ಬೈಬಲನ್ನು—ದೇವರು ಹೇಗೆ ಪ್ರೇರೇಪಿಸಿದನು?
ಇತಿಹಾಸದಲ್ಲಿನ ಬೇರೆ ಯಾವುದೇ ಸಮಯಕ್ಕಿಂತಲೂ ಇಂದು, ಸಂವಾದಮಾಡುವುದು ಹೆಚ್ಚು ಚಿತ್ತಾಕರ್ಷಕವಾಗಿದೆ. ಟೆಲಿಫೋನುಗಳು, ಫ್ಯಾಕ್ಸ್ ಯಂತ್ರಗಳು, ಕಂಪ್ಯೂಟರುಗಳು—ಕೆಲವಾರು ವರ್ಷಗಳ ಹಿಂದೆ, ತತ್ಕ್ಷಣವೇ, ಲೋಕದಾದ್ಯಂತವಾಗಿ ಎಲ್ಲಿಯಾದರೂ ಸಂದೇಶಗಳನ್ನು ಕಾರ್ಯತಃ ರವಾನಿಸಸಾಧ್ಯವಿರುವ ಒಂದು ಸಮಯ ಬರುವುದೆಂದು ಯಾರು ಊಹಿಸಿದ್ದಾರು?
ಆದರೆ ಮನುಷ್ಯನು ಪಾರಂಗತನಾಗಲಾರದ, ಅತ್ಯಂತ ಚಿತ್ತಾಕರ್ಷಕವಾದ ರೀತಿಯ ಸಂವಾದಮಾಡುವಿಕೆಯು, ದೈವಿಕ ಪ್ರೇರೇಪಣೆಯೇ ಆಗಿದೆ. ತನ್ನ ಲಿಖಿತ ವಾಕ್ಯವಾದ ಪವಿತ್ರ ಬೈಬಲನ್ನು ಉತ್ಪಾದಿಸಲಿಕ್ಕಾಗಿ ಯೆಹೋವನು, ಸುಮಾರು 40 ಮಂದಿ ಮಾನವ ಬರಹಗಾರರನ್ನು ಪ್ರೇರೇಪಿಸಿದನು. ಮಾನವರಿಗೆ ಒಂದಕ್ಕಿಂತಲೂ ಹೆಚ್ಚು ಸಂವಾದ ಮಾಧ್ಯಮಗಳು ದೊರೆಯುವಂತೆಯೇ, ಶಾಸ್ತ್ರಗಳನ್ನು ಪ್ರೇರೇಪಿಸಲಿಕ್ಕಾಗಿ ಯೆಹೋವನು ಅನೇಕ ರೀತಿಯ ಸಂವಾದ ವಿಧಾನಗಳನ್ನು ಉಪಯೋಗಿಸಿದನು.
ಹೇಳಿ ಬರೆಸುವಿಕೆ. ಸಮಯಾನಂತರ ಬೈಬಲ್ ದಾಖಲೆಯೊಳಗೆ ಸೇರಿಸಲ್ಪಟ್ಟ ನಿರ್ದಿಷ್ಟ ಸಂದೇಶಗಳನ್ನು ದೇವರು ತಿಳಿಯಪಡಿಸಿದನು.a ಉದಾಹರಣೆಗಾಗಿ, ನಿಯಮದೊಡಂಬಡಿಕೆಯಲ್ಲಿ ಒಳಗೂಡಿರುವ ನಿಬಂಧನೆಗಳನ್ನು ಪರಿಗಣಿಸಿರಿ. “ನೀನು ಈ ವಾಕ್ಯಗಳನ್ನು ಬರೆ. ಈ ವಾಕ್ಯಗಳ ಮೇರೆಗೆ ನಿನ್ನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ನಿಬಂಧನಮಾಡಿದ್ದೇನೆ” ಎಂದು ಯೆಹೋವನು ಮೋಶೆಗೆ ಹೇಳಿದನು. (ವಿಮೋಚನಕಾಂಡ 34:27) “ದೇವದೂತರ ಮೂಲಕ ನೇಮಕವಾದ [“ರವಾನಿಸಲ್ಪಟ್ಟ,” NW]” ಆ “ವಾಕ್ಯಗಳು,” ಮೋಶೆಯಿಂದ ನಕಲುಮಾಡಲ್ಪಟ್ಟವು ಮತ್ತು ಈಗ ಅವುಗಳನ್ನು ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ, ಹಾಗೂ ಧರ್ಮೋಪದೇಶಕಾಂಡ ಎಂಬ ಬೈಬಲ್ ಪುಸ್ತಕಗಳಲ್ಲಿ ಕಂಡುಕೊಳ್ಳಸಾಧ್ಯವಿದೆ.—ಅ. ಕೃತ್ಯಗಳು 7:53.
ಯೆಶಾಯ, ಯೆರೆಮೀಯ, ಯೆಹೆಜ್ಕೇಲ, ಆಮೋಸ, ನಹೂಮ, ಮತ್ತು ಮೀಕರನ್ನು ಒಳಗೊಂಡು, ಇನ್ನಿತರ ಪ್ರವಾದಿಗಳು, ದೇವದೂತರ ಮೂಲಕ ದೇವರಿಂದ ನಿರ್ದಿಷ್ಟ ಸಂದೇಶಗಳನ್ನು ಪಡೆದುಕೊಂಡರು. ಕೆಲವೊಮ್ಮೆ ಈ ಪುರುಷರು, “ಯೆಹೋವನು ಹೀಗನ್ನುತ್ತಾನೆ” ಎಂಬ ವಾಕ್ಸರಣಿಯ ಮೂಲಕ ತಮ್ಮ ಪ್ರವಾದನೋಕ್ತಿಗಳನ್ನು ಆರಂಭಿಸಿದರು. (ಯೆಶಾಯ 37:6; ಯೆರೆಮೀಯ 2:2; ಯೆಹೆಜ್ಕೇಲ 11:5; ಆಮೋಸ 1:3; ಮೀಕ 2:3; ನಹೂಮ 1:12) ತದನಂತರ ಅವರು ದೇವರು ಹೇಳಿದ ವಿಷಯಗಳನ್ನು ಲಿಖಿತ ವಾಕ್ಯದ ರೂಪದಲ್ಲಿ ನಮೂದಿಸಿದರು.
ದರ್ಶನಗಳು, ಕನಸುಗಳು, ಧ್ಯಾನಪರವಶತೆ. ಸರ್ವಸಾಮಾನ್ಯವಾಗಿ ಯಾವುದೋ ಒಂದು ಅಸಾಧಾರಣ ಮಾಧ್ಯಮದ ಮೂಲಕ, ಒಬ್ಬ ವ್ಯಕ್ತಿಯು ಎಚ್ಚರವಾಗಿರುವಾಗ, ಅವನ ಮನಸ್ಸಿನ ಮೇಲೆ ಅಚ್ಚೊತ್ತಲ್ಪಡುವ ಒಂದು ನೋಟ, ದೃಶ್ಯ, ಅಥವಾ ಸಂದೇಶವೇ ದರ್ಶನವಾಗಿದೆ. ಉದಾಹರಣೆಗಾಗಿ, ಪೇತ್ರ, ಯಾಕೋಬ, ಹಾಗೂ ಯೋಹಾನರು “ಸಂಪೂರ್ಣವಾಗಿ ಎಚ್ಚರಗೊಂಡಾಗ” (NW), ರೂಪಾಂತರಹೊಂದಿದ್ದ ಯೇಸುವಿನ ದರ್ಶನವನ್ನು ಕಂಡರು. (ಲೂಕ 9:28-36; 2 ಪೇತ್ರ 1:16-21) ಕೆಲವು ವಿದ್ಯಮಾನಗಳಲ್ಲಿ ಸಂದೇಶವು, ಒಂದು ಕನಸಿನಲ್ಲಿ, ಅಥವಾ ರಾತ್ರಿ ದರ್ಶನದಲ್ಲಿ, ಕನಸನ್ನು ಪಡೆದುಕೊಳ್ಳುವವನು ಗಾಢ ನಿದ್ರೆಯಲ್ಲಿದ್ದಾಗ ಅವನ ಉಪಪ್ರಜ್ಞೆಯ ಮೇಲೆ ಮೂಡಿಸಲ್ಪಡುವ ಮೂಲಕ ತಿಳಿಯಪಡಿಸಲ್ಪಟ್ಟಿತು. ಹೀಗೆ ದಾನಿಯೇಲನು “ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸುಗಳ” ಕುರಿತು ಬರೆಯುತ್ತಾನೆ. ಅಥವಾ ಭಾಷಾಂತರಕಾರನಾದ ರಾನಲ್ಡ್ ಎ. ನಾಕ್ಸ್ ಅದನ್ನು “ನಾನು ನನ್ನ ಕನಸಿನಲ್ಲಿ ವೀಕ್ಷಿಸುತ್ತಾ ಮಲಗಿದ್ದಾಗ” ಎಂಬುದಾಗಿ ಭಾಷಾಂತರಿಸುತ್ತಾರೆ.—ದಾನಿಯೇಲ 4:10.
ಯೆಹೋವನು ಯಾವ ವ್ಯಕ್ತಿಯನ್ನು ಧ್ಯಾನಪರವಶತೆಯಲ್ಲಿ ಇಟ್ಟನೋ ಅವನು, ಕಡಿಮೆಪಕ್ಷ ಸ್ವಲ್ಪ ಮಟ್ಟಿಗೆ ಎಚ್ಚರವಾಗಿದ್ದರೂ, ತೀವ್ರವಾದ ಏಕಾಗ್ರಚಿತ್ತತೆಯ ಸ್ಥಿತಿಯಲ್ಲಿ ತಲ್ಲೀನನಾಗಿದ್ದನೆಂಬುದು ಸುವ್ಯಕ್ತ. (ಅ. ಕೃತ್ಯಗಳು 10:9-16ನ್ನು ಹೋಲಿಸಿರಿ.) ಬೈಬಲಿನಲ್ಲಿ “ಧ್ಯಾನಪರವಶತೆ” (ಎಕ್ಸ್ಟ್ಯಾಸಿಸ್) ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಶಬ್ದವು, ‘ಬದಿಗಿಡುವುದನ್ನು ಅಥವಾ ಸ್ಥಾನಾಕ್ರಮಣವನ್ನು’ ಅರ್ಥೈಸುತ್ತದೆ. ಮನಸ್ಸನ್ನು ಅದರ ಸಹಜ ಸ್ಥಿತಿಯಿಂದ ಸ್ಥಾನಾಂತರ ಮಾಡುವ ಕಲ್ಪನೆಯನ್ನು ಇದು ಸೂಚಿಸುತ್ತದೆ. ಹೀಗೆ, ಧ್ಯಾನಪರವಶತೆಯಲ್ಲಿರುವ ವ್ಯಕ್ತಿಯೊಬ್ಬನು, ತನ್ನ ಸುತ್ತುಮುತ್ತಲ ಪರಿಸರಗಳನ್ನು ಮರೆತಿರುತ್ತಾನೆ, ಆದರೆ ಅದೇ ಸಮಯದಲ್ಲಿ ದರ್ಶನವನ್ನು ಸಂಪೂರ್ಣವಾಗಿ ಗ್ರಹಿಸುವವನಾಗಿರುತ್ತಾನೆ. ಅಪೊಸ್ತಲ ಪೌಲನು “ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯರು ನುಡಿಯಲಶಕ್ಯವಾದ ಹೇಳಬಾರದ ಮಾತುಗಳನ್ನು ಕೇಳಿ”ಸಿಕೊಂಡಿದ್ದಾಗ, ಅವನೂ ಅಂತಹ ಧ್ಯಾನಪರವಶತೆಯಲ್ಲಿದ್ದದ್ದು ಸಂಭವನೀಯ.—2 ಕೊರಿಂಥ 12:2-4.
ದೇವರಿಂದ ಹೇಳಿ ಬರೆಸಲ್ಪಟ್ಟ ಸಂದೇಶಗಳ ನಕಲುಪ್ರತಿ ಮಾಡಿದವರಿಗೆ ವ್ಯತಿರಿಕ್ತವಾಗಿ, ದರ್ಶನಗಳನ್ನು ಅಥವಾ ಕನಸುಗಳನ್ನು ಕಂಡವರು ಅಥವಾ ಧ್ಯಾನಪರವಶತೆಗಳನ್ನು ಅನುಭವಿಸಿದವರು, ತಾವು ಕಂಡಂತಹ ವಿಷಯಗಳನ್ನು ಅನೇಕವೇಳೆ ತಮ್ಮ ಸ್ವಂತ ಮಾತುಗಳಲ್ಲಿ ವರ್ಣಿಸುವ ಕೊಂಚ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರು. ಹಬಕ್ಕೂಕನಿಗೆ ಹೀಗೆ ಹೇಳಲಾಗಿತ್ತು: “ನಿನಗಾದ ದರ್ಶನವನ್ನು ಬರೆ; ಓದುವವರು ಶೀಘ್ರವಾಗಿ ಓದುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತು.”—ಹಬಕ್ಕೂಕ 2:2.
ಹೇಳಿ ಬರೆಸಲ್ಪಟ್ಟಿದ್ದ ಭಾಗಗಳಿಗಿಂತಲೂ, ಬೈಬಲಿನ ಈ ಭಾಗಗಳು ಹೇಗೂ ಕಡಿಮೆ ದೈವಪ್ರೇರಿತವಾದವುಗಳೆಂದು ಇದರ ಅರ್ಥವೊ? ಖಂಡಿತವಾಗಿಯೂ ಇಲ್ಲ. ಯೆಹೋವನು ತನ್ನ ಆತ್ಮದ ಮೂಲಕ, ಮನುಷ್ಯನ ವಿಚಾರಗಳನ್ನಲ್ಲ, ಬದಲಾಗಿ ದೇವರ ವಿಚಾರಗಳನ್ನು ತಿಳಿಯಪಡಿಸಲಾಗುವಂತೆ, ತನ್ನ ಸಂದೇಶವನ್ನು ಪ್ರತಿಯೊಬ್ಬ ಬರಹಗಾರನ ಮನಸ್ಸಿನೊಳಗೆ ದೃಢವಾಗಿ ಬೇರೂರಿಸಿದ್ದನು. ಬರಹಗಾರನು ಸೂಕ್ತವಾದ ಮಾತುಗಳನ್ನು ಆರಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನಾದರೂ, ಅಗತ್ಯವಾದ ಯಾವುದೇ ಮಾಹಿತಿಯು ಬಿಟ್ಟುಬಿಡಲ್ಪಡದಂತೆ ಹಾಗೂ ಅಂತ್ಯದಲ್ಲಿ ಆ ಮಾತುಗಳು ಸೂಕ್ತವಾಗಿಯೇ ದೇವರ ಮಾತುಗಳೆಂದು ದೃಷ್ಟಿಸಲ್ಪಡುವಂತೆ, ಬರಹಗಾರನ ಮನಸ್ಸನ್ನೂ ಹೃದಯವನ್ನೂ ಆತನೇ ಮಾರ್ಗದರ್ಶಿಸಿದನು.—1 ಥೆಸಲೊನೀಕ 2:13.
ದೈವಿಕ ಪ್ರಕಟನೆ. ಮಾನವ ಸಾಮರ್ಥ್ಯಕ್ಕೆ ಮೀರಿದ್ದಾಗಿರುವ ಪ್ರವಾದನೆ—ಮುಂಚಿತವಾಗಿಯೇ ಪ್ರಕಟಪಡಿಸಲ್ಪಟ್ಟು, ಬರೆಯಲ್ಪಟ್ಟಿರುವ ಇತಿಹಾಸ—ಯನ್ನು ಬೈಬಲು ಒಳಗೊಂಡಿದೆ. ಸುಮಾರು 200 ವರ್ಷಗಳಿಗೆ ಮುಂಚೆಯೇ, “ಗ್ರೀಸ್ನ ರಾಜ” (NW)ನಾದ ಮಹಾ ಅಲೆಕ್ಸಾಂಡರನ ಏಳುಬೀಳುಗಳ ಕುರಿತಾಗಿ ಮುಂತಿಳಿಸಲ್ಪಟ್ಟಿರುವುದೇ ಒಂದು ಉದಾಹರಣೆಯಾಗಿದೆ! (ದಾನಿಯೇಲ 8:1-8, 20-22) ಮಾನವ ನೇತ್ರಗಳು ಎಂದೂ ಪ್ರತ್ಯಕ್ಷವಾಗಿ ನೋಡಿರದ ಘಟನೆಗಳನ್ನು ಸಹ ಬೈಬಲು ಪ್ರಕಟಪಡಿಸುತ್ತದೆ. ಭೂಪರಲೋಕಗಳ ಸೃಷ್ಟಿಯೇ ಒಂದು ಉದಾಹರಣೆಯಾಗಿದೆ. (ಆದಿಕಾಂಡ 1:1-27; 2:7, 8) ಹಾಗೂ ಯೋಬನ ಪುಸ್ತಕದಲ್ಲಿ ವರದಿಸಲ್ಪಟ್ಟಿರುವಂತೆ, ಸ್ವರ್ಗದಲ್ಲಿ ನಡೆಸಲ್ಪಟ್ಟ ಸಂಭಾಷಣೆಗಳೂ ಅದರಲ್ಲಿ ಒಳಗೂಡಿವೆ.—ಯೋಬ 1:6-12; 2:1-6.
ಅಂತಹ ಘಟನೆಗಳು ದೇವರಿಂದ ಬರಹಗಾರನಿಗೆ ನೇರವಾಗಿ ಪ್ರಕಟಿಸಲ್ಪಡದಿದ್ದರೂ, ಅವು ಬೈಬಲ್ ದಾಖಲೆಯ ಭಾಗವಾಗುವ ವರೆಗೆ, ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ದಾಟಿಸಲ್ಪಟ್ಟು, ಮೌಖಿಕ ಅಥವಾ ಲಿಖಿತ ಇತಿಹಾಸದ ಭಾಗವಾಗಿ ಪರಿಣಮಿಸಲಿಕ್ಕಾಗಿ, ಯಾರಾದರೊಬ್ಬರಿಗೆ ತಿಳಿಯುವಂತೆ ದೇವರು ಮಾಡಿದ್ದನು. (7ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.) ಯಾವುದೇ ವಿದ್ಯಮಾನದಲ್ಲಿ, ಯೆಹೋವನು ಅಂತಹ ಎಲ್ಲ ಮಾಹಿತಿಯ ಮೂಲನಾಗಿದ್ದನು, ಮತ್ತು ಬರಹಗಾರರ ವೃತ್ತಾಂತಗಳು ಅನಿಷ್ಕೃಷ್ಟತೆ, ಅತಿಶಯೋಕ್ತಿ, ಅಥವಾ ಕಾಲ್ಪನಿಕ ಕಥೆಯಿಂದ ಕಳಂಕವಾಗಿರದಂತೆ ಆತನು ಅವರನ್ನು ಮಾರ್ಗದರ್ಶಿಸಿದನೆಂದು ನಾವು ಖಚಿತರಾಗಿರಸಾಧ್ಯವಿದೆ. ಪ್ರವಾದನೆಯ ಕುರಿತಾಗಿ ಪೇತ್ರನು ಬರೆದುದು: “ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ [“ಪ್ರೇರಣೆಗೆ ಒಳಗಾಗಿ,” NW] ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”b—2 ಪೇತ್ರ 1:21.
ಪ್ರಯಾಸಕರ ಪ್ರಯತ್ನವನ್ನು ಅಗತ್ಯಪಡಿಸಿತು
ಬೈಬಲ್ ಬರಹಗಾರರು “ಪವಿತ್ರಾತ್ಮದ ಪ್ರೇರಣೆಗೆ ಒಳಗಾಗಿ” (NW)ದ್ದರೂ, ಅವರ ವತಿಯಿಂದ ಜಾಗರೂಕವಾದ ಆಲೋಚನಾಭಿಪ್ರಾಯವು ಅಗತ್ಯಪಡಿಸಲ್ಪಟ್ಟಿತ್ತು. ಉದಾಹರಣೆಗಾಗಿ, ಸೊಲೊಮೋನನು “ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ ಪರೀಕ್ಷಿಸಿ ಕ್ರಮಪಡಿಸಿದನು. ಪ್ರಸಂಗಿಯು ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.”—ಪ್ರಸಂಗಿ 12:9, 10.
ಕೆಲವು ಬೈಬಲ್ ಬರಹಗಾರರು ತಮ್ಮ ವಸ್ತುವಿಷಯವನ್ನು ದಾಖಲಿಸಲಿಕ್ಕಾಗಿ ಬಹಳಷ್ಟು ಸಂಶೋಧನೆಯಲ್ಲಿ ಒಳಗೂಡಬೇಕಿತ್ತು. ಉದಾಹರಣೆಗಾಗಿ, ತನ್ನ ಸುವಾರ್ತಾ ವೃತ್ತಾಂತದ ಕುರಿತಾಗಿ ಲೂಕನು ಬರೆದುದು: “ಎಲ್ಲಾ ವಿಷಯಗಳನ್ನು ತರ್ಕಬದ್ಧವಾದ ಕ್ರಮದಲ್ಲಿ ಬರೆಯಲಿಕ್ಕಾಗಿ, ನಾನು ಅವುಗಳನ್ನು ಆರಂಭದಿಂದಲೇ ನಿಷ್ಕೃಷ್ಟವಾಗಿರುವವುಗಳಾಗಿ ಪತ್ತೆಹಚ್ಚಿದ್ದೇನೆ” (NW). ನಿಶ್ಚಯವಾಗಿಯೂ ದೇವರ ಆತ್ಮವು ಲೂಕನ ಪ್ರಯತ್ನಗಳನ್ನು ಆಶೀರ್ವದಿಸಿ, ಅವನು ಭರವಸಾರ್ಹವಾದ ಐತಿಹಾಸಿಕ ದಾಖಲೆಗಳನ್ನು ಕಂಡುಹಿಡಿಯುವಂತೆ ಮತ್ತು ಇನ್ನೂ ಬದುಕಿ ಉಳಿದಿದ್ದ ಶಿಷ್ಯರು ಹಾಗೂ ಬಹುಶಃ ಯೇಸುವಿನ ತಾಯಿಯಾದ ಮರಿಯಳಂತಹ ನಂಬಲರ್ಹರಾದ ಪ್ರತ್ಯಕ್ಷಸಾಕ್ಷಿಗಳೊಂದಿಗೆ ಸಂದರ್ಶನ ನಡೆಸುವಂತೆ ಪ್ರಚೋದಿಸಿತೆಂಬುದರಲ್ಲಿ ಸಂದೇಹವಿಲ್ಲ. ತದನಂತರ ದೇವರ ಆತ್ಮವು ಲೂಕನನ್ನು, ಆ ಮಾಹಿತಿಯನ್ನು ನಿಷ್ಕೃಷ್ಟವಾಗಿ ದಾಖಲಿಸುವಂತೆ ಮಾರ್ಗದರ್ಶಿಸಲಿತ್ತು.—ಲೂಕ 1:1-4.
ಲೂಕನ ಸುವಾರ್ತೆಗೆ ವ್ಯತಿರಿಕ್ತವಾಗಿ, ಯೋಹಾನನ ಸುವಾರ್ತೆಯು ಒಂದು ಪ್ರತ್ಯಕ್ಷಸಾಕ್ಷಿ ವೃತ್ತಾಂತವಾಗಿತ್ತು. ಇದು ಯೇಸುವು ಮೃತಪಟ್ಟ ಸುಮಾರು 65 ವರ್ಷಗಳ ಅನಂತರ ಬರೆಯಲ್ಪಟ್ಟಿತು. ಕಾಲವು ಗತಿಸುವುದರೊಂದಿಗೆ ಜ್ಞಾಪಕಶಕ್ತಿಯು ಮಂದವಾಗದಿರುವಂತೆ, ಯೆಹೋವನ ಆತ್ಮವು ಯೋಹಾನನ ಜ್ಞಾಪಕಶಕ್ತಿಯನ್ನು ಹರಿತಗೊಳಿಸಿತೆಂಬುದರಲ್ಲಿ ಸಂಶಯವಿಲ್ಲ. ಇದು ಯೇಸು ತನ್ನ ಹಿಂಬಾಲಕರಿಗೆ ಏನನ್ನು ವಾಗ್ದಾನಿಸಿದ್ದನೋ ಅದರೊಂದಿಗೆ ಹೊಂದಿಕೆಯಲ್ಲಿರಸಾಧ್ಯವಿತ್ತು: “ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.”—ಯೋಹಾನ 14:26.
ಕೆಲವು ಸಂದರ್ಭಗಳಲ್ಲಿ, ಬೈಬಲ್ ಬರಹಗಾರರು, ಅವರಿಗಿಂತ ಮುಂಚಿನ ಐತಿಹಾಸಿಕ ಬರಹಗಾರರ ಪ್ರತ್ಯಕ್ಷಸಾಕ್ಷಿ ದಾಖಲೆಗಳಿಂದ ಆಯ್ದ ಸಂಗ್ರಹಣಗಳನ್ನು ಒಳಗೂಡಿಸಿದರು—ಆ ಐತಿಹಾಸಿಕ ಬರಹಗಾರರಲ್ಲಿ ಎಲ್ಲರೂ ದೈವಪ್ರೇರಿತರಾಗಿರಲಿಲ್ಲ. ಯೆರೆಮೀಯನು ಒಂದನೆಯ ಹಾಗೂ ಎರಡನೆಯ ಅರಸುಗಳು ಪುಸ್ತಕವನ್ನು ಬಹುತೇಕವಾಗಿ ಈ ರೀತಿಯಲ್ಲಿ ಸಂಕಲಿಸಿದನು. (2 ಅರಸುಗಳು 1:18) ಮೊದಲನೆಯ ಹಾಗೂ ಎರಡನೆಯ ಪೂರ್ವಕಾಲವೃತ್ತಾಂತ ಪುಸ್ತಕಗಳಿಗಾಗಿ ವಸ್ತುವಿಷಯವನ್ನು ಒಟ್ಟುಗೂಡಿಸಲಿಕ್ಕಾಗಿ, ದೈವಪ್ರೇರಿತವಲ್ಲದ ಕಡಿಮೆಪಕ್ಷ 14 ಮೂಲಗಳಿಗೆ ಎಜ್ರನು ನಿರ್ದೇಶಿಸಿದನು. ಅವುಗಳಲ್ಲಿ “ದಾವೀದನ ರಾಜ್ಯವೃತ್ತಾಂತಗ್ರಂಥ” ಹಾಗೂ “ಯೆಹೂದ ಮತ್ತು ಇಸ್ರಾಯೇಲ್ ರಾಜರ ಗ್ರಂಥ”ಗಳೂ ಸೇರಿವೆ. (1 ಪೂರ್ವಕಾಲವೃತ್ತಾಂತ 27:24; 2 ಪೂರ್ವಕಾಲವೃತ್ತಾಂತ 16:11) ಮೋಶೆಯು “ಯೆಹೋವನವಿಜಯ [“ಯೆಹೋವನ ಯುದ್ಧಗಳ,” NW] ಎಂಬ ಗ್ರಂಥ”ದಿಂದಲೂ ವಿಷಯಗಳನ್ನು ಉದ್ಧರಿಸಿದನು. ಇದು ದೇವಜನರ ಯುದ್ಧಗಳ ಕುರಿತಾದ ಒಂದು ವಿಶ್ವಾಸಾರ್ಹ ದಾಖಲೆಯಾಗಿತ್ತೆಂಬುದು ಸುವ್ಯಕ್ತ.—ಅರಣ್ಯಕಾಂಡ 21:14, 15.
ಅಂತಹ ವಿದ್ಯಮಾನಗಳಲ್ಲಿ, ಪವಿತ್ರಾತ್ಮವು ಕ್ರಿಯಾಶೀಲವಾಗಿ ಒಳಗೂಡಿತ್ತು; ತದನಂತರ ದೈವಪ್ರೇರಿತ ಬೈಬಲ್ ದಾಖಲೆಯ ಭಾಗವಾಗಿ ಪರಿಣಮಿಸಿದ, ವಿಶ್ವಾಸಾರ್ಹವಾದ ವಸ್ತುವಿಷಯವನ್ನು ಮಾತ್ರವೇ ಆರಿಸಿಕೊಳ್ಳುವಂತೆ ಬೈಬಲ್ ಬರಹಗಾರರನ್ನು ಪ್ರಚೋದಿಸಿತು.
ಪ್ರಾಯೋಗಿಕ ಸಲಹೆ—ಯಾರಿಂದ?
ಗ್ರಾಹ್ಯವಾದ ವೈಯಕ್ತಿಕ ಅಭಿಪ್ರಾಯೋಕ್ತಿಗಳ ಮೇಲೆ ಆಧಾರಿತವಾದ ಬಹಳಷ್ಟು ಪ್ರಾಯೋಗಿಕ ಸಲಹೆಯನ್ನು ಬೈಬಲು ಒಳಗೊಂಡಿದೆ. ಉದಾಹರಣೆಗಾಗಿ, ಸೊಲೊಮೋನನು ಬರೆದುದು: “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ. ಇದು ದೇವರಿಂದಾಯಿತೆಂಬದನ್ನೂ ಕಂಡುಕೊಂಡೆನು.” (ಪ್ರಸಂಗಿ 2:24) “ನನಗೂ ದೇವರ ಆತ್ಮವುಂಟೆಂದು ನೆನಸುತ್ತೇನೆ” ಎಂದು ಪೌಲನು ಕೂಡಿಸಿ ಹೇಳಿದರೂ, ವಿವಾಹದ ಕುರಿತಾದ ತನ್ನ ಬುದ್ಧಿವಾದವು, “[ತನ್ನ] ಅಭಿಪ್ರಾಯಕ್ಕನುಸಾರ” (NW)ವಾಗಿತ್ತೆಂದು ಅವನು ಹೇಳಿದನು. (1 ಕೊರಿಂಥ 7:25, 39, 40) ಖಂಡಿತವಾಗಿಯೂ ಪೌಲನು ದೇವರ ಆತ್ಮವನ್ನು ಹೊಂದಿದ್ದನು. ಏಕೆಂದರೆ ಅಪೊಸ್ತಲ ಪೇತ್ರನಿಂದ ದಾಖಲಿಸಲ್ಪಟ್ಟಂತೆ, ಪೌಲನು ಏನನ್ನು ಬರೆದನೋ ಅದು ‘ಅವನಿಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ’ವಾಗಿತ್ತು. (ಓರೆಅಕ್ಷರಗಳು ನಮ್ಮವು.) (2 ಪೇತ್ರ 3:15, 16) ಹೀಗೆ, ದೇವರ ಆತ್ಮದಿಂದ ಮಾರ್ಗದರ್ಶಿಸಲ್ಪಟ್ಟವನಾಗಿ ಅವನು ತನ್ನ ಅಭಿಪ್ರಾಯವನ್ನು ಕೊಡುತ್ತಿದ್ದನು.
ಬೈಬಲ್ ಬರಹಗಾರರು ಅಂತಹ ವೈಯಕ್ತಿಕ ನಿಶ್ಚಿತಾಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ, ಅವರು ತಮಗೆ ಲಭ್ಯವಿದ್ದಂತಹ ಶಾಸ್ತ್ರಗಳ ಅಧ್ಯಯನ ಮತ್ತು ಅನ್ವಯದ ಹಿನ್ನೆಲೆಯೊಂದಿಗೆ ಅವುಗಳನ್ನು ವ್ಯಕ್ತಪಡಿಸಿದರು. ಅವರ ಬರಹಗಳು ದೇವರ ಆಲೋಚನೆಯೊಂದಿಗೆ ಸಹಮತದಿಂದಿದ್ದವೆಂದು ನಾವು ಖಚಿತರಾಗಿರಸಾಧ್ಯವಿದೆ. ಅವರು ದಾಖಲಿಸಿದ ವಿಷಯಗಳು, ದೇವರ ವಾಕ್ಯದ ಭಾಗವಾಗಿ ಪರಿಣಮಿಸಿದವು.
ಯಾರ ಆಲೋಚನೆಯು ದೋಷಯುಕ್ತವಾಗಿತ್ತೋ ಅಂತಹ ಕೆಲವರ ಹೇಳಿಕೆಗಳು ಬೈಬಲಿನಲ್ಲಿ ಒಳಗೂಡಿವೆಯೆಂಬುದು ಖಂಡಿತ. (ಯೋಬ 15:15ನ್ನು 42:7ರೊಂದಿಗೆ ಹೋಲಿಸಿರಿ.) ದೇವರ ಸೇವಕರ ಸಂಕಟಕರ ಅನಿಸಿಕೆಗಳನ್ನು ತಿಳಿಯಪಡಿಸಿದ ಕೆಲವೊಂದು ಹೇಳಿಕೆಗಳು ಇದರಲ್ಲಿ ಒಳಗೂಡಿರುವುದಾದರೂ, ಅಂತಹ ಹೇಳಿಕೆಗಳು ವಿಷಯಗಳ ಕುರಿತಾದ ಸಂಪೂರ್ಣ ಚಿತ್ರಣವನ್ನು ನಮಗೆ ಕೊಡುವುದಿಲ್ಲ.c ಆ ಬರಹಗಾರನು ಅಂತಹ ವೈಯಕ್ತಿಕ ಹೇಳಿಕೆಗಳನ್ನು ಮಾಡುತ್ತಿರುವಾಗ, ಒಂದು ನಿಷ್ಕೃಷ್ಟವಾದ ದಾಖಲೆಯನ್ನು ಮಾಡಲಿಕ್ಕಾಗಿ ಅವನು ಇನ್ನೂ ದೇವರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟಿದ್ದನು; ಇದು ತಪ್ಪುತರ್ಕವನ್ನು ಗುರುತಿಸಿ, ಅದನ್ನು ಬಯಲುಪಡಿಸಲು ಕಾರ್ಯನಡಿಸಿತು. ಇದಲ್ಲದೆ, ಬರಹಗಾರನ ಆಲೋಚನೆಯು ಸಮರ್ಪಕವಾಗಿದೆಯೋ ಇಲ್ಲವೋ ಎಂಬುದನ್ನು, ಪ್ರತಿಯೊಂದು ವಿದ್ಯಮಾನದಲ್ಲಿ ಪೂರ್ವಾಪರ ವಚನವು ವಿವೇಚನಾಶೀಲನಾದ ಯಾವನೇ ವಾಚಕನಿಗೆ ಸ್ಪಷ್ಟಪಡಿಸುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ಇಡೀ ಬೈಬಲ್ ದೇವರ ಸಂದೇಶವಾಗಿದೆ ಎಂಬ ಭರವಸೆ ನಮಗಿರಸಾಧ್ಯವಿದೆ. ನಿಜವಾಗಿಯೂ, ಅದರಲ್ಲಿ ಒಳಗೂಡಿಸಲ್ಪಟ್ಟಿರುವುದೆಲ್ಲವೂ ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿದೆ ಮತ್ತು ತನ್ನನ್ನು ಆರಾಧಿಸಲು ಅಪೇಕ್ಷಿಸುತ್ತಿರುವವರಿಗೆ ಅಗತ್ಯವಾದ ಉಪದೇಶವನ್ನು ಒದಗಿಸುತ್ತದೆ ಎಂಬುದನ್ನು ಯೆಹೋವನು ಖಚಿತಪಡಿಸಿಕೊಂಡನು.—ರೋಮಾಪುರ 15:4.
ಮಾನವ ಬರಹಗಾರರು—ಏಕೆ?
ಬೈಬಲನ್ನು ಬರೆಯಲಿಕ್ಕಾಗಿ ಯೆಹೋವನು ಮಾನವರನ್ನು ಉಪಯೋಗಿಸಿದ್ದು, ಆತನ ಅಪಾರವಾದ ವಿವೇಕವನ್ನು ತೋರಿಸುತ್ತದೆ. ಇದನ್ನು ಪರಿಗಣಿಸಿರಿ: ಯೆಹೋವನು ಈ ವಿಷಯವನ್ನು ದೇವದೂತರಿಗೆ ವಹಿಸಿಕೊಟ್ಟಿರುತ್ತಿದ್ದಲ್ಲಿ, ಇದೇ ರೀತಿಯ ಆಕರ್ಷಣೆ ಬೈಬಲಿಗಿರುತ್ತಿತ್ತೊ? ಒಬ್ಬ ದೇವದೂತನ ದೃಷ್ಟಿಕೋನದಿಂದ, ದೇವರ ಗುಣಗಳು ಹಾಗೂ ವ್ಯವಹಾರಗಳ ಕುರಿತು ಓದಲು ನಾವು ರೋಮಾಂಚಿತರಾಗುತ್ತಿದ್ದೆವೆಂಬುದು ನಿಜ. ಆದರೆ ಮಾನವ ಅಭಿರುಚಿಯು ಸಂಪೂರ್ಣವಾಗಿ ಇಲ್ಲದೇಹೋಗಿರುತ್ತಿದ್ದಲ್ಲಿ, ಬೈಬಲಿನ ಸಂದೇಶವನ್ನು ಗ್ರಹಿಸುವುದು ನಮಗೆ ಕಷ್ಟಕರವಾಗಿರುತ್ತಿದ್ದಿರಬಹುದು.
ದೃಷ್ಟಾಂತಕ್ಕಾಗಿ: ರಾಜ ದಾವೀದನು ವ್ಯಭಿಚಾರಮಾಡಿದನು ಮತ್ತು ಕೊಲೆಗೈದನು ಮತ್ತು ತದನಂತರ ಅವನು ಪಶ್ಚಾತ್ತಾಪಪಟ್ಟನೆಂಬ ವಿಷಯಗಳನ್ನು ಬೈಬಲು ಸರಳವಾಗಿ ವರದಿಮಾಡಸಾಧ್ಯವಿತ್ತು. ಆದರೆ ದಾವೀದನು ತನ್ನ ಕೃತ್ಯಗಳ ಕುರಿತಾದ ಮನೋವೇಧಕ ಬೇಗುದಿಯನ್ನು ವ್ಯಕ್ತಪಡಿಸಿ, ಯೆಹೋವನ ಕ್ಷಮಾಪಣೆಗಾಗಿ ಬೇಡಿಕೊಂಡಾಗ ನುಡಿದ ಅವನ ಸ್ವಂತ ಮಾತುಗಳನ್ನೇ ದಾಖಲೆಯಲ್ಲಿ ಹೊಂದಿರುವುದು ಎಷ್ಟು ಅತ್ಯುತ್ತಮವಾದದ್ದಾಗಿರುತ್ತದೆ! “ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ” ಎಂದು ದಾವೀದನು ಬರೆದನು. “ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತನೆ 51:3, 17) ಆದುದರಿಂದ, ಮಾನವ ಅಭಿರುಚಿಯು ಬೈಬಲಿಗೆ ಕೊಡುವಂತಹ ಆದರಣೆ, ವೈವಿಧ್ಯತೆ, ಹಾಗೂ ಆಕರ್ಷಣೆ ಅದಕ್ಕಿದೆ.
ಹೌದು, ತನ್ನ ವಾಕ್ಯವನ್ನು ನಮಗೆ ಕೊಡಲಿಕ್ಕಾಗಿ ಯೆಹೋವನು ಅತ್ಯುತ್ತಮವಾದ ಮಾರ್ಗವನ್ನು ಆಯ್ದುಕೊಂಡನು. ಬಲಹೀನತೆಗಳು ಹಾಗೂ ಕುಂದುಕೊರತೆಗಳಿರುವ ಮಾನವರು ಉಪಯೋಗಿಸಲ್ಪಟ್ಟಿದ್ದರಾದರೂ, ತಮ್ಮ ಬರಹಗಳಲ್ಲಿ ದೋಷಗಳು ಇಲ್ಲದಿರುವಂತೆ ಅವರು ಪವಿತ್ರಾತ್ಮದಿಂದ ಪ್ರೇರಣೆಗೆ ಒಳಗಾಗಿದ್ದರು. ಹೀಗೆ, ಬೈಬಲಿಗೆ ಅತ್ಯುತ್ಕೃಷ್ಟವಾದ ಮೌಲ್ಯವಿದೆ. ಅದರ ಬುದ್ಧಿವಾದವು ಸುದೃಢವಾದದ್ದಾಗಿದೆ, ಮತ್ತು ಭೂಮಿಯ ಮೇಲಿನ ಭವಿಷ್ಯತ್ತಿನ ಪ್ರಮೋದವನದ ಕುರಿತಾದ ಅದರ ಪ್ರವಾದನೆಗಳು, ನಂಬಿಕೆಗೆ ಯೋಗ್ಯವಾದವುಗಳಾಗಿವೆ.—ಕೀರ್ತನೆ 119:105; 2 ಪೇತ್ರ 3:13.
ಪ್ರತಿ ದಿನ ದೇವರ ವಾಕ್ಯದ ಒಂದು ಭಾಗವನ್ನು ಓದುವುದನ್ನು ಏಕೆ ರೂಢಿಮಾಡಿಕೊಳ್ಳಬಾರದು? ಪೇತ್ರನು ಬರೆದುದು: “ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಕಲ್ಪಿಸಿಕೊಳ್ಳಿರಿ, ಅದರ ಮೂಲಕ ನೀವು ರಕ್ಷಣೆಯ ಕಡೆಗೆ ಬೆಳೆಯಬಹುದು.” (1 ಪೇತ್ರ 2:2, NW) ಅದು ದೇವರಿಂದ ಪ್ರೇರಿತವಾಗಿರುವುದರಿಂದ, ಪ್ರತಿಯೊಂದು ಶಾಸ್ತ್ರವು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು” ಎಂಬುದನ್ನು ನೀವು ಕಂಡುಕೊಳ್ಳುವಿರಿ.—2 ತಿಮೊಥೆಯ 3:16, 17.
[ಅಧ್ಯಯನ ಪ್ರಶ್ನೆಗಳು]
a ಕಡಿಮೆಪಕ್ಷ ದಶಾಜ್ಞೆಗಳ ಒಂದು ವಿದ್ಯಮಾನದಲ್ಲಿ, ಆ ಸಮಾಚಾರವು ನೇರವಾಗಿ “ದೇವರ ಕೈಯಿಂದ” ಬರೆಯಲ್ಪಟ್ಟಿತ್ತು. ತದನಂತರ ಮೋಶೆಯು ಆ ಮಾತುಗಳನ್ನು ಸುರುಳಿಗಳ ಮೇಲೆ ಅಥವಾ ಇತರ ವಸ್ತುಗಳ ಮೇಲೆ ಕೇವಲ ನಕಲುಮಾಡಿದನು.—ವಿಮೋಚನಕಾಂಡ 31:18; ಧರ್ಮೋಪದೇಶಕಾಂಡ 10:1-5.
b ಇಲ್ಲಿ “ಪ್ರೇರಣೆಗೆ ಒಳಗಾಗಿ,” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವಾದ ಫೆರೊ, ಅ. ಕೃತ್ಯಗಳು 27:15, 17ರಲ್ಲಿ ಇನ್ನೊಂದು ರೂಪದಲ್ಲಿ—ಗಾಳಿಯಿಂದ ಸಾಗಿಸಲ್ಪಡುವ ಒಂದು ನೌಕೆಯನ್ನು ವರ್ಣಿಸಲಿಕ್ಕಾಗಿ—ಉಪಯೋಗಿಸಲ್ಪಟ್ಟಿದೆ. ಆದುದರಿಂದ, ಪವಿತ್ರಾತ್ಮವು ಬೈಬಲ್ ಬರಹಗಾರರ ‘ಮಾರ್ಗಕ್ರಮವನ್ನು ನಿಯಂತ್ರಿಸಿತು.’ ಅದು, ಸುಳ್ಳಾಗಿದ್ದ ಯಾವುದೇ ಮಾಹಿತಿಯನ್ನು ತಿರಸ್ಕರಿಸಿ, ವಾಸ್ತವಿಕವಾಗಿದ್ದ ಸಂಗತಿಗಳನ್ನು ಮಾತ್ರವೇ ಒಳಗೂಡಿಸುವಂತೆ ಅವರನ್ನು ಪ್ರಚೋದಿಸಿತು.
c ಉದಾಹರಣೆಗಳಿಗಾಗಿ, 1 ಅರಸುಗಳು 19:4ನ್ನು 14 ಹಾಗೂ 18ನೆಯ ವಚನಗಳೊಂದಿಗೆ ಹೋಲಿಸಿರಿ; ಯೋಬ 10:1-3; ಕೀರ್ತನೆ 73:12, 13, 21; ಯೋನ 4:1-3, 9; ಹಬಕ್ಕೂಕ 1:1-4, 13.
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
ಮೋಶೆಯು ತನ್ನ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡನು?
ಮೋಶೆಯು ಬೈಬಲಿನ ಆದಿಕಾಂಡ ಪುಸ್ತಕವನ್ನು ಬರೆದನಾದರೂ, ಅವನು ದಾಖಲಿಸಿದಂತಹ ಎಲ್ಲಾ ವಿಷಯಗಳು, ಅವನ ಜನನಕ್ಕೆ ಬಹಳ ಸಮಯದ ಹಿಂದೆಯೇ ಸಂಭವಿಸಿದವು. ಹಾಗಾದರೆ ಅವನು ಅಂತಹ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡನು? ಅದು ಅವನಿಗೆ ನೇರವಾಗಿ ದೇವರಿಂದಲೇ ಪ್ರಕಟಪಡಿಸಲ್ಪಟ್ಟಿದ್ದಿರಸಾಧ್ಯವಿದೆ, ಅಥವಾ ಕೆಲವೊಂದು ಘಟನೆಗಳ ಕುರಿತಾದ ಜ್ಞಾನವು, ಒಂದು ಸಂತತಿಯಿಂದ ಮುಂದಿನ ಸಂತತಿಗೆ ಮೌಖಿಕವಾಗಿ ದಾಟಿಸಲ್ಪಟ್ಟಿದ್ದಿರಬಹುದು. ಆದಿ ಕಾಲಗಳಲ್ಲಿ ಮಾನವರಿಗೆ ದೀರ್ಘಾಯುಷ್ಯವಿದ್ದುದರಿಂದ, ಮೋಶೆಯು ಆದಿಕಾಂಡದಲ್ಲಿ ದಾಖಲಿಸಿರುವಂತಹ ವಿಷಯಗಳಲ್ಲಿ ಹೆಚ್ಚಿನದ್ದು, ಆದಾಮನಿಂದ ಮೋಶೆಯ ತನಕ ಕೇವಲ ಐವರು ವ್ಯಕ್ತಿಗಳ—ಮೆತೂಷೆಲಹ, ಶೇಮ್, ಇಸಾಕ, ಲೇವಿ, ಮತ್ತು ಅಮ್ರಾಮ್—ಮೂಲಕ ದಾಟಿಸಲ್ಪಟ್ಟಿದ್ದಿರಸಾಧ್ಯವಿದೆ.
ಇದಕ್ಕೆ ಕೂಡಿಸಿ, ಮೋಶೆಯು ಲಿಖಿತ ದಾಖಲೆಗಳನ್ನು ಪರಾಮರ್ಶಿಸಿದ್ದಿರಬಹುದು. ಈ ವಿಷಯದಲ್ಲಿ, ಚರ್ಚಿಸಲ್ಪಡಲಿಕ್ಕಿದ್ದ ವ್ಯಕ್ತಿಯನ್ನು ಹೆಸರಿಸುವಾಗ, “ಇದು . . . ಚರಿತ್ರೆ” ಎಂಬ ವಾಕ್ಸರಣಿಯನ್ನು ಆಗಿಂದಾಗ್ಗೆ ಮೋಶೆಯು ಉಪಯೋಗಿಸುತ್ತಾನೆ ಎಂಬುದು ಗಮನಾರ್ಹವಾದ ವಿಷಯವಾಗಿದೆ. (ಓರೆಅಕ್ಷರಗಳು ನಮ್ಮವು.) (ಆದಿಕಾಂಡ 6:9; 10:1; 11:10, 27; 25:12, 19; 36:1, 9; 37:2) ಇಲ್ಲಿ “ಚರಿತ್ರೆ,” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಶಬ್ದವಾದ ಟಾಹ್ಲಿಢೋತ್, ಮೋಶೆಯು ತನ್ನ ಬರಹಕ್ಕೆ ಒಂದು ಮೂಲದೋಪಾದಿ ಉಪಯೋಗಿಸಿದ, ಈಗಾಗಲೇ ಅಸ್ತಿತ್ವದಲ್ಲಿದ್ದ ಲಿಖಿತ ಐತಿಹಾಸಿಕ ದಾಖಲೆಯನ್ನು ಸೂಚಿಸುತ್ತದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇದನ್ನು ನಿರ್ಣಯಾತ್ಮಕವಾಗಿ ಹೇಳಸಾಧ್ಯವಿಲ್ಲವೆಂಬುದು ನಿಶ್ಚಯ.
ಆದಿಕಾಂಡ ಪುಸ್ತಕದಲ್ಲಿ ಒಳಗೂಡಿರುವ ಮಾಹಿತಿಯು, ಈ ಮೇಲಿನ ಎಲ್ಲ ಮೂರು ವಿಧಗಳಿಂದ—ಸ್ವಲ್ಪ ಮಾಹಿತಿಯು ನೇರವಾದ ಪ್ರಕಟನೆಗಳಿಂದ, ಸ್ವಲ್ಪ ಮಾಹಿತಿಯು ಮೌಖಿಕ ವಹನದಿಂದ, ಮತ್ತು ಕೆಲವು ಲಿಖಿತ ದಾಖಲೆಗಳಿಂದ—ಪಡೆದುಕೊಂಡದ್ದಾಗಿರಸಾಧ್ಯವಿದೆ. ಯೆಹೋವನ ಆತ್ಮವು ಮೋಶೆಯನ್ನು ಪ್ರೇರೇಪಿಸಿತೆಂಬುದು ಪ್ರಾಮುಖ್ಯವಾದ ಅಂಶವಾಗಿದೆ. ಆದುದರಿಂದ ಅವನು ಏನನ್ನು ಬರೆದನೋ ಅದನ್ನು ಸೂಕ್ತವಾಗಿಯೇ ದೇವರ ವಾಕ್ಯವೆಂದು ವೀಕ್ಷಿಸಲಾಗುತ್ತದೆ.
[ಪುಟ 4 ರಲ್ಲಿರುವ ಚಿತ್ರ]
ಹಲವಾರು ವಿಧಗಳಲ್ಲಿ, ಬೈಬಲನ್ನು ಬರೆಯುವಂತೆ ದೇವರು ಮನುಷ್ಯರನ್ನು ಪ್ರೇರೇಪಿಸಿದನು