ಆರ್ಥಿಕ ಸಂಕಷ್ಟದ ಸಮಯಗಳಲ್ಲಿ ಅವಿವಾಹಿತತೆ
“ನಾನು 25 ವಯಸ್ಸಿನವನಾಗಿದ್ದಾಗ ಮದುವೆಯಾಗಲು ಬಯಸಿದೆ” ಎಂದು ಪಶ್ಚಿಮ ಆಫ್ರಿಕದಲ್ಲಿ ವಾಸಿಸುವ ಚೂಕ್ಸ್ ಹೇಳಿದನು. “ಹುಡುಗಿಯೊಬ್ಬಳಲ್ಲಿ ನನಗೆ ಮನಸ್ಸಿತ್ತು, ಮತ್ತು ಅವಳು ನನ್ನಲ್ಲಿ ಆಸಕ್ತಳಿದ್ದಳು. ಸಮಸ್ಯೆಯು ಹಣವಾಗಿತ್ತು. ನನ್ನ ತಂದೆ ಮತ್ತು ಅಣನ್ಣಿಗೆ ಕೆಲಸವಿರಲಿಲ್ಲ, ಮತ್ತು ನನ್ನ ತಮ್ಮಂದಿರು ಮತ್ತು ತಂಗಿಯಂದಿರು ಶಾಲೆಯಲಿದ್ದರು. ಕುಟುಂಬ ಪೋಷಣೆಗಾಗಿ ಪ್ರತಿಯೊಬ್ಬರು ನನ್ನ ಮೇಲೆ ಆತುಕೊಂಡಿದ್ದರು. ಬಳಿಕ, ನನ್ನ ಹೆತ್ತವರು ಅಸ್ವಸ್ಥರಾದಾಗ ವಿಷಯವು ಇನ್ನೂ ಕೆಟ್ಟಿತು, ಅಂದರೆ ವೈದ್ಯಕೀಯ ಖರ್ಚುಗಳನ್ನು ಪಾವತಿ ಮಾಡಲಿಕ್ಕಾಗಿ ಹೆಚ್ಚು ಹಣವನ್ನು ಕಂಡುಕೊಳ್ಳಬೇಕಾಯಿತು.”
ಯೆಹೋವನ ಸಾಕ್ಷಿಯಾದ ಚೂಕ್ಸ್ಗೆ, ಪತ್ನಿಯನ್ನು ಪೋಷಿಸಲು ಸಾಧ್ಯವಾಗದೆ ಇದುದ್ದರಿಂದ ಅವನು ಮದುವೆಯಾಗಲು ಬಯಸಲಿಲ್ಲ. 1 ತಿಮೊಥೆಯ 5:8 ರಲ್ಲಿ ಕಂಡುಬರುವ ಪೌಲನ ಮಾತುಗಳಿಗೆ ಅವನು ಗಮನಕೊಟ್ಟಿದ್ದನು. “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”
“ನಾನು ಕಷ್ಟಪಟ್ಟು ಕೆಲಸಮಾಡಿದೆ” ಎಂದು ಚೂಕ್ಸ್ ಮುಂದುವರಿಸಿದನು, “ಆದರೆ ಹಣವೆಂದೂ ಸಾಕಾಗಲಿಲ್ಲ. ಪರಿಣಾಮವಾಗಿ ನಮ್ಮ ಮದುವೆ ಯೋಜನೆಗಳನ್ನು ಪದೇ ಪದೇ ವಿಳಂಬಿಸಬೇಕಾಯಿತು. ಕೊನೆಗೆ, ಅವಳನ್ನು ಮದುವೆಯಾಗಲು ಬೇರೊಬ್ಬರು ಅವಳ ತಂದೆಯನ್ನು ಸಮೀಪಿಸಿದ್ದರೆಂದು ಹೇಳುತ್ತಾ, ಹುಡುಗಿಯಿಂದ ನನಗೆ ಒಂದು ಪತ್ರ ಬಂತು. ತಂದೆ ಒಪ್ಪಿದರು. ಅವಳ ಪತ್ರ ಬಂದ ಕೆಲವೇ ದಿನಗಳ ಬಳಿಕ, ಕುಟುಂಬದಲ್ಲಿ ವಿವಾಹ ನಿಶ್ಚಯದ ಪಾರ್ಟಿ ನಡೆಯಿತು.”
ಕೆಟ್ಟ ಆರ್ಥಿಕ ಪರಿಸ್ಥಿತಿಗಳ ಕಾರಣ ಚೂಕ್ಸ್ನಂತೆ ಅನೇಕ ಕ್ರೈಸ್ತ ಪುರುಷರು ತಮ್ಮ ವಿವಾಹ ಯೋಜನೆಗಳು ಅಂತ್ಯಗೊಂಡದ್ದನ್ನು ಯಾ ವಿಳಂಬಿಸಿದ್ದನ್ನು ಕಂಡಿದ್ದಾರೆ. ಅನೇಕ ದೇಶಗಳಲ್ಲಿ ಅತಿಶಯ ಬೆಲೆಯುಬ್ಬರವಾಗಿದೆ. ಉದಾಹರಣೆಗೆ, ಮಧ್ಯ ಆಫ್ರಿಕದ ಒಂದು ದೇಶದಲ್ಲಿ ಬೆಲೆಗಳು ಒಂದು ವರ್ಷದಲ್ಲಿ 8,319 ಪ್ರತಿಶತ ಏರಿದವು. ಕೆಲವು ದೇಶಗಳಲ್ಲಿ ಕೆಲಸಗಳು ಸಿಕ್ಕುವುದು ಕಷ್ಟ. ಆಗಿಂದಾಗ್ಗೆ ವೇತನಗಳು ಕೂಡ ಎಷ್ಟು ಅಲ್ಪವಾಗಿವೆಯೆಂದರೆ, ಒಬ್ಬ ಗಂಡಸಿಗೆ ಅವನ ಹೆಂಡತಿ ಮಕ್ಕಳನ್ನು ಬಿಡಿ, ತನ್ನನ್ನೇ ಪೋಷಿಸಿಕೊಳ್ಳಲು ಕಷ್ಟವಾಗುತ್ತದೆ. ನೈಜಿರಿಯದ ಒಬ್ಬ ಯುವಕನು ಪ್ರಲಾಪಿಸಿದ್ದೇನಂದರೆ, ಒಂದು ಕಾರ್ಖಾನೆಯಲ್ಲಿ ಪೂರ್ಣ ಸಮಯದ ಕೆಲಸಕ್ಕಾಗಿ ಅವನಿಗೆ ತಿಂಗಳಿಗೆ ನೀಡಲ್ಪಟ್ಟ ಸಂಬಳ ಕೇವಲ 17 ಅಮೆರಿಕನ್ ಡಾಲರ್ಗಳು—ತಿಂಗಳಲ್ಲಿ ಕೆಲಸಕ್ಕೆ ಹೋಗಿ ಬರಲು ತಗಲುವ ಬಸ್ ಖರ್ಚಿಗಿಂತಲೂ ಕಡಿಮೆ!
ಅನೇಕ ಅವಿವಾಹಿತ ಕ್ರೈಸ್ತ ಸ್ತ್ರೀಯರು ಸಹ ಆರ್ಥಿಕ ಕಷ್ಟಗಳು ತಮ್ಮ ಮದುವೆ ಯೋಜನೆಗಳನ್ನು ತಡೆಯುವುದನ್ನು ಕಾಣುತ್ತಿದ್ದಾರೆ. ಆಗಾಗ್ಗೆ ಕುಟುಂಬ ಸದಸ್ಯರ ಬೆಂಬಲಕ್ಕಾಗಿ ಅವರು ದುಡಿಯಬೇಕು. ಈ ಸನ್ನಿವೇಶವನ್ನು ಕಾಣುವ ಕೆಲವು ಅವಿವಾಹಿತ ಪುರುಷರು ಮದುವೆಯ ವಿಷಯದಲ್ಲಿ ಹಿಂಜರಿಯುತ್ತಾರೆ, ಯಾಕಂದರೆ ಅಂತಹ ಪರಿಸ್ಥಿತಿಗಳ ಕೆಳಗೆ ಮದುವೆಯಾಗುವ ಪುರುಷನು ಪತ್ನಿಯೊಬ್ಬಳನ್ನು ಮಾತ್ರವಲ್ಲ, ಅವಳ ಕುಟುಂಬವನ್ನು ಪೋಷಿಸಲು ಸಾಕಷ್ಟು ಹಣವನ್ನು ಸಂಪಾದಿಸುವ ಅಗತ್ಯವನ್ನು ಅವರು ಗ್ರಹಿಸುತ್ತಾರೆ. ವಿಶ್ವವಿದ್ಯಾನಿಲಯದ ಪದವೀಧರೆ ಅಯೊ, ತನ್ನ ತಾಯಿಯನ್ನು ಮತ್ತು ತನ್ನ ತಮ್ಮಂದಿರು ಮತ್ತು ತಂಗಿಯಂದಿರನ್ನು ಪೋಷಿಸಲು ಹೆಣಗಾಡುತ್ತಾಳೆ. “ನನಗೆ ಮದುವೆಯಾಗಬೇಕು” ಎಂದು ಹಲುಬುತ್ತಾಳೆ ಆಕೆ, “ಆದರೆ ನನ್ನ ದೊಡ್ಡ [ಆರ್ಥಿಕ ಜವಾಬ್ದಾರಿಗಳನ್ನು] ಬೇರೆಯವರು ಬಂದು ಕಾಣುವಾಗ, ಅವರು ನನ್ನನ್ನು ಮದುವೆಯಾಗಲು ಬಯಸುವುದಿಲ್ಲ.”
ಆರ್ಥಿಕ ಕಷ್ಟಗಳಿದ್ದಾಗ್ಯೂ, ಅನೇಕ ಅವಿವಾಹಿತ ಕ್ರೈಸ್ತರು ತಾವು ಮದುವೆಯಾಗಿ ಮಕ್ಕಳನ್ನು ಪಡೆಯಲು ಸಂಬಂಧಿಕರಿಂದ ಮತ್ತು ಇತರರಿಂದ ಸ್ವತಃ ಒತ್ತಾಯಿಸಲ್ಪಡುವವರಾಗಿ ಕಂಡುಕೊಳ್ಳುತ್ತಾರೆ. ಕೆಲವುಸಲ, ಈ ಒತ್ತಡವು ಅಪಹಾಸ್ಯದ ಸ್ವರೂಪವನ್ನು ತೆಗೆದುಕೊಳ್ಳುತ್ತದೆ. ದೃಷ್ಟಾಂತಕ್ಕಾಗಿ, ಆಫ್ರಿಕದ ಕೆಲವು ಭಾಗಗಳಲ್ಲಿ ಒಬ್ಬ ಪ್ರೌಢನನ್ನು ವಂದಿಸುವಾಗ, ಅವನ ಯಾ ಅವಳ ಸತಿ-ಪತಿ ಮತ್ತು ಮಕ್ಕಳ ಕ್ಷೇಮ ಸಮಾಚಾರ ಕೇಳುವುದು ವಾಡಿಕೆ. ಕೆಲವೊಮ್ಮೆ ಅಂತಹ ವಂದನೆಗಳನ್ನು ಅವಿವಾಹಿತರನ್ನು ಗೇಲಿಮಾಡಲು ಬಳಸಲಾಗುತ್ತದೆ. ತನ್ನ 40 ಗಳ ವಯಸ್ಸಿನ ಕೊನೆಯಲ್ಲಿರುವ ಜಾನ್ ಅನ್ನುವುದು: “ಜನರು ನನಗೆ ‘ನಿನ್ನ ಪತ್ನಿ ಹೇಗಿದ್ದಾಳೆ?’ ಎಂದು ಕೇಳುತ್ತಾ ಗೇಲಿ ಮಾಡುವಾಗ, ‘ಆಕೆ ಸದ್ಯ ಇಲ್ಲಿಲ್ಲ’ ಎಂಬ ಜಾರಿಕೊಳ್ಳುವ ಉತ್ತರಕೊಡುತ್ತೇನೆ. ನಿಜ ಸಂಗತಿಯೇನಂದರೆ, ನಾನು ಪತ್ನಿಯನ್ನು ಬೆಂಬಲಿಸಲು ಶಕ್ತನಾಗದಿದ್ದಲ್ಲಿ ಆಕೆಯನ್ನು ಪಡೆದುಕೊಳ್ಳುವುದಾದರೂ ಹೇಗೆ?”
ಜಾನ್ಗೆ ಮತ್ತು ಅವನಂತಹ ಇತರ ಅನೇಕರಿಗೆ, ಪರಿಸ್ಥಿತಿಯು ಯೊರಬದ ಒಂದು ಗಾದೆಯಲ್ಲಿ ಸಾರಾಂಶಿಸಿಯದೆ: “ಅವಸರದ ಮದುವೆ ಜಂಬಕೊಚ್ಚುವ ವಿಷಯವಲ್ಲ; ಕಷ್ಟವಿದೆ ಕುಟುಂಬ ಪೋಷಣೆ.”
ನಿಮ್ಮ ಪರಿಸ್ಥಿತಿಯ ಸದುಪಯೋಗ ಮಾಡಿರಿ
ಕೈಗೂಡದೆ ಇರುವ ಒಂದು ವಿಷಯಕ್ಕಾಗಿ ನಾವು ಹಾತೊರೆಯುವಾಗ ಆಶಾಭಂಗ ಹೊಂದುವುದೆಷ್ಟು ಸುಲಭ. ಜ್ಞಾನೋಕ್ತಿ 13:12 ಹೇಳುವುದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” ಮದುವೆಯಾಗಲು ನೀವು ಹಂಬಲಿಸುವುದಾದರೂ ಆರ್ಥಿಕವಾಗಿ ಹಾಗೆ ಮಾಡಲು ಶಕ್ತರಾಗದಿದ್ದಲ್ಲಿ ಪ್ರಾಯಶಃ ನಿಮಗೆ ಈ ಅನಿಸಿಕೆಯಾದೀತು. ಅಪೋಸ್ತಲ ಪೌಲನು ಯಾರನ್ನು “ಕಾಮತಾಪಪಡು” ವವರಾಗಿ ವರ್ಣಿಸುತ್ತಾನೊ ಅಂಥವರಲ್ಲಿ ನೀವು ಒಬ್ಬರಾಗಿದ್ದಲ್ಲಿ, ಇದು ವಿಶೇಷವಾಗಿ ಸತ್ಯವಾಗಿರಬಹುದು.—1 ಕೊರಿಂಥ 7:9.
ಸಮಸ್ಯೆಯನ್ನು ನಿಭಾಯಿಸುವುದೇನೂ ಸುಲಭವಾಗಿರಲಿಕ್ಕಿಲ್ಲ, ಆದರೆ ತಾಳಿಕೊಳ್ಳಲು ಮತ್ತು ನಿಮ್ಮ ಪರಿಸ್ಥಿತಿಯಲ್ಲಿ ಆನಂದವನ್ನು ಸಹ ಕಂಡುಕೊಳ್ಳಲು ನೀವು ಮಾಡಬಲ್ಲ ವಿಷಯಗಳಿವೆ. ಕೋರಿಕೆಯು ಕೈಗೂಡಲು ತಡವಾದರೆ ಉಂಟಾಗುವ ಆಶಾಭಂಗವನ್ನು ಪರಿಹರಿಸಲು ಸಹಾಯ ಮಾಡಬಲ್ಲ ಒಂದು ಪ್ರಾಯೋಗಿಕ ಬೈಬಲ್ ತತ್ವವನ್ನು, ಅವಿವಾಹಿತ ಪುರುಷನಾದ ಯೇಸು ಕ್ರಿಸ್ತನು ತಿಳಿಸಿದ್ದಾನೆ. ಅವನಂದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”—ಅ. ಕೃತ್ಯಗಳು 20:35.
ನೀವು ಇದನ್ನು ನಿಮ್ಮ ಕುಟುಂಬಕ್ಕಾಗಿ ಮತ್ತು ಸಭೆಯಲ್ಲಿರುವ ಇತರರಿಗಾಗಿ ಒಳ್ಳೇದನ್ನು ಮಾಡುವ ಮೂಲಕ ಅನ್ವಯಿಸಬಲ್ಲಿರಿ. ಪ್ರಾಯಶಃ ನೀವು ಕ್ರೈಸ್ತ ಶುಶ್ರೂಷೆಯಲ್ಲಿ ನಿಮ್ಮ ಚಟುವಟಿಕೆಯನ್ನು ಸಹ ವೃದ್ಧಿಸಬಲ್ಲಿರಿ. ನಿಸ್ವಾರ್ಥ ಕೊಡುವಿಕೆಯಲ್ಲಿ ನೀವು ನಿಮ್ಮನ್ನು ಪೂರ್ಣ ಮಗ್ನರಾಗಿರಿಸುವಲ್ಲಿ, ‘ಹೃದಯದಲ್ಲಿ ನಿಶ್ಚಿಂತರಾಗಿದ್ದು ನಿಮ್ಮ ಸ್ವಇಷ್ಟದ ಮೇಲೆ ಅಧಿಕಾರವುಳ್ಳವ’ ರಾಗುವುದನ್ನು ನೀವು ಕಂಡುಕೊಂಡೀರಿ.—1 ಕೊರಿಂಥ 7:37.
ಇನ್ನೊಬ್ಬ ಅವಿವಾಹಿತ ಪುರುಷನಾದ ಪೌಲನು, ಈ ಸಹಾಯಕರ ಸಲಹೆಯನ್ನು ಬರೆದನು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” (ಎಫೆಸ 5:15, 16) ಅನೇಕ ಅವಿವಾಹಿತ ಕ್ರೈಸ್ತರು ಪ್ರಾರ್ಥನೆ, ದೇವರ ವಾಕ್ಯದ ಅಧ್ಯಯನ, ಮತ್ತು ಕ್ರೈಸ್ತ ಕೂಟಗಳಲ್ಲಿ ಪಾಲುಗಾರಿಕೆಯ ಮೂಲಕ ಯೆಹೋವನಿಗೆ ಸಮೀಪವಾಗಿರಲು ತಮ್ಮ ಸಮಯವನ್ನು ಉಪಯೋಗಿಸುವ ಮೂಲಕ ‘ತಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು’ ಕಂಡುಕೊಂಡಿದ್ದಾರೆ. (ಮತ್ತಾಯ 11:28-30) ನೀವಿದನ್ನು ಮಾಡುವಲ್ಲಿ, ಆರ್ಥಿಕ ಪರಿಸ್ಥಿತಿಯ ಕಷ್ಟವನ್ನು ಹೆಚ್ಚು ಯಶಸ್ವಿಯಾಗಿ ನಿಭಾಯಿಸಲು ಶಕ್ತರಾಗುವಿರಿ. ಹೆಚ್ಚಿನ ಆತ್ಮಿಕತೆಯನ್ನು ಪ್ರದರ್ಶಿಸಲು ಸಹ ಅದು ನಿಮಗೆ ಸಹಾಯಮಾಡಿ, ಒಂದುವೇಳೆ ಕಡೆಗೆ ನೀವು ಮದುವೆಯಾದಲ್ಲಿ ನಿಮ್ಮನ್ನು ಒಬ್ಬ ಹೆಚ್ಚು ಉತ್ತಮ ಗಂಡ ಅಥವಾ ಹೆಂಡತಿಯಾಗಿ ಮಾಡಬಲ್ಲದು.
ಯೆಹೋವನು ತನ್ನನ್ನು ಸೇವಿಸುವವರೆಲ್ಲರನ್ನು ಪಾಲಿಸುತ್ತಾನೆಂಬುದನ್ನೆಂದೂ ಮರೆಯದಿರ್ರಿ. ನೀವು ಅನುಭವಿಸುವ ಸಮಸ್ಯೆಗಳೂ ಕಷ್ಟಗಳೂ ಆತನಿಗೆ ತಿಳಿದಿವೆ. ಮುಂದಕ್ಕೆ ನಿಮಗೆ ಆತ್ಮಿಕವಾಗಿಯೂ ಮಾನಸಿಕವಾಗಿಯೂ ಯಾವುದು ಅತ್ಯುತ್ತಮವೆಂಬುದನ್ನೂ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಬಲ್ಲನು. ನಿಮ್ಮ ದಿನನಿತ್ಯದ ಜೀವನದಲ್ಲಿ ಆತನ ವಾಕ್ಯದ ತತ್ವಗಳನ್ನು ನೀವು ತಾಳ್ಮೆಯಿಂದ ಅನ್ವಯಿಸುವಲ್ಲಿ, ಆತನು ತನ್ನ ಕ್ಲುಪ್ತ ಕಾಲದಲ್ಲಿ ಪರಿಹಾರವನ್ನು ತಂದು, ನಿಮ್ಮ ನಿತ್ಯ ಒಳಿತಿಗಾಗಿರುವ ರೀತಿಯಲ್ಲಿ ನಿಮ್ಮ ಆವಶ್ಯಕತೆಗಳನ್ನೂ ಅಪೇಕ್ಷೆಗಳನ್ನೂ ತೃಪ್ತಿಗೊಳಿಸುವನೆಂಬ ನಿಶ್ಚಯತೆ ನಿಮಗಿರಬಲ್ಲದು. ಬೈಬಲು ಆಶ್ವಾಸನೆ ಕೊಡುವುದು: “ಆತನು [ಯೆಹೋವನು] ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?”—ಕೀರ್ತನೆ 84:11.
ವಿಷಯಗಳ ಸಕಾರಾತ್ಮಕ ಪಕ್ಕವನ್ನು ನೋಡಿರಿ
ಅವಿವಾಹಿತರಾಗಿರುವುದರಲ್ಲಿ ನಿಶ್ಚಿತವಾದ ಪ್ರಯೋಜನಗಳಿವೆ ಎಂಬುದನ್ನೂ ಮನಸ್ಸಿನಲ್ಲಿಡಿರಿ. ಅಪೊಸ್ತಲ ಪೌಲನು ಬರೆದದ್ದು: “ತನ್ನ ಅವಿವಾಹಿತ ಸ್ಥಿತಿಯನ್ನು ತೊರೆದು ಮದುವೆಯಾಗುವವನು ಒಳ್ಳೇದನ್ನು ಮಾಡುತ್ತಾನೆ, ಆದರೆ ಅದನ್ನು ಮದುವೆಯಲ್ಲಿ ತೊರೆಯದೆ ಇರುವವನು ಇನ್ನೂ ಹೆಚ್ಚು ಒಳ್ಳೇದನ್ನು ಮಾಡುತ್ತಾನೆ.”—1 ಕೊರಿಂಥ 7:38, NW.
ಅವಿವಾಹಿತತೆಯು ಮದುವೆಗಿಂತ “ಹೆಚ್ಚು ಒಳ್ಳೇದು” ಏಕೆ? ಪೌಲನು ವಿವರಿಸಿದ್ದು: “ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. ಅದರಂತೆ ಮುತ್ತೈದೆಗೂ ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಿಲ್ಲದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ; ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.”—1 ಕೊರಿಂಥ 7:32-35.
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ವಿವಾಹಿತ ಕ್ರೈಸ್ತರು ತಮ್ಮ ಸಂಗಾತಿಗಳ ಅಗತ್ಯ, ಇಷ್ಟ, ಅರುಚಿಗಳ ಕುರಿತು ನ್ಯಾಯವಾಗಿ ಚಿಂತಿಸುತ್ತಾರೆ. ಆದರೆ ಅವಿವಾಹಿತ ಕ್ರೈಸ್ತರು ಯೆಹೋವನ ಸೇವೆಯ ಮೇಲೆ ಅತಿ ಹೆಚ್ಚಿನ ಏಕಾಗ್ರತೆಯನ್ನು ಕೇಂದ್ರೀಕರಿಸಬಲ್ಲರು. ವಿವಾಹಿತರೊಂದಿಗೆ ಹೋಲಿಸುವಾಗ, ಅವಿವಾಹಿತ ಕ್ರೈಸ್ತರಾದರೊ ‘ಅಪಕರ್ಷಣೆಯಿಲ್ಲದೆ ಕರ್ತನ ಕಾರ್ಯಗಳಿಗೆ ಸದಾ ಗಮನ’ ಕೊಡಲು ಉತ್ತಮ ಸ್ಥಾನದಲ್ಲಿರುವರು.—1 ಕೊರಿಂಥ 7:35.
ಅವಿವಾಹಿತ ಕ್ರೈಸ್ತರಿಗೆ ಯಾವ ಅಪಕರ್ಷಣೆಗಳೂ ಇಲ್ಲವೆಂದು ಪೌಲನು ಹೇಳುತ್ತಿಲ್ಲ. ನಿಮಗೆ ಆರ್ಥಿಕ ಸಮಸ್ಯೆಗಳಿಂದ ಹೊರೆಯು ಹೊರಿಸಲ್ಪಟ್ಟಿರುವಲ್ಲಿ, ನಿಮ್ಮ ಶುಶ್ರೂಷೆಯಿಂದ ನಿಮ್ಮನ್ನು ಅಪಕರ್ಷಿಸಲು, ಬೆದರಿಸುವ ಅನೇಕ ವಿಷಯಗಳಿವೆಯೆಂದು ನೀವು ಭಾವಿಸಬಹುದು. ಆದಾಗ್ಯೂ, ವಿವಾಹಿತರಿಗಿಂತ ಅವಿವಾಹಿತ ಪುರುಷನಿಗೆ ಅಥವಾ ಸ್ತ್ರೀಗೆ ದೇವರನ್ನು ಸೇವಿಸಲು ಸಾಮಾನ್ಯವಾಗಿ ಹೆಚ್ಚಿನ ವೈಯಕ್ತಿಕ ಸ್ವಾತಂತ್ರ್ಯವಿದೆ.
ಅವಿವಾಹಿತತೆಯು ಹೆಚ್ಚು ಉತ್ತಮ ಮಾರ್ಗವೆಂದು ಶಿಫಾರಸ್ಸು ಮಾಡುವಾಗ, ಮದುವೆಯಾಗುವುದು ತಪ್ಪೆಂದು ಪೌಲನು ಹೇಳಲಿಲ್ಲ. ಅವನು ಬರೆದದ್ದು: “ಒಂದು ವೇಳೆ ನೀನು ಮದುವೆಮಾಡಿಕೊಂಡರೂ ಪಾಪವಿಲ್ಲ.” ಆದರೂ, ಅವನು ಎಚ್ಚರಿಸಿದ್ದು: “ಮದುವೆಮಾಡಿಕೊಂಡವರಿಗೆ ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು.”—1 ಕೊರಿಂಥ 7:28.
ಅದರಿಂದ ಅವನು ಏನನ್ನು ಅರ್ಥೈಸಿದನು? ಮದುವೆಯು ನಿರ್ದಿಷ್ಟ ಚಿಂತೆಗಳನ್ನು ತರುತ್ತದೆ. ಆರ್ಥಿಕ ಸಂಕಷ್ಟದ ಸಮಯಗಳಲ್ಲಿ, ತನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ಒದಗಿಸುವ ಕುರಿತಾದ ತಂದೆಯ ಚಿಂತೆಯು ಆ ಕಷ್ಟಗಳಲ್ಲಿ ಕೂಡಿರಬಹುದು. ಅಸ್ವಸ್ಥತೆಯು ಸಹ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತರಬಲ್ಲದು.
ಹೀಗೆ ನಿಮ್ಮ ಪರಿಸ್ಥಿತಿಯು ನೀವು ಇಷ್ಟಪಡುವಂತೆ ಇರದಿರಬಹುದಾದರೂ, ಒಂದು ವೇಳೆ ನೀವು ವಿವಾಹವಾಗಿ ಮಕ್ಕಳಿಗೆ ಒದಗಿಸುವ ಜವಾಬ್ದಾರಿ ಹೊಂದಿರುವುದಕ್ಕಿಂತ ಒಂದು ಹೆಚ್ಚು ಉತ್ತಮ ಸ್ಥಾನದಲ್ಲಿರಬಹುದು. ನೀವು ಈಗ ಎದುರಿಸುವ ಕಷ್ಟಗಳು ತಾತ್ಕಾಲಿಕವಾದವುಗಳು; ದೇವರ ಹೊಸ ವ್ಯವಸ್ಥೆಯಲ್ಲಿ ಅವು ತೆಗೆದುಹಾಕಲ್ಪಡುವುವು—ಮತ್ತು ಕೆಲವು ಪ್ರಾಯಶಃ ಅದಕ್ಕಿಂತ ಮುಂಚಿತವಾಗಿಯೆ.—ಕೀರ್ತನೆ 145:16ನ್ನು ಹೋಲಿಸಿ.
ನಿಮ್ಮ ಶುಶ್ರೂಷೆಯನ್ನು ನೀವು ವಿಸ್ತರಿಸಬಲ್ಲಿರೊ?
ಪ್ರತಿಯೊಬ್ಬರು ಹಾಗೆ ಮಾಡಶಕ್ತರಲ್ಲದಿದ್ದರೂ, ಕೆಲವರು ಆರ್ಥಿಕ ಸಮಸ್ಯೆಗಳಿದ್ದಾಗ್ಯೂ ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸಶಕ್ತರಾಗಿದ್ದಾರೆ. ಆರಂಭದಲ್ಲಿ ತಿಳಿಸಲ್ಪಟ್ಟ ಚೂಕ್ಸ್, ತನ್ನ ಕುಟುಂಬದ ಪೋಷಣೆಗಾಗಿ, ಲೇಖನ ಸಾಮಗ್ರಿಗಳನ್ನು ಖರೀದಿಸಿ ಮಾರುವ ಕೆಲಸ ಮಾಡಿದನು. ಅವನ ಮದುವೆಯ ಯೋಜನೆಗಳು ನಿಷ್ಫಲಗೊಂಡ ಸುಮಾರು ಅದೇ ಸಮಯಕ್ಕೆ, ವಾಚ್ ಟವರ್ ಸೊಸೈಟಿಯ ಸ್ಥಳಿಕ ಬ್ರಾಂಚ್ ಆಫೀಸಿನಲ್ಲಿ ತಾತ್ಕಾಲಿಕವಾಗಿ ಕಟ್ಟಡದ ಕೆಲಸಮಾಡಲು ಆಮಂತ್ರಿಸಿದ ಪತ್ರವೊಂದು ಅವನ ಕೈಸೇರಿತು. ಹಣದ ಕುರಿತು ಚಿಂತಿಸಿದ ಅವನ ಅಣ್ಣನು ಅವನು ಹೋಗುವುದನ್ನು ನಿರುತ್ತೇಜಿಸಿದನು. ಆದರೂ ಯೆಹೋವನು ತನಗೆ ಲೇಖನ ಸಾಮಗ್ರಿಯ ವ್ಯಾಪಾರ ಸ್ಥಾಪಿಸಲು ನೆರವಾದದ್ದರಿಂದ, ತಾನು ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡಬೇಕು ಮತ್ತು ಒದಗಿಸಶಕ್ತನಾದ ದೇವರಲ್ಲಿ ಭರವಸವಿಡಬೇಕು ಎಂದು ಚೂಕ್ಸ್ ವಿವೇಚಿಸಿದನು. (ಮತ್ತಾಯ 6:25-34) ಅದಲ್ಲದೆ, ಅದು ಕೇವಲ ಮೂರು ತಿಂಗಳ ಅವಧಿಯ ಕೆಲಸ ಎಂದವನು ನೆನಸಿದನು.
ಚೂಕ್ಸ್ ಆಮಂತ್ರಣವನ್ನು ಸ್ವೀಕರಿಸಿದನು ಮತ್ತು ತನ್ನ ವ್ಯಾಪಾರವನ್ನು ಅಣನ್ಣಿಗೆ ವಹಿಸಿಕೊಟ್ಟನು. ಆರು ವರ್ಷಗಳ ತರುವಾಯ, ಚೂಕ್ಸ್ ಪೂರ್ಣ ಸಮಯದ ಸೇವೆಯಲ್ಲಿ ಉಳಿದಿದ್ದಾನೆ, ಕ್ರೈಸ್ತ ಸಭೆಯಲ್ಲಿ ಹಿರಿಯನಾಗಿದ್ದಾನೆ, ಮದುವೆಯಾಗಲು ಆರ್ಥಿಕವಾಗಿ ಸಿದ್ಧನಾಗಿದ್ದಾನೆ. ತನ್ನ ಜೀವನದಲ್ಲಿ ಘಟನಾವಳಿಗಳು ಸಂಭವಿಸಿದ ರೀತಿಗೆ ಅವನು ವಿಷಾದಿಸುತ್ತಾನೊ? ಚೂಕ್ಸ್ ಅನ್ನುವುದು: “ನಾನು ಬಯಸಿದಾಗ ಮದುವೆಯಾಗಲು ಸಾಧ್ಯವಾಗದಕ್ಕಾಗಿ ನಾನು ನಿರಾಶೆಗೊಂಡೆ. ಆದರೆ ವಿಷಯಗಳು ನಿಜವಾಗಿ ನನ್ನ ಹಿತಕ್ಕಾಗಿ ಕಾರ್ಯನಡಿಸಿದವು. ನಾನು ಅನೇಕ ಆನಂದಗಳನ್ನು ಮತ್ತು ಸೇವಾ ಸುಯೋಗಗಳನ್ನು ಅನುಭವಿಸಿದ್ದೇನೆ, ನಾನು ಆವಾಗಲೆ ಮದುವೆಯಾಗಿ ಕುಟುಂಬವನ್ನು ಬೆಳೆಸಿದ್ದರೆ ಪ್ರಾಯಶಃ ಅವನ್ನು ಅನುಭವಿಸುತ್ತಿದ್ದಿರಲಿಲ್ಲ.”
ಭವಿಷ್ಯತ್ತಿಗಾಗಿ ಭದ್ರತೆ
ಕಷ್ಟದ ಸಮಯಗಳಲ್ಲಿ ಅನೇಕರು ಮುಂದಿನ ಆರ್ಥಿಕ ಕಷ್ಟಗಳ ವಿರುದ್ಧ ರಕ್ಷಣೆಯೋಪಾದಿ ವಿವಾಹದ ಭದ್ರತೆಯನ್ನು ಹುಡುಕುತ್ತಾರೆ. ಸಾಲದ ಹೊರೆಯಿಂದ ಕುಗ್ಗಿರುವ ಕೆಲವು ದೇಶಗಳು, ವೃದ್ಧರಿಗೆ ಕೊಂಚ ಅಥವಾ ಯಾವ ಸಹಾಯವನ್ನು ನೀಡುವುದಿಲ್ಲ. ಹೀಗೆ ಹೆತ್ತವರು ಮುಪ್ಪಿನಲ್ಲಿ ತಮ್ಮ ಸಂರಕ್ಷಣೆಗಾಗಿ ಆಗಿಂದಾಗ್ಗೆ ತಮ್ಮ ಕುಟುಂಬಗಳ ಮೇಲೆ, ವಿಶೇಷವಾಗಿ ತಮ್ಮ ಮಕ್ಕಳ ಮೇಲೆ ಆತುಕೊಳ್ಳುತ್ತಾರೆ. ಪರಿಣಾಮವಾಗಿ, ಅವಿವಾಹಿತ ಪುರುಷರು ಮತ್ತು ಸ್ತ್ರೀಯರು, ಅವರ ಆರ್ಥಿಕ ಸ್ಥಾನವು ಅನಿಶ್ಚಿತವಾಗಿದ್ದರೂ, ವಿವಾಹವಾಗಿ ಮಕ್ಕಳನ್ನು ಹಡೆಯಲು ಒತ್ತಯಾಕ್ಕೆ ಒಳಗಾಗುತ್ತಾರೆ.
ಆದರೆ ಮದುವೆ ಮತ್ತು ಮಕ್ಕಳನ್ನು ಹಡೆಯುವಿಕೆಯು ಭದ್ರತೆಯ ಖಾತ್ರಿಯನ್ನು ಕೊಡುವುದಿಲ್ಲ. ಕೆಲವು ಲೌಕಿಕ ಮಕ್ಕಳು ತಮ್ಮ ವೃದ್ಧ ಹೆತ್ತವರ ಆರೈಕೆಮಾಡಲು ಮನಸ್ಸಿಲ್ಲದವರಾಗಿದ್ದಾರೆ, ಇತರರು ಅದನ್ನು ಮಾಡಶಕ್ತರಲ್ಲ, ಮತಿತ್ತರರು ತಮ್ಮ ಹೆತ್ತವರಿಗೆ ಮುಂಚೆಯೆ ಸಾಯುತ್ತಾರೆ. ಕ್ರೈಸ್ತರು ದೇವರ ವಾಗ್ದಾನವನ್ನು ಮನಸ್ಸಿನಲ್ಲಿಟ್ಟವರಾಗಿ, ಮುಖ್ಯವಾಗಿ ಭದ್ರತೆಗಾಗಿ ಬೇರೆ ಕಡೆಗೆ ನೋಡುತ್ತಾರೆ: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.
ಯಾರು ಯೆಹೋವನನ್ನು ಪೂರ್ಣ ಸಮಯ ಸೇವಿಸುವುದಕ್ಕಾಗಿ ವಿವಾಹವನ್ನು ವಿಳಂಬಿಸಿದ್ದಾರೊ ಅವರು ಕೈಬಿಡಲ್ಪಟ್ಟಿಲ್ಲ. ಕ್ರಿಸೀಯಾನ 32 ವರ್ಷ ಪ್ರಾಯದ ಅವಿವಾಹಿತೆ. ಕಳೆದ ಒಂಬತ್ತು ವರ್ಷಗಳಿಂದ ಅವಳು ನೈಜಿರಿಯದಲ್ಲಿ ಕ್ರಮದ ಪಯನೀಯರಳಾಗಿ ಸೇವೆ ನಡಿಸಿದ್ದಾಳೆ. ಅವಳನ್ನುವುದು: “ತನ್ನ ಸೇವಕರನ್ನೆಂದೂ ತ್ಯಜಿಸೆನೆಂದು ಆಶ್ವಾಸನೆಯಿತ್ತ ಯೆಹೋವನಲ್ಲಿ ನಾನು ಭರವಸೆಯಿಟ್ಟಿದ್ದೇನೆ. ಆತನ ವಾಗ್ದಾನವು ನನ್ನ ಭರವಸೆ. ಆತ್ಮಿಕವಾಗಿ ಮತ್ತು ಪ್ರಾಪಂಚಿಕವಾಗಿ ಯೆಹೋವನು ನನ್ನ ಪರಾಮರಿಕೆ ಮಾಡುತ್ತಾನೆ. ಆತನು ಉದಾರಿಯಾದ ತಂದೆಯಾಗಿ ಪರಿಣಮಿಸಿದ್ದಾನೆ. ದೃಷ್ಟಾಂತಕ್ಕಾಗಿ, ಸಾಕ್ಷಿಗಳು ಹೆಚ್ಚಾಗಿ ಬೇಕಿದ್ದ ಒಂದು ಕ್ಷೇತ್ರದಲ್ಲಿ ನಾನು ಪಯನೀಯರ್ ಸೇವೆಯನ್ನು ಮಾಡಲು ಸ್ಥಳಾಂತರಿಸಿದೆ. ಅಲ್ಲಿ ಸೌಲಭ್ಯಗಳು ಕೊಂಚವಿದ್ದರೂ, ನಾನು ನಿರ್ವಹಿಸಿಕೊಳ್ಳಲು ಕಲಿತೆ. ಟೈಫಸ್ ಜ್ವರದಿಂದ ನಾನು ಆಸ್ಪತ್ರೆಯಲ್ಲಿದ್ದಾಗ, ನನ್ನ ಮುಂಚಿನ ಸಭೆಯ ಸಹೋದರರು ನನ್ನನ್ನು ಸಂದರ್ಶಿಸಿ ನನ್ನ ಆರೈಕೆ ಮಾಡಿದರು.
“ಪೂರ್ಣ ಸಮಯದ ಸೇವೆಯಲ್ಲಿ ನಾನು ಮಹಾ ಸಂತೃಪ್ತಿಯನ್ನು ಪಡೆದಿದ್ದೇನೆ. ವಿಶ್ವದ ನಿರ್ಮಾಣಿಕನೊಂದಿಗೆ ಮತ್ತು ಭೂಸುತ್ತಲಿನ ಅನೇಕಾನೇಕ ಸಹೋದರ ಮತ್ತು ಸಹೋದರಿಯರೊಂದಿಗೆ ಕೆಲಸ ನಡಿಸುವ ಒಂದು ಮಹಾ ಸುಯೋಗವಾಗಿ ನಾನದನ್ನು ವೀಕ್ಷಿಸುತ್ತೇನೆ. ತಮ್ಮ ಸುತ್ತಲೂ ನಡೆಯತ್ತಿರುವ ಸಂಗತಿಗಳಿಂದಾಗಿ ಆಶಾಭಂಗ ಮತ್ತು ನಿರಾಶೆ ಹೊಂದುತ್ತಿರುವ ಅನೇಕ ಯುವ ಜನರನ್ನು ನಾನು ನೋಡುತ್ತೇನೆ. ನನ್ನ ವಿಷಯದಲ್ಲಾದರೊ, ನನ್ನ ಜೀವನವು ಅರ್ಥಪೂರ್ಣವಾಗಿದೆ; ಭವಿಷ್ಯತ್ತನ್ನು ನಾನು ಭರವಸೆಯಿಂದ ನೋಡುತ್ತೇನೆ. ಯೆಹೋವನಿಗೆ ಹತ್ತಿರವಾಗಿರುವುದೆ ನಾವಿಂದು ಎದುರಿಸುವ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವೆಂದು ನನಗೆ ಗೊತ್ತಿದೆ.”
ನೀವು ಮದುವೆಯಾಗಲು ಹಾತೊರೆಯುವುದಾದರೂ ಆರ್ಥಿಕ ಕಷ್ಟಗಳ ಕಾರಣದಿಂದಾಗಿ ಶಕ್ತರಾಗದಿದ್ದಲ್ಲಿ, ಧೈರ್ಯವಾಗಿರ್ರಿ! ನೀವು ಒಬ್ಬರೆ ಅಲ್ಲ. ಯೆಹೋವನ ಸಹಾಯದಿಂದ ತದ್ರೀತಿಯ ಕಷ್ಟಗಳನ್ನು ತಾಳಿಕೊಂಡಿರುವ ಅನೇಕರು ಇದ್ದಾರೆ. ಇತರರಿಗೆ ಒಳ್ಳೇದನ್ನು ಮಾಡಲು ನಿಮ್ಮನ್ನು ಅನ್ವಯಿಸಿಕೊಳ್ಳುವ ಮೂಲಕ, ಮತ್ತು ನಿಮ್ಮ ಆತ್ಮಿಕತೆಯನ್ನು ವೃದ್ಧಿಸುವ ಮೂಲಕ ನಿಮ್ಮ ಸನ್ನಿವೇಶದ ಸದುಪಯೋಗ ಮಾಡಿರಿ. ದೇವರಿಗೆ ಸಮೀಪವಾಗಿರಿ; ಆತನು ನಿಮಗೆ ಸಹಾಯ ಮಾಡುವನು ಯಾಕಂದರೆ ಆತನು ನಿಜವಾಗಿಯೂ ನಿಮ್ಮ ಕುರಿತು ಚಿಂತಿಸುತ್ತಾನೆ.—1 ಪೇತ್ರ 5:7.