“ದೇವರು ನಮ್ಮನ್ನು ಹೀಗೆ ಪ್ರೀತಿಸಿ”ದನು
“ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.”—1 ಯೋಹಾನ 4:11.
1. ಮಾರ್ಚ್ 23ರಂದು ಸೂರ್ಯಾಸ್ತಮಾನದ ನಂತರ, ಭೂಗೋಳದ ಸುತ್ತಲೂ ಲಕ್ಷಾಂತರ ಜನರು ರಾಜ್ಯ ಸಭಾಗೃಹಗಳಲ್ಲಿ ಮತ್ತು ಇತರ ಕೂಟದ ಸ್ಥಳಗಳಲ್ಲಿ ಏಕೆ ಕೂಡಿಬರುವರು?
ಆದಿತ್ಯವಾರ, ಮಾರ್ಚ್ 23, 1997ರಂದು, ಸೂರ್ಯಾಸ್ತಮಾನದ ನಂತರ, ಯೆಹೋವನ ಸಾಕ್ಷಿಗಳು ಉಪಯೋಗಿಸುವ ರಾಜ್ಯ ಸಭಾಗೃಹಗಳಲ್ಲಿ ಮತ್ತು ಇತರ ಕೂಟದ ಸ್ಥಳಗಳಲ್ಲಿ, ಲೋಕವ್ಯಾಪಕವಾಗಿ 1,30,00,000ಕ್ಕಿಂತಲೂ ಹೆಚ್ಚಿನ ಜನರು ಒಟ್ಟುಗೂಡುವರೆಂಬುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ಏಕೆ? ಏಕೆಂದರೆ ಅವರ ಹೃದಯಗಳು, ಮಾನವಕುಲಕ್ಕಾಗಿರುವ ದೇವರ ಪ್ರೀತಿಯ ಅತ್ಯಂತ ಮಹಾನ್ ಅಭಿವ್ಯಕ್ತಿಯಿಂದ ಸ್ಪರ್ಶಿಸಲ್ಪಟ್ಟಿವೆ. ಯೇಸು ಕ್ರಿಸ್ತನು ಹೀಗೆ ಹೇಳುತ್ತಾ, ದೇವರ ಪ್ರೀತಿಯ ಆ ಮಹತ್ತಾದ ಪ್ರಮಾಣದ ಮೇಲೆ ಗಮನವನ್ನು ಕೇಂದ್ರೀಕರಿಸಿದನು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.
2. ದೇವರ ಪ್ರೀತಿಗೆ ನಮ್ಮ ಪ್ರತಿಕ್ರಿಯೆಯ ಸಂಬಂಧದಲ್ಲಿ ನಾವೆಲ್ಲರೂ ಯಾವ ಪ್ರಶ್ನೆಗಳನ್ನು ಪ್ರಯೋಜನಕರವಾಗಿ ನಮ್ಮನ್ನೇ ಕೇಳಿಕೊಳ್ಳಸಾಧ್ಯವಿದೆ?
2 ದೇವರು ತೋರಿಸಿರುವಂತಹ ಆ ಪ್ರೀತಿಯ ಕುರಿತು ನಾವು ಪರ್ಯಾಲೋಚಿಸಿದಂತೆ, ‘ದೇವರು ಮಾಡಿರುವಂತಹದ್ದನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೊ? ನನ್ನ ಜೀವನವನ್ನು ನಾನು ಬಳಸಿಕೊಳ್ಳುತ್ತಿರುವಂತಹ ರೀತಿಯು, ಆ ಗಣ್ಯತೆಯ ವಿಷಯವಾಗಿ ಪ್ರಮಾಣವನ್ನು ನೀಡುತ್ತದೊ?’ ಎಂಬುದಾಗಿ ಸ್ವತಃ ಕೇಳಿಕೊಳ್ಳುವುದು ಒಳ್ಳೆಯದು.
“ದೇವರು ಪ್ರೀತಿಸ್ವರೂಪಿ”
3. (ಎ) ಪ್ರೀತಿಯ ಪ್ರದರ್ಶನವು ದೇವರಿಗೆ ಅಸಾಧಾರಣವಾದ ವಿಷಯವಾಗಿರುವುದಿಲ್ಲ ಏಕೆ? (ಬಿ) ಆತನ ಸೃಷ್ಟಿಯ ಕೆಲಸಗಳಲ್ಲಿ ಶಕ್ತಿ ಮತ್ತು ವಿವೇಕ ಹೇಗೆ ಪ್ರದರ್ಶಿಸಲ್ಪಟ್ಟಿವೆ?
3 “ದೇವರು ಪ್ರೀತಿಸ್ವರೂಪಿ”ಯಾಗಿರುವುದರಿಂದ, ಪ್ರೀತಿಯನ್ನು ಪ್ರದರ್ಶಿಸುವುದು ತಾನೇ ಆತನ ಸಂಬಂಧದಲ್ಲಿ ಅಸಾಧಾರಣವಾದ ವಿಷಯವಾಗಿರುವುದಿಲ್ಲ. (1 ಯೋಹಾನ 4:8) ಪ್ರೀತಿ ಆತನ ಪ್ರಧಾನ ವೈಶಿಷ್ಟ್ಯವಾಗಿದೆ. ಆತನು ಮಾನವ ನಿವಾಸಕ್ಕಾಗಿ ಭೂಮಿಯನ್ನು ಸಿದ್ಧಪಡಿಸುತ್ತಿದ್ದಾಗ, ಪರ್ವತಗಳನ್ನು ಮೇಲಕ್ಕೆತ್ತರಿಸಿ, ಸರೋವರಗಳು ಮತ್ತು ಸಾಗರಗಳಲ್ಲಿ ನೀರನ್ನು ಒಟ್ಟುಗೂಡಿಸುವುದು, ಶಕ್ತಿಯ ರೋಮಾಂಚಕಾರಿ ಪ್ರದರ್ಶನವಾಗಿತ್ತು. (ಆದಿಕಾಂಡ 1:9, 10) ದೇವರು ಜಲಚಕ್ರ ಮತ್ತು ಆಮ್ಲಜನಕಚಕ್ರವನ್ನು ಕಾರ್ಯರೂಪಕ್ಕೆ ಹಾಕಿದಾಗ, ಮಾನವರು ತಮ್ಮ ಜೀವಗಳನ್ನು ಪೋಷಿಸುವ ಸಲುವಾಗಿ, ತಾವು ಜೀರ್ಣಿಸಿಕೊಳ್ಳಸಾಧ್ಯವಾಗುವಂತಹ ಒಂದು ರೂಪದಲ್ಲಿ, ಭೂಮಿಯ ರಾಸಾಯನಿಕ ಘಟಕಾಂಶಗಳನ್ನು ಪರಿವರ್ತಿಸಲು ಆತನು ಎಣಿಕೆಯಿಲ್ಲದ ಸೂಕ್ಷ್ಮಜೀವಿಗಳನ್ನು ಮತ್ತು ಸಸ್ಯಗಳ ವೈವಿಧ್ಯತೆಯನ್ನು ವಿನ್ಯಾಸಿಸಿದಾಗ, ಭೂಗ್ರಹದ ದಿನಗಳು ಮತ್ತು ಮಾಸಗಳ ವ್ಯಾಪ್ತಿಯೊಂದಿಗೆ ನಮ್ಮ ದೇಹದಲ್ಲಿನ ನೈಸರ್ಗಿಕ ವ್ಯವಸ್ಥೆಯು ಸರಿಹೊಂದುವಂತೆ ಆತನು ಮಾಡಿದಾಗ, ಅದು ಮಹಾ ವಿವೇಕವನ್ನು ಪ್ರದರ್ಶಿಸಿತು. (ಕೀರ್ತನೆ 104:24; ಯೆರೆಮೀಯ 10:12) ಆದರೂ, ಭೌತಿಕ ಸೃಷ್ಟಿಯಲ್ಲಿ ಅತಿ ಗಮನಾರ್ಹವಾದದ್ದು, ದೇವರ ಪ್ರೀತಿಯ ಪ್ರಮಾಣವೇ.
4. ಭೌತಿಕ ಸೃಷ್ಟಿಯಲ್ಲಿ, ದೇವರ ಪ್ರೀತಿಯ ಯಾವ ಪ್ರಮಾಣವನ್ನು ನಾವೆಲ್ಲರು ನೋಡಿ, ಗಣ್ಯಮಾಡಬೇಕು?
4 ನಾವು, ನಮ್ಮನ್ನು ಪೋಷಿಸಲು ಮಾತ್ರವಲ್ಲ ನಮಗೆ ಆನಂದವನ್ನು ತರಲೂ ಮಾಡಲ್ಪಟ್ಟಿರುವ ರಸವತ್ತಾದ, ಮಾಗಿದ ಹಣ್ಣನ್ನು ಕಚ್ಚುವಾಗ, ನಮ್ಮ ರಸನೇಂದ್ರಿಯಗಳು ನಮಗೆ ದೇವರ ಪ್ರೀತಿಯ ಕುರಿತು ಹೇಳುತ್ತವೆ. ನಮ್ಮ ಕಣ್ಣುಗಳು, ರೋಮಾಂಚಕಾರಿ ಸೂರ್ಯಾಸ್ತಮಾನಗಳಲ್ಲಿ, ಮೋಡವಿಲ್ಲದ ಶುಭ್ರ ರಾತ್ರಿಯಂದು ನಕ್ಷತ್ರಭರಿತ ಆಕಾಶಗಳಲ್ಲಿ, ಪುಷ್ಪಗಳ ವಿಭಿನ್ನ ಆಕಾರಗಳು ಮತ್ತು ಉಜ್ವಲ ಬಣ್ಣಗಳಲ್ಲಿ, ಎಳೆಯ ಪ್ರಾಣಿಗಳ ವಿಕಟ ಚೇಷ್ಟೆಯಲ್ಲಿ, ಮತ್ತು ಮಿತ್ರರ ಹೃದಯೋಲ್ಲಾಸದ ನಸುನಗೆಯಲ್ಲಿ ಅದರ ಸುಸ್ಪಷ್ಟವಾದ ಪ್ರಮಾಣವನ್ನು ಕಾಣುತ್ತವೆ. ನಾವು ವಸಂತಕಾಲದ ಪುಷ್ಪಗಳ ಪರಿಮಳವನ್ನು ಸೇವಿಸುವಾಗ, ನಮ್ಮ ನಾಸಿಕಗಳು ಅದರ ಅರಿವನ್ನು ನಮಗುಂಟುಮಾಡುತ್ತವೆ. ನಾವು ಜಲಪಾತದ ಶಬ್ದವನ್ನು, ಪಕ್ಷಿಗಳ ಹಾಡುಗಳನ್ನು, ಮತ್ತು ಪ್ರಿಯರ ಧ್ವನಿಗಳನ್ನು ಆಲಿಸಿದಂತೆ ನಮ್ಮ ಕಿವಿಗಳು ಅವನ್ನು ಗ್ರಹಿಸುತ್ತವೆ. ಪ್ರಿಯನೊಬ್ಬನು ಹೃದಯೋಲ್ಲಾಸಕರವಾಗಿ ನಮ್ಮನ್ನು ಆಲಿಂಗಿಸುವಾಗ ಅದರ ಅನಿಸಿಕೆ ನಮಗಾಗುತ್ತದೆ. ಯಾವ ವಿಷಯಗಳ ಸಂಬಂಧವಾಗಿ ಮಾನವರಿಗೆ ಸಾಮರ್ಥ್ಯವಿಲ್ಲವೊ ಆ ವಿಷಯಗಳನ್ನು ನೋಡುವ, ಕೇಳುವ, ಅಥವಾ ಆಘ್ರಾಣಿಸುವ ಸಾಮರ್ಥ್ಯಗಳು ಕೆಲವು ಪ್ರಾಣಿಗಳಿಗೆ ಅನುಗ್ರಹಿಸಲ್ಪಟ್ಟಿವೆ. ಆದರೆ ದೇವರ ಸ್ವರೂಪದಲ್ಲಿ ಮಾಡಲ್ಪಟ್ಟ ಮಾನವಜಾತಿಗೆ, ಯಾವುದೇ ಪ್ರಾಣಿಗೆ ಗ್ರಹಿಸಲು ಸಾಧ್ಯವಾಗದ ವಿಧದಲ್ಲಿ ದೇವರ ಪ್ರೀತಿಯನ್ನು ಗ್ರಹಿಸಿಕೊಳ್ಳುವ ಸಾಮರ್ಥ್ಯವಿದೆ.—ಆದಿಕಾಂಡ 1:27.
5. ಆದಾಮ ಹವ್ವರಿಗೆ ಯೆಹೋವನು ಹೇರಳವಾದ ಪ್ರೀತಿಯನ್ನು ಹೇಗೆ ತೋರಿಸಿದನು?
5 ಪ್ರಥಮ ಮಾನವರಾದ ಆದಾಮ ಹವ್ವರನ್ನು ಯೆಹೋವ ದೇವರು ಸೃಷ್ಟಿಸಿದಾಗ, ಆತನು ಅವರನ್ನು ತನ್ನ ಪ್ರೀತಿಯ ಸಾಕ್ಷ್ಯದಿಂದ ಆವರಿಸಿದನು. ಆತನೊಂದು ತೋಟ, ಒಂದು ಪ್ರಮೋದವನವನ್ನು ಸ್ಥಾಪಿಸಿ, ಅದರಲ್ಲಿ ಎಲ್ಲ ಬಗೆಯ ಮರಗಳು ಬೆಳೆಯುವಂತೆ ಮಾಡಿದನು. ಅದಕ್ಕೆ ನೀರುಹಾಯಿಸುವಂತೆ ಒಂದು ನದಿಯನ್ನು ಒದಗಿಸಿ, ಅದನ್ನು ಆಕರ್ಷಕ ಪಕ್ಷಿಗಳು ಮತ್ತು ಪ್ರಾಣಿಗಳಿಂದ ತುಂಬಿಸಿದ್ದನು. ಇದೆಲ್ಲವನ್ನು ಆತನು ಆದಾಮ ಹವ್ವರಿಗೆ ಅವರ ಮನೆಯಾಗಿ ನೀಡಿದನು. (ಆದಿಕಾಂಡ 2:8-10, 19) ಯೆಹೋವನು ಅವರೊಂದಿಗೆ ತನ್ನ ಮಕ್ಕಳಂತೆ, ತನ್ನ ವಿಶ್ವ ಕುಟುಂಬದ ಭಾಗದೋಪಾದಿ ವ್ಯವಹರಿಸಿದನು. (ಲೂಕ 3:38) ಏದೆನ್ ಅನ್ನು ಒಂದು ನಮೂನೆಯಾಗಿ ಒದಗಿಸುತ್ತಾ, ಈ ಪ್ರಥಮ ಮಾನವ ಜೋಡಿಯ ಸ್ವರ್ಗೀಯ ಪಿತನು, ಅವರಿಗೆ ಪ್ರಮೋದವನವನ್ನು—ಅದು ಭೂಗೋಳವನ್ನು ಆವರಿಸುವಂತೆ—ವಿಸ್ತರಿಸುವ ತೃಪ್ತಿದಾಯಕ ನೇಮಕವನ್ನು ಕೊಟ್ಟನು. ಇಡೀ ಭೂಮಿಯು ಅವರ ಸಂತಾನದಿಂದ ನಿವಾಸಿಸಲ್ಪಡಬೇಕಿತ್ತು.—ಆದಿಕಾಂಡ 1:28.
6. (ಎ) ಆದಾಮ ಹವ್ವರಿಂದ ತೆಗೆದುಕೊಳ್ಳಲ್ಪಟ್ಟ ದಂಗೆಕೋರ ಮಾರ್ಗದ ಕುರಿತು ನಿಮಗೆ ಹೇಗನಿಸುತ್ತದೆ? (ಬಿ) ಏದೆನ್ನಲ್ಲಿ ಸಂಭವಿಸಿದ ವಿಷಯದಿಂದ ನಾವು ಪಾಠವನ್ನು ಕಲಿತಿದ್ದೇವೆಂದು ಮತ್ತು ಆ ಜ್ಞಾನದಿಂದ ಪ್ರಯೋಜನವನ್ನು ಪಡೆದಿದ್ದೇವೆಂದು ಯಾವುದು ಸೂಚಿಸಬಹುದು?
6 ಆದರೆ ಬೇಗನೆ, ಆದಾಮ ಹವ್ವರು ವಿಧೇಯತೆಯ ಪರೀಕ್ಷೆಯನ್ನು, ಒಂದು ನಿಷ್ಠೆಯ ಪರೀಕ್ಷೆಯನ್ನು ಎದುರಿಸಿದರು. ಆರಂಭದಲ್ಲಿ ಅವಳು, ಅನಂತರ ಅವನು ಅವರ ಮೇಲೆ ಅನುಗ್ರಹಿಸಲ್ಪಟ್ಟಿದ್ದ ಪ್ರೀತಿಗೆ ಗಣ್ಯತೆಯನ್ನು ತೋರಿಸಲು ವಿಫಲರಾದರು. ಅವರು ಮಾಡಿದಂತಹ ಕಾರ್ಯವು ತಲ್ಲಣಗೊಳಿಸುವಂತಹದ್ದಾಗಿತ್ತು. ಅದು ಅಕ್ಷಮ್ಯವಾಗಿತ್ತು! ಫಲಸ್ವರೂಪವಾಗಿ, ದೇವರೊಂದಿಗಿನ ತಮ್ಮ ಸಂಬಂಧವನ್ನು ಅವರು ಕಳೆದುಕೊಂಡರು, ಆತನ ಕುಟುಂಬದಿಂದ ಹೊರಹಾಕಲ್ಪಟ್ಟರು, ಮತ್ತು ಏದೆನ್ನಿಂದ ಹೊರದೊಬ್ಬಲ್ಪಟ್ಟರು. ಇಂದು ನಾವು ಅವರ ಪಾಪದ ಪರಿಣಾಮಗಳನ್ನು ಇನ್ನೂ ಅನುಭವಿಸುತ್ತೇವೆ. (ಆದಿಕಾಂಡ 2:16, 17; 3:1-6, 16-19, 24; ರೋಮಾಪುರ 5:12) ಆದರೆ ಸಂಭವಿಸಿದ ವಿಷಯದಿಂದ ನಾವು ಪಾಠ ಕಲಿತಿದ್ದೇವೊ? ದೇವರ ಪ್ರೀತಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತಾ ಇದ್ದೇವೆ? ನಾವು ಪ್ರತಿದಿನ ಮಾಡುವ ನಿರ್ಣಯಗಳು, ನಾವು ಆತನ ಪ್ರೀತಿಯನ್ನು ಗಣ್ಯಮಾಡುತ್ತೇವೆಂಬುದನ್ನು ತೋರಿಸುತ್ತವೊ?—1 ಯೋಹಾನ 5:3.
7. ಆದಾಮ ಹವ್ವರು ಏನನ್ನು ಮಾಡಿದರೊ ಅದರ ಹೊರತೂ, ಯೆಹೋವನು ಅವರ ಸಂತಾನಕ್ಕಾಗಿ ಪ್ರೀತಿಯನ್ನು ಹೇಗೆ ತೋರಿಸಿದನು?
7 ದೇವರು ನಮ್ಮ ಪ್ರಥಮ ಮಾನವ ಹೆತ್ತವರಿಗಾಗಿ ಮಾಡಿದ್ದ ಸಕಲ ವಿಷಯಕ್ಕೂ ಅವರು ತೋರಿಸಿದ ಗಣ್ಯತೆಯ ಮಹತ್ತರ ಕೊರತೆಯು ಸಹ, ದೇವರ ಸ್ವಂತ ಪ್ರೀತಿಯನ್ನು ನಿಗ್ರಹಿಸಲಿಲ್ಲ. ಆಗ ಜನಿಸಿರದಿದ್ದ ಮಾನವರಿಗಾಗಿ—ಇಂದು ಜೀವಂತರಾಗಿರುವ ನಮ್ಮನ್ನೂ ಸೇರಿಸಿ—ಸಹಾನೂಭೂತಿಯಿಂದ, ಆದಾಮ ಹವ್ವರು ಸಾಯುವ ಮೊದಲು ಒಂದು ಕುಟುಂಬವನ್ನು ಆರಂಭಿಸುವಂತೆ ದೇವರು ಅನುಮತಿಸಿದನು. (ಆದಿಕಾಂಡ 5:1-5; ಮತ್ತಾಯ 5:44, 45) ಅದನ್ನು ಆತನು ಮಾಡದೆ ಇರುತ್ತಿದ್ದಲ್ಲಿ, ನಮ್ಮಲ್ಲಿ ಒಬ್ಬರೂ ಜನಿಸಿರುತ್ತಿರಲಿಲ್ಲ. ಆತನ ಚಿತ್ತದ ಪ್ರಗತಿಪರ ಪ್ರಕಟನೆಯಿಂದ ಯೆಹೋವನು, ಆದಾಮನ ಸಂತಾನದವರಲ್ಲಿ ಯಾರು ನಂಬಿಕೆಯನ್ನು ಪ್ರದರ್ಶಿಸುವರೊ, ಅವರೆಲ್ಲರಿಗೆ ನಿರೀಕ್ಷೆಯ ಒಂದು ಆಧಾರವನ್ನೂ ಒದಗಿಸಿದನು. (ಆದಿಕಾಂಡ 3:15; 22:18; ಯೆಶಾಯ 9:6, 7) ಆತನ ಏರ್ಪಾಡು, ಆದಾಮನು ಕಳೆದುಕೊಂಡಿದ್ದನ್ನು, ಅಂದರೆ ದೇವರ ವಿಶ್ವ ಕುಟುಂಬದ ಅನುಮೋದಿಸಲ್ಪಟ್ಟ ಸದಸ್ಯರಾಗಿ, ಪರಿಪೂರ್ಣ ಜೀವಿತವನ್ನು ಸಕಲ ರಾಷ್ಟ್ರಗಳ ಜನರು ಪುನಃ ಪಡೆಯಸಾಧ್ಯವಿದ್ದ ವಿಧಾನವನ್ನು ಒಳಗೊಂಡಿತು. ಒಂದು ಪ್ರಾಯಶ್ಚಿತ್ತವನ್ನು ಒದಗಿಸುವ ಮೂಲಕ ಆತನು ಇದನ್ನು ಮಾಡಿದನು.
ಒಂದು ಪ್ರಾಯಶ್ಚಿತ್ತವು ಏಕೆ?
8. ಆದಾಮ ಹವ್ವರು ಸಾಯಲೇಬೇಕಾದರೂ, ಅವರ ವಿಧೇಯ ಸಂತಾನದವರಲ್ಲಿ ಯಾರೊಬ್ಬರೂ ಸಾಯಬಾರದೆಂದು ವಿಧಿಸಲು ದೇವರಿಗೆ ಸಾಧ್ಯವಿರಲಿಲ್ಲವೇಕೆ?
8 ಮಾನವ ಜೀವದ ರೂಪದಲ್ಲಿ ಒಂದು ಪ್ರಾಯಶ್ಚಿತ್ತ ಮೌಲ್ಯವು ಸಲ್ಲಿಸಲ್ಪಡುವುದರ ಅಗತ್ಯ ನಿಜವಾಗಿಯೂ ಇತ್ತೊ? ಆದಾಮ ಹವ್ವರು ತಮ್ಮ ದಂಗೆಗಾಗಿ ಸಾಯಲೇಬೇಕಾಗಿದ್ದರೂ, ದೇವರಿಗೆ ವಿಧೇಯರಾಗಲಿದ್ದ ಅವರ ಸಂತಾನದವರೆಲ್ಲ ಸದಾಕಾಲ ಜೀವಿಸಸಾಧ್ಯವಿತ್ತೆಂದು ದೇವರು ವಿಧಿಸಸಾಧ್ಯವಿರಲಿಲ್ಲವೆ? ಸಮೀಪದೃಷ್ಟಿಯ ಮಾನವ ನೋಟದಿಂದ ಅದು ವಿವೇಚನಾಯುಕ್ತವಾಗಿ ತೋರಬಹುದು. ಆದರೆ, ಯೆಹೋವನು “ನೀತಿನ್ಯಾಯಗಳನ್ನು ಪ್ರೀತಿಸುವವ”ನಾಗಿದ್ದಾನೆ. (ಕೀರ್ತನೆ 33:5) ಆದಾಮ ಹವ್ವರು ಮಕ್ಕಳನ್ನು ಹೆತ್ತದ್ದು ಅವರು ಪಾಪಿಗಳಾದ ನಂತರವೇ, ಆದುದರಿಂದ ಆ ಮಕ್ಕಳಲ್ಲಿ ಯಾರೊಬ್ಬರೂ ಪರಿಪೂರ್ಣರಾಗಿ ಜನಿಸಿರಲಿಲ್ಲ. (ಕೀರ್ತನೆ 51:5) ಅವರೆಲ್ಲರು ಪಾಪವನ್ನು ಪಿತ್ರಾರ್ಜಿತವಾಗಿ ಪಡೆದಿದ್ದರು, ಮತ್ತು ಪಾಪದ ದಂಡನೆ ಮರಣವಾಗಿದೆ. ಯೆಹೋವನು ಇದನ್ನು ಕಡೆಗಣಿಸಿದ್ದರೆ, ಆತನ ವಿಶ್ವ ಕುಟುಂಬದ ಸದಸ್ಯರಿಗೆ ಅದು ಯಾವ ರೀತಿಯ ಮಾದರಿಯನ್ನು ಸ್ಥಾಪಿಸುತ್ತಿತ್ತು? ಆತನು ತನ್ನ ಸ್ವಂತ ನೀತಿಯ ಮಟ್ಟಗಳನ್ನು ಕಡೆಗಣಿಸಸಾಧ್ಯವಿರಲಿಲ್ಲ. ನ್ಯಾಯದ ಆವಶ್ಯಕತೆಗಳನ್ನು ಆತನು ಗೌರವಿಸಿದನು. ಒಳಗೊಂಡ ವಿವಾದಾಂಶಗಳೊಂದಿಗೆ ದೇವರು ವ್ಯವಹರಿಸಿದ ವಿಧವನ್ನು ಯಾರೂ ನ್ಯಾಯಸಮ್ಮತವಾಗಿ ಎಂದಿಗೂ ಟೀಕಿಸಸಾಧ್ಯವಿರಲಿಲ್ಲ.—ರೋಮಾಪುರ 3:21-23.
9. ನ್ಯಾಯದ ದೈವಿಕ ಮಟ್ಟಕ್ಕನುಸಾರ, ಯಾವ ರೀತಿಯ ಪ್ರಾಯಶ್ಚಿತ್ತವು ಬೇಕಾಗಿತ್ತು?
9 ಹಾಗಾದರೆ, ಆದಾಮನ ಸಂತಾನದವರಲ್ಲಿ ಯಾರು ಯೆಹೋವನಿಗೆ ಪ್ರೀತಿಯ ವಿಧೇಯತೆಯನ್ನು ಪ್ರದರ್ಶಿಸುವರೊ, ಅಂತಹವರನ್ನು ಬಿಡಿಸಲಿಕ್ಕಾಗಿ ಯೋಗ್ಯವಾದ ಆಧಾರವನ್ನು ಹೇಗೆ ಒದಗಿಸಸಾಧ್ಯವಿತ್ತು? ಪರಿಪೂರ್ಣ ಮಾನವನೊಬ್ಬನು ಯಜ್ಞಾರ್ಪಿತವಾಗಿ ಸಾಯುವಲ್ಲಿ, ನ್ಯಾಯಕ್ಕನುಸಾರ ಆ ಪರಿಪೂರ್ಣ ಜೀವದ ಮೌಲ್ಯವು, ಯಾರು ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನಿಟ್ಟು ಅದನ್ನು ಸ್ವೀಕರಿಸುತ್ತಾರೊ, ಅಂತಹವರ ಪಾಪಗಳನ್ನು ಆವರಿಸಸಾಧ್ಯವಿತ್ತು. ಒಬ್ಬ ಮನುಷ್ಯನಾದ ಆದಾಮನ ಪಾಪವು, ಇಡೀ ಮಾನವ ಕುಟುಂಬವು ಪಾಪಿಗಳಾಗಿ ಪರಿಣಮಿಸುವುದಕ್ಕೆ ಹೊಣೆಯಾಗಿದ್ದದರಿಂದ, ಮತ್ತೊಬ್ಬ ಪರಿಪೂರ್ಣ ಮಾನವನ ಸುರಿಸಲ್ಪಟ್ಟ ರಕ್ತವು ಸರಿಬೀಳುವ ಮೌಲ್ಯದ್ದಾಗಿದ್ದು, ನ್ಯಾಯದ ತಕ್ಕಡಿಗಳನ್ನು ಸಮಗೊಳಿಸಸಾಧ್ಯವಿತ್ತು. (1 ತಿಮೊಥೆಯ 2:5, 6) ಆದರೆ ಅಂತಹ ಒಬ್ಬ ವ್ಯಕ್ತಿಯನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿತ್ತು?
ನಷ್ಟವು ಎಷ್ಟು ಭಾರಿಯಾಗಿತ್ತು?
10. ಬೇಕಾದ ಪ್ರಾಯಶ್ಚಿತ್ತವನ್ನು ಒದಗಿಸಲು ಆದಾಮನ ಸಂತಾನದವರು ಏಕೆ ಅಶಕ್ತರಾಗಿದ್ದರು?
10 ಪಾಪಿಯಾದ ಆದಾಮನ ಸಂತಾನದವರಲ್ಲಿ, ಆದಾಮನು ಕಳೆದುಕೊಂಡಿದ್ದ ಜೀವದ ಪ್ರತೀಕ್ಷೆಗಳನ್ನು ಹಿಂದಿರುಗಿ ಪಡೆಯುವ ಸಲುವಾಗಿ ಬೇಕಾಗಿದ್ದನ್ನು ಯಾರೊಬ್ಬರೂ ಒದಗಿಸಸಾಧ್ಯವಿರಲಿಲ್ಲ. “ಯಾವನಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದೆ ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು. ಮರಣವನ್ನು ತಪ್ಪಿಸಿಕೊಳ್ಳುವದಕ್ಕೆ ಎಷ್ಟು ಹಣ ಕೊಟ್ಟರು ಸಾಲುವದೇ ಇಲ್ಲ.” (ಕೀರ್ತನೆ 49:7-9) ಯಾವ ನಿರೀಕ್ಷೆಯೂ ಇಲ್ಲದೆ ಮಾನವಜಾತಿಯನ್ನು ಬಿಡುವ ಬದಲಿಗೆ, ಸ್ವತಃ ಯೆಹೋವನೇ ದಯಾಭರಿತನಾಗಿ ಏರ್ಪಾಡನ್ನು ಮಾಡಿದನು.
11. ಯೋಗ್ಯವಾದ ಪ್ರಾಯಶ್ಚಿತ್ತಕ್ಕಾಗಿ ಬೇಕಾಗಿದ್ದ ಪರಿಪೂರ್ಣ ಮಾನವ ಜೀವವನ್ನು ಯಾವ ವಿಧಾನದ ಮೂಲಕ ಯೆಹೋವನು ಒದಗಿಸಿದನು?
11 ಯೆಹೋವನು ಒಬ್ಬ ದೇವದೂತನನ್ನು—ಅವನು ಆತ್ಮನೋಪಾದಿ ಜೀವಿಸುತ್ತಿರುವಾಗ, ಅವತರಿಸಿದ ದೇಹವನ್ನು ಬಲಿಕೊಡುವ ಮೂಲಕ ಸತ್ತಂತೆ ನಟಿಸಲು ಭೂಮಿಗೆ ಕಳುಹಿಸಲಿಲ್ಲ. ಬದಲಿಗೆ, ಸೃಷ್ಟಿಕರ್ತನಾದ ದೇವರು ಮಾತ್ರ ಯೋಜಿಸಸಾಧ್ಯವಿದ್ದ ಒಂದು ಅದ್ಭುತಕಾರ್ಯವನ್ನು ಮಾಡುವ ಮೂಲಕ, ಯೆಹೂದ ಗೋತ್ರದ ಹೇಲಿ ಎಂಬಾತನ ಮಗಳಾದ ಮರಿಯಳೆಂಬ ಸ್ತ್ರೀಯ ಗರ್ಭದೊಳಕ್ಕೆ ಒಬ್ಬ ಸ್ವರ್ಗೀಯ ಪುತ್ರನ ಜೀವಶಕ್ತಿ ಮತ್ತು ವ್ಯಕ್ತಿತ್ವದ ರಚನೆಯನ್ನು ಆತನು ಸ್ಥಳಾಂತರಿಸಿದನು. ದೇವರ ಸಕ್ರಿಯ ಶಕ್ತಿಯಾದ ಆತನ ಪವಿತ್ರಾತ್ಮವು, ಮಗುವಿನ ಬೆಳವಣಿಗೆಯನ್ನು ಅದರ ತಾಯಿಯ ಗರ್ಭದಲ್ಲಿ ರಕ್ಷಿಸಿತು, ಮತ್ತು ಅದು ಪರಿಪೂರ್ಣ ಮಾನವನಾಗಿ ಜನಿಸಿತು. (ಲೂಕ 1:35; 1 ಪೇತ್ರ 2:22) ಹಾಗಾದರೆ ಇವನ ವಶದಲ್ಲಿ, ದೈವಿಕ ನ್ಯಾಯದ ಆವಶ್ಯಕತೆಗಳನ್ನು ಪೂರ್ಣವಾಗಿ ನೆರವೇರಿಸುವಂತಹ ಪ್ರಾಯಶ್ಚಿತ್ತವನ್ನು ಒದಗಿಸಲು ಬೇಕಾದ ಕ್ರಯವಿತ್ತು.—ಇಬ್ರಿಯ 10:5.
12. (ಎ) ಯಾವ ಅರ್ಥದಲ್ಲಿ ಯೇಸು ದೇವರ “ಒಬ್ಬನೇ ಮಗ”ನಾಗಿದ್ದಾನೆ? (ಬಿ) ಪ್ರಾಯಶ್ಚಿತ್ತವನ್ನು ಒದಗಿಸಲು ಇವನನ್ನು ದೇವರು ಕಳುಹಿಸಿಕೊಟ್ಟ ಸಂಗತಿಯು, ನಮಗಾಗಿರುವ ಆತನ ಪ್ರೀತಿಯನ್ನು ಹೇಗೆ ಒತ್ತಿಹೇಳುತ್ತದೆ?
12 ಯೆಹೋವನ ಕೋಟ್ಯಂತರ ಸ್ವರ್ಗೀಯ ಪುತ್ರರಲ್ಲಿ ಯಾರಿಗೆ ಆತನು ಈ ನೇಮಕವನ್ನು ಕೊಟ್ಟನು? ಶಾಸ್ತ್ರಗಳಲ್ಲಿ ಆತನ “ಒಬ್ಬನೇ ಮಗ”ನೆಂದು ವರ್ಣಿಸಲ್ಪಟ್ಟ ಪುತ್ರನಿಗೇ. (1 ಯೋಹಾನ 4:9) ಈ ಅಭಿವ್ಯಕ್ತಿಯು, ಅವನು ಒಬ್ಬ ಮಾನವನಾಗಿ ಜನಿಸಿದಾಗ ಏನಾಗಿ ಪರಿಣಮಿಸಿದನೊ ಅದನ್ನು ವರ್ಣಿಸಲಿಕ್ಕಾಗಿ ಅಲ್ಲ, ಅದಕ್ಕೆ ಮುಂಚಿತವಾಗಿ ಸ್ವರ್ಗದಲ್ಲಿ ಅವನು ಯಾರಾಗಿದ್ದನೊ ಅದನ್ನು ವರ್ಣಿಸಲು ಉಪಯೋಗಿಸಲ್ಪಟ್ಟಿದೆ. ಅವನನ್ನು ಮಾತ್ರ ಯೆಹೋವನು ಬೇರೆ ಯಾವ ವ್ಯಕ್ತಿಯ ಸಹಕಾರವಿಲ್ಲದೆ ನೇರವಾಗಿ ಸೃಷ್ಟಿಸಿದನು. ಅವನು ಸಕಲ ಸೃಷ್ಟಿಗೆ ಜ್ಯೇಷ್ಠಪುತ್ರನು. ಇತರ ಎಲ್ಲ ಜೀವಿಗಳನ್ನು ಅಸ್ತಿತ್ವಕ್ಕೆ ತರಲು ದೇವರಿಂದ ಉಪಯೋಗಿಸಲ್ಪಟ್ಟವನು ಅವನೇ. ಆದಾಮನು ದೇವಪುತ್ರನಾಗಿದ್ದಂತೆಯೇ ದೇವದೂತರು ದೇವಪುತ್ರರಾಗಿದ್ದಾರೆ. ಆದರೆ ಯೇಸುವಿಗೆ “ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ” ಇರುವುದಾಗಿ ವರ್ಣಿಸಲಾಗಿದೆ. ಅವನು “ತಂದೆಯ ಎದೆಯಲ್ಲಿ [“ಮಡಿಲಲ್ಲಿ,” NW]ದ್ದಾನೆ” ಎಂಬುದಾಗಿ ಹೇಳಲಾಗಿದೆ. (ಯೋಹಾನ 1:14, 18) ತಂದೆಯೊಂದಿಗಿನ ಅವನ ಸಂಬಂಧವು ನಿಕಟವೂ, ಆಪ್ತವೂ, ಕೋಮಲವೂ ಆದ ಸಂಬಂಧವಾಗಿದೆ. ಮಾನವಜಾತಿಗಾಗಿರುವ ಆತನ ತಂದೆಯ ಪ್ರೀತಿಯಲ್ಲಿ ಅವನು ಸಹಭಾಗಿಯಾಗುತ್ತಾನೆ. ತಂದೆಗೆ ಮಗನ ಕುರಿತು ಹೇಗನಿಸುತ್ತದೆ ಮತ್ತು ಮಗನಿಗೆ ಮಾನವಜಾತಿಯ ಕುರಿತು ಹೇಗನಿಸುತ್ತದೆ ಎಂಬುದನ್ನು ಜ್ಞಾನೋಕ್ತಿ 8:30, 31 ವ್ಯಕ್ತಪಡಿಸುತ್ತದೆ: “ನಾನು [ಯೆಹೋವನ ನಿಪುಣ ಕೆಲಸಗಾರನೂ, ವಿವೇಕದ ವ್ಯಕ್ತೀಕರಣವೂ ಆದ, ಯೇಸು] ಆತನ [ಯೆಹೋವನ] ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.” ಪ್ರಾಯಶ್ಚಿತ್ತವನ್ನು ಒದಗಿಸಲು ದೇವರು ಭೂಮಿಗೆ ಕಳುಹಿಸಿದ್ದು, ಈ ಅತಿ ಅಮೂಲ್ಯನಾದ ಮಗನನ್ನೇ. ಆದುದರಿಂದ, “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು” ಎಂಬ ಯೇಸುವಿನ ಹೇಳಿಕೆಯು ಎಷ್ಟು ಅರ್ಥಗರ್ಭಿತವಾಗಿದೆ!—ಯೋಹಾನ 3:16.
13, 14. ಇಸಾಕನನ್ನು ಅರ್ಪಿಸಲು ಅಬ್ರಹಾಮನು ಮಾಡಿದ ಪ್ರಯತ್ನದ ಕುರಿತಾದ ಬೈಬಲಿನ ದಾಖಲೆಯು, ಯೆಹೋವನು ಮಾಡಿದ ವಿಷಯದ ಕುರಿತು ಏನನ್ನು ಗಣ್ಯಮಾಡುವಂತೆ ನಮಗೆ ಸಹಾಯ ಮಾಡಬೇಕು? (1 ಯೋಹಾನ 4:10)
13 ಈ ವಿಷಯವನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳಲಿಕ್ಕಾಗಿ ನಮಗೆ ಸಹಾಯಮಾಡಲು, ಯೇಸು ಭೂಮಿಗೆ ಬರುವ ಬಹಳ ಸಮಯದ ಮೊದಲು, ಸುಮಾರು 3,890 ವರ್ಷಗಳ ಹಿಂದೆ ದೇವರು ಅಬ್ರಹಾಮನಿಗೆ ಉಪದೇಶಿಸಿದ್ದು: “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು.” (ಆದಿಕಾಂಡ 22:1, 2) ನಂಬಿಕೆಯಿಡುತ್ತಾ ಅಬ್ರಹಾಮನು ವಿಧೇಯನಾದನು. ನಿಮ್ಮನ್ನು ಅಬ್ರಹಾಮನ ಸ್ಥಾನದಲ್ಲಿರಿಸಿಕೊಳ್ಳಿರಿ. ಅದು ನಿಮ್ಮ ಮಗ, ನೀವು ಬಹಳವಾಗಿ ಪ್ರೀತಿಸುವ ಏಕೈಕ ಮಗನಾಗಿರುತ್ತಿದ್ದಲ್ಲಿ ಆಗೇನು? ಸರ್ವಾಂಗಹೋಮಕ್ಕಾಗಿ ನೀವು ಕಟ್ಟಿಗೆಯನ್ನು ತುಂಡುಮಾಡಿದಂತೆ, ಮೊರೀಯ ದೇಶಕ್ಕೆ ಹಲವಾರು ದಿನಗಳ ಸಂಚಾರವನ್ನು ಮಾಡಿದಂತೆ, ಮತ್ತು ನಿಮ್ಮ ಮಗನನ್ನು ವೇದಿಯ ಮೇಲೆ ಇರಿಸಿದಂತೆ ನಿಮಗಾಗುವ ಅನಿಸಿಕೆಗಳಾವುವು?
14 ಒಬ್ಬ ಸಹಾನುಭೂತಿಯುಳ್ಳ ಹೆತ್ತವನಿಗೆ ಇಂತಹ ಅನಿಸಿಕೆಗಳಿರುವುದೇಕೆ? ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನೆಂದು ಆದಿಕಾಂಡ 1:27 ಹೇಳುತ್ತದೆ. ಪ್ರೀತಿ ಮತ್ತು ಸಹಾನುಭೂತಿಯ ನಮ್ಮ ಅನಿಸಿಕೆಗಳು ಬಹಳ ಸೀಮಿತವಾದ ವಿಧದಲ್ಲಿ ಯೆಹೋವನ ಸ್ವಂತ ಪ್ರೀತಿ ಮತ್ತು ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತವೆ. ಅಬ್ರಹಾಮನ ವಿಷಯದಲ್ಲಿ ದೇವರು ಹಸ್ತಕ್ಷೇಪಮಾಡಿದನು, ಹೀಗೆ ಇಸಾಕನು ನಿಜವಾಗಿಯೂ ಬಲಿಯಾಗಿ ಅರ್ಪಿಸಲ್ಪಡಲಿಲ್ಲ. (ಆದಿಕಾಂಡ 22:12, 13; ಇಬ್ರಿಯ 11:17-19) ಆದರೆ, ತನ್ನ ಸ್ವಂತ ವಿಷಯದಲ್ಲಿ, ಯೆಹೋವನು ತನಗೂ ತನ್ನ ಮಗನಿಗೂ ಅದು ಭಾರಿಯಾದ ನಷ್ಟವನ್ನು ತಂದಿತಾದರೂ, ಪ್ರಾಯಶ್ಚಿತ್ತವನ್ನು ಒದಗಿಸುವುದರಿಂದ ತಡೆಯಲಿಲ್ಲ. ಏನನ್ನು ಮಾಡಲಾಯಿತೊ ಅದು ದೇವರ ವತಿಯಿಂದ ಯಾವುದೇ ಹಂಗಿನ ಕಾರಣದಿಂದಲ್ಲ, ಬದಲಿಗೆ ಅಸಾಧಾರಣವಾದ ಅಪಾತ್ರ ದಯೆಯ ಒಂದು ಅಭಿವ್ಯಕ್ತಿಯೋಪಾದಿ ಮಾಡಲಾಯಿತು. ನಾವು ಅದನ್ನು ಪೂರ್ಣವಾಗಿ ಗಣ್ಯಮಾಡುತ್ತೇವೊ?—ಇಬ್ರಿಯ 2:9.
ಅದು ಸಾಧ್ಯವನ್ನಾಗಿ ಮಾಡುವ ಸಂಗತಿ
15. ಈ ಪ್ರಚಲಿತ ವಿಷಯಗಳ ವ್ಯವಸ್ಥೆಯಲ್ಲೂ ಪ್ರಾಯಶ್ಚಿತ್ತವು ಜೀವಗಳನ್ನು ಹೇಗೆ ಪ್ರಭಾವಿಸಿದೆ?
15 ದೇವರಿಂದ ಮಾಡಲ್ಪಟ್ಟ ಆ ಪ್ರೀತಿಯ ಏರ್ಪಾಡಿಗೆ, ಯಾರು ಅದನ್ನು ನಂಬಿಕೆಯಲ್ಲಿ ಸ್ವೀಕರಿಸುತ್ತಾರೊ ಅವರ ಜೀವಿತಗಳ ಮೇಲೆ ಗಾಢವಾದ ಪ್ರಭಾವವಿರುತ್ತದೆ. ಅವರು ಈ ಹಿಂದೆ ಪಾಪದ ಕಾರಣ ದೇವರಿಂದ ದೂರವಾಗಿದ್ದರು. ಅವರು, ಆತನ ವಾಕ್ಯವು ಹೇಳುವಂತೆ, ‘ವೈರಿಗಳಾಗಿದ್ದರು ಏಕೆಂದರೆ ಅವರ ಮನಸ್ಸುಗಳು ದುಷ್ಟಕಾರ್ಯಗಳ ಮೇಲಿದ್ದವು.’ (ಕೊಲೊಸ್ಸೆ 1:21-23) ಆದರೆ ಅವರು “ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನ”ದಿಂದಿದ್ದಾರೆ. (ರೋಮಾಪುರ 5:8-10) ತಮ್ಮ ಜೀವನ ಮಾರ್ಗವನ್ನು ಬದಲಾಯಿಸಿಕೊಂಡು, ಕ್ರಿಸ್ತನ ಬಲಿಯಲ್ಲಿ ನಂಬಿಕೆಯನ್ನಿಡುವವರಿಗೆ ದೇವರು ಸಾಧ್ಯಮಾಡುವ ಕ್ಷಮಾಪಣೆಯನ್ನು ಸ್ವೀಕರಿಸಿಕೊಂಡ ಕಾರಣ, ಅವರಿಗೆ ಶುದ್ಧವಾದ ಮನಸ್ಸಾಕ್ಷಿಯು ಅನುಗ್ರಹಿಸಲ್ಪಟ್ಟಿದೆ.—ಇಬ್ರಿಯ 9:14; 1 ಪೇತ್ರ 3:21.
16. ಪ್ರಾಯಶ್ಚಿತ್ತದಲ್ಲಿ ತಮ್ಮ ನಂಬಿಕೆಯ ಕಾರಣ, ಚಿಕ್ಕ ಹಿಂಡಿಗೆ ಯಾವ ಆಶೀರ್ವಾದಗಳು ದಯಪಾಲಿಸಲ್ಪಟ್ಟಿವೆ?
16 ಯೆಹೋವನು ಇವರಲ್ಲಿ ಒಂದು ಸೀಮಿತ ಸಂಖ್ಯೆಗೆ, ಒಂದು ಚಿಕ್ಕ ಹಿಂಡಿಗೆ, ಭೂಮಿಗಾಗಿರುವ ತನ್ನ ಮೂಲ ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ನೋಟದಿಂದ, ಸ್ವರ್ಗೀಯ ರಾಜ್ಯದಲ್ಲಿ ಆತನ ಮಗನೊಂದಿಗೆ ಜತೆಗೂಡಿರುವ ಅಪಾತ್ರ ಅನುಗ್ರಹವನ್ನು ನೀಡಿದ್ದಾನೆ. (ಲೂಕ 12:32) ಇವರನ್ನು ‘ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಕೊಂಡುಕೊಂಡು . . . ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಲಾಗಿದೆ; ಅವರು ಭೂಮಿಯ ಮೇಲೆ ಆಳುವರು.’ (ಪ್ರಕಟನೆ 5:9, 10) ಇವರಿಗೆ ಅಪೊಸ್ತಲ ಪೌಲನು ಬರೆದುದು: “ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ, ಎಂದು ಕೂಗುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು.” (ರೋಮಾಪುರ 8:15-17) ದೇವರಿಂದ ಆತನ ಪುತ್ರರಂತೆ ದತ್ತುಸ್ವೀಕರಿಸಲ್ಪಟ್ಟಿರುವುದರಲ್ಲಿ, ಆದಾಮನು ಕಳೆದುಕೊಂಡ ಆ ಆದರದ ಸಂಬಂಧವು ಅವರಿಗೆ ದಯಪಾಲಿಸಲಾಗುತ್ತದೆ; ಆದರೆ ಈ ಪುತ್ರರಿಗೆ, ಆದಾಮನು ಎಂದೂ ಪಡೆಯದೇ ಇದ್ದಂತಹ ಸ್ವರ್ಗೀಯ ಸೇವೆಯ ಹೆಚ್ಚಿನ ಸುಯೋಗಗಳು ದಯಪಾಲಿಸಲ್ಪಡುವವು. “ದೇವರ ಮಕ್ಕಳೆಂಬ ಹೆಸರನ್ನು ನಮಗೆ ಕೊಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ನೋಡಿರಿ” ಎಂದು ಅಪೊಸ್ತಲ ಯೋಹಾನನು ಹೇಳಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! (1 ಯೋಹಾನ 3:1) ಇಂತಹವರಿಗೆ ದೇವರು ತತ್ವಾಧಾರಿತ ಪ್ರೀತಿ (ಅಗಾಪೆ)ಯನ್ನು ಮಾತ್ರವಲ್ಲ, ಕೋಮಲವಾದ ಮಮತೆ (ಫಿಲಿಯಾ)ಯನ್ನೂ ವ್ಯಕ್ತಪಡಿಸುತ್ತಾನೆ. ಅದು ಯಥಾರ್ಥ ಮಿತ್ರರ ನಡುವೆ ಇರುವ ಬಂಧದ ವೈಶಿಷ್ಟ್ಯವಾಗಿದೆ.—ಯೋಹಾನ 16:27.
17. (ಎ) ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನಿಡುವ ಎಲ್ಲರಿಗೆ, ಯಾವ ಅವಕಾಶವು ಕೊಡಲ್ಪಟ್ಟಿದೆ? (ಬಿ) ಅವರಿಗೆ “ದೇವರ ಮಕ್ಕಳ ಮಹಿಮಾಭರಿತ ಬಿಡುಗಡೆಯು” ಏನನ್ನು ಅರ್ಥೈಸುವುದು?
17 ಇತರರಿಗೂ—ಯೇಸು ಕ್ರಿಸ್ತನ ಮುಖಾಂತರ ಜೀವಕ್ಕಾಗಿರುವ ದೇವರ ಉದಾರವಾದ ಏರ್ಪಾಡಿನಲ್ಲಿ ನಂಬಿಕೆಯನ್ನಿಡುವವರೆಲ್ಲರಿಗೆ—ಆದಾಮನು ಕಳೆದುಕೊಂಡ ಆ ಅಮೂಲ್ಯವಾದ ಸಂಬಂಧವನ್ನು ಪಡೆದುಕೊಳ್ಳುವ ಅವಕಾಶವನ್ನು ಯೆಹೋವನು ತೆರೆಯುತ್ತಾನೆ. ಅಪೊಸ್ತಲ ಪೌಲನು ವಿವರಿಸಿದ್ದು: “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು [ಅಂದರೆ, ಸ್ವರ್ಗೀಯ ರಾಜ್ಯದ ಕ್ರಿಸ್ತನೊಂದಿಗೆ ಬಾಧ್ಯಸ್ಥರಾಗಿರುವ ದೇವಪುತ್ರರು, ಮಾನವಜಾತಿಯ ಪರವಾಗಿ ಸಕಾರಾತ್ಮಕ ಕ್ರಿಯೆಯನ್ನು ಗೈಯುತ್ತಿದ್ದಾರೆಂಬುದು ಸ್ಪಷ್ಟವಾಗಿ ವ್ಯಕ್ತವಾಗುವ ಸಮಯಕ್ಕಾಗಿ ಅವರು ಕಾಯುತ್ತಾರೆ] ಜಗತ್ತು [ಆದಾಮನಿಂದ ಬಂದ ಮಾನವ ಸೃಷ್ಟಿ] ಬಹು ಲವಲವಿಕೆಯಿಂದ ಎದುರು ನೋಡುತ್ತಿರುವದು. ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; [ಅವರು ಮರಣದ ಪ್ರತೀಕ್ಷೆಯೊಂದಿಗೆ ಪಾಪದಲ್ಲಿ ಜನಿಸಿದರು, ಮತ್ತು ತಮ್ಮನ್ನು ತಾವೇ ಬಿಡಿಸಿಕೊಳ್ಳುವ ಯಾವ ಮಾರ್ಗವೂ ಇರಲಿಲ್ಲ] ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; [ದೇವರಿಂದ ಕೊಡಲ್ಪಟ್ಟದ್ದು] ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” (ರೋಮಾಪುರ 8:19-21) ಆ ಬಿಡುಗಡೆಯು ಏನನ್ನು ಅರ್ಥೈಸುವುದು? ಅವರು ಪಾಪ ಮತ್ತು ಮರಣದ ದಾಸತ್ವದಿಂದ ಸ್ವತಂತ್ರರಾಗಿದ್ದಾರೆ ಎಂಬುದನ್ನು ಅದು ಅರ್ಥೈಸುವುದು. ಅವರಿಗೆ ಮನಸ್ಸು ಮತ್ತು ದೇಹದ ಪರಿಪೂರ್ಣತೆ ಹಾಗೂ ಅವರ ಮನೆಯಾಗಿ ಪ್ರಮೋದವನವಿರುವುದು. ಮತ್ತು ತಮ್ಮ ಪರಿಪೂರ್ಣತೆಯನ್ನು ಅನುಭವಿಸಿ, ಒಬ್ಬನೇ ಸತ್ಯ ದೇವರಾಗಿರುವ ಯೆಹೋವನಿಗೆ ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲು ಅನಂತ ಜೀವನವು ಇರುವುದು. ಇದೆಲ್ಲವೂ ಸಾಧ್ಯಗೊಳಿಸಲ್ಪಟ್ಟದ್ದು ಹೇಗೆ? ದೇವರ ಏಕಜಾತ ಪುತ್ರನ ಪ್ರಾಯಶ್ಚಿತ್ತ ಬಲಿಯ ಮೂಲಕವೇ.
18. ಮಾರ್ಚ್ 23ರಂದು ಸೂರ್ಯಾಸ್ತಮಾನದ ನಂತರ, ನಾವು ಏನು ಮಾಡುತ್ತಿರುವೆವು, ಮತ್ತು ಏಕೆ?
18 ಸಾ.ಶ. 33, ನೈಸಾನ್ 14ರಂದು, ಯೆರೂಸಲೇಮಿನಲ್ಲಿರುವ ಮೇಲಿನ ಕೋಣೆಯೊಂದರಲ್ಲಿ, ಯೇಸು ತನ್ನ ಮರಣದ ಜ್ಞಾಪಕವನ್ನು ಸ್ಥಾಪಿಸಿದನು. ಅವನ ಮರಣದ ವಾರ್ಷಿಕ ಜ್ಞಾಪಕಾಚರಣೆಯು ಎಲ್ಲ ಸತ್ಯ ಕ್ರೈಸ್ತರ ಜೀವಿತಗಳಲ್ಲಿ ಒಂದು ಪ್ರಾಮುಖ್ಯವಾದ ಘಟನೆಯಾಗಿದೆ. ಯೇಸು ಸ್ವತಃ ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಇಸವಿ 1997ರಲ್ಲಿ ಜ್ಞಾಪಕಾಚರಣೆಯು, ಮಾರ್ಚ್ 23ರಂದು (ಆ ದಿನ ನೈಸಾನ್ 14 ಆರಂಭಿಸುತ್ತದೆ) ಸೂರ್ಯಾಸ್ತಮಾನದ ನಂತರ ನಡೆಸಲ್ಪಡುವುದು. ಆ ದಿನದಂದು, ಈ ಜ್ಞಾಪಕಾಚರಣೆಯ ಸಂದರ್ಭಕ್ಕಾಗಿ ಉಪಸ್ಥಿತರಾಗಿರುವುದಕ್ಕಿಂತ ಹೆಚ್ಚು ಪ್ರಾಮುಖ್ಯವಾದ ವಿಷಯವಿರಲು ಸಾಧ್ಯವಿಲ್ಲ.
ನೀವು ಹೇಗೆ ಉತ್ತರಿಸುವಿರಿ?
◻ ಯಾವ ವಿಧಗಳಲ್ಲಿ ದೇವರು ಮಾನವಜಾತಿಗೆ ಹೇರಳವಾದ ಪ್ರೀತಿಯನ್ನು ತೋರಿಸಿದ್ದಾನೆ?
◻ ಆದಾಮನ ಸಂತಾನದವರಿಗೆ ಪ್ರಾಯಶ್ಚಿತ್ತವನ್ನು ಒದಗಿಸಲು ಪರಿಪೂರ್ಣ ಮಾನವ ಜೀವವು ಏಕೆ ಬೇಕಿತ್ತು?
◻ ಯಾವ ಭಾರಿ ನಷ್ಟದೊಂದಿಗೆ ಯೆಹೋವನು ಪ್ರಾಯಶ್ಚಿತ್ತವನ್ನು ಒದಗಿಸಿದನು?
◻ ಪ್ರಾಯಶ್ಚಿತ್ತವು ಯಾವುದನ್ನು ಸಾಧ್ಯಗೊಳಿಸುತ್ತದೆ?
[ಪುಟ 10 ರಲ್ಲಿರುವ ಚಿತ್ರ]
ದೇವರು ತನ್ನ ಒಬ್ಬನೇ ಮಗನನ್ನು ಕೊಟ್ಟನು