ಅಧ್ಯಯನ ಲೇಖನ 18
ಯೇಸುವಿನ ಶಿಷ್ಯರಾಗೋಕೆ ನಿಮ್ಮನ್ನ ಯಾವುದು ತಡೆಯುತ್ತಿದೆ?
“ಒಂಚೂರು ಸಂಶಯಪಡದೆ ನನ್ನ ಮೇಲೆ ನಂಬಿಕೆ ಇಡೋ ವ್ಯಕ್ತಿ ಸಂತೋಷವಾಗಿ ಇರ್ತಾನೆ.”—ಮತ್ತಾ. 11:6.
ಗೀತೆ 65 ಇದೇ ಮಾರ್ಗ
ಕಿರುನೋಟa
1. ನೀವು ಬೇರೆಯವರಿಗೆ ಬೈಬಲ್ ಬಗ್ಗೆ ಹೇಳಿದಾಗ ಏನಾಗಬಹುದು?
ಮೊದಮೊದಲು ಸತ್ಯ ಕಲಿತಾಗ ಹೇಗನಿಸಿತು ಅಂತ ನಿಮಗೆ ನೆನಪಿದ್ಯಾ? ಬೈಬಲಿಂದ ಕಲಿತ ವಿಷಯಗಳು ನಿಮಗೆ ತುಂಬಾ ಇಷ್ಟ ಆಯ್ತು. ಅದನ್ನು ಬೇರೆಯವರಿಗೆ ಹೇಳಿದ್ರೆ ಅವರಿಗೂ ಇಷ್ಟ ಆಗುತ್ತೆ, ಅವರ ಜೀವನ ಚೆನ್ನಾಗಿರುತ್ತೆ, ಹೊಸ ಲೋಕದಲ್ಲಿ ಜೀವಿಸುವ ನಿರೀಕ್ಷೆನೂ ಸಿಗುತ್ತೆ ಅಂತ ಅಂದುಕೊಂಡ್ರಿ. (ಕೀರ್ತ. 119:105) ಹಾಗಾಗಿ ಖುಷಿಖುಷಿಯಾಗಿ ನಿಮ್ಮ ಸ್ನೇಹಿತರಿಗೆ ಸಂಬಂಧಿಕರಿಗೆ ಬೈಬಲಿನ ವಿಷಯಗಳನ್ನ ಹೇಳಿದ್ರಿ. ಆದರೆ ಹೆಚ್ಚಿನವರು ಆ ವಿಷಯಗಳನ್ನು ಕೇಳಿಸಿಕೊಳ್ಳದೇ ಇದ್ದಾಗ ನಿಮಗೆ ಆಶ್ಚರ್ಯ ಆಯ್ತಲ್ಲ?
2-3. ಯೇಸುವಿನ ಕಾಲದಲ್ಲಿ ಜನರು ಅವನ ಜೊತೆ ಹೇಗೆ ನಡಕೊಂಡ್ರು?
2 ನೀವು ಸಿಹಿಸುದ್ದಿ ಸಾರಿದಾಗ ಜನ ಕೇಳ್ದೆ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಯಾಕಂದ್ರೆ ಯೇಸು ಅದ್ಭುತಗಳನ್ನ ಮಾಡಿದ್ರೂ, ಯೆಹೋವನ ಸಹಾಯ ಅವನಿಗಿದೆ ಅಂತ ಗೊತ್ತಿದ್ರೂ ಹೆಚ್ಚಿನ ಜನರು ತಿರಸ್ಕರಿಸಿದರು. ಉದಾಹರಣೆಗೆ ಯೇಸು ಲಾಜರನಿಗೆ ಪುನಃ ಜೀವ ಕೊಟ್ಟಾಗ ಅದೊಂದು ಅದ್ಭುತ ಅಂತ ಯೇಸುವಿನ ವಿರೋಧಿಗಳು ಒಪ್ಪಿಕೊಂಡರು. ಆದ್ರೆ ಯೇಸುವೇ ಮೆಸ್ಸೀಯ ಅಂತ ಒಪ್ಪಿಕೊಳ್ಳೋಕೆ ತಯಾರಿರಲಿಲ್ಲ. ಅದರ ಬದಲಿಗೆ ಯೆಹೂದಿ ನಾಯಕರು ಯೇಸುವನ್ನು ಮತ್ತು ಲಾಜರನನ್ನ ಕೊಲ್ಲೋಕೆ ನೋಡಿದರು.—ಯೋಹಾ. 11:47, 48, 53; 12:9-11.
3 ತುಂಬಾ ಜನ ತನ್ನನ್ನ ಮೆಸ್ಸೀಯ ಅಂತ ನಂಬಲ್ಲ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. (ಯೋಹಾ. 5:39-44) ಅದಕ್ಕೆ ಯೇಸು ಯೋಹಾನನ ಶಿಷ್ಯರಿಗೆ “ಒಂಚೂರು ಸಂಶಯಪಡದೆ ನನ್ನ ಮೇಲೆ ನಂಬಿಕೆ ಇಡೋ ವ್ಯಕ್ತಿ ಸಂತೋಷವಾಗಿ ಇರ್ತಾನೆ” ಅಂದ. (ಮತ್ತಾ. 11:2, 3, 6) ತುಂಬಾ ಜನ ಯೇಸುವನ್ನ ಯಾಕೆ ನಂಬಲಿಲ್ಲ?
4. ಈ ಲೇಖನದಲ್ಲಿ ನಾವೇನನ್ನ ಚರ್ಚಿಸುತ್ತೇವೆ?
4 ಒಂದನೇ ಶತಮಾನದಲ್ಲಿ ಹೆಚ್ಚಿನ ಜನರು ಯೇಸುವನ್ನು ಯಾಕೆ ನಂಬಲಿಲ್ಲ? ಇವತ್ತು ಹೆಚ್ಚಿನವರು ನಾವು ಹೇಳೋ ಸಂದೇಶವನ್ನು ಯಾಕೆ ಕೇಳಲ್ಲ? ಮುಖ್ಯವಾಗಿ ಯೇಸುವಿನ ಶಿಷ್ಯರಾಗೋಕೆ ಏನಾದರೂ ತಡೀತಾ ಇರೋದಾದರೆ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಉತ್ತರ ನೋಡ್ತೀವಿ.
(1) ಯೇಸು ಯಾರು? ಎಲ್ಲಿಂದ ಬಂದ?
5. ಯೇಸುವೇ ಮೆಸ್ಸೀಯ ಅಂತ ಯಾಕೆ ಕೆಲವರು ನಂಬಲಿಲ್ಲ?
5 ಯೇಸು ಒಳ್ಳೆ ಶಿಕ್ಷಕ, ದೊಡ್ಡದೊಡ್ಡ ಅದ್ಭುತಗಳನ್ನು ಮಾಡುತ್ತಾನೆ ಅಂತ ಜನ ಏನೋ ಒಪ್ಪಿಕೊಂಡರು. ಆದರೆ ಅವನ ಮೇಲೆ ನಂಬಿಕೆ ಇಡಲಿಲ್ಲ. ಯಾಕಂದ್ರೆ ಅವನು ಬಡಕುಟುಂಬದಿಂದ ಬಂದಿದ್ದ. ಅವನ ತಂದೆ ಬಡಗಿ ಆಗಿದ್ದ. ಅಷ್ಟೇ ಅಲ್ಲ, ಅವನ ಊರು ನಜರೇತ್ ಆಗಿತ್ತು. ಆ ಊರನ್ನು ಜನ ಲೆಕ್ಕಕ್ಕೇ ತಗೊಳ್ತಿರಲಿಲ್ಲ. ಯೇಸುವಿನ ಶಿಷ್ಯನಾಗಿದ್ದ ನತಾನಯೇಲನಿಗೂ ಮೊದಮೊದಲು ಹೀಗೆ ಅನಿಸಿತು. ಅದಕ್ಕೆ ಅವನು “ನಜರೇತಿಂದ ಏನಾದ್ರೂ ಒಳ್ಳೇದು ಬರುತ್ತಾ?” ಅಂತ ಕೇಳಿದ. (ಯೋಹಾ. 1:46) ನತಾನಯೇಲನಿಗೂ ನಜರೇತ್ ಪಟ್ಟಣ ಅಷ್ಟಕ್ಕಷ್ಟೇ ಇದ್ದಿರಬೇಕು. ಅಥವಾ ಮೆಸ್ಸೀಯ ನಜರೇತಲ್ಲಿ ಅಲ್ಲ ಬೆತ್ಲೆಹೇಮಲ್ಲಿ ಹುಟ್ಟುತ್ತಾನೆ ಅಂತ ಮೀಕ 5:2ರಲ್ಲಿ ಹೇಳಿದ ಭವಿಷ್ಯವಾಣಿ ಅವನ ಮನಸ್ಸಲ್ಲಿ ಇದ್ದಿರಬೇಕು.
6. ಯೇಸುವೇ ಮೆಸ್ಸೀಯ ಅಂತ ಕಂಡು ಹಿಡಿಯೋಕೆ ಜನರಿಗೆ ಯಾವುದು ಸಹಾಯ ಮಾಡುತ್ತಿತ್ತು?
6 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಮೆಸ್ಸೀಯ “ಯಾರು? ಎಲ್ಲಿಂದ ಬಂದ? ಅಂತ ತಿಳಿಯೋಕೆ” ಯೇಸುವಿನ ಶತ್ರುಗಳು ಯಾರೂ ಪ್ರಯತ್ನಿಸಲ್ಲ ಅಂತ ಪ್ರವಾದಿ ಯೆಶಾಯ ಮೊದಲೇ ತಿಳಿಸಿದ್ದ. (ಯೆಶಾ. 53:8) ಆದ್ರೆ ಯೇಸು ಬಗ್ಗೆ ಈಗಾಗಲೇ ಅನೇಕ ಭವಿಷ್ಯವಾಣಿಗಳಿತ್ತು. ಯೇಸುವಿನ ವಿರೋಧಿಗಳು ಸಮಯ ತಗೊಂಡು ಯೇಸು ಬಗ್ಗೆ ಚೆನ್ನಾಗಿ ವಿಚಾರಿಸಿ ತಿಳುಕೊಂಡಿದಿದ್ರೆ ಯೇಸು ಹುಟ್ಟಿದ್ದು ಬೆತ್ಲೆಹೇಮಲ್ಲಿ, ಅವನು ದಾವೀದನ ವಂಶದವನು ಅಂತ ಅರ್ಥ ಆಗ್ತಿತ್ತು. (ಲೂಕ 2:4-7) ಮೀಕ 5:2ರಲ್ಲಿ ಹೇಳಿರೋ ಜಾಗದಲ್ಲೇ ಯೇಸು ಹುಟ್ಟಿದನು. ಹಾಗಿದ್ದರೂ ಜನ ಯಾಕೆ ಯೇಸುವನ್ನು ನಂಬಲಿಲ್ಲ? ಯಾಕಂದ್ರೆ ಯೇಸು ಬಗ್ಗೆ ಚೆನ್ನಾಗಿ ವಿಚಾರಿಸಿ ತಿಳುಕೊಳ್ಳೋ ಮುಂಚೆನೇ ಅವರು ತೀರ್ಮಾನ ಮಾಡಿಬಿಟ್ಟರು. ಅದಕ್ಕೆ ಯೇಸುವನ್ನು ನಂಬಲಿಲ್ಲ.
7. ಇವತ್ತು ಅನೇಕರು ಯೆಹೋವನ ಸಾಕ್ಷಿಗಳು ಹೇಳೋ ಸಂದೇಶವನ್ನ ಯಾಕೆ ಕೇಳಿಸಿಕೊಳ್ಳಲ್ಲ?
7 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಇವತ್ತೂ ಹಾಗೇ ಇದ್ದಾರೆ. ಯೆಹೋವನ ಜನರಲ್ಲಿ ಹೆಚ್ಚಿನವರು ಶ್ರೀಮಂತರಲ್ಲ. ಅದಕ್ಕೇ ಲೋಕದ ಜನ ಅವರನ್ನ “ಅಷ್ಟೇನೂ ಓದಿಲ್ಲದ ಸಾಮಾನ್ಯ ಜನ” ಅಂತ ಅಂದುಕೊಳ್ಳುತ್ತಾರೆ. (ಅ. ಕಾ. 4:13) ‘ಇವರು ದೊಡ್ಡ ದೊಡ್ಡ ಧಾರ್ಮಿಕ ಶಾಲೆಗಳಲ್ಲಿ ಓದಿಲ್ಲ. ಅಂದ್ಮೇಲೆ ಬೈಬಲ್ ಬಗ್ಗೆ ಇವರೇನು ಹೇಳಿಕೊಡುತ್ತಾರೆ?’ ಅಂತ ಕೆಲವರು ಯೋಚಿಸುತ್ತಾರೆ. ಇನ್ನು ಕೆಲವರು ‘ಯೆಹೋವನ ಸಾಕ್ಷಿಗಳು ಅಮೆರಿಕದಲ್ಲಿರೋ ಧರ್ಮದವರು’ ಅಂತ ಹೇಳ್ತಾರೆ. ಆದರೆ ಸತ್ಯ ಏನೆಂದರೆ ಎಲ್ಲಾ ಯೆಹೋವನ ಸಾಕ್ಷಿಗಳು ಅಮೆರಿಕದಲ್ಲಿ ಇಲ್ಲ. ಲೋಕದ ಬೇರೆ ಬೇರೆ ಕಡೆ ಇದ್ದಾರೆ. ಯೆಹೋವನ ಸಾಕ್ಷಿಗಳು ಯೇಸು ಕ್ರಿಸ್ತನನ್ನು ನಂಬಲ್ಲ ಅಂತಾನೂ ಕೆಲವರು ಹೇಳ್ತಾರೆ. ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳಿಗೆ “ಕಮ್ಯೂನಿಸ್ಟರು,” “ಅಮೇರಿಕಾದ ಗೂಢಚಾರರು,” “ತೀವ್ರಗಾಮಿಗಳು” ಅಂತೆಲ್ಲಾ ಪಟ್ಟ ಕಟ್ಟಿದ್ದಾರೆ. ಇಂಥ ತಪ್ಪು ಅಭಿಪ್ರಾಯ ಇರೋದ್ರಿಂದ, ನಿಜ ಏನಂತ ಗೊತ್ತಿಲ್ಲದೇ ಇರೋದ್ರಿಂದ ಯೆಹೋವನ ಸಾಕ್ಷಿಗಳು ಹೇಳೋ ಸಂದೇಶವನ್ನು ಅನೇಕರು ಇವತ್ತು ನಂಬುತ್ತಿಲ್ಲ.
8. ಇವತ್ತು ಯೆಹೋವನ ಸಾಕ್ಷಿಗಳ ಬಗ್ಗೆ ತಿಳುಕೊಳ್ಳೋಕೆ ಅಪೊಸ್ತಲರ ಕಾರ್ಯ 17:11 ಹೇಳೋ ಪ್ರಕಾರ ಜನರು ಏನು ಮಾಡಬೇಕು?
8 ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು? ಒಂದು ವಿಷಯದ ಬಗ್ಗೆ ನಿಜ ಏನಂತ ಚೆನ್ನಾಗಿ ಪರೀಕ್ಷಿಸಿ ತಿಳುಕೊಳ್ಳಬೇಕು. ಸುವಾರ್ತಾ ಪುಸ್ತಕ ಬರೆದ ಲೂಕ ಇದನ್ನೇ ಮಾಡಿದ. ಅವನು ಯೇಸು ಬಗ್ಗೆ ‘ಮೊದಲಿಂದ ಏನೇನು ನಡಿತು ಅಂತ ಎಲ್ಲ ವಿಷಯಗಳನ್ನು ಪರೀಕ್ಷಿಸಿ’ ತಿಳುಕೊಂಡು ಆಮೇಲೆ ಬರೆದ. ಯಾಕಂದ್ರೆ ಯೇಸು ಬಗ್ಗೆ ‘ಜನ ಕೇಳಿಸಿಕೊಂಡ ವಿಷಯಗಳೆಲ್ಲ ನಿಜ ಅಂತ ನಂಬಬೇಕು’ ಅನ್ನೋದೇ ಅವನ ಆಸೆ ಆಗಿತ್ತು. (ಲೂಕ 1:1-4) ಬೆರೋಯದಲ್ಲಿದ್ದ ಯೆಹೂದ್ಯರು ಲೂಕನ ತರಾನೇ ಮಾಡಿದ್ರು. ಅವರು ಯೇಸು ಬಗ್ಗೆ ಸಿಹಿಸುದ್ದಿಯನ್ನು ಮೊದಲು ಕೇಳಿಸಿಕೊಂಡಾಗ ಅದು ನಿಜನಾ ಅಂತ ಪವಿತ್ರ ಗ್ರಂಥದಲ್ಲಿ ಪರೀಕ್ಷಿಸಿ ನೋಡಿದ್ರು. (ಅಪೊಸ್ತಲರ ಕಾರ್ಯ 17:11 ಓದಿ.) ಅದೇ ತರ ಇವತ್ತು ಜನರೂ ನಿಜ ಏನಂತ ಮೊದಲು ಪರೀಕ್ಷಿಸಿ ತಿಳುಕೊಳ್ಳಬೇಕು. ಯೆಹೋವನ ಸಾಕ್ಷಿಗಳು ಕಲಿಸೋ ವಿಷಯಗಳು ಬೈಬಲಲ್ಲಿ ಇದ್ಯಾ ಅಂತ ನೋಡಬೇಕು. ಅಷ್ಟೇ ಅಲ್ಲ, ಆಧುನಿಕ ದಿನದಲ್ಲಿ ಯೆಹೋವನ ಸಾಕ್ಷಿಗಳು ಏನೆಲ್ಲ ಮಾಡಿದ್ದಾರೆ ಅಂತನೂ ತಿಳುಕೊಳ್ಳಬೇಕು. ಹೀಗೆ ಮಾಡಿದರೆ ಬೇರೆಯವರು ಹೇಳೋದನ್ನು ಕೇಳಿ ಮೋಸ ಹೋಗಲ್ಲ. ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಭಿಪ್ರಾಯ ಬೆಳೆಸಿಕೊಳ್ಳಲ್ಲ.
(2) ತಾನು ಮೆಸ್ಸೀಯ ಅಂತ ಸಾಬೀತು ಮಾಡೋಕೆ ಯೇಸು ಅದ್ಭುತ ಮಾಡಲಿಲ್ಲ
9. ಜನ ಕೇಳಿದ ಅದ್ಭುತವನ್ನು ಯೇಸು ಮಾಡದೇ ಇದ್ದಾಗ ಏನಾಯ್ತು?
9 ಯೇಸುನೇ ಮೆಸ್ಸೀಯ ಅಂತ ನಂಬೋಕೆ ಆ ಕಾಲದಲ್ಲಿದ್ದ ಕೆಲವರಿಗೆ ಅವನ ಬೋಧನೆಗಳು ಸಾಕಾಗಲಿಲ್ಲ. ಅದಕ್ಕೆ ಅವರು ‘ದೇವರ ಹೆಸ್ರಲ್ಲಿ ಒಂದು ಅದ್ಭುತ ಮಾಡಿ ನೀನು ಮೆಸ್ಸೀಯ ಅಂತ ತೋರಿಸಿಕೊಡು’ ಅಂತ ಕೇಳಿದ್ರು. (ಮತ್ತಾ. 16:1) ಅವರು ಈ ರೀತಿ ಯಾಕೆ ಕೇಳಿರಬಹುದು? ಅವರು ದಾನಿಯೇಲ 7:13, 14ರಲ್ಲಿರೋ ಭವಿಷ್ಯವಾಣಿಯನ್ನು ತಪ್ಪಾಗಿ ಅರ್ಥಮಾಡಿಕೊಂಡು ಈ ರೀತಿ ಕೇಳಿರಬಹುದು. ಆ ಭವಿಷ್ಯವಾಣಿ ನೆರವೇರೋಕೆ ಯೆಹೋವ ನೇಮಿಸಿದ ಸಮಯ ಇನ್ನೂ ಬಂದಿರಲಿಲ್ಲ. ಅಷ್ಟೇ ಅಲ್ಲ, ಯೇಸುನೇ ಮೆಸ್ಸೀಯ ಅಂತ ಸಾಬೀತು ಆಗೋಕೆ ಅವನು ಕಲಿಸಿದ ವಿಷಯಗಳೇ ಸಾಕಾಗಿತ್ತು. ಹಾಗಾಗಿ ಜನರು ಕೇಳಿದ ಅದ್ಭುತವನ್ನು ಯೇಸು ಮಾಡಲಿಲ್ಲ. ಅದಕ್ಕೆ ಜನ ಅವನನ್ನು ನಂಬಲಿಲ್ಲ.—ಮತ್ತಾ. 16:4.
10. ಮೆಸ್ಸೀಯನ ಬಗ್ಗೆ ಯೆಶಾಯ ಬರೆದ ಮಾತನ್ನು ಯೇಸು ಹೇಗೆ ನೆರವೇರಿಸಿದನು?
10 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಮೆಸ್ಸೀಯನ ಬಗ್ಗೆ ಪ್ರವಾದಿ ಯೆಶಾಯ ಹೀಗೆ ಬರೆದಿದ್ದ: “ಅವನು ಕೂಗಾಡಲ್ಲ ಅಥವಾ ತನ್ನ ಧ್ವನಿ ಎತ್ತಿ ಮಾತಾಡಲ್ಲ, ತನ್ನ ಸ್ವರ ಬೀದಿಯಲ್ಲಿ ಕೇಳೋ ತರ ಬಿಡಲ್ಲ.” (ಯೆಶಾ. 42:1, 2) ಯೇಸು ಯಾವತ್ತೂ ಜನರ ಗಮನವನ್ನು ತನ್ನ ಕಡೆಗೆ ಸೆಳೆಯೋ ತರ ಸೇವೆ ಮಾಡಲಿಲ್ಲ. ಅವನು ದೊಡ್ಡದೊಡ್ಡ ದೇವಾಲಯಗಳನ್ನು ಕಟ್ಟಿಲ್ಲ. ವಿಶೇಷವಾದ ಬಟ್ಟೆ-ಬರೆಗಳನ್ನ ಹಾಕಿಕೊಳ್ಳಲಿಲ್ಲ. ತನ್ನನ್ನು ದೊಡ್ಡದೊಡ್ಡ ಬಿರುದುಗಳಿಂದ ಕರೆಯಿರಿ ಅಂತಾನೂ ಜನರಿಗೆ ಹೇಳಲಿಲ್ಲ. ಅವನ ಪ್ರಾಣ ಅಪಾಯದಲ್ಲಿ ಇದ್ದಾಗ ರಾಜ ಹೆರೋದನ ಮುಂದೆ ಒಂದು ಅದ್ಭುತ ಮಾಡಿ ತಪ್ಪಿಸಿಕೊಳ್ಳೋಕೂ ಪ್ರಯತ್ನಿಸಲಿಲ್ಲ. (ಲೂಕ 23:8-11) ಇದಕ್ಕಿಂತ ಮುಂಚೆ ಯೇಸು ಅದ್ಭುತಗಳನ್ನು ಮಾಡಿದ್ರೂ ಸಿಹಿಸುದ್ದಿ ಸಾರೋಕೆ ಹೆಚ್ಚು ಗಮನ ಕೊಟ್ಟಿದ್ದನು. ಹಾಗಾಗಿ ಯೇಸು ತನ್ನ ಶಿಷ್ಯರಿಗೆ “ನಾನು ಬಂದಿರೋದೇ ಆ ಕೆಲಸ ಮಾಡೋಕೆ” ಅಂತ ಹೇಳಿದನು.—ಮಾರ್ಕ 1:38.
11. ಇವತ್ತು ಕೆಲವರು ನಮ್ಮ ಸಂದೇಶ ಕೇಳದೇ ಇರೋಕೆ ಇನ್ನೊಂದು ಕಾರಣ ಏನು?
11 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಇವತ್ತೂ ಹಾಗೇ ಇದ್ದಾರೆ. ದೊಡ್ಡದೊಡ್ಡ ಧಾರ್ಮಿಕ ಕಟ್ಟಡಗಳನ್ನು, ಧರ್ಮಗುರುಗಳ ಬಿರುದುಗಳನ್ನು, ಆಡಂಬರದ ಹಬ್ಬಗಳನ್ನು ನೋಡಿ ಜನ ಮರುಳಾಗುತ್ತಾರೆ. ಆ ಹಬ್ಬಗಳು ಎಲ್ಲಿಂದ ಹುಟ್ಟಿಕೊಂಡಿದೆ, ಅದರ ಅರ್ಥ ಏನು ಅಂತ ಅವರಿಗೆ ಗೊತ್ತಿಲ್ಲ. ಆ ಧರ್ಮಗಳ ಜನರು ದೇವರ ಬಗ್ಗೆ ಆಗಲಿ, ದೇವರ ಉದ್ದೇಶಗಳ ಬಗ್ಗೆ ಆಗಲಿ ಕಲಿತಾ ಇಲ್ಲ. ಆದರೆ ಯೆಹೋವನ ಸಾಕ್ಷಿಗಳು ಯೆಹೋವನ ಇಷ್ಟ ಏನು ಮತ್ತು ಅದರ ಪ್ರಕಾರ ನಡೆಯೋಕೆ ಏನು ಮಾಡಬೇಕು ಅಂತ ಕೂಟಗಳಲ್ಲಿ ಕಲಿತಾರೆ. ನಮ್ಮ ರಾಜ್ಯ ಸಭಾಗೃಹಗಳು ಕ್ಲೀನಾಗಿ, ನೀಟಾಗಿ, ಸರಳವಾಗಿ ಇರುತ್ತೆ. ಆಡಂಬರವಾಗಿ ಇರಲ್ಲ. ಅಲ್ಲಿ ಮೇಲ್ವಿಚಾರಕರು ವಿಶೇಷವಾದ ಬಟ್ಟೆಗಳನ್ನು ಹಾಕಿಕೊಳ್ಳಲ್ಲ. ಅವರಿಗೆ ಧಾರ್ಮಿಕ ಬಿರುದುಗಳೂ ಇಲ್ಲ. ನಾವು ಬೈಬಲಲ್ಲಿ ಇರೋದನ್ನೇ ನಂಬುತ್ತೀವಿ ಮತ್ತು ಬೇರೆಯವರಿಗೆ ಕಲಿಸುತ್ತೀವಿ. ಆದರೆ ನಾವು ಅದ್ಧೂರಿಯಾದ ಹಬ್ಬಗಳನ್ನು ಆಚರಿಸಲ್ಲ ಮತ್ತು ಜನರ ಕಿವಿಗೆ ಇಷ್ಟ ಆಗೋ ವಿಷಯಗಳನ್ನ ಹೇಳಲ್ಲ ಅನ್ನೋ ಕಾರಣಕ್ಕೆ ತುಂಬ ಜನ ನಾವು ಹೇಳೋ ಸಂದೇಶವನ್ನು ಕೇಳಿಸಿಕೊಳ್ಳಲ್ಲ.
12. ಇಬ್ರಿಯ 11:1, 6ರ ಪ್ರಕಾರ, ನಾವು ಬಲವಾದ ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು?
12 ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು? ಅಪೊಸ್ತಲ ಪೌಲ ರೋಮಿನ ಕ್ರೈಸ್ತರಿಗೆ ಹೀಗೆ ಬರೆದನು: “ಒಬ್ಬನು ಆ ಸುದ್ದಿಯನ್ನ ಕೇಳಿಸ್ಕೊಂಡ ಮೇಲೆನೇ ನಂಬಿಕೆ ಇಡೋಕೆ ಆಗುತ್ತೆ. ಯಾರಾದ್ರೂ ಕ್ರಿಸ್ತನ ಬಗ್ಗೆ ಸಾರಿದಾಗ್ಲೇ ಅವನು ಆ ಸುದ್ದಿ ಕೇಳಿಸ್ಕೊಳ್ತಾನೆ.” (ರೋಮ. 10:17) ಹಾಗಾಗಿ ಬೈಬಲನ್ನು ಓದಿ ಅಧ್ಯಯನ ಮಾಡೋದರಿಂದ ಮಾತ್ರ ನಮ್ಮ ನಂಬಿಕೆ ಬೆಳೆಯುತ್ತೇ ಹೊರತು ಬೈಬಲಲ್ಲಿ ಇಲ್ಲದಿರೋ ಹಬ್ಬಗಳನ್ನ, ಆಚಾರ-ವಿಚಾರಗಳನ್ನ ಮಾಡೋದರಿಂದ ಅಲ್ಲ. ಆ ಅದ್ಧೂರಿ ಹಬ್ಬಗಳು, ಆಚಾರ-ವಿಚಾರಗಳು ಕಣ್ಣಿಗೆ ಖುಷಿ ಕೊಟ್ಟರೂ ನಂಬಿಕೆ ಬೆಳೆಸಿಕೊಳ್ಳೋಕೆ ಸಹಾಯ ಮಾಡಲ್ಲ. ದೇವರ ಬಗ್ಗೆ ಚೆನ್ನಾಗಿ ತಿಳುಕೊಂಡು ಬಲವಾದ ನಂಬಿಕೆ ಬೆಳೆಸಿಕೊಳ್ಳಬೇಕು. ಯಾಕಂದ್ರೆ “ನಂಬಿಕೆ ಇಲ್ಲದೆ ಇದ್ರೆ ದೇವರನ್ನ ಖುಷಿಪಡಿಸೋಕೆ ಆಗೋದೇ ಇಲ್ಲ” ಅಂತ ಬೈಬಲ್ ಹೇಳುತ್ತೆ. (ಇಬ್ರಿಯ 11:1, 6 ಓದಿ.) ಹಾಗಾಗಿ ನಾವು ಬೈಬಲಿಂದ ಕಲಿತಾ ಇರೋದು ಸತ್ಯ ಅಂತ ನಂಬೋಕೆ ಪವಾಡಗಳನ್ನು ನೋಡಬೇಕಾಗಿಲ್ಲ. ಬದಲಿಗೆ ಬೈಬಲಲ್ಲಿರೋ ನಂಬಿಕೆ ಕಟ್ಟುವಂಥ ವಿಷಯಗಳನ್ನು ಚೆನ್ನಾಗಿ ಓದಿ ಅಧ್ಯಯನ ಮಾಡೋದು ಮುಖ್ಯ. ಹೀಗೆ ಮಾಡಿದ್ರೆ ನಾವು ಕಲಿತಾ ಇರೋ ವಿಷಯ ಸತ್ಯ ಅಂತ ನಮಗೆ ಮನವರಿಕೆ ಆಗುತ್ತೆ. ಏನೇ ಸಂಶಯ ಬಂದರೂ ಬಗೆಹರಿಸಿಕೊಳ್ಳೋಕೆ ಸುಲಭ ಆಗುತ್ತೆ.
(3) ಯೆಹೂದ್ಯರ ಎಲ್ಲಾ ಸಂಪ್ರದಾಯಗಳನ್ನು ಯೇಸು ಪಾಲಿಸಲಿಲ್ಲ
13. ಹೆಚ್ಚಿನವರು ಯೇಸುವನ್ನು ಮೆಸ್ಸೀಯ ಅಂತ ನಂಬದೇ ಇರೋಕೆ ಕಾರಣವೇನು?
13 ಯೋಹಾನನ ಶಿಷ್ಯರು ಯೇಸು ಹತ್ರ ಬಂದು ‘ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡಲ್ಲ’ ಅಂತ ಕೇಳಿದ್ರು. ಅದಕ್ಕೆ ಯೇಸು ತಾನು ಇನ್ನೂ ಬದುಕಿರುವಾಗ ಉಪವಾಸ ಮಾಡಬೇಕಾಗಿಲ್ಲ ಅಂತ ಹೇಳಿದನು. (ಮತ್ತಾ. 9:14-17) ಅವನು ಯೆಹೂದ್ಯರ ಆಚಾರ-ವಿಚಾರಗಳನ್ನು ಪಾಲಿಸದೇ ಇದ್ದಿದ್ದು ಫರಿಸಾಯರಿಗೆ ಮತ್ತು ಯೇಸುವನ್ನು ವಿರೋಧಿಸುತ್ತಿದ್ದ ಇನ್ನೂ ಕೆಲವರಿಗೆ ಹಿಡಿಸುತ್ತಿರಲಿಲ್ಲ. ಸಬ್ಬತ್ ದಿನದಲ್ಲಿ ರೋಗಿಗಳನ್ನು ಯೇಸು ವಾಸಿ ಮಾಡಿದ್ದನ್ನು ನೋಡಿ ಅವರಿಗೆ ಕೋಪ ಬಂದಿತ್ತು. (ಮಾರ್ಕ 3:1-6; ಯೋಹಾ. 9:16) ಅವರು ಸಬ್ಬತ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸ್ತೀವಿ ಅಂತ ಹೇಳಿಕೊಳ್ಳುತ್ತಿದ್ದರು. ಇನ್ನೊಂದು ಕಡೆ, ದೇವಾಲಯದಲ್ಲಿ ವ್ಯಾಪಾರ-ವ್ಯವಹಾರ ಮಾಡುತ್ತಿದ್ದರು. ಯೇಸು ಇದನ್ನು ಖಂಡಿಸಿದಾಗ ಅವರು ಅವನ ಮೇಲೆ ಕಿಡಿಕಾರಿದರು. (ಮತ್ತಾ. 21:12, 13, 15) ಅಷ್ಟೇ ಅಲ್ಲ ಯೇಸು ನಜರೇತಿನ ಸಭಾಮಂದಿರದಲ್ಲಿ ಸಾರುತ್ತಿದ್ದಾಗ ಅಲ್ಲಿದ್ದ ಜನರನ್ನು ಹಿಂದಿನ ಇಸ್ರಾಯೇಲ್ಯರಿಗೆ ಹೋಲಿಸಿದನು. ಇಸ್ರಾಯೇಲ್ಯರು ಎಷ್ಟು ಸ್ವಾರ್ಥಿಗಳಾಗಿದ್ದರು, ಅವರಿಗೆ ನಂಬಿಕೆ ಕೊರತೆ ಇತ್ತು ಅಂತ ಹೇಳಿದ್ದನು. ಇದ್ರಿಂದ ಅಲ್ಲಿದ್ದವರಿಗೆಲ್ಲ ಮೈ ಉರಿದು ಹೋಯ್ತು. (ಲೂಕ 4:16, 25-30) ಹೀಗೆ ಯೇಸು ಜನರಿಗೆ ಇಷ್ಟ ಆಗದ ವಿಷಯಗಳನ್ನು ಹೇಳಿದ್ದಕ್ಕೆ ಅವರು ಅವನನ್ನು ಮೆಸ್ಸೀಯ ಅಂತ ನಂಬಲಿಲ್ಲ.—ಮತ್ತಾ. 11:16-19.
14. ಯೇಸು ಯಾಕೆ ಮನುಷ್ಯರು ಮಾಡಿದ ಸಂಪ್ರದಾಯಗಳನ್ನು ಖಂಡಿಸಿದನು?
14 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಯೆಹೋವ ಪ್ರವಾದಿ ಯೆಶಾಯನ ಮೂಲಕ ಹೀಗೆ ಹೇಳಿದನು: “ಈ ಜನ ನನ್ನ ಹತ್ರ ಬರಬೇಕಂತ ಬರೀ ಬಾಯಿಮಾತಲ್ಲಿ ಹೇಳ್ತಿದ್ದಾರೆ, ಕೇವಲ ತುಟಿಗಳಿಂದ ನನ್ನನ್ನ ಗೌರವಿಸ್ತಾರೆ, ಆದ್ರೆ ಅದನ್ನ ಮನಸಾರೆ ಮಾಡಲ್ಲ, ನನ್ನ ಭಯವಿದೆ ಅಂತ ಹೇಳ್ಕೊಳ್ತಾರೆ, ಆದ್ರೆ ಮನುಷ್ಯರ ಆಜ್ಞೆಗಳ ಪ್ರಕಾರನೇ ನಡಿತಾರೆ.” (ಯೆಶಾ. 29:13) ಮನುಷ್ಯರು ಮಾಡಿದ ಸಂಪ್ರದಾಯಗಳನ್ನು ಯೇಸು ಖಂಡಿಸಿದ್ದು ಸರಿಯಾಗೇ ಇತ್ತು. ಯಾಕಂದ್ರೆ ಅದೆಲ್ಲ ತಪ್ಪು ಅಂತ ಬೈಬಲ್ ಹೇಳಿತ್ತು. ಮನುಷ್ಯರು ಮಾಡಿದ ನಿಯಮ, ಆಜ್ಞೆ, ಸಂಪ್ರದಾಯಗಳು ಪವಿತ್ರ ಗ್ರಂಥಕ್ಕಿಂತ ಮುಖ್ಯವಾಗಿದೆ ಅಂತ ನೆನಸಿದ ಜನರೆಲ್ಲ ಯೆಹೋವ ದೇವರನ್ನು ಮತ್ತು ಆತನು ಕಳಿಸಿದ ಮೆಸ್ಸೀಯನನ್ನು ತಿರಸ್ಕರಿಸಿಬಿಟ್ಟರು.
15. ಯಾಕೆ ಇವತ್ತು ತುಂಬ ಜನ ಯೆಹೋವನ ಸಾಕ್ಷಿಗಳನ್ನ ಇಷ್ಟಪಡಲ್ಲ?
15 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಈಗಲೂ ಹಾಗೇ ಇದ್ದಾರೆ. ಯೆಹೋವನ ಸಾಕ್ಷಿಗಳು ಬೈಬಲಲ್ಲಿ ಇರದ ಆಚರಣೆಗಳನ್ನ ಮಾಡಲ್ಲ. ಉದಾಹರಣೆಗೆ ಬರ್ತ್ಡೇ, ಕ್ರಿಸ್ಮಸ್ ಇಂಥ ಆಚರಣೆಗಳನ್ನ ಮಾಡದೆ ಇರೋದನ್ನ ನೋಡಿದಾಗ ತುಂಬ ಜನರಿಗೆ ಬೇಜಾರಾಗುತ್ತೆ. ಅದರಲ್ಲೂ ದೇಶಭಕ್ತಿಯ ಕಾರ್ಯಕ್ರಮಗಳಲ್ಲಿ ಅಥವಾ ಬೈಬಲ್ ಒಪ್ಪದಿರೋ ಶವಸಂಸ್ಕಾರದ ಪದ್ಧತಿಗಳಲ್ಲಿ ಭಾಗವಹಿಸದೆ ಇರೋದನ್ನ ನೋಡಿದಾಗ ಇನ್ನು ಕೆಲವರಿಗೆ ಕೋಪನೇ ಬಂದುಬಿಡುತ್ತೆ. ಈ ತರ ನಡಕೊಳ್ಳುವವರು ತಾವು ಮಾಡ್ತಿರೋದೇ ಸರಿ, ದೇವರು ತಮ್ಮ ಆರಾಧನೆಯನ್ನೇ ಮೆಚ್ಚೋದು ಅಂತನೇ ಅಂದುಕೊಂಡಿರುತ್ತಾರೆ. ಆದ್ರೆ ನಿಜ ಏನಂದ್ರೆ ಬೈಬಲಲ್ಲಿರೋ ಸತ್ಯನ ಒಪ್ಪದೆ, ಲೋಕದ ಸಂಪ್ರದಾಯಗಳನ್ನ ಪಾಲಿಸ್ತಾ ಇದ್ರೆ ದೇವರು ಅಂಥವರನ್ನ ಮೆಚ್ಚಲ್ಲ.—ಮಾರ್ಕ 7:7-9.
16. ಕೀರ್ತನೆ 119:97, 113, 163-165ರ ಪ್ರಕಾರ ನಾವೇನು ಮಾಡಬೇಕು? ಏನು ಮಾಡಬಾರದು?
16 ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು? ಯೆಹೋವ ಕೊಟ್ಟಿರೋ ನೀತಿನಿಯಮಗಳು ಮತ್ತು ತತ್ವಗಳ ಮೇಲೆ ಪ್ರೀತಿ ಬೆಳೆಸ್ಕೊಳ್ಳಬೇಕು. (ಕೀರ್ತನೆ 119:97, 113, 163-165 ಓದಿ.) ನಾವು ಯೆಹೋವನನ್ನು ಪ್ರೀತಿಸಿದರೆ ಆತನಿಗೆ ಇಷ್ಟವಾಗದಿರೋ ಯಾವ ಸಂಪ್ರದಾಯಗಳನ್ನೂ ಪಾಲಿಸಲ್ಲ. ಯಾವುದೂ ಯೆಹೋವನ ಮೇಲಿರೋ ನಮ್ಮ ಪ್ರೀತಿನ ಹಾಳು ಮಾಡೋಕೆ ಬಿಡಬಾರದು.
(4) ಯೇಸು ಆಗಲೇ ತನ್ನ ಸರಕಾರ ತರಲಿಲ್ಲ
17. ಯೇಸುವಿನ ಕಾಲದಲ್ಲಿ ತುಂಬ ಯೆಹೂದಿಗಳು ಮೆಸ್ಸೀಯ ಬಂದು ಏನು ಮಾಡ್ತಾನೆ ಅಂತ ಅಂದುಕೊಂಡಿದ್ದರು?
17 ಯೇಸು ಕಾಲದಲ್ಲಿದ್ದ ಜನ ಮೆಸ್ಸೀಯ ಬಂದು ತಮ್ಮನ್ನ ರೋಮನ್ ಸರಕಾರದ ದಬ್ಬಾಳಿಕೆಯಿಂದ ಬಿಡಿಸ್ತಾನೆ ಅಂತ ಕಾಯುತ್ತಿದ್ರು. ಅದಕ್ಕೇ ಅವರು ಯೇಸುನ ರಾಜನಾಗಿ ಮಾಡೋಕೆ ಹೋದ್ರು. ಆದರೆ ಯೇಸು ಅದಕ್ಕೆ ಒಪ್ಪಲಿಲ್ಲ. (ಯೋಹಾ. 6:14, 15) ಒಂದು ಕಡೆ ಯೇಸುವನ್ನ ಜನ ರಾಜ ಮಾಡಬೇಕು ಅಂತಿದ್ರೆ, ಇನ್ನೊಂದು ಕಡೆ ಫರಿಸಾಯರ ಮತ್ತು ಪುರೋಹಿತರ ಹೃದಯ ಪುಕಪುಕ ಅನ್ನುತ್ತಿತ್ತು. ಯೇಸು ಬೇರೆ ಸರಕಾರ ತಂದರೆ ರೋಮನ್ನರಿಂದ ತಮಗೆ ಸಿಕ್ಕಿರೋ ಸ್ಥಾನಮಾನ, ಅಧಿಕಾರ ಎಲ್ಲ ಹೋಗಿಬಿಡುತ್ತೆ ಅಂತ ಅವರು ಭಯಪಟ್ಟರು. ಈ ಎಲ್ಲಾ ರಾಜಕೀಯ ಕಾರಣಗಳಿಂದ ತುಂಬ ಯೆಹೂದಿಗಳು ಯೇಸುವನ್ನ ನಂಬೋಕೆ ಹಿಂದೇಟು ಹಾಕಿದ್ರು.
18. ಆಗಿನ ಜನರು ಮೆಸ್ಸೀಯನ ಬಗ್ಗೆ ಇದ್ದ ಯಾವ ಭವಿಷ್ಯವಾಣಿಗಳಿಗೆ ಮಾತ್ರ ಗಮನ ಕೊಟ್ಟರು?
18 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಮೆಸ್ಸೀಯ ರಾಜ ಆಗ್ತಾನೆ, ವಿರೋಧಿಗಳನ್ನ ಸೋಲಿಸ್ತಾನೆ ಅನ್ನುವಂಥ ಅನೇಕ ಭವಿಷ್ಯವಾಣಿ ಇತ್ತು ನಿಜ. ಆದರೆ ಅದಕ್ಕೂ ಮುಂಚೆ ಮೆಸ್ಸೀಯ ನಮ್ಮ ಪಾಪಗಳಿಗೋಸ್ಕರ ಮೊದಲು ಸಾಯಬೇಕಾಗುತ್ತೆ ಅನ್ನೋ ಭವಿಷ್ಯವಾಣಿನೂ ಇತ್ತು. (ಯೆಶಾ. 53:9, 12) ಹಾಗಿರುವಾಗ ಯೇಸು ರಾಜನಾಗ್ತಾನೆ ಅನ್ನುವಂಥ ಭವಿಷ್ಯವಾಣಿಗಳಿಗೆ ಮಾತ್ರ ಜನ ಯಾಕೆ ಗಮನ ಕೊಟ್ಟರು? ಯಾಕಂದ್ರೆ ಅವರು ತಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಬೇಕು ಅಂತ ಯೋಚಿಸ್ತಿದ್ರು.—ಯೋಹಾ. 6:26, 27.
19. ಜನ ಇವತ್ತು ನಮ್ಮಿಂದ ಏನು ಬಯಸ್ತಾರೆ?
19 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಇವತ್ತೂ ಹಾಗೇ ಇದ್ದಾರೆ. ನಾವು ರಾಜಕೀಯ ವಿಷಯಗಳಿಂದ ದೂರ ಇರುವಾಗ ಜನ ನಮ್ಮನ್ನ ದೂರ ಇಡ್ತಾರೆ. ನಾವು ವೋಟ್ ಹಾಕಬೇಕು ಅಂತ ಅವರು ಬಯಸ್ತಾರೆ. ಆದ್ರೆ ನಾವು ಮಾನವ ನಾಯಕನನ್ನ ಆಯ್ಕೆ ಮಾಡೋದಾದ್ರೆ ಯೆಹೋವ ದೇವರನ್ನ ತಿರಸ್ಕರಿಸಿದ ಹಾಗೆ ಆಗುತ್ತೆ. (1 ಸಮು. 8:4-7) ನಾವು ಸ್ಕೂಲ್ಗಳನ್ನ, ಆಸ್ಪತ್ರೆಗಳನ್ನ ಕಟ್ಟಿಸಬೇಕು ಮತ್ತು ಬೇರೆ ರೀತಿಯ ಸಮಾಜ ಸೇವೆ ಮಾಡಬೇಕು ಅಂತ ಜನ ಬಯಸ್ತಾರೆ. ಆದರೆ ನಾವು ಈಗಿರೋ ಸಮಸ್ಯೆಗಳನ್ನ ಬಗೆಹರಿಸೋ ಬದಲು ಸಿಹಿಸುದ್ದಿ ಸಾರೋ ಕೆಲಸಕ್ಕೆ ಮೊದಲ ಸ್ಥಾನ ಕೊಡ್ತೇವೆ. ಇದನ್ನ ನೋಡಿದಾಗ ಜನ ನಮ್ಮ ಸಂದೇಶವನ್ನ ಕೇಳಿಸಿಕೊಳ್ಳಲ್ಲ.
20. ಮತ್ತಾಯ 7:21-23ರಲ್ಲಿ ಹೇಳಿರೋ ಪ್ರಕಾರ ನಾವು ಯಾವುದಕ್ಕೆ ಹೆಚ್ಚು ಗಮನ ಕೊಡಬೇಕು?
20 ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು? (ಮತ್ತಾಯ 7:21-23 ಓದಿ.) ಯೇಸು ನಮಗೆ ಕೊಟ್ಟಿರೋ ಕೆಲಸವನ್ನೇ ನಾವು ಮಾಡಬೇಕು. (ಮತ್ತಾ. 28:19, 20) ಅದನ್ನ ಬಿಟ್ಟು ರಾಜಕೀಯ ವಿಷಯದ ಕಡೆಗೆ ಮತ್ತು ಸಮಾಜದಲ್ಲಿರೋ ಸಮಸ್ಯೆಗಳನ್ನ ಬಗೆಹರಿಸೋದ್ರ ಕಡೆಗೆ ನಮ್ಮ ಗಮನ ಯಾವತ್ತೂ ಹೋಗಬಾರದು. ನಾವು ಜನರನ್ನ ಪ್ರೀತಿಸ್ತೇವೆ ನಿಜ. ಅವರ ಸಮಸ್ಯೆಗಳನ್ನ ನೋಡಿದಾಗ ನಮಗೂ ನೋವಾಗುತ್ತೆ. ಆದ್ರೆ ಅವರ ಸಮಸ್ಯೆಗಳಿಗೆ ದೇವರ ಆಳ್ವಿಕೆಯಿಂದ ಮಾತ್ರ ಪರಿಹಾರ ಸಿಗುತ್ತೆ ಮತ್ತು ಅವರು ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಂಡರೆ ಅವರಿಗೆ ಒಳ್ಳೇದಾಗುತ್ತೆ ಅಂತ ನಮಗೆ ಗೊತ್ತು. ಅದಕ್ಕೇ ನಾವು ಆ ಸಹಾಯ ಮಾಡ್ತೀವಿ.
21. ನಮ್ಮ ತೀರ್ಮಾನ ಏನಾಗಿರಬೇಕು?
21 ಒಂದನೇ ಶತಮಾನದಲ್ಲಿ ಜನ ಯೇಸುವನ್ನ ನಂಬದೇ ಇರೋಕೆ ಮತ್ತು ಇವತ್ತು ಯೆಹೋವನ ಸಾಕ್ಷಿಗಳು ಹೇಳೋ ಸಂದೇಶವನ್ನ ಕೇಳದೇ ಇರೋಕೆ ನಾಲ್ಕು ಕಾರಣಗಳನ್ನ ಈ ಲೇಖನದಲ್ಲಿ ನೋಡಿದ್ವಿ. ಜನರನ್ನು ತಡೆಯುತ್ತಾ ಇರೋ ಕಾರಣಗಳು ಇಷ್ಟೇನಾ? ಇಲ್ಲ, ಇನ್ನೂ ನಾಲ್ಕು ಕಾರಣ ಇದೆ. ಅದನ್ನ ಮುಂದಿನ ಲೇಖನದಲ್ಲಿ ಚರ್ಚಿಸ್ತೀವಿ. ಯಾವ ವಿಷಯನೂ ಯೇಸುವಿನ ಶಿಷ್ಯರಾಗೋದರಿಂದ ನಮ್ಮನ್ನ ತಡೆಯೋಕೆ ಬಿಡಬಾರದು ಮತ್ತು ನಮ್ಮ ನಂಬಿಕೆ ಕಳಕೊಳ್ಳಬಾರದು. ಇದೇ ನಮ್ಮ ತೀರ್ಮಾನ ಆಗಿರಬೇಕು!
ಗೀತೆ 64 ಸತ್ಯವನ್ನು ನಿನ್ನದ್ದಾಗಿಸಿಕೊ
a ಭೂಮಿಯಲ್ಲಿ ಯೇಸುವಿನಂಥ ಮಹಾ ಶಿಕ್ಷಕ ಬೇರೆ ಯಾರೂ ಇರಲಿಲ್ಲ. ಹಾಗಿದ್ದರೂ ಅವನ ಕಾಲದಲ್ಲಿದ್ದ ಹೆಚ್ಚಿನ ಜನರು ಅವನನ್ನು ನಂಬಲಿಲ್ಲ. ಯಾಕೆ? ಅದಕ್ಕಿರುವ ನಾಲ್ಕು ಕಾರಣಗಳನ್ನು ಈ ಲೇಖನದಲ್ಲಿ ನೋಡ್ತೀವಿ. ಅಷ್ಟೇ ಅಲ್ಲ ಇವತ್ತು ಯೇಸುವಿನ ಹಿಂಬಾಲಕರು ಹೇಳುವಂಥ ಅಥವಾ ಮಾಡುವಂಥ ವಿಷಯಗಳನ್ನು ಹೆಚ್ಚಿನವರು ಯಾಕೆ ಇಷ್ಟ ಪಡಲ್ಲ ಅಂತನೂ ನೋಡ್ತೀವಿ. ಮುಖ್ಯವಾಗಿ ಯೇಸುವಿನ ಶಿಷ್ಯರಾಗೋಕೆ ಯಾವುದಾದರೂ ವಿಷಯ ನಮ್ಮನ್ನ ತಡೆಯುತ್ತಾ ಇರೋದಾದರೆ ಏನು ಮಾಡಬೇಕು ಅಂತನೂ ಚರ್ಚಿಸುತ್ತೀವಿ.
b ಚಿತ್ರ ವಿವರಣೆ: ಯೇಸುವನ್ನ ಮಾತಾಡಿಸು ಅಂತ ನತಾನಯೇಲನಿಗೆ ಫಿಲಿಪ್ಪ ಹೇಳ್ತಿದ್ದಾನೆ.
c ಚಿತ್ರ ವಿವರಣೆ: ಯೇಸು ಸಿಹಿಸುದ್ದಿ ಸಾರುತ್ತಿದ್ದಾನೆ.
d ಚಿತ್ರ ವಿವರಣೆ: ಕೈಗೆ ಲಕ್ವ ಹೊಡೆದ ವ್ಯಕ್ತಿಯನ್ನ ಯೇಸು ವಾಸಿ ಮಾಡೋದನ್ನ ವಿರೋಧಿಗಳು ನೋಡ್ತಿದ್ದಾರೆ.
e ಚಿತ್ರ ವಿವರಣೆ: ಯೇಸು ಒಬ್ಬನೇ ಬೆಟ್ಟಕ್ಕೆ ಹೋಗ್ತಿದ್ದಾನೆ.