ಬೈಬಲ್ ವಚನಗಳ ವಿವರಣೆ
ರೋಮನ್ನರಿಗೆ 10:13—‘ಕರ್ತನ ನಾಮವನ್ನು ಹೇಳಿಕೊಳ್ಳಿ’
“ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”—ರೋಮನ್ನರಿಗೆ 10:13, ಹೊಸ ಲೋಕ ಭಾಷಾಂತರ.
‘ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು.’—ರೋಮಾಪುರ 10:13, ಸತ್ಯವೇದವು.
ರೋಮನ್ನರಿಗೆ 10:13—ಅರ್ಥ
ದೇವರು ಪಕ್ಷಪಾತ ಮಾಡಲ್ಲ. ಜನ ಯಾವುದೇ ದೇಶದವರಾಗಿರಲಿ ಜಾತಿಯವರಾಗಿರಲಿ ಬಡವರಾಗಿರಲಿ ಶ್ರೀಮಂತರಾಗಿರಲಿ ರಕ್ಷಣೆ ಪಡೆಯಲು, ಶಾಶ್ವತ ಜೀವ ಪಡೆಯಲು ದೇವರು ಎಲ್ಲರಿಗೂ ಅವಕಾಶ ಕೊಟ್ಟಿದ್ದಾನೆ. ಆದ್ರೆ ನಾವು ರಕ್ಷಣೆ ಪಡಿಬೇಕಾದ್ರೆ, ಶಾಶ್ವತ ಜೀವ ಪಡಿಬೇಕಾದ್ರೆ ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸಬೇಕು. ಯೆಹೋವ ಅನ್ನೋದು ಸರ್ವಶಕ್ತ ದೇವರ ಹೆಸರು.a—ಕೀರ್ತನೆ 83:18.
ಬೈಬಲಲ್ಲಿ ‘ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋದು’ ಅಂತ ಹೇಳುವಾಗ ಅದರ ಅರ್ಥ ಆತನ ಹೆಸ್ರನ್ನು ತಿಳ್ಕೊಳ್ಳೋದು ಮತ್ತು ಆತನನ್ನು ಆರಾಧಿಸುವಾಗ ಆ ಹೆಸ್ರನ್ನು ಹೇಳೋದು ಮಾತ್ರ ಅಲ್ಲ. (ಕೀರ್ತನೆ 116:12-14) ಜೊತೆಗೆ ದೇವರಲ್ಲಿ ಭರವಸೆ ಇಡಬೇಕು, ಸಹಾಯಕ್ಕಾಗಿ ಆತನ ಮೇಲೆ ಹೊಂದಿಕೊಳ್ಳಬೇಕು.—ಕೀರ್ತನೆ 20:7; 99:6.
ಯೇಸು ಕ್ರಿಸ್ತನಿಗೆ ದೇವರ ಹೆಸ್ರು ತುಂಬ ಮುಖ್ಯವಾಗಿತ್ತು. ಆತನು ಶಿಷ್ಯರಿಗೆ ಹೇಗೆ ಪ್ರಾರ್ಥನೆ ಮಾಡೋದು ಅಂತ ಹೇಳಿಕೊಡುವಾಗ ಮೊದಲನೇ ಸಾಲಲ್ಲೇ ಆ ಹೆಸ್ರಿನ ಬಗ್ಗೆ ಹೀಗೆ ಹೇಳಿದನು: “ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.” (ಮತ್ತಾಯ 6:9) ಶಾಶ್ವತ ಜೀವ ಪಡೀಬೇಕಾದ್ರೆ ನಾವು ಯೆಹೋವನನ್ನ ತಿಳ್ಕೊಬೇಕು, ಆತನ ಮಾತನ್ನ ಕೇಳಬೇಕು, ಆತನನ್ನು ಪ್ರೀತಿಸಬೇಕು ಅಂತ ಸಹ ಯೇಸು ಹೇಳಿದನು.—ಯೋಹಾನ 17:3, 6, 26.
ಸತ್ಯವೇದವು ಬೈಬಲಲ್ಲಿ ರೋಮಾಪುರ 10:13 ರಲ್ಲಿರೋ ‘ಕರ್ತನು’ ಯೆಹೋವನೇ ಅಂತ ನಾವು ಹೇಗೆ ಹೇಳಬಹುದು? ರೋಮಾಪುರ 10:13 ರಲ್ಲಿ ಯೋವೇಲ 2:32 ರಲ್ಲಿರೋ ಮಾತುಗಳನ್ನು ಪುನಃ ತಿಳಿಸಲಾಗಿದೆ. ಸತ್ಯವೇದವು ಬೈಬಲಲ್ಲೇ ಯೋವೇಲ 2:32 ನೋಡಿದ್ರೆ ಅಲ್ಲಿ ಯೆಹೋವ ಅಂತಿದೆ, ಬಿರುದು ಇಲ್ಲ ಅಂದ್ರೆ ಕರ್ತನು ಅಂತ ಇಲ್ಲ.b
ರೋಮನ್ನರಿಗೆ 10:13—ಸಂದರ್ಭ
ರೋಮನ್ನರಿಗೆ ಅಧ್ಯಾಯ 10 ರಲ್ಲಿ ಒಂದು ವಿಷ್ಯನ ಒತ್ತಿ ಹೇಳಲಾಗಿದೆ, ಏನೆಂದ್ರೆ ಒಬ್ಬ ವ್ಯಕ್ತಿ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಟ್ಟರೆ ಮಾತ್ರ ದೇವರು ಅವನನ್ನ ಮೆಚ್ಚುತ್ತಾನೆ, ಇಲ್ಲದಿದ್ದರೆ ಇಲ್ಲ. (ರೋಮನ್ನರಿಗೆ 10:9) ಈ ಅಂಶವನ್ನು ಹಳೇ ಒಡಂಬಡಿಕೆ ಅನ್ನೋ ಭಾಗದಿಂದ ಎಷ್ಟೋ ವಚನಗಳನ್ನು ಉಲ್ಲೇಖಿಸುತ್ತಾ ಸ್ಪಷ್ಟವಾಗಿ ತಿಳಿಸಲಾಗಿದೆ. ಒಬ್ಬ ವ್ಯಕ್ತಿ ತನಗೆ ನಂಬಿಕೆ ಇದೆ ಅಂತ ರಕ್ಷಣೆಯ ಸಿಹಿಸುದ್ದಿಯನ್ನು ‘ಎಲ್ರಿಗೂ ಸಾರುವ’ ಮೂಲಕ ತೋರಿಸ್ತಾನೆ. ಆಗ, ಯೇಸು ಮೇಲೆ ನಂಬಿಕೆ ಬೆಳೆಸಿಕೊಂಡು ಶಾಶ್ವತ ಜೀವ ಪಡ್ಕೊಳ್ಳುವ ಅವಕಾಶ ಬೇರೆಯವರಿಗೂ ಸಿಗುತ್ತೆ.—ರೋಮನ್ನರಿಗೆ 10:10, 14, 15, 17.
ರೋಮನ್ನರಿಗೆ ಅಧ್ಯಾಯ 10 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.
a ಹಳೇ ಕಾಲದ ಬೈಬಲ್ ಹಸ್ತಪ್ರತಿಗಳಲ್ಲಿ ದೇವರ ಹೆಸ್ರು ಸುಮಾರು 7,000 ಸಲ ಇದೆ. ಹೀಬ್ರುವಿನಲ್ಲಿ ದೇವರ ಹೆಸ್ರು ನಾಲ್ಕು ಅಕ್ಷರಗಳಲ್ಲಿದೆ. ಅದಕ್ಕೆ ಚತುರಕ್ಷರಿ ಎಂದು ಹೆಸ್ರು. ಅದನ್ನ ಕನ್ನಡದಲ್ಲಿ “ಯೆಹೋವ” ಎಂದು ಭಾಷಾಂತರ ಮಾಡಲಾಗಿದೆ. ಆದ್ರೆ ಕೆಲವು ವಿದ್ವಾಂಸರು ಅದನ್ನ “ಯಾಹ್ವೆ” ಎಂದು ಭಾಷಾಂತರ ಮಾಡಲು ಇಷ್ಟಪಡ್ತಾರೆ.
b ಬೈಬಲಿನ ಕೆಲವು ಪುಸ್ತಕಗಳನ್ನು ಬರೆದ ಕ್ರೈಸ್ತರು ಹಳೇ ಒಡಂಬಡಿಕೆಯಲ್ಲಿ ದೇವರ ಹೆಸರಿರುವ ವಚನಗಳನ್ನು ತಮ್ಮ ಬರಹದಲ್ಲಿ ಉಲ್ಲೇಖಿಸುವಾಗ ದೇವರ ಹೆಸರನ್ನು ಬಳಸಿರುವ ಸಾಧ್ಯತೆ ಇದೆ. ದಿ ಆಂಕರ್ ಬೈಬಲ್ ಡಿಕ್ಷನರಿ ಹೀಗೆ ಹೇಳುತ್ತೆ: “ಹೊಸ ಒಡಂಬಡಿಕೆಯನ್ನು ಮೊದಲನೇ ಸಲ ಬರೆದಾಗ ಅದರಲ್ಲಿ ಯಾಹ್ವೆ (ಚತುರಕ್ಷರಿ) ಅಂತ ದೇವರ ಹೆಸರು ಇದೆ. ಇದಕ್ಕೆ ಕೆಲವು ಸಾಕ್ಷಿಗಳೂ ಇವೆ. ಹಳೇ ಒಡಂಬಡಿಕೆಯಲ್ಲಿರೋ ಮಾತುಗಳನ್ನು ಹೊಸ ಒಡಂಬಡಿಕೆಯಲ್ಲಿ ಪುನಃ ತಿಳಿಸುವಾಗ ಎಲ್ಲ ಕಡೆ ಅಥವಾ ಕೆಲವು ಕಡೆ ದೇವರ ಹೆಸರು ಇದೆ.” (ಸಂಪುಟ 6, ಪುಟ 392) ಇದರ ಬಗ್ಗೆ ಹೆಚ್ಚು ತಿಳಿಯಲು ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಲ್ಲಿ ಪರಿಶಿಷ್ಟ ಎ5 “ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು” ನೋಡಿ. ರೋಮನ್ನರಿಗೆ 10:13 ರಲ್ಲಿ ಯಾವ ಯಾವ ಬೈಬಲ್ ಭಾಷಾಂತರಗಳು ದೇವರ ಹೆಸ್ರನ್ನ ಉಪಯೋಗಿಸಿವೆ ಅಂತ ತಿಳಿಯಲು ಪರಿಶಿಷ್ಟ C2 ರಲ್ಲಿರುವ (ಇಂಗ್ಲಿಷ್) ಪಟ್ಟಿ ನೋಡಿ.