ಮತ್ತಾಯ
16 ಫರಿಸಾಯರು, ಸದ್ದುಕಾಯರು ಯೇಸುನ ಪರೀಕ್ಷಿಸೋಕೆ ಬಂದ್ರು. ಅವರು ‘ದೇವರ ಹೆಸ್ರಲ್ಲಿ ಒಂದು ಅದ್ಭುತ ಮಾಡು ನೋಡೋಣ’+ ಅಂತ ಹೇಳಿದ್ರು. 2 ಆಗ ಯೇಸು “ಸಂಜೆ ಆದಾಗ ‘ಆಕಾಶ ಕೆಂಪಾಗಿದೆ, ಇವತ್ತು ಮಳೆ ಬರಲ್ಲ’ ಅಂತೀರ. 3 ಅದೇ ತರ ಬೆಳಗ್ಗೆ ‘ಆಕಾಶ ಕೆಂಪಾಗಿದೆ, ಮೋಡ ಇದೆ. ಹಾಗಾದ್ರೆ ಇವತ್ತು ಚಳಿ ಇರುತ್ತೆ, ಮಳೆ ಬರುತ್ತೆ’ ಅಂತೀರ. ಆಕಾಶ ನೋಡಿ ವಾತಾವರಣ ಹೇಗಿರುತ್ತೆ ಅಂತ ಅರ್ಥಮಾಡ್ಕೊಳ್ಳೋಕೆ ನಿಮಗೆ ಆಗುತ್ತೆ. ಆದ್ರೆ ಈಗ ಆಗ್ತಿರೋ ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ನಿಮ್ಮಿಂದ ಆಗಲ್ಲ. 4 ದೇವರ ಮಾತನ್ನ ಕೇಳದ ದುಷ್ಟ ಪೀಳಿಗೆ ‘ಅದ್ಭುತ ನೋಡಿದ್ರೆ ನಂಬ್ತೀವಿ’ ಅಂತ ಹೇಳ್ತಾರೆ. ಆದ್ರೆ ಅವ್ರಿಗೆ ಯೋನನಿಗಾದ ಅದ್ಭುತ ಬಿಟ್ಟು ಬೇರೆ ಯಾವ ಅದ್ಭುತನೂ ನೋಡೋಕಾಗಲ್ಲ”+ ಅಂತ ಹೇಳಿ ಅಲ್ಲಿಂದ ಹೋದನು.
5 ಶಿಷ್ಯರು ಸಮುದ್ರದ ಇನ್ನೊಂದು ತೀರಕ್ಕೆ ಹೋದ್ರು. ಆದ್ರೆ ರೊಟ್ಟಿ ತಗೊಂಡು ಹೋಗೋಕೆ ಮರೆತುಬಿಟ್ರು.+ 6 ಯೇಸು ಅವ್ರಿಗೆ “ಜಾಗ್ರತೆಯಿಂದ ಇರಿ. ಫರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ”+ ಅಂದನು. 7 ಆಗ ಶಿಷ್ಯರು “ನಾವು ರೊಟ್ಟಿ ತರೋಕೆ ಮರೆತಿದ್ದಕ್ಕೆ ಯೇಸು ಇದನ್ನ ಹೇಳ್ತಿದ್ದಾನೆ ಅನ್ಸುತ್ತೆ” ಅಂತ ಅವರವ್ರೇ ಮಾತಾಡ್ಕೊಂಡ್ರು. 8 ಅದು ಗೊತ್ತಾಗಿ ಯೇಸು “ನಂಬಿಕೆ ಕೊರತೆ ಇರುವವರೇ, ನಿಮ್ಮ ಹತ್ರ ರೊಟ್ಟಿ ಇಲ್ಲ ಅಂತ ಯಾಕೆ ಮಾತಾಡ್ತಾ ಇದ್ದೀರಾ? 9 ನಾನು ಹೇಳಿದ್ದು ಇನ್ನೂ ಅರ್ಥ ಆಗಿಲ್ವಾ? ನಾನು ಐದು ರೊಟ್ಟಿಯನ್ನ 5,000 ಜನ್ರಿಗೆ ಹೇಗೆ ಕೊಟ್ಟೆ ಅಂತ ನೆನಪಿಲ್ವಾ? ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ ಅಂತ ಮರೆತು ಹೋದ್ರಾ?+ 10 ಇನ್ನೊಂದು ಸಾರಿ ನಾನು ಏಳು ರೊಟ್ಟಿಯನ್ನ 4,000 ಜನ್ರಿಗೆ ಹೇಗೆ ಕೊಟ್ಟೆ ಅಂತ ನೆನಪಿಲ್ವಾ? ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ ಅಂತ ಮರೆತು ಹೋದ್ರಾ?+ 11 ನಾನು ಮಾತಾಡಿದ್ದು ರೊಟ್ಟಿಯಲ್ಲಿ ಹಾಕೋ ಹುಳಿಹಿಟ್ಟಿನ ಬಗ್ಗೆ ಅಲ್ಲ ಅಂತ ನಿಮಗೆ ಯಾಕೆ ಅರ್ಥ ಆಗಲಿಲ್ಲ? ಫರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ ಅಂತ ನಾನು ಹೇಳಿದೆ”+ ಅಂದನು. 12 ಆಗ ಅವ್ರಿಗೆ ಯೇಸು ಜಾಗ್ರತೆ ವಹಿಸೋಕೆ ಹೇಳ್ತಿರೋದು ರೊಟ್ಟಿಯಲ್ಲಿ ಹಾಕೋ ಹುಳಿ ಬಗ್ಗೆ ಅಲ್ಲ, ಫರಿಸಾಯರು-ಸದ್ದುಕಾಯರು ಕಲಿಸ್ತಿದ್ದ ವಿಷ್ಯದ ಬಗ್ಗೆ ಅಂತ ಅರ್ಥ ಆಯ್ತು.
13 ಯೇಸು ಕೈಸರೈಯ-ಫಿಲಿಪ್ಪಿ ಪ್ರದೇಶಕ್ಕೆ ಬಂದನು. ಆತನು ಶಿಷ್ಯರಿಗೆ “ಮನುಷ್ಯಕುಮಾರ ಯಾರು ಅಂತ ಜನ ಹೇಳ್ತಾರೆ?”+ ಅಂತ ಕೇಳಿದನು. 14 ಶಿಷ್ಯರು ಅದಕ್ಕೆ “ಕೆಲವರು, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ+ ಅಂತಾರೆ. ಇನ್ನು ಕೆಲವರು ಎಲೀಯ+ ಅಂತಾರೆ, ಇನ್ನು ಕೆಲವರು ಯೆರೆಮೀಯ ಅಥವಾ ಬೇರೆ ಯಾವುದಾದ್ರೂ ಪ್ರವಾದಿ ಇರಬಹುದು ಅಂತ ಹೇಳ್ತಾರೆ” ಅಂದ್ರು. 15 ಅದಕ್ಕೆ ಯೇಸು “ಆದ್ರೆ ನೀವು ನನ್ನನ್ನ ಯಾರಂತ ಹೇಳ್ತೀರಾ?” ಅಂತ ಕೇಳಿದನು. 16 ಆಗ ಸೀಮೋನ ಪೇತ್ರ “ನೀನು ಕ್ರಿಸ್ತ,+ ಜೀವವುಳ್ಳ ದೇವರ ಮಗ”+ ಅಂತ ಉತ್ರಕೊಟ್ಟ. 17 ಅದಕ್ಕೆ ಯೇಸು “ಯೋನನ ಮಗನಾದ ಸೀಮೋನ, ಖುಷಿಪಡು. ಯಾಕಂದ್ರೆ ಈ ವಿಷ್ಯ ಮನುಷ್ಯರಿಂದಲ್ಲ, ಸ್ವರ್ಗದಲ್ಲಿರೋ ನನ್ನ ತಂದೆಯಿಂದಾನೇ ನಿನಗೆ ಗೊತ್ತಾಗಿದೆ.+ 18 ನಾನು ನಿನಗೆ ಹೇಳ್ತೀನಿ, ನೀನು ಪೇತ್ರ.+ ನಾನು ನನ್ನ ಸಭೆಯನ್ನ ಈ ಬಂಡೆ+ ಮೇಲೆ ಕಟ್ತೀನಿ. ಸಮಾಧಿ* ಅದನ್ನ ಸೋಲಿಸೋಕಾಗಲ್ಲ. 19 ನಾನು ನಿಂಗೆ ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ ಕೊಡ್ತೀನಿ. ನೀನು ಭೂಮಿಯಲ್ಲಿ ತೆರೆದ್ರೆ ಸ್ವರ್ಗದಲ್ಲಿ ಈಗಾಗಲೇ ತೆರೆದಿರುತ್ತೆ. ನೀನು ಭೂಮಿಯಲ್ಲಿ ಮುಚ್ಚಿದ್ರೆ ಸ್ವರ್ಗದಲ್ಲಿ ಈಗಾಗಲೇ ಮುಚ್ಚಿರುತ್ತೆ” ಅಂದನು. 20 ಆಮೇಲೆ ಯೇಸು, ನಾನೇ ಕ್ರಿಸ್ತ ಅಂತ ಯಾರಿಗೂ ಹೇಳಲೇಬಾರದು ಅಂತ ಶಿಷ್ಯರಿಗೆ ಅಪ್ಪಣೆ ಕೊಟ್ಟನು.+
21 ಅವತ್ತಿಂದ ಯೇಸು ಶಿಷ್ಯರಿಗೆ ‘ನಾನು ಯೆರೂಸಲೇಮಿಗೆ ಹೋಗಿ ಅಧಿಕಾರಿಗಳಿಂದ ಮುಖ್ಯ ಪುರೋಹಿತರಿಂದ ಪಂಡಿತರಿಂದ ತುಂಬ ಕಷ್ಟ ಅನುಭವಿಸಿ ಸಾಯಬೇಕಾಗುತ್ತೆ. ಆದ್ರೆ ಮೂರನೇ ದಿನ ಮತ್ತೆ ಬದುಕಿ ಬರ್ತಿನಿ’+ ಅಂತ ಹೇಳ್ತಿದ್ದನು. 22 ಆಗ ಪೇತ್ರ ಆತನನ್ನ ಪಕ್ಕಕ್ಕೆ ಕರ್ಕೊಂಡು ಹೋಗಿ “ಸ್ವಾಮಿ, ಏನ್ ಹೇಳ್ತಾ ಇದ್ದೀಯ. ನಿನಗೆ ಯಾವತ್ತೂ ಹಾಗೆ ಆಗಬಾರದು” ಅಂತ ಬೈದ.+ 23 ಯೇಸು ಪೇತ್ರನಿಗೆ ಬೆನ್ನುಹಾಕಿ “ಸಾಕು ನಿಲ್ಲಿಸು ಸೈತಾನ! ದೇವರ ಇಷ್ಟ ಮಾಡೋಕೆ ನೀನು ಬಿಡ್ತಾ ಇಲ್ಲ. ನೀನು ದೇವ್ರ ತರ ಯೋಚ್ನೆ ಮಾಡೋದು ಬಿಟ್ಟು ಮನುಷ್ಯರ ತರ ಯೋಚ್ನೆ ಮಾಡ್ತಾ ಇದ್ದೀಯ”+ ಅಂದನು.
24 ಆಮೇಲೆ ಯೇಸು ಶಿಷ್ಯರಿಗೆ “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ* ಹೊತ್ತು ನನ್ನ ಹಿಂದೆನೇ ಬರಲಿ.+ 25 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ 26 ಒಬ್ಬ ಮನುಷ್ಯ ಲೋಕನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಏನು ಪ್ರಯೋಜನ?+ ಪ್ರಾಣ ಉಳಿಸ್ಕೊಳ್ಳೋಕೆ ಒಬ್ಬ ಮನುಷ್ಯ ಏನು ತಾನೇ ಕೊಡೋಕಾಗುತ್ತೆ?+ 27 ಭವಿಷ್ಯದಲ್ಲಿ ಮನುಷ್ಯಕುಮಾರನಿಗೆ ತಂದೆಯಿಂದ ಅಧಿಕಾರ ಸಿಗುತ್ತೆ. ಆಗ ದೇವದೂತರ ಜೊತೆ ಬಂದು ಜನ್ರಿಗೆ ತೀರ್ಪು ಮಾಡ್ತಾನೆ. ಕೆಟ್ಟದು ಮಾಡುವವ್ರಿಗೆ ಶಿಕ್ಷೆ ಕೊಡ್ತಾನೆ. ಒಳ್ಳೇದು ಮಾಡುವವ್ರಿಗೆ ಆಶೀರ್ವಾದ ಕೊಡ್ತಾನೆ.+ 28 ನಿಮಗೆ ನಿಜ ಹೇಳ್ತೀನಿ, ಮನುಷ್ಯಕುಮಾರ ರಾಜನಾಗಿ* ಬರೋದನ್ನ ನೋಡೋ ತನಕ ಇಲ್ಲಿ ಇರುವವ್ರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು.