ಇಂದು ಯಾರು ದೇವರನ್ನು ಘನಪಡಿಸುತ್ತಿದ್ದಾರೆ?
“ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ [“ಘನತೆ,” Nw] ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ.”—ಪ್ರಕಟನೆ 4:11.
ಸಾವಿರದ ಒಂಬೈನೂರ ನಲವತ್ತುಗಳಲ್ಲಿ ಒಂದು ದಿನ, ಸ್ವಿಸ್ ಎಂಜಿನಿಯರರಾದ ಜಾರ್ಜ್ ಡ ಮೆಸ್ಟ್ರಾಲ್ ತಮ್ಮ ನಾಯಿಯನ್ನು ವಾಕಿಂಗ್ಗೆ ಕರೆದೊಯ್ದರು. ಅವರು ವಾಕಿಂಗ್ನಿಂದ ಮನೆಗೆ ಹಿಂದಿರುಗಿದಾಗ, ತಮ್ಮ ಬಟ್ಟೆ ಮತ್ತು ನಾಯಿಯ ತುಪ್ಪುಳಿನ ಮೇಲೆ ಅಂಟುಪುರುಳೆಗಳು ಅಂಟಿಕೊಂಡಿರುವುದನ್ನು ಕಂಡರು. ಇದರ ಕುರಿತು ಕುತೂಹಲಗೊಂಡ ಅವರು, ಅಂಟುಪುರುಳೆಗಳನ್ನು ಒಂದು ಸೂಕ್ಷ್ಮದರ್ಶಕದ ಕೆಳಗೆ ಇಟ್ಟು ಪರೀಕ್ಷಿಸಿದಾಗ ಕುಣಿಕೆಯಿದ್ದ ಯಾವುದೇ ವಸ್ತುವಿನೊಂದಿಗೆ ಸಿಕ್ಕಿಕೊಳ್ಳುವ ಅದರ ಸಣ್ಣಸಣ್ಣ ಕೊಂಡಿಗಳನ್ನು ನೋಡಿ ಬೆಕ್ಕಸಬೆರಗಾದರು. ಕೊನೆಗೆ, ಈ ಅಂಟುಪುರುಳೆಗಳಿಗೆ ಸಮಾನವಾದ ವೆಲ್ಕ್ರೋ ಎಂಬ ಸಿಂತಟಿಕ್ ವಸ್ತುವನ್ನು ಕಂಡುಹಿಡಿದರು. ನಿಸರ್ಗದಿಂದ ನಕಲುಮಾಡಿದವರು ಡ ಮೆಸ್ಟ್ರಾಲ್ ಮಾತ್ರವೇ ಆಗಿರಲಿಲ್ಲ. ಯುನೈಟಡ್ ಸ್ಟೇಟ್ಸ್ನಲ್ಲಿ, ರೈಟ್ ಸಹೋದರರು ದೊಡ್ಡ ಪಕ್ಷಿಗಳ ಹಾರಾಟವನ್ನು ಅಧ್ಯಯನಮಾಡಿದ ಬಳಿಕ ಒಂದು ವಿಮಾನವನ್ನು ವಿನ್ಯಾಸಿಸಿದರು. ಫ್ರೆಂಚ್ ಎಂಜಿನಿಯರರಾದ ಅಲೆಕ್ಸಾಂಡ್ರ ಗೂಈಸ್ಟಾವ್ ಐಫಲ್ರವರು, ಮಾನವನ ತೊಡೆ ಎಲುಬು ದೇಹದ ತೂಕವನ್ನು ಬೆಂಬಲಿಸುವಂತೆ ಸಾಧ್ಯಗೊಳಿಸುವ ಮೂಲಭೂತ ತತ್ತ್ವಗಳನ್ನು ಉಪಯೋಗಿಸುತ್ತಾ ಪ್ಯಾರಿಸ್ನಲ್ಲಿ ತಮ್ಮ ಹೆಸರನ್ನು ಹೊತ್ತಿರುವ ಟವರ್ ಅನ್ನು ವಿನ್ಯಾಸಿಸಿದರು.
2 ಈ ಉದಾಹರಣೆಗಳು, ನಿಸರ್ಗದಲ್ಲಿ ಕಂಡುಬರುವ ವಿನ್ಯಾಸಗಳನ್ನು ನಕಲುಮಾಡಲು ಪ್ರಯತ್ನಿಸುವ ವಿಜ್ಞಾನ ಕ್ಷೇತ್ರವಾಗಿರುವ ಬಯೊಮಿಮೆಟಿಕ್ಸ್ (ಜೀವಾನುಕರಣ ವಿಜ್ಞಾನ) ಅನ್ನು ಸ್ಪಷ್ಟವಾಗಿಯೇ ದೃಷ್ಟಾಂತಿಸುತ್ತವೆ.a ಆದರೂ, ಸಮಂಜಸವಾಗಿಯೇ ಒಂದು ಪ್ರಶ್ನೆಯು ಏಳುತ್ತದೆ: ಆ ಸಣ್ಣಸಣ್ಣ ಅಂಟುಪುರುಳೆಗಳಿಂದ ಹಿಡಿದು, ದೊಡ್ಡ ಪಕ್ಷಿಗಳು, ಮಾನವನ ತೊಡೆ ಎಲುಬು, ಮತ್ತು ಮಾನವನ ಅನೇಕ ಆವಿಷ್ಕಾರಗಳು ಆಧಾರಿತವಾಗಿರುವ ಇನ್ನಿತರ ಎಲ್ಲಾ ಚಮತ್ಕಾರಕ ಮೂಲವಸ್ತುಗಳನ್ನು ವಿನ್ಯಾಸಿಸಿದಾತನಿಗೆ ಆವಿಷ್ಕಾರಕರು ಎಷ್ಟು ಸಲ ಕೀರ್ತಿಯನ್ನು ಸಲ್ಲಿಸುತ್ತಾರೆ? ಶೋಚನೀಯವಾಗಿ, ದೇವರಿಗೆ ಸಲ್ಲತಕ್ಕ ಕೀರ್ತಿ ಗೌರವಗಳು ಆತನಿಗೆ ಸಲ್ಲಿಸಲ್ಪಡುವುದು ಇಂದಿನ ಲೋಕದಲ್ಲಿ ವಿರಳವೇ.
3 ಆದರೆ, ‘ದೇವರನ್ನು ಘನಪಡಿಸುವುದು ಏಕೆ ಆವಶ್ಯಕವಾಗಿದೆ?’ ಎಂದು ಕೆಲವರು ಯೋಚಿಸಬಹುದು. ‘ದೇವರು ಈಗಾಗಲೇ ಘನಗಾಂಭೀರ್ಯವುಳ್ಳವನಾಗಿಲ್ಲವೋ?’ ನಿಜ, ಯೆಹೋವನು ವಿಶ್ವದಲ್ಲೇ ಅತಿ ಘನವಂತ ವ್ಯಕ್ತಿಯಾಗಿದ್ದಾನೆ, ಆದರೆ ಇದು ಆತನು ಎಲ್ಲಾ ಮಾನವರ ದೃಷ್ಟಿಯಲ್ಲಿ ಘನವಂತನಾಗಿದ್ದಾನೆ ಎಂಬುದನ್ನು ಅರ್ಥೈಸುವುದಿಲ್ಲ. ಬೈಬಲಿನಲ್ಲಿ, “ಘನತೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಕ್ಕೆ “ಘನ” ಎಂಬ ಮೂಲಾರ್ಥವಿದೆ. ಇದು ಒಬ್ಬ ವ್ಯಕ್ತಿಯನ್ನು ಇತರರ ದೃಷ್ಟಿಯಲ್ಲಿ ಘನಗಾಂಭೀರ್ಯವುಳ್ಳವನಾಗಿ ಅಥವಾ ಪ್ರಮುಖನನ್ನಾಗಿ ತೋರುವಂತೆ ಮಾಡುವ ಯಾವುದೇ ವಿಷಯಕ್ಕೆ ಸೂಚಿಸುತ್ತದೆ. ಇದು ದೇವರಿಗೆ ಉಪಯೋಗಿಸಲ್ಪಡುವಾಗ, ದೇವರನ್ನು ಮಾನವನ ದೃಷ್ಟಿಯಲ್ಲಿ ಪ್ರಭಾವಶಾಲಿಯನ್ನಾಗಿ ಮಾಡುವ ವಿಷಯಕ್ಕೆ ಸೂಚಿಸುತ್ತದೆ.
4 ದೇವರನ್ನು ಯಾವುದು ಪ್ರಭಾವಶಾಲಿಯನ್ನಾಗಿ ಮಾಡುತ್ತದೆ ಎಂಬುದರ ಕಡೆಗೆ ಇಂದು ಸ್ವಲ್ಪ ಮಂದಿ ಮಾತ್ರವೇ ಗಮನಹರಿಸುತ್ತಾರೆ. (ಕೀರ್ತನೆ 10:4; 14:1) ವಾಸ್ತವದಲ್ಲಿ, ಸಮಾಜದಲ್ಲಿರುವ ಪ್ರಮುಖ ವ್ಯಕ್ತಿಗಳು, ಒಂದುವೇಳೆ ದೇವರಲ್ಲಿ ನಂಬಿಕೆ ಇಡುವುದಾದರೂ, ವಿಶ್ವದ ಮಹಿಮಾನ್ವಿತ ಸೃಷ್ಟಿಕರ್ತನನ್ನು ಅಗೌರವದಿಂದ ಉಪಚರಿಸುವಂತೆ ಅನೇಕವೇಳೆ ಜನರನ್ನು ಪ್ರಭಾವಿಸಿದ್ದಾರೆ. ಯಾವ ವಿಧಗಳಲ್ಲಿ ಅವರು ಇದನ್ನು ಮಾಡಿದ್ದಾರೆ?
“ಅವರು ಉತ್ತರವಿಲ್ಲದವರಾಗಿದ್ದಾರೆ”
5 ಅನೇಕ ವಿಜ್ಞಾನಿಗಳು ದೇವರೇ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ, ಮಾನವನನ್ನು ಸೇರಿಸಿ ಸೃಷ್ಟಿಯಲ್ಲಿ ಕಂಡುಬರುವ ಎಲ್ಲಾ ಚಮತ್ಕಾರಗಳಿಗೆ ಅವರು ಯಾವ ವಿವರಣೆಯನ್ನು ಕೊಡುತ್ತಾರೆ? ಅವರು ಸೃಷ್ಟಿಯ ಇಂತಹ ಅದ್ಭುತಗಳಿಗೆ, ವಿಕಾಸವಾದವೆಂಬ ಅನಿರೀಕ್ಷಿತ ಸಂಭವದ ಮೇಲೆ ಆಧಾರಿತವಾದ ಕುರುಡು ಶಕ್ತಿಯೇ ಕಾರಣವೆಂದು ಹೇಳುತ್ತಾರೆ. ಉದಾಹರಣೆಗೆ, ವಿಕಾಸವಾದಿ ಸ್ಟೀವನ್ ಜೇ ಗೋಲ್ಡ್ ಬರೆದುದು: “ನಾವು ಅಸ್ತಿತ್ವಕ್ಕೆ ಬರಲು ಕಾರಣ, ಒಂದು ವಿಚಿತ್ರ ಗುಂಪಿನ ಮೀನುಗಳಿಗೆ ವಿಶಿಷ್ಟ ರೀತಿಯ ಈಜುರೆಕ್ಕೆಯಿದ್ದು ಅದಕ್ಕೆ ಭೂಜೀವಿಗಳ ಕಾಲಾಗಿ ಪರಿಣಮಿಸುವ ಸಾಮರ್ಥ್ಯ ಇತ್ತು . . . ಇದಕ್ಕಿಂತಲೂ ‘ಶ್ರೇಷ್ಠ’ವಾದ ಉತ್ತರಕ್ಕಾಗಿ ನಾವು ಹಂಬಲಿಸಬಹುದು, ಆದರೆ ಅದು ಅಸ್ತಿತ್ವದಲ್ಲಿಲ್ಲ.” ಅದೇ ರೀತಿ, ರಿಚರ್ಡ್ ಇ. ಲೀಕಿ ಮತ್ತು ರಾಜರ್ ಲೂಅನ್ ಬರೆದುದು: “ಮಾನವ ಜೀವಜಾತಿಯು ಪ್ರಾಯಶಃ ಒಂದು ಭಾರೀ ಜೀವಶಾಸ್ತ್ರೀಯ ಅನಿರೀಕ್ಷಿತ ಘಟನೆಯಾಗಿದೆ.” ನಿಸರ್ಗದಲ್ಲಿ ಕಂಡುಬರುವ ಸೌಂದರ್ಯ ಮತ್ತು ವಿನ್ಯಾಸವನ್ನು ಹೊಗಳುವ ಕೆಲವು ವಿಜ್ಞಾನಿಗಳು ಕೂಡ ದೇವರಿಗೆ ಕೀರ್ತಿಯನ್ನು ಸಲ್ಲಿಸಲು ವಿಫಲರಾಗುತ್ತಾರೆ.
6 ಸುಶಿಕ್ಷಿತ ವ್ಯಕ್ತಿಗಳು ವಿಕಾಸವಾದವು ವಾಸ್ತವಾಂಶವಾಗಿದೆ ಎಂದು ಪ್ರತಿಪಾದಿಸುವಾಗ, ಈ ವಿಷಯವನ್ನು ಅಜ್ಞಾನಿಗಳು ಮಾತ್ರ ಅಲ್ಲಗಳೆಯುತ್ತಾರೆ ಎಂದು ಅವರು ಪರೋಕ್ಷವಾಗಿ ಹೇಳಲು ಬಯಸುತ್ತಾರೆ. ಇಂತಹ ಒಂದು ವಿಷಯಕ್ಕೆ ಅನೇಕರು ಹೇಗೆ ಪ್ರತಿಕ್ರಿಯಿಸುತ್ತಾರೆ? ಕೆಲವು ವರ್ಷಗಳ ಹಿಂದೆ, ವಿಕಾಸವಾದದಲ್ಲಿ ನಿಷ್ಣಾತನಾಗಿದ್ದ ಒಬ್ಬ ವ್ಯಕ್ತಿ ವಿಕಾಸವಾದವನ್ನು ಅಂಗೀಕರಿಸಿದವರೊಂದಿಗೆ ಒಂದು ಪ್ರಶ್ನೆ ಭೇಟಿಯನ್ನು ನಡೆಸಿದನು. ಅವನು ಹೇಳಿದ್ದು: “ಎಲ್ಲಾ ಬುದ್ಧಿವಂತ ಜನರು ವಿಕಾಸವಾದವನ್ನು ನಂಬುತ್ತಾರೆಂದು ವಿಕಾಸವಾದದಲ್ಲಿ ನಂಬಿಕೆಯಿಟ್ಟಿರುವವರಿಗೆ ತಿಳಿಸಲ್ಪಟ್ಟಿರುವುದರಿಂದಲೇ ಅವರದನ್ನು ನಂಬಿದ್ದಾರೆ ಎಂಬುದನ್ನು ನಾನು ಕಂಡುಕೊಂಡೆ.” ಹೌದು, ಸುಶಿಕ್ಷಿತ ವ್ಯಕ್ತಿಗಳು ತಮ್ಮ ನಾಸ್ತಿಕವಾದದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ, ಸೃಷ್ಟಿಕರ್ತನೋಪಾದಿ ದೇವರಿಗೆ ಸಲ್ಲತಕ್ಕ ಘನತೆಯನ್ನು ಸಲ್ಲಿಸದಂತೆ ಇತರರು ತಡೆದುಹಿಡಿಯಲ್ಪಡುತ್ತಾರೆ.—ಜ್ಞಾನೋಕ್ತಿ 14:15, 18.
7 ವಾಸ್ತವಾಂಶಗಳು ಮತ್ತು ರುಜುವಾತುಗಳು ವಿಕಾಸವಾದಕ್ಕೆ ಕೈತೋರಿಸುವುದರಿಂದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೋ? ಖಂಡಿತವಾಗಿಯೂ ಇಲ್ಲ! ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬುದಕ್ಕಿರುವ ರುಜುವಾತನ್ನು ನಮ್ಮ ಸುತ್ತಲೂ ನಾವು ಕಂಡುಕೊಳ್ಳುತ್ತೇವೆ. ಆತನ ಕುರಿತು ಅಪೊಸ್ತಲ ಪೌಲನು ಬರೆದುದು: “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ [ಮಾನವನುತ್ಪತ್ತಿ] ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು [ಅವಿಶ್ವಾಸಿಗಳು] ಉತ್ತರವಿಲ್ಲದವರಾಗಿದ್ದಾರೆ.” (ರೋಮಾಪುರ 1:20) ಸೃಷ್ಟಿಕರ್ತನು ತನ್ನ ಕೈಕೆಲಸದ ಮೇಲೆ ತನ್ನ ಮುದ್ರೆಯನ್ನು ಒತ್ತಿದ್ದಾನೆ. ಆದುದರಿಂದ, ಮಾನವಕುಲವು ಅಸ್ತಿತ್ವಕ್ಕೆ ಬಂದಾಗಿನಿಂದ ದೃಶ್ಯ ಸೃಷ್ಟಿಯ ಮೂಲಕ ದೇವರ ಅಸ್ತಿತ್ವವನ್ನು “ಬುದ್ಧಿಗೆ” ತಂದುಕೊಳ್ಳಲು ಮನುಷ್ಯರಿಗೆ ಸಾಧ್ಯವಾಗಿದೆ ಎಂದು ಪೌಲನು ಹೇಳುತ್ತಿದ್ದಾನೆ. ಈ ರುಜುವಾತು ಎಲ್ಲಿದೆ?
8 ದೇವರಿದ್ದಾನೆ ಎಂಬುದಕ್ಕೆ ನಾವು ತಾರಾಮಂಡಲಗಳಲ್ಲಿ ರುಜುವಾತನ್ನು ಕಂಡುಕೊಳ್ಳುತ್ತೇವೆ. “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ” ಎಂದು ಕೀರ್ತನೆ 19:1 ಹೇಳುತ್ತದೆ. “ಆಕಾಶವು”—ಸೂರ್ಯ ಚಂದ್ರ ನಕ್ಷತ್ರಗಳು—ದೇವರ ಶಕ್ತಿ ಮತ್ತು ವಿವೇಕಕ್ಕೆ ಸಾಕ್ಷ್ಯವನ್ನು ಒದಗಿಸುತ್ತವೆ. ನಕ್ಷತ್ರಗಳ ಭಾರಿ ಸಂಖ್ಯೆಯು ನಮ್ಮಲ್ಲಿ ಭಯವಿಸ್ಮಯವನ್ನು ತುಂಬಿಸುತ್ತದೆ. ಮತ್ತು ಈ ಎಲ್ಲಾ ಆಕಾಶಸ್ಥಕಾಯಗಳು ಆಕಾಶದಲ್ಲಿ ಅಡ್ಡಾದಿಡ್ಡಿಯಾಗಿ ಅಲ್ಲ, ಬದಲಿಗೆ ಸೂಕ್ತವಾದ ಭೌತಿಕ ನಿಯಮಗಳಿಗೆ ಅನುಗುಣವಾಗಿ ಚಲಿಸುತ್ತವೆ.b (ಯೆಶಾಯ 40:26) ಇಂತಹ ಕ್ರಮಬದ್ಧತೆಗೆ ಆಕಸ್ಮಿಕ ಘಟನೆಯೇ ಕಾರಣ ಎಂದು ಹೇಳುವುದು ನ್ಯಾಯಸಮ್ಮತವಾಗಿದೆಯೋ? ಗಮನಾರ್ಹವಾಗಿ, ಇಡೀ ವಿಶ್ವವು ಇದ್ದಕ್ಕಿಂದ್ದಂತೆ ಅಸ್ತಿತ್ವಕ್ಕೆ ಬಂತು ಎಂದು ಅನೇಕ ವಿಜ್ಞಾನಿಗಳು ಹೇಳುತ್ತಾರೆ. ಇದರರ್ಥವೇನೆಂಬುದನ್ನು ವಿವರಿಸುತ್ತಾ ಒಬ್ಬ ಪ್ರೊಫೆಸರ್ ಹೀಗೆ ಬರೆದನು: “ನಾಸ್ತಿಕವಾದ ಅಥವಾ ಅಜ್ಞೇಯತಾವಾದ [ದೃಷ್ಟಿಕೋನ]ಕ್ಕೆ ವಿಶ್ವವು ಎಂದೆಂದಿಗೂ ಅಸ್ತಿತ್ವದಲ್ಲಿತ್ತು ಎಂಬ ವಿಚಾರವು ಹೆಚ್ಚು ಸ್ವೀಕಾರಾರ್ಹವಾಗಿದೆ. ಕಾರಣವೇನೆಂದರೆ, ವಿಶ್ವವು ಆರಂಭವನ್ನು ಹೊಂದಿತ್ತು ಎಂದು ಹೇಳುವುದಾದರೆ ಅದು ಎಲ್ಲವನ್ನೂ ಅಸ್ತಿತ್ವಕ್ಕೆ ತಂದ ಒಂದು ಆದಿಕಾರಣಕ್ಕಾಗಿ ಹಕ್ಕುಕೇಳಿಕೆಮಾಡುತ್ತದೆ; ಯಾಕಂದರೆ ಇಂತಹ ಕಾರ್ಯಭಾವವು ಒಂದು ಕಾರಣವಿಲ್ಲದೆ ಬಂತು ಎಂಬುದನ್ನು ಯಾರು ತಾನೇ ಒಪ್ಪಿಕೊಂಡಾರು?”
9 ನಾವು ದೇವರಿದ್ದಾನೆ ಎಂಬುದಕ್ಕೆ ಭೂಮಿಯ ಮೇಲೆ ಸಹ ರುಜುವಾತನ್ನು ಕಂಡುಕೊಳ್ಳುತ್ತೇವೆ. ಕೀರ್ತನೆಗಾರನು ಉದ್ಗರಿಸಿದ್ದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನ [“ವಿವೇಕ,” NW]ದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ [“ಉತ್ಪನ್ನಗಳಿಂದ,” NW] ತುಂಬಿರುತ್ತದೆ.” (ಕೀರ್ತನೆ 104:24) ಯೆಹೋವನ ‘ಉತ್ಪನ್ನಗಳು,’ ಆತನ ವಿವೇಕಕ್ಕೆ ಸಾಕ್ಷ್ಯವಾಗಿವೆ; ಇದರಲ್ಲಿ ಪ್ರಾಣಿ ಸೃಷ್ಟಿಯೂ ಒಳಗೂಡಿದೆ. ನಾವು ಪ್ರಾರಂಭದಲ್ಲಿ ನೋಡಿದಂತೆಯೇ, ಜೀವರಾಶಿಗಳ ವಿನ್ಯಾಸವು ಅದೆಷ್ಟು ಉತ್ತಮವಾಗಿದೆಯೆಂದರೆ ಅನೇಕವೇಳೆ ವಿಜ್ಞಾನಿಗಳು ಅದನ್ನು ನಕಲುಮಾಡಲು ಪ್ರಯತ್ನಿಸುತ್ತಾರೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. ಗಡುಸಾದ ಹೆಲ್ಮೆಟ್ಗಳನ್ನು ರೂಪಿಸಲಿಕ್ಕಾಗಿ ಸಂಶೋಧಕರು ಜಿಂಕೆಯ ಕವಲ್ಗೊಂಬುಗಳನ್ನು ಅಧ್ಯಯನ ಮಾಡುತ್ತಿದ್ದಾರೆ; ಶ್ರವಣ ಸಾಧನಗಳನ್ನು ಉತ್ತಮಗೊಳಿಸುವ ಸಲುವಾಗಿ ತೀಕ್ಷ್ಣ ಶ್ರವಣಶಕ್ತಿಯನ್ನು ಹೊಂದಿರುವ ಒಂದು ಜಾತಿಯ ನೊಣವನ್ನು ಅವರು ಪರೀಕ್ಷಿಸುತ್ತಿದ್ದಾರೆ; ಮತ್ತು ರೇಡಾರ್ನಿಂದ ಪತ್ತೆಹಚ್ಚಲು ಸಾಧ್ಯವಾಗದಂಥ ವಿಮಾನಗಳ ರೂಪಿಸುವಿಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಗೂಬೆಗಳ ರೆಕ್ಕೆಗಳಲ್ಲಿರುವ ಗರಿಗಳನ್ನು ಅವರು ಪರಿಶೋಧಿಸುತ್ತಿದ್ದಾರೆ. ಆದರೆ ಮಾನವನು ತಲೆಕೆಳಗೆ ಮಾಡಿನಿಂತರೂ, ನಿಸರ್ಗದಲ್ಲಿ ಕಂಡುಬರುವ ಪರಿಪೂರ್ಣ ಮೂಲವಸ್ತುಗಳನ್ನು ಸಾಕ್ಷಾತ್ ನಕಲುಮಾಡಲು ಅವನಿಂದ ಸಾಧ್ಯವಿಲ್ಲ. ಬಯೊಮಿಮಿಕ್ರಿ—ನಿಸರ್ಗದಿಂದ ಪ್ರೇರಿಸಲ್ಪಟ್ಟ ನಾವೀನ್ಯ (ಇಂಗ್ಲಿಷ್) ಎಂಬ ಪುಸ್ತಕವು ಉಲ್ಲೇಖಿಸುವುದು: “ಪಳೆಯುಳಿಕೆಯ ಇಂಧನವನ್ನು ಕಬಳಿಸಿಬಿಡದೆ, ಭೂಗ್ರಹವನ್ನು ಮಲಿನಗೊಳಿಸದೆ, ಅಥವಾ ತಮ್ಮ ಭವಿಷ್ಯವನ್ನು ಅಪಾಯಕ್ಕೊಡ್ಡದೆ ಜೀವರಾಶಿಗಳು ನಾವು ಮಾಡಬೇಕಾಗಿರುವುದೆಲ್ಲವನ್ನೂ ಮಾಡಿವೆ.” ಇದು ನಿಜಕ್ಕೂ ವಿವೇಕವೇ ಸರಿ!
10 ನೀವು ಮೇಲೆ ಆಕಾಶದತ್ತ ನೋಡುವುದಾದರೂ ಅಥವಾ ಇಲ್ಲಿ ಭೂಮಿಯ ಮೇಲಿರುವ ಸೃಷ್ಟಿಯನ್ನು ಗಮನಿಸುವುದಾದರೂ, ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬುದಕ್ಕೆ ಸ್ಪಷ್ಟ ಪುರಾವೆಯಿದೆ. (ಯೆರೆಮೀಯ 10:12) ಈ ರೀತಿಯಲ್ಲಿ ಆರ್ಭಟಿಸುವ ಸ್ವರ್ಗೀಯ ಸೃಷ್ಟಿಜೀವಿಗಳೊಂದಿಗೆ ನಾವು ಹೃತ್ಪೂರ್ವಕವಾಗಿ ನಮ್ಮ ಧ್ವನಿಗೂಡಿಸಬೇಕಾಗಿದೆ: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ [“ಘನತೆ,” NW] ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ.” (ಪ್ರಕಟನೆ 4:11) ಅನೇಕ ವಿಜ್ಞಾನಿಗಳು ತಮ್ಮ ಶಾರೀರಿಕ ಕಣ್ಣುಗಳಿಗೆ ಕಾಣುವ ವಿಷಯಗಳಲ್ಲಿರುವ ವಿನ್ಯಾಸವನ್ನು ನೋಡಿ ವಿಸ್ಮಯಗೊಳ್ಳುವುದಾದರೂ, ತಮ್ಮ ‘ಮನೋನೇತ್ರಗಳಿಂದ’ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬ ರುಜುವಾತನ್ನು ನೋಡಲು ತಪ್ಪಿಹೋಗುತ್ತಾರೆ. (ಎಫೆಸ 1:18) ನಾವು ಇದನ್ನು ಹೀಗೆ ದೃಷ್ಟಾಂತಿಸಬಹುದು: ನಿಸರ್ಗದಲ್ಲಿರುವ ಸೌಂದರ್ಯ ಮತ್ತು ವಿನ್ಯಾಸವನ್ನು ಆಸ್ವಾದಿಸಿ ಒಬ್ಬ ಮಹಾ ವಿನ್ಯಾಸಕನ ಅಸ್ತಿತ್ವವನ್ನು ಅಲ್ಲಗಳೆಯುವುದು, ಒಂದು ಅದ್ಭುತಕರವಾದ ಚಿತ್ರವನ್ನು ಕಾಣುವ ಅದೇ ಸಮಯದಲ್ಲಿ ಬರೀ ಕ್ಯಾನ್ವಾಸಿನ ತುಂಡೊಂದನ್ನು ಒಂದು ಮಹಾ ಕೃತಿಯಾಗಿ ಮಾರ್ಪಡಿಸಿದ ಚಿತ್ರಕಾರನ ಅಸ್ತಿತ್ವವನ್ನು ಅಲ್ಲಗಳೆಯುವಷ್ಟೇ ಅಸಮಂಜಸವಾಗಿದೆ. ಆದುದರಿಂದ, ದೇವರಲ್ಲಿ ನಂಬಿಕೆಯಿಡಲು ನಿರಾಕರಿಸುವವರನ್ನು ‘ಉತ್ತರವಿಲ್ಲದವರು’ ಎಂದು ಕರೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ!
‘ದಾರಿತೋರಿಸುವ ಕುರುಡರು’ ಅನೇಕರನ್ನು ದಾರಿತಪ್ಪಿಸುತ್ತಾರೆ
11 ತಮ್ಮ ಆರಾಧನಾ ರೀತಿಯು ದೇವರನ್ನು ಘನಪಡಿಸುತ್ತದೆ ಎಂದು ಅನೇಕ ಧಾರ್ಮಿಕ ಜನರು ಪ್ರಾಮಾಣಿಕವಾಗಿ ನಂಬುತ್ತಾರೆ. (ರೋಮಾಪುರ 10:2, 3) ಆದರೂ, ದೇವರನ್ನು ಘನಪಡಿಸುವುದರಿಂದ ಕೋಟಿಗಟ್ಟಲೆ ಜನರನ್ನು ತಡೆದು ನಿಲ್ಲಿಸಿರುವ ಮಾನವ ಸಮಾಜದ ಮತ್ತೊಂದು ಘಟಕಾಂಶವು ಧರ್ಮವಾಗಿದೆ. ಇದು ಹೇಗೆ? ಎರಡು ವಿಧಗಳನ್ನು ಪರಿಗಣಿಸೋಣ.
12 ಮೊದಲನೆಯದಾಗಿ, ಧರ್ಮಗಳು ಸುಳ್ಳು ಬೋಧನೆಗಳ ಮೂಲಕ ದೇವರಿಗೆ ಸಲ್ಲತಕ್ಕ ಘನತೆಯನ್ನು ದಾರಿತಪ್ಪಿಸುತ್ತವೆ. ಉದಾಹರಣೆಗೆ ಹಣೆಬರಹದ ಬೋಧನೆಯನ್ನು ತೆಗೆದುಕೊಳ್ಳಿ. ಇದು ದೇವರಿಗೆ ಭವಿಷ್ಯವನ್ನು ಮುಂಗಾಣುವ ಶಕ್ತಿಯಿರುವುದರಿಂದ ಆತನಿಗೆ ಪ್ರತಿಯೊಂದರ ಫಲಿತಾಂಶವು ಮುಂದಾಗಿಯೇ ತಿಳಿದಿರಬೇಕು ಎಂಬ ಊಹಾಪೋಹದ ಮೇಲೆ ಆಧಾರಿಸಿರುವ ಸಿದ್ಧಾಂತವಾಗಿದೆ. ಹೀಗೆ, ಹಣೆಬರಹವು ಪ್ರತಿಯೊಬ್ಬನ ಭವಿಷ್ಯವನ್ನು—ಅದು ಒಳ್ಳೆಯದಾಗಿರಲಿ ಕೆಟ್ಟದ್ದಾಗಿರಲಿ—ದೇವರು ಪೂರ್ವನಿರ್ಧರಿಸಿದ್ದಾನೆ ಎಂಬ ಅಭಿಪ್ರಾಯವನ್ನು ಕೊಡುತ್ತದೆ. ಈ ವಿಚಾರಧಾರೆಗನುಸಾರ, ಇಂದಿನ ಲೋಕದಲ್ಲಿರುವ ಎಲ್ಲಾ ಕಷ್ಟಾನುಭವ ಮತ್ತು ದುಷ್ಟತನಕ್ಕೆ ದೇವರೇ ಕಾರಣನು ಎಂದು ಹೇಳಬೇಕಾಗುತ್ತದೆ. ವಾಸ್ತವದಲ್ಲಿ, ದೇವರ ಪ್ರಧಾನ ವೈರಿಗೆ, ಯಾರನ್ನು ಬೈಬಲು “ಇಹಲೋಕಾಧಿಪತಿ” ಎಂದು ಕರೆಯುತ್ತದೋ ಆ ಸೈತಾನನಿಗೆ ಸಲ್ಲಬೇಕಾದ ದೋಷಾರೋಪವನ್ನು ದೇವರ ಮೇಲೆ ಹಾಕುವುದು ಯಾವ ರೀತಿಯಲ್ಲೂ ಆತನನ್ನು ಘನಪಡಿಸುವುದಿಲ್ಲ.—ಯೋಹಾನ 14:30; 1 ಯೋಹಾನ 5:19.
13 ಹಣೆಬರಹವು ದೇವರ ಮೇಲೆ ಮಿಥ್ಯಾಪವಾದ ಹೊರಿಸುವ ಅಶಾಸ್ತ್ರೀಯ ಬೋಧನೆಯಾಗಿದೆ. ಇದು, ಆತನು ಏನನ್ನು ಮಾಡಲು ಶಕ್ತನೋ ಅದನ್ನು ಆತನು ವಾಸ್ತವದಲ್ಲಿ ಏನನ್ನು ಮಾಡುತ್ತಾನೋ ಅದರೊಂದಿಗೆ ಗಲಿಬಿಲಿಗೊಳಿಸುತ್ತದೆ. ದೇವರು ಘಟನೆಗಳನ್ನು ಮುಂಗಾಣಶಕ್ತನು ಎಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. (ಯೆಶಾಯ 46:9, 10) ಆದರೂ, ಭವಿಷ್ಯವನ್ನು ಮುಂಗಾಣಸಾಧ್ಯವಿರುವ ತನ್ನ ಸಾಮರ್ಥ್ಯವನ್ನು ಆತನಿಂದ ನಿಯಂತ್ರಿಸಲಾಗದು ಅಥವಾ ನಡೆಯುವ ಪ್ರತಿಯೊಂದು ವಿಷಯಕ್ಕೂ ಆತನೇ ಹೊಣೆಗಾರನಾಗಿದ್ದಾನೆ ಎಂದು ಯೋಚಿಸುವುದು ತರ್ಕವಿರುದ್ಧವಾಗಿದೆ. ದೃಷ್ಟಾಂತಕ್ಕಾಗಿ, ನಿಮಗೆ ಭಾರಿ ದೇಹದಾರ್ಢ್ಯವಿದೆಯೆಂದು ಭಾವಿಸಿಕೊಳ್ಳಿರಿ. ನಿಮಗೆ ದೇಹದಾರ್ಢ್ಯವಿದೆ ಎಂದ ಮಾತ್ರಕ್ಕೆ ಕಣ್ಣಿಗೆ ಕಾಣುವ ಪ್ರತಿಯೊಂದು ಭಾರವಾದ ವಸ್ತುವನ್ನು ಎತ್ತಲು ನಿಮಗೆ ಮನಸ್ಸಾಗುವುದೋ? ಖಂಡಿತವಾಗಿಯೂ ಇಲ್ಲ! ತದ್ರೀತಿಯಲ್ಲಿ, ಭವಿಷ್ಯವನ್ನು ಮುಂಗಾಣುವ ಸಾಮರ್ಥ್ಯವನ್ನು ಹೊಂದಿರುವುದು ತಾನೇ ಪ್ರತಿಯೊಂದು ವಿಷಯವನ್ನು ಮುಂಗಾಣಬೇಕು ಅಥವಾ ಪೂರ್ವನಿರ್ಧರಿಸಬೇಕು ಎಂದು ದೇವರನ್ನು ಬಲವಂತಪಡಿಸುವುದಿಲ್ಲ. ಆತನು ತನ್ನ ಮುನ್ನರಿವನ್ನು ಆಯ್ಕೆಗನುಸಾರ ವಿವೇಚನೆಯಿಂದ ಉಪಯೋಗಿಸುತ್ತಾನೆ.c ಆದುದರಿಂದ, ಹಣೆಬರಹ ಮತ್ತು ಇನ್ನೆಲ್ಲಾ ಸುಳ್ಳು ಬೋಧನೆಗಳು ದೇವರನ್ನು ಘನಪಡಿಸುವುದಿಲ್ಲ.
14 ಸಂಘಟಿತ ಧರ್ಮವು ದೇವರನ್ನು ಅವಮರ್ಯಾದೆಗೊಳಿಸುವ ಎರಡನೆಯ ವಿಧವು, ಅದರ ಅನುಯಾಯಿಗಳ ನಡತೆಯ ಮೂಲಕವೇ. ಕ್ರೈಸ್ತರು ಯೇಸುವಿನ ಬೋಧನೆಗಳನ್ನು ಹಿಂಬಾಲಿಸುವಂತೆ ಅಪೇಕ್ಷಿಸಲಾಗುತ್ತದೆ. ಬೇರೆಲ್ಲಾ ವಿಷಯಗಳೊಂದಿಗೆ, ‘ಒಬ್ಬರನ್ನೊಬ್ಬರು ಪ್ರೀತಿಸಬೇಕು’ ಮತ್ತು ‘ಲೋಕದವರಾಗಿರಬಾರದು’ ಎಂಬುದನ್ನು ಯೇಸು ತನ್ನ ಹಿಂಬಾಲಕರಿಗೆ ಬೋಧಿಸಿದನು. (ಯೋಹಾನ 15:12; 17:14-16) ಕ್ರೈಸ್ತಪ್ರಪಂಚದ ಪಾದ್ರಿವರ್ಗದ ಕುರಿತಾಗಿ ಏನು? ಅವರು ನಿಜವಾಗಿಯೂ ಈ ಬೋಧನೆಗಳನ್ನು ಅನುಸರಿಸಿ ನಡೆದಿದ್ದಾರೋ?
15 ಯುದ್ಧದ ವಿಷಯದಲ್ಲಿ ಪಾದ್ರಿವರ್ಗವು ಸ್ಥಾಪಿಸಿರುವ ದಾಖಲೆಯನ್ನು ಪರಿಗಣಿಸಿರಿ. ಅವರು ದೇಶಗಳ ಯುದ್ಧಗಳನ್ನು ಬೆಂಬಲಿಸಿದ್ದಾರೆ, ಅವುಗಳನ್ನು ಸಮ್ಮತಿಸಿದ್ದಾರೆ, ಮತ್ತು ಅವುಗಳಲ್ಲಿ ಮುಂದಾಳುತ್ವವನ್ನೂ ವಹಿಸಿದ್ದಾರೆ. ಅವರು ಸೈನಿಕರನ್ನು ಆಶೀರ್ವದಿಸುವ ಮೂಲಕ ಆ ಹತ್ಯಾಕಾಂಡವನ್ನು ಸರಿಯೆಂದು ತೋರಿಸಲು ಪ್ರಯತ್ನಿಸಿದ್ದಾರೆ. ನಮ್ಮಲ್ಲಿ ಈ ಪ್ರಶ್ನೆಯಂತೂ ಖಂಡಿತ ತಲೆದೋರುತ್ತದೆ: ‘ವಿರುದ್ಧ ಪಕ್ಷದಲ್ಲಿರುವ ತಮ್ಮ ಜೊತೆ ಪಾದ್ರಿಗಳು ಇದನ್ನೇ ಮಾಡುತ್ತಿದ್ದಾರೆ ಎಂಬುದು ಈ ಪಾದ್ರಿವರ್ಗದವರಿಗೆ ಎಂದಿಗೂ ತೋಚಿರುವುದಿಲ್ಲವೋ?’ (“ದೇವರು ಯಾರ ಪಕ್ಷವಹಿಸುತ್ತಾನೆ?” ಎಂಬ ಚೌಕವನ್ನು ನೋಡಿ.) ರಕ್ತಮಯ ಯುದ್ಧಗಳಲ್ಲಿ ತಮಗೆ ದೇವರು ಬೆಂಬಲವನ್ನೀಯುತ್ತಾನೆ ಎಂದು ಪಾದ್ರಿಗಳು ಹೇಳುವಾಗ ಅವರು ಆತನನ್ನು ಘನಪಡಿಸುತ್ತಿಲ್ಲ; ಮತ್ತು ಬೈಬಲ್ ಮಟ್ಟಗಳು ಹಳತಾಗಿವೆ ಎಂದು ಹೇಳುವಾಗಲೂ ಯಾವುದೇ ರೀತಿಯ ಲೈಂಗಿಕ ಅನೈತಿಕತೆಗೆ ಸೈ ಎನ್ನುವಾಗಲೂ ಅವರು ಆತನನ್ನು ಘನಪಡಿಸುತ್ತಿಲ್ಲ. ಅವರು ಯೇಸು ಯಾರನ್ನು ‘ಧರ್ಮವನ್ನು ಮೀರಿನಡೆಯುವವರು’ ಮತ್ತು ‘ದಾರಿತೋರಿಸುವ ಕುರುಡರು’ ಎಂದು ಕರೆದನೋ ಆ ಧಾರ್ಮಿಕ ಮುಖಂಡರನ್ನು ನಿಜಕ್ಕೂ ನೆನಪಿಗೆ ತರುತ್ತಾರೆ! (ಮತ್ತಾಯ 7:15-23; 15:14) ಪಾದ್ರಿವರ್ಗದ ನಡತೆಯು ಕೋಟ್ಯಂತರ ಮಂದಿ ದೇವರಲ್ಲಿಟ್ಟಿದ್ದ ಪ್ರೀತಿಯನ್ನು ಕಳೆದುಕೊಳ್ಳುವಂತೆ ಮಾಡಿದೆ.—ಮತ್ತಾಯ 24:12.
ದೇವರನ್ನು ನಿಜವಾಗಿಯೂ ಯಾರು ಘನಪಡಿಸುತ್ತಿದ್ದಾರೆ?
16 ಲೋಕದ ಪ್ರಖ್ಯಾತ ಮತ್ತು ಪ್ರಭಾವಶಾಲಿ ವ್ಯಕ್ತಿಗಳು ಒಟ್ಟಾಗಿ ದೇವರಿಗೆ ಘನತೆಯನ್ನು ಸಲ್ಲಿಸಲು ತಪ್ಪಿಹೋಗಿರುವುದಾದರೆ, ನಿಜವಾಗಿಯೂ ದೇವರನ್ನು ಘನಪಡಿಸುತ್ತಿರುವವರು ಯಾರು? ಈ ಪ್ರಶ್ನೆಗೆ ಬೈಬಲೇ ಉತ್ತರವನ್ನು ಕೊಡುವಂತೆ ನಾವು ಬಿಡಬೇಕು. ವಾಸ್ತವದಲ್ಲಿ, ತಾನು ಹೇಗೆ ಘನಪಡಿಸಲ್ಪಡಬೇಕು ಎಂಬುದನ್ನು ತಿಳಿಸುವ ಹಕ್ಕು ದೇವರಿಗಿದೆ, ಮತ್ತು ಆತನು ತನ್ನ ಮಟ್ಟಗಳನ್ನು ತನ್ನ ವಾಕ್ಯವಾದ ಬೈಬಲಿನಲ್ಲಿ ದಾಖಲಿಸಿದ್ದಾನೆ. (ಯೆಶಾಯ 42:8) ನಾವು ದೇವರನ್ನು ಘನಪಡಿಸುವ ಮೂರು ವಿಧಗಳನ್ನು ಪರಿಗಣಿಸೋಣ, ಮತ್ತು ಈ ಪ್ರತಿಯೊಂದು ವಿಧದಲ್ಲೂ ಇಂದು ನಿಜವಾಗಿಯೂ ಯಾರು ದೇವರನ್ನು ಘನಪಡಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನೂ ಸಂಬೋಧಿಸೋಣ.
17 ಮೊದಲನೆಯದಾಗಿ, ನಾವು ದೇವರ ನಾಮವನ್ನು ಸ್ತುತಿಸುವ ಮೂಲಕ ಆತನನ್ನು ಘನಪಡಿಸಬಲ್ಲೆವು. ಹೀಗೆ ಮಾಡುವುದು ದೇವರ ಚಿತ್ತದ ಒಂದು ಪ್ರಮುಖ ಅಂಶವಾಗಿದೆ ಎಂಬುದು ಯೆಹೋವನು ಯೇಸುವಿಗೆ ಏನು ಹೇಳಿದನೋ ಅದರಿಂದ ವ್ಯಕ್ತವಾಗುತ್ತದೆ. ತಾನು ಮರಣಪಡುವ ಕೆಲವು ದಿನಗಳ ಮುಂಚೆ, ಯೇಸು ಪ್ರಾರ್ಥಿಸಿದ್ದು: “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ.” ಆಗ ಒಂದು ವಾಣಿಯು, “ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು” ಎಂದು ಉತ್ತರಕೊಟ್ಟಿತು. (ಯೋಹಾನ 12:28) ಆ ವಾಣಿಯು ಯೆಹೋವನದ್ದೇ ಆಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ತನ್ನ ಹೆಸರು ಘನಪಡಿಸಲ್ಪಡುವುದನ್ನು ಆತನು ಪ್ರಾಮುಖ್ಯವಾಗಿ ವೀಕ್ಷಿಸುತ್ತಾನೆ ಎಂಬುದು ಆತನ ಉತ್ತರದಿಂದ ಸ್ಪಷ್ಟವಾಗುತ್ತದೆ. ಆದುದರಿಂದ, ಇಂದು ಯಾರು ಯೆಹೋವನ ಹೆಸರನ್ನು ಪ್ರಚುರಪಡಿಸುವ ಮೂಲಕ ಮತ್ತು ಇಡೀ ಲೋಕದಲ್ಲಿ ಅದನ್ನು ಸ್ತುತಿಸುವ ಮೂಲಕ ಆತನನ್ನು ಘನಪಡಿಸುತ್ತಿದ್ದಾರೆ? ಯೆಹೋವನ ಸಾಕ್ಷಿಗಳೇ, ಮತ್ತು ಅವರು 235 ದೇಶದ್ವೀಪಗಳಲ್ಲಿ ಇದನ್ನು ಮಾಡುತ್ತಿದ್ದಾರೆ!—ಕೀರ್ತನೆ 86:11, 12.
18 ಎರಡನೆಯದಾಗಿ, ನಾವು ದೇವರ ಕುರಿತಾದ ಸತ್ಯವನ್ನು ಕಲಿಸುವ ಮೂಲಕ ಆತನನ್ನು ಘನಪಡಿಸಬಲ್ಲೆವು. ಸತ್ಯಾರಾಧಕರು ದೇವರನ್ನು ‘ಸತ್ಯಕ್ಕೆ ತಕ್ಕ ಹಾಗೆ ಆರಾಧಿಸುವರು’ ಎಂದು ಯೇಸು ಹೇಳಿದನು. (ಯೋಹಾನ 4:24) “ಸತ್ಯಕ್ಕೆ” ತಕ್ಕ ಹಾಗೆ ದೇವರನ್ನು ಆರಾಧಿಸುತ್ತಿರುವವರನ್ನು ನಾವು ಹೇಗೆ ಗುರುತಿಸಬಲ್ಲೆವು? ಅವರು ಬೈಬಲಿನ ಮೇಲೆ ಆಧಾರಿತವಲ್ಲದ ಮತ್ತು ದೇವರನ್ನು ಹಾಗೂ ಆತನ ಚಿತ್ತವನ್ನು ತಪ್ಪಾಗಿ ಪ್ರತಿನಿಧಿಸುವ ಸಿದ್ಧಾಂತಗಳನ್ನು ತ್ಯಜಿಸಬೇಕು. ಬದಲಿಗೆ, ಅವರು ದೇವರ ವಾಕ್ಯದಲ್ಲಿರುವ ಶುದ್ಧ ಸತ್ಯಗಳನ್ನು ಬೋಧಿಸಬೇಕು; ಅವುಗಳಲ್ಲಿ ಕೆಲವು ಯಾವುವೆಂದರೆ, ಯೆಹೋವನು ಸರ್ವೋನ್ನತ ದೇವರು, ಮತ್ತು ಈ ಸ್ಥಾನಕ್ಕಾಗಿರುವ ಘನತೆಯು ಆತನಿಗೆ ಮಾತ್ರ ಸಲ್ಲುತ್ತದೆ (ಕೀರ್ತನೆ 83:18); ಯೇಸು ದೇವರ ಕುಮಾರನಾಗಿದ್ದಾನೆ ಮತ್ತು ದೇವರ ಮೆಸ್ಸೀಯ ರಾಜ್ಯದ ನೇಮಿತ ರಾಜನಾಗಿದ್ದಾನೆ (1 ಕೊರಿಂಥ 15:27, 28); ದೇವರ ರಾಜ್ಯವು ಯೆಹೋವನ ನಾಮವನ್ನು ಪವಿತ್ರೀಕರಿಸುವುದು ಮತ್ತು ಭೂಮಿಯ ಕುರಿತಾದ ಮತ್ತು ಅದರ ಮೇಲಿರುವ ಮಾನವರ ಕುರಿತಾದ ಆತನ ಉದ್ದೇಶವನ್ನು ನೆರವೇರಿಸುವುದು (ಮತ್ತಾಯ 6:9, 10); ರಾಜ್ಯದ ಕುರಿತಾದ ಸುವಾರ್ತೆಯು ಸರ್ವಲೋಕದಲ್ಲಿ ಸಾರಲ್ಪಡಬೇಕು. (ಮತ್ತಾಯ 24:14) ಸುಮಾರು ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ, ಒಂದೇ ಒಂದು ಗುಂಪು ಮಾತ್ರ ನಂಬಿಗಸ್ತಿಕೆಯಿಂದ ಇಂತಹ ಅಮೂಲ್ಯ ಸತ್ಯಗಳನ್ನು ಬೋಧಿಸುತ್ತಾ ಬಂದಿದೆ—ಅದು ಯೆಹೋವನ ಸಾಕ್ಷಿಗಳೇ!
19 ಮೂರನೆಯದಾಗಿ, ನಾವು ದೇವರ ಮಟ್ಟಗಳಿಗನುಸಾರ ಜೀವಿಸುವ ಮೂಲಕ ಆತನನ್ನು ಘನಪಡಿಸಬಲ್ಲೆವು. ಅಪೊಸ್ತಲ ಪೇತ್ರನು ಬರೆದುದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಕ್ರೈಸ್ತನೊಬ್ಬನ ನಡತೆಯು ಅವನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಪ್ರೇಕ್ಷಕರು ಆ ಸಂಬಂಧವನ್ನು ಅವಲೋಕಿಸುವಾಗ ಅಂದರೆ, ಒಬ್ಬ ಕ್ರೈಸ್ತನ ಒಳ್ಳೆಯ ನಡತೆಯು ಅವನ ನಂಬಿಕೆಯ ಫಲವೇ ಆಗಿದೆ ಎಂಬುದನ್ನು ನೋಡುವಾಗ ಇದು ದೇವರಿಗೆ ಘನತೆಯನ್ನು ತರುತ್ತದೆ.
20 ಒಳ್ಳೆಯ ನಡತೆಯನ್ನು ಕಾಪಾಡಿಕೊಳ್ಳುವ ಮೂಲಕ ಇಂದು ಯಾರು ದೇವರನ್ನು ಘನಪಡಿಸುತ್ತಿದ್ದಾರೆ? ಸಮಾಧಾನಚಿತ್ತರು, ತಮ್ಮ ತೆರಿಗೆಯನ್ನು ಪಾವತಿಮಾಡುವ ನಿಯಮಪಾಲಕರು ಎಂದು ಅನೇಕ ಸರಕಾರಗಳು ಯಾವ ಧಾರ್ಮಿಕ ಗುಂಪನ್ನು ಶ್ಲಾಘಿಸಿವೆ? (ರೋಮಾಪುರ 13:1, 3, 6, 7) ಜೊತೆ ವಿಶ್ವಾಸಿಗಳೊಂದಿಗೆ ಹೊಂದಿರುವ ಐಕ್ಯಕ್ಕಾಗಿ, ಅಂದರೆ ಜಾತೀಯ, ರಾಷ್ಟ್ರೀಯ, ಮತ್ತು ಜನಾಂಗೀಯ ಮೇರೆಗಳನ್ನು ದಾಟಿಹೋಗುವ ಐಕ್ಯಕ್ಕಾಗಿ ಲೋಕವ್ಯಾಪಕವಾಗಿ ಯಾವ ಜನರು ಹೆಸರುವಾಸಿಯಾಗಿದ್ದಾರೆ? (ಕೀರ್ತನೆ 133:1; ಅ. ಕೃತ್ಯಗಳು 10:34, 35) ಕಾನೂನಿಗೆ, ಕೌಟುಂಬಿಕ ಮೌಲ್ಯಗಳಿಗೆ, ಮತ್ತು ಬೈಬಲಿನ ನೈತಿಕ ನಿಯಮಗಳಿಗೆ ಗೌರವವನ್ನು ಕೊಡಬೇಕೆಂದು ಪ್ರೋತ್ಸಾಹಿಸುವ ಬೈಬಲ್ ಶೈಕ್ಷಣಿಕ ಕೆಲಸಕ್ಕಾಗಿ ಯಾವ ಗುಂಪು ಲೋಕವ್ಯಾಪಕವಾಗಿ ಗುರುತಿಸಲ್ಪಟ್ಟಿದೆ? ಒಂದೇ ಒಂದು ಗುಂಪು ಮಾತ್ರ ತಮ್ಮ ಉತ್ತಮ ನಡತೆಯ ಮೂಲಕ ಈ ಕ್ಷೇತ್ರಗಳಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಒಳ್ಳೆಯ ಸಾಕ್ಷ್ಯವನ್ನು ಕೊಡುತ್ತಿದೆ—ಅದು ಯೆಹೋವನ ಸಾಕ್ಷಿಗಳೇ!
ನೀವು ದೇವರನ್ನು ಘನಪಡಿಸುತ್ತಿದ್ದೀರೋ?
21 ನಮ್ಮಲ್ಲಿ ಪ್ರತಿಯೊಬ್ಬನೂ ಹೀಗೆ ಕೇಳಿಕೊಳ್ಳುವುದು ಉತ್ತಮ, ‘ನಾನು ವೈಯಕ್ತಿಕವಾಗಿ ಯೆಹೋವನನ್ನು ಘನಪಡಿಸುತ್ತಿದ್ದೇನೋ?’ ಕೀರ್ತನೆ 148ಕ್ಕನುಸಾರ, ಹೆಚ್ಚಾಗಿ ಎಲ್ಲಾ ಸೃಷ್ಟಿಯೂ ದೇವರನ್ನು ಘನಪಡಿಸುತ್ತದೆ. ದೇವದೂತರು, ಭೌತಿಕ ಆಕಾಶ, ಭೂಮಿ ಮತ್ತು ಅದರ ಪ್ರಾಣಿ ಜೀವಿಗಳು—ಇವೆಲ್ಲವೂ ಯೆಹೋವನನ್ನು ಸ್ತುತಿಸುತ್ತವೆ. (ವಚನಗಳು 1-10) ಆದರೆ, ಹೆಚ್ಚಿನ ಮಾನವರು ಹೀಗೆ ಮಾಡುತ್ತಿಲ್ಲ ಎಂಬುದು ಎಷ್ಟು ವಿಷಾದಕರ ಸಂಗತಿ! ದೇವರಿಗೆ ಘನತೆಯನ್ನು ತರುವಂಥ ರೀತಿಯಲ್ಲಿ ಜೀವಿಸುವ ಮೂಲಕ, ಯೆಹೋವನನ್ನು ಸ್ತುತಿಸುತ್ತಿರುವ ಉಳಿದ ಎಲ್ಲಾ ಸೃಷ್ಟಿಯೊಂದಿಗೆ ನೀವು ಜೊತೆಗೂಡುತ್ತೀರಿ. (ವಚನಗಳು 11-13) ನೀವು ನಿಮ್ಮ ಜೀವನವನ್ನು ಉಪಯೋಗಿಸಬಲ್ಲ ಉತ್ತಮ ವಿಧವು ಬೇರೊಂದಿಲ್ಲ.
22 ಯೆಹೋವನನ್ನು ಘನಪಡಿಸುವ ಮೂಲಕ, ನೀವು ಅನೇಕ ವಿಧಗಳಲ್ಲಿ ಆಶೀರ್ವದಿಸಲ್ಪಡುತ್ತೀರಿ. ನೀವು ಕ್ರಿಸ್ತನ ಈಡು ಯಜ್ಞದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ದೇವರೊಂದಿಗೆ ಸಮಾಧಾನವನ್ನು ಹೊಂದುತ್ತೀರಿ ಮತ್ತು ನಿಮ್ಮ ಸ್ವರ್ಗೀಯ ತಂದೆಯೊಂದಿಗೆ ಶಾಂತಿದಾಯಕ ಹಾಗೂ ಫಲಭರಿತ ಸಂಬಂಧದಲ್ಲಿ ಆನಂದಿಸುವಿರಿ. (ರೋಮಾಪುರ 5:10) ದೇವರನ್ನು ಘನಪಡಿಸಲು ಕಾರಣಗಳನ್ನು ಹುಡುಕುವಾಗ, ನೀವು ಹೆಚ್ಚು ಸಕಾರಾತ್ಮಕರಾಗುತ್ತೀರಿ, ಗಣ್ಯತಾಭಾವವುಳ್ಳವರಾಗುತ್ತೀರಿ. (ಯೆರೆಮೀಯ 31:12) ಅನಂತರ, ಸಂತೋಷಕರವಾದ ಸಂತೃಪ್ತಿಕರ ಜೀವನವನ್ನು ನಡೆಸಲು ಇತರರಿಗೆ ಸಹಾಯಮಾಡುವ ಸ್ಥಾನದಲ್ಲಿ ನೀವಿರುತ್ತೀರಿ, ಮತ್ತು ಇದರಿಂದಾಗಿ ನಿಮಗೂ ಹೆಚ್ಚಿನ ಸಂತೋಷವು ಸಿಗುವುದು. (ಅ. ಕೃತ್ಯಗಳು 20:35) ಇಂದು ಮತ್ತು ಎಂದೆಂದಿಗೂ ದೇವರನ್ನು ಘನಪಡಿಸುವ ದೃಢನಿಶ್ಚಯವನ್ನು ಮಾಡಿರುವವರಲ್ಲಿ ನೀವೂ ಒಬ್ಬರಾಗಿರುವಂತಾಗಲಿ!
[ಪಾದಟಿಪ್ಪಣಿಗಳು]
a “ಬಯೊಮಿಮೆಟಿಕ್ಸ್” ಎಂಬ ಶಬ್ದವು ಗ್ರೀಕ್ ಭಾಷೆಯ ಬೈಯೊಸ್ ಅಂದರೆ “ಜೀವ,” ಮತ್ತು ಮಿಮಸಿಸ್ ಅಂದರೆ “ಪ್ರತಿರೂಪ” ಎಂಬ ಪದಗಳಿಂದ ತೆಗೆಯಲ್ಪಟ್ಟಿದೆ.
b ಭೌತಿಕ ಆಕಾಶವು ದೇವರ ವಿವೇಕ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದಕ್ಕೆ ಹೆಚ್ಚಿನ ಮಾಹಿತಿಯನ್ನು ಕಂಡುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕದ 5 ಮತ್ತು 17ನೇ ಅಧ್ಯಾಯಗಳನ್ನು ನೋಡಿ.
c ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಶಾಸ್ತ್ರಗಳ ಒಳನೋಟ, ಸಂಪುಟ 1, ಪುಟ 853ನ್ನು ನೋಡಿ.
ಜ್ಞಾಪಿಸಿಕೊಳ್ಳಬಲ್ಲಿರೋ?
• ವೈಜ್ಞಾನಿಕ ಸಮಾಜವು ಒಟ್ಟಾಗಿ ದೇವರನ್ನು ಘನಪಡಿಸುವಂತೆ ಜನರಿಗೆ ಸಹಾಯಮಾಡಿರುವುದಿಲ್ಲ ಎಂದು ನಾವು ಏಕೆ ಹೇಳಬಲ್ಲೆವು?
• ಯಾವ ಎರಡು ವಿಧಗಳಲ್ಲಿ ಸಂಘಟಿತ ಧರ್ಮವು ದೇವರನ್ನು ಘನಪಡಿಸುವುದರಿಂದ ಜನರನ್ನು ತಡೆದಿದೆ?
• ಯಾವ ವಿಧಗಳಲ್ಲಿ ನಾವು ದೇವರನ್ನು ಘನಪಡಿಸಬಲ್ಲೆವು?
• ನೀವು ವೈಯಕ್ತಿಕವಾಗಿ ದೇವರನ್ನು ಘನಪಡಿಸುತ್ತಿದ್ದೀರೋ ಎಂದು ಏಕೆ ಪರಿಗಣಿಸಬೇಕಾಗಿದೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಯಾವ ಉದಾಹರಣೆಗಳು ಬಯೊಮಿಮೆಟಿಕ್ಸ್ ಎಂದು ಕರೆಯಲ್ಪಡುವ ಕ್ಷೇತ್ರವನ್ನು ದೃಷ್ಟಾಂತಿಸುತ್ತವೆ? (ಬಿ) ಯಾವ ಪ್ರಶ್ನೆಯು ಏಳುತ್ತದೆ, ಮತ್ತು ಅದಕ್ಕೆ ಉತ್ತರವೇನು?
3, 4. “ಘನತೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದದ ಅರ್ಥವೇನಾಗಿದೆ, ಮತ್ತು ಯೆಹೋವನಿಗೆ ಉಪಯೋಗಿಸಲ್ಪಡುವಾಗ ಅದು ಯಾವುದಕ್ಕೆ ಸೂಚಿಸಬೇಕು?
5. ಸೃಷ್ಟಿಯಲ್ಲಿ ಕಂಡುಬರುವ ಚಮತ್ಕಾರಗಳಿಗೆ ಅನೇಕ ವಿಜ್ಞಾನಿಗಳು ಯಾವ ವಿವರಣೆಗಳನ್ನು ಕೊಡುತ್ತಾ ಹೋಗುತ್ತಾರೆ?
6. ಸೃಷ್ಟಿಕರ್ತನೋಪಾದಿ ದೇವರಿಗೆ ಸಲ್ಲತಕ್ಕ ಘನತೆಯನ್ನು ಆತನಿಗೆ ಸಲ್ಲಿಸುವುದರಿಂದ ಅನೇಕರನ್ನು ಯಾವುದು ತಡೆಯುತ್ತದೆ?
7. ರೋಮಾಪುರ 1:20ಕ್ಕನುಸಾರ ದೃಶ್ಯ ಸೃಷ್ಟಿಯ ಮೂಲಕ ಯಾವುದನ್ನು ಸ್ಪಷ್ಟವಾಗಿ ನೋಡಸಾಧ್ಯವಿದೆ, ಮತ್ತು ಏಕೆ?
8. (ಎ) ಭೌತಿಕ ಆಕಾಶವು ದೇವರ ಶಕ್ತಿ ಮತ್ತು ವಿವೇಕಕ್ಕೆ ಹೇಗೆ ಸಾಕ್ಷ್ಯವನ್ನು ಒದಗಿಸುತ್ತದೆ? (ಬಿ) ವಿಶ್ವಕ್ಕೆ ಒಂದು ಆದಿಕಾರಣವು ಇತ್ತು ಎಂಬುದಕ್ಕೆ ಯಾವ ಸೂಚನೆಯಿದೆ?
9. ಪ್ರಾಣಿ ಸೃಷ್ಟಿಯಲ್ಲಿ ಯೆಹೋವನ ವಿವೇಕವು ಹೇಗೆ ಸುವ್ಯಕ್ತವಾಗಿದೆ?
10. ಒಬ್ಬ ಮಹಾ ವಿನ್ಯಾಸಕನ ಅಸ್ತಿತ್ವವನ್ನು ಅಲ್ಲಗಳೆಯುವುದು ಏಕೆ ಅಸಮಂಜಸವಾಗಿದೆ? ದೃಷ್ಟಾಂತಿಸಿ.
11, 12. ಹಣೆಬರಹದ ಸಿದ್ಧಾಂತವು ಯಾವ ಊಹೆಯ ಮೇಲೆ ಆಧರಿಸಿದೆ, ಮತ್ತು ಈ ಸಿದ್ಧಾಂತವು ದೇವರನ್ನು ಘನಪಡಿಸುವುದಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?
13. ದೇವರು ಭವಿಷ್ಯವನ್ನು ಮುಂಗಾಣಲು ಸಾಧ್ಯವಿರುವ ಸಾಮರ್ಥ್ಯವನ್ನು ನಿಯಂತ್ರಿಸಸಾಧ್ಯವಿಲ್ಲ ಎಂದು ಹೇಳುವುದು ಏಕೆ ಮೂರ್ಖತನವಾಗಿದೆ? ದೃಷ್ಟಾಂತಿಸಿ.
14. ಸಂಘಟಿತ ಧರ್ಮವು ದೇವರನ್ನು ಅವಮರ್ಯಾದೆಗೊಳಿಸಿರುವುದು ಯಾವ ವಿಧದಲ್ಲಿ?
15. (ಎ) ದೇಶಗಳ ಯುದ್ಧಗಳ ವಿಷಯದಲ್ಲಿ ಪಾದ್ರಿವರ್ಗವು ಯಾವ ದಾಖಲೆಯನ್ನು ಸ್ಥಾಪಿಸಿದೆ? (ಬಿ) ಪಾದ್ರಿವರ್ಗದ ನಡತೆಯು ಕೋಟ್ಯಂತರ ಮಂದಿಯ ಮೇಲೆ ಯಾವ ಪರಿಣಾಮವನ್ನು ಬೀರಿದೆ?
16. ದೇವರನ್ನು ನಿಜವಾಗಿಯೂ ಯಾರು ಘನಪಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಬೈಬಲು ಉತ್ತರವನ್ನು ಕೊಡುವಂತೆ ನಾವು ಏಕೆ ಬಿಡಬೇಕು?
17. ಯೆಹೋವನ ಹೆಸರನ್ನು ಘನಪಡಿಸುವುದು ಆತನ ಚಿತ್ತದ ಒಂದು ಪ್ರಮುಖ ಅಂಶವಾಗಿದೆ ಎಂಬುದನ್ನು ಆತನೇ ಹೇಗೆ ತೋರಿಸಿದನು, ಮತ್ತು ಇಂದು ಇಡೀ ಲೋಕದಲ್ಲಿ ದೇವರ ನಾಮವನ್ನು ಯಾರು ಸ್ತುತಿಸುತ್ತಿದ್ದಾರೆ?
18. “ಸತ್ಯಕ್ಕೆ” ತಕ್ಕ ಹಾಗೆ ದೇವರನ್ನು ಆರಾಧಿಸುತ್ತಿರುವವರನ್ನು ನಾವು ಹೇಗೆ ಗುರುತಿಸಬಲ್ಲೆವು, ಮತ್ತು ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ಯಾವ ಗುಂಪು ಬೈಬಲ್ ಸತ್ಯವನ್ನು ಬೋಧಿಸುತ್ತಾ ಬಂದಿದೆ?
19, 20. (ಎ) ಒಬ್ಬ ಕ್ರೈಸ್ತನ ನಡತೆಯು ಏಕೆ ದೇವರಿಗೆ ಘನತೆಯನ್ನು ತರಬಲ್ಲದು? (ಬಿ) ಉತ್ತಮ ನಡತೆಯನ್ನು ಕಾಪಾಡಿಕೊಳ್ಳುವ ಮೂಲಕ ಯಾರು ಇಂದು ದೇವರನ್ನು ಘನಪಡಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವ ಪ್ರಶ್ನೆಗಳು ನಮಗೆ ಸಹಾಯಮಾಡಬಲ್ಲವು?
21. ನಾವು ವೈಯಕ್ತಿಕವಾಗಿ ದೇವರನ್ನು ಘನಪಡಿಸುತ್ತಿದ್ದೇವೋ ಎಂದು ಏಕೆ ಪರಿಗಣಿಸಬೇಕಾಗಿದೆ?
22. ಯೆಹೋವನನ್ನು ಘನಪಡಿಸುವ ಮೂಲಕ, ನೀವು ಯಾವ ವಿಧಗಳಲ್ಲಿ ಆಶೀರ್ವದಿಸಲ್ಪಡುತ್ತೀರಿ, ಮತ್ತು ನಿಮ್ಮ ದೃಢನಿಶ್ಚಯವೇನಾಗಿರಬೇಕು?
[ಪುಟ 12ರಲ್ಲಿರುವ ಚೌಕ]
“ದೇವರು ಯಾರ ಪಕ್ಷವಹಿಸುತ್ತಾನೆ?”
ಎರಡನೇ ಲೋಕ ಯುದ್ಧದ ಸಮಯದಲ್ಲಿ ಜರ್ಮನ್ ವಾಯುಪಡೆಯಲ್ಲಿದ್ದ ಮತ್ತು ತದನಂತರ ಯೆಹೋವನ ಸಾಕ್ಷಿಯಾದ ಒಬ್ಬ ವ್ಯಕ್ತಿಯು ಜ್ಞಾಪಿಸಿಕೊಳ್ಳುವುದು:
“ಆ ಯುದ್ಧದ ವರ್ಷಗಳಲ್ಲಿ ನನ್ನನ್ನು ಕಂಗಾಲಾಗಿಸಿದ ಒಂದು ವಿಷಯವೇನೆಂದರೆ . . . ಹೆಚ್ಚಿನಾಂಶ ಎಲ್ಲಾ ಪಂಗಡಗಳ—ಕ್ಯಾಥೊಲಿಕ್, ಲುಥರನ್, ಎಪಿಸ್ಕೊಪಲ್ ಇತ್ಯಾದಿ—ಪಾದ್ರಿವರ್ಗದವರು, ವಿಮಾನ ಮತ್ತು ಅದರ ತಂಡಗಳು ಅಲ್ಲಲ್ಲಿ ಬೀಳಿಸಲಿಕ್ಕಿದ್ದ ತಮ್ಮ ಮಾರಕ ಸರಕಿನೊಂದಿಗೆ ಗಗನಕ್ಕೆ ಹಾರುವ ಮುಂಚೆ ಅವುಗಳನ್ನು ಆಶೀರ್ವದಿಸುವುದೇ. ‘ದೇವರು ಯಾರ ಪಕ್ಷವಹಿಸುತ್ತಾನೆ?’ ಎಂದು ನಾನು ಯೋಚಿಸಿದೆ.
“ಜರ್ಮನ್ ಸೈನಿಕರು ಗಾಟ್ ಮಿಟ್ ಉನ್ಸ್ (ದೇವರು ನಮ್ಮೊಂದಿಗಿದ್ದಾನೆ) ಎಂದು ಕೊಂಡಿಯ ಮೇಲೆ ಬರೆಯಲ್ಪಟ್ಟಿದ್ದ ಬೆಲ್ಟನ್ನು ಧರಿಸುತ್ತಿದ್ದರು. ಆದರೆ, ‘ಅದೇ ಧರ್ಮಕ್ಕೆ ಮತ್ತು ಅದೇ ದೇವರಿಗೆ ಪ್ರಾರ್ಥಿಸುತ್ತಿದ್ದ ವಿರುದ್ಧ ಪಕ್ಷದ ಸೈನಿಕರೊಂದಿಗೆ ದೇವರು ಏಕೆ ಇರಬಾರದು?’ ಎಂದು ನಾನು ಸೋಜಿಗಪಟ್ಟೆ.”
[ಪುಟ 10ರಲ್ಲಿರುವ ಚಿತ್ರ]
ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ನಿಜವಾಗಿಯೂ ದೇವರನ್ನು ಘನಪಡಿಸುತ್ತಿದ್ದಾರೆ