ಪೂರ್ವಾದೃಷ್ಟವು ದೇವರ ಪ್ರೀತಿಗೆ ಹೊಂದಿಕೆಯಾಗಿರಬಲ್ಲದೊ?
“ನಾವು ಪೂರ್ವಾದೃಷ್ಟವನು ದೇವರ ಅನಂತಕಾಲದ ಯೋಜನೆಯಾಗಿ ವಿಶದಪಡಿಸುತ್ತೇವೆ, ಅದರ ಮೂಲಕ ಪ್ರತಿಯೊಬ್ಬ ಮನುಷ್ಯನೊಂದಿಗೆ ತಾನು ಏನು ಮಾಡಬಯಸುತ್ತಾನೊ ಅದನ್ನು ಆತನು ನಿರ್ಧರಿಸಿದ್ದಾನೆ. ಯಾಕಂದರೆ ಆತನು ಎಲ್ಲರನ್ನು ಒಂದೇ ಪರಿಸ್ಥಿತಿಯಲ್ಲಿ ಉಂಟುಮಾಡಲಿಲ್ಲ, ಬದಲಾಗಿ ಕೆಲವರನ್ನು ನಿತ್ಯಜೀವಕ್ಕೂ ಇತರರನ್ನು ನಿತ್ಯಶಾಪಕ್ಕೂ ಪೂರ್ವನೇಮಕ ಮಾಡುತ್ತಾನೆ.”
ಹೀಗೆಂದು ಪ್ರಾಟೆಸ್ಟಂಟ್ ಮತಸುಧಾರಕ ಜಾನ್ ಕ್ಯಾಲ್ವಿನ್, ಇನ್ಸ್ಟಿಟ್ಯೂಟ್ ಆಫ್ ದ ಕ್ರಿಶ್ಚನ್ ರಿಲಿಜನ್ ಎಂಬ ಪುಸ್ತಕದಲ್ಲಿ ತನ್ನ ಪೂರ್ವಾದೃಷ್ಟದ ಕಲ್ಪನೆಯನ್ನು ವಿಶದಗೊಳಿಸಿದನು. ಈ ಕಲ್ಪನೆಯು ದೇವರು ಸರ್ವಗ್ರಾಹಿಯೂ ಮತ್ತು ಆತನ ಸೃಷ್ಟಿಜೀವಿಗಳ ಕೃತ್ಯಗಳು ಆತನ ಉದ್ದೇಶಗಳನ್ನು ಅಯುಕ್ತವೆಂದು ಸಂದೇಹಿಸಲು ಸಾಧ್ಯವಿಲ್ಲ ಅಥವಾ ಆತನು ಬದಲಾವಣೆಗಳನ್ನು ಮಾಡುವಂತೆ ಬದ್ಧಪಡಿಸಲಾರವು ಎಂಬುದರ ಮೇಲೆ ಆಧಾರಿಸಿರುತ್ತದೆ.
ಆದರೆ ದೇವರ ಕುರಿತು ಬೈಬಲು ಕೊಡುವ ಅಭಿಪ್ರಾಯವು ನಿಜವಾಗಿ ಇದೆ ಆಗಿದೆಯೋ? ಅಧಿಕ ಪ್ರಾಮುಖ್ಯವಾಗಿ, ಅಂತಹ ಒಂದು ಸ್ಪಷ್ಟೀಕರಣವು ದೇವರ ಗುಣಗಳಿಗೆ, ವಿಶೇಷವಾಗಿ ಆತನ ಪ್ರಾಮುಖ್ಯ ಗುಣವಾದ—ಪ್ರೀತಿಗೆ ಹೊಂದಿಕೆಯಾಗಿದೆಯೆ?
ಭವಿಷ್ಯವನ್ನು ಮುಂತಿಳಿಸಲು ಶಕ್ತನಾದ ಒಬ್ಬ ದೇವರು
ದೇವರು ಭವಿಷ್ಯವನ್ನು ಮುಂತಿಳಿಸಶಕ್ತನು. ಆತನು ತನ್ನನ್ನು, “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ” ಎಂದು ವರ್ಣಿಸಿಕೊಳ್ಳುತ್ತಾನೆ. (ಯೆಶಾಯ 46:10) ಮಾನವ ಇತಿಹಾಸದಲ್ಲೆಲ್ಲಾ, ದೇವರು ತನ್ನ ಪ್ರವಾದನೆಗಳನ್ನು ದಾಖಲೆಮಾಡಿಟ್ಟು, ಘಟನೆಗಳು ಸಂಭವಿಸುವ ಮುಂಚೆಯೆ ತನ್ನ ಮುನ್ನರಿವನ್ನು ಬಳಸಿ ಅವನ್ನು ಮುಂತಿಳಿಸಶಕ್ತನೆಂದು ತೋರಿಸಿದ್ದಾನೆ.
ಹೀಗೆ, ಬಾಬೆಲಿನ ಅರಸ ಬೇಲ್ಶಚ್ಚರನ ಕಾಲದಲ್ಲಿ, ಪ್ರವಾದಿಯಾದ ದಾನಿಯೇಲನಿಗೆ, ಒಂದು ಇನ್ನೊಂದನ್ನು ಅತಿಕ್ರಮಿಸುತ್ತಿದ್ದ ಎರಡು ಮೃಗಗಳ ಕುರಿತ ಕನಸು ಬಿದ್ದಾಗ, ಯೆಹೋವ ದೇವರು ಅವನಿಗೆ ಅದರ ಅರ್ಥವನ್ನು ತಿಳಿಸಿದನು: “ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ. ಆ ಹೋತವು ಗ್ರೀಕ್ ರಾಜ್ಯ.” (ದಾನಿಯೇಲ 8:20, 21) ದೇವರು ಲೋಕಶಕ್ತಿಗಳ ಅನುಕ್ರಮವನ್ನು ಪ್ರಕಟಪಡಿಸಲಿಕ್ಕಾಗಿ ತನ್ನ ಮುನ್ನರಿವನ್ನು ಬಳಸಿದನೆಂಬದು ಸ್ಪಷ್ಟ. ಆಗ ಪ್ರಾಧಾನ್ಯದಲ್ಲಿದ್ದ ಬಬಿಲೋನ್ ಸಾಮ್ರಾಜ್ಯವು ಮೇದ್ಯ ಪಾರಸಿಯದಿಂದ ಮತ್ತು ಅನಂತರ ಗ್ರೀಸ್ನಿಂದ ಸ್ಥಾನಪಲ್ಲಟವನ್ನು ಪಡೆಯಲಿತ್ತು.
ಪ್ರವಾದನೆಗಳು ಏಕ ವ್ಯಕ್ತಿಗೂ ಸಂಬಂಧಿಸಬಲ್ಲವು. ಉದಾಹರಣೆಗಾಗಿ, ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಹುಟ್ಟಲಿರುವನೆಂದು ಪ್ರವಾದಿಯಾದ ಮೀಕನು ಘೋಷಿಸಿದನು. (ಮೀಕ 5:2) ಪುನಃ ಈ ಸಂದರ್ಭದಲ್ಲಿ, ದೇವರು ತನ್ನ ಮುನ್ನರಿವನ್ನು ಪ್ರಯೋಗಿಸಿದನು. ಆದರೂ, ಈ ಘಟನೆಯು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ—ಮೆಸ್ಸೀಯನ ಗುರುತುಪಡಿಸುವಿಕೆಗಾಗಿ ಪ್ರಕಟಿಸಲ್ಪಟ್ಟಿತು. ಈ ಉದಾಹರಣೆಯು, ಪ್ರತಿಯೊಬ್ಬ ವ್ಯಕ್ತಿಯನ್ನು ಒಳಗೂಡಿಸುವ ಪೂರ್ವಾದೃಷ್ಟದ ಬೋಧನೆಯ ಒಂದು ಸಾಮಾನ್ಯೀಕರಣನವನ್ನು ಸಮರ್ಥಿಸುವುದಿಲ್ಲ.
ವ್ಯತಿರಿಕ್ತವಾಗಿ, ದೇವರು ಅಂತ್ಯಫಲವನ್ನು ಮುನ್ನರಿಯಲಿಕ್ಕೆ ಆರಿಸಿಕೊಳ್ಳದ ಸನ್ನಿವೇಶಗಳೂ ಇವೆ ಎಂದು ಶಾಸ್ತ್ರಗಳು ಪ್ರಕಟಿಸುತ್ತವೆ. ಸೊದೋಮ್ ಮತ್ತು ಗೊಮೋರಗಳ ನಾಶನಕ್ಕೆ ತುಸು ಮುಂಚಿತವಾಗಿ, ಆತನು ಘೋಷಿಸಿದ್ದು: “ನಾನು ಇಳಿದುಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ.” (ಆದಿಕಾಂಡ 18:21) ಅವನು ವಿಷಯಗಳನ್ನು ಪರೀಕ್ಷಿಸುವ ಮುಂಚೆ ಆ ಶಹರಗಳ ದುಷ್ಟತನದ ವೈಶಾಲ್ಯವನ್ನು ದೇವರು ಮುಂತಿಳಿದಿರಲಿಲ್ಲ ಎಂದು ಈ ವಚನ ಸ್ಪಷ್ಟವಾಗಿಗಿ ನಮಗೆ ತೋರಿಸುತ್ತದೆ.
ದೇವರು ನಿರ್ದಿಷ್ಟ ಘಟನೆಗಳನ್ನು ಮುನ್ನರಿಯಬಲ್ಲನು ನಿಜ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ತನ್ನ ಮುನ್ನರಿವನ್ನು ಪ್ರಯೋಗಿಸದೆ ಇರಲು ಆತನು ಆರಿಸಿಕೊಂಡಿದ್ದಾನೆ. ಯಾಕಂದರೆ ದೇವರು ಸರ್ವಶಕ್ತನಾಗಿದ್ದಾನೆ, ಆತನು ತನ್ನ ಸಾಮರ್ಥ್ಯಗಳನ್ನು ಅಸಂಪೂರ್ಣ ಮಾನವರ ಇಚ್ಛೆಗಳಿಗೆ ಅನುಗುಣವಾಗಿ ಅಲ್ಲ, ತಾನು ಇಚ್ಛಿಸುವ ಮೇರೆಗೆ ಬಳಸಲು ಸ್ವತಂತ್ರನಾಗಿರುತ್ತಾನೆ.
ವಿಷಯಗಳನ್ನು ಸರಿಪಡಿಸಬಲ್ಲ ಒಬ್ಬ ದೇವರು
ಕ್ಯಾಲ್ವಿನ್ ಹೇಳಿದಂತೆ, ದೇವರು ತನ್ನ ಸೃಷ್ಟಿಕ್ರಿಯೆಗೆ ಮುಂಚೆಯೆ ಮನುಷ್ಯನ ಪತನವನ್ನು ಪೂರ್ವನಿರ್ಧರಿಸಿದನೆಂತಲೂ ಮತ್ತು ಆ ಪತನಕ್ಕೆ ಮುಂಚೆ ಆತನು ‘ಆದುಕೊಂಡವರ’ ಪೂರ್ವಾದೃಷ್ಟವನ್ನು ಮಾಡಿದ್ದನೆಂತಲೂ ಕೆಲವರು ಹೇಳುತ್ತಾರೆ. ಆದರೆ ಇದು ಸತ್ಯವಾಗಿದ್ದರೆ, ಆದಾಮ ಮತ್ತು ಹವ್ವರಿಗೆ ನಿತ್ಯಜೀವದ ಪ್ರತೀಕ್ಷೆಯನ್ನು, ಅವರದನ್ನು ಸಿದ್ಧಿಸಿಕೊಳ್ಳಲು ಶಕ್ತರಾಗಿಲವ್ಲೆಂಬ ಪೂರ್ಣ ಅರಿವಿದ್ದರೂ ಅದನ್ನು ನೀಡಿದ್ದು, ದೇವರ ವಿಷಯದಲ್ಲಿ ಕಪಟತನವಾಗದಿರುತ್ತಿತ್ತೆ? ಅದಲ್ಲದೆ, ಮೊದಲನೆಯ ಮಾನವ ದಂಪತಿಗಳಿಗೆ ದೈವಿಕ ಮಾರ್ಗದರ್ಶನಗಳನ್ನು ಪಾಲಿಸಿ ಸದಾ ಜೀವಿಸುವುದು ಇಲ್ಲವೆ ಅವನ್ನು ತಿರಸ್ಕರಿಸಿ ಸಾಯುವುದು, ಎಂಬ ಒಂದು ಆಯ್ಕೆಯು ಕೊಡಲ್ಪಟ್ಟಿತೆಂಬದನ್ನು ಶಾಸ್ತ್ರಗಳು ಎಲ್ಲಿಯೂ ಅಲ್ಲಗಳೆಯುವುದಿಲ್ಲ.—ಆದಿಕಾಂಡ, ಅಧ್ಯಾಯ 2.
ಆದರೆ ಆದಾಮ ಮತ್ತು ಹವ್ವರ ಪಾಪವು ನಿಜವಾಗಿ ದೇವರ ಉದ್ದೇಶವನ್ನು ಭಂಗಪಡಿಸಿತೊ? ಇಲ್ಲ, ಯಾಕಂದರೆ ಅವರು ಪಾಪಗೈದ ಬಳಿಕ, ಕೂಡಲೆ ಸೈತಾನನನ್ನೂ ಅವನ ಕಾರ್ಯಭಾರಿಗಳನ್ನೂ ನಾಶಗೊಳಿಸಲಿಕ್ಕಾಗಿ ತಾನೊಂದು “ಸಂತಾನ” ವನ್ನು ಉತ್ಪಾದಿಸುವೆನೆಂದೂ ಮತ್ತು ಭೂಮಿಯ ಮೇಲೆ ಸಂಗತಿಗಳನ್ನು ಪುನಃ ಸರಿಪಡಿಸುವೆನೆಂದೂ ದೇವರು ಘೋಷಿಸಿದನು. ಹೇಗೆ ಕೆಲವೆ ಕೀಟಗಳು ಒಬ್ಬ ತೋಟಗಾರನನ್ನು ಹೇರಳ ಫಲವನ್ನು ಬೆಳೆಯಿಸುವುದರಿಂದ ತಡೆಯಲಾರವೊ, ಹಾಗೆ ಆದಾಮ ಮತ್ತು ಹವ್ವರ ಅವಿಧೇಯತೆಯು ದೇವರು ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡುವುದರಿಂದ ತಡೆಯದು.—ಆದಿಕಾಂಡ, ಅಧ್ಯಾಯ 3.
ತದನಂತರ ದೇವರು, ಅರಸ ದಾವೀದನ ಸಂತತಿಯವನಾದ ಒಬ್ಬನಿಗೆ ವಹಿಸಲ್ಪಡುವ ಒಂದು ರಾಜ್ಯ ಸರಕಾರವಿರುವುದೆಂದೂ ಮತ್ತು ಇತರರು ಈ ರಾಜ್ಯದಲ್ಲಿ ಸಹಭಾಗಿಗಳಾಗಿರುವರೆಂದೂ ಪ್ರಕಟಿಸಿದನು. ಈ ಇತರರನ್ನು “ಪರಾತ್ಪರನ ಭಕ್ತರು [ಪವಿತ್ರ ಜನರು, NW]” ಎಂದು ಕರೆಯಲಾಗಿದೆ.—ದಾನಿಯೇಲ 7:18; 2 ಸಮುವೇಲ 7:12; 1 ಪೂರ್ವಕಾಲವೃತ್ತಾಂತ 17:11.a
ಮುಂತಿಳಿಸುವುದೆಂದರೆ ಪೂರ್ವನಿರ್ಣಯಿಸುವುದಲ್ಲ
ಮಾನವಕುಲವು ಯಾವ ಮಾರ್ಗವನ್ನು ತೆಗೆದುಕೊಳ್ಳುವುದೆಂದು ತಿಳಿಯಲು ದೇವರು ಆರಿಸಿಕೊಳ್ಳದೆ ಇದ್ದ ನಿಜತ್ವವು, ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕ್ರಿಯೆಗಳ ಫಲಿತಾಂಶಗಳನ್ನು ಪ್ರವಾದಿಸುವುದರಿಂದ ಅವನನ್ನು ತಡೆಯಲಿಲ್ಲ. ವಾಹನ ಚಾಲಕನನ್ನು ಆತನ ವಾಹನದ ನ್ಯೂನ ಸ್ಥಿತಿಯ ಕುರಿತು ಎಚ್ಚರಿಸುವ ಒಬ್ಬ ಮೋಟಾರ್ ಯಂತ್ರಕರ್ಮಿಯನ್ನು, ಒಂದು ಅಪಘಾತವು ಸಂಭವಿಸುವಲ್ಲಿ ಜವಾಬ್ದಾರನನ್ನಾಗಿ ಹಿಡಿಯಸಾಧ್ಯವಿಲ್ಲ ಅಥವಾ ಅವನದನ್ನು ಪೂರ್ವನಿರ್ಣಯಿಸಿದನೆಂದು ದೂರಸಾಧ್ಯವಿಲ್ಲ. ತದ್ರೀತಿಯಲ್ಲಿ, ವ್ಯಕ್ತಿಗಳ ಕೃತ್ಯಗಳ ಶೋಚನೀಯ ಫಲಿತಾಂಶಗಳನ್ನು ದೇವರು ಪೂರ್ವನಿರ್ಣಯಿಸಿದನೆಂದು ಆಪಾದಿಸಲು ಸಾಧ್ಯವಿರುವುದಿಲ್ಲ.
ಮೊದಲನೆಯ ಮಾನವ ದಂಪತಿಗಳ ಸಂತತಿಯವರ ವಿಷಯದಲ್ಲೂ ಇದೇ ಸತ್ಯವಾಯಿತು. ಕಾಯಿನನು ತನ್ನ ತಮ್ಮನನ್ನು ಕೊಲ್ಲುವ ಮುಂಚಿತವಾಗಿ ಯೆಹೋವನು ಕಾಯಿನನ ಮುಂದೆ ಒಂದು ಆಯ್ಕೆಯನ್ನು ಇಟ್ಟನು. ಅವನು ಪಾಪವನ್ನು ಸೋಲಿಸುವನೊ, ಇಲ್ಲವೆ ಪಾಪವು ಅವನನ್ನು ಸೋಲಿಸುವುದೊ? ಕಾಯಿನನು ಒಂದು ಕೆಟ್ಟದಾದ ಆಯ್ಕೆಯನ್ನು ಮಾಡಿ ತನ್ನ ತಮ್ಮನನ್ನು ಕೊಂದುಹಾಕುವಂತೆ ಯೆಹೋವನು ಪೂರ್ವನಿರ್ಣಯಿಸಿದನೆಂದು ವೃತ್ತಾಂತದಲ್ಲಿ ಯಾವುದೂ ಸೂಚಿಸುವುದಿಲ್ಲ.—ಆದಿಕಾಂಡ 4:3-7.
ತದನಂತರ, ಉದಾಹರಣೆಗಾಗಿ, ಮೋಶೆಯ ನಿಯಮವು ಇಸ್ರಾಯೇಲ್ಯರಿಗೆ, ಅವರು ವಿಧರ್ಮಿ ದೇಶಗಳವರಿಂದ ಪತ್ನಿಯರನ್ನು ತೆಗೆದುಕೊಳ್ಳುವ ಮೂಲಕ ಯೆಹೋವನಿಂದ ದೂರತೊಲಗಿದರೆ ಏನು ಸಂಭವಿಸುವುದೆಂಬುದರ ಕುರಿತು ಎಚ್ಚರಿಸಿತು. ಏನು ಮುಂತಿಳಿಸಲ್ಪಟ್ಟಿತೊ ಅದು ಸಂಭವಿಸಿತು. ಯಾರು ತನ್ನ ಮುದೀ ಪ್ರಾಯದಲ್ಲಿ ಮೂರ್ತಿಪೂಜೆ ಮಾಡುವಂತೆ ಅವನ ವಿದೇಶೀ ಪತ್ನಿಯರಿಂದ ಪ್ರಭಾವಿಸಲ್ಪಟ್ಟನೊ ಆ ಅರಸ ಸೊಲೊಮೋನನ ಉದಾಹರಣೆಯಿಂದ ಇದನ್ನು ಕಾಣಸಾಧ್ಯವಿದೆ. (1 ಅರಸುಗಳು 11:7, 8) ಹೌದು, ದೇವರು ತನ್ನ ಜನರನ್ನು ಎಚ್ಚರಿಸಿದನು, ಆದರೆ ಅವರ ವ್ಯಕ್ತಿಪರ ಕ್ರಿಯೆಗಳು ಏನಾಗಿರುವುವು ಎಂಬುದನ್ನು ಆತನು ಪೂರ್ವನಿರ್ಣಯ ಮಾಡಲಿಲ್ಲ.
ಆರಿಸಲ್ಪಟ್ಟ ಕ್ರೈಸ್ತರು, ಅಥವಾ ಆದುಕೊಂಡವರು, ಕ್ರಿಸ್ತನೊಂದಿಗೆ ಪರಲೋಕದಲ್ಲಿ ಆಳುವ ವಾಗ್ದತ್ತ ಬಹುಮಾನವನ್ನು ಕಳೆದುಕೊಳ್ಳಲು ಬಯಸದಿರುವಲ್ಲಿ, ಎಡೆಬಿಡದೆ ಪ್ರಯತ್ನಮಾಡುವಂತೆ ಪ್ರಚೋದಿಸಲ್ಪಡುತ್ತಾರೆ. (2 ಪೇತ್ರ 1:10; ಪ್ರಕಟನೆ 2:5, 10, 16; 3:11) ಗತಕಾಲದ ಕೆಲವು ದೇವತಾಶಾಸ್ತ್ರಜ್ಞರು ಕೇಳಿದಂತೆ, ಆದುಕೊಂಡವರ ಕರೆಯು ಮೊದಲೆ ನಿಶ್ಚಯಿಸಲ್ಪಟ್ಟಿದ್ದಲ್ಲಿ ಅಂತಹ ಮರುಜ್ಞಾಪನಗಳೇಕೆ ಕೊಡಲ್ಪಟ್ಟವು?
ಪೂರ್ವಾದೃಷ್ಟ ಮತ್ತು ದೇವರ ಪ್ರೀತಿ
“ದೇವರ ಸ್ವರೂಪ” ದಲ್ಲಿ ನಿರ್ಮಿಸಲ್ಪಟ್ಟವನಾದ ಮನುಷ್ಯನಿಗೆ ಇಚ್ಛಾ ಸ್ವಾತಂತ್ರ್ಯವು ನೀಡಲ್ಪಟ್ಟಿತ್ತು. (ಆದಿಕಾಂಡ 1:27) ಮನುಷ್ಯರು ದೇವರನ್ನು ಯಂತ್ರಮನುಷ್ಯರಂತೆ ಪ್ರತಿಯೊಂದು ಚಲನೆಯ ಪೂರ್ವ ನಿಯಂತ್ರಣದಿಂದಲ್ಲ, ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟು ಗೌರವಿಸಿ ಸೇವಿಸಬೇಕಾದರೆ ಇಚ್ಛಾ ಸ್ವಾತಂತ್ರ್ಯವು ಅತ್ಯಾವಶ್ಯಕ. ಬುದ್ಧಿಶಕ್ತಿಯ ಸ್ವತಂತ್ರ ಜೀವಿಗಳಿಂದ ತೋರಿಸಲ್ಪಡುವ ಪ್ರೀತಿಯು, ಅನ್ಯಾಯದ ದೋಷಾರೋಪಗಳನ್ನು ತಪ್ಪೆಂದು ಸಿದ್ಧಮಾಡಿಕೊಡಲು ದೇವರಿಗೆ ಅನುಕೂಲ ಒದಗಿಸುವುದು. ಆತನನ್ನುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು. ಹಾಗಾದರೆ ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.”—ಜ್ಞಾನೋಕ್ತಿ 27:11.
ದೇವರ ಸೇವಕರು ಪೂರ್ವಾದೃಷ್ಟವನ್ನು ಹೊಂದಿದ್ದಲ್ಲಿ, ಅಥವಾ ಕಾರ್ಯಕ್ರಮ ನಿಯೋಜಿತರೊ ಎಂಬಂತಿದ್ದಲ್ಲಿ, ಅವರ ನಿರ್ಮಾಣಿಕನೆಡೆಗೆ ಅವರ ಪ್ರೀತಿಯ ಯಥಾರ್ಥತೆಯು ಸಂದೇಹಾಸ್ಪದವಾಗಿರಲು ಸಾದ್ಯವಿಲ್ಲವೆ? ಅಲ್ಲದೆ, ವ್ಯಕ್ತಿಗಳ ವೈಯಕ್ತಿಕ ಅರ್ಹತೆಗಳನ್ನು ಗಣನೆಗೆ ತಾರದೆ ಅವರನ್ನು ಸ್ವರ್ಗೀಯ ಮಹಿಮೆ ಮತ್ತು ಸಂತೋಷಕ್ಕೆ ಪೂರ್ವಾದೃಷ್ಟ ಆಯ್ಕೆಮಾಡುವುದು ದೇವರ ನಿಷ್ಪಕ್ಷಪಾತಕ್ಕೆ ವ್ಯತಿರಿಕ್ತವಾಗಿರದೆ? ಅಷ್ಟಲ್ಲದೆ, ಬೇರೆಯವರು ನಿತ್ಯ ದಂಡನೆಗೆ ವಿಧಿಸಲ್ಪಟ್ಟಿರುವಾಗ, ಕೆಲವರಿಗೆ ಮಾತ್ರ ಅಂತಹ ಹೆಚ್ಚು ಸೌಲಭ್ಯದ ಉಪಚಾರವು ಸಿಕ್ಕುವಲ್ಲಿ, ಇದು “ಆರಿಸಿಕೊಂಡವರು” ಅಥವಾ “ಆದುಕೊಂಡವರ”ಲ್ಲಿ ಕೃತಜ್ಞತೆಯ ಪ್ರಾಮಾಣಿಕ ಭಾವನೆಗಳನ್ನು ಪ್ರೇರಿಸುವುದು ಅಸಂಭಾವ್ಯ.—ಆದಿಕಾಂಡ 1:27; ಯೋಬ 1:8; ಅ. ಕೃತ್ಯಗಳು 10:34, 35.
ಕೊನೆಯದಾಗಿ, ಸಕಲ ಮಾನವರಿಗೆ ಸುವಾರ್ತೆಯನ್ನು ಸಾರುವಂತೆ ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದನು. ರಕ್ಷಿಸಲ್ಪಡುವವರನ್ನು ದೇವರು ಈ ಮೊದಲೆ ಆದುಕೊಂಡಿದ್ದಾನಾದರೆ, ಸೌವಾರ್ತಿಕ ಸೇವೆಯಲ್ಲಿ ಕ್ರೈಸ್ತರು ತೋರಿಸುವ ಹುರುಪನ್ನು ಇದು ಕುಂದಿಸದಿರುವುದೆ? ಸಾರುವ ಕಾರ್ಯವನ್ನು ಮೂಲತಃ ಅದು ಅರ್ಥವಿಲ್ಲದ್ದಾಗಿ ಮಾಡದಿರುವುದೆ?
ದೇವರ ನಿಷ್ಪಕ್ಷಪಾತ ಪ್ರೀತಿಯು ಜನರು ಆತನನ್ನು ಪ್ರತಿಯಾಗಿ ಪ್ರೀತಿಸುವಂತೆ ಪ್ರೇರಿಸುವ ಅತ್ಯಂತ ಬಲವಾದ ಶಕ್ತಿಯಾಗಿದೆ. ಅಸಂಪೂರ್ಣರೂ ಪಾಪಿಗಳೂ ಆದ ಮಾನವಕುಲದ ಸಲುವಾಗಿ ತನ್ನ ಕುಮಾರನನ್ನು ಬಲಿಯಾಗಿ ಕೊಟ್ಟದ್ದು ದೇವರ ಪ್ರೀತಿಯ ಅತ್ಯಂತ ಮಹಾನ್ ಅಭಿವ್ಯಕ್ತಿಯಾಗಿತ್ತು. ತನ್ನ ಮಗನ ಕುರಿತ ದೇವರ ಮುನ್ನರಿವು ಒಂದು ಅಸದೃಶ ಉದಾಹರಣೆ, ಆದರೆ ಯೇಸುವಿನಲ್ಲಿ ಆಧರಿತವಾದ ಪುನಃಸ್ಥಾಪನಾ ವಾಗ್ದಾನಗಳು ಖಂಡಿತವಾಗಿ ನೆರವೇರಿಯೆ ತೀರುವುವೆಂಬ ಆಶ್ವಾಸನೆಯನ್ನು ಅದು ನಮಗೆ ನೀಡುತ್ತದೆ. ಆದುದರಿಂದ ನಾವು ಆ ಪುತ್ರನಲ್ಲಿ ನಂಬಿಕೆಯನ್ನಿಟ್ಟು ದೇವರ ಸಾಮೀಪ್ಯಕ್ಕೆ ಹೋಗುವಂತಾಗಲಿ. ನಮ್ಮ ನಿರ್ಮಾಣಿಕನೊಂದಿಗೆ ಒಂದು ಸುಸಂಬಂಧಕ್ಕೆ ಬರುವಂತೆ ದೇವರು ಕೊಡುವ ಆಮಂತ್ರಣವನ್ನು ಸ್ವೀಕರಿಸುವ ಮೂಲಕ ನಾವು ನಮ್ಮ ಗಣ್ಯತೆಯನ್ನು ಪ್ರದರ್ಶಿಸೋಣ. ಇಂದು, ದೇವರು ಈ ಆಮಂತ್ರಣವನ್ನು, ಯಾರು ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಬಳಸಿ ದೇವರಿಗೆ ತಮ್ಮ ಪ್ರೀತಿಯನ್ನು ತೋರಿಸಲು ಬಯಸುತ್ತಾರೊ ಅವರೆಲ್ಲರಿಗೆ ನೀಡುತ್ತಾನೆ.
[ಅಧ್ಯಯನ ಪ್ರಶ್ನೆಗಳು]
a “ಲೋಕಾದಿಯಿಂದ” (ಮತ್ತಾಯ 25:34) ಸಿದ್ಧಮಾಡಿದ ರಾಜ್ಯದ ಕುರಿತು ಯೇಸು ಮಾತಾಡುವಾಗ, ಮೊದಲನೆಯ ಪಾಪದ ಅನಂತರದ ಒಂದು ಸಮಯಕ್ಕೆ ಅವನು ನಿರ್ದೇಶಿಸುತ್ತಿದ್ದಿರಬೇಕು. ಲೂಕ 11:50, 51 “ಲೋಕಾದಿ” ಯನ್ನು ಅಥವಾ ಒಂದು ಪ್ರಾಯಶ್ಚಿತದ್ತ ಮೂಲಕವಾಗಿ ವಿಮೋಚನೀಯ ಮಾನವ ಕುಲದ ಆರಂಭವನ್ನು, ಹೇಬೆಲನ ಕಾಲಕ್ಕೆ ಸಂಬಂಧಸೂಚಿಸುತ್ತದೆ.
[ಪುಟ 7 ರಲ್ಲಿರುವ ಚೌಕ]
ಒಂದು ಗುಂಪಿನೋಪಾದಿ ಪೂರ್ವನಿರ್ಣಯಿಸಲ್ಪಟ್ಟದ್ದು
“ಅನೇಕ ಮಂದಿ ಸಹೋದರರಲ್ಲಿ ಆತನೇ ಜೇಷ್ಠಪುತ್ರನಾಗಿರಬೇಕೆಂದು ದೇವರು ಉದ್ದೇಶಿಸಿ ತಾನು ಮೊದಲು ತಿಳಿದುಕೊಂಡವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವುದಕ್ಕೆ ಪೂರ್ವನಿರ್ಣಯಿಸಿದನು. ಮತ್ತು ಯಾರನ್ನು ಪೂರ್ವನಿರ್ಣಯಿಸಿದನೊ ಅವರನ್ನು ಕರೆದನು. ಯಾರನ್ನು ಕರೆದನೊ ಅವರನ್ನು ಮಹಿಮೆಗೂ ಸೇರಿಸಿದನು.” (ರೋಮಾಪುರ 8:29, 30, ನ್ಯೂ ಇಂಟರ್ನ್ಯಾಷನಲ್ ವರ್ಷನ್) ಈ ವಚನಗಳಲ್ಲಿ ಪೌಲನಿಂದ ಉಪಯೋಗಿಸಲ್ಪಟ್ಟ “ಪೂರ್ವನಿರ್ಣಯ” ವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?
ಇಲ್ಲಿ ಪೌಲನ ವಿವೇಚನೆಯು ವೈಯಕ್ತಿಕ ಪೂರ್ವಾದೃಷ್ಟದ ವಿಚಾರವನ್ನು ಬೆಂಬಲಿಸುವ ನಿರ್ಧಾರಕ ತರ್ಕವಲ್ಲ. ನಮ್ಮ ಶತಮಾನದ ಆರಂಭದಲ್ಲಿ, ಡೀಕ್ಸ್ಯಾನಾರ್ ಡ ಟೀಆಲಾಜಿ ಕಾಟಾಲೀಕ್ ಪೌಲನ ವಾದಗಳನ್ನು (ರೋಮಾಪುರ ಅಧ್ಯಾಯಗಳು 9-11) ಈ ರೀತಿಯಲ್ಲಿ ವಿವರಿಸಿತು: “ಹೆಚ್ಚೆಚ್ಚಾಗಿ, ನಿತ್ಯಜೀವದ ಪೂರ್ವಾದೃಷ್ಟವು ಪ್ರತಿಪಾದಿಸಲ್ಪಟ್ಟಿಲ್ಲವೆಂಬುದೇ ಕ್ಯಾತೊಲಿಕ್ ಪಂಡಿತರಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯವಾಗಿದೆ.” ಅದೇ ನಿರ್ದೇಶಕ ಕೃತಿಯು ಬಳಿಕ ಎಮ್. ಲಗ್ರಾಂಜ್ರವರ ಈ ಅಭಿಪ್ರಾಯವನ್ನು ಉಲ್ಲೇಖಿಸುತ್ತದೆ: “ಪೌಲನಿಂದ ವಿಕಸಿಸಲ್ಪಟ್ಟ ಪ್ರಧಾನ ಪ್ರಶ್ನೆಯು ಜೀವಕ್ಕಾಗಿ ಮತ್ತು ಶಾಪಕ್ಕಾಗಿ ಪೂರ್ವನಿರ್ಣಯವು ಅಲ್ಲವೇ ಅಲ್ಲ, ಬದಲಾಗಿ ಅದರ ವಿರೋಧಾನ್ಯಾಸವು ಯೆಹೂದ್ಯರ ಅಪನಂಬಿಕೆಯ ಕಾರಣದಿಂದಾಗಿದ್ದು . . . ಅನ್ಯರನ್ನು ಕ್ರೈಸ್ತತ್ವದ ಕೃಪೆಯೊಳಗೆ ಸೇರುವಂತೆ ಕೊಡಲ್ಪಟ್ಟ ಕೇವಲ ಆಮಂತ್ರಣ ಅದಾಗಿದೆ. ಅದು ಗುಂಪುಗಳಿಗೆ, ಅನ್ಯರಿಗೆ, ಯೆಹೂದ್ಯರಿಗೆ ಸಂಬಂಧಿಸುತ್ತದೆ, ಮತ್ತು ನೇರವಾಗಿ ವಿಶಿಷ್ಟ ವ್ಯಕ್ತಿಗಳಿಗಲ್ಲ.”—ಓರೆ ಅಕ್ಷರಗಳು ನಮ್ಮವು.
ಹೆಚ್ಚು ಈಚೆಗೆ, ದ ಜೆರೂಸಲೇಮ್ ಬೈಬಲ್, ಈ ಅಧ್ಯಾಯಗಳ (9-11) ವಿಷಯವಾಗಿ ಅದೇ ತೀರ್ಮಾನವನ್ನು ನೀಡುತ್ತಾ ಹೇಳಿದ್ದು: “ಆದುದರಿಂದ ಈ ಅಧ್ಯಾಯಗಳ ವಿಷಯವು, ವ್ಯಕ್ತಿಯನ್ನು ಮಹಿಮೆಗೆ ಅಥವಾ ನಂಬಿಕೆಗಾಗಿ ಕೂಡ ಪೂರ್ವನಿರ್ಣಯಿಸುವ ಪ್ರಶ್ನೆಯಲ್ಲ, ಬದಲಾಗಿ ಹಳೆ ಒಡಂಬಡಿಕೆಯ ನಿರೂಪಣೆಗಳಿಂದ ಎಬ್ಬಿಸಲ್ಪಟ್ಟ ಒಂದೇ ಪ್ರಶ್ನೆಯಾದ, ಮಾನವಕುಲದ ರಕ್ಷಣೆಯ ವಿಕಸನದಲ್ಲಿ ಇಸ್ರಾಯೇಲಿನ ಪಾತ್ರಕ್ಕೆ ಸಂಬಂಧಿಸಿದ ವಿಷಯವಾಗಿದೆ.”
ರೋಮಾಪುರ ಅಧ್ಯಾಯ 8ರ ಕೊನೆಯ ವಚನಗಳು ಇದೇ ಪೂರ್ವಾಪರಕ್ಕೆ ಸೇರುತ್ತವೆ. ಹೀಗೆ, ಈ ವಚನಗಳು ನಮಗೆ ನ್ಯಾಯಸಮ್ಮತ ಜ್ಞಾಪಕವನ್ನು ಕೊಡಬಲ್ಲವು ಏನಂದರೆ ಮಾನವಕುಲದವರಲ್ಲಿ ಕ್ರಿಸ್ತನೊಂದಿಗೆ ಆಳಲು ಕರೆಯಲ್ಪಡಲಿರುವ ಒಂದು ವರ್ಗದ ಅಥವಾ ಗುಂಪಿನ ಅಸ್ತಿತ್ವವನ್ನು, ಹಾಗೂ ಅವರು ಮುಟ್ಟಬೇಕಾದ ಆವಶ್ಯಕತೆಗಳನ್ನು ದೇವರು ಮುಂಗಂಡನು—ಮತ್ತು ಇದು, ಆದುಕೊಳ್ಳಲ್ಪಡಲಿದ್ದ ನಿರ್ದಿಷ್ಟ ವ್ಯಕ್ತಿಗಳನ್ನು ಸಮಯಕ್ಕೆ ಮುಂಚೆಯೆ ನೇಮಿಸುವ ಹೊರತಾಗಿ ಮಾಡಲ್ಪಟ್ಟಿತು, ಯಾಕಂದರೆ ಅದು ಆತನ ಪ್ರೀತಿ ಮತ್ತು ನ್ಯಾಯಕ್ಕೆ ವಿರೋಧವಾಗಿರುವುದು.