ಬೈಬಲಿನ ದೃಷ್ಟಿಕೋನ
ಸ್ನೇಹಿತರ ನಡುವೆ ಲೇವಾದೇವಿ
“ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.”—ಕೀರ್ತನೆ 37:21.
“ಸಾಲಗಾರನಾಗಬೇಡಿ ಇಲ್ಲವೇ ಸಾಲಕೊಡುವವನಾಗಿರಬೇಡಿ; ಯಾಕಂದರೆ ಸಾಲವೂ ಕಳೆದುಹೋಗುತ್ತದೆ, ಸ್ನೇಹಿತನನ್ನೂ ಕಳೆದುಕೊಳ್ಳುತ್ತದೆ.” ಪ್ರಾಚೀನ ಸಮಯದ ವಿವೇಕಕ್ಕೆ ಪ್ರಾಧಾನ್ಯ ನೀಡುತ್ತಾ, ಆಂಗ್ಲ ನಾಟಕಕಾರ ವಿಲ್ಯಮ್ ಶೇಕ್ಸ್ಪಿಯರ್ ಹೀಗೆ ಬರೆದನು. ಮಾನವ ಸಂಬಂಧಗಳಲ್ಲಿ ಸ್ಫೋಟಕ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಸಾಧ್ಯತೆಯು ಕೆಲವೇ ಅಂಶಗಳಿಗಿವೆ. ಅದರಲ್ಲಿ ಸಾಲತೆಗೆದುಕೊಳ್ಳುವುದು ಮತ್ತು ಕೊಡುವುದು ಒಂದಾಗಿದೆ. ಎಷ್ಟೇ ಅತ್ಯುತ್ತಮವಾಗಿ ಯೋಜಿಸಲ್ಪಟ್ಟ ಯೋಜನೆಗಳು ಮತ್ತು ಅತ್ಯಂತ ಪ್ರಾಮಾಣಿಕ ಉದ್ದೇಶಗಳಿರುವುದಾದರೂ, ಎಲ್ಲವೂ ನಿರೀಕ್ಷಿಸಿದಂತೆಯೇ ನಡೆಯುವುದಿಲ್ಲ.—ಪ್ರಸಂಗಿ 9:11, 12.
ಸಾಲ ತೆಗೆದುಕೊಂಡವನು ಹಣವನ್ನು ಹಿಂದಿರುಗಿಸಲು ಕಷ್ಟಕರವನ್ನಾಗಿ ಅಥವಾ ಅಸಾಧ್ಯವನ್ನಾಗಿ ಮಾಡುವ ಪರಿಸ್ಥಿತಿಗಳೇಳಬಹುದು. ಅಥವಾ ಸಾಲಕೊಟ್ಟವನಿಗೇ, ತಾನು ಕೊಟ್ಟ ಹಣದ ತೀವ್ರ ಅಗತ್ಯವೇಳಬಹುದು. ಇಂತಹ ಸಂಗತಿಗಳಿಂದಾಗಿ ಶೇಕ್ಸ್ಪಿಯರ್ ಹೇಳಿದಂತೆ, ಮಿತ್ರತ್ವಗಳು ಮತ್ತು ಸಂಬಂಧಗಳು ಗಂಡಾಂತರಕ್ಕೊಳಗಾಗಬಹುದು.
ಒಬ್ಬ ವ್ಯಕ್ತಿಯು, ಸಮಂಜಸವಾದ ಕಾರಣಗಳಿಂದಾಗಿಯೇ ಸ್ವಲ್ಪ ಹಣವನ್ನು ಸಾಲವಾಗಿ ತೆಗೆದುಕೊಂಡಿರಬಹುದು. ಒಂದು ಗಂಭೀರವಾದ ಅಪಘಾತದಿಂದಾಗಿ ಅಥವಾ ಉದ್ಯೋಗವನ್ನು ಕಳೆದುಕೊಂಡದ್ದರಿಂದ ಉಂಟಾದ ಆರ್ಥಿಕ ಸಮಸ್ಯೆಯಿಂದಾಗಿ, ಸಾಲ ಮಾಡುವುದೇ ತನಗಿರುವ ಏಕಮಾತ್ರ ಮಾರ್ಗವೆಂದು ಅವನಿಗೆ ತೋಚಬಹುದು. ಕಷ್ಟದಲ್ಲಿರುವವರಿಗೆ ಸಹಾಯಮಾಡಲು ಶಕ್ತರಿರುವವರು ಹಾಗೆ ಮಾಡುವಂತೆ ಬೈಬಲ್ ಉತ್ತೇಜಿಸುತ್ತದೆ. (ಜ್ಞಾನೋಕ್ತಿ 3:27) ಹೀಗೆ ಸಹಾಯಮಾಡುವುದರಲ್ಲಿ ಹಣವನ್ನು ಸಾಲವಾಗಿ ಕೊಡುವುದು ಸೇರಿರಬಹುದು. ಆದರೆ ಅಂತಹ ಏರ್ಪಾಡಿನಲ್ಲಿ ಒಳಗೂಡುವ ಕ್ರೈಸ್ತರು ತಮ್ಮ ಹಂಗುಗಳನ್ನು ಹೇಗೆ ವೀಕ್ಷಿಸತಕ್ಕದ್ದು?
ಪರಿಗಣಿಸಬೇಕಾದಂತಹ ತತ್ವಗಳು
ಬೈಬಲ್ ಹಣಕಾಸಿನ ವಿಷಯದಲ್ಲಿ ಒಂದು ಮಾರ್ಗದರ್ಶಕ ಪುಸ್ತಕವಲ್ಲ. ಸಾಲತೆಗೆದುಕೊಳ್ಳುವುದು ಮತ್ತು ಕೊಡುವುದರಲ್ಲಿ ಒಳಗೂಡಿರಬಹುದಾದ ಎಲ್ಲ ವಿವರಗಳನ್ನು ಅದು ಚರ್ಚಿಸುವುದಿಲ್ಲ. ಬಡ್ಡಿ ತೆಗೆದುಕೊಳ್ಳಬೇಕೊ ಇಲ್ಲವೊ, ಎಷ್ಟು ಬಡ್ಡಿಯನ್ನು ತೆಗೆದುಕೊಳ್ಳಬೇಕು ಎಂಬಂತಹ ಸಂಗತಿಗಳು, ಒಳಗೂಡಿರುವ ವ್ಯಕ್ತಿಗಳಿಗೆ ಬಿಡಲ್ಪಟ್ಟಿದೆ.a ಆದರೆ, ಸಾಲತೆಗೆದುಕೊಳ್ಳುವ ಇಲ್ಲವೆ ಕೊಡುವ ಯಾವುದೇ ವ್ಯಕ್ತಿಯ ಮನೋಭಾವ ಮತ್ತು ನಡವಳಿಕೆಯನ್ನು ನಿಯಂತ್ರಿಸಬೇಕಾದ ಸ್ಪಷ್ಟವಾದ, ಪ್ರೀತಿಪರ ತತ್ವಗಳನ್ನು ಬೈಬಲ್ ಖಂಡಿತವಾಗಿಯೂ ಕೊಡುತ್ತದೆ.
ಸಾಲಗಾರನಿಗೆ ಅನ್ವಯಿಸುವ ತತ್ವಗಳನ್ನು ಪರಿಗಣಿಸಿರಿ. “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು” ಎಂದು ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದನು. (ರೋಮಾಪುರ 13:8) ಪೌಲನು ಇಲ್ಲಿ ಒಂದು ಸರ್ವಸಾಮಾನ್ಯವಾದ ತತ್ವವನ್ನು ತಿಳಿಸುತ್ತಿದ್ದನಾದರೂ, ಅವನ ಆ ಬುದ್ಧಿವಾದವನ್ನು ನಾವು ಸಾಲವನ್ನು ಮಾಡಿಕೊಳ್ಳುವ ವಿರುದ್ಧ ಒಂದು ಎಚ್ಚರಿಕೆಯಾಗಿ ತೆಗೆದುಕೊಳ್ಳಬಹುದು. ಕೆಲವೊಮ್ಮೆ ಬೇರೊಬ್ಬರಿಗೆ ಹಣವನ್ನು ಸಲ್ಲಿಸುವ ಜವಾಬ್ದಾರಿಗಿಂತ ಹಣವಿಲ್ಲದೆ ಇರುವುದೇ ಉತ್ತಮ. ಯಾಕೆ? “ಸಾಲಗಾರನು ಸಾಲಕೊಟ್ಟವನಿಗೆ ಸೇವಕ” ಎಂದು ಜ್ಞಾನೋಕ್ತಿ 22:7 ವಿವರಿಸುತ್ತದೆ. ಎಷ್ಟರ ತನಕ ಹಣವನ್ನು ಹಿಂದೆ ಕೊಡಲಾಗುವುದಿಲ್ಲವೊ ಅಷ್ಟರ ವರೆಗೆ, ಸಾಲಗಾರನು ಹಂಗಿನಲ್ಲಿರುತ್ತಾನೆಂಬುದನ್ನು ತಿಳಿದುಕೊಂಡಿರಬೇಕು. ನ್ಯಾಯವಾಗಿ ನೋಡುವುದಾದರೆ, ಅವನ ಸಾಧನಸಂಪತ್ತುಗಳು ಸಂಪೂರ್ಣವಾಗಿ ಅವನದ್ದಲ್ಲ. ಅವನು ಯಾವ ಷರತ್ತುಗಳಿಗೆ ಒಪ್ಪಿಕೊಂಡಿದ್ದನೊ ಅದಕ್ಕನುಸಾರ ಸಾಲವನ್ನು ಹಿಂದಿರುಗಿಸುವುದೇ ಅವನ ಜೀವಿತದಲ್ಲಿ ಪ್ರಥಮ ಸಂಗತಿಯಾಗಿರಬೇಕು. ಇಲ್ಲದಿದ್ದಲ್ಲಿ ಸಮಸ್ಯೆಗಳೇಳುವವು.
ಉದಾಹರಣೆಗಾಗಿ, ಕೊಡಬೇಕಾದ ಹಣವನ್ನು ಕೊಡದೆ ತುಂಬ ಸಮಯ ಗತಿಸಿದಾಗ, ಸಾಲಕೊಟ್ಟವನ ಸಿಟ್ಟೇರಬಹುದು. ಸಾಲಗಾರನು, ಬಟ್ಟೆಗಳನ್ನು ಖರೀದಿಸುವುದು, ಹೋಟೇಲುಗಳಲ್ಲಿ ತಿನ್ನುವುದು ಅಥವಾ ರಜೆಯಲ್ಲಿ ಹೋಗುವಂತಹ ಸಂಗತಿಗಳನ್ನು ಮಾಡುತ್ತಿರುವಾಗ, ಸಾಲಕೊಟ್ಟವನು ಅದನ್ನು ಶಂಕಾಸ್ಪದ ದೃಷ್ಟಿಯಿಂದ ನೋಡಬಹುದು. ತೀವ್ರ ಅಸಮಾಧಾನವು ಉಂಟಾಗಬಹುದು. ಅವರಿಬ್ಬರ ಮತ್ತು ಅವರ ಕುಟುಂಬಗಳ ನಡುವಿನ ಸಂಬಂಧವೂ ವಿಷಮಗೊಳ್ಳಬಹುದು ಅಥವಾ ಬಿಗಡಾಯಿಸಬಹುದು. ಸಾಲಗಾರನು ತನ್ನ ಮಾತಿನಂತೆ ನಡೆಯದಿದ್ದಲ್ಲಿ ಇಂತಹದ್ದೇ ದುಃಖಕರ ಫಲಿತಾಂಶಗಳು ಏಳಬಹುದು.—ಮತ್ತಾಯ 5:37.
ಆದರೆ ಸಾಲಗಾರನ ಹತೋಟಿಯನ್ನು ಮೀರಿರುವ ಪರಿಸ್ಥಿತಿಗಳಿಂದಾಗಿ, ಅವನು ತನ್ನ ಮಾತಿಗನುಸಾರ ಹಣವನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದಲ್ಲಿ ಆಗೇನು? ಅದರಿಂದಾಗಿ ಆ ಸಾಲವು ರದ್ದಾಗುವುದೊ? ರದ್ದಾಗಬೇಕೆಂದಿಲ್ಲ. ನೀತಿವಂತ ವ್ಯಕ್ತಿಯು “ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು” ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 15:4) ಅಂತಹ ಸಂದರ್ಭದಲ್ಲಿ ಸಾಲಗಾರನು, ತತ್ಕ್ಷಣ ತನ್ನ ಪರಿಸ್ಥಿತಿಯ ಕುರಿತು ಸಾಲಕೊಟ್ಟವನಿಗೆ ವಿವರಿಸುವುದು ಪ್ರೀತಿಪರ ಮತ್ತು ವಿವೇಕಯುತವಾದ ಸಂಗತಿಯಾಗಿರುವುದು. ಆಗ ಅವರು ಇನ್ನಿತರ ಏರ್ಪಾಡುಗಳನ್ನು ಮಾಡಲು ಒಪ್ಪಿಕೊಳ್ಳಬಹುದು. ಇದು ಶಾಂತಿಯ ಖಾತರಿಯನ್ನು ಕೊಟ್ಟು, ಯೆಹೋವ ದೇವರನ್ನು ಸಂತೋಷಗೊಳಿಸುವುದು.—ಕೀರ್ತನೆ 133:1, 2; 2 ಕೊರಿಂಥ 13:11.
ವಾಸ್ತವದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸಾಲಗಳನ್ನು ತೀರಿಸಿಕೊಳ್ಳುವ ವಿಧಾನದಿಂದ ತನ್ನ ಕುರಿತಾಗಿ ಅನೇಕ ವಿಷಯಗಳನ್ನು ಪ್ರಕಟಪಡಿಸುತ್ತಾನೆ. ಹಣವನ್ನು ಹಿಂದಿರುಗಿಸುವ ಕುರಿತು ಅಸಡ್ಡೆಯ ಮನೋಭಾವವನ್ನು ತೋರಿಸುವಲ್ಲಿ, ಅವನಿಗೆ ಇತರರ ಕುರಿತು ಚಿಂತೆಯಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಕಾರ್ಯತಃ, ಈ ಮನೋಭಾವವುಳ್ಳ ವ್ಯಕ್ತಿಯು ಸ್ವಾರ್ಥವನ್ನು ಪ್ರದರ್ಶಿಸುತ್ತಾನೆ. ಅವನಿಗೆ ತನ್ನ ಸ್ವಂತ ಆಶೆಗಳು ಮತ್ತು ಬಯಕೆಗಳು ಪ್ರಥಮವಾಗಿರುತ್ತವೆ. (ಫಿಲಿಪ್ಪಿ 2:4) ಉದ್ದೇಶಪೂರ್ವಕವಾಗಿ ಮತ್ತು ಬೇಕುಬೇಕೆಂದೇ ತನ್ನ ಸಾಲಗಳನ್ನು ತೀರಿಸಲು ನಿರಾಕರಿಸುವ ಕ್ರೈಸ್ತನು, ದೇವರ ಮುಂದೆ ತನಗಿರುವ ಸ್ಥಾನವನ್ನು ಅಪಾಯಕ್ಕೊಡ್ಡುತ್ತಾನೆ ಮತ್ತು ಅವನ ಕೃತ್ಯಗಳು ತನಗೆ ಲೋಭದ, ದುಷ್ಟ ಹೃದಯವಿದೆಯೆಂಬುದನ್ನು ಸೂಚಿಸುತ್ತವೆ.—ಕೀರ್ತನೆ 37:21.
ಸಾಲಕೊಡುವವನು
ಸಾಲಗಾರನ ಮೇಲೆ ಹೆಚ್ಚಿನ ಜವಾಬ್ದಾರಿಯಿರುವುದಾದರೂ, ಸಾಲಕೊಡುವವನೂ ಅನ್ವಯಿಸಬೇಕಾದ ತತ್ವಗಳಿವೆ. ಕಷ್ಟದಲ್ಲಿರುವವರಿಗೆ ಸಹಾಯಮಾಡುವ ಸಾಮರ್ಥ್ಯ ನಮಗಿರುವಲ್ಲಿ ನಾವು ಹಾಗೆ ಮಾಡಬೇಕೆಂದು ಬೈಬಲ್ ಸೂಚಿಸುತ್ತದೆ. (ಯಾಕೋಬ 2:14-16) ಆದರೆ ಒಬ್ಬ ವ್ಯಕ್ತಿಯು ಹಣವನ್ನು ಸಾಲವಾಗಿ ಕೊಡಲೇಬೇಕೆಂಬ ಹಂಗಿನಲ್ಲಿದ್ದಾನೆಂದು ಇದರರ್ಥವಲ್ಲ. ಹಣವನ್ನು ಕೇಳುತ್ತಿರುವವನು ಒಬ್ಬ ಆತ್ಮಿಕ ಸಹೋದರನಾಗಿರುವುದಾದರೂ ಇದು ಸತ್ಯ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಎಂದು ಬೈಬಲ್ ಹೇಳುತ್ತದೆ.—ಜ್ಞಾನೋಕ್ತಿ 22:3.
ಸಾಲಕೊಡುವುದರಲ್ಲಿ ಮತ್ತು ತೆಗೆದುಕೊಳ್ಳುವುದರಲ್ಲಿ ಇರುವ ತೀರ ನೈಜ ಸಮಸ್ಯೆಗಳನ್ನು ತಿಳಿದುಕೊಂಡು, ಅರ್ಥಮಾಡಿಕೊಂಡಿರುವ ಒಬ್ಬ ವಿವೇಚನಾಶೀಲ ವ್ಯಕ್ತಿಯು, ಯಾರಾದರೂ ತನ್ನಿಂದ ಹಣವನ್ನು ಕೇಳಿಕೊಳ್ಳುವಲ್ಲಿ ಅಂತಹ ಬೇಡಿಕೆಗಳನ್ನು ಜಾಗರೂಕತೆಯಿಂದ ಪರಿಗಣಿಸುವನು. ಬೇಡಿಕೆಯು ಸಮಂಜಸವಾದದ್ದೊ? ಹಣವನ್ನು ಕೇಳುತ್ತಿರುವ ವ್ಯಕ್ತಿಯು ಈ ವಿಷಯವನ್ನು ಚೆನ್ನಾಗಿ ಯೋಚಿಸಿ ಕೇಳುತ್ತಿದ್ದಾನೊ? ಭಾವೀ ಸಾಲಗಾರನು ಸುವ್ಯವಸ್ಥಿತನಾಗಿದ್ದು, ಒಳ್ಳೇ ಹೆಸರುಳ್ಳವನಾಗಿದ್ದಾನೊ? ಒಪ್ಪಂದದ ಷರತ್ತುಗಳಿರುವ ಕರಾರು ಪತ್ರಕ್ಕೆ ಅವನು ಸಹಿಹಾಕಲು ಸಿದ್ಧನಾಗಿದ್ದಾನೊ? (ಯೆರೆಮೀಯ 32:8-14ನ್ನು ಹೋಲಿಸಿರಿ.) ಅವನು ಆ ಹಣವನ್ನು ಮರುಪಾವತಿಮಾಡಲು ನಿಜವಾಗಿಯೂ ಸಿದ್ಧನಾಗಿದ್ದಾನೊ?
ಯಾರಿಂದ ಹಣವನ್ನು ಹಿಂದೆ ಪಡೆದುಕೊಳ್ಳುವುದು ಅಸಂಭವವೆಂದು ತೋರಬಹುದೊ ಅಂತಹ ಒಬ್ಬ ವ್ಯಕ್ತಿಗೆ ಅವನ ಕಷ್ಟದ ಸಮಯದಲ್ಲಿ ಕ್ರೈಸ್ತನು ಸಹಾಯಮಾಡಲು ನಿರಾಕರಿಸಬೇಕೆಂದು ಇದು ಸೂಚಿಸುವುದಿಲ್ಲ. ಒಬ್ಬ ಕ್ರೈಸ್ತನಿಗೆ ಇತರರ ಕಡೆಗಿರುವ ವೈಯಕ್ತಿಕ ಹಂಗುಗಳು, ಉತ್ತಮ ವ್ಯಾಪಾರೀ ವ್ಯವಹಾರಗಳಿಗಿಂತಲೂ ಹೆಚ್ಚಿನದ್ದಾಗಿವೆ. “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ?” ಎಂದು ಅಪೊಸ್ತಲ ಪೌಲನು ಕೇಳುತ್ತಾನೆ. ಹೌದು ಕ್ರೈಸ್ತರು, “ಬರೀ ಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.”—1 ಯೋಹಾನ 3:17, 18.
ಕೆಲವೊಂದು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಕಷ್ಟದಲ್ಲಿರುವ ತನ್ನ ಸಹೋದರನಿಗೆ ಹಣವನ್ನು ಸಾಲವಾಗಿ ಕೊಡದಿರಲು ನಿರ್ಣಯವನ್ನು ಮಾಡಬಹುದು. ಅವನು ಆ ಸಹೋದರನಿಗೆ ಒಂದು ಉಡುಗೊರೆಯನ್ನೊ, ಬೇರಾವುದೋ ರೀತಿಯಲ್ಲಿ ಸಹಾಯವನ್ನು ನೀಡಲು ಇಷ್ಟಪಡಬಹುದು. ಸಾಲವನ್ನು ತೆಗೆದುಕೊಳ್ಳುವ ಏರ್ಪಾಡಿನಲ್ಲಿ ಯಾವುದಾದರೂ ತೊಂದರೆಗಳೇಳುವಾಗ, ತದ್ರೀತಿಯ ಮನೋಭಾವದಿಂದಲೇ ಸಾಲಕೊಟ್ಟವನು ದಯಾಪೂರ್ವಕವಾಗಿ ಕ್ರಿಯೆಗೈಯುವ ಆಯ್ಕೆಯನ್ನು ಮಾಡಬಹುದು. ಸಾಲಗಾರನ ಬದಲಾದ ಪರಿಸ್ಥಿತಿಗಳನ್ನು ಅವನು ಮನಸ್ಸಿನಲ್ಲಿಟ್ಟುಕೊಂಡು, ಹಣವನ್ನು ಮರುಪಾವತಿ ಮಾಡುವ ಸಮಯಾವಧಿಯನ್ನು ಹೆಚ್ಚಿಸಬಹುದು, ಹಿಂದಿರುಗಿಸಬೇಕಾದ ಹಣದ ಮೊತ್ತವನ್ನು ಕಡಿಮೆಮಾಡಬಹುದು, ಅಥವಾ ಆ ಸಾಲವನ್ನು ಪೂರ್ಣವಾಗಿ ರದ್ದುಗೊಳಿಸಲೂ ಸಾಧ್ಯವಿದೆ. ಇವೆಲ್ಲವೂ, ಪ್ರತಿಯೊಬ್ಬ ವ್ಯಕ್ತಿಯು ಸ್ವತಃ ಮಾಡಬೇಕಾದ ವೈಯಕ್ತಿಕ ನಿರ್ಣಯಗಳಾಗಿವೆ.
ದೇವರು ಎಲ್ಲವನ್ನೂ ಗಮನಿಸುತ್ತಿದ್ದಾನೆ, ಮತ್ತು ನಾವು ಹೇಗೆ ನಡೆದುಕೊಳ್ಳುತ್ತೇವೆ ಹಾಗೂ ನಮ್ಮ ಸಾಧನಸಂಪತ್ತುಗಳನ್ನು ಹೇಗೆ ವಿನಿಯೋಗಿಸಿಕೊಳ್ಳುತ್ತೇವೆಂಬ ವಿಷಯದಲ್ಲಿ ಆತನು ನಮ್ಮಿಂದ ಲೆಕ್ಕವನ್ನು ಕೇಳುವನೆಂಬುದನ್ನು ಕ್ರೈಸ್ತರು ಮನಸ್ಸಿನಲ್ಲಿಡತಕ್ಕದ್ದು. (ಇಬ್ರಿಯ 4:13) “ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ” ಎಂಬ ಬೈಬಲಿನ ಬುದ್ಧಿವಾದವು ಖಂಡಿತವಾಗಿಯೂ ಸ್ನೇಹಿತರ ನಡುವೆ ನಡೆಯುವ ಲೇವಾದೇವಿಗೆ ಅನ್ವಯಿಸುತ್ತದೆ.—1 ಕೊರಿಂಥ 16:14.
[ಅಧ್ಯಯನ ಪ್ರಶ್ನೆಗಳು]
a ಸಾಲಗಳಿಗೆ ಬಡ್ಡಿಯನ್ನು ತೆಗೆದುಕೊಳ್ಳುವ ವಿಷಯದ ಮೇಲೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕಾವಲಿನಬುರುಜು ಪತ್ರಿಕೆಯ ಜನವರಿ 15, 1992ರ ಸಂಚಿಕೆಯಲ್ಲಿ, 29-32ನೆಯ ಪುಟಗಳನ್ನು ನೋಡಿರಿ.
[ಪುಟ 18 ರಲ್ಲಿರುವ ಚಿತ್ರ]
“The Money Changer and His Wife” (1514), by Quentin Massys
[ಕೃಪೆ]
Scala/Art Resource, NY