ಪತಿ ಮತ್ತು ಹಿರಿಯ—ಜವಾಬ್ದಾರಿಗಳನ್ನು ಸಮತೂಕಗೊಳಿಸುವುದು
‘ಮೇಲ್ವಿಚಾರಕನು ಏಕಪತ್ನಿಯ ಪತಿಯಾಗಿರಬೇಕು.’—1 ತಿಮೊಥೆಯ 3:2, NW.
1, 2. ಪುರೋಹಿತ ಕುಮಾರವ್ರತವು ಅಶಾಸ್ತ್ರೀಯವೇಕೆ?
ಪ್ರಥಮ ಶತಮಾನದಲ್ಲಿ, ನಂಬಿಗಸ್ತ ಕ್ರೈಸ್ತರು ತಮ್ಮ ವಿವಿಧ ಜವಾಬ್ದಾರಿಗಳನ್ನು ಸಮತೂಕಗೊಳಿಸುವುದರ ಕುರಿತಾಗಿ ಚಿಂತಿತರಾಗಿದ್ದರು. ಅವಿವಾಹಿತನಾಗಿ ಉಳಿಯುವ ಒಬ್ಬ ಕ್ರೈಸ್ತನು “ಹೆಚ್ಚು ಒಳ್ಳೆಯದನ್ನು ಮಾಡುವನು,” ಎಂದು ಅಪೊಸ್ತಲ ಪೌಲನು ಅಂದಾಗ, ಅಂಥ ಒಬ್ಬ ಪುರುಷನು ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರಕನಾಗಿ ಸೇವೆಮಾಡಲು ಹೆಚ್ಚು ಅರ್ಹನಾಗಿರುವನೆಂಬುದನ್ನು ಅರ್ಥೈಸಿದನೊ? ಅವನು ಕಾರ್ಯತಃ ಅವಿವಾಹಿತತನವನ್ನು ಹಿರಿಯತನಕ್ಕಿರುವ ಆವಶ್ಯಕತೆಯನ್ನಾಗಿ ಮಾಡುತ್ತಿದ್ದನೊ? (1 ಕೊರಿಂಥ 7:38, NW) ಕ್ಯಾಥೊಲಿಕ್ ಪುರೋಹಿತ ವರ್ಗದಿಂದ ಕುಮಾರವ್ರತವು ಕೇಳಿಕೊಳ್ಳಲ್ಪಡುತ್ತದೆ. ಆದರೆ ಪುರೋಹಿತ ಕುಮಾರವ್ರತವು ಶಾಸ್ತ್ರೀಯವೊ? ಈಸ್ಟರ್ನ್ ಆರ್ತೊಡಾಕ್ಸ್ ಚರ್ಚುಗಳು, ತಮ್ಮ ಸಭಾಪಾದ್ರಿಗಳನ್ನು ವಿವಾಹಿತ ಪುರುಷರಾಗಿರುವಂತೆ ಬಿಟ್ಟರೂ ಬಿಷಪರನ್ನು ಬಿಡುವುದಿಲ್ಲ. ಅದು ಬೈಬಲಿನೊಂದಿಗೆ ಹೊಂದಿಕೆಯಲ್ಲಿದೆಯೊ?
2 ಕ್ರೈಸ್ತ ಸಭೆಯ ಅಸ್ತಿವಾರ ಸದಸ್ಯರಾದ ಕ್ರಿಸ್ತನ 12 ಮಂದಿ ಅಪೊಸ್ತಲರಲ್ಲಿ ಅನೇಕರು ವಿವಾಹಿತ ಪುರುಷರಾಗಿದ್ದರು. (ಮತ್ತಾಯ 8:14, 15; ಎಫೆಸ 2:20) ಪೌಲನು ಬರೆದುದು: “ಕ್ರೈಸ್ತ ಸಹೋದರಿಯಾಗಿರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ ಕರ್ತನ ತಮ್ಮಂದಿರಂತೆಯೂ ಕೇಫ [ಪೇತ್ರ]ನಂತೆಯೂ ನಮಗೆ ಹಕ್ಕಿಲ್ಲವೇ.” (1 ಕೊರಿಂಥ 9:5) “ಕುಮಾರವ್ರತ ನಿಯಮವು ಕ್ರೈಸ್ತ ಮಠೀಯ ಮೂಲದ್ದಾಗಿದೆ,” ಮತ್ತು “ಹೊ[ಸ] ಒ[ಡಂಬಡಿಕೆ]ಯ ಶುಶ್ರೂಷಕರು ಕುಮಾರವ್ರತಕ್ಕೆ ಹಂಗಿಗರಾಗಿರಲಿಲ್ಲ,” ಎಂದು ನ್ಯೂ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಒಪ್ಪಿಕೊಳ್ಳುತ್ತದೆ. ಯೆಹೋವನ ಸಾಕ್ಷಿಗಳು ಕ್ರೈಸ್ತ ಮಠೀಯ ನಿಯಮಕ್ಕೆ ಬದಲು ಶಾಸ್ತ್ರೀಯ ಮಾದರಿಯನ್ನು ಅನುಸರಿಸುತ್ತಾರೆ.—1 ತಿಮೊಥೆಯ 4:1-3.
ಹಿರಿಯತನ ಮತ್ತು ವಿವಾಹಗಳು ಅನುರೂಪವಾಗಿವೆ
3. ಕ್ರೈಸ್ತ ಮೇಲ್ವಿಚಾರಕರು ವಿವಾಹಿತ ಪುರುಷರಾಗಿರಸಾಧ್ಯವಿದೆಯೆಂಬುದನ್ನು ಯಾವ ಶಾಸ್ತ್ರೀಯ ನಿಜತ್ವಗಳು ತೋರಿಸುತ್ತವೆ?
3 ಮೇಲ್ವಿಚಾರಕರಾಗಿ ನೇಮಿತರಾಗುವ ಪುರುಷರು ಅವಿವಾಹಿತರಾಗಿರಬೇಕೆಂದು ಅಗತ್ಯಪಡಿಸುವುದಕ್ಕೆ ಬದಲಾಗಿ, ಪೌಲನು ತೀತನಿಗೆ ಬರೆದುದು: “ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟದ್ದು, ನಾನು ನಿನಗೆ ಆಜ್ಞೆಗಳನ್ನು ಕೊಟ್ಟಂತೆ ನೀನು ನ್ಯೂನ ವಿಷಯಗಳನ್ನು ತಿದ್ದಬಹುದೆಂದೂ ಆಪಾದನೆರಹಿತನೂ ಏಕಪತ್ನಿಯುಳ್ಳ ಪತಿಯೂ ವಿಷಯಲಂಪಟತನದ ಆಪಾದನೆಯಿಲ್ಲದ ಅಥವಾ ಸ್ವಚ್ಛಂದರಾಗಿರದ ವಿಶ್ವಾಸಿಗಳಾದ ಮಕ್ಕಳಿರುವವರೂ ಆದ ಯಾವ ಪುರುಷನಾದರೂ ಇರುವುದಾದರೆ ಅಂತಹವರನ್ನು ನಗರ ನಗರಗಳಲ್ಲಿ ಹಿರೀಪುರುಷರಾಗಿ [ಗ್ರೀಕ್, ಪ್ರೆಸ್ಬಿಟೆರೊಸ್] ನೇಮಿಸಬಹುದೆಂದೇ. ಏಕೆಂದರೆ ಮೇಲ್ವಿಚಾರಕನು [ಗ್ರೀಕ್, ಎಪಿಸ್ಕೋಪೋಸ್, ಇಂಗ್ಲಿಷ್ ಪದ “ಬಿಷಪ್” ಇದರಿಂದ ಬಂದಿದೆ] ದೇವರ ಮನೆವಾರ್ತೆಗಾರನೋಪಾದಿ ನಿಂದಾರಹಿತನಾಗಿರತಕ್ಕದ್ದು.”—ತೀತ 1:5-7, NW.
4. (ಎ) ಕ್ರೈಸ್ತ ಮೇಲ್ವಿಚಾರಕರಿಗೆ ವಿವಾಹವು ಒಂದು ಆವಶ್ಯಕತೆಯಾಗಿರುವುದಿಲ್ಲವೆಂದು ನಮಗೆ ಹೇಗೆ ಗೊತ್ತು? (ಬಿ) ಹಿರಿಯನಾದ ಒಬ್ಬ ಅವಿವಾಹಿತ ಸಹೋದರನಿಗೆ ಯಾವ ಅನುಕೂಲತೆಯಿದೆ?
4 ಇನ್ನೊಂದು ಕಡೆಯಲ್ಲಿ, ವಿವಾಹವು ಹಿರಿಯತನಕ್ಕಿರುವ ಶಾಸ್ತ್ರೀಯ ಆವಶ್ಯಕತೆಯಾಗಿರುವುದಿಲ್ಲ. ಯೇಸು ಅವಿವಾಹಿತನಾಗಿ ಉಳಿದನು. (ಎಫೆಸ 1:22) ಒಂದನೆಯ ಶತಮಾನದ ಕ್ರೈಸ್ತ ಸಭೆಯೊಳಗೆ ಪ್ರಮುಖ ಮೇಲ್ವಿಚಾರಕನಾಗಿದ್ದ ಪೌಲನು, ಆಗ ವಿವಾಹಿತನಾಗಿರಲಿಲ್ಲ. (1 ಕೊರಿಂಥ 7:7-9) ಇಂದು ಹಿರಿಯರಾಗಿ ಸೇವೆಮಾಡುವ ಅನೇಕ ಅವಿವಾಹಿತ ಕ್ರೈಸ್ತರಿದ್ದಾರೆ. ಅವರ ಅವಿವಾಹಿತ ಸ್ಥಿತಿಯು, ಮೇಲ್ವಿಚಾರಕರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಹೆಚ್ಚು ಸಮಯವನ್ನು ಕೊಡಬಹುದು.
‘ವಿವಾಹಿತ ಪುರುಷನು ವಿಭಾಗಿತನು’
5. ವಿವಾಹಿತ ಸಹೋದರರು ಯಾವ ಶಾಸ್ತ್ರೀಯ ನಿಜತ್ವವನ್ನು ಒಪ್ಪಿಕೊಳ್ಳಬೇಕು?
5 ಒಬ್ಬ ಕ್ರೈಸ್ತ ಪುರುಷನು ವಿವಾಹವಾಗುವಾಗ, ತಾನು ಹೊಸ ಜವಾಬ್ದಾರಿಗಳನ್ನು, ತನ್ನ ಸಮಯ ಮತ್ತು ಗಮನವನ್ನು ಕೇಳಿಕೊಳ್ಳುವವುಗಳನ್ನು ವಹಿಸಿಕೊಳ್ಳುತ್ತಿದ್ದೇನೆಂಬುದನ್ನು ಗ್ರಹಿಸಿಕೊಳ್ಳಬೇಕು. ಬೈಬಲು ಹೇಳುವುದು: “ಅವಿವಾಹಿತ ಪುರುಷನು, ತಾನು ಕರ್ತನ ಒಪ್ಪಿಗೆಯನ್ನು ಹೇಗೆ ಸಂಪಾದಿಸಬಹುದೆಂದು ಕರ್ತನ ವಿಷಯಗಳಿಗಾಗಿ ತವಕಪಡುತ್ತಾನೆ. ಆದರೆ ವಿವಾಹಿತ ಪುರುಷನು, ತಾನು ತನ್ನ ಪತ್ನಿಯ ಒಪ್ಪಿಗೆಯನ್ನು ಹೇಗೆ ಸಂಪಾದಿಸಬಹುದೆಂದು ಲೋಕದ ವಿಷಯಗಳಿಗಾಗಿ ತವಕಪಡುತ್ತಾನೆ, ಮತ್ತು ಅವನು ವಿಭಾಗಿತನಾಗಿದ್ದಾನೆ.” (1 ಕೊರಿಂಥ 7:32-34, NW) ಯಾವ ಅರ್ಥದಲ್ಲಿ ವಿಭಾಗಿತನು?
6, 7. (ಎ) ವಿವಾಹಿತ ಪುರುಷನು “ವಿಭಾಗಿತ”ನಾಗಿರುವ ಒಂದು ವಿಧವು ಯಾವುದು? (ಬಿ) ಪೌಲನು ವಿವಾಹಿತ ಕ್ರೈಸ್ತರಿಗೆ ಯಾವ ಸಲಹೆಯನ್ನು ನೀಡುತ್ತಾನೆ? (ಸಿ) ಒಂದು ಉದ್ಯೋಗ ನೇಮಕವನ್ನು ಅಂಗೀಕರಿಸುವ ವಿಷಯದಲ್ಲಿ ಇದು ಒಬ್ಬ ಪುರುಷನನ್ನು ಹೇಗೆ ಪ್ರಭಾವಿಸಸಾಧ್ಯವಿದೆ?
6 ಒಂದು ವಿಷಯವೇನಂದರೆ, ವಿವಾಹಿತ ಪುರುಷನೊಬ್ಬನು ತನ್ನ ಸ್ವಶರೀರದ ಮೇಲಿನ ಅಧಿಕಾರವನ್ನು ತ್ಯಜಿಸುತ್ತಾನೆ. ಪೌಲನು ಇದನ್ನು ತೀರ ಸ್ಪಷ್ಟಗೊಳಿಸಿದನು: “ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಅದು ಹೆಂಡತಿಗುಂಟು.” (1 ಕೊರಿಂಥ 7:4) ವಿವಾಹದ ಕುರಿತು ಚಿಂತಿಸುತ್ತಿರುವ ಕೆಲವರು, ಇದು ಕಡಮೆ ಪ್ರಾಧಾನ್ಯವುಳ್ಳದ್ದು, ಏಕೆಂದರೆ ಲೈಂಗಿಕ ಸಂಬಂಧಗಳು ತಮ್ಮ ವಿವಾಹದಲ್ಲಿ ದೊಡ್ಡ ವಿಷಯವಾಗಿರದು ಎಂದೆಣಿಸಬಹುದು. ಆದರೂ, ವಿವಾಹಪೂರ್ವದ ಸಂಭೋಗರಾಹಿತ್ಯವು ಶಾಸ್ತ್ರೀಯ ಆವಶ್ಯಕತೆಯಾಗಿರುವುದರಿಂದ, ಕ್ರೈಸ್ತರಿಗೆ ತಮ್ಮ ಭಾವೀ ಸಂಗಾತಿಯ ಲೈಂಗಿಕ ಆವಶ್ಯಕತೆಗಳು ನಿಜವಾಗಿಯೂ ತಿಳಿದಿರುವುದಿಲ್ಲ.
7 ‘ತಮ್ಮ ಮನಸ್ಸುಗಳನ್ನು ಆತ್ಮದ ವಿಷಯಗಳ ಮೇಲೆ ಇಡುವ’ ದಂಪತಿಗಳು ಸಹ ಪರಸ್ಪರವಾದ ಲೈಂಗಿಕಾವಶ್ಯಕತೆಗಳನ್ನು ಪರಿಗಣಿಸಬೇಕೆಂದು ಪೌಲನು ತೋರಿಸುತ್ತಾನೆ. ಅವನು ಕೊರಿಂಥದ ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ. ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ದಂಪತಿಧರ್ಮವನ್ನು ಬಿಟ್ಟು ಅಗಲಿರಬಹುದೇ ಹೊರತು ಅನ್ಯಥಾ ಹಾಗೆ ಮಾಡಬಾರದು; ಆ ಮೇಲೆ ಸೈತಾನನು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ನಿಮಗೆ ದುಷ್ಪ್ರೇರಣೆಮಾಡದಂತೆ ತಿರಿಗಿ ಕೂಡಿಕೊಳ್ಳಿರಿ.” (ರೋಮಾಪುರ 8:5; 1 ಕೊರಿಂಥ 7:3, 5) ವಿಷಾದಕರವಾಗಿ, ಈ ಬುದ್ಧಿವಾದವನ್ನು ಅನುಸರಿಸದಿದ್ದಾಗ, ವ್ಯಭಿಚಾರದ ಸಂಗತಿಗಳು ನಡೆದಿವೆ. ವಿಷಯವು ಹೀಗಿರುವುದರಿಂದ, ವಿವಾಹಿತ ಕ್ರೈಸ್ತನೊಬ್ಬನು, ತನ್ನ ಪತ್ನಿಯಿಂದ ಹೆಚ್ಚುಕಾಲ ತನ್ನನ್ನು ಪ್ರತ್ಯೇಕಿಸುವ ಒಂದು ಉದ್ಯೋಗದ ನೇಮಕವನ್ನು ಅಂಗೀಕರಿಸುವ ಮುಂಚಿತವಾಗಿ ವಿಷಯಗಳನ್ನು ಜಾಗರೂಕತೆಯಿಂದ ತೂಗಿನೋಡಬೇಕು. ಅವನು ಅವಿವಾಹಿತನಾಗಿದ್ದಾಗ ಇದ್ದ ಹಾಗಿನ ಚಟುವಟಿಕೆಯ ಸ್ವಾತಂತ್ರ್ಯವು ಅವನಿಗೆ ಇನ್ನುಮುಂದೆ ಇರುವುದಿಲ್ಲ.
8, 9. (ಎ) ವಿವಾಹಿತ ಕ್ರೈಸ್ತರು “ಲೋಕದ ವಿಷಯಗಳಿಗಾಗಿ ತವಕ”ಪಡುತ್ತಾರೆಂದು ಹೇಳಿದಾಗ ಪೌಲನು ಏನನ್ನು ಅರ್ಥೈಸಿದನು? (ಬಿ) ವಿವಾಹಿತ ಕ್ರೈಸ್ತರು ಏನನ್ನು ಮಾಡಲು ತವಕಪಡುವವರಾಗಬೇಕು?
8 ಹಿರಿಯರನ್ನೂ ಒಳಗೊಂಡು, ವಿವಾಹಿತ ಕ್ರೈಸ್ತ ಪುರುಷರು, “ಲೋಕದ [ಕಾಸ್ಮಾಸ್] ವಿಷಯಗಳಿಗಾಗಿ ತವಕ”ಪಡುತ್ತಾರೆಂದು ಹೇಳಸಾಧ್ಯವಿರುವುದು ಯಾವ ಅರ್ಥದಲ್ಲಿ? (1 ಕೊರಿಂಥ 7:33, NW) ಯಾವುದರಿಂದ ಎಲ್ಲ ಸತ್ಯ ಕ್ರೈಸ್ತರು ದೂರವಿರಬೇಕೊ, ಆ ಲೋಕದ ಕೆಟ್ಟ ವಿಷಯಗಳ ಕುರಿತು ಪೌಲನು ಮಾತಾಡುತ್ತಿರಲಿಲ್ಲವೆಂಬುದು ತೀರ ವ್ಯಕ್ತ. (2 ಪೇತ್ರ 1:4; 2:18-20; 1 ಯೋಹಾನ 2:15-17) “ನಾವು ಭಕ್ತಿಹೀನತೆಯನ್ನೂ ಲೋಕದ [ಕಾಸ್ಮಿಕಾಸ್] ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂದು,” ದೇವರವಾಕ್ಯವು ನಮಗೆ ಬೋಧಿಸುತ್ತದೆ.—ತೀತ 2:12.
9 ಆದಕಾರಣ ವಿವಾಹಿತ ಕ್ರೈಸ್ತನೊಬ್ಬನು, “ಲೋಕದ ವಿಷಯಗಳಿಗಾಗಿ ತವಕಪಡುತ್ತಾನೆ,” ಅಂದರೆ ಅವನಾಗಲಿ ಅವಳಾಗಲಿ, ಸಾಮಾನ್ಯ ವೈವಾಹಿಕ ಜೀವನದ ಭಾಗವಾಗಿರುವ ಐಹಿಕ ವಿಷಯಗಳ ಕುರಿತು ನ್ಯಾಯವಾಗಿಯೇ ಚಿಂತಿತರಾಗಿದ್ದಾರೆ. ಇದರಲ್ಲಿ ವಸತಿ, ಆಹಾರ, ಉಡುಗೆತೊಡುಗೆ, ಮನೋರಂಜನೆಗಳು ಸೇರಿರುವುದಲ್ಲದೆ, ಮಕ್ಕಳಿರುವಲ್ಲಿ ಅಸಂಖ್ಯಾತವಾದ ಇತರ ಆಸ್ಥೆಗಳು ಸೇರಿವೆ. ಆದರೆ ಮಕ್ಕಳಿಲ್ಲದ ದಂಪತಿಗಳಿಗೂ, ವಿವಾಹವು ಕಾರ್ಯಸಾಧಕವಾಗಬೇಕಾದರೆ, ಪತಿಪತ್ನಿಯರಿಬ್ಬರೂ ಅವನ ಅಥವಾ ಅವಳ ವಿವಾಹ ಸಂಗಾತಿಯ “ಒಪ್ಪಿಗೆಯನ್ನು ಸಂಪಾದಿಸಲು” ತವಕಪಡಬೇಕು. ಕ್ರೈಸ್ತ ಹಿರಿಯರು ತಮ್ಮ ಜವಾಬ್ದಾರಿಗಳನ್ನು ಸಮತೂಕಗೊಳಿಸಿದಂತೆ, ಇದು ಅವರಿಗೆ ವಿಶೇಷವಾದ ಆಸಕ್ತಿಯ ವಿಷಯವಾಗಿದೆ.
ಒಳ್ಳೆಯ ಪತಿಗಳು ಹಾಗೂ ಒಳ್ಳೆಯ ಹಿರಿಯರು
10. ಒಬ್ಬ ಕ್ರೈಸ್ತನು ಹಿರಿಯನಾಗಲು ಅರ್ಹನಾಗಬೇಕಾದರೆ, ಅವನ ಜೊತೆ ಸಾಕ್ಷಿಗಳು ಹಾಗೂ ಸಭೆಯ ಹೊರಗಿನ ಜನರು ಏನನ್ನು ಗಮನಿಸಲು ಶಕ್ತರಾಗಬೇಕು?
10 ವಿವಾಹವು ಹಿರಿಯತನಕ್ಕಿರುವ ಆವಶ್ಯಕತೆಯಲ್ಲವಾದರೂ, ಕ್ರೈಸ್ತ ಪುರುಷನು ವಿವಾಹಿತನಾಗಿರುವಲ್ಲಿ, ಅವನನ್ನು ಹಿರಿಯನ ನೇಮಕಕ್ಕೆ ಶಿಫಾರಸ್ಸುಮಾಡುವ ಮೊದಲು, ಅವನು ಯೋಗ್ಯವಾದ ತಲೆತನವನ್ನು ವಹಿಸುತ್ತಿರುವಾಗಲೇ, ಒಳ್ಳೆಯ, ಪ್ರೀತಿಸುವ ಪತಿಯಾಗಿರಲು ಪ್ರಯತ್ನಿಸುತ್ತಿದ್ದಾನೆಂಬುದಕ್ಕೆ ಅವನು ಸಾಕ್ಷ್ಯವನ್ನು ನಿಶ್ಚಯವಾಗಿಯೂ ಒದಗಿಸಬೇಕು. (ಎಫೆಸ 5:23-25, 28-31) ಪೌಲನು ಬರೆದುದು: “ಯಾವ ಪುರುಷನಾದರೂ ಮೇಲ್ವಿಚಾರಕನ ಸ್ಥಾನಕ್ಕಾಗಿ ಪ್ರಯತ್ನಿಸುವಲ್ಲಿ ಅವನು ಉತ್ತಮ ಕೆಲಸವನ್ನು ಬಯಸುವವನಾಗಿದ್ದಾನೆ. ಆದುದರಿಂದ ಮೇಲ್ವಿಚಾರಕನು ಅನಿಂದನೀಯನೂ ಏಕಪತ್ನಿಯ ಪತಿಯೂ . . . ಆಗಿರಬೇಕು.” (1 ತಿಮೊಥೆಯ 3:1, 2, NW) ಒಬ್ಬ ಹಿರಿಯನು, ಅವನ ಪತ್ನಿಯು ಜೊತೆಕ್ರೈಸ್ತಳಾಗಿರಲಿ ಇಲ್ಲದಿರಲಿ, ಒಳ್ಳೆಯ ಪತಿಯಾಗಿರಲು ಸಾಧ್ಯವಿರುವಷ್ಟನ್ನು ಮಾಡುತ್ತಿದ್ದಾನೆಂಬುದು ಪ್ರತ್ಯಕ್ಷವಾಗಬೇಕು. ವಾಸ್ತವವಾಗಿ, ಅವನು ತನ್ನ ಪತ್ನಿಯ ಹಾಗೂ ತನ್ನ ಇತರ ಜವಾಬ್ದಾರಿಗಳ ಕುರಿತು ಒಳ್ಳೆಯ ಕಾಳಜಿ ವಹಿಸುತ್ತಾನೆಂದು ಸಭೆಯ ಹೊರಗಣ ಜನರೂ ಗಮನಿಸಶಕ್ತರಾಗಬೇಕು. ಪೌಲನು ಕೂಡಿಸಿದ್ದು: “ಅವನು ನಿಂದೆಗೆ ಮತ್ತು ಪಿಶಾಚನ ಬಲೆಗೆ ಬೀಳದಿರಬಹುದಾಗಿರುವುದಕ್ಕಾಗಿ ಅವನಿಗೆ ಹೊರಗಿನ ಜನರಿಂದ ಉತ್ತಮ ಸಾಕ್ಷ್ಯವು ಸಹ ಇರಬೇಕು.”—1 ತಿಮೊಥೆಯ 3:7, NW.
11. “ಏಕಪತ್ನಿಯ ಪತಿ” ಎಂಬ ಪದಸರಣಿಯು ಏನನ್ನು ಸೂಚಿಸುತ್ತದೆ, ಆದಕಾರಣ ಹಿರಿಯರು ಯಾವ ಮುಂಜಾಗ್ರತೆಯನ್ನು ವಹಿಸಬೇಕು?
11 “ಏಕಪತ್ನಿಯ ಪತಿ”ಯೆಂಬ ಪದಸರಣಿಯು ಬಹುಪತ್ನೀತ್ವವನ್ನು ತಳ್ಳಿಹಾಕುತ್ತದೆ ನಿಶ್ಚಯ, ಆದರೆ ಅದು ವೈವಾಹಿಕ ನಂಬಿಗಸ್ತಿಕೆಯನ್ನೂ ಸೂಚಿಸುತ್ತದೆ. (ಇಬ್ರಿಯ 13:4) ನಿರ್ದಿಷ್ಟವಾಗಿ ಹಿರಿಯರು, ಸಭೆಯಲ್ಲಿ ಸಹೋದರಿಯರಿಗೆ ಸಹಾಯಮಾಡುವಾಗ ವಿಶೇಷವಾಗಿ ಜಾಗರೂಕತೆಯಿಂದಿರುವುದು ಅಗತ್ಯ. ಸಲಹೆ ಮತ್ತು ಸಾಂತ್ವನದ ಅಗತ್ಯವಿರುವ ಸಹೋದರಿಯೊಬ್ಬಳನ್ನು ಭೇಟಿಮಾಡುತ್ತಿರುವಾಗ ಅವರು ಒಬ್ಬಂಟಿಗರಾಗಿ ಇರುವುದನ್ನು ತಪ್ಪಿಸಬೇಕು. ಇನ್ನೊಬ್ಬ ಹಿರಿಯನೊ, ಶುಶ್ರೂಷಾ ಸೇವಕನೊ ಅಥವಾ ಕೇವಲ ಉತ್ತೇಜನದಾಯಕ ಭೇಟಿಯಾಗಿರುವಲ್ಲಿ ತಮ್ಮ ಪತ್ನಿಯಾದರೂ ಜೊತೆಗಿರುವುದು ಒಳ್ಳೆಯದು.—1 ತಿಮೊಥೆಯ 5:1, 2.
12. ಹಿರಿಯರ ಮತ್ತು ಶುಶ್ರೂಷಾ ಸೇವಕರ ಪತ್ನಿಯರು ಯಾವ ವರ್ಣನೆಗೆ ಹೊಂದಿಕೊಳ್ಳಲು ಪ್ರಯತ್ನಿಸಬೇಕು?
12 ಪ್ರಾಸಂಗಿಕವಾಗಿ, ಹಿರಿಯರ ಮತ್ತು ಶುಶ್ರೂಷಾ ಸೇವಕರ ಆವಶ್ಯಕತೆಗಳನ್ನು ಪಟ್ಟಿಮಾಡಿದಾಗ, ಅಪೊಸ್ತಲ ಪೌಲನಿಗೆ, ಅಂತಹ ಸುಯೋಗಗಳಿಗಾಗಿ ಪರಿಗಣಿಸಲ್ಪಡುತ್ತಿರುವವರ ಪತ್ನಿಗಳಿಗೂ ಸಲಹೆಯ ಒಂದು ಮಾತಿತ್ತು. ಅವನು ಬರೆದುದು: “ಹಾಗೆಯೇ ಸ್ತ್ರೀಯರು ಗಂಭೀರ ಮುದ್ರೆಯವರಾಗಿದ್ದು ಚಾಡಿಹೇಳುವವರಾಗಿರಬಾರದು, ಅವರು ಮಿತಹವ್ಯಾಸಿಗಳು, ಎಲ್ಲ ವಿಷಯಗಳಲ್ಲಿ ನಂಬಿಗಸ್ತರೂ ಆಗಿರಬೇಕು.” (1 ತಿಮೊಥೆಯ 3:11, NW) ತನ್ನ ಪತ್ನಿಯು ಆ ವರ್ಣನೆಗೆ ತಕ್ಕವಳಾಗುವಂತೆ ಸಹಾಯಿಸಲು ಕ್ರೈಸ್ತ ಪತಿಯು ಹೆಚ್ಚನ್ನು ಮಾಡಬಲ್ಲನು.
ಪತ್ನಿಯ ಕಡೆಗಿರುವ ಶಾಸ್ತ್ರೀಯ ಕರ್ತವ್ಯಗಳು
13, 14. ಒಬ್ಬ ಹಿರಿಯನ ಪತ್ನಿಯು ಜೊತೆಸಾಕ್ಷಿಯಾಗಿರದಿದ್ದರೂ, ಅವನು ಏಕೆ ಅವಳೊಂದಿಗೆ ಜೀವಿಸಿ, ಒಳ್ಳೆಯ ಪತಿಯಾಗಿರಬೇಕು?
13 ಹಿರಿಯರ ಹಾಗೂ ಶುಶ್ರೂಷಾ ಸೇವಕರ ಪತ್ನಿಯರಿಗೆ ಕೊಡಲ್ಪಟ್ಟ ಈ ಸಲಹೆಯು, ಅಂತಹ ಪತ್ನಿಯರು ತಾವೇ ಸಮರ್ಪಿತ ಕ್ರೈಸ್ತರೆಂಬುದನ್ನು ಮುಂಭಾವಿಸುತ್ತದೆ ನಿಶ್ಚಯ. ಸರ್ವಸಾಮಾನ್ಯವಾಗಿ ವಿಷಯವು ಹೀಗಿರುತ್ತದೆ, ಏಕೆಂದರೆ ಕ್ರೈಸ್ತರು “ಕರ್ತನಲ್ಲಿ ಮಾತ್ರ” ವಿವಾಹಮಾಡಿಕೊಳ್ಳುವಂತೆ ಆದೇಶಿಸಲ್ಪಡುತ್ತಾರೆ. (1 ಕೊರಿಂಥ 7:39, NW) ಆದರೆ ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಮೊದಲೇ ಅವಿಶ್ವಾಸಿಯೊಬ್ಬಳನ್ನು ವಿವಾಹವಾಗಿರುವ ಸಹೋದರನೊಬ್ಬನ ಅಥವಾ ಅವನ ದೋಷವಲ್ಲದಿದ್ದರೂ ಸತ್ಯದಿಂದ ಬಿದ್ದುಹೋಗಿರುವ ಪತ್ನಿಯಿರುವ ಒಬ್ಬ ಸಹೋದರನ ವಿಷಯದಲ್ಲೇನು?
14 ಇದು ತಾನೇ ಹಿರಿಯನಾಗುವುದರಿಂದ ಅವನನ್ನು ತಡೆಯದು. ಆದರೆ ಆಕೆ ಅವನ ವಿಶ್ವಾಸಗಳಲ್ಲಿ ಭಾಗಿಯಾಗುವುದಿಲ್ಲವೆಂಬ ಬರಿಯ ಕಾರಣದಿಂದ ಅವನು ತನ್ನ ಪತ್ನಿಯಿಂದ ಬೇರ್ಪಡುವುದನ್ನೂ ಇದು ನ್ಯಾಯಸಮ್ಮತವಾಗಿ ಮಾಡದು. ಪೌಲನು ಬುದ್ಧಿಹೇಳಿದ್ದು: “ಹೆಂಡತಿಯನ್ನು ಕಟ್ಟಿಕೊಂಡಿದ್ದೀಯೋ? ಬಿಡುಗಡೆಯಾಗುವದಕ್ಕೆ ಪ್ರಯತ್ನಿಸಬೇಡ.” (1 ಕೊರಿಂಥ 7:27) ಅವನು ಮತ್ತೂ ಹೇಳಿದ್ದು: “ಒಬ್ಬ ಸಹೋದರನಿಗೆ ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು. ಆದರೆ ಕ್ರಿಸ್ತನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿಹೋಗಲಿ; ಇಂಥಾ ಸಂದರ್ಭಗಳಲ್ಲಿ ಕ್ರೈಸ್ತಸಹೋದರನಾಗಲಿ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ. ಎಲೌ ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಎಲೈ ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು?” (1 ಕೊರಿಂಥ 7:12, 15, 16) ಒಬ್ಬ ಹಿರಿಯನ ಪತ್ನಿಯು ಸಾಕ್ಷಿಯಲ್ಲದಿದ್ದರೂ ಅವನು ಒಳ್ಳೆಯ ಪತಿಯಾಗಿರಬೇಕು.
15. ಅಪೊಸ್ತಲ ಪೇತ್ರನು ಕ್ರೈಸ್ತ ಪತಿಗಳಿಗೆ ಯಾವ ಸಲಹೆಯನ್ನು ಕೊಡುತ್ತಾನೆ, ಮತ್ತು ಒಬ್ಬ ಹಿರಿಯನು ಅಸಡ್ಡೆಮಾಡುವ ಪತಿಯಾಗಿ ಪರಿಣಮಿಸುವುದಾದರೆ ಫಲಿತಾಂಶವು ಏನಾಗಿರಸಾಧ್ಯವಿದೆ?
15 ಕ್ರೈಸ್ತ ಹಿರಿಯನ ಪತ್ನಿಯು ಜೊತೆ ವಿಶ್ವಾಸಿಯಾಗಿರಲಿ ಇಲ್ಲದಿರಲಿ, ತನ್ನ ಪತ್ನಿಗೆ ತನ್ನ ಪ್ರೀತಿಯ ಗಮನವು ಅಗತ್ಯವೆಂಬುದನ್ನು ಅವನು ಗ್ರಹಿಸಬೇಕು. ಅಪೊಸ್ತಲ ಪೇತ್ರನು ಬರೆದುದು: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” (1 ಪೇತ್ರ 3:7) ತನ್ನ ಪತ್ನಿಯ ಆವಶ್ಯಕತೆಗಳ ಕಾಳಜಿ ವಹಿಸಲು ಉದ್ದೇಶಪೂರ್ವಕವಾಗಿ ವಿಫಲನಾಗುವ ಒಬ್ಬ ಪತಿಯು, ಯೆಹೋವನೊಂದಿಗೆ ತನ್ನ ಸ್ವಂತ ಸಂಬಂಧವನ್ನು ಅಪಾಯಕ್ಕೊಳಪಡಿಸುತ್ತಾನೆ; ಅದು, “ಪ್ರಾರ್ಥನೆಯು . . . ಮುಟ್ಟಬಾರದೆಂದು ಮೋಡವನ್ನು ಮರೆಮಾಡಿ”ರುವಂತೆ, ಅವನು ಯೆಹೋವನನ್ನು ಸಮೀಪಿಸುವುದನ್ನು ತಡೆಯಸಾಧ್ಯವಿದೆ. (ಪ್ರಲಾಪಗಳು 3:44) ಇದು ಅವನು ಕ್ರೈಸ್ತ ಮೇಲ್ವಿಚಾರಕನೋಪಾದಿ ಸೇವೆಮಾಡಲು ಅನರ್ಹವಾಗುವುದಕ್ಕೆ ನಡೆಸಸಾಧ್ಯವಿದೆ.
16. ಪೌಲನು ಯಾವ ಮುಖ್ಯ ವಿಷಯವನ್ನು ಗಮನಕ್ಕೆ ತರುತ್ತಾನೆ, ಮತ್ತು ಇದರ ಕುರಿತು ಹಿರಿಯರಿಗೆ ಯಾವ ಅನಿಸಿಕೆಯಾಗಬೇಕು?
16 ಗಮನಿಸಿರುವಂತೆ, ಪೌಲನ ವಾದದ ಮುಖ್ಯ ಒತ್ತುಶಕ್ತಿಯು, ಒಬ್ಬ ಪುರುಷನು ವಿವಾಹಮಾಡಿಕೊಳ್ಳುವಾಗ, “ಭಿನ್ನಭಾವವಿಲ್ಲದೆ ಕರ್ತನಿಗೆ ಪಾದಸೇವೆಯನ್ನು” ಮಾಡುವಂತೆ ಒಂಟಿ ಪುರುಷನಾಗಿ ಅವನನ್ನು ಅನುಮತಿಸಿದ ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯವನ್ನು ಅವನು ತ್ಯಜಿಸುತ್ತಾನೆ ಎಂಬುದೇ. (1 ಕೊರಿಂಥ 7:35) ಕೆಲವು ವಿವಾಹಿತ ಹಿರಿಯರು ಪೌಲನ ಪ್ರೇರಿತ ಮಾತುಗಳನ್ನು ವಿವೇಚಿಸುವುದರಲ್ಲಿ ಯಾವಾಗಲೂ ಸಮತೂಕರಾಗಿರಲಿಲ್ಲವೆಂದು ವರದಿಗಳು ತೋರಿಸುತ್ತವೆ. ಒಳ್ಳೆಯ ಹಿರಿಯರು ಏನನ್ನು ಮಾಡಬೇಕೆಂದು ಅವರಿಗೆ ಅನಿಸುತ್ತದೋ ಅದನ್ನು ಸಾಧಿಸುವ ತಮ್ಮ ಬಯಕೆಯಿಂದ, ಅವರು ತಮ್ಮ ಪತಿಸಂಬಂಧವಾದ ಕರ್ತವ್ಯಗಳಲ್ಲಿ ಕೆಲವನ್ನು ಅಲಕ್ಷಿಸಬಹುದು. ಕೆಲವರು ಒಂದು ಸಭಾ ಸುಯೋಗವನ್ನು ನಿರಾಕರಿಸುವುದನ್ನು—ಅದನ್ನು ಅಂಗೀಕರಿಸುವುದು ಸ್ಪಷ್ಟವಾಗಿ ಅವರ ಪತ್ನಿಯರಿಗೆ ಆತ್ಮಿಕವಾಗಿ ಹಾನಿಕರವಾಗಿರುವುದಾದರೂ—ಕಷ್ಟಕರವಾದದ್ದಾಗಿ ಕಂಡುಕೊಳ್ಳಸಾಧ್ಯವಿದೆ. ವಿವಾಹದೊಂದಿಗೆ ಅನುಗತವಾಗಿರುವ ಸುಯೋಗಗಳಲ್ಲಿ ಅವರು ಆನಂದಿಸುತ್ತಾರಾದರೂ, ಅದರೊಂದಿಗೆ ಅನುಗತವಾಗಿರುವ ಜವಾಬ್ದಾರಿಗಳನ್ನು ಪೂರೈಸಲು ಅವರು ಸಿದ್ಧಮನಸ್ಕರಾಗಿದ್ದಾರೊ?
17. ಕೆಲವು ಪತ್ನಿಯರಿಗೆ ಏನು ಸಂಭವಿಸಿದೆ, ಮತ್ತು ಇದನ್ನು ಹೇಗೆ ತಪ್ಪಿಸಸಾಧ್ಯವಿತ್ತು?
17 ನಿಶ್ಚಯವಾಗಿಯೂ, ಹಿರಿಯನೋಪಾದಿ ಒಬ್ಬನಿಗೆ ಹುರುಪು ಇರುವುದು ಪ್ರಶಂಸಾರ್ಹ. ಆದರೂ, ಸಭೆಯ ತನ್ನ ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿ, ತನ್ನ ಪತ್ನಿಯ ಕಡೆಗೆ ತನಗಿರುವ ಶಾಸ್ತ್ರೀಯ ಜವಾಬ್ದಾರಿಗಳನ್ನು ಅಲಕ್ಷಿಸುವುದಾದರೆ, ಒಬ್ಬ ಕ್ರೈಸ್ತನು ಸಮತೂಕತೆಯುಳ್ಳವನಾಗಿರುತ್ತಾನೊ? ಸಭೆಯಲ್ಲಿರುವವರಿಗೆ ಬೆಂಬಲ ನೀಡಲು ಬಯಸುತ್ತಿರುವಾಗ, ಒಬ್ಬ ಸಮತೂಕವುಳ್ಳ ಹಿರಿಯನು ತನ್ನ ಪತ್ನಿಯ ಆತ್ಮಿಕತೆಯ ಕುರಿತಾಗಿಯೂ ಹಿತಾಸಕ್ತಿಯುಳ್ಳವನಾಗಿರುವನು. ಕೆಲವು ಹಿರಿಯರ ಪತ್ನಿಯರು ಆತ್ಮಿಕವಾಗಿ ಬಲಹೀನರಾಗಿ ಪರಿಣಮಿಸಿದ್ದಾರೆ, ಮತ್ತು ಕೆಲವರು ಆತ್ಮಿಕ “ಹಡಗೊಡೆತ”ವನ್ನೂ ಅನುಭವಿಸಿದ್ದಾರೆ. (1 ತಿಮೊಥೆಯ 1:19, NW) ಒಬ್ಬ ಪತ್ನಿಯು ತನ್ನ ಸ್ವಂತ ರಕ್ಷಣೆಗಾಗಿ ಕಾರ್ಯನಡಿಸಲು ಜವಾಬ್ದಾರಳಾಗಿರುವಾಗ, ಅನೇಕ ವಿದ್ಯಮಾನಗಳಲ್ಲಿ, ಆ ಹಿರಿಯನು, ‘ಕ್ರಿಸ್ತನು ಸಭೆಗೆ ಮಾಡುವಂತೆಯೇ’ ತನ್ನ ಪತ್ನಿಯನ್ನು ‘ಪೋಷಿಸಿ ಸಂರಕ್ಷಿಸುತ್ತಿದ್ದರೆ’ ಆತ್ಮಿಕ ಸಮಸ್ಯೆಯನ್ನು ತಪ್ಪಿಸಸಾಧ್ಯವಿತ್ತು. (ಎಫೆಸ 5:28, 29) ಭರವಸೆಯಿಂದ ಹೇಳುವುದಾದರೆ ಹಿರಿಯರು, ‘ತಮಗೂ ಎಲ್ಲ ಹಿಂಡಿಗೂ ಗಮನ’ಕೊಡಬೇಕು. (ಅ. ಕೃತ್ಯಗಳು 20:28) ಅವರು ವಿವಾಹಿತರಾಗಿರುವುದಾದರೆ, ಇದರಲ್ಲಿ ಅವರ ಪತ್ನಿಯರೂ ಸೇರಿರುತ್ತಾರೆ.
‘ಶರೀರದಲ್ಲಿ ಸಂಕಟ’
18. ವಿವಾಹಿತ ಕ್ರೈಸ್ತರು ಅನುಭವಿಸುವ “ಸಂಕಟ”ದ ಕೆಲವು ರೂಪಗಳಾವುವು, ಮತ್ತು ಒಬ್ಬ ಹಿರಿಯನ ಚಟುವಟಿಕೆಗಳನ್ನು ಇದು ಹೇಗೆ ಬಾಧಿಸಬಲ್ಲದು?
18 ಅಪೊಸ್ತಲನು ಇದನ್ನೂ ಬರೆದನು: “ಒಬ್ಬ ಅವಿವಾಹಿತ ವ್ಯಕ್ತಿಯು ವಿವಾಹಮಾಡಿಕೊಳ್ಳುವಲ್ಲಿ, ಅಂತಹವನು ಯಾವ ಪಾಪವನ್ನೂ ಮಾಡುವುದಿಲ್ಲ. ಆದರೂ, ಮಾಡಿಕೊಳ್ಳುವವರಿಗೆ ಅವರ ಶರೀರದಲ್ಲಿ ಸಂಕಟವಿರುವುದು. ಆದರೆ ನಾನು ನಿಮ್ಮನ್ನು ತಪ್ಪಿಸುತ್ತಿದ್ದೇನೆ.” (1 ಕೊರಿಂಥ 7:28, NW) ತನ್ನ ಅವಿವಾಹಿತ ಸ್ಥಿತಿಯ ಮಾದರಿಯನ್ನು ಅನುಸರಿಸಶಕ್ತರಾಗುವವರನ್ನು, ವಿವಾಹದಿಂದ ಅನಿವಾರ್ಯವಾಗಿ ಬರುವ ಚಿಂತೆಗಳಿಂದ ತಪ್ಪಿಸಲು ಪೌಲನು ಬಯಸಿದನು. ಮಕ್ಕಳಿಲ್ಲದ ದಂಪತಿಗಳಿಗೂ, ಈ ಚಿಂತೆಗಳಲ್ಲಿ ಆರೋಗ್ಯ ಸಮಸ್ಯೆಗಳು ಅಥವಾ ಆರ್ಥಿಕ ಕಷ್ಟಗಳು ಹಾಗೂ ಒಬ್ಬನ ಸಂಗಾತಿಯ ವೃದ್ಧ ಹೆತ್ತವರ ಕಡೆಗಿರುವ ಶಾಸ್ತ್ರೀಯ ಜವಾಬ್ದಾರಿಗಳು ಸೇರಿರಬಹುದು. (1 ತಿಮೊಥೆಯ 5:4, 8) ಒಬ್ಬ ಹಿರಿಯನು ಒಂದು ಆದರ್ಶ ರೀತಿಯಲ್ಲಿ ಈ ಜವಾಬ್ದಾರಿಗಳನ್ನು ಅಂಗೀಕರಿಸಬೇಕು, ಮತ್ತು ಇದು ಆಗಾಗ್ಗೆ ಕ್ರೈಸ್ತ ಮೇಲ್ವಿಚಾರಕನೋಪಾದಿ ಅವನ ಚಟುವಟಿಕೆಗಳನ್ನು ಬಾಧಿಸಬಹುದು. ಸಂತೋಷಕರವಾಗಿಯೇ, ಹೆಚ್ಚಿನ ಹಿರಿಯರು ಕುಟುಂಬ ಮತ್ತು ಸಭಾ—ಎರಡೂ—ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ.
19. “ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆ” ಇರಲಿ ಎಂದು ಪೌಲನು ಹೇಳಿದಾಗ ಅವನು ಏನನ್ನು ಅರ್ಥೈಸಿದನು?
19 ಪೌಲನು ಕೂಡಿಸಿದ್ದು: “ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ” ಇರಲಿ. (1 ಕೊರಿಂಥ 7:29) ಕೊರಿಂಥದವರಿಗೆ ಈ ಅಧ್ಯಾಯದಲ್ಲಿ ಅವನು ಆಗಲೇ ಬರೆದಿರುವ ವಿಷಯದ ವೀಕ್ಷಣದಲ್ಲಿ, ವಿವಾಹಿತ ಕ್ರೈಸ್ತರು ಯಾವುದಾದರೂ ರೀತಿಯಲ್ಲಿ ತಮ್ಮ ಪತ್ನಿಯರನ್ನು ಅಸಡ್ಡೆಮಾಡಬೇಕು ಎಂದು ಅವನು ಅರ್ಥೈಸಲಿಲ್ಲವೆಂಬುದು ನಿಶ್ಚಯ. (1 ಕೊರಿಂಥ 7:2, 3, 33) ಅವನು ಏನನ್ನು ಅರ್ಥೈಸಿದನೊ ಅದನ್ನು ಹೀಗೆ ಬರೆದಾಗ ಅವನು ತೋರಿಸಿದನು: “ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಯಾಕಂದರೆ ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.” (1 ಕೊರಿಂಥ 7:31) ಪೌಲನ ದಿನಕ್ಕಿಂತ ಅಥವಾ ಅಪೊಸ್ತಲ ಯೋಹಾನನ ದಿನಕ್ಕಿಂತಲೂ ಹೆಚ್ಚಾಗಿ ಈಗ, ‘ಲೋಕವು ಗತಿಸಿಹೋಗುತ್ತಾ ಇದೆ.’ (1 ಯೋಹಾನ 2:15-17) ಆದಕಾರಣ, ಕ್ರಿಸ್ತನನ್ನು ಅನುಸರಿಸುವುದರಲ್ಲಿ ಯಾವುದಾದರೂ ತ್ಯಾಗಗಳನ್ನು ಮಾಡುವ ಅಗತ್ಯವನ್ನು ಪರಿಗ್ರಹಿಸುವ ವಿವಾಹಿತ ಕ್ರೈಸ್ತರು, ವಿವಾಹಿತ ಸ್ಥಿತಿಯ ಆನಂದಗಳು ಹಾಗೂ ಸುಯೋಗಗಳಲ್ಲಿ ಅತಿರೇಕವಾಗಿ ಮಗ್ನರಾಗಿರಸಾಧ್ಯವಿಲ್ಲ.—1 ಕೊರಿಂಥ 7:5.
ಸ್ವತ್ಯಾಗಿಗಳಾದ ಪತ್ನಿಯರು
20, 21. (ಎ) ಅನೇಕ ಕ್ರೈಸ್ತ ಪತ್ನಿಯರು ಮಾಡಲು ಸಿದ್ಧರಾಗಿರುವ ತ್ಯಾಗಗಳು ಯಾವುವು? (ಬಿ) ಒಬ್ಬ ಪತ್ನಿಯು ತನ್ನ ಪತಿಯಿಂದ, ಅವನು ಒಬ್ಬ ಹಿರಿಯನಾಗಿದ್ದರೂ, ನ್ಯಾಯಸಮ್ಮತವಾಗಿ ಏನನ್ನು ನಿರೀಕ್ಷಿಸಸಾಧ್ಯವಿದೆ?
20 ಇತರರಿಗೆ ಪ್ರಯೋಜನವನ್ನುಂಟುಮಾಡಲಿಕ್ಕಾಗಿ ಹಿರಿಯರು ತ್ಯಾಗಗಳನ್ನು ಮಾಡುವಂತೆಯೇ, ಅನೇಕ ಹಿರಿಯರ ಪತ್ನಿಯರು ಅತ್ಯಾವಶ್ಯಕವಾದ ರಾಜ್ಯಾಭಿರುಚಿಗಳೊಂದಿಗೆ ವಿವಾಹದಲ್ಲಿನ ತಮ್ಮ ಜವಾಬ್ದಾರಿಗಳನ್ನು ಸಮತೂಕಗೊಳಿಸಲು ಶ್ರಮಿಸಿದ್ದಾರೆ. ಮೇಲ್ವಿಚಾರಕರೋಪಾದಿ ತಮ್ಮ ಗಂಡಂದಿರು ಅವರ ಕರ್ತವ್ಯಗಳನ್ನು ನೆರವೇರಿಸಲು ಸಾಧ್ಯವಾಗುವಂತೆ ಸಹಕರಿಸುವುದರಲ್ಲಿ ಸಾವಿರಾರು ಮಂದಿ ಕ್ರೈಸ್ತ ಸ್ತ್ರೀಯರು ಸಂತೋಷಪಡುತ್ತಾರೆ. ಯೆಹೋವನು ಇದಕ್ಕಾಗಿ ಅವರನ್ನು ಪ್ರೀತಿಸುತ್ತಾನೆ, ಮತ್ತು ಅವರು ತೋರಿಸುವ ಅತ್ಯುತ್ತಮ ಮನೋಭಾವವನ್ನು ಆತನು ಆಶೀರ್ವದಿಸುತ್ತಾನೆ. (ಫಿಲೆಮೋನ 25) ಆದರೂ, ಮೇಲ್ವಿಚಾರಕರ ಪತ್ನಿಯರು ತಮ್ಮ ಗಂಡಂದಿರಿಂದ ಸಮಂಜಸವಾದ ಮೊತ್ತದ ಸಮಯ ಮತ್ತು ಗಮನವನ್ನು ನ್ಯಾಯಸಮ್ಮತವಾಗಿ ನಿರೀಕ್ಷಿಸಬಲ್ಲರೆಂದು ಪೌಲನ ಸಮತೂಕದ ಸಲಹೆಯು ತೋರಿಸುತ್ತದೆ. ಪತಿ ಹಾಗೂ ಮೇಲ್ವಿಚಾರಕರೋಪಾದಿ ತಮ್ಮ ಜವಾಬ್ದಾರಿಗಳನ್ನು ಸಮತೂಕಗೊಳಿಸಿಕೊಳ್ಳಲಿಕ್ಕಾಗಿ, ತಮ್ಮ ಪತ್ನಿಯರಿಗೆ ಸಾಕಷ್ಟು ಸಮಯವನ್ನು ಮೀಸಲಾಗಿಡುವುದು ವಿವಾಹಿತ ಹಿರಿಯರ ಶಾಸ್ತ್ರೀಯ ಕರ್ತವ್ಯವಾಗಿದೆ.
21 ಆದರೆ ಪತಿಯಾಗಿರುವುದಕ್ಕೆ ಕೂಡಿಸಿ, ಕ್ರೈಸ್ತ ಹಿರಿಯನೊಬ್ಬನು ತಂದೆಯೂ ಆಗಿರುವುದಾದರೆ ಆಗೇನು? ಇದು ಅವನ ಜವಾಬ್ದಾರಿಗಳನ್ನು ವರ್ಧಿಸಿ, ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ, ಮೇಲ್ವಿಚಾರಣೆಯ ಹೆಚ್ಚಿನ ಕ್ಷೇತ್ರವನ್ನು ತೆರೆಯುತ್ತದೆ.
ಪುನರ್ವಿಮರ್ಶೆಯ ರೀತಿಯಲ್ಲಿ
◻ ಕ್ರೈಸ್ತ ಮೇಲ್ವಿಚಾರಕನು ಒಬ್ಬ ವಿವಾಹಿತ ಪುರುಷನಾಗಿರಲು ಸಾಧ್ಯವಿದೆಯೆಂಬುದನ್ನು ಯಾವ ಶಾಸ್ತ್ರೀಯ ನಿಜತ್ವಗಳು ತೋರಿಸುತ್ತವೆ?
◻ ಒಬ್ಬ ಅವಿವಾಹಿತ ಹಿರಿಯನು ವಿವಾಹವಾಗುವುದಾದರೆ, ಅವನಿಗೆ ಯಾವುದರ ಅರಿವಿರಬೇಕು?
◻ ವಿವಾಹಿತ ಕ್ರೈಸ್ತನೊಬ್ಬನು ಯಾವ ವಿಧಗಳಲ್ಲಿ “ಲೋಕದ ವಿಷಯಗಳಿಗಾಗಿ ತವಕ”ಪಡುತ್ತಾನೆ?
◻ ಮೇಲ್ವಿಚಾರಕರ ಅನೇಕ ಪತ್ನಿಯರು ಸ್ವತ್ಯಾಗದ ಅತ್ಯುತ್ತಮ ಮನೋಭಾವವನ್ನು ಹೇಗೆ ತೋರಿಸುತ್ತಾರೆ?
[ಪುಟ 17 ರಲ್ಲಿರುವ ಚಿತ್ರ]
ದೇವಪ್ರಭುತ್ವ ಚಟುವಟಿಕೆಗಳಲ್ಲಿ ಮಗ್ನನಾಗಿರುವುದಾದರೂ, ಒಬ್ಬ ಹಿರಿಯನು ತನ್ನ ಪತ್ನಿಗೆ ಪ್ರೀತಿಪೂರ್ವಕವಾದ ಗಮನವನ್ನು ಕೊಡಬೇಕು