು